ಲೇಖಕ: Chakravarty

ಭಾರತ್ ತೊಡೊದ ಅಂತಿಮ ಚರಣ ಕೇಂಬ್ರಿಡ್ಜ್ ಭಾಷಣ!

ಭಾರತ್ ತೊಡೊದ ಅಂತಿಮ ಚರಣ ಕೇಂಬ್ರಿಡ್ಜ್ ಭಾಷಣ!

ಮೊದಲ ಬಾರಿ ರಾಹುಲ್‌ನ ಪೂರ್ಣ ಭಾಷಣ ಕೇಳಿದೆ. ಎಂದಿಗೂ ಹತ್ತು ನಿಮಿಷಕ್ಕಿಂತ ಹೆಚ್ಚು ಕೇಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಈ ಬಾರಿ ಆತನ ಕೇಂಬ್ರಿಡ್ಜ್‌ ‌ನ ಭಾಷಣವನ್ನು ಪಟ್ಟುಹಿಡಿದು ಕೇಳಿದೆ. ಒಬ್ಬ ವ್ಯಕ್ತಿ ತಾನು ಹುಟ್ಟಿದ ದೇಶವನ್ನೇ, ತಾನು ಆಳಲು ಬಯಸುವ ದೇಶವನ್ನೇ ಇಷ್ಟೊಂದು ದ್ವೇಷಿಸಲು ಹೇಗೆ ಸಾಧ್ಯ ಎಂದು ತಿಳಿಯಬೇಕಿತ್ತು. ತನ್ನ ದೇಶಕ್ಕೆ ಶತ್ರುವಾಗಿ ಕಾಡುತ್ತಿರುವ, ತನ್ನ ದೇಶದ ನಾಶವನ್ನು ಬಯಸುತ್ತಿರುವ ಮತ್ತೊಂದು ರಾಷ್ಟ್ರವನ್ನು ಯಾರಾದರೊಬ್ಬರು ಎಷ್ಟೆಲ್ಲಾ ಪ್ರೀತಿಸಬಹುದು ಎಂಬುದನ್ನು ಅರಿಯಲಿಕ್ಕೆ ಈ ಭಾಷಣ ಕೇಳಲೇಬೇಕಾಯಿತು. ಕಾಂಗ್ರೆಸ್ಸಿನ ಮೇಲ್ಮಟ್ಟದ ನಾಯಕರು ಈ ಭಾಷಣವನ್ನು ಸಂಭ್ರಮಿಸುತ್ತಿದ್ದಾರೆ. ಅದು ಭಾಷಣದ ವಿಷಯವಸ್ತುವಿಗಾಗಿ ಅಲ್ಲ, ಕೇಂಬ್ರಿಡ್ಜ್ ನಲ್ಲಿ ಮಾತನಾಡಿದ ಎಂಬುದಕ್ಕಾಗಿ. ಕೇಂಬ್ರಿಡ್ಜ್ ನಮ್ಮೆಲ್ಲ ವಿಶ್ವವಿದ್ಯಾಲಯಗಳಿಗಿಂತಲೂ ಶ್ರೇಷ್ಠವಾದುದು ಎಂಬ ಗುಲಾಮೀ ಮಾನಸಿಕತೆಯ ಪರಿಣಾಮ ಅದು. ಈ ಹಿಂದೆ ಶಶಿತರೂರ್ ಕೂಡ ವಿದೇಶಗಳಲ್ಲಿ ಕೆಲವೊಂದು ಭಾಷಣ ಮಾಡಿದ್ದಾರೆ. ಆತ ಯಾವ ಪಾರ್ಟಿಯವನು ಎಂಬುದನ್ನೂ ಲೆಕ್ಕಕ್ಕಿರಿಸಿಕೊಳ್ಳದೇ ಆ ಭಾಷಣವನ್ನು ಕೇಳಿದ್ದಷ್ಟೇ ಅಲ್ಲ, ನಮ್ಮಲ್ಲನೇಕರು ಇತರರೊಂದಿಗೂ ಹಂಚಿಕೊಂಡಿದ್ದರು. ತರೂರರ ಎರಾ ಆಫ್ ಡಾರ್ಕ್‌ನೆಸ್ ಇಂದಿಗೂ ನನ್ನ ಫೇವರಿಟ್ ಕೃತಿಗಳಲ್ಲೊಂದು. ಪಕ್ಷ ಯಾವುದೆಂಬುದು ಮುಖ್ಯವಲ್ಲ. ನೀವು ಪ್ರತಿನಿಧಿಸುತ್ತಿರುವ ದೇಶ ಯಾವುದೆಂಬುದು ಬಲುಮುಖ್ಯ. ರಾಹುಲ್‌ನ ಕೇಂಬ್ರಿಡ್ಜ್ ಭಾಷಣದಲ್ಲಿ ಅನುಮಾನವುಂಟಾಗುವುದು ಇಲ್ಲಿಯೇ. ಈ ಲೇಖನದುದ್ದಕ್ಕೂ ಒಂದಷ್ಟು ವಿಶ್ಲೇಷಣೆ ಮುಂದಿರಿಸುವೆ, ಸರಿಯೆನಿಸಿದರೆ ಸ್ವೀಕರಿಸಿ. 

ಭಾಷಣವನ್ನು ಆರಂಭಿಸುತ್ತಾ ರಾಹುಲ್ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದ ಪಾರ್ಲಿಮೆಂಟು ಅಪಾಯದಲ್ಲಿದೆ ಎನ್ನುತ್ತಾನೆ. ಅದರ ಕಾರಣದಿಂದಾಗಿಯೇ ಮಾಧ್ಯಮ ಮತ್ತು ನ್ಯಾಯವ್ಯವಸ್ಥೆಯೂ ಪ್ರಜಾಪ್ರಭುತ್ವದ ನೇತೃತ್ವ ವಹಿಸದೇ ನಾಶ ಹೊಂದಿಬಿಟ್ಟಿವೆ ಎನ್ನುತ್ತಾನೆ. ಇತ್ತೀಚೆಗೆ ತಾನೇ ಭಾರತದ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರು ಎಲೆಕ್ಷನ್ ಕಮಿಷನರ್ ನೇಮಕದ ಹೊತ್ತಲ್ಲಿ ಪ್ರಧಾನಮಂತ್ರಿ, ವಿಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಜೊತೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸುಪ್ರೀಂಕೋರ್ಟು ಸರ್ಕಾರದ ಪರವಾಗಿ ನಿಂತಿದ್ದರೆ ಹೀಗೊಂದು ನಿರ್ಣಯ ಬರುತ್ತಿತ್ತೇನು? ಅಚ್ಚರಿಯೇನು ಗೊತ್ತೇ? ಬಿಜೆಪಿಗೆ ಮತ ಹಾಕುವ ಬಹುತೇಕ ಮಂದಿ ಸುಪ್ರೀಂಕೋರ್ಟು ಬಿಜೆಪಿಯ ವಿರೋಧಿಗಳಿಗೆ ಮಧ್ಯರಾತ್ರಿಯಲ್ಲಿ ಬಾಗಿಲು ತೆಗೆದು ವಿಶೇಷ ಆತಿಥ್ಯ ನೀಡುವುದನ್ನು ದಿನ ಬೆಳಗಾದರೆ ವಿರೋಧಿಸುತ್ತಾರೆ. ಮಾಧ್ಯಮಗಳು ಸರ್ಕಾರದ ಪರವಾಗಿವೆ ಎಂದೆನ್ನುವ ರಾಹುಲ್ ಭಾರತ್ ಜೊಡೊಗೆ ಸಿಕ್ಕ ಪ್ರಚಾರ ಮತ್ತು ಅಲ್ಲಿ ಬಂದ ಮಾಧ್ಯಮದ ಮಂದಿ, ಅರವಿಂದ್ ಕೇಜ್ರಿವಾಲನ ಎಲ್ಲ ಕುಕರ್ಮಗಳನ್ನು ನೋಡಿಯೂ ನೋಡದಂತೆ ಸುಮ್ಮನಿರುವ ಪರಿ ಇವೆಲ್ಲವನ್ನೂ ಒಮ್ಮೆ ತುಲನೆ ಮಾಡಿ ನೋಡಿದರೊಳಿತು. ಇನ್ನು ಸಂಸತ್ತಿನ ಸುದ್ದಿಗೇ ಬರುವುದಾದರೆ ಅಧಿವೇಶನಕ್ಕೆ ಒಂದೆರಡು ದಿನಗಳ ಮುನ್ನವೇ ತವಾಂಗ್‌ನಲ್ಲಿ ಭಾರತ-ಚೀನಾದ ಗಲಾಟೆ ನಡೆದ ಸುದ್ದಿ ಕಾಂಗ್ರೆಸ್ಸಿಗೆ ಸಿಗುತ್ತದೆ. ಅಧಿವೇಶನದ ಕೆಲವು ದಿನ ಮುನ್ನವೇ ಹಿಂಡನ್‌ಬರ್ಗ್‌ನ ವರದಿ ಬಂದು ಅದಾನಿಯ ಶೇರುಗಳು ಕುಸಿಯಲಾರಂಭಿಸುತ್ತವೆ. ಅಧಿವೇಶನಕ್ಕೆ ಕೆಲವು ದಿನ ಮುನ್ನವೇ ಗಾಲ್ವಾನ್ ಕದನ ನಡೆಯುತ್ತದೆ. ಅಧಿವೇಶನಕ್ಕೆ ಕೆಲವು ದಿನ ಮುನ್ನವೇ ಪೆಗಾಸಸ್ ಹಗರಣದ ಆರೋಪವನ್ನು ಕಾಂಗ್ರೆಸ್ಸು ಮಾಡುತ್ತದೆ. ಅಧಿವೇಶನಕ್ಕೂ ಈ ಎಲ್ಲ ಘಟನೆಗಳಿಗೂ ಏನು ಸಂಬಂಧ? ಕಾಂಗ್ರೆಸ್ಸಿಗೆ ಅಧಿವೇಶನಕ್ಕೆ ಒಂದೆರಡು ದಿನಗಳ ಮುನ್ನವೇ ಈ ಎಲ್ಲ ಘಟನೆಗಳ ವಿವರ ಸಿಗುವುದಾದರೂ ಹೇಗೆ? ಒಟ್ಟಾರೆ ಸಂಸತ್ತಿನ ಚಿತ್ರಣವನ್ನು ವಿಪರೀತವಾಗಿ ತೋರಿಸುವ ಬಯಕೆ ಕಾಂಗ್ರೆಸ್ಸಿಗೆ ಏಕೆ? ಅಂತಿಮವಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಹೇಳುವ ಉದ್ದೇಶ ತಾನೇ? ಈ ಭಾಷಣದಲ್ಲಿ ಮಾತನಾಡುವ ರಾಹುಲ್ ಪ್ರತಿಭಟನೆಗೆ ಸಂಸತ್ ಭವನದ ಹೊರಗೆ ಕೂತ ಸಂಸತ್ ಸದಸ್ಯರನ್ನು ಬಲಪ್ರಯೋಗ ಮಾಡಿ ಒಳತಳ್ಳಲಾಗುತ್ತದೆ ಎಂದಿದ್ದಾನೆ. ಭಾರತದಲ್ಲಿ ಕುಳಿತು ಇದನ್ನು ಕೇಳುವ ಪ್ರತಿಯೊಬ್ಬನಿಗೂ ಇದು ಹಾಸ್ಯಾಸ್ಪದವೆನಿಸದೇ ಇರಲಾರದು. ಇಷ್ಟಕ್ಕೂ ಇವನ ಅಜ್ಜಿ ಈ ದೇಶದ ಪ್ರಧಾನಿಯಾಗಿದ್ದಾಗ ಸಂಸತ್ತೂ ನಡೆಯುತ್ತಿರಲಿಲ್ಲ, ಪತ್ರಿಕೆಗಳಿಗೆ ಸ್ವಾತಂತ್ರ್ಯ ಇರಲಿಲ್ಲ, ರಾಜಕೀಯ ವಿರೋಧಿಗಳನ್ನು ಹಿಡಿದು ಜೈಲಿಗಟ್ಟಲಾಗುತ್ತಿತ್ತು, ಕೊನೆಗೆ ಸಾಮಾನ್ಯ ಜನರ ಬದುಕೇ ದುಸ್ಸಹವಾಗಿತ್ತು. ಹೌದು, ಭಾರತದ ಇತಿಹಾಸದ ಕರಾಳ ಅಧ್ಯಾಯವಾದ ಎಮರ್ಜೆನ್ಸಿಯನ್ನು ಬರೆದಿದ್ದು ಕಾಂಗ್ರೆಸ್ಸಿನ ಇಂದಿರಾಳೇ. ಪ್ರಜಾಪ್ರಭುತ್ವವೆಂಬುದು ಭಾರತದಲ್ಲಿ ಸತ್ತಿದೆ ಎನ್ನುತ್ತಾರಲ್ಲ ರಾಹುಲ್ ಅದು ಅವನಜ್ಜಿಯ ಕಾಲದ ಕಥೆ. ಅವರಮ್ಮ ಏನು ಕಡಿಮೆ ಇರಲಿಲ್ಲ. ಮಾತೇ ಆಡದ ಮನಮೋಹನ ಸಿಂಗರನ್ನು ಕೂರಿಸಿಕೊಂಡು ತನಗೆ ಅನಿಸಿದ್ದನ್ನು ಮಾಡುತ್ತಲೇ ಹೋದರು. ಪ್ರಜಾಪ್ರಭುತ್ವ ಆಗ ಅಕ್ಷರಶಃ ಸತ್ತೇಹೋಗಿತ್ತು! ಮನಮೋಹನ್ ಸಿಂಗರನ್ನು ಬದಿಗೆ ಸರಿಸಿ ಮೋದಿಯನ್ನು ಅಧಿಕಾರಕ್ಕೆ ತರಲು ಜನ ದಂಡು-ದಂಡಾಗಿ ಬೀದಿಗೆ ಬಂದರಲ್ಲ, ಅದು ಈ ಕಾರಣಕ್ಕಾಗಿಯೇ. ರಾಹುಲ್ಗೆ ಇವೆಲ್ಲವನ್ನೂ ಮತ್ತೊಮ್ಮೆ ನೆನಪಿಸಬೇಕಿದೆ. 

ವಿದೇಶಿಗರ ಮುಂದೆ ಮಾತನಾಡುತ್ತಾ ರಾಹುಲ್ ಪೆಗಾಸಸ್ ಎಂಬ ಆಪ್ನ ಮೂಲಕ ಸರ್ಕಾರ ತಾನಾಡಿದ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದೆ ಎಂದು ಹೇಳುವಾಗ ಸ್ವಲ್ಪವಾದರೂ ಎಚ್ಚರಿಕೆ ವಹಿಸಬೇಕಿತ್ತು. ಈ ಕಾರಣಕ್ಕಾಗಿ ಕಂಠಮಟ್ಟ ಕೂಗಾಡಿದ ಕಾಂಗ್ರೆಸ್ಸಿಗರು ಸುಪ್ರೀಂಕೋರ್ಟಿನ ಮೆಟ್ಟಿಲು ಹತ್ತಿದ್ದರು. ತಾನೇ ಒಂದು ಕಮಿಟಿಯನ್ನು ರಚಿಸಿ ವಿಚಾರಣೆಗೆ ಯತ್ನಿಸಿದ ನ್ಯಾಯಾಲಯ ಕೊನೆಗೂ ಈ ಆರೋಪದಲ್ಲಿ ಹುರುಳಿಲ್ಲ ಎಂದು ತೀರ್ಪುಕೊಟ್ಟಿತು. ಈ ನಾಡಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ವಿದೇಶಗಳಲ್ಲಿ ಈ ರೀತಿ ಮಾತನಾಡುವ ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರಿಕನೆನ್ನಬಹುದೇನು? ಆತನ ಕೈಗೆ ದೇಶದ ಚುಕ್ಕಾಣಿಯನ್ನು ಕೊಡಬಹುದೇನು? ವಾಸ್ತವವಾಗಿ ಆತ ತನ್ನ ಮೇಲೆ ಅನುಕಂಪ ಬರುವಂತೆ ಮಾತನಾಡುತ್ತಿದ್ದ. ತಾನು ಎಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತದಲ್ಲಿ ನೆಲೆ ನಿಂತಿದ್ದೇನೆ ಎಂದು ಅಂತರ್ರಾಷ್ಟ್ರೀಯ ವೇದಿಕೆ ಮೇಲೆ ಆತ ಹೇಳಬೇಕಿತ್ತು. ತನ್ನ ದೇಶವನ್ನು ಜರಿದಾದರೂ ಸರಿಯೇ ಆತ ಹೇಳಬೇಕಿತ್ತು!

ಮುಂದುವರೆಸಿ ಆತ ಗಾಂಧೀಜಿಯವರ ಸತ್ಯಾಗ್ರಹದ ಕಲ್ಪನೆಯನ್ನಿಟ್ಟುಕೊಂಡೇ ಭಾರತ್ ಜೊಡೊ ಯಾತ್ರೆ ನಡೆಸಿದ್ದು ಎನ್ನುತ್ತಾನೆ. ತನಗೆ ಬೇಕಾದ್ದನ್ನು ಸಾತ್ವಿಕ ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಪ್ರಯತ್ನ ಅದು. ಆತನ ಯಾತ್ರೆ ಗಾಂಧೀಜಿಯ ಮಾರ್ಗದ್ದಾದರೆ ಅಡ್ವಾಣಿಯ ರಾಮಮಂದಿರ ಯಾತ್ರೆ ಅದೇಕೆ ಸತ್ಯಾಗ್ರಹ ಮಾರ್ಗದ್ದಲ್ಲ? ಕಾಶ್ಮೀರದಲ್ಲಿ ತಿರಂಗಾ ಹಾರಿಸಬೇಕೆಂಬ ವಿಸ್ತಾರವಾಗಿರುವ ಯಾತ್ರೆಯ ಹಿಂದೆ ಇರುವ ಗಾಂಧೀಜಿಯವರ ಸತ್ಯಾಗ್ರಹದ ಚಿಂತನೆಯನ್ನು ಅಲ್ಲಗಳೆಯುವುದು ಸಾಧ್ಯವೇನು? ಈ ಯಾತ್ರೆಯನ್ನು ಮನಸೋ ಇಚ್ಛೆ ಬಣ್ಣಿಸುವ ರಾಹುಲ್, ಒಬ್ಬ ವ್ಯಕ್ತಿಯೇ ಸರ್ವಸ್ವವಾಗುವುದನ್ನು ತಪ್ಪಿಸಲು ಜನರೊಂದಿಗೆ ಒಂದಾಗಬಲ್ಲ ಈ ರೀತಿಯ ಯಾತ್ರೆಗಳು ಅಗತ್ಯವಾಗಿ ಬೇಕು ಎನ್ನುತ್ತಾನೆ. ಆದರೆ ಅವನ ಮುತ್ತಜ್ಜ ನೆಹರೂಗಿಂತ ಏಕವ್ಯಕ್ತಿ ಪ್ರದರ್ಶಕ ಮತ್ತೊಬ್ಬನಿರಲಿಲ್ಲ. ವಿದೇಶಾಂಗ ನೀತಿಯ ಚರ್ಚೆ ಸಂಸತ್ತಿನಲ್ಲಿ ನಡೆಯುವಾಗ ಆಚಾರ್ಯ ಕೃಪಲಾನಿ ನೀವೇಕೆ ಮಹತ್ವದ ನಿರ್ಧಾರಗಳನ್ನು ಎಲ್ಲರೊಡನೆ ಚರ್ಚಿಸಿ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಎಲ್ಲವನ್ನೂ ಎಲ್ಲರ ಬಳಿ ಚರ್ಚಿಸಲಾಗುವುದಿಲ್ಲ ಎಂಬರ್ಥದ ಉತ್ತರವನ್ನು ಸುದೀರ್ಘವಾಗಿ ನೆಹರೂ ಕೊಟ್ಟಾಗ ಕೃಪಲಾನಿಯವರು ಎದ್ದುನಿಂತು ‘ನನ್ನ ಮಾತನ್ನು ಮರಳಿ ಪಡೆಯುತ್ತೇನೆ. ಭಾರತದ ವಿದೇಶಾಂಗ ನೀತಿ ಒನ್ ಮ್ಯಾನ್ ಪಾಲಿಸಿ ಎನ್ನುವುದನ್ನು ಒಪ್ಪುತ್ತೇನೆ’ ಎಂದಿದ್ದರು. ಅದು ಅಂದಿನ ಪ್ರಧಾನಿಯೆಡೆಗಿನ ವ್ಯಂಗ್ಯವಾಗಿತ್ತು. ಕಾಂಗ್ರೆಸ್ಸಿಗರು ಅದನ್ನೂ ಸಂಭ್ರಮಿಸಿರಲು ಸಾಕು. 

ರಾಹುಲ್ ಈ ಭಾಷಣದಲ್ಲಿ ಒಂದಷ್ಟು ಭಾವನೆಗಳನ್ನು ಜಾಗೃತಗೊಳಿಸುವ ಪ್ರಯತ್ನವನ್ನೂ ಮಾಡಿದ. ಗ್ಯಾಂಗ್‌ ರೇಪ್‌ಗೊಳಗಾದ ಹೆಣ್ಣುಮಗಳು ತನ್ನ ಕೈಹಿಡಿದು ಹಂಚಿಕೊಂಡ ಕಥೆಯನ್ನು, ಮಕ್ಕಳೊಡನೆ ಆಡಬೇಡಿ ಅವರು ಕೊಳಕಾಗಿದ್ದಾರೆ ಎಂದು ಹೇಳಿದ್ದನ್ನೂ ಆತ ಹೆಮ್ಮೆಯಿಂದ ಹೇಳಿದ. ಇವೆಲ್ಲವೂ ನಿಸ್ಸಂಶಯವಾಗಿ ಆತನಿಗೆ ಹೊಸತೇ ಆಗಿರಬೇಕು. ಹುಟ್ಟಿದಾಗಿನಿಂದಲೂ ಬಾಯಲ್ಲಿ ಚಿನ್ನದ ಚಮಚವನ್ನೇ ಇಟ್ಟುಕೊಂಡು ಬಂದಿರುವ ಆತನಿಗೆ ಜನಸಾಮಾನ್ಯರ ಸಂಪರ್ಕ ಇರುವುದು ಸಾಧ್ಯವೇ ಇರಲಿಲ್ಲ ಬಿಡಿ. ಮೊದಲ ಬಾರಿಗೆ ಆತ ಇಷ್ಟು ಹತ್ತಿರದಿಂದ ಭಾರತವನ್ನು, ಭಾರತೀಯರನ್ನೂ ನೋಡಿದ್ದಾನೆ. ಹೀಗಾಗಿ ಇವೆಲ್ಲ ಹೊಸತೆನಿಸಬಹದು. ಗಣರಾಜ್ಯೋತ್ಸವದ ವೈಭವವನ್ನು ನೋಡಲು ಕಟ್ಟಡ ಕಾರ್ಮಿಕರನ್ನು ವಿಐಪಿಯಾಗಿ ಕೂರಿಸಿಕೊಂಡ, ಕಾಶಿಯಲ್ಲಿ ಮಂದಿರ ನಿರ್ಮಾಣಕ್ಕೆ ಕಾರಣರಾದ ಮಂದಿಗೆ ಹೂವು ಎರಚಿ ಸಂಭ್ರಮಿಸಿದ, ಪೌರ ಕಾರ್ಮಿಕರ ಕಾಲ್ತೊಳೆದು ಅವರ ಗೌರವವನ್ನು ನೂರ್ಮಡಿಸಿದ ಮೋದಿಯೆದುರು ಆತ ಸಾಕಷ್ಟು ಕಲಿಯಬೇಕಾದ ಅಗತ್ಯವಿದೆ. ಏಕೆಂದರೆ ಮೋದಿ ಬಡತನದ ಬೆವರುಂಡೇ ಬಂದವರು. 

ಅಂತರ್ ರಾಷ್ಟ್ರೀಯ ವೇದಿಕೆಯ ಮೇಲೆ ಪುಲ್ವಾಮಾ ದಾಳಿಯನ್ನು ಸ್ಮರಿಸಿಕೊಂಡ ರಾಹುಲ್ ಕಾರ್‌ ಬಾಂಬಿಗೆ ಸತ್ತ ಸೈನಿಕರ ಉಲ್ಲೇಖ ಮಾಡುತ್ತಾನೆ. ವಾಸ್ತವವಾಗಿ ಅದು ಕಾರ್ಬಾಂಬ್ ಅಲ್ಲ. ಪಾಕಿಸ್ತಾನದಿಂದ ಪ್ರೇರಣೆಯನ್ನೂ ತರಬೇತಿಯನ್ನೂ ಪಡೆದುಕೊಂಡ ಭಯೋತ್ಪಾದಕನೊಬ್ಬ ನಡೆಸಿದ ಕುಕೃತ್ಯ. ಅದರ ಕುರಿತಂತೆ ಹೇಳುವ ಧೈರ್ಯವನ್ನೇ ಆತ ತೋರಲಿಲ್ಲ. ಅನೇಕ ಕಡೆಗಳಲ್ಲಿ, ತನಗೆ ಸೂಕ್ತವಾದ ರಕ್ಷಣೆ ಒದಗಿಸಲಿಲ್ಲ. ಕೇಂದ್ರ ಸರ್ಕಾರ ತನ್ನನ್ನು ಕೊಲ್ಲುವ ಯತ್ನ ಮಾಡುತ್ತಿದೆ ಎಂದೆಲ್ಲ ಆರೋಪಿಸಿದ್ದ ರಾಹುಲ್ ಕಾಶ್ಮೀರದಲ್ಲಿ ನನಗೆ ಹೆಚ್ಚು ರಕ್ಷಣೆ ಕೊಟ್ಟರು, ಇದು ಸ್ಥಳೀಯರಿಂದ ನನ್ನನ್ನು ಬೇರ್ಪಡಿಸುವ ತಂತ್ರ ಎಂದು ಹಲಬುತ್ತಾನಲ್ಲ, ಈತನನ್ನು ತಮ್ಮ ನಾಯಕನೆಂದು ಹೇಳಿಕೊಳ್ಳುವ ಮಂದಿಗೆ ಏನೆನ್ನಬೇಕು ಹೇಳಿ? 

ಇಡಿಯ ಭಾಷಣದಲ್ಲಿ ನನಗೆ ಅಚ್ಚರಿ ಎನಿಸಿದ್ದು ರಾಹುಲನ ಚೀನಾ ಪ್ರೇಮ. ಅಮೇರಿಕಾದ ಕುರಿತಂತೆ ಮಾತನಾಡುತ್ತಾ ಆತ ತಾನು ಓದುತ್ತಿರುವಾಗ ಅಮೇರಿಕಾದ ವಿಮಾನ ನಿಲ್ದಾಣದೊಳಕ್ಕೂ ಯಾವ ಪರೀಕ್ಷೆಯೂ ಇಲ್ಲದೇ ಹೋಗಬಹುದಿತ್ತು. ಆದರೀಗ ಹಾಗಿಲ್ಲ. ಒಸಾಮನ ಆಕ್ರಮಣದ ನಂತರ ಅಮೇರಿಕಾ ಮೊದಲಿನಷ್ಟು ಸ್ವಾತಂತ್ರ್ಯ ಭರಿತವಾಗಿಲ್ಲ ಎನ್ನುತ್ತಾನೆ. ಒಂದು ಒಸಾಮನ ಆಕ್ರಮಣಕ್ಕೆ ಅಮೇರಿಕಾ ಹೀಗಿರಬಹುದಾದರೆ, 65 ವರ್ಷಗಳ ಅತ್ಯಂತ ಕೆಟ್ಟ ನೀತಿಯಿಂದಾಗಿ ಇಡಿಯ ಪಾಕಿಸ್ತಾನವೇ ನಿರಂತರ ಭಾರತದ ಮೇಲೆ ಛದ್ಮಯುದ್ಧ ಮಾಡುವಂತೆ ಕಾಂಗ್ರೆಸ್ ಮಾಡಿಬಿಟ್ಟಿತಲ್ಲ, ಭಾರತದ ಸ್ಥಿತಿ ಹೇಗಿರಬೇಕಿತ್ತು ಹೇಳಿ? ಈ ಪ್ರಶ್ನೆ ಕಾಂಗ್ರೆಸ್ಸಿನ ಕಾರ್ಯಕರ್ತರು ರಾಹುಲ್ ಸಿಕ್ಕಾಗ ಕೇಳಬೇಕಿದೆ. ಅಮೇರಿಕಾದ ಈ ಬದಲಾವಣೆಗೆ ಎದುರಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ರಾಷ್ಟ್ರವೆಂದರೆ ಚೀನಾ ಎನ್ನುತ್ತಾನೆ ಆತ. ಅಮೇರಿಕಾದಂತೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಗಮನ ಕೊಡದೇ ಎಲ್ಲರೂ ಸಹಬಾಳ್ವೆಯಿಂದ ಬದುಕುವುದಕ್ಕೆ ಚೀನಾ ವ್ಯವಸ್ಥೆ ಮಾಡಿಕೊಡುತ್ತದೆ ಎನ್ನುತ್ತಾನೆ. ಸುದೀರ್ಘಕಾಲ ಆಂತರಿಕ ಸಮಸ್ಯೆಗಳಿಂದ ಬೆಂದು ಈಗ ಅದು ಅವೆಲ್ಲವುಗಳನ್ನೂ ಮೀರಿ ಬೆಳೆದು ನಿಂತಿರುವ ಪರಿ ಅಚ್ಚರಿ ಎನ್ನುತ್ತಾನೆ. ಅವರ ಈ ಬಗೆಯ ಅಭಿವೃದ್ಧಿಯ ಪರಿಕಲ್ಪನೆಯಿಂದಾಗಿಯೇ ಒನ್ ಬೆಲ್ಟ್ ಒನ್ ರೋಡ್ ನಿರ್ಮಾಣವಾಗುತ್ತಿರುವುದು ಎಂದೂ ಹೇಳುತ್ತಾನೆ. ಜಗತ್ತಿನ ಸಮುದ್ರ ವಹಿವಾಟಿನ ಪ್ರಾಬಲ್ಯದ ವಿರುದ್ಧ ಸಟೆದು ನಿಂತಿರುವ ಚೀನಾ ಎನ್ನುವ ರಾಹುಲನ ಮಾತು ಕೇಳಿದಾಗ ಆತನ ಮೂಲ ಉದ್ದೇಶವೇನೆಂಬುದೇ ಅರಿವಾಗುವುದಿಲ್ಲ. ಏಷ್ಯಾದ ಪ್ರಬಲ ಶಕ್ತಿಯಾಗಿ ಬೆಳೆಯಬೇಕೆಂದು ಬಯಸುತ್ತಿರುವ ಭಾರತ ಚೀನಾಕ್ಕಿಂತ ಬಲು ಹಿಂದಿದೆ ಎನ್ನುವ ಸಂದೇಶ ನೀಡುತ್ತಿದ್ದಾನೋ, ಅಥವಾ ಜಗತ್ತೆಲ್ಲ ಚೀನಾದ ಪ್ರಾಬಲ್ಯವನ್ನು ಮುರಿಯಬೇಕೆಂದು ಒಟ್ಟಾಗುತ್ತಿದ್ದರೆ ಭಾರತೀಯರು ಚೀನಾದ ಬೆಳವಣಿಗೆಗೆ ಕಟಿಬದ್ಧರಾಗಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾನೋ ನನಗಂತೂ ಗೊತ್ತಾಗಲಿಲ್ಲ. ಅವನ ಮುತ್ತಜ್ಜ ನೆಹರೂ ಹೀಗೇ ಮಾಡಿದ್ದರಲ್ಲ. ಭಾರತಕ್ಕೆ ಸಿಗಬೇಕಾಗಿದ್ದ ಜಾಗತಿಕ ಸೌಲಭ್ಯಗಳನ್ನೆಲ್ಲ ಚೀನಾಕ್ಕೆ ವರ್ಗಾಯಿಸಿ ಜಗತ್ತು ನಮ್ಮ ಮೇಲಿಡಬಹುದಾಗಿದ್ದ ವಿಶ್ವಾಸವನ್ನೇ ನಷ್ಟಗೊಳಿಸಿಬಿಟ್ಟಿದ್ದರು. ಜಗತ್ತಿನ ತಂತ್ರಜ್ಞಾನವನ್ನು ಕದ್ದು ತನ್ನದ್ದೇ ಎಂದು ಹೇಳುವ ಚೀನಾದ ವಾದವನ್ನು ಸಮರ್ಥಿಸುವ ರಾಹುಲ್‌ನ ಮಾತುಗಳಂತೂ ಎಂಥವನಿಗೂ ಅಚ್ಚರಿ ತರಿಸುವಂಥದ್ದೇ! 

ವಾಸ್ತವವಾಗಿ ಈ ಭಾಷಣದಿಂದ ಆತನಿಗೆ ಭಾರತದಲ್ಲಿ ಒಂದು ವೋಟೂ ಹೆಚ್ಚಿಗೆ ಬೀಳುವುದು ಸಾಧ್ಯವಿಲ್ಲ. ಅಂದರೆ ಆತ ಇದನ್ನು ಬೇರೆ ಯಾವುದೋ ಕಾರಣಕ್ಕಾಗಿ ಮಾಡಿದ್ದಾನೆ. ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲವೆನ್ನುವ ಸೊರೊಸ್‌ನ ಮಾತುಗಳಿಗೂ ರಾಹುಲನ ಈ ವಾಕ್ಚೇಷ್ಟೆಗಳಿಗೂ ಹತ್ತಿರದ ಸಂಬಂಧವಿದೆ ಎನಿಸುತ್ತದೆ. ಉದ್ದೇಶ ನಾವಂದುಕೊಂಡಷ್ಟು ಸರಳವಾಗಿಲ್ಲ. 

ಇಷ್ಟಕ್ಕೂ ಈ ಭಾಷಣದಲ್ಲಿ ನಾನು ಅರ್ಥಮಾಡಿಕೊಳ್ಳದ ಅನೇಕ ಸಂಗತಿಗಳಿರಬಹುದು. ಆತನ ಮಾತು ನನಗೆಂದೂ ಪೂರ್ಣವಾಗಿ ಅರ್ಥವೇ ಆಗಲಿಲ್ಲ. ಹೀಗಾಗಿ ನನಗೂ ಅರ್ಥವಾಗದ ಅನೇಕ ಒಳಸುಳುಹುಗಳಿದ್ದರೆ ನೀವೇ ಅದನ್ನು ಪೂರ್ಣ ಕೇಳಿ ತಿಳಿಯಬೇಕಾಗಿ ವಿನಂತಿಸುವೆ ಅಷ್ಟೇ!

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ಕಾಣೆಯಾಗಿಬಿಟ್ಟಿದ್ದಾರಲ್ಲ ಸಿದ್ದರಾಮಯ್ಯನವರು!

ನಿಮಗೆ ನೆನಪಿರಬೇಕಲ್ಲ, ತೈವಾನ್ ವಿಚಾರದಲ್ಲಿ ಅಮೇರಿಕಾ ಚೀನಾಕ್ಕೆ ಕಟುವಾದ ಸಂದೇಶ ನೀಡಿತ್ತು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಇವರೇ ಹುಟ್ಟುಹಾಕಿಕೊಂಡ ಸಂಘಟನೆಯೊಂದಿದೆ. ಇಂಡೋ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಎಂಬುದು ಅದರ ಹೆಸರು. ಚಿತ್ರಕಲಾ ಪರಿಷತ್ ನಲ್ಲಿ ಪ್ರತಿಭಟನೆಯ ನೆಪದಲ್ಲಿ ಈ ಕಾಂಗ್ರೆಸ್ಸಿಗರು ಚೀನಾದ ರಾಯಭಾರಿಯನ್ನೇ ಕರೆಸಿದ್ದರು. ಜೊತೆಗೆ ಒಂದು ಚಿತ್ರಪ್ರದರ್ಶನ. ಮುಖ್ಯ ಅತಿಥಿಯಾಗಿ ಭಾಗವಹಿಸಬೇಕೆಂದಿದ್ದವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರು. ಸ್ವಲ್ಪ ಪ್ರತಿಭಟನೆಯಾದೊಡನೆ ‘ನಾನು ಬರುವುದಿಲ್ಲವೆಂದರೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಬಿಟ್ಟಿದ್ದಾರಲ್ಲ’ ಎಂದು ಮೊಸಳೆ ಕಣ್ಣೀರು ಸುರಿಸಿದ ಅವರು ಉಳಿದ ಕಾಂಗ್ರೆಸ್ಸಿಗರು ಈ ಪ್ರತಿಭಟನೆಗೆ ಹೋಗುವುದಿಲ್ಲವೆಂದೇನೂ ಹೇಳಲಿಲ್ಲ! ಪ್ರತಿಭಟನೆ ಆಯ್ತು ಕೂಡ. ಇಷ್ಟೆಲ್ಲಾ ಈಗೇಕೆಂದರೆ ಚೀನಾದ ಗಡಿಯ ಬರೋಬ್ಬರಿ ನೂರು ಕಿಲೋಮೀಟರ್ ದೂರದಲ್ಲಿ ಭಾರತ ಮತ್ತು ಅಮೇರಿಕಾಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದಕ್ಕೆ ಚೀನಾ ಪ್ರತಿಭಟನೆ ವ್ಯಕ್ತಪಡಿಸಿ ಎಚ್ಚರಿಕೆ ಕೂಡ ಕೊಡುವ ಪ್ರಯತ್ನ ಮಾಡಿದೆ. ಭಾರತ ಎಂದಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಟ್ಟರೆ ಅಮೇರಿಕಾ ಕೂಡ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದರ್ದು ನಿಮಗೆ ಬೇಕಿಲ್ಲ ಎಂದು ಹೇಳಿಬಿಟ್ಟಿದೆ. ಚೀನಾದ ವಿಚಾರದಲ್ಲಿ ಅಮೇರಿಕಾ ಆಂತರಿಕ ಹಸ್ತಕ್ಷೇಪ ಮಾಡಿದೆ ಎಂದು ಬಾಯಿಬಡಕೊಂಡಿದ್ದ ಕಾಂಗ್ರೆಸ್ಸಿಗರು ಈಗೇಕೋ ಶಾಂತರಾಗಿಬಿಟ್ಟಿದ್ದಾರೆ. ಪ್ರತಿಭಟನೆ ಇರಲಿ, ಚೀನಾದ ವಿರುದ್ಧ ಒಂದು ಹೇಳಿಕೆ ಕೊಡುವ ಸಾಹಸವನ್ನೂ ಮಾಡಲಿಲ್ಲ. ಚೀನಾದಲ್ಲಿ ಮಳೆ ಬಿದ್ದರೆ ಇವರಿಗೆ ಥಂಡಿಯಾಗುತ್ತದೆ. ಆದರೆ ಭಾರತದಲ್ಲಿ ಮಂಜೇ ಸುರಿದರೂ ಇವರಿಗೆ ಅದು ತೊಂದರೆ ಕೊಡುವುದಿಲ್ಲ. ದುರ್ದೈವವಲ್ಲವೇನು? 

ಇರಲಿ. ಇವರೆಲ್ಲ ಇಷ್ಟು ಆರಾಧಿಸುವ ಚೀನಾ ಕಳೆದ ಎಂಟ್ಹತ್ತು ದಿನಗಳಿಂದ ಪಡಬಾರದ ಪಾಡು ಪಡುತ್ತಿದೆ. ನವೆಂಬರ್ ತಿಂಗಳ ಕೊನೆಯ ಭಾಗದ ವೇಳೆಗೆ ಶಿಂಜಿಯಾಂಗ್ ಪ್ರಾಂತ್ಯದ ಉರುಕ್ಮಿಯಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್ ಮೆಂಟ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಹತ್ತಕ್ಕೂ ಹೆಚ್ಚು ಮಂದಿ ತೀರಿಕೊಂಡರು. ಜನರ ಆಕ್ರೋಶಕ್ಕೆ ಕಾರಣವಾದ ಈ ಸಂಗತಿ ದಶಕಗಳಷ್ಟು ದೀರ್ಘಕಾಲದ ನಂತರ ಚೀನಿಯರನ್ನು ಪ್ರತಿಭಟನೆಯ ನೆಪದಲ್ಲಿ ಬೀದಿಗೆ ತಂತು. ಅಪಾರ್ಟ್‌ಮೆಂಟಿಗೆ ಬೆಂಕಿ ಹತ್ತಿಕೊಂಡರೆ ಪ್ರತಿಭಟನೆ ಮಾಡುವುದೇತಕ್ಕೆ ಎಂದು ಆಶ್ಚರ್ಯವಾಗಿರಬೇಕಲ್ಲವೇ? ಜೀರೊ ಕೋವಿಡ್‌ನ ಹುಚ್ಚಿಗೆ ಬಿದ್ದಿರುವ ಷಿ ಇಲ್ಲಿಂದ ಯಾರೊಬ್ಬರೂ ಆಚೆಗೆ ಬರದಿರುವಂತೆ ಹೊರಬಾಗಿಲಿಗೆ ಕಬ್ಬಿಣದ ರಾಡುಗಳಿಂದ ವೆಲ್ಡಿಂಗ್ ಮಾಡಿಸಿದ್ದರ ಪರಿಣಾಮ ಜನ ಅನಿವಾರ್ಯವಾಗಿ ಬೆಂಕಿಯಲ್ಲಿ ಬೇಯಬೇಕಾಗಿ ಬಂತು. ಜಗತ್ತಿನಾದ್ಯಂತ ಕೊವಿಡ್‌ನ ಸಂಕಟ ಇರಬಹುದೇನೋ ಎಂದೇ ಭಾವಿಸಿಕೊಂಡಿದ್ದ ಚೀನೀ ಮಂದಿಗೆ ಫುಟ್ಬಾಲ್ ವಿಶ್ವಕಪ್‌ನ ವೇಳೆಗೆ ಮುಖಕ್ಕೆ ಮಾಸ್ಕು ಕೂಡ ಧರಿಸದೇ ಓಡಾಡುತ್ತಿರುವ ಮಂದಿಯನ್ನು ಕಂಡು ಕಿರಿಕಿರಿ ಎನಿಸಿರಲು ಸಾಕು. ವರ್ಷ-ವರ್ಷಗಳೇ ಉರುಳಿದರೂ ಇನ್ನೂ ತಾವು ಕೋವಿಡ್‌ನ ಆತಂಕದಲ್ಲೇ ಬದುಕಬೇಕಾಯ್ತಲ್ಲ, ಮನೆಯಿಂದ ಹೊರಬರಲೂ ಸರ್ಕಾರದ ಅನುಮತಿ ಕೇಳಬೇಕಾಯ್ತಲ್ಲ ಎಂದವರಿಗೆ ಅನಿಸಿರಲು ಸಾಕು. ಕೊನೆಗೂ ಜನ ಬೀದಿಗೆ ಬಂದರು. ಲಾಕ್ಡೌನ್ ತೆಗೆಯಿರಿ ಎಂಬ ಘೋಷಣೆ ಕೂಗಲಾರಂಭಿಸಿದರು. ಪ್ರತಿಭಟನೆಯ ಕಾವು ಹಬ್ಬಲು ತುಂಬ ಸಮಯ ತೆಗೆದುಕೊಳ್ಳಲಿಲ್ಲ. ಶಾಂಘಾಯ್ ನವೆಂಬರ್ 26ಕ್ಕೆ ಬೀದಿಗೆ ಬಂತು. 2020ರಲ್ಲಿ ಹಾಂಗ್ ಕಾಂಗ್‌ನ ಮಂದಿ ಸರ್ಕಾರದ ದಮನ ನೀತಿಯ ವಿರುದ್ಧ ಪ್ರತಿಭಟನೆಗೆ ಖಾಲಿ ಕಾಗದ ಬಳಸಿದ್ದರಲ್ಲ ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಯ್ತು. ಸರ್ಕಾರದ ವಿರುದ್ಧ ಘೋಷಣೆ ಇದ್ದರೆ ತಾನೇ ಜೈಲಿಗೆ ತಳ್ಳುವುದು? ಖಾಲಿಯ ಹಾಳೆಯನ್ನು ಅವರು ಏನೆಂದು ಗುರುತಿಸುತ್ತಾರೆ? ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಮರುದಿನವೇ ಭಾಗವಹಿಸಿದವರನ್ನು ಬಂಧಿಸಲುದ್ಯುಕ್ತವಾಯ್ತು. ಇದನ್ನು ಪ್ರತಿಭಟಿಸಿ ಬೀಜಿಂಗ್‌ನಲ್ಲಿ ಜನ ಬೀದಿಗಿಳಿದರು. ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಈ ಬಾರಿ ಇದು ಬರಿ ಲಾಕ್ಡೌನ್ ತೆಗೆಯಿರಿ ಎಂಬುದಷ್ಟಕ್ಕೇ ಸೀಮಿತವಾಗದೇ ಷಿ ಜಿಂಪಿಂಗ್ ಅನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಯ್ತು ಕೂಡ. ಇದು ಅಧಿಕಾರಕ್ಕೆ ಬಂದಾಗಿನಿಂದಲೂ ಷಿಯ ಪಾಲಿಗೆ ಬಲುದೊಡ್ಡ ಹೊಡೆತ. ಲಾಂಗ್‌ಜೊವರೆಗೂ ಪ್ರತಿಭಟನೆಗಳು ಹಬ್ಬಿ ಮೊದಲ ಬಾರಿಗೆ ಚೀನಾದ ದಮನ ನೀತಿಯನ್ನು ಮೀರಿ ಸುದ್ದಿ ಜಗತ್ತಿನ ಮೂಲೆ-ಮೂಲೆಗೂ ತಲುಪಿತು. ಪ್ರತಿಭಟನೆಯ ವೇಳೆಯೇ ಇದರ ವರದಿ ಮಾಡುತ್ತಿದ್ದ ಬಿಬಿಸಿಯ ವರದಿಗಾರ ಎಡ್ವರ್ಡ್ ಲಾರೆನ್ಸ್ ನನ್ನು ಪೊಲೀಸರು ಮನಸೋ ಇಚ್ಛೆ ಬಡಿದರಲ್ಲದೇ ಆತನನ್ನು ಬಂಧಿಸಿ ಎಳೆದೊಯ್ದರೂ ಕೂಡ. ಹಾಂಗ್ ಕಾಂಗ್ ಶಾಂತವಾಗಿ ಚೀನಿಯರ ನೋವಿಗೆ ಬೆಂಬಲ ಸೂಚಿಸಿತು. ‘ನನಗೆ ಸ್ವಾತಂತ್ರ್ಯ ಕೊಡು, ಇಲ್ಲವೇ ಕೊಂದುಬಿಡು’ ಎನ್ನುವ ಮಾತು ಎಲ್ಲೆಡೆ ಕೇಳಿಬಂತು! 

ಚೀನಾದ ಜನ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅವರನ್ನು ಸ್ವಲ್ಪ ಭಡಕಾಯಿಸಿದರೆ ಸಾಕು ಅವರಿಂದ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು ಎಂಬ ಪರಿಸ್ಥಿತಿ ಇರುವಾಗ, ಅವರು ಬೀದಿಗೆ ಬಂದಿದ್ದಾದರೂ ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಸಹಜವೇ. ಇದಕ್ಕೆ ಕರೋನಾ ಎಂಬ ಮಹಾಮಾರಿಯೇ ಕಾರಣ ಎಂದರೆ ಅಚ್ಚರಿಯಲ್ಲ. ಕರೋನಾ ಆರಂಭವಾದಾಗ ಜಿರೊ ಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ ಷಿ ಕಠೋರ ಕ್ರಮಗಳ ಮೂಲಕ ಜನರನ್ನು ಸಾಯದೇ ಉಳಿಸಿಕೊಂಡ. ಆರಂಭದಲ್ಲಿ ಜನ ಪ್ರತಿಭಟಿಸಿದರಾದರೂ ಕಾಲಕ್ರಮದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಸಾವು ನೋವುಗಳನ್ನು ಕಂಡು, ತಮ್ಮ ಅಧ್ಯಕ್ಷರಿಗಿರುವ ಜನರ ಆರೋಗ್ಯದ ಕುರಿತ ಕಾಳಜಿಯನ್ನು ಕಂಡು ಅವರು ಮನಸೋತರು. ಚೀನಾದಲ್ಲಿ ಕೊವಿಡ್ ಸಾವು ಹೆಚ್ಚು-ಕಡಿಮೆ ನಗಣ್ಯವೇ ಆಗಿತ್ತು. ಆದರೆ ಈ ತಂತ್ರ ಜನರ ಬದುಕನ್ನು ಸುದೀರ್ಘಕಾಲ ದುರ್ಭರಗೊಳಿಸಿದಾಗ ಅವರು ತಿರುಗಿ ಬೀಳುವ ಸಾಧ್ಯತೆ ಇತ್ತಲ್ಲ ಅದನ್ನು ಗಾಲ್ವಾನ್‌ನಲ್ಲಿ ಸಾಹಸ ಮಾಡುವ ಮೂಲಕ ಮುಚ್ಚಿಕೊಳ್ಳುವ ಯತ್ನ ಮಾಡಿತು ಚೀನಾ. ಅವರ ದುರದೃಷ್ಟಕ್ಕೆ 40ಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡು ಮುಖಭಂಗ ಅನುಭವಿಸಿತು. ಆದರೆ ತಮ್ಮ ಜನರ ಮುಂದೆ ಯಾವ ಸೈನಿಕರೂ ತೀರಿಕೊಂಡಿಲ್ಲ ಎಂದು ಹೇಳುವ ಮೂಲಕ ಮಾನವುಳಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆಗೆ ಎವರ್‌ಗ್ರ್ಯಾಂಡ್ ಎಂಬ ರಿಯಲ್ ಎಸ್ಟೇಟ್ ಕಂಪೆನಿಯೊಂದು ಬೀದಿಗೆ ಬಂದು ಚೀನಾದ ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಮಂದಿ ಕಣ್ಣೀರಿಡುವಂತಾಯ್ತು. ಕರೋನಾಕ್ಕಿಂತ ಮುಂಚೆ ಜನರಿಂದ ಮತ್ತು ಅನೇಕ ಬ್ಯಾಂಕುಗಳಿಂದ ಸಾಕಷ್ಟು ಸಾಲಪಡೆದು ಅಗಾಧವಾಗಿ ಬೆಳೆದುನಿಂತ ಎವರ್ ಗ್ರ್ಯಾಂಡ್ 200 ನಗರಗಳಲ್ಲಿ ಆಸ್ತಿಯನ್ನು ಮಾಡಿತು. ತನ್ನ ಶೇರುದಾರರಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಟ್ಟು ಭರವಸೆ ಮೂಡಿಸಿತು. ಕರೋನಾ ಲಾಕ್ಡೌನಿನ ನಂತರ ಮನೆಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕಡಿಮೆಯಾಯ್ತಲ್ಲ ಕಂಪೆನಿ ಸಾಕಷ್ಟು ನಷ್ಟ ಅನುಭವಿಸಿತು. ಚೀನಾದ ಬ್ಯಾಂಕುಗಳಿಂದ ಸಾಲ ಪಡೆಯಬಹುದಾದ ಮಿತಿಯನ್ನು ದಾಟಿದ್ದರಿಂದ ಅದಕ್ಕೀಗ ಹಣಕಾಸಿನ ಮುಗ್ಗಟ್ಟು ಕಂಡುಬಂತು. ಹೂಡಿಕೆದಾರರಿಗೆ ಕೊಡಬೇಕಾಗಿದ್ದ ಹಣದ ಬದಲು ಅರೆನಿರ್ಮಿತ ಮನೆಗಳನ್ನು ನೀಡಲಾರಂಭಿಸಿತು. ಹಣವೇ ಬೇಕು ಎಂದವರ ಮುಂದೆ ಕೈಚೆಲ್ಲಿ ನಿಂತುಬಿಟ್ಟಿತು. ಶೆನ್‌ಜೆನ್‌ನಲ್ಲಿ ಮುಖ್ಯ ಕಛೇರಿಯ ಎದುರಿಗೆ ದೊಡ್ಡಮಟ್ಟದ ಜನ ಬೀದಿಗೆ ಬಂದುನಿಂತರು. ಈ ಕಂಪೆನಿಯ ಒಟ್ಟು ಸಾಲ ಎಷ್ಟಿತ್ತು ಗೊತ್ತೇನು? ಒಂದು ಅಂದಾಜಿನ ಪ್ರಕಾರ 88 ಬಿಲಿಯನ್ ಡಾಲರ್ಗಳಷ್ಟು! ಕಳೆದ ಜೂನ್ ತಿಂಗಳಿಗೆ ಕಟ್ಟಬೇಕಿದ್ದ ಬಡ್ಡಿಯೇ 80 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚಿತ್ತು. ಎವರ್ ಗ್ರ್ಯಾಂಡ್ ನ ಈ ಪರಿಸ್ಥಿತಿಯಿಂದಾಗಿ ಚೀನಾದಲ್ಲಿ ಒಟ್ಟಾರೆ ಮನೆಗಳ ಬೆಲೆಯೇ ಶೇಕಡಾ 20ರಷ್ಟು ಕುಸಿಯಿತು. ಎಲ್ಲ ರಿಯಲ್ ಎಸ್ಟೆಟ್ ಕಂಪೆನಿಗಳ ಶೇರು ಮೌಲ್ಯ ಪಾತಾಳಕ್ಕೆ ಹೋಯ್ತು. ಎಲ್ಲಕ್ಕಿಂತ ದೊಡ್ಡ ನಷ್ಟ ಅನುಭವಿಸಿದ್ದು ತಮ್ಮೆಲ್ಲ ಬದುಕಿನ ಹಣವನ್ನು ಈ ಕಂಪೆನಿಯೊಳಗೆ ಹೂಡಿದ್ದ ದೊಡ್ಡಮಟ್ಟದ ಮಧ್ಯಮವರ್ಗದ ಮಂದಿ!

ಚೀನಾದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅದರ ಸಾಲ 8 ಟ್ರಿಲಿಯನ್ ಡಾಲರುಗಳಷ್ಟಾಗಿತ್ತು. ಒನ್ ಬೆಲ್ಟ್ ಒನ್ ರೋಡ್ ನೆಪದಲ್ಲಿ ಅದರ ಒಂದು ಟ್ರಿಲಿಯನ್ ಡಾಲರ್ ನಷ್ಟು ಹಣ ಸಿಕ್ಕುಹಾಕಿಕೊಂಡು ಕೂತಿತ್ತು. ಕರೋನಾ ನಂತರ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಿತ್ತು. ಇತ್ತ ಗಡಿಯಲ್ಲಿ ಭಾರತದೊಂದಿಗೆ ಖ್ಯಾತೆ ತೆಗೆದು ತನ್ನ ಸೈನಿಕರನ್ನು ಕರೆತಂದು ನಿಲ್ಲಿಸಿಕೊಂಡಿತ್ತಲ್ಲ, ಭಾರತವೂ ಈ ಬಾರಿ ಅಷ್ಟೇ ಗಟ್ಟಿಯಾಗಿ ತಳವೂರಿದ್ದರಿಂದ ಸೈನ್ಯದ ಖರ್ಚು-ವೆಚ್ಚವೂ ಊಹಿಸಲಾರದಷ್ಟಾಗಿತ್ತು. ಒಂದೆಡೆ ಕ್ಷಾಮ ಮತ್ತೊಂದೆಡೆ ಪ್ರವಾಹ, ಧಾನ್ಯ ದಾಸ್ತಾನನ್ನು ಶೇಕಡಾ 50ರಷ್ಟು ತಿಂದುಹಾಕಿತ್ತು. ಒಂದೆಡೆ ಕುಸಿಯುತ್ತಿರುವ ಕೈಗಾರಿಕೆ ಉತ್ಪನ್ನಗಳು, ಮತ್ತೊಂದೆಡೆ ಏರುತ್ತಿರುವ ನಿರುದ್ಯೋಗ ಚೀನಾವನ್ನು ಒಳಗಿಂದೊಳಗೇ ತಿನ್ನುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ತನ್ನ ಅವಧಿ ವಿಸ್ತಾರವನ್ನು ದೃಢಪಡಿಸಿಕೊಂಡ ಷಿ ಮತ್ತೆ ಜಿರೊಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ. ಮೊದಲ ಬಾರಿಗೆ ಈ ನೀತಿಯಿಂದಾಗಿ ಲಕ್ಷಾಂತರ ಮಂದಿಯ ಜೀವ ಉಳಿದಿರುವುದನ್ನು ಜನ ಮೆಚ್ಚಿದ್ದರು. ಆದರೆ ಈಗ ಜಗತ್ತೆಲ್ಲ ತಮ್ಮ ಚಟುವಟಿಕೆಗೆ ಮರಳಿರುವಾಗ ತಾವಿನ್ನು ಮನೆಗಳಲ್ಲಿ ತಮ್ಮ ತಾವು ಬಂಧಿಸಿಕೊಂಡು ಕುಳಿತಿರುವುದನ್ನು ಚೀನಿಯರಿಂದ ಸಹಿಸಲಾಗಲಿಲ್ಲ. ಶೂನ್ಯ ಕೋವಿಡ್ ಎಂಬುದೊಂದು ಕಟ್ಟುಕಥೆ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವುದು ಈಗ ಅವರಿಗೆ ಸತ್ಯವೆನಿಸುತ್ತಿದೆ. ಡಾ. ಪಾಲ್ ಹಂಟರ್ ಚೀನಾದ ಕೊವಿಡ್ ಲಸಿಕೆ ಪ್ರಭಾವಿಯಾಗಿಲ್ಲ ಎಂದು ಹಿಂದೆಯೇ ಹೇಳಿದ್ದು ಈಗ ಸತ್ಯವೆನಿಸುತ್ತಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊ. ದೇವಿಶ್ರೀಧರ್ ’80 ದಾಟಿರುವ ಚೀನಾದ ವೃದ್ಧರಲ್ಲಿ ಶೇಕಡಾ 40 ಮಂದಿಗೆ ಮಾತ್ರ ಬೂಸ್ಟರ್ ಲಸಿಕೆ ದೊರೆತಿರುವುದರಿಂದ ಭವಿಷ್ಯದ ದಿನಗಳು ಭಯಾನಕವಾಗಿದೆ’ ಎಂದಿದ್ದರಲ್ಲದೇ ಮಿಲಿಯನ್ಗಟ್ಟಲೆ ಮಂದಿ ಚೀನಾದಲ್ಲಿ ಇದುವರೆಗೂ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದೂ ಎಚ್ಚರಿಸಿದ್ದರು. ಲಾಕ್ಡೌನಿನಲ್ಲಿ ಇದ್ದಷ್ಟೂ ದಿನ ವೈರಸ್‌ಗೆ ಅವರು ತಮ್ಮತಾವು ತೆರೆದುಕೊಂಡಿರಲಿಲ್ಲ. ಈಗ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ವೈರಸ್ ಆಕ್ರಮಿಸಿಕೊಳ್ಳುತ್ತಿದೆ. ಆಹಾರ ದಾಸ್ತಾನು ಕಡಿಮೆ ಇರುವುದರಿಂದ ಈ ಬಾರಿಯ ನಿರ್ವಹಣೆ ಅಷ್ಟು ಸುಲಭವಾಗಿಲ್ಲ. ಮೊದಲ ಬಾರಿ ಕೊವಿಡ್ ಬಂದಾಗಲೇ ಪ್ರತಿಯೊಬ್ಬ ವ್ಯಕ್ತಿಯ ಹೆಸರಲ್ಲೂ ಕ್ಯುಆರ್ ಕೋಡ್ ಜನರೇಟ್ ಮಾಡಲಾಗಿತ್ತು. ಅದು ನಮ್ಮ ಆರೋಗ್ಯ ಸೇತು ಆ್ಯಪ್‌ಗಿಂತಲೂ ಭಿನ್ನವಾದ್ದು. ಮಾಲ್‌ಗೆ ಹೋಗಬೇಕಾಗಲೀ ಅಥವಾ ರೈಲು ಹತ್ತಿ ಪಕ್ಕದೂರಿಗಾದರೂ ಸರಿ ಎಲ್ಲೆಡೆ ಬಾಗಿಲು ತೆರೆದುಕೊಳ್ಳಬೇಕೆಂದರೆ ಕ್ಯುಆರ್ ಕೋಡ್ ಅನ್ನು ಯಂತ್ರಕ್ಕೆ ಹಿಡಿಯಲೇಬೇಕು. ಅಲ್ಲೇನಾದರೂ ಬಣ್ಣ ಕೆಂಪು ಬಂತೆಂದರೆ ಆ ಬಾಗಿಲು ನಿಮಗೆ ತೆರೆಯಲ್ಪಡುವುದೇ ಇಲ್ಲ. ಬದಲಿಗೆ ಅದು ಜೋರಾಗಿ ಸದ್ದು ಮಾಡಿ, ನಿಮ್ಮಿಂದ ಇತರರು ದೂರ ಓಡುವಂತೆ ಮಾಡುತ್ತದಲ್ಲದೇ ಕೊವಿಡ್ ಪೊಲೀಸರು ಬಂದು ನಿಮ್ಮನ್ನು ಬಂಧಿಸಲು ಅನುಕೂಲ ಮಾಡಿಕೊಡುತ್ತದೆ. ಒಮ್ಮೆ ಅವರು ಬಂಧಿಸಿದರೆಂದರೆ ನೀವು ಮುಂದಿನ ಒಂದು ತಿಂಗಳ ಕಾಲ ಅಥವಾ ಕ್ಯುಆರ್ ಕೋಡ್ ನಲ್ಲಿ ಬಣ್ಣ ಹಸಿರಿಗೆ ತಿರುಗುವವರೆಗೂ ನರಕ ಯಾತನೆ ಅನುಭವಿಸಲೇಬೇಕು. ಇನ್ನೂ ವಿಚಿತ್ರವೇನು ಗೊತ್ತೇ? ನಿಮಗೆ ಅರಿವಿಲ್ಲದೇ ಕ್ಯುಆರ್ ಕೋಡ್ ನಲ್ಲಿ ಕೆಂಪು ಬಣ್ಣ ಇದ್ದವನೊಂದಿಗೆ ನೀವು ಹತ್ತು ನಿಮಿಷ ಮಾತನಾಡಿದರೂ ನಿಮ್ಮ ಕ್ಯುಆರ್ ಕೋಡ್ ಕೆಂಪು ಬಣ್ಣಕ್ಕೆ ತಿರುಗಿಬಿಡುತ್ತದೆ. ಅಲ್ಲಿಗೆ ನೀವು ಸತ್ತಂತೆ. ಹೀಗಾಗಿಯೇ ಒಬ್ಬರ ಕ್ಯುಆರ್ ಕೋಡ್ ಕೆಂಪಾಗಿದೆ ಎಂಬ ಸದ್ದು ಬಂದೊಡನೆ ಉಳಿದ ಮಂದಿ ಅವನಿಂದ ದೂರವೋಡಲಾರಂಭಿಸುತ್ತಾರೆ. ಹೆಚ್ಐವಿ ಎನ್ನುವುದರ ಕುರಿತಂತೆ ತಪ್ಪು ಕಲ್ಪನೆಗಳಿದ್ದಾಗಲೂ ಭಾರತದಲ್ಲಿ ಮಂದಿ ಹೀಗೆ ನಡೆದುಕೊಂಡಿರಲಿಲ್ಲ. ಚೀನಾದಲ್ಲಿ ಜನರ ಆಕ್ರೋಶ ಈ ಕಾರಣಕ್ಕಾಗಿ ದಿನೇ ದಿನೇ ಹೆಚ್ಚುತ್ತಿದೆ!

ಜನ ಬೀದಿಗೆ ಬರಲು ಕಾರಣ ಇದೇ. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಸರ್ಕಾರ ತನ್ನ ಬಳಿಯಿರುವ ಡಾಟಾ ಬಳಸಿ ತನ್ನ ವಿರೋಧಿಯ ಕ್ಯುಆರ್ ಕೋಡ್ ಕೆಂಪಾಗುವಂತೆ ಸಲೀಸಾಗಿ ಮಾಡಿಬಿಡಬಲ್ಲದು. ಅಲ್ಲಿಗೆ ನಿಮ್ಮನ್ನು ಕೊಲ್ಲಬೇಕೆಂದು ಷಿ ನಿಶ್ಚಯಿಸಿದರೆ ಆತನ ಪಾಲಿಗೆ ಅದು ಕಂಪ್ಯೂಟರ್ನಲ್ಲಿ ಒಂದು ಕ್ಲಿಕ್ ಮಾತ್ರ! 

ಯಾವುದಕ್ಕೂ ಮಣಿಯದ ಚೀನೀ ಆಡಳಿತ ಪಡೆ ಮೊದಲ ಬಾರಿಗೆ ಕೊವಿಡ್ ನಿಯಮಗಳನ್ನು ಸಡಿಲಗೊಳಿಸುವ ಮಾತನಾಡುತ್ತಿದೆ. ಹಾಗೇನಾದರೂ ಆತ ಪೂರ್ಣ ಸಡಿಲಿಸಿದ್ದೇ ಆದರೆ ಕನಿಷ್ಠ ಪಕ್ಷ ಎರಡು ಮಿಲಿಯನ್ ಮಂದಿ ಅದಕ್ಕೆ ಆಹುತಿಯಾಗಲಿದ್ದಾರೆ ಎಂಬ ಆತಂಕವನ್ನು ಜಗತ್ತು ವ್ಯಕ್ತಪಡಿಸುತ್ತಿದೆ. ಏನಾಗುವುದೆಂದು ಕಾದು ನೋಡಬೇಕಷ್ಟೇ! ಜನರ ಗಮನವನ್ನು ಆತನಿಗೆ ಬೇರೆಡೆ ಸೆಳೆಯಲು ಇರುವುದೊಂದೇ ಮಾರ್ಗ. ಯಾರೊಂದಿಗಾದರೂ ಕಾಲು ಕೆರಕೊಂಡು ಜಗಳಕ್ಕೆ ಹೋಗಬೇಕು. ಚೀನೀ ಜನರ ಭಾವನೆಯನ್ನು ಕೆರೆಯಬೇಕು. ಅದಾಗಲೇ ಗಾಲ್ವಾನಿನಲ್ಲಿ ಭಾರತ ಸರಿಯಾದ ತಪರಾಕಿ ಕೊಟ್ಟಿದೆ. ಜಪಾನ್ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದೆ. ಇನ್ನು ಅದಕ್ಕಿರುವುದು ತೈವಾನ್ ಒಂದೇ. ಮುಂದಿನ ದಿನಗಳಲ್ಲಿ ನಾವು ತೈವಾನ್ನತ್ತ ಏರಿಹೋಗುವ ಅಥವಾ ಆಂತರಿಕವಾಗಿ ಕುಸಿದುಹೋಗುವ ಚೀನಾ ನೋಡಬಹುದೆನಿಸುತ್ತದೆ! 

ಅಂದಹಾಗೆ, ಇವೆಲ್ಲದರ ನಡುವೆ ಕಾಣೆಯಾಗಿರುವುದು ಮಾತ್ರ ಸಿದ್ದರಾಮಯ್ಯನವರು..

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಎರಡು ರಾಜ್ಯಗಳ ಚುನಾವಣೆ ಮತ್ತು ದೆಹಲಿಯ ಮುನ್ಸಿಪಾಲಿಟಿ ಚುನಾವಣೆಯ ಫಲಿತಾಂಶ ಅಚ್ಚರಿಗೆ ನೂಕಿದೆಯಷ್ಟೇ ಅಲ್ಲದೇ ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ. ಈ ಗೆಲುವಿನ ಧಾವಂತದಲ್ಲಿ ನಾವೆಲ್ಲರೂ ಟಿವಿ ಚಾನೆಲ್ಲುಗಳಲ್ಲಿ ಗಂಟೆಗಟ್ಟಲೆ ಕೊರೆದ ಎಕ್ಸಿಟ್ ಪೋಲ್ಗಳನ್ನು ಮರೆತೇಬಿಟ್ಟಿದ್ದೇವೆ. ಎಲ್ಲರಿಗಿಂತಲೂ ಸ್ಪಷ್ಟ ಮತ್ತು ನಿಖರ ತಾವೆಂದೇ ಹೇಳಿಕೊಳ್ಳುವ ಚಾನೆಲ್ಲುಗಳೆಲ್ಲ ಫಲಿತಾಂಶ ಬಂದಾಗ ಗೆದ್ದವರನ್ನು ಹೊಗಳುತ್ತಲೇ ತಮ್ಮ ಮೂರ್ಖತನವನ್ನು ಮರೆಮಾಚಿಬಿಡುತ್ತಾರೆ. ಈ ಬಾರಿಯಂತೂ ಯಾವ ಚಾನೆಲ್ಲೂ ಮೂರೂ ಚುನವಾವಣೆಯನ್ನು ಸಮರ್ಥವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ. ದೆಹಲಿಯಲ್ಲಿ ಬಿಜೆಪಿಗೆ ಹೀನಾಯ ಸೋಲು ಎಂದವರು, ಬಿಜೆಪಿಯ ಮತ ಗಳಿಕೆಯ ಪ್ರಮಾಣ ವೃದ್ಧಿಯಾಗಿರುವುದನ್ನು ಕಂಡು ಹಣೆಬಡಿದುಕೊಂಡರು. ಇತ್ತ ಗುಜರಾತ್ ನಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿ ಸವಾಲಾಗಬಹುದೆಂದು ಭಾವಿಸಿದ ಎಲ್ಲರೂ ಅದು ಹೆಚ್ಚು ಸ್ಥಾನಗಳನ್ನು ಗಳಿಸುವುದಿಲ್ಲವಾದರೂ ಬಿಜೆಪಿಯ ಮತಗಳಿಕೆಗೆ ಕೊಳ್ಳಿ ಇಡುತ್ತದೆ ಎಂದೇ ಭಾವಿಸಿದ್ದರು. ಅದೂ ಉಲ್ಟಾ ಹೊಡೆಯಿತು. ಕಾಂಗ್ರೆಸ್ಸು ಊಹಿಸಲಾಗದಷ್ಟು ಪಾತಾಳಕ್ಕಿಳಿದು ಬಿಜೆಪಿಯ ಗೆಲುವನ್ನು ಸಲೀಸು ಮಾಡಿಬಿಟ್ಟಿತು. ಹಿಮಾಚಲ ಪ್ರದೇಶದಲ್ಲಿ ಇಷ್ಟೊಂದು ಹೊಡೆತವನ್ನು ಬಿಜೆಪಿ ಊಹಿಸಲೂ ಸಾಧ್ಯವಿರಲಿಲ್ಲ. ಯಾವುದನ್ನು ದೆಹಲಿಯ ಚುನಾವಣೆಯಲ್ಲಿ ಕಾಣಬೇಕಿತ್ತೋ ಅದನ್ನು ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಕಂಡಿತು. ಅಚ್ಚರಿ ಎಂದರೆ ಯಾವೊಂದು ಚುನಾವಣೋತ್ತರ ಸಮೀಕ್ಷೆಯೂ ಈ ಮೂರನ್ನು ನಿಖರವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ! ವೈಜ್ಞಾನಿಕವಾಗಿ ತಾವು ಲೆಕ್ಕ ಹಾಕುತ್ತೇವೆ ಎಂದು ಇವರು ಬಿಡುವುದು ಬೊಗಳೆಯಷ್ಟೇ ಎಂಬುದು ಎಂಥವನಿಗೂ ಈಗ ಅರಿವಾಗಿದೆ. ಗುಜರಾತಿನಲ್ಲಿ ಬಿಜೆಪಿ 115 ರಿಂದ 150 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಊಹಿಸುವ ಪುಣ್ಯಾತ್ಮನನ್ನು ಯಾವ ಲೆಕ್ಕಕ್ಕೆ ಪಂಡಿತನೆನ್ನಬೇಕೋ ಗೊತ್ತಾಗುವುದಿಲ್ಲ. ಪ್ರಧಾನಮಂತ್ರಿಯಿಂದ ಹಿಡಿದು ಸ್ಥಳೀಯ ಬಿಜೆಪಿ ಕಾರ್ಯಕರ್ತನವರೆಗೆ ಎಲ್ಲರೂ ಸೇರಿ ಏಕರಸವಾದ ಹೋರಾಟ ಮಾಡಿದ್ದನ್ನು ನೋಡಿದರೆ ಬಿಜೆಪಿಯ ಗೆಲುವು ನಿಶ್ಚಯವೆಂದು ಎಂಥವನೂ ಹೇಳಬಹುದಾಗಿತ್ತು. ಆದರೆ ಈ ಗೆಲುವಿನ ಅಂತರ ಸುಮಾರು 115 ರಿಂದ 150 ಸೀಟುಗಳವರೆಗೆ ಇರಬಹುದು ಎಂಬ 35 ಸೀಟುಗಳ ವ್ಯತ್ಯಾಸವನ್ನು ಕೊಡುವುದಿದೆಯಲ್ಲ, ಅದು ನಮ್ಮೂರಿನ ಅರಳಿಕಟ್ಟೆಯ ಮೇಲೆ ಕುಳಿತವನೂ ಮಾಡಬಲ್ಲ. ದುರಂತವೆಂದರೆ, ಈ ಮಾಧ್ಯಮಗಳು ಇದಕ್ಕೋಸ್ಕರ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತವಲ್ಲದೇ ಜನರ ಭಾವನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತವೆ. ಇಷ್ಟಕ್ಕೂ ಇವರೆಲ್ಲ ಸೋತಿರುವುದೆಲ್ಲಿ ಗೊತ್ತೇ? ಎಲೆಕ್ಷನ್ ರ್ಯಾಲಿಗಳನ್ನು ನೋಡಿ ಅದರ ಆಧಾರದ ಮೇಲೆ ಜನ ವೋಟು ಹಾಕುತ್ತಾರೆ ಎಂದು ನಿರ್ಧರಿಸಿರುವುದರಲ್ಲಿ. ಐದು ವರ್ಷಗಳ ನಂತರ ಬೂತಿಗೆ ಹೋಗಿ ವೋಟು ಹಾಕುವ ಮನುಷ್ಯ ತನ್ನದ್ದೇ ಆದ ಆಲೋಚನೆ ಹೊಂದಿರುತ್ತಾನೆ. ಆತ ಬಚ್ಚಿಟ್ಟುಕೊಂಡಿರುವ ಈ ವಿಚಾರವನ್ನು ಮಾಧ್ಯಮದವರ ಮುಂದೆ ಬಿಚ್ಚಿಡಬೇಕೆಂದೇನೂ ಇಲ್ಲ. ಬೃಹತ್ ರ್ಯಾಲಿಗಳು ಗೆಲ್ಲುವ ಅಂತರವನ್ನು ಹೆಚ್ಚಿಸಬಹುದಷ್ಟೆ. ಆದರೆ ಯಾರಿಗೆ ಮತ ಹಾಕಬೇಕೆಂಬುದು ಪೂರ್ವ ನಿರ್ಧರಿತವೇ. ಗುಜರಾತಿನಲ್ಲಿ ಇರುವ 182 ಸೀಟುಗಳಲ್ಲಿ ಮೋದಿ ಪಕ್ಷ ಗೆದ್ದಿರುವುದು 156. ಸುಮಾರು 86 ಪ್ರತಿಶತದಷ್ಟು ಸೀಟುಗಳನ್ನು ಬಿಜೆಪಿಯೊಂದೇ ಬಾಚಿಕೊಂಡಿದೆ. ಅತ್ಯಂತ ಪುರಾತನ ಪಕ್ಷವೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕಾಂಗ್ರೆಸ್ಸಿಗೆ ಪ್ರತಿಪಕ್ಷ ಸ್ಥಾನ ಗಳಿಸಿಕೊಳ್ಳಲೂ ಒಂದು ಸೀಟಿನ ಕೊರತೆಯಿದೆ. ಅವರೀಗ ಸರ್ಕಾರ ಮಾಡಲಿಕ್ಕಲ್ಲ, ಪ್ರತಿಪಕ್ಷ ಸ್ಥಾನ ಪಡೆಯಲೂ ಪಕ್ಷೇತರರಿಗೆ ಕೈ ಮುಗಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರೆ ಈ ಪರಿಯ ಉತ್ಪಾಟನೆಯನ್ನು ಊಹಿಸಲು ಸಾಧ್ಯವಿತ್ತೇನು? ಕಳೆದ ಬಾರಿ ಕಾಂಗ್ರೆಸ್ಸಿಗೆ 77 ಸೀಟುಗಳು ದೊರೆತಿದ್ದವು. ಎರಡೂವರೆ ದಶಕದಿಂದ ಅಧಿಕಾರದಲ್ಲಿದ್ದ ಭಾಜಪದ ವಿರುದ್ಧ ಅದು ಎಡವಿದ್ದಾದರೂ ಎಲ್ಲಿ ಎಂಬ ಆಂತರಿಕ ಚರ್ಚೆ ನಡೆಯುವುದು ಬೇಡವೇನು? 

ಸ್ವಾತಂತ್ರ್ಯ ಬಂದ ಲಾಗಾಯ್ತು ಸ್ವಾತಂತ್ರ್ಯ ಕೊಡಿಸಿದವರು ತಾವೇ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಿ ಅದರ ಲಾಭವನ್ನೇ ಉಣ್ಣುತ್ತಾ ಬಂದಿತ್ತು ಕಾಂಗ್ರೆಸ್ಸು. ಹೀಗಾಗಿಯೇ ಮನೆಯಲ್ಲಿ ವೃದ್ಧರೆಂಬುವವರು ಇದ್ದರೆ ಅವರು ಮತ ಹಾಕೋದು ಕೈಗೇ. ಅದು ಸ್ವಾತಂತ್ರ್ಯದ ಭ್ರಮೆ ತಲೆ ಹೊಕ್ಕಿರುವ ಪರಿಣಾಮ. ಈ ಅಡಗೂಲಜ್ಜಿಯ ಕಥೆಯನ್ನು ಕೇಳಲು ಇಂದಿನ ತರುಣ ತಯಾರಿಲ್ಲ. ಅವನು ಕಾಂಗ್ರೆಸ್ಸಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾನೆ. ಸರದಾರ್ ಪಟೇಲರಿಗೆ ಪ್ರಧಾನಿ ಪಟ್ಟ ಸಿಗಲಿಲ್ಲವೇಕೆ? ಬಾಬಾಸಾಬೇಹ್ ಅಂಬೇಡ್ಕರರಿಗೆ ಭಾರತರತ್ನ ನೀಡಲು 1990ರವರೆಗೆ ಕಾಯಬೇಕಾಗಿತ್ತು ಏಕೆ? ಸೋಮನಾಥ ಮಂದಿರ ಪುನರ್ನಿರ್ಮಿಸಲು ನೆಹರೂ ವಿರೋಧ ವ್ಯಕ್ತಪಡಿಸಿದ್ದು ಏಕೆ? ರಾಮಮಂದಿರವನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲೇ ಮರಳಿ ಪಡೆಯಬಹುದಾಗಿದ್ದರೂ ಅದನ್ನು ಸುದೀರ್ಘಕಾಲ ತಳ್ಳಿಕೊಂಡು ಬಂದದ್ದು ಏಕೆ? ಕಾಶ್ಮೀರವನ್ನು ಭಾರತದೊಂದಿಗೆ ಏಕರಸಗೊಳಿಸುವುದು ಬಲು ಸುಲಭವಿದ್ದಾಗ್ಯೂ ಯಾರ ತೆವಲಿಗಾಗಿ ಅದನ್ನು ಪ್ರತ್ಯೇಕವಾಗಿ ಉಳಿಸಲಾಯ್ತು? ಯಾರ ಕಾರಣದಿಂದಾಗಿ ದಕ್ಷಿಣ ಮತ್ತು ಉತ್ತರಗಳು ಇಂದಿಗೂ ಒಂದಾಗದೇ ಉಳಿದಿವೆ? ಅನೇಕ ಪ್ರಶ್ನೆಗಳು ತರುಣರ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಲೇ ಇವೆ. ಕಾಂಗ್ರೆಸ್ಸು ಇವುಗಳಿಗೆ ಸುಲಭಕ್ಕೆ ಉತ್ತರ ಕೊಡಲಾರದು. ಅದರಲ್ಲೂ ಜಾತಿ-ಮತ-ಪಂಥಗಳನ್ನು ಮೀರಿ ರಾಷ್ಟ್ರೀಯವಾದದ ಆಲೋಚನೆ ಮಾಡುವ ತರುಣರನ್ನೆದುರಿಸುವುದಂತೂ ಕಾಂಗ್ರೆಸ್ಸಿಗೆ ಸಾಧ್ಯವಾಗದ ಮಾತು. ಹೀಗಾಗಿಯೇ ಗುಜರಾತ್ ಕದನ ಶುರುವಾಗುವ ಮುನ್ನವೇ ಕಾಂಗ್ರೆಸ್ಸು ನಿಂತನೆಲ ಬಿಟ್ಟೋಡಿತು. ಇಲ್ಲವಾದಲ್ಲಿ ಭಾರತ್ ಜೊಡೊ ಯಾತ್ರೆ ಗುಜರಾತಿನ ಚುನಾವಣೆಯ ವೇಳೆ ಕರ್ನಾಟಕದಲ್ಲೇಕೆ ನಡೆಯಬೇಕಿತ್ತು? ಆದರೆ ಒಂದಂತೂ ಸತ್ಯ. ರಾಹುಲ್ ಚುನಾವಣಾ ಪ್ರಚಾರಕ್ಕೆ ಗುಜರಾತಿಗೆ ಹೋಗದೇ ಈ ಹೀನಾಯ ಸೋಲಿನ ಕಿರೀಟವನ್ನು ತಮ್ಮ ತಲೆಯಿಂದ ಕೊಡವಿಕೊಂಡುಬಿಟ್ಟರು. ಪಾಪ, ಖರ್ಗೆಯವರು ಹರಕೆಯ ಕುರಿಯಾಗಿಬಿಟ್ಟರು! 

ದೂರದಿಂದ ನೋಡಿದರೆ ಹೀಗೆ ಕಾಂಗ್ರೆಸ್ಸಿಗೆ ಪ್ರಶ್ನೆ ಕೇಳುವ ಮಂದಿಯನ್ನು ಹೊಸತನದಿಂದ ಸಂಭಾಳಿಸಬಲ್ಲ ಸಾಮರ್ಥ್ಯ ಅರವಿಂದ್ ಕೇಜ್ರಿವಾಲರಿಗಿದೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತೆನಿಸುತ್ತದೆ. ಅದಕ್ಕೆ ಚುನಾವಣೆಯ ಅಷ್ಟೂ ಹೋರಾಟದ ಹೊಣೆಯನ್ನು ಆಮ್ಆದ್ಮಿ ಪಾರ್ಟಿಯ ಹೆಗಲಿಗೇರಿಸಿ ಕಾಂಗ್ರೆಸ್ಸು ಜಾರಿಕೊಂಡಿತು. ದೆಹಲಿಯಲ್ಲಿ ಮಾಡಿದಂತೆ ಇಲ್ಲಿಯೂ ಮತಗಳ ವಿಭಜನೆಯಾಗದಂತೆ ನೋಡಿಕೊಂಡು ಬಿಜೆಪಿಗೆ ಹೊಡೆತ ಕೊಡಬೇಕೆಂಬುದು ಅವರ ಗುಪ್ತ ಲೆಕ್ಕಾಚಾರ. ಆದರೆ ಗುಜರಾತಿನ ಮತದಾರ ಪಕ್ಕಾ ವ್ಯಾಪಾರಿ. ಆತ ಅರವಿಂದ್ ಕೇಜ್ರಿವಾಲರ ಸುಳ್ಳುಗಳನ್ನು ಕೇಳಿ-ಕೇಳಿ ಬೇಸತ್ತು ಹೋಗಿದ್ದ. ಉಚಿತ ಕೊಡುಗೆಯ ನೆಪದಲ್ಲಿ ಗುಜರಾತನ್ನು ಸಂಕಟಕ್ಕೆ ತಳ್ಳಲು ಆತ ಸಿದ್ಧನಿಲ್ಲ. ಹೀಗೆಂದೇ ಆತ ಕೇಜ್ರಿವಾಲರ ಪೊರಕೆಯನ್ನೇ ತೆಗೆದುಕೊಂಡು ಆತನ ಪಾರ್ಟಿಯನ್ನೇ ಗುಡಿಸಿಬಿಟ್ಟ!

 

ಚುನಾವಣೆ ಎನ್ನುವುದು ಭಾವನೆಗಳ ಸಮ್ಮಿಲನ. ಸುಮಾರು ಐದು ವರ್ಷಗಳ ಕಾಲ ಆತ ತನಗಾದ ನೋವುಗಳನ್ನು ಜತನದಿಂದ ಕಾಪಾಡಿಟ್ಟುಕೊಂಡು ಬರುತ್ತಾನೆ. ಸಂತೋಷವನ್ನು ಮರೆತುಬಿಡಬಹುದೇನೋ. ಆದರೆ ನೋವನ್ನು ಎಂದಿಗೂ ಮರೆಯಲಾರ. ಹೀಗಾಗಿಯೇ ಸಿದ್ದರಾಮಯ್ಯನವರು ಹೋದೆಡೆಯಲ್ಲೆಲ್ಲ ಅವರ ಅಧಿಕಾರಾವಧಿಯಲ್ಲಿ ತೀರಿಕೊಂಡ ಹಿಂದೂಗಳ ಶವಗಳು ಕಣ್ಮುಂದೆ ಬರುತ್ತವೆ. ಅವರ ಸುತ್ತ ಮುಸಲ್ಮಾನರು ತಿರುಗಾಡುವಾಗ ಮತ್ತೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದುಬಿಟ್ಟರೆ ಮತ್ತಷ್ಟು ಹೆಣಗಳು ಬೀಳುತ್ತವೇನೋ ಎಂಬ ಹೆದರಿಕೆ ಶುರುವಾಗುತ್ತದೆ. ಈ ಗಾಬರಿ ಅವರನ್ನೂ ಬಿಟ್ಟಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಯಾಗಿದ್ದೂ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಅವರು ಇಡಿಯ ರಾಜ್ಯದಲ್ಲಿ ತಮಗೊಂದು ಸೂಕ್ತ ಕ್ಷೇತ್ರ ಹುಡುಕಲು ಹರಸಾಹಸ ಮಾಡುತ್ತಿರುವುದು. ಹಾಗಂತ ಇದಕ್ಕೆ ಈಗಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಹೊರತಲ್ಲ. ಮುಸಲ್ಮಾನರ ವಿರುದ್ಧ ಎಂದೂ ಮಾತನಾಡದೇ ಅವರ ಮತಗಳನ್ನು ಪಡೆಯುತ್ತಾ ಗೆದ್ದು ಬರುತ್ತಿದ್ದ ಅವರಿಗೆ ಹಿಜಾಬ್, ಹಲಾಲ್, ಮೊದಲಾದ ಗಲಾಟೆಗಳ ನಂತರ ಕ್ಷೇತ್ರ ಅಷ್ಟು ಸಲೀಸಿಲ್ಲ. ಹಾಗಂತ ಬೇರೆ ಕ್ಷೇತ್ರ ಆರಿಸಿಕೊಳ್ಳಲು ಹೇಳಿ, ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಡುವ ಕರಾವಳಿಯಲ್ಲೂ ಅವರು ಗೆಲ್ಲುವುದು ಸುಲಭವಿಲ್ಲ. ಪ್ರವೀಣ್ ನೆಟ್ಟಾರುವಿನ ಸಾವು ಅಷ್ಟು ಆಳಕ್ಕೆ ಹೊಕ್ಕಿದೆ. ಎಲ್ಲಾ ಕಾಂಗ್ರೆಸ್ಸಿಗರೂ ಜಾತಿಯ ಲೆಕ್ಕಾಚಾರದಲ್ಲಿ ಗೆದ್ದುಬಿಡುತ್ತೇವೆಂಬ ಭ್ರಮೆಯಲ್ಲಿದ್ದರೆ, ಬಿಜೆಪಿಗರು ಮೋದಿ ರ್ಯಾಲಿ ಮಾಡಿದರೆ ಜನ ಕಣ್ಮುಚ್ಚಿಕೊಂಡು ಮತ ನೀಡಿಬಿಡುತ್ತಾರೆ ಎಂದು ನಂಬಿಕೊಂಡು ಕೂತಿದ್ದಾರೆ. ಆದರೆ ವಾಸ್ತವ ನೆಲೆಕಟ್ಟಿನಲ್ಲಿ ನೋಡಿದರೆ ಜಾತಿ ಸಮೀಕರಣಗಳು ಈಗ ಸಾಕಷ್ಟು ಬದಲಾಗಿವೆ. ದೆಹಲಿಯಲ್ಲಿ ಆಮ್ಆದ್ಮಿ ಪಾರ್ಟಿಗೆ ಮುಸಲ್ಮಾನರ ಮತಗಳು ಶೇಕಡಾ 20ರಷ್ಟು ಕಡಿಮೆಯಾಗಿವೆ. ದಲಿತರ ಮತಗಳು ಭಾಜಪದ ಕಡೆಗೆ ತಿರುಗಿ ಸಾಕಷ್ಟು ಕಾಲವೇ ಆಗಿದೆ. ಕಾಂಗ್ರೆಸ್ಸು ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇರಲಾರದು. ಇತ್ತ ರಾಜ್ಯಗಳ ಮತಕದನದಲ್ಲಿ ಮೋದಿ ತುಂಬಾ ಯಶಸ್ಸನ್ನು ಕಂಡಿದ್ದಾರೆ ಎಂದೇನೂ ಹೇಳಲಾಗದು. ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬು, ಬಂಗಾಳ, ಬಿಹಾರ, ಇತ್ತೀಚೆಗೆ ಹಿಮಾಚಲ ಪ್ರದೇಶ ಇಲ್ಲೆಲ್ಲವೂ ಸೋಲುಗಳನ್ನೇ ಉಂಡಿದ್ದಾರೆ. ರಾಜ್ಯಗಳು ಮೋದಿಯನ್ನು ಪ್ರಧಾನಿಯಾಗಿ ಬಯಸುತ್ತವೆ ನಿಜ. ಅವರನ್ನು ತಮ್ಮ ರಾಜ್ಯದವರೆಂದು ಭಾವಿಸುವುದಿಲ್ಲ ಅಷ್ಟೇ. ಹೀಗಾಗಿ ಮೋದಿಯ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಬಿಹಾರದಲ್ಲಿ ಅವರನ್ನು ‘ಬಾಹರಿ’ ಎಂದು ಕರೆಯಲಾಗಿತ್ತು. ರಾಜಸ್ಥಾನದಲ್ಲಿ ಮಂದಿ ಮೋದಿಯನ್ನು ಇಷ್ಟಪಡುತ್ತಾರೆ ನಿಜ, ಆದರೆ ವಸುಂಧರಾ ರಾಜೆಗೆ ಮತ ಹಾಕಲು ಸಜ್ಜಾಗುವುದಿಲ್ಲ. ಶಿವಸೇನೆ ನೆಟ್ಟಗಿದ್ದಿದ್ದರೆ ಮಹಾರಾಷ್ಟ್ರದಲ್ಲಿ ಮೋದಿ ಪಾಳಯವೇ ಅಧಿಕಾರದಲ್ಲಿರುತ್ತಿತ್ತು. ಏಕೆಂದರೆ ಅಲ್ಲಿ ದೇವೇಂದ್ರ ಫಡ್ನವೀಸ್ ಜನಮಾನಸದಲ್ಲಿ ತಮ್ಮ ವಿಭಿನ್ನ ಕಾರ್ಯಗಳಿಂದ ಬಲವಾಗಿ ನೆಲೆಯೂರಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬಿಜೆಪಿಯ ಗೆಲುವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಅದರರ್ಥ ಸ್ಥಳೀಯ ಸಮರ್ಥ ನಾಯಕರಿದ್ದರೆ ಅಂಥವರ ಮೇಲೆ ಮೋದಿ ಬೆಟ್ ಕಟ್ಟಿ ಓಡಿಸಬಹುದು. ಇಲ್ಲವಾದರೆ ಮೋದಿಯವರಿಗೆ ಬರಿ ಕಂಠಶೋಷಣೆಯಷ್ಟೆ. ಸೂಕ್ಷ್ಮವಾಗಿ ನೀವೇ ಗಮನಿಸಿದರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಮೋದಿ ಕೊಡುತ್ತಿರುವ ಮನ್ನಣೆ, ಗೌರವ ಎಂಥದ್ದೆಂಬುದು ಅರಿವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಹಿಡಿದೇ ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಪ್ರಯತ್ನ ಮಾಡುವುದು ಕಠಿಣವಾಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಧಿಕಾರ ಹತ್ತಿರಕ್ಕೆ ಬರುವಷ್ಟು ಗೆಲ್ಲುವ ಸಾಮರ್ಥ್ಯವಿರುವ ನಾಯಕನಿದ್ದರೆ, ಮೋದಿ ಅದನ್ನು ಖಾತ್ರಿಯಾಗಿ ಗೆಲುವಾಗಿ ಪರಿವರ್ತಿಸಬಲ್ಲರು. ಗೆಲುವಿನ ಅಂತರವನ್ನು ಹಿಗ್ಗಿಸಿಕೊಡಬಲ್ಲರು. ಪೂರ್ಣ ಸಕರ್ಾರವೇ ಅವರ ಹೆಸರಿನಲ್ಲಿ ಬರುವುದು ಸುಲಭ ಸಾಧ್ಯವಾದ ಮಾತಲ್ಲ! ಹೀಗಾಗಿಯೇ ಕರ್ನಾಟಕದಲ್ಲಿ ಭಾಜಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಗುಜರಾತಿನಲ್ಲಿ ಮಾಡಿದಂತೆ ಹಳೆಯ ಮುಖಗಳನ್ನು ಬದಲಿಸಿ ಸಮರ್ಥರಾಗಿರುವ ಹೊಸಬರನ್ನು ಆರಿಸಬೇಕಿದೆ. ಕನ್ನಡದ ಜನರು ತಮಿಳಿಗರಂತೆ ಸಂಕುಚಿತವಾಗಿ ಯೋಚಿಸದೇ, ರಾಷ್ಟ್ರೀಯ ಭಾವನೆಯಿಂದ ಕೂಡಿದವರೇ ಆಗಿರುವುದರಿಂದ ಗುಜರಾತಿನ ಫಾರ್ಮುಲಾ ಕೆಲಸಕ್ಕೆ ಬರಬಹುದು. ಸಿದ್ದರಾಮಯ್ಯನವರ ಟಿಪ್ಪು ಜಯಂತಿ ಕೊಡಗಿನಲ್ಲಿ ಇಂದಿಗೂ ಆಕ್ರೋಶದ ಜ್ವಾಲಾಮುಖಿಯನ್ನು ಉಳಿಸಿದೆ. ಕರಾವಳಿ ಭಾಗದ ಜನ ಆ ಕಾಲದ ಹಿಂದೂ ಮಾರಣಹೋಮವನ್ನು ಇಂದಿಗೂ ಮರೆಯಲಾರರು. ಸತೀಶ್ ಜಾರಕಿಹೊಳಿಯವರು ಹಿಂದೂವನ್ನು ಅಶ್ಲೀಲವೆಂದದ್ದು ತರುಣರ ಎದೆಯ ಗೂಡಿನಲ್ಲಿ ಬೆಚ್ಚಗಾಗಿದೆ. ದೇಶದಾದ್ಯಂತ ಬೆಳಕಿಗೆ ಬರುತ್ತಿರುವ ಲವ್ಜಿಹಾದ್ ಪ್ರಕರಣಗಳು, ಕರಾವಳಿಯಲ್ಲಿ ಕಂಡುಬಂದ ಕುಕ್ಕರ್ಬಾಂಬ್ ಘಟನೆಗಳು ಜನರನ್ನು ಇಂದಿಗೂ ಕೇಸರಿ ಪಡೆಗಳ ಪರವಾಗಿ ನಿಲ್ಲುವಂತೆ ಮಾಡಿವೆ. ಆದರೆ ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವ ನಾಯಕರಿಲ್ಲದಾಗ ಮಾತ್ರ ಅವರು ಪರ್ಯಾಯವನ್ನು ಹುಡುಕುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಭಾಜಪದ ನೇತೃತ್ವ ಈ ನಿಟ್ಟಿನಲ್ಲಿ ಗುಜರಾತಿನ ನಾಯಕರಷ್ಟು ಅಗ್ರಣಿಯಾಗಿಲ್ಲದಿರುವುದು ಆತಂಕಕ್ಕೆ ಕಾರಣವೇ ನಿಜ. ಹೀಗಾಗಿಯೇ ಕರ್ನಾಟಕದ ಚುನಾವಣೆಯೂ ಯಾರು ಅಂದುಕೊಂಡಷ್ಟೂ ಸಲೀಸಾಗಿಲ್ಲ. ಕಾಂಗ್ರೆಸ್ಸಿನ ಪಾಲಿಗೆ ಇದು ಹಿಮಾಚಲದಂತಾಗಬಹುದು, ಬಿಜೆಪಿಯ ಪಾಲಿಗೆ ಗೋವೆಯಂತಾಗಬಹುದು. ಕಾದು ನೋಡಬೇಕಷ್ಟೇ..

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ಪ್ರಿಯ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಪ್ರೀತಿಯ ನಮಸ್ಕಾರ.

ಸೈದ್ಧಾಂತಿಕವಾಗಿ ನಾವು ಕಿತ್ತಾಡಬಹುದು. ವೈಚಾರಿಕ ಮತ ಭೇದ ಖಂಡಿತ ಇದ್ದಿರಬಹುದು. ಕೆಲವೊಮ್ಮೆ ಹದ ಮೀರಿ ಕಾಲೆಳೆದಿರಬಹುದು, ಅಪಹಾಸ್ಯವನ್ನೂ ಮಾಡಿರಬಹುದು. ಆದರೆ ದೇಶದ ವಿಚಾರ ಬಂದಾಗ ಮಾತ್ರ ನಮ್ಮಲ್ಲಿ ಮತ ಭೇದ ಇರುವಂತಿಲ್ಲ. ರಾಷ್ಟ್ರ ನನಗಿಂತಲೂ, ಒಂದು ಪರಿವಾರಕ್ಕಿಂತಲೂ, ಒಂದು ಊರಿಗಿಂತಲೂ ಬಲು ದೊಡ್ಡದ್ದು. ಹೀಗಾಗಿಯೇ ಬಲುಮುಖ್ಯವಾದ ಕೆಲವು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲೆಂದು ಈ ಪತ್ರ. 

ಅನೇಕ ಸಂಗತಿಗಳ ಕುರಿತಂತೆ ನಾವು ನಿಮ್ಮನ್ನು ವಿರೋಧಿಸುವುದಿದೆ. ಸರದಾರ್ ಪಟೇಲರಿಂದ ಅಧಿಕಾರವನ್ನು ಕಸಿದುಕೊಂಡ ಜವಾಹರ್‌ಲಾಲ್ ನೆಹರೂ ಬಗ್ಗೆ ಬೇಸರವಿದೆ. ಆದರೆ ನಾವದನ್ನು ಮರೆತಿದ್ದೇವೆ. ಇಂದಿರಾ ಬಾಬಾಸಾಹೇಬ್ ಅಂಬೇಡ್ಕರ್‌ರ ಸಂವಿಧಾನವನ್ನು ಗಾಳಿಗೆ ತೂರಿ ಎಲ್ಲ ಸ್ವಾತಂತ್ರ್ಯವನ್ನು ಕಸಿಯುವ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಇತಿಹಾಸದಲ್ಲೊಂದು ಆರದ ಗಾಯವನ್ನು ಮಾಡಿಬಿಟ್ಟರಲ್ಲ, ನಾವದನ್ನು ನೆನಪಿಸಿಕೊಳ್ಳುವುದಿಲ್ಲ. ಇಂದಿರಾ ತೀರಿಕೊಂಡಾಗ ಸಿಖ್ಖರ ಹತ್ಯೆಯನ್ನು ನೀವೆಲ್ಲ ಸೇರಿ ಮಾಡಿದ್ದಿರಲ್ಲ, ಆ ಕುರಿತು ಸಿಖ್ಖರ ಕಣ್ಣೀರೇ ಇಂಗಿಹೋಗಿಬಿಟ್ಟಿದೆ, ಇನ್ನು ನಮ್ಮದೇನು ಲೆಕ್ಕ! ವಿಷಯ ಬಂತೆಂದೆ ನೆನಪಿಸಿಬಿಡುತ್ತೇನೆ. ಗೋಡ್ಸೆ ಗಾಂಧಿಯವರ ಹತ್ಯೆ ಮಾಡಿದ ಎಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣರನ್ನು ಅಟ್ಟಾಡಿಸಿ ಕೊಂದಿರಲ್ಲ, ಪಾಪ ಆ ಮಂದಿಯೂ ಅದನ್ನು ಮರೆತು ನೀವು ಅಪ್ಪಿ-ತಪ್ಪಿ ‘ಭಾರತ್ ಮಾತಾ ಕಿ’ ಎಂದರೆ ‘ಜೈ’ ಎಂದು ದನಿಗೂಡಿಸುತ್ತಾರೆ. ಬಿಡಿ, ಈ ದೇಶದವರೇ ಅಲ್ಲದ ಸೋನಿಯಾ ಪ್ರಧಾನಿಯಾಗಲೆಂದು ನೀವೆಲ್ಲ ಹಠ ಹಿಡಿದು ಕುಳಿತಿರಿ. ಆಕೆಯ ಮಗ ರಾಹುಲ್ ಇತ್ತೀಚೆಗೆ ಭಾರತ್ ಜೊಡೊ ಯಾತ್ರೆಯಲ್ಲಿ ಭಾರತವನ್ನು ತುಂಡರಿಸುವ ಸಂಕಲ್ಪಗೈದವರನ್ನೆಲ್ಲ ಜೊತೆಗೂಡಿಸಿಕೊಂಡು ನಡೆದ. ‘ಪಾಂಡವರಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡುತ್ತಿದ್ದರೇನು?’ ಎಂದಾತ ಪ್ರಶ್ನಿಸುವಾಗ ಯಾವುದೋ ಹಳ್ಳಿಯ ಮೂರನೇ ತರಗತಿಯ ಮಗುವನ್ನು ಮಾತನಾಡಿಸುತ್ತಿದ್ದೇವೇನೋ ಎನಿಸಿಬಿಡುತ್ತದೆ. ಆತನನ್ನೇ ಪ್ರಧಾನಿ ಮಾಡೋಣ ಎಂದು ನೀವಂದಾಗ ಪ್ರಜಾಪ್ರಭುತ್ವದ ಮರ್ಯಾದೆ ಕಾಪಾಡಲು ನಾವು ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಈ ಪರಿವಾರದ ಅಳಿಯ ಎಂಬ ಒಂದೇ ಕಾರಣಕ್ಕೆ ರಾಬರ್ಟ್ ವಾದ್ರಾ ಪಡೆದ ಸವಲತ್ತು, ತೋರುವ ಧಿಮಾಕು ನೀವು ನೋಡಿದ್ದೀರಲ್ಲ, ಅದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿಲ್ಲ ಏಕೆಂದರೆ ಇವರೆಲ್ಲರೂ ನಾಳೆ ತಮ್ಮದ್ದೇ ಒಂದು ದೇಶಕ್ಕೆ ಮರಳಿಬಿಡಬಲ್ಲರು. ನಾನು, ನೀವು ಇಲ್ಲಿಯೇ ಇರಬೇಕು. ಇದು ನಮ್ಮ ಪೂರ್ವಜರು ಜತನದಿಂದ ಕಟ್ಟಿದ ದೇಶ. ಇದು ಬೆಳೆದಷ್ಟೂ ಲಾಭವುಣ್ಣುವವರು ನಾವಷ್ಟೇ ಅಲ್ಲ, ಇಡಿಯ ಜಗತ್ತು. 

ಈಗೇಕೆ ಧಾವಂತದಿಂದ ಈ ಪತ್ರವೆಂದರೆ ಜಾರ್ಜ್ ಸೊರೊಸ್ ಇತ್ತೀಚೆಗಷ್ಟೇ ಮ್ಯುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ನಲ್ಲಿ ಭಾರತದ ವಿರುದ್ಧ ಗುಟುರು ಹಾಕಿದ್ದಾನೆ, ‘ಮೋದಿ ಮತ್ತು ಅದಾನಿ ಇಬ್ಬರೂ ಆತ್ಮೀಯರು. ಅದಾನಿಯ ಕಂಪನಿ ಸ್ಟಾಕ್ ಮಾರುಕಟ್ಟೆಯಿಂದ ಹಣ ಕ್ರೋಢೀಕರಿಸಲು ಹೋಗಿ ಸೋತಿದೆ. ಆತ ಸ್ಟಾಕ್ಗಳ ಏರುಪೇರಿಗೆ ಕಾರಣನಾದವ. ಈ ವಿಷಯದಲ್ಲಿ ಮೋದಿ ಸುಮ್ಮನಿದ್ದಾರೆ. ಅವರು ವಿದೇಶದ ಹೂಡಿಕೆದಾರರಿಗೆ ಮತ್ತು ತಮ್ಮ ಸಂಸತ್ತಿಗೆ ಉತ್ತರ ಕೊಡಬೇಕಿದೆ’ ಎಂದಿದ್ದಾನಲ್ಲದೇ ಪ್ರಜಾಪ್ರಭುತ್ವವನ್ನು ಉಳಿಸಲಿಕ್ಕಾಗಿ ಭಾರತದಲ್ಲಿ ಸರ್ಕಾರವನ್ನು ಬೇಕಿದ್ದರೂ ಬದಲಾಯಿಸಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೂಡ ರಾಷ್ಟ್ರೀಯವಾದಿ ನಾಯಕರನ್ನು ಕಿತ್ತುಬಿಸುಟಲು ತಾನು ಹಣ ಹೂಡುವುದಾಗಿ ದರ್ಪದಿಂದಲೇ ಹೇಳಿದ್ದ. ಆತನ ದೃಷ್ಟಿ ನರೇಂದ್ರಮೋದಿಯವರತ್ತಲೇ ನೆಟ್ಟಿತೆಂಬುದು ಎಂಥವನಿಗೂ ಅರಿವಾಗುವಂತಿತ್ತು. 

ಅದರಲ್ಲೇನು ಮಹಾ? ಅನೇಕರು ರಾಷ್ಟ್ರದ ಪ್ರಮುಖರನ್ನು ಬದಿಗೆ ಸರಿಸಿ ಮತ್ತೊಬ್ಬರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ಭಾರತದಲ್ಲಿ 28 ಪಕ್ಷಗಳು ಒಟ್ಟಾಗಿ ಮೋದಿಯನ್ನು ಕೆಳಗಿಳಿಸಿ ತಾವುಗಳೇ ಪ್ರಧಾನಿಯಾಗಲು ಹಾತೊರೆಯುತ್ತಿದ್ದಾರೆ. ಜಾರ್ಜ್ ಸೊರೊಸ್‌ದೇನು ವಿಶೇಷ? ಗಮನಿಸಬೇಕಾಗಿರುವ ಸಂಗತಿ ಇರುವುದೇ ಇಲ್ಲಿ. ಹಂಗೇರಿಯಲ್ಲಿ ಹುಟ್ಟಿದ ಸೊರೊಸ್ ಮೂಲತಃ ಯಹೂದಿ ಕುಟುಂಬಕ್ಕೆ ಸೇರಿದವ. ಆದರೆ ನಾಜಿಗಳ ಒತ್ತಡ ತೀವ್ರವಾದಾಗ ತನ್ನ ತಾನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ನಾಜಿಗಳೊಂದಿಗೆ ಕಪಟವಾಡಿಕೊಂಡು ಇದ್ದುಬಿಟ್ಟ. ಓರಗೆಯ ಅನೇಕ ಯಹೂದಿಗಳನ್ನು ನಾಜಿಗಳಿಗೆ ಗುರುತಿಸಲು ಸಹಾಯ ಮಾಡಿದವ ಈತನೇ ಎಂದು ಆರೋಪಿಸಲಾಗುತ್ತದೆ. ತಾನು ನೀಡಿದ ಸಂದರ್ಶನವೊಂದರಲ್ಲಿ ಆತ ಇದನ್ನು ಪರಿಪೂರ್ಣವಾಗಿ ಏನೂ ಅಲ್ಲಗಳೆದಿಲ್ಲ. ಯಹೂದಿಗಳ ಮೇಲಿನ ಅಂದಿನ ಆಕ್ರೋಶ ಅವನಿಗೆ ಇಂದೂ ತೀರಿದಂತೆ ಕಾಣುವುದಿಲ್ಲ. ಹೀಗಾಗಿ ಇಸ್ರೇಲ್ ರಾಷ್ಟ್ರವಾಗಬೇಕು ಎಂದು ಬಯಸುತ್ತಾನಾದರೂ ಅಲ್ಲಿಯೂ ರಾಷ್ಟ್ರವಾದ ಉಳಿಯಬಾರದು ಎಂದು ತನ್ನದ್ದೇ ವಾದ ಮಂಡಿಸುತ್ತಾನೆ. 1956ರಲ್ಲಿ ಉದ್ಯೋಗವರಸಿಕೊಂಡು ನ್ಯೂಯಾರ್ಕಿಗೆ ಬಂದ ಸೊರೊಸ್ ಕಡು ಕಷ್ಟದಿಂದಲೇ ಮೇಲೇರಿದವ. ತನ್ನ ವ್ಯಾಪಾರಿ ಚಾಕಚಕ್ಯತೆಯನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ಹಣಹೂಡುವ ಧಂಧೆ ಆರಂಭಿಸಿದ. ಡಬಲ್ ಈಗಲ್, ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ಕಂಪನಿಗಳು ಅವನದ್ದೇ. ಆತ ಅಮೇರಿಕಾದ ಇತಿಹಾಸದಲ್ಲೇ ಒಬ್ಬ ಯಶಸ್ವೀ ಹೂಡಿಕೆದಾರ ಎಂಬ ಹೆಸರು ಮಾಡಿದ್ದಾನೆ. ನೂರು ಹರ್ಷದ್ ಮೆಹ್ತಾಗಳನ್ನು ಹಾಕಿದರೆ ಒಬ್ಬ ಸೊರೊಸ್ ಹುಟ್ಟಬಹುದೇನೋ! ಸೊರೊಸ್ ಎಷ್ಟು ಸವಾಲುಗಳನ್ನು ಮೈಮೇಲೆಳೆದುಕೊಂಡನೆಂದರೆ ಅಷ್ಟೇ ವೇಗವಾಗಿ ತನ್ನ ಕಂಪನಿಯ ಮೌಲ್ಯವನ್ನೂ ವರ್ಧಿಸುತ್ತಾ ಹೋದ. ಅನೇಕ ರಾಷ್ಟ್ರಗಳು ಆತನನ್ನು ಕ್ರಿಮಿನಲ್ನಂತೆ ಕಾಣುತ್ತವೆ. 1992ರಲ್ಲಿ ಆತ ಬ್ರಿಟೀಷ್ ಸ್ಟಾಕ್ ಮಾರುಕಟ್ಟೆಯಲ್ಲಿ ತಾನು ಹೂಡಿದ್ದ 10 ಬಿಲಿಯನ್ ಡಾಲರ್‌ಗಳನ್ನು ಏಕಾಕಿ ತೆಗೆದು ಇಡಿಯ ಮಾರುಕಟ್ಟೆ ಕುಸಿಯುವಂತೆ ಮಾಡಿಬಿಟ್ಟಿದ್ದ. ಅಲ್ಲಿನ ಬ್ಯಾಂಕುಗಳು ಪತರಗುಟ್ಟಿಹೋಗಿದ್ದವು. ಬ್ರಿಟೀಷ್ ಪೌಂಡು ನೋಡನೋಡುತ್ತಲೇ ಕುಸಿದುಹೋಯ್ತು. ಕುಳಿತಲ್ಲೇ ಸೊರೊಸ್ ಒಂದು ಶತಕೋಟಿ ಅಮೇರಿಕನ್ ಡಾಲರ್ಗಳನ್ನು ಸಂಪಾದಿಸಿಬಿಟ್ಟ. ಇಂಗ್ಲೆಂಡಿನ ಬ್ಯಾಂಕು ಮುರಿದವ ಎಂದೇ ಆತನಿಗೆ ಹೆಸರು. 

1997ರಲ್ಲಿ ಏಷ್ಯಾದಲ್ಲಿ ಆರ್ಥಿಕ ಸಮಸ್ಯೆ ಎದುರಾಯ್ತಲ್ಲ, ಅದರ ಹಿಂದೆ ಇದ್ದ ದೊಡ್ಡ ಕೈ ಸೊರೊಸ್‌ನದ್ದೇ. ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಈ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದರು. ಅಷ್ಟೂ ಜನರ ರಕ್ತ ಮೆತ್ತಿಕೊಂಡಿರುವುದು ಸೊರೊಸ್ನ ಕೈಗೇ! ಮಲೇಷಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್ ಆ ರಾಷ್ಟ್ರದ ಕರೆನ್ಸಿ ಕುಸಿಯಲು ಕಾರಣ ಸೊರೊಸ್ ಎಂದೇ ಆರೋಪಿಸುತ್ತಾರೆ. 1988ರಲ್ಲಿ ಫ್ರಾನ್ಸ್ ನಲ್ಲಿ ಸ್ಟಾಕ್ ಮಾರುಕಟ್ಟೆ ಏರುಪೇರಾಗಲು ಸೊರೊಸ್ ಕಾರಣನಾಗಿದ್ದ ಎಂಬುದಕ್ಕೆ ಅಲ್ಲಿನ ನ್ಯಾಯಾಲಯ 2002ರ ಡಿಸೆಂಬರ್ನಲ್ಲಿ ಆತನಿಗೆ 29 ಲಕ್ಷ ಡಾಲರ್ಗಳ ದಂಡ ವಿಧಿಸಿತ್ತು. ಕಾಲಕ್ರಮದಲ್ಲಿ ಆತನ ಕಂಪನಿ ಇತರರಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತು. ಈ ವೇಳೆಗಾಗಲೆ ಅನೇಕ ರಾಷ್ಟ್ರಗಳೊಂದಿಗೆ ಆಟವಾಡಿದ ಸೊರೊಸ್ ತಾನೇ ಬಿಲಿಯನೇರ್ ಆಗಿಬಿಟ್ಟಿದ್ದ. ತಾನು ಮಾಡಿದ ಯಾವ ಕೆಲಸಕ್ಕೂ ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದೇ ಆತನ ವಾದವಾಗಿತ್ತು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ರಷ್ಯಾ ಇಲ್ಲಿನ ಆರ್ಥಿಕತೆ ಕುಸಿಯಲು ಕಾರಣವಾಗಿದ್ದಕ್ಕೆ ನಿಮಗೆ ಬೇಸರವಿದೆಯೇ? ಎಂದು ಪತ್ರಕರ್ತ ಕೇಳಿದರೆ, ‘ನಾನು ಲಾಭ ಗಳಿಸಲೆಂದೇ ವ್ಯಾಪಾರ ಮಾಡುತ್ತೇನೆ. ಈ ವಿಚಾರ ಬಂದಾಗ ಅದನ್ನು ಬಿಟ್ಟು ಬೇರೆ ಯೋಚಿಸುವುದಿಲ್ಲ. ಈ ಹಂತದಲ್ಲಿ ನಡೆಯುವ ಯಾವುದೇ ಸಾಮಾಜಿಕ ಅವಘಡಗಳಿಗೂ ನಾನು ಜವಾಬ್ದಾರನಲ್ಲ. ಆದರೆ ಮಾನವೀಯತೆ ವಿಚಾರ ಬಂದಾಗ ನಾನು ಬೇರೆ ರೀತಿ ಯೋಚಿಸುತ್ತೇನಷ್ಟೆ’ ಎನ್ನುತ್ತಾನೆ. ಒಂದೆಡೆ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿ ಮತ್ತೊಂದೆಡೆ ಈ ಲಾಭದ ಒಂದಷ್ಟು ಹಣವನ್ನು ಸತ್ತವರ ಮಕ್ಕಳ ಅಧ್ಯಯನಕ್ಕೆಂದು ಮೀಸಲಾಗಿಟ್ಟುಬಿಟ್ಟರೆ ಆದೀತೇನು? 

ಸೊರೊಸ್ ಕೆಲಸ ಮಾಡುವ ಸ್ವರೂಪ ಹೇಗೆ ಗೊತ್ತೇ? ಆತ 1984ರಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಆರಂಭಿಸಿದ. ಆತನ ವೆಬ್ಸೈಟನ್ನು ನಂಬುವುದಾದರೆ ಇದುವರೆಗೂ 32 ಬಿಲಿಯನ್ ಡಾಲರ್‌ಗಳಷ್ಟು ಸ್ವಂತ ಹಣವನ್ನು ಅದಕ್ಕಾಗಿ ನೀಡಿದ್ದಾನೆ. ಈ ಫೌಂಡೇಶನ್ ಜಗತ್ತಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನ ನೀಡುತ್ತದೆ. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಸ್ವಯಂ ಸೇವಾ ಸಂಸ್ಥೆಗಳು ಬಹುಪಾಲು ಎಡಪಂಥೀಯ ಚಿಂತಕರದ್ದೇ ಆಗಿದ್ದು ದೇಶ ವಿಭಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವಂಥವು. ಸ್ವತಃ ಪ್ರಧಾನಮಂತ್ರಿ ಮನಮಹೋನ್ ಸಿಂಗರ ಮಗಳು ಅಮೃತಾ ಸಿಂಗ್ ಈ ಸಂಸ್ಥೆಯ ನಿರ್ದೇಶಕಿಯಾಗಿ ದುಡಿದಿದ್ದವಳು. ಪ್ರಧಾನಮಂತ್ರಿಯೊಬ್ಬರ ಮಗಳು ಇಂತಹ ಸಂಸ್ಥೆಯೊಂದರಲ್ಲಿ ಇದ್ದಾಳೆ ಎಂದರೆ ಸರ್ಕಾರದ ಮೇಲೆ ಸೊರೊಸ್ ಹೊಂದಿದ್ದ ಪ್ರಭಾವ ಎಂಥದ್ದಿರಬಹುದು ಎಂದು ಯೋಚಿಸಿ! ಇಷ್ಟೇ ಅಲ್ಲ, ಸೋನಿಯಾ ಆಪ್ತನಾಗಿದ್ದ ಹರ್ಷ್ ಮಂದಾರ್ ಕೂಡ ಈತನೊಡನೆ ಕೆಲಸ ಮಾಡುತ್ತಿರುವವನೇ. ಹರ್ಷ್ ಮಂದಾರ್ ಸಾಮಾನ್ಯವಾದ ವ್ಯಕ್ತಿಯಲ್ಲ. ಆತ ಐಎಎಸ್ ಅಧಿಕಾರಿಯಾಗಿದ್ದು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ, 2002ರಲ್ಲಿ ನಡೆದ ಗುಜರಾತ್ ದಂಗೆಯ ನೆಪಹೇಳಿ ರಾಜಿನಾಮೆ ಕೊಟ್ಟು, ತನ್ನದ್ದೇ ಆದ ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಆರಾಮದಾಯಕ ಬದುಕನ್ನು ಅನುಭವಿಸುತ್ತಿದ್ದಾನೆ. ಈತನ ಸರ್ಕಾರೇತರ ಸಂಸ್ಥೆಗಳಿಗೆ ಸೊರೊಸ್ ಉದಾರವಾಗಿ ಹಣ ನೀಡುತ್ತಾನೆ. ನಿಮಗೆ ಗಾಬರಿಯಾಗುವ ಸಂಗತಿ ಹೇಳಲೇ? ಆತ ಸೊನಿಯಾ ಯುಪಿಎ ಸರ್ಕಾರದ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯನೂ ಆಗಿದ್ದ. ಆ ಹೊತ್ತಿನಲ್ಲೇ ಬಂದ ಹಿಂದೂವಿರೋಧಿ ಕಮ್ಯುನಲ್ ವೈಯಲೆನ್ಸ್ ಬಿಲ್ ಈತನೇ ತಯಾರಿಸಿದ್ದು. ಆ್ಯಕ್ಷನ್ ಏಡ್ ಇಂಡಿಯಾ ಎಂಬ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥನಾಗಿರುವ ಈತ ತನ್ನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್‌ಗೆ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಗಳಿಂದ ಪಡೆದುಕೊಂಡಿದ್ದಾನೆ. ಎನ್ಕೌಂಟರ್‌ಗೆ ಒಳಗಾದ ಇಶ್ರತ್ ಜಹಾನ್‌ಳಿರಲಿ, ಮುಂಬೈ ದಾಳಿಗೆ ಕಾರಣನಾದ ಯಾಕುಬ್ ಮೆಮನ್ ಇರಲಿ, ಕೊನೆಗೆ ಅಜ್ಮಲ್ ಕಸಬ್, ಅಫ್ಜಲ್ ಗುರುಗಳಾದರೂ ಸರಿ ಅವರೆಲ್ಲರ ಪರವಾಗಿ ದನಿ ಎತ್ತುವವರಲ್ಲಿ ಹರ್ಷ್ ಇದ್ದೇ ಇರುತ್ತಾನೆ. ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕೆಂಬ ಆದೇಶ ಬಂದಾಗ ಅದನ್ನು ಪರಿಶೀಲಿಸಬೇಕೆಂದು ನ್ಯಾಯಾಲಯಕ್ಕೆ ಹೋದ 40 ಮಂದಿಯಲ್ಲಿ ಈತನೂ ಇದ್ದ. ಸಿಎಎ ವಿರುದ್ಧ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆಗೆ ಕೂತಿದ್ದರಲ್ಲ, ಆಗ ತನ್ನ ಕಾರ್ವಾನ್-ಎ-ಮೊಹಬ್ಬತ್ ಎಂಬ ಸಂಘಟನೆಯ ಮೂಲಕ ಪ್ರತಿಭಟನೆಯ ಸೂತ್ರದಾರ ಶರ್ಜಿಲ್ ಇಮಾಮ್‌ನಿಗೆ ಬೆಂಬಲ ಸೂಚಿಸಿದ್ದಲ್ಲದೇ ‘ಈಗ ನಿರ್ಣಯ ಸಂಸತ್ತಿನಲ್ಲೋ, ನ್ಯಾಯಾಲಯದಲ್ಲೋ ಆಗದು. ಅಯೋಧ್ಯೆ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾತ್ಯತೀತತೆಯನ್ನು ರಕ್ಷಿಸಲಿಲ್ಲ. ಹೀಗಾಗಿಯೇ ಕದನ ಬೀದಿಯಲ್ಲೇ ನಡೆದುಬಿಡಲಿ’ ಎಂದಿದ್ದ. 

ಇಷ್ಟಕ್ಕೇ ಮುಗಿಯಲಿಲ್ಲ ಕರ್ನಾಟಕದ ಹರ್ತಿಕೋಟೆಯ ಸಲಿಲ್ ಶೆಟ್ಟಿ ಭಾರತ್ ಜೊಡೊ ಯಾತ್ರೆಯಲ್ಲಿ ರಾಹುಲ್ ಕೈ ಕೈ ಹಿಡಿದು ನಡೆದಿದ್ದ. ಆತ ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ ಜಾಗತಿಕ ಉಪಾಧ್ಯಕ್ಷ. ಆತನೇ ಈ ಹಿಂದೆ ಆಮ್ನೆಸ್ಟಿ ಇಂಟರ್ನ್ಯಾಷನಲ್‌ನ ಕಾರ್ಯದರ್ಶಿಯೂ ಆಗಿದ್ದ. ಅಂದಹಾಗೆ ಇದೇ ಸಂಸ್ಥೆ ಭಾರತ ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆಯಾಗಿ ವರ್ತಿಸುತ್ತಿದೆ ಎಂಬ ವರದಿ ಕೊಟ್ಟಿತ್ತು. ಈಗ ಆ ವರದಿಯ ಮಹತ್ವ ಅರಿವಾಗುತ್ತಿದ್ದಿರಬಹುದಲ್ಲವೇ? 

ಸೊರೊಸ್ ತನ್ನ ತಂಡದ ಮೂಲಕ ಅನೇಕ ಮಾಧ್ಯಮಗಳಿಗೂ ಹಣ ನೀಡುತ್ತಾನೆ. ಆ ಮೂಲಕ ಅಭಿಪ್ರಾಯವನ್ನೇ ಕೊಂಡುಕೊಳ್ಳುತ್ತಾನೆ. ಅನೇಕ ರಾಷ್ಟ್ರಗಳಲ್ಲಿ ತನಗೆ ಬೇಕಾದ, ತಾನು ಹೇಳಿದಂತೆ ಕೇಳುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಹಂಗೇರಿಯಂತಹ ಅನೇಕ ರಾಷ್ಟ್ರಗಳು ಆತನ ಹೂಡಿಕೆಯನ್ನು ವಿರೋಧಿಸುವುದು ಈ ಕಾರಣಕ್ಕಾಗಿಯೇ. 

ಈಗ ಎಲ್ಲವನ್ನೂ ಮತ್ತೊಮ್ಮೆ ಅವಲೋಕಿಸಿ ನೋಡಿ. ಸ್ವತಃ ಕ್ರಿಮಿನಲ್‌ಗಳ ಸಾಲಿಗೆ ಸೇರುವ ಸೊರೊಸ್ ಭಾರತದಲ್ಲಿ ಅನೇಕ ಸೇವಾ ಸಂಸ್ಥೆಗಳ ಮೂಲಕ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾನೆ. ಮಾಧ್ಯಮಗಳನ್ನು ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜನಾಭಿಪ್ರಾಯ ರೂಪಿಸುತ್ತಾನೆ. ಜಾಗತಿಕ ವರದಿಗಳು ಭಾರತದ ವಿರುದ್ಧ ಇರುವಂತೆ ನೋಡಿಕೊಳ್ಳುತ್ತಾನೆ. ಅಜೀಂ ಪ್ರೇಮ್‌ಜಿ ಥರದವರ ಮೂಲಕ ಇಲ್ಲಿ ಜನಮೆಚ್ಚುಗೆಯ ಕಾರ್ಯ ನಡೆಸುವಂತೆ ಮಾಡಿ ಪಿತೂರಿ ಮಾಡುತ್ತಾನೆ. ಕೊನೆಗೆ ಇವೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ನಾಯಕರ ಯಾತ್ರೆಗಳಿಗೆ ಹಣ ಕೊಡುತ್ತಾನೆ, ತನ್ನವರನ್ನೂ ಕಳಿಸುತ್ತಾನೆ. ವಿದೇಶದಲ್ಲಿ ಕೂತು ಭಾರತವನ್ನು ಚೂರು ಮಾಡುವ ಈ ಕಲ್ಪನೆ ಬ್ರಿಟೀಷರು ಭಾರತವನ್ನಾಳಿದಂತಲ್ಲವೇನು? 

ಆಕ್ರಮಣಕಾರಿಗಳನ್ನು ತುಂಡು ಬಟ್ಟೆ ಧರಿಸಿ ಮಹಾತ್ಮ ಓಡಿಸಿದರೆ, ಆತನ ಹೆಸರಿಟ್ಟುಕೊಂಡು ಬೇರೊಂದು ರೂಪದಲ್ಲಿ ಅವರನ್ನೇ ಕರೆತರಲು ಯತ್ನಿಸುವುದು ಎಷ್ಟು ಸರಿ?  ಮೊದಿಯನ್ನು ವಿರೋಧಿಸಿ ಅಭ್ಯಂತರವಿಲ್ಲ. ಆದರೆ ಆ ಧಾವಂತದಲ್ಲಿ ಭಾರತವನ್ನೇ ಪ್ರಪಾತಕ್ಕೆ ತಳ್ಳಬೇಡಿ. 

ಇದು ನನ್ನ ಕಳಕಳಿಯ ಕೋರಿಕೆ ಅಷ್ಟೆ!

ಜಗತ್ತು ಗೆಲ್ಲಲು ಪ್ರೇರಣೆ ಕೊಟ್ಟಿದ್ದು ಆ ಬಂಡೆ! 

ಜಗತ್ತು ಗೆಲ್ಲಲು ಪ್ರೇರಣೆ ಕೊಟ್ಟಿದ್ದು ಆ ಬಂಡೆ! 

ಡಿಸೆಂಬರ್ 25. ಅತ್ಯಂತ ಸಾಮಾನ್ಯ ಸಂತನೊಬ್ಬ ಈ ದೇಶ ಎದುರಿಸುತ್ತಿರುವ ಕಷ್ಟ-ನಷ್ಟಗಳನ್ನು ನೋಡಿ, ನೊಂದು, ಬಸವಳಿದು ತನ್ನ ತಾನು ರಾಷ್ಟ್ರದ ಒಳಿತಿಗೆ ಸಮರ್ಪಿಸಬೇಕೆಂದು ನಿಶ್ಚಯಿಸಿಕೊಂಡ. ಇಡಿಯ ರಾಷ್ಟ್ರವನ್ನು ಪರಿವ್ರಾಜಕನಾಗಿ ಸುತ್ತಾಡಿದ ಆತ ಕೊನೆಗೊಮ್ಮೆ ಕನ್ಯಾಕುಮಾರಿಯ ಬಂಡೆಯನ್ನು ನೋಡಿ ಸಮುದ್ರವನ್ನು ಸೀಳಿಕೊಂಡು ಬಂಡೆಯತ್ತ ಧಾವಿಸಿದ. ಸುತ್ತಲೂ ನಿಂತು ನೋಡುತ್ತಿದ್ದ ಮಂದಿಗೆ ಆತ ಹುಚ್ಚನೆನಿಸಿರಲಿಕ್ಕೆ ಸಾಕು. ಇನ್ನೂ ಕೆಲವರಿಗೆ ಆತನ ಸಾಹಸ ಮೆಚ್ಚುಗೆಯಾಗಿರಲೂ ಸಾಕು. ಸನ್ಯಾಸಿಗೆ ಮಾತ್ರ ಇವ್ಯಾವುದರ ಪರಿವೆಯೂ ಇರಲಿಲ್ಲ. ಆತನ ಹೃದಯವನ್ನೆಲ್ಲ ಆವರಿಸಿಕೊಂಡಿದ್ದು ತಾಯಿ ಭಾರತಿಯ ಕಷ್ಟಗಳು ಮಾತ್ರ. ಅದಕ್ಕೆ ಪರಿಹಾರವನ್ನು ಅರಸುವ ಧಾವಂತದಲ್ಲಿ ಆತ ತನ್ನದೆಲ್ಲವನ್ನೂ ಅರ್ಪಿಸಲು ಸಿದ್ಧವಾಗಿದ್ದಾನೆ. ತನ್ನ ಪ್ರಾಣ ಸಮರ್ಪಣೆಯಿಂದ ರಾಷ್ಟ್ರಕ್ಕೆ ಒಳಿತಾಗುವುದಾದರೆ ಅದಕ್ಕೂ ಕೂಡ. ಹೌದು, ನೀವು ಸರಿಯಾಗಿಯೇ ಗ್ರಹಿಸಿದಿರಿ. ಆ ಸನ್ಯಾಸಿ ಸ್ವಾಮಿ ವಿವೇಕಾನಂದರೇ.

ಅಂದು ಆ ಬಂಡೆಗಲ್ಲಿನ ಮೇಲೆ ಕುಳಿತು ಧ್ಯಾನಸ್ಥನಾದ ಆತ ತನಗರಿವಿಲ್ಲದಂತೆ ಕಣ್ಣೀರು ಸುರಿಸುತ್ತಲೇ ಹೋದ. ಭಾರತದ ಭವ್ಯ ಪರಂಪರೆಯನ್ನು ಕಣ್ಮುಂದೆ ತಂದುಕೊಂಡ. ಬ್ರಿಟೀಷರ ದಬ್ಬಾಳಿಕೆಯನ್ನು ನೆನೆಸಿಕೊಂಡ. ಒಂದು ಕಾಲದ ಶ್ರೇಷ್ಠ ಭಾರತ ಹೀಗೇಕಾಯ್ತು ಎಂದು ಯೋಚಿಸುತ್ತಾ ಮಮ್ಮಲ ಮರುಗಿದ. ಹಾಗೆ ಒಂದಲ್ಲ, ಎರಡಲ್ಲ, ಮೂರು ದಿನಗಳು ಕಳೆದೇ ಹೋದವು. ಕೊನೆಯ ದಿನ ಆತನಿಗೊಂದು ದರ್ಶನವಾಯ್ತು. ದರ್ಶನಗಳ ನಾಡಲ್ಲವೇ ಇದು. ಗಾಯತ್ರಿ ಮಂತ್ರದ ದರ್ಶನವನ್ನು ಪಡೆದುಕೊಂಡ ವಿಶ್ವಾಮಿತ್ರರಿಂದ ಹಿಡಿದು ನಮ್ಮ ಕಾಲದ ಋಷಿ ವಿವೇಕಾನಂದರವರೆಗೆ ಎಷ್ಟೊಂದು ಮಂದಿ ದರ್ಶನಕಾರರು! ಆದರೆ ಈ ಬಾರಿಯ ದರ್ಶನ ಹಿಂದಿನ ಎಲ್ಲವುಗಳಿಗಿಂತಲೂ ಭಿನ್ನ. ತಾಯಿ ಭಾರತಿ ವಿವೇಕಾನಂದರ ಮುಂದೆ ವೈಭವದಿಂದ ಕಂಗೊಳಿಸಿದಳು. ಕಾಶ್ಮೀರದ ರೂಪದಲ್ಲಿ ಆಕೆಯ ಕಿರೀಟ, ಎರಡು ವೈಭವದ ಬಾಹುಗಳು, ವಿಂಧ್ಯವೆಂಬ ಸೊಂಟ, ಕನ್ಯಾಕುಮಾರಿಯಲ್ಲಿ ಆಕೆಯ ಪಾದಯುಗ್ಮ ಮತ್ತು ಆಕೆಯ ಚರಣ ಪೂಜೆಗೆ ಸಿದ್ಧನಾಗಿ ಕುಳಿತಿರುವ ಈ ಸನ್ಯಾಸಿ. ಇವಿಷ್ಟೂ ಆ ದರ್ಶನದ ಸಾರಾಂಶ. ತನ್ನಿಂದ ಬೃಹತ್ತಾದ ಕೆಲಸವೊಂದಾಗಲಿಕ್ಕಿದೆ ಎಂದು ಅಂದೇ ಆತನಿಗೆ ಅರಿವಾಯ್ತು. ಗುರುದೇವ ರಾಮಕೃಷ್ಣರು ಸಮುದ್ರದ ಮೇಲೆ ನಡೆದುಕೊಂಡು ಬಂದು ಪಶ್ಚಿಮದಿಂದ ಕೈಬೀಸಿ ಕರೆಯುತ್ತಿರುವುದೂ ಕಂಡಿತು. ಮುಂದೇನು? ಅಂದುಕೊಂಡಿದ್ದು ಇನ್ನು ಮಾಡಬೇಕಷ್ಟೇ. ಈಜಿಕೊಂಡು ಹೋದ ಈ ಸನ್ಯಾಸಿಯನ್ನು ಕರೆತರಲೆಂದು ಊರಿನ ದೋಣಿ ಬಂತು. ಮೂರು ದಿನಗಳ ಕಾಲ ಮರಳಿ ಬರದಿದ್ದ ಈತನ ಯೋಗಕ್ಷೇಮ ವಿಚಾರಿಸಲು ಊರಿನ ಹಿರಿಯರು ಬಂದಿದ್ದರು. ತಮ್ಮೊಂದಿಗೆ ಮತ್ತೆ ಊರಿಗೆ ಕರೆದೊಯ್ದರು. ಆನಂತರವೇ ಸ್ವಾಮಿ ವಿವೇಕಾನಂದರು ಜಗತ್ತಿನ ವೇದಿಕೆಯ ಮೇಲೆ ದಿಗ್ವಿಜಯ ಸಾಧಿಸಲು ಸಾಧ್ಯವಾಗಿದ್ದು. ಇಂದಿಗೂ ಅದಕ್ಕೆ ಸಮನಾದ ಮತ್ತೊಂದು ಸಾಧನೆ ಇಲ್ಲ. ಗುಲಾಮೀ ರಾಷ್ಟ್ರವೊಂದರ ಪ್ರತಿನಿಧಿ ಜಗತ್ತಿನ ಪರಮ ಸ್ವಾತಂತ್ರ್ಯಪ್ರಿಯ ಅಮೇರಿಕಾದ ವೇದಿಕೆಯ ಮೇಲೆ ನಿಂತು ಹಿಂದೂಧರ್ಮವನ್ನು ಹೀಗಳೆಯುತ್ತಿದ್ದವರ ಮುಂದೆ ಎದೆಯೆತ್ತಿ ತನ್ನ ಧರ್ಮವನ್ನು ಸಮರ್ಥಿಸಿಕೊಳ್ಳುವ ಕಾರ್ಯ ಮಾಡಿದನಲ್ಲದೇ ಜಗತ್ತೆಲ್ಲ ಅದಕ್ಕೆ ತಲೆಬಾಗುವಂತೆ ಮಾಡಿದ್ದಿದೆಯಲ್ಲ ಅದು ಸಾಮಾನ್ಯವಾದ ಸಂಗತಿಯಲ್ಲ. ಗುಲಾಮೀ ಭಾವವನ್ನು ಆವಾಹಿಸಿಕೊಂಡಿದ್ದ ಭಾರತೀಯ ಸಮಾಜಕ್ಕೆ ಅದೊಂದು ಶಕ್ತಿಮದ್ದಾಯ್ತು. ಹೊಸದೊಂದು ರಾಷ್ಟ್ರೀಯತೆಯ ಉದಯವಾಯ್ತು. ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನದ ಬದಲಾವಣೆಯ ಮೊದಲ ಪರ್ವ ಆರಂಭವಾಗಿದ್ದು ಅಲ್ಲಿಂದಲೇ. ಆದರೆ ಇಷ್ಟೆಲ್ಲ ಸಾಹಸಕ್ಕೆ ಕಾರಣವಾಗಿ ವಿವೇಕಾನಂದರಿಗೆ ಶಕ್ತಿಯ ಗಣಿಯನ್ನೇ ಉಡುಗೊರೆಯಾಗಿ ಕೊಟ್ಟಿದ್ದು ಡಿಸೆಂಬರ್ 25ರ ಸಮುದ್ರವನ್ನು ಸೀಳಿದ ಆ ಸಾಹಸವೇ. ಹೀಗಾಗಿಯೇ ವಿವೇಕಾನಂದರ ಆರಾಧಕರ ಪಾಲಿಗೆಲ್ಲ ಈ ದಿನ ಬಲುವಿಶಿಷ್ಟವಾದ್ದು.

ಜಗತ್ತಿನ ಬಹುತೇಕ ಮತಗಳು ಅನ್ಯರಾಷ್ಟ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಾಕಷ್ಟು ಶ್ರಮಿಸಿವೆ. ಕತ್ತಿ-ಬಂದೂಕುಗಳನ್ನು ಹಿಡಿದು ಸಾವಿನ ಹೆದರಿಕೆ ತೋರಿ ತಮ್ಮ ಪುಸ್ತಕವನ್ನು ಒಪ್ಪಿಕೊಳ್ಳುವ ಒತ್ತಾಯ ಹೇರಿದ ಮಂದಿ ಇಂದು ಮೆರೆದಾಡುತ್ತಿದ್ದಾರೆ. ಆದರೆ ನಾವು ಮಾತ್ರ ಹಾಗಲ್ಲ. ಕೇವಲ ಜ್ಞಾನ ಪರಂಪರೆಯೊಂದರಿಂದಲೇ ಜಗತ್ತಿನ ಮೂಲೆ-ಮೂಲೆಯನ್ನೂ ತಮ್ಮ ತೆಕ್ಕೆಗೆ ಹಾಕಿಕೊಂಡವರು. ಕತ್ತಿ ಹಿಡಿದು ಯಾರ ಮೇಲೂ ಏರಿ ಹೋದವರಲ್ಲ. ಹೀಗಾಗಿ ಭಯ ತೋರಿಸಿ ನಮ್ಮ ಸಂಸ್ಕೃತಿಯನ್ನು ಹೇರುವ ಅಗತ್ಯವೂ ನಮಗಿರಲಿಲ್ಲ. ದಾರಾ ಶಿಕೊ ಔರಂಗಜೇಬನ ಸಹೋದರ. ಉಪನಿಷತ್ತುಗಳನ್ನು ಓದಿದ ಆತ ಭಾರತೀಯ ಸಂಸ್ಕೃತಿಗೆ ತನ್ನ ತಾನು ಸಮರ್ಪಿಸಿಕೊಂಡೇಬಿಟ್ಟ. ಅದಕ್ಕೆ ಪ್ರತಿಫಲವಾಗಿಯೇ ಔರಂಗಜೇಬನ ಕೈಲಿ ಸಾವನ್ನೂ ಕಂಡ. ಸಾಕ್ರಟಿಸ್, ಅರಿಸ್ಟಾಟಲ್‌ನಿಂದ ಹಿಡಿದು ಡೆವಿಡ್ ಫ್ರಾಲಿ, ಮಿಷೆಲ್ ಡ್ಯಾನಿನೊವರೆಗೆ ಅಸಂಖ್ಯ ಮಂದಿ ಭಾರತೀಯ ಪರಂಪರೆಯನ್ನು ಅರಿತು ಗೌರವ ಬೆಳೆಸಿಕೊಂಡಿರುವುದು ಇದರ ಜ್ಞಾನಮಾರ್ಗದ ಕಾರಣದಿಂದಾಗಿ. ನಾವು ದಾರಿಯೇ ತಪ್ಪಿಲ್ಲವೆಂದೇನೂ ಅಲ್ಲ. ಉಪನಿಷತ್ತುಗಳ ಸಂದೇಶದಿಂದ ಆಗಾಗ ದೂರ ಸರಿಯುತ್ತಿರುತ್ತೇವೆ. ಆದರೆ ಹೀಗೆ ಪಥವಿಮುಖರಾದಾಗಲೆಲ್ಲ ಮತ್ತೆ ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನಕ್ಕೆಂದೇ ಅನೇಕ ಮಹಾನುಭಾವರು ಅವತರಿಸಿದ್ದಾರೆ. ರಾಮ, ಕೃಷ್ಣರಿರಲಿ, ಬುದ್ಧ, ಮಧ್ವ, ಶಂಕರ, ರಾಮಾನುಜರಿರಲಿ ಅಥವಾ ನಮ್ಮ ಕಾಲದ ರಾಮಕೃಷ್ಣರೇ ಇರಲಿ ಇವರೆಲ್ಲರೂ ಇಂತಹ ಹಂತಗಳಲ್ಲಿ ಬಂದು ಮತ್ತೆ ಭಾರತವೆಂಬ ಉಗಿಬಂಡಿಯನ್ನು ಹಳಿಗೆ ತಂದು ನಿಲ್ಲಿಸಿದವರು. ಇದರಿಂದಾಗಿಯೇ ಉಪನಿಷತ್ತುಗಳು ಅವತೀರ್ಣಗೊಂಡು ಸಹಸ್ರಾರು ವರ್ಷಗಳು ಕಳೆದರೂ ಭಾರತದ ಅಂತಃಸತ್ವ ಮಾತ್ರ ಬದಲಾಗಲೇ ಇಲ್ಲ. ಇಷ್ಟಕ್ಕೂ ಭಾರತದಲ್ಲಿ ಸಂತರಾಗೋದು, ಋಷಿಯಾಗೋದು ಸತ್ತಮೇಲೆ ಪವಾಡಗಳು ಎಷ್ಟು ಮಾಡಿದರು ಎಂಬ ಆಧಾರದ ಮೇಲಲ್ಲ. ಬದುಕಿರುವಾಗ ಅವರೆಷ್ಟು ತ್ಯಾಗ ಮಾಡಿದರು ಮತ್ತು ಎಷ್ಟು ಪ್ರೇಮವನ್ನು ಜಗತ್ತಿಗೆ ಹರಿಸಿದರು ಎಂಬ ಆಧಾರದ ಮೇಲೆ. ಆದ್ದರಿಂದ ಭಾರತದಲ್ಲಿ ಋಷಿತ್ವ ಎಂಬುವುದು ಹೃದಯ ನೀಡುವ ಗೌರವವೇ ಹೊರತು, ಇತರ ಮತಗಳಂತೆ ಆಡಳಿತದಲ್ಲಿ ಕುಳಿತವರು ಕೊಡುವಂಥದ್ದಲ್ಲ. ಸ್ವತಃ ವಿವೇಕಾನಂದರು ರಾಮಕೃಷ್ಣರ ಶಿಷ್ಯರಾಗಿ ಜಗತ್ತಿಗೆ ಉಪನಿಷತ್ತುಗಳ ಸಂದೇಶವನ್ನು ಮತ್ತೊಮ್ಮೆ ಒಯ್ಯುವಾಗಲೂ ಅವರು ತ್ಯಾಗ ಮತ್ತು ಪ್ರೇಮದ ಮೂರ್ತಿಯಾಗಿಯೇ ನಡೆದವರು. ತಮ್ಮ ಬದುಕಿಗೆ ಸಾಕಾಗುವಂತಹ ಎರಡು ಪ್ರಮುಖ ನಿರ್ದೇಶನಗಳನ್ನು ಅವರು ಗುರುಗಳಿಂದ ಪಡೆದರು. ಒಂದು ನೇರವಾಗಿ ಮತ್ತೊಂದು ಪರೋಕ್ಷವಾಗಿ. ಒಮ್ಮೆ ರಾಮಕೃಷ್ಣರ ಕೊಠಡಿಯಲ್ಲಿ ಧಾರ್ಮಿಕ ಕೃತಿಯೊಂದರ ಅಧ್ಯಯನ ನಡೆಯುತ್ತಿತ್ತು. ಅಲ್ಲಿ ಜೀವದಯೆ ಎನ್ನುವ ಉಲ್ಲೇಖ ಬಂತು. ತಕ್ಷಣವೇ ಶ್ರೀರಾಮಕೃಷ್ಣರು ಜೀವದಯೆ ಎನ್ನುವುದು ಸರಿಯಲ್ಲ. ದಯೆ ತೋರಿಸಲು ನಾವಾರು? ಭಗವಂತನೊಬ್ಬನೇ ದಯೆ ತೋರಿಸಬಲ್ಲ. ನಾವು ಜೀವಸೇವೆ ಮಾಡಲಷ್ಟೇ ಯೋಗ್ಯರು ಎಂದುಬಿಟ್ಟರು. ಆ ಹೊತ್ತಲ್ಲಿ ಕೊಠಡಿಯಲ್ಲಿ ಸಾಕಷ್ಟು ಜನರಿದ್ದರೂ ಈ ಸಂದೇಶವನ್ನು ಸ್ವೀಕಾರ ಮಾಡಿದ್ದು ಮಾತ್ರ ಸ್ವಾಮಿ ವಿವೇಕಾನಂದರೇ. ಅಲ್ಲಿಂದ ಹೊರ ಬಂದೊಡನೆ ವಿವೇಕಾನಂದರು ಉದ್ಗರಿಸಿದ್ದರು ‘ನನಗಿಂದು ಶ್ರೇಷ್ಠ ಮಾರ್ಗದರ್ಶನ ದೊರೆತಿದೆ. ಈ ಬದುಕನ್ನು ಜೀವಸೇವೆಯಲ್ಲಿ ಸವೆಸಿಬಿಡುತ್ತೇನೆ’ ಅಂತ. ಅವರಿಗೆ ಸಿಕ್ಕ ಪರೋಕ್ಷ ಸಂದೇಶವನ್ನು ಜೀವನದ ಉದ್ದೇಶವಾಗಿ ರೂಪಿಸಿಕೊಂಡುಬಿಟ್ಟಿದ್ದರು. ಇಂಥದ್ದೇ ಮತ್ತೊಂದು ಘಟನೆ ರಾಮಕೃಷ್ಣರ ಲೀಲಾಂತ್ಯದ ಕಾಲದಲ್ಲಿ ನಡೆಯಿತು. ಮರಣಶಯ್ಯೆಯಲ್ಲಿದ್ದ ರಾಮಕೃಷ್ಣರು ನರೇನ್‌ನನ್ನು ಬಳಿಕರೆದು ಎಲ್ಲರಿಗೂ ತಿಳಿಯುವಂತೆ ನರೇಂದ್ರ ಜಗತ್ತಿಗೆ ಶಿಕ್ಷಣ ಕೊಡುತ್ತಾನೆ ಎಂದು ಹೇಳಿದರಲ್ಲದೇ ಅದನ್ನು ಬರೆದರೂ ಕೂಡ. ಅಂದರೆ ಅವತಾರ ಪುರುಷನೊಬ್ಬ ನರೇಂದ್ರ ಮುಂದೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದಲ್ಲದೇ ಕಳೆದು ಹೋಗುತ್ತಿರುವ ಭಾರತದ ಭಾಗ್ಯವನ್ನು ಪುನರ್ ರೂಪಿಸುವ ಹೊಣೆಯನ್ನು ಹೆಗಲಿಗೇರಿಸಿದರು. ಸ್ವಾಮಿ ವಿವೇಕಾನಂದರು ಗುರುವಿನ ಈ ವಾಕ್ಯ ಸುಳ್ಳಾಗಲು ಬಿಡಲಿಲ್ಲ. ಗುರುಗಳು ಅದಕ್ಕೆ ಪೂರಕವಾಗಿಯೇ ಶಿಷ್ಯನ ಅಂತರಂಗದಲ್ಲಿ ಇಚ್ಛೆ ಜಾಗೃತಗೊಳಿಸಿದರು.

ವಿವೇಕಾನಂದರಂಥವರ ಇಚ್ಛಾಶಕ್ತಿ ಸುಖಾಸುಮ್ಮನೆ ಕಳೆದುಹೋಗುವಂಥದ್ದಲ್ಲ. ಒಂದೊಮ್ಮೆ ರಾಮಕೃಷ್ಣರೇ ಹೇಳಿದ್ದರು, ‘ನನ್ನೊಂದಿಗೆ ಬಂದಿದ್ದಾನೆ ಎಂಬ ಕಾರಣಕ್ಕಾಗಿಯೇ ನರೇಂದ್ರನ ಪ್ರಭೆ ಇಷ್ಟು ಮಸುಕಾಗಿದೆ. ಪ್ರತ್ಯೇಕವಾಗಿ ಬಂದಿದ್ದರೆ ಒಂದು ಮತವನ್ನೇ ಸ್ಥಾಪಿಸಿಬಿಡಬಲ್ಲಷ್ಟು ಸಾಮರ್ಥ್ಯ ಅವನದ್ದು’ ಎಂದು! ವಿವೇಕಾನಂದರ ಒಟ್ಟಾರೆ ಬದುಕು ಎಲ್ಲ ಮತಗಳ ಸಮನ್ವಯಕ್ಕೆ ಮೀಸಲಾಗಿದ್ದು. ಜಗತ್ತಿನ ವೇದಿಕೆಯ ಮೇಲೆ ಭಾರತವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಎಷ್ಟು ಆನಂದವಿತ್ತೋ ಹಿಂದೂಧರ್ಮದ ಸಮಸ್ಯೆಗಳನ್ನು ಅವಲೋಕಿಸುವಾಗ ಅಷ್ಟೇ ದುಃಖವಾಗುತ್ತಿತ್ತು. ಬೆಂಗಳೂರಿನಲ್ಲಿ ಕೇರಳದ ಡಾ. ಪಲ್ಪು ಅವರನ್ನು ಭೇಟಿ ಮಾಡಿದಾಗ ಅವರು ‘ನೀವೆಲ್ಲ ಬ್ರಾಹ್ಮಣರ ಹಿಂದೆ ಅಂಗಲಾಚಿಕೊಂಡು ಹೋಗುವುದೇಕೆ? ನಿಮ್ಮಲ್ಲೇ ಉನ್ನತಮಟ್ಟದ ಯೋಗ್ಯವ್ಯಕ್ತಿಯೊಬ್ಬನನ್ನು ನಾಯಕನನ್ನಾಗಿ ಮಾಡಿಕೊಂಡು ಎಲ್ಲರೂ ಅನುಸರಿಸಿ. ಆಗ ನಿಮ್ಮ ಸಮಸ್ಯೆಗಳು ಪರಿಹಾರಗೊಳ್ಳುವುವು’ ಎಂದಿದ್ದರು. ಈ ಒಂದು ಮಾತು ಪಲ್ಪು ಅವರ ಬದುಕನ್ನಷ್ಟೇ ಅಲ್ಲ, ಅವರ ಇಡೀ ಸಮುದಾಯದ ಬದುಕಿಗೆ ದಿಕ್ಸೂಚಿಯಾಯ್ತು. ಸ್ವಾಮೀಜಿಯವರ ಮಾತುಗಳನ್ನು ತೀವ್ರವಾಗಿ ಮನಸ್ಸಿನ ಮೇಲೆ ಆವಾಹಿಸಿಕೊಂಡ ಡಾ. ಪಲ್ಪು ತಮ್ಮ ಸಮಾಜದ ಉನ್ನತ ವ್ಯಕ್ತಿಯ ಹುಡುಕಾಟಕ್ಕೆ ಸಜ್ಜಾದರು. ಆಗಲೇ ಅವರಿಗೆ ನಾರಾಯಣ ಗುರುಗಳ ಪರಿಚಯವಾಗಿದ್ದು. ಮುಂದೆ ಶ್ರೀ ನಾರಾಯಣ ಗುರುಗಳು ನಾಡಿಗೆ ಬೆಳಕಾಗಿ ನಿಂದ ರೀತಿ ಎಂಥದ್ದೆಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.

ಹಾಗಂತ ಅವರು ಬ್ರಾಹ್ಮಣ ವಿರೋಧಿ ಎಂದು ನೀವು ಭಾವಿಸಿಬಿಟ್ಟರೆ ನೀವು ಮೂರ್ಖರಾಗಿಬಿಡುವಿರಿ. ಚೆನ್ನೈನಲ್ಲಿ ಮಿಥ್ಯಾಚರಗಳನ್ನು ಬಿಟ್ಟಿದ್ದೇನೆ ಎಂದು ಹೇಳಿಕೊಂಡ ಬ್ರಾಹ್ಮಣನೊಬ್ಬನನ್ನು ಅವರು ಝಾಡಿಸಿದ ರೀತಿ ಕಂಡರೆ ನೀವು ಗಾಬರಿಯಾಗಿಬಿಡುತ್ತೀರಿ. ‘ಉಪನಿಷತ್ತುಗಳನ್ನೇ ಸೃಜಿಸಿದ ಋಷಿಗಳಿಗೆ ಈ ಆಚರಣೆಗಳಿಗೆಲ್ಲ ಸಮಯವಿತ್ತು. ನಿಮಗೆ ಇಲ್ಲ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ?’ ಎಂದು ಬಾಯ್ತುಂಬ ಉಗುಳಿದ್ದರು. ಆಗಲೇ ಹೇಳಲಿಲ್ಲವೇ? ಅಪಾರವಾದ ಗೌರವ ಇಟ್ಟುಕೊಂಡೇ ಅವರ ನ್ಯೂನತೆಗಳನ್ನು ತಿದ್ದಬಲ್ಲ ಸಾಮರ್ಥ್ಯ ಇದ್ದವರು ಸ್ವಾಮಿ ವಿವೇಕಾನಂದರು. 

ಹಾಗಂತ ಅವರ ಈ ತೀವ್ರ ವಿಚಾರಧಾರೆ ಸಾಮಾನ್ಯ ಜನರಿಗಾಗಿ ಮಾತ್ರ ಎಂದೇನೂ ಅಲ್ಲ. ಅನೇಕ ದಿವಾನರುಗಳು, ಮಹಾರಾಜರುಗಳು ಇವರ ಪ್ರಭಾವಲಯದ ಭಾಗವಾಗಿದ್ದರು. ಮೈಸೂರಿನ ಮಹಾರಾಜರಂತೂ ವಿವೇಕಾನಂದರ ಮಾತುಗಳಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ ‘ನಿಮಗಾಗಿ ಏನು ಮಾಡಲಿ?’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಸುದೀರ್ಘ ಉತ್ತರ ನೀಡುತ್ತಾ, ‘ನಮ್ಮ ಭರತಭೂಮಿಯು ಅನಾದಿಯಿಂದ ಪಡೆದುಕೊಂಡು ಬಂದ ಆಸ್ತಿ ಎಂದರೆ ಉನ್ನತ ತಾತ್ವಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಮಾತ್ರ. ಈಗ ಅದಕ್ಕೆ ಆಧುನಿಕ ವಿಜ್ಞಾನದ ಜೋಡಣೆಯಾಗಬೇಕು. ಈಗ ಭಾರತದಲ್ಲಿ ಅಡಿಯಿಂದ ಮುಡಿಯವರೆಗೆ ರಚನಾತ್ಮಕ ಬದಲಾವಣೆ ತರಬೇಕಾಗಿದೆ’ ಎಂದರು. ವಿಕಾಸದ ಹಾದಿಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಮಹಾರಾಜರಿಗೆ ಈ ಮಾತು ವೇದವಾಕ್ಯವೇ ಆಯ್ತು. ಬಹುಶಃ ಕರ್ನಾಟಕದ ವಿಕಾಸಕ್ಕೆ ಮೂಲಪ್ರೇರಣೆ ಅಲ್ಲಿಂದಲೇ ದೊರೆತದ್ದು ಎನಿಸುತ್ತದೆ. ವಿಜ್ಞಾನದ ಮೇಲಿನ ಮಹಾರಾಜರ ಆಸಕ್ತಿ ಅಲ್ಲಿಂದಾಚೆಗೆ ನೂರ್ಮಡಿಯಾಗಿರಲು ಸಾಕು. ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಜಾಗ ಹುಡುಕುವಾಗ ಜಮ್ಶೆಡ್‌‌ಜಿ ಟಾಟಾ ಇಲ್ಲವೆನ್ನಲಾಗದಷ್ಟು ಜಾಗವನ್ನು, ಸಹಕಾರವನ್ನು ಮಹಾರಾಜರು ಕೊಡುವುದರ ಹಿಂದೆ ಈ ಪ್ರೇರಣೆ ನಿಸ್ಸಂಶಯವಾಗಿಯೂ ಇದೆ! 

ಇವಿಷ್ಟನ್ನೂ ಮತ್ತೆ ಏಕೆ ನೆನಪಿಸಿಕೊಳ್ಳಬೇಕಾಯ್ತೆಂದರೆ ಹತಾಷವಾಗುತ್ತಿದ್ದೇವೆ ಎನಿಸಿದಾಗಲೆಲ್ಲ, ಯುದ್ಧವನ್ನು ಕಳೆದುಕೊಂಡೇಬಿಡುತ್ತೇವೆ ಎಂದೆನಿಸಿದಾಗಲೆಲ್ಲ ಒಮ್ಮೆ ವಿವೇಕಾನಂದರಿಗೆ ನಮ್ಮ ನಾವು ತೆರೆದುಕೊಳ್ಳಬೇಕು. ಮೇಲ್ನೋಟಕ್ಕೆ ಅವರು ಹತ್ತೊಂಭತ್ತನೇ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದ ಒಬ್ಬ ವ್ಯಕ್ತಿ ಮಾತ್ರ. ಆದರೆ ಅವರ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾತುಗಳನ್ನು ಆಲಿಸಿದರೆ ಮುಂದಿನ ಹತ್ತೊಂಭತ್ತು ಶತಮಾನಗಳವರೆಗೆ ಅವರು ಜೀವಿಸಿಯೇ ಇರುತ್ತಾರೆ. ಡಿಸೆಂಬರ್ 25 ಬಂದಾಗಲೆಲ್ಲ ಒಮ್ಮೆ ಅವರ ಸಂಕಲ್ಪಶಕ್ತಿಯ ಸಾಮರ್ಥ್ಯ ಕಣ್ಮುಂದೆ ಹಾದುಹೋಗಿಬಿಡುತ್ತದೆ. ಅವರ ಮಾರ್ಗದಲ್ಲಿ ಹೆಜ್ಜೆ ಹಾಕುವ ತರುಣರು ಹೆಚ್ಚಾದಷ್ಟು ನಮ್ಮ ಶಕ್ತಿ ವೃದ್ಧಿಯಾಗುತ್ತದೆ. 

ಪ್ರತೀ ಬಾಲಿಗೂ ಸಿಕ್ಸು, ಯಾಕೀ ಹುಚ್ಚು?!!

ಪ್ರತೀ ಬಾಲಿಗೂ ಸಿಕ್ಸು, ಯಾಕೀ ಹುಚ್ಚು?!!

ಹೀರಾ ಬೆನ್. 

ಕಳೆದ ವಾರವಿಡೀ ನೂರು ವರ್ಷ ಕಂಡ ತಾಯಿ ಹೀರಾಬೆನ್‌ರದ್ದೇ ಸುದ್ದಿ. ನರೇಂದ್ರಮೋದಿಯವರ ತಾಯಿಯಾಗಿ ಆಕೆ ಇಡೀ ರಾಷ್ಟ್ರದ ಗೌರವವನ್ನು ತನ್ನದಾಗಿಸಿಕೊಂಡಿದ್ದರು. ಮೋದಿ ದೇಶದ 14ನೇ ಪ್ರಧಾನಿಯಾಗಿ ಜನಮಾನಸದಲ್ಲಿ ಬಲವಾಗಿ ಬೇರೂರಿದ್ದಾರೆ. ಆದರೆ ಇದಕ್ಕೂ ಮೊದಲಿನ ಯಾವ ಪ್ರಧಾನಿಯ ತಾಯಿಯೂ ಜನಮಾನಸವನ್ನು ಇಷ್ಟು ಆವರಿಸಿಕೊಂಡದ್ದು ನನಗಂತೂ ನೆನಪಿಲ್ಲ. ಮೋದಿಯವರನ್ನು ರಾಷ್ಟ್ರದ ಆಸ್ತಿ ಎಂದು ಜನ ಕೊಂಡಾಡುವಾಗಲೆಲ್ಲ ಅವರನ್ನು ಕೊಡುಗೆಯಾಗಿ ಕೊಟ್ಟ ಆ ತಾಯಿಯನ್ನು ಶ್ರದ್ಧೆಯಿಂದ ನೆನಪಿಸಿಕೊಂಡಿದ್ದಾರೆ. ಗಮನಿಸಬೇಕಾದ ಒಂದು ಸಂಗತಿ ಎಂದರೆ ಆಕೆ ಮಾತ್ರ ಎಂದಿಗೂ ತನ್ನ ಮಗ ಪ್ರಧಾನಿ ಎಂಬಂತೆ ಮಾತಾಡಿದ್ದನ್ನು, ಅಹಂಕಾರವನ್ನೇ ಹೊದ್ದುಕೊಂಡು ನಡೆದಾಡಿದ್ದನ್ನು ಯಾರು ನೋಡಿಯೇ ಇಲ್ಲ. ಆಸ್ಪತ್ರೆಗೆ ಹೋಗುವಾಗ, ವೋಟು ಹಾಕಲು ಹೋಗುವಾಗಲೂ ಸಾಮಾನ್ಯರಂತೆ ಆಟೊದಲ್ಲಿ ಕುಳಿತುಕೊಂಡು ಹೋದ ಆಕೆ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗಿ ದೊಡ್ಡವರ ಮನೆಯವರು ಹೇಗಿರಬೇಕು ಎಂಬುದಕ್ಕೆ ಆದರ್ಶವಾಗಿಬಿಟ್ಟರು. ಮಗ ತನ್ನ ತಾಯಿಯನ್ನು ಶ್ರೇಷ್ಠರೆಂದು ಭಾವಿಸಿ ಹೊಗಳುವುದು ಸಹಜವೇ ಮತ್ತು ಕರ್ತವ್ಯವೂ ಕೂಡ. ಆದರೆ ತಾಯಿ ಮಾತ್ರ ಅದನ್ನು ಎಂದಿಗೂ ತಲೆಗೇರಿಸಿಕೊಳ್ಳಬಾರದು ಅಷ್ಟೆ. ಇಲ್ಲವಾದರೆ ಮಗನ ಕಾರ್ಯಕ್ಷೇತ್ರದಲ್ಲಿ ಪದೇ ಪದೇ ಹಸ್ತಕ್ಷೇಪ ನಡೆಸಿ ಆತನ ಬದುಕನ್ನೇ ದುಸ್ತರಗೊಳಿಸುವ ಸಾಧ್ಯತೆಗಳು ಬಹಳ ಇವೆ. ಅದು ಸರಿಯೂ ಹೌದು. ಹೀರಾಬೆನ್‌ರ ಐದು ಜನ ಗಂಡು ಮಕ್ಕಳಲ್ಲಿ ಮೋದಿ ಒಬ್ಬರು. ಇತರ ನಾಲ್ಕು ಜನರೇನೋ ಪ್ರಧಾನಿಯಾಗಲಿಲ್ಲ. ಈತ ತನಗೆ ಸಿಕ್ಕ ಸಂಸ್ಕಾರವನ್ನು, ತನ್ನ ವೈಯಕ್ತಿಕ ಸಾಮರ್ಥ್ಯವನ್ನು ಬಳಸಿಕೊಂಡು ಆ ಹಂತಕ್ಕೇರಿದ. ಹೀಗಿರುವಾಗ ಆಕೆ ಅದರ ಶ್ರೇಯವನ್ನು ತಾನು ಪಡೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅದೇ ವೇಳೆಗೆ ತನ್ನೆಲ್ಲ ಸಾಧನೆಗಳಿಗೂ ಕಾರಣವಾದ ತಾಯಿಗೆ ಈ ಶ್ರೇಯವನ್ನು ಕೊಡದೇ ಹೋದರೆ ಮಗ ಕೃತಘ್ನನಾದಂತೆ. ಈ ನೈತಿಕ ಚೌಕಟ್ಟನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲೇಬೇಕು. ಇತ್ತೀಚೆಗೆ ಖ್ಯಾತ ಲೇಖಕ ರೋಹಿತ್ ಚಕ್ರತೀರ್ಥರ ಸನ್ಮಾನ ಸಮಾರಂಭ ಮುಗಿದಾಗ ಅವರ ತಂದೆ ಸಿಕ್ಕರು. ಅಚ್ಚರಿ ವ್ಯಕ್ತಪಡಿಸಿ ನೀವೇಕೆ ವೇದಿಕೆಯ ಮೇಲೆ ಬರಲಿಲ್ಲವೆಂದು ಕೇಳಿದ್ದಕ್ಕೆ ‘ಅವೆಲ್ಲವನ್ನೂ ರೋಹಿತ್‌ನೇ ಗಳಿಸಿದ್ದು. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ಬಲು ಸಹಜವಾಗಿ ಹೇಳಿದರು. ಮನಮುಟ್ಟಿದ ಮಾತು ಅದು. 

ಸನ್ಯಾಸತ್ವವನ್ನು ಪಡೆದ ವ್ಯಕ್ತಿ ಮತ್ಯಾರಿಗೂ ಪ್ರಣಾಮ ಮಾಡಬೇಕಿಲ್ಲವಂತೆ, ತಾಯಿಗೆ ಮಾತ್ರ. ಮಗ ಸನ್ಯಾಸಿಯಾದನೆಂದರೆ ಆ ತಾಯಿಯ ವ್ಯಕ್ತಿತ್ವವೂ ಕೂಡ ಭಿನ್ನವೇ ಆಗಿಬಿಡುತ್ತದೆ. ಆಕೆ ಆತನಿಂದ ಏನನ್ನೂ ಬಯಸಲಾರಳು. ಸಾಧ್ಯವಾದರೆ ಪಥವಿಮುಖನಾಗದಂತೆ ಆತನನ್ನು ನಿರಂತರವಾಗಿ ಪ್ರೇರೇಪಿಸುವ ಜವಾಬ್ದಾರಿ ಅವಳದ್ದು. ನೇಣಿಗೇರಬೇಕಿದ್ದ ರಾಮ್ ಪ್ರಸಾದ್ ಬಿಸ್ಮಿಲ್‌ನನ್ನು ನೋಡಹೊರಟಿದ್ದ ತಾಯಿ ಕಣ್ಣೀರ್ಗರೆದ ಮಗನನ್ನು ಕಂಡು ಕೆಂಡವಾದಳಂತೆ. ‘ಬ್ರಿಟೀಷರ ವಿರುದ್ಧ ಕಾದಾಡಿ ನೇಣಿಗೇರುವ ಮಗನ ದರ್ಶನ ಪಡೆಯಲು ಹೆಮ್ಮೆಯಿಂದ ಬಂದರೆ ಸಾವಿಗೆ ಹೆದರಿ ಕಣ್ಣೀರ್ಗರೆಯುವ ನಿನ್ನ ನೋಡಬೇಕಾಯ್ತಲ್ಲ. ಇಷ್ಟು ಹೇಡಿ ಎಂದು ಗೊತ್ತಿದ್ದರೆ ಹುಟ್ಟಿದೊಡನೆ ಕೊಂದುಬಿಡುತ್ತಿದ್ದೆ’ ಎಂದಳಂತೆ. ಕಣ್ಣೀರಲ್ಲೇ ಆಕೆಯ ಪಾದ ತೊಳೆದ ಬಿಸ್ಮಿಲ್ ‘ಹೇಡಿತನದ ಕಣ್ಣೀರಲ್ಲ, ದುಃಖದ ಕಣ್ಣೀರು’ ಎಂದು, ‘ನಿನ್ನಂತಹ ತಾಯಂದಿರೇ ಎಲ್ಲರೂ ಆಗಿಬಿಟ್ಟಿದ್ದರೆ, ನನ್ನಂಥ ಸಂತಾನವೇ ಹುಟ್ಟುತ್ತಿತ್ತು. ಬ್ರಿಟೀಷರು ಆಗ ಭಾರತದೊಳಕ್ಕೆ ಕಾಲಿಡುವ ಸಾಹಸ ಮಾಡುತ್ತಿರಲಿಲ್ಲ’ ಎಂದನಂತೆ. ಮೋದಿ ಅನೇಕ ಬಾರಿ ತಮ್ಮ ತಾಯಿಯವರ ಕುರಿತಂತೆ ಹೇಳುತ್ತಾ ಗದ್ಗದಿತರಾದದ್ದಿದೆ. ಆಕೆಯ ಗುಣಗಾನ ಮಾಡುವ ಸಂದರ್ಭವನ್ನು ಅವರೆಂದಿಗೂ ಬಿಟ್ಟುಕೊಟ್ಟಿಲ್ಲ. ಅಧಿಕಾರವನ್ನು ಹಿಡಿಯುವಾಗ ಎಂದೂ ಲಂಚಕ್ಕೆ ಕೈ ಒಡ್ಡಬೇಡ ಎಂದು ತಾಯಿ ಹೇಳಿದ್ದನ್ನು ಅವರು ಅನೇಕ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ವಿದೇಶದ ಸಂದರ್ಶನವೊಂದರಲ್ಲಂತೂ ತನ್ನ ತಾಯಿಯ ಕುರಿತಂತೆ ಹೇಳುತ್ತಾ ಉಮ್ಮಳಿಸಿಬರುವ ದುಃಖವನ್ನು ತಡೆಯಲು ಅವರು ಮಾಡಿದ ಪ್ರಯತ್ನವನ್ನು ಇಂದಿಗೂ ಯೂಟ್ಯೂಬ್‌ಗಳಲ್ಲಿ ನೋಡಬಹುದು. ಹೀಗಾಗಿಯೇ ಅವರನ್ನು ಕಳಕೊಂಡ ದುಃಖ ಮೋದಿಯವರಿಗೆ ಶಾಶ್ವತವಾದ್ದು. ಆದರೆ ಅದನ್ನು ಅವರು ಸ್ವೀಕರಿಸಿದ ರೀತಿ ಇತ್ತಲ್ಲ ಅದು ಮಾತ್ರ ಮಾರ್ಗದರ್ಶಿ. ವಿಚಾರ ತಿಳಿದ ಕೆಲವು ಗಂಟೆಗಳಲ್ಲೇ ಅಂತ್ಯಸಂಸ್ಕಾರವನ್ನೂ ಮಾಡಿಮುಗಿಸಿ, ದೇಶಕ್ಕೊಂದು ಸಮರ್ಥ ಸಂದೇಶ ಕಳಿಸಿದರು. ಯಾವ ಗೌಜು-ಗದ್ದಲವಿರಲಿಲ್ಲ, ಆಡಂಬರವೂ ಇರಲಿಲ್ಲ. ತನ್ನ ತಾಯಿಯ ಶವಯಾತ್ರೆಗೆ ಬಂದು, ತನ್ನನ್ನು ಪ್ರಭಾವಗೊಳಿಸುವ ಯಾವ ಅವಕಾಶವನ್ನೂ ರಾಜಕಾರಣದ ಬಕೆಟ್ಟುಗಳಿಗೆ ಅವರು ಕೊಡಲೇ ಇಲ್ಲ. ಅನೇಕರ ಟ್ವೀಟುಗಳಲ್ಲಿ ಮೋದಿಯವರನ್ನು ಹೊಗಳಿದ್ದಾರಲ್ಲ, ಅದರೊಡನೆ ಅವರೆದುರಿಗೆ ನಿಲ್ಲುವ ಅವಕಾಶವೊಂದು ತಪ್ಪಿಹೋಯ್ತಲ್ಲ ಎಂಬ ಚಿಂತೆಯೂ ಇದ್ದಂತಿತ್ತು! ಹಾಗೆಯೇ ಸುಮ್ಮನೆ ಊಹಿಸಿ ನೋಡಿ, ಹೀರಾಬೆನ್‌ಳ ಅಂತಿಮ ದರ್ಶನಕ್ಕೆ ಅವಕಾಶವಿದ್ದಿದ್ದರೆ ಯಾರ್ಯಾರು ಅಲ್ಲಿ ಹಾಜರಿರುತ್ತಿದ್ದರು ಅಂತ. ನಿಸ್ಸಂಶಯವಾಗಿ ಭಾಜಪದ ರಾಷ್ಟ್ರ, ರಾಜ್ಯ ನಾಯಕರುಗಳಲ್ಲದೇ ಕೊನೆಗೆ ಈ ಬಾರಿಯ ವಿಧಾನಸಭೆಯ ಟಿಕೆಟ್ ಆಕಾಂಕ್ಷಿಯೂ ನಿಂತಿರುತ್ತಿದ್ದ. ಮತ್ತು ಆ ಮಹಾತಾಯಿಯ ಶವದೊಂದಿಗೆ ತನ್ನದೊಂದು ಸೆಲ್ಫಿ ಹಾಕಿಕೊಂಡು ಸಾಧ್ಯವಾದರೆ ಎಂಟ್ಹತ್ತು ಚಿತ್ರಗಳ ಒಂದು ಫೈಲ್ ಮಾಡಿಕೊಂಡು ಸಂಘ ಕಾರ್ಯಾಲಯದೆದುರು ನಿಂತುಬಿಡುತ್ತಿದ್ದ. ಈ ಕಾರಣಕ್ಕಾದರೂ ಟಿಕೆಟು ಕೊಡಲಿ ಅಂತ. ಈ ಹೊಲಸಿಗೆ ಆ ಪುಣ್ಯಾತ್ಮ ಅವಕಾಶವೇ ಕೊಡಲಿಲ್ಲ! 

ಅನೇಕರು ಮೋದಿಯವರ ಸರಳತೆಗೆ ಹೆಮ್ಮೆ ಪಟ್ಟು ಟ್ವೀಟ್ ಮಾಡಿದ್ದನ್ನು ನಾನು ನೋಡಿದೆ. ಅದ್ಯಾವ ಧೈರ್ಯದಿಂದ ಇವರೆಲ್ಲರೂ ಟ್ವೀಟ್ ಮಾಡುತ್ತಾರೋ ದೇವರೇ ಬಲ್ಲ. ಅನೇಕರು ತಮ್ಮ ಮಕ್ಕಳ ಮದುವೆಯನ್ನು ಇಂದ್ರನ ದರ್ಬಾರಿನಂತೆ ಸಿಂಗರಿಸಿದ್ದು ನಮ್ಮ ಕಣ್ಣೆದುರಿಗಿದೆ. ಸ್ವತಃ ಮಕ್ಕಳೇ ತೀರಿಕೊಂಡಾಗ ಇಡಿ ರಾಜ್ಯಕ್ಕೆ ಮುಕ್ತ ಆಹ್ವಾನ ಕೊಟ್ಟಂತೆ ಶವಯಾತ್ರೆ ನಡೆಸಿದ ಉದಾಹರಣೆ ಇದೆ. ಎಕರೆಗಟ್ಟಲೆ ಸರ್ಕಾರಿ ಜಾಗವನ್ನು ಶವಸಂಸ್ಕಾರಕ್ಕಾಗಿ ಮೀಸಲಿಟ್ಟ ಉದಾಹರಣೆಗಳಿವೆ. ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದಾಗ ಮಗಳು ರಕ್ಷಿತಾಳಿಗಾಗಿ ಬೆಂಗಳೂರಿನಲ್ಲಿ ನಡೆಸಿದ ಅದ್ದೂರಿ ವಿವಾಹವನ್ನು ಮರೆಯುವುದುಂಟೇನು? ಜನಾರ್ಧನ ರೆಡ್ಡಿಯವರಂತೂ ವಿವಾಹ ಪಕ್ಕಕ್ಕಿಡಿ ಅದಕ್ಕಾಗಿ ಅವರು ರೂಪಿಸಿದ ಆಹ್ವಾನ ಪತ್ರಿಕೆಯೇ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆಗೆಲ್ಲ ಮೋದಿ ನೋಟು ಅಮಾನ್ಯೀಕರಣ ಮಾಡಿ ಜನಸಾಮಾನ್ಯರ ವೈಭವಕ್ಕೆ ತಾತ್ಕಾಲಿಕವಾಗಿ ಬ್ರೇಕು ಹಾಕಿದ್ದರು. ಕೃಷಿಸಚಿವ ಬಿ.ಸಿ ಪಾಟಿಲ್‌‌ರು, ವಿಜಯನಗರದ ಶಾಸಕ ಆನಂದ್ ಸಿಂಗ್ ಇವರೆಲ್ಲರೂ ತಮ್ಮ ಮಕ್ಕಳ ಮದುವೆ ಮಾಡಿದ ವೈಭವವನ್ನು ನೀವು ಕಲ್ಪನೆ ಕಟ್ಟಿಕೊಂಡೂ ಮುಗಿಸಲಾರಿರಿ. ಪ್ರಹ್ಲಾದ್ ಜೋಷಿಯವರ ಮಗಳ ಮದುವೆಯ ಸಂದರ್ಭದಲ್ಲಂತೂ ಹುಬ್ಬಳ್ಳಿಯ ರಸ್ತೆಗಳು ಸುದೀರ್ಘಕಾಲದ ನಂತರ ರಿಪೇರಿಗೊಂಡವೆಂದು ಜನ ಆಡಿಕೊಳ್ಳುತ್ತಿದ್ದರು. ಅದೆಷ್ಟರಮಟ್ಟಿಗೆ ತಾತ್ಕಾಲಿಕ ರಸ್ತೆಯಾಗಿತ್ತೆಂದರೆ ಮದುವೆಯ ಹೋಮಾಗ್ನಿ ನಂದುವುದರೊಳಗೆ ಅನೇಕ ಕಡೆ ರಸ್ತೆಗಳು ಕಿತ್ತುಹೋಗಿದ್ದವಂತೆ! ಬಿಜೆಪಿಯವರು ಮಾತ್ರವಲ್ಲ, ನಿಖಿಲ್ ಕುಮಾರಸ್ವಾಮಿಯವರ ಮದುವೆಗೆ ಬೆಂಗಳೂರು-ಮೈಸೂರು ರಸ್ತೆಯ 54 ಎಕರೆ ಜಾಗವನ್ನು ಸಮತಟ್ಟುಗೊಳಿಸಲಾಗಿತ್ತಂತೆ. ಉದಾಹರಣೆ ನೀಡುತ್ತಾ ಹೋದರೆ ಪ್ರತಿಯೊಬ್ಬರದ್ದೂ ಒಂದೊಂದು ದೊಡ್ಡ ಕಥೆಯೇ. ಉನ್ನತ ಸ್ಥಾನವನ್ನಲಂಕರಿಸಿ ಸಹಜವಾಗಿಯೇ ಇವೆಲ್ಲವನ್ನೂ ಸ್ವೀಕರಿಸಿದ ಮಂದಿ ಬಲು ವಿರಳ. 

ಹಾಗಂತ ಸಾವಿನಲ್ಲೂ ಈ ರೀತಿಯ ಸಮಾಜ ಪ್ರಜ್ಞೆ ಮೆರೆದವರು ಮೋದಿಯೊಬ್ಬರೇ ಅಲ್ಲ. ಕೇಂದ್ರ ವೈದ್ಯಕೀಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ಅವರ ತಾಯಿ ಏಕಾಕಿ ಕುಸಿದುಬಿದ್ದು ತೀರಿಕೊಂಡಿದ್ದರು. ಆಕೆಯನ್ನು ಆಸ್ಪತ್ರೆಗೊಯ್ದು ಚಿಕಿತ್ಸೆ ಕೊಡಿಸುವ ಪ್ರಯತ್ನಮಾಡಿದ ನಂತರವೂ ಆಕೆಯ ದೇಹತ್ಯಾಗವಾಯ್ತು. ಆಗ ಆಕೆಯ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಿದ ಹೆಗ್ಗಳಿಕೆ ಅವರದ್ದು. ಅವರೇನು ಅದನ್ನು ಸುದ್ದಿಯಾಗಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಅಪರೂಪದ ಜೀವವಲ್ಲವೇನು? 

ಮೋದಿ ಯಾರು ಮಾಡದ್ದೇನೂ ಮಾಡಲಿಲ್ಲ. ಭಾರತದಲ್ಲಿ ರಾಜನ ಕರ್ತವ್ಯ ಪ್ರಜೆಗಳ ಆನಂದಕ್ಕೆ ಭಂಗ ಬರದಂತೆ ನೋಡಿಕೊಳ್ಳುವುದಷ್ಟೆ. ಆತ ಮೂರು ಜನರಿಗೆ ಮಾತ್ರ ತಲೆಬಾಗಲೇಬೇಕು. ಗುರುವಿಗೆ, ತಾಯಿಗೆ ಮತ್ತು ತನ್ನ ಸರ್ವಸ್ವವೂ ಆಗಿರುವ ಪ್ರಜೆಗಳಿಗೆ. ಚಂದ್ರಗುಪ್ತ ಇಡಿಯ ಭಾರತವನ್ನು ಆಳುವಾಗಲೂ ಚಾಣಕ್ಯನ ಪರಮಶಿಷ್ಯನೇ ಆಗಿದ್ದ. ಗುರುಗಳು ಹಾಕಿದ ಗೆರೆಯನ್ನು ಆತ ಎಂದಿಗೂ ದಾಟಿದ್ದೇ ಇಲ್ಲ. ಸನ್ಯಾಸಿಯಾಗಿ ಇಡೀ ದೇಶದಲ್ಲೇ ಅದ್ವೈತದ ಡಿಂಡಿಮ ಬಾರಿಸುತ್ತಾ ಹೊಸ ಪಂಥವನ್ನೇ ಹುಟ್ಟುಹಾಕಿದ ಶಂಕರರು ಅಂತ್ಯಕಾಲದಲ್ಲಿ ತಾಯಿ ನೆನಪಿಸಿಕೊಂಡಳೆಂಬ ಏಕೈಕ ಕಾರಣಕ್ಕೆ ಧಾವಿಸಿ ಬಂದರಲ್ಲದೇ ಎಲ್ಲರನ್ನೂ ಎದುರು ಹಾಕಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆ ನಿಂತರು. ಸ್ವತಃ ಅಮೋಘವರ್ಷ ನೃಪತುಂಗ ಪ್ರಜೆಗಳ ಹಿತಕ್ಕೆ ಮಾರಕನಾಗಬಹುದಾಗಿದ್ದ ತನ್ನ ಮಗನಿಗೆ ಮರಣದಂಡನೆಯ ಶಿಕ್ಷೆ ಕೊಡಲು ಸಜ್ಜಾಗಿದ್ದ. ಮೋದಿ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅವರು ಅನವಶ್ಯಕವಾಗಿ ಯಾರೆದುರೂ ತಲೆ ಬಾಗಲಿಲ್ಲ. ಮೇಲ್ನೋಟಕ್ಕೆ ನೋಡಿದರೆ ಅವರೊಬ್ಬ ಅಹಂಕಾರಿಯಂತೆ ಕಾಣಬಹುದೇನೋ, ಆದರೆ ಆಂತರ್ಯದಲ್ಲಿ ಪ್ರಜೆಗಳ ಹಿತಕ್ಕಾಗಿ ತನ್ನ ತಾನು ಸವೆದುಕೊಳ್ಳುತ್ತಿರುವ ಈ ದೇಶದ ಶ್ರೇಷ್ಠ ರಾಜರುಗಳ ಇಂದಿನ ಪರಂಪರೆಯವರಾಗಿ ನಿಂತಿದ್ದಾರಷ್ಟೆ. ಇಂತಹ ಪರಂಪರೆಗೆ ಭಂಗ ಬರುವಂತೆ ಆಗಿದ್ದು ಬ್ರಿಟೀಷರ ಆಗಮನದ ನಂತರವೇ. ಬ್ರಿಟೀಷರ ಆಡಳಿತವನ್ನು ಇಲ್ಲಿ ಸದೃಢಗೊಳಿಸಿದ ರಾಬರ್ಟ್ ಕ್ಲೈವ್ ಮೊದಲ ಬಾರಿಗೆ ತನ್ನ ದೇಶಕ್ಕೆ ಮರಳುವಾಗ ಸುಮಾರು ಎರಡೂವರೆ ಲಕ್ಷ ಪೌಂಡುಗಳಷ್ಟು ಹಣವನ್ನು ಲೂಟಿಗೈದು ಒಯ್ದಿದ್ದನಂತೆ. ಎರಡನೇ ಬಾರಿಗೆ ಬಂದು ಎರಡೇ ವರ್ಷದಲ್ಲಿ ನಾಲ್ಕು ಲಕ್ಷ ಪೌಂಡುಗಳ ಲೂಟಿಗೈದಿದ್ದ. ಸ್ವತಃ ಮೆಕಾಲೆ ಈ ಎಲ್ಲ ಬ್ರಿಟೀಷ್ ಅಧಿಕಾರಿಗಳ ವೈಭವದ ಬದುಕನ್ನು ನೋಡಿ ಇವರನ್ನು ಬಿಳಿ ನವಾಬರು ಎಂದು ಸಂಬೋಧಿಸುತ್ತಿದ್ದ. ರಾಬರ್ಟ್ ಕ್ಲೈವ್ 1764ರಲ್ಲಿ ನವಾಬರನ್ನು ಮುಂದಿಟ್ಟುಕೊಂಡು ನಾವು ಲೂಟಿ ಮಾಡಬೇಕು. ಆತನೇ ನಮ್ಮ ಮತ್ತು ಇತರೆ ಯುರೋಪಿಯನ್ನರ ನಡುವೆ ಕಾವಲಾಗಿರುತ್ತಾನೆ ಎಂದು ಹೇಳಿದ್ದ. ಅಂದರೆ ನವಾಬರ ಮುಖವಾಡ ತೊಟ್ಟುಕೊಂಡು ಶಾಂತವಾಗಿ ಲೂಟಿಮಾಡುವ ಪರಿ ಇದಷ್ಟೆ. ಇಂದು ಅನೇಕ ನಾಯಕರು ಮೋದಿಯವರನ್ನು ಮುಖವಾಡ ಮಾಡಿಕೊಂಡು ತಾವು ಮಾಡಬಹುದಾದ ಕೆಲಸವನ್ನು ತೆರೆಯ ಹಿಂದೆ ಮಾಡುತ್ತಲೇ ಇದ್ದಾರೆ. ಸರಳತೆ ಇವರ ಪಾಲಿಗೆ ಹೊಗಳಲಿಕ್ಕಷ್ಟೆ, ಆಚರಿಸಲಿಕ್ಕಲ್ಲ. ಬೆಂಗಳೂರಿನ ಲುಲುಮಾಲ್‌ಗೆ ಪ್ರತ್ಯೇಕವಾದ ಅಂಡರ್ಪಾಸ್ ಮಾಡಲಾಗಿದೆ. ಈ ಮಾಲ್ ಯಾರಿಗೆ ಸೇರಿದ್ದು? ಯಾರ ಹಣದಲ್ಲಿ ಇದಕ್ಕೆ ಪ್ರತ್ಯೇಕವಾದ ರಸ್ತೆ ಮಾಡಲಾಯ್ತು? ಈ ಸಂದರ್ಭದಲ್ಲಿ ಜನ ಓಡಾಟಕ್ಕಾಗಿ ಪಟ್ಟ ಹಿಂಸೆಗಳೆಷ್ಟು? ಇವೆಲ್ಲವನ್ನೂ ಆ ರಾಜಕಾರಣಿ ಉತ್ತರಿಸಬಲ್ಲರೇನು? ಅಥವಾ ಬಿಳಿಯ ನವಾಬರಂತೆ ಇವರು ಕರಿಚರ್ಮದ ನವಾಬರಾಗಿಬಿಟ್ಟಿದ್ದಾರೆ! 

ಕರ್ಜನ್ ವೈಸ್ ರಾಯ್ ಆಗಿದ್ದಾಗ ದೆಹಲಿಯಲ್ಲಿ ಆತ ಒಂದು ಭರ್ಜರಿ ದರ್ಬಾರನ್ನು ನಡೆಸಿದ್ದ. ಅಂದಿನ ಇತಿಹಾಸಕಾರರು ಇದರ ಕುರಿತಂತೆ ವಿವರಿಸುತ್ತಾ ಆನೆಗಳು, ಭೇರಿ-ನಗಾರಿಗಳು, ಆಭರಣಗಳನ್ನು ಧರಿಸಿದ ರಾಜರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರೆಂದು ಹೇಳುತ್ತಾರೆ. ಇದರ ಚಿತ್ರೀಕರಣವನ್ನು ಮಾಡಿಕೊಂಡಿದ್ದ ಕರ್ಜನ್ ಭಾರತೀಯರ ದುಡ್ಡಿನಲ್ಲಿ ಚೆನ್ನಾಗಿ ಮೆರೆದುಬಿಟ್ಟ. ಹಾಗೆ ನೋಡಿದರೆ ಆ ಕರ್ಜನ್‌ಗಳು ಇಂದಿಗೂ ನಮ್ಮ ನಡುವೆಯೇ ಇದ್ದಾರೆ. ಅವರ ವೈಭವದ ಮೆರವಣಿಗೆಗಳೆಲ್ಲ ದೇಶದ ಪ್ರಜೆಗಳನ್ನು ಲೂಟಿಮಾಡಿದ ಹಣವೇ. ನಮ್ಮ ರಸ್ತೆಗಳನ್ನು, ಶಾಲಾ-ಕಾಲೇಜುಗಳನ್ನು, ವೈದ್ಯಕೀಯ ವ್ಯವಸ್ಥೆಗಳನ್ನು ನುಂಗಿ ನೀರ್ಗುಡಿದು ಸಂಭ್ರಮಿಸುವ ಮಂದಿ ಮೋದಿಯ ಸರಳತೆಯ ಗುಣಗಾನ ಮಾಡುವಾಗ ಯಾಕೊ ಹೊಟ್ಟೆ ಕಿವುಚಿದಂತಾಗುತ್ತದೆ. 

ಎಲ್ಲಕ್ಕಿಂತಲೂ ಮನಸ್ಸಿಗೆ ಬೇಸರವಾದ ಸಂಗತಿ ಯಾವುದು ಗೊತ್ತೇನು? ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಅನ್ನ, ಆಹಾರ ಸೇವಿಸದೇ ಮಲಗಿಕೊಂಡಿದ್ದಾರೆ. ಅವರನ್ನು ಭೇಟಿ ಮಾಡಲು ಹೋಗುವ ಮಂದಿ ಫೋಟೊ ತೆಗೆದುಕೊಂಡು, ವಿಡಿಯೊ ಚಿತ್ರೀಕರಣ ಮಾಡಿಕೊಂಡು ಹಂಚಿಕೊಳ್ಳುವುದು. ಅದರಲ್ಲೂ ಸ್ವತಃ ಸಿದ್ದೇಶ್ವರ ಸ್ವಾಮಿಯವರಿಗೆ ಮೋದಿಯವರಿಂದ ಕರೆಮಾಡಿಸಿ ಮಾತನಾಡಿಸುವ ಪ್ರಯಾಸ ಮಾಡುವುದಿದೆಯಲ್ಲ ನಿಜಕ್ಕೂ ಘಾಸಿ ಉಂಟುಮಾಡುವಂಥದ್ದು. ಸ್ವತಃ ಮೋದಿಯವರು ಆಶ್ರಮದ ಪ್ರಮುಖರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿಬಿಟ್ಟಿದ್ದರೆ ಅದು ಹೃದಯ ಮುಟ್ಟುವಂತಿರುತ್ತಿತ್ತು. ಅನ್ನ-ಆಹಾರ ಸೇವಿಸದೇ ಹರಿದು ಬರುತ್ತಿರುವ ಭಕ್ತಸಾಗರದ ಕಡೆಗೆ ಕಡೆಗಣ್ಣಿನಿಂದಲೂ ಈಕ್ಷಿಸಲಾಗದ ಸ್ಥಿತಿಯಲ್ಲಿರುವ ಪೂಜ್ಯರಿಗೆ ಕರೆಮಾಡಿಸಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಈ ಪುಣ್ಯಾತ್ಮರಿಗೆ ಏನೆನ್ನಬೇಕು ಹೇಳಿ? ಪ್ರತಿಯೊಂದು ಚೆಂಡಿಗೂ ಸಿಕ್ಸ್ ಹೊಡೆಯಬೇಕೆನ್ನುವ ಕುತ್ಸಿತ ಚಿಂತನೆ ರಾಜಕಾರಣಕ್ಕೆ ಹಬ್ಬಿರುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ಮೋದಿಯವರ ಪುಣ್ಯದ ಫಲವನ್ನು ಚೆನ್ನಾಗಿ ಮೇಯುವ ಈ ಮಂದಿ, ತಮ್ಮ ಪಾಪದ ಫಲವನ್ನು ಮೋದಿಗೆ ಮೆತ್ತಿ ಮೆರೆದರೆ ಅಚ್ಚರಿ ಪಡಬೇಡಿ!

ಸುಳ್ಳು ಹೇಳಿಯಾದರೂ ದ್ವೇಷ ಹಬ್ಬಿಸುವ ಧಾವಂತ!

ಸುಳ್ಳು ಹೇಳಿಯಾದರೂ ದ್ವೇಷ ಹಬ್ಬಿಸುವ ಧಾವಂತ!

ಕೆಲವು ದಿನಗಳ ಹಿಂದೆ ವಾಟ್ಸಪ್ ನಲ್ಲಿ ಬಂದ ಸಂಘದ ಎರಡನೇ ಸರಸಂಘ ಚಾಲಕ ಗೊಳ್ವಲ್ಕರ್‌ರ ಕುರಿತಂತಹ ಒಂದು ಹೇಳಿಕೆಯನ್ನು ಸಂತರೊಬ್ಬರು ಕಳಿಸಿ ಇದು ಸತ್ಯವೇ ಎಂದು ಕೇಳಿದ್ದರು. ಬ್ರಾಹ್ಮಣರನ್ನು ಹೊಗಳುತ್ತಾ ಇತರೆ ಜಾತಿಯವರನ್ನು ಅತ್ಯಂತ ತುಚ್ಛವಾಗಿ ಕಾಣುವಂತಹ ಹೇಳಿಕೆ ಅದು. ಮೇಲ್ನೋಟಕ್ಕೆ ಗೊಳ್ವಲ್ಕರ್‌ರು ಹಾಗೆ ಹೇಳುವುದು ಸಾಧ್ಯವೇ ಇಲ್ಲವೆಂದೆನಿಸಿದರೂ ಅವರ ಚಿಂತನಗಂಗಾ ಪುಸ್ತಕವನ್ನು ಜಾಲಾಡಿ ನೋಡಿದಾಗಲೂ ದೂರ-ದೂರಕ್ಕೂ ಇಂತಹ ಹೇಳಿಕೆಗಳು ಕಂಡು ಬರಲಿಲ್ಲ. ದೇಶ ಗುರೂಜಿ ಎಂದೇ ಗೌರವಿಸಿದ ಗೊಳ್ವಲ್ಕರ್‌ರು ಬದುಕಿದ ರೀತಿ-ನೀತಿಯನ್ನು ಕಂಡವರೆಂದೂ ಅವರು ಹೀಗೆ ಹೇಳಿರಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಪ್ರತಿಯಾಗಿ ಲಾಹೋರ್ ಪ್ರವಾಸದಲ್ಲಿದ್ದಾಗ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಅವರು ಮಾತನಾಡುವ ಅಗತ್ಯವಿಲ್ಲದಿದ್ದರೂ ಅವರ ದಾಡಿಯನ್ನು, ವ್ಯಕ್ತಿತ್ವವನ್ನೂ ಕಂಡ ಅಲ್ಲಿನ ಮುಖ್ಯೋಪಾಧ್ಯಾಯರು ಮಾತನಾಡುವಂತೆ ಒತ್ತಡ ಹಾಕಿದರು. ಧರ್ಮದ  ಬಗ್ಗೆ ಇವರು ತುಂಬ ತಿಳಿದುಕೊಂಡಿರಬಹುದು ಎಂಬುದು ಅವರ ಸಹಜ ಅಭಿಮತ. ಗುರೂಜಿ 15 ನಿಮಿಷಗಳಲ್ಲಿ ವಿಸ್ತಾರವಾಗಿ ಧರ್ಮದ ಪರಿಕಲ್ಪನೆಯನ್ನು ಮುಂದಿಟ್ಟು ಇಂದಿನ ಹಿಂದೂ ಧರ್ಮದ ಅಗತ್ಯತೆಯನ್ನು ಸುಂದರವಾಗಿ ಕಟ್ಟಿಕೊಟ್ಟರು. ‘ನಾವಾರೂ ಬ್ರಾಹ್ಮಣರಲ್ಲ. ಬದಲಾಗಿ ಚಾಂಡಾಲರು. ಕಾರಣವೇನು ಗೊತ್ತೇ? ನಮ್ಮ ಧರ್ಮಶಾಸ್ತ್ರಗಳಲ್ಲಿ ಮೂರು ದಿನಗಳ ಕಾಲ ಮ್ಲೇಚ್ಛರ ಮನೆಯಲ್ಲಿದ್ದವನು ಚಾಂಡಾಲನಾಗುತ್ತಾನೆ ಎಂದು ಹೇಳಲಾಗಿದೆ’ ಎಂದರು. ಮ್ಲೇಚ್ಛರ ಆಳ್ವಿಕೆಯಲ್ಲಿ ಕೆಲವು ಕಾಲ ಕಳೆದು ಈಗ ಬ್ರಾಹ್ಮಣತ್ವದ ಹೆಸರಿನಲ್ಲಿ ತಮ್ಮ ಸರ್ವೋತ್ಕೃಷ್ಟತೆಯನ್ನು ಸಾರುವುದು ಅವರ ಮನಸ್ಸಿಗೆ ಒಪ್ಪುವ ಸಂಗತಿಯಾಗಿರಲಿಲ್ಲ. ಹೀಗಾಗಿಯೇ ಸಂಪ್ರದಾಯವಾದಿಗಳ ಮುಂದೆ ಹೀಗೆ ತಮ್ಮ ಅನಿಸಿಕೆಯನ್ನು ಅವರು ಬಿಚ್ಚಿಟ್ಟಿದ್ದು. ಮಾತಿನ ಕೊನೆಯಲ್ಲಿ ನಾವೆಲ್ಲರೂ ಈಗ ಕ್ಷತ್ರಿಯ ಧರ್ಮವನ್ನು ಪಾಲಿಸಬೇಕಾಗಿದೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. 

ಸಂಘದ ಅಂದಿನ ನಾಯಕರ ವೈಶಿಷ್ಟ್ಯತೆಯೇ ಅದು. ಡಾಕ್ಟರ್‌ಜಿಯವರಿರಲಿ, ಗುರೂಜಿಯವರೇ ಇರಲಿ ಮಾಡಬೇಕಾದ ಕೆಲಸಗಳ, ಸಾಗಬೇಕಾದ ಹಾದಿಯ ನಿಚ್ಚಳ ಅರಿವು ಅವರಿಗಿತ್ತು. ಅನಾರೋಗ್ಯಪೀಡಿತರಾಗಿದ್ದ ಡಾಕ್ಟರ್‌ಜಿಯವರನ್ನು ಗುರೂಜಿ ನೋಡಿಕೊಳ್ಳುವ ಸಂದರ್ಭ ಬಂದಿತ್ತಲ್ಲ ಆಗ ದೈಹಿಕ ಪ್ರಜ್ಞೆ ಕಳೆದುಕೊಂಡಿರುವ ಹೊತ್ತಿನಲ್ಲೂ ಡಾಕ್ಟರ್‌ಜಿ ಒಮ್ಮೆಯಾದರೂ ಹಾಂ! ಹೂಂ! ಎಂದು ನರಳಲಿಲ್ಲ. ಅವರ ಉದ್ಗಾರಗಳು ಸಂಘ, ಶಾಖೆ, ಸ್ವಯಂಸೇವಕರು, ವ್ಯವಸ್ಥೆ, ಕಾರ್ಯಕ್ರಮಕ್ಕೆ ತಡವಾಯ್ತು, ಕಾರ್ಯ ಇನ್ನೂ ಅಪೇಕ್ಷೆಯಂತೆ ಬೆಳೆಯಲಿಲ್ಲ, ಸ್ವರಾಜ್ಯ ಪ್ರಾಪ್ತಿ ತಡವಾಗುತ್ತಿರುವುದಕ್ಕೆ ಮನದ ತಲ್ಲಣ ಇವುಗಳ ಕುರಿತಂತೆ ಇರುತ್ತಿತ್ತು. ಗುರೂಜಿಯವರೇನು ಕಡಿಮೆಯಲ್ಲ. ಒಂದೆಡೆ ತಮಗೆ ಆದರ್ಶದ ಮಾರ್ಗವನ್ನು ಹಾಕಿಕೊಟ್ಟ ಡಾಕ್ಟರ್‌ಜಿಯವರು ಈ ವ್ಯಕ್ತಿತ್ವವನ್ನು ಪ್ರದರ್ಶಿಸಿದವರಾದರೆ, ಮತ್ತೊಂದೆಡೆ ಅವರಿಗೆ ದೀಕ್ಷೆ ಕೊಟ್ಟ ಅಖಂಡಾನಂದರ ಬದುಕು ‘ನಾನಲ್ಲ, ನೀನು’ ಎಂಬ ಶ್ರೇಷ್ಠ ಆದರ್ಶದ ಮೇಲೆ ನಿಂತಿದ್ದರಿಂದ ಅವರೂ ಕೂಡ ಹೀಗೆ ಇತರರಿಗಾಗಿಯೇ ಬದುಕುವ ಚಿಂತನೆಯನ್ನು ರೂಢಿಸಿಕೊಂಡುಬಿಟ್ಟಿದ್ದರು. ಡಾಕ್ಟರ್‌ಜಿ ಅನಾರೋಗ್ಯ ಪೀಡಿತರಾಗಿ ಸಾವು-ಬದುಕಿನ ನಡುವೆ ತೀವ್ರ ಹೋರಾಟ ನಡೆಸುತ್ತಿರುವಾಗ ಸರಕಾರ್ಯವಾಹ ಜವಾಬ್ದಾರಿಯನ್ನು ಹೊತ್ತಿದ್ದ ಗುರೂಜಿಯವರೇ ಎಲ್ಲರಿಗೂ ಮಾಹಿತಿ ಮುಟ್ಟಿಸಬೇಕಾದ ಮತ್ತು ಬಂದ ಪತ್ರಗಳಿಗೆ ಉತ್ತರಿಸಬೇಕಾದ ಜವಾಬ್ದಾರಿ ಹೊತ್ತಿದ್ದರು. ಸಾಧಾರಣವಾಗಿ ಇಂತಹ ಸಂದರ್ಭದಲ್ಲಿ ನೋವು-ದುಃಖವನ್ನು ವ್ಯಕ್ತಪಡಿಸುವುದು ಸಹಜ. ಆದರೆ ಗುರೂಜಿ ಹಾಗಲ್ಲ. ಪ್ರತಿಯೊಬ್ಬರಿಗೂ ಡಾಕ್ಟರ್‌ಜಿಯವರ ಸಂಬಂಧ ಹೇಗಿತ್ತು ಎಂಬುದನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಆತ್ಮಸಮರ್ಪಣೆಯ ಪ್ರೇರಣೆಯನ್ನೂ ಹೆಚ್ಚಿನ ಸಹಕಾರಕ್ಕಾಗಿ ವಿನಂತಿಯನ್ನೂ ಮಾಡುತ್ತಾ ಪತ್ರ ಬರೆಯುತ್ತಿದ್ದರು. ಹಿರಿಯ ಕಾರ್ಯಕರ್ತರೊಬ್ಬರಿಗೆ ಬರೆದ ಪತ್ರದಲ್ಲಿ ‘ನಮ್ಮೀ ಸಂಘಕಾರ್ಯವನ್ನು ಇನ್ನಷ್ಟು ಬೆಳೆಸುವುದು ಪರಮಪೂಜನೀಯ ಡಾಕ್ಟರ್‌ಜಿಯವರಿಗೆ ನಾವು ಸಲ್ಲಿಸಬಹುದಾದ ಶಾಶ್ವತವಾದ ಸ್ಮಾರಕವಾಗಲಿದೆ. ಈಗ ಇನ್ನುಳಿದಿರುವುದು ಆ ಕೆಲಸ ಮಾತ್ರ. ಅವರು ಬದುಕಿದ್ದಾಗ ನಾವು ಸಾಧಿಸಲಾಗದಿದ್ದ ಕೆಲಸವನ್ನು ಈಗ ಅವರ ಪುಣ್ಯಸ್ಮರಣೆಯನ್ನು ಸಾಕ್ಷಿಯಾಗಿ ಇರಿಸಿಕೊಂಡು ನಮ್ಮ ಕರ್ತೃತ್ವ ಮತ್ತು ತ್ಯಾಗದಿಂದ ಪೂರ್ಣಗೊಳಿಸುವ ಪ್ರತಿಜ್ಞೆ ಧರಿಸಿ ಅದರಲ್ಲಿ ಸಫಲರಾಗೋಣ. ಎಲ್ಲರನ್ನೂ ಉತ್ಸಾಹ ಸಹಿತ ಮತ್ತು ಸ್ಪರ್ಧಾತ್ಮಕ ಮನೋಭಾವದಿಂದ ಕಾರ್ಯಕ್ಷೇತ್ರದಲ್ಲಿ ದುಡಿಯಲು ಪ್ರೇರೇಪಿಸೋಣ’ ಎಂದಿದ್ದರು. ಡಾಕ್ಟರ್‌ಜಿಯ ನಿಧನದ ನಂತರ ಅವರು ಶಾಖೆಗಳಿಗೆ ಕಳಿಸಿದ ಸುತ್ತೋಲೆಯಲ್ಲಿ ಮೊದಲ ಪ್ಯಾರಾದಲ್ಲಿ ಸಾವಿಗೆ ಸಂಬಂಧ ಮಾಹಿತಿಯನ್ನು ಕೊಟ್ಟರೆ ಎರಡನೇ ಪ್ಯಾರಾದಲ್ಲಿ ಸಾಂತ್ವನದ ಮಾತುಗಳಿದ್ದವು. ಮೂರನೇ ಪ್ಯಾರಾದಲ್ಲಿ 13ನೆಯ ದಿನದ ಆಚರಣೆಯನ್ನು ಹೇಗೆ ಮಾಡಬೇಕು ಎಂಬುದರ ವಿವರವಲ್ಲದೇ ಇಡಿಯ ಸಮಾಜಕ್ಕೆ ಅದೊಂದು ಹೇಗೆ ಆದರ್ಶವಾಗಬೇಕು ಎಂಬುದರ ಕುರಿತಂತೆ ಸೂಕ್ತ ಸಂದೇಶಗಳೂ ಇದ್ದವು. ಕೆಲಸವನ್ನು ಬಿಟ್ಟು ಮತ್ತೊಂದನ್ನು ಅವರು ಯೋಚಿಸಿದ್ದೇ ಇಲ್ಲ. 

ಈ ಒಬ್ಬ ವ್ಯಕ್ತಿ ಇಷ್ಟು ಕರ್ಮಠರಾದದ್ದಾದರೂ ಹೇಗೆ? ಅದು ಅವರ ಬಾಲ್ಯದಲ್ಲೇ ಅಡಗಿರುವಂಥದ್ದು. ಅವರಿಗೆ ಬಾಲ್ಯದಲ್ಲಿ ಸಿಕ್ಕ ಸಂಸ್ಕಾರ, ಯೌವ್ವನದಲ್ಲಿ ತಮ್ಮ ಬದುಕಿನ ಉದ್ದೇಶವನ್ನು ಅವರು ಗುರುತಿಸಿಕೊಂಡ ರೀತಿ, ಮತ್ತು ವೈರಾಗ್ಯದಲ್ಲಿ ಅವರಿಗಿದ್ದ ತುಡಿತ ಇವೆಲ್ಲವೂ ಅವರನ್ನು ಸಾಕ್ಷಾತ್ ಗುರೂಜಿಯಾಗಿಸಿತು. ತಾಯಿ ಮಗನಿಗೆ ಒತ್ತಾಯ ಹಾಕಿ ಮದುವೆಯಾಗಲೇಬೇಕೆಂದು ಹಠ ಹಿಡಿದು, ತಾನೇ ಹುಡುಗಿಯೊಂದನ್ನು ನೋಡಿ ಸಂಬಂಧಿಕರೊಡನೆ ಪ್ರೀತಿಯ ಮಧುವನ್ನು ಕಳಿಸಿದರು. ಮರಳಿ ಬಂದೊಡನೆ ಸಹಜವಾಗಿ ಕಾತರತೆಯಿಂದ ಹುಡುಗಿಯನ್ನು ನೋಡಿದೆಯಾ ಎಂದು ಕೇಳಿದರೆ, ಆಳೆತ್ತರ ಬೆಳೆದಿದ್ದ ಈ ಹುಡುಗ ‘ಇಲ್ಲವಲ್ಲ, ನಾನು ಕಣ್ಣುಮುಚ್ಚಿಕೊಂಡಿದ್ದೆ’ ಎಂದುಬಿಟ್ಟರು. ಆನಂತರ ತಾಯಿ ಈ ಕುರಿತಂತೆ ಮಾತು ಕಡಿಮೆ ಮಾಡಿದರು. ಒಮ್ಮೆ ಮಾತ್ರ ಆತ ಮದುವೆಯಾಗದಿದ್ದರೆ ವಂಶ ಮುಂದುವರೆಯುವುದಿಲ್ಲ ಎಂಬ ತಾಯಿಯ ಹೇಳಿಕೆಗೆ ‘ವಂಶ ಕೊನೆಗೊಳ್ಳುವ ಬಗ್ಗೆ ನನಗೆ ಹೇಳಬೇಡಿ. ನಮ್ಮ ಸಮಾಜವನ್ನು ಸಕ್ಷಮ, ಸುಭದ್ರವಾಗಿ ಉಳಿಸಬೇಕಾದ್ದಲ್ಲಿ ನಮ್ಮ ವಂಶವಷ್ಟೇ ಅಲ್ಲ, ಇನ್ನೂ ಅನೇಕ ವಂಶಗಳು ಕೊನೆಗೊಳ್ಳುವುದು ಅನಿವಾರ್ಯವಾಗಬಹುದು. ನನಗದರಿಂದ ಕೂದಲೆಳೆಯಷ್ಟೂ ದುಃಖವಾಗದು’ ಎಂದುಬಿಟ್ಟರು. ಸಹಜವಾಗಿಯೇ ಅವರ ಈ ತುಡಿತಕ್ಕೆ ವಿವೇಕಾನಂದರ ಚಿಂತನೆಯ ಪ್ರಭಾವವಿತ್ತು. ಅವರು ರಾಮಕೃಷ್ಣಾಶ್ರಮದೆಡೆಗೆ ವಿಶೇಷವಾಗಿ ಸೆಳೆಯಲ್ಪಟ್ಟು ಅಲ್ಲಿನ ಅಧ್ಯಕ್ಷರಾಗಿದ್ದ ಸ್ವಾಮಿ ಅಖಂಡಾನಂದಜಿಯವರ ಶಿಷ್ಯತ್ವ ಬಯಸಿ ಸಾರಗಾಛಿಗೆ ಹೋದರು. ಸ್ವಾಮಿ ಅಖಂಡಾನಂದರು ವಿವೇಕಾನಂದರ ಸೋದರ ಸನ್ಯಾಸಿಯಾಗಿದ್ದು ಅಖಂಡವಾಗಿ ಕರ್ಮಮಾರ್ಗದಲ್ಲಿ ದೇಹವನ್ನು ಸವೆಸಿದವರು. ಇಂಥವರ ಶಿಷ್ಯತ್ವವನ್ನು ಪಡೆದುಕೊಂಡ ಮಾಧವರಾವ್ ಗೊಳ್ವಲ್ಕರ್‌ರು ಗುರುಗಳ ಸೇವೆಯನ್ನು ಮನತುಂಬುವಷ್ಟು ಮಾಡಿದರು. ದೇಹ ತೊರೆಯುವ ಮುನ್ನ ಗುರುಗಳು ಈ ತರುಣನನ್ನು ಬಳಿಗೆ ಕರೆದು ‘ನನ್ನಲ್ಲಿರುವ ಎಲ್ಲ ಒಳ್ಳೆಯ ಸಂಗತಿಗಳನ್ನು ನಿನಗೆ ನೀಡುತ್ತಿರುವೆ. ನನ್ನ ಹಿತಕ್ಕಾಗಿ ಇರುವುದೆಲ್ಲವೂ ನಿನಗೆ ಲಭಿಸಲಿ. ನಿನ್ನಲ್ಲಿರುವ ಎಲ್ಲ ಕೆಟ್ಟ ಸಂಗತಿಗಳನ್ನು ನನಗೆ ಕೊಡು. ನಿನ್ನ ಸ್ವಂತದ ಅಹಿತಕಾರಿ ಸಂಗತಿಗಳನ್ನು ನನಗೆ ಒಪ್ಪಿಸು’ ಎಂದು ಹೇಳಿದರಲ್ಲದೇ ‘ನಿನಗೆ ಆತ್ಮದರ್ಶನವಾಗಲಿ. ಇದೇ ರಾಮಕೃಷ್ಣರ ಬಳಿ ನಾನು ಸಲ್ಲಿಸುವ ಪ್ರಾರ್ಥನೆ’ ಎಂದುಬಿಟ್ಟರು. ಗುರುವಿನ ಮಹಾಸಮಾಧಿಯ ನಂತರ ಅವರ ನೆನಪಿನ ಕೆಲವು ವಸ್ತುಗಳೊಂದಿಗೆ ಅಲ್ಲಿಂದ ಮರಳಿ ಬಂದ ತರುಣನ ಸಾಮರ್ಥ್ಯವನ್ನು ಗುರುತಿಸಿದ್ದು ಡಾಕ್ಟರ್ ಜಿ. ಮುಂದೊಮ್ಮೆ ಗುರೂಜಿಯವರೇ ಹೇಳಿದ್ದುಂಟು ‘ನಾನೊಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಡಾಕ್ಟರ್ ಜಿ ನನ್ನನ್ನು ನೋಡಿ ಹತ್ತಿರ ಬಂದು ಪರಿಚಯ ಮಾಡಿಕೊಂಡರು ಮತ್ತು ಬೆಕ್ಕು ಇಲಿಯನ್ನು ಹಿಡಿದಂತೆ ನನ್ನನ್ನೂ ಹಿಡಿದುಕೊಂಡರು’ ಎಂದು. ಮಾತಿನಲ್ಲಿ ಹಾಸ್ಯದ ಲೇಪವಿದ್ದರೂ ಡಾಕ್ಟರ್‌ಜಿಯವರ ಗುಣಗ್ರಾಹಿತನದ ನಯವಾದ ವರ್ಣನೆಯೇ ಆಗಿತ್ತು ಅದು. ತಮ್ಮ ನಿಷ್ಕಾಮ ಕರ್ಮದಿಂದಲೇ ಡಾಕ್ಟರ್ಜಿಯವರ ಮನಸ್ಸನ್ನು ಸೆಳೆದುಕೊಂಡ ಈ ತರುಣ ಡಾಕ್ಟರ್‌ಜಿಯವರ ನಂತರದ ಸ್ಥಾನಕ್ಕೆ ಸಹಜವಾದ ಆಯ್ಕೆಯಾಗಿ ಹೊರಹೊಮ್ಮಿದರು. ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಡಾಕ್ಟರ್‌ಜಿ ಗೊಳ್ವಲ್ಕರ್‌ರನ್ನು ಕರೆದು ‘ನನ್ನ ನಂತರದ ಜವಾಬ್ದಾರಿ ನಿಮ್ಮದ್ದೇ ಎಂದಾಗ ಅವರು ಸ್ಥಿತಪ್ರಜ್ಞರಂತೆ ಅದನ್ನು ಸ್ವೀಕರಿಸಿದ್ದರು. ಮುಂದೆ ಸರಸಂಘಚಾಲಕರಾಗಿ ಮೊದಲ ಭಾಷಣ ಮಾಡುವಾಗ ‘ನನ್ನ ಊಹೆಗೂ ಮೀರಿದ್ದ ಮಹತ್ವವುಳ್ಳ ಹೊಣೆಯನ್ನು ಡಾಕ್ಟರ್ ಜಿ ನನಗೆ ಒಪ್ಪಿಸಿದ್ದಾರೆ. ಆದರೆ ಇದು ವಿಕ್ರಮಾದಿತ್ಯನ ಸಿಂಹಾಸನ. ಇದರ ಮೇಲೆ ಕೂರುವ ವ್ಯಕ್ತಿ ಕುರಿ ಮೇಯಿಸುವ ಬಾಲಕನೇ ಆದರೂ ಸರಿಯಾದ ತೀರ್ಮಾನವನ್ನೇ ನೀಡುತ್ತಾನೆ. ಅಂತೆಯೇ ಡಾಕ್ಟರ್‌ಜಿಯವರು ನನ್ನ ಮುಖದಿಂದಲೂ ಸರಿಯಾದ ಸಂಗತಿಯನ್ನೇ ಹೇಳಿಸುವವರಿದ್ದಾರೆ. ಅವರ ಪುಣ್ಯದ ಫಲವಾಗಿ ನನ್ನ ಕೈಗಳಿಂದಲೂ ಯೋಗ್ಯವಾದ ಕೆಲಸಗಳೇ ಆದಾವು ಎಂಬ ಬಗ್ಗೆ ಸಂದೇಹವೆ ಬೇಡ’ ಎಂದಿದ್ದರು. 

ಅನೇಕ ಬಾರಿ ನನಗನಿಸುವುದುಂಟು. ಡಾಕ್ಟರ್ಜಿಯವರು ಸಂಘವನ್ನು ನಿರ್ಮಾಣ ಮಾಡಿ ಅದಕ್ಕೊಂದು ತಾತ್ವಿಕ ನೆಲೆಕಟ್ಟನ್ನು ಒದಗಿಸಿಕೊಟ್ಟರೆ ಗುರೂಜಿಯವರು ಸಂಘಟನೆ ದೀರ್ಘವಾಗಿ ಇರಲು ಬೇಕಾದ ಆಧ್ಯಾತ್ಮಿಕ ಆಳವನ್ನು ಒದಗಿಸಿಕೊಟ್ಟರು. ಆನಂತರದ ದಿನಗಳಲ್ಲಿ ಈ ಅಡಿಪಾಯದ ಮೇಲೆ ಬೆಳೆದುಬಂದದ್ದು ಸಂಘ. ನೂರನೇ ವರ್ಷದ ಆಚರಣೆಯ ಹೊಸ್ತಿಲಲ್ಲಿ ಇವೆಲ್ಲವೂ ಸ್ಮರಿಸಿಕೊಳ್ಳಲು ಯೋಗ್ಯವಾದ್ದೇ. ರಂಗಾಹರಿಯವರು ಹಿಂದಿಯಲ್ಲಿ ಬರೆದ ರಾಷ್ಟ್ರ ತಪಸ್ವಿ ಶ್ರೀ ಗುರೂಜಿ ಎನ್ನುವ ಕೃತಿಯನ್ನು ಸಂಘದ ಪ್ರಚಾರಕರೇ ಆಗಿದ್ದ ಚಂದ್ರಶೇಖರ್ ಭಂಡಾರಿಯವರು ಕನ್ನಡಕ್ಕೆ ತಂದಿದ್ದಾರೆ. ಸಾಹಿತ್ಯ ಸಿಂಧು ಪ್ರಕಾಶಿಸಿರುವ ಈ ಕೃತಿ ಸಂಘವನ್ನು ಪ್ರೀತಿಸುವವರು ಮತ್ತು ವಿರೋಧಿಸುವವರೂ ಕೂಡ ಓದಲೇಬೇಕಾದಂಥದ್ದು. ಅನವಶ್ಯಕವಾಗಿ ಗುರೂಜಿಯವರ ಮೇಲೆ ಆಪಾದನೆಗಳನ್ನು ಮಾಡುವ, ಸುಳ್ಳು ಹೇಳುವ ಮಂದಿಯನ್ನು ಕಂಡಾಗ ಪಿಚ್ಚೆನಿಸುತ್ತದೆ. ಗುರೂಜಿಯವರ ವ್ಯಕ್ತಿತ್ವವನ್ನು ಒಮ್ಮೆ ಅರಿತರೆ ಇನ್ನು ಇಂತಹ ಮಾತುಗಳನ್ನಾಡುವ ಧೈರ್ಯ ಬರಲಾರದು. ಅನುವಾದಕರಾದ ಚಂದ್ರಶೇಖರ್ ಭಂಡಾರಿಯವರು ಅನೇಕ ಸ್ವತಂತ್ರ ಕೃತಿಗಳನ್ನು ರಚಿಸಿದ್ದಾರೆ, ಅನುವಾದಗಳನ್ನು ಮಾಡಿದ್ದಾರೆ. ಆದರೆ ಈ ಕೃತಿ ಅವರ ಬದುಕಿನ ಕೊನೆಯ ಕೃತಿ. ಇತ್ತೀಚೆಗಷ್ಟೆ ದೇಹತ್ಯಾಗ ಮಾಡಿದ ಅವರು ಕನ್ನಡಿಗರಿಗೆ ಹಬ್ಬದ ಊಟವನ್ನೇ ಉಣಬಡಿಸಿದ್ದಾರೆ. ಗುರೂಜಿಯವರ ಕುರಿತಂತೆ ಓದುತ್ತಾ ಹೋದಂತೆಲ್ಲ ಒಂದು ಸಂಘಟನೆ ಆಳಕ್ಕೆ ಬೇರುಬಿಡಲು ಇರಬಹುದಾಗಿರುವ ಮಹತ್ವದ ಸಂಗತಿಗಳೇನೆಂಬುದು ಅರಿವಾಗುತ್ತದೆ. ಪ್ರತಿಯೊಬ್ಬ ಸಂಘಟನಕಾರನೂ ಈ ತ್ಯಾಗ ಮತ್ತು ಸೇವೆಯ ಮಹತ್ವವನ್ನು ರೂಢಿಸಿಕೊಂಡಾಗ ಮಾತ್ರ ಆತ ಕಟ್ಟಿದ ಸಂಘಟನೆ ನಿಸ್ವಾರ್ಥವಾಗಿ ಸುದೀರ್ಘಕಾಲ ಕೆಲಸ ಮಾಡಬಲ್ಲದು. ಆ ಕಾರಣಕ್ಕೂ ಇದೊಂದು ಅಧ್ಯಯನ ಯೋಗ್ಯ ಕೃತಿ. 

ಗುರೂಜಿಯವರಂತೂ ಬದುಕಿನುದ್ದಕ್ಕೂ ಒಮ್ಮೆಯೂ ಸುಮ್ಮನೆ ಕುಳಿತವರಲ್ಲ. 33 ವರ್ಷಗಳಲ್ಲಿ ಸುಮಾರು 60 ಬಾರಿ ಅವಿಶ್ರಾಂತವಾಗಿ ದಣಿವಿಲ್ಲದಂತೆ ಅವರು ದೇಶ ಸುತ್ತಿದ್ದಾರೆ. ಅವರೇ ಹೇಳುತ್ತಿದ್ದಂತೆ ‘ಮಲಗಿದ್ದಾಗ ಕಲಿ, ಎಚ್ಚರಗೊಂಡಾಗ ದ್ವಾಪರ, ಎದ್ದುನಿಂತರೆ ತ್ರೇತ, ನಡೆದರೆ ಕೃತ. ಯುಗಗಳು ಉರುಳುವುದು ಹೀಗೆಯೇ’.ಈ ಹಿನ್ನೆಲೆಯಲ್ಲೇ ಅವರು ಬದುಕಿದ ಕಾಲ ಬಹುತೇಕ ಕೃತಯುಗದ್ದೇ ಆಗಿತ್ತೆನಿಸುತ್ತದೆ. ತಮಾಷೆಗೆ ‘ನನ್ನ ಮನೆ ರೈಲುಗಾಡಿ’ ಎಂದು ಅವರು ಹೇಳುತ್ತಿದ್ದರಾದರೂ ಅದು ಸತ್ಯವೇ ಆಗಿತ್ತು. ಸಂಘದ ಪ್ರಚಾರಕರು ಮನೆಗಳಲ್ಲೇ ಉಳಿದುಕೊಳ್ಳುವ ಪಾರಿವಾರಿಕ ರೀತಿಯ ಕಾರ್ಯಶೈಲಿಯನ್ನೇ ಡಾಕ್ಟರ್‌ಜಿಯವರಿಂದ ಬಳುವಳಿಯಾಗಿ ಪಡೆದ ಗುರೂಜಿಯವರು ಅದನ್ನು ಇನ್ನಷ್ಟು ವ್ಯವಸ್ಥಿತ ಮತ್ತು ವಿಸ್ತೃತಗೊಳಿಸಿದರು. ವಿಮಾನದಿಂದ ಮೊದಲುಗೊಂಡು ಸೈಕಲ್, ಎತ್ತಿನಬಂಡಿಯವರೆಗೆ ಎಲ್ಲ ವಾಹನಗಳಲ್ಲೂ ಪಯಣಿಸಿದ ಅವರು ಅಂದಿನ ದಿನಗಳ ರಿಕ್ಷಾದಲ್ಲಿ ಮಾತ್ರ ಓಡಾಡುತ್ತಿರಲಿಲ್ಲ. ಅದನ್ನು ಮನುಷ್ಯರು ಎಳೆಯುತ್ತಾರೆ ಎಂಬ ಒಂದೇ ಕಾರಣಕ್ಕೆ. ಒಮ್ಮೆ ಹೀಗೆ ರಿಕ್ಷಾವೊಂದನ್ನು ತರಿಸಿಬಿಟ್ಟಿದ್ದಾಗ ಗುರೂಜಿ ನಾಲ್ಕು ಕಿ.ಮೀ ನಡೆದು ಹೊರಟರೆ ಹೊರತು ಎಂದಿಗೂ ರಿಕ್ಷಾ ಏರಲಿಲ್ಲ. 

ಮಿತ್ರರೊಬ್ಬರು ಪರಾನ್ನ ಊಟ ಮಾಡುವುದಿಲ್ಲವೆಂದಾಗ ಗುರೂಜಿ ನಗುತ್ತಾ ‘ನಾನು ಕೂಡ ಪರಾನ್ನ ತಿನ್ನುವುದಿಲ್ಲ’ ಎಂದುಬಿಟ್ಟರಂತೆ. ಉಳಿದವರೆಲ್ಲ ಹುಬ್ಬೇರಿಸಿ ಕಾರ್ಯಕರ್ತರ ಮನೆಯಲ್ಲಿ ಉಣ್ಣುವಿರಲ್ಲ, ಎಂದಿದ್ದಕ್ಕೆ ‘ಅವರು ನನಗೆ ಎಂದಿಗೂ ಪರ ಅಲ್ಲ, ನನ್ನ ಪರಿವಾರ’ ಎಂದವರು ಗುರೂಜಿ. ಸಂಘಟನೆಯ ವಿಚಾರದಲ್ಲಷ್ಟೇ ಅಲ್ಲ. ರಾಷ್ಟ್ರ ಕಟ್ಟವು ವಿಚಾರದಲ್ಲೂ ಅವರು ಅಗ್ರಣಿಯೇ. ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ಸಹಾಯ ಮಾಡುವಲ್ಲಿ, ಗಾಂಧೀಜಿಯವರನ್ನು ಮುಸಲ್ಮಾನ್ ಗುಂಡಾಗಳಿಂದ ರಕ್ಷಿಸುವಲ್ಲಿ ಸಂಘದ ಸ್ವಯಂ ಸೇವಕರಿಗೆ ಜವಾಬ್ದಾರಿ ನೀಡಲು ಎಂದೂ ಹಿಂದೇಟು ಹಾಕಲಿಲ್ಲ. ಇಡಿಯ ಕೃತಿಯಲ್ಲಿ ಅಂತಹ ನೂರಾರು ಘಟನೆಗಳ ಉಲ್ಲೇಖವಿದೆ. ನಿಸ್ಸಂಶಯವಾಗಿ ಗುರೂಜಿ ನಮ್ಮ ಹೃದಯವನ್ನು ಆವರಿಸಿಕೊಂಡುಬಿಡುತ್ತಾರೆ.

ರಾತ್ರಿ ಖೆಡ್ಡಾ ತೋಡಿ ಹಗಲಿನಲ್ಲಿ ತಾನೇ ಬಿತ್ತು ಕಾಂಗ್ರೆಸ್ಸು!

ರಾತ್ರಿ ಖೆಡ್ಡಾ ತೋಡಿ ಹಗಲಿನಲ್ಲಿ ತಾನೇ ಬಿತ್ತು ಕಾಂಗ್ರೆಸ್ಸು!

ಕೇಂದ್ರ ಸರ್ಕಾರವನ್ನು ಆಯ್ಕೆ ಮಾಡುವ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ರಾಹುಲ್ ಭಾರತ್ ಜೊಡೊ ಯಾತ್ರೆಯ ಮೂಲಕ ಭಾರತವನ್ನು ಜೋಡಿಸುವ ತನ್ಮೂಲಕ ತನ್ನನ್ನು ಜನ ಒಪ್ಪಿಕೊಳ್ಳುವಂತೆ ಮಾಡುವ ಹರಸಾಹಸದಲ್ಲಿದ್ದಾರೆ. ಅವರನ್ನು ತಪಸ್ವಿ ಎಂದು ಬಿಂಬಿಸಲು ಅತ್ತ ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ ಈ ವೇಳೆಗೆ ಸರಿಯಾಗಿ ಅಂತರ್‌ರಾಷ್ಟ್ರೀಯ ಟೂಲ್ಕಿಟ್ಗಳು ತಮ್ಮ ಚಟುವಟಿಕೆ ಆರಂಭಿಸಿಬಿಟ್ಟಿವೆ. ಬಿಬಿಸಿ ನರೇಂದ್ರಮೋದಿಯವರ ಕುರಿತಂತೆ ಸಾಕ್ಷಿ ಚಿತ್ರವೊಂದನ್ನು ಬಿಡುಗಡೆಮಾಡಿ ಇಪ್ಪತ್ತು ವರ್ಷಗಳ ಹಿಂದಿನ ಗಾಯವನ್ನು ಮತ್ತೆ ಹಸಿಗೊಳಿಸುವ ಪ್ರಯತ್ನ ಮಾಡಿದೆ. ಎಡಪಂಥೀಯ ಬುದ್ಧಿಜೀವಿಗಳು ಮತ್ತು ಸ್ವತಃ ಕಾಂಗ್ರೆಸ್ಸಿಗರೂ ಅದೆಷ್ಟು ಸಂಭ್ರಮಿಸಿದ್ದಾರೆ ಎಂದರೆ ಒಂದಿಡೀ ದಿನ ಅವರೆಲ್ಲ ಭಾರತ್ ಜೊಡೊ ಯಾತ್ರೆಯನ್ನು ಮರೆತು ಈ ಸಾಕ್ಷ್ಯಚಿತ್ರದ ವಿಚಾರವನ್ನೇ ಚರ್ಚಿಸುವ ಪ್ರಯತ್ನ ಮಾಡಿದ್ದಾರೆ. ಪೀಠಿಕೆ ಇಷ್ಟು ಸಾಕೆನಿಸುತ್ತದೆ. ಸ್ವಲ್ಪ ಬಿಬಿಸಿಯ ಈ ದುಸ್ಸಾಹಸದ ಹಿಂದಿನ ಕಾರಣಗಳನ್ನು ಚರ್ಚಿಸೋಣ.

 

ನಿಮಗೆಲ್ಲ ಪಂಜಾಬಿನ ರೈತರ ಪ್ರತಿಭಟನೆ ನೆನಪಿರಬೇಕು. ರೈತರ ಏಳ್ಗೆಗೋಸ್ಕರ ನರೇಂದ್ರಮೋದಿಯವರು ಕನಸು ಕಟ್ಟಿ ಜಾರಿಗೆ ತಂದ ಮೂರು ಕಾನೂನುಗಳನ್ನು ವಿರೋಧಿಸಿ ಆ ಮಂದಿ ಬೀದಿಗಿಳಿದಿದ್ದರು. ಅಲ್ಲಿ ರೈತರಿಗಿಂತ ಹೆಚ್ಚು ಭಾರತವನ್ನು ವಿರೋಧಿಸುವ ಖಲಿಸ್ತಾನಿಗಳೇ ಇದ್ದರು. ಅವರಿಗೆ ಊಟ-ತಿಂಡಿ ತಲುಪಿಸುವುದರಿಂದ ಹಿಡಿದು ಕಾಲಿಗೆ ಮಸಾಜು ಮಾಡಿ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸುವ ವ್ಯವಸ್ಥೆಯನ್ನೂ ಕೆಲವರು ಮಾಡಿದ್ದರು. ಇವರಿಗೆ ಸಹಾಯ ಮಾಡಲೆಂದೇ ಒಂದು ಟೂಲ್‌ಕಿಟ್ ಗ್ಯಾಂಗ್ ಸಿದ್ಧವಾಗಿತ್ತು. ಕೆನಡಾದ ಅಧ್ಯಕ್ಷನೂ ಅವರ ಬೆಂಬಲಕ್ಕೆ ನಿಂತಿದ್ದ. ನರೇಂದ್ರಮೋದಿಯವರು ಈ ಇಡಿಯ ಪ್ರತಿಭಟನೆಯನ್ನು ಗಮನಕ್ಕೆ ತಂದುಕೊಳ್ಳಲಿಲ್ಲವೆಂದಾದಾಗ ಜಗತ್ತಿನ ಜನರೆದುರು ಅವರನ್ನು ದುರ್ಬಲರೆಂದು ಬಿಂಬಿಸುವ ಮತ್ತು ಪ್ರಜಾವಿರೋಧಿ ಎಂದು ಸಾಬೀತು ಮಾಡುವ ಪ್ರಯತ್ನಕ್ಕೆ ಟೂಲ್‌ಕಿಟ್ ಚುರುಕಾಗಿ ಕೆಲಸ ಮಾಡಿತು. ಬಹುಶಃ ಸಿಎಎ ನಂತರದ ಎರಡನೇ ಸೋಲು ಇದು ಮೋದಿ ಸರ್ಕಾರಕ್ಕೆ. ಈಗ ಇದೇ ಟೂಲ್‌ಕಿಟ್ ಮತ್ತೆ ಕ್ರಿಯಾಶೀಲವಾಗಿದೆ. ಸದ್ಯಕ್ಕೆ ಬಿಬಿಸಿ 20 ವರ್ಷಗಳ ಹಳೆಯ ಗೋರಿಯನ್ನು ಕೆದಕಿ ಹೆಣವನ್ನು ಹೊರತೆಗೆಯುವ ಪ್ರಯತ್ನ ಮಾಡಿದೆ. ಸ್ವಲ್ಪ ದಿನಗಳಲ್ಲೇ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮತ್ತು ಅಲ್‌ಜಜೀರಾಗಳು ಇದರ ಬೆಂಬಲಕ್ಕೆ ನಿಂತು ಬಲವಾಗಿ ಭಾರತ ವಿರೋಧಿ ವಿಚಾರಧಾರೆಯನ್ನು ಪ್ರತಿಪಾದಿಸಲು ನಿಂತರೆ ಅಚ್ಚರಿ ಪಡಬೇಕಿಲ್ಲ. 2024 ಹತ್ತಿರವಾಗುತ್ತಿದ್ದಂತೆ ಇವರ ಅಬ್ಬರ ಎಷ್ಟು ಏರಲಿದೆ ಎಂದರೆ ಒಂದೇ ಸುಳ್ಳನ್ನು ನೂರು ಬಾರಿ ಹೇಳಿದರೆ ಅದು ಸತ್ಯವೆನಿಸಿಕೊಳ್ಳುತ್ತದೆ ಎಂಬ ಸಿದ್ಧಾಂತವನ್ನು ಅವರು ಕಣ್ಣೆದುರೇ ಸಾಬೀತುಪಡಿಸಲಿದ್ದಾರೆ! 

ಈ ಸಾಕ್ಷಿಚಿತ್ರದ ಮೂಲಕ ಬಿಬಿಸಿ ಒಂದೇ ಬಾರಿಗೆ ಎರಡು ಹಕ್ಕಿಗಳ ಮೇಲೆ ಗುರಿ ಇಟ್ಟಿದೆ. ಮೋದಿಯಂತೂ ಮೇಲ್ನೋಟಕ್ಕೆ ಕಾಣುವಂತಹ ಗುರಿಯಾದರೆ ಎರಡನೆಯ ಹೊಡೆತ ಬ್ರಿಟನ್ನಿನ ಈಗಿನ ಪ್ರಧಾನಿ ಮತ್ತು ಹಿಂದೂ ಮೂಲದವರಾಗಿರುವ ರಿಷಿ ಸುನಾಕರ ಮೇಲೆ. ತಮ್ಮ ಹಿಂದೂ ಹಿನ್ನೆಲೆಯ ಕುರಿತಂತೆ ಅಪಾರವಾದ ಶ್ರದ್ಧೆಯಿರುವ ರಿಷಿ ಸುನಾಕರು ಅದನ್ನು ಮತ್ತೆ ಮತ್ತೆ ಹೇಳಿಕೊಳ್ಳುತ್ತಲೇ ಇರುತ್ತಾರೆ. 200 ವರ್ಷಗಳ ಕಾಲ ಭಾರತವನ್ನು ಆಳಿ ಇಂದಿಗೂ ಭಾರತ ತಮ್ಮಡಿಯಾಳಾಗಿಯೇ ಇರಬೇಕೆಂದು ಭಾವಿಸುವ ವಸಾಹತುಶಾಹಿ ಮಂದಿಗಳಿಗೆ ಹಿಂದೂ ಮೂಲದವನೊಬ್ಬ ತಮ್ಮನ್ನು ಆಳುವುದನ್ನು ಸಹಿಸಿಕೊಳ್ಳುವುದು ಸಾಧ್ಯವೆಂದುಕೊಂಡಿದ್ದೀರೇನು?  ಈ ಕಾರಣಕ್ಕಾಗಿಯೇ ಬಿಬಿಸಿಯ ಈ ವರದಿ ಬಂದೊಡನೆ ಬ್ರಿಟನ್ನಿನಲ್ಲಿ ಪಾಕಿಸ್ತಾನ ಮೂಲದ ಸಂಸತ್ ಸದಸ್ಯನೊಬ್ಬ ರಿಷಿ ಸುನಾಕರನ್ನು ಗುರಿಮಾಡಿ ಈ ಕುರಿತಂತೆ ಪ್ರಶ್ನೆ ಕೇಳಿದ್ದಾನೆ. ಉತ್ತರವನ್ನು ಬಹಳ ವಿಸ್ತರಿಸದ ರಿಷಿ ‘ಯಾವುದೇ ವ್ಯಕ್ತಿಯ ಮೇಲೆ ಈ ರೀತಿ ಮಸಿ ಬಳಿಯುವುದನ್ನು ಈ ಸಂಸತ್ತು ಒಪ್ಪಿಕೊಳ್ಳಲಾರದು’ ಎಂದು ಹೇಳುವ ಮೂಲಕ ಸೂಕ್ತವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ಈ ಉದ್ದೇಶದಲ್ಲಿ ಬಿಬಿಸಿ ಸಾವು ಕಂಡಂತಾಯ್ತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಈ ಚಾನೆಲ್ಲಿಗೆ ಮೋದಿಯವರ ಹೆಸರನ್ನು ಹಾಳುಗೆಡಹುವುದು ಈ ಸಾಕ್ಷ್ಯಚಿತ್ರದ ಮೂಲಕ ಸುಲಭವಾಗಬಹುದು. ಎನ್‌ಡಿಟಿವಿಯು ಈಗ ಅದಾನಿಯವರ ಕೈ ಸೇರಿರುವುದರಿಂದ ಎಡಪಂಥೀಯರ ಪಾಲಿಗೆ ಉಳಿದಿರುವ ಅಸ್ತ್ರ ಬಿಬಿಸಿಯೇ. ರಷ್ಯಾ-ಉಕ್ರೇನ್ ಯುದ್ಧದ ನಂತರ ಭಾರತ ಆರ್ಥಿಕವಾಗಿ ತನ್ನ ಸ್ವರೂಪವನ್ನು ಕಾಪಾಡಿಕೊಂಡಿರುವ ರೀತಿ ಮತ್ತು ವ್ಯಾಕ್ಸಿನ್ ಮೈತ್ರಿಯ ಮೂಲಕ ಜಗತ್ತಿನ ಪ್ರೀತಿ ಗಳಿಸಿರುವ ರೀತಿಯನ್ನು ನೋಡಿದರೆ ಅದಾಗಲೇ ಜಾಗತಿಕ ಮಟ್ಟದಲ್ಲಿ ಅದು ಬ್ರಿಟನ್ನನ್ನು ಮೀರಿಸಿ ಬೆಳೆದಾಗಿದೆ. ಇನ್ನೀಗ ತನ್ನ ಪ್ರಭಾವವನ್ನು ಬಳಸಿ ಡಾಲರ್ ಮುಕ್ತ ವ್ಯವಹಾರಕ್ಕೆ ಭಾರತ ಪ್ರಯತ್ನ ಹಾಕುತ್ತಿರುವುದನ್ನು ಕಂಡರೆ ಅಮೇರಿಕವೂ ಎಚ್ಚೆತ್ತುಕೊಳ್ಳಬೇಕಾದಂತಹ ಸ್ಥಿತಿ ಇದೆ. ಈ ಹೊತ್ತಿನಲ್ಲಿ ಮೋದಿಯವರನ್ನು ಹಿಟ್ಲರ್‌ನಂತೆ ಜನಾಂಗೀಯ ದ್ವೇಷಿ ಎಂದು ಬಿಂಬಿಸುವುದರ ಮೂಲಕ ಜಾಗತಿಕವಾಗಿ ಅವರನ್ನು ಏಕಾಂಗಿಯಾಗಿಸುವ ಪ್ರಯತ್ನ ಇಲ್ಲಿಂದ ಆರಂಭವಾಗಿರಬಹುದೆನಿಸುತ್ತದೆ. ಈ ಇಡಿಯ ಸಾಕ್ಷ್ಯಚಿತ್ರದಲ್ಲಿ ಮೋದಿಯ ವಿರುದ್ಧ ಆರೋಪಗಳ ಸರಮಾಲೆ ಮಾಡಿರುವ ಬ್ರಿಟನ್ನಿನ ಈ ಹಿಂದಿನ ಕಾರ್ಯದರ್ಶಿ ಜಾಕ್‌ಸ್ಟ್ರಾ ಈ ಹಿಂದೆ ಇರಾಕ್‌ನಲ್ಲಿ ಸಮೂಹ ನಾಶದ ಶಸ್ತ್ರಾಸ್ತ್ರಗಳಿವೆ ಎಂಬ ಸುಳ್ಳನ್ನೂ ಹರಿಬಿಟ್ಟಿದ್ದ. ಆನಂತರ ಸದ್ದಾಂ ಹುಸೇನನನ್ನು ಮನುಕುಲದ ವಿರೋಧಿ ಎಂದು ಬಿಬಿಸಿ, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ಗಳೆಲ್ಲ ಹೇಗೆ ಬಿಂಬಿಸಿದವೆಂದರೆ ಅವನ ಜನರೇ ಅದನ್ನು ವಿರೋಧಿಸುತ್ತಿದ್ದಾಗ್ಯೂ ಅವನನ್ನು ನಾಶಗೊಳಿಸಲು ಅಮೇರಿಕಾಕ್ಕೆ ಅಸ್ತ್ರ ಸಿಕ್ಕಿತು. ತಮ್ಮ ಈ ವಿಚಾರ ಹೇರಿಕೆಯ ಸಿದ್ಧಾಂತವನ್ನು ಪಶ್ಚಿಮದ ರಾಷ್ಟ್ರಗಳು ಎಷ್ಟು ಸೂಕ್ಷ್ಮವಾಗಿ ಬಳಸಿಕೊಳ್ಳುತ್ತವೆಂದರೆ ತಮಗಾಗದ ವ್ಯಕ್ತಿಯನ್ನು ನಾಶಮಾಡಲು ಬೇಕಾದ ಅಸ್ತ್ರವನ್ನು ರೂಪಿಸಿಕೊಳ್ಳುತ್ತವೆ. ಇದು ಈ ಪ್ರಯತ್ನದ ಮೊದಲ ಭಾಗ. ಹಾಗೇ ಸುಮ್ಮನೆ ಚುನಾವಣೆಗೂ ಮುನ್ನ ಡೊನಾಲ್ಡ್ ಟ್ರಂಪ್‌ನ ವಿರುದ್ಧವೂ ಇದೇ ಬಗೆಯ ಸುಳ್ಳುಗಳನ್ನು ಹರಿಬಿಟ್ಟು ಆತನ ವಿರುದ್ಧ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿ ಆತ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದರಲ್ಲ, ಮೋದಿಯವರ ಮೇಲೂ ಅದೇ ಪ್ರಯತ್ನ ಆರಂಭವಾಗಿದೆ ಅಷ್ಟೇ!

ಹಾಗಂತ ಈ ಸಾಕ್ಷ್ಯಚಿತ್ರದ ಉದ್ದೇಶ ಇಷ್ಟೇ ಅಲ್ಲ. ಚುನಾವಣೆಗೆ ಮುನ್ನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ನರೇಂದ್ರಮೋದಿಯವರು ಹಿಂದುಳಿದ ಪಸ್ಮಂಡಾ ಮುಸಲ್ಮಾನರನ್ನು ಮತಗಳಿಕೆಯ ಚಿಂತನೆಯ ಬಿಟ್ಟು ಒಲಿಸಿಕೊಳ್ಳಿ ಎಂದು ಹೇಳಿದ ಮಾತು ಮುಸ್ಲೀಮರಲ್ಲಿ ಬಲುದೊಡ್ಡ ಸಂಚಲನ ಉಂಟುಮಾಡಿದೆ. ಮೇಲ್ವರ್ಗದ ಅಶ್ರಫ್‌ಗಳ ತುಳಿತಕ್ಕೊಳಗಾಗಿ ನರಳುತ್ತಿರುವ ಈ ದಲಿತ ಮುಸಲ್ಮಾನರಿಗೆ ಮೋದಿಯೊಬ್ಬರೇ ಆಶಾಕಿರಣ. ಏಕೆಂದರೆ ಉಳಿದೆಲ್ಲ ಪಕ್ಷಗಳೂ ಈ ಅಶ್ರಫ್‌ಗಳ ಮಾತಿನಂತೆ ನಡೆಯುತ್ತವೆ. ಮೋದಿ ಮಾತ್ರ ತಮ್ಮ ಅಧಿಕಾರಾವಧಿಯ ಉದ್ದಕ್ಕೂ ಗುಜರಾತಿನ ಬೊಹ್ರಾಗಳನ್ನು ಮತ್ತು ಉತ್ತರ ಭಾರತದಲ್ಲಿ ವ್ಯಾಪಕವಾಗಿರುವ ಪಸ್ಮಂಡಾಗಳನ್ನು ಹತ್ತಿರದಲ್ಲಿಟ್ಟುಕೊಂಡಿದ್ದಾರೆ. ಇದು 2024ರ ಚುನಾವಣೆಯಲ್ಲಿ ಸಮೀಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸಬಲ್ಲದು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗೆ ಸಿಗಬಹುದಾಗಿರುವ ಅಸ್ತ್ರ ಈ ಸಾಕ್ಷ್ಯಚಿತ್ರವೇ. ಈ ಮೂಲಕ ಹಿಂದೂ ಮತ್ತು ಮುಸಲ್ಮಾನರ ಒಡಕನ್ನು ಹೆಚ್ಚು ಮಾಡಿ, ಮುಸಲ್ಮಾನರು ಶಾಶ್ವತವಾಗಿ ತನ್ನ ಮತದಾರರಾಗಿರುವಂತೆ ನೋಡಿಕೊಳ್ಳುವ ಪ್ರಯತ್ನ ಅದರದ್ದು. ಭಾರತ್ ಜೊಡೊ ಎಂದು ತಿರುಗಾಡುತ್ತಿರುವ ಕಾಂಗ್ರೆಸ್ಸಿಗರು ಒಳಗಿಂದೊಳಗೆ ಭಾರತವನ್ನು ತುಂಡು ಮಾಡುತ್ತಿರುವ ರೀತಿ ಇದು. 

ಇಷ್ಟಕ್ಕೂ ಈ ಸಾಕ್ಷ್ಯಚಿತ್ರ ಎಷ್ಟು ಭಯಾನಕವಾಗಿದೆ ಎಂದರೆ 20 ವರ್ಷಗಳ ಹಿಂದೆ ನಡೆದ ಈ ಘಟನೆಯ ಕುರಿತಂತೆ ಬ್ರಿಟನ್ನು ತಾನೇ ವಿಚಾರಣೆ ಮತ್ತು ತನಿಖೆ ನಡೆಸಿತ್ತಂತೆ. ಹೀಗೊಂದು ತನಿಖೆಯನ್ನು ಮತ್ತೊಂದು ರಾಷ್ಟ್ರದಲ್ಲಿ ನಡೆಸುವ ಅಧಿಕಾರವನ್ನು ಇಂಗ್ಲೆಂಡಿಗೆ ಕೊಟ್ಟಿದ್ದಾದರೂ ಯಾರು? ಸರ್ಕಾರಕ್ಕೆ ಅರಿವಾಗದೇ ರಾಷ್ಟ್ರವೊಂದರಲ್ಲಿ ಈ ರೀತಿ ಗುಪ್ತ ವಿಚಾರಣೆಯನ್ನು ನಡೆಸುತ್ತದೆ ಎಂದಾದರೆ ಅದು ತನ್ನನ್ನು ತಾನು ಆಳುವ ರಾಷ್ಟ್ರ ಎಂದೇ ಭಾವಿಸಿದೆ ಎಂದರ್ಥವಲ್ಲವೇನು? ಇಷ್ಟೂ ವರ್ಷ ಇವುಗಳ ಬಗ್ಗೆ ಮಾತನಾಡದೇ ಈಗ ಏಕಾಕಿ ಯಾರಿಗೂ ಸಿಗದ ಈ ಮಾಹಿತಿಯನ್ನು ಬಿಬಿಸಿ ತಾನು ಪಡೆದು ಜನರ ಮುಂದಿರಿಸಿದ್ದಾದರೂ ಹೇಗೆ? ಇಷ್ಟಕ್ಕೂ ಎರಡು ಭಾಗಗಳ ಈ ಸಾಕ್ಷಿಚಿತ್ರದಲ್ಲಿ ಒಂದಾದರೂ ಬಿಬಿಸಿಯ ಚಿಂತನಾಲಹರಿಯನ್ನು ವಿರೋಧಿಸುವವರ ಮಾತುಗಳಿಲ್ಲ. ಇಡಿಯ ಈ ಪ್ರಕರಣವನ್ನು ಹತ್ತಾರು ವರ್ಷಗಳ ಕಾಲ ವಿಚಾರಣೆ ನಡೆಸಿ ಮೋದಿಯವರಿಗೆ ಕ್ಲೀನ್‌ಚಿಟ್ ಕೊಟ್ಟ ಸುಪ್ರೀಂಕೋರ್ಟ್ ಕುರಿತಂತೆ ಮಾತಿಲ್ಲ. ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡವರೇ ಸುಳ್ಳು ಹೇಳಿದ್ದಾರೆ ಎಂದು ಸಾಬೀತಾದುದರ ಕುರಿತಂತೆ ಒಂದು ಮಾತಿಲ್ಲ. ಅಷ್ಟೇ ಅಲ್ಲ, ಈ ವಿಚಾರಧಾರೆಯ ಸಮರ್ಥನೆಗೆ ಬಿಬಿಸಿ ಯಾರನ್ನು ಸಂದರ್ಶಿಸಿದೆಯೋ ಅವರ್ಯಾರೂ ನೇರವಾಗಿ ಹೇಳಿಕೆ ಕೊಡಬಲ್ಲಷ್ಟು ಹತ್ತಿರವಿದ್ದವರೇ ಅಲ್ಲ. ನಮ್ಮ-ನಿಮ್ಮಂತೆ ಪತ್ರಿಕೆಗಳಲ್ಲಿ ಓದಿಯೋ ಆನಂತರ ತೊಂದರೆಗೊಳಗಾದವರನ್ನು ಮಾತನಾಡಿಸಿಯೋ ವಿಚಾರ ಅರಿತವರು. ತನಿಖೆಯಲ್ಲಿ ಪಾಲ್ಗೊಂಡ ಅಧಿಕಾರಿಗಳಾಗಲೀ ವಿಚಾರಣೆಯಲ್ಲಿದ್ದ ವಕೀಲರಾಗಲೀ ಇಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಅಂದರೆ ಬಿಬಿಸಿ ತನ್ನ ಅಭಿಪ್ರಾಯವನ್ನು ನಮ್ಮ ಮೇಲೆ ಹೇರಲಿಕ್ಕೆಂದು ತನಗೆ ಬೇಕಾದ ವಾಮಮಾರ್ಗವನ್ನೇ ಬಳಸಿಕೊಂಡಿದೆ. ಹೀಗಾಗಿಯೇ ಇದು ಮೂಲೆಗುಂಪು ಮಾಡಲೇಬೇಕಾದಂತಹ ಸರಕು. ಇನ್ನೊಂದು ಅಚ್ಚರಿ ಏನು ಗೊತ್ತೇ? ಈ ಸಾಕ್ಷ್ಯಚಿತ್ರದಲ್ಲಿ ಸಬರ್ಮತಿ ರೈಲಿನಲ್ಲಿ 59 ಕಾರಸೇವಕರನ್ನು ಮುಸಲ್ಮಾನರು ಕೊಂದು ಹಾಕಿದ್ದುದರ ಕುರಿತಂತೆ ಎಳ್ಳಷ್ಟೂ ದುಃಖವನ್ನು ವ್ಯಕ್ತಪಡಿಸಲಾಗಿಲ್ಲ. ಉಲ್ಟಾ ಈ ಪ್ರಕರಣದಲ್ಲಿ ಮುಸಲ್ಮಾನರ ಪಾತ್ರವೇ ಇಲ್ಲ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡಲಾಗಿದೆ. ಹೀಗಾಗಿಯೇ ಈ ಸಾಕ್ಷ್ಯಚಿತ್ರ ಅರ್ಧ ಸತ್ಯವನ್ನಲ್ಲ, ಪೂರ್ತಿ ಸುಳ್ಳನ್ನೇ ಹೇಳುವಂಥದ್ದು ಎಂದು ಎಂಥವನಿಗೂ ಅರಿವಾಗುತ್ತದೆ. 

ಇಡಿಯ ಪ್ರಕರಣದಲ್ಲಿ ಅಸಹ್ಯವೆನಿಸಿದ್ದೇನು ಗೊತ್ತೇ? ಈ ಸಾಕ್ಷ್ಯಚಿತ್ರವನ್ನು ಬೆಂಬಲಿಸಿ ಮೋದಿಯನ್ನು ಇರಿಯುವ ಭರದಲ್ಲಿ ಕಾಂಗ್ರೆಸ್ಸು ಬ್ರಿಟೀಷರ ವಸಾಹತುಶಾಹಿ ಭಾವನೆಗಳಿಗೆ ರೆಕ್ಕೆ-ಪುಕ್ಕ ಕಟ್ಟಿಕೊಡುವ ಯತ್ನ ಮಾಡಿದೆ. ಅವರು ಆಳುವವರು ಮತ್ತು ನಾವು ಆಳಿಸಿಕೊಳ್ಳುವವರು ಎಂಬ ಭಾವನೆಯನ್ನು ಇದು ಎತ್ತಿಹಿಡಿಯುತ್ತಿದೆಯಲ್ಲದೇ ಭಾರತೀಯರು ಬಿಳಿಯರ ಗುಲಾಮರು ಎಂದು ಮತ್ತೆ ಸಾಬೀತುಪಡಿಸುವ ಯತ್ನ ಮಾಡುತ್ತಿದೆ. ಇಲ್ಲವಾದಲ್ಲಿ ಸುದೀರ್ಘ ವಿಚಾರಣೆ ನಡೆದು ಯಾವುದನ್ನು ಭಾರತೀಯ ಸರ್ವೋಚ್ಚ ನ್ಯಾಯಾಲಯ ತೀರ್ಪಾಗಿ ಕೊಟ್ಟಿತ್ತೋ ಅದನ್ನು ಕಾಂಗ್ರೆಸ್ಸು ವಿರೋಧಿಸಿ ಬಿಬಿಸಿಯ ಹೇಳಿಕೆಯನ್ನು ಸಮರ್ಥಿಸುತ್ತದೆ ಎಂದರೆ ಕಾಂಗ್ರೆಸ್ಸಿಗೆ ನಮ್ಮ ನ್ಯಾಯಾಲಯಗಳು ಹೆಚ್ಚೋ ಅಥವಾ ಯಃಕಶ್ಚಿತ್ ಇಂಗ್ಲೀಷ್ ಟಿವಿ ಚಾನೆಲ್ಲೋ? ನೆನಪಿರಲಿ, ಇತ್ತೀಚೆಗೆ ಈ ತೀರ್ಪಿನ ಮರು ಪರಿಶೀಲನೆಯ ಕುರಿತಂತೆ ಹಾಕಿರುವ ಅರ್ಜಿಯನ್ನೂ ಕೂಡ ನ್ಯಾಯಾಲಯ ವಜಾಗೊಳಿಸಿದೆ. ಬಿಳಿಯರ ಈ ಅಭಿಪ್ರಾಯ ಹೇರಿಕೆ ಭಾರತೀಯರ ಪಾಲಿಗೆ ಹೊಸತೇನೂ ಅಲ್ಲ. ಬ್ರಾಹ್ಮಣರು ಉಳಿದವರನ್ನು ಶೋಷಿಸಿದರು, ಭಾರತದಲ್ಲಿ ಶಿಕ್ಷಣ ಎಲ್ಲರಿಗೂ ಸಮಪ್ರಮಾಣದಲ್ಲಿ ದೊರೆಯುತ್ತಿರಲಿಲ್ಲ, ಭಾರತದಲ್ಲಿ ನ್ಯಾಯವ್ಯವಸ್ಥೆ ಇರಲಿಲ್ಲ, ಭಾರತೀಯರು ಹೀನ, ದೀನರು, ದರಿದ್ರರೂ ಆಗಿದ್ದರು ಎಂಬೆಲ್ಲ ಅಭಿಪ್ರಾಯಗಳನ್ನು ನಾವು ನಂಬುವಂತೆ ಮಾಡಿದ್ದಲ್ಲದೇ ಇಂದಿಗೂ ರೊಮಿಲಾ ಥಾಪರ್ನಂಥವರು ಅದನ್ನೇ ಮತ್ತೆ ಮತ್ತೆ ಹೇಳುವಂತೆ ಮಾಡಿಟ್ಟಿರುವವರು ಅವರೇ. ಮುಸಲ್ಮಾನರೇನು ಖುಷಿ ಪಡಬೇಕಿಲ್ಲ. ಅನೇಕ ಮುಸಲ್ಮಾನರೇ, ಮೂಲ ಇಸ್ಲಾಂನ ವಿರುದ್ಧ ತಮ್ಮ ಬಳಕೆಗೆ ಬೇಕಾಗುತ್ತದೆ ಎಂದು ಖಾದಿಯಾನಿ ಪಂಥವನ್ನು ಹುಟ್ಟುಹಾಕಿದ್ದೇ ಬ್ರಿಟೀಷರು ಎಂದು ವಾದಿಸುತ್ತಾರೆ. ಅಂದರೆ ಹಿಂದೂಗಳನ್ನೆದುರಿಸಲು ಮುಸಲ್ಮಾನರನ್ನು ಎತ್ತಿಕಟ್ಟಬೇಕಿತ್ತು ಮತ್ತು ಮುಸಲ್ಮಾನರನ್ನು ಒಳಗಿನಿಂದ ಒಡೆಯಲು ಅವರ ವಿರುದ್ಧ ಅವರನ್ನೇ ಎತ್ತಿಕಟ್ಟಬೇಕಿತ್ತು. ಈಗಲೂ ಅದೇ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದಾರೆ.

ಒಂದಂತೂ ಸತ್ಯ. ಎಸೆದ ಕಲ್ಲುಗಳಲ್ಲೇ ಅರಮನೆ ಕಟ್ಟಿಕೊಳ್ಳುವ ಚಾಳಿ ಇರುವ ಮೋದಿ ಚುನಾವಣೆಯಲ್ಲಿ ಇದನ್ನು ಬಳಸಿಕೊಳ್ಳುತ್ತಾರೆ. ಸರ್ವೋಚ್ಚ ನ್ಯಾಯಾಲಯವನ್ನು ಧಿಕ್ಕರಿಸಿ ಬ್ರಿಟೀಷ್ ಚಾನೆಲ್‌ನ ದಾಸರಾಗಿರುವ ಕಾಂಗ್ರೆಸ್ಸಿನ ಜನ್ಮ ಜಾಲಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಈ ಸಾಕ್ಷಿಚಿತ್ರ ಮೋದಿಯವರಿಗೆ ತೊಡಕಾಗಬಹುದೇನೋ, ಆದರೆ ಗುಜರಾತಿನಲ್ಲಿ ಮುಸಲ್ಮಾನರು ಮದರಸಾ ಪೀಡಿತರಾಗದೇ ವಿಕಾಸದೆಡೆಗೆ ಹೊರಳಿರುವುದು ಮೋದಿಯ ಕಾರಣಕ್ಕೆ ಎಂಬ ವಿಚಾರ ಮತ್ತೆ ಸಾಬೀತಾದರೆ ಹಿಂದೂಗಳು ಮತ್ತೊಮ್ಮೆ ಒಗ್ಗಟ್ಟಾಗಿ ಮೋದಿಯ ಬೆನ್ನಹಿಂದೆ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಮೋದಿಗಾಗಿ ರಾತ್ರಿಯಿಡಿ ಖೆಡ್ಡಾ ತೋಡಿ ಕಾಂಗ್ರೆಸ್ಸು ಹಗಲಿನಲ್ಲಿ ತಾನೇ ಹೋಗಿ ಬಿದ್ದುಬಿಡುವುದಕ್ಕೆ ಇದು ಮತ್ತೊಂದು ಉದಾಹರಣೆ ಅಷ್ಟೇ!

ಮೋದಿ ಟ್ರಂಪ್‌ನಂತೆ ಸುಲಭ ತುತ್ತಲ್ಲ!

ಮೋದಿ ಟ್ರಂಪ್‌ನಂತೆ ಸುಲಭ ತುತ್ತಲ್ಲ!

ಕಳೆದ ವಾರವಿಡೀ ಹಿಂಡನ್‌ಬರ್ಗ್ ವರದಿಯದ್ದೇ ಚರ್ಚೆ. ಆ ಮೂಲಕ ಅದಾನಿಯನ್ನು ಮಟ್ಟಹಾಕುವ ಬಲುದೊಡ್ಡ ಪ್ರಯತ್ನ. ಅದಾನಿಯೇ ಏಕೆ ಎಂಬುದಕ್ಕೆ ಕಳೆದ ಎಂಟೊಭತ್ತು ವರ್ಷಗಳಿಂದ ಕಾಂಗ್ರೆಸ್ಸಿಗರು ನಡೆಸಿರುವ ಅಪಪ್ರಚಾರವನ್ನು ಕಂಡರೆ ಎಂಥವನಿಗೂ ಅರಿವಾದೀತು. ಇಷ್ಟಕ್ಕೂ ಅದಾನಿ, ಅಂಬಾನಿಯರು ಮೋದಿಯ ಬಲಗೈ ಎಂದು ಪದೇ ಪದೇ ಹೇಳುವ ಮೂಲಕ ಕಾಂಗ್ರೆಸ್ಸು ಮೋದಿಯನ್ನು ಸಿರಿವಂತರ ಪರವಾಗಿರುವಂಥವರು ಎಂದು ಸಾಬೀತುಪಡಿಸಲು ಯತ್ನಿಸುತ್ತಿದೆ. ಆದರೆ ಅಂಬಾನಿ, ಅದಾನಿಯರು ಇಷ್ಟು ಅಗಾಧವಾಗಿ ಬೆಳೆದದ್ದು ಕಾಂಗ್ರೆಸ್ಸಿಗರ ಕಾಲದಲ್ಲಿಯೇ ಎಂಬುದನ್ನು ಮರೆತುಬಿಡುತ್ತಾರೆ. ಈಗಲೂ ಪಶ್ಚಿಮ ಬಂಗಾಳವೇ ಆಗಲಿ, ರಾಜಸ್ಥಾನ, ಉತ್ತರಾಖಂಡಗಳೇ ಆಗಲಿ ಅದಾನಿಗೆ ಸಾವಿರಾರು ಕೋಟಿ ರೂಪಾಯಿಯ ಹೂಡಿಕೆಯ ಅವಕಾಶವನ್ನು ತಂತಮ್ಮ ರಾಜ್ಯಗಳಲ್ಲಿ ಒದಗಿಸಿಕೊಟ್ಟಿವೆ. ಅದಾನಿ, ಅಂಬಾನಿಯರು ನೆಲಕಚ್ಚಿದರೆ ಮೋದಿ ಮುಗಿದೇ ಹೋಗುತ್ತಾರೆ ಎಂಬ ಕನಸು ಕಾಂಗ್ರೆಸ್ಸಿಗರದ್ದಾದರೆ ಅದಾನಿ, ಅಂಬಾನಿಯಂತಹ ಉದ್ಯೋಗಪತಿಗಳನ್ನು ಮುಗಿಸಿಬಿಟ್ಟರೆ ಭಾರತದ ಕಥೆ ಮುಗಿದಂತೆಯೇ ಎಂದು ಸೊರೋಸ್‌ನಂತಹ ಭಾರತ ವಿರೋಧಿ ಶಕ್ತಿಗಳು ನಂಬಿಕೊಂಡಿವೆ. 

ವಿಚಿತ್ರವೇನು ಗೊತ್ತೇ? ಟ್ರಂಪ್‌ನ ಚುನಾವಣೆಗೆ ಮುನ್ನ ಅವನನ್ನು ಸೋಲಿಸಲು ಯಾವ ಯಾವ ಪ್ರಯೋಗಗಳನ್ನು ಅಮೇರಿಕದಲ್ಲಿ ನಡೆಸಲಾಗಿತ್ತೋ ಅವೆಲ್ಲವನ್ನೂ ಮೋದಿಯ ವಿರುದ್ಧಕ್ಕೂ ಪ್ರಯೋಗಿಸುತ್ತಿದ್ದಾರೆ. ಹಾಗೆ ಸುಮ್ಮನೆ ಹೇಳುವುದಾದರೆ ಮೋದಿಯನ್ನು ಒಡಕು ತರುವ ನಾಯಕ ಎಂದು ಬಿಂಬಿಸಲು ಇವರೇನು ಪ್ರಯತ್ನಿಸುತ್ತಿದ್ದಾರಲ್ಲ ಅದು ಟ್ರಂಪ್‌ನ ಮೇಲೆ ಬಂದ ಮೊದಲ ಆರೋಪ. ಟ್ರಂಪ್ ನಿರಾಶ್ರಿತರ ವಿರೋಧಿ, ಕರಿಯರ ವಿರೋಧಿ, ಸಲಿಂಗಿಗಳ ವಿರೋಧಿ. ಆತ ಮನಸ್ಸಿಗೆ ಬಂದದ್ದನ್ನು ಮಾತನಾಡುತ್ತಾನೆ, ಪ್ರಗತಿಗಾಮಿಯೇ ಅಲ್ಲ ಎಂಬೆಲ್ಲ ಆರೋಪಗಳನ್ನು ಹಂತ-ಹಂತವಾಗಿ ಮಾಡಿದರು ಮತ್ತು ಈ ಆರೋಪಗಳ ಖೆಡ್ಡಾದೊಳಕ್ಕೆ ಅವನನ್ನು ಕೆಡವಿಯೂಬಿಟ್ಟರು. ಮೋದಿಯ ಮೇಲೆ ಈ ಪ್ರಯೋಗ ಮಾಡಲಿಲ್ಲವೆಂದುಕೊಂಡಿರೇನು? ಮುಸಲ್ಮಾನ ವಿರೋಧಿ ಎಂದರು, ಅಲ್ಲಲ್ಲಿ ದಂಗೆಗಳನ್ನೆಬ್ಬಿಸುವ ಪ್ರಯತ್ನವನ್ನೂ ಆರಂಭಿಸಿದರು. ಆದರೆ ಆತ ಮಾತ್ರ ವ್ಯವಸ್ಥಿತವಾಗಿಯೇ ಬೊಹ್ರಾಗಳ, ಪಸ್ಮಂಡಾಗಳ ಕನಸಿನ ನಾಯಕರಾಗಿ ಹೊರಹೊಮ್ಮಿ ಅಮೇರಿಕಾದ ಇಶಾರೆಯ ಮೇಲೆ ಕುಣಿಯುವ ಕಟ್ಟರ್‌ಪಂಥಿಗಳನ್ನು ಮೂಲೆಗುಂಪು ಮಾಡಿಬಿಟ್ಟರು. ಅಯೋಧ್ಯೆಯನ್ನು ತೆಕ್ಕೆಗೆ ತೆಗೆದುಕೊಂಡೂ ಮುಸಲ್ಮಾನರು ಬಾಲ ಮುದುರಿಕೊಂಡು ಕುಳಿತದ್ದು ಇದೇ ಕಾರಣಕ್ಕೆ. ಅವರೆಲ್ಲ ಒಟ್ಟಾಗುವ ಅವಕಾಶ ಸಿಕ್ಕಿದ್ದು ಸಿಎಎ ಹೊತ್ತಿನಲ್ಲಿಯೇ. ಆದರೆ ಆ ಸಂದರ್ಭದಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳದ ಮೋದಿ ಗಲಾಟೆ ಎಬ್ಬಿಸಿದವರ ವಿರುದ್ಧವೇ ಜನಾಭಿಪ್ರಾಯ ರೂಪುಗೊಳ್ಳುವ ವ್ಯವಸ್ಥೆ ಮಾಡಿದರು. ಅದರ ಮುಂದುವರೆದ ಭಾಗವೇ ನೂಪುರ್ ಶರ್ಮಾಳದ್ದು. ಆಕೆ ಹೇಳಿದ ಯಾವ ಮಾತೂ ಸುಳ್ಳಲ್ಲವೆಂಬುದನ್ನು ಅನೇಕ ಮೌಲ್ವಿಗಳೇ ಒಪ್ಪುತ್ತಾರೆ. ಆದರೂ ಇದು ಜಾಗತಿಕವಾಗಿ ವಿರರೋಧಿಗಳಿಗೆ ಆಹಾರ ಒದಗಿಸಿಕೊಡುತ್ತದೆ ಎಂದರಿತ ಮೋದಿ ನೂಪುರ್‌ ಶರ್ಮಾಳನ್ನು ಪಕ್ಷದಿಂದ ತೆಗೆದದ್ದಲ್ಲದೇ ಸೌದಿ, ಗಲ್ಫ್ ರಾಷ್ಟ್ರಗಳಿಗೆ ಇನ್ನೂ ಹತ್ತಿರವಾಗುವ ತಮ್ಮ ಚಟುವಟಿಕೆಯನ್ನು ಆರಂಭಿಸಿಬಿಟ್ಟರು. ಮೋದಿಯನ್ನು ವಿರೋಧಿ ಎಂದು ಬಿಂಬಿಸಲೆತ್ನಿಸುತ್ತಿರುವ ಎಲ್ಲರಿಗೂ ಎಂತಹ ಕಪಾಳಮೋಕ್ಷವೆಂದರೆ ಸೌದಿಯ ಈಗಿನ ದೊರೆಯೇ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ‘ಕಾಶ್ಮೀರದ ತಗಾದೆಯನ್ನು ಬಿಟ್ಟು ಭಾರತದೊಂದಿಗೆ ಸ್ನೇಹದಿಂದ ಇರುವುದನ್ನು ಕಲಿತುಕೊಳ್ಳಿ’ ಎಂದುಬಿಟ್ಟ. ಅಧಿಕೃತ ಮುಸಲ್ಮಾನ ದೇಶಗಳೇ ಮೋದಿಯನ್ನು ಈ ಪರಿ ಪ್ರೀತಿಸುವಾಗ ಇನ್ನು ಇಲ್ಲಿ ಅಮೇರಿಕನ್ನರು ಹಾಕಿದ ಬಿಸ್ಕತ್ತಿಗೆ ಬಾಲ ಆಡಿಸುವವರದ್ದೇನು ಲೆಕ್ಕ? 

ಟ್ರಂಪ್‌ಗೂ ಮೋದಿಗೂ ಇರುವ ವ್ಯತ್ಯಾಸವೇನು ಗೊತ್ತೇ? ತನ್ನ ಮೇಲೆ ಆರೋಪ ಬಂದಾಗಲೆಲ್ಲ ಟ್ರಂಪ್‌ಗೆ ಸಹನೆಯೇ ಆಗುತ್ತಿರಲಿಲ್ಲ. ಆತ ತಾಳ್ಮೆ ಕಳೆದುಕೊಂಡು ಮನಸ್ಸಿಗೆ ಬಂದಂತೆ ಮಾತನಾಡಿಬಿಡುತ್ತಿದ್ದ. ಅದಕ್ಕಾಗಿಯೇ ಕಾಯುತ್ತಿದ್ದ ಅಲ್ಲಿನ ಪತ್ರಿಕೆಗಳು ಇದನ್ನೇ ಅಗತ್ಯಕ್ಕಿಂತ ಹೆಚ್ಚು ವೃದ್ಧಿಸಿ ಟ್ರಂಪ್‌ನನ್ನು ರಾಕ್ಷಸನೆಂಬಂತೆ ಬಿಂಬಿಸಲು ಯಶಸ್ವಿಯಾಗಿಬಿಟ್ಟವು. ಅದನ್ನು ಎದುರಿಸಲು ಮತ್ತೆ ಟ್ರಂಪ್ ತನ್ನ ಬಾಯ್ಬಡುಕುತನವನ್ನೇ ಬಳಸಿದ. ಪ್ರಜೆಗಳ ವಿರೋಧಿ ಈ ಪತ್ರಿಕೆಗಳು ಎಂದು ಜರಿದ. ಫೇಕ್‌ನ್ಯೂಸ್ ವೀರರು ಎಂದು ಕರೆದ. ಕೆಲವು ಪತ್ರಿಕೆಗಳ ಪತ್ರಕರ್ತರು ಸುದ್ದಿಗೋಷ್ಠಿಗೆ ಬಂದು ಪ್ರಶ್ನೆ ಕೇಳಿದರೆ ಫೇಕ್‌ನ್ಯೂಸ್‌ನ ಮಂದಿಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿ ಅವಮಾನಿಸುತ್ತಿದ್ದ. ಒಂದು ಹಂತದಲ್ಲಂತೂ ಅಮೇರಿಕಾದ ಪ್ರಮುಖ 30 ಮಾಧ್ಯಮಗಳಲ್ಲಿ 20 ಮಾಧ್ಯಮಗಳ ಮೇಲೆ ತನಗೆ ನಂಬಿಕೆಯೇ ಇಲ್ಲವೆಂದುಬಿಟ್ಟಿದ್ದ ಟ್ರಂಪ್. ಕೆಲವು ಮಾಧ್ಯಮಗಳಿಗಂತೂ ಆತನ ಪತ್ರಿಕಾಗೋಷ್ಠಿಯಲ್ಲಿ ಅವಕಾಶವೇ ಇರುತ್ತಿರಲಿಲ್ಲ. ಈ ವಿಚಾರದಲ್ಲಿ ಮೊದಲ ದಿನದಿಂದಲೂ ಮೋದಿ ಚಾಲಾಕು. ಯಾವುದನ್ನು ತಾವು ಹೇಳಲೇ ಇಲ್ಲ. ಆದರೆ ಹೇಳಬೇಕಾದ್ದೆಲ್ಲವನ್ನೂ ಇತರರು ಹೇಳುವಂತೆ ಮಾಡಿದರು. ಆರಂಭದ ದಿನಗಳಲ್ಲೇ ಸುಳ್ಳುಸುದ್ದಿ ಹಬ್ಬಿಸುವ ಪತ್ರಕರ್ತರಿಗೆ ಮಾಧ್ಯಮಿಂಡ್ರಿಗಳು (ಪ್ರೆಸ್ಟಿಟ್ಯೂಟ್ಸ್) ಎಂದು ಕರೆದಿದ್ದು ಮಂತ್ರಿಯಾಗಿದ್ದ ವಿ.ಕೆ ಸಿಂಗರು. ಮೋದಿ ಅದನ್ನು ಸಮರ್ಥಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ಚುನಾವಣೆಯ ಹೊತ್ತಲ್ಲಿ ಕಿಕ್ಕಿರಿದು ಸೇರಿದ್ದ ಜನಸಮೂಹದ ಮುಂದೆ ಪತ್ರಿಕೆಗಳು ಮಾಡುವ ಈ ಬಗೆಯ ಕೆಲಸವನ್ನು ಆಡಿಕೊಂಡು ಟ್ರೋಲ್ ಮಾಡುವವರಿಗೆ ಭರ್ಜರಿ ಆಹಾರವನ್ನೇ ಕೊಟ್ಟುಬಿಡುತ್ತಿದ್ದರು. ಹೀಗಾಗಿ ಅವರನ್ನು ದೂಷಿಸಲು ಪ್ರಯತ್ನಿಸಿದ ಪತ್ರಿಕೆಗಳೆಲ್ಲವೂ ಜನರಿಂದ ತಾವೇ ದೂಷಣೆಗೆ ಒಳಗಾದವೇ ಹೊರತು ಮೋದಿ ಜನರ ಅನುಕಂಪವನ್ನು ಎಂದೂ ಕಳೆದುಕೊಳ್ಳಲೇ ಇಲ್ಲ. 

ಅಮೇರಿಕಾದಲ್ಲಿ ಟ್ರಂಪ್ ಪ್ರಜಾಪ್ರಭುತ್ವ ವಿರೋಧಿ ಎಂದು ಬಿಂಬಿಸುವ ಪ್ರಯತ್ನವನ್ನು ಮೊದಲ ದಿನದಿಂದಲೂ ಮಾಡಲಾಗಿತ್ತು. ಆತನಿಗೆ ಮುಕ್ತ ಪತ್ರಿಕಾ ನೀತಿ, ನ್ಯಾಯವ್ಯವಸ್ಥೆ, ಚುನಾವಣಾ ವ್ಯವಸ್ಥೆ ಯಾವುದರ ಮೇಲೂ ವಿಶ್ವಾಸವಿಲ್ಲ ಎಂಬುದನ್ನು ಪದೇ ಪದೇ ಹೇಳಿ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷನಾಗಲು ಯೋಗ್ಯನೇ ಅಲ್ಲ ಎಂದು ನಂಬಿಸಿಬಿಡಲಾಗಿತ್ತು. ಈ ಪ್ರಯತ್ನ ಮೋದಿಗೂ ಮಾಡಿದ್ದಾರೆ. ಮಾತೆತ್ತಿದರೆ ಅವರನ್ನು ಸಂವಿಧಾನ ವಿರೋಧಿ ಎಂದು ಕರೆಯುವ ಪಟಾಲಮ್ಮೇ ಇದೆ. ಆದರೆ ಕಾಂಗ್ರೆಸ್ಸಿನ ಯೋಗ್ಯತೆ ಎಂಥದ್ದೆಂದರೆ ಬದುಕಿರುವಷ್ಟೂ ಕಾಲ ಅಂಬೇಡ್ಕರ್‌ರಿಗೆ ಕಿರುಕುಳ ಕೊಟ್ಟ ಅವರು ಅಂಬೇಡ್ಕರರ ಪಂಚಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಮೋದಿಯವರ ಮುಂದೆ ಕ್ಷಣಕಾಲ ಎದೆಯೆತ್ತಿ ನಿಲ್ಲದ ಸ್ಥಿತಿ ತಲುಪಿದ್ದಾರೆ. ಹೀಗಾಗಿ ಟ್ರಂಪಿಗಾದ ರೀತಿಯಲ್ಲೇ ಪ್ರಜಾಪ್ರಭುತ್ವ ವಿರೋಧಿ ಎಂದು ಮೋದಿಯನ್ನು ಮಟ್ಟ ಹಾಕುವುದು ಕಷ್ಟ! ಇನ್ನೂ ಹಾಸ್ಯಾಸ್ಪದ ಸಂಗತಿ ಎಂದರೆ ಭಾರತದಲ್ಲಿ ಚುನಾವಣಾ ವ್ಯವಸ್ಥೆಯನ್ನು ಧಿಕ್ಕರಿಸಿ ತಾವು ಸೋತಾಗ ಇವಿಎಮ‌್‌ಗಳನ್ನು ಬೈಯ್ಯುತ್ತಾ ಗೆದ್ದಾಗ ಸಾಧನೆ ಎಂದು ಬೀಗುವ ಪ್ರತಿಪಕ್ಷಗಳಿಗೆ ಮಾತನಾಡಲು ಮುಖವೇ ಇಲ್ಲ. ಟ್ರಂಪ್‌ನ ಅಧ್ಯಕ್ಷ ಪದವಿಗೆ ಕೊನೆಯ ಮೊಳೆಗಳಾಗಿ ಬಿದ್ದದ್ದು ಬ್ಲಾಕ್ ಲೈವ್ಸ್ ಮ್ಯಾಟರ್ ಹೋರಾಟ. ಜಾರ್ಜ್ ಫ್ಲಾಯ್ಡ್‌ನ ಸಾವಿನ ನಂತರ ದೊಡ್ಡ ಪ್ರಮಾಣದಲ್ಲಿ ಅಲ್ಲಿ ಜನ ಬೀದಿಗೆ ಬಂದರು. ಟ್ರಂಪ್ ಅಧಿಕಾರದಲ್ಲೇ ಇದ್ದರೆ ಬಿಳಿಯರು ಮತ್ತು ಕರಿಯರ ನಡುವಣ ಅಂತರ ಹೆಚ್ಚುತ್ತದೆ ಎಂದು ನಂಬಿಸಿದರು. ಕೆಲವು ಕರಿಯರು ಬೀದಿಗೆ ಬಂದು ತಮಗಿಂದು ಬದುಕಲು ಕಷ್ಟವಾಗುತ್ತಿದೆ ಎಂದು ಕಣ್ಣೀರು ಸುರಿಸಿದರು. ಅಲ್ಲಿಗೆ ಟ್ರಂಪ್ ಅಮೇರಿಕಾದ ಪಾಲಿನ ಕಳಂಕ ಎಂದು ಪ್ರಜ್ಞಾವಂತರು ನಂಬುವಂತಾಯ್ತು. ಭಾರತದಲ್ಲಿ ಬರಲಿರುವ ದಿನಗಳಲ್ಲಿ ಇಂಥದ್ದೊಂದು ಪ್ರಯತ್ನ ನಿಸ್ಸಂಶಯವಾಗಿ ನಡೆಯಲಿದೆ. ಅದಾಗಲೇ ರಾಮಚರಿತ ಮಾನಸವನ್ನು ಸುಡುವ ಮೂಲಕ ದಲಿತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಲಾಯ್ತು. ಆದರೆ ಇದು ಬಿಳಿಯರ ಮತ್ತು ಕರಿಯರ ಹೋರಾಟದಷ್ಟು ಸುಲಭವಲ್ಲ ಏಕೆಂದರೆ, ರಾಮ ಬರಿ ಬ್ರಾಹ್ಮಣರ ಆರಾಧ್ಯದೈವವಲ್ಲ, ಈ ನಾಡಿನ ಪ್ರತಿಯೊಬ್ಬನೂ ಆತನನ್ನು ಹೃದಯ ಸಿಂಹಾಸನಾಧೀಶ್ವರನೆಂದು ಭಾವಿಸುತ್ತಾನೆ. ಸಮಾಜವಾದಿ ಪಕ್ಷ ಈ ನಡೆಯಿಂದ ಎಂತಹ ತಪರಾಕಿಯನ್ನು ತಿಂದಿತೆಂದರೆ ಎಮ್ಎಲ್ಸಿ ಚುನಾವಣೆಗಳಲ್ಲಿ ತೊಳೆದೇ ಹೋಯ್ತು! 

ಅಮೇರಿಕನ್ನರು ಟ್ರಂಪ್‌ನ ಸೋಲಿನ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಚುನಾವಣಾ ಅಕ್ರಮ ಮತ್ತು ಸಂಸತ್ ಭವನಕ್ಕೆ ಮುತ್ತಿಗೆ. ಇವೆರಡನ್ನೂ ನಾವು ಕಾಣಲಿಕ್ಕಿದೆ. ವ್ಯವಸ್ಥಿತವಾಗಿ ಒಂದೇ ಜನಾಂಗ ತಮ್ಮ ಸಂಖ್ಯೆಯನ್ನು ಏರಿಸಿಕೊಳ್ಳುತ್ತಿರುವ ರೀತಿ ಮತ್ತು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರನಾಗಿ ನೊಂದಾಯಿಸಿಕೊಳ್ಳುವ ಅವರ ಪ್ರಯತ್ನವನ್ನು ಕಂಡರೆ 2024ರಲ್ಲಿ ಇಲ್ಲೂ ಆ ಪ್ರಯೋಗ ನಡೆದರೆ ಅಚ್ಚರಿ ಪಡಬೇಕಿಲ್ಲ. ಆದರೆ ಮೋದಿ ಈ ಬಾರಿ ಮತದಾನ ಮಾಡಲು ಆಧಾರ್ ಕಾರ್ಡನ್ನು ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರಲ್ಲ, ಅದು ಅಮೇರಿಕಾದಲ್ಲಿ ನಡೆದಂತಹ ಅಕ್ರಮಕ್ಕೂ ಕಡಿವಾಣ ಹಾಕಬಹುದು. ಟ್ರಂಪ್ ಭಂಡತನದ ಮೇಲೆ ಅಧಿಕಾರವನ್ನು ಅನುಭವಿಸಿದರು ಮತ್ತು ತಾನು ಯಾರಿಗೂ ಅಂಜಬೇಕಿಲ್ಲವೆಂಬ ದರ್ಪದಿಂದ ಗೂಳಿಯಂತೆ ನುಗ್ಗಿದರು. ಬಹುತೇಕರಿಗೆ ಅದು ಇಷ್ಟವಾಯ್ತು ನಿಜ, ಆದರೆ ಅದೇ ಅನೇಕರಿಗೆ ಕಷ್ಟವೂ ಆಯ್ತು. ಸ್ವತಃ ಅವರ ಪಕ್ಷದ ಸದಸ್ಯರೇ ಕೊನೆಯ ಹಂತದಲ್ಲಿ ದಳ ಬದಲಾಯಿಸಿದ ಘಟನೆಗಳು ನಡೆದವು. ಆದರೆ ಮೋದಿಯ ವಿಚಾರದಲ್ಲಿ ಹಾಗಾಗುವ ಸಾಧ್ಯತೆಯೇ ಇಲ್ಲ. ಏಕೆಂದರೆ ತಾವಾಡುವ ಮಾತಿನ ಮೇಲೆ ಅವರಿಗೆ ಸ್ಪಷ್ಟ ಎಚ್ಚರಿಕೆ ಇದೆ ಮತ್ತು ಯಾವ ಸಂದರ್ಭದಲ್ಲಿ ಇವರೇನು ಮಾಡಬಲ್ಲರು ಎಂಬ ಮುನ್ಸೂಚನೆಯೂ ಇರುವುದರಿಂದ ಅದಕ್ಕೆ ಸೂಕ್ತವಾದ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಅದಾನಿಯವರ ಮೇಲಿನ ಆರೋಪವನ್ನೊಮ್ಮೆ ನೋಡಿ. ಭಾರತದ ಶಕ್ತಿಯೇ ಸಬಲವಾದ ಆರ್ಥಿಕತೆ. ಅದನ್ನು ಮುರಿದು ಜಾಗತಿಕ ಮಟ್ಟದ ಈ ಭರವಸೆಯನ್ನು ಕೊನೆಗಾಣಿಸುವ ಪ್ರಯತ್ನವನ್ನು ಹಿಂಡನ್‌ಬರ್ಗ್ ಮೂಲಕ ಮಾಡಲಾಗಿದೆ. ಅದಾನಿಯೂ ಕೂಡ ಅವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಸಮರ್ಥವಾದ ಉತ್ತರ ಕೊಟ್ಟು, ನನ್ನ ನೆಪದಲ್ಲಿ ಭಾರತದ ಮೇಲೆ ಆಕ್ರಮಣ ಮಾಡುತ್ತಿದ್ದಾರೆಂದು ಸೂಚ್ಯವಾಗಿ ಹೇಳಿದ್ದಾರೆ. ಕೆಲವು ಕಾಂಗ್ರೆಸ್ಸಿಗರು ಮತ್ತು ಮೋದಿಯನ್ನು ಕಂಡರಾಗದ ಪತ್ರಕರ್ತರು ಇದನ್ನು ಸಂಭ್ರಮಿಸಿ ಅದಾನಿಯನ್ನು ಮುಗಿಸಲೆತ್ನಿಸುತ್ತಿದ್ದರೆ, ಅತ್ತ ಅನೇಕ ಭಾರತೀಯ ಉದ್ಯಮಿಗಳು ಅದಾನಿಯ ಬೆಂಬಲಕ್ಕೆ ನಿಂತು ವಿದೇಶಿ ವರದಿಗಳನ್ನು ನಂಬಬೇಡಿ ಎಂಬ ಎಚ್ಚರಿಕೆ ನೀಡುತ್ತಿದ್ದಾರೆ. ಮೋದಿಯನ್ನು ವಿರೋಧಿಸುವ ಭರದಲ್ಲಿ ಇವರೆಲ್ಲ ದೇಶ ವಿರೋಧಿಗಳೇ ಆಗುತ್ತಿದ್ದಾರೆ. ಕದನ ಕಾಂತಾರ ಶರುವಾಗಿದೆ ಅಷ್ಟೇ. ಇನ್ನು ರಂಗೇರುತ್ತದೆ. ದೇಶದ್ರೋಹಿಗಳು ಕೊನೆಗೂ ಸಾವನ್ನಪ್ಪುತ್ತಾರೆ ಮತ್ತು ದೇಶಭಕ್ತರೆಲ್ಲ ದೈವದ ಮುಂದೆ ಒಂದಾಗುತ್ತಾರೆ. 

ದೇಶವನ್ನು ವಿರೋಧಿಸುವವರೆಲ್ಲ ಹೀಗೆ ಒಟ್ಟಾಗಿ ನಿಂತರೆ ದೇಶವನ್ನು ಪ್ರೀತಿಸುವ ನಾವು ಸುಮ್ಮನಿರುತ್ತೇವೇನು? ಕಟ್ಟೋಣ ಬನ್ನಿ ಹೊಸ ಭಾರತವ!

ದೇಹವನ್ನು ಮೀರಿ, ಕಣ ಕಣದಲ್ಲೂ ಶಿವನಾದರು!

ದೇಹವನ್ನು ಮೀರಿ, ಕಣ ಕಣದಲ್ಲೂ ಶಿವನಾದರು!

ಬೆಳಗಿನ ಚುಮು ಚುಮು ಚಳಿ. ಮೈಮುರಿದುಕೊಂಡು ಹಾಸಿಗೆಯಿಂದ ಏಳುವುದೇ ಕಷ್ಟ. ಸೂರ್ಯನೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಎದ್ದು ಮುಖ ತೋರಿಸಲಿಲ್ಲ. ಅಂತಹುದರಲ್ಲಿ ಜ್ಞಾನ ಸೂರ್ಯನ ಪ್ರಖರ ತೇಜಕ್ಕೆ ತಮ್ಮ ತಾವು ಒಡ್ಡಿಕೊಂಡು ಮನಸಿಗೆ ಅಂಟಿದ ಜಾಡ್ಯವನ್ನು ಹೋಗಲಾಡಿಸಿಕೊಳ್ಳಲೆಂದು ನೂರಾರು, ಊಹೂಂ ಸಾವಿರಾರು ಮಂದಿ ಮೈದಾನದ ತುಂಬೆಲ್ಲಾ ನೆರೆಯುತ್ತಾರಲ್ಲ; ಇಂತಹ ಅಚ್ಚರಿಯೊಂದು ನೋಡಲು ಸಿಗುತ್ತಿದ್ದುದು ಕರ್ನಾಟಕದ ಉತ್ತರ ಭಾಗದಲ್ಲಿ ಮಾತ್ರ. ಅದೂ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕಾರ್ಯಕ್ರಮದಲ್ಲಿ! ಹೌದು. ಅವರ ಅತಿ ಸಹಜ, ಸರಳ, ಸ್ನಿಗ್ಧ ಮಾತುಗಳನ್ನು ಕೇಳಲೆಂದು ನೆರೆಯುತ್ತಿದ್ದ ಆ ಮುಗ್ಧ ಮಂದಿ ಹೃದಯದ ತುಂಬ ಪ್ರವಚನದ ಸಾಲುಗಳನ್ನು ತುಂಬಿಕೊಂಡು ಮತ್ತೆ ಮತ್ತೆ ಮೆಲ್ಲುತ್ತ ಮನೆಯತ್ತ ಹೆಜ್ಜೆ ಹಾಕುವುದನ್ನು ಕಂಡಾಗ ಅಚ್ಚರಿಯಾಗುತ್ತಿತ್ತು. ಏಕೆ ಗೊತ್ತೇ? ಸಿದ್ದೇಶ್ವರ ಸ್ವಾಮೀಜಿಗಳ ಮಾತಿನಲ್ಲಿ ನಾನೆಂದೂ ಏರಿಳಿತವನ್ನು ಕಂಡಿಲ್ಲ. ‘ಶ್ರೇಷ್ಠ ಭಾಷಣಕಾರನಾಗುವುದು ಹೇಗೆ?’ ಎಂದು ಉದ್ದುದ್ದ ಭಾಷಣ ಮಾಡುತ್ತಾರಲ್ಲ ಅವರ ಯಾವ ನಿಯಮಗಳ ಚೌಕಟ್ಟಿಗೂ ಸ್ವಾಮಿಗಳು ಒಳಗಾಗಲಿಲ್ಲ. ಅವರ ಹೃದಯ ಅರಳಿತ್ತು. ಅಲ್ಲಿಂದ ಸ್ಫುರಣಗೊಂಡ ಒಂದೊಂದು ಮಾತೂ ನೇರ ಜನರ ಹೃದಯವನ್ನೇ ತಲುಪುತ್ತಿತ್ತು. ಅಲ್ಲಿ ನೆಲೆ ನಿಲ್ಲುತ್ತಿತ್ತು ಮತ್ತು ಬದಲಾವಣೆಗೆ ಪ್ರೇರಣೆಯಾಗುತ್ತಿತ್ತು. ನಿಸ್ಸಂಶಯವಾಗಿ ಅವರ ಒಂದು ತಿಂಗಳ ಪ್ರವಚನ ಒಂದು ದಶಕಕ್ಕಾಗುವಷ್ಟು ಬದಲಾವಣೆ ತರುತ್ತಿತ್ತು. ಪ್ರಪಂಚವನ್ನೇ ಬೆನ್ನಟ್ಟುವ ಮಂದಿಯನ್ನೂ ಒಂದೆಡೆ ಕಟ್ಟಿಹಾಕಿ ಅಂತರಂಗದ ಒಳಹೊಕ್ಕುವಂತೆ ಮಾಡಿಸಬಲ್ಲ ಅಗೋಚರ ಶಕ್ತಿ ಅವರಿಗಿತ್ತು.

ಅಚ್ಚರಿ ಏನು ಗೊತ್ತೇ? ಅಂತಹುದೊಂದು ಶಕ್ತಿ ಇದ್ದಾಗ್ಯೂ, ನಾಡಿನಾದ್ಯಂತ ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದಾಗ್ಯೂ ಅವರು ನಿಂತ ನೆಲವನ್ನು ಕಳೆದುಕೊಳ್ಳಲಿಲ್ಲ. ಕೀರ್ತಿ ಪಿಶಾಚಿ ತಲೆಯೇರಲು ಬಿಡಲಿಲ್ಲ. ಸಹಜವಾಗಿಯೇ, ಮಗುವಿನಂತೆಯೇ ಬದುಕಿಬಿಟ್ಟರು. ಒಮ್ಮೆ ಅವರೊಡನೆ ಬೆಳಗಿನ ನಡಿಗೆಯಲ್ಲಿ ನಿರತನಾಗಿದ್ದಾಗ ಕುರ್ತಾ ಕುತ್ತಿಗೆಯತ್ತ ಹರಿದಿರುವುದನ್ನು ಕಂಡು, ಸಂಕೋಚದಿಂದಲೇ ‘ಹೀಗೇಕೆ?’ ಎಂದು ಪ್ರಶ್ನಿಸಿದೆ. ಅವರು ನಗುತ್ತಲೇ ಬಟ್ಟೆ ಇನ್ನೂ ಚೆನ್ನಾಗಿದೆ. ಪೂರ್ಣ ಜೀರ್ಣವಾಗುವವರೆಗೂ ಬಳಸುವೆ ಎಂದರು! ಅವಾಕ್ಕಾದೆ. ಅವರು ಕೇಳಿದರೆ ಅಷ್ಟೇ ಏಕೆ? ಬೇಡವೆಂದು ಹೇಳದೇ ಸುಮ್ಮನಿದ್ದರೂ ಸಾಕಿತ್ತು. ಬಟ್ಟೆಯ ರಾಶಿಯೇ ಬಂದು ಬೀಳುತ್ತಿತ್ತು. ಆದರೆ ಬೈರಾಗಿಯ ಬದುಕನ್ನು ಆವಾಹಿಸಿಕೊಂಡವಗೆ ಬಟ್ಟೆಯ ಚಿಂತೆಯೇಕೆ? ಕುವೆಂಪು ವಿವೇಕಾನಂದರ ಸನ್ಯಾಸಿ ಗೀತೆಯನ್ನು ಅನುವಾದಿಸುತ್ತ ಬರೆಯುತ್ತಾರಲ್ಲ ‘ಗಗನವೇ ಮನೆ, ಹಸುರೆ ಹಾಸಿಗೆ ಮನೆಯು ಸಾಲ್ವುದೆ ಚಾಗಿಗೆ?’ ಅಂತ. ಅಕ್ಷರಶಃ ಆ ಹಾಡಿಗೆ ಅನ್ವರ್ಥವಾಗಿದ್ದರು ಅವರು.

ಮನೆಯಲ್ಲೇನೂ ಬಡತನವಿರಲಿಲ್ಲ. ತಂದೆ ಜಮೀನ್ದಾರರು. ಅವರ ಮನೆಯೇ 40 ಅಂಕಣದ್ದು. ಆದರೆ ಸಿರಿವಂತಿಕೆ ಎಂದಿಗೂ ಅವರನ್ನು ಸೆಳೆಯಲಿಲ್ಲ. 14ರ ವಯಸ್ಸಿನಲ್ಲಿಯೇ ಶಾಲೆಗೆ ಹೋದ ಹುಡುಗ ಕಾಣೆಯಾಗಿ ಊರ ದೇವಸ್ಥಾನದಲ್ಲಿ ಧ್ಯಾನಕ್ಕೆ ಕೂರುತ್ತಿದ್ದುದನ್ನು ಗಮನಿಸಿದವರಿದ್ದಾರೆ. ಮುಂದೆ ಪ್ರವಚನ ಮಾಡುತ್ತ ಬಂದ ಮಲ್ಲಿಕಾರ್ಜುನ ಸ್ವಾಮಿಗಳ ಪ್ರಭಾವಕ್ಕೆ ಒಳಗಾದ ತರುಣ ಅವರನ್ನೇ ಗುರುವಾಗಿ ಸ್ವೀಕರಿಸಿ ಮನೆಯ ತ್ಯಾಗ ಮಾಡಿದ. ಗೀತೆಯಿಂದ ಹಿಡಿದು ಯೋಗಸೂತ್ರಗಳವರೆಗೆ, ಉಪನಿಷತ್ತುಗಳಿಂದಾರಂಭಿಸಿ ಶರಣ ಸಾಹಿತ್ಯದವರೆಗೆ ಎಲ್ಲವನ್ನೂ ಕರತಲಾಮಲಕವಾಗಿಸಿಕೊಂಡ ಶ್ರೀಗಳು ಗುರುಗಳ ಆದೇಶದ ಮೇರೆಗೆ ಅವರ ಎಲ್ಲ ಜವಾಬ್ದಾರಿಗಳನ್ನು ತಮ್ಮ ಹೆಗಲಿಗೇರಿಸಿಕೊಂಡು ಮುನ್ನಡೆದರು. ಬಿಜಾಪುರದ ಅವರ ಜ್ಞಾನ ಯೋಗಾಶ್ರಮ ಇತರೆಲ್ಲ ಮಠಗಳಂತೆ ಆಕಾರದಲ್ಲಿ ಬೃಹತ್ತಾದ್ದೋ, ವಿಸ್ತಾರದಲ್ಲಿ ಆಲದಂತೆ ಹಬ್ಬಿದ್ದೋ ಅಲ್ಲ. ಅದು ಅತ್ಯಂತ ಸಾಮಾನ್ಯವಾಗಿ ಯಾರ ದೃಷ್ಟಿಯೂ ತಾಕದಂತೆ ಶ್ರೀಗಳಷ್ಟೇ ಸರಳವಾಗಿರುವಂಥದ್ದು. ಅದು ಜ್ಞಾನ ದಾಸೋಹದ ಕೇಂದ್ರ ಕೂಡ!

ಸಿದ್ದೇಶ್ವರ ಸ್ವಾಮಿಗಳು ಇತರೆಲ್ಲ ಮಠಾಧೀಶರುಗಳಂತೆ ಶಾಲೆ-ಕಾಲೇಜುಗಳನ್ನು ಕಟ್ಟುವ, ಆಸ್ಪತ್ರೆಗಳನ್ನು ಕಟ್ಟುವ ಹಠಕ್ಕೆ ಬಿದ್ದವರಲ್ಲ. ಅವರು ನೊಂದ ಹೃದಯಕ್ಕೆ ತಂಪೆರೆವ ಪ್ರವಚನಗಳ ಮಾರ್ಗವನ್ನು ಅನುಸರಿಸಿದರು. ಜೀವನದ ಕೊನೆಯ ಉಸಿರಿನವರೆಗೂ ಅದೇ ಅವರ ಕಾಯಕ. ಗುರುಗಳ ಆದೇಶವನ್ನು ಶ್ರದ್ಧೆಯಿಂದ ಪಾಲಿಸಿದರು!

ಇಷ್ಟು ಖ್ಯಾತನಾಮರೂ, ಭಕ್ತರ ಹೃದಯ ಸಿಂಹಾಸನಾಧೀಶ್ವರರೂ ಆದ ಸ್ವಾಮಿಗಳು ಜೋಳಿಗೆ ಹಿಡಿದು ಕೈ ಚಾಚಿದ ಉದಾಹರಣೆಯೇ ಇಲ್ಲ. ಅಕ್ಷರಶಃ ಅವರದ್ದು ‘ಅಪರಿಗ್ರಹ ಯೋಗ’ ಅವರು ಹಾಕುವ ಕುರ್ತಾಕ್ಕೆ ಜೇಬೇ ಇರಲಿಲ್ಲ. ಒಮ್ಮೆ ಬಾಯ್ಮಾತಿಗೆ ಕೇಳಿದಾಗ ‘ಏನ ತುಂಬಲೆಂದು ಜೇಬು’ ಎಂದು ಹೇಳಿ ನಕ್ಕುಬಿಟ್ಟಿದ್ದರು. ಮೈಸೂರಿನ ಸುತ್ತೂರಿಗೆ ನರೇಂದ್ರ ಮೋದಿಯವರು ಬಂದಿದ್ದಾಗ ‘ಅವರಿಗೆ ಜೇಬು ಇದೆ, ಆದರೆ ತುಂಬುವ ಮನಸಿಲ್ಲ’ ಎಂದು ಹೇಳಿ ಮುಕ್ತಕಂಠದಿಂದ ಹೊಗಳಿದ್ದರು ಶ್ರೀಗಳು! ಬಹುಶಃ ರಾಜಕಾರಣಿಯೊಬ್ಬರನ್ನು ಇಷ್ಟು ಉದಾರವಾಗಿ ಅವರು ಗುಣಗಾನ ಮಾಡಿದ್ದನ್ನು ನಾನಂತೂ ಒಮ್ಮೆ ಮಾತ್ರ ಕೇಳಿದ್ದು! ಹಾಗಂತ ಅವರು ಯಾರದ್ದಾದರೂ ಅವಗುಣಗಳನ್ನು ಎತ್ತಿ ಆಡುತ್ತಿದ್ದರಾ ಅಂದರೆ ಅದೂ ನನಗೆಂದಿಗೂ ಗಮನಕ್ಕೆ ಬರಲಿಲ್ಲ. ನೀವು ದರೋಡೆಕೋರನನ್ನೇ ಅವರೆದುರಿಗೆ ನಿಲ್ಲಿಸಿದರೂ ಅವನೊಳಗೆ ಒಂದು ಒಳ್ಳೆಯ ಗುಣವನ್ನು ಹೆಕ್ಕಿ ತೆಗೆದು ಕೊಂಡಾಡುತ್ತಿದ್ದರು. ಶಾರದಾಮಾತೆ ಹೇಳುತ್ತಿದ್ದರಲ್ಲ ‘ಯಾರಲ್ಲಿಯೂ ದೋಷಗಳನ್ನು ಕಾಣಬೇಡ’ ಅಂತ. ಅದನ್ನು ಅನೇಕರು ತಮ್ಮ ಭಾಷಣಗಳಲ್ಲಿ ಉಲ್ಲೇಖ ಮಾಡುತ್ತಾರೆ. ಹಾಗೆ ಬದುಕಿದ್ದವರು ಮಾತ್ರ ಸಿದ್ದೇಶ್ವರ ಸ್ವಾಮಿಗಳೇ. 

ಒಮ್ಮೆ ವೇದಿಕೆಯ ಮೇಲೆ ಕುಳಿತಿದ್ದ ಸ್ವಾಮಿಗಳು ನೆರೆದಿದ್ದ ಅಸಂಖ್ಯ ಜನರನ್ನುದ್ದೇಶಿಸಿ ಮಾತನಾಡುತ್ತಾ ತಮ್ಮ ವಿದೇಶ ಪ್ರವಾಸಗಳ ಅನುಭವ ಕೊಚ್ಚಿಕೊಳ್ಳುತ್ತಿದ್ದರು. ಸಿದ್ದೇಶ್ವರ ಸ್ವಾಮಿಗಳಂತಹ ಅನುಭಾವಿಗಳ ಮುಂದೆ ಈ ವಿದೇಶ ಯಾತ್ರೆಯ ಅನುಭವದ ವರ್ಣನೆ ನಿಜಕ್ಕೂ ಕೇಳಲು ತ್ರಾಸದಾಯಕವೇ ಆಗಿತ್ತು. ಮುಂದೆ ಇವರನ್ನು ಸಿದ್ದೇಶ್ವರ ಸ್ವಾಮಿಗಳೆದುರು ಭೇಟಿಯಾದಾಗ ಅವರನ್ನು ಪರಿಚಯಿಸಿಕೊಡುತ್ತ ‘ಇವರು ಜಗತ್ತೆಲ್ಲ ಸುತ್ತಾಡಿರುವ ಮಹಾತ್ಮರು. ದೇಶ ನೋಡು ಕೋಶ ಓದು ಅಂತಾರಲ್ಲ ಹಾಗೇ ಇವರು ಜಗತ್ತು ನೋಡಿದಾರೆ, ಅಧ್ಯಯನ ಮಾಡಿದಾರೆ’ ಎಂದುಬಿಟ್ಟರು. ನಾನು ಬಿಟ್ಟ ಕಣ್ಣು ಮುಚ್ಚಲು ಕೆಲಕಾಲ ಹಿಡಿಯಿತು. ಅವರ ವ್ಯಕ್ತಿತ್ವವೇ ಹಾಗೇ. ಯಾರನ್ನೂ ಯಾವಾಗಲೂ ನೋಯಿಸಿದವರೇ ಅಲ್ಲ. ಆತ್ಮವಿಶ್ವಾಸವನ್ನು ತುಂಬುವಂತಹ, ಅದನ್ನು ಹೆಚ್ಚಿಸುವಂತಹ ಗಣಿ ಅವರು.

ಅವರನ್ನು ಭೇಟಿಯಾದಾಗಲೆಲ್ಲ ಸುದೀರ್ಘಕಾಲ ಅವರೊಂದಿಗೆ ನಡಿಗೆಯಲ್ಲಿ ಸೇರಿಕೊಳ್ಳುವ ಅವಕಾಶ ನನಗೆ ಸಿಗುತ್ತಿತ್ತು. ಒಮ್ಮೆಯೂ ಅವರು ತಮ್ಮ ಪ್ರವಚನದ ಕುರಿತು ಅದರ ವಿಷಯ ವಸ್ತುವಿನ ಕುರಿತು ಚರ್ಚಿಸಿದ್ದು ನಾನು ಕೇಳಿಯೇ ಇಲ್ಲ. ನಡಿಗೆಯುದ್ದಕ್ಕೂ ರಾಷ್ಟ್ರದ ಪ್ರಸ್ತುತ ಪರಿಸ್ಥಿತಿಯ ಕುರಿತು ಅವರ ಪ್ರಶ್ನೆಗಳು ಇರುತ್ತಿದ್ದವು. ಸಾಂಸ್ಕೃತಿಕ ಆಕ್ರಮಣವಿರಲಿ, ಪ್ರತ್ಯಕ್ಷ ಯುದ್ಧವೇ ಇರಲಿ ಅವರು ಕೂಲಂಕಷವಾಗಿ ವಿಚಾರ ಮಾಡುತ್ತಿದ್ದರು. ಭಾಷೆಯ ಸಮಸ್ಯೆಯಿರಲಿ, ಜನಸಂಖ್ಯೆ ಸ್ಫೋಟಗೊಳ್ಳುವುದರ ವಿಚಾರವೇ ಇರಲಿ ಅವರು ಆಳಕ್ಕಿಳಿದು ಚರ್ಚಿಸುತ್ತಿದ್ದರು. ಅನೇಕ ಬಾರಿ ಅವರ ಅಂತರ್ದೃಷ್ಟಿ ಅದೆಷ್ಟು ಸೂಕ್ಷ್ಮವಾಗಿರುತ್ತಿತ್ತೆಂದರೆ ಅದುವರೆಗೆ ನಾವು ನಂಬಿದ ಸತ್ಯವನ್ನು ತರ್ಕಬದ್ಧವಾಗಿಯೇ ಸುಳ್ಳೆನಿಸುವಂತೆ ಮಾಡುತ್ತಿದ್ದರು. ಅವರೆಂದಿಗೂ ವಾದ ಮಾಡುತ್ತಿರಲಿಲ್ಲ, ಆದರೆ ಸೂಕ್ಷ್ಮವಾಗಿ ಅರ್ಥವಾಗುವಂತೆ ಹೇಳುತ್ತಿದ್ದರು. ನನಗೆ ಚೆನ್ನಾಗಿ ನೆನಪಿದೆ. ನಮ್ಮೆಲ್ಲ ಸುದೀರ್ಘ ಪ್ರಯಾಸದ ನಂತರವೂ ಸಮಾಜದಲ್ಲಿ ಬದಲಾವಣೆ ಕಾಣುತ್ತಿಲ್ಲ. ಹೀಗಾಗಿ ಈ ಪ್ರಯಾಸಗಳೆಲ್ಲ ವ್ಯರ್ಥ ಎಂಬ ಮನದಾಳದ ಭಾವನೆಯನ್ನು ಅವರೆದುರು ವ್ಯಕ್ತಪಡಿಸಿದೆ. ಅವರು ಗಂಭೀರವದನರಾಗಿ ‘ಇಂದು ನಾವು ಮಾಡುವ ಪ್ರಯತ್ನಕ್ಕೆ ಒಂದು ಪೀಳಿಗೆಯ ನಂತರ ಪರಿಹಾರ ಸಿಗುವುದೆಂಬ ಭರವಸೆ ಇಡಬೇಕು. ಆಗ ಮಾತ್ರ ಕೆಲಸ ಮಾಡಬಹುದು’ ಎಂದರು. ನಾವು ಆರಂಭಿಸಿದ ಕೆಲಸ 25 ವರ್ಷಗಳ ನಂತರ ಫಲ ಕೊಡುವುದೆಂಬ ವಿಶ್ವಾಸವಿಟ್ಟು ಮುನ್ನುಗ್ಗಬೇಕೆಂಬುದು ಅವರ ಕಿವಿ ಮಾತಾಗಿತ್ತು. ಬಹುಶಃ ಸಮಾಜದ ಕೆಲಸ ಮಾಡುವ ಪ್ರತಿಯೊಬ್ಬನೂ ಇಷ್ಟು ತಾಳ್ಮೆಯಿಂದ, ಸಾವಧಾನವಾಗಿ ಕಾದರೆ ಬದಲಾವಣೆ ಶತಃಸಿದ್ಧ. ಸ್ವತಃ ಸ್ವಾಮೀಜಿಯವರು ‘ಈ ಜನ ಸುಮ್ಮಸುಮ್ಮನೆ ಬರುತ್ತಿಲ್ಲ. 20 ವರ್ಷ ಚೆನ್ನಾಗಿ ಪರೀಕ್ಷಿಸಿ ಅಕ್ಕಿ ಬೆಂದಿದೆ ಎಂದು ಖಾತ್ರಿಯಾದ ಮೇಲೆಯೇ ಬರುತ್ತಿರೋದು’ ಎಂದು ಪ್ರವಚನಕ್ಕೆ ಬರುವ ಜನರ ಕುರಿತಂತೆ ಹೇಳುತ್ತಿದ್ದರಂತೆ!

ಅವರ ದಿನಚರಿಯೇ ವಿಶಿಷ್ಟವಾದ್ದು. ಅತಿ ಕಡಿಮೆ ನಿದ್ದೆ. ಬೆಳಿಗ್ಗೆ ಬಲುಬೇಗ ಪ್ರವಚನ ಕಾರ್ಯಕ್ರಮ. ಅದು ಮುಗಿದೊಡನೆ ಬೆವರುವಷ್ಟು ನಡಿಗೆ. ಅಲ್ಪ ಪ್ರಸಾದ. ಅಧ್ಯಯನ-ಪಾಠ- ಸಂಜೆಯಾದೊಡನೆ ಮತ್ತಷ್ಟು ನಡಿಗೆ. ಊರಿನ ಗಣ್ಯರನ್ನು, ತಿಳಕೊಂಡವರನ್ನು ಕೂರಿಸಿಕೊಂಡು ವಿಚಾರ ವಿನಿಮಯ. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದುದು ಬಲುಕಡಿಮೆಯೇ. ಉಳಿದವರನ್ನು ಮಾತನಾಡಿಸಿ ಸದ್ಯದ ಆಗು-ಹೋಗುಗಳನ್ನು ತಿಳಿದುಕೊಳ್ಳುತ್ತಿದ್ದರು. ಅವರದ್ದು ಸದ್ದಿಲ್ಲದ ಸಾಧನೆ. ಜೇನುಗೂಡಿನೊಳಗೆ ಶೇಖರಿಸಿಟ್ಟಿರಬಹುದಾದ ಜೇನಿನ ಪ್ರಮಾಣ ಗೊತ್ತಾಗೋದು ಸುಲಭವಲ್ಲ. ಹಾಗೆಯೇ ಅವರ ಬದುಕು ಕೂಡ. 

ಎಲ್ಲಿಗೆ ಹೋದರೂ, ಯಾರೊಂದಿಗೆ ಕೆಲಕಾಲ ಕಳೆದರೂ ಅವರು ಆಪ್ತರಾಗಿಬಿಡುತ್ತಿದ್ದರು. ಸರಳತೆಗೆ ಮತ್ತು ಪ್ರೇಮಕ್ಕಿರುವ ಶ್ರೇಷ್ಠ ಶಕ್ತಿ ಅದು. ಕೊಡಗಿನ ಒಂದು ಪುಟ್ಟ ಹಳ್ಳಿ ಪೊನ್ನಂಪೇಟೆ. ಅಲ್ಲಿ ಒಂದು ಮನೆಯಲ್ಲಿ ಇವರಿಗೆ ವಾಸ್ತವ್ಯಕ್ಕೆ ಅಣಿಗೊಳಿಸಲಾಗಿತ್ತು. ಮನೆಯವರಿಗೆ ಇವರ ಪರಿಚಯವಿಲ್ಲವಾದ್ದರಿಂದ ಇತರೆಲ್ಲ ಸಾಧುಗಳಂತೇ ಇವರನ್ನೂ ಗಣಿಸಿ ಸುಮ್ಮನಾದರು. ಇವರ ಆಗಮನಕ್ಕೆ ಮುನ್ನ ಮನೆ ವೀಕ್ಷಣೆಗೆ ಬಂದ ಠಾಕುಠೀಕಿನ ಸ್ವಾಮಿಗಳನ್ನೇ ಸಿದ್ದೇಶ್ವರ ಸ್ವಾಮಿಗಳೆಂದು ಅವರು ಭಾವಿಸಿಬಿಟ್ಟಿದ್ದರಂತೆ. ಆನಂತರ ಸರಳವಾಗಿ ಬಿಳಿಯುಡುಪಿನಲ್ಲಿ ಬಂದ ಸಾಧುಗಳು ಮನೆಯವರೆಲ್ಲರ ಮನಸೂರೆಗೊಂಡರು. ತಾವು ಸ್ವಲ್ಪವೇ ಊಟ ಮಾಡುತ್ತಿದ್ದರು. ಆದರೆ ಮನೆಯವರು ಊಟಕ್ಕೆ ಕುಳಿತಾಗ ತಾವೇ ಬಂದು ಅವರಿಗೆ ಪ್ರೀತಿಯಿಂದ ಬಡಿಸುತ್ತಿದ್ದರು, ಹೊಟ್ಟೆ ತುಂಬಿ ಇನ್ನು ಸಾಧ್ಯವಿಲ್ಲ ಎನ್ನುವಷ್ಟು! ಅವರ ಆ ಎರಡು ದಿನಗಳ ಅವಧಿಯ ವಾಸ್ತವ್ಯವನ್ನು ಆ ಮನೆಮಂದಿ ಇಂದಿಗೂ ಮರೆತಿಲ್ಲ. ಸಿದ್ದೇಶ್ವರ ಸ್ವಾಮಿಗಳ ದಿವ್ಯ ಚಮತ್ಕಾರ ಅದು. ಪ್ರತಿಯೊಬ್ಬರಿಗೂ ‘ನಾನಂದ್ರೆ ಅವರಿಗೆ ಬಹಳ ಇಷ್ಟ’ ಎನಿಸುತ್ತಿತ್ತು. ಅಷ್ಟರಮಟ್ಟಿಗೆ ಅವರು ಎಲ್ಲರನ್ನೂ ಸಮದರ್ಶಿಯಾಗಿ ಪ್ರೀತಿಸುತ್ತಿದ್ದರು. ಅವರ ಭರಪೂರ ಪ್ರೇಮದ ಪ್ರವಾಹ ಅನುಭವಕ್ಕೆ ಬರುತ್ತಿದ್ದುದು ಊಟ ಬಡಿಸುವ ಹೊತ್ತಲ್ಲಿ. ಅಪರೂಪಕ್ಕೊಮ್ಮೆ ಅವರು ಊಟ ನೀಡಲು ಬರುತ್ತಿದ್ದರು. ಅಂದು ದೇವರೇ ಕಾಪಾಡಬೇಕಾಗುತ್ತಿತ್ತು. ತಮ್ಮನ್ನು ಕಾಣಲು ಯಾರೇ ಬಂದರೂ ಅವರನ್ನು ಪ್ರಸಾದ ಸ್ವೀಕರಿಸದೇ ಹೋಗಲು ಬಿಡುತ್ತಿರಲಿಲ್ಲ ಅವರು. ಅಷ್ಟೇ ಏಕೆ? ಪ್ರವಚನಗಳಿಗೆ ಪರ ಊರುಗಳಿಗೆ ಹೋಗುತ್ತಿದ್ದರಲ್ಲ; ಯಾರಿಂದಲೂ ಬಿಡಿಗಾಸು ಕೇಳುತ್ತಿರಲಿಲ್ಲ. ಆದರೆ ಬಂದವರಿಗೆ ದಾಸೋಹದ ವ್ಯವಸ್ಥೆ ಮಾಡಿ ಎನ್ನುತ್ತಿದ್ದರು. ನಾವೆಲ್ಲ ಬುದ್ಧನ ಸಂಸಾರದ ಕುರಿತು ಕೇಳಿದ್ದೇವೆ. ಅವನೊಂದಿಗೆ ಬರುತ್ತಿದ್ದ ಬೈರಾಗಿಗಳ ದಂಡಿನ ಬಗ್ಗೆ ಓದಿದ್ದೇವೆ. ನಮ್ಮ ಕಾಲದಲ್ಲಿ ಸಿದ್ದೇಶ್ವರ ಸ್ವಾಮಿಗಳ ರೂಪದಲ್ಲಿ ಅದನ್ನು ನೋಡಿದೆವು ಅಷ್ಟೇ. ಅವರು ನಮ್ಮ ಕಾಲದ ಬುದ್ಧನಂತೆ ಬದುಕಿಬಿಟ್ಟರು!

ಅವರು ತಮ್ಮ ದೇಹದೊಳಗೆ ಅನಾರೋಗ್ಯದ ವೇದನೆಯನ್ನು ಅಡಗಿಸಿಟ್ಟುಕೊಂಡೇ ಸುದೀರ್ಘಕಾಲ ಬದುಕಿದರು. ಅದೊಮ್ಮೆ ಜಾರಿಬಿದ್ದು ಕಾಲ ಮೂಳೆ ಮುರಕೊಂಡಾಗಲೇ ಅವರಿಗೆ ದೇಹದೊಳಗೆ ಬೇರೆಯ ನೋವೂ ಇದೆ ಅಂತ ಗೊತ್ತಾಗಿದ್ದು! ಆದರೂ ಅವರು ಸುಮ್ಮನಾಗಲಿಲ್ಲ. ಸ್ವಲ್ಪ ಚೇತರಿಸಿಕೊಂಡರೆಂದೊಡನೆ ಪ್ರವಚನಕ್ಕೆ ಅಣಿಯಾಗುತ್ತಿದ್ದರು. ಗುರುವಿನ ಆದೇಶ ಪಾಲಿಸದಿರುವುದು ಹೇಗೆ? ವಿಜಯಪುರದ ಕಾಖಂಡಕಿಯಲ್ಲಿ ಅವರ ಕೊನೆಯ ಪ್ರವಚನ. ಅವರನ್ನು ಭೇಟಿ ಮಾಡಿದಾಗ ತಮ್ಮೊಳಗಿನ ನೋವಿನ ಕುರಿತು ಅವರು ಮಾತನಾಡಲಿಲ್ಲ. ರಾಷ್ಟ್ರದ ನೋವುಗಳ ಕುರಿತಂತೆ ಸುದೀರ್ಘವಾಗಿ ಚರ್ಚಿಸಿದರು. ಅವರೊಡನೆ ಇದ್ದ ಸಾಧುಗಳೊಂದಿಗೆ ಕುಳಿತು ಮಾತನಾಡಲು ಹಚ್ಚಿದರು. ಮನದುಂಬಿ ಹಾರೈಸಿ ಕಳಿಸಿದರು. ಅಲ್ಲಿಂದ ಮುಂದೆ ಅವರು ಜ್ಞಾನಯೋಗಾಶ್ರಮಕ್ಕೆ ಬಂದು ಅನಾರೋಗ್ಯದಿಂದ ನೆಲೆ ನಿಂತಾಗಲೇ ನಮ್ಮಲ್ಲನೇಕರಿಗೆ ಅವರ ಸಂಕಟಗಳ ಕುರಿತಂತೆ ಅರಿವಾಗಿದ್ದು.

ದೇಹತ್ಯಾಗದ 8 ದಿನ ಮುಂಚೆ ಅವರನ್ನು ಭೇಟಿ ಮಾಡಿದಾಗ ಮುಖದಲ್ಲಿ ನೋವಿನ ಲವಲೇಶವೂ ಇರಲಿಲ್ಲ. ಮುಖ ನಮ್ಮೊಳಗಿನ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಇಂಗ್ಲಿಷ್ ನಾಣ್ಣುಡಿಯನ್ನು ನೆನಪಿಸಿ ನಿಮ್ಮ ಮುಖದಲ್ಲಿ ನೋವಿನ ಲಕ್ಷಣವೇ ಇಲ್ಲವಲ್ಲವೆಂದು ನಕ್ಕೆ. ಅವರೂ ಜೋರಾಗಿಯೇ ನಕ್ಕರು. ಸ್ವಲ್ಪ ಹೊತ್ತು ಮಾತನಾಡಿದರು. ಆಯಾಸವಾಯ್ತೆಂದು ಸನ್ನೆ ಮಾಡಿದೊಡನೆ ನಾನು ಅಲ್ಲಿಂದ ಹೊರಟೆ. ದೇಹತ್ಯಾಗದ ಎರಡು ದಿನ ಮುಂಚೆಯೂ ಅವರನ್ನೊಮ್ಮೆ ನೋಡಿದೆ. ಈ ಬಾರಿ ಅವರು ಗುರುತಿಸುವ ಮಟ್ಟದಲ್ಲಿರಲಿಲ್ಲ. ಅವರ ದೈವತ್ವವನ್ನು ಗುರುತು ಹಿಡಿಯುವ ಯೋಗ ಭಗವಂತ ನಮಗೆ ಕೊಟ್ಟನಲ್ಲ ಎಂಬುದು ನಮ್ಮ ಭಾಗ್ಯ ಅಷ್ಟೇ.

‘ಸಮಾಧಿ ಕಟ್ಟಿ ಸಂಭ್ರಮಿಸಬೇಡಿ, ದೇಹವನ್ನು ಬೆಂಕಿಗೆ ಆಹುತಿಯಾಗಿಸಿ’ ಎಂದು ಮೊದಲೇ ಬರೆದಿಟ್ಟಿದ್ದರು! ಅವರ ಅಂತಿಮ ದರ್ಶನಕ್ಕೆ ಬಂದ ಜನರ ಲೆಕ್ಕ ಹಾಕುವುದು ಅಸಾಧ್ಯವೇ ಆಗಿತ್ತು. ಶರಣರ ಬದುಕು ಅವರ ಮರಣದಲ್ಲಿಯೇ ಗೊತ್ತಾಗೋದು ಅಂತ ಹೇಳಿದ್ದು ಸುಳ್ಳಲ್ಲ. ಆದರೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಬದುಕು ಇದ್ದಾಗಲೂ ಗೊತ್ತಾಗಿತ್ತು, ದೇಹತ್ಯಾಗವಾದ ಮೇಲೆ ಎಲ್ಲೆಡೆ ಪಸರಿಸಿತ್ತು, ಅಷ್ಟೇ!