ಇದನ್ನೇ ವಿಪರ್ಯಾಸ ಅನ್ನೋದು. ಭಾರತ್ ಜೊಡೊ ಎಂದು ಪಾದಯಾತ್ರೆ ಮಾಡಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿಗರು ಎಂದೂ ಹೆಮ್ಮೆಯಿಂದ ಸರದಾರ್ ಪಟೇಲರನ್ನು ಸ್ಮರಿಸಿಕೊಳ್ಳಲೇ ಇಲ್ಲ. ಅತ್ತ ಪಟೇಲರು ಕಾಂಗ್ರೆಸ್ಸಿನ ನಾಯಕರಾದರೂ ಅವರು ಈಗಿನ ಭಾರತ ನಿರ್ಮಿಸಿಕೊಟ್ಟ ಸಂಭ್ರಮ ಇರೋದು ಬಿಜೆಪಿಗರಿಗೆ. ನರೇಂದ್ರಮೋದಿ ಬರುವವರೆಗೂ ಪಟೇಲರ ಸ್ಮರಣೆ ವ್ಯಾಪಕವಾಗಿ ಭಾರತದಲ್ಲಿ ನಡೆಯಲೇ ಇಲ್ಲ. ಈಗ ಕಾಂಗ್ರೆಸ್ಸಿಗರು ಭಾರತವನ್ನು ಜೋಡಿಸಲು ಪಾದಯಾತ್ರೆ ನಡೆಸಿದ್ದರೆ ಮೋದಿ ಪಟೇಲರ ಗೌರವಕ್ಕೆಂದು ಎಲ್ಲೆಡೆ ಏಕತಾ ಓಟವನ್ನೇ ನಡೆಸುವಂತೆ ಪ್ರೇರೇಪಿಸಿರುವುದು ಅವರ ಆಲೋಚನೆಗಳು ಇವರಿಗಿಂತ ಎಷ್ಟೊಂದು ಮುಂದಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಕಾಂಗ್ರೆಸ್ಸಿಗರ ದೈನೇಸಿ ಸ್ಥಿತಿ ಎಂಥದ್ದೆಂದರೆ ಅವರು ತಮ್ಮ ಪಕ್ಷದವರೇ ಆಗಿದ್ದ ಪಟೇಲರನ್ನು ಹೆಮ್ಮೆಯಿಂದ ಸಂಭ್ರಮಿಸಲೂ ಆಗದಂತಾಗಿದ್ದಾರೆ.
ಇರಲಿ, ದೇಶವನ್ನು ಒಗ್ಗೂಡಿಸುವ ಪಟೇಲರ ಸಾಹಸ ಸಾಮಾನ್ಯವಾದ್ದಾಗಿರಲಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶ ವಿಭಜನೆಯ ನೆಹರೂ-ಜಿನ್ನಾ ಆಲೋಚನೆಗೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಸಂದಿಗ್ಧ ಬಂದಿತ್ತು. ಆದಷ್ಟೂ ಅದನ್ನು ಮುಂದೆ ತಳ್ಳುವ ಪ್ರಯತ್ನವನ್ನು ಪಟೇಲರು ಮಾಡಿದರಾದರೂ ಕೊನೆಗೂ ಬಾಗಬೇಕಾಯ್ತು. ಉಳಿದವರೆಲ್ಲ ಸ್ವತಂತ್ರ ಭಾರತದ ಪ್ರಮುಖ ಹುದ್ದೆಯನ್ನಲಂಕರಿಸುವ ಕನಸು ಕಾಣುತ್ತಿದ್ದರೆ, ಪಟೇಲರು ಭಾರತ ಭೂಪಟವನ್ನು ನಿರ್ಮಿಸುವ ಧಾವಂತದಲ್ಲಿದ್ದರು. ಖಂಡಿತ ಹೌದು. ಭಾರತ ಬ್ರಿಟೀಷರ ಆಗಮನದ ನಂತರವೇ ರಾಷ್ಟ್ರವಾಯ್ತು ಎಂದು ಕೆಲವರು ಮೂರ್ಖರು ಹೇಳಿಕೊಳ್ಳುವುದಿದೆ. ಮೌರ್ಯರ, ಗುಪ್ತರ, ಮರಾಠರ ಕಾಲದ ಸಾಮ್ರಾಜ್ಯಗಳೆಲ್ಲ ಇಡಿಯ ಭಾರತವನ್ನು ಒಂದುಗೂಡಿಸಿತ್ತು. ಬ್ರಿಟೀಷರು ಬರದೇ ಹೋಗಿದ್ದರೆ ಮೊಘಲ್ ಶಾಹಿಯನ್ನು ಮೆಟ್ಟಿನಿಂತು ಭಾರತದ ಪುನರ್ ನಿರ್ಮಾಣ ಮಾಡಿದ ಕೀರ್ತಿ ಮರಾಠರ ತೆಕ್ಕೆಗೆ ಹೋಗಿರುತ್ತಿತ್ತು. ಪ್ರತೀ ಬಾರಿ ದೇಶ ಸಂಕಟಕ್ಕೆ ಸಿಲುಕಿದಾಗಲೆಲ್ಲ ಅದರೊಳಗಿಂದಲೇ ಶಕ್ತಿಯೊಂದು ಜಾಗೃತವಾಗಿ ಬಂದು, ಅದನ್ನು ಪುನರ್ ರೂಪಿಸುವ ಘಟನೆಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಆದರೆ ಎಡಪಂಥೀಯರ ವಾದವೇನೆಂದರೆ ಬ್ರಿಟೀಷರ ಆಗಮನದ ಮುನ್ನ ಭಾರತ ರಾಜ್ಯಗಳಾಗಿ ಹಂಚಿಹೋಗಿದ್ದು ಸಮಗ್ರ ಭಾರತದ ಕಲ್ಪನೆ ಯಾರಿಗೂ ಇರಲಿಲ್ಲ ಅಂತ. ಅಚ್ಚರಿಯೇನು ಗೊತ್ತೇ? ಬ್ರಿಟೀಷರು ಭಾರತವನ್ನು ಬಿಡುವಾಗಲೂ ಈ ದೇಶದಲ್ಲಿ ರಾಜ-ರಜವಾಡೆಗಳಿಗೆ ಕೊರತೆಯಿರಲಿಲ್ಲ. ಹೀಗಾಗಿಯೇ ಸ್ವಾತಂತ್ರ್ಯ ಬಂದೊಡನೆ ಪಟೇಲರಿಗಿದ್ದ ಸವಾಲೇನೆಂದರೆ 565ರಷ್ಟು ರಾಜ ಮನೆತನಗಳನ್ನು ಮತ್ತು ಅವರ ಪಾಲಿನ ಸಾಮ್ರಾಜ್ಯವನ್ನು ಭಾರತದೆಡೆಗೆ ಸೆಳೆದುಕೊಳ್ಳುವುದಾಗಿತ್ತು. ಮೌಂಟ್ ಬ್ಯಾಟನ್ನಿನೊಂದಿಗೆ ನೆಹರೂಗೆ ಮತ್ತು ಪಟೇಲರಿಗಿದ್ದ ಸಂಬಂಧಗಳು ಬೇರೆ-ಬೇರೆಯೇ. ಪಟೇಲರು ಮುತ್ಸದ್ದಿಯಂತೆಯೇ ಅವನೊಂದಿಗೆ ವ್ಯವಹರಿಸುತ್ತಿದ್ದರು. ಹೀಗಾಗಿ ಸ್ಪಷ್ಟ ಮಾತುಗಳಲ್ಲಿ ಸ್ವಾತಂತ್ರ್ಯ ಎಂಬ ಹಣ್ಣಿನ ಬುಟ್ಟಿಯನ್ನು ನನಗೆ ಕೊಡುವಾಗ 565ಕ್ಕಿಂತ ಒಂದೇ ಸೇಬುಹಣ್ಣು ಕಡಿಮೆಯಿದ್ದರೂ ಸ್ವೀಕರಿಸಲಾರೆ ಎಂದುಬಿಟ್ಟಿದ್ದರು. ಹಾಗಂತ ಅವನ ಮೇಲೆ ಭಾರ ಹೊರೆಸಿ ಸುಮ್ಮನಾಗಲಿಲ್ಲ. ತಾವೇ ಭಿನ್ನ-ಭಿನ್ನ ಸ್ವರೂಪದಲ್ಲಿ ಇವರನ್ನು ಒಲಿಸಿಕೊಳ್ಳುವ ಕಾರ್ಯಕ್ಕೆ ಮುಂದೆ ನಿಂತರು. ಸಮಸ್ಯೆಗಳೇನು ಕಡಿಮೆಯಿರಲಿಲ್ಲ. ಭೋಪಾಲದ ನವಾಬ ಮೊದಲಿಗೆ ಬಂಡಾಯ ಬಾವುಟ ಬೀಸಿ ಸ್ವತಂತ್ರವಾಗಿರುತ್ತೇನೆಂದರೆ, ತಿರುವಾಂಕುರಿನ ದಿವಾನ ಒಂದು ಹೆಜ್ಜೆ ಮುಂದೆಹೋಗಿ ಪಾಕಿಸ್ತಾನದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿ ಮಾಡಲು ಅಧಿಕಾರಿಯನ್ನು ನೇಮಿಸುವ ಮಾತನಾಡಿದ. ಬಿಕಾನೇರ್, ಪಟಿಯಾಲ, ಜೈಪುರ, ಜೋಧ್‌ಪುರಗಳ ಅರಸರು ಭಾರತದೊಂದಿಗೆ ಇರಬಯಸಿದರು. ಮೌಂಟ್ ಬ್ಯಾಟನ್ ಒಳಗೊಳಗೇ ಸಂಭ್ರಮಿಸಿರಲು ಸಾಕು. ತಾವು ಬಿಟ್ಟುಹೋದಾಗ ಭಾರತ ಛಿದ್ರ ಛಿದ್ರವಾಗುವುದನ್ನು ನೋಡಿ ಆನಂದಿಸಬೇಕಿತ್ತು; ಭಾರತೀಯರಿಗೆ ಆಳುವ ಸಾಮರ್ಥ್ಯವಿಲ್ಲ, ಆಳಿಸಿಕೊಳ್ಳುವ ಯೋಗ್ಯತೆಯಷ್ಟೆ ಎಂಬುದನ್ನು ಸಾಬೀತುಪಡಿಸಬೇಕಿತ್ತು. ಸರದಾರರು ಅವನ ಆಕಾಂಕ್ಷೆಗಳಿಗೆ ತಣ್ಣೀರೆರೆಚಿಬಿಟ್ಟರು!
ಅವರ ಶೈಲಿ ಗಾಂಧಿಯದ್ದೋ, ನೆಹರೂವಿನದ್ದೋ ಅಥವಾ ಈಗಿನ ಮನಮೋಹನ್, ಅರವಿಂದ್ ಕೇಜ್ರಿವಾಲ್‌ಗಳದ್ದೋ ಅಲ್ಲ. ಪಾಕಿಸ್ತಾನ ಏನು ಕೊಡುವೆನೆನ್ನುತ್ತದೆಯೋ ಅದಕ್ಕಿಂತ ಹೆಚ್ಚಿನದ್ದನ್ನು ಈ ರಾಜರುಗಳಿಗೆ ನೀಡುವೆನೆನ್ನುತ್ತಾ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ತುಷ್ಟೀಕರಣದ ನೀತಿಯಲ್ಲ. ರಾಜರುಗಳ ಆತ್ಮಗೌರವಕ್ಕೆ ಬೆಲೆಕೊಟ್ಟು, ಪ್ರೀತಿಯಿಂದ ಕೇಳುತ್ತಾ ಅಗತ್ಯಬಿದ್ದರೆ ಅವರನ್ನು ಬೆದರಿಸಿಯೂ ಬಗ್ಗಿಸುವ ಅಕ್ಷರಶಃ ಭಾರತೀಯ ವಿಚಾರಧಾರೆ, ಥೇಟು ನರೇಂದ್ರಮೋದಿಯಂತೆ. ಆಗಸ್ಟ್ 15ಕ್ಕೆ ಭಾರತ ಸ್ವತಂತ್ರಗೊಳ್ಳಬೇಕು. ಪಟೇಲರು ಮೇ ತಿಂಗಳಲ್ಲೇ ಜೋಧ್‌ಪುರದ, ನವನಗರದ, ಪಟಿಯಾಲದ, ಕಾಥಿಯಾವಾಡದ ರಾಜರುಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಅವರು ಬಂದಿದ್ದಾರೆಂದು ಗೊತ್ತಾದಾಗ ತಾವೇ ಬಾಗಿಲ ಬಳಿ ಬಂದು ಗೌರವದಿಂದ ಸ್ವಾಗತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾ ಭಾರತದೊಂದಿಗೆ ವಿಲೀನಗೊಳಿಸುವ ಮಾತುಕತೆಯಾಡುತ್ತಿದ್ದರು. ಅವರ ಮಾತಿನ ಪ್ರಭಾವ ಹೇಗಿತ್ತೆಂದರೆ ಭಾರತದೊಂದಿಗೆ ಸೇರಿಕೊಳ್ಳುವ ಮೊದಲ ಸುದ್ದಿಯನ್ನು ಯಾರು ನೀಡಬೇಕೆಂಬ ಆತುರ. ಗ್ವಾಲಿಯರ್‌ನ ರಾಜ ಪತ್ರಕ್ಕೆ ಸಹಿ ಮಾಡಿದ ಮೊದಲ ರಾಜನೆನಿಸಿಕೊಂಡ. ಆ ವಿಚಾರವನ್ನು ಮುಂದಿಟ್ಟುಕೊಂಡು ಪಟೇಲರು ಒಂದಾದಮೇಲೊಂದರಂತೆ ಎಲ್ಲ ರಾಜರುಗಳನ್ನೂ ಸೆಳೆದುಕೊಳ್ಳಲಾರಂಭಿಸಿದರು. ‘ಇಂಡಿಯಾ ಇಂಡಿಪೆಂಡೆನ್ಸ್ ಆ್ಯಕ್ಟ್‌ನ ಪ್ರಕಾರ ಆಗಸ್ಟ್ 15ಕ್ಕೆ ಎಲ್ಲ ರಾಜ್ಯಗಳೂ ಮುಕ್ತಗೊಳ್ಳುತ್ತವೆ. ತಾಂತ್ರಿಕವಾಗಿ, ಕಾನೂನುಬದ್ಧವಾಗಿ ಅವು ಸ್ವತಂತ್ರವಾಗಿಬಿಡುತ್ತವೆ. ಬ್ರಿಟೀಷರು ಹೊರಟೊಡನೆ ಉಂಟಾಗಬಹುದಾದ ಉತ್ಪಾತ ಮೊದಲು ಬಲಿ ತೆಗೆದುಕೊಳ್ಳುವುದು ರಾಜ್ಯಗಳನ್ನೇ. ಭೌಗೋಳಿಕ ಇತಿ-ಮಿತಿಗಳನ್ನು ಗಮನದಲ್ಲಿರಿಸಿಕೊಂಡು ಅವರು ಸೂಕ್ತ ನಿರ್ಣಯ ಕೈಗೊಳ್ಳುವುದೊಳಿತು ಮತ್ತು ಆಗಸ್ಟ್ 15ರೊಳಗೆ ವಿಲೀನಗೊಂಡರೆ ಸರಿಯಾದೀತು’ ಎಂದೂ ಹೇಳಿದ್ದರು. ಈ ಮಾತುಗಳನ್ನು ಎಚ್ಚರಿಕೆ ಎನ್ನುವಿರೋ, ತಿಳಿವಳಿಕೆ ಎನ್ನುವಿರೋ ಅಥವಾ ಪುಸಲಾಯಿಸುವ ರೀತಿ ಎನ್ನುವಿರೋ, ಪಟೇಲರು ಎಲ್ಲವನ್ನೂ ಮಾಡಿದರು. ಆಗಸ್ಟ್ 15ರ ವೇಳೆಗೆ ಈ ಮನುಷ್ಯನ ಪ್ರಭಾವಕ್ಕೆ ಒಳಗಾಗಿ ಹೈದರಾಬಾದು, ಕಾಶ್ಮೀರದಂತಹ ಎರಡು ಸೇಬು ಮತ್ತು ಜುನಾಗಢದಂತಹ ಪೀಚುಕಾಯಿಯೊಂದನ್ನು ಬಿಟ್ಟರೆ ಉಳಿದೆಲ್ಲವೂ ಭಾರತದ ತೆಕ್ಕೆಯಲ್ಲೇ ಇತ್ತು. ನಿಜಕ್ಕೂ ಭಾರತ್ ಜೊಡೊ ಪಟೇಲರು ಅಂದೇ ಮಾಡಿಬಿಟ್ಟಿದ್ದರು.
ಹಾಗಂತ ಕಾಂಗ್ರೆಸ್ಸಿಗರು ಬಡಾಯಿ ಕೊಚ್ಚಿಕೊಳ್ಳುವಂತಯೇ ಇಲ್ಲ. ರಾಹುಲನ ಮುತ್ತಜ್ಜ ನೆಹರೂಗೆ ಈ ಜವಾಬ್ದಾರಿಯನ್ನು ವಹಿಸಿದ್ದಿದ್ದರೆ ಇಂದು ಪಾಕಿಸ್ತಾನದಷ್ಟು ಪುಟ್ಟ ಭಾರತವಿರುತ್ತಿತ್ತು ಮತ್ತು ಭಾರತದಷ್ಟು ಅಗಾಧವಾದ ಪಾಕಿಸ್ತಾನವಿರುತ್ತಿತ್ತು. ಪುರಾವೆಯಿಲ್ಲದೇ ಈ ಮಾತನ್ನು ಹೇಳುತ್ತಿಲ್ಲ. 562 ರಾಜ್ಯಗಳನ್ನು ಭಾರತದೊಂದಿಗೆ ತಮ್ಮ ಮಾತುಗಳಿಂದಲೇ ವಿಲೀನಗೊಳ್ಳುವಂತೆ ಮಾಡಿದ ಸರದಾರ್ ಪಟೇಲರಿಂದ ನೆಹರೂ ಕಾಶ್ಮೀರವೊಂದನ್ನು ಕಸಿದರು. ಅದನ್ನು ವಿಲೀನಗೊಳಿಸುವ ಹೊಣೆಗಾರಿಕೆ ತನ್ನದ್ದು ಎಂದರು. ಆಗಲೂ ಏಕಾಕಿ ಪಾಕಿಸ್ತಾನದ ಕಡೆಯಿಂದ ದಾಳಿಯಾದಾಗ ರಾಜ ಹರಿಸಿಂಗನಿಂದ ವಿಲೀನಪತ್ರ ಬರದೇ ಭಾರತ ಸಹಾಯ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕಳಿಸಿದ್ದು ಸರದಾರ್ ಪಟೇಲರೇ. ಬಹುಸಂಖ್ಯಾತ ಹಿಂದೂಗಳಿರುವ ಜುನಾಗಢಕ್ಕೆ ಜಿನ್ನಾ ಕೈ ಹಾಕಿದ್ದಕ್ಕೆ ಪಟೇಲರ ಪ್ರತೀಕಾರದ ಕ್ರಮವಾಗಿತ್ತು ಅದು. ಪೂರ್ಣ ಸರದಾರರ ಕೈಯ್ಯಲ್ಲೇ ಇದ್ದಿದ್ದರೆ ಇಂದು ಕಾಶ್ಮೀರದ ಕಿರಿಕಿರಿಯೇ ಇರುತ್ತಿರಲಿಲ್ಲ. ಯುದ್ಧದ ನಟ್ಟನಡುವೆ ನಾವು ಗೆಲುವಿನ ಹೊಸ್ತಿಲಲ್ಲಿದ್ದಾಗಲೇ ನೆಹರೂ ಮಧ್ಯ ಪ್ರವೇಶಿಸಿದರು. ಇಡಿಯ ಪ್ರಕರಣವನ್ನು ವಿಶ್ವಸಂಸ್ಥೆಗೊಯ್ದು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡರು. ಅದು ಪಾಕಿಸ್ತಾನಕ್ಕೆ ವರದಾನವೇ ಆಯ್ತು. ಕಾಶ್ಮೀರವನ್ನು ಮುಂದಿಟ್ಟುಕೊಂಡು ಭಾರತವನ್ನು ಹಳಿಯುವ ಮತ್ತು ಕಾಶ್ಮೀರದ ಮೂಲಕ ಭಾರತದಲ್ಲಿ ನಿರಂತರವಾಗಿ ಭಯೋತ್ಪಾದನೆಯನ್ನು ರಫ್ತು ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಇಂದು ಭಾರತ ಇಸ್ಲಾಂ ಮತಾಂಧತೆಗೆ ಒಳಗಾಗಿ ನರಳುತ್ತಿದೆಯಲ್ಲ, ಬಹುಪಾಲು ಕೊಡುಗೆ ನೆಹರೂರವರದ್ದೇ. ಹೀಗಾಗಿಯೇ ಭಾರತ್ ಜೊಡೊ ಸಂದರ್ಭದಲ್ಲಿ ಎಲ್ಲಿಯಾದರೂ ಕಾಂಗ್ರೆಸ್ಸಿಗರು ಈ ಕಥೆಯನ್ನು ಹೇಳಬಹುದೇ ಎಂದು ಕಾಯುತ್ತ ಕುಳಿತಿದ್ದೆ. ಕೊನೆಯ ಪಕ್ಷ ಭಾಜಪದವರಾದರೂ ಈ ಪ್ರಶ್ನೆಯನ್ನು ಎತ್ತುತ್ತಾರೇನೊ ಎಂದುಕೊಂಡರೆ ಅದೂ ಆಗಲಿಲ್ಲ. ಅಚ್ಚರಿಯೇನು ಗೊತ್ತೇ? ಪಟೇಲರೇನಾದರೂ ಹೈದರಾಬಾದಿನ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯನ್ನು ನೆಹರೂಗೆ ಕೊಟ್ಟುಬಿಟ್ಟಿದ್ದರೆ ಇಂದು ಕರ್ನಾಟಕದ ಪಕ್ಕದಲ್ಲೂ ಒಂದು ಪಾಕಿಸ್ತಾನವಿರುತ್ತಿತ್ತು!
ಪಟೇಲರೇನೋ ಭಾರತವನ್ನು ಈ ರೂಪಕ್ಕೆ ತಂದುಕೊಟ್ಟರು. ನಾವೀಗ ಅಖಂಡ ಭಾರತವನ್ನು ನಿರ್ಮಾಣ ಮಾಡಿ ಪಟೇಲರಿಗೆ ಗೌರವ ಸಲ್ಲಿಸಬೇಕಿದೆ. ಅಖಂಡ ಭಾರತದ ಕನಸು ವ್ಯಾಪಕವಾಗಿ ಕಾಣುವುದಕ್ಕೆ ಒಂದು ಕಾರಣವೂ ಇದೆ. ನಮಗೆಲ್ಲರಿಗೂ ಕಲ್ಪನಾ ದಾರಿದ್ರ್ಯವಿದೆ. 75 ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂದಿಬಿಟ್ಟರೆ ಉಳಿದವರು ಅಖಂಡ ಭಾರತವನ್ನು ತಮ್ಮ ಕನಸೆಂದು ಪರಿಗಣಿಸಲೇ ಇಲ್ಲ. ಅದನ್ನು ಮರೆತುಹೋದ ಇತಿಹಾಸವಾಗಿಸಿಬಿಟ್ಟರು. ಪಾಕಿಸ್ತಾನ-ಬಾಂಗ್ಲಾಗಳು ಖಡ್ಗ ಹಿಡಿದು ಕತ್ತರಿಸಿದ ಭಾರತಮಾತೆಯ ಕೈಗಳು ಎಂದು ಮರೆಯುವುದಾರೂ ಹೇಗೆ? ಆ ದುಃಖಮಯ ಕ್ಷಣಗಳನ್ನು ನೋಡಿದ ಅನೇಕ ಮಂದಿ ಇಂದಿಗೂ ಜೀವಂತವಾಗಿದ್ದಾರಲ್ಲ! ಗಾಂಧಾರವೆಂದು ಕರೆಯಲ್ಪಡುತ್ತಿದ್ದ ಈಗಿನ ಅಫ್ಘಾನಿಸ್ತಾನ ನಮ್ಮಿಂದ ಬೇರೆಯಾದ್ದನ್ನು ನೋಡಿದವರು ಇಂದು ಉಳಿದಿಲ್ಲ ಒಪ್ಪಿಕೊಳ್ಳುವೆ. ಆದರೆ ಪಾಕಿಸ್ತಾನದ ಕಥೆ ಹಾಗಲ್ಲ. ನಮ್ಮ ಭೂಮಿಯನ್ನು ಮತದ ಹೆಸರಲ್ಲಿ ತುಂಡರಿಸಿ ತಮ್ಮದಾಗಿಸಿಕೊಂಡಿದ್ದನ್ನು ಒಪ್ಪಿಕೊಳ್ಳುವುದು ಹೇಗೆ? ಹೀಗಾಗಿಯೇ ಪೀಳಿಗೆಯಿಂದ ಪೀಳಿಗೆಗೆ ಖಡ್ಗ ಹಿಡಿದು ಮತಾಂತರ ಮಾಡಿ, ಅವರನ್ನು ಹಿಂದೂಗಳ ವಿರುದ್ಧವೇ ಎತ್ತಿಕಟ್ಟಿ, ತಮಗಾಗಿ ಪ್ರತ್ಯೇಕ ರಾಷ್ಟ್ರವನ್ನೇ ನಿರ್ಮಿಸಿಕೊಂಡ ಮಂದಿ ಇವರು ಎಂದು ನೆನಪಿಸುತ್ತಿರಬೇಕಲ್ಲ. ಇಲ್ಲವಾದರೆ ಅಫ್ಘಾನಿಸ್ತಾನವೂ ನಮ್ಮದಾಗಿತ್ತು ಎನ್ನುವುದನ್ನೇ ಹೇಗೆ ಮರೆತೇ ಹೋಗಿದ್ದೇವೋ ಅದೇ ರೀತಿ ಪಾಕಿಸ್ತಾನವೂ ಒಂದು ಕಾಲದಲ್ಲಿ ನಮ್ಮ ಭಾಗವಾಗಿತ್ತು ಎಂಬುದನ್ನು ಮುಂದಿನ ಪೀಳಿಗೆಗೆಳು ಮರೆತುಬಿಡುತ್ತವೆ. ಕಳೆದ 75 ವರ್ಷಗಳಿಂದ ಏರುತ್ತಿರುವ ಮುಸಲ್ಮಾನರ ಜನಸಂಖ್ಯೆ, ಹೊರಗಡೆಯಿಂದ ನಿರಾಶ್ರಿತರನ್ನು ಒಳಸೇರಿಸಿಕೊಂಡು ಜನಸಂಖ್ಯಾಂಕಿಯನ್ನು ಬದಲಿಸಲು ಅವರು ಮಾಡುತ್ತಿರುವ ಯತ್ನ, ಇವೆಲ್ಲದರ ಕುರಿತಂತೆ ಮಾತನಾಡುತ್ತಾ ನಾವು ಈಗಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ಹೀನಸ್ಥಿತಿಗೆ ತಲುಪಿಬಿಟ್ಟಿದ್ದೇವೆ. ಅದರರ್ಥ ಪಾಕಿಸ್ತಾನವನ್ನು ಇನ್ನೆಂದಿಗೂ ಕೇಳುವುದಿಲ್ಲ ಎಂದೇ. ಎಲ್ಲಿಯವರೆಗೂ ರಕ್ಷಣಾತ್ಮಕ ನಿಲುವಿನಲ್ಲಿರುತ್ತೇವೆಯೋ ಅಲ್ಲಿಯವರೆಗೂ ನಾವು ನಮ್ಮನ್ನುಳಿಸಿಕೊಳ್ಳಲು ಹೆಣಗಾಡುತ್ತಲೇ ಇರುತ್ತೇವೆ. ಸ್ವಲ್ಪ ಆಕ್ರಮಕವಾಗಿ ಮುನ್ನುಗ್ಗಬೇಕಿದೆ. ಈ ಬಾರಿಯ ಆಕ್ರಮಣ ಭಿನ್ನ ಭಿನ್ನ ಸ್ವರೂಪಗಳಲ್ಲಿ. ಮೊದಲನೆಯದ್ದು ಮಾನಸಿಕವಾಗಿ ಸಮಾಜವನ್ನು ಈ ದಿಕ್ಕಿಗೆ ತಯಾರು ಮಾಡಬೇಕಿದೆ. ಭಾವನಾತ್ಮಕವಾಗಿ ಭಿನ್ನ ಭಿನ್ನ ಕಾರ್ಯಕ್ರಮಗಳ ಮೂಲಕ ಜೋಡಿಸಿ, ಭಾರತದ ವಿಸ್ತಾರವನ್ನು ಮತ್ತೆ ನೆನಪಿಸಬೇಕಿದೆ. ಎರಡನೆಯದ್ದು, ಬೌದ್ಧಿಕವಾಗಿ ಇದಕ್ಕೆ ಬೇಕಾಗಿರುವ ಸರಕು ನಿರ್ಮಾಣ ಮಾಡಿ ಭಾರತದ ಮರುನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಬೇಕಿದೆ. ಮೂರನೆಯದ್ದು, ಅಳಿದುಳಿದಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ದೈನ್ಯ ಮನೋಭಾವವನ್ನು ಕೊಡವಿಕೊಂಡು ಭಾರತದಲ್ಲಿ ಧರ್ಮವನ್ನು ಬಿಟ್ಟುಹೋಗಿರುವವರನ್ನು ಮರಳಿ ತರುವೆವಲ್ಲದೇ ಪಾಕಿಸ್ತಾನದಲ್ಲಿರುವ ಮಂದಿಯನ್ನೂ ಮೂಲಧರ್ಮಕ್ಕೆ ಕರೆದುಕೊಂಡು ಬರುತ್ತೇವೆಂಬ ಆಕ್ರಮಕ ಆಲೋಚನೆಯನ್ನು ಮಾಡಬೇಕಿದೆ. ಜಿಡಿಪಿಯ ದೃಷ್ಟಿಯಿಂದಲೂ ಸಂಪತ್ತಿನ ದೃಷ್ಟಿಯಿಂದಲೂ ಸಾಮರ್ಥ್ಯದ ದೃಷ್ಟಿಯಿಂದಲೂ ಭಾರತದ ಎದುರಿಗೆ ಅರೆಕ್ಷಣ ನಿಲ್ಲದ ತಾಕತ್ತಿಲ್ಲದ ಪಾಕಿಸ್ತಾನ ಇಡೀ ಭಾರತವನ್ನೇ ಆಪೋಷನ ತೆಗೆದುಕೊಳ್ಳುವ ಕನಸು ಕಾಣುತ್ತಿದ್ದರೆ, ಭಾರತೀಯರಾಗಿ ನಾವು ಕೈಕಟ್ಟಿ ಕುಳಿತುಕೊಳ್ಳುವುದೇನು? ಕಲಾಂರು ಹೇಳುತ್ತಾರಲ್ಲ, ಚಂದ್ರನನ್ನೇ ಗುರಿಯಾಗಿಸಿಕೊಂಡರೆ ಮನೆಯ ತಾರಸಿಗಾದರೂ ತಲುಪಬಹುದು. ತಾರಸಿಯನ್ನೇ ಗುರಿಯಾಗಿಸಿಕೊಂಡರೆ ನೆಲದಿಂದ ಮೇಲೇಳಲೂ ಸಾಧ್ಯವಾಗದು! ನಾವೀಗ ನಮ್ಮ ಗುರಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕಿದೆ. ಭಾರತ್ ಜೊಡೊ ಪಟೇಲರು ಮಾಡಿಯಾಗಿದೆ. ನಾವೀಗ ಅಖಂಡ ಭಾರತ ಜೊಡೊದ ಸಂಕಲ್ಪ ಮಾಡಬೇಕಿದೆ..