ಆರ್‌ಎಸ್‌ಎಸ್‌ ನ ಆಳ ನೋಡಲು ಹೋಗಿ ಹಳ್ಳಕ್ಕೆ ಬಿದ್ದವರು!

ಆರ್‌ಎಸ್‌ಎಸ್‌ ನ ಆಳ ನೋಡಲು ಹೋಗಿ ಹಳ್ಳಕ್ಕೆ ಬಿದ್ದವರು!

ದೇವೇಗೌಡರ ಪಕ್ಷದಲ್ಲಿ ಸುದೀರ್ಘ ಕಾಲದಿಂದ ಇದ್ದು ಅನೇಕ ಹುದ್ದೆಗಳನ್ನು ದಾಟಿ ಬಂದವರಿಗೆ ದೇವೇಗೌಡರ ಆಳ ಮತ್ತು ಅಗಲವನ್ನು ಅರಿಯಲಾಗಲಿಲ್ಲ. ನರೇಂದ್ರಮೋದಿಯ ಜೊತೆಗಿದ್ದವರೇ ಅವರ ಮುಂದಿನ ನಿರ್ಣಯಗಳು ಏನಿರಬಹುದೆಂದು ಅಂದಾಜಿಸುವಲ್ಲಿ ಸೋಲುತ್ತಾರೆ. ಮಂತ್ರಿಮಂಡಲ ರಚನೆಯಾಗುವ ಮುನ್ನ ಯಾರಿಗೆ, ಯಾವ ಖಾತೆ ಎಂದು ತಾವೇ ನಿರ್ಣಯಿಸುತ್ತಿದ್ದ ದೆಹಲಿಯ ಪತ್ರಕರ್ತರು ರಾಷ್ಟ್ರಪತಿಯ ಹೆಸರು ಏನಾಗಿರಬಹುದೆಂದು ಊಹಿಸುತ್ತಾ ಕುಳಿತುಕೊಳ್ಳುವಂತೆ ಮೋದಿ ಮಾಡಿಬಿಟ್ಟಿದ್ದಾರೆ. ಈ ಹಿಂದೆ ಇಂದಿರಾಗಾಂಧಿಯ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆಕೆ ಜೊತೆಗಿದ್ದವರನ್ನು ನಂಬುತ್ತಿರಲಿಲ್ಲ ಮತ್ತು ಆಕೆಯ ಒಡನಾಡಿಗಳಿಗೂ ಆಕೆಯ ಅಂತರಂಗದ ಅರಿವಿರುತ್ತಿರಲಿಲ್ಲ. ವ್ಯಕ್ತಿಯೊಬ್ಬರ ಕಥೆಯೇ ಹೀಗಿರುವಾಗ ಇನ್ನು ಸಂಘಟನೆಯ ಪರಿಸ್ಥಿತಿ ಹೇಗಿರಬೇಡ? ಆರ್‌ಎಸ್‌ಎಸ್‌ ನ ಆಳ-ಅಗಲಗಳ ಕುರಿತು ದೇವನೂರು ಮಹಾದೇವರು ಬರೆದಿರುವ ಪುಸ್ತಕ ನೋಡಿದಾಗ ಹೀಗನ್ನಿಸಿತು. ಸಂಘದ ಪಡಸಾಲೆಗಳಲ್ಲಿ ಎಂದೂ ಕಾಣಿಸಿಕೊಳ್ಳದ, ಅದನ್ನು ಅರಿಯಲು ಪ್ರಾಮಾಣಿಕ ಪ್ರಯತ್ನವನ್ನೂ ಮಾಡದ ವ್ಯಕ್ತಿಯೊಬ್ಬರು ಸಂಶೋಧನಾ ಕೃತಿ ರಚಿಸಿದರೆ ಹೇಗಿರಬಹುದೆಂಬುದಕ್ಕೆ ಇದೇ ಉದಾಹರಣೆ. ನರೇಂದ್ರಮೋದಿಯವರ ಮೇಲಿನ ತಮ್ಮ ಆಕ್ರೋಶವನ್ನು, ಅವರು ಮತ್ತೆ-ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ, ಮುಂದೆಯೂ ಹಿಡಿಯಬಹುದಾಗಿರುವ ಪರಿಸ್ಥಿತಿಯನ್ನು ಕಂಡು ಒಳಗೊಳಗೇ ಕುದಿ ಹುಟ್ಟಿದರೆ ಹೊರಹೊಮ್ಮುವ ಲಾವಾದಲ್ಲಿ ಆರ್ ಎಸ್ ಎಸ್ ವಾಸನೆಯೇ ತುಂಬಿರುತ್ತದೆ ಎನ್ನುವುದಕ್ಕೆ ದೇವನೂರರೇ ಪಕ್ಕಾ ನಿದರ್ಶನ. ಹಿಂದೆ ಇಂಥದ್ದೇ ಆರ್ ಎಸ್ ಎಸ್ ವಾಸನೆ ಸಿದ್ದರಾಮಯ್ಯನವರ ಮೂಗಿಗೂ ಬಡಿದಿತ್ತು ಎನ್ನುವುದು ಇಲ್ಲಿ ನೆನಪಿಸಿಕೊಳ್ಳಬೇಕಷ್ಟೇ!

ಸಂಘಟನೆಯ ಆಳ ಅರಿವಾಗಬೇಕೆಂದರೆ ಅದರ ವಿಶೇಷವಾದ ಅಧ್ಯಯನ ಬೇಕು. ಅದರಲ್ಲೂ ನೂರು ವರ್ಷ ಕಾಣುತ್ತಿರುವ ಸಂಘಟನೆಯೊಂದನ್ನು ಅರಿಯಲು ಎಷ್ಟು ಅಧ್ಯಯನ ಮಾಡಿದರೂ ಕಡಿಮೆಯೇ. ಇನ್ನು ವಿಸ್ತಾರದ ಅರಿವಾಗಬೇಕೆಂದರೆ ಅದರೊಟ್ಟಿಗೆ ಒಡನಾಡಿರಬೇಕು. ಆಗ ಮಾತ್ರ ಅದರ ಬಾಹುಗಳು ಚಾಚಿರುವ ರೀತಿಯನ್ನು ಅಂದಾಜಿಸಿಕೊಳ್ಳಬಹುದು. ಹಾಗಲ್ಲವಾದರೆ, ಅಲ್ಲಿ-ಇಲ್ಲಿ ಸಿಕ್ಕ ಒಂದಷ್ಟು ಸಾಲುಗಳನ್ನು ತುಂಡರಿಸಿ ಮೆತ್ತಿ ಒಂದು ಪುಸ್ತಕವನ್ನು ರಚಿಸಿಬಿಡಬಹುದು. ದೇವನೂರರ ಆರ್‌ಎಸ್‌ಎಸ್ ಕುರಿತ ಅಜ್ಞಾನದ ಮಟ್ಟ ಎಷ್ಟಿದೆ ಎಂದರೆ ಆರ್‌ಎಸ್‌ಎಸ್‌ ನ ಮರಿ ಸಂಘಟನೆಗಳ ಕುರಿತಂತೆ ಹೇಳುತ್ತಾ ಶ್ರೀರಾಮ ಸೇನೆಯನ್ನು ಅದರ ಒಂದು ಭಾಗ ಎನ್ನುತ್ತಾರೆ, ಬಜರಂಗ ದಳವನ್ನು ಅಂಗವೆಂದು ಹೇಳುತ್ತಾ ಸಂಘವೇ ತಿರಸ್ಕರಿಸುತ್ತದೆ ಎಂಬುದನ್ನೂ ಹೇಳುತ್ತಾರೆ. ಅವರೊಳಗೆ ಈ ಕುರಿತ ಗೊಂದಲ ಮಾಯಲೇ ಇಲ್ಲ. ಸಂಘದ ಪ್ರಚಾರಕರಾಗಿದ್ದು ಅಭಿಪ್ರಾಯ ಭೇದಗಳಿಂದಾಗಿ ಹೊರಬಂದ ಪ್ರಮೋದ್ ಮುತಾಲಿಕರು ಶ್ರೀರಾಮ ಸೇನೆಯನ್ನು ಸ್ವತಂತ್ರ ಸಂಘಟನೆಯಾಗಿಯೇ ಬೆಳೆಸಿದ್ದು. ಈಗಲೂ ಸಂಘದೊಂದಿಗಿರುವ ತಮ್ಮ ವೈಚಾರಿಕ ಭಿನ್ನತೆಗಳ ಕುರಿತಂತೆ ಅವರು ಮುಲಾಜಿಲ್ಲದೇ ಮಾತನಾಡುತ್ತಾರೆ. ಮೂಲ ಕಾಂಗ್ರೆಸ್ಸಿನಿಂದ ಬೇರ್ಪಟ್ಟು ನಿರ್ಮಾಣಗೊಂಡ ಇಂದಿರಾ ಕಾಂಗ್ರೆಸ್ಸು ಮೂಲವನ್ನೇ ನುಂಗಿ ನೀರ್ಕುಡಿದುಬಿಟ್ಟಿತ್ತಲ್ಲ ಹಾಗೆಯೇ ಇಲ್ಲೂ ಆಗಬಹುದೆಂಬ ಕಾತರತೆ ಅವರಿಗಿರಬಹುದು. ಆದರೆ ಸಂಘದ ಕಾರ್ಯಶೈಲಿ ಭಿನ್ನ. ಈ ವಿಸ್ತಾರದ ಸಾಮಾನ್ಯ ಜ್ಞಾನವೂ ಈ ಕೃತಿಯಲ್ಲಿ ಕಂಡುಬರುವುದಿಲ್ಲ. ಇನ್ನು ಸಂಘದ ಎರಡನೇ ಸರಸಂಘ ಚಾಲಕರಾದ ಗೋಳ್ವಲ್ಕರ್ ಅವರ ಚಿಂತನ ಗಂಗಾ ಪುಸ್ತಕದ ಅಲ್ಲಲ್ಲಿ ಹೆಕ್ಕಿರುವ ಭಾಗಗಳನ್ನು ಉಲ್ಲೇಖಿಸಿ ಅದನ್ನೇ ಸಂಘದ ಆಳವೆಂದು ಬಿಂಬಿಸಿರುವ ರೀತಿ ನೋಡಿದರೆ ಪತ್ರಿಕೆಯ ಸಂಪಾದಕರೊಬ್ಬರು ಈ ಪುಸ್ತಕವನ್ನು ‘ಶುದ್ಧ ಮಣ್ಣಂಗಟ್ಟಿ’ ಎಂದು ಹೇಳಿರುವುದು ಅಕ್ಷರಶಃ ಸರಿ ಎನಿಸುತ್ತದೆ!

ಸಂಘವನ್ನು ನಾಜಿಯ ಮತ್ತು ಫ್ಯಾಸಿಸ್ಟ್ ಸಿದ್ಧಾಂತದ ಪ್ರಚಾರಕರೆಂದು ಬಿಂಬಿಸುವ ಎಡಪಂಥೀಯರ ಹಠ ಇವತ್ತಿನಿಂದ ಶುರುವಾದದ್ದಲ್ಲ. ಜಗತ್ತಿನ ಜನರ ಆಕ್ರೋಶವನ್ನು ಸೆಳೆಯಬಲ್ಲ ಪದಗಳಿಗಾಗಿ ಅವರು ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಕೋಮುವಾದ, ಲಿಂಚಿಂಗ್, ಕೇಸರೀಕರಣ, ಕೇಸರಿ ಭಯೋತ್ಪಾದನೆ ಇವೆಲ್ಲವೂ ಇದೇ ರೀತಿಯ ಪರಿಕಲ್ಪನೆ ಹೊತ್ತು ಬಂದವುಗಳೇ. ಒಂದು ಪದವನ್ನು ಹಿಡಿದುಕೊಂಡು ಅವರು ಅದೆಷ್ಟು ಜೋತು ಬೀಳುತ್ತಾರೆಂದರೆ ವಿರೋಧಿಗಳು ಅನಿವಾರ್ಯವಾಗಿ ಅದನ್ನೇ ಹಿಡಿದು ನೇತಾಡಬೇಕಾದ ಪರಿಸ್ಥಿತಿಯನ್ನು ನಿರ್ಮಿಸುತ್ತಾರೆ. ಸಂಘವನ್ನು ಫ್ಯಾಸಿಸ್ಟ್ ಎಂದು ಕರೆಯುವುದೂ ಕೂಡ ಅದರ ಒಂದು ಭಾಗವೇ. ಪ್ರಜಾಪ್ರಭುತ್ವವನ್ನು ತೆಗೆದು ಹಾಕಿ ಸರ್ವಾಧಿಕಾರತ್ವವನ್ನು ತರುವ ಪ್ರಯತ್ನ ಫ್ಯಾಸಿಸಂನ ಚಿಂತನೆಯದ್ದು. ಹಾಗೆ ನೋಡಿದರೆ ಪ್ರಜಾಪ್ರಭುತ್ವಕ್ಕೆ ಪೂರಕವಾಗಿ ನಿಂತಿರುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಭಾಜಪವನ್ನು ಸಂಘದ ಕಲ್ಪನೆಯ ಕೂಸು ಎಂದು ಭಾವಿಸುವುದಾದರೆ ಈ ಪಕ್ಷದಿಂದ ಆಯ್ಕೆಯಾದ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳೆಲ್ಲ ಒಂದೇ ಪರಿವಾರಕ್ಕೆ ಸೇರಿದವರು; ಒಂದೇ ಜಾತಿಗೆ ಸೇರಿದವರೆಂದೇನೂ ಇಲ್ಲವಲ್ಲ. ಭಾಜಪ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದವರೆಲ್ಲರೂ ಕೂಡ ಸಮಾಜ ಗೌರವಿಸುವಂತಹ ಶ್ರೇಷ್ಠ ವ್ಯಕ್ತಿಗಳೇ ಆಗಿದ್ದಾರಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಪದ್ಮ ಪ್ರಶಸ್ತಿಗಳು ಮಾರಾಟವಾಗುವ ಮತ್ತು ಋಣ ಸಂದಾಯದ ಪ್ರಶಸ್ತಿಗಳಾಗಿದ್ದಾಗ ಅದನ್ನು ಸಾಮಾನ್ಯರಲ್ಲಿ ಅಸಾಮಾನ್ಯರು ಪಡೆಯುವಂತೆ ವ್ಯವಸ್ಥೆ ರೂಪಿಸಿದ್ದು ಬಿಜೆಪಿಯೇ ಅಲ್ಲವೇನು? ದೇವನೂರರು ಮೂಲನಿವಾಸಿ, ವನವಾಸಿ ಈ ಪದಗಳ ಕುರಿತಂತೆ ತಮ್ಮ ಜಿಜ್ಞಾಸೆಯನ್ನು ಇಲ್ಲಿ ಹುಟ್ಟುಹಾಕುವ ಪ್ರಯತ್ನ ಮಾಡಿದ್ದಾರೆ. ಅಚ್ಚರಿ ಎಂದರೆ ಅಂತಹ ಒಬ್ಬ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿರುವುದು ಬಿಜೆಪಿಯೇ ಅಲ್ಲವೇನು? ಯಾವ ಲೆಕ್ಕಕ್ಕೆ ಫ್ಯಾಸಿಸಂ? ದೇವನೂರರಿಗೂ ಗೊತ್ತಿರದ ಒಂದು ಸಂಗತಿ ಏನು ಗೊತ್ತೇ? ಫ್ಯಾಸಿಸಂ ಎಂಬ ಈ ಶಬ್ದ 40ರ ದಶಕದವರೆಗೂ ಎಲ್ಲರೂ ಅಭಿಮಾನದಿಂದ ಬಳಸುವಂಥದ್ದೆ ಆಗಿತ್ತು. ಒಂದು ರೀತಿಯಲ್ಲಿ ರಾಷ್ಟ್ರೀಯತೆಗೆ ಪರ್ಯಾಯ ಪದ. ಅದು ಹಿಟ್ಲರ್ ಜೊತೆ ಸೇರಿಕೊಂಡ ನಂತರ ವಿಪರೀತಾರ್ಥಕ್ಕೆ ತಿರುಗಿತು. ಸ್ವತಃ ಫ್ಯಾಸಿಸಂ ಆರಾಧಕರಾಗಿದ್ದ ಹೆನ್ರಿ ಫೋರ್ಡ್, ಚಾರ್ಲ್ಸ್ ಲಿಂಡನ್ ಬರ್ಗ್‌ಥರದವರು ಅಮೇರಿಕಾದಲ್ಲಿ ಹಿಟ್ಲರ್ ನನ್ನು ಬೆಂಬಲಿಸಿಕೊಳ್ಳಲು ಹಿಂಜರಿದಿರಲಿಲ್ಲ. ಯುರೋಪಿನಲ್ಲಿ ಸುದೀರ್ಘಕಾಲ ರಾಷ್ಟ್ರವಾದದ ಪ್ರಖರ ರೂಪವಾಗಿದ್ದ ಈ ಫ್ಯಾಸಿಸಂ ಅವರಿಗೆ ಬೇಡವೆಂದು ಅನಿಸಿದೊಡನೆ ಇವರಿಗೂ ಬೇಡವಾಯ್ತು. ಅದನ್ನು ಅತ್ಯಂತ ವಿಕಾರ ರೂಪದಲ್ಲಿ ಪ್ರಸ್ತುತ ಪಡಿಸಲಾರಂಭಿಸಿದರು. ಎಡಪಂಥೀಯ ಚಿಂತಕರ ಸಾಮರ್ಥ್ಯ ಅದು, ತಮಗೆ ಬೇಕಾದ್ದನ್ನು ನಂಬಿಸುವ, ಒಪ್ಪಿಸುವ ತಾಕತ್ತು. ಗೋಳ್ವಲ್ಕರ್ ಅವರ ‘ವಿ ಆರ್ ಅವರ್ ನೇಷನ್‌ಹುಡ್ ಡಿಫೈನ್ಡ್’ ಎಂಬ ವಿಸ್ತೃತ ಪ್ರಬಂಧದಿಂದ ಪುಟಗಟ್ಟಲೆ ಉಲ್ಲೇಖಿಸಿರುವ ದೇವನೂರರು ಆ ಒಟ್ಟಾರೆ ಪ್ರಬಂಧವನ್ನು ಓದಿರುವುದೇ ಅನುಮಾನ. ಆ ಪ್ರಬಂಧದಲ್ಲಿ ರಾಷ್ಟ್ರದ ಪರಿಕಲ್ಪನೆಗಳನ್ನು, ಅದಕ್ಕೆ ಹೊಂದಿಕೊಂಡಿರುವ ವಿಭಿನ್ನ ಆಯಾಮಗಳನ್ನು ಗೊಳ್ವಲ್ಕರ್‌ರು ಮುಂದಿರಿಸಿ, ವಿಭಿನ್ನ ಸಾಧ್ಯತೆಗಳೆಡೆಗೆ ಓದುಗನ ಗಮನ ಸೆಳೆಯುತ್ತಾರೆ. ಹೀಗೆ ಸಾಧ್ಯತೆಗಳನ್ನು ಮುಂದಿರಿಸುವಾಗ ಯಾವುದರಿಂದ ಏನನ್ನು ಸ್ವೀಕರಿಸಬಹುದು ಎಂಬುದನ್ನು ಅರಿಯುವ ಪ್ರಯತ್ನ ಅಲ್ಲಿ ಕಂಡು ಬರುತ್ತದೆ. ಅಧ್ಯಯನಶೀಲನಾದ ಎಂಥವನಿಗೂ ಈ ಪ್ರಬಂಧದ ಆಶಯ ಖಂಡಿತವಾಗಿಯೂ ಅರಿವಾಗುತ್ತದೆ. ಆದರೆ ದೇವನೂರರು ತಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಡು ತಮ್ಮದ್ದೇ ಆದ ವ್ಯಾಖ್ಯೆಯನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ‘ಹೊರಗಿನಿಂದ ವಲಸೆ ಬಂದವರು.. ತಮ್ಮ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆಯನ್ನು ಮತ್ತು ವಿದೇಶೀ ಮೂಲವನ್ನು ಮರೆತು ರಾಷ್ಟ್ರೀಯ ಜನಾಂಗದಲ್ಲಿ ಸ್ವಾಭಾವಿಕವಾಗಿ ಬೆರೆತುಕೊಳ್ಳಬೇಕಾಗಿದೆ’ ಎಂದು ಗೋಳ್ವಲ್ಕರ್‌ರು ಹೇಳಿರುವುದು ದೇವನೂರರಿಗೆ ಸಹಿಸಲಾಗುತ್ತಿಲ್ಲ. ಇದರ ಕಾರಣ ಏನೆಂದು ಎಂಥವನಿಗೂ ಅರ್ಥವಾಗುವಂಥದ್ದೇ! ಆಕ್ರಮಣಕಾರಿಗಳಾಗಿ ಭಾರತಕ್ಕೆ ಬಂದವರು ಭಾರತದಲ್ಲಿ ಉಳಿಯಬೇಕೆಂದರೆ ಇಲ್ಲಿನ ಸಂಸ್ಕೃತಿಯೊಂದಿಗೆ ಏಕರಸವಾಗಲೇಬೇಕಲ್ಲ? ಆಕ್ರಮಣಗೈದು, ಲೂಟಿ ಮಾಡಿ, ನಮ್ಮವರ ಮೇಲೆ ಅತ್ಯಾಚಾರ ಮಾಡಿ, ಅವರನ್ನು ಕೊಂದು, ಕೊನೆಗೆ ನಮ್ಮ ಆಚರಣೆಗಳನ್ನೇ ವಿರೋಧಿಸುತ್ತಾ ನಮ್ಮೊಡನೆ ಬದುಕುವುದು ಒಪ್ಪುವುದಾದರೂ ಹೇಗೆ? ಶಕರು ಆಕ್ರಮಣಕಾರಿಗಳಾಗಿ ಬಂದು ಭಾರತೀಯ ಸಂಸ್ಕೃತಿಯೊಂದಿಗೆ ಏಕರಸವಾಗಿಬಿಡಲಿಲ್ಲವೇ? ಒಂದುವೇಳೆ ಈ ಹೊರಗಿನ ಮಂದಿ ಇಲ್ಲಿ ಸ್ವಾಭಾವಿಕವಾಗಿ ಬೆರೆತುಕೊಳ್ಳುವಲ್ಲಿ ಸೋತರೆ ‘ರಾಷ್ಟ್ರದ ಎಲ್ಲ ನೀತಿ-ನಿಯಮ ಮತ್ತು ಸಂಹಿತೆಗಳ ಕಟ್ಟುಪಾಡಿಗೆ ಒಳಗಾಗಿ ಅದರ ಸಹಿಷ್ಣುತೆಯ ಕೃಪೆಯಲ್ಲಿ ಹಕ್ಕುಗಳಿಲ್ಲದೇ ಹೊರಗಿನವರಂತೆ ಬದುಕಬೇಕಾಗುತ್ತದೆ’ ಎಂದು ಗೋಳ್ವಲ್ಕರ್‌ರು ಹೇಳಿರುವುದರಲ್ಲಿ ತಪ್ಪೇನಿದೆ? ಸಂವಿಧಾನವನ್ನು ಒಪ್ಪುವುದಿಲ್ಲ, ನಮಗೆ ನಮ್ಮದ್ದೇ ಕಾನೂನು ಬೇಕು ಎಂದವರನ್ನು ಜೊತೆಯಲ್ಲಿಟ್ಟುಕೊಂಡು ಸಲಹುವುದು ಸಾಧ್ಯವೇ? ತಮ್ಮ ಸಂಖ್ಯೆ ಹೆಚ್ಚಾಗಿರುವುದರಿಂದ ನಮ್ಮ ಶಾಲೆಗಳಿಗೆ ಇನ್ನುಮುಂದೆ ಶುಕ್ರವಾರ ರಜೆ, ಭಾನುವಾರವಲ್ಲ ಎಂದು ಆಗ್ರಹಿಸುವವರನ್ನು ಸಹಿಸಿಕೊಳ್ಳುವುದಾದರೂ ಹೇಗೆ? ತಮ್ಮ ಮತದ ಪ್ರವರ್ತಕನನ್ನು ನ್ಯಾಯಬದ್ಧವಾಗಿ ಪ್ರಶ್ನಿಸಿದರೆ ತಲೆಕಡಿಯುವ ಮಾತಾಡುವ ಮಂದಿಯನ್ನು ಎಲ್ಲ ಹಕ್ಕುಗಳೊಂದಿಗೆ ಇರಿಸಿಕೊಳ್ಳುವುದು ಸಾಧ್ಯವೇ? ಬಹುಶಃ ದೇವನೂರರು ಗೋಳ್ವಲ್ಕರ್‌ರನ್ನು ವಿರೋಧಿಸುವ ಬದಲು ಅವರ ದೂರದೃಷ್ಟಿಯನ್ನು ಅಭಿನಂದಿಸಬೇಕಿತ್ತು! ಏಕೆಂದರೆ ಗೋಳ್ವಲ್ಕರ್‌ರು ಸಮಸ್ಯೆಯನ್ನಷ್ಟೇ ಮುಂದಿಡದೇ ಅದಕ್ಕೊಂದು ಸೂಕ್ತವಾದ ತಾರ್ಕಿಕ ಪರಿಹಾರವನ್ನು ನೀಡುತ್ತಾರೆ. ಹೊರಗಿನಿಂದ ಬಂದವರನ್ನು ರಾಷ್ಟ್ರೀಯ ಪ್ರವಾಹದಲ್ಲಿ ಐಕ್ಯವಾಗಿಸಬೇಕು ಅಥವಾ ಈ ರಾಷ್ಟ್ರದ ಕೃಪಾಶ್ರಯದಲ್ಲಿ ಇರಿಸಿ ಬೇಡವೆಂದಾಗ ತೊಲಗಿಸಲು ಸಿದ್ಧವಾಗಬೇಕು ಎನ್ನುತ್ತಾರೆ. ಇದೊಂದೇ ರಾಷ್ಟ್ರದೊಳಗೆ ಮತ್ತೊಂದು ರಾಷ್ಟ್ರವನ್ನು ಹುಟ್ಟು ಹಾಕುವ ಕ್ಯಾನ್ಸರ್ನಿಂದ ಭಾರತವನ್ನು ರಕ್ಷಿಸುತ್ತದೆ ಎಂದು ಹೇಳಲೂ ಅವರು ಮರೆಯುವುದಿಲ್ಲ. ಹೊರಗಿನಿಂದ ಬಂದವರು ಭಾರತದೊಳಗೆ ಏಕರಸವಾಗದಿದ್ದುದರ ಪರಿಣಾಮಕ್ಕೆ ಪಾಕಿಸಾನ್ತ, ಬಾಂಗ್ಲಾದೇಶಗಳು ಹುಟ್ಟಿಕೊಂಡವು, ದೇವನೂರರಂಥವರು ಇಂಥದ್ದೇ ಚಿಂತನೆಗಳನ್ನು ನೀರೆರೆದು ಪೋಷಿಸಿದರೆ ಇನ್ನಷ್ಟು ಪಾಕಿಸ್ತಾನಗಳು ಹುಟ್ಟಿಕೊಂಡರೂ ಅಚ್ಚರಿ ಪಡಬೇಕಿಲ್ಲ!

ವಿವೇಕಾನಂದರ ಕುರಿತಂತೆಯೂ ಅವರು ಹೀಗೆಯೇ ಮನಸ್ಸಿಗೆ ಬಂದದ್ದನ್ನು ಉಲ್ಲೇಖ ಮಾಡಿದ್ದಾರೆ. ಗೀತೆಯ ಕುರಿತಂತೆ ವಿಸ್ತಾರವಾಗಿ ಮಾತನಾಡಿರುವ ಸ್ವಾಮಿ ವಿವೇಕಾನಂದರು ಅದರ ಐತಿಹಾಸಿಕತೆಯ ಕುರಿತಂತೆ ವಿಭಿನ್ನ ಸಾಧ್ಯತೆಗಳನ್ನು ಚರ್ಚಿಸಿದ್ದಾರೆ. ವ್ಯಾಸ ಯಾರು ಎನ್ನುವುದರಿಂದ ಹಿಡಿದು ಗೀತೆ ಪ್ರಕ್ಷಿಪ್ತವೇ ಅಥವಾ ಮಹಾಭಾರತದೊಂದಿಗೇ ಸೇರಿಕೊಂಡಿರುವಂಥದ್ದೇ, ಯುದ್ಧ ಕಾಲದಲ್ಲಿ ಹೀಗೊಂದು ವಿಸ್ತಾರ ಚಿಂತನೆಗೆ ಅವಕಾಶವಿತ್ತೇ ಎಂಬೆಲ್ಲ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಪ್ರಚಲಿತದಲ್ಲಿದ್ದ ನಂಬಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅದರದ್ದೇ ಭಾಗವಾಗಿ ‘ಕೆಲವರು ಶಂಕರಾಚಾರ್ಯರೇ ಗೀತೆಯ ಕರ್ತೃವೆಂದೂ ಅದನ್ನು ಮಹಾಭಾರತದಲ್ಲಿ ಸೇರಿಸಿದರೆಂದು ಹೇಳುತ್ತಾರೆ’ ಎಂದು ಹೇಳಿದ್ದಾರೆ. ಇದು ಅಂದಿನ ಕೆಲವರ ನಂಬಿಕೆಗಳ ಕುರಿತಂತೆ ಅವರು ಮಾತನಾಡಿರುವುದು. ಇದೇ ವ್ಯಾಖ್ಯಾನದಲ್ಲಿ ವಿವೇಕಾನಂದರು ಐತಿಹಾಸಿಕ ತಥ್ಯಗಳನ್ನು ಅರಿಯುವುದರಿಂದ ಗೀತೆಯ ಮಹತ್ವ ಬದಲಾಗುವುದಿಲ್ಲವಾದರೂ ಮೌಢ್ಯಗಳಿಗೆ ಬಲಿಯಾಗಿ ಒಪ್ಪಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾ ‘ಏಸುಕ್ರಿಸ್ತ, ಮೊಹಮ್ಮದ್ ಮೊದಲಾದ ಮಹಾಪುರುಷರೇ ಹಲವು ಮೂಢನಂಬಿಕೆಗಳನ್ನು ನಂಬಿದ್ದರು, ಅದರಿಂದ ಪಾರಾಗಿರಲಿಲ್ಲ’ ಎಂದೂ ಹೇಳುತ್ತಾರೆ. ಬಹುಶಃ ಈ ಸಾಲುಗಳನ್ನು ದೇವನೂರರು ಬೇಕಂತಲೇ ಓದದೇ ಮುಂದೆ ಹೋಗಿರಬೇಕು! ಆದರೆ ವಿವೇಕಾನಂದರು ಮಾತ್ರ ಜ್ಞಾನ, ಭಕ್ತಿಯೋಗಗಳ ಅನುಯಾಯಿಗಳು ತಮ್ಮದ್ದನ್ನೇ ಶ್ರೇಷ್ಠ ಮಾರ್ಗ ಎಂದು ಹೇಳುತ್ತಿರುವಾಗ ಗೀತೆ ಎಲ್ಲವನ್ನೂ ಸೌಹಾರ್ದ ದೃಷ್ಟಿಯಿಂದ ನೋಡಲು ಪ್ರಯತ್ನಿಸಿತು ಎಂದು ಹೇಳುವ ಮೂಲಕ ಅದರ ಸಾರ್ವಕಾಲಿಕತೆಯನ್ನು ಎತ್ತಿ ಹಿಡಿದಿದ್ದಾರೆ. ಎಡಪಂಥೀಯರು ಎಷ್ಟು ಬಾರಿ ಗೀತೆಯನ್ನು ಅಧಿಕೃತವಲ್ಲವೆಂದು ಸಾಬೀತುಪಡಿಸಲು ಪ್ರಯತ್ನ ಪಟ್ಟರೂ ಅದು ಮತ್ತೆ-ಮತ್ತೆ ಶ್ರೇಷ್ಠ ಕೃತಿಯಾಗಿ ಜನರ ನಡುವೆ ಹಾಗೆಯೇ ಉಳಿದಿದೆ.

ದೇವನೂರರಿಗೆ ಸಂಸ್ಕೃತದ ಮೇಲೂ ಅಷ್ಟೇ ಆಕ್ರೋಶ. ಅದನ್ನು ಸಂಪರ್ಕ ಭಾಷೆ ಮಾಡುವ ಚಿಂತನೆ ಗೋಳ್ವಲ್ಕರರಿಗಿತ್ತು ಎಂದು ಅವರು ಉಲ್ಲೇಖಿಸುತ್ತಾರೆ. ವಾಸ್ತವವಾಗಿ ಸ್ವತಃ ಅಂಬೇಡ್ಕರರು ಈ ಕುರಿತಂತೆ ತಮ್ಮ ವಾದ ಮಂಡಿಸಿದ್ದರು. ಕಳೆದ ವರ್ಷ ಮುಖ್ಯ ನ್ಯಾಯಾಧೀಶರಾದ ಬೋಬ್ಡೆ ವಿಚಾರ ಸಂಕಿರ್ಣವೊಂದರಲ್ಲಿ ಮಾತನಾಡುತ್ತಾ ತಮಿಳನ್ನು ಉತ್ತರ ಭಾರತೀಯರು ಒಪ್ಪಲಾರರು ಮತ್ತು ಹಿಂದಿಯನ್ನು ದಕ್ಷಿಣ ಭಾರತೀಯರು. ಹೀಗಾಗಿ ಸಂಸ್ಕೃತ ಒಂದೇ ಪರಿಹಾರ ಎಂಬುದು ಅವರ ಅಭಿಮತವಾಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ, ಈ ಭಾಷೆಯೊಂದೇ ಭಾರತದಲ್ಲಿ ಜಾತಿಯ ತಾರತಮ್ಯಗಳನ್ನು ತೊಡೆದು ಹಾಕಬಲ್ಲದೆಂಬ ನಂಬಿಕೆ ಅವರಿಗಿತ್ತು. ದುರಂತವೆಂದರೆ ದಲಿತ ಸಮುದಾಯದವರೇ ಇದನ್ನು ವಿರೋಧಿಸಿ ಅನೇಕ ದಶಕಗಳ ನಂತರ ಪಶ್ಚಾತ್ತಾಪ ಪಟ್ಟ ಉಲ್ಲೇಖಗಳೂ ಇವೆ. ದೇವನೂರರದ್ದು ಈ ಕುರಿತಂತೆ ದಿವ್ಯಮೌನ!

ಇನ್ನು ಹಳತಾಗಿ ಜಗತ್ತಿನ ಎಲ್ಲ ಪ್ರಜ್ಞಾವಂತರಿಂದ ಅವಗಣನೆಗೆ ತುತ್ತಾಗಿರುವ ಆರ್ಯ ಆಕ್ರಮಣ ಸಿದ್ಧಾಂತವನ್ನು ದೇವನೂರರು ಉದ್ದಕ್ಕೂ ಉಲ್ಲೇಖಿಸಿದ್ದಾರೆ. ಅವರು ಹೇಳುವಂತೆ ಹರಿಯಾಣಾದ ರಾಖಿಘರೀ ಉತ್ಖನನದ ನಂತರ ಆರ್ಯ ಆಕ್ರಮಣದ ಸಿದ್ಧಾಂತ ದೃಢಗೊಳ್ಳಲಿಲ್ಲ, ಬದಲಿಗೆ ಇನ್ನೂ ಹೆಚ್ಚು ದೃಢವಾಗಿ ನಿರಾಕರಿಸಲ್ಪಟ್ಟಿತು. ಸೆಲ್ ಎಂಬ ವೈಜ್ಞಾನಿಕ ಪತ್ರಿಕೆಯೊಂದು ಎರಡು ವರ್ಷಗಳ ಹಿಂದೆ ಈ ಕುರಿತಂತೆ ವಿಸ್ತಾರವಾಗಿ ಲೇಖನ ಪ್ರಕಟಿಸಿ ಆರ್ಯರ ಆಕ್ರಮಣ ಸಿದ್ಧಾಂತ ಬುಡವಿಲ್ಲದ್ದು ಎಂದು ಹೇಳಿಬಿಟ್ಟಿತು. ದೇವನೂರರಿರಲಿ, ಅವರ ಪರಮಶಿಷ್ಯ ಸಿದ್ದರಾಮಯ್ಯನವರೇ ಇರಲಿ ಇಂದಿಗೂ ಆರ್ಯ ಆಕ್ರಮಣ ವಾದಕ್ಕೆ ಜೋತಾಡಿಕೊಂಡಿರುವುದೇಕೆಂದರೆ ಇವರ ಬೇಳೆ ಬೇಯುವುದು ಈ ಬೆಂಕಿಯಲ್ಲಿ ಮಾತ್ರ.

ಹೇಳಲು ಬೇಕಾದಷ್ಟಿದೆ. ಹೇಳುತ್ತಾ ಹೋದಂತೆಲ್ಲ ದೇವನೂರರದ್ದೇ ಆಳ-ಅಗಲಗಳು ಅನಾವರಣಗೊಳ್ಳುತ್ತದೆ! ಹೀಗಾಗಿ ಇಲ್ಲಿಗೇ ಮುಗಿಸುತ್ತೇನೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s