ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ!

ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ!

ನಾವು ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆ. ಸಿಡಿಯುವ ದಿನ, ವಾರ ಗೊತ್ತಿಲ್ಲದಿರಬಹುದು. ಆದರೆ ಸದ್ಯಕ್ಕೇ ಸಿಡಿಯಲಿದೆ ಎಂಬ ಸತ್ಯವಂತೂ ತಿಳಿದಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ನ ಅಧ್ಯಯನದ ಪ್ರಕಾರ 1997 ರಿಂದೀಚೆಗೆ ಭಾರತದಲ್ಲಿ ಕ್ಷಾಮಕ್ಕೆ ತುತ್ತಾಗಬಹುದಾದ ಪ್ರದೇಶಗಳ ಸಂಖ್ಯೆ ಶೇಕಡಾ 57ರಷ್ಟು ಏರಿಕೆ ಕಂಡಿದೆ. ದುರ್ದೈವವೆಂದರೆ ಇವ್ಯಾವುವೂ ಮಳೆಯ ಕೊರತೆಯಿಂದ ಆದದ್ದಲ್ಲ.

‘ಭಾರತದ ಜನಸಂಖ್ಯೆಯ 25 ಪ್ರತಿಶತ ಜನ ಅಂದರೆ 33 ಕೋಟಿಯಷ್ಟು ಜನ ಬರಗಾಲದ ಬೇಗೆಗೆ ತುತ್ತಾಗಿದ್ದಾರೆ’ ಹಾಗಂತ ಡೆಕ್ಕನ್ ಕ್ರೋನಿಕಲ್ ಎಂಬ ಇಂಗ್ಲೀಷ್ ಪತ್ರಿಕೆ ಕಳೆದ ವರ್ಷ ವರದಿ ಮಾಡಿತ್ತು. ಮಹಾರಾಷ್ಟ್ರವೊಂದರಲ್ಲಿಯೇ ಇರುವ 36 ರಲ್ಲಿ 21 ಜಿಲ್ಲೆಗಳು ಬರಗಾಲ ಪೀಡಿತವೆನಿಸಿದವು. ಉತ್ತರ ಪ್ರದೇಶದಲ್ಲಿಯಂತೂ 75 ರಲ್ಲಿ 50 ಜಿಲ್ಲೆಗಳು ಕ್ಷಾಮಪೀಡಿತ. ಛತ್ತೀಸ್ಗಢದಲ್ಲಿ ಶೇಕಡಾ 93 ರಷ್ಟು ಜಿಲ್ಲೆಗಳು ಬರಗಾಲ ಪೀಡಿತವೆಂದು ಘೋಷಿತವಾದವು. ಭಯ ಹುಟ್ಟಿಸುವ ಸಂಗತಿ ಯಾವುದು ಗೊತ್ತಾ? ಯಾವ ಕ್ಷಾಮ ಪರಿಸ್ಥಿತಿಯೂ ಪ್ರಕೃತಿ ನಿರ್ಮಿತವಲ್ಲ, ಮಾನವನ ದುಷ್ಕೃತ್ಯವೇ!

ಹೋದ ವರ್ಷವೇ ಮಹಾರಾಷ್ಟ್ರಕ್ಕೆ ಭೇಟಿ ಕೊಟ್ಟಿದ್ದ ಜಲ ಬ್ರಹ್ಮ ರಾಜೇಂದ್ರ ಸಿಂಗ್ರು ಕ್ಷಾಮದ ಕಾರಣಗಳನ್ನು ಅವಲೋಕಿಸಿದ್ದರು. ಬರಗಾಲಕ್ಕೆ ತುತ್ತಾಗಬಹುದಾಗಿದ್ದ ಜಿಲ್ಲೆಗಳಲ್ಲಿಯೇ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಅಕ್ಕಪಕ್ಕದ ರೈತರು ಕಬ್ಬನ್ನೇ ಬೆಳೆಯುವಂತೆ ಪ್ರೇರೇಪಣೆ ಕೊಡುವ ರಾಜಕಾರಣಿಗಳ ವಿರುದ್ಧ ಅವರ ಆಕ್ರೋಶವಿತ್ತು. ಕೆಲವು ರಾಜಕಾರಣಿಗಳು ಅತ್ಯಂತ ಅಮೂಲ್ಯವಾದ ಕಾಲುವೆಯ ನೀರನ್ನು ತಮ್ಮ ಕಬ್ಬಿನ ಗದ್ದೆಗೆ ಹರಿಸಿಕೊಳ್ಳುತ್ತಿದ್ದರು. ಕಬ್ಬಿನ ಗದ್ದೆಗೆ ನೀರು ಸಿಕ್ಕಾಪಟ್ಟೆ ಅಗತ್ಯವಿರುವುದರಿಂದ ಕಾಲಕ್ರಮದಲ್ಲಿ ನೀರಿನ ಸೆಲೆ ಖಾಲಿಯಾಗುವುದೆಂಬುದನ್ನು ಆಲೋಚನೆ ಮಾಡಲು ಅವರಿಗೆ ಪುರಸೊತ್ತಿಲ್ಲ, ದೂರದೃಷ್ಟಿಯೂ ಇಲ್ಲ. ಅಂತರ್ಜಲ ರಕ್ಷಣೆಯ ಕಾನೂನು ಬರಿಯ ಕಡತಗಳಲ್ಲಷ್ಟೇ. ನಾಲ್ಕೂವರೆ ಸಾವಿರ ಟ್ಯಾಂಕರುಗಳು ನೀರನ್ನು ಪೂರೈಸುವಲ್ಲಿ ನಿರತವಾಗಿವೆ.

ಕರ್ನಾಟಕದ ಕಥೆಯೇನೂ ಭಿನ್ನವಲ್ಲ. ಸತತ ನಾಲ್ಕನೇ ವರ್ಷ ನಾವು ಬರಗಾಲಕ್ಕೆ ತುತ್ತಾಗಿದ್ದೇವೆ. ಪ್ರಮುಖ ಜಲಾಶಯಗಳಲ್ಲಿ ನೀರು ತಳಮುಟ್ಟಿದೆ. ಅಂತರ್ಜಲವನ್ನು ಹೇಗೆ ಬಳಸಿ ಹಾಳುಗೆಡವಿದ್ದೇವೆಂದರೆ ಕೋಲಾರದಲ್ಲಿ ಅದಾಗಲೇ ಸಾವಿರದೈನೂರು ಅಡಿಯ ಆಳದಲ್ಲೂ ನೀರಿಲ್ಲದ ಸ್ಥಿತಿ ಮುಟ್ಟಿಯಾಗಿದೆ. ಕೃಷಿಗೆ ಬಿಡಿ, ಕುಡಿಯುವ ನೀರಿಗೂ ಅನೇಕ ಕಡೆ ಅದಾಗಲೇ ತತ್ವಾರವಾಗಿದೆ. ಒಂದು ಅಂದಾಜಿನ ಪ್ರಕಾರ ಇಡಿಯ ಭಾರತದ ಅಂತರ್ಜಲ ಮಟ್ಟ ಮೂಕ್ಕಾಲು ಭಾಗದಷ್ಟು ಮುಗಿದೇ ಹೋಗಿದೆ. ಮಳೆಯ ಕೊರತೆ ನೋಡಿದರೆ ಇನ್ನು ಹತ್ತು-ಹದಿನೈದು ವರ್ಷಗಳಲ್ಲಿ ಉಳಿದ ಕಾಲು ಭಾಗದಷ್ಟು ಅಂತರ್ಜಲವೂ ಚೊಕ್ಕವಾಗಲಿದೆ. ಮುಂದೇನು?

RTXFYGX

 

ಕಳೆದ ವರ್ಷದವರೆಗಿನ ಅಂಕಿ-ಅಂಶ ಮುಂದಿಟ್ಟುಕೊಂಡು ಕುಳಿತಿದ್ದೇನೆ. ಟ್ಯಾಂಕರುಗಳ ಮೂಲಕ ನೀರು ತಲುಪಿಸುವ ದೈನೇಸಿ ಸ್ಥಿತಿಗೆ ಉತ್ತರ ಕರ್ನಾಟಕದ 12 ಜಿಲ್ಲೆಗಳು ತಲುಪಿಯಾಗಿವೆ. ಅಲ್ಲಿನ ಹೆಣ್ಣುಮಕ್ಕಳ ಇಡಿಯ ದಿನ ನಲ್ಲಿಯೆದುರು ಸಾಲು ನಿಲ್ಲುವುದರಲ್ಲಿಯೇ ಕಳೆದು ಹೋಗುತ್ತಿದೆ. ಸ್ನಾನ-ಬಟ್ಟೆ ಒಗೆತ ಹೆಚ್ಚು ಕಡಿಮೆ ನಿರಂತರತೆ ಕಳೆದುಕೊಂಡಿದೆ. ನೀರಿನ ಕೊರತೆಯಿಂದಲೂ, ಗಡಸು ನೀರನ್ನು ಕುಡಿಯುವುದರಿಂದಲೂ ಜನ ರೋಗಿಷ್ಟರಾಗುತ್ತಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಚಾಮರಾಜನಗರದ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೆ ಧಾನ್ಯದ ಕೊರತೆ ಇರಲಿಲ್ಲ. ಅಡುಗೆ ಮಾಡಲು ನೀರೇ ಸಿಕ್ಕಿರಲಿಲ್ಲ ಅಷ್ಟೇ. ಜಲಾಶಯಗಳು ಒಣಗಿ ಹೋಗುವ ಸ್ಥಿತಿಯಲ್ಲಿರುವುದರಿಂದ, ಮುಂದಿರುವ ದಾರಿ ಒಂದೇ. ಕುಡಿಯಲಿಕ್ಕೆಂದು ಆ ನೀರನ್ನು ಕೊಟ್ಟು ಖಾಲಿ ಮಾಡಿ ಬಿಡುವುದು. ಆಮೇಲೆ ಆಕಾಶಕ್ಕೆ ಕಣ್ಣು-ಬಾಯಿ ನೆಟ್ಟು ಕುಳಿತುಕೊಳ್ಳುವುದು. ಮಳೆಗಾಗಿ ಕಾಯುತ್ತಿರುವುದು ಅಷ್ಟೇ.

ಕರ್ನಾಟಕದ ಈ ಸ್ಥಿತಿಗೂ ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿರುವುದು ಕಾರಣವೇ ಅಲ್ಲ. ನಾವೇ ಇವೆಲ್ಲದರ ಸೂತ್ರಧಾರರು. ರಾಗಿ, ಜೋಳ, ನವಣೆಯಂತಹ ಕಡಿಮೆ ನೀರಿನ ಬಳಕೆಯ ಬೆಳೆ ತೆಗೆಯುತ್ತಿದ್ದ ಕೃಷಿಕ ಈಗ ಲಾಭದಾಯಕ ಬೆಳೆಗೆ ಕೈ ಹಾಕಿದ್ದಾನೆ. ಅವನಿಗೆ ಹತ್ತಿ ಮತ್ತು ಕಬ್ಬಿನ ಮೇಲೆ ಕಣ್ಣು ಬಿದ್ದಿದೆ. ಕಬ್ಬಿನ ಬೆಳೆ ತೆಗೆಯುವ ಭೂ ಪ್ರಮಾಣ ಶೇಕಡಾ 100 ರಷ್ಟು ಹೆಚ್ಚಿದೆ. ಸುಮಾರು 2 ಲಕ್ಷ ಹೆಕ್ಟೇರಿನಿಂದ 4 ಲಕ್ಷ ಹೆಕ್ಟೇರಿಗೆ. ಬೆಳಗಾವಿ, ಬಾಗಲಕೋಟೆ, ಕೊಪ್ಪಳಗಳಲ್ಲಿ ಅಂತರ್ಜಲವನ್ನೂ ಬಸಿದು ಭೂಮಿಗೆ ಸುರಿದು ಕಬ್ಬು ಬೆಳೆಯುತ್ತಾರೆ. ಕುಡಿಯುವ ನೀರಿನ ಅಭಾವವಿರುವ ಬೀದರ್ನಲ್ಲೂ ಕಬ್ಬು ಬೆಳೆದು ರಾಜ್ಯದ ಹುಬ್ಬೇರುವಂತೆ ಮಾಡಲಾಗಿತ್ತು. ಕಬ್ಬು ಬೆಳೆಯೋದು ಸುಲಭ, ಕೆಲಸ ಕಡಿಮೆ ಮತ್ತು ಹಣ ಖಾತ್ರಿ ಎಂಬುದು ರೈತರ ಅಂಬೋಣ. ಹೀಗೆ ಬೆಳೆದ ಅಷ್ಟೂ ಕಬ್ಬನ್ನು ಸಕ್ಕರೆ ಕಾರ್ಖಾನೆಯ ಮಾಲೀಕರೇ ಖರೀದಿಸಬೇಕಿರುವುದರಿಂದ ಅವರು ಬೇಡವೆಂದರೆ ಬೆಲೆ ಪಾತಾಳಕ್ಕೆ, ರೈತರು ಬೀದಿಗೆ. ಬೆಂಬಲ ಬೆಲೆಯ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ, ಮತ್ತದೇ ರಾಜಕಾರಣಿಗಳ ಜೇಬಿಗೆ. ಒಂದು ವರ್ಷವಾದರೂ ಸರಿಯಾಗಿ ಮಳೆಯಾದರೆ ಸರಿ ಇಲ್ಲವಾದರೆ ಮತ್ತೆ ಅಂತರ್ಜಲವನ್ನು ಬಸಿಯುವ ಕೆಲಸ.

sugarcane

ಒಮ್ಮೆಯಾದರೂ ಭೂಮಿಯೊಳಗಿನ ನೀರಿನ ಸೆಲೆಯನ್ನು ಬ್ಯಾಂಕಿನಲ್ಲಿಟ್ಟಿರುವ ಠೇವಣಿಯಂತೆ ಭಾವಿಸಿದ್ದೇವಾ? ಬಡ್ಡಿಯಲ್ಲಿ ಬದುಕಬೇಕು, ಜೀವ ಹೋಗುತ್ತೆ ಎಂದಾಗ ಮಾತ್ರ ಬ್ಯಾಂಕಿನಿಂದ ಠೇವಣಿ ತೆಗೆಯಬೇಕು ಎನ್ನುವಂತೆ! ನಮ್ಮ ಪೂರ್ವಜರು ಕಾಪಿಟ್ಟ ನೀರಿನ ಠೇವಣಿ ಖಾಲಿಯಾದ ಮೇಲೆ ಆವರಿಸಲಿರುವ ಕ್ಷಾಮ ನಮ್ಮೆಲ್ಲರ ಶವಗಳ ಮೇಲೆ ರುದ್ರ ನರ್ತನ ನಡೆಸಿಯೇ ವಿಶ್ರಾಂತವಾಗೋದು! ನೀರುಳಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳನ್ನೇ ನಿಷೇಧಿಸಬೇಕಾದ ಸರ್ಕಾರ ಪ್ರತಿ ವರ್ಷ ಹೊಸ ಹೊಸ ಕಾರ್ಖಾನೆಗಳಿಗೆ ಪರವಾನಗಿ ಕೊಟ್ಟು ರೈತರನ್ನು ಕಬ್ಬು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಬಹುಶಃ ಈಗ ಅರ್ಥವಾಗಿರಬೇಕು. ಕಳೆದ ವಾರ ಯಾವ ಬ್ರಿಟೀಷರು ಭಾರತದಲ್ಲಿ ಕೃತಕ ಕ್ಷಾಮಕ್ಕೆ ಕಾರಣರಾದವರೆಂದು ವಿವರಿಸಿದ್ದೇನೋ ಅದೇ ಬ್ರಿಟೀಷರು ನಮ್ಮವರ ದೇಹ ಹೊಕ್ಕು ಇಂದೂ ಅದನ್ನೇ ಮಾಡುತ್ತಿದ್ದಾರೆ!

ಸರ್ಕಾರದ ನಿರ್ವಹಣೆಯ ರೀತಿಯೇ ಬೇರೆ. 2015 ರ ಸೆಪ್ಟೆಂಬರ್ನಲ್ಲಿ ಕೃಷಿಗೆ ನೀರು ಸರಬರಾಜು ಮಾಡುವುದಿಲ್ಲವೆಂದು ಸ್ಪಷ್ಟ ದನಿಯಲ್ಲಿ ಹೇಳಿತ್ತು. 2016 ರ ಮಾರ್ಚ್ನಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ಹೀಗಾಗಿ ಹೊಲ-ಗದ್ದೆಗಳಿಗೆ ನೀರಿ ಬಿಡಬಾರದು ಎಂದಿತ್ತು. ರೈತರಿಗೆ ವಿದ್ಯುತ್ ಕೊಟ್ಟರಷ್ಟೇ ಹೊಲ-ಗದ್ದೆಗಳಿಗೆ ನೀರು ಹರಿಯುವುದೆಂದು ಅರಿವಿದ್ದ ಸರ್ಕಾರ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ ನೀರು ಉಳಿಸಿತ್ತು!

ಕ್ಷಾಮದ ಸಮಸ್ಯೆ ಒಂದೆರಡಲ್ಲ. ಊಟವಿಲ್ಲದೇ ಉಪವಾಸವಿರಬಹುದು, ಕುಡಿಯಲು ನೀರೇ ಸಿಗದಿದ್ದರೆ ಏನು ಮಾಡೋದು? ಅದಾಗಲೇ ಮಲೆಮಹದೇಶ್ವರ ಬೆಟ್ಟದ ಮೇಲೆ ಸಾವಿರಾರು ಹಸುಗಳು ನೀರು-ಮೇವುಗಳಿಲ್ಲದೇ ನರಳುತ್ತಾ ಪ್ರಾಣ ಬಿಡುತ್ತಿವೆ. ಬಂಗಾಳದಲ್ಲಿ 1906 ರಲ್ಲಿ ಹೇಗಾಗಿತ್ತೋ ಹಾಗೆಯೇ ರೈತ ತನ್ನ ಗೋವುಗಳನ್ನು ಕಸಾಯಿ ಖಾನೆಗೆ ಕವಡೆ ಕಿಮ್ಮತ್ತಿಗೆ ಮಾರಿ ನಿಟ್ಟುಸಿರು ಬಿಡುತ್ತಿದ್ದಾನೆ. ಮೇವು ಒದಗಿಸುವ ಕುರಿತಂತೆ ಚಿಂತನೆ ನಡೆಸಬೇಕಿದ್ದ ಸರ್ಕಾರ ಕಸಾಯಿಖಾನೆಗಳಿಗೆ ಅನುಮತಿ ಕೊಟ್ಟು ರೈತನ ಹೆಗಲ ಮೇಲಿನ ಭಾರವನ್ನು ಇಳಿಸಿರುವ ಸಂತಸದಿಂದ ಬೀಗುತ್ತಿದೆ. ಬರಪೀಡಿತ ಕಲಬುರ್ಗಿ, ಬೀದರ್ಗಳಲ್ಲಿ ಸಕ್ಕರೆ ಕಾರ್ಖಾನೆಗೆ ಅನುಮತಿ ಕೊಡುವುದು ಎಷ್ಟು ತಪ್ಪೋ, ಕೃಷಿಕರೇ ಹೆಚ್ಚಿರುವ ಬೆಂಗಳೂರು ಗ್ರಾಮಾಂತರದಲ್ಲಿ ಕಸಾಯಿಖಾನೆಗೆ ಅನುಮತಿ ಕೊಡುವುದೂ ಅಷ್ಟೇ ತಪ್ಪು. ಸ್ವಲ್ಪವಾದರೂ ಸಾಮಾನ್ಯ ಜ್ಞಾನವಿಲ್ಲವಲ್ಲ ಈ ಜನಕ್ಕೆ!

drought (1)

ನೀರು ಜೀವಜಲ ಅನ್ನೋದು ಸುಮ್ಸುಮ್ನೆ ಅಲ್ಲ. ಅದನ್ನು ಕುಡಿದರೆ ಜೀವವುಳಿಯುತ್ತೆ ಅನ್ನೋದು ಒಂದಾದರೆ, ಭೂಮಿಗೂ ಜೀವಂತಿಕೆಯ ಕಳೆ ಇರುತ್ತೆ ಅನ್ನೋದು ಮತ್ತೊಂದು. ಭಾರತದ ಮೂಲ ಉದ್ಯೋಗ ಕೃಷಿ ನಂಬಿರೋದೇ ನೀರನ್ನು. ಜೊತೆಗೆ ನಮ್ಮ ನಿರುದ್ಯೋಗ ಸಮಸ್ಯೆಗೆ ಪರಿಹಾರ ಇರೋದೂ ಕೃಷಿಯಲ್ಲಿಯೇ. ಉತ್ತರ ಕರ್ನಾಟಕದ ಜನ ಗುಳೆ ಎದ್ದು ದಕ್ಷಿಣದತ್ತ ಬರುತ್ತಿರುವುದು ಏಕೆ ಗೊತ್ತೇನು? ಮಳೆಯ ಕೊರತೆಯಿಂದಾಗಿ ಕೃಷಿ ಕಾರ್ಯ ನಿಂತಿರುವುದರಿಂದ. ಅಲ್ಲಿಯೇ ಉಳಿದು ಸಾಲಗಾರನಾದ ರೈತ ಸಿರಿವಂತರ ಮರ್ಜಿಗೆ ಬಿದ್ದ. ರಾಜಕಾರಣಿಗಳ ಹಿಂದೆ ಅಲೆದಾಡುತ್ತ ಉಳಿದ. ತಮ್ಮನ್ನು ತಾವು ರೈತ ಹೋರಾಟಗಾರರೆಂದು ಕರೆದುಕೊಳ್ಳುವ ಅನೇಕರು ಕೃಷಿ ಮಾಡುತ್ತಲೇ ಇಲ್ಲ. ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರ ಮಾಡಿಕೊಂಡು ಪಟ್ಟಣಗಳಲ್ಲಿ ನೆಲೆನಿಂತುಬಿಟ್ಟಿದ್ದಾರೆ. ಹಣವಿದ್ದವರು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದು ಉದ್ಯೋಗಿಗಳಾಗಿಬಿಡುತ್ತಾರೆ ಸರಿ, ಇಲ್ಲವಾದವರು ಏನು ಮಾಡಬೇಕು? ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳಬೇಕು. 2015 ರ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಲೆಕ್ಕಾಚಾರದ ಪ್ರಕಾರ 915 ಜನ ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅತ್ಯಾಶ್ಚರ್ಯವೇನು ಗೊತ್ತೇ? ಮಂಡ್ಯ, ಮೈಸೂರು, ಹಾಸನ, ಬೆಳಗಾವಿಯಂತಹ ನೀರಾವರಿ ಇದ್ದ ಪ್ರದೇಶದಲ್ಲಿಯೇ ದೊಡ್ಡ ಸಂಖ್ಯೆಯ ಆತ್ಮಹತ್ಯೆಗಳು ದಾಖಲಾಗಿದ್ದು. ಅತ್ತ ಬದುಕಲೂ ಆಗದೇ ಇತ್ತ ಸಾಯಲೂ ಆಗದೆ ರೈತರೊಂದಷ್ಟು ಜನ ತಮ್ಮ ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹ ಮಾಡಿಸಿ ದೂರ ಪ್ರದೇಶಗಳಿಗೆ ವಲಸೆ ಹೋಗಿದ್ದು ಯಾದಗಿರಿಯಲ್ಲಿ ದಾಖಲಾಗಿದೆ!

 

ನೀರಿನ ನಿಭಾವಣೆಯಲ್ಲಿ ಕರ್ನಾಟಕವಷ್ಟೇ ಅಲ್ಲ. ಇಡಿಯ ಭಾರತ ಸೋತಿದೆ. ಒಂದು ಹೆಜ್ಜೆ ಮುಂದಿಟ್ಟು ಹೇಳಬೇಕೆಂದರೆ ದಕ್ಷಿಣ ಏಷಿಯಾದಲ್ಲಿಯೇ ನೀರ ಕುರಿತಂತೆ ಆತಂಕವಿದೆ. ನೀರಿನ ಕೊರತೆಯಿಂದ ದೇಶವೇ ಬಳಲುವಾಗ ಐಪಿಎಲ್ ಮ್ಯಾಚುಗಳನ್ನು ಆಡಿಸಲೆಂದು ಮೈದಾನಗಳಿಗೆ ಹರಿಸುವ ನೀರು ಕಂಡಾಗ ಹೊಟ್ಟೆ ಉರಿಯುತ್ತದೆ. ಒಂದು ಮ್ಯಾಚಿಗೆ ಕನಿಷ್ಠ 3 ಲಕ್ಷ ಲೀಟರ್ ನೀರನ್ನು ಮೈದಾನಕ್ಕೆರಚಬೇಕು. ಕನರ್ಾಟಕದಲ್ಲಿ ಹತ್ತು ಮ್ಯಾಚುಗಳನ್ನಾಡಿದರೂ 30 ಲಕ್ಷ ಲೀಟರ್ ನೀರು ವ್ಯರ್ಥವಾಗಿ ಹೋಯ್ತು. ಒಂದಿಡೀ ದಿನಕ್ಕೆ ಪಟ್ಟಣವೊಂದಕ್ಕೆ ಕುಡಿಯಲು ಸಾಕಾಗುಷ್ಟು ನೀರು ಅದು. ಐಪಿಎಲ್ ಅನ್ನು ಮಳೆಗಾಲದ ನಂತರಕ್ಕೆ ಮುಂದೂಡಿದರೆ ಗಂಟು ಹೋಗುತ್ತಾ?

741

ನೆನಪಿಡಿ. ನಾವು ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆ. ಸಿಡಿಯುವ ದಿನ, ವಾರ ಗೊತ್ತಿಲ್ಲದಿರಬಹುದು. ಆದರೆ ಸದ್ಯಕ್ಕೇ ಸಿಡಿಯಲಿದೆ ಎಂಬ ಸತ್ಯವಂತೂ ತಿಳಿದಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ನ ಅಧ್ಯಯನದ ಪ್ರಕಾರ 1997 ರಿಂದೀಚೆಗೆ ಭಾರತದಲ್ಲಿ ಕ್ಷಾಮಕ್ಕೆ ತುತ್ತಾಗಬಹುದಾದ ಪ್ರದೇಶಗಳ ಸಂಖ್ಯೆ ಶೇಕಡಾ 57ರಷ್ಟು ಏರಿಕೆ ಕಂಡಿದೆ. ದುರ್ದೈವವೆಂದರೆ ಇವ್ಯಾವುವೂ ಮಳೆಯ ಕೊರತೆಯಿಂದ ಆದದ್ದಲ್ಲ. ಎಲ್ಲೆಡೆ ಸರಾಸರಿಗೆ ಹೋಲಿಸಿದರೆ ಶೇಕಡಾ 12 ರಿಂದ 25 ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಇದು ಬರಗಾಲವೆಂದಾಗಲು ಕಾರಣವಾಗುವಷ್ಟು ಕೊರತೆಯಲ್ಲ. ನೀರನ್ನೂ ಸೂಕ್ತ ಪ್ರಮಾಣದಲ್ಲಿ ಉಳಿಸದೇ ಇದ್ದುದರಿಂದ; ಸೂಕ್ತ ಬಳಕೆಗೆ ಪ್ರೇರಣೆ ಕೊಡದೇ ಇದ್ದುದರಿಂದ ಆದ ಅನಾಹುತ. ನೆನಪಿಡಿ. ಬರಗಾಲಕ್ಕೆ ತುತ್ತಾದ ಭಾರತದ ಪ್ರದೇಶಗಳಲ್ಲಿ ಅರ್ಧದಷ್ಟು ಕೃಷಿ ಯೋಗ್ಯ ಭೂಮಿ ಉಳ್ಳಂಥವೇ. ಆಹಾರ ಸುರಕ್ಷತೆಯ ಕುರಿತಂತೆ ಪ್ರಧಾನಮಂತ್ರಿಯಿಂದ ಶುರು ಮಾಡಿ ಮುಖ್ಯಮಂತ್ರಿಯವರೆಗೆ ಎಲ್ಲರೂ ಮಾತನಾಡುತ್ತಾರಲ್ಲ 2020 ರ ವೇಳೆಗೆ ಪೌಷ್ಟಿಕ ಆಹಾರದ ದಾಸ್ತಾನು ಇರಬೇಕೆಂದರೆ ಸುಮಾರು ನೂರು ದಶಲಕ್ಷ ಟನ್ಗಳಷ್ಟು ಆಹಾರ ಧಾನ್ಯ ಉತ್ಪಾದನೆಯಾಗಿರಬೇಕು. ಇದನ್ನು ಉತ್ಪಾದಿಸಬಲ್ಲ ಅರ್ಧದಷ್ಟು ಭೂಮಿ ಅದಾಗಲೇ ಬರಗಾಲಪೀಡಿತವಾಗಿ ತತ್ತರಿಸಿದೆ. ಹಾಗಿದ್ದರೆ ಗುರಿ ಮುಟ್ಟೋದು ಹೇಗೆ?

ನಮ್ಮ ಪ್ರತಿನಿಧಿಗಳನೇಕರಿಗೆ ಈ ಸಮಸ್ಯೆಗಳ ಆಳ-ವಿಸ್ತಾರಗಳು ಅರ್ಥವೇ ಆಗುವುದಿಲ್ಲ. ಭಾರತವನ್ನು ಕೊನೆಯ ಪಕ್ಷ ಕರ್ನಾಟಕವನ್ನು ಕ್ಷಾಮ ಮುಕ್ತವಾಗಿಸಲು ನಮ್ಮದೇ ಬಲವಾದ ಪ್ರಯತ್ನ ಬೇಡವೇ? ಅದಕ್ಕೊಂದು ಸಮರ್ಥವಾಗಿ ಆಲೋಚಿಸಿದ ಯೋಜನೆ ಬೇಡವೇ? ಶಾಶ್ವತ ನೀರಾವರಿ ಯೋಜನೆ ಎಂದರೆ ನೇತ್ರಾವತಿ ನೀರನ್ನೊಯ್ದು ಕೋಲಾರಕ್ಕೆ ತಲುಪಿಸುತ್ತೇವೆನ್ನೋದು; ಮಹಾದಾಯಿಯನ್ನು ಎಳೆದು ತರುತ್ತೇವೆನ್ನೋದು. ಇವೆಲ್ಲ ಆಯಾ ಭಾಗಗಳ ಜನರ ಮೂಗಿಗೆ ತುಪ್ಪ ಸವರಿ ಓಟು ಗಳಿಸುವ ಚಿನ್ನದ ಮೊಟ್ಟೆಗಳಷ್ಟೇ. ಹೀಗೆ ನೀರು ಹರಿಸುವ ನೆಪದಲ್ಲಿ ಕೊಳವೆ ಪೈಪುಗಳನ್ನು ಭೂಮಿಯೊಳಕ್ಕೆ ಹುದುಗಿಸಲು ಮಾಡುವ ವೆಚ್ಚ, ಕಡಿಯುವ ಕಾಡು ಶಾಶ್ವತ ಬರಗಾಲಕ್ಕೆ ಆಹ್ವಾನ ಕೊಟ್ಟಂತೆ. ಗಂಗಾ-ಕಾವೇರಿ ಬೆಸೆಯುವ ಕನಸು ಅನೇಕರು ಕಾಣುತ್ತಾರಲ್ಲ ಇದೂ ಕೂಡ ಇದಕ್ಕಿಂತ ಭಿನ್ನವಲ್ಲ. ಇಂತಹ ಯೋಜನೆಗಳನ್ನು ಕಂಡಾಕ್ಷಣ ಪರಿಸರದ ಕಾಳಜಿ ಇರುವವರು ಉರಿದು ಬೀಳೋದು ಇದಕ್ಕಾಗಿಯೇ.

ಬೀಳುವ ಮಳೆ ಹರಿವನ್ನು ಉಳಿಸಿಟ್ಟುಕೊಂಡು, ಜಲಮೂಲಗಳನ್ನು ರಕ್ಷಿಸುವ ಪಣ ತೊಟ್ಟರೆ ಅದಕ್ಕಿಂತಲೂ ದೊಡ್ಡ ಕ್ಷಾಮ ನಿವಾರಣೆಯ ಯೋಜನೆಯೇ ಇಲ್ಲ. ಕಲ್ಯಾಣಿಗಳು ಕೆರೆಗಳನ್ನು ಹೂಳೆತ್ತಿದರೆ, ಅವುಗಳಿಗೆ ನೀರು ಬಂದು ಸೇರಿಕೊಳ್ಳುವ ಜಾಗವನ್ನು ತೆರೆದುಕೊಟ್ಟರೆ ಭವಿಷ್ಯಕ್ಕೆ ಬೇಕಾದಷ್ಟು ನೀರುಗಳಿಸಿ ಅಂತರ್ಜಲ ಮಟ್ಟವನ್ನು ಏರಿಸುವಲ್ಲಿ ಸಹಕಾರಿಯಾದೀತು. ಆದರೆ ಈ ಕೆಲಸಕ್ಕೆ ಮುಂದೆ ಬರುವವರು ಯಾರು ಹೇಳಿ. ಸರ್ಕಾರ ಮಾಡಬೇಕಾದ ಕೆಲಸವನ್ನು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕರ್ನಾಟಕ ಈಗ ಗಂಭೀರವಾಗಿ ಆಲೋಚಿಸಬೇಕಾದ ಹೊತ್ತು ಬಂದಿದೆ. ಶಾಶ್ವತ ನೀರಾವರಿಯ ಹೆಸರಲ್ಲಿ ಪ್ರತಿಯೊಬ್ಬರೂ ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿದಿದ್ದು ಸಾಕು. ಇನ್ನೇನಿದ್ದರೂ ರಾಜ್ಯಕ್ಕೆ ಬೇಕಾದ ಯೋಜನೆ ರೂಪಿಸಿ ಅದಕ್ಕೆ ಪೂರಕವಾದ ಕೆಲಸಗಳನ್ನು ಒಂದೊಂದಾಗಿ ಮಾಡುತ್ತಾ ನಡೆಯಬೇಕು. ನೀರಿನ ಕುರಿತಂತೆ ಅಧ್ಯಯನ, ಸಂಶೋಧನೆ, ಭೂಮಟ್ಟದ ಕೆಲಸಗಳನ್ನು ಮಾಡಿದ ಬುದ್ಧಿವಂತರೆಲ್ಲ ಒಂದೆಡೆ ಸೇರಿ ಕರ್ನಾಟಕವನ್ನು ಬರಗಾಲ ಮುಕ್ತ ರಾಜ್ಯವಾಗಿ ಮಾಡುವಲ್ಲಿ ತಂತಮ್ಮ ಆಲೋಚನೆಗಳನ್ನು ಧಾರೆಯೆರಯಬೇಕು. ಸರ್ಕಾರವು ಸರ್ಕಾರೇತರ ಸಂಸ್ಥೆ ಮತ್ತು ಸಾರ್ವಜನಿಕರನ್ನು ಬಳಸಿಕೊಂಡು ಆ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಒಪ್ಪಿಸಬೇಕು.

ಓಹ್! ಕೆಲಸ ಬಹಳಷ್ಟಿವೆ. ಅದಾಗಲೇ 160 ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಿಯಾಗಿದೆ. ನಷ್ಟವನ್ನು ಸರಿತೂಗಿಸಲು ಪರಿಹಾರಕ್ಕಾಗಿ ಕೇಂದ್ರದಿಂದ ಸಾವಿರಾರು ಕೋಟಿ ಬೇಡಲಾಗಿದೆ. ಪರಿಹಾರ ನೆಪವಷ್ಟೇ. ಅದು ಫಲಾನುಭವಿಗಳನ್ನು ತಲುಪುವ ವೇಳೆಗೆ ಆತ ಮುಂದಿನ ಬೆಳೆಗೆ ಸಜ್ಜಾಗುತ್ತಾನೆ. ಅಲ್ಲಿಗೆ ನಮ್ಮ ತೆರಿಗೆ ಹಣವೂ ವ್ಯರ್ಥ, ನೀರಿಗೂ ಹಾಹಾಕಾರ. ಕಳೆದೊಂದು ದಶಕದಲ್ಲಿ ನೀರಿನ ಸಮಸ್ಯೆಯ ಪರಿಹಾರಕ್ಕೆ ಸುಮಾರು ಮೂರು ಲಕ್ಷ ಕೋಟಿ ರೂಪಾಯಿ ವ್ಯಯಿಸಿದ್ದೇವೆ. ಪರಿಹಾರ ಮಾತ್ರ ಶೂನ್ಯ. ಕಳೆದೊಂದು ದಶಕದಲ್ಲಿ ಕೃಷಿಯೋಗ್ಯ ಭೂಮಿಯನ್ನು ಶೇಕಡಾ ಒಂದರಷ್ಟು ವೃದ್ಧಿಸಲು ಸಾಧ್ಯವಾಗಲಿಲ್ಲ ನಮಗೆ! ಮತ್ತೆ ಈ ತಂತ್ರಜ್ಞಾನ, ಆವಿಷ್ಕಾರ, ಸಂಶೋಧನೆ ಈ ಎಲ್ಲಾ ಪದಗಳಿಗೂ ಬೆಲೆ ಎಲ್ಲಿ ಉಳಿಯಿತು?

ನೀರಿನ ಕೊರತೆಗೆ ಪರಿಹಾರ ನಮ್ಮಲ್ಲಿಯೇ ಇದೆ. ಜಾಗೃತರಾಗೋಣ ಅಷ್ಟೇ.

ಸಾವಿನ ಮೇಲೆ ಸಾಮ್ರಾಜ್ಯ ಕಟ್ಟುವುದು ಹೊಸತಲ್ಲ!

ಸಾವಿನ ಮೇಲೆ ಸಾಮ್ರಾಜ್ಯ ಕಟ್ಟುವುದು ಹೊಸತಲ್ಲ!

ಬ್ರಿಟೀಷರಿಗೆ ಭಾರತೀಯರ ಸಾವು ಬೇಕಿತ್ತು. 30 ಕೋಟಿ ಜನರನ್ನು ಹಿಡಿ ಹಿಡಿದು ಕೊಲ್ಲುವುದು ಸುಲಭವಲ್ಲ. ಅದಕ್ಕೆ ಬೇಕಾದ ಅವರ ಸೈನಿಕರ ಸಂಖ್ಯೆಯೂ ಕಡಿಮೆಯೇ. ಉಳಿದ ಮಾರ್ಗ ಕೃತಕ ಕ್ಷಾಮಗಳು, ಸಾಂಕ್ರಾಮಿಕ ರೋಗಗಳು ಮಾತ್ರ. ಬಂಗಾಳದಲ್ಲಿ ಈ ಬಗೆಯ ವ್ಯವಸ್ಥಿತ ಕೊಲೆಗೆ ಬಿಳಿಯ ಅಧಿಕಾರಿಗಳು ಪ್ರಯತ್ನ ಪಟ್ಟೇ ಇದ್ದರು. ಅದನ್ನು ವ್ಯರ್ಥಗೊಳಿಸಲೆಂದೇ ಭಗವಂತ ನಿವೇದಿತೆಯನ್ನು ಕಳಿಸಿದ್ದನೇನೋ?

ಮತ್ತೊಂದು ಬಿರು ಬೇಸಿಗೆ ಕಾಲಿಟ್ಟಿದೆ. ಈ ಬಾರಿಯಂತೂ ನೀರಿಗೂ ಕುಡಿಯುವ ಹಾಹಾಕಾರವಾಗಲಿರುವುದು ಸತ್ಯ. ಬರಗಾಲದ ಸ್ಥಿತಿಯನ್ನು ಅನೇಕ ಜಿಲ್ಲೆಗಳು, ತಾಲೂಕುಗಳು ಅನುಭವಿಸಲೇಬೇಕಾದ ಅನಿವಾರ್ಯತೆ ಇದೆ. ಅವಲೋಕಿಸಬೇಕಾದ ಒಂದೇ ಅಂಶವೆಂದರೆ ಬರಗಾಲದ ಈ ಪರಿಸ್ಥಿತಿ ನಿರ್ಮಾಣವಾಗಿರೋದು ಪ್ರಾಕೃತಿಕ ಕಾರಣದಿಂದಲ್ಲ; ಮಾನವ ನಿರ್ಮಿತ! ಅಲ್ಲದೇ ಮತ್ತೇನು? ಟಿಂಬರ್ ಲಾಬಿಗೆ ಒಳಪಟ್ಟು ಹೆಕ್ಟೇರುಗಟ್ಟಲೆ ಕಾಡು ಕಡಿಯುವ ಅನುಮತಿ ಕೊಟ್ಟವರು ನಾವೇ. ಗುಡ್ಡ-ಗುಡ್ಡಗಳನ್ನೇ ಮೈನಿಂಗ್ ಮಾಫಿಯಾಕ್ಕೆ ಬಲಿಯಾಗಿ ಕೊಡುಗೆಯಾಗಿ ಕೊಟ್ಟವರು ನಾವೇ. ಪುಣ್ಯಾತ್ಮರು ಕಷ್ಟ ಪಟ್ಟು ಕಟ್ಟಿದ ಕೆರೆಗಳನ್ನು ಅತಿಕ್ರಮಿಸಿ ಹೂಳು ತುಂಬಿದ ಕೆರೆಗಳಲ್ಲಿ ನೀರು ನಿಲ್ಲದಂತೆ ಮಾಡಿದವರೂ ನಾವೇ. ಕೊಡಲಿ ಪೆಟ್ಟನ್ನು ನಮ್ಮ ಕಾಲ ಮೇಲೆ ನಾವೇ ಹಾಕಿಕೊಂಡು ಭಗವಂತನನ್ನು ದೂಷಿಸುತ್ತಾ ಕೂರುವ ಜಾಯಮಾನದವರಾಗಿಬಿಟ್ಟಿದ್ದೇವೆ.

ಹಾಗೆ ನೋಡಿದರೆ ಭಾರತ ಸಹಜ ಕ್ಷಾಮವನ್ನು ಕಂಡಿದ್ದು ಕಡಿಮೆಯೇ. ಬ್ರಿಟೀಷರ ಕಾಲಕ್ಕೆ ಬಂಗಾಳಕ್ಕೆ ವಕ್ಕರಿಸಿಕೊಂಡ ಆರೇಳು ಭೀಕರ ಕ್ಷಾಮಗಳೇ ಬಲುವಾಗಿ ದಾಖಲಾದವು. ಹಾಗಂತ ಇವ್ಯಾವುವೂ ಸಹಜ ಕ್ಷಾಮಗಳಲ್ಲವೇ ಅಲ್ಲ. ಭಾರತೀಯ ಕೃಷಿ ವ್ಯವಸ್ಥೆಯನ್ನು ಉಧ್ವಸ್ತಗೊಳಿಸಿದುದರ ಅತ್ಯಂತ ಕೆಟ್ಟ ಪರಿಣಾಮ ಅದು. ದೂರದ ಐರ್ಲೆಂಡಿನಿಂದ ಬಂದ ನಿವೇದಿತಾ ಈ ಸಮಸ್ಯೆಯನ್ನು ಬಲು ಸೂಕ್ಷ್ಮವಾಗಿ ಅರ್ಥೈಸಿಕೊಂಡಿದ್ದಳು. ಬಂಗಾಳದಲ್ಲಿ ಕ್ಷಾಮಾವೃತ ಜನರ ಸೇವೆಗೆಂದು ಹೋದ ಆಕೆ ಅಲ್ಲಿಯ ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸರಣಿ ಲೇಖನಗಳನ್ನೇ ಬರೆದಿದ್ದಾಳೆ. ಅದರಲ್ಲಿ ಬಲು ಪ್ರಮುಖವಾದುದು ‘ದಿ ಟ್ರ್ಯಾಜಿಡಿ ಆಫ್ ಜೂಟ್’.

jute-spinners

ಸೆಣಬು ಬಂಗಾಳದ ಜನರ ಹಿತ್ತಲಲ್ಲಿ ಕಂಡು ಬರುತ್ತಿದ್ದ ಉದ್ದನೆಯ ಕಪ್ಪುಗಂದು ಬಣ್ಣದ ಬಳ್ಳಿ. ಅದರ ನಾರಿನ ಗುಣದ ಕಾರಣದಿಂದಾಗಿಯೇ ರೈತರು ಅದನ್ನು ಬೆಳೆಸುತ್ತಿದ್ದರು. ಬಿದಿರಿನಿಂದಲೇ ಮನೆ ಕಟ್ಟುವ ಪ್ರತೀತಿ ಇರುವ ಈ ಜನರಿಗೆ ಬಿಗಿದು ಕಟ್ಟುವ ಹಗ್ಗ ಸೆಣಬಿನ ನಾರೇ ಆಗಿತ್ತು. ಇದು ಒಣಗಿದರೆ ಔಷಧಿಯಾಗಿ ಬಳಕೆಯಾಗುತ್ತಿತ್ತು; ಇಲ್ಲವಾದರೆ ದೀಪಕ್ಕೆ ಬತ್ತಿಯಾಗಿ ಉಪಯೋಗವಾಗುತ್ತಿತ್ತು. ರೈತರು ದುರದೃಷ್ಟದಲ್ಲಿಯೂ ಇರುವ ಶಕ್ತಿಯ ಪೂಜೆ ಮಾಡುವ ಸಂಕೇತವಾಗಿ ಈ ಸೆಣಬಿನ ನಾರಿಗೆ ವರ್ಷಕ್ಕೊಮ್ಮೆ ಪೂಜೆ ಮಾಡುತ್ತಿದ್ದರು. ದುರದೃಷ್ಟವೇಕೆ ಗೊತ್ತೇ? ಎಲ್ಲಿ ಸೆಣಬು ಬೆಳೆಯುವುದೋ ಅಲ್ಲಿನ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಜೊತೆಗೆ ಕಾಲ ಕಳೆದಂತೆ ಸೆಣಬಿನ ಇಳುವರಿಯೂ ಕಡಿಮೆಯಾಗುತ್ತದೆ. ಸೆಣಬು ಬೆಳೆಯಲು ಭತ್ತ ಬೆಳೆಯುತ್ತಿದ್ದ ಫಲವತ್ತು ಭೂಮಿಯೇ ಬಳಕೆಯಾಗುವುದರಿಂದ ಕಾಲಕ್ರಮದಲ್ಲಿ ಭತ್ತದ ಇಳುವರಿಯೂ ಕಡಿಮೆಯಾಗುತ್ತದೆ. ಇವೆಲ್ಲವನ್ನೂ ಅರಿತಿದ್ದ ಭಾರತೀಯ ರೈತ ಸೆಣಬು ದುರದೃಷ್ಟಕರವಾದರೂ ಅದರಲ್ಲಿಯೂ ನಾರಿನ ಶಕ್ತಿ ಇರುವುದರ ಸಂಕೇತವಾಗಿ ಅದನ್ನು ಪೂಜಿಸುತ್ತಿದ್ದ. ತನ್ನ ಮನೆಯ ಹಿತ್ತಲಲ್ಲಿ ತನಗೆ ಬೇಕಾದ್ದಷ್ಟನ್ನೇ ಬೆಳೆದುಕೊಳ್ಳುತ್ತಿದ್ದ.
ಬ್ರಿಟೀಷ್ ಅಧಿಕಾರಿಗಳು ಈ ಸೆಣಬಿನಲ್ಲಿರುವ ನಾರಿನ ಅಂಶವನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಇಚ್ಛಿಸಿ ಅದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವಂತೆ ಪ್ರೇರಣೆ ಕೊಡಲಾರಂಭಿಸಿದರು. ಈ ಬೆಳೆಯನ್ನು ದುರದೃಷ್ಟಕರವೆಂದು ಭಾವಿಸಿದ್ದ ಭಾರತೀಯ ರೈತ ಅದನ್ನು ತಿರಸ್ಕರಿಸುತ್ತಲೇ ಬಂದ. ಅಧಿಕಾರಿಗಳು ಆಮಿಷ ಒಡ್ಡಿದರು, ಸೆಣಬು ಬೆಳೆಯುವುದಕ್ಕೆ ಅನುದಾನ ನೀಡಿದರು. ಕೊನೆಗೆ ಬೆದರಿಸಿ ಸೆಣಬಿನ ಕೃಷಿಗೆೆ ಒತ್ತಾಯ ಹೇರಿದರು. ಬಂಗಾಳದ ಪಶ್ಚಿಮ ಭಾಗದ ಲೆಫ್ಟಿನೆಂಟ್ ಗವರ್ನರ್ ಸರ್ ಆಂಡ್ರ್ಯೂ ಫ್ರೇಸರ್ ವ್ಯಾಪಾರಿಗಳನ್ನು ಒಟ್ಟುಗೂಡಿಸಿ ಯೂರೋಪಿನ ಉತ್ಪಾದಕರು, ಮಾರಾಟಗಾರರನ್ನು ನಿಮ್ಮೊಂದಿಗೆ ನೇರವಾಗಿ ಭೇಟಿ ಮಾಡಿಸುತ್ತೇನೆ, ಖರೀದಿ ಮಾಡುವಂತೆ ಪ್ರೇರೇಪಿಸುತ್ತೇನೆ ಎಂದೆಲ್ಲ ಹುಚ್ಚು ಹತ್ತಿಸಿದ. ಈ ವ್ಯಾಪಾರಿಗಳು ರೈತರನ್ನು ಒಲಿಸಿದರು. ಕ್ರಮೇಣ ಏಳೆಂಟು ವರ್ಷಗಳಲ್ಲಿ ಸೆಣಬಿನ ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಾಯಿತು.
ಅಲ್ಲಿಯವರೆಗೂ ರೈತನ ಸಂಪತ್ತು ಧಾನ್ಯ ರೂಪದಲ್ಲಿ ಇರುತ್ತಿತ್ತು. ಪ್ರತಿ ವರ್ಷ ಆತ ತನ್ನ ಪರಿವಾರಕ್ಕೆ ಎರಡರಿಂದ ಮೂರು ವರ್ಷಕ್ಕೆ ಬೇಕಾದಷ್ಟು ಮತ್ತು ಮುಂದಿನ ಬಿತ್ತನೆಗೆ ಬೇಕಾಗುವಷ್ಟು ಧಾನ್ಯವನ್ನು ಶೇಖರಿಸಿ ಇಟ್ಟುಕೊಂಡಿರುತ್ತಿದ್ದ. ಈಗ ಬ್ರಿಟೀಷರು ಈ ಧಾನ್ಯ ರೂಪದ ಸಂಪತ್ತನ್ನು ಹಣದಿಂದ ಬದಲಾಯಿಸಿದರು. ರೈತನೀಗ ಮುಂದಿನ ವರ್ಷಕ್ಕೆ ಬೇಕಾಗುವಷ್ಟು ಧಾನ್ಯದ ದಾಸ್ತಾನು ಮಾಡಿಕೊಳ್ಳುತ್ತಿರಲಿಲ್ಲ ಬದಲಿಗೆ ಹಣ ಸಂಗ್ರಹಣೆಯ ಹಿಂದೆ ಬಿದ್ದ. ರೈತ ಸಂಕುಲದ ಪತನದ ಮೊದಲ ಹೆಜ್ಜೆ ಇದು.

ಧಾನ್ಯ ಸುಲಭಕ್ಕೆ ಖಾಲಿಯಾಗದು. ಹಣ ಮಾರುಕಟ್ಟೆಯ ಏರುಪೇರಿಗೂ ಖರ್ಚಾಗಿಬಿಡುತ್ತದೆ. ರೈತನ ಬಳಿ ಧಾನ್ಯದ ದಾಸ್ತಾನಿದ್ದಾಗ ಸಿರಿವಂತನೂ ಅವನ ಬಳಿ ಬಂದು ನಿಂತಿರುತ್ತಿದ್ದ. ಆಗೆಲ್ಲ ರೈತನೇ ಶ್ರೀಮಂತ! ಈಗ ಹಣ ಕೂಡಿಡುವ ಹಿಂದೆ ಬಿದ್ದು ರೈತ ಸಿರಿವಂತನಿಗಿಂತಲೂ ಬಡವನಾದ! ಒಂದು ಅವಧಿಯಲ್ಲಿ ಮಳೆಯಾಗದೇ ನೀರಿಗೆ ತತ್ವ್ಸಾರವಾದೊಡನೆ ಭೂಮಿಯಂತೂ ಪಾಳು ಬಿತ್ತು. ಜೊತೆಗೆ ಇದ್ದ ಹಣ ನೀರಾಗಿ ಹೋಯ್ತು. ಧಾನ್ಯದ ದಾಸ್ತಾನು ಇಲ್ಲವಾದುದರಿಂದ ರೈತ ಕಂಗಾಲಾದ. ಭೀಕರ ಬರಗಾಲ ಇಣುಕಿತು. ಮನುಷ್ಯ ನಿರ್ಮಿತ ಬರಗಾಲವೆಂದರೆ ಇದೇ.

ನಿವೇದಿತಾ ಈ ಹೊತ್ತಲ್ಲಿ ಬರಗಾಲಕ್ಕೆ ತುತ್ತಾದ ಹಳ್ಳಿ-ಹಳ್ಳಿಗೆ ಭೇಟಿ ಕೊಟ್ಟು ಸೇವಾ ಕಾರ್ಯದಲ್ಲಿ ಮಗ್ನಳಾದಳು. ಅವಳ ಈ ಹೊತ್ತಿನ ಬರವಣಿಗೆಗಳು ಕಲ್ಲನ್ನೂ ಕರಗಿಸುವಂಥವು. ಯಾವುದಾದರೂ ಹಳ್ಳಿಯ ಪೀಡಿತ ಜನರಿಗಾಗಿ ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ದರೆ ಗುಂಪುಗೂಡಿದ ಜನ ಜೋರಾಗಿ ಕೂಗಿ ಸಂತೋಷ ವ್ಯಕ್ತಪಡಿಸುತ್ತಿದ್ದರಂತೆ. ಪರಿಹಾರ ಸಾಮಗ್ರಿ ತಮ್ಮೂರಿಗೆ ಸಾಕಾಗುವುದಿಲ್ಲ ಎಂಬ ಅರಿವಿದ್ದರೂ ಅವರು ಸುಳ್ಳು ನಗುವನ್ನು ಮುಖಕ್ಕೆ ತಂದುಕೊಂಡು ಬಂದವರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡುತ್ತಿದ್ದರಂತೆ. ನಿವೇದಿತಾ ಹೇಳುತ್ತಾಳೆ, ‘ಜೋರಾಗಿ, ಕಿವಿಗಡಚಿಕ್ಕುವಂತೆ ಇರಬೇಕಾಗಿದ್ದ ಅವರ ಆನಂದದ ಬುಗ್ಗೆ ಅಷ್ಟು ಸಾಮಾನ್ಯವಾಗಿ, ಮೆಲುವಾಗಿ ಇರುತ್ತಿದ್ದುದನ್ನು ಕೇಳಿ ಹೃದಯ ಹಿಂಡಿದಂತೆ ಆಗುತ್ತಿತ್ತು’. ಅವರು ಭಗವಂತನನ್ನು ‘ಬೇಗ ಬೆಳಕು ತಾ’ ಎಂದು ಏಕಕಂಠದಿಂದ ಪ್ರಾಥರ್ಿಸುವಾಗ ಪರಿಹಾರಕ್ಕೆಂದೇ ಬಂದ ಅನೇಕ ಕಾರ್ಯಕರ್ತರಲ್ಲಿ ನೀರಹನಿ ಜಿನುಗುತ್ತಿತ್ತು ಎನ್ನುತ್ತಾಳೆ.

graphic1877b

ಹಳ್ಳಿಯೊಂದರಲ್ಲಿ ಮನೆಯವರೆಲ್ಲ ಹಸಿದು, ಅಕ್ಕ ಪಕ್ಕ ಬೆಳೆದಿದ್ದ ಸೊಪ್ಪು-ಸದೆ ತಿಂದು ಅದೂ ಮುಗಿದ ಮೇಲೆ ಕೈಚೆಲ್ಲಿದ ಮನೆಯೊಡೆಯ ಕೆಲಸ ಅರಸಿ ಪಕ್ಕದೂರಿಗೆ ಹೊರಟನಂತೆ. ಅಲ್ಲಿಯೂ ಏನೂ ದಕ್ಕದೇ ಸೋತು ಸುಣ್ಣವಾಗಿ ಮರಳಿ ಬರುವಾಗ ದಾರಿಯಲ್ಲಿಯೇ ತೀರಿಕೊಂಡ. ಆತನ ಶವದ ಮೇಲೆ ರೋದಿಸುತ್ತಿದ್ದ ಅವನ ಪತ್ನಿ-ಮಕ್ಕಳ ದುಃಖ ಹೇಳತೀರದಾಗಿತ್ತು. ಅದೇ ದಾರಿಯಲ್ಲಿ ತಂದೆಯೊಬ್ಬ ತನ್ನ ಒಂದು ಮಗುವನ್ನು ಕ್ಷಾಮದ ಕಿರಿಕಿರಿ ತಾಳಲಾಗದೇ ಮಾರಲು ಸಜ್ಜಾಗಿದ್ದನಂತೆ. ಇದನ್ನು ಕೇಳಿ ನಿವೇದಿತಾ ಭಾರತವೂ ಮನುಷ್ಯರನ್ನು ತಿನ್ನುವ ಮಟ್ಟಕ್ಕಿಳಿಯಿತೇ? ಎಂದು ಒಂದು ಕ್ಷಣ ಗಾಬರಿಯಾದಳು ಮರುಕ್ಷಣವೇ ಅರಿವಾಯಿತು ಅವಳಿಗೆ. ಮಕ್ಕಳಿಲ್ಲದ ಸಿರಿವಂತರೊಬ್ಬರಿಗೆ ತನ್ನ ಒಂದು ಮಗುವನ್ನು ಕೊಟ್ಟು ಅದಾದರೂ ಚೆನ್ನಾಗಿ ಬದುಕಲಿ ಎಂಬ ಸಹಜ ಮಾತೃಭಾವ ಅದು. ಮುಸಲ್ಮಾನ ರೈತನೊಬ್ಬ ಬಾರಿಸಾಲ್ನ ಪೊಲೀಸ್ಠಾಣೆಗೆ ಹೋಗಿ ತನ್ನ ಮಕ್ಕಳನ್ನು ಕೊಂದ ನನ್ನನ್ನು ಕೊಂದು ಬಿಡಿ ಎಂದು ಕೋರಿದನಂತೆ. ‘ನನ್ನ ಮಕ್ಕಳಿಗೆ ಊಟ ಕೊಡಲಾಗದಿದ್ದರೆ ಬದುಕಿರುವುದಾದರೂ ಏಕೆ? ನೇಣಿಗೇರಿಸಿ’ ಎಂದು ಆಗ್ರಹಿಸುತ್ತಿದ್ದನಂತೆ.

 

ಇಷ್ಟಾದರೂ ಭಾರತೀಯ ಧೃತಿಗೆಡುತ್ತಿರಲಿಲ್ಲ. ಅವನಿಗೆ ದೂರದಲ್ಲೆಲ್ಲೋ ತನ್ನ ಸಮಸ್ಯೆಗೆ ಪರಿಹಾರ ಕಾಣುತ್ತಲೇ ಇತ್ತು. ಭಗವಂತನ ಮೇಲಿನ ವಿಶ್ವಾಸ ಅವನಿಗೆ ಇನಿತೂ ಕಡಿಮೆಯಾಗಿರಲಿಲ್ಲ. ಹಳ್ಳಿಯೊಂದರಲ್ಲಿ ವೃದ್ಧನೊಬ್ಬ ನಿವೇದಿತೆಯ ಜೊತೆಗೆ ಕ್ಷಾಮಪೀಡಿತ ಮನೆಗಳಿಗೆ ಭೇಟಿ ಕೊಡುತ್ತಿದ್ದ. ಒಂದೆಡೆಯಂತೂ ಊಟವಿಲ್ಲದೇ ಹೈರಾಣಾಗಿದ್ದ ವೃದ್ಧೆಯೊಬ್ಬಳಿಗೆ ಧೈರ್ಯ ತುಂಬಿ ‘ಅದೃಷ್ಟ ದೇವತೆ! ಲಕ್ಷ್ಮಿಯೇ! ಹೆದರಬೇಡ. ಆದಷ್ಟು ಬೇಗ ನಿನಗೆ ಬೇಕಾದ್ದನ್ನು ತಲುಪಿಸುತ್ತೇವೆ. ಒಳ್ಳೆಯ ಕಾಲ ಬಲು ಬೇಗ ಬರುವುದು’ ಎಂದು ಧೈರ್ಯ ತುಂಬುತ್ತಿದ್ದ, ಸ್ವತಃ ತಾನೂ ಕ್ಷಾಮದಿಂದ ಸಂತ್ರಸ್ತನೇ ಎಂಬುದನ್ನು ಮರೆತು.
ಆಹ್! ಕ್ಷಾಮದ ಭೀಭತ್ಸ ರೂಪ ಕಲ್ಪನೆಗೂ ನಿಲುಕದ್ದು. ಬಡತನ ಬಡತನವನ್ನೇ ಉಗುಳುವ ವಿಷಮ ಪರಿಸ್ಥಿತಿ ಅದು. ಅದು ಬದುಕನ್ನೇ ಅಂಧಕಾರಕ್ಕೆ ತಳ್ಳುತ್ತದೆ. ಅಜ್ಞಾನ ಆವರಿಸಿಕೊಳ್ಳುತ್ತದೆ. ಹೀಗಾಗಿಯೇ ರೈತನೊಬ್ಬ ಹಾಲು ಕೊಡುವ ಹಸುವನ್ನು ಅತಿ ಕಡಿಮೆ ಬೆಲೆಗೆ ಕಟುಕನಿಗೆ ಮಾರಿಬಿಡೋದು. ಮುಂದಿನ ವರ್ಷದ ಬಿತ್ತನೆಗಾಗಿ ಕೂಡಿಟ್ಟ ಧಾನ್ಯವನ್ನು ತಿಂದುಬಿಡೋದು. ಪರಿಣಾಮ ರೈತನ ಆಥರ್ಿಕ ಹಂದರದ ಅಡಿಪಾಯವಾಗಿದ್ದ ವ್ಯವಸ್ಥೆಗಳೆಲ್ಲ ಕುಸಿದು ಬಿದ್ದು ಆತ ಶಾಶ್ವತವಾಗಿ ಬಡತನ ಕೂಪಕ್ಕೆ ತಳ್ಳಲ್ಪಡುತ್ತಾನೆ. ಬೀಕ್ಷಾಟನೆ ಅನಿವಾರ್ಯವಾಗುತ್ತದೆ. ಹೀಗಾಗಿಯೇ ಕ್ಷಾಮವನ್ನು ಭಾರತೀಯರು ‘ದುರ್ಭಿಕ್ಷಾ’ ಎನ್ನುತ್ತಾರೆ ಎಂಬುದನ್ನು ಗುರುತಿಸುತ್ತಾಳೆ ನಿವೇದಿತಾ.

ಒಂದೆಡೆ ಭಾರತೀಯರು ಹೀಗೆ ಕಠಿಣ ಸಮಯದಲ್ಲೂ ಒಬ್ಬರಿಗೊಬ್ಬರು ಜೊತೆಯಾಗಿ ಪೂರಕವಾಗಿ ಬದುಕಿನ ಮಹೋನ್ನತ ಆದರ್ಶ ತೋರುತ್ತಿದ್ದರೆ ಅತ್ತ ಇಂಗ್ಲೀಷರು ತಮ್ಮ ಸಹಜ ವ್ಯಕ್ತಿತ್ವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದರು. ಪತ್ರಿಕೆಯೊಂದು ‘ಜನ ಅದಾಗಲೇ ಪರಿಹಾರದ ವಸ್ತುಗಳ ಮೇಲೆಯೇ ಜೀವನ ಕಟ್ಟಿಕೊಳ್ಳುವುದನ್ನು ರೂಢಿ ಮಾಡಿಕೊಂಡುಬಿಟ್ಟಿದ್ದಾರೆ. ಅದನ್ನು ಬಿಟ್ಟು ಬದುಕುವ ಆಲೋಚನೆಯೂ ಅವರಿಗಿಲ್ಲ’ ಎಂದು ಬರೆದುಬಿಟ್ಟಿತ್ತು. ದೂರದೂರುಗಳಿಂದ ಪರಿಹಾರ ನಿಧಿಗೆ ಹಣ ಕಳಿಸುತ್ತಿರುವವರನ್ನು ತಡೆಯುವ ಉದ್ದೇಶ ಆ ಪತ್ರಿಕೆಗಿದ್ದಿರಬಹುದು. ಮದ್ರಾಸಿನ ಅಧಿಕಾರಿಗಳಂತೂ ‘ಕ್ಷಾಮವೆಂದು ಇನ್ನೂ ಅಧಿಕೃತವಾಗಿ ಘೋಷಣೆಯಾಗದಿರುವುದರಿಂದ ಅದಕ್ಕಾಗಿ ಹಣ ಸಂಗ್ರಹಿಸುವುದು ರಾಜದ್ರೋಹವಾಗುತ್ತದೆ’ ಎಂದು ಹೇಳಿಕೆ ಹೊರಡಿಸಿಬಿಟ್ಟಿದ್ದರು.

the-forgotten-famine-how-capitalist-british-killed-10-million-people-in-bengal-for-profits-800x420-1444654321

ಒಟ್ಟಾರೆ ಬ್ರಿಟೀಷರಿಗೆ ಭಾರತೀಯರ ಸಾವು ಬೇಕಿತ್ತು. 30 ಕೋಟಿ ಜನರನ್ನು ಹಿಡಿ ಹಿಡಿದು ಕೊಲ್ಲುವುದು ಸುಲಭವಲ್ಲ. ಅದಕ್ಕೆ ಬೇಕಾದ ಅವರ ಸೈನಿಕರ ಸಂಖ್ಯೆಯೂ ಕಡಿಮೆಯೇ. ಉಳಿದ ಮಾರ್ಗ ಕೃತಕ ಕ್ಷಾಮಗಳು, ಸಾಂಕ್ರಾಮಿಕ ರೋಗಗಳು ಮಾತ್ರ. ಬಂಗಾಳದಲ್ಲಿ ಈ ಬಗೆಯ ವ್ಯವಸ್ಥಿತ ಕೊಲೆಗೆ ಬಿಳಿಯ ಅಧಿಕಾರಿಗಳು ಪ್ರಯತ್ನ ಪಟ್ಟೇ ಇದ್ದರು. ಅದನ್ನು ವ್ಯರ್ಥಗೊಳಿಸಲೆಂದೇ ಭಗವಂತ ನಿವೇದಿತೆಯನ್ನು ಕಳಿಸಿದ್ದನೇನೋ? ಭಾರತೀಯರ ಸೇವೆಗೆಂದೇ ಬಂದ ಆಕೆಗೆ ಆರಂಭದಲ್ಲಿದ್ದ ಬಿಳಿಯರ ಮೇಲಿನ, ಇಂಗ್ಲೆಂಡಿನ ಪ್ರೇಮ ಈಗ ಕಿಂಚಿತ್ತೂ ಇರಲಿಲ್ಲ. ಅವಳ ಹೃದಯ ವಿಶಾಲವಾಗಿತ್ತು. ‘ಬಡವರಿಗಾಗಿ, ಅಜ್ಞಾನಿಗಳಿಗಾಗಿ, ದಲಿತರಿಗಾಗಿ, ತುಳಿತಕ್ಕೊಳಗಾದವರಿಗಾಗಿ ಮರುಗು. ತಲೆ ಗಿರ್ರನೆ ಸುತ್ತುವವರೆಗೆ, ಹೃದಯ ನಿಂತೇ ಹೋಗುವವರೆಗೆ ಮರುಗು. ಇನ್ನೇನೂ ಮಾಡಲಾಗದೆಂದೆನಿಸಿದಾಗ ಹೃದಯವನ್ನು ಭಗವಂತನ ಪಾದಪದ್ಮಗಳಲ್ಲಿ ಸಮರ್ಪಿಸಿಬಿಡು. ಆಗ ಅಜೇಯವಾದ ಶಕ್ತಿ ನಿನ್ನೊಳಗೆ ಹರಿಯುವುದು’ ಎನ್ನುತ್ತಿದ್ದರು ಸ್ವಾಮಿ ವಿವೇಕಾನಂದರು. ನಿವೇದಿತಾ ಈಗ ಅಂತಹ ಪ್ರಚಂಡ ಶಕ್ತಿಯಾಗಿದ್ದಳು. ಅವಳೀಗ ಸ್ಫೂರ್ತಿಯ ಕೇಂದ್ರವಾಗಿದ್ದಳು. ರಾಮಕೃಷ್ಣಾಶ್ರಮದ ಸ್ವಾಮಿ ಸದಾನಂದರು ಕಲ್ಕತ್ತಾದ ಗಲ್ಲಿಗಳನ್ನು ಸ್ವಚ್ಛಗೊಳಿಸುವ ಯೋಜನೆ ಕೈಗೆತ್ತಿಕೊಂಡಾಗ ಒಂದು ಕೊಳಕಾದ ಗಲ್ಲಿ ಸ್ವಚ್ಛತೆಗೆ ಯಾರೂ ಮುಂದೆ ಬರಲೇ ಇಲ್ಲ. ಸ್ವತಃ ನಿವೇದಿತಾ ತಾನೇ ಪೊರಕೆ ಕೈಗೆತ್ತಿಕೊಂಡು ಗುಡಿಸಲಾರಂಭಿಸಿದಳು. ನಾಚಿದ ಅಕ್ಕಪಕ್ಕದ ಗಲ್ಲಿಯ ತರುಣರು ತಾವೂ ಕೈಜೋಡಿಸಿ ಸ್ವಚ್ಛತೆಗೆ ನಿಂತರು. ಹಾಗೆಯೇ ಕ್ಷಾಮದ ಹೊತ್ತಲ್ಲೂ ಆಯಿತು. ಅಶ್ವಿನಿ ಕುಮಾರ್ ದತ್ತ ಪರಿಹಾರ ಕಾರ್ಯಕ್ಕೆ ಟೊಂಕಕಟ್ಟಿದರು. ಹೆಚ್ಚು ಕಡಿಮೆ 5 ಲಕ್ಷ ಜನಕ್ಕೆ ಪ್ರತ್ಯಕ್ಷವಾಗಿ ಪರಿಹಾರ ಒದಗಿಸಲು ಸಾಧ್ಯವಾಯಿತು. ಸ್ವತಃ ನಿವೇದಿತಾ ಮನೆಯಿಂದ ಮನೆಗೆ ಅಲೆಯುವುದು ಭಾರತೀಯ ತರುಣರಿಗೆ ಸ್ಫೂರ್ತಿ ತುಂಬುತ್ತಿತ್ತು. ತಮಗಾಗಿ ಬಂದ ಈ ವಿದೇಶಿ ಮಹಿಳೆಯನ್ನು ಸ್ವಂತದವರಂತೆ ಭಾರತೀಯರೂ ಸ್ವೀಕರಿಸಿದ್ದರು.

ಕೆಲವೊಮ್ಮೆ ಸುದೀರ್ಘ ಪರಿಹಾರ ಕಾರ್ಯದಿಂದ ನಿವೇದಿತಾ ಬರಿ ಕೈಯ್ಯಲ್ಲಿ ಮರುಳುವಾಗ ತಾನು ಉಳಕೊಂಡಿದ್ದ ಮನೆಯ ಹೊರಗೆ ನೂರಾರು ಜನ ಕಾಯುತ್ತ ನಿಂತಿರುತ್ತಿದ್ದುದನ್ನು ಕಂಡು ದುಃಖಿತಳಾಗುತ್ತಿದ್ದಳು. ತನಗೆ ಮತ್ತು ತನ್ನ ಕಾರ್ಯಕರ್ತರ ಊಟಕ್ಕೆಂದು ಉಳಿಸಿಕೊಂಡಿದ್ದ ಒಂದಷ್ಟು ಬಿಸ್ಕತ್ತುಗಳನ್ನು ಅಲ್ಲಿರುವವರಿಗೆ ಒಂದೊಂದು ಸಿಗುವಂತೆ ಹಂಚುತ್ತಿದ್ದಳು. ಹೌದು. ಒಂದೊಂದು ಬಿಸ್ಕತ್ತು. ಬರದೇ ಮನೆಯಲ್ಲಿಯೇ ಉಳಿದವರಿಗಾಗಿ ಒಂದೊಂದು ಕೈಲಿಡುತ್ತಿದ್ದಳು. ಇಷ್ಟು ಜನ ಅವಳ ವಿರುದ್ಧ ಆಕ್ರೋಶದಿಂದ ಕೂಗಿ, ಹೊಟ್ಟೆ ತುಂಬಾ ಕೊಡಲಿಲ್ಲವೆಂದು ಬೊಬ್ಬೆಯೆಬ್ಬಿಸುತ್ತಾರೆಂದುಕೊಂಡು ಅಳುಕಿನಿಂದಲೇ ನಿಂತಿರುತ್ತಿದ್ದರೆ ಜನರ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ಅವರು ಆಕೆಯನ್ನು ಪ್ರೀತಿಯಿಂದ ಹರಸಿ ಕೆನ್ನೆ ಮುಟ್ಟಿ ನೆಟ್ಟಿಗೆ ತೆಗೆದು ಹೋಗುತ್ತಿದ್ದರು.

sisternivedita-650_102814035616

ಅವಳ ಹೃದಯ ಬೇಯುತ್ತಿತ್ತು. ಮಾನವನ ದುಃಖ, ನೋವು ಅವಳಿಂದ ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಅವರಿಗೆ ಸಹಾಯ ಮಾಡಲಾಗದೆಂದು ಕೈಚೆಲ್ಲುವ ಪರಿಸ್ಥಿತಿ ಬಂದಾಗ ಆಕೆಯ ಹೃದಯ ಸಿಡಿದು ನೋವಿನ ಲಾವಾ ಉಕ್ಕಿ ಹರಿಯುತ್ತಿತ್ತು. ಓಹ್! ಯಾರೀಕೆ? ಪರಿಸ್ಥಿತಿ ವಿಷಮವಾದಾಗ ಬಂಗಾಳಿಗರನ್ನು ಭಾಷೆಯ ಆಧಾರದಲ್ಲಿ ನಾವೇ ವಿರೋಧಿಸಿಬಿಡುತ್ತೇವೆ. ಅವರನ್ನು ಮೀನು ತಿನ್ನುವವರೆಂದು ಜರಿದು ಬಿಡುತ್ತೇವೆ. ಆದರೆ ಈ ಮಹಾತಾಯಿ ಐರ್ಲೆಂಡಿನಿಂದ ಇಲ್ಲಿಗೆ ಬಂದು ಇಲ್ಲಿನ ಜನರ ಸಂಸ್ಕೃತಿಯನ್ನು ತನ್ನದಾಗಿಸಿಕೊಂಡು ಅದಕ್ಕೆ ಒಂದಿನಿತೂ ಧಕ್ಕೆ ತರದೇ ಇಲ್ಲಿನವರ ಸೇವೆಗೆ ತನ್ನದೆಲ್ಲವನ್ನೂ ಸಮರ್ಪಿಸಿದಳಲ್ಲ; ಸಾಮಾನ್ಯವೇನು? ಸ್ವಾಮಿ ವಿವೇಕಾನಂದರ ಜೀವನ ಚರಿತ್ರಕಾರರೊಬ್ಬರು ಬರೆಯುತ್ತಾರೆ, ‘ನಿವೇದಿತಾಳನ್ನು ತರಬೇತು ಮಾಡುವುದೊಂದನ್ನು ಬಿಟ್ಟು ಈ ಸಂದರ್ಭದಲ್ಲಿ ಸ್ವಾಮೀಜಿ ಬೇರೇನನ್ನೂ ಮಾಡದಿದ್ದರೂ ಅವರ ಸಮಯವು ವ್ಯರ್ಥವಾಯಿತೆಂದು ಹೇಳಲಾಗುತ್ತಿರಲಿಲ್ಲ’.

ಸತ್ಯವಲ್ಲವೇ? ರಾಮಕೃಷ್ಣರ ತರಬೇತಿಯಿಂದ ನರೇಂದ್ರ ವಿವೇಕಾನಂದನಾದ. ರಾಮಕೃಷ್ಣರು ಗರ್ಭಗುಡಿಯ ಮೂರ್ತಿಯಾದರು, ಸ್ವಾಮೀಜಿ ಜಗತ್ತಿಗೆಲ್ಲ ತಿರುಗಾಡೋ ಉತ್ಸವ ಮೂರ್ತಿಯಾದರು. ಮುಂದೆ ಇದೇ ವಿವೇಕಾನಂದರು ಹೆಕ್ಕಿ ತಂದ ಪಶ್ಚಿಮದ ಮುತ್ತು ಮಾರ್ಗರೇಟ್ ನೋಬಲ್ಳನ್ನು ತರಬೇತುಗೊಳಿಸಿ ನಿವೇದಿತಾ ಆಗಿ ರೂಪಿಸಿದರು. ಈ ಪುಷ್ಪ ತಾಯಿ ಭಾರತಿಗೆ ಸಮರ್ಪಣೆಯಾಯಿತು. ಸೂಕ್ಷ್ಮವಾಗಿ ನೋಡಿದರೆ, ವಿವೇಕಾನಂದರು ಈಗ ಗರ್ಭಗುಡಿಯಲ್ಲಿ ನೆಲೆ ನಿಂತರೆ, ನಿವೇದಿತಾ ಉತ್ಸವ ಮೂತರ್ಿಯಾಗಿ ಭಾರತದ ಗಲ್ಲಿಗಲ್ಲಿ ತಿರುಗಾಡಿದಳು!

ಗೂಢಚಾರನೊಬ್ಬನ ಹಿಂದೆ ಎಷ್ಟೆಲ್ಲಾ ರಾಜತಾಂತ್ರಿಕ ನಡೆ!

ಗೂಢಚಾರನೊಬ್ಬನ ಹಿಂದೆ ಎಷ್ಟೆಲ್ಲಾ ರಾಜತಾಂತ್ರಿಕ ನಡೆ!

ಮೋದಿಯ ಕುರಿತಂತೆ ಭರವಸೆ ಈಗ ಪಾಕೀಸ್ತಾನದಲ್ಲಿರುವ ಹಿಂದೂಗಳಿಗೆ ಮಾತ್ರವಲ್ಲ ಟಿಬೇಟಿನಲ್ಲಿರುವ ಬುದ್ಧಾನುಯಾಯಿಗಳಿಗೂ ಇದೆ. ಈಗ ಚೀನಾಕ್ಕಿದ್ದದ್ದು ಒಂದೇ ದಾರಿ. ‘ಪಾಕಿಸ್ತಾನದ ಗಡಿಯ ಮೇಲೆ ಸರ್ಜಿಕಲ್ ದಾಳಿ ಮತ್ತು ನೋಟ್ ಬಂದಿಯ ನಂತರ ಯಾವ ಹಿಡಿತ ಭಾರತ ಹೊಂದಿದೆಯೋ ಅದನ್ನು ಸಡಿಲಗೊಳಿಸುವಂತಾಗಬೇಕು. ಆಗ ಮಾತ್ರ ಟಿಬೇಟಿನತ್ತ ತಲೆ ಹಾಕುವುದನ್ನು ಭಾರತ ಬಿಡುತ್ತದೆ’. ಆಗಲೇ ಅವರ ತಲೆ ಹೊಕ್ಕಿದ್ದು ಕಾಶ್ಮೀರದಲ್ಲಿ ತೀವ್ರಗೊಳ್ಳಬೇಕಿರುವ ತೀವ್ರಗಾಮಿ ಚಟುವಟಿಕೆ ಮತ್ತು ಭಾರತದ ಗಮನವನ್ನು ಮತ್ತೊಂದೆಡೆ ಸೆಳೆಯಬಲ್ಲ ಯಾವುದಾದರೂ ಯೋಜನೆ. ಪಾಕ್ನ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಬೇಕು ಅಷ್ಟೇ! ಈಗ ಆಯ್ಕೆಯಾಗಿದ್ದು ಕುಲಭೂಷಣ್ ಜಾಧವ್.

ಮೋದಿಯವರು ಅಧಿಕಾರಕ್ಕೆ ಬಂದ ಆರಂಭದ ತಿಂಗಳುಗಳವು. ದೆಹಲಿಯ ಅಧಿಕಾರದ ಪಡಸಾಲೆಗೆ ಹತ್ತಿರವಿರುವ ಪ್ರಮುಖರೊಬ್ಬರು ಮೋದಿಯವರ ರಾಜತಾಂತ್ರಿಕ ನಡೆಯ ಕುರಿತಂತೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರು. ಎರಡೆರಡು ರಾಷ್ಟ್ರಗಳನ್ನು ಏಕಕಾಲಕ್ಕೆ ವಿರೋಧಿಸುವುದು ಸರಿಯಲ್ಲ ಸಮಾಧಾನವಾಗಿ ಹೆಜ್ಜೆ ಇಟ್ಟು ಜನರ ಮನಸನ್ನು ಗೆದ್ದು ಆಮೇಲೆ ಒಂದೊಂದೇ ಸಮಸ್ಯೆ ಪರಿಹರಿಸಬೇಕು ಅಂತ ಅವರ ಅಂಬೋಣ. ಹೌದು. 70 ವರ್ಷಗಳಿಂದ ಭಾರತದ್ದು ಇದೇ ಮಾದರಿ. ಜವಹರಲಾಲ್ ನೆಹರೂರವರಿಗೆ ಆಳಲು ಬೇಕಾದಷ್ಟು ಸಮಯವಿತ್ತು. ಅವರಾಗಿಯೇ ದೇಹ ಬಿಡುವವರೆಗೆ ಕುರ್ಚಿ ಬಿಡುವ ಪ್ರಮೇಯವಿರಲಿಲ್ಲ. ಇಂದಿರಾಗಾಂಧಿಯವರದ್ದೂ ಅದೇ ಕಥೆ. ರಾಜೀವ್ ಗಾಂಧಿಯವರೂ ಬದುಕಿದ್ದರೆ ಮತ್ತೆ ಕುರ್ಚಿಯ ಮೇಲೆ ಆಸೀನರಾಗಿರುತ್ತಿದ್ದರು. ಆಮೇಲೆ ಅವರ ಮಗ, ಮೊಮ್ಮಗ ಪರಂಪರೆ ಮುಂದುವರೆದಿರುತ್ತಿತ್ತು. ಅವರಿಗೆಲ್ಲ ಸಾಕಷ್ಟು ಸಮಯವಿತ್ತು. ದೀರ್ಘಕಾಲ ತಾವೇ ಮೆರೆಯಬಹುದಾದ ಅವಕಾಶವೂ ಇತ್ತು. ಮಧ್ಯೆ ಸ್ವಲ್ಪ ಎಡವಟ್ಟಾಗಿ ಅಧಿಕಾರ ಇತರರ ಕೈ ಸೇರಿತು. ಆದರೆ ಹೀಗೆ ಕೈಗೆತ್ತಿಕೊಂಡ ಬೇರೆಯವರೂ ಹಳೆಯ ಆಳುವ ನೀತಿಯನ್ನೇ ಬಳಸಿದರು. ಸುಖ-ನೆಮ್ಮದಿಯಿಂದಿದ್ದ ವ್ಯವಸ್ಥೆಯನ್ನು ಅಲುಗಾಡಿಸುವ ಕೆಲಸಕ್ಕೆ ಅವರು ಕೈ ಹಾಕಲೇ ಇಲ್ಲ. ಹೌದು. ನಾನು ಅಟಲ್ ಬಿಹಾರಿ ವಾಜಪೇಯಿಯವರ ಕುರಿತಂತೆಯೇ ಮಾತನಾಡುತ್ತಿದ್ದೇನೆ. ಅಧಿಕಾರ ಬಲು ಬೇಗ ಕಳೆದು ಹೋಯಿತು. ಮತ್ತೆ ಸುಖಾಸನಕ್ಕೆ ಹಪಹಪಿಸುವ ವೇಳೆಗಾಗಲೇ ಹತ್ತು ಸುದೀರ್ಘ ವರ್ಷ ಕಳೆದೇ ಹೋಯ್ತು. ನಮಗಂಟಿದ ಜಾಡ್ಯ ಕಳೆಯಲೇ ಇಲ್ಲ.
ನರೇಂದ್ರ ಮೋದಿ ತಮಗಿರುವ ಸಮಯದ ಮಿತಿ ಅರಿತಿದ್ದಾರೆ. ಕ್ರಾಂತಿಯ ವೇಗ ಅವರಿಗೆ ಬೇಕಿದೆ. ಹಾಗಂತಲೇ ಜಗದ ವೇಗಕ್ಕೆ ತಮ್ಮ ವೇಗವನ್ನು ತಮ್ಮದೇ ಶೈಲಿಯಲ್ಲಿ ಹೊಂದಿಸಿಕೊಂಡದ್ದು. ಈಗ ಜಗದ ವೇಗವೇ ತಮ್ಮ ವೇಗಕ್ಕಿಂತ ಕಡಿಮೆಯಾಗುವಂತೆ ಮಾಡಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಪುತಿನ್, ಟ್ರಂಪ್ರನ್ನು ಹೇಗೆ ಕಾಣುತ್ತಿದ್ದಾರೋ ಅದೇ ಮಟ್ಟದಲ್ಲಿ ನರೇಂದ್ರ ಮೋದಿಯವರನ್ನು ಕಾಣುತ್ತಿದ್ದಾರೆ.

Modi_PTI-L

ಚೀನಾದೊಂದಿಗೆ ಮೋದಿ ನಡಕೊಳ್ಳುತ್ತಿರುವ ರೀತಿ ಅದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದೆ. ಇತ್ತೀಚೆಗೆ ದಲೈಲಾಮಾರನ್ನು ತವಾಂಗ್ಗೆ ಕಳಿಸುವ ಯೋಜನೆ ರೂಪಿಸಿತ್ತಲ್ಲ ಸರ್ಕಾರ, ಅದರ ಹಿಂದೆ ಇದ್ದದ್ದು ಇದೇ ಚಾಕಚಕ್ಯತೆ. ಚೀನಾ ಪಾಕ್ ಎಕಾನಾಮಿಕ್ ಕಾರಿಡಾರ್ ಮೂಲಕ ಗಡಿಯಲ್ಲಿ ಚೀನಾ ಕಿರಿಕಿರಿ ಮಾಡುವುದನ್ನು ತಡೆಗಟ್ಟಲು ಗೋಗರೆಯುವ ಮಾರ್ಗ ಅನುಸರಿಸಲಿಲ್ಲ ಭಾರತ. ಸೌಹಾರ್ದ ಮಾತುಕತೆಗಳಾದವು, ಜಗತ್ತಿನ ರಾಷ್ಟ್ರಗಳನ್ನು ತನ್ನೆಡೆ ಸೆಳೆಯುವ ಭೇದೋಪಾಯ ಅವಲಂಬಿಸಿತು. ಏನೂ ಆಗಲಿಲ್ಲವೆಂದಾಗ ಚೀನಾಕ್ಕೆ ಗಡಿ ಅಭದ್ರತೆ ಉಂಟಾಗುವಂತೆ ಮಾಡಲು ತವಾಂಗ್ಗೆ ಲಾಮಾರನ್ನು ಕಳಿಸಿತು. ಬಹಳ ಜನರಿಗೆ ಗೊತ್ತಿಲ್ಲ. ಕಾಶ್ಮೀರದ ಸಮಸ್ಯೆ ನಮ್ಮನ್ನು ಹೇಗೆ ಹಿಂಡುತ್ತಿದೆಯಲ್ಲ ಅಂಥ ನಾಲ್ಕು ಪಟ್ಟು ದೊಡ್ಡ ಕಾಶ್ಮೀರ ಚೀನಾದೊಳಗಿದೆ, ಟಿಬೇಟ್ ರೂಪದಲ್ಲಿ. ಅದನ್ನು ಎಷ್ಟು ತೀವ್ರವಾದ ವ್ರಣವಾಗಿಸುತ್ತೇವೆಯೋ ಅಷ್ಟು ಚೀನಾ ಹೈರಾಣಾಗುತ್ತಿದೆ. ಈ ಬಾರಿ ಆಗಿದ್ದೂ ಅದೇ. ದಲೈಲಾಮಾ ಅರುಣಾಚಲ ಭೇಟಿ ಯೋಜನೆಯಾದೊಡನೆ ಚೀನಾ ವಿಲವಿಲನೆ ಒದ್ದಾಡಿತು. ಅತ್ತ ಟಿಬೇಟಿನಲ್ಲಿ ಹೊಸ ಸಂಚಲನ. ಮೋದಿಯ ಕುರಿತಂತೆ ಭರವಸೆ ಈಗ ಪಾಕೀಸ್ತಾನದಲ್ಲಿರುವ ಹಿಂದೂಗಳಿಗೆ ಮಾತ್ರವಲ್ಲ ಟಿಬೇಟಿನಲ್ಲಿರುವ ಬುದ್ಧಾನುಯಾಯಿಗಳಿಗೂ ಇದೆ. ಕಾಶ್ಮೀರದ ಸಮಸ್ಯೆಗೆ ಪಾಕಿಗೆ ನೀವು ಬೆಂಬಲ ಕೊಟ್ಟಿದ್ದೇ ಆದರೆ ಟಿಬೆಟ್ನಲ್ಲಿ ಬೆಂಕಿ ಭುಗಿಲೇಳಲು ನಾವೂ ಪ್ರಯತ್ನ ಹಾಕುತ್ತೇವೆ ಎಂಬ ಸ್ಪಷ್ಟ ಸಂದೇಶ ಕೊಟ್ಟಿತು ಭಾರತ. ಈಗ ಚೀನಾಕ್ಕಿದ್ದದ್ದು ಒಂದೇ ದಾರಿ. ‘ಪಾಕಿಸ್ತಾನದ ಗಡಿಯ ಮೇಲೆ ಸರ್ಜಿಕಲ್ ದಾಳಿ ಮತ್ತು ನೋಟ್ ಬಂದಿಯ ನಂತರ ಯಾವ ಹಿಡಿತ ಭಾರತ ಹೊಂದಿದೆಯೋ ಅದನ್ನು ಸಡಿಲಗೊಳಿಸುವಂತಾಗಬೇಕು. ಆಗ ಮಾತ್ರ ಟಿಬೇಟಿನತ್ತ ತಲೆ ಹಾಕುವುದನ್ನು ಭಾರತ ಬಿಡುತ್ತದೆ’.

modi-dalai-lama-650_650x400_61491402672

ಆಗಲೇ ಅವರ ತಲೆ ಹೊಕ್ಕಿದ್ದು ಕಾಶ್ಮೀರದಲ್ಲಿ ತೀವ್ರಗೊಳ್ಳಬೇಕಿರುವ ತೀವ್ರಗಾಮಿ ಚಟುವಟಿಕೆ ಮತ್ತು ಭಾರತದ ಗಮನವನ್ನು ಮತ್ತೊಂದೆಡೆ ಸೆಳೆಯಬಲ್ಲ ಯಾವುದಾದರೂ ಯೋಜನೆ. ಪಾಕ್ನ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಬೇಕು ಅಷ್ಟೇ! ಈಗ ಆಯ್ಕೆಯಾಗಿದ್ದು ಕುಲಭೂಷಣ್ ಜಾಧವ್.

ಭಾರತದ ನೌಕಾ ಸೇನೆಯಲ್ಲಿ ಉದ್ಯೋಗಿಯಾಗಿದ್ದ ಕುಲಭೂಷಣ್ ಜಾಧವ್ ಅವಧಿಗೆ ಮುಂಚೆ ನಿವೃತ್ತರಾಗಿ 2000 ನೇ ಇಸವಿಯಲ್ಲಿ ಸ್ವಂತ ಉದ್ಯೋಗ ಮಾಡುವ ಇಚ್ಛೆಯಿಂದ ಇರಾನಿಗೆ ಹೋದರು. ಛಾಬಹಾರ್ ಬಂದರಿನಲ್ಲಿ ಸಣ್ಣದೊಂದು ಉದ್ದಿಮೆ ತೆರೆದು ಶ್ರದ್ಧೆಯಿಂದಲೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಕರಾಚಿ, ಲಾಹೋರ್ಗಳೊಂದಿಗೂ ಅವರ ಸಂಪರ್ಕ ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ 2015ರಲ್ಲಿ ತಾಲೀಬಾನು ಇವರನ್ನು ಅಪಹರಿಸಿತು. ಭಾರತದ ನೌಕಾಸೇನೆಯಿಂದ ನಿವೃತ್ತನೆಂದು ಗೊತ್ತಾದೊಡನೆ ಆತನನ್ನು ಪಾಕೀಸ್ತಾನಕ್ಕೆ ಮಾರಿಬಿಟ್ಟಿತು! ಭಾರತ-ಪಾಕೀಸ್ತಾನಗಳ ಶಾಂತಿ ಮಾತುಕತೆಯನ್ನು ಹಾಳುಗೆಡವಲು ಈತನನ್ನು ಬಳಸಿಕೊಳ್ಳುವ ನಿರ್ಧಾರ ಐಎಸ್ಐನದ್ದು. ಮೋದಿ ಪಾಕ್ ಭೇಟಿಯ ನಂತರವಂತೂ ಐಎಸ್ಐ ಚುರುಕಾಯ್ತು. ಸರಿಸುಮಾರು ಇದೇ ವೇಳೆಗೆ ಪಟಾನ್ಕೋಟ್ನಲ್ಲಿ ವಾಯು ದಾಳಿಯಾಯ್ತು. ಪಾಕೀಸ್ತಾನೀ ಸೇನೆ ಭಾರತ ಅತೀ ದೊಡ್ಡ ಮರುದಾಳಿ ಸಂಘಟಿಸುವುದೆಂದು ಕಾಯುತ್ತಲೇ ಕುಳಿತಿತ್ತು. ಹಾಗಾಗಲಿಲ್ಲ. ಪಾಕೀಸ್ತಾನದ ತಂಡಕ್ಕೆ ಪಟಾನ್ಕೋಟ್ಗೆ ಬಂದು ಅಧ್ಯಯನ ಮಾಡಿ ಹೋಗಲು ಅನುಮತಿ ಕೊಟ್ಟು ಇದರಲ್ಲಿ ಅವರದ್ದೇ ಕೈವಾಡ ಇರುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಕೈಗಿತ್ತಿತು. ಪಾಕೀಸ್ತಾನೀ ಪ್ರೇರಿತ ಜೈಶ್-ಎ-ಮೊಹಮ್ಮದ್ ಈ ದಾಳಿಯ ಹಿಂದಿರುವ ಸಂಘಟನೆ ಎಂಬುದು ಮನವರಿಕೆಯಾಗುತ್ತಿದ್ದಂತೆ ಜಗತ್ತಿನ ರಾಷ್ಟ್ರಗಳು ಪಾಕೀಸ್ತಾನವನ್ನು ಕೆಕ್ಕರಿಸಿಕೊಂಡು ನೋಡಿದವು. ಇದರಿಂದ ಬಚಾವಾಗಲು ಅವರಿಗೆ ಬೇರೆ ಮಾರ್ಗವಿರಲಿಲ್ಲ.

ಕುಲಭೂಷಣ್ರನ್ನು ನಿರಂತರ ಹಿಂಸೆಗೆ ಒಳಪಡಿಸುತ್ತಾ ತಾನು ಭಾರತದ ಪರವಾಗಿ ಕೆಲಸ ಮಾಡುತ್ತಿದ್ದ ಗೂಢಚಾರ ಎಂದು ಒಪ್ಪುವಂತೆ ಮಾಡಲಾಯ್ತು. ಅದರಲ್ಲೂ ಚಾಬಹಾರ್ನಿಂದ ಬಲೂಚಿಗಳೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಪ್ರತ್ಯೇಕ ಬಲೂಚಿಸ್ತಾನಕ್ಕೆ ಭಾರತದ ಪರವಾಗಿ ಕುಮ್ಮಕ್ಕು ಕೊಡಲು ಬಂದವನೆಂದು ಆತನ ಬಾಯಲ್ಲಿಯೇ ಹೇಳಿಸಲಾಯ್ತು. ಈ ಹೊತ್ತಲ್ಲಿಯೇ ಭಾರತ ಸರ್ಕಾರ 13 ಬಾರಿ ಆತನ ಭೇಟಿಗೆ ಅನುಮತಿ ಕೇಳಿ ಪಾಕೀಸ್ತಾನ ಸರ್ಕಾರಕ್ಕೆ ಪತ್ರ ಬರೆಯಿತು. ಲಾಭವಾಗಲಿಲ್ಲ.

 

ಚೀನಾ ತುದಿಗಾಲಲ್ಲಿ ನಿಂತಿತ್ತು. ಅದಕ್ಕೆ ತುರ್ತಾಗಿ ಭಾರತವನ್ನು ಬೇರೊಂದು ವಿಚಾರದಲ್ಲಿ ಸಿಲುಕಿಸುವ ಜರೂರತ್ತಿತ್ತು. ಅದಕ್ಕೇ ಕುಲಭೂಷಣ್ರ ಮೇಲೆ ತೂಗು ಕತ್ತಿಯಾಗಿರಬಹುದು ಎನ್ನುತ್ತಾರೆ ರಕ್ಷಣಾ ಚಿಂತಕ ರಾಜೀವ್ ಶರ್ಮಾ. ಭಾರತವೇನೂ ಸುಮ್ಮನಿರಲಿಲ್ಲ. ಇದನ್ನು ಅಂದಾಜು ಮಾಡಿಯೇ ಒಂದಷ್ಟು ಗುಪ್ತ ಚಟುವಟಿಕೆ ಮಾಡಿತು. ಪಾಕೀಸ್ತಾನೀ ಮಾಧ್ಯಮಗಳನ್ನು ನಂಬುವುದಾದರೆ ಪಾಕೀಸ್ತಾನದ ಲೆಫ್ಟಿನೆಂಟ್ ಕರ್ನಲ್ ಮೊಹಮ್ಮದ್ ಹಬೀಬ್ ಜಾಹೀರ್ನನ್ನು ಭಾರತ ನೇಪಾಳದಿಂದ ಅಪಹರಿಸಿತು. ಅವರಿಗೆ ಇಂಗ್ಲೆಂಡಿನಿಂದ ಕರೆ ಬಂತು. ವಿಶೇಷ ಮಾಹಿತಿ ಕೊಡುವ ದೃಷ್ಟಿಯಿಂದ ಕಟ್ಮಂಡುವಿಗೆ ಕರೆಯಲಾಯ್ತು. ಅಲ್ಲಿಂದ ಲುಂಬಿಣಿಗೊಯ್ದು ಅರಿವೇ ಆಗದಂತೆ ಭಾರತಕ್ಕೆ ಕರೆದುಕೊಂಡು ಬರಲಾಯ್ತು. ಹಾಗಂತ ಪಾಕೀಸ್ತಾನದ ಆಕ್ಷೇಪ. ತಾಲೀಬಾನಿನೊಂದಿಗೆ ಒಪ್ಪಂದ ಮಾಡಿಕೊಂಡು ಕುಲಭೂಷಣ್ರನ್ನು ಹಿಡಿದು ತರುವಲ್ಲಿ ಹಬೀಬ್ರ ಪಾತ್ರವಿತ್ತು ಅಂತ ಅಲ್ಲಿನ ಪತ್ರಿಕೆಗಳು ವರದಿ ಮಾಡಿವೆ. ಐಎಸ್ಐನ ಮಹತ್ವದ ಸುಳಿಗಳನ್ನು ಹೊಂದಿರುವ ಈತನ ಅಪಹರಣದ ಸುದ್ದಿ ಜಗತ್ತಿಗೆ ಮೊದಲು ಹರಡಿದ್ದರೆ ಪಾಕೀಸ್ತಾನದ ಮಾನ ಮೂರ್ಕಾಸಿಗೆ ಹರಾಜಾಗಿರುತ್ತಿತ್ತು. ಹೀಗಾಗಿ ತರಾತುರಿಯಲ್ಲಿ ಕುಲಭೂಷಣ್ರನ್ನು ಮಿಲಿಟರಿ ನ್ಯಾಯಾಲಯದಲ್ಲಿ ಮರಣ ದಂಡನೆಯ ಶಿಕ್ಷೆ ನೀಡುವ ಘೋಷಣೆ ಮಾಡಲಾಯ್ತು. ಒಂದಂತೂ ನೆನಪಿಟ್ಟುಕೊಳ್ಳಿ. ಮರಣ ದಂಡನೆಗೆ ತೋರಿರುವ ಆತುರ, ಜಿನೇವಾ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಕೊಟ್ಟಿರುವ ಶಿಕ್ಷೆ ನೋಡಿದರೆ ಕುಲಭೂಷಣ್ ಜಾಧವ್ ಬದುಕಿರುವ ಬಗ್ಗೆಯೂ ಅನುಮಾನವಿದೆ. ಹೀಗಾಗಿಯೇ ಭಾರತದ ಅಧಿಕಾರಿಗಳು ಮೊದಲ ದಿನವೇ ಇದನ್ನು ಅಕ್ಷಮ್ಯ ಕೊಲೆ ಎಂದು ಜರೆದಿರುವುದು.

hqdefault

ಭಾರತ ಸುಮ್ಮನೆ ಕೂಡಲಿಲ್ಲ. ದೇಶದಲ್ಲಿ ಒಕ್ಕೊರಲ ಅಭಿಪ್ರಾಯ ಮೂಡುವಂತೆ ಮಾಡಿತು. ಜಗತ್ತಿನಲ್ಲಿ ತನ್ನ ಪ್ರಭಾವ ಬಳಸಿತು. ಆಮ್ನೆಸ್ಟಿ ಇಂಟರ್ನ್ಯಾಷನಲ್ ಅನಿವಾರ್ಯವಾಗಿ ದನಿಯೆತ್ತಬೇಕಾಯ್ತು. ಅಮೇರಿಕಾ-ಯೂರೋಪುಗಳು ಪಾಕೀಸ್ತಾನದ ಕ್ರಮವನ್ನು ಜರಿದವು. ಕೊನೆಗೆ ಪಾಕೀಸ್ತಾನದ ಮಾನವ ಹಕ್ಕು ಸಂಘಟನೆಗಳೂ ಈ ನಿರ್ಧಾರವನ್ನು ವಿರೋಧಿಸಿದವು. ಅಲ್ಲಿನ ಪತ್ರಿಕೆಗಳು ಸರ್ಕಾರದ ವಿರುದ್ಧ, ಸೈನ್ಯದ ನ್ಯಾಯಾಲಯದ ವಿರುದ್ಧ ಬರೆದವು. ಇವೆಲ್ಲವೂ ರಾಜತಾಂತ್ರಿಕ ಗೆಲುವೇ. ಪಾಕೀಸ್ತಾನ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೋ ಮರಣ ದಂಡನೆಯನ್ನು ವಿರೋಧಿಸುತ್ತೇನೆ ಎಂದ. ಇಮ್ರಾನ್ ಖಾನ್ ಸರ್ಕಾರಕ್ಕೆ ಬುದ್ಧಿಮಾತು ಹೇಳಿ ಒಂದು ತಪ್ಪು ಹೆಜ್ಜೆ ಇಟ್ಟರೆ ಮೋದಿ ಪಾಕೀಸ್ತಾನವನ್ನು ಚೂರು-ಚೂರು ಮಾಡಿ ಬಿಡುತ್ತಾರೆ ಎಂದ. ನ್ಯಾಯಾಲಯವೂ ತರಾತುರಿಯಲ್ಲಿ ಕುಲಭೂಷಣ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದಿತು. ಅತ್ತ ನ್ಯಾಯವಾದಿಗಳು ಅವನ ಪರವಾಗಿ ಯಾರೂ ನಿಲ್ಲುವಂತಿಲ್ಲವೆಂದು ಎಚ್ಚರಿಕೆ ಕೊಟ್ಟರು. ಭಾರತವನ್ನು ತೊಂದರೆಗೆ ಸಿಲುಕಿಸ ಹೋಗಿ ಪಾಕೀಸ್ತಾನ ಸಮಸ್ಯೆಗಳ ಸುಳಿಗೆ ಸಿಲುಕಿಕೊಂಡಿತು.

ಇತ್ತ ನರೇಂದ್ರ ಮೋದಿ ರಷ್ಯಾ, ಇಸ್ರೇಲು, ಆಸ್ಟ್ರೇಲಿಯಾಗಳೊಂದಿಗೆ ಅನೇಕ ರಕ್ಷಣಾ ಒಪ್ಪಂದಗಳಿಗೆ ತಯಾರಿ ಮಾಡಿಕೊಳ್ಳುತ್ತಾ ಚೀನಾದ ಮೇಲಿದ್ದ ತಮ್ಮ ಕಣ್ಣು ಒಂದಿಂಚೂ ಪಕ್ಕಕ್ಕೆ ಸರಿದಿಲ್ಲವೆಂದು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ರಾಜತಾಂತ್ರಿಕ ನಡೆ ಅಂದರೆ ಹಾಗೆಯೇ. ನಮ್ಮನ್ನು ಎತ್ತೆತ್ತಲೋ ಸುಳಿಯಲು ಚೀನಾ ಪ್ರಯತ್ನಿಸುತ್ತಲೇ ಇದೆ. ಅದರ ಕಣ್ಣೊಳಗೆ ಕೈಯ್ಯಿಡಲು ನಾವು ಸಿದ್ಧರಿದ್ದೇವೆ ಎಂಬ ನಮ್ಮ ಧಾಡಶಿ ತನವೇ ಜಗತ್ತಿಗೆ ಇಷ್ಟವಾಗೋದು. ಅದಾಗಲೇ ಬಾಂಗ್ಲಾ, ಮಯನ್ಮಾರ್, ಶ್ರೀಲಂಕಾಗಳು ನಮ್ಮ ತೆಕ್ಕೆಗೆ ಬಂದಾಗಿವೆ. ಹೀಗಾಗಿ ನಮಗೆ ಉರುಳು ಹಾಕುವ ಚೀನಾದ ಎಲ್ಲಾ ಪ್ರಯತ್ನಗಳು ಸೋಲು ಕಂಡಿವೆ. ಕುಲಭೂಷಣನ ಸಮಸ್ಯೆಯೊಂದು ಹೀಗೆಯೇ ಪರಿಹಾರವಾದರೆ ಚೀನಾಕ್ಕೆ ಬಲವಾದ ಕಪಾಳಮೋಕ್ಷವಷ್ಟೇ!

ಮೋದಿ ಮತ್ತು ಯೋಗಿ ಏಕೆ ಹೀಗೆ?

ಮೋದಿ ಮತ್ತು ಯೋಗಿ ಏಕೆ ಹೀಗೆ?

ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೂ ಪಶ್ಚಿಮವನ್ನೇ ನೋಡುತ್ತ ಸ್ವಂತ ಶಕ್ತಿಯನ್ನು ಮರೆತು ಕುಳಿತಿದ್ದೇವೆ. ನಮ್ಮೆಲ್ಲರನ್ನೂ ಬೆಸೆಯಬಲ್ಲ ಪರಿಹಾರ ಸೂತ್ರವನ್ನು ಪ್ರಾಚೀನ ಭಾರತದ ಪರಂಪರೆಯಲ್ಲಿ ಹುಡುಕದೇ ಹೊಸದನ್ನೇನೋ ಸೃಷ್ಟಿಸಿಬಿಡುವ ತವಕದಲ್ಲಿದ್ದೇವೆ. ನೆನಪಿರಲಿ. ಹೊಸದರ ಸೃಷ್ಟಿಯೂ ಹಳೆಯ ಅನುಭವದ ಆಧಾರದ ಮೇಲೆಯೇ ಆಗಿರಬೇಕೇ ಹೊರತು ಸೂತ್ರವಿಲ್ಲದ ಗಾಳಿಪಟವಾದರೆ ಅದರ ಒಡೆತನ ಯಾರಿಗೂ ಇಲ್ಲ. ನರೇಂದ್ರ ಮೋದಿಯಾಗಲಿ, ಯೋಗಿ ಆದಿತ್ಯನಾಥರಾಗಲೀ ಇದ್ದಕ್ಕಿದ್ದಂತೆ ಕೋಟ್ಯಂತರ ಜನರ ಹೃದಯ ತಟ್ಟಿದ್ದು ಏಕೆಂದು ಈಗ ಅರ್ಥವಾಗಿರಬೇಕಲ್ಲ. ಅವರು ರಾಮಮಂದಿರದ ಮಾತನಾಡಿದಾಗ, ಗೋಪ್ರೇಮದ ಚಿಂತನೆ ಮುಂದಿಟ್ಟಾಗ ಸುಪ್ತವಾಗಿದ್ದ ಭಾರತೀಯರ ಭಾವನೆಗಳನ್ನು ಒಮ್ಮೆ ಮೀಟಿದಂತಾಗಿದ್ದು ಏಕೆ ಗೊತ್ತೇ? ಸಮಸ್ಯೆಗೆ ಪರಿಹಾರವನ್ನು ಅವರು ಅರಸಿದ್ದು ಭಾರತದ ಪರಂಪರೆಯಲ್ಲಿಯೇ.

‘ಭಾರತಕ್ಕೊಂದು ಮರುಹುಟ್ಟು ಅಗತ್ಯವಿದೆಯೇ? ಹಾಗಿದ್ದರೆ ಅದು ನಮಗೆ ಮಾತ್ರವೋ ಅಥವಾ ಅಮೇರಿಕಾ, ಜರ್ಮನಿ, ಫ್ರಾನ್ಸ್ಗಳಿಗೂ ಮರುಹುಟ್ಟು ಬೇಕಾಗಿದೆಯೋ? ಭಾರತ ತನ್ನ ತಾನು ಶುದ್ಧಿಗೊಳಿಸಿಕೊಂಡು, ದೋಷವಿಲ್ಲದ ಪುನರ್ಜನ್ಮವೊಂದನ್ನು ಪಡೆಯಬೇಕೆಂದು ನಾವು ಕಲ್ಪಿಸುವ ರೀತಿಯನ್ನು ಇಂಗ್ಲೆಂಡು ತನಗೆ ತಾನು ಎಂದೂ ಆಶಿಸಲಾರದು. ಹಾಗಿದ್ದ ಮೇಲೆ ನಾವು ಇಂಗ್ಲೆಂಡಿಗಿಂತ ಕೀಳಾದವರೆಂದು ಭಾವಿಸುತ್ತೀರೇನು?’ ನಿವೇದಿತಾ 1910 ರಲ್ಲಿ ಕರ್ಮಯೋಗಿನ್ ಪತ್ರಿಕೆಗೆ ಬರೆದ ಲೇಖನದಲ್ಲಿ ಕೇಳಿದ ಪ್ರಶ್ನೆಯಿದು.
‘ಒಂದು ಕಾಲದಲ್ಲಿ ಇಂಗ್ಲೇಂಡಿನಲ್ಲಿ ವ್ಯಾಪಕವಾಗಿದ್ದ ರಾಜಕೀಯ ವ್ಯವಸ್ಥೆ, ಶ್ರಮಿಕ ವರ್ಗದ ಸಮಸ್ಯೆ, ಯುದ್ಧದ ಮೇಲೆ ಯುದ್ಧಗಳು ಇವೆಲ್ಲವನ್ನೂ ಕಂಡಾಗ ಆ ರಾಷ್ಟ್ರಕ್ಕೂ ಮರುಹುಟ್ಟು ಬೇಕೆಂದು ಜನ ಭಾವಿಸಿದ್ದರಲ್ಲಿ ಅಚ್ಚರಿಯಿಲ್ಲ. ಆದರೆ ಅವರ ದೃಷ್ಟಿಯಲ್ಲಿ ಆ ಪದದ ಅರ್ಥ ಇಂಗ್ಲೆಂಡಿನ ನೈಜ ಶಕ್ತಿ ಜಾಗೃತವಾಗುವುದು ಎಂದೇ ಆಗಿತ್ತು. ಹೀಗಾಗಿ ಇಂಗ್ಲೆಂಡು ಮತ್ತೆ ಆಳುವ ರಾಷ್ಟ್ರವಾಗಿ ಬಲಾಢ್ಯವಾಗಿ ನಿಂತಾಗ ಭಾರತದ ಬುದ್ಧಿಜೀವಿಗಳು ಆಶ್ಚರ್ಯದಿಂದ ‘ಹಳೆಯ ಇಂಗ್ಲೆಂಡು ಮರುಕಳಿಸಿದೆ’ ಎಂದು ಚೀರಿದ್ದರು. ಅಂದರೆ ಭಾರತಕ್ಕಾದರೆ ಹಳೆಯದ್ದನ್ನೆಲ್ಲ ಕಡಿದುಕೊಂಡು ಅದರ ಸೋಂಕೂ ಇಲ್ಲದ ಮರುಹುಟ್ಟು ಬೇಕು, ಇಂಗ್ಲೆಂಡಿಗೆ ಮಾತ್ರ ಪ್ರಾಚೀನವಾದುದು ಮತ್ತೆ ಮೈದೋರಬೇಕು!’ ಇದು ನ್ಯಾಯವೇ? ನಿವೇದಿತಾ ಚರ್ಚಿಸುವ ಈ ಸಂಗತಿಗಳು ಭಾರತದ ಬುದ್ಧಿಜೀವಿಗಳ ಬಂಡವಾಳವನ್ನು ಬಯಲಿಗೆಳೆಯುವಂಥದ್ದು. ಅಲುಗಾಡಿಸಿಬಿಡುವಂಥದ್ದು.
ಭಾರತೀಯರ ದೊಡ್ಡ ಸಮಸ್ಯೆಯೇ ಕೀಳರಿಮೆಯದ್ದು. ವಿವೇಕಾನಂದರು ಹೇಳುವ ಮಾತು ನೂರಕ್ಕೆ ನೂರು ಸತ್ಯ. ‘ಅಮೇರಿಕದವನೊಬ್ಬ ಎದೆ ತಟ್ಟಿ ಹೇಳುತ್ತಾನೆ, ನಾನು ಅಮೇರಿಕನ್ ಹೀಗಾಗಿ ಏನು ಬೇಕಾದರೂ ಸಾಧಿಸಬಲ್ಲೆ’ ಇದೇ ಮಾತನ್ನು ನಮ್ಮಲ್ಲಿ ಯಾರಿಗಾದರೂ ಕೇಳಿದರೆ ‘ನಾನು ಭಾರತೀಯನಾದುದರಿಂದಲೇ ನನ್ನಿಂದ ಯಾವ ಸಾಧನೆಯೂ ಆಗಲಾರದು’ ಎಂದು ನೊಂದುಕೊಳ್ಳುತ್ತೇವೆ. ಈ ದೇಶದಲ್ಲಿ ಸೂಕ್ತ ಶಿಕ್ಷಣ ಪದ್ಧತಿಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಸಂಶೋಧನೆಗೆ ಬೇಕಾದ ಪೂರಕ ವ್ಯವಸ್ಥೆಗಳಿಲ್ಲ, ಇದರೊಟ್ಟಿಗೆ ಕೊಳೆತು ಹೋದ ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಪದ್ಧತಿ. ಅಬ್ಬಬ್ಬ ನನ್ನ ಬೆಳವಣಿಗೆಗೆ ಅಡ್ಡಗಾಲಿಡಲು ಎಷ್ಟೊಂದು ವಿಕಟ ಪರಿಸ್ಥಿತಿಗಳು ಅಂತಲೇ ಪ್ರತಿಯೊಬ್ಬರೂ ಹಲುಬುತ್ತಲೇ ಇರುತ್ತೇವೆ. ಇದು ಇಂದಿನ ದಿನ ಹೆಗಲೇರಿದ ರೋಗವಲ್ಲ. ಬ್ರಿಟೀಷರ ಆಳ್ವಿಕೆಯ ಕಾಲಕ್ಕೇ ನಮ್ಮನ್ನು ಆವರಿಸಿಕೊಂಡಿದ್ದ ಸಮಸ್ಯೆ. ನಾವು ಈ ಸಮಸ್ಯೆಯನ್ನು ಕೊಡವಿಕೊಂಡೇಳುವ ಪ್ರಯತ್ನ ಯಾವಾಗಲೂ ಮಾಡಲೇ ಇಲ್ಲ. ಆಳುವವರು ತುಳಿದಿಟ್ಟುಕೊಂಡಿದ್ದ ಜಾಗದಲ್ಲಿಯೇ ಆನಂದವನ್ನು ಅರಸಿ ನೆಮ್ಮದಿಯಿಂದ ಬದುಕಿ ಬಿಟ್ಟೆವು. ಈ ನೆಮ್ಮದಿಯನ್ನು ಕಲಕುವ ವಾತಾವರಣವನ್ನು ನಿಮರ್ಿಸುವ ಪ್ರಯತ್ನವೇ ಕ್ರಾಂತಿಯೆನಿಸಿಕೊಂಡಿತು. ತಿಲಕರು, ಗಾಂಧೀಜಿ, ಭಗತ್, ಸುಭಾಷ್ರೆಲ್ಲ ಮಾಡಿದ್ದು ಇದನ್ನೇ ಅಲ್ಲವೇನು? ಸ್ವಾತಂತ್ರ್ಯಾನಂತರ ಇಂತಹ ಒಂದು ಕಲ್ಪಿತ ನೆಮ್ಮದಿ ಕೇಂದ್ರದಿಂದ ನಮ್ಮನ್ನು ಹೊರತರುವ ಪ್ರಯತ್ನಕ್ಕೆ 70 ದೀರ್ಘ ವರ್ಷಗಳು ತಾಕಿದವೆಂಬುದೇ ದುರಂತ.
ಬಿಡಿ. ಬ್ರಿಟೀಷರು ಒಂದು ರಾಷ್ಟ್ರವಾಗಿ ನಿರ್ಮಿತಗೊಂಡಿದ್ದರ ಹಿಂದೆಯೂ ಒಂದು ಸೂತ್ರವಿದೆ. ಅದನ್ನು ನಿವೇದಿತಾ ಅರ್ಥವತ್ತಾಗಿ ವಿವರಿಸುತ್ತಾಳೆ. ಯಂತ್ರಗಳ ಆವಿಷ್ಕಾರದ ನಂತರ ವೈಯಕ್ತಿಕ ಕೌಶಲಗಳನ್ನೆಲ್ಲ ಬದಿಗಿಟ್ಟು ಪ್ರತಿಯೊಬ್ಬ ವ್ಯಕ್ತಿ ಗುಂಪಾಗಿ ಬದುಕಲೇಬೇಕಾಯ್ತು. ಆಗ ಅವನಿಗೆ ಒಗ್ಗಟ್ಟಿನ ಸೌಂದರ್ಯ ಗೋಚರಿಸಿ ಶೋಷಕರನ್ನು ಎದುರಿಸಿ ನಿಂತ. ಜಮೀನ್ದಾರರು, ಅಧಿಕಾರಿಗಳು, ಸೇನಾಪತಿಗಳು, ಪಾದ್ರಿಗಳನ್ನು ಪ್ರಶ್ನಿಸಲಾರಂಭಿಸಿದ. ವೈಯಕ್ತಿಕ ನೆಲೆಕಟ್ಟಿನಲ್ಲಿ ಸಮರ್ಥನೆನಿಸಿದ್ದ ಇಂಗ್ಲೆಂಡಿಗ ಈಗ ರಾಷ್ಟ್ರವಾದ. ಮಾನವನನ್ನು ಅರ್ಥೈಸಿಕೊಳ್ಳುವ ಅಪರೂಪದ ಗುಣ ಅವನಿಗೀಗ ಸಿದ್ಧಿಸಿತು. ಆಲೋಚನೆ, ಭಾವನೆ, ಕೃತಿ ಇವುಗಳಲ್ಲೆಲ್ಲಾ ಒಬ್ಬ ಆಂಗ್ಲೇಯ ಥೇಟು ಮತ್ತೊಬ್ಬನಂತೆಯೇ ವ್ಯವಹರಿಸೋದು ಈ ಕಾರಣದಿಂದಾಗಿಯೇ. ಅಚ್ಚರಿಯೆಂದರೆ ಒಬ್ಬನಿಗೆ ಏನಾದರೂ ಬೇಕೆನಿಸಿದರೆ ಮತ್ತೊಬ್ಬನಿಗೂ ಅದು ಬೇಕೆನಿಸುತ್ತದೆ. ಒಳ್ಳೆಯದಕ್ಕಾಗಲಿ, ಕೆಡುಕಿಗೇ ಆಗಲಿ ಅವರು ಜೊತೆಗೇ ಸಾಗುತ್ತಾರೆ. ಹೀಗಾಗಿಯೇ ದಕ್ಷಿಣ ಆಫ್ರಿಕಾದೊಂದಿಗೆ ಸೋಲುಗಳ ಮೇಲೆ ಸೋಲನ್ನೇ ಅನುಭವಿಸಿದಾಗಲೂ ಅವರು ಕದನ ನಿಲ್ಲಿಸಲಿಲ್ಲ. ಹಲ್ಲು ಕಚ್ಚಿ ಗರ್ಜಿಸುತ್ತ ಮುನ್ನಡೆದರು. ಹಾಗಂತ ಭಾರತಕ್ಕೂ ಇಂಗ್ಲೆಂಡಿಗೂ ಹೋಲಿಕೆಯಿದೆಯಾ? ಖಂಡಿತ ಇಲ್ಲ. ಇಂಗ್ಲೆಂಡು ಜಪಾನಿಗಿಂತ ಸರಳವಾದುದು. ಅಲ್ಲಿ ಜನರನ್ನು ಒಡೆಯಬಲ್ಲ ಸಂಗತಿಗಳಾದ ಭಾಷೆ, ಜನಾಂಗ, ಬುಡಕಟ್ಟು, ಸಂಪ್ರದಾಯ ಯಾವುದೂ ಬೇರೆ ಬೇರೆಯಾಗಿಲ್ಲ. ಸ್ವಲ್ಪ ಭಿನ್ನವೆನಿಸಿದ ಐರಿಷ್ ಜನಾಂಗವನ್ನು ಸಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಭಾರತವಾದರೋ ವಿಸ್ತಾರವಾಗಿದೆ. ಅನೇಕ ಭಾಷೆಗಳನ್ನು, ಸಂಪ್ರದಾಯಗಳನ್ನು, ಜಾತಿಗಳನ್ನು ಅಡಗಿಸಿಕೊಂಡಿದೆ. ಇವುಗಳ ನಡುವೆ ಸೂತ್ರವಾಗಿದ್ದ ಏಕತೆಯ ಆದರ್ಶಗಳನ್ನು ಮಾತ್ರ ಮರೆತು ಕುಂತಿದೆ. ಹೀಗಾಗಿ ಭಾರತ ಮರುಹುಟ್ಟು ಪಡೆಯಬೇಕಿಲ್ಲ, ಬದಲಿಗೆ ಹಳೆಯದನ್ನು ನೆನಪಿಸಿಕೊಂಡು ತನ್ನ ತಾನು ಮತ್ತೆ ಸಂಘಟಿಸಿಕೊಳ್ಳಬೇಕಿದೆ ಎನ್ನುತ್ತಾಳೆ ನಿವೇದಿತಾ.

roots
ಹೌದಲ್ಲವೇ? ಕಳೆದುಕೊಂಡಿರುವ ಏಕತೆಯ ಸೂತ್ರವನ್ನು ಮತ್ತೆ ಹುಡುಕಿಕೊಂಡರೆ ಸಾಕು. ಯಾವುದು ನಮ್ಮನ್ನು ಚೂರು ಚೂರಾಗಿ ಒಡೆಯಲು ಮುಖ್ಯ ಕಾರಣವೋ ಅದೇ ನಮ್ಮನ್ನು ಮತ್ತೆ ಒಗ್ಗೂಡಿಸಲು ಸಾಕಾದೀತು. ಹಾಗಂತ ಈ ಸೂತ್ರಕ್ಕಾಗಿ ವಿದೇಶದಲ್ಲೆಲ್ಲೋ ಹುಡುಕಾಡಿದರೆ ಉಪಯೋಗವಿಲ್ಲ. ಅದಕ್ಕೆ ಭಾರತವನ್ನೇ ಸೂಕ್ಷ್ಮವಾಗಿ ಅರಸಬೇಕು. ‘ವಿದೇಶದಿಂದ ಬಂದ ಚಿಂತನೆಗಳು ನಮ್ಮಲ್ಲಿ ವೈಚಾರಿಕ ಅಜೀರ್ಣವನ್ನುಂಟುಮಾಡುತ್ತದೆ. ನಾವು ನಮ್ಮ ಚಿಂತನೆಗಳ ಕಂತೆಗಳೊಳಗಿಂದಲೇ ನಮ್ಮ ಸಮಸ್ಯೆಗೆ ಪರಿಹಾರ ಹುಡುಕಿ ಇತರ ರಾಷ್ಟ್ರಗಳ ಸಮ ಸಮಕ್ಕೆ ನಿಲ್ಲುವಂತಾಗಬೇಕು. ಆಂಗ್ಲೇಯನೊಬ್ಬ ತನ್ನ ರಾಷ್ಟ್ರವನ್ನು ಅಖಂಡವಾಗಿ ಪ್ರೀತಿಸುತ್ತಾನೆ. ಅದರಿಂದ ನಾವು ಕಲಿಯಬೇಕಾದ್ದೇನು? ಅವನಷ್ಟೇ ಇಂಗ್ಲೇಂಡನ್ನು ನಾವೂ ಪ್ರೀತಿಸಿಬಿಡುವುದೇನು? ಅದು ಮಂಗನಂತೆ ಮಾಡುವ ಅನುಸರಣೆಯಾದೀತು. ನಾವು ಅವನ ಇಂಗ್ಲೆಂಡಿನ ಪ್ರೇಮಕ್ಕೆ ಸರಿಸಮವಾದ, ಅಖಂಡ, ಪವಿತ್ರ ಮತ್ತು ಜ್ಞಾನಯುಕ್ತವಾದ ಪ್ರೀತಿಯನ್ನು ಭಾರತಕ್ಕೆ ತೋರಬೇಕು. ಅವನು ತನ್ನ ರಾಷ್ಟ್ರ ಮತ್ತು ರಾಷ್ಟ್ರವಾಸಿಗಳನ್ನು ಪ್ರತಿಯೊಂದು ಚಟುವಟಿಕೆಯ ಕೇಂದ್ರವಾಗುವಂತೆ ಮಾಡುತ್ತಾನಲ್ಲ ಹಾಗೆಯೇ ನಾವು ನಮ್ಮೆಲ್ಲ ಆಸೆ-ಆಕಾಂಕ್ಷೆಗಳು, ಗೌರವ-ಘನತೆಗಳ ಕೇಂದ್ರವಾಗಿ ಭಾರತವನ್ನೂ, ಭಾರತೀಯರನ್ನೂ ನಿಲ್ಲಿಸುವಂತಾಗಬೇಕು. ನಮ್ಮ ರಾಷ್ಟ್ರೀಯ ಉದ್ದೇಶವನ್ನು ನಾವು ಅರ್ಥೈಸಿಕೊಂಡು ಅದನ್ನೇ ಎಲ್ಲರೂ ಆಲೋಚಿಸುವಂತೆ ಮಾಡಬೇಕು’ ಎಂಬುದು ನಿವೇದಿತಾ ಹೇಳುವ ಪರಿಹಾರ.
ಆಕೆ ಯೂರೋಪನ್ನು ವಿಶೇಷವಾಗಿ ಇಂಗ್ಲೆಂಡನ್ನು ಗಮನದಲ್ಲಿರಿಸಿಕೊಂಡು ಹೇಳಿದ ಮಾತು ಇದಾದರೂ ಇಂದಿಗೂ ನಮಗೆ ಸೂಕ್ತವಾಗಿ ಹೋಲುತ್ತದೆ. ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೂ ಪಶ್ಚಿಮವನ್ನೇ ನೋಡುತ್ತ ಸ್ವಂತ ಶಕ್ತಿಯನ್ನು ಮರೆತು ಕುಳಿತಿದ್ದೇವೆ. ನಮ್ಮೆಲ್ಲರನ್ನೂ ಬೆಸೆಯಬಲ್ಲ ಪರಿಹಾರ ಸೂತ್ರವನ್ನು ಪ್ರಾಚೀನ ಭಾರತದ ಪರಂಪರೆಯಲ್ಲಿ ಹುಡುಕದೇ ಹೊಸದನ್ನೇನೋ ಸೃಷ್ಟಿಸಿಬಿಡುವ ತವಕದಲ್ಲಿದ್ದೇವೆ. ನೆನಪಿರಲಿ. ಹೊಸದರ ಸೃಷ್ಟಿಯೂ ಹಳೆಯ ಅನುಭವದ ಆಧಾರದ ಮೇಲೆಯೇ ಆಗಿರಬೇಕೇ ಹೊರತು ಸೂತ್ರವಿಲ್ಲದ ಗಾಳಿಪಟವಾದರೆ ಅದರ ಒಡೆತನ ಯಾರಿಗೂ ಇಲ್ಲ. ನರೇಂದ್ರ ಮೋದಿಯಾಗಲಿ, ಯೋಗಿ ಆದಿತ್ಯನಾಥರಾಗಲೀ ಇದ್ದಕ್ಕಿದ್ದಂತೆ ಕೋಟ್ಯಂತರ ಜನರ ಹೃದಯ ತಟ್ಟಿದ್ದು ಏಕೆಂದು ಈಗ ಅರ್ಥವಾಗಿರಬೇಕಲ್ಲ. ಅವರು ರಾಮಮಂದಿರದ ಮಾತನಾಡಿದಾಗ, ಗೋಪ್ರೇಮದ ಚಿಂತನೆ ಮುಂದಿಟ್ಟಾಗ ಸುಪ್ತವಾಗಿದ್ದ ಭಾರತೀಯರ ಭಾವನೆಗಳನ್ನು ಒಮ್ಮೆ ಮೀಟಿದಂತಾಗಿದ್ದು ಏಕೆ ಗೊತ್ತೇ? ಸಮಸ್ಯೆಗೆ ಪರಿಹಾರವನ್ನು ಅವರು ಅರಸಿದ್ದು ಭಾರತದ ಪರಂಪರೆಯಲ್ಲಿಯೇ. ರಾಮ-ಗೋವು ಭಾರತವನ್ನು ಜಾತಿ-ಮತ-ಪಂಥಗಳ ಭೇದವಿಲ್ಲದೇ ಬೆಸೆಯುತ್ತವೆಂದು ಅವರಿಗೆ ಗೊತ್ತಿತ್ತು. ಜಾತಿ-ಜಾತಿಗಳ ನಡುವಿನ ಕಾದಾಟ ತಡೆಯಲು ಪರಿಹಾರ ನಡುವಿನ ಗೋಡೆಯನ್ನು ಗಟ್ಟಿಗೊಳಿಸಿ ಎತ್ತರಕ್ಕೇರಿಸುವುದಲ್ಲ ಬದಲಿಗೆ ಆತ್ಮವಿಶ್ವಾಸ ವೃದ್ಧಿಸಿ ತಮ್ಮ ಹಿರಿಯರ ಗೌರವ ಹೆಚ್ಚಿಸುವ ಭಾವನೆಯನ್ನು ಸಾಮಾನ್ಯರಲ್ಲೂ ತುಂಬುವುದು ಮಾತ್ರವೇ ಉತ್ತರ. ತನ್ನ ಬಳಿಗೆ ಬಂದ ಜನರ ಕುಳ್ಳಿರಿಸಿ ತಾನು ನಿಂತೇ ಮಾತಾಡಿ ಕಳಿಸುವ ಮುಖ್ಯಮಂತ್ರಿ, ಬರೆದ ಒಂದು ಸಾಮಾನ್ಯ ಪತ್ರಕ್ಕೂ ಉತ್ತರಿಸುವ ಪ್ರಧಾನಮಂತ್ರಿ ಜನಸಾಮಾನ್ಯರ ಅಂತಃಶಕ್ತಿಯನ್ನು ಅತೀವ ಗೌರವದಿಂದಲೇ ಬಡಿದೆಬ್ಬಿಸಿಬಿಡುತ್ತಾರೆ. ಇವೆಲ್ಲಾ ಭಾರತೀಯ ಪರಿಹಾರಗಳು!
ಎಲ್ಲಾ ಬಿಡಿ. ಪ್ರಧಾನಿ ನರೇಂದ್ರಮೋದಿಯವರು ವಿಶೇಷ ಸಂದರ್ಭಗಳಲ್ಲಿ ತಾಯಿಯ ಬಳಿ ಹೋಗಿ ಆಕೆಯ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವುದೂ ಜನರ ಮನಸನ್ನು ಹೇಗೆ ಕಲಕಿ ಬಿಡುತ್ತೆಂದರೆ ಪ್ರತಿಯೊಬ್ಬರೂ ಅದರಲ್ಲಿ ಭಾರತದ ಅನೂಚಾನ ಪರಂಪರೆಯ ವೈಭವವನ್ನು ಕಾಣುತ್ತಾರೆ. ಅದು ಮತ್ತೊಮ್ಮೆ ಬೆಳಗುತ್ತಿದೆಯೆಂಬ ಭಾವದಿಂದಲೇ ಸ್ಫೂರ್ತಿ ಪಡೆಯುತ್ತಾರೆ. ಭಾರತ ಮತ್ತೆ ತನ್ನ ತಾನು ಸಂಘಟಿಸಿಕೊಳ್ಳುವುದೆಂದರೆ ಇದೇ. ಇದನ್ನೇ ನಿವೇದಿತಾ ನೂರ ಹತ್ತು ವರ್ಷಗಳ ಹಿಂದೆ ಹೇಳಿದ್ದು.

vajrayudha
ಎಲ್ಲಾ ಸರಿ. ಈ ರೀತಿಯ ಸಾಧನೆ ಮೋದಿ-ಯೋಗಿಯರಿಗೆ ಮಾತ್ರವೇಕೆ? ನಿವೇದಿತೆಯೇ ಹೇಳುತ್ತಾಳೆ ‘ನಿಸ್ವಾರ್ಥಿಯಾದ ಮನುಷ್ಯನೇ ವಜ್ರಾಯುಧದಂತೆ ಬಲಾಢ್ಯನಾಗಿರುತ್ತಾನೆ’. ಸ್ವಾರ್ಥ ನಮ್ಮ ಶಕ್ತಿಯನ್ನು ಉಡುಗಿಸಿಬಿಡುತ್ತದೆ. ವಜ್ರಾಯುಧದ ಉಗಮದ ಕಥೆಂ ಇದನ್ನೇ ಹೇಳುತ್ತದೆ. ಬಲು ಹಿಂದೆ, ದೇವತೆಗಳು ರಾಕ್ಷಸರ ನಾಶಕ್ಕೆಂದು ವಿಶೇಷ ಅಸ್ತ್ರ ಹುಡುಕುತ್ತಿದ್ದರಂತೆ. ಶಸ್ತ್ರ ತಯಾರಿಕೆಯವ ಯಾರಾದರೂ ತನ್ನ ದೇಹದ ಮೂಳೆಗಳನ್ನೇ ದಾನವಾಗಿ ಕೊಟ್ಟರೆ ಅದರಿಂದ ಮಾಡಿದ ಖಡ್ಗ ಅಜೇಯವಾಗುವುದು ಎಂದನಂತೆ. ನಿಜಕ್ಕೂ ಈಗ ಪೀಕಲಾಟ. ಯಾರಾದರೂ ಸರಿ, ತನ್ನೆಲ್ಲವನ್ನೂ ಧಾರೆ ಎರೆಯಬಲ್ಲ. ಆದರೆ ಪ್ರಾಣ ಕೊಡುವುದೆಂದರೆ! ಅಸಾಧ್ಯವೆನಿಸಿತು. ಆಗಲೇ ದೇವತೆಗಳಿಗೆ ನೆನಪಾದದ್ದು ಋಷಿ ದಧೀಚಿ. ಎಲ್ಲರೂ ಕಾರಣವನ್ನು ವಿವರಿಸಿ ದಧೀಚಿಗಳ ಬಳಿ ಬೇಡಿಕೊಂಡರು. ಋಷಿಗಳು ಒಂದರೆಕ್ಷಣವೂ ಯೋಚಿಸಲಿಲ್ಲ. ಧರ್ಮಸ್ಥಾಪನೆಗೆ, ಮನುಕುಲದ ಒಳಿತಿಗೆ ತನ್ನ ಬಳಕೆಯಾಗುವುದಾದರೆ ಅದಕ್ಕಿಂತಲೂ ಶ್ರೇಷ್ಠ ಸಂಗತಿ ಯಾವುದಿರಬಹುದೆನ್ನುತ್ತಾ ತಮ್ಮ ಶರೀರವನ್ನು ತ್ಯಾಗ ಮಾಡಿಯೇಬಿಟ್ಟರು. ಅವರ ಬೆನ್ನ ಮೂಳೆಯಿಂದ ತಯಾರಾದುದೇ ವಜ್ರಾಯುಧ ಎನ್ನಲಾಗುತ್ತದೆ. ಇಂದ್ರನ ಕೈಲಿರುವುದೂ ಅದೇ. ‘ಎಂದಿಗೆ ಸ್ವಾರ್ಥ ಮುಕ್ತರಾಗುತ್ತೇವೆಯೋ ಅಂದು ನಾವು ಭಗವಂತನ ಆಯುಧವಾಗುತ್ತೇವೆ. ಆಮೇಲೆ ಯಾವುದನ್ನೂ ‘ಹೇಗೆ’ ಎಂದು ನಾವು ಕೇಳಬೇಕಿಲ್ಲ; ಯೋಜನೆ ರೂಪಿಸಲು ಹೆಣಗಾಡಬೇಕಿಲ್ಲ. ಭಗವಂತನೆದುರು ಶರಣಾಗಬೇಕಷ್ಟೇ. ಉಳಿದದ್ದು ಆತನೇ ಮಾಡಿಸುತ್ತಾನೆ.’ ಎನ್ನುತ್ತಾಳೆ ಅಕ್ಕ. ಇತ್ತೀಚೆಗೆ ಭಾರತದಲ್ಲಿ ಈ ಬಗೆಯ ನಿಸ್ವಾರ್ಥ ವಜ್ರಾಯುಧಗಳಿಗೆ ವಿಶೇಷ ಮೌಲ್ಯ ಬಂದಿರುವುದು ಏಕೆಂದು ಅರ್ಥವಾಯಿತೇನು? ಇಂತಹ ಆಯುಧದಿಂದಲೇ ರಕ್ಕಸರ ನಾಶವೂ ಆಗುವುದು, ವಿಶ್ವಗುರುತ್ವದ ಸಂದೇಶವೂ ಹೊರಡುವುದು. ಅಕ್ಕ ಮುಂದುವರೆಸಿ, ‘ಈ ವಜ್ರಾಯುಧ ಕಣ್ಣಿಗೆ ಕಾಣುತ್ತದೆ. ಆದರೆ ಅದನ್ನು ಹಿಡಿದು ತಿರುಗಿಸುತ್ತಿರುವ ಕೈ ಮಾತ್ರ ಯಾರಿಗೂ ಕಾಣದು’ ಎನ್ನುತ್ತಾಳೆ. ಎಷ್ಟು ಸಮಯೋಚಿತವಲ್ಲವೇ? ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು, ಜನಮಾನಸದಲ್ಲಿ ಕಂಡು ಬಂದಿರುವ ಆತ್ಮವಿಶ್ವಾಸ, ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತಿರುವ ರೀತಿ ಇವೆಲ್ಲವೂ ನಿಜಕ್ಕೂ ರೋಚಕವೇ. ವಜ್ರಾಯುಧವನ್ನು ಬೀಸುತ್ತಿರುವ ಕಾಣದ ಕೈಗಳ ಕೈವಾಡವೇ ಸರಿ!
ನಿವೇದಿತಾ ಈ ವಜ್ರಾಯುಧವನ್ನೇ ಭಾರತದ ರಾಷ್ಟ್ರ ಧ್ವಜವಾಗಿಸುವ ಕಲ್ಪನೆ ಇಟ್ಟುಕೊಂಡಿದ್ದಳು. ಅವಳ ಭಾರತದ ಗ್ರಹಿಕೆ ಅದೆಷ್ಟು ಅದ್ಭುತವಾಗಿತ್ತೆಂದರೆ ಅವಳೇ ಚಿತ್ರಿಸಿದ ವಜ್ರಾಯುಧಕ್ಕೆ ನಾಲ್ಕು ಬಾಹುಗಳಿದ್ದವು. ಈಗಿನ ವಜ್ರಾಯುಧ ಇಂದ್ರನ ವಜ್ರಾಯುಧಕ್ಕಿಂತ ಹೆಚ್ಚು ಶಕ್ತಿಯುತ ಎನ್ನುತ್ತಿದ್ದಳು ಅವಳು. ‘ಅಲ್ಲೊಬ್ಬ ಇಲ್ಲೊಬ್ಬ ನಿಸ್ವಾರ್ಥ ಪುರುಷರಲ್ಲ. ಎಲ್ಲೆಲ್ಲೂ ಸಂತ-ಪ್ರವಾದಿಯರ ರೂಪದಲ್ಲಿ ಸ್ವಾರ್ಥವನ್ನು ಗೆದ್ದವರು ಸಿಗುವಂತಾಗಬೇಕು. ಭಾರತ ಸಹೋದರತ್ವದಲ್ಲಿ, ಏಕತೆಯಲ್ಲಿ ಎಷ್ಟು ಆಳಕ್ಕಿಳಿಯಬೇಕೆಂದರೆ ತನ್ನ ಸಹಜ ಸಾಮಥ್ರ್ಯದ ಪರ್ವತವನ್ನೇರಿ ಶ್ರೇಷ್ಠ ರಾಷ್ಟ್ರದ ದರ್ಶನಮಾಡಿಕೊಳ್ಳಬೇಕು’ ಎಂಬುದು ಅವಳ ಆಶಯವಾಗಿತ್ತು. ಭಾರತ ಒಬ್ಬ ಮಹಾಪುರುಷನ ರಾಷ್ಟ್ರವಲ್ಲ. ಇಲ್ಲಿ ತಂಡೋಪತಂಡವಾಗಿ ಮಹಾಪುರುಷರ ಅವತಾರವೇ ಆಗಬೇಕು ಎಂದು ಅವಳ ಅವಳ ಅಪೇಕ್ಷೆಯಾಗಿತ್ತು. ಇವೆಲ್ಲಕ್ಕೂ ಸಂಕೇತವಾಗಿಯೇ ಅವಳು ತಾನೇ ರೂಪಿಸಿದ ಭಾರತದ ಧ್ವಜದಲ್ಲಿ ವಜ್ರಾಯುಧ ಬಳಸಿ ‘ವಂದೇ ಮಾತರಂ’ ಎಂದು ಬರೆದದ್ದು. ಕ್ರಾಂತಿಕಾರಿ ರಾಸ್ ಬಿಹಾರಿ ಘೋಷರು ಉದ್ಘೋಷಿಸಿದ್ದರಲ್ಲ, ‘ಇಂದು ಶುಷ್ಕ ಅಸ್ಥಿಪಂಜರದಲ್ಲಿ ಜೀವದ ಲಕ್ಷಣವು ಕಾಣುತ್ತಿದ್ದರೆ ನಿವೇದಿತಾ ಅದರಲ್ಲಿ ಪ್ರಾಣ ಸಂಚಾರ ಮಾಡಿರುವುದೇ ಅದಕ್ಕೆ ಕಾರಣ. ಇಂದು ನಮ್ಮ ಯುವ ಜನಾಂಗದಲ್ಲಿ ನವ್ಯ, ಭವ್ಯ ಉದಾತ್ತ ಜೀವನದ ಪ್ರಬಲ ಆಕಾಂಕ್ಷೆ ಕುದಿಯುತ್ತಿದ್ದರೆ ಅದರ ಕೀರ್ತಿ ಬಹುಮಟ್ಟಿಗೆ ನಿವೇದಿತಾಳಿಗೆ ಸಲ್ಲಬೇಕು. ನಿಶ್ಚಿತವಾಗಿ ಹೇಳಬಯಸುವ ಒಂದೇ ಮಾತೆಂದರೆ, ಇಂದು ನಮ್ಮಲ್ಲಿ ರಾಷ್ಟ್ರೀಯ ಜೀವನವು ಚಿಗುರುತ್ತಿದ್ದರೆ ಅದಕ್ಕೆ ನಿವೇದಿತಾಳ ಕೊಡುಗೆ ಅಸಾಧಾರಣವಾದುದು’
ನಿಜಕ್ಕೂ ಆಕೆ ಯಾರೆಂಬುದು ಯಕ್ಷಪ್ರಶ್ನೆ. ಒಂದಂತೂ ಸತ್ಯ. ಯಾವ ಕೆಲಸವನ್ನು ವಿವೇಕಾನಂದರು ಭಾರತದಲ್ಲಿ ಶುರು ಮಾಡಿದ್ದರೋ ಅದನ್ನು ಪೂರ್ಣಗೊಳಿಸಲೆಂದು ಬಂದ ದೇವಕನ್ನಿಕೆಯೇ ಇರಬೇಕು. ಅವರೆಲ್ಲರ ತಪಸ್ಸಿನ ಫಲ ಇಂದು ವಜ್ರಾಯುಧ ತಾಯಿ ಭಾರತಿಯ ಕೈಲಿ ಕಂಗೊಳಿಸುತ್ತಿದೆ. ವಿಶ್ವಗುರುವಿನ ಪಟ್ಟ ಸನ್ನಿಹಿತವಾಗಿರುವುದು ಗೋಚರಿಸುತ್ತಿದೆ!

ಹಿಂದೂ ಅಂದರೆ ಜೀವನ ಪದ್ಧತಿ, ಏಕೆ ಗೊತ್ತಾ?

ಹಿಂದೂ ಅಂದರೆ ಜೀವನ ಪದ್ಧತಿ, ಏಕೆ ಗೊತ್ತಾ?

ಇಂದು ಕಾಲೇಜಿಗೆ ಹೋಗುವ ಹುಡುಗಿ ಸ್ನಾನ ಮಾಡದೇ ತಿನ್ನಬಾರದೆಂದು ಸೈನ್ಸ್ ಪುಸ್ತಕದಲ್ಲಿ ಎಲ್ಲಿದೆ ಹೇಳು ಎಂದು ತಂದೆ-ತಾಯಿಯರನ್ನು ಪ್ರಶ್ನಿಸುವಾಗ ಅವರ ಬಳಿ ಉತ್ತರವಿಲ್ಲ. ಇದರ ಹಿಂದೆ ಸಾವಿರಾರು ವರ್ಷಗಳಿಂದ ಹರಿದು ಬಂದ ಘನೀಭವಿತ ಪರಂಪರೆ ಇದೆ ಎಂದರೆ ಆಕೆಗೆ ಅರ್ಥವಾಗೋಲ್ಲ. ನಾವಿಂದು ವಿಜ್ಞಾನದ ಭೂತಗನ್ನಡಿಯ ಮೂಲಕ ಭಾರತದ ಚಿತ್ರ ನೋಡುವಾಗ ಪಶ್ಚಿಮವನ್ನೇ ಕಾಣುತ್ತಿದ್ದರೆ ಅತ್ತ ನಿವೇದಿತಾ ಶ್ರದ್ಧೆಯೆಂಬ ಕನ್ನಡಕ ಹಾಕಿಕೊಂಡು ಇಲ್ಲಿನ ಪ್ರತಿ ಮನೆಯಲ್ಲೂ ಭಾರತವನ್ನೇ ಕಾಣುತ್ತಿದ್ದಳು. ಎಷ್ಟೊಂದು ವ್ಯತ್ಯಾಸ.

ಇತ್ತೀಚೆಗೆ ಬೆಳಕಿಗೆ ಬಂದ ಘಟನೆ. ವಹಾಬಿ ಎಂಬ ಕಟ್ಟರ್ ಪಂಥಕ್ಕೆ ಸೇರಿದ ಮುಸಲ್ಮಾನರ ಗುಂಪು ಹಿಂದುಗಳ ಮತಾಂತರಕ್ಕೆ ಬಲುದೊಡ್ಡ ಪ್ರಯತ್ನ ಮಾಡುತ್ತಿದೆ. ಜಾಕಿರ್ ನಾಯಕ್ನ ಇತರ ಪಂಥಗಳ ಮೇಲಿನ ಬೆಂಕಿಯುಗುಳುವ ಮಾತುಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಕೇಳಿಸಿ ಅವರ ಮನಸ್ಸು ಕೆಡಿಸಿ ಮತಾಂತರಿಸಿಬಿಡುವ ಯೋಜನೆ ಅವರದ್ದು. ಹೀಗೆ ಹಿಂದುತ್ವದ ಬಂಧದಿಂದ ಆಚೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ; ಅವರಿಗೆ ತಮ್ಮದೇ ಹುಡುಗಿಯೊಂದಿಗೆ ಮದುವೆ ಮಾಡಿಸಿ ಆ ಹುಡುಗನನ್ನು ಮಸೀದಿಯಲ್ಲಿ ಕೆಲಸಕ್ಕೆ ಹಚ್ಚಿ ಬಿಡುತ್ತಾರೆ. ಮತಾಂತರಗೊಂಡವರು ಸ್ವಲ್ಪ ಬುದ್ಧಿವಂತರಾದರೆ ಅವರನ್ನೇ ಬಳಸಿ ಇತರ ಹಿಂದೂಗಳ ಮತಾಂತರಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಮತಾಂತರಗೊಂಡ ಹುಡುಗಿಯೊಬ್ಬಳು ಸಿಕ್ಕಿದ್ದಳು. ಮತಾಂತರವಾದದ್ದೇಕೆಂದರೆ ಪುಂಖಾನುಪುಂಖವಾಗಿ ಹಿಂದೂ ಧರ್ಮದ ಮೂರ್ತಿ ಪೂಜೆಯಲ್ಲಿನ ಹುಳುಕುಗಳನ್ನು ಆಡಿಕೊಳ್ಳಲಾರಂಭಿಸಿದಳು. ಮೂವತ್ಮೂರು ಕೋಟಿ ದೇವತೆಗಳ ಲೇವಡಿ ಮಾಡಿದಳು. ಶಿವನ ‘ಲಿಂಗ’ವನ್ನೂ ಬಿಡದೇ ಪೂಜಿಸುವ ಜನಾಂಗ ಎಂದೂ ಅಪಹಾಸ್ಯ ಮಾಡಿದಳು. ಅವಳು ಹೇಳಿದ್ದೆಲ್ಲ ಕೇಳಿ ಉತ್ತರಿಸುವ ಮೊದಲು ವಹಾಬಿ ಪಂಥದ ಇತಿಹಾಸ ತೆರೆದಿಟ್ಟೆ. ಈಕೆಯನ್ನು ಮುಂದಿನ ದಿನಗಳಲ್ಲಿ ಅವರು ಬಳಸಿಕೊಳ್ಳಬಹುದಾದ ರೀತಿಗಳನ್ನು ವಿವರಿಸಿದೆ. ಆಮೇಲೆ ಹಿಂದೂ ಧರ್ಮದಲ್ಲಿ ಹುದುಗಿರುವ ಪೂಜಾ ಪದ್ಧತಿಯ ಸೂಕ್ಷ್ಮಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟೆ. ಇವೆಲ್ಲಕ್ಕೂ ಖಂಡಿತ ಪರಿಪೂರ್ಣ ಉತ್ತರ ಕೊಡುವೆ. ಸದ್ಯಕ್ಕೆ ನಿವೇದಿತಾ ಈ ಸಂಗತಿಗಳನ್ನು ಅರ್ಥೈಸಿಕೊಂಡ ಬಗೆ ನಿಮ್ಮೆದುರಿಗೆ ಬಿಚ್ಚಿಡುವೆ.

two

 

ಹಿಂದೂ ಎಂದರೆ ಏನು? ಅಂತ ಯಾರಾದರೂ ಕೇಳಿದಾಗ ಅದು ಜೀವನ ಮಾರ್ಗ ಅಂತ ನಾವೆಲ್ಲ ಹೇಳುತ್ತೇವಲ್ಲ ಅದು ಹೇಗೆ ಅಂತ ಸಮರ್ಥಿಸಿಕೊಳ್ಳಬಲ್ಲೆವೇನು? ನಿವೇದಿತಾ ತನ್ನ ವೆಬ್ ಆಫ್ ಇಂಡಿಯನ್ ಲೈಫ್ನಲ್ಲಿ ಅದನ್ನು ಮನಮುಟ್ಟುವಂತೆ ವಿವರಿಸುತ್ತಾಳೆ. ‘ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಪರಂಪರೆಗಳು ಭಾರತೀಯ ಬದುಕಿನ ಹಂದರದ ಅವಿಭಾಜ್ಯ ಅಂಗಗಳೆಂಬ ಸತ್ಯ ಅವಳಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹಿಂದೂವೊಬ್ಬ ಬದುಕು ಕಟ್ಟಿಕೊಂಡಿರೋದೇ ಮನೆ, ಮಂದಿರ, ಊರು ಮತ್ತು ತೀರ್ಥಕ್ಷೇತ್ರಗಳ ಸುತ್ತ. ಅವನ ಪೂಜಾ ಪದ್ಧತಿ, ಮೈಮೇಲೆ ಹಾಕಿಕೊಳ್ಳೋ ಧಾರ್ಮಿಕ ಸಂಕೇತಗಳು, ಹುಟ್ಟಿನಿಂದ ಹಿಡಿದು ಸಾವಿನವರೆಗೆ ಪ್ರತಿಯೊಬ್ಬನಿಗೂ ಪ್ರತ್ಯೇಕವಾಗಿ ಹಂತ-ಹಂತದಲ್ಲೂ ನಡೆಸುವ ಸಂಸ್ಕಾರಗಳು, ತಿಂಗಳಿಗೊಂದಾದರೂ ಹಬ್ಬ, ವ್ರತ-ಉಪವಾಸಗಳು, ಗಂಗೆಯ ಪಾವಿತ್ರ್ಯದ ಕುರಿತಂತೆ ಆಳಕ್ಕೆ ಹುದುಗಿರುವ ಭಕ್ತಿ ಇವೆಲ್ಲವೂ ಸೇರಿ ಹಿಂದೂ ಧರ್ಮವನ್ನು ಒಂದು ಬದುಕಿನ ರೀತಿಯಾಗಿ ಮಾರ್ಪಡಿಸಿಬಿಟ್ಟಿದೆ.’ ಎನ್ನುತ್ತಾಳೆ. ಅಲ್ಲದೇ ಮತ್ತೇನು? ಬೆಳಗ್ಗೆ ಬೇಗನೆದ್ದು ಮನೆಯೆದುರು ನೀರು ಚೆಲ್ಲಿ, ರಂಗೋಲಿ ಇಟ್ಟು, ದಾಸರ ಪದ ಹೇಳಿಕೊಳ್ಳುತ್ತಾ ಬೇಗನೆ ಶಾಲೆಗೆ ಹೋಗಬೇಕಿರುವ ಮಕ್ಕಳಿಗಾಗಿ ತಿಂಡಿ-ಅಡುಗೆ ಮಾಡಿಟ್ಟು ಅವರನ್ನೆಲ್ಲ ತಯಾರು ಮಾಡಿ ಕಳಿಸಿ ತಾನೂ ಸ್ನಾನ ಮಾಡಿ ದೇವರಕೋಣೆ ಹೊಕ್ಕಿ ಸಾಕಷ್ಟು ಹೊತ್ತು ಪೂಜೆ ಮಾಡಿ ಆನಂತರವೇ ತಿಂಡಿ ತಿನ್ನುವ ತಾಯಿ ಒಂದು ಅಪರೂಪದ ಧಾರ್ಮಿಕ ಬದುಕನ್ನೇ ತನ್ನದಾಗಿಸಿಕೊಂಡಿದ್ದಾಳೆ. ಅವಳಿಗೆ ಅಮೇರಿಕಾದ ಅಧ್ಯಕ್ಷರ ಬಗ್ಗೆ ಗೊತ್ತಿಲ್ಲದಿರಬಹುದು ಆದರೆ ದೇವರ ಕೋಣೆಯಲ್ಲಿ ಕುಳಿತಿರುವ ದೇವರ ಕುರಿತಂತೆ ಆಕೆಗೆ ಚೆನ್ನಾಗಿ ಗೊತ್ತು. ತನ್ನ ಮಕ್ಕಳ ಆರೋಗ್ಯಕ್ಕಾಗಿ ಮನೆ ಮದ್ದು ಮಾಡುವ ಜ್ಞಾನ ಜೋರಾಗಿಯೇ ಇದೆ ಆಕೆಗೆ. ಇದನ್ನು ನಿವೇದಿತಾ ಬಲು ಸುಂದರವಾಗಿ ಅರಿತಿದ್ದಳು. ಆಕೆ ತನ್ನಿಡೀ ಪುಸ್ತಕದಲ್ಲಿ ಪ್ರೇಮದ ಪರದೆ ಹೊದುಕೊಂಡೇ ಹಿಂದೂಧರ್ಮದ ಹಂದರವನ್ನು ವಿವರಿಸುತ್ತಾಳೆ. ಆ ವಿವರಣೆಗಳನ್ನು ಓದುವುದೇ ಒಂದು ಆನಂದ. ‘ಬೆಳಗ್ಗಿನ ಜಾವ 4 ಗಂಟೆಗೆ ಎದ್ದು ತನ್ನ ಕೋಣೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ಭಾರತೀಯ ಹೆಣ್ಣುಮಗಳ ಬದುಕು ಆರಂಭ. ಆನಂತರ ಸ್ವಲ್ಪ ಹೊತ್ತು ಧ್ಯಾನ ಮಾಡಿ ಗಂಗೆಗೆ ಹೋಗಿ ನಿತ್ಯ ಸ್ನಾನ. ಮುಂದೆ ಪೂರ್ಣ ಪ್ರಮಾಣದ ಪೂಜೆ ಮಾಡಿ ಆಮೇಲೇ ಊಟ’ ಎನ್ನುತ್ತಾಳೆ ಆಕೆ. ನನಗಂತೂ ಅಷ್ಟು ಬೇಗನೇ ಏಳುವುದು ಎಂದೂ ಸಾಧ್ಯವಾಗಲಿಲ್ಲ ಎಂಬುದನ್ನು ಸೇರಿಸುವುದು ಮರೆಯುವುದಿಲ್ಲ. ಕ್ರಿಶ್ಚಿಯನ್ ಮಿಶಿನರಿಗಳು ಹಬ್ಬಿಸಿದ್ದ, ಭಾರತೀಯರೆಂದರೆ ಸದಾ ನೀರೆರೆಚಿಕೊಂಡು ಶುದ್ಧೀಕರಣದ ಮಡಿ ಮಾಡುವ, ಎಲ್ಲೆಂದರಲ್ಲಿ ನಮಸ್ಕಾರ ಮಾಡುವ, ಅರ್ಥವಿಲ್ಲದ ಜಾತಿ ಬಂಧನದಲ್ಲಿ ನರಳುವ ಜನಾಂಗ ಎಂಬುದು ಅಕ್ಷರಶಃ ಸುಳ್ಳೆಂದು ಜರಿಯುತ್ತಾಳೆ. ವಾಸ್ತವದಲ್ಲಿ ಇಲ್ಲಿನ ಆಚರಣೆಗಳು ಅದೆಷ್ಟು ಹೃತ್ಪೂರ್ವಕವೆಂದು ಕೊಂಡಾಡುತ್ತಾಳೆ. ಅವಳ ದೃಷ್ಟಿಯಲ್ಲಿ ‘ಭಾರತೀಯನ ಪಾಲಿಗೆ ದಿನ ನಿತ್ಯದ ಆಚರಣೆ, ವೈಯಕ್ತಿಕ ಹವ್ಯಾಸಗಳೆಲ್ಲ ಬಲು ಪ್ರಾಚೀನ ಕಾಲದಿಂದ ರಾಷ್ಟ್ರ ಪ್ರವಾಹದಲ್ಲಿ ಹರಿದು ಬಂದ ಬಹು ಮುಖ್ಯವಾದ, ಪವಿತ್ರವಾದ ಶಾಶ್ವತ ನಿಧಿ! ಅದನ್ನು ಹಾಳಾಗದಂತೆ ಜತನದಿಂದ ಕಾಪಾಡಿ ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬನ ಜವಾಬ್ದಾರಿ.’
ನಿವೇದಿತಾ ಬಲು ಸೂಕ್ಷ್ಮ. ತುಂಬಾ ಹತ್ತಿರದಿಂದ ಪ್ರತಿಯೊಂದನ್ನು ಗಮನಿಸಿ ಅದರಲ್ಲಿರುವ ಸತ್ತ್ವವನ್ನು ಗೌರವಿಸಿ ಆರಾಧಿಸಿದ್ದಾಳೆ. ಬಹುಶಃ ಪಶ್ಚಿಮದ ಆಚರಣೆ-ಚಿಂತನೆಗಳನ್ನು ಪೂರ್ವದೊಂದಿಗೆ ತುಲನೆ ಮಾಡುವ ಸಾಮಥ್ರ್ಯ ಆಕೆಗೆ ಸಿದ್ಧಿಸಿತ್ತು. ಹೀಗಾಗಿಯೇ ಆಕೆ ಸಮರ್ಥವಾಗಿ ಎಲ್ಲವನ್ನೂ ತಾಳೆ ಹೇಳುತ್ತಾಳೆ, ‘ಸ್ನಾನ ಮತ್ತು ಊಟ ಪಶ್ಚಿಮದ ಪಾಲಿಗೆ ಸ್ವಾರ್ಥದ ಕ್ರಿಯೆಯಾದರೆ ಭಾರತದಲ್ಲಿ ಅದು ಬಲು ಪ್ರಮುಖವಾದ ಸಂಸ್ಕಾರ.’ ಅದಕ್ಕೆ ಆಕೆ ಸೂಕ್ತ ಉಲ್ಲೇಖವನ್ನೂ ಕೊಡುತ್ತಾಳೆ. ಗಂಗೆಯಲ್ಲಿ ಸ್ನಾನಕ್ಕೂ ಮುನ್ನ ತನ್ನ ಪಾದ ಸ್ಪರ್ಶಕ್ಕೆ ಆಕೆಯ ಬಳಿ ಕ್ಷಮೆ ಕೇಳುವ ಪರಿ ಅನನ್ಯ. ಸ್ನಾನ ಆಗುವವರೆಗೆ ಊಟ ಮಾಡುವಂತಿಲ್ಲ ಎಂಬ ನಿಯಮ ಬೇರೆ. ಹೀಗಾಗಿ ಪ್ರತಿನಿತ್ಯ ಊಟ ಮಾಡುವ ಮುನ್ನ ಒಮ್ಮೆ ಗಂಗೆಯನ್ನು ಪ್ರಾರ್ಥಿಸುವ ಪ್ರತೀತಿ. ‘ಪೂಜೆ ಮಾಡದೇ ಊಟವಿಲ್ಲ ಮತ್ತು ಸ್ನಾನ ಮಾಡದೇ ಪೂಜೆ ಮಾಡುವಂತಿಲ್ಲ’ ಇದು ಭಾರತದ ಹೆಣ್ಣುಮಗಳು ಬಲು ಕಠಿಣವಾಗಿ ಆಚರಿಸಿಕೊಂಡು ಬಂದಿರುವ ಜೀವನ ಪದ್ಧತಿ ಎಂದು ಉದ್ಗರಿಸುತ್ತಾಳೆ ನಿವೇದಿತಾ.

ಇಂದು ಕಾಲೇಜಿಗೆ ಹೋಗುವ ಹುಡುಗಿ ಸ್ನಾನ ಮಾಡದೇ ತಿನ್ನಬಾರದೆಂದು ಸೈನ್ಸ್ ಪುಸ್ತಕದಲ್ಲಿ ಎಲ್ಲಿದೆ ಹೇಳು ಎಂದು ತಂದೆ-ತಾಯಿಯರನ್ನು ಪ್ರಶ್ನಿಸುವಾಗ ಅವರ ಬಳಿ ಉತ್ತರವಿಲ್ಲ. ಇದರ ಹಿಂದೆ ಸಾವಿರಾರು ವರ್ಷಗಳಿಂದ ಹರಿದು ಬಂದ ಘನೀಭವಿತ ಪರಂಪರೆ ಇದೆ ಎಂದರೆ ಆಕೆಗೆ ಅರ್ಥವಾಗೋಲ್ಲ. ನಾವಿಂದು ವಿಜ್ಞಾನದ ಭೂತಗನ್ನಡಿಯ ಮೂಲಕ ಭಾರತದ ಚಿತ್ರ ನೋಡುವಾಗ ಪಶ್ಚಿಮವನ್ನೇ ಕಾಣುತ್ತಿದ್ದರೆ ಅತ್ತ ನಿವೇದಿತಾ ಶ್ರದ್ಧೆಯೆಂಬ ಕನ್ನಡಕ ಹಾಕಿಕೊಂಡು ಇಲ್ಲಿನ ಪ್ರತಿ ಮನೆಯಲ್ಲೂ ಭಾರತವನ್ನೇ ಕಾಣುತ್ತಿದ್ದಳು. ಎಷ್ಟೊಂದು ವ್ಯತ್ಯಾಸ.

one

‘ಧರ್ಮ ಅಂದರೆ ರಿಲಿಜನ್ ಅಲ್ಲ, ಅದು ಮನುಷ್ಯನೊಳಗೆ ಅಡಗಿರುವ ಮನುಷ್ಯತ್ವದಂತೆ, ಶಾಶ್ವತವಾದ, ವಿಚಲಿತವಾಗದ, ಅಗತ್ಯವಾದ ಸೂಕ್ಷ್ಮವಸ್ತು’. ಎಂಬುದು ಆಕೆಯ ಗ್ರಹಿಕೆ. ಈ ಹಿನ್ನೆಲೆಯಲ್ಲಿ ಹಿಂದೂಧರ್ಮ ಜೀವನ ನಡೆಸಲು ಅಗತ್ಯವಾಗಿ ಬೇಕಾದ ಬಲು ಸೂಕ್ಷ್ಮ ಸಂಗತಿ ಎಂಬುದು ಆಕೆಗೆ ಅರಿವಿತ್ತು. ಈ ಧರ್ಮವನ್ನು ಆಕೆ ರಾಷ್ಟ್ರೀಯ ಧರೋಹರವೆಂದೂ ರಾಷ್ಟ್ರೀಯ ಸದಾಚಾರವೆಂದೂ ಗುರುತಿಸುತ್ತಾಳೆ. ‘ಈ ಧರ್ಮವನುಳಿಸಲೆಂದೇ ಝಾನ್ಸಿರಾಣಿ ಲಕ್ಷ್ಮಿಬಾಯಿ ಕಾದಾಡಿದ್ದು. ಈ ಧರ್ಮದೊಂದಿಗೆ ಹೇಗೆ ನಡೆದುಕೊಂಡರೆಂಬ ಆಧಾರದ ಮೇಲೆಯೇ ಪಠಾನರು, ಮೊಘಲರು, ಇಂಗ್ಲೀಷರನ್ನು ಭಾರತದ ರೈತ ತೂಗಿ ನೋಡೋದು. ಈ ಧರ್ಮದ ಆಚರಣೆ ಸಮರ್ಥವಾಗಿ ಮಾಡಿದನೆಂದೇ ಯುಧಿಷ್ಠಿರನನ್ನು ಎಲ್ಲರೂ ಧರ್ಮರಾಯನೆಂದು ಕೊಂಡಾಡೋದು’ ಎನ್ನುತ್ತಾಳೆ ಆಕೆ. ಬಹುಶಃ ಇದು ಹೊಸ ಹೊಳಹೇ ಸರಿ. ಅದೇಕೆ ಕೊಲವೊಮ್ಮೆ ಭಾರತೀಯರು ಹೊರಗಿನವರ ಆಳ್ವಿಕೆಯನ್ನು ಒಪ್ಪಿಕೊಳ್ಳುತ್ತಾರೆ, ತಮ್ಮವರನ್ನು ಧಿಕ್ಕರಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಬುದ್ಧನ ಸ್ವೀಕಾರಕ್ಕೂ ಚಾರ್ವಾಕರ ಧಿಕ್ಕಾರಕ್ಕೂ ಧರ್ಮದ ಸೂಕ್ಷ್ಮಸಂಗತಿಯೊಂದು ಕಾರಣವೆಂಬುದಂತೂ ಬಲು ಸ್ಪಷ್ಟ.
ಇನ್ನು ದೈವಪೂಜೆಯ ಕುರಿತಂತೆ ಆಕೆಯ ಅಧ್ಯಯನವೂ ಬಲು ಆಳವಾದದ್ದು ಮತ್ತು ಅಚ್ಚರಿ ಹುಟ್ಟಿಸುವಂಥದ್ದು. ಆಕೆ ಚೀನಾದಲ್ಲಿ ಪೂಜೆಗೊಳ್ಳಲ್ಪಡುವ, ಶಕ್ತಿವಂತ ದೇವಿಯರ ಕುರಿತಂತೆ ಉಲ್ಲೇಖ ಮಾಡುತ್ತಾ ಭಾರತದಲ್ಲಿ ಮಾತೃಪೂಜೆ ಎನ್ನುವುದು ಕಾಲಗರ್ಭದಲ್ಲಿ ಹುದುಗಿಹೋಗಿರುವ ಅತ್ಯಂತ ಪ್ರಾಚೀನ ಆಚರಣೆ ಎಂದು ನೆನಪಿಸುವುದನ್ನು ಮರೆಯುವುದಿಲ್ಲ. ಹಿಮಾಲಯವನ್ನೂ ದಾಟಿ ಚೀನಾ, ಮಂಗೋಲಿಯಾಗಳ ಸಂಪರ್ಕಕ್ಕೆ ಬಂದ ಭಾರತೀಯರ ಪ್ರಭಾವ ಅವರ ಮೇಲಾಗಿರುವುದನ್ನು ಆಕೆ ಗುರುತಿಸುತ್ತಾಳೆ. ಈ ಕಾರಣದಿಂದಾಗಿಯೇ ಭಾರತದ ದಕ್ಷಿಣದಲ್ಲಿ ಪೂಜಿಸಲ್ಪಡುವ ಕನ್ಯಾಕುಮಾರಿ ಮತ್ತು ಜಪಾನಿನಲ್ಲಿ ಇಂದಿಗೂ ಪೂಜೆಗೊಳ್ಳುವ, ಸಕಲ ಸಂಪತ್ತುಗಳನ್ನು ಕರುಣಿಸುವ ಕ್ವಾನ್ಯೋನ್ ದೇವಿಯ ನಡುವಣ ಸಾಮ್ಯ ಅಧ್ಯಯನ ಯೋಗ್ಯವಾದುದು ಎನ್ನುತ್ತಾಳೆ. ನಿವೇದಿತಾ ಸಹಜವಾಗಿಯೇ ಪ್ರಶ್ನಿಸುತ್ತಾಳೆ, ‘ಸ್ವರ್ಗದ ದೇವತೆಯಾದ ಚೀನಾದ ಕಾರಿ ಮತ್ತು ಭಾರತದ ಕಾಳಿ ಇವರಿಬ್ಬರಲ್ಲಿ ಯಾರು ಪ್ರಾಚೀನ?’ ಅವಳ ಸಂಶೋಧನಾ ಮನೋಭಾವ ಇಲ್ಲಿಗೇ ನಿಲ್ಲುವಂಥದ್ದಲ್ಲ. ‘ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಉಲ್ಲೇಖವಾಗುವ ಮತ್ತು ಮೊಹಮ್ಮದೀಯರು ಆರಂಭದಿಂದಲೂ ಪೂಜಿಸುವ ‘ಕಾಬಾ’ದ ಶಿಲೆ ಅಲ್ಲಿನ ಜನಾಂಗವನ್ನು ಏಕವಾಗಿ ಬಂಧಿಸಿರುವ ಕೇಂದ್ರಬಿಂದು’ ಎನ್ನುತ್ತಾಳೆ. ‘ಭಾರತದಲ್ಲಿ ಇಂದಿಗೂ ಆಸ್ಥೆಯಿಂದ ಆರಿಸಿದ ಕಲ್ಲನ್ನು ಗರ್ಭಗುಡಿಯಲ್ಲೋ, ಬಯಲಲ್ಲೋ ಇಟ್ಟು ಭಕ್ತಿಯ ಸಂಕೇತವಾಗಿ ಪೂಜಿಸುವ ಜನಾಂಗವಿದೆ. ಇದು ಅವರ ಪಾಲಿಗೆ ಸಾಮಾನ್ಯ ಕಲ್ಲಲ್ಲ. ಸಾಕ್ಷಾತ್ತು ಹಿಮಾಲಯ’ ಎನ್ನುತ್ತಾಳೆ.
ನನಗೆ ಅಚ್ಚರಿ ಹುಟ್ಟಿಸಿದ ಅಂಶ ಪೂಜೆಗೆ, ಅಭಿಷೇಕಕ್ಕೆ ನಾವು ಬಳಸುವ ಎಣ್ಣೆಯ ಕುರಿತಂತೆ ಆಕೆಯ ಚಿಂತನೆ. ಹೀಗೆ ಆಲೋಚಿಸಿ ನೋಡಿ, ಭಗವಂತನಿಗೆ ನಾವು ಎಣ್ಣೆಯ ಅಭಿಷೇಕ ಮಾಡುವುದಾದರೂ ಏಕೆ? ನಿವೇದಿತಾ ಹೇಳುವಂತೆ ಜಗತ್ತಿನೆಲ್ಲೆಡೆ ಅಗ್ನಿ ಮತ್ತು ಬೆಳಕು ಪೂಜೆಯ ಕೇಂದ್ರವೇ. ಎಣ್ಣೆಗೆ ಬೆಂಕಿಯನ್ನೂ ಹೊತ್ತಿಸುವ ಶಕ್ತಿ-ಸಾಮಥ್ರ್ಯಗಳಿರುವುದರಿಂದ ಅದು ಹಿಂದೂವಿನ ಪಾಲಿಗೆ ಅತ್ಯಂತ ಪವಿತ್ರ. ಬೆಳಕನ್ನು ಕೊಡಬಲ್ಲ ವಸ್ತು ಪವಿತ್ರವೆನಿಸಿದ್ದರಿಂದಲೇ ಅದರಿಂದ ಕಲ್ಲಿಗೆ ಅಭಿಷೇಕ ಮಾಡುತ್ತಾನೆ ಹಿಂದೂ ಎನ್ನುವುದು ಆಕೆಯ ತರ್ಕ.

 
ಎಲ್ಲ ಪೂಜೆಯ ಮೂಲವೂ ಅಗ್ನಿಯ ಆರಾಧನೆಯೇ. ಹೀಗಾಗಿ ಕ್ರಿಶ್ಚಿಯನ್ನರು ಹೊತ್ತಿಸುವ ಲ್ಯಾಂಪ್, ಮುಸಲ್ಮಾನರು ಗೋರಿಯೆದುರು ಇಡುವ ದೀಪ ಮತ್ತು ಸುವಾಸನೆಯುಕ್ತ ಹೂಗಳು ಮತ್ತು ಹಿಂದೂ ಮಂದಿರಗಳಿಂದ ಹೊರಸೂಸುವ ಧೂಪದ ಸುವಾಸನೆ, ಹಣ್ಣು-ಹೂಗಳು ಇವೆಲ್ಲವೂ ಇದನ್ನು ಅರಿಯಬಲ್ಲ ಮಹತ್ವದ ಸಂಕೇತಗಳೇ. ಇದರ ಆಧಾರದ ಮೇಲೆಯೇ ನಿವೇದಿತಾ ಹೇಳೋದು, ಚೈನಾದ ತಾವೋವಾದ, ಪರ್ಶಿಯಾದ ಜೋರಾಷ್ಟ್ರಿಯನ್ ವಾದ ಮತ್ತು ಭಾರತದ ಹಿಂದುತ್ವ ಇವೆಲ್ಲವೂ ಅಂತರಂಗದೊಳಕ್ಕೆ ಬೆಸೆಯಲ್ಟಟ್ಟ ಒಂದೇ ಚಿಂತನೆಯ ವಿಭಿನ್ನ ರೂಪಗಳು. ಸ್ವತಃ ಇಸ್ಲಾಂ ಭಾರತದೊಂದಿಗೆ ಸಂಪರ್ಕಕ್ಕೆ ಬಂದೊಡನೆ ಸೂಫಿ ತತ್ತ್ವದ ಮಾತಾಡಲಾರಂಭಿಸಿತು’ ಎನ್ನುತ್ತಾಳೆ. ಮತ್ತು ಇವೆಲ್ಲವುಗಳಲ್ಲಿ ಅಡಗಿರುವ ಭಾರತದ ಪಾತ್ರವನ್ನು ಕೊಂಡಾಡುತ್ತಾಳೆ.

three
ಹೌದು. ಇಡಿಯ ಭಾರತವೇ ಆಕೆಯ ಪಾಲಿಗೆ ಒಂದು ತತ್ತ್ವಶಾಸ್ತ್ರದ ಮಹಾಗ್ರಂಥ. ಆಕೆ ಇಲ್ಲಿನ ಪ್ರತಿಯೊಂದು ಸಂಗತಿಯನ್ನೂ ಈ ಚಿಂತನೆಗೆ ತಾಳೆ ಹೊಂದಿಸಿಯೇ ನೋಡೋದು. ಭಾರತವನ್ನು ನಿಂತ ನೀರು ಎಂದು ಆಂಗ್ಲರು ಜರಿಯುವಾಗ ಆಕೆಗೆ ಕೋಪ ಬರುವ ಕಾರಣ ಇದೇ. ಆಕೆ ಘಂಟಾಘೋಷವಾಗಿ ಸಾರುತ್ತಾಳೆ, ‘ಭಾರತದ ಒಂದು ಪೀಳಿಗೆ ಮತ್ತೊಂದು ಪೀಳಿಗೆಗಿಂತ ಬೇರೆಯಾಗಿಯೇ ವ್ಯವಹರಿಸುತ್ತದೆ. ಪ್ಯಾರಿಸ್ಸಿನಲ್ಲಿ ಕೂಡ ಇಷ್ಟು ಬದಲಾವಣೆ ಕಾಣುವುದು ಕಷ್ಟ’ ಎನ್ನುತ್ತಾಳೆ. ಆಕೆಯ ಪ್ರಕಾರ ಅದಕ್ಕೆ ಕಾರಣವೇನು ಗೊತ್ತೇ? ‘ಇಲ್ಲಿನ ಪ್ರತಿಯೊಬ್ಬ ಸಂತ, ಪ್ರತಿಯೊಬ್ಬ ಕವಿ ಹಳೆಯ ತಾತ್ತ್ವಿಕ ಸಾಹಿತ್ಯ ರಾಶಿಗೆ ತಾನೊಂದಷ್ಟು ಭಿನ್ನವಾದುದನ್ನು ಸೇರಿಸುತ್ತಾನೆ ಮತ್ತು ಸಮಾಜ ಅದನ್ನು ಸ್ವೀಕರಿಸುತ್ತದೆ. ಸಂಸ್ಕೃತ ಸಾಹಿತ್ಯ ರಾಶಿ ಒಂದೆಡೆಯಾದರೆ ಸ್ಥಳೀಯ ಬಲಾಢ್ಯ ಸಂಸ್ಕೃತಿಯನ್ನು ಬಿಂಬಿಸುವ ದೇಸೀ ಭಾಷೆಗಳ ಸಾಹಿತ್ಯದ ಕೊಡುಗೆ ಮತ್ತೊಂದೆಡೆ. ಇವೆಲ್ಲವೂ ರಾಷ್ಟ್ರೀಯ ಸಾಹಿತ್ಯದ ಅಂಗಗಳಾಗಿಯೇ ಗುರುತಿಸಲ್ಪಡುತ್ತದೆ. ಬಂಗಾಳದಲ್ಲಿ ಚೈತನ್ಯ, ಸಿಖ್ಖರ ದಶಗುರುಗಳು, ಮಹಾರಾಷ್ಟ್ರದ ತುಕಾರಾಮರು, ದಕ್ಷಿಣದ ರಾಮಾನುಜರು ಇವರೆಲ್ಲರು ರಾಷ್ಟ್ರೀಯ ಸಾಹಿತ್ಯದ ಮೂರ್ತಿವೆತ್ತ ರೂಪಗಳೇ ಆಗಿದ್ದರು. ಆ ಸಾಹಿತ್ಯವನ್ನು ಸಾಮಾನ್ಯರ ಬದುಕಿಗೆ ಹೊಂದುವಂತೆ ತತ್ತ್ವವನ್ನು ರೂಪಿಸುವ ಹೊಣೆ ಅವರ ಹೆಗಲಮೇಲಿತ್ತು. ಅವರು ಅದನ್ನು ಸೂಕ್ತವಾಗಿ ನಿಭಾಯಿಸಿದರು. ಹೀಗಾಗಿ ಇಂಥವರನ್ನು ಭಾರತ ಅವತಾರವೆಂದು ಕರೆಯುತ್ತೆ. ಮತ್ತು ಇವರು ನಿರ್ಮಿಸಿದ ಪಂಥವೇ ರಾಷ್ಟ್ರವಾಗುತ್ತೆ. ಹೀಗೆಯೇ ಮರಾಠಾ ಸಾಮ್ರಾಜ್ಯ ರೂಪುಗೊಂಡಿದ್ದು, ಲಾಹೋರಿನಲ್ಲಿ ಅಧಿಪತ್ಯ ಸ್ಥಾಪನೆಯಾಗಿದ್ದು. ದೂರದ ಅರೇಬಿಯಾದಲ್ಲಿ ಇಸ್ಲಾಂ ತನ್ನ ತಾನು ರೂಪಿಸಿಕೊಂಡಿದ್ದು’.
ನಿವೇದಿತೆಯ ಆಲೋಚನೆಯ ಓತಪ್ರೋತ ಪ್ರವಾಹ ಹರಿಯುತ್ತಲೇ ಇರುತ್ತದೆ. ಓದಿನ ಓಟದಲ್ಲಿ ಎಲ್ಲೆಲ್ಲಿ ತಡೆಯೊಡ್ಡುವಿರೋ ಅಲ್ಲೆಲ್ಲಾ ಹೊಸ ಶಕ್ತಿ-ಚೈತನ್ಯಗಳ ಉತ್ಪಾದನೆಯಾಗುತ್ತದೆ. ‘ಮಾನವನ ಹಕ್ಕು ಪ್ರಾಪಂಚಿಕ ಸುಖ ಭೋಗಗಳ ತ್ಯಾಗವೇ ಹೊರತು ಕೂಡಿಟ್ಟು ಪರಮಾತ್ಮನೊಂದಿಗೆ ಸಮಾನತೆ ಸಾಧಿಸುವುದಲ್ಲ’ ಎಂದಿತು ಭಾರತ ಎನ್ನುತ್ತಾಳೆ ಆಕೆ. ಅದನ್ನು ಭಾರತೀಯರು ಮತ್ತು ಯೂರೋಪಿಯನ್ನರು ಅರಿಯುವಂತೆ ಮಾಡುವಲ್ಲಿ ಆಕೆಯ ಶ್ರಮ ಅಪಾರ. ಇಂದು ವಹಾಬಿಗಳು, ಮಿಶನರಿಗಳು ವೇದ-ಪುರಾಣಗಳ ಕುರಿತಂತೆ ಕೇಳುವ ಪ್ರಶ್ನೆ ಮೂರನೇ ಕ್ಲಾಸಿನ ಮಟ್ಟದ್ದೂ ಅಲ್ಲ. ನಿವೇದಿತಾ ಅವುಗಳಿಗೆ ಬಲು ಹಿಂದೆಯೇ ಮುಲಾಜಿಲ್ಲದೇ ಉತ್ತರಿಸಿದ್ದಾಳೆ. ವೇದ ಅನ್ನೋದು ಶಾಶ್ವತ ಸತ್ಯ. ಪುರಾಣ ಸೃಷ್ಟಿಯ ರಹಸ್ಯ, ಮಹಾಪುರುಷರ ಅವತಾರ ಅವರ ಸಾವು, ಪವಾಡಗಳ ಕಥನ ಎನ್ನುವ ಆಕೆ ಇವೆರಡೂ ಒಂದರೊಳಗೆ ಸೇರಿಕೊಂಡಂತೆ ಕಂಡರೂ ಬೇರ್ಪಡಿಸಿ ವಿವರಿಸುವುದು ಕಷ್ಟವಲ್ಲ ಎನ್ನುತ್ತಾಳೆ. ಮಿಶನರಿಗಳಿಗೆ ಅರ್ಥವಾಗಲೆಂದೇ, ‘ನೀನು ದೇವರನ್ನು ನಿನ್ನ ಹೃದಯ ಮತ್ತು ಆತ್ಮದಿಂದ ಪ್ರೀತಿಸು’ ಎಂದು ಬೈಬಲ್ ಹೇಳಿರುವುದು ವೇದವಿದ್ದಂತೆ ಮತ್ತು ‘ಹಿರೋಡ್ನು ರಾಜನಾಗಿದ್ದಾಗ ಯೇಸು ಬೆತ್ಲೆಹೆಂನಲ್ಲಿ ಹುಟ್ಟಿದ’ ಎನ್ನುವ ಬೈಬಲ್ ಭಾಗ ಪುರಾಣವಿದ್ದಂತೆ ಎಂದು ವಿವರಿಸುತ್ತಾಳೆ. ಓಹ್! ಎಷ್ಟು ಸಲೀಸಲ್ಲವೇ? ಇದು ನಿವೇದಿತೆಯ ವೈಶಿಷ್ಟ್ಯ.

ಡ್ರ್ಯಾಗನ್ ಮುಸುಡಿಗೇ ಬಿದ್ದಿದೆ ಗುದ್ದು!

ಡ್ರ್ಯಾಗನ್ ಮುಸುಡಿಗೇ ಬಿದ್ದಿದೆ ಗುದ್ದು!

ಗಿಲ್ಗಿಟ್ ಪ್ರದೇಶದ ಬಹು ಸಂಖ್ಯಾತರು ಷಿಯಾಗಳು. ಆದರೆ ಇಡಿಯ ಪಾಕೀಸ್ತಾನದ ಬಹುಪಾಲು ಜನ ಸುನ್ನಿಗಳು. ಸದಾ ಷಿಯಾಗಳನ್ನು ದ್ವೇಷಿಸುವ ಈ ಸುನ್ನಿಗಳು ಭಾರತದ ವಿರುದ್ಧ ಎತ್ತಿಕಟ್ಟಲು ಮಾತ್ರ ಗಿಲ್ಗಿಟ್ ಬಾಲ್ಟಿಸ್ತಾನವನ್ನು ಬಳಸಿಕೊಂಡರು. ಧರ್ಮದ ಅಫೀಮಿನ ನಶೆಯಿಂದ ಹೊರಬಂದ ಗಿಲ್ಗಿಟ್ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಲಾರಂಭಿಸಿತು. ಜನ ಪಾಕೀಸ್ತಾನದ ಕಪಿಮುಷ್ಟಿಯಿಂದ ಹೊರಬರಬೇಕೆಂದು ಆಂದೋಲನ ಆರಂಭಿಸಿದರು. ಪಾಕೀಸ್ತಾನ ಯಾವುದಕ್ಕೂ ಜಗ್ಗಲಿಲ್ಲ. ಆಗಲೇ ಚೀನಾ ಪಾಕೀಸ್ತಾನಕ್ಕೆ ತನ್ನ ಕಾರಿಡಾರ್ ಯೋಜನೆಯ ಕನಸು ಕಾಣಿಸಲು ಶುರುಮಾಡಿದ್ದು.

ಬ್ರಿಟನ್ನಿನ ಸಂಸತ್ತು ತೆಗೆದುಕೊಂಡ ಐತಿಹಾಸಿಕ ನಿರ್ಣಯ ನಮ್ಮಲ್ಲನೇಕರ ಕಿವಿಗಳಿಗೂ ರಾಚದೇ ಮಾಯವಾಯಿತು. ಉತ್ತರ ಪ್ರದೇಶದ ರಾಜಕೀಯದ ಸಂವಾದದಲ್ಲಿ ಮೈಮರೆತಿದ್ದ ನಾವು ಜಾಗತಿಕ ಮಟ್ಟದಲ್ಲಿ ಭಾರತದ ಪರವಾಗಿ ಮಂಡಿಸಲ್ಪಟ್ಟ ಮಹತ್ವದ ನಿರ್ಣಯದ ಚರ್ಚೆ ಮಾಡುವುದನ್ನು ಮರೆತೇ ಬಿಟ್ಟಿದ್ದೆವು. ಅಸಲಿಗೆ ಪಾಕೀಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಘೋಷಣೆ ಮಾಡಲು ಸಿದ್ಧತೆ ನಡೆಸಿತ್ತು. ಈ ಹೊತ್ತಿನಲ್ಲಿಯೇ ಸರಿಯಾಗಿ ಬ್ರಿಟನ್ನಿನ ಸಂಸತ್ತಿನಲ್ಲಿ ಕನ್ಸರ್ವೇಟೀವ್ ಪಕ್ಷದ ಸಂಸದರಾದ ಬಾಬ್ ಬ್ಲ್ಯಾಕ್ಮನ್ ಪಾಕೀಸ್ತಾನ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ನುಂಗಲು ಹವಣಿಸುತ್ತಿರುವುದನ್ನು ವಿರೋಧಿಸಿ ಗೊತ್ತುವಳಿ ಮಂಡಿಸಿದ್ದಾರೆ. ಈ ಪ್ರದೇಶ ಜಮ್ಮು-ಕಾಶ್ಮೀರಕ್ಕೆ ಸೇರಿದ್ದು ಪಾಕೀಸ್ತಾನ ಅದನ್ನು ವಶದಲ್ಲಿಟ್ಟುಕೊಂಡಿರುವುದೇ ಕಾನೂನು ಬಾಹಿರ, ಅಂತಹುದರಲ್ಲಿ ಅಲ್ಲಿ ಚೀನಾದೊಂದಿಗೆ ಸೇರಿ ಎಕಾನಾಮಿಕ್ ಕಾರಿಡಾರ್ ನಿರ್ಮಿಸಲು ಹೊರಟಿರುವುದು ಮತ್ತು ಈ ನಿಟ್ಟಿನಲ್ಲಿ ಜನರೊಂದಿಗೆ ಕ್ರೂರವಾಗಿ ನಡೆದುಕೊಳ್ಳುತ್ತಿರುವುದು ಅಕ್ಷರಶಃ ಮಾನವ ಹಕ್ಕುಗಳ ಉಲ್ಲಂಘನೆಯೇ ಎಂದಿದ್ದಾರೆ. ಮುಂದುವರೆಸಿ ಈ ಪ್ರದೇಶಗಳು ಭಾರತಕ್ಕೆ ಸೇರಿದವು ಎಂದು ಬ್ಲ್ಯಾಕ್ಮನ್ ಹೇಳಿದ ಮಾತಿಗೆ ಎಲ್ಲರೂ ತಲೆದೂಗಿ ನಿಲುವಳಿಯನ್ನು ಒಪ್ಪಿಕೊಂಡಿದ್ದಾರೆ. ಇಷ್ಟು ದಿನ ಯಾವುದನ್ನು ಬೊಬ್ಬೆಯಿಡುತ್ತಾ ನಾವೇ ಅಂಡಲೆಯುತ್ತಿದ್ದೆವೋ ಅದಕ್ಕೊಂದು ಜಾಗತಿಕ ಮೌಲ್ಯ ಈಗ ಬಂದಿದೆ.
ನೆನಪಿಡಿ. ಪಾಕ್ ಆಕ್ರಮಿತ ಕಾಶ್ಮೀರದ ಬಹುದೊಡ್ಡ ಭೂಭಾಗವೇ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ. ಬ್ರಿಟೀಷರು ಮಹಾರಾಜಾ ಹರಿಸಿಂಗರ ಸಹಾಯದಿಂದ ಇದನ್ನು ಆಳುತ್ತಿದ್ದರು. ರಷ್ಯಾದೊಂದಿಗಿನ ಸಂಬಂಧ ಸೂಕ್ತವಾಗಿ ನಿಭಾಯಿಸುವ ದೃಷ್ಟಿಯಿಂದ ಇದು ಅವರಿಗೆ ಮಹತ್ವದ ಪ್ರದೇಶವಾಗಿತ್ತು. ಬ್ರಿಟೀಷರು ಗಿಲ್ಗಿಟ್ ಸ್ಕೌಟ್ಸ್ ಎಂಬ ಸೇನಾ ತುಕಡಿಯನ್ನು ಅಲ್ಲಿ ನೆಲೆಗೊಳಿಸಿದರು. ಎರಡನೇ ಮಹಾಯುದ್ಧದ ನಂತರ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡಾಗ ತಾವು ಗೌರವಯುತವಾಗಿ ಹೊರಡುವ ನೆಪದಲ್ಲಿ ಬ್ರಿಟೀಷರು ಈ ದೇಶವನ್ನು ತುಂಡರಿಸುವ ಇರಾದೆ ವ್ಯಕ್ತಪಡಿಸಿದರು. ಅಂತೆಯೇ ಗಿಲ್ಗಿಟ್ ಸ್ಕೌಟ್ನ್ನು ಗಿಲ್ಗಿಟ್ನಿಂದ ಹಿಂಪಡೆದು ಮಹಾರಾಜರಿಗೆ ಮೇಜರ್ ಬ್ರೌನ್ ಮತ್ತು ಕ್ಯಾಪ್ಟನ್ ಮಥೀಸನ್ನ್ನು ಬಳಸಿಕೊಳ್ಳುವಂತೆ ಉಳಿಸಿ ಹೋದರು. ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತದೊಂದಿಗೆ ಸೇರುವ ವಿಚಾರದಲ್ಲಿ ಗೊಂದಲದಲ್ಲಿದ್ದ ರಾಜನಿಗೆ ಪಾಕೀಸ್ತಾನದ ಅಪ್ರಚೋದಿತ ದಾಳಿಯಿಂದ ದಿಗಿಲಾಯಿತು. ತಕ್ಷಣಕ್ಕೆ ಭಾರತದೊಂದಿಗೆ ವಿಲೀನವಾಗುವ ಪತ್ರಕ್ಕೆ ಸಹಿ ಹಾಕಿಬಿಟ್ಟರು.
ಕಾಶ್ಮೀರವನ್ನು ಪಾಕೀಸ್ತಾನಕ್ಕೇ ಸೇರಿಸಬೇಕೆಂಬ ಇರಾದೆ ಹೊಂದಿದ್ದ ಮೇಜರ್ ಬ್ರೌನ್ಗೆ ಇದು ನುಂಗಲಾರದ ತುತ್ತಾಗಿತ್ತು. ಆತ ತಡಮಾಡಲಿಲ್ಲ. ಗಿಲ್ಗಿಟ್ ಭಾಗದಲ್ಲಿ ಮಹಾರಾಜರಿಂದ ನೇಮಕವಾಗಿದ್ದ ರಾಜ್ಯಪಾಲರನ್ನು ಕಿತ್ತೆಸೆದು ಪಾಕೀಸ್ತಾನದ ಮುಖ್ಯಸ್ಥರ ಕೈಗೆ ಈ ಪ್ರದೇಶ ಒಪ್ಪಿಸಿದ. ಗಿಲ್ಗಿಟ್ ಸ್ಕೌಟ್ನ ತುಕಡಿ ಬಾಲ್ಟಿಸ್ತಾನವನ್ನು ವಶಪಡಿಸಿಕೊಂಡು ಲಡಾಖ್ನೆಡೆಗೆ ಮುನ್ನುಗ್ಗಿತು. ಭಾರತೀಯ ಸೇನೆ ತೀವ್ರ ಪ್ರತಿರೋಧ ಒಡ್ಡಿ ಕಾರ್ಗಿಲ್ನವರೆಗಿನ ಪ್ರದೇಶವನ್ನೆಲ್ಲ ಮತ್ತೆ ವಶಪಡಿಸಿಕೊಂಡು ಪಾಕೀಸ್ತಾನದ ಬಯಕೆಗೆ ತಣ್ಣೀರೆರೆಚಿತು. ಆದರೆ ಅಷ್ಟರೊಳಗೆ ಗಿಲ್ಗಿಟ್ ಬಾಲ್ಟಿಸ್ತಾನದ ಪ್ರದೇಶಗಳು ಲಡಾಖ್ ಸ್ಕೌಟ್ಸ್ನ ವಶವಾಗಿದ್ದವು. ಈ ವೇಳೆಗೆ ಜಮ್ಮು ಕಾಶ್ಮೀರದ ಗೊಂದಲವನ್ನು ನೆಹರೂ ಅಂತರರಾಷ್ಟ್ರೀಯ ಮಟ್ಟಕ್ಕೊಯ್ದರು. ಅಲ್ಲಿ ಗಡಿಯಲ್ಲಿ ತನ್ನ ಪಡೆಯನ್ನು ಕಡಿತಗೊಳಿಸಬೇಕೆಂದು ಭಾರತಕ್ಕೆ ವಿಶ್ವಸಂಸ್ಥೆ ತಾಕೀತು ಮಾಡಿದರೆ, ಜಮ್ಮು-ಕಾಶ್ಮೀರದ ಒಟ್ಟೂ ಆಕ್ರಮಿತ ಭಾಗದಿಂದ ಪಾಕ್ ಸೇನೆ ಮರಳಬೇಕೆಂದು ಪಾಕೀಸ್ತಾನಕ್ಕೆ ಮಾರ್ಗದರ್ಶನ ಮಾಡಿತು. ಆನಂತರ ಜನಮತ ಗಣನೆ ನಡೆಸಿ ಯಾರು ಎಲ್ಲಿಗೆ ಸೇರಬೇಕೆಂಬ ನಿರ್ಧಾರ ಮಾಡಿದರಾಯ್ತು ಎಂಬುದು ಅದರ ಮನೋಗತವಾಗಿತ್ತು. ಭಾರತ ಸೇನಾ ಜಮಾವಣೆ ಕಡಿತ ಗೊಳಿಸಿತು. ಆದರೆ ಪಾಕೀಸ್ತಾನ ವಶಪಡಿಸಿಕೊಂಡ ಭೂಭಾಗದಿಂದ ಹಿಂದೆ ಸರಿಯಲೇ ಇಲ್ಲ. ಈ ನಿಯಮವನ್ನು ಧಿಕ್ಕರಿಸಿ ಜನಮತಗಣನೆ ಆಗಲೇಬೇಕೆಂದು ಹಠ ಹಿಡಿಯಿತು. ಅನಧಿಕೃತವಾಗಿ ವಶಪಡಿಸಿಕೊಂಡ ಭಾಗದಿಂದ ಹಿಂದೆ ಸರಿಯುವವರೆಗೂ ಜನಮತಗಣನೆಯ ಪ್ರಶ್ನೆಯೇ ಇಲ್ಲವೆಂಬ ವಾದಕ್ಕೆ ಭಾರತ ಬದ್ಧವಾಯ್ತು.

gb

 
ಅತ್ತ ಪಾಕ್ ಆಕ್ರಮಿತ ಕಾಶ್ಮೀರ ಆರಂಭದಲ್ಲಿದ್ದ ಉತ್ಸಾಹವನ್ನು ಕಳೆದುಕೊಂಡು ಅಸಮರ್ಥವಾಯಿತು. ಪಾಕೀಸ್ತಾನವೂ ಗಿಲ್ಗಿಟ್-ಬಾಲ್ಟಿಸ್ತಾನಗಳನ್ನು ಕಡೆಗಣಿಸಿ ಯಾವ ಅಭಿವೃದ್ಧಿಯೂ ಇಲ್ಲದಂತೆ ಮಾಡಿತು. ಇದಕ್ಕೊಂದು ಸಾಂಸ್ಕೃತಿಕ ಕಾರಣವೂ ಇದೆ. ಗಿಲ್ಗಿಟ್ ಪ್ರದೇಶದ ಬಹು ಸಂಖ್ಯಾತರು ಷಿಯಾಗಳು. ಆದರೆ ಇಡಿಯ ಪಾಕೀಸ್ತಾನದ ಬಹುಪಾಲು ಜನ ಸುನ್ನಿಗಳು. ಸದಾ ಷಿಯಾಗಳನ್ನು ದ್ವೇಷಿಸುವ ಈ ಸುನ್ನಿಗಳು ಭಾರತದ ವಿರುದ್ಧ ಎತ್ತಿಕಟ್ಟಲು ಮಾತ್ರ ಗಿಲ್ಗಿಟ್ ಬಾಲ್ಟಿಸ್ತಾನವನ್ನು ಬಳಸಿಕೊಂಡರು. ಧರ್ಮದ ಅಫೀಮಿನ ನಶೆಯಿಂದ ಹೊರಬಂದ ಗಿಲ್ಗಿಟ್ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಲಾರಂಭಿಸಿತು. ಜನ ಪಾಕೀಸ್ತಾನದ ಕಪಿಮುಷ್ಟಿಯಿಂದ ಹೊರಬರಬೇಕೆಂದು ಆಂದೋಲನ ಆರಂಭಿಸಿದರು. ಪಾಕೀಸ್ತಾನ ಯಾವುದಕ್ಕೂ ಜಗ್ಗಲಿಲ್ಲ. ಆಗಲೇ ಚೀನಾ ಪಾಕೀಸ್ತಾನಕ್ಕೆ ತನ್ನ ಕಾರಿಡಾರ್ ಯೋಜನೆಯ ಕನಸು ಕಾಣಿಸಲು ಶುರುಮಾಡಿದ್ದು.
ಚೀನಾ-ಪಾಕೀಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯ ಮೂಲಕ ಚೀನಾ ಮತ್ತು ಪಾಕ್ಗಳನ್ನು ಅತ್ಯಾಧುನಿಕ ರಸ್ತೆಯ ಮೂಲಕ ಬೆಸೆಯುವ ಚೀನೀ ಯೋಜನೆ ಪಾಕ್ನ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಪುಕಾರು ಹಬ್ಬಿಸಲಾಯ್ತು. ಚೀನಾದ ಕಾಶ್ಗರ್ನಿಂದ ಪಾಕ್ನ ಗ್ವದಾರ್ ಬಂದರಿನವರೆಗೆ ನಿರ್ಮಾಣಗೊಳ್ಳುವ ಈ ರಸ್ತೆ ದಾರಿಯುದ್ದಕ್ಕೂ ಪಾಕೀಸ್ತಾನದ ಹಲವೆಡೆ ಜಲವಿದ್ಯುತ್, ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ತೆರೆಯಲಿದೆ, ರಾಜಮಾರ್ಗಗಳನ್ನು ನಿರ್ಮಿಸಲಿದೆ, ನೂರಾರು ಕೈಗಾರಿಕಾ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಿದೆ, ಪ್ರಮುಖ ನಗರಗಳನ್ನು ಬೆಸೆಯಲಿದೆ, ಲಕ್ಷಾಂತರ ಉದ್ಯೋಗ ಸೃಷ್ಟಿಸಲಿದೆ ಎಂದೆಲ್ಲ ಚೀನಾ ಹೇಳುತ್ತೆ. ಇಷ್ಟನ್ನೇ ಓದಿಕೊಂಡರೆ ಪಾಕೀಸ್ತಾನದ ಅಭಿವೃದ್ಧಿಗೆ ಚೀನಾ ಬಲವಾಗಿ ನಿಂತಿದೆ ಎಂದರೂ ಅಚ್ಚರಿಯಿಲ್ಲ. ವಾಸ್ತವವಾಗಿ ದೊಡ್ಡಮಟ್ಟದ ಲಾಭವಾಗೋದು ಚೀನಾಕ್ಕೇ. ತನ್ನ ವಸ್ತುಗಳನ್ನು ಜಗತ್ತಿಗೆ ತಲುಪಿಸಲು ಸಾವಿರಾರು ಮೈಲಿ ಸಮುದ್ರ ಮಾರ್ಗವನ್ನು ಕ್ರಮಿಸಬೇಕಿದ್ದ ಚೀನಾ ಈ ಹೊಸ ರಸ್ತೆಯಿಂದ ಅಷ್ಟು ಪ್ರಯಾಣ ಉಳಿಸುವುದಲ್ಲದೇ ಜಗತ್ತಿನ ಪ್ರಮುಖ ಭೂಭಾಗಗಳನ್ನು ಅತಿ ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಮುಟ್ಟಬಲ್ಲದು. ಹೀಗಾಗಿಯೇ ಸುಮಾರು 50 ಶತಕೋಟಿ ಡಾಲರುಗಳ ವೆಚ್ಚಕ್ಕೆ ಅದು ಸಿದ್ಧವಾಗಿರೋದು. ಅದಕ್ಕಿರುವ ಏಕೈಕ ಸಮಸ್ಯೆಯೆಂದರೆ ಹೀಗೆ ಹಾದು ಹೋಗಬೇಕಿರುವ ರಸ್ತೆ ವಿವಾದದ ಕೇಂದ್ರವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನಗಳ ಮತ್ತು ಸಿಂಧ್-ಬಲೂಚಿಸ್ತಾನಗಳ ಮೂಲಕ ಹಾದು ಹೋಗುತ್ತಿರೋದು.

CPEC
ಭಾರತಕ್ಕೆ ಈ ಯೋಜನೆ ನಿಜಕ್ಕೂ ಆತಂಕಕಾರಿಯೇ. ಗ್ವದಾರ್ ಬಂದರಿನ ನಿರ್ಮಾಣ ಮಾಡಿದ ಚೀನಾ ಅಲ್ಲಿಂದ ಭಾರತದ ಸಮುದ್ರೀಯ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಸಾಧ್ಯವಾಗುತ್ತದೆ. ಅಲ್ಲದೇ ಪಾಕೀಸ್ತಾನಕ್ಕೆ ಯಾವಾಗ ಬೇಕಿದ್ದರೂ ಸೈನ್ಯದ ಸಹಕಾರವನ್ನು ಅತ್ಯಂತ ವೇಗವಾಗಿ ತಲುಪಿಸುವಲ್ಲಿಯೂ ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಮೋದಿ ಸರ್ಕಾರ ಬಂದೊಡನೆ ಇರಾನಿನ ಚಾಬಹಾರ್ ಬಂದರನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದು. ಅಷ್ಟಕ್ಕೇ ಸುಮ್ಮನಾಗದೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ಪರ ಒಲವು ಮೂಡುವಂತೆ ಮಾಡುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡರು. ಪ್ರವಾಹದಲ್ಲಿ ಕಾಶ್ಮೀರ ಕೊಚ್ಚಿ ಹೋಗಿದ್ದಾಗ ಸ್ವತಃ ಪ್ರಧಾನಿಗಳೇ ಕಾಳಜಿ ವಹಿಸಿ ಕಾಶ್ಮೀರದ ಪುನಶ್ಚೇತನಕ್ಕೆ ಕೈಗೊಂಡ ಕಾರ್ಯಾಚರಣೆ ಪಾಕ್ ವಶದಲ್ಲಿರುವ ಕಾಶ್ಮೀರಿಗರಿಗೆ ಹೊಟ್ಟೆ ಉರಿಸಲು ಸಾಕಿತ್ತು. ಅಲ್ಲಿಂದಾಚೆಗೆ ತಮ್ಮನ್ನು ‘ಕ್ಯಾರೆ’ ಎಂದೂ ಕೇಳದ ಪಾಕ್ನ ವಿರುದ್ಧ ತಿರುಗಿಬಿತ್ತು ಗಿಲ್ಗಿಟ್-ಬಾಲ್ಟಿಸ್ತಾನ. ಅದರೊಟ್ಟಿಗೇ ಬಲೂಚಿಸ್ತಾನ ಸಿಂಧ್ಗಳೂ ಮುಗಿಬಿದ್ದವು. ಚೀನಾದ ಈ ಯೋಜನೆಯಿಂದ ನವಾಜ್ ಷರೀಫ್ರ ಪಂಜಾಬ್ಗೆ ಲಾಭ ಹೊರತು ಇತರರಿಗಿಲ್ಲ ಎನ್ನುವ ಸಂದೇಶ ತೀವ್ರವಾಗಿ ಹಬ್ಬಿ ಪ್ರತಿಯೊಬ್ಬರೂ ತಿರುಗಿಬಿದ್ದರು. ಬಲೂಚಿಸ್ತಾನ-ಸಿಂಧ್ಗಳಲ್ಲಿ ಸ್ವಾತಂತ್ರ್ಯದ ಕೂಗು ಮೊಳಗಲಾರಂಭಿಸಿತು. ಸ್ವತಃ ಭಾರತ ತನ್ನೆಲ್ಲಾ ಲಾಬಿ ಬಳಸಿ ಈ ಹೋರಾಟಗಳು ತೀವ್ರವಾಗುವಂತೆ ನೋಡಿಕೊಂಡಿತು.

ಬ಻ಲೊ
ಹೌದು. ಇದು ರಾಜ ತಾಂತ್ರಿಕತೆಯ ಒಂದು ಮಹತ್ವದ ಭಾಗ. ಯಾವುದಾದರೂ ಆಮಿಷದ ಮೂಲಕ ಶತ್ರು ರಾಷ್ಟ್ರದಲ್ಲಿ ಅವರದ್ದೇ ವಿರುದ್ಧ ಕೆಲಸ ಮಾಡುವವರನ್ನು ಹಿಡಿದು ವ್ಯೂಹ ರಚಿಸೋದು. ಚೀನಾ ಜೆಎನ್ಯು ಪ್ರೊಫೆಸರುಗಳ ಮೂಲಕ, ಅವಾಡರ್್ ವಾಪ್ಸಿ ಗ್ಯಾಂಗುಗಳ ಮೂಲಕ ಭಾರತದಲ್ಲಿ ಮಾಡುತ್ತಲ್ಲ ಹಾಗೆಯೇ. ಭಾರತ ಪಾಕೀಸ್ತಾನದಲ್ಲಿ ಎಂತಹ ದೊಡ್ಡ ಜಾಲ ಹಬ್ಬಿಸಿದೆಯೆಂದರೆ ಚೀನಾದ ಕೆಲಸಕ್ಕೆ ಗಲ್ಲಿ ಗಲ್ಲಿಯಲ್ಲೂ ತಡೆಯೊಡ್ಡುವಂತೆ ಸ್ಥಳೀಯರನ್ನು ಎತ್ತಿಕಟ್ಟಿದೆ. ಈ ಕಾರಣದಿಂದಾಗಿಯೇ ಗಿಲ್ಗಿಟ್ ಬಾಲ್ಟಿಸ್ತಾನಗಳನ್ನು ತನ್ನದೇ ಅಂಗವೆಂದು ಘೋಷಿಸಿ ಅದನ್ನು ತನ್ನಿಚ್ಛೆಗೆ ತಕ್ಕಂತೆ ನಿಯಂತ್ರಿಸುವ, ಚೀನಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಿತ್ತು. ಅದಕ್ಕೆ ಪೂರಕವಾಗಿ ಆ ಪ್ರದೇಶದಲ್ಲಿ ಭಾರತ ವಿರೋಧಿ ಚಿಂತನೆಗಳನ್ನು ವ್ಯಾಪಕವಾಗಿ ಹಬ್ಬಿಸುವ ಅದರ ಕೆಲಸವೂ ತೀವ್ರಗೊಂಡಿತ್ತು.
ಅಕ್ಷರಶಃ ಇದೇ ಹೊತ್ತಲ್ಲಿ ಮೋದಿಯವರ ರಾಜತಾಂತ್ರಿಕ ನಡೆಯ ಪ್ರಭಾವ ಹೇಗಾಗಿದೆಯೆಂದರೆ ಗಿಲ್ಗಿಟ್ ಬಾಲ್ಟಿಸ್ತಾನ ಪಾಕೀಸ್ತಾನಕ್ಕೆ ಸೇರಿದ್ದೇ ಅಲ್ಲ. ಅದು ನ್ಯಾಯಯುತವಾಗಿ ಭಾರತದ್ದೇ ಅಂಗವೆಂದು ಇಂಗ್ಲೆಂಡು ಘೋಷಿಸಿದೆ. ಡೊನಾಲ್ಡ್ ಟ್ರಂಪ್ ಮೋದಿಯವರಿಗೆ ಕರೆ ಮಾಡಿ ಅಮೇರಿಕಾಕ್ಕೆ ಬರುವಂತೆ ಆಹ್ವಾನ ನೀಡಿದ್ದಂತೂ ಇನ್ನೊಂದು ಮಹತ್ವದ ಹೆಜ್ಜೆ. ಪಾಕೀಸ್ತಾನವಂತೂ ಬಾಯಿ ಬಡಕೊಳ್ಳುವುದು ಖಚಿತ, ಚೀನಾ ಕೂಡ ಹೂಡಿದ ಶತಕೋಟ್ಯಾಂತರ ಡಾಲರುಗಳ ಬಂಡವಾಳ ನೀರು ಪಾಲಾಯಿತೆಂದು ಕಣ್ಣೀರಿಡಲೇಬೇಕು. ನಾವು ಮುಸುಡಿಗೆ ಕೊಟ್ಟ ಪೆಟ್ಟನ್ನು ಜೀರ್ಣಿಸಿಕೊಳ್ಳಲು ಅದಕ್ಕೆ ಸಮಯ ಬೇಕು. ಹಾಗಂತ ಅದು ಸುಮ್ಮನಿರುವುದಿಲ್ಲ. ಡ್ರ್ಯಾಗನ್ ಮುಂದಿನ ಹೆಜ್ಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುತ್ತದೆ. ಸಿಂಹವಾಗಿ ಎದುರಿಸುವುದಕ್ಕೆ ನಾವು ಸಿದ್ಧವಿದ್ದರೆ ಆಯಿತು, ಅಷ್ಟೇ.

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ.

ಭಾರತೀಯ ಸಂಸ್ಕೃತಿಯ ಆಳ ವಿಸ್ತಾರಗಳನ್ನು ಸುಲಭದ ಪೆಟ್ಟಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಸಂಸ್ಕೃತಿ ಒಂದೆರಡು ವರ್ಷಗಳ ಚಟುವಟಿಕೆಗಳ ಸಂಗ್ರಹವಲ್ಲ. ಅದು ಸಹಸ್ರಾರು ವರ್ಷಗಳ ಘನೀಭವಿಸಿದ ನವನೀತ. ಈಗಲೂ ಊರ ತುಂಬಾ ಈ ಸಂಸ್ಕೃತಿ-ಪರಂಪರೆಗಳನ್ನು ವ್ಯಂಗ್ಯ ಮಾಡುತ್ತಾ, ಅವಹೇಳನಕಾರಿಯಾಗಿ ಬೈಯ್ಯುತ್ತಾ ತಿರುಗಾಡುವ ಬುದ್ಧಿಜೀವಿಗಳು ಕಾಣುತ್ತಾರಲ್ಲ ಅವರಿಗೆ ಈ ರಾಷ್ಟ್ರದ ಅಂತಃಸತ್ವದ ದರ್ಶನ ಆಗೇ ಇಲ್ಲ ಅಂತ. ನಾವೂ ಅನೇಕ ಬಾರಿ ಗೌರವ ಇಟ್ಟುಕೊಂಡೇ ಈ ಸಂಸ್ಕೃತಿಯ ನ್ಯೂನತೆಗಳನ್ನು ಎತ್ತಿ ತೋರುವ ತಥಾಕಥಿತ ಪ್ರಗತಿಗಾಮಿ ವ್ಯಕ್ತಿತ್ವ ತೋರ್ಪಡಿಸುತ್ತೇವಲ್ಲ; ನಮಗೂ ದರ್ಶನವಾಗಿದ್ದು ಸೊನ್ನೆಯೇ. ನಿಜವಾದ ಭಾರತವನ್ನು ಅರಿತ ಅಪರೂಪದ ಹೆಣ್ಣುಮಗಳು ಮಾತ್ರ ನಿವೇದಿತೆಯೇ. ಬಹುಶಃ ವಿವೇಕಾನಂದರಂತಹ ಗುರುವಿದ್ದುದರ ಲಾಭವಿರಬೇಕು ಅದು.ಆಕೆಯ ಗ್ರಹಿಕೆ ಅಸಾಧಾರಣವಾದುದು. ಸಾವಿರಾರು ವರ್ಷಗಳ ಈ ಪರಂಪರೆಯನ್ನು ಆಕೆ ಅರ್ಥೈಸಿಕೊಂಡ ರೀತಿ, ಅದಕ್ಕೆ ತೆಗೆದುಕೊಂಡ ಅತ್ಯಲ್ಪ ಸಮಯ ಎರಡೂ ಅಚ್ಚರಿಯೇ. ಈ ಹಿಂದೆಯೇ ಕಾಳಿಯ ಕುರಿತಂತೆ ಆಕೆಯ ಕಲ್ಪನೆಗಳು, ದರ್ಶನಗಳನ್ನು ಈ ಲೇಖನಮಾಲೆಯಲ್ಲಿ ವಿವರಿಸಿದ್ದೆ. ಈ ಬಾರಿ ಇನ್ನೊಂದಷ್ಟನ್ನು.

1902 ರ ಫೆಬ್ರುವರಿಯಲ್ಲಿ ಮದ್ರಾಸಿನ ಮಹಾಜನಾ ಸಭೆಯಲ್ಲಿ ನಿವೇದಿತಾ ಮಾಡಿದ ಭಾಷಣದ ವಿಷಯವೇನು ಗೊತ್ತೇ? ‘ಭಾರತ ಯಾರಿಗೂ ಕ್ಷಮೆ ಕೇಳಬೇಕಿಲ್ಲ’ ಅಂತ. ಈ ಭಾಷಣವನ್ನು ‘ನಿಮ್ಮ ಧರ್ಮದಲ್ಲಿ ಪಶ್ಚಿಮದವರಿಂದ ಕಲಿಯುವುದಕ್ಕಿಂತ ಅವರಿಗೆ ಕೊಡುವುದಕ್ಕೇ ಸಾಕಷ್ಟಿದೆ. ಸಾಮಾಜಿಕ ಸಂಗತಿಗಳಲ್ಲೂ ಅಷ್ಟೇ. ಹೊರಗಿನವರು ನಿಮಗೆ ಸಲಹೆ ಕೊಡುವ ಯಾವ ಅಗತ್ಯವೂ ಇಲ್ಲ, ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಲು ನೀವೇ ಸಮರ್ಥರಿದ್ದೀರಿ.’ ಎಂತಲೇ ಶುರುಮಾಡಿದವಳು ಆಕೆ. ಮುಂದುವರಿದು ‘ಏನೆಂದುಕೊಂಡಿರುವಿರಿ! ಮೂರು ಸಾವಿರ ವರ್ಷಗಳ ನಾಗರಿಕತೆ ಅಂದರೆ ಬೆಲೆಯೇ ಇಲ್ಲವೇನು, ಇತ್ತೀಚೆಗೆ ಹುಟ್ಟಿದ ಪಶ್ಚಿಮದ ರಾಷ್ಟ್ರಗಳು ಪೂರ್ವದಲ್ಲಿರುವ ಈ ಪ್ರಾಚೀನ ನಾಗರಿಕತೆಯ ಜನರನ್ನು ಮುನ್ನಡೆಸಬೇಕೇನು?’ ಎಂದು ಪ್ರಶ್ನಿಸುವಾಗ ಎದುರಿಗಿದ್ದವರಿಗೆ ಮೈ ಬೆಚ್ಚಗಾಗಿರಲು ಸಾಕು. ಹಾಗಂತ ಈ ಮಾತುಗಳು ಯಾರನ್ನೋ ಮೆಚ್ಚಿಸಲಿಕ್ಕೆ ಆಡಿದವಲ್ಲ. ಅಥವಾ ಇಂಗ್ಲೆಂಡನ್ನು ಎದುರು ಹಾಕಿಕೊಂಡು ಕೀರ್ತಿವಂತಳಾಗಬೇಕೆಂಬ ಬಯಕೆಯೂ ಆಕೆಗಿರಲಿಲ್ಲ. ಆಕೆ ಪ್ರಭುತ್ವದ ಜೊತೆಗಿದ್ದು ಕೆಲಸ ಮಾಡಿದ್ದ್ದರೆ ವೈಯಕ್ತಿಕ ಲಾಭ ಸಾಕಷ್ಟಾಗಿರುತ್ತಿತ್ತು. ಸಂಪತ್ತಿಗೆ ಕೊರತೆಯಾಗುತ್ತಿರಲಿಲ್ಲ, ಒಂದಷ್ಟು ಪದವಿಗಳೂ ದಕ್ಕಿರುತ್ತಿದ್ದವು, ತನ್ನ ರಾಷ್ಟ್ರದಲ್ಲಿ ಶಾಶ್ವತ ಕೀರ್ತಿ ಕೂಡ. ಆದರೆ ಅವೆಲ್ಲವನ್ನೂ ಧಿಕ್ಕರಿಸಿದ ನಿವೇದಿತಾ ಹೀಗೆ ತನ್ನವರ ವಿರುದ್ಧ ಹಲ್ಲು ಮಸೆದು ನಿಂತಳೆಂದರೆ ಅದಕ್ಕೊಂದು ಬಲವಾದ ಕಾರಣ ಇರಲೇಬೇಕಲ್ಲ. ಅದನ್ನು ಆಕೆಯೇ ಹೇಳಿಕೊಳ್ಳುತ್ತಾಳೆ. ‘ಯೂರೋಪ್ ಹುಟ್ಟುವುದಕ್ಕೆ ಮುನ್ನವೇ ಭಾರತ, ನಾಗರೀಕತೆಯ ಒಟ್ಟಾರೆ ಗುರಿ ಸಂಪತ್ತಿನ ಸಂಗ್ರಹಣೆಯೋ, ಅಧಿಕಾರ ಗ್ರಹಣವೋ ಅಥವಾ ಸಂಘಟನೆಗಳ ನಿರ್ಮಾಣವೋ ಅಲ್ಲ. ಬದಲಿಗೆ ಮನುಷ್ಯ ನಿರ್ಮಾಣ ಮಾತ್ರ ಎಂಬ ಸೂಕ್ಷ್ಮ ತತ್ತ್ವವನ್ನು ಅರಿತುಕೊಂಡಿತ್ತು’ ಎನ್ನುತ್ತಾಳೆ. ಇದನ್ನೇ ಆಕೆಯ ಗ್ರಹಿಕೆಯ ಸಾಮಥ್ರ್ಯ ಎನ್ನೋದು. ಐರ್ಲೆಂಡಿನಿಂದ ಬಂದು ಭಾರತವನ್ನು ಆಕೆ ಇಷ್ಟು ಆಳಕ್ಕೆ ಅರಿಯುವಲ್ಲಿ ಆಕೆಯ ಆಸಕ್ತಿ ಮತ್ತು ಆಕೆಯೇ ರೂಪಿಸಿಕೊಂಡ ಪರಿಸರ ಎರಡೂ ಕಾರಣವಾಗಿತ್ತು. ಆರಂಭದಲ್ಲಿಯೇ ವಿವೇಕಾನಂದರು ಆಕೆಗೆ ಸ್ಪಷ್ಟಪಡಿಸಿದ್ದರು, ‘ಮಡಿವಂತ ಬ್ರಾಹ್ಮಣ ಬ್ರಹ್ಮಚಾರಿಣಿಯ ಬದುಕು ನಡೆಸು, ಆಗ ಮಾತ್ರ ನೀನು ಭಾರತವನ್ನು ಅರಿಯಬಲ್ಲೆ. ಮತ್ತು ಭಾರತೀಯರೂ ನಿನ್ನ ಸ್ವೀಕಾರಮಾಡಬಲ್ಲರು’ ಅಂತ.

sisternivedita-650_102814035616

 

 
ಅಕ್ಷರಶಃ ಸತ್ಯವೇ. ನಿವೇದಿತೆಯನ್ನು ಸ್ವಂತದವಳೆಂದು ಭಾರತೀಯರು ಸ್ವೀಕಾರ ಮಾಡಿದ್ದಕ್ಕೆ ಇದು ಕಾರಣ ಹೌದೋ ಅಲ್ಲವೋ. ಆದರೆ ಭಾರತದ ಮಹಿಳೆಯರನ್ನು ಅರ್ಥೈಸಿಕೊಳ್ಳುವಲ್ಲಿ ಆಕೆಗೆ ಈ ಸಹವಾಸ, ಲಾಭ ಮಾಡಿದ್ದಂತೂ ಖಂಡಿತ ಸತ್ಯ. ಆಗಿನ ದಿನಗಳಲ್ಲಿ ಬಾಲ್ಯ ವಿವಾಹದ ಪದ್ಧತಿ ತೀವ್ರವಾಗಿದ್ದುದರಿಂದ ಮಡಿವಂತ ಬ್ರಾಹ್ಮಣ ಬ್ರಹ್ಮಚಾರಿಣಿಯರೆಂದರೆ ಬಹುತೇಕ ವಿಧವೆಯರೇ ಆಗಿರುತ್ತಿದ್ದರು. ಬಂಗಾಳದ ಗಲ್ಲಿಗಳಲ್ಲಿನ ಸಂಪ್ರದಾಯ ನಿಷ್ಠ ಹೆಣ್ಣುಮಕ್ಕಳಿಂದ ಹಿಡಿದು ದೈವತುಲ್ಯರಾದ ಶಾರದಾಮಾತೆಯವರೆಗೆ ಅನೇಕ ತಾಯಂದಿರಲ್ಲಿನ ಸದ್ಗುಣಗಳು ಆಕೆಯನ್ನು ಸೆಳೆದವು. ಅಷ್ಟೇ ಅಲ್ಲ ವಿಧವೆಯರೊಳಗಿನ ತಪಸ್ಸಿನ ತುಡಿತ ನಿವೇದಿತೆಯ ಆಂತರ್ಯದೊಳಗೆ ಹುದುಗಿದ್ದ ತ್ಯಾಗದ ಬಯಕೆಯನ್ನು ತೀವ್ರಗೊಳಿಸಿತು.

ನಿವೇದಿತಾ ಆಲೋಚನೆ ಸ್ಪಷ್ಟವಾಗಿತ್ತು. ವಿಧವೆಯೆಂದರೆ ಪವಿತ್ರವಾದ ಆಧ್ಯಾತ್ಮಿಕವಾದ ಬದುಕೆಂದು ಆಕೆ ಭಾವಿಸಿದ್ದಳು. ರಾಮಾಯಣದ ಸೀತೆ ಜನಾಂಗವೊಂದರ ಆದರ್ಶವಾಗಿ ನಿಲ್ಲುವಲ್ಲಿ ಆಕೆಯ ಭೋಗದ ಬಯಕೆಯಲ್ಲ, ತ್ಯಾಗದ ಇಚ್ಛೆಯೇ ಕಾರಣ ಎಂಬುದನ್ನು ಆಕೆ ಅರಿತಿದ್ದಳು. ಆಕೆಯ ಬಳಿ ಉದಾಹರಣೆಗಳಿಗೆ ಕೊರತೆ ಇರಲಿಲ್ಲ. ಭಾಸ್ಕರಾಚಾರ್ಯನ ಲೀಲಾವತಿಯ ಕುರಿತಂತೆ ಮಾತನಾಡುವಾಗ ಆಕೆ ವಿಧವೆಯರ ಕುರಿತಂತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು. ಜ್ಯೋತಿಷ್ಯ ಶಾಸ್ತ್ರ ಪ್ರವೀಣರೂ ಆಗಿದ್ದ ಗಣಿತಜ್ಞ ಭಾಸ್ಕರಾಚಾರ್ಯರ ಮಗಳು ಲೀಲಾವತಿ. ಶಾಸ್ತ್ರದ ಆಧಾರದ ಮೇಲೆ ತನ್ನ ಮಗಳಿಗೆ ವೈಧವ್ಯದ ಶಾಪವಿರುವುದನ್ನು ಅರಿತ ಆಚಾರ್ಯರು ಲೆಕ್ಕಾಚಾರ ಹಾಕಿ ಯಾವುದೋ ಒಂದು ಅಪೂರ್ವವಾದ ಘಳಿಗೆಯಲ್ಲಿ ಮದುವೆಯಾದರೆ ಮಾತ್ರ ಆಕೆಯ ದಾಂಪತ್ಯ ಉಳಿಯುವುದೆಂಬುದನ್ನು ಅರಿತರು. ಅದಕ್ಕೆ ಪೂರಕವಾಗಿ ತಯಾರಿಯನ್ನೂ ಮಾಡಿಕೊಂಡರು. ದುರದೃಷ್ಟ ಲೀಲಾವತಿಯನ್ನೂ ಬಿಡಲಿಲ್ಲ. ಮದುವೆಯನ್ನು ಅಂದುಕೊಂಡ ಆ ಪವಿತ್ರ ಗಳಿಗೆಯಲ್ಲಿ ಮಾಡಲಾಗಲಿಲ್ಲ. ಲೀಲಾವತಿ ಪತಿಯನ್ನು ಕಳೆದುಕೊಂಡಳು, ಬಾಲ ವಿಧವೆಯಾದಳು. ಭಾಸ್ಕರಾಚಾರ್ಯರು ಧೃತಿಗೆಡಲಿಲ್ಲ. ಆಕೆಯ ವೈಧವ್ಯಕ್ಕೊಂದು ಧನಾತ್ಮಕ ರೂಪ ಕೊಟ್ಟರು. ಗಣಿತ ಶಾಸ್ತ್ರವನ್ನೂ ಆಕೆಗೆ ಧಾರೆಯೆರೆದರು. ತಂದೆಗೆ ಸಹಕರಿಸುತ್ತಾ ಆಕೆ ತನ್ನ ವೈಧವ್ಯವನ್ನು ತ್ಯಾಗದ ಗಣಿಯಾಗಿ ರೂಪಿಸಿ ಗಣಿತಜ್ಞೆಯಾದಳು. ಈ ಕಥೆಯನ್ನು ಹೇಳುತ್ತ ನಿವೇದಿತಾ ‘ಸಮಾಜದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಪತಿ ವಿಯೋಗಿಗಳು ತಮ್ಮ ಕಷ್ಟಗಳನ್ನು ಮರೆತು ಬಿಡುತ್ತಿದ್ದರು’ ಎನ್ನುತ್ತಾಳೆ. ಆಗಿನ ದಿನಗಳಲ್ಲಿ ವಿಧವೆಯಾದ ಹಿರಿಯ ಸ್ತ್ರೀಯರು ಆರೋಗ್ಯದ ಕೇಂದ್ರಗಳಾಗಿರುತ್ತಿದ್ದರು. ಅನಾರೋಗ್ಯದಿಂದ ನರಳುತ್ತಿದ್ದ ಯಾರನ್ನಾದರೂ ಸರಿಯೇ ತಮಗೆ ಗೊತ್ತಿದ್ದ ಸ್ಥಳೀಯ ವೈದ್ಯ ಪ್ರಯೋಗದಲ್ಲಿ ಪ್ರೀತಿಯಿಂದ ಉಪಚರಿಸಿ ಗುಣಮುಖರಾಗುವಂತೆ ಮಾಡುತ್ತಿದ್ದರು. ವಿಧವೆಯರ ವ್ಯಾಪಾರೀ ಮನೋಭಾವವೂ ಬಲು ವಿಶಿಷ್ಟವೇ ಆಗಿತ್ತು. ನಿವೇದಿತಾ ಈ ಕುರಿತಂತೆ ಮಾತಾಡುತ್ತಾ ಬಂಗಾಲಿ ಗಾದೆಯೊಂದರ ಉಲ್ಲೇಖ ಮಾಡುತ್ತಿದ್ದಳು ‘ಸರಿಯಾಗಿ ಸಂಭಾಳಿಸದ ಆಸ್ತಿಗೆ ವಿಧವೆಯ ಹಸ್ತವೇ ಬೇಕು’ ಅಂತ. ಹೀಗೆ ವಿಧವೆಯೋರ್ವಳು ಸಮಾಜದಲ್ಲಿ ಗೌರವವನ್ನು ಪಡೆಯಲು ಕಾರಣವೂ ಇತ್ತು. ಆಕೆಯೇ ಗುರುತಿಸುವಂತೆ, ‘ವಿಧವೆಯಾದವಳು ಯಾವ ಕೆಲಸ ಮಾಡಬೇಕೆಂದು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ತನಗೆ ಒಪ್ಪಿಸಿದ ಕೆಲಸದಲ್ಲಿ ಪೂರ್ಣ ಪ್ರಮಾಣದ ಭಕ್ತಿಯನ್ನು ಸಮರ್ಪಿಸುವುದು ಅವಳಿಗೆ ಸಿದ್ಧಿಸಿರುತ್ತದೆ. ಗಂಡನೆಡೆಗೆ ಹರಿಯಬೇಕಿದ್ದ ತನ್ನ ಶುದ್ಧ ಪ್ರೇಮವನ್ನು ಆಕೆಯು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಬಳಸಿಕೊಳ್ಳುತ್ತಾಳೆೆ’.

leelavathi

ಓಹ್! ಇಂದಿನ ಮಹಿಳಾವಾದಿಗಳು ಈ ಮಾತುಗಳನ್ನೆಲ್ಲ ಕೇಳಿದರೆ ಉರಿದು ಬೀಳಬಹುದು. ಪುರುಷ ಪ್ರಧಾನ ಸಮಾಜದವರೆಲ್ಲ ಸೇರಿ ರೂಪಿಸಿದ ಕಟ್ಟು-ಕಟ್ಟಳೆಗಳಿವು ಎಂದು ಆಕ್ರೋಶದಿಂದ ಕುದಿಯಬಹುದು. ಜೊತೆಗೆ ತಪಸ್ಸು, ಸೇವೆ, ತ್ಯಾಗ ಎಂದೆಲ್ಲ ದೊಡ್ಡ ಪದದೊಳಗೆ ಹೆಣ್ಣುಮಕ್ಕಳನ್ನು ಕೂಡಿ ಹಾಕುವ ಹುನ್ನಾರವೆಂದು ಮೂದಲಿಸಲೂಬಹುದು. ಆದರೆ ಒಂದಂತೂ ಸತ್ಯ. ವೈಧವ್ಯದ ಪಟ್ಟವನ್ನು ಪಡೆದುಕೊಂಡಿರುವ ತಾಯಂದಿರ ಮಾತನ್ನು ಪರಿವಾರದಲ್ಲಿ ಯಾರೊಬ್ಬರೂ ತಳ್ಳಿ ಹಾಕದಂತಹ ಗೌರವ ಇಂದಿಗೂ ಹಳ್ಳಿಗಳಲ್ಲಿದೆ. ಇದು ಆಕೆಯ ತ್ಯಾಗಕ್ಕೆ ಸಮಾಜ ಕಟ್ಟಿದ ಬೆಲೆ.

ನಿವೇದಿತೆಯ ‘ಹಿಂದೂ ಮನೆಗಳಲ್ಲಿ ಗಂಡಸರು ತಾಯಿಯ ಮಾರ್ಗದರ್ಶನ ಪಡೆಯಲು ನಾಚಿಕೆ ಎನ್ನುವುದಿಲ್ಲ’ ಎಂದು ಉದ್ಗರಿಸುತ್ತಾಳೆ. ಆಕೆ ಹೇಳುವ ಬಂಗಾಳಿ ನ್ಯಾಯಾಧೀಶ ಅಶುತೋಶ್ ಮುಖರ್ಜಿಯವರ ಕಥೆ ಬಲು ಭಾವನಾತ್ಮಕ. ಆಶುತೋಶ್ರು ಆಂಗ್ಲರಿಂದಲೂ ಪ್ರಶಂಸೆಗೊಳಗಾದ ಬುದ್ಧಿವಂತ ನ್ಯಾಯಾಧೀಶರು. ಅವರ ತೀರ್ಪುಗಳನ್ನು ಸಂಗ್ರಹಿಸಿ ಸ್ವತಃ ಬ್ರಿಟೀಷರೂ ಅಧ್ಯಯನ ಮಾಡಲು ಬಳಸುತ್ತಿದ್ದರಂತೆ. ಅವರು ಸಾವಿನ ಹೊಸ್ತಿಲಲ್ಲಿದ್ದಾಗ ವಯಸ್ಸಾದ ಅವರ ತಾಯಿಯು ಆಶುತೋಶ್ರನ್ನು ನೋಡಲೆಂದು ಆಗಮಿಸಿದರು. ಮಗನಿದ್ದ ಕೋಣೆಯ ಹೊಸ್ತಿಲು ದಾಟುವಾಗ ಆ ತಾಯಿ ಎಡವಿ ಬಿದ್ದುಬಿಟ್ಟರು. ಕಾಲಿಗೆ ಗಾಯವಾಯ್ತು. ಆ ಕ್ಷಣವೇ ಅಲುಗಾಡಲೂ ಆಗದ ಸ್ಥಿತಿಯಲ್ಲಿದ್ದ ಮುಖರ್ಜಿಯವರು ತೆವಳಿಕೊಂಡು ತಾಯಿಯ ಬಳಿ ಸಾರಿದರು. ಆಕೆಯ ಗಾಯಗೊಂಡ ಕಾಲ್ಗಳನ್ನು ಮತ್ತೆ ಮತ್ತೆ ಮುತ್ತಿಟ್ಟರು. ಆಕೆಗಾಗುತ್ತಿದ್ದ ನೋವನ್ನು ಸಹಿಸಲಾರದೇ ಅವರ ಕಂಗಳಿಂದ ಅಶ್ರುಧಾರೆ ಸುರಿಯಿತು. ಈ ಬಿಸಿ ಕಣ್ಣೀರಿನಿಂದಲೇ ಪಾದಗಳನ್ನು ತೊಳೆದರು. ಹೀಗೆ ಹೇಳುತ್ತಾ ಭಾವುಕಳಾಗುವ ನಿವೇದಿತಾ ಈ ರೀತಿಯ ಸೂಕ್ಷ್ಮ ಸಂಬಂಧಗಳಲ್ಲಿ ಭಾವನಾತ್ಮಕವಾಗಿ ಪ್ರತಿಸ್ಪಂದಿಸುವ ಯಾವ ವ್ಯಕ್ತಿಯೂ ಬದುಕಿನ ತನ್ನ ನಿಧರ್ಾರಗಳಲ್ಲಿ ಸುಲಭಕ್ಕೆ ಎಡವಲಾರ ಎನ್ನುತ್ತಾಳೆ.

ಬಹುಶಃ ಪದೇ ಪದೇ ಆಕೆಯ ಗ್ರಹಿಕೆಯನ್ನು ಕೊಂಡಾಡಿದುದರ ಮರ್ಮ ಈಗ ಅರ್ಥವಾಗಿರಬೇಕು. ಜಗತ್ತಿನ ಯಾವ ಮತ-ಪಂಥಗಳಲ್ಲೂ, ಯಾವ ನೆಲದಲ್ಲೂ ಇಲ್ಲದ ತಾಯಿ-ಮಕ್ಕಳ ಅಪರೂಪದ ಬಾಂಧವ್ಯ ಭಾರತದಲ್ಲಿದೆ, ಹಿಂದೂ ಧರ್ಮದಲ್ಲಿದೆ. ಹೀಗಾಗಿಯೇ ಯಾರಿಂದ ಉಪಕೃತರಾಗಿದ್ದೇವೋ ಅವರೆಲ್ಲರನ್ನು ತಾಯಿಯೆಂದೇ ಗೌರವಿಸೋದು ನಾವು. ಭೂಮಿ ತಾಯಿಯಾಗೋದು, ಗಂಗೆ ಮಾತೆಯೆನಿಸುವುದು ಈ ಕಾರಣದಿಂದಲೇ. ಇದನ್ನು ಮೂಲರೂಪದಲ್ಲಿ ಅರ್ಥೈಸಿಕೊಳ್ಳಲು ನಿವೇದಿತೆಗೆ ಸಾಧ್ಯವಾಗಿತ್ತು. ಹಾಗಂತ ಈ ಭಾವ ಕ್ಷೀಣಿಸುತ್ತಿಲ್ಲವೇ? ಸ್ತ್ರೀಯರ ಮೇಲಿನ ಗೌರವ ಕಡಿಮೆಯಾಗಿಲ್ಲವೇ? ಎಂದರೆ ಖಂಡಿತ ಆಗಿದೆ. ಅದಕ್ಕೆ ಕಾರಣಗಳನ್ನು ನಿವೇದಿತಾ ಪಟ್ಟಿ ಮಾಡುತ್ತಾಳೆ. ‘ಕಳೆದ ಐದು ದಶಕದಲ್ಲಿ ಮಧ್ಯಮವರ್ಗ ತೀವ್ರಗತಿಯಲ್ಲಿ ಅಧಃಪತನ ಕಂಡಿದೆ. ಈ ಕಾರಣದಿಂದಾಗಿಯೇ ಸಂಪತ್ತು ನಾಶವಾಗಿ ಸಾಮಾಜಿಕ ಮತ್ತು ಲೌಕಿಕ ಜಗತ್ತಿನಲ್ಲಿ ಸ್ತ್ರೀಯರ ಸ್ಥಾನಮಾನ ಕುಸಿದಿದೆ.’ ಎನ್ನುತ್ತಾಳೆ. ಆ ಹೊತ್ತಿನಲ್ಲೂ ‘ವಿಧವೆಯರೇ ಸ್ತ್ರೀಯರ ನಡುವಿನ ಬೌದ್ಧಿಕ ಕೇಂದ್ರವಾಗಿದ್ದರು’ ಎಂದು ಹೇಳುವುದನ್ನು ಆಕೆ ಮರೆಯುವುದಿಲ್ಲ.
ನನಗೆ ಗೊತ್ತು. ಅನೇಕರಿಗೆ ಪದೇ ಪದೇ ವಿಧವೆ ಅನ್ನೋ ಪದ ಬಳಸಿರುವುದು ಕಿರಿಕಿರಿ ಎನಿಸಬಹುದು. ಆದರೆ ನಿವೇದಿತಾ ಇದ್ದ ಕಾಲಘಟ್ಟದಲ್ಲಿ ಬಂಗಾಳದಲ್ಲಿನ ವಿಧವೆಯರ ಕುರಿತಂತೆ ಅಮೇರಿಕಾ-ಯೂರೋಪುಗಳಲ್ಲಿ ಭಾರೀ ಅಪಪ್ರಚಾರ ನಡೆದಿತ್ತು. ಹಿಂದೂ ಧರ್ಮ ಸ್ತ್ರೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆಯೆಂದು ಪುಕಾರು ಹಬ್ಬಿಸಿದರು. ಸ್ವಾಮೀಜಿ ಸಾಕಷ್ಟು ಉತ್ತರಿಸಲು ಪ್ರಯತ್ನ ಮಾಡಿದ್ದರೂ ಕೂಡ. ಆದರೆ ನಿವೇದಿತಾ ಅದನ್ನು ಸ್ವತಃ ತಾನೇ ಉತ್ತರ ಹುಡುಕಿಕೊಂಡಳು. ಅವರ ನಡುವೆಯೇ ಬದುಕಿ ಅರ್ಥೈಸಿಕೊಂಡಳು. ಅನಾವರಣಗೊಂಡ ಸತ್ಯವನ್ನು ಮುಲಾಜಿಲ್ಲದೇ ಜಗತ್ತಿಗೆ ಸಾರಿದಳು. ಅಚ್ಚರಿಯೇನು ಗೊತ್ತೇ? ವಿದೇಶಿಗರು ಆಕೆಯ ಮಾತನ್ನು ಧನಾತ್ಮಕವಾಗಿಯೇ ಸ್ವೀಕರಿಸಿದರು, ಭಾರತೀಯ ಬುದ್ಧಿಜೀವಿಗಳು ಮಾತ್ರ ಕೆಂಡ ಕೆಂಡವಾಗಿಬಿಟ್ಟರು. ಆಗಷ್ಟೇ ಅಲ್ಲ. ಈಗಲೂ ಆಕೆಯ ಮಾತುಗಳನ್ನು ಕೇಳಿ ಈ ಜನ ಉರಕೊಂಡು ಬಿದ್ದರೆ ಅಚ್ಚರಿ ಪಡಬೇಡಿ. ಇಂದಂತೂ ಭಾರತೀಯ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲಾಗದೇ ಮೈ ಚಾಯ್ಸ್ ಎನ್ನುತ್ತ ಭೋಗಿಸುವುದೇ ಜೀವನ ಎನ್ನುವ ಮಹಿಳಾವಾದಿಗಳು ಸಾಕಷ್ಟಾಗಿಬಿಟ್ಟಿದ್ದಾರೆ. ಭಾರತೀಯ ನಾರಿಯ ಅಂತರ್ಹಿತ ಶಕ್ತಿಯಾಗಿದ್ದ ತ್ಯಾಗವನ್ನು ಪೂರ್ತಿಯಾಗಿ ನಷ್ಟಗೊಳಿಸಿ ಆಕೆಯನ್ನು ಪಶ್ಚಿಮದ ಸ್ತ್ರೀಯರಿಗೆ ಪರ್ಯಾಯವಾಗಿಸುವ ತುಡಿತ ಇವರಿಗೆಲ್ಲ.

widow
ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ.

ನೆನಪಿಡಿ. ನಮ್ಮ ಹಿರಿಯರು ಅತ್ಯಂತ ಗೌರವದ ಬದುಕನ್ನು ಹರಿವಾಣದಲ್ಲಿಟ್ಟು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ನಾವು ಅದರ ಕುರಿತಂತೆ ಹೆಮ್ಮೆ ಪಡಬೇಕು. ಅದನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕು. ನಿವೇದಿತಾ ತನ್ನ ಮದ್ರಾಸಿನ ಭಾಷಣದ ಕೊನೆಗೆ ಹೇಳುತ್ತಾಳೆ ‘ನಿಮ್ಮ ರಾಷ್ಟ್ರದ ಆಚರಣೆಗಳ ಕುರಿತಂತೆ ನೀವು ಅವಮಾನ ಪಡಬೇಕಿಲ್ಲ. ದೃಢವಾಗಿ ಅದರೊಟ್ಟಿಗೆ ನಿಲ್ಲಿ. ನಿಮ್ಮಲ್ಲಿರುವ ಮಹಾ ಜ್ಞಾನಿಗಳು ಜಗತ್ತಿನ ಯಾವ ಮಹಾಪುರುಷರಿಗಿಂತಲೂ ಕಡಿಮೆಯಲ್ಲ. ಅವರ ವೈಭವವನ್ನು ಹಾಡಿ, ಅವರನ್ನು ಪ್ರೀತಿಸಿ, ಅವರನ್ನು ಪ್ರೋತ್ಸಾಹಿಸಿ. ಅವರು ತಲೆತಗ್ಗಿಸುವಂತಹ ಪರಿಸ್ಥಿತಿಯನ್ನು ನಿಮಗೆಂದೂ ತಂದೊಡ್ಡಲಾರರು’ ಎನ್ನುತ್ತಾಳೆ. ಆ ಮೂಲಕ ಹಿಂದಿನ ತಲೆಮಾರುಗಳಲ್ಲಿದ್ದ ಮಹಾಪುರುಷರಂತೆ ಇಂದಿಗೂ ಮಹಾಪುರುಷರಿದ್ದಾರೆಂಬುದನ್ನು ನೆನಪಿಸಿ ಅಂತಹವರನ್ನು ಗುರುತಿಸಿ-ಗೌರವಿಸಬೇಕಾದ ಹೊಣೆ ನಮ್ಮ ಹೆಗಲಿಗೇರಿಸುತ್ತಾಳೆ.

ನಾವು ಮಾಡಬೇಕಿರೋದು ಅಷ್ಟೇ. ಬೊಬ್ಬೆ ಹೊಡೆದು ಭಾರತೀಯ ಸಂಸ್ಕೃತಿಯನ್ನು ತೆಗಳುವವರನ್ನು ಬದಿಗಿಟ್ಟು, ಈ ಸಂಪತ್ತನ್ನು ಪಸರಿಸುವಲ್ಲಿ ಬದುಕನ್ನೇ ಪಣವಿಟ್ಟ ಜನರ ಅನುಸರಿಸಿದರಾಯ್ತು. ಇದೇ ಅಕ್ಕ ಬೋಧಿಸಿದ ಮಹಾಮಾರ್ಗ!