1937ರಲ್ಲಿ ಮಹಾತ್ಮಾ ಗಾಂಧೀಜಿ ಈಗಿನ ಮಯನ್ಮಾರ್ನ ರಂಗೂನ್ಗೆ ಭೇಟಿಕೊಟ್ಟಿದ್ದರು. ಅಲ್ಲಿನ ಅತ್ಯಂತ ಸಿರಿವಂತ ಭಾರತೀಯನೊಬ್ಬನ ಮನೆಯಲ್ಲಿ ಬೆಳಗಿನ ಉಪಾಹಾರದ ವ್ಯವಸ್ಥೆಯಾಗಿತ್ತು. ಗಾಂಧೀಜಿಯವರ ಆಗಮನದಲ್ಲಿ ಮೈಮರೆತಿದ್ದ ಮನೆಯವರು ಇದ್ದಕ್ಕಿದ್ದಂತೆ ಗಾಬರಿಯಾದದ್ದು ಹತ್ತು ವರ್ಷದ ಮಗಳು ರಾಜಮಣಿ ಕಾಣೆಯಾಗಿದ್ದಾಳೆ ಎಂದು ಗೊತ್ತಾದಾಗ. ಸುತ್ತಲೂ ಹುಡುಕಾಡಿ ನೋಡಿದರೆ ಆಕೆ ತೋಟದಲ್ಲಿ ಪಿಸ್ತೂಲಿನೊಂದಿಗೆ ಆಟವಾಡುತ್ತಿದ್ದಳು. ಆಕೆಯ ತಲೆ ನೇವರಿಸುತ್ತಾ ಮಹಾತ್ಮಾ ಗಾಂಧೀಜಿ ಪಿಸ್ತೂಲು ಹಿಡಿದು ಯಾರನ್ನು ಕೊಲ್ಲುತ್ತಿರುವೆ ಎಂದು ಕೇಳಿದ್ದಕ್ಕೆ, ‘ನಾನು ಲೂಟಿಕೋರರನ್ನು ಕೊಲ್ಲುತ್ತೇನೆ. ಅದಕ್ಕಾಗಿಯೇ ಒಬ್ಬನಾದರೂ ಆಂಗ್ಲನನ್ನು ನಾನು ಕೊಲ್ಲಬೇಕು’ ಎಂದಿದ್ದಳಂತೆ! ಆ ವೇಳೆಗೆ ತೀವ್ರವಾದಿಗಳ ಪ್ರಭಾವ ಪುಟ್ಟಮಕ್ಕಳ ಮೇಲೂ ಎಷ್ಟಿತ್ತೆಂದು ನಿಸ್ಸಂಶಯವಾಗಿ ಊಹಿಸಬಹುದು.
1824ರಿಂದ ಬಮರ್ಾ ಬ್ರಿಟಿಷ್ ಕಾಲೊನಿಯಾಗಿತ್ತು. ರಾಜಮಣಿಯ ಕುಟುಂಬ ತಮಿಳುನಾಡಿನ ತಿರುಚಿನಾಪಳ್ಳಿಯಿಂದ ಮೈನಿಂಗ್ ವ್ಯಾಪಾರದ ದೃಷ್ಟಿಯಿಂದ ಅಲ್ಲಿಗೆ ಬಂದು ನೆಲೆಸಿತ್ತು. ಈ ಪರಿವಾರ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಧನದಾನ ಮಾಡಿತ್ತು. ರಾಷ್ಟ್ರೀಯತೆಯ ಯಾವ ಚಟುವಟಿಕೆ ಇದ್ದರೂ ಅಲ್ಲಿ ಈ ಕುಟುಂಬದ ಕೊಡುಗೆ ಇದ್ದೇ ಇರುತ್ತಿತ್ತು. ಇಂತಹ ಕುಟುಂಬದ ಮಗುವಾಗಿ ಜನಿಸಿದವಳು ರಾಜಮಣಿ. ಆಕೆಗೆ ಪ್ರೇರಣೆ ಏನು ಎಂದು ಕೇಳುವಂತೆಯೇ ಇಲ್ಲ. ಸ್ವತಃ ಪರಿವಾರವೇ ರಾಷ್ಟ್ರೀಯ ಭಾವನೆಯಿಂದ ತುಂಬಿಹೋಗಿತ್ತು. ಇನ್ನು ಮಹಾತ್ಮಾ ಗಾಂಧೀಜಿಯಾದಿಯಾಗಿ ಅನೇಕ ರಾಷ್ಟ್ರ ನಾಯಕರು ಮಯನ್ಮಾರಿಗೆ ಬಂದಾಗಲೆಲ್ಲ ಈ ಪರಿವಾರಕ್ಕೆ ಭೇಟಿ ಕೊಡುತ್ತಿದ್ದರು. 1944ರಲ್ಲಿ ರಾಜಮಣಿಗೆ 17 ವರ್ಷ ವಯಸ್ಸಾಗಿದ್ದಾಗ ಸುಭಾಷ್ ಬಾಬು ರಂಗೂನಿಗೆ ಬಂದಿದ್ದರು. ಅವರ ಭಾಷಣದಿಂದ ಬಲುವಾಗಿ ಪ್ರಭಾವಿತಳಾಗಿದ್ದ ಈ ಹುಡುಗಿ ಸುಭಾಷ್ ಬಾಬು ಸೇನೆಕಟ್ಟುವ ಕೆಲಸಕ್ಕೆ ಸಹಾಯವಾಗಲೆಂದು ತನ್ನ ಮೈಮೇಲಿನ ಒಡವೆಯನ್ನೂ ತೆಗೆದುಕೊಟ್ಟಿದ್ದಳು. ಈಕೆ ಎಲ್ಲರ ಮುಂದೆ ಹೀಗೆ ಒಡವೆ ಕಳಚಿಕೊಟ್ಟಿದ್ದನ್ನು ನೋಡಿದ ಸುಭಾಷ್ಬಾಬು ಗಾಬರಿಯಾಗಿ ಈಕೆಯ ಮನೆಯಲ್ಲಿ ರಾದ್ಧಾಂತವಾಗಬಹುದೇನೊ ಎಂದು ಭಾವಿಸುತ್ತಾ ಆ ಒಡವೆಗಳ ಸಮೇತ ಆಕೆಯ ಮನೆಗೇ ಬಂದುಬಿಟ್ಟರು. ಇವುಗಳ ಅಗತ್ಯವಿಲ್ಲವೆಂದು ಆಕೆಗೆ ಮರಳಿಸಹೋದರು. ಆಕೆಯೂ ಕಡಿಮೆ ಆಸಾಮಿಯಲ್ಲ. ತಂದೆ ಕೊಟ್ಟಿರುವ ಕೊಡುಗೆ ಅವರದ್ದಾಯ್ತು, ಇದು ತನ್ನ ಸ್ವಂತದ್ದು ಎಂದು ಹೇಳಿದಳು. ಮರಳಿ ಕೊಡಲೇಬೇಕೆಂದಾದರೆ ತನ್ನನ್ನು ಸುಭಾಷ್ಬಾಬು ಸ್ವಯಂ ಸೇವಕಿಯಾಗಿ ಸೇನೆಗೆ ಸೇರಿಸಿಕೊಂಡರೆ ಮಾತ್ರ ಸಾಧ್ಯ ಎಂಬ ನಿಯಮವನ್ನು ಹಾಕಿದಳು. ಹೀಗೆ ಹಠಹಿಡಿದು ಇಂಡಿಯನ್ ನ್ಯಾಷನಲ್ ಆಮರ್ಿಗೆ ಸೇರಿಕೊಂಡವಳು ರಾಜಮಣಿ. ಆಕೆಗೆ ವಿಶೇಷವಾದ ತರಬೇತಿಯನ್ನು ಕೊಟ್ಟು ಗಾಯಾಳುಗಳನ್ನು ನೋಡಿಕೊಳ್ಳುವ ನಸರ್್ ಆಗಿ ಐಎನ್ಎಗೆ ಸುಭಾಷ್ಬಾಬು ನೇಮಿಸಿದರು. ಆಕೆಗೆ ಸರಸ್ವತಿ ಎಂಬ ನಾಮಕರಣವನ್ನೂ ಮಾಡಿದರು. ಲಕ್ಷ್ಮಿ ಬತರ್ಾಳೆ ಹೋಗ್ತಾಳೆ. ಆದರೆ ಸರಸ್ವತಿ ಎಂದಿದ್ದರೂ ಶಾಶ್ವತ ಎಂಬುದು ಅವರ ಮನದಿಂಗಿತವಾಗಿತ್ತು. ರಾಜಮಣಿಗೆ ತನ್ನ ತಾನು ಸರಸ್ವತಿ ಎಂದು ಕರೆದುಕೊಳ್ಳುವುದೇ ಪ್ರೀತಿ. ಸುಭಾಷರಿಟ್ಟ ಹೆಸರಲ್ಲವೇ! ಬಲು ಚುರುಕಾಗಿದ್ದ ರಾಜಮಣಿ ಬಹಳ ಕಾಲ ನಸರ್್ ಆಗಿ ಉಳಿಯಲಿಲ್ಲ. ಆಕೆಗೆ ಮತ್ತಷ್ಟು ತರಬೇತಿಯನ್ನು ಕೊಟ್ಟು ದುಗರ್ಾ ಎನ್ನುವ ಮತ್ತೊಬ್ಬ ಹೆಣ್ಣುಮಗಳ ಜೊತೆ ಗೂಢಚಯರ್ೆಗಾಗಿ ರಂಗೂನ್ನಿಂದ 680 ಕಿ.ಮೀ ದೂರದ ಮಾಯ್ಮೊ ಎಂಬ ಸ್ಥಳಕ್ಕೆ ಕಳಿಸಲಾಯ್ತು. ಇಲ್ಲಿ ಆಜಾದ್ ಹಿಂದ್ ಸೇನೆ ಯುದ್ಧನಿರತವಾಗಿತ್ತು. ಇಬ್ಬರು ಹೆಣ್ಣುಮಕ್ಕಳು ತರಲೆ ಹುಡುಗರಂತೆ ವೇಷ ಹಾಕಿಕೊಂಡು ಬ್ರಿಟೀಷ್ ಡೇರೆಗಳಲ್ಲಿ ಕೆಲಸ ಗಿಟ್ಟಿಸಿದ್ದರು. ನೆಲ ಒರೆಸುವ, ಬೂಟು ಪಾಲಿಶ್ ಮಾಡುವ ಕೆಲಸಗಳನ್ನೆಲ್ಲ ಇವರಿಬ್ಬರು ಮಾಡುತ್ತ ಸಾಕಷ್ಟು ಮಾಹಿತಿಯನ್ನು ಮುಖ್ಯಕೇಂದ್ರಕ್ಕೆ ದಾಟಿಸಿದರು. ಕೆಲವೊಮ್ಮೆಯಂತೂ ಅತ್ಯಂತ ಪ್ರಮುಖವಾದ ಕಡತಗಳನ್ನು ದಾಟಿಸುವಲ್ಲೂ ಇವರು ಯಶಸ್ವಿಯಾಗಿದ್ದರು. ಅನೇಕ ದಿನಗಳ ಕಾಲ ಈ ಕೆಲಸದಲ್ಲಿ ಯಶಸ್ಸು ಕಂಡಿದ್ದ ಇಬ್ಬರೂ ಹೆಣ್ಣುಮಕ್ಕಳಲ್ಲಿ ದುಗರ್ಾ ಸಿಕ್ಕುಹಾಕಿಕೊಂಡುಬಿಟ್ಟಳು. ನಿಯಮದ ಪ್ರಕಾರ ಯಾರೊಬ್ಬರು ಸಿಕ್ಕುಹಾಕಿಕೊಂಡರೂ ಮತ್ತೊಬ್ಬರು ಆ ಕೂಡಲೇ ಪರಾರಿಯಾಗಬೇಕಿತ್ತು. ರಾಜಮಣಿಯ ವಿಚಾರದಲ್ಲಿ ಹಾಗಾಗಲಿಲ್ಲ. ಆಕೆ ದುಗರ್ೆಯನ್ನು ಹೇಗಾದರೂ ಬಿಡಿಸಿಕೊಂಡು ಬರಬೇಕೆಂದು ಧಾವಿಸಿದಳು. ನೃತ್ಯಗಾತಿಯ ವೇಷ ಧರಿಸಿಕೊಂಡು ಕಾವಲುಗಾರನಿಗೆ ಅಫೀಮು ಕುಡಿಸಿ, ಮತ್ತು ಬರಿಸಿ ದುಗರ್ೆಯನ್ನು ಬಿಡಿಸಿಕೊಂಡಳು. ತಪ್ಪಿಸಿಕೊಂಡು ಓಡುತ್ತಿರುವಾಗ ಪೊಲೀಸನೊಬ್ಬ ಹಾರಿಸಿದ ಗುಂಡು ಆಕೆಯ ಕಾಲಿಗೆ ಬಿತ್ತು. ದೊಡ್ಡದ್ದೊಂದು ಪಡೆ ಇವರೀರ್ವರನ್ನು ಅಟ್ಟಿಸಿಕೊಂಡು ಬರುವಾಗ ಇಬ್ಬರೂ ಕಾಡಿಗೆ ನುಗ್ಗಿದರು. ಓಡಲು ಸಾಧ್ಯವಿಲ್ಲವೆಂದರಿತು ಮರವೊಂದನ್ನು ಹತ್ತಿ ಅಲ್ಲಿಯೇ ಕುಳಿತುಬಿಟ್ಟರು. ಇವರಿಬ್ಬರನ್ನು ಹುಡುಕಲಾಗದೇ ಬ್ರಿಟೀಷ್ ಸೇನೆ ಮರಳಿತು. ಆದರೆ ಇಷ್ಟರವೇಳೆಗೆ ಮರದ ಮೇಲೆಯೇ ಇಬ್ಬರೂ ಹೆಣ್ಣುಮಕ್ಕಳು ಎರಡು ದಿನವನ್ನು ಕಳೆದಿದ್ದರು! ಮುಂದೆ ಸ್ಥಳೀಯ ವಾಹನಗಳನ್ನು ಹಿಡಿದು ರಂಗೂನ್ ತಲುಪಿಕೊಂಡರು. ಈಕೆಗೆ ಬಹಳ ಪ್ರೀತಿಯಿಂದ ಪತ್ರ ಬರೆದ ಬೋಸರು, ‘ಭಾರತದ ಮೊದಲ ಮಹಿಳಾ ಗೂಢಚಾರಿಣಿ’ ಎಂದು ಹೆಮ್ಮೆಯಿಂದ ಸಂಬೋಧಿಸಿದ್ದರು! ಭಾರತ ಸ್ವತಂತ್ರವಾದ ನಂತರ 1957ರಲ್ಲಿ ಆಕೆಯ ಪರಿವಾರ ಭಾರತಕ್ಕೆ ಬಂತು. ಆಗ ಆಕೆಗೆ ಬರಿಯ 30 ವರ್ಷ! ಸ್ವಾತಂತ್ರ್ಯ ಹೋರಾಟದ ನೆಪದಲ್ಲಿ ಎಂತೆಂಥವರಿಗೋ ನಿವೃತ್ತಿ ವೇತನ ಕೊಟ್ಟ ಸಕರ್ಾರ ಈಕೆಯನ್ನು ಗುರುತಿಸಲು ನಿರಾಕರಿಸಿತು. ಈಕೆ ಸುಭಾಷರ ಅನುಯಾಯಿಯಾಗಿದ್ದಳಲ್ಲ, ಗೌರವಿಸುವುದು ಹೇಗೆ? 1971ರಲ್ಲಿ ಸರಿಸುಮಾರು ಭಾರತಕ್ಕೆ ಸ್ವಾತಂತ್ರ್ಯ ಬಂದು ಎರಡೂವರೆ ದಶಕಗಳು ಕಳೆದ ನಂತರ ಆಕೆಗೆ ಒಂದು ಪುಟ್ಟ ಮನೆಯನ್ನು ಮತ್ತು ಸ್ವಲ್ಪ ಹಣವನ್ನು ತಮಿಳುನಾಡು ಸಕರ್ಾರ ಕೊಟ್ಟಿತು. ಅದನ್ನೇನು ಸ್ವಂತಕ್ಕೆ ಉಳಿಸಿಕೊಳ್ಳಲಿಲ್ಲ ಸರಸ್ವತಿ ರಾಜಮಣಿ. 2006ರಲ್ಲಿ ಸುನಾಮಿ ಅಪ್ಪಳಿಸಿದಾಗ ಎಲ್ಲವನ್ನೂ ದಾನಮಾಡಿಬಿಟ್ಟಳು. 2018ರಲ್ಲಿ ತನ್ನ 90ನೇ ವರ್ಷ ವಯಸ್ಸಿನಲ್ಲಿ ಅನಾಥವಾಗಿ ತೀರಿಕೊಂಡಳು! ಹಾಗೆ ನೋಡಿದರೆ ಅನಾಥವಾಗಿದ್ದು ಸರಸ್ವತಿ ರಾಜಮಣಿಯಲ್ಲ. ಅಂಥವರಿಗೆ ಸರಿಯಾದ ಗೌರವ ಕೊಡಲಾಗದ ನಾನು ಮತ್ತು ನೀವು!
ರಾಜಮಣಿಯಷ್ಟೇ ದುರಂತ ಅಂತ್ಯ ಚಿತ್ತಗಾಂಗ್ನ ಬೀನಾದಾಸ್ಳದ್ದು. 1911ರಲ್ಲಿ ಪ್ರಖರ ರಾಷ್ಟ್ರೀಯವಾದಿ, ಸುಭಾಷ್ಚಂದ್ರ ಬೋಸರನ್ನು ಬಾಲ್ಯದಲ್ಲಿಯೇ ರಾಷ್ಟ್ರಕಾರ್ಯಕ್ಕೆ ಪ್ರಭಾವಿಸಿದ ಬೇಣಿ ಮಾಧವ್ದಾಸರ ಮಗಳು ಆಕೆ. ಬೀನಾ ಕಲ್ಕತ್ತಾದ ಡಯೋಸೀಸನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದಳು. ತಂದೆಯಿಂದಲೇ ರಾಷ್ಟ್ರಕಾರ್ಯಕ್ಕೆ ಪ್ರೇರಣೆ ಪಡೆದ ಈಕೆ ಪ್ರೌಢಶಾಲೆಯಲ್ಲಿದ್ದಾಗಲೇ ಶರತ್ಚಂದ್ರರ ಗುಪ್ತ ಕ್ರಾಂತಿಕಾರಿ ಸಂಸ್ಥೆಗಳ ಕುರಿತಂತಹ ಪಥೇರ್ ದಾಬಿ ಕಾದಂಬರಿಯ ಕುರಿತಂತೆ ಬರೆದು ಶಿಕ್ಷಣ ಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡಿದ್ದಳು. 1928ರಲ್ಲಿ ಸುಭಾಷ್ ಬೋಸರ ಬೆಂಗಾಲ್ ವಾಲಂಟಿಯರ್ ಕಾಪ್ಸರ್್ ಸೇರಿದಳು. ಯಾಕೋ ಅವಳಿಗೆ ಸಮಾಧಾನವಿರಲಿಲ್ಲ. ಗೆಳತಿಯೊಬ್ಬಳು ಆಕ್ರಮಣಕಾರಿಯಾದ್ದೇನಾದರೂ ಮಾಡುವ ಬಯಕೆ ಇದೆಯಾ? ಎಂದು ಕೇಳಿದಾಗ ‘ಹ್ಞೂಂ’ ಎಂದ ಬೀನಾದಾಸ್ ಬೆಂಗಾಲಿ ಕ್ರಾಂತಿಕಾರಿ ಗುಂಪಿಗೆ ಪರಿಚಯಗೊಂಡಳು. ಈಕೆ ಪರಿಚಯವಾಗುವ ವೇಳೆಗೆ ಸರಿಯಾಗಿ ಚಾಲ್ಸರ್್ ಟೆಗಾಟರ್್ನ ಕೊಲ್ಲಲು ಹೋಗಿ ಕೆಲವರು ಸಿಕ್ಕಿಬಿದ್ದುದರಿಂದ ಇಡೀ ತಂಡವನ್ನೇ ವಿಸಜರ್ಿಸಬೇಕಾಗಿ ಬಂತು. ಇಡಿಯ ತಂಡ ವಿಸರ್ಜನೆಯಾಯ್ತು ನಿಜ, ಆದರೀಗ ಒಬ್ಬೊಬ್ಬರೂ ತಂಡವೇ ಆಗಿ ಪ್ರಖರ ಕ್ರಾಂತಿಕಾರಿಗಳಾದರು. ಬಂಗಾಳದ ಗವರ್ನರ್ನನ್ನೇ ಕೊಲ್ಲಬೇಕೆಂಬ ಇಚ್ಛೆ ಬೀನಾದಾಸ್ಳಲ್ಲಿ ಉದಿಸಿತು. ಜುಗಾಂತರ್ ಪಾಟರ್ಿಯ ಕಮಲಾದಾಸ್ ಗುಪ್ತರನ್ನು ಭೇಟಿಯಾಗಿ ಬಂದೂಕು ಕೊಡುವಂತೆ ಕೇಳಿಕೊಂಡಳು. 280 ರೂಪಾಯಿಗೆ ಬಂದೂಕೇನೋ ಸಿಕ್ಕಿತು. ಆದರೆ ಗುರಿ ಹೊಡೆಯಲು ಅಭ್ಯಾಸ ಬೇಕಲ್ಲ. ಆಕೆ ಈ ಪ್ರಶ್ನೆ ಎತ್ತಿದ್ದಕ್ಕೆ ‘ಬ್ರಿಟೀಷರನ್ನು ಕೊಂದವರೆಲ್ಲ ತರಬೇತಿ ಪಡೆದ ನಂತರವೇ ಈ ಕೆಲಸ ಮಾಡಿದವರಲ್ಲ. ಬಂದೂಕಿನ ಟ್ರಿಗರ್ ಒತ್ತಿದರಾಯ್ತು ಅಷ್ಟೇ. ಎದುರಿಗಿದ್ದ ಅಧಿಕಾರಿ ಸತ್ತು ಹೆಣವಾಗುತ್ತಾನೆ’ ಎಂಬ ಸಲಹೆ ಕೇಳಿ, ಈಕೆ ಗವರ್ನರ್ನ ಸಂಹಾರಕ್ಕೆ ಸಜ್ಜಾಗಿಯೇಬಿಟ್ಟಳು. ಕಲ್ಕತ್ತಾ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗವರ್ನರ್ ಜ್ಯಾಕ್ಸನ್ ಮಾತನಾಡುತ್ತಿದ್ದಾಗ ಈಕೆ ಅವಕಾಶ ಸಾಧಿಸಿಕೊಂಡು ಆತನ ಪಕ್ಕದಲ್ಲೇ ನಿಂತು ಗುಂಡು ಹಾರಿಸಿದಳು. ಗುಂಡು ಅವನ ಕಿವಿಯ ಬದಿಯಿಂದ ಹಾದುಹೋಯ್ತು. ಅಲ್ಲಿಯೇ ಇದ್ದ ಲೆಫ್ಟಿನೆಂಟ್ ಕರ್ನಲ್ ಹಸನ್ ಸುಹ್ರವದರ್ಿ ಈಕೆಯ ಕೈಗಳನ್ನು ಹಿಡಿದುಕೊಂಡು ನೆಲದಮೇಲೆ ಬೀಳಿಸಿದ. ಆನಂತರವೂ ಬಿಡದೇ ಆಕೆ ಗುಂಡು ಹಾರಿಸುತ್ತಲೇ ಇದ್ದಳು. ಗವರ್ನರ್ ಬಚಾವಾದ, 21 ವರ್ಷದ ಬೀನಾ ಬಂಧನಕ್ಕೊಳಗಾದಳು. ಒಂದೇ ದಿನದ ವಿಚಾರಣೆ. ಆಕೆಗೆ 9 ವರ್ಷಗಳ ಶಿಕ್ಷೆ ಘೋಷಿಸಲಾಯ್ತು. ಜೈಲಿನಲ್ಲಿ ಆಕೆಯನ್ನು ಮಾತನಾಡಿಸಲು ಬೇಣಿ ಮಾಧವ್ದಾಸರು ಬಂದಿದ್ದರು. ಜೈಲಿನ ಅಧಿಕಾರಿ ಬಂದೂಕು ಎಲ್ಲಿಂದ ಸಿಕ್ಕಿತು ಎಂದು ಮಾಹಿತಿ ಕೊಟ್ಟರೆ ಆಕೆಯನ್ನು ಬಿಟ್ಟುಬಿಡುವುದಾಗಿ ಪುಸಲಾಯಿಸಿದ. ಜೈಲರ್ನತ್ತ ತಿರುಗಿದ ಬೀನಾ ತನ್ನ ತಂದೆಯತ್ತ ಕೈತೋರಿಸಿ, ‘ನನ್ನ ತಂದೆ ದೇಶದ್ರೋಹಿಗಳನ್ನು ನನ್ನ ಮನೆಯಲ್ಲಿ ಬೆಳೆಸಲಿಲ್ಲ’ ಎಂದು ಖಡಕ್ಕಾಗಿ ಉತ್ತರಿಸಿದಳು! ತಂದೆಯೂ ಕೂಡ ಏನೂ ಹೇಳದೇ ಸುಮ್ಮನಿದ್ದರು. ಏಕೆಂದರೆ ಅವರ ಹಿರಿಯರಿಬ್ಬರು ಮಕ್ಕಳೂ ಕೂಡ ರಾಷ್ಟ್ರದ್ರೋಹದ ಆಪಾದನೆಯ ಮೇಲೆ ಜೈಲಿಗೆ ಹೋದವರೇ. ಬೀನಾ ‘ಮಾನವನ ದೃಷ್ಟಿಯಿಂದ ನೋಡುವುದಾದರೆ ಜ್ಯಾಕ್ಸನ್ ವಿರುದ್ಧ ನನಗೆ ಯಾವ ದ್ವೇಷವೂ ಇಲ್ಲ. ಆದರೆ ಬಂಗಾಳದ ಗವರ್ನರ್ ಆಗಿ ಆತ ಲಕ್ಷಾಂತರ ಜನರ ಬದುಕು ಹಾಳುಮಾಡಿದ್ದಾನೆ. ಹೀಗಾಗಿ ಅವನ ಸಾವು ಬಯಸಿದೆ’ ಎಂದಳು. 1941ರಲ್ಲಿ ಜೈಲಿನಿಂದ ಹೊರಬಂದ ಬೀನಾ ಕಾಂಗ್ರೆಸ್ ಸೇರಿದಳು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಮೂರು ವರ್ಷ ಸೆರೆವಾಸ ಅನುಭವಿಸಿದಳು. ಸ್ವಾತಂತ್ರ್ಯಾನಂತರ ತಾವೇ ಅಧಿಕಾರಕ್ಕೆ ತಂದ ಕಾಂಗ್ರೆಸ್ಸಿನ ವಿರುದ್ಧ ಕಾಮರ್ಿಕರ ಪರವಾಗಿ ಹೋರಾಟ ನಡೆಸಿದಳು. ಸ್ವಾತಂತ್ರ್ಯ ಯೋಧರ ನಿವೃತ್ತಿ ವೇತನವನ್ನು ನಿರಾಕರಿಸಿದಳು. ಗಂಡನನ್ನು ಕಳೆದುಕೊಂಡ ಮೇಲಂತೂ ಏಕಾಂತದಲ್ಲೇ ಹೆಚ್ಚು ಉಳಿಯಲಾರಂಭಿಸಿದಳು. ಹೃಷಿಕೇಶಕ್ಕೆ ಹೋಗಿ ಸಾಧನೆಯಲ್ಲಿ ನಿರತಳಾದಳು. ಅಲ್ಲಿಯೇ ವಾಹನ ಅಪಘಾತವೊಂದರಲ್ಲಿ ರಸ್ತೆ ಬದಿಯ ಹೆಣವಾಗಿ ಹೋದಳು ಬೀನಾ. ಅರ್ಧ ಕೊಳೆತಿದ್ದ ಶವದ ಅಂತ್ಯಸಂಸ್ಕಾರ ಮಾಡಲಾಯ್ತಾದರೂ ಅದು ಈಕೆಯದ್ದೇ ದೇಹ ಎಂದು ಪತ್ತೆ ಹಚ್ಚಲು ಒಂದು ತಿಂಗಳು ಕಾಯಬೇಕಾಯ್ತು. ಸ್ವತಂತ್ರ ಭಾರತದಲ್ಲಿ ಬೀನಾದಾಸ್ರಂಥವರಿಗೆ ಸಿಕ್ಕ ಗೌರವ ಇದು! ಇಂದಿಗೂ ಕೋಟ್ಯಂತರ ಜನ ಭಾರತೀಯರ ಹೃದಯದಲ್ಲಿ ಆಕೆ ಸಾಮ್ರಾಜ್ಞಿಯಾಗಿ ರಾರಾಜಿಸುತ್ತಿದ್ದಾಳೆ.
ಸ್ವಾತಂತ್ರ್ಯವೆಂಬುದು ಅಪ್ಪ ಮಾಡಿಟ್ಟ ಆಸ್ತಿಯಲ್ಲ. ಅದು ಮುಂದಿನ ಪೀಳಿಗೆಯವರು ನಮ್ಮ ಬಳಿ ಇಟ್ಟಿರುವ ಡೆಪಾಸಿಟ್ಟು. ಖಚರ್ು ಮಾಡುವುದಿರಲಿ, ವಾಸ್ತವವಾಗಿ ನಾವು ಬಡ್ಡಿ ಕೊಡಬೇಕಿದೆ. ಭಾರತದ ಸ್ವಾತಂತ್ರ್ಯ ಕದನವಂತೂ ಜಗತ್ತಿನ ಇತಿಹಾಸದಲ್ಲಿ ಅತಿಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ ಚಳವಳಿ. ಜಾತಿ-ಮತ-ಪಂಥಗಳನ್ನು ಮರೆತು, ಸಿರಿತನ-ಬಡತನಗಳನ್ನು ದೂರವಿರಿಸಿ, ಗಡಿರೇಖೆಗಳನ್ನು ಅಳಿಸಿ ಹಾಕಿ, ಕೈ-ಕೈ ಹಿಡಿದೇ ನಡೆಸಿದ ಹೋರಾಟ. ಜಗತ್ತೆಲ್ಲವನ್ನೂ ಆಪೋಷನ ತೆಗೆದುಕೊಂಡು ಬ್ರಿಟೀಷರು ಅದೇ ತಂತ್ರಗಾರಿಕೆಯನ್ನು ಭಾರತದಲ್ಲೂ ಬಳಸಿದರು. ಆದರೆ ಈ ದೇಶದ ಅಂತಃಸತ್ವ ಭಾರತವನ್ನು ಉಳಿಸಿತು. ದುರದೃಷ್ಟವೆಂದರೆ ಹೋರಾಟದ ಕಾಲಕ್ಕೆ ಅವರು ಕಂಡ ಕನಸುಗಳನ್ನು ಅದೇ ಸ್ವರೂಪದಲ್ಲಿ ನನಸುಗೊಳಿಸಲು ನಮ್ಮಿಂದ ಆಗುತ್ತಿಲ್ಲ. ನಾವು ಅಕ್ಷರಶಃ ಸೋತಿದ್ದೇವೆ. ಮೊದಲಿಗಿಂತ ಹೆಚ್ಚು ಭ್ರಷ್ಟರಾಗಿದ್ದೇವೆ, ಜಾತೀಯತೆ ಅಂದಿಗಿಂತಲೂ ಹೆಚ್ಚು ಬಲಿಷ್ಠವಾಗಿದೆ, ನಾವು ಹೆಚ್ಚು ಶಿಕ್ಷಣ ಪಡೆದುಕೊಂಡಿದ್ದೇವೆ; ಆದರೆ ಅಷ್ಟೇ ಪ್ರಮಾಣದ ಅಜ್ಞಾನ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಹೊಸ ಪೀಳಿಗೆಯ ತರುಣರು ಹೊಸ ಭಾರತದ ನಿಮರ್ಾಣಕ್ಕೆ ಜೊತೆಯಾಗಬೇಕಾಗಿದೆ. ಹಳೆಯ ಮತ್ತು ಹಳಸಿ ಹೋದ ವಿಭಜನೆಗೆ ಪೂರಕವಾಗುವ ಆಲೋಚನೆಗಳನ್ನು ಮುಲಾಜಿಲ್ಲದೇ ಕಿತ್ತೊಗೆಯಬೇಕಾಗಿದೆ. ಸ್ವಾತಂತ್ರ್ಯಕ್ಕೆ 75ರ ಹೊಸ್ತಿಲಲ್ಲಿ ನಿಂತಿರುವಾಗ ನಾವು ದೃಢವಾದ ಸಂಕಲ್ಪದೊಂದಿಗೆ ಹೆಜ್ಜೆ ಇಡಬೇಕಾಗಿದೆ..