ಸುಭಾಷ್ಚಂದ್ರ ಬೋಸರ 125ನೇ ಜಯಂತಿ. ಕೊನೆಗೂ ಆ ಪುಣ್ಯಾತ್ಮನಿಗೆ ಸಿಗಬೇಕಾದ ಗೌರವ ಈಗ ಸಿಗುತ್ತಿದೆ. ಅವರು ತೀರಿಕೊಂಡರು ಎನ್ನುವುದನ್ನು ನಂಬುವುದೇ ಆದರೆ ಹಾಗೆ ತೀರಿಕೊಳ್ಳುವ ಮುನ್ನ ಬೆಂಕಿಯಿಂದ ಆವರಿಸಿಕೊಂಡಿದ್ದ ಅವರು ತಮ್ಮ ಜೊತೆಗಾರ ಕರ್ನಲ್ ಹಬಿಬುರ್ ರೆಹಮಾನ್ರಿಗೆ ‘ನಾನು ಕೊನೆ ಉಸಿರಿನವರೆಗೂ ನನ್ನ ದೇಶಕ್ಕಾಗಿ ಕಾದಾಡಿದೆ ಎಂಬುದನ್ನು ದೇಶವಾಸಿಗಳಿಗೆ ತಿಳಿಸಿಬಿಡು’ ಎಂದಿದ್ದರಂತೆ. ಅದೇ ಅವರ ಕೊನೆಯ ಮಾತೂ ಕೂಡ. ಇಷ್ಟಕ್ಕೂ ನೇತಾಜಿ ದೇಶಕ್ಕಾಗಿಯೇ ತಮ್ಮನ್ನು ಸಮಪರ್ಿಸಿಕೊಂಡಿದ್ದವರು ಎಂಬುದು ದೇಶವಾಸಿಗಳಿಗೆ ಗೊತ್ತಿರಲಿಲ್ಲವೇ? ಅಥವಾ ಯಾರಾದರೂ ಅವರ ಕುರಿತಂತೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಾ ಜನರ ತಲೆಕೆಡಿಸಿದ್ದರೆ? ಕೇಳಿಕೊಳ್ಳಲೇಬೇಕಾದ ಪ್ರಶ್ನೆ ಅಲ್ಲವೇನು?

ಸ್ವಾತಂತ್ರ್ಯದ ಮುಂಚೂಣಿಯ ಹೋರಾಟ ತನ್ನದ್ದೇ ಎಂದು ನಿರ್ಧರಿಸಿಬಿಟ್ಟಿದ್ದ ಕಾಂಗ್ರೆಸ್ಸಿಗೆ ಆ ಹೋರಾಟವನ್ನು ಮತ್ತೊಬ್ಬ ನಾಯಕ ಮುಂದುವರೆಸುವುದು ಸುತರಾಂ ಇಷ್ಟವಿರಲಿಲ್ಲ. ಸಹಜವಾಗಿಯೇ ಗಾಂಧಿ-ನೆಹರೂ ಆದಿಯಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ಸನ್ನು ಬಿಟ್ಟು ಬೆಳೆಯುತ್ತಿರುವ ಸುಭಾಷರ ಕುರಿತಂತೆ ಅಸಮಾಧಾನ ಹೊಂದಿಯೇ ಇದ್ದರು. ಸ್ವತಃ ಸುಭಾಷರೇ ಹೇಳುತ್ತಾರಲ್ಲ, ‘ಒಂದು ಹಂತದ ನಂತರ ಕಾಂಗ್ರೆಸ್ಸು ತನ್ನ ಬುದ್ಧಿಯನ್ನೇ ಗಾಂಧೀಜಿಯವರ ಬಳಿ ಗಿರವಿ ಇಟ್ಟುಬಿಟ್ಟಿದೆ’ ಅಂತ. ಹಾಗೆಯೇ ಆಗಿತ್ತು ಕೂಡ. ಈಗ ಗಾಂಧಿಯ ಪಾಳಯದಲ್ಲಿರದಿದ್ದ ಸುಭಾಷರನ್ನು ಕಂಡರೆ ಇಡಿಯ ಕಾಂಗ್ರೆಸ್ಸಿಗೆ ಸಹಿಸಲಾಗದ ಆಕ್ರೋಶ. ಹಾಗೆಂದೇ ಅವರು ಜನರ ನಡುವೆ ಸುಭಾಷರನ್ನು ಸಾಕಷ್ಟು ಹಿಯಾಳಿಸುತ್ತಿದ್ದರು. ಒಂದು ಹಂತದಲ್ಲಿ ಭಾರತದ ಶತ್ರು ರಾಷ್ಟ್ರಗಳೊಂದಿಗೆ ಕೈ ಜೋಡಿಸಿರುವ ದೇಶದ್ರೋಹಿ ಎಂದೂ ಹೇಳಿಬಿಟ್ಟಿದ್ದರು. ಬೇರೆಲ್ಲ ಬಿಡಿ, ಸ್ವತಃ ನೆಹರೂ ಸುಭಾಷರು ಇಂಡಿಯನ್ ನ್ಯಾಷನಲ್ ಆಮರ್ಿಯೊಂದಿಗೆ ಭಾರತದ ಮೇಲೆ ಆಕ್ರಮಣ ಮಾಡಿದರೆ ಅವರನ್ನು ತಲ್ವಾರ್ನಿಂದಲೇ ಎದುರಿಸುವುದಾಗಿ ಘೋಷಿಸಿದ್ದರೂ ಕೂಡ. ಈ ಕಾರಣದಿಂದಾಗಿಯೇ ಸುಭಾಷರ ಕುರಿತಂತೆ ಜನಮಾನಸದಲ್ಲಿ ಅಸಮಾಧಾನ ಇದ್ದೇ ಇತ್ತು. ಕೊಹಿಮಾ, ಇಂಫಾಲ್ಗಳಲ್ಲಿ ದಾಳಿ ಮಾಡುತ್ತಾ ಬಂದ ಇಂಡಿಯನ್ ನ್ಯಾಷನಲ್ ಆಮರ್ಿಯ ಸೈನಿಕರುಗಳಿಗೆ ಭಾರತೀಯ ಸೈನಿಕರು ಬೆಂಬಲ ಕೊಡಲಿಲ್ಲ. ಭಾರತದ ಜನ ಜೊತೆ ನಿಲ್ಲಲಿಲ್ಲ. ನಾಯಕರ ಕಥೆಯಂತೂ ತಟಸ್ಥವೇ ಅಲ್ಲದ, ವಿರೋಧಿ ಪಾಳಯವನ್ನು ಬೆಂಬಲಿಸುವ ಮಾನಸಿಕತೆ. ಸುಭಾಷರ ಬದುಕಿನ ಘೋರ ದುರಂತಗಳಲ್ಲಿ ಅದು ಒಂದು. ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಪ್ರಾಣಾರ್ಪಣೆಗೆ ಸಿದ್ಧರಾಗಿದ್ದರೋ ಆ ದೇಶದ ಜನರೇ ಅದನ್ನು ಧಿಕ್ಕರಿಸಿಬಿಟ್ಟಿದ್ದರು! ಕಮ್ಯುನಿಸ್ಟರದ್ದಂತೂ ಬೇರೆಯೇ ಮಾರ್ಗ. ಒಂದು ಮಾತಿದೆಯಲ್ಲ, ವಿಷಸರ್ಪ ಮತ್ತು ಕಮ್ಯುನಿಸ್ಟರು ಇವೆರಡೂ ಎದುರಿಗೆ ಬಂದರೆ ಮೊದಲು ಕಮ್ಯುನಿಸ್ಟರನ್ನು ಬಡಿಯಿರಿ, ವಿಷಸರ್ಪವನ್ನು ಬಿಟ್ಟರೂ ಪರವಾಗಿಲ್ಲ ಅಂತ. ಹಾಗೆಯೇ ಇವರೂ ಕೂಡ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಮತ್ತು ರಷ್ಯಾಗಳು ಒಂದೇ ಪಾಳಯದಲ್ಲಿದ್ದಾಗ ಈ ಕಮ್ಯುನಿಸ್ಟರು ಕಾಂಗ್ರೆಸ್ಸನ್ನು ವಿರೋಧಿಸಿ ನೇತಾಜಿಯವರ ಬೆಂಬಲಕ್ಕೆ ನಿಂತಿದ್ದರು. ಆದರೆ ಯಾವಾಗ ಜರ್ಮನಿ ರಷ್ಯಾದ ಮೇಲೆಯೇ ಏರಿಹೋಯ್ತೋ ಆಗ ಅವರಿಗೆ ಸಹಿಸಲಾಗಲಿಲ್ಲ. ರಷ್ಯಾ ತಮ್ಮ ಮಾತೃಭೂಮಿಯೇನೋ ಎನ್ನುವಂತೆ ವತರ್ಿಸಿದ ಆ ಮಂದಿ ಸುಭಾಷರನ್ನು ಅವಹೇಳನಗೊಳಿಸುವ ವ್ಯಂಗ್ಯಚಿತ್ರವನ್ನು ಬರೆದು ಜನಮಾನಸವನ್ನು ಮುಟ್ಟಿದರು. ಜಪಾನಿನ ಪ್ರಧಾನಿಯ ಕೈಲಿ ಸುಭಾಷ್ಚಂದ್ರ ಬೋಸರನ್ನು ಸಾಕುಪ್ರಾಣಿಯಂತೆ ಚಿತ್ರಿಸಿದ್ದು ಇವರೇ. ಇದು ಕಾಂಗ್ರೆಸ್ಸಿನ ದಾಳಿಗಿಂತ ಭಯಾನಕವಾದ್ದು. ಈ ಕಳ್ಳರನ್ನೆಲ್ಲಾ ಜನರ ಮುಂದೆ ಬೆಳಕಿಗೆ ತರಲು ಸುಭಾಷರಿಗಿದ್ದಿದ್ದು ರೆಡಿಯೊಗಳ ಬಳಕೆ ಮಾತ್ರ. ತಮ್ಮ ಆಜಾದ್ ಹಿಂದ್ ರೆಡಿಯೊ ಮೂಲಕ ಅವರು ಭಾರತೀಯರನ್ನು ಮುಟ್ಟುವ ಪ್ರಯತ್ನ ಮಾಡುತ್ತಿದ್ದರಾದರೂ ಅದು ಸಾಕಾಗುತ್ತಿರಲಿಲ್ಲ. ಅಂತರ್ರಾಷ್ಟ್ರೀಯ ಸಂಬಂಧಗಳ ಕುರಿತಂತೆ ಆಲೋಚಿಸುತ್ತಾ, ಸೇನೆಗೆ ಬೇಕಾದ ಸೈನಿಕರು ಮತ್ತು ಹಣವನ್ನು ಹೊಂದಿಸುವುದರಲ್ಲಿ ನಿರಂತರ ಪ್ರವಾಸ ಮಾಡುತ್ತಾ ಸುಭಾಷರು ಜರ್ಝರಿತವಾಗಿ ಹೋಗಿದ್ದರು. ಅದರ ನಡುವೆ ತಮ್ಮದ್ದೇ ದೇಶವಾಸಿಗಳಲ್ಲಿ ತಾನು ಮಾಡುತ್ತಿರುವ ಕೆಲಸಗಳ ಕುರಿತಂತೆ ಜಾಗೃತಿ ಮೂಡಿಸಬೇಕಾಗಿತ್ತು. ಒಟ್ಟಾರೆ ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಸೋಲುವುದರೊಂದಿಗೆ ಸುಭಾಷರ ಪರಾಕ್ರಮದ ಯಾತ್ರೆಯೇನೋ ಮುಗಿಯಿತು. ಆದರೆ ಸ್ವಾತಂತ್ರ್ಯದ ಇಚ್ಛೆ, ಉತ್ಸಾಹಗಳು ಮಾತ್ರ ಕಡಿಮೆಯಾಗಿರಲಿಲ್ಲ. ಸುಭಾಷರು ಜಪಾನನ್ನು ಬಿಟ್ಟು ರಷ್ಯಾದ ಸಹಕಾರ ಕೇಳಲು ಧಾವಿಸಿದರು. ಆ ಹೊತ್ತಲ್ಲೇ ವಿಮಾನದ ಅಪಘಾತವಾಗಿದ್ದು, ಅಲ್ಲಿಯೇ ಅವರು ತೀರಿಕೊಂಡರೂ ಎಂದೂ ಹೇಳಲಾಗಿದ್ದು. ಆದರೆ ಸುಭಾಷರ ನಿಜವಾದ ಪರಾಕ್ರಮ ಜನರಿಗೆ ಅರಿವಾದದ್ದು ಅವರ ಈ ತಥಾಕಥಿತ ಸಾವಿನ ನಂತರವೇ. ಯುದ್ಧದಲ್ಲಿ ಖೈದಿಗಳಾಗಿ ಸಿಕ್ಕ ಐಎನ್ಎ ಸೈನಿಕರ ವಿಚಾರಣೆಯನ್ನು ಬ್ರಿಟಿಷ್ ಸಕರ್ಾರ ಆರಂಭಿಸಿತು. ಈ ಸೈನಿಕರಿಗೆ ಕಠಿಣ ಶಿಕ್ಷೆ ಕೊಡುವ ಮೂಲಕ ಇನ್ಯಾವ ಭಾರತೀಯ ಸೈನಿಕನೂ ಬ್ರಿಟೀಷರ ವಿರುದ್ಧ ಮಾತೂ ಆಡದಂತೆ ಮಾಡಬೇಕೆಂಬ ಪ್ರಯತ್ನ ಅವರದ್ದಾಗಿತ್ತು. ಅದೇ ಅವರು ಮಾಡಿಕೊಂಡ ಎಡವಟ್ಟು. ಐಎನ್ಎ ಪ್ರತಿನಿಧಿಸಿ ವಿಚಾರಣೆ ಎದುರಿಸುತ್ತಿದ್ದ ಶಾನವಾಜ್, ದಿಲ್ಲೊನ್ ಮತ್ತು ಸೆಹಗಲ್ರು ಎದೆಯುಬ್ಬಿಸಿ ನಿಂತರು. ಅವರ ಮೂಲಕ ಬೋಸರ ಕಥೆಗಳು ಮಾಧ್ಯಮ ಪ್ರವೇಶಿಸಿದವು. ಅಲ್ಲಿಂದ ಜನರ ಹೃದಯಕ್ಕೆ. ಅಲ್ಲಿಯವರೆಗೂ ಬೋಸರ ಬಗೆಗಿದ್ದ ದುಷ್ಟ ಭಾವನೆಗಳೆಲ್ಲ ಮಾಯವಾಗಿಬಿಟ್ಟವು. ಸುಭಾಷಷ್ಚಂದ್ರ ಬೋಸ್ ಒಬ್ಬ ಅಪ್ರತಿಮ ಸೇನಾನಿ ಎಂದು ಇಡೀ ದೇಶ ಗೌರವಿಸಲಾರಂಭಿಸಿತು. ಅಷ್ಟೇ ಅಲ್ಲ, ಐಎನ್ಎ ಸೈನಿಕರ ವಿಚಾರಣೆ ನಡೆಸುವುದನ್ನು ವಿರೋಧಿಸಿ ಯುದ್ಧ ಖೈದಿಗಳೊಂದಿಗೆ ನಡೆದುಕೊಳ್ಳುವ ರೀತಿ ಇದಲ್ಲವೆಂದು ಸೇನೆ ಆಕ್ಷೇಪಿಸಿತು. ಮುಂದೇನು? ಸೈನಿಕ ಬಂಡಾಯಕ್ಕೆ ಎಲ್ಲ ಸಿದ್ಧತೆ ನಡೆದು ಬ್ರಿಟಿಷರ ವಿರುದ್ಧ ದೊಡ್ಡದೊಂದು ಹೋರಾಟವೇ ಆರಂಭವಾಯ್ತು. ನೌಕಾಸೇನೆಯಲ್ಲಿ ಅಂದಿನ ದಿನಗಳಲ್ಲಿ ಸುಭಾಷ್ಚಂದ್ರ ಬೋಸರ ಚಿತ್ರ ಸವರ್ೇ ಸಾಮಾನ್ಯವಾಗಿತ್ತು. ಆ ಫೋಟೊಗಳನ್ನೆಲ್ಲ ಕಿತ್ತು ಬಿಸಾಡಬೇಕೆಂದು ತಾಕೀತು ಮಾಡಿದ್ದರು ನೆಹರೂ. ಸುಭಾಷರ ಪಟ ಇಲ್ಲವಾಗಿಸಬಹುದು. ಆದರೆ ಹೃದಯದೊಳಗೆ ಇರುವ ಸುಭಾಷರನ್ನು ತೆಗೆಯುವುದಾದರೂ ಹೇಗೆ? ಸುಭಾಷರು ಮತ್ತೆ ಜನಮಾನಸವನ್ನು ಆವರಿಸಿಕೊಂಡರು. ನೌಕಾಬಂಡಾಯ ಬ್ರಿಟೀಷರನ್ನು ನಡುಗಿಸಿಬಿಟ್ಟಿತ್ತು. ಅವರು ಅನಿವಾರ್ಯವಾಗಿ ಭಾರತವನ್ನು ಬಿಟ್ಟು ಹೋಗಲೇಬೇಕಾದ ಸ್ಥಿತಿ ಬಂತು.

1942ರಲ್ಲಿ ಏಕಾಕಿ ಶಾಂತಿ ಮತ್ತು ಅಹಿಂಸೆಯ ಮಾರ್ಗವನ್ನು ಬದಿಗಿಟ್ಟು ಭಾರತಬಿಟ್ಟು ತೊಲಗಿ ಎಂದು ಮಹಾತ್ಮಾಗಾಂಧೀಜಿ ಘೋಷಣೆ ಕೊಟ್ಟಿದ್ದರಲ್ಲ, ಇಷ್ಟು ಧಾವಂತವೇಕೆ? ಎಂಬ ಪ್ರಶ್ನೆ ಕೇಳಿದ್ದಕ್ಕೆ, ಬೋಸರನ್ನೇ ಕೇಳಿಕೊಳ್ಳಿ ಎಂದು ಗಾಂಧೀಜಿ ಉತ್ತರ ನೀಡಿದ್ದರು. ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟದ ಕಲ್ಪನೆಯನ್ನು ಪೂರ್ಣ ಬದಲಾಯಿಸಿದ್ದರು ಮತ್ತು ಯಶಸ್ವಿಯಾಗಿದ್ದರೂ ಕೂಡ. ಮಹಾತ್ಮಾಗಾಂಧಿಜಿಯವರ ಸಾಮ-ದಾನೋಪಾಯಗಳು ಒಂದೆಡೆಯಾದರೆ, ಸುಭಾಷ್ಚಂದ್ರ ಬೋಸರ ಭೇದ ಮತ್ತು ದಂಡೋಪಾಯಗಳು ಮತ್ತೊಂದೆಡೆ ಯಶಸ್ಸು ಗಳಿಸಿದ್ದವು. ಈಗ ಈ ಪುಣ್ಯಾತ್ಮನ ಈ ಸಾಧನೆಯನ್ನೆಲ್ಲಾ ದೇಶ ನೆನಪಿಸಿಕೊಳ್ಳುತ್ತಿದೆ. ಇದು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ.