ಇಂದಿಗೆ 79 ವರ್ಷಗಳು ಕಳೆದೇಹೋದವು. ತುಂಡು ಪಂಚೆಯ ಮಹಾತ್ಮಾ ಗಾಂಧೀಜಿ ಆಗಸ್ಟ್ 7, 1942ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದ ವಿಶಾಲ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ‘ನಾನೊಂದು ಪುಟ್ಟ ಮಂತ್ರವನ್ನು ನಿಮಗೆ ಕೊಡಲಿದ್ದೇನೆ. ಅದನ್ನು ನಿಮ್ಮ ಹೃದಯದಲ್ಲಿ ಕೆತ್ತಿಟ್ಟುಕೊಳ್ಳಿ. ನಿಮ್ಮ ಪ್ರತಿ ಉಸಿರಿನಲ್ಲೂ ಅದು ವ್ಯಕ್ತವಾಗಲಿ. ಆ ಮಂತ್ರ, ಮಾಡು ಇಲ್ಲವೇ ಮಡಿ. ಒಂದೋ ನಾವು ಭಾರತವನ್ನು ಮುಕ್ತಗೊಳಿಸೋಣ, ಇಲ್ಲವೇ ಆ ಮಾರ್ಗದಲ್ಲಿ ಸಾವನ್ನಪ್ಪೋಣ. ನಾವು ಭಾರತದ ದಾಸ್ಯವನ್ನು ಶಾಶ್ವತಗೊಳಿಸುವ ಪ್ರಕ್ರಿಯೆಯನ್ನು ನೋಡುವುದು ಸಾಧ್ಯವಿಲ್ಲ’ ಎಂದಿದ್ದರು. ಮಾಡು ಇಲ್ಲವೇ ಮಡಿ ಎಂಬುದು ಅಲ್ಲಿಂದಾಚೆಗೆ ಪ್ರತಿಯೊಬ್ಬರ ಬಾಯಲ್ಲೂ ನುಲಿಯುವ ಮಂತ್ರವಾಗಿಬಿಟ್ಟಿತು. ಇದನ್ನು ಊಹಿಸದಿದ್ದ ಬ್ರಿಟೀಷರು ಜಾಗತಿಕ ಮಟ್ಟದಲ್ಲಿ ತಮ್ಮ ಗೌರವ ಕಾಪಾಡಿಕೊಳ್ಳಲು ಗಾಂಧಿಯೂ ಸೇರಿದಂತೆ ಎಲ್ಲ ಪ್ರಮುಖ ಕಾಂಗ್ರೆಸ್ ನಾಯಕರನ್ನು ದೇಶದಾದ್ಯಂತ ಬಂಧಿಸಿಬಿಟ್ಟರು. ಬ್ರಿಟೀಷರಿಗೆ ದಮನ ನೀತಿ ಹೊಸತಲ್ಲ. ಆದರೆ ಏಕಾಕಿ ಇಷ್ಟು ನಾಯಕರನ್ನು ಬಂಧಿಸಿದಾಗ ಅನುಯಾಯಿಗಳು ದಿಕ್ಕಿಲ್ಲದಂತಾದರಲ್ಲದೇ ಇಷ್ಟೂ ದಿನವೂ ಕಾಪಾಡಿಕೊಂಡು ಬಂದಿದ್ದ ಗಾಂಧೀಜಿಯವರ ಅಹಿಂಸಾ ನೀತಿ ಹಳ್ಳ ಹಿಡಿಯುವಂತಾಯ್ತು. ಆಂತರಿಕ ಸಭೆಯಲ್ಲಿ ಗಾಂಧೀಜಿ ಸಂಯಮ ಕಾಪಾಡಿಕೊಳ್ಳುವ ಮಾತನ್ನಾಡಿದ್ದರೇನೋ ನಿಜ. ಆದರೆ ಈ ಆಂದೋಲನ ಉಗ್ರಸ್ವರೂಪ ತಾಳದೇ ಹೋದರೆ ಬ್ರಿಟೀಷರಿಗೆ ಚುರುಕು ಮುಟ್ಟದು ಎಂಬುದು ಅವರಿಗೂ ಗೊತ್ತಿತ್ತು. ಅಹಿಂಸೆಗೆ ನಿಜವಾದ ರೂಪ ಬಂದಿದ್ದು ಆಗಲೇ. ಬಹಳ ಹಿಂದೆಯೇ ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಸೈಫುದ್ದೀನ್ ಕಿಚ್ಲು, ‘ಅಹಿಂಸೆ ಎನ್ನುವುದು ಹುಚ್ಚು-ಹುಚ್ಚಾಗಿ ಪಾಲಿಸಲ್ಪಡಬಾರದು’ ಎಂದು ಎಚ್ಚರಿಸಿದ್ದರು. ಕ್ರಾಂತಿಕಾರಿಗಳಂತೂ ದಿನಬೆಳಗಾದರೆ ಈ ಕುರಿತಂತೆ ಕಿತ್ತಾಟ ನಡೆಸುತ್ತಿದ್ದರು. ವೈಸ್ರಾಯ್ ಮೇಲೆ 1929ರಲ್ಲಿ ಕ್ರಾಂತಿಕಾರಿಗಳು ಬಾಂಬ್ ಎಸೆದಾಗ ಕಾಂಗ್ರೆಸ್ಸಿಗರು ಅದನ್ನು ಹೇಯಕೃತ್ಯವೆಂದು ಜರಿದಿದ್ದಲ್ಲದೇ ಈ ಕೃತ್ಯವೆಸಗಿದವರನ್ನು ಷಂಡರೆಂದು ಟೀಕೆ ಮಾಡಿದರು. ಗಾಂಧೀಜಿಯವರು ಕಾಂಗ್ರೆಸ್ಸು ಈ ಕೃತ್ಯವನ್ನು ಒಮ್ಮತದಿಂದ ಖಂಡಿಸಬೇಕೆಂದು ಪ್ರಾಥರ್ಿಸಿದುದರ ಪರಿಣಾಮವಾಗಿ ಭಾಗವಹಿಸಿದ 1239 ಪ್ರತಿನಿಧಿಗಳಲ್ಲಿ ಕೇವಲ 81 ಮಂದಿ ಹೂಂಗುಟ್ಟುವುದರೊಂದಿಗೆ ನಿರ್ಣಯ ಅಂಗೀಕೃತವಾಗಿತ್ತು! ಪಂಜಾಬ್ ಕಾಂಗ್ರೆಸ್ ಪ್ರತಿನಿಧಿಯಾಗಿದ್ದ ಸರಳಾದೇವಿ ಚೌಧುರಾಣಿಯವರು ಗಾಂಧೀಜಿ ಕೋಪಗೊಂಡುಬಿಟ್ಟಾರು ಎಂಬ ಕಾರಣಕ್ಕೆ ನಿರ್ಣಯದ ಪರವಾಗಿ ಮತಹಾಕಬೇಕಾಯ್ತು ಎಂದು ಅಂತರಂಗದ ಗುಟ್ಟನ್ನು ಬಾಯ್ಬಿಟ್ಟಿದ್ದರು. ಅಂದರೆ 1930ರ ವೇಳೆಗಾಗಲೇ ಸ್ವತಃ ಕಾಂಗ್ರೆಸ್ಸು ಅಹಿಂಸಾ ಚಳವಳಿಯಲ್ಲಿ ನಂಬಿಕೆ ಕಳೆದುಕೊಂಡುಬಿಟ್ಟಿತ್ತು. ಈ ನಿರ್ಣಯ ಅಂಗೀಕಾರಕ್ಕೆ ಗಾಂಧೀಜಿಯವರೆಣಿಸಿದಷ್ಟು ಬೆಂಬಲ ದೊರೆಯಲಿಲ್ಲವೆಂದು ಗೊತ್ತಾದಾಗ ಯಂಗ್ ಇಂಡಿಯಾದಲ್ಲಿ ಬಾಂಬಿನ ಪಂಥ ಎಂಬ ಹೆಸರಿನ ಲೇಖನವೊಂದನ್ನು ಬರೆದು ಕ್ರಾಂತಿಕಾರಿಗಳ ಮನೋಗತವನ್ನು, ಅವರ ಉಪಕರಣಗಳನ್ನು, ಅವರ ಉದ್ದೇಶಗಳನ್ನು ಅತ್ಯುಗ್ರವಾಗಿ ಖಂಡಿಸಿದರು. ಆ ವೇಳೆಗಾಗಲೇ ಅಹಿಂಸಾಮಾರ್ಗದ ನಿಧಾನಗತಿಯನ್ನು ವಿರೋಧಿಸಿ ಕ್ರಾಂತಿಕಾರಿಗಳ ಪಂಗಡ ಸೇರುತ್ತಿದ್ದ ತರುಣರು ಅದಕ್ಕೆ ಬಾಂಬಿನ ದರ್ಶನ ಎನ್ನುವ ಹೆಸರಿನ ಪ್ರತ್ಯುತ್ತರವನ್ನೂ ಕೊಟ್ಟಿದ್ದರು. ‘ಹಿಂಸೆಯ ಕೃತ್ಯಗಳನ್ನು ಪಾಪಕರ್ಮವೆಂದು ಟೀಕಾಕಾರರು ಹೇಳುತ್ತಾರೆ. ಆದರೆ ಪಶುಬಲದಿಂದ ತಪ್ಪು ಮಾಡುವುದು, ಅನ್ಯಾಯ ಮಾಡುವುದು ನಿಜವಾದ ಹಿಂಸೆ. ಆದರೆ ಈ ಕೆಲಸವನ್ನು ಕ್ರಾಂತಿಕಾರಿಗಳು ಮಾಡುತ್ತಿಲ್ಲ. ಈ ಅನ್ಯಾಯವನ್ನು ಹೋಗಲಾಡಿಸಲು ನಾವೂ ಬಯಸುತ್ತೇವೆ. ಘನ-ಗಂಭೀರವಾದ ಈ ಉದ್ದೇಶ ಸಾಧನೆಗಾಗಿ ಪ್ರಾಣಗಳನ್ನಪರ್ಿಸಲು ಸಿದ್ಧವಾಗಿದ್ದೇವೆ. ಹೀಗಿರುವಾಗ ಕ್ರಾಂತಿಕಾರಿಗಳನ್ನು ನಿಂದಿಸಿ, ಖಂಡಿಸುವುದು ಸಣ್ಣತನ’ ಎಂದು ಸುದೀರ್ಘವಾದ ಲೇಖನವನ್ನು ಬರೆದಿದ್ದರು. ಕ್ರಾಂತಿಕಾರ್ಯದ ಏಳುಬೀಳುಗಳು ನಡೆದೇ ಇದ್ದವು. ಆದರೆ ಸುಭಾಷರು ವಿದೇಶಕ್ಕೆ ಹೋಗಿ ಇಂಡಿಯನ್ ನ್ಯಾಷನಲ್ ಆಮರ್ಿ ಕಟ್ಟಿ ಜನಮಾನಸದಲ್ಲಿ ಉಂಟುಮಾಡಿದ ಭರವಸೆ ಇದೆಯಲ್ಲ, ಅದು ಬ್ರಿಟೀಷರಲ್ಲಂತೂ ನಡುಕ ಹುಟ್ಟಿಸಿತ್ತು. ಕಾಂಗ್ರೆಸ್ಸೂ ಸಣ್ಣಗೆ ಕಂಪಿಸಿತ್ತು.
ಎರಡನೇ ಮಹಾಯುದ್ಧ ಆರಂಭವಾಗುವ ಲಕ್ಷಣಗಳು ಗೋಚರಿಸಿದಾಗ ಇಂಗ್ಲೆಂಡು ಭಾರತವನ್ನು ಕೇಳದೆಯೇ ಈ ಯುದ್ಧದಲ್ಲಿ ನಮ್ಮನ್ನೂ ಒಂದು ಪಾಲುದಾರರನ್ನಾಗಿಸಿಬಿಟ್ಟಿತ್ತು. ಭಾರತವನ್ನು ಕೇಳಬೇಕಾದರೂ ಏಕೆ? ಎಂಬುದು ಅವರ ಧಾಷ್ಟ್ರ್ಯ. ಬೇರೆ ಸಂದರ್ಭದಲ್ಲಾಗಿದ್ದರೆ ಗಾಂಧೀಜಿ ಮರುಮಾತಿಲ್ಲದೇ ಯುದ್ಧಕ್ಕೆ ಬೆಂಬಲ ಕೊಡುವ ಠರಾವು ಮಂಡಿಸಿಬಿಡುತ್ತಿದ್ದರೇನೋ. ಆದರೆ ಸುಭಾಷರು ಜಾಗತಿಕ ಮಟ್ಟದಲ್ಲಿ ನಡೆಸಿದ ಓಡಾಟ ಮತ್ತು ಬ್ರಿಟನ್ನಿನ ಶತ್ರುಗಳೊಂದಿಗೆ ಗೆಳೆತನ ಸಾಧಿಸಿ ಭಾರತವನ್ನು ಮುಕ್ತಗೊಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಇಡಿಯ ಕಾಂಗ್ರೆಸ್ಸನ್ನು ಚುರುಕುಗೊಳಿಸಿಬಿಟ್ಟಿತ್ತು. ಯುದ್ಧದ ನಂತರ ಸ್ವಾತಂತ್ರ್ಯ ಘೋಷಣೆ ಮಾಡುವುದಿದ್ದರೆ ಮಾತ್ರ ನಮ್ಮ ಬೆಂಬಲ ಎಂದುಬಿಟ್ಟರು ಮಹಾತ್ಮಾ! ಪರಿಸ್ಥಿತಿಯನ್ನು ತಿಳಿಗೊಳಿಸಲು ಯುದ್ಧಕ್ಕೆ ಸಂಬಂಧಪಟ್ಟಂತೆಯೇ ಕ್ಯಾಬಿನೆಟ್ನ ಜವಾಬ್ದಾರಿ ಹೊತ್ತಿದ್ದ ಕ್ರಿಪ್ಸ್ ತನ್ನ ನಿಯೋಗದೊಂದಿಗೆ ಭಾರತಕ್ಕೆ ಬಂದ. ಒಂದರ್ಥದಲ್ಲಿ ಇದು ಕಾಂಗ್ರೆಸ್ಸಿನ ಗೆಲುವೇ. ಆದರೆ ಈ ಗೆಲುವು ಬಹಳಕಾಲ ಉಳಿಯಲಿಲ್ಲ. ಕ್ರಿಪ್ಸ್ ಭಾರತಕ್ಕೆ ಆಗಮಿಸುವಾಗಲೇ ವ್ಯವಸ್ಥಿತವಾಗಿ ಕಾಂಗ್ರೆಸ್ಸಿಗರನ್ನು ಮೂರ್ಖರನ್ನಾಗಿಸುವ ಯೋಜನೆಯೊಂದಿಗೆ ಬಂದಿದ್ದ. 1935ರ ಕಾನೂನಿನಲ್ಲಿ ಸಣ್ಣದೊಂದೆರಡು ತಿದ್ದುಪಡಿಗೆ ಆತ ಮನಸ್ಸು ಮಾಡಿದ. ಪೂರ್ಣಸ್ವಾತಂತ್ರ್ಯದ ಮಾತನ್ನೂ ಆಡದೇ ಸ್ವಾಯತ್ತ ರಾಷ್ಟ್ರದ ದಜರ್ೆಯನ್ನು ಕೊಡುವ ಭರವಸೆ ನೀಡಿದ. ಜೊತೆಗೆ ಮುಸಲ್ಮಾನರ ಪ್ರತ್ಯೇಕ ರಾಷ್ಟ್ರದ ಕಲ್ಪನೆಗೆ ನೀರೆರೆಯುವ ಎಲ್ಲ ಅಂಶಗಳನ್ನೂ ಚಚರ್ಿಸಿದ. ನಿಜಕ್ಕೂ ಗಾಂಧೀಜಿಗೆ ಭ್ರಮನಿರಸನವಾಗಿರಲಿಕ್ಕೆ ಸಾಕು. ಸತ್ಯ ಮತ್ತು ಅಹಿಂಸೆಯ ಅಸ್ತ್ರಗಳಿಗೆ ಬ್ರಿಟೀಷರ ಮನಸ್ಸು ಕರಗಿ ಅವರು ತಾವಾಗಿಯೇ ದೇಶವನ್ನು ಬಿಟ್ಟು ಹೋಗುತ್ತಾರೆ ಎಂಬ ಕನಸ್ಸು ಕಾಣುತ್ತಿದ್ದರು ಅವರು. ಜಗತ್ತೆಲ್ಲವನ್ನೂ ತಮ್ಮ ತಾಳಕ್ಕೆ ಕುಣಿಸುವ ಬ್ರಿಟೀಷರಿಗೆ ಒಂದೆರಡು ಪೀಳಿಗೆಯ ದೂರದೃಷ್ಟಿಯಲ್ಲ, ಸಾವಿರ ವರ್ಷಗಳ ನಂತರ ಬರುವ ಬ್ರಿಟೀಷ್ ಸಮುದಾಯ ಹೇಗಿರಬೇಕು ಎಂಬುದನ್ನು ಅವರು ಈಗ ಆಲೋಚಿಸುತ್ತಾರೆ. ಅಂಥದ್ದರಲ್ಲಿ ಭಾರತವನ್ನು ಸುಲಭವಾಗಿ ಬಿಟ್ಟುಹೋಗುವುದು ಸಾಧ್ಯವೇನು? ಅಷೇ ಅಲ್ಲ, ಈ ಬಾರಿ ಮಾತುಕತೆಯಲ್ಲಿ ಮುಸ್ಲೀಂ ಲೀಗ್ಗೆ ಅವರು ಕೊಟ್ಟ ಸ್ಥಾನ ಬಲುವಿಶೇಷವಾಗಿದ್ದರಿಂದ ಮಾತುಕತೆ ದೇಶ ವಿಭಜನೆಗೆ ಹೆಚ್ಚು ಶಕ್ತಿಯನ್ನೇ ತುಂಬಿತು. ಗಾಂಧೀಜಿ ಸತ್ಯಾಗ್ರಹಕ್ಕೆ ಕರೆಕೊಟ್ಟರು. ಅಷ್ಟೇ ಆಗಿದ್ದರೆ ವಿಶೇಷವೇನೂ ಇರಲಿಲ್ಲ. ‘ಮಾಡು ಇಲ್ಲವೇ ಮಡಿ’ ಎಂಬ ಅವರ ಉದ್ಘೋಷ, ಗಾಂಧೀಜಿ ಇನ್ನು ಸಹಿಸಲಾರೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದಂತೆ ಕಾಣುತ್ತಿತ್ತು.
ಆಮೇಲೇನು? ಆಗಬಾರದ್ದು ನಡೆದೇ ಹೋಯ್ತು. ಮಾರ್ಗದರ್ಶನ ಮಾಡಲು ನಾಯಕರಿಲ್ಲದೇ ಇಡಿಯ ಆಂದೋಲನ ದಾರಿತಪ್ಪಿತು ಅಥವಾ ಸರಿಯಾದ ಸ್ವರೂಪದಲ್ಲಿ ಆಂದೋಲನ ಮುನ್ನುಗ್ಗಿತು. ಬೀದಿಗೆ ಬಂದ ದೊಡ್ಡ ಸಂಖ್ಯೆಯ ಜನ ರಸ್ತೆ ತಡೆ ನಡೆಸಿದರು, ರೈಲಿನ ಹಳಿಗಳನ್ನು ಕಿತ್ತೆಸೆದರು, ಪೊಲೀಸರಿಂದ ಶಸ್ತ್ರಗಳನ್ನು ಕಸಿದರು, ಅಲ್ಲಲ್ಲಿ ಬೆಂಕಿ ಹಚ್ಚಿದರು, ಇಡಿಯ ರಾಷ್ಟ್ರದಲ್ಲಿ ದೇಶಬಿಟ್ಟು ತೊಲಗಿ ಎನ್ನುವ ಈ ಘೋಷಣೆ ಗಲ್ಲಿ-ಗಲ್ಲಿಗಳಿಂದ ಮೊಳಗಲಾರಂಭಿಸಿತು. ಎಂಥವನೂ ಹೆದರಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಹೊತ್ತು ಅದು. ಬ್ರಿಟೀಷರು ಮುಲಾಜು ನೋಡಲಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನರ ಬಂಧನವಾಯ್ತು. ವೈಸ್ರಾಯ್ ಲಿನ್ಲಿತ್ಗೊಗೆ ಬರೆದ ಪತ್ರದಲ್ಲಿ ರಾಮ್ ಮನೋಹರ್ ಲೊಹಿಯಾ, ಸಕರ್ಾರ 50 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ. ಅದಕ್ಕೂ ಹೆಚ್ಚುಜನ ಗಾಯಾಳುಗಳಾಗಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲ, ರಷ್ಯಾದ ಕ್ರಾಂತಿಯಲ್ಲಿ ಭಾಗವಹಿಸಿದ್ದು ಜನಸಂಖ್ಯೆಯ ಶೇಕಡಾ ಒಂದರಷ್ಟು ಮಾತ್ರ. ಆದರೆ ಈ ಆಂದೋಲನದಲ್ಲಿ ಜನಸಂಖ್ಯೆಯ ಶೇಕಡಾ 20ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದಿದ್ದರು. ಬಹುಶಃ ಇಡಿಯ ಚಳವಳಿಯ ಕಲ್ಪನೆಯನ್ನು ಈ ಪತ್ರವೊಂದರಿಂದಲೇ ಕಟ್ಟಿಕೊಳ್ಳಬಹುದು. ಇಷ್ಟು ವ್ಯಾಪಕವಾಗಿ ಬೆಳೆದಿದ್ದ ಆಂದೋಲನ ನೋಡ-ನೋಡುತ್ತಲೇ ಹತ್ತಿಕ್ಕಲ್ಪಟ್ಟಿತು. ಮುಸ್ಲೀಂ ಲೀಗ್ ಭಾರತದ ಸಹಕಾರಕ್ಕೆ ಬರಲೇ ಇಲ್ಲ. ಗಾಂಧೀಜಿ ಕ್ರಿಪ್ಸ್ ಸಂಧಾನದ ವೇಳೆಗೆ ಮುಸಲ್ಮಾನರಿಗೆ ದೊರೆಯುವ ಪ್ರತ್ಯೇಕ ಸ್ಥಾನಮಾನವನ್ನೇ ವಿರೋಧಿಸಿದ್ದಾರೆ ಎಂಬುದು ಅವರ ವಾದ. ಕ್ರಿಪ್ಸ್ ಗೆದ್ದಿದ್ದ!
ಕ್ವಿಟ್ ಇಂಡಿಯಾ ನೆನಪಿಸಿಕೊಂಡಾಗಲೆಲ್ಲ ಅಯೋಗ್ಯ ಕಮ್ಯುನಿಸ್ಟರನ್ನು ನೆನಪಿಸಿಕೊಳ್ಳಲೇಬೇಕು. ಆರಂಭದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರ ವಿರೋಧಕ್ಕೆ ನಿಂತು ಯುದ್ಧದ ಹೊತ್ತಿನಲ್ಲಿ ಅವಕಾಶವನ್ನು ಬಳಸಿಕೊಂಡು ಸ್ವಾತಂತ್ರ್ಯವನ್ನು ಗಳಿಸಿಕೊಂಡುಬಿಡಬೇಕು ಎನ್ನಲಾರಂಭಿಸಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ನುಗ್ಗುತ್ತಿರುವ ಸುಭಾಷ್ಚಂದ್ರ ಬೋಸರ ಬಗ್ಗೆ ಅಪಾರ ಸಹಾನುಭೂತಿಯೂ ಅವರಿಗಿತ್ತು. ಹಾಗಂತ ಅವರು ದೇಶಭಕ್ತರಾಗಿಬಿಟ್ಟರು ಎಂದೇನು ಭಾವಿಸಿಬಿಡಬೇಡಿ. ಚೀನಾದ ಕಮ್ಯುನಿಸ್ಟ್ ಪಾಟರ್ಿಯ ಶತವರ್ಷದ ಸಂಭ್ರಮಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗಿ ಕುಳಿತುಕೊಳ್ಳುವ ಅಯೋಗ್ಯ ಮಂದಿ ಈಗಲೂ ಇರುವಾಗ, ಅಂದು ದೇಶಭಕ್ತಿ ಇವರ ಹತ್ತಿರಕ್ಕಾದರೂ ಸುಳಿದಿತ್ತೇನು? ಸಾಧ್ಯವೇ ಇಲ್ಲ. ರಷ್ಯಾ ಜರ್ಮನಿಯ ಕುರಿತಂತೆ ಸಹಾನುಭೂತಿ ಹೊಂದಿದ್ದರಿಂದ ಇಲ್ಲಿನ ಕಮ್ಯುನಿಸ್ಟರಿಗೆ ಬ್ರಿಟೀಷರ ವಿರೋಧ. ಕಾಲಕಳೆದಂತೆ ಹಿಟ್ಲರ್ ರಷ್ಯಾದ ಮೇಲೂ ಏರಿ ಹೋದಾಗ ರಷ್ಯಾ ಬ್ರಿಟನ್ನಿನ ಪರವಾಗಿ ನಿಂತುಕೊಂಡಿತಲ್ಲ, ಆಗ ಕಮ್ಯುನಿಸ್ಟರು ಬ್ರಿಟನ್ನಿನ ಪರವಾಗಿ ಮಾತನಾಡಲಾರಂಭಿಸಿದರು. ಅವರಿಗೀಗ ಸುಭಾಷ್ಚಂದ್ರ ಬೋಸ್ ಜಪಾನಿನ ಅಧ್ಯಕ್ಷರ ನಾಯಿಯಂತೆ ಕಾಣಲಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರ ರಾಷ್ಟ್ರನಿಷ್ಠೆ ಪ್ರಶ್ನಾರ್ಹವೇ!
ಈ ರೀತಿಯ ಇಬ್ಬಗೆಯ ನೀತಿಯುಳ್ಳ ಜನ ಬ್ರಿಟೀಷರಿಗೆ ವರದಾನವಾದರು. ದೊಡ್ಡ ಸಂಖ್ಯೆಯಲ್ಲಿ ಆಂದೋಲನ ನಡೆಯಿತಾದರೂ ದೀರ್ಘಕಾಲ ನಡೆಯದೇ ಸತ್ತುಹೋಯ್ತು. ಒಂದು ರೀತಿಯಲ್ಲಿ ಈ ಆಂದೋಲನ ಕಾಂಗ್ರೆಸ್ಸಿಗೆ ತಮ್ಮ ಸಾಮಥ್ರ್ಯದ ಅರಿವು ಮಾಡಿಸಿಕೊಟ್ಟಿತಲ್ಲದೇ ಬ್ರಿಟೀಷರಿಗೆ ಸಣ್ಣ ಆತಂಕವನ್ನು ಹುಟ್ಟುಹಾಕಿತು. ಗಾಂಧೀಜಿ ಶಾಂತಿಯ ಮಾತನ್ನಾಡಿದಾಗಲೇ ಈ ಪರಿಯ ಪ್ರತಿಭಟನೆ ಕಂಡುಬಂತು. ಇನ್ನು ಇಡಿಯ ದೇಶ ಶಸ್ತ್ರವನ್ನು ಕೈಗೆತ್ತಿಕೊಂಡರೆ ಕಥೆಯೇನು ಅನಿಸಿತ್ತು ಅವರಿಗೆ. ಯುದ್ಧ ಮುಗಿದಮೇಲೆ ಉಸಿರಾಡೋಣವೆಂದರೆ ಸುಭಾಷ್ಚಂದ್ರ ಬೋಸರ ಆಜಾದ್ ಹಿಂದ್ ಸೇನೆಯ ಸೈನಿಕರು ಭಾರತದಲ್ಲಿ ಉತ್ಪಾತವನ್ನೇ ಮಾಡಿಬಿಟ್ಟರು. ಸೈನಿಕರ ದಂಗೆಗಳನ್ನು ಊಹಿಸಿಕೊಂಡೇ ಬ್ರಿಟೀಷರ ಹೃದಯ ಬೆಚ್ಚಗಾಯ್ತು. ದೇಶಬಿಟ್ಟು ಹೊರಡಬೇಕು, ಆದರೆ ಜಾಗತಿಕ ಮಟ್ಟದಲ್ಲಿ ಅವಮಾನವಾಗದಂತೆ ನೋಡಿಕೊಳ್ಳಬೇಕು ಎಂಬ ನಿರ್ಣಯಕ್ಕೆ ಬಂದ ಅವರು ಅಂದುಕೊಂಡದ್ದಕ್ಕಿಂತ ಮುಂಚಿತವಾಗಿಯೇ ದೇಶಬಿಟ್ಟು ಹೊರಟರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದಮೇಲೆಯೂ ಇದೇ ಗಾಂಧೀಜಿಯ ಅನುಯಾಯಿಗಳು ಇನ್ನೂ ಭಾರತವನ್ನು ಸ್ವರಾಜ್ಯವೆಂದು ಭಾವಿಸಿಯೇ ಇಲ್ಲ. ಈಗಲೂ ಭಾರತ್ ತೇರೆ ತುಕ್ಡೇ ಹೋಂಗೆ ಎಂದು ಘೋಷಣೆ ಕೂಗುವುದರಲ್ಲಿ ಹಿಂಜರಿಯುವುದಿಲ್ಲ. ದುರಂತವೆಂದರೆ ಜೆಎನ್ಯು ವಿದ್ಯಾಥರ್ಿಗಳು ಹೀಗೆ ಘೋಷಣೆ ಕೂಗಿದಾಗ ಅವರ ಬೆಂಬಲಕ್ಕೆ ಗಾಂಧಿ ಅನುಯಾಯಿಗಳ ದೊಡ್ಡ ಗಡಣವೇ ನಿಂತಿತ್ತು. 370ನೇ ವಿಧಿಯನ್ನು ಕೇಂದ್ರಸಕರ್ಾರ ಕಿತ್ತು ಬಿಸುಟಾಗ ಗಾಂಧಿ ಅನುಯಾಯಿಗಳು ಸಂಭ್ರಮಾಚರಣೆ ಮಾಡಬೇಕಿತ್ತು. 370ನ್ನು ಕ್ವಿಟ್ ಇಂಡಿಯಾ ಎನ್ನಬೇಕಿತ್ತು. ಊಹ್ಞೂಂ, ಹಾಗಾಗಲಿಲ್ಲ. ಸಂಸತ್ ಅಧಿವೇಶನದ ಹೊತ್ತಲ್ಲಿ ದಿನಬೆಳಗಾದರೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರಲ್ಲ ಗಾಂಧಿ ಅನುಯಾಯಿಗಳು ಕನ್ನಡಿಯಲ್ಲಿ ಒಮ್ಮೆ ಮುಖ ನೋಡಿಕೊಳ್ಳುವುದೊಳಿತು. ಗಾಂಧೀಜಿ ಮೂಲ ಶಿಕ್ಷಣದ ಕುರಿತಂತೆ ಮಾತನಾಡಿದರು. ಅದಕ್ಕೆ ಹತ್ತಿರವಿರುವ ಶಿಕ್ಷಣನೀತಿಯೊಂದನ್ನು ಪ್ರಸ್ತುತಪಡಿಸಿದರೆ ಗಾಂಧಿ ಅನುಯಾಯಿಗಳೇ ವಿರೋಧಿಸುತ್ತಾರಲ್ಲ, ಅಚ್ಚರಿ. ಸರಳತೆ ಗಾಂಧೀಜಿಯವರ ಮೂಲಮಂತ್ರವಾಗಿತ್ತು. ಮೈಮೇಲಿದ್ದ ಬಟ್ಟೆಯನ್ನು ಕಿತ್ತುಬಿಸುಟು ತುಂಡು ಪಂಚೆಗೆ ಬಂದಿದ್ದ ಪುಣ್ಯಾತ್ಮ. ಮಂತ್ರಿಗಳ, ಅಧಿಕಾರಗಳ ವಿಐಪಿ ಸಂಸ್ಕೃತಿಯನ್ನು ಹೊಡೆದಟ್ಟಿ ಅವರ ಗಾಡಿಗಳ ಕೆಂಪುದೀಪವನ್ನು ತೆಗೆಸಿದರೆ, ಗಾಂಧೀಜಿಯ ಹೆಸರು ಹೇಳುವವರು ಖುಷಿ ಪಡಬೇಕಲ್ಲವೇ? ಗೋಹತ್ಯೆ ನಿಷೇಧಕ್ಕೆ ಕಾನೂನು ಬಂದರೆ, ಸಂಭ್ರಮಿಸಬೇಕಾದ್ದು ಯಾರು ಹೇಳಿ? ಗಾಂಧಿಯ ಹೆಸರು ಹೇಳಿಕೊಂಡು ಬದುಕು ನಡೆಸುತ್ತಿರುವವರು ತಾನೆ? ಆದರೆ ಹಾಗೇಕೆ ಆಗುತ್ತಿಲ್ಲ. ಎಲ್ಲ ಬಿಡಿ, ರಾಮ್ಧುನ್ ಹೇಳುತ್ತಾ ರಾಮನ ಆದರ್ಶದ ಮೇಲೆಯೇ ಬದುಕುವ ಕಲ್ಪನೆ ಕಟ್ಟಿಕೊಡುತ್ತಿದ್ದ ಗಾಂಧಿಯ ನಾಡಿನಲ್ಲಿ ರಾಮ ಜನ್ಮಸ್ಥಾನ್ ಮಂದಿರ ಪುನರ್ನಿಮರ್ಾಣಗೊಳ್ಳುವಾಗ ಮುಂದೆ ನಿಂತು ಕಲ್ಲುಕಟ್ಟಬೇಕಾದವರು ಯಾರು ಹೇಳಿ? ಮತ್ತದೇ ಗಾಂಧಿಯ ಹೆಸರು ಎರವಲು ಪಡೆದವರು ತಾನೆ?
ಕ್ವಿಟ್ ಇಂಡಿಯಾ ಮತ್ತೊಮ್ಮೆ ಆಗಬೇಕಿದೆ. ಕ್ರೀಡಾಪಟುಗಳಿಗೆ ಪ್ರಶಸ್ತಿ ಕೊಡುವಾಗಲೂ ರಾಜಕಾರಣಿಗಳ ಹೆಸರು, ಆಸ್ಪತ್ರೆಗೆ ಹೆಸರಿಡುವಾಗಲೂ ರಾಜಕಾರಣಿಗಳದ್ದೇ. ಇವೆಲ್ಲವನ್ನೂ ಕಿತ್ತೆಸೆಯುವ ಕಾಲಬಂದಿದೆ. ಚುನಾವಣೆ ಬಂದೊಡನೆ ಜನಿವಾರ ಹಾಕಿಕೊಂಡು, ವಿಭೂತಿ ಬಳಿದುಕೊಂಡು, ಪಂಥಗಳ ರಾಜಕಾರಣ ಮಾಡಿ ಮತಸ್ವೀಕಾರ ಮಾಡುವ ಜನರಿಗೆ ಕ್ವಿಟ್ ಇಂಡಿಯಾ ಎನ್ನಬೇಕಿದೆ. ರೈತರಿಗೆ ನೇರವಾಗಿ ಲಾಭ ಸಂದಾಯವಾಗುವಾಗ ಅದನ್ನು ಬೇಕಂತಲೇ ವಿರೋಧಿಸುತ್ತಾ ರಸ್ತೆಯನ್ನು ಅಡ್ಡಗಟ್ಟಿ ಕೂರುತ್ತಾರಲ್ಲ, ಬಿರಿಯಾನಿ ತಿನ್ನುತ್ತಾ ಹೈವೇಗಳಲ್ಲಿ ಜನ ಸಂಚರಿಸದಂತೆ ಮಾಡುತ್ತಾರಲ್ಲ, ಅಂಥವರಿಗೆ ಎಚ್ಚರಿಕೆ ಕೊಡಬೇಕಿದೆ. ಹೊಸ ಭಾರತ ಹೀಗೆಯೇ ಮೈದಳೆಯಬೇಕಾಗಿರುವುದು. ನಾವು-ನೀವುಗಳೇ ಇದಕ್ಕೆ ಸತ್ಯಾಗ್ರಹಿಗಳು!