ಡಿಸೆಂಬರ್ 25. ಅತ್ಯಂತ ಸಾಮಾನ್ಯ ಸಂತನೊಬ್ಬ ಈ ದೇಶ ಎದುರಿಸುತ್ತಿರುವ ಕಷ್ಟ-ನಷ್ಟಗಳನ್ನು ನೋಡಿ, ನೊಂದು, ಬಸವಳಿದು ತನ್ನ ತಾನು ರಾಷ್ಟ್ರದ ಒಳಿತಿಗೆ ಸಮರ್ಪಿಸಬೇಕೆಂದು ನಿಶ್ಚಯಿಸಿಕೊಂಡ. ಇಡಿಯ ರಾಷ್ಟ್ರವನ್ನು ಪರಿವ್ರಾಜಕನಾಗಿ ಸುತ್ತಾಡಿದ ಆತ ಕೊನೆಗೊಮ್ಮೆ ಕನ್ಯಾಕುಮಾರಿಯ ಬಂಡೆಯನ್ನು ನೋಡಿ ಸಮುದ್ರವನ್ನು ಸೀಳಿಕೊಂಡು ಬಂಡೆಯತ್ತ ಧಾವಿಸಿದ. ಸುತ್ತಲೂ ನಿಂತು ನೋಡುತ್ತಿದ್ದ ಮಂದಿಗೆ ಆತ ಹುಚ್ಚನೆನಿಸಿರಲಿಕ್ಕೆ ಸಾಕು. ಇನ್ನೂ ಕೆಲವರಿಗೆ ಆತನ ಸಾಹಸ ಮೆಚ್ಚುಗೆಯಾಗಿರಲೂ ಸಾಕು. ಸನ್ಯಾಸಿಗೆ ಮಾತ್ರ ಇವ್ಯಾವುದರ ಪರಿವೆಯೂ ಇರಲಿಲ್ಲ. ಆತನ ಹೃದಯವನ್ನೆಲ್ಲ ಆವರಿಸಿಕೊಂಡಿದ್ದು ತಾಯಿ ಭಾರತಿಯ ಕಷ್ಟಗಳು ಮಾತ್ರ. ಅದಕ್ಕೆ ಪರಿಹಾರವನ್ನು ಅರಸುವ ಧಾವಂತದಲ್ಲಿ ಆತ ತನ್ನದೆಲ್ಲವನ್ನೂ ಅರ್ಪಿಸಲು ಸಿದ್ಧವಾಗಿದ್ದಾನೆ. ತನ್ನ ಪ್ರಾಣ ಸಮರ್ಪಣೆಯಿಂದ ರಾಷ್ಟ್ರಕ್ಕೆ ಒಳಿತಾಗುವುದಾದರೆ ಅದಕ್ಕೂ ಕೂಡ. ಹೌದು, ನೀವು ಸರಿಯಾಗಿಯೇ ಗ್ರಹಿಸಿದಿರಿ. ಆ ಸನ್ಯಾಸಿ ಸ್ವಾಮಿ ವಿವೇಕಾನಂದರೇ.
ಅಂದು ಆ ಬಂಡೆಗಲ್ಲಿನ ಮೇಲೆ ಕುಳಿತು ಧ್ಯಾನಸ್ಥನಾದ ಆತ ತನಗರಿವಿಲ್ಲದಂತೆ ಕಣ್ಣೀರು ಸುರಿಸುತ್ತಲೇ ಹೋದ. ಭಾರತದ ಭವ್ಯ ಪರಂಪರೆಯನ್ನು ಕಣ್ಮುಂದೆ ತಂದುಕೊಂಡ. ಬ್ರಿಟೀಷರ ದಬ್ಬಾಳಿಕೆಯನ್ನು ನೆನೆಸಿಕೊಂಡ. ಒಂದು ಕಾಲದ ಶ್ರೇಷ್ಠ ಭಾರತ ಹೀಗೇಕಾಯ್ತು ಎಂದು ಯೋಚಿಸುತ್ತಾ ಮಮ್ಮಲ ಮರುಗಿದ. ಹಾಗೆ ಒಂದಲ್ಲ, ಎರಡಲ್ಲ, ಮೂರು ದಿನಗಳು ಕಳೆದೇ ಹೋದವು. ಕೊನೆಯ ದಿನ ಆತನಿಗೊಂದು ದರ್ಶನವಾಯ್ತು. ದರ್ಶನಗಳ ನಾಡಲ್ಲವೇ ಇದು. ಗಾಯತ್ರಿ ಮಂತ್ರದ ದರ್ಶನವನ್ನು ಪಡೆದುಕೊಂಡ ವಿಶ್ವಾಮಿತ್ರರಿಂದ ಹಿಡಿದು ನಮ್ಮ ಕಾಲದ ಋಷಿ ವಿವೇಕಾನಂದರವರೆಗೆ ಎಷ್ಟೊಂದು ಮಂದಿ ದರ್ಶನಕಾರರು! ಆದರೆ ಈ ಬಾರಿಯ ದರ್ಶನ ಹಿಂದಿನ ಎಲ್ಲವುಗಳಿಗಿಂತಲೂ ಭಿನ್ನ. ತಾಯಿ ಭಾರತಿ ವಿವೇಕಾನಂದರ ಮುಂದೆ ವೈಭವದಿಂದ ಕಂಗೊಳಿಸಿದಳು. ಕಾಶ್ಮೀರದ ರೂಪದಲ್ಲಿ ಆಕೆಯ ಕಿರೀಟ, ಎರಡು ವೈಭವದ ಬಾಹುಗಳು, ವಿಂಧ್ಯವೆಂಬ ಸೊಂಟ, ಕನ್ಯಾಕುಮಾರಿಯಲ್ಲಿ ಆಕೆಯ ಪಾದಯುಗ್ಮ ಮತ್ತು ಆಕೆಯ ಚರಣ ಪೂಜೆಗೆ ಸಿದ್ಧನಾಗಿ ಕುಳಿತಿರುವ ಈ ಸನ್ಯಾಸಿ. ಇವಿಷ್ಟೂ ಆ ದರ್ಶನದ ಸಾರಾಂಶ. ತನ್ನಿಂದ ಬೃಹತ್ತಾದ ಕೆಲಸವೊಂದಾಗಲಿಕ್ಕಿದೆ ಎಂದು ಅಂದೇ ಆತನಿಗೆ ಅರಿವಾಯ್ತು. ಗುರುದೇವ ರಾಮಕೃಷ್ಣರು ಸಮುದ್ರದ ಮೇಲೆ ನಡೆದುಕೊಂಡು ಬಂದು ಪಶ್ಚಿಮದಿಂದ ಕೈಬೀಸಿ ಕರೆಯುತ್ತಿರುವುದೂ ಕಂಡಿತು. ಮುಂದೇನು? ಅಂದುಕೊಂಡಿದ್ದು ಇನ್ನು ಮಾಡಬೇಕಷ್ಟೇ. ಈಜಿಕೊಂಡು ಹೋದ ಈ ಸನ್ಯಾಸಿಯನ್ನು ಕರೆತರಲೆಂದು ಊರಿನ ದೋಣಿ ಬಂತು. ಮೂರು ದಿನಗಳ ಕಾಲ ಮರಳಿ ಬರದಿದ್ದ ಈತನ ಯೋಗಕ್ಷೇಮ ವಿಚಾರಿಸಲು ಊರಿನ ಹಿರಿಯರು ಬಂದಿದ್ದರು. ತಮ್ಮೊಂದಿಗೆ ಮತ್ತೆ ಊರಿಗೆ ಕರೆದೊಯ್ದರು. ಆನಂತರವೇ ಸ್ವಾಮಿ ವಿವೇಕಾನಂದರು ಜಗತ್ತಿನ ವೇದಿಕೆಯ ಮೇಲೆ ದಿಗ್ವಿಜಯ ಸಾಧಿಸಲು ಸಾಧ್ಯವಾಗಿದ್ದು. ಇಂದಿಗೂ ಅದಕ್ಕೆ ಸಮನಾದ ಮತ್ತೊಂದು ಸಾಧನೆ ಇಲ್ಲ. ಗುಲಾಮೀ ರಾಷ್ಟ್ರವೊಂದರ ಪ್ರತಿನಿಧಿ ಜಗತ್ತಿನ ಪರಮ ಸ್ವಾತಂತ್ರ್ಯಪ್ರಿಯ ಅಮೇರಿಕಾದ ವೇದಿಕೆಯ ಮೇಲೆ ನಿಂತು ಹಿಂದೂಧರ್ಮವನ್ನು ಹೀಗಳೆಯುತ್ತಿದ್ದವರ ಮುಂದೆ ಎದೆಯೆತ್ತಿ ತನ್ನ ಧರ್ಮವನ್ನು ಸಮರ್ಥಿಸಿಕೊಳ್ಳುವ ಕಾರ್ಯ ಮಾಡಿದನಲ್ಲದೇ ಜಗತ್ತೆಲ್ಲ ಅದಕ್ಕೆ ತಲೆಬಾಗುವಂತೆ ಮಾಡಿದ್ದಿದೆಯಲ್ಲ ಅದು ಸಾಮಾನ್ಯವಾದ ಸಂಗತಿಯಲ್ಲ. ಗುಲಾಮೀ ಭಾವವನ್ನು ಆವಾಹಿಸಿಕೊಂಡಿದ್ದ ಭಾರತೀಯ ಸಮಾಜಕ್ಕೆ ಅದೊಂದು ಶಕ್ತಿಮದ್ದಾಯ್ತು. ಹೊಸದೊಂದು ರಾಷ್ಟ್ರೀಯತೆಯ ಉದಯವಾಯ್ತು. ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನದ ಬದಲಾವಣೆಯ ಮೊದಲ ಪರ್ವ ಆರಂಭವಾಗಿದ್ದು ಅಲ್ಲಿಂದಲೇ. ಆದರೆ ಇಷ್ಟೆಲ್ಲ ಸಾಹಸಕ್ಕೆ ಕಾರಣವಾಗಿ ವಿವೇಕಾನಂದರಿಗೆ ಶಕ್ತಿಯ ಗಣಿಯನ್ನೇ ಉಡುಗೊರೆಯಾಗಿ ಕೊಟ್ಟಿದ್ದು ಡಿಸೆಂಬರ್ 25ರ ಸಮುದ್ರವನ್ನು ಸೀಳಿದ ಆ ಸಾಹಸವೇ. ಹೀಗಾಗಿಯೇ ವಿವೇಕಾನಂದರ ಆರಾಧಕರ ಪಾಲಿಗೆಲ್ಲ ಈ ದಿನ ಬಲುವಿಶಿಷ್ಟವಾದ್ದು.
ಜಗತ್ತಿನ ಬಹುತೇಕ ಮತಗಳು ಅನ್ಯರಾಷ್ಟ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಾಕಷ್ಟು ಶ್ರಮಿಸಿವೆ. ಕತ್ತಿ-ಬಂದೂಕುಗಳನ್ನು ಹಿಡಿದು ಸಾವಿನ ಹೆದರಿಕೆ ತೋರಿ ತಮ್ಮ ಪುಸ್ತಕವನ್ನು ಒಪ್ಪಿಕೊಳ್ಳುವ ಒತ್ತಾಯ ಹೇರಿದ ಮಂದಿ ಇಂದು ಮೆರೆದಾಡುತ್ತಿದ್ದಾರೆ. ಆದರೆ ನಾವು ಮಾತ್ರ ಹಾಗಲ್ಲ. ಕೇವಲ ಜ್ಞಾನ ಪರಂಪರೆಯೊಂದರಿಂದಲೇ ಜಗತ್ತಿನ ಮೂಲೆ-ಮೂಲೆಯನ್ನೂ ತಮ್ಮ ತೆಕ್ಕೆಗೆ ಹಾಕಿಕೊಂಡವರು. ಕತ್ತಿ ಹಿಡಿದು ಯಾರ ಮೇಲೂ ಏರಿ ಹೋದವರಲ್ಲ. ಹೀಗಾಗಿ ಭಯ ತೋರಿಸಿ ನಮ್ಮ ಸಂಸ್ಕೃತಿಯನ್ನು ಹೇರುವ ಅಗತ್ಯವೂ ನಮಗಿರಲಿಲ್ಲ. ದಾರಾ ಶಿಕೊ ಔರಂಗಜೇಬನ ಸಹೋದರ. ಉಪನಿಷತ್ತುಗಳನ್ನು ಓದಿದ ಆತ ಭಾರತೀಯ ಸಂಸ್ಕೃತಿಗೆ ತನ್ನ ತಾನು ಸಮರ್ಪಿಸಿಕೊಂಡೇಬಿಟ್ಟ. ಅದಕ್ಕೆ ಪ್ರತಿಫಲವಾಗಿಯೇ ಔರಂಗಜೇಬನ ಕೈಲಿ ಸಾವನ್ನೂ ಕಂಡ. ಸಾಕ್ರಟಿಸ್, ಅರಿಸ್ಟಾಟಲ್‌ನಿಂದ ಹಿಡಿದು ಡೆವಿಡ್ ಫ್ರಾಲಿ, ಮಿಷೆಲ್ ಡ್ಯಾನಿನೊವರೆಗೆ ಅಸಂಖ್ಯ ಮಂದಿ ಭಾರತೀಯ ಪರಂಪರೆಯನ್ನು ಅರಿತು ಗೌರವ ಬೆಳೆಸಿಕೊಂಡಿರುವುದು ಇದರ ಜ್ಞಾನಮಾರ್ಗದ ಕಾರಣದಿಂದಾಗಿ. ನಾವು ದಾರಿಯೇ ತಪ್ಪಿಲ್ಲವೆಂದೇನೂ ಅಲ್ಲ. ಉಪನಿಷತ್ತುಗಳ ಸಂದೇಶದಿಂದ ಆಗಾಗ ದೂರ ಸರಿಯುತ್ತಿರುತ್ತೇವೆ. ಆದರೆ ಹೀಗೆ ಪಥವಿಮುಖರಾದಾಗಲೆಲ್ಲ ಮತ್ತೆ ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನಕ್ಕೆಂದೇ ಅನೇಕ ಮಹಾನುಭಾವರು ಅವತರಿಸಿದ್ದಾರೆ. ರಾಮ, ಕೃಷ್ಣರಿರಲಿ, ಬುದ್ಧ, ಮಧ್ವ, ಶಂಕರ, ರಾಮಾನುಜರಿರಲಿ ಅಥವಾ ನಮ್ಮ ಕಾಲದ ರಾಮಕೃಷ್ಣರೇ ಇರಲಿ ಇವರೆಲ್ಲರೂ ಇಂತಹ ಹಂತಗಳಲ್ಲಿ ಬಂದು ಮತ್ತೆ ಭಾರತವೆಂಬ ಉಗಿಬಂಡಿಯನ್ನು ಹಳಿಗೆ ತಂದು ನಿಲ್ಲಿಸಿದವರು. ಇದರಿಂದಾಗಿಯೇ ಉಪನಿಷತ್ತುಗಳು ಅವತೀರ್ಣಗೊಂಡು ಸಹಸ್ರಾರು ವರ್ಷಗಳು ಕಳೆದರೂ ಭಾರತದ ಅಂತಃಸತ್ವ ಮಾತ್ರ ಬದಲಾಗಲೇ ಇಲ್ಲ. ಇಷ್ಟಕ್ಕೂ ಭಾರತದಲ್ಲಿ ಸಂತರಾಗೋದು, ಋಷಿಯಾಗೋದು ಸತ್ತಮೇಲೆ ಪವಾಡಗಳು ಎಷ್ಟು ಮಾಡಿದರು ಎಂಬ ಆಧಾರದ ಮೇಲಲ್ಲ. ಬದುಕಿರುವಾಗ ಅವರೆಷ್ಟು ತ್ಯಾಗ ಮಾಡಿದರು ಮತ್ತು ಎಷ್ಟು ಪ್ರೇಮವನ್ನು ಜಗತ್ತಿಗೆ ಹರಿಸಿದರು ಎಂಬ ಆಧಾರದ ಮೇಲೆ. ಆದ್ದರಿಂದ ಭಾರತದಲ್ಲಿ ಋಷಿತ್ವ ಎಂಬುವುದು ಹೃದಯ ನೀಡುವ ಗೌರವವೇ ಹೊರತು, ಇತರ ಮತಗಳಂತೆ ಆಡಳಿತದಲ್ಲಿ ಕುಳಿತವರು ಕೊಡುವಂಥದ್ದಲ್ಲ. ಸ್ವತಃ ವಿವೇಕಾನಂದರು ರಾಮಕೃಷ್ಣರ ಶಿಷ್ಯರಾಗಿ ಜಗತ್ತಿಗೆ ಉಪನಿಷತ್ತುಗಳ ಸಂದೇಶವನ್ನು ಮತ್ತೊಮ್ಮೆ ಒಯ್ಯುವಾಗಲೂ ಅವರು ತ್ಯಾಗ ಮತ್ತು ಪ್ರೇಮದ ಮೂರ್ತಿಯಾಗಿಯೇ ನಡೆದವರು. ತಮ್ಮ ಬದುಕಿಗೆ ಸಾಕಾಗುವಂತಹ ಎರಡು ಪ್ರಮುಖ ನಿರ್ದೇಶನಗಳನ್ನು ಅವರು ಗುರುಗಳಿಂದ ಪಡೆದರು. ಒಂದು ನೇರವಾಗಿ ಮತ್ತೊಂದು ಪರೋಕ್ಷವಾಗಿ. ಒಮ್ಮೆ ರಾಮಕೃಷ್ಣರ ಕೊಠಡಿಯಲ್ಲಿ ಧಾರ್ಮಿಕ ಕೃತಿಯೊಂದರ ಅಧ್ಯಯನ ನಡೆಯುತ್ತಿತ್ತು. ಅಲ್ಲಿ ಜೀವದಯೆ ಎನ್ನುವ ಉಲ್ಲೇಖ ಬಂತು. ತಕ್ಷಣವೇ ಶ್ರೀರಾಮಕೃಷ್ಣರು ಜೀವದಯೆ ಎನ್ನುವುದು ಸರಿಯಲ್ಲ. ದಯೆ ತೋರಿಸಲು ನಾವಾರು? ಭಗವಂತನೊಬ್ಬನೇ ದಯೆ ತೋರಿಸಬಲ್ಲ. ನಾವು ಜೀವಸೇವೆ ಮಾಡಲಷ್ಟೇ ಯೋಗ್ಯರು ಎಂದುಬಿಟ್ಟರು. ಆ ಹೊತ್ತಲ್ಲಿ ಕೊಠಡಿಯಲ್ಲಿ ಸಾಕಷ್ಟು ಜನರಿದ್ದರೂ ಈ ಸಂದೇಶವನ್ನು ಸ್ವೀಕಾರ ಮಾಡಿದ್ದು ಮಾತ್ರ ಸ್ವಾಮಿ ವಿವೇಕಾನಂದರೇ. ಅಲ್ಲಿಂದ ಹೊರ ಬಂದೊಡನೆ ವಿವೇಕಾನಂದರು ಉದ್ಗರಿಸಿದ್ದರು ‘ನನಗಿಂದು ಶ್ರೇಷ್ಠ ಮಾರ್ಗದರ್ಶನ ದೊರೆತಿದೆ. ಈ ಬದುಕನ್ನು ಜೀವಸೇವೆಯಲ್ಲಿ ಸವೆಸಿಬಿಡುತ್ತೇನೆ’ ಅಂತ. ಅವರಿಗೆ ಸಿಕ್ಕ ಪರೋಕ್ಷ ಸಂದೇಶವನ್ನು ಜೀವನದ ಉದ್ದೇಶವಾಗಿ ರೂಪಿಸಿಕೊಂಡುಬಿಟ್ಟಿದ್ದರು. ಇಂಥದ್ದೇ ಮತ್ತೊಂದು ಘಟನೆ ರಾಮಕೃಷ್ಣರ ಲೀಲಾಂತ್ಯದ ಕಾಲದಲ್ಲಿ ನಡೆಯಿತು. ಮರಣಶಯ್ಯೆಯಲ್ಲಿದ್ದ ರಾಮಕೃಷ್ಣರು ನರೇನ್‌ನನ್ನು ಬಳಿಕರೆದು ಎಲ್ಲರಿಗೂ ತಿಳಿಯುವಂತೆ ನರೇಂದ್ರ ಜಗತ್ತಿಗೆ ಶಿಕ್ಷಣ ಕೊಡುತ್ತಾನೆ ಎಂದು ಹೇಳಿದರಲ್ಲದೇ ಅದನ್ನು ಬರೆದರೂ ಕೂಡ. ಅಂದರೆ ಅವತಾರ ಪುರುಷನೊಬ್ಬ ನರೇಂದ್ರ ಮುಂದೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದಲ್ಲದೇ ಕಳೆದು ಹೋಗುತ್ತಿರುವ ಭಾರತದ ಭಾಗ್ಯವನ್ನು ಪುನರ್ ರೂಪಿಸುವ ಹೊಣೆಯನ್ನು ಹೆಗಲಿಗೇರಿಸಿದರು. ಸ್ವಾಮಿ ವಿವೇಕಾನಂದರು ಗುರುವಿನ ಈ ವಾಕ್ಯ ಸುಳ್ಳಾಗಲು ಬಿಡಲಿಲ್ಲ. ಗುರುಗಳು ಅದಕ್ಕೆ ಪೂರಕವಾಗಿಯೇ ಶಿಷ್ಯನ ಅಂತರಂಗದಲ್ಲಿ ಇಚ್ಛೆ ಜಾಗೃತಗೊಳಿಸಿದರು.
ವಿವೇಕಾನಂದರಂಥವರ ಇಚ್ಛಾಶಕ್ತಿ ಸುಖಾಸುಮ್ಮನೆ ಕಳೆದುಹೋಗುವಂಥದ್ದಲ್ಲ. ಒಂದೊಮ್ಮೆ ರಾಮಕೃಷ್ಣರೇ ಹೇಳಿದ್ದರು, ‘ನನ್ನೊಂದಿಗೆ ಬಂದಿದ್ದಾನೆ ಎಂಬ ಕಾರಣಕ್ಕಾಗಿಯೇ ನರೇಂದ್ರನ ಪ್ರಭೆ ಇಷ್ಟು ಮಸುಕಾಗಿದೆ. ಪ್ರತ್ಯೇಕವಾಗಿ ಬಂದಿದ್ದರೆ ಒಂದು ಮತವನ್ನೇ ಸ್ಥಾಪಿಸಿಬಿಡಬಲ್ಲಷ್ಟು ಸಾಮರ್ಥ್ಯ ಅವನದ್ದು’ ಎಂದು! ವಿವೇಕಾನಂದರ ಒಟ್ಟಾರೆ ಬದುಕು ಎಲ್ಲ ಮತಗಳ ಸಮನ್ವಯಕ್ಕೆ ಮೀಸಲಾಗಿದ್ದು. ಜಗತ್ತಿನ ವೇದಿಕೆಯ ಮೇಲೆ ಭಾರತವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಎಷ್ಟು ಆನಂದವಿತ್ತೋ ಹಿಂದೂಧರ್ಮದ ಸಮಸ್ಯೆಗಳನ್ನು ಅವಲೋಕಿಸುವಾಗ ಅಷ್ಟೇ ದುಃಖವಾಗುತ್ತಿತ್ತು. ಬೆಂಗಳೂರಿನಲ್ಲಿ ಕೇರಳದ ಡಾ. ಪಲ್ಪು ಅವರನ್ನು ಭೇಟಿ ಮಾಡಿದಾಗ ಅವರು ‘ನೀವೆಲ್ಲ ಬ್ರಾಹ್ಮಣರ ಹಿಂದೆ ಅಂಗಲಾಚಿಕೊಂಡು ಹೋಗುವುದೇಕೆ? ನಿಮ್ಮಲ್ಲೇ ಉನ್ನತಮಟ್ಟದ ಯೋಗ್ಯವ್ಯಕ್ತಿಯೊಬ್ಬನನ್ನು ನಾಯಕನನ್ನಾಗಿ ಮಾಡಿಕೊಂಡು ಎಲ್ಲರೂ ಅನುಸರಿಸಿ. ಆಗ ನಿಮ್ಮ ಸಮಸ್ಯೆಗಳು ಪರಿಹಾರಗೊಳ್ಳುವುವು’ ಎಂದಿದ್ದರು. ಈ ಒಂದು ಮಾತು ಪಲ್ಪು ಅವರ ಬದುಕನ್ನಷ್ಟೇ ಅಲ್ಲ, ಅವರ ಇಡೀ ಸಮುದಾಯದ ಬದುಕಿಗೆ ದಿಕ್ಸೂಚಿಯಾಯ್ತು. ಸ್ವಾಮೀಜಿಯವರ ಮಾತುಗಳನ್ನು ತೀವ್ರವಾಗಿ ಮನಸ್ಸಿನ ಮೇಲೆ ಆವಾಹಿಸಿಕೊಂಡ ಡಾ. ಪಲ್ಪು ತಮ್ಮ ಸಮಾಜದ ಉನ್ನತ ವ್ಯಕ್ತಿಯ ಹುಡುಕಾಟಕ್ಕೆ ಸಜ್ಜಾದರು. ಆಗಲೇ ಅವರಿಗೆ ನಾರಾಯಣ ಗುರುಗಳ ಪರಿಚಯವಾಗಿದ್ದು. ಮುಂದೆ ಶ್ರೀ ನಾರಾಯಣ ಗುರುಗಳು ನಾಡಿಗೆ ಬೆಳಕಾಗಿ ನಿಂದ ರೀತಿ ಎಂಥದ್ದೆಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.
ಹಾಗಂತ ಅವರು ಬ್ರಾಹ್ಮಣ ವಿರೋಧಿ ಎಂದು ನೀವು ಭಾವಿಸಿಬಿಟ್ಟರೆ ನೀವು ಮೂರ್ಖರಾಗಿಬಿಡುವಿರಿ. ಚೆನ್ನೈನಲ್ಲಿ ಮಿಥ್ಯಾಚರಗಳನ್ನು ಬಿಟ್ಟಿದ್ದೇನೆ ಎಂದು ಹೇಳಿಕೊಂಡ ಬ್ರಾಹ್ಮಣನೊಬ್ಬನನ್ನು ಅವರು ಝಾಡಿಸಿದ ರೀತಿ ಕಂಡರೆ ನೀವು ಗಾಬರಿಯಾಗಿಬಿಡುತ್ತೀರಿ. ‘ಉಪನಿಷತ್ತುಗಳನ್ನೇ ಸೃಜಿಸಿದ ಋಷಿಗಳಿಗೆ ಈ ಆಚರಣೆಗಳಿಗೆಲ್ಲ ಸಮಯವಿತ್ತು. ನಿಮಗೆ ಇಲ್ಲ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ?’ ಎಂದು ಬಾಯ್ತುಂಬ ಉಗುಳಿದ್ದರು. ಆಗಲೇ ಹೇಳಲಿಲ್ಲವೇ? ಅಪಾರವಾದ ಗೌರವ ಇಟ್ಟುಕೊಂಡೇ ಅವರ ನ್ಯೂನತೆಗಳನ್ನು ತಿದ್ದಬಲ್ಲ ಸಾಮರ್ಥ್ಯ ಇದ್ದವರು ಸ್ವಾಮಿ ವಿವೇಕಾನಂದರು.
ಹಾಗಂತ ಅವರ ಈ ತೀವ್ರ ವಿಚಾರಧಾರೆ ಸಾಮಾನ್ಯ ಜನರಿಗಾಗಿ ಮಾತ್ರ ಎಂದೇನೂ ಅಲ್ಲ. ಅನೇಕ ದಿವಾನರುಗಳು, ಮಹಾರಾಜರುಗಳು ಇವರ ಪ್ರಭಾವಲಯದ ಭಾಗವಾಗಿದ್ದರು. ಮೈಸೂರಿನ ಮಹಾರಾಜರಂತೂ ವಿವೇಕಾನಂದರ ಮಾತುಗಳಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ ‘ನಿಮಗಾಗಿ ಏನು ಮಾಡಲಿ?’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಸುದೀರ್ಘ ಉತ್ತರ ನೀಡುತ್ತಾ, ‘ನಮ್ಮ ಭರತಭೂಮಿಯು ಅನಾದಿಯಿಂದ ಪಡೆದುಕೊಂಡು ಬಂದ ಆಸ್ತಿ ಎಂದರೆ ಉನ್ನತ ತಾತ್ವಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು ಮಾತ್ರ. ಈಗ ಅದಕ್ಕೆ ಆಧುನಿಕ ವಿಜ್ಞಾನದ ಜೋಡಣೆಯಾಗಬೇಕು. ಈಗ ಭಾರತದಲ್ಲಿ ಅಡಿಯಿಂದ ಮುಡಿಯವರೆಗೆ ರಚನಾತ್ಮಕ ಬದಲಾವಣೆ ತರಬೇಕಾಗಿದೆ’ ಎಂದರು. ವಿಕಾಸದ ಹಾದಿಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಮಹಾರಾಜರಿಗೆ ಈ ಮಾತು ವೇದವಾಕ್ಯವೇ ಆಯ್ತು. ಬಹುಶಃ ಕರ್ನಾಟಕದ ವಿಕಾಸಕ್ಕೆ ಮೂಲಪ್ರೇರಣೆ ಅಲ್ಲಿಂದಲೇ ದೊರೆತದ್ದು ಎನಿಸುತ್ತದೆ. ವಿಜ್ಞಾನದ ಮೇಲಿನ ಮಹಾರಾಜರ ಆಸಕ್ತಿ ಅಲ್ಲಿಂದಾಚೆಗೆ ನೂರ್ಮಡಿಯಾಗಿರಲು ಸಾಕು. ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ಗೆ ಜಾಗ ಹುಡುಕುವಾಗ ಜಮ್ಶೆಡ್‌ಜಿ ಟಾಟಾ ಇಲ್ಲವೆನ್ನಲಾಗದಷ್ಟು ಜಾಗವನ್ನು, ಸಹಕಾರವನ್ನು ಮಹಾರಾಜರು ಕೊಡುವುದರ ಹಿಂದೆ ಈ ಪ್ರೇರಣೆ ನಿಸ್ಸಂಶಯವಾಗಿಯೂ ಇದೆ!
ಇವಿಷ್ಟನ್ನೂ ಮತ್ತೆ ಏಕೆ ನೆನಪಿಸಿಕೊಳ್ಳಬೇಕಾಯ್ತೆಂದರೆ ಹತಾಷವಾಗುತ್ತಿದ್ದೇವೆ ಎನಿಸಿದಾಗಲೆಲ್ಲ, ಯುದ್ಧವನ್ನು ಕಳೆದುಕೊಂಡೇಬಿಡುತ್ತೇವೆ ಎಂದೆನಿಸಿದಾಗಲೆಲ್ಲ ಒಮ್ಮೆ ವಿವೇಕಾನಂದರಿಗೆ ನಮ್ಮ ನಾವು ತೆರೆದುಕೊಳ್ಳಬೇಕು. ಮೇಲ್ನೋಟಕ್ಕೆ ಅವರು ಹತ್ತೊಂಭತ್ತನೇ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದ ಒಬ್ಬ ವ್ಯಕ್ತಿ ಮಾತ್ರ. ಆದರೆ ಅವರ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮಾತುಗಳನ್ನು ಆಲಿಸಿದರೆ ಮುಂದಿನ ಹತ್ತೊಂಭತ್ತು ಶತಮಾನಗಳವರೆಗೆ ಅವರು ಜೀವಿಸಿಯೇ ಇರುತ್ತಾರೆ. ಡಿಸೆಂಬರ್ 25 ಬಂದಾಗಲೆಲ್ಲ ಒಮ್ಮೆ ಅವರ ಸಂಕಲ್ಪಶಕ್ತಿಯ ಸಾಮರ್ಥ್ಯ ಕಣ್ಮುಂದೆ ಹಾದುಹೋಗಿಬಿಡುತ್ತದೆ. ಅವರ ಮಾರ್ಗದಲ್ಲಿ ಹೆಜ್ಜೆ ಹಾಕುವ ತರುಣರು ಹೆಚ್ಚಾದಷ್ಟು ನಮ್ಮ ಶಕ್ತಿ ವೃದ್ಧಿಯಾಗುತ್ತದೆ.