ಕಳೆದ ಕೆಲವಾರು ದಿನಗಳಿಂದ ಹಿಂದೂಧರ್ಮದ ಕುರಿತ ಚರ್ಚೆ ವ್ಯಾಪಕವಾಗಿದೆ. ಅನೇಕ ತರುಣರು ಧರ್ಮವನ್ನು ಅರಿಯಲು ಯತ್ನಿಸುತ್ತಿರುವುದು ಹೆಮ್ಮೆ ಮೂಡಿಸುವಂತಿದೆ. ಅದು ಯಾವಾಗಲೂ ಹಾಗೆಯೇ, ಬೊಗಳುವ ಸದ್ದು ಕೇಳಿದಾಗಲೇ ಜನ ಅತ್ತ ತಿರುಗಿ ನೋಡುವುದು. ನಿತ್ಯದ ಸದ್ದಿಗೆ ಯಾರೂ ಕತ್ತು ಹೊರಳಿಸುವುದಿಲ್ಲ. ಈಗ ಸಾವರ್ಕರ್‌ರ ಹಿಂದುತ್ವ ಕೃತಿಗೆ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ಬಂದಿದೆ. ಸಂತೋಷವೇ ಅಲ್ಲವೇನು?
ಬಹುತೇಕರಿಗೆ ಹಿಂದೂಧರ್ಮದ ಸ್ಥಾಪಕರು ಯಾರು ಎಂಬ ಪ್ರಶ್ನೆ ಇದೆ. ಏಕೆಂದರೆ ಅವರು ಜಾಗತಿಕವಾಗಿ ನೋಡಿರುವ ರಿಲಿಜನ್‌ಗಳಲ್ಲೆಲ್ಲಾ ಒಬ್ಬ ಮೂಲಪುರುಷ ಅಥವಾ ಸಂಸ್ಥಾಪಕ ಇದ್ದೇ ಇರುತ್ತಾನೆ. ಹೀಗಾಗಿ ಈ ಪ್ರಶ್ನೆ ಮೇಲೇಳುವುದು ಉಚಿತವೇ, ಆದರೆ ಸಹಜವಲ್ಲ. ಹಿಂದೂಗಳು ಅನೇಕ ಸಾವಿರ ವರ್ಷಗಳಿಂದ ಈ ನಾಡಿನಲ್ಲಿ ಬದುಕಿದ್ದಾರೆ. ಜಗತ್ತಿಗೆಲ್ಲಾ ಶ್ರೇಷ್ಠತೆಯ ಸಂದೇಶವನ್ನು ಒಯ್ದಿದ್ದಾರೆ. ಆದರೆ ಅವರಿಗೆಂದಿಗೂ ಈ ಪ್ರಶ್ನೆ ಹುಟ್ಟಲೇ ಇಲ್ಲ. ಏಕೆಂದರೆ ಧರ್ಮ ಮತ್ತು ರಿಲಿಜನ್‌ಗಳ ನಡುವಿನ ಅಂತರ ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಿಂದೂಧರ್ಮವನ್ನು ಸ್ಥಾಪಿಸಿದವರ ಕುರಿತಂತೆ ಅರಿಯುವ ಮೊದಲು ಪಶ್ಚಿಮದ ರಿಲಿಜನ್ನಿನ ಕಲ್ಪನೆಯನ್ನು ತಿಳಿದುಕೊಳ್ಳುವುದೊಳಿತು. ಅಲ್ಲಿ ಹುಟ್ಟಿರುವ ಯಾವುದೇ ರಿಲಿಜನ್‌ಗೆ ಅವಶ್ಯಕವಾಗಿ ಮೂರು ಸಂಗತಿಗಳು ಬೇಕೇ ಬೇಕು. ಮೊದಲನೆಯದಾಗಿ ಒಬ್ಬ ದೇವರು, ಎರಡನೆಯದಾಗಿ ಆತನ ಸಂದೇಶವನ್ನು ಜನರಿಗೆ ಮುಟ್ಟಿಸಬಲ್ಲ ಒಂದು ವಾಹಕ ಮತ್ತು ಮೂರನೆಯದ್ದು ಭಗವಂತನ ಅವತೀರ್ಣಗೊಂಡ ವಾಣಿಗಳುಳ್ಳ ಒಂದು ಪುಸ್ತಕ. ಯಾವ ಮಾರ್ಗದಲ್ಲಿ ಈ ಮೂರೂ ಇಲ್ಲವೋ ಅದನ್ನವರು ರಿಲಿಜನ್ ಎಂದು ಒಪ್ಪಿಕೊಳ್ಳುವುದೇ ಇಲ್ಲ! ನಮಗೆ ಸಮಸ್ಯೆ ಬಂದಿದ್ದು ಈ ವಿದೇಶಿಗರು ಭಾರತಕ್ಕೆ ಬಂದಾಗ ಇಲ್ಲಿರುವ ಈ ಧರ್ಮವನ್ನು ನೋಡಿ, ಇದರ ಪ್ರಮುಖ ಗ್ರಂಥವನ್ನು, ದೇವರನ್ನು ಮತ್ತು ಮೂಲಪುರುಷನ ಹುಡುಕಾಟವನ್ನು ಅವರು ಆರಂಭಿಸಿದಾಗ. ಪಶ್ಚಿಮದ ಈ ಮತಪ್ರವರ್ತಕರು ಇಲ್ಲಿಗೆ ಬಂದು ತಮ್ಮ ರಿಲಿಜನ್‌ಗೆ ಪೂರಕವಾಗಿ ಯಾವ ಸಂಗತಿಗಳನ್ನೂ ಕಾಣದೇ ಹೋದಾಗ ಈ ಜನರನ್ನು ಅವರು ಅನಾಗರಿಕರೆಂದು ಕರೆದರು. ಆದರೆ ವಾಸ್ತವವಾಗಿ ಅವರೆಲ್ಲರಿಗಿಂತಲೂ ಎತ್ತರದಲ್ಲಿದ್ದ ಶ್ರೇಷ್ಠ ಜನಾಂಗ ಇದಾಗಿತ್ತು. ಅವರು ಕಣ್ಣಿಗೆ ಕಾಣದ ಆಗಸದಲ್ಲೆಲ್ಲೋ ಇರಬಹುದಾಗಿರುವ ಒಬ್ಬ ದೇವನ ಕುರಿತಂತೆ ಮಾತನಾಡುತ್ತಿದ್ದರೆ ಹಿಂದೂಧರ್ಮ ಆತ್ಮದ ಕುರಿತಂತೆ ಅದಾಗಲೇ ಸಾಕಷ್ಟು ಸಾಹಿತ್ಯವನ್ನೇ ಸೃಜಿಸಿತ್ತು. ಇದನ್ನರಿಯಲಾಗದೇ ಮೌಢ್ಯದಲ್ಲಿದ್ದ ಪಶ್ಚಿಮದ ಜನ ಇಲ್ಲಿನವರನ್ನು ಬಹುದೇವತಾ ವಿಶ್ವಾಸಿಗಳು ಎಂದು ಜರಿದರು.

ಅವರು ಒಂದು ಗ್ರಂಥವನ್ನು ಅನುಸರಿಸಿಕೊಂಡೇ ಬದುಕು ನಡೆಸುವವರಾಗಿದ್ದರೆ ನಮ್ಮ ಬಳಿ ಆತ್ಮಸಾಕ್ಷಾತ್ಕಾರಕ್ಕೆ ಭಿನ್ನ-ಭಿನ್ನ ಮಾರ್ಗಗಳನ್ನು ಹುಡುಕುವ ಸಾಹಿತ್ಯರಾಶಿಯೇ ಇತ್ತು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರದ್ದು ಸಂದೇಶವಾಹಕ ಹೇಳಿದ್ದನ್ನು ಒಪ್ಪಿ ತಗ್ಗಿ-ಬಗ್ಗಿ ನಡೆಯುವ ಮಾರ್ಗವಾದರೆ ನಮ್ಮದ್ದು ಅರಿವಿಗೆ ಬರುವವರೆಗೂ ಪರೀಕ್ಷಿಸುತ್ತಲೇ ಸಾಗುವ ಚಿಕಿತ್ಸಕ ಮಾರ್ಗವಾಗಿತ್ತು. ಈ ಹಂತದಲ್ಲೇ ಅವರಿಗೆ ಹಿಂದೂಧರ್ಮದ ಮೂಲಪುರುಷರ ಪ್ರಶ್ನೆಯೂ ಉದ್ಭವವಾಗಿದ್ದು. ಒಬ್ಬ ವ್ಯಕ್ತಿಯಿಲ್ಲದೇ ಒಂದು ಧರ್ಮ ಇರಬಹುದೆಂಬುದನ್ನು ಅವರು ನಂಬಲು ಸಿದ್ಧರೇ ಇರಲಿಲ್ಲ!
ಹಿಂದೂಧರ್ಮದ ನಂಬಿಕೆ ಬಲು ವಿಶಿಷ್ಟವಾದ್ದು. ಇಲ್ಲಿ ಧರ್ಮದ ಮೂಲಪುರುಷರೆಂದು ಯಾರೂ ಇಲ್ಲವೇ ಇಲ್ಲ. ನಾವು ನಂಬಿರುವ ದೇವ-ದೇವತೆಗಳೂ ಈ ಧರ್ಮದ ಚೌಕಟ್ಟಿನಲ್ಲೇ ಅನುಷ್ಠಾನ ನಡೆಸುವಂಥವರು. ಪರಂಪರಾನುಗತವಾಗಿ ಈ ಧರ್ಮ ಹರಿದುಬಂದಿದೆ. ಇಲ್ಲಿ ಆಟವಾಡಲು ಬಯಸುವವನಿಗೆ ಕಡಿಮೆ ನೀರಿರುವ ನದಿಯ ತೀರವೂ ಸಿಗುತ್ತದೆ. ರತ್ನವೇ ಬೇಕೆನ್ನುವವನಿಗೆ ಮುಳುಗು ಹಾಕಿದಷ್ಟೂ ಸಮುದ್ರ ದೊರೆಯುತ್ತದೆ. ಹೀಗಾಗಿಯೇ ಒಮ್ಮೆ ಇದರ ಸ್ವಾರಸ್ಯವನ್ನು ಅರಿತವರು ಮತ್ತೆ-ಮತ್ತೆ ಆಳದಿಂದ ಆಳಕ್ಕೆ ಮುಳುಗು ಹಾಕುತ್ತಲೇ ಇರುತ್ತಾರೆ. ಧರ್ಮವೆನ್ನುವುದು ನಿತ್ಯದ ಬದುಕಿಗೆ ಸಂಬಂಧವೇ ಇಲ್ಲದ ಒಂದಷ್ಟು ನಂಬಿಕೆಗಳ ಕಂತೆ ನಮ್ಮ ಪಾಲಿಗಂತೂ ಅಲ್ಲ. ಅದು ಆರೋಗ್ಯಕರ ಮತ್ತು ಸರ್ವೋಪಯೋಗಿಯಾಗಿರುವ ಬದುಕಿಗೆ ಬೇಕಾಗುವಂಥದ್ದು. ನಮ್ಮ ತಿಳಿವಿನಂತೆ ಧರ್ಮ ಸಹಜವಾಗಿಯೇ ಇರುವಂಥದ್ದು. ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎಂಬುದನ್ನು ನ್ಯೂಟನ್ ಕಂಡು ಹಿಡಿದದ್ದೇ ಹೊರತು ಅದಕ್ಕೆ ಆ ಶಕ್ತಿಯನ್ನು ಕೊಟ್ಟವನೇ ನ್ಯೂಟನ್ ಅಲ್ಲ. ಹಾಗೇ ಧರ್ಮದ ವಿಚಾರವೂ. ಯಾವುದಿಲ್ಲವಾದರೆ ಆ ವಸ್ತುವಿಗೆ ಅಸ್ತಿತ್ವವೇ ಇಲ್ಲವೋ ಅದೇ ಧರ್ಮ. ಸುಡುವ ಶಕ್ತಿ ಇಲ್ಲವಾದರೆ ಬೆಂಕಿ ಎಂದು ಕರೆಯುವಿರೇನು? ಅಚಲವಾಗಿ ನಿಲ್ಲುವ ಶಕ್ತಿ ಇಲ್ಲವಾದರೆ ವಸ್ತುವೊಂದನ್ನು ಜಡವೆನ್ನುವಿರೇನು? ಹಾಗೆಯೇ ಮಾನವನಿಗೂ ಒಂದು ಧರ್ಮವಿದೆ. ಆತನ ಅಸ್ತಿತ್ವದ ಮೂಲವಿರುವುದು ಆತನೊಳಗಿರುವ ಆತ್ಮಶಕ್ತಿಯಿಂದಾಗಿ. ಜೀವಿಯೇ ದೇವನಾಗುವ ಶಕ್ತಿ ಆತನ ಪಾಲಿಗೆ ಧರ್ಮ. ಭಾರತ ಇದನ್ನು ಸವಿಸ್ತಾರವಾಗಿ ಹೇಳುವುದಲ್ಲದೇ ಆ ಅಸ್ತಿತ್ವದ ಪರಿಕಲ್ಪನೆ ಇಲ್ಲದ ಸ್ಥಳವೇ ಇಲ್ಲ ಎಂಬುದನ್ನು ಸಾರಿ ಹೇಳುತ್ತದೆ. ಈಶಾವಾಸ್ಯೋಪನಿಷತ್ತು ‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್’ ಎನ್ನುತ್ತದೆ. ಜಗತ್ತಿನಲ್ಲಿ ಇರುವುದೆಲ್ಲದರಲ್ಲೂ ಈಶನೇ ಇದ್ದಾನೆ ಎಂಬ ನಮ್ಮ ಧರ್ಮದ ಅಡಿಪಾಯವಾಗಿರುವ ವಾಕ್ಯ ಅದು.
ಇವೆಲ್ಲವನ್ನೂ ಸೂಕ್ಷ್ಮವಾಗಿ ಸಂಕಲಿಸಬೇಕೆಂದರೆ, ಬೆಂಕಿಗೆ ಉರಿವ ಗುಣದ ಪರಿಚಯ ಯಾರೂ ಹೇಗೆ ಕಲಿಸಿಕೊಡಬೇಕಿಲ್ಲವೋ, ಕೆಚ್ಚಲಿಗೆ ಬಾಯಿ ಹಾಕಿದರೆ ಹಾಲು ದಕ್ಕುವುದೆಂಬ ಪಾಠವನ್ನು ಕರುವಿಗೆ ಯಾರೂ ಹೇಳಿಕೊಡಬೇಕಿಲ್ಲವೋ, ಹಾಗೆಯೇ ಮಾನವನೊಳಗಿನ ಮಾಧವತ್ವದ ಪರಿಚಯವೂ ಕೂಡ. ಹೀಗಾಗಿ ಧರ್ಮಕ್ಕೆ ಮೂಲಪುರುಷರಿರುವುದಿಲ್ಲ. ಆದರೆ, ಆ ಮಾಧವನನ್ನು ಅರಸುವ ಮಾರ್ಗ ಅದನ್ನು ಮತ-ಪಂಥ ಎಂದು ಗುರುತಿಸುವುದಾದರೆ, ಇರುವ ಅಸಂಖ್ಯ ಮಾರ್ಗಗಳಲ್ಲಿ ಒಂದೊಂದನ್ನು ಪರಿಚಯಿಸುವ ಭಿನ್ನ-ಭಿನ್ನ ಗುರುಗಳೋ ಸಂದೇಶವಾಹಕರೋ ಸಂತರೋ ಮುನಿಗಳೋ ಪ್ರವಾದಿಗಳೋ ಇರುತ್ತಾರೆ. ಅವರು ಮಾರ್ಗವನ್ನು ತೋರಬಲ್ಲರು. ಅದು ಮೂಲಧರ್ಮದೆಡೆಗೆ ನಮ್ಮನ್ನು ಕರೆದುಕೊಂಡು ಹೋಗಬಹುದು.
ಸ್ವಲ್ಪ ಗೊಂದಲವೆನಿಸಿದರೆ ಸರಳವಾಗಿ ತಿಳಿಹೇಳುವ ಪ್ರಯತ್ನ ಮಾಡುತ್ತೇನೆ. ವಿಜ್ಞಾನದಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಎಂಬೆಲ್ಲಾ ವಿಭಾಗಗಳಿವೆ. ಭೌತಶಾಸ್ತ್ರವನ್ನು ಕಂಡು ಹಿಡಿದವನ್ಯಾರು ಎಂಬ ಪ್ರಶ್ನೆ ಕೇಳಿದರೆ ಉತ್ತರ ಕೊಡಲಾದೀತೇನು? ಆದರೆ ಆ ಭೌತಶಾಸ್ತ್ರದಲ್ಲಿ ಭಿನ್ನ ಭಿನ್ನ ಮಾರ್ಗಗಳಲ್ಲಿ ನಡೆದ ವಿಜ್ಞಾನಿಗಳ ಹೆಸರನ್ನು ಹೇಳಬಹುದು. ಬೃಹತ್ಕಾಯಗಳ ಕುರಿತಂತೆ ಅಧ್ಯಯನ ಮಾಡಿದ ನ್ಯೂಟನ್, ಸೂಕ್ಷ್ಮಕಾಯಗಳ ಕುರಿತಂತೆ ಚರ್ಚಿಸಿದ ಮ್ಯಾಕ್ಸ್ ಪ್ಲಾಂಕ್, ಸಸ್ಯಗಳಲ್ಲಿರುವ ಜೈವಿಕ ಲಕ್ಷಣಗಳನ್ನು ಗುರುತಿಸಲು ಪ್ರಯತ್ನಿಸಿದ ಜಗದೀಶ ಚಂದ್ರಬೋಸ್ ಹೀಗೆ ಇನ್ನೂ ಅನೇಕರು. ಮೂಲವಿಜ್ಞಾನಕ್ಕೆ ಮೂಲಪುರುಷರಿರುವುದಿಲ್ಲ. ಅದರೊಳಗಿನ ಶಾಖೆಗಳಿಗೆ ಹೆತ್ತವರಿರುತ್ತಾರೆ. ಹಿಂದೂಧರ್ಮ ಮೂಲವಿಜ್ಞಾನದಂತೆ. ಎಲ್ಲರ ಕೊನೆಯ ಗುರಿ ಏನಾಗಿರಬೇಕೋ ಅದನ್ನು ಸೂಚಿಸುವುದು ಈ ಧರ್ಮ. ಹೀಗಾಗಿಯೇ ಇದಕ್ಕೆ ಮೂಲಪುರುಷರು ಇಲ್ಲ. ಇದು ಹೆಮ್ಮೆಯ ಸಂಗತಿಯೇ. ನಾಚಿ ತಲೆತಗ್ಗಿಸಬೇಕಾದ್ದಲ್ಲ.
ರಿಲಿಜನ್ ಎನ್ನುವುದು ಪದಶಃ ಅರ್ಥವೇ ಹೇಳುವಂತೆ ಕಾಣದ ಶಕ್ತಿಯೊಂದರ ಮೇಲೆ ನಂಬಿಕೆ ಮತ್ತು ಅದರ ಪೂಜೆ. ಧರ್ಮ ಹಾಗಲ್ಲ. ಇದರ ಮೂಲಭೂತ ಅರ್ಥವೇ ಯಾವುದು ನಮ್ಮನ್ನು ಧರಿಸಿದೆಯೋ ಅದು ಧರ್ಮ. ಧರ್ಮ ಬಲು ವಿಸ್ತಾರವಾದ ಅರ್ಥವುಳ್ಳದ್ದು. ರಿಲಿಜನ್ ಇಲ್ಲದೇ ನಾವೆಲ್ಲ ಬದುಕಿಯೇಬಿಡಬಹುದು. ಆದರೆ ಧರ್ಮವಿಲ್ಲದೇ ಬದುಕಲಾರೆವು.
ರಿಲಿಜನ್ ಎನ್ನುವುದು ನಂಬಿಕೆಯ ಪ್ರಶ್ನೆಯಾದರೆ ಧರ್ಮ ಅನುಭವದ ಆಧಾರದ ಮೇಲೆ ನಿಂತಿರುವಂಥದ್ದು. ಹಿಂದೂಧರ್ಮ ಹುಡುಕಾಟದ ಆಧಾರದ ಮೇಲೆ ನಿಂತಿದೆ. ದೇವರೆಂಬುವವನು ಇರುವನಾದರೆ ಅವನು ಪಕ್ಷಪಾತಿಯಾಗಿರಲು ಸಾಧ್ಯವಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಸಮದರ್ಶಿಯಾಗಿರಬೇಕು. ಹಾಗಿದ್ದಮೇಲೆ ಆತ ಕಾಣದೇ ಬಚ್ಚಿಟ್ಟುಕೊಳ್ಳುವಂತೆಯೂ ಇಲ್ಲ. ಹಿಂದಿನವರು ಅವನನ್ನು ಕಂಡಿರುವುದು ನಿಜವಾದರೆ ಇಂದಿನವರು ಕಾಣಲು ಸಾಧ್ಯವಾಗಲೇಬೇಕು, ಮುಂದಿನವರೂ ಅವನನ್ನು ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ಇದು ನಮ್ಮೆಲ್ಲರ ಮೂಲ ಚಿಂತನೆ. ರಿಲಿಜನ್ ಹಾಗಲ್ಲ. ಅಲ್ಲಿ ಒಬ್ಬ ಹೇಳಿದ್ದನ್ನು ಉಳಿದವರು ಶ್ರದ್ಧೆಯಿಂದ ಸ್ವೀಕಾರ ಮಾಡಿ ಒಪ್ಪಿಕೊಳ್ಳಬೇಕು ಅಷ್ಟೇ. ತನ್ನನ್ನು ದೇವರ ಮಗನೆಂದು ಕರೆದುಕೊಂಡವನೊಬ್ಬ ಉಪ್ಪು ಸಿಹಿಯಾಗಿರುತ್ತದೆ ಎಂದರೆ ಆತನ ಅನುಯಾಯಿಗಳೆಲ್ಲ ಉಪ್ಪನ್ನು ಸಿಹಿ ಎಂದೇ ಹೇಳಬೇಕು. ಪಶ್ಚಿಮದ ರಿಲಿಜನ್‌ಗಳ ಮಿತಿಯೇ ಇದು. ಕೋಪರ್ನಿಕಸ್ ಮತ್ತು ಗೆಲಿಲಿಯೋ ಸೂರ್ಯನನ್ನು ಭೂಮಿ ಸುತ್ತು ಹಾಕುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಉದ್ಘೋಷಿಸಲಾಗದೇ ಹೆಣಗಾಡಿದ್ದು ರಿಲಿಜನ್‌ಗಳ ಈ ಮಿತಿಯಿಂದಾಗಿಯೇ. ಈ ಮಿತಿ ಅವರಿಗೆ ಅದೆಷ್ಟಿದೆ ಎಂದರೆ ಸಾಮಾನ್ಯರು ಕೇಳಬಹುದಾದ ಅನೇಕ ಪ್ರಶ್ನೆಗಳಿಗೆ ಅವರು ಉತ್ತರಿಸುವುದು ಕಷ್ಟವಷ್ಟೇ ಅಲ್ಲ, ಅಸಾಧ್ಯವೂ ಕೂಡ. ಪ್ರವಾದಿಯೊಬ್ಬ ತನ್ನನ್ನು ದೇವರ ಮಗ ಎಂದು ಕರೆದುಕೊಂಡರೆ ಒಪ್ಪಬಹುದು ನಿಜ. ಆದರೆ ದೇವರಿಗೆ ಆತನೊಬ್ಬನೇ ಏಕೆ ಮಗ? ಉಳಿದವರೆಲ್ಲಾ ಏಕೆ ಅಲ್ಲ? ಎಂಬ ಪ್ರಶ್ನೆಗೆ ಉತ್ತರವಿದೆಯೇನು?! ಹೋಗಲಿ, ನಮ್ಮೆಲ್ಲರನ್ನೂ ಆತ ಮಕ್ಕಳೆಂದೇ ಭಾವಿಸುವುದಾದರೆ ಆತನಿಗೆ ಹೇಳಿದ ಸತ್ಯಗಳನ್ನು ನಮ್ಮೊಂದಿಗೇಕೆ ಹಂಚಿಕೊಳ್ಳಲಾರ? ಹಾಗೆಯೇ, ಆತ ಎಲ್ಲರೊಂದಿಗೂ ಈ ಸತ್ಯವನ್ನು ಹಂಚಿಕೊಳ್ಳುತ್ತಾನೆಂದರೆ ಮತ್ತೊಬ್ಬ ಪ್ರವಾದಿ ನಾನೇ ಕೊನೆಯವನು ಎಂದದ್ದಾದರೂ ಏಕೆ? ಹೋಗಲಿ, ದೇವರ ಕುರಿತಾದ ಪುಸ್ತಕ ಒಂದೇ ಇರುವುದು ಹೇಗೆ ಸಾಧ್ಯ? ತನ್ನ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲವಾಗಿ ದೇವರೂ ಖಾಲಿಯಾಗಿಬಿಟ್ಟನೇ? ಈ ಪ್ರಶ್ನೆಯನ್ನು ನಾವ್ಯಾರೂ ಕೇಳುವಂತೆಯೇ ಇಲ್ಲ. ಏಕೆಂದರೆ ಇದು ನಂಬಿಕೆಯ ಪ್ರಶ್ನೆ. ಆದರೆ ವಿಜ್ಞಾನ ಹೀಗೆ ಕುರುಡು ನಂಬಿಕೆಯ ಮೇಲೆ ನಡೆಯುವಂಥದ್ದಲ್ಲ. ಪ್ರಶ್ನೆಗಳಿಲ್ಲದೇ ಯಾವುದನ್ನೂ ಒಪ್ಪಿಕೊಳ್ಳಲು ವಿಜ್ಞಾನ ಸಮ್ಮತಿಸುವುದಿಲ್ಲ. ಹೀಗಾಗಿಯೇ ವಿಜ್ಞಾನದ ಮೂಸೆಯಲ್ಲಿ ಚೆನ್ನಾಗಿ ಪರೀಕ್ಷಿಸಬಹುದಾದದ್ದು ಧರ್ಮ ಮಾತ್ರ, ರಿಲಿಜನ್ ಅಲ್ಲ. ಹೀಗಾಗಿಯೇ ಹಿಂದೂಧರ್ಮದ ಕುರಿತು ನೀವು ಪ್ರಶ್ನೆಗಳನ್ನು ಕೇಳಬಹುದು. ರಿಲಿಜನ್ ಕುರಿತು ಕೇಳಿದರೆ ‘ಸರ್ ತನ್ ಸೆ ಜುದಾ’ ಅಷ್ಟೇ!

ನಂಬಿಕೆಗೆ ಕೆಲವೊಂದು ದೌರ್ಬಲ್ಯಗಳಿವೆ. ಅದನ್ನು ಕಾಪಾಡಿಕೊಳ್ಳಲು ನಂಬುವವರ ಸಂಖ್ಯೆ ದೊಡ್ಡದ್ದಾಗಿರಬೇಕು ಮತ್ತು ಆ ನಂಬಿಕೆಯನ್ನು ವಿರೋಧಿಸುವವರನ್ನು ಕೊಲ್ಲುವ ಕ್ರೌರ್ಯ ಅವರಲ್ಲಿರಬೇಕು. ಇಲ್ಲವಾದರೆ ಕಾಲ ಕಳೆದಂತೆ ಹೊಸ ಪೀಳಿಗೆಯ ಜನ ಹೊಸ ವೈಜ್ಞಾನಿಕ ಅನ್ವೇಷಣೆಗಳೊಂದಿಗೆ ಈ ಹಳೆಯ ಚಿಂತನೆಗಳನ್ನು ಪ್ರಶ್ನಿಸಲಾರಂಭಿಸುತ್ತಾರೆ. ಸಹಜವಾಗಿಯೇ ಉತ್ತರ ಸಿಗದೇ ಹೋದಾಗ ಅದನ್ನು ಧಿಕ್ಕರಿಸುತ್ತಾರೆ ಕೂಡ. ಸಂಖ್ಯೆ ದೊಡ್ಡದ್ದಾಗಿದ್ದರೆ, ಭಯೋತ್ಪಾದನೆ ನಡೆಸುವ ಸಾಮರ್ಥ್ಯವಿದ್ದರೆ ಇಂತಹ ಪೃಚ್ಛಕರನ್ನು ಬೆದರಿಸಿಯೇ ಕೂರಿಸಬಹುದು. ಅನೇಕ ರಿಲಿಜನ್‌ಗಳು ಈ ಕಾರಣಕ್ಕಾಗಿಯೇ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ, ಅದನ್ನು ಕಾಯ್ದುಕೊಳ್ಳಲು ಬೆದರಿಸುವ ಧಾವಂತಕ್ಕೆ ಬಿದ್ದಿರೋದು. ಹಿಂದೂಧರ್ಮ ಇದಕ್ಕೆ ತದ್ವಿರುದ್ಧ. ಸುಳ್ಳು ಸತ್ಯವೆನಿಸಿಕೊಳ್ಳಲು ಅದರ ಹಿಂದೆ ನೂರಾರು ಮಂದಿ ಬೇಕು. ಆದರೆ ಸತ್ಯ ಒಂಟಿಯಾಗಿಯೂ ಸತ್ಯವೇ. ಹಿಂದೂಧರ್ಮ ಇಂತಹ ಸತ್ಯದ ಹುಡುಕಾಟದಲ್ಲಿ ನಿರತವಾಗಿರುವಂಥದ್ದು. ಈ ಸತ್ಯವನ್ನು ದರ್ಶಿಸಿದ ದೃಷ್ಟಾರ ಋಷಿಯಾಗುತ್ತಾನಲ್ಲದೇ, ತಾನು ಸಾಗಿದ ಹಾದಿಯಲ್ಲಿಯೇ ಇತರರೂ ಸಾಗಿ ಈ ಅನುಭವಗಳನ್ನು ತಮ್ಮದಾಗಿಸಿಕೊಳ್ಳಬಹುದೆಂದು ಘಂಟಾಘೋಷವಾಗಿ ಸಾರುತ್ತಾನೆ. ಹಾಗಂತ ಇಲ್ಲೆಲ್ಲಾ ನಂಬಿಕೆಗೆ ಅವಕಾಶವೇ ಇಲ್ಲವೆಂದಲ್ಲ. ಎಲ್ಲ ಶ್ರೇಷ್ಠ ಕಾರ್ಯಗಳೂ ಆರಂಭವಾಗುವುದು ಈ ಶ್ರದ್ಧೆಯಿಂದಲೇ. ಆದರೆ ಶ್ರದ್ಧೆಯೊಂದೇ ಗುರಿಮುಟ್ಟಲು ಸಾಲದು. ನಿರಂತರವಾದ ಸಾಧನೆಯೂ ಬೇಕು. ನಾನು ಬೆಟ್ಟ ಹತ್ತಬಲ್ಲೆ ಎಂಬ ವಿಶ್ವಾಸ ಬೇಕು ನಿಜ. ಆದರೆ ಆನಂತರ ಹತ್ತುವ ಕೆಲಸವಾಗಬೇಕಲ್ಲ. ಹಿಂದೂಧರ್ಮ ಇವೆರಡನ್ನೂ ಸೂಕ್ತವಾಗಿ ಜೋಡಿಸಿಕೊಡುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿ ವ್ಯಕ್ತಿ ತನ್ನ ತಾನರಿಯುವ ಪ್ರಯತ್ನಕ್ಕೆ ಹೆಚ್ಚು ಮೌಲ್ಯ. ಆತ ದೊಂಬಿ ಕಟ್ಟಿಕೊಂಡು ಮೋಕ್ಷದ ಹಾದಿಯಲ್ಲಿ ನಡೆಯುವುದಿಲ್ಲ. ತಾನೊಬ್ಬನೇ ತನ್ನಂತರಂಗವನ್ನು ಪರೀಕ್ಷಿಸುತ್ತಾ ಭಗವತ್ಸಾಕ್ಷಾತ್ಕಾರಕ್ಕೆ ಸಿದ್ಧನಾಗುತ್ತಾನೆ. ಬಹುಶಃ ಈಗ ಎಲ್ಲ ವಿಚಾರಗಳೂ ಸ್ಪಷ್ಟವಾಗಿರಬೇಕು. ಹಿಂದೂಧರ್ಮದಲ್ಲಿ ಮತಾಂತರ ಮಾಡುವ ಉದ್ದೇಶ ನಮಗಿಲ್ಲ ಏಕೆಂದರೆ ಸತ್ಯವನ್ನು ಸಮರ್ಥಿಸಿಕೊಳ್ಳಲು ದೊಂಬಿ ಬೇಕಿಲ್ಲ. ಹಿಂದೂಧರ್ಮ ವಾರದಲ್ಲಿ ಒಂದೇ ದಿನ, ಒಂದೆಡೆ ಕಡ್ಡಾಯವಾಗಿ ಪ್ರಾರ್ಥನೆ ನಡೆಸಬೇಕೆಂದು ತಾಕೀತು ಮಾಡುವುದಿಲ್ಲ ಏಕೆಂದರೆ ಹಿಂದೂಧರ್ಮದ ಗುರಿ ಆತ್ಮನಿರೀಕ್ಷಣೆಯ ಮೂಲಕ ಪರಮಾತ್ಮನ ತಲುಪುವುದು ಮಾತ್ರ. ಹೀಗಾಗಿ ಎಲ್ಲ ರಿಲಿಜನ್‌ಗಳಿಗಿಂತಲೂ ಭಿನ್ನವಾದ್ದು ಹಿಂದೂಧರ್ಮ.
ಪ್ರಶ್ನೆ ಕೇಳುವವರು ಕೇಳುತ್ತಾರೆ, ಚರ್ಚೆಗೆ ಬರದೇ ಪಲಾಯನ ಮಾಡುತ್ತಾರೆ. ಹಿಂದೂಧರ್ಮದವನು ಮಾತ್ರ ಹೆಮ್ಮೆಯಿಂದ ನಿಲ್ಲುತ್ತಾನೆ, ಏಕೆಂದರೆ ಸತ್ಯಕ್ಕೆ ಭೀತಿಯಿಲ್ಲ!