ಟ್ಯಾಗ್: ನೆಹರೂ

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿಗೆ ಮತ್ತೆಷ್ಟು ಬಾರಿ ಅಗ್ನಿಪರೀಕ್ಷೆ?!

ಮೋದಿ ಇಪ್ಪತ್ತು ವರ್ಷಗಳ ನಂತರ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಮೋದಿಯನ್ನು ರಕ್ಕಸನೆಂದು ಬಿಂಬಿಸಲು ಮಾಧ್ಯಮಗಳು, ರಾಜಕಾರಣಿಗಳು, ಅಧಿಕಾರಿಗಳು, ಕೆಲವು ಎನ್‌ಜಿಒಗಳು ಮಾಡಿದ ಪ್ರಯತ್ನ ಕೊನೆಗೂ ಮಣ್ಣುಗೂಡಿದೆ. ಪುಟವಿಟ್ಟ ಚಿನ್ನದಂತೆ ಮೋದಿ ಮತ್ತೊಮ್ಮೆ ಬೆಳಗಿದ್ದಾರೆ.

2002ರ ಫೆಬ್ರವರಿ 27. ಅಯೋಧ್ಯಾದಿಂದ ಬರುತ್ತಿದ್ದ ರೈಲೊಂದಕ್ಕೆ ಮುಸಲ್ಮಾನರು ಗುಜರಾತಿನ ಗೋದ್ರಾದಲ್ಲಿ ಬೆಂಕಿ ಹಚ್ಚಿದರು. ಇದು ಅಚಾನಕ್ಕಾಗಿ ನಡೆದ ದಾಳಿಯಲ್ಲ. ಎಂದಿನಂತೆ ಕೈಲಿ ಕಲ್ಲುಗಳನ್ನು ಹಿಡಿದು, ಪೆಟ್ರೋಲು ಬಾಂಬುಗಳನ್ನು ಹಿಡಿದು ಸಿದ್ಧವಾಗಿದ್ದ ಮುಸಲ್ಮಾನ ಪುಂಡರು ರೈಲು ನಿಂತೊಡನೆ ಏಕಾಕಿ ದಾಳಿ ಮಾಡಿದರು. ಕಲ್ಲೆಸೆದು ಜನರನ್ನು ರೈಲಿನಿಂದ ಹೊರಬರದಂತೆ ತಡೆದರು. ಪೆಟ್ರೋಲ್ ಬಾಂಬುಗಳನ್ನು ಎಸೆದು ಬೋಗಿಗಳು ಹೊತ್ತುರಿಯುವಂತೆ ಮಾಡಿದರು. ಬೇಗೆ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಹೊರಗೆ ನಿಂತು ಕಲ್ಲಿನಲ್ಲಿ ಹೊಡೆಯಲಾಯ್ತು. ಇಡಿಯ ಬೋಗಿಗಳು ಸುಟ್ಟು ಕರಕಲಾದವಲ್ಲದೇ 59 ಜನ ಕರಸೇವಕರು ಬೆಂದುಹೋಗಿದ್ದರು. ಅವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಂಥವನ ರಕ್ತವೂ ಕುದಿಯುತ್ತಿತ್ತು. ಆದರೆ ಈ ದೇಶದ ಮಾಧ್ಯಮಗಳಲ್ಲಿದ್ದವರು ಅಂದೂ ಅದರ ಕುರಿತಂತೆ ತಲೆಕೆಡಿಸಿಕೊಳ್ಳಲಿಲ್ಲ, ಇಂದೂ ಕೂಡ! ಕಳೆದ ಮಾರ್ಚ್‌ನಲ್ಲಿ ಪ್ರೇಮ್ಶಂಕರ್ ಝಾ ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ ವೈರ್ ಪತ್ರಿಕೆಗೆ ಬರೆದ ಲೇಖನದಲ್ಲಿ, 1100 ಜನ ಸಾಮಥ್ರ್ಯ ಹೊಂದಿದ್ದ ಆ ರೈಲು 2000ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಮೊದಲ ತಪ್ಪು ಎಂಬುದನ್ನು ಬರೆದುಕೊಂಡಿದ್ದಾರೆ. ಎಸ್6 ಬೋಗಿ ಬೆಂಕಿ ಹೊತ್ತಿಸಿಕೊಂಡು ಉರಿದು ಕರಸೇವಕರು ಸಾಯಲು ಕಾರಣವಾಗಿದ್ದು ಅದು ಅಗತ್ಯಕ್ಕಿಂತ ಹೆಚ್ಚು ತುಂಬಿದ್ದುದರಿಂದ ಎಂದು ವಾದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿದ ಮುಸಲ್ಮಾನರದ್ದು ಯಾವ ತಪ್ಪೂ ಇಲ್ಲ. ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳದ್ದೇ ತಪ್ಪು. ಅರುಂಧತಿ ರಾಯ್ ಅಂತೂ ಅಂದಿನ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿ ಬರುತ್ತಿದ್ದ ಕರಸೇವಕರ ಮೇಲೆ ಮುಸಲ್ಮಾನರಿಗೆ ಆಕ್ರೋಶವಿತ್ತು, ಹೀಗಾಗಿ ಈ ರೀತಿ ಆಯ್ತು ಎಂದು ದಂಗೆಕೋರರಿಗೆ ಕವರಿಂಗ್ ಫೈರ್ ಕೊಡುವ ಪ್ರಯತ್ನ ಮಾಡಿದ್ದಳು! ಮಸೀದಿ ಉರುಳುವ ಮತ್ತು ಗೋದ್ರಾ ರೈಲಿಗೆ ಬೆಂಕಿ ಹಚ್ಚುವ ಘಟನೆಗಳ ನಡುವೆ ಹತ್ತು ವರ್ಷಗಳ ಅಂತರವಿತ್ತು ಎಂಬುದನ್ನು ಆಕೆ ಮರೆತೇ ಹೋಗಿದ್ದಳು. ಹತ್ತು ವರ್ಷಗಳ ಹಿಂದೆ ನಿರ್ಜೀವ ಕಟ್ಟಡವೊಂದನ್ನು ಉರುಳಿಸಿದ ಘಟನೆಗೆ ಮುಸಲ್ಮಾನರು 59 ಜನರ ಸಜೀವ ದಹನ ಮಾಡಿದ್ದು ಸಹಜ ಪ್ರತಿಕ್ರಿಯೆಯಾಗಬಹುದಾದರೆ, ಈ ರೈಲು ದಹನದ ನಂತರ ಹಿಂದೂಗಳು ಮುಸಲ್ಮಾನರ ವಿರುದ್ಧ ಆಕ್ರೋಶಗೊಂಡಿದ್ದು ಮಾತ್ರ ಅಸಹಜ ಹೇಗಾಯ್ತು? ಈ ಪ್ರಶ್ನೆಯನ್ನು ಆಗಲೂ ಯಾರೂ ಕೇಳಲಿಲ್ಲ, ಈಗಲೂ ಕೂಡ ವ್ಯವಸ್ಥಿತವಾಗಿ ಮರೆಯುತ್ತಾರೆ.

ಆದರೆ ಗೋದ್ರಾ ನಂತರದ ಘಟನೆಗಳನ್ನು, ಮೋದಿಯನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಕ್ಕೆ ಎಲ್ಲರೂ ರಣಹದ್ದುಗಳಂತೆ ಬಳಸಿಕೊಂಡರು. ಮೋದಿ ಮುಖ್ಯಮಂತ್ರಿಯ ಪಟ್ಟಕ್ಕೆ ಬಂದು ಆಗಷ್ಟೇ ನಾಲ್ಕು ತಿಂಗಳು ಕಳೆದಿದ್ದವು. ಕಚ್‌ನ ಭೂಕಂಪವನ್ನು ಎದುರಿಸಿ ನಿಂತು ಅವರು ಜನರಲ್ಲಿ ಮೂಡಿಸಿದ ವಿಶ್ವಾಸ ಪ್ರತಿಪಕ್ಷಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಅವಕಾಶವನ್ನು ಎಲ್ಲರೂ ಬಳಸಿಕೊಂಡರು. ರಾಷ್ಟ್ರಮಟ್ಟದಲ್ಲಿ ಹಿಂದೂಗಳನ್ನು ಅವಮಾನಗೊಳಿಸಲು ದಂಗೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಲಾಯ್ತು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಮೋದಿ ದಂಗೆಗಳು ಕೈಮೀರುತ್ತವೆಂದು ಗೊತ್ತಾದೊಡನೆ ಪಕ್ಕದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖರಿಗೆ ಪತ್ರ ಬರೆದು ರಕ್ಷಣೆಯ ದೃಷ್ಟಿಯಿಂದ ಸಹಾಯ ಕೊಡುವಂತೆ ಕೇಳಿಕೊಂಡರು. ಕಾಂಗ್ರೆಸ್ಸಿಗೆ ಸೇರಿದ್ದ ಈ ಮೂರೂ ರಾಜ್ಯಗಳು ಅಂದು ಮೋದಿಯ ವಿನಂತಿಗೆ ಪ್ರತಿಕ್ರಿಯಿಸಲೇ ಇಲ್ಲ. ಇದಕ್ಕೆ ವಿಪರೀತವಾಗಿ ದಂಗೆ ನಿಯಂತ್ರಣ ಮಾಡುವಲ್ಲಿ ಮೋದಿ ಸೋತರೆಂದು ಅದೇ ಮುಖ್ಯಮಂತ್ರಿಗಳು ಆನಂತರ ಮಾತನಾಡಲಾರಂಭಿಸಿದರು. ಸುಳ್ಳು ಸುದ್ದಿ ಹಬ್ಬಿಸಿ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಸ್ಸೀಮರಾದ ಎಡಪಂಥೀಯರು ಕೌಸರ್ ಬಾನೊ ಎಂಬ ಗರ್ಭಿಣಿ ಮುಸ್ಲೀಂ ಹೆಣ್ಣುಮಗಳ ಸಾವನ್ನೂ ಕೂಡ ತಮಗೆ ತಕ್ಕಂತೆ ಬಳಸಿಕೊಂಡರು. ಹಿಂದೂ ಪಡೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಹೊಟ್ಟೆಯನ್ನು ಸೀಳಿ, ಒಳಗಿದ್ದ ಮಗುವನ್ನು ಕತ್ತಿಯಿಂದ ಕತ್ತರಿಸಿದರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಆ ಮೂಲಕ ಮುಸಲ್ಮಾನರನ್ನು ಮೋದಿ ಸರ್ಕಾರದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳು ಅದೆಷ್ಟು ಕ್ರೂರಿಗಳು ಎಂದು ಬಿಂಬಿಸುವ ಪ್ರಯತ್ನ ಅದಾಗಿತ್ತು. ಸಾಮಾಜಿಕ ಜಾಲತಾಣಗಳು ಈಗಿನಷ್ಟು ವ್ಯಾಪಕವಾಗಿಲ್ಲದ್ದಿದ್ದದ್ದರಿಂದ ಇದರ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲೇ ಇಲ್ಲ. 2010ರಲ್ಲಿ ವಿಸ್ತಾರವಾದ ವರದಿ ಬಂದಾಗಲೇ ಇದೊಂದು ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದ್ದು. ತೀರಿಕೊಂಡ ಗರ್ಭಿಣಿ ಹೆಣ್ಣುಮಗಳ ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಜೆ.ಎಸ್ ಕನೋರಿಯಾ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದ್ದುದನ್ನು, ಎರಡೂವರೆ ಕೆಜಿಯಷ್ಟು ತೂಕವಿದ್ದುದನ್ನು ದಾಖಲಿಸಿದ್ದರು. ಆದರೆ ಆ ವರದಿಯ ನಂತರವೂ ಕೌಸರ್ ಬಾನೊ ಕಥೆ ಮಾತ್ರ ಹಾಗೆಯೇ ಉಳಿಯಿತು!

ಈ ದಂಗೆಯ ಕ್ಷಣ-ಕ್ಷಣದ ಮಾಹಿತಿಗಳನ್ನು ಬಿತ್ತರಿಸುವ ಧಾವಂತಕ್ಕೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂದು ಹೇಳುತ್ತಾ ಸುಳ್ಳು ಸುದ್ದಿಗಳನ್ನೇ ವ್ಯಾಪಕವಾಗಿ ಪ್ರಚಾರ ಮಾಡಿ ದಂಗೆಗಳಿಗೆ ಪ್ರೇರಣೆಕೊಟ್ಟರು. ಬರ್ಖಾದತ್ ಸೂರತ್ತಿನ ವಜ್ರದ ಮಾರುಕಟ್ಟೆಯಲ್ಲಿ ನಿಂತು ‘ಇಲ್ಲಿ ಒಬ್ಬ ಪೊಲೀಸರೂ ಇಲ್ಲ. ಇಲ್ಲಿ ದಂಗೆ ವಿಸ್ತರಿಸಿದರೆ ಏನು ಕಥೆ?’ ಎಂದೆಲ್ಲಾ ವರದಿ ಮಾಡುತ್ತಿದ್ದಳು. ಕಚ್ ಭಾಗದಲ್ಲಿ ಹನುಮಾನ್ ಮಂದಿರವೊಂದನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ ಎಂಬ ಸುದ್ದಿಯನ್ನು ಆಕೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಳು. ಮುಖ್ಯಮಂತ್ರಿಯಾಗಿದ್ದ ಮೋದಿ ಆಕೆಗೆ ಕರೆಮಾಡಿ, ‘ವಜ್ರದ ಮಾರುಕಟ್ಟೆಯಲ್ಲಿ ಪೊಲೀಸರಿಲ್ಲ ಎಂದು ಹೇಳುವ ಮೂಲಕ ತಾವು ದಂಗೆಕೋರರನ್ನು ಆಹ್ವಾನಿಸುತ್ತಿದ್ದೀರಾ?’ ಎಂದು ಕೇಳಿದ್ದರಲ್ಲದೇ, ಕಚ್ ಭಾಗದಲ್ಲಿ ಆಕೆ ಹೇಳಿದ ಯಾವ ಮಂದಿರವೂ ಉರುಳಿರಲಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡರು. ಅದರರ್ಥ ಹಿಂದೂ-ಮುಸಲ್ಮಾನರ ನಡುವಿನ ಕಂದಕವನ್ನು ವಿಸ್ತಾರಗೊಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬುದೇ ಅವರೆಲ್ಲರ ಪ್ರಯತ್ನವಾಗಿತ್ತು. ಅವರ ಗುರಿ ಮೋದಿಯಷ್ಟೇ ಆಗಿರಲಿಲ್ಲ. ಏಕೆಂದರೆ ಬಿಜೆಪಿಯಲ್ಲೇ ಅನೇಕ ಗೊಂದಲಗಳುಂಟಾಗಿ ಮೋದಿ ಅನಿವಾರ್ಯಕ್ಕೆ ಅಧಿಕಾರಕ್ಕೆ ಬಂದಿದ್ದರು. ಜನಸಾಮಾನ್ಯರು ರೋಸಿಹೋಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಚಲಾಯಿಸಿದರೂ ಅಚ್ಚರಿ ಪಡಬೇಕಿರಲಿಲ್ಲ! ಎಲ್ಲ ಇಂಗ್ಲೀಷ್ ಮಾಧ್ಯಮಗಳಿಗೆ ಕಣ್ಣಿದ್ದುದು ಹಿಂದೂಗಳ ಮೇಲೆ. ಹಿಂದೂಗಳು ಆತಂಕವಾದಿಗಳು, ಕ್ರೂರಿಗಳು ಎಂದು ಬಿಂಬಿಸುವ ಜರೂರತ್ತು ಅವರಿಗಿತ್ತು. ಅದಕ್ಕೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮೋದಿ ಅನಿವಾರ್ಯವಾಗಿ ಎನ್ಡಿಟಿವಿಯನ್ನು ಗುಜರಾತಿನಲ್ಲಿ ತಡೆಹಿಡಿಯಬೇಕಾಯ್ತು. ಅಚ್ಚರಿ ಎಂದರೆ ಅಂದು ಅದೇ ಚಾನೆಲ್‌ನಲ್ಲಿದ್ದು ಈ ಇಡೀ ಸುಳ್ಳು ಸುದ್ದಿಯನ್ನು ಹರಡಿಸುವಲ್ಲಿ ನೇತಾರನಾಗಿದ್ದ ರಾಜ್‌ದೀಪ್ 17 ವರ್ಷಗಳ ನಂತರ 2019ರಲ್ಲಿ ಪತ್ರಕರ್ತ ಮನು ಜೋಸೆಫ್ ಕೇಳಿದ ಪ್ರಶ್ನೆಗೆ ‘ಈ ದಂಗೆಗೆ ಮೋದಿ ಕಾರಣರಲ್ಲವೇ ಅಲ್ಲ’ ಎಂದು ಉತ್ತರಿಸಿದ್ದ. ಹಾಗಿದ್ದರೆ ಅವತ್ತು ಹೇಳಿದ ಸುಳ್ಳುಗಳಿಗೆ ಯಾರು ಹೊಣೆ? ಅದರಿಂದಾಗಿ ಮೋದಿ ಸುದೀರ್ಘಕಾಲ ನರಕಯಾತನೆ ಅನುಭವಿಸಬೇಕಾಯ್ತಲ್ಲ, ಅದರ ಜವಾಬ್ದಾರಿ ಯಾರದ್ದು? ಈ ಪ್ರಶ್ನೆಗೆಲ್ಲ ಉತ್ತರಿಸಬೇಕಾದ್ದು ಯಾರು?


ಪತ್ರಕರ್ತರಷ್ಟೇ ಅಲ್ಲ, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಮೋದಿಯ ವಿರುದ್ಧ ತನ್ನೆಲ್ಲ ಆಕ್ರೋಶವನ್ನೂ ಹಂತ-ಹಂತವಾಗಿ ಹೊರಹಾಕಿದ. 2011ರಲ್ಲಿ ಆತ ಸ್ಫೋಟಕವಾದ ಮಾಹಿತಿಯೊಂದನ್ನು ಸಮಾಜದ ಮುಂದಿಟ್ಟ. ಕರಸೇವಕರನ್ನು ಸುಟ್ಟ ಪ್ರಕರಣದ ನಂತರ ಮೋದಿ ತುರ್ತು ಸಭೆಯೊಂದನ್ನು ಕರೆದು ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕೆಂದೂ, ಈ ಬಾರಿ ಈ ಆಕ್ರೋಶ ಹೊರಹಾಕುವ ಪ್ರಕ್ರಿಯೆ ಹೇಗಿರಬೇಕೆಂದರೆ ಇನ್ನೆಂದೂ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕದಂತಾಗಬೇಕೆಂದು ಹೇಳಿದ್ದರಂತೆ. ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಭಾಗವಹಿಸಲು ತನಗೂ ಆಹ್ವಾನವಿದ್ದ ಫ್ಯಾಕ್ಸ್ ಪ್ರತಿಯೊಂದನ್ನು ಆತ ಸಮಾಜದ ಮುಂದಿರಿಸಿದ. ಈ ಸಭೆಯಲ್ಲಿ ಎಂಟು ಜನ ಪ್ರಮುಖ ಪೊಲೀಸರಿದ್ದು ಅವರೆಲ್ಲರೂ ಈ ದಂಗೆ ನಿಲ್ಲದಂತೆ ನೋಡಿಕೊಂಡರು ಎಂದಿದ್ದ. ನಾನಾವತಿ ಮೆಹ್ತಾ ಕಮಿಷನ್ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆಯಿತಲ್ಲದೇ ಆತ ಈ ಸಭೆಯಲ್ಲಿ ಭಾಗವಹಿಸಿರುವುದೇ ಸುಳ್ಳು ಎಂದಿತು. ಆತ ಹೇಳಿರುವ ಅಷ್ಟೂ ಹೇಳಿಕೆಯನ್ನು ಈ ಕಮಿಷನ್ ಸಾರಾಸಗಟಾಗಿ ತಿರಸ್ಕರಿಸಿತು. ಆತ ಮುಂದಿಟ್ಟಿರುವ ಫ್ಯಾಕ್ಸ್ ಪ್ರತಿಯೂ ಕೂಡ ಆ ಸಭೆಯದ್ದಲ್ಲವೆಂಬುದು ಇವರುಗಳ ತನಿಖೆಯ ಮೂಲಕ ಹೊರಬಂತು. ಮುಂದೆ ಇದೇ ಸಂಜೀವ್ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಾ ಮೋದಿ ವಿರೋಧಿಗಳ ಪಾಲಿನ ಹೀರೋ ಆಗಿ ಉಳಿದ.

ಇವರೆಲ್ಲರೂ ಸೇರಿ ವಾತಾವರಣವನ್ನು ಹೇಗೆ ರೂಪಿಸಿಬಿಟ್ಟಿದ್ದರೆಂದರೆ 72 ಗಂಟೆಗಳ ಕಾಲ ಮೋದಿ ಹಿಂದೂಗಳಿಗೆ ಪೂರ್ಣ ಅವಕಾಶವನ್ನು ಕೊಟ್ಟಿದ್ದರೆಂದು, ಅಷ್ಟರೊಳಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಲು ಮುಕ್ತ ಪರವಾನಗಿ ನೀಡಿದ್ದರೆಂದು ನಂಬಿಸಿಬಿಟ್ಟಿದ್ದರು. ಹೀಗಾಗಿಯೇ ಮೋದಿ ಸೈನ್ಯವನ್ನು ಕರೆಸಲಿಲ್ಲ ಎಂಬುದು ಅವರ ಮೇಲಿದ್ದ ಅಪವಾದ. ಆದರೆ ದಂಗೆಗಳು ಆರಂಭವಾಗಿವೆ ಎಂದು ಗೊತ್ತಾದೊಡನೆ ಸೈನ್ಯದ ಸಹಕಾರ ಬೇಕೆಂದು ಮೋದಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದುದು ನಿಚ್ಚಳವಾಗಿತ್ತು. ಆದರೆ ಸೇನೆ ಗಡಿಭಾಗದಿಂದ ರಕ್ಷಣೆಗೆಂದು ಬರಲು ಕೆಲವು ಗಂಟೆಗಳ ಸಮಯವಾದರೂ ಹಿಡಿಯುತ್ತದೆಂಬುದು ಎಂಥವನಿಗೂ ಗೊತ್ತಿರಬೇಕಾದ ಸಂಗತಿ. ಮೂರು ಸಾವಿರ ಸೈನಿಕರ ಪಡೆ ಘಟನೆಯಾದ ಎರಡು ದಿನಗಳ ನಂತರ ಮಾರ್ಚ್ ಒಂದಕ್ಕೆ ಅಹ್ಮದಾಬಾದಿಗೆ ಬಂದಿಳಿದಿತ್ತು. ಮೋದಿ ದಂಗೆಗಳು ಆರಂಭವಾದ ದಿನ ಸಂಜೆಯೇ ಸೈನ್ಯದ ಸಹಾಯಕ್ಕಾಗಿ ಕರೆಮಾಡಿದ್ದು ದಾಖಲಾಗಿತ್ತು. ಆನಂತರದ ದಿನಗಳಲ್ಲಿ ಅನೇಕ ಪತ್ರಿಕೆಗಳು ಇದನ್ನು ವರದಿ ಮಾಡಿದವು. ಅಷ್ಟರವೇಳೆಗೆ ಮೋದಿಯ ಕುರಿತಂತೆ ಹಬ್ಬಿಸಬೇಕಾದ ಸುಳ್ಳುಗಳನ್ನೆಲ್ಲಾ ಹೇಳಿಯಾಗಿತ್ತು. ಈ ಅಯೋಗ್ಯರ ಸಾಮಥ್ರ್ಯ ಎಂಥದ್ದಿತ್ತೆಂದರೆ ಇಡಿಯ ಜಗತ್ತು ದಂಗೆಯ ಹಿಂದಿನ ಕಾರಣ ಮೋದಿ ಎಂಬುದನ್ನು ನಂಬಿತ್ತೆನ್ನುವುದನ್ನು ಬಿಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಇದನ್ನು ಒಪ್ಪಿಕೊಂಡು ಮೋದಿಯವರನ್ನು ಬದಲಾಯಿಸಿಬಿಡುವ ತವಕದಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಟಲ್ಜಿ ರಾಜ್ಯಧರ್ಮದ ಪಾಲನೆಯ ಕುರಿತಂತೆ ಮೋದಿಗೆ ಕಿವಿಮಾತು ಹೇಳಿದ್ದೇನೆ ಎಂಬುದಂತೂ ಮೋದಿಯವರ ಪಾಲಿಗೆ ಕಂಟಕಪ್ರಾಯವೇ ಆಗಿತ್ತು!

ಮುಂದಿನ ಕನಿಷ್ಠ 12 ವರ್ಷಗಳ ಕಾಲ ಮೋದಿಯ ಪಾಲಿಗೆ ಇದು ವನವಾಸವೇ. ಅವರು ವಿದೇಶಕ್ಕೆ ಹೋಗುವಾಗ ಅಲ್ಲಿನ ಪತ್ರಿಕೆಗಳಲ್ಲಿ ಗೋದ್ರಾ ದಂಗೆಯ ಕುರಿತಂತೆ ಬರೆಸಲಾಗುತ್ತಿತ್ತು. ಚುನಾವಣೆಗೆ ಹೋಗುವ ಮುನ್ನ ಗೋದ್ರಾ ದಂಗೆಗಳನ್ನು ನೆನಪಿಸಿಕೊಡಲಾಗುತ್ತಿತ್ತು. ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದರೆ ಮೋದಿಯನ್ನು ದಂಗೆಕೋರ ಎಂದು ಬಿಂಬಿಸಿ ಹೂಡಿಕೆದಾರರನ್ನು ಹಿಂದೆ ಸರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಮನುಷ್ಯ ಎಲ್ಲವನ್ನೂ ಎದುರಿಸಿದ. 12 ವರ್ಷಗಳ ಕಾಲ ತನಗಾದ ಅವಮಾನವನ್ನು ನುಂಗಿಕೊಂಡ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ. ಮತ್ತೆ-ಮತ್ತೆ ಚುನಾವಣೆಗಳನ್ನು ಗೆದ್ದು 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಹುಮತ ಪಡೆದು ಪ್ರಧಾನಿಯೂ ಆದ. 2019ರಲ್ಲಿ ಮತ್ತೆ ಪ್ರಧಾನಿಯಾದ. ಈಗ ಅದೇ ನರೇಂದ್ರಮೋದಿ ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದಿದ್ದಾರೆ. ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲ ಕಠಿಣ ಸಂದರ್ಭದಲ್ಲೂ ಜೊತೆಯಲ್ಲಿದ್ದ ನಿಜ ಭಾರತೀಯನನ್ನು ಕಂಡು ಸಂತೋಷ ಪಡಬಹುದು ಅಥವಾ ರಣಹದ್ದುಗಳಂತೆ ಹಿಂದೆ ಬಿದ್ದಿದ್ದವರನ್ನು ಕಂಡು ಅಸಹ್ಯವೆನಿಸಬಹುದು!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ರಾಮಾಯಣದಲ್ಲಿ ಎಲ್ಲೋ ಹೊರಗಿಂದ ನುಸುಳಿದ ಕಥೆಯಿದು. ಚೌಡೇಶ್ವರಿ ದೇವಿಯ ಬಳಿ ಭಾರತದ ಭವಿಷ್ಯದ ಕುರಿತಂತೆ ಕೆಲವಾರು ವರ್ಷಗಳ ಹಿಂದೆ ರಾಮಕೃಷ್ಣಾಶ್ರಮದ ಮಿತ್ರರೊಬ್ಬರು ಕೇಳಿದಾಗ ದೇವಿ ಹೇಳಿದ್ದಂತೆ, ‘ಇಂದ್ರಜಿತ್ ಸಾಯುವ ಮುನ್ನ ರಾಮನನ್ನು ಬಲು ದೈನ್ಯದಿಂದ ಕೇಳಿದನಂತೆ. ತಂದೆ ರಾವಣನಾದರೋ ತಪ್ಪಿತಸ್ಥ, ನಿಜ. ಆತ ಶಿವಭಕ್ತನಾದರೂ ರಾಕ್ಷಸನಂತೆ ವರ್ತಿಸಿದ್ದಾನೆ. ಸೀತೆಯನ್ನು ಅಪಹರಿಸಿಕೊಂಡು ಬಂದು ತಪ್ಪೆಸಗಿದ್ದಾನೆ. ಅವನಿಗೆ ಶಿಕ್ಷೆ ಕೊಡುವ ಭರದಲ್ಲಿ ಯಾವ ತಪ್ಪನ್ನೂ ಮಾಡದ ನನಗೇಕೆ ಈ ಶಿಕ್ಷೆ? ದೇವರ ದೇವ ನೀನೆನ್ನುತ್ತಾರೆ. ನಾನು ಒಂದು ದಿನವಾದರೂ ಲಂಕೆಯನ್ನು ಆಳದೇ ಪ್ರಾಣ ಬಿಡುತ್ತಿದ್ದೇನಲ್ಲ, ಇದು ನ್ಯಾಯವೇ? ಎಂದನಂತೆ. ರಾಮನ ಮನ ಕರಗಿತು. ಆತ ಮೈದಡವಿ ಕಲಿಯುಗದಲ್ಲಿ ನೂರು ವರ್ಷಗಳ ಕಾಲ ನೀನು ಮತ್ತು ನಿನ್ನ ಪರಿವಾರ ಭಾರತವನ್ನೇ ಆಳುವಂತಾಗಲಿ’ ಎಂದುಬಿಟ್ಟನಂತೆ. ಈ ಕಥೆಯನ್ನು ಕೇಳಿದೊಡನೆ ನಾನು ಅಚ್ಚರಿಯಿಂದ ಅತ್ತ ತಿರುಗಿ, ಹಾಗಾಯಿತೇನು? ಎಂದಾಗ, ಕಾಂಗ್ರೆಸ್ಸಿನ ಆಳ್ವಿಕೆಯ ಒಂದು ಕುಟುಂಬದ ಅಧಿಕಾರಕ್ಕೆ ನೂರು ವರ್ಷ ಕಳೆಯುತ್ತಾ ಬಂತಲ್ಲ, ಎಂದರು. ತಲೆಕೆರೆದುಕೊಂಡು ನೋಡಿದರೆ ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದದ್ದು 1919ರಲ್ಲಿ. ಮತ್ತೀಗ ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸ್ಪಷ್ಟತೆ ಬಂದಿದ್ದು 2019ರಲ್ಲಿ. ಬರೋಬ್ಬರಿ ನೂರು ವರ್ಷ! ಹೇಳಿದ ಪುಣ್ಯಾತ್ಮನ ಕಪೋಲಕಲ್ಪಿತ ಕಥೆಯೋ ಅಥವಾ ನಿಜವಾಗಿಯೂ ದೇವಿಯೇ ಹೇಳಿದ್ದಳೋ ನನಗಂತೂ ಗೊತ್ತಿಲ್ಲ. ಆದರೆ ಅಕ್ಷರಶಃ ಹೊಂದಾಣಿಕೆಯಂತೂ ಆಗುತ್ತಿದೆ. ಬೀದಿ-ಬೀದಿಗಳಲ್ಲಿ ರಾಹುಲ್ ಪಾದಯಾತ್ರೆ ಮಾಡುತ್ತಾ ಭಾರತವನ್ನು ಜೋಡಿಸುತ್ತೇನೆ ಎನ್ನುವಾಗ ಕಾಂಗ್ರೆಸ್ಸಿಗರ ಉತ್ಸಾಹ ಮುಗಿಲು ಮುಟ್ಟಿತ್ತು. ಕಾರ್ಯಕರ್ತರ ಗಡಣ ಬೀದಿಗಿಳಿದು ಅರಚಾಡುವಾಗ ಮುಂದಿನ ಐದ್ಹತ್ತು ವರ್ಷ ಇವರನ್ನು ಅಲುಗಾಡಿಸಲು ಸಾಧ್ಯವೇ ಇಲ್ಲವೇನೋ ಎನಿಸುತ್ತಿತ್ತು. ಮೋದಿ ಬೀದರ್‌ಗೆ ಕಾಲಿಟ್ಟರು ನೋಡಿ, ಎಲ್ಲರೂ ಚಡಪಡಿಸಲಾರಂಭಿಸಿದ್ದಾರೆ. ರಾಹುಲ್‌ನ ಯಾತ್ರೆಗೆ ಜನರನ್ನು ಕಷ್ಟಪಟ್ಟು ಕರೆತರುವುದಕ್ಕೂ, ಮೋದಿಯ ರ್ಯಾಲಿಗೆ ಜನ ಇಷ್ಟಪಟ್ಟು ಬರುವುದಕ್ಕೂ ಅಜಗಜಾಂತರವಿದೆ. ನಿಸ್ಸಂಶಯವಾಗಿ ಮೋದಿ ಭಾರತದ ಜನರ ಪಾಲಿನ ಸೂಪರ್ ಸ್ಟಾರ್. ಬಹುಶಃ ಅಟಲ್ ಬಿಹಾರಿ ವಾಜಪೇಯಿಯ ನಂತರ ಇಷ್ಟು ಜನಾನುರಾಗಕ್ಕೆ ಪಾತ್ರರಾದ ಮತ್ತೊಬ್ಬ ವ್ಯಕ್ತಿ ಬಂದಿರಲಿಕ್ಕಿಲ್ಲ. ವಾಜಪೇಯಿ ತಮ್ಮ ಖ್ಯಾತಿಯನ್ನು ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಸೋತರು. ಮೋದಿಯ ಹೆಗ್ಗಳಿಕೆಯೇನು ಗೊತ್ತೇ? ಅವರು ರ್ಯಾಲಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಯನ್ನೂ ರಾಷ್ಟ್ರಭಕ್ತನಾಗಿಬಿಡುವಂತೆ ಮಾಡಿಬಿಡುವರು, ಅಲ್ಲಿಗೆ ಬಿಜೆಪಿಗೆ ಮತ ಖಾತ್ರಿ.

ನೀವು ಯೋಜನೆಗಳನ್ನು ರೂಪಿಸಿ, ಒಂದಷ್ಟು ಉಚಿತಗಳ ಘೋಷಣೆಮಾಡಿ, ಒಮ್ಮೆಯೋ ಎರಡು ಬಾರಿಯೋ ಮತಗಳಿಸಿಬಿಡಬಹುದು. ಆದರೆ ನಿಮ್ಮ ಸಾನಿಧ್ಯ ಮಾತ್ರದಿಂದಲೇ ಜನರ ಒಲವನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರೆ ಅದಕ್ಕೆ ದೈವೀಶಕ್ತಿಯೂ ಬೇಕು. ಕಾಂಗ್ರೆಸ್ಸು ಕೋಟಿಗಟ್ಟಲೆ ರೂಪಾಯಿ ಸುರಿದು ರಣನೀತಿ ರೂಪಿಸಲು ಜನರನ್ನು ಇಟ್ಟುಕೊಂಡಿದೆ. ಮೋದಿ ಸುಮ್ಮನೆ ನಾಲ್ಕು ಸುತ್ತು ತಿರುಗಾಡುತ್ತಾರೆ, ಜನ ಪ್ರೀತಿಯಿಂದ ಬಂದು ಮತಹಾಕಿ ಹೋಗುತ್ತಾರೆ. ಎಷ್ಟು ವಿಚಿತ್ರ ಅಲ್ಲವೇ?

ಮೋದಿಗಿರುವ ಶಕ್ತಿಯೇ ಅದು. ಅವರು ಜನರ ಹೃದಯದೊಂದಿಗೆ ನೇರವಾಗಿ ಮಾತನಾಡಬಲ್ಲರು. ಅವರು ಏನೇ ಮಾಡಿದರೂ ಅದು ನಾಟಕವೆನಿಸುವುದಿಲ್ಲ. ರಾಹುಲ್ ಅಪರೂಪಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಅದು ಸತ್ಯವೆನಿಸುವುದಿಲ್ಲ. ಮೋದಿಯನ್ನು ಶಾಲೆಗೇ ಹೋಗದವರೆಂದು ಇವರೆಲ್ಲ ಜರಿದರೂ ಮೋದಿ ಬುದ್ಧಿವಂತರೆಂಬುದನ್ನು ಇಡಿಯ ಜಗತ್ತು ಒಪ್ಪುತ್ತದೆ. ರಾಹುಲ್ ಕೇಂಬ್ರಿಡ್ಜ್ ನಿಂದಲೇ ಬಂದಿದ್ದಾರೆ ಎಂದು ಇವರೆಲ್ಲ ಬಡಾಯಿ ಕೊಚ್ಚಿಕೊಂಡರೂ ಆತ ಏನೂ ಅರಿಯದ ಮುಗ್ದನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ, ಸ್ವತಃ ಕಾಂಗ್ರೆಸ್ಸಿಗರಿಗೂ! ಮೋದಿ ಈ ದೇಶದ ಜನರ ಮೇಲಿನ ತಮ್ಮ ನಿಷ್ಕಳಂಕ ಪ್ರೀತಿಯಿಂದಲೇ ಗೆಲುವು ಸಾಧಿಸಿಬಿಟ್ಟರು. ಬಡತನವನ್ನು ಅನುಭವಿಸಿಯೇ ಮೇಲಕ್ಕೆ ಬಂದ ಆ ಪುಣ್ಯಾತ್ಮ ಅವರ ಬದುಕನ್ನು ಸುಂದರಗೊಳಿಸಲೆಂದೇ ಯೋಜನೆಗಳನ್ನು ರೂಪಿಸಿದರು. ಅದನ್ನು ಜಾರಿಗೆ ತರಲು ಹಗಲು-ರಾತ್ರಿ ಶ್ರಮಿಸಿದರು. ಹೀಗಾಗಿ ಪ್ರತೀ ಊರಿನ, ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಮೋದಿ ಯೋಜನೆಯಿಂದ ಉಪಕೃತನಾದವನೇ. ಬೇರೆಲ್ಲವನ್ನು ಬದಿಗಿಟ್ಟು ಕರೋನಾ ಕಾಲದ ಮೋದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಗಡ್ಡ ಬಿಟ್ಟು, ಋಷಿಯಂತಾಗಿಬಿಟ್ಟಿದ್ದರು ಅವರು. ಅನೇಕ ರಾತ್ರಿಗಳನ್ನು ನಿದ್ದೆಮಾಡದೇ ಕಳೆಯುತ್ತಿದ್ದ ಅವರು ಸಭೆಗಳಿಗೆಂದು ಬಂದಾಗ ಕಣ್ಣು ಸೊರಗಿ ಹೋಗಿರುತ್ತಿತ್ತು. ತನ್ನವರನ್ನು ಕಳೆದುಕೊಳ್ಳುವ ಆತಂಕ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸದಾಕಾಲ ಉತ್ಸಾಹದ ಚಿಲುಮೆಯಂತಿರುತ್ತಿದ್ದ ಮೋದಿ ಆ ಸಂದರ್ಭದಲ್ಲಿ ಮಾತ್ರ ಸೋತು ಸುಣ್ಣವಾದವರಂತೆ ಕಾಣುತ್ತಿದ್ದರು. ದೀರ್ಘಕಾಲದಿಂದ ಕಾಡುತ್ತಿದ್ದ ಯಾವುದೋ ರೋಗ ಉಲ್ಬಣವಾದರೆ ನಮ್ಮ ಸ್ಥಿತಿ ಹೇಗಿರುತ್ತದೆಯೋ ಹಾಗೆ. ಆದರೆ ಮೋದಿ ಎಲ್ಲ ಭಾರವನ್ನೂ ತಾನೇ ಹೊತ್ತರು, ತನ್ನ ಶಿಲುಬೆಯನ್ನು ತಾನೇ ಹೊತ್ತ ಏಸುವಿಗಿಂತ ಕೆಟ್ಟದ್ದಾಗಿ. ಕಾಂಗ್ರೆಸ್ಸಿಗರಾದಿಯಾಗಿ ಬುದ್ಧಿಜೀವಿಗಳೂ ಸೇರಿದಂತೆ ಕೆಲವು ಮುಂಚೂಣಿಯ ನಾಯಕರು ವಿದೇಶೀ ವ್ಯಾಕ್ಸಿನ್‌ಗಳನ್ನು ಕೊಂಡುಕೊಳ್ಳುವುದೊಳಿತು ಎಂದು ಮುಗಿಬಿದ್ದಾಗ ಮೋದಿ ಎಲ್ಲ ನೋವನ್ನೂ ಸಹಿಸಿಕೊಂಡರು. ಎಲ್ಲವನ್ನೂ ಮೈಮೇಲೆಳೆದುಕೊಂಡು ಸಂಕಟ ಜನಸಾಮಾನ್ಯರಿಗೆ ತಲುಪದಂತೆ ತಾವೇ ನುಂಗಿದರು, ವಿಷಕಂಠನಂತೆ. ಅವರ ಈ ಸಾಹಸದ ಪ್ರತಿಫಲವಾಗಿಯೇ ಭಾರತದಲ್ಲಿ ವ್ಯಾಕ್ಸಿನ್‌ಗಳು ತಯಾರಾಗಿದ್ದು. ನಿಮಗೆ ನೆನಪಿರಬೇಕು, ಈ ವ್ಯಾಕ್ಸಿನ್ ಮೇಲೆ ವಿಶ್ವಾಸವಿಲ್ಲ ಎಂದಿದ್ದರು ಕಾಂಗ್ರೆಸ್ಸಿಗರು. ನಂಬಿಕಸ್ಥ ಅಮೇರಿಕನ್ ವ್ಯಾಕ್ಸಿನ್ ಬಳಸುವುದು ದೇಸೀ ವ್ಯಾಕ್ಸಿನ್ ಬಳಕೆಗಿಂತ ಉತ್ತಮ ಎಂದಿದ್ದರೂ ಕೂಡ. ಮೋದಿ ತಲೆಕೆಡಿಸಿಕೊಳ್ಳಲಿಲ್ಲ. ಈ ನಾಡಿನ ವಿಜ್ಞಾನಿಗಳ ಮೇಲೆ ಅಪಾರವಾದ ಭರವಸೆಯನ್ನಿಟ್ಟು ವ್ಯಾಕ್ಸಿನ್ ಅನ್ನು ಮಾರುಕಟ್ಟೆಗೆ ತರಲು ಶ್ರಮಿಸಿದರು. ಅತ್ತ ಅಮೇರಿಕಾದ ವ್ಯಾಕ್ಸಿನ್ಗಳು ಈಗ ಜನರ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡುತ್ತಿದ್ದರೆ ಭಾರತದ ವ್ಯಾಕ್ಸಿನ್‌ಗಳು ಕರೋನಾಕ್ಕೆ ಇತಿಶ್ರೀ ಹಾಡಿ, ಜಗತ್ತಿನ ಹುಬ್ಬೇರುವಂತೆ ಮಾಡಿವೆ. ಹಾಗೆ ಸುಮ್ಮನೆ ಕರೋನಾ ಕಾಲದಲ್ಲಿ ಮೋದಿಯ ಜಾಗದಲ್ಲಿ ರಾಹುಲ್ ಇದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹಿಸಿ ನೋಡಿ, ಗಾಬರಿಯಾಯ್ತಲ್ಲವೇ? ಮೋದಿ ಅಂಥದ್ದೊಂದು ಬಲವಾದ ಛಾಪನ್ನು ಭಾರತೀಯರ ಹೃದಯದೊಳಗೆ ಒತ್ತಿಬಿಟ್ಟಿದ್ದಾರೆ.

ಕಾಂಗ್ರೆಸ್ಸಿಗೆ ಬಡವರ ಕುರಿತಂತೆ ಮಾತನಾಡುವುದೆಂದರೆ ಆನಂದವೋ ಆನಂದ. ದೇಶದಲ್ಲಿ ಹೆಚ್ಚು-ಹೆಚ್ಚು ಬಡವರಿದ್ದಷ್ಟೂ ಅವರ ಮತಗಳಿಗೆ ಹೆಚ್ಚುತ್ತದೆ. ಬಡತನ ಎನ್ನುವುದು ಸಂಪತ್ತಿನ ಕೊರತೆಯಿಂದ ಉಂಟಾಗುವಂಥದ್ದಲ್ಲ. ಅದೊಂದು ಅತೃಪ್ತ ಮಾನಸಿಕತೆ. ದಿನಕ್ಕೆ ಒಂದು ಹೊತ್ತು ಊಟ ಮಾಡುವವನು ತನ್ನ ತಾನು ಸುಖಿ ಎಂದು ಭಾವಿಸಿ ಆನಂದದಿಂದ ಕಾಲ ಕಳೆದುಬಿಡುತ್ತಾನೆ. ಅದೇ ವೇಳೆಗೆ ತಿಂಗಳಿಗೆ ಎರಡು ಲಕ್ಷ ಸಂಪಾದಿಸುವ ವ್ಯಕ್ತಿಯೂ ತನಗೆ ಸಾಕಾದಷ್ಟು ಸಿಗುತ್ತಿಲ್ಲವೆಂದು ಗೋಳಾಡುತ್ತಲೇ ಇರುತ್ತಾನೆ. ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಡುವ ನೆಪದಲ್ಲಿ ಹೀಗೆ ಗೋಳಾಡುವವರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಬಡವರು ಹೆಚ್ಚಾದಷ್ಟು ಅವರ ಬೇಳೆ ಚೆನ್ನಾಗಿ ಬೇಯುತ್ತದೆ. ಮುಸಲ್ಮಾನರು ಹೆಚ್ಚಾದಷ್ಟು ಏಕತ್ರಗೊಂಡ ಹಿಂದೂಗಳ ಭೀತಿಯನ್ನು ಅವರ ಹೃದಯದೊಳಗೆ ತುಂಬಿ ಮತ ಪಡೆಯಲು ಅವರಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಮಾಜ ಮೇಲು-ಕೀಳು, ಬಡವ-ಸಿರಿವಂತ, ಹಿಂದೂ-ಮುಸ್ಲೀಂ ಎಂದು ಒಡೆದಂತೆಲ್ಲ ಆನಂದವಾಗೋದು ಕಾಂಗ್ರೆಸ್ಸಿಗೇ. ಆದರೆ ಮೋದಿ ಇದನ್ನು ಪೂರ್ಣ ಬದಲಾಯಿಸಿದರು. ಅವರು ಬಡವರೆನಿಸಿಕೊಂಡವರ ಆತ್ಮಗೌರವವನ್ನು ಯಾವ ಮಟ್ಟಕ್ಕೊಯ್ದರೆಂದರೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ. ಜನವರಿ 26ಕ್ಕೆ ವಿಶ್ವವಿಖ್ಯಾತ ಪರೇಡ್ ನಡೆಯುತ್ತಲ್ಲ, ಪ್ರತಿವರ್ಷ ಅದನ್ನು ನೋಡಲು ವಿಐಪಿಗಳೆಲ್ಲ ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ. ಈ ವರ್ಷ ಮೋದಿ ಅಲ್ಲಿ ಕೂರಲು ಜಾಗಮಾಡಿಕೊಟ್ಟದ್ದು ಯಾರಿಗೆ ಗೊತ್ತೇನು? ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಕೆಲಸ ಮಾಡಿದ, ಕಾಶಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಕಾರಕೂನರ ಕುಟುಂಬಗಳಿಗೆ. ಇಂದು ಕಾರ್ಮಿಕರ ದಿನ ಬೇರೆ. ವರ್ಷಗಟ್ಟಲೆ ಕಾರ್ಮಿಕರ ಹೆಸರು ಹೇಳುತ್ತಾ ಪ್ರತಿಭಟನೆಗೆ ಬೀದಿಗೆ ಬಂದು ನಿಲ್ಲುವ ಕಮ್ಯುನಿಸ್ಟ್ ಮಂದಿಯೂ ಅಧಿಕಾರದಲ್ಲಿದ್ದಾಗ ಇಂಥದ್ದೊಂದು ಆಲೋಚನೆ ಮಾಡಿರಲಿಲ್ಲ. ಕೈಯ್ಯಲ್ಲಿ ಕರಣಿ ಹಿಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ತಾನು ಈ ಕೆಲಸ ಮಾಡುತ್ತಿರುವುದಕ್ಕೆ ಈಗ ಬೇಸರವೂ ಇಲ್ಲ, ಅವಮಾನ ಎನಿಸುವುದೂ ಇಲ್ಲ. ಏಕೆಂದರೆ ತಮ್ಮದ್ದೇ ಸಂಕುಲದ ಮಂದಿ ವಿಐಪಿಗಳಂತೆ ಗಣರಾಜ್ಯೋತ್ಸವದ ಪರೇಡ್ ನೋಡಲು ಕುಳಿತಿದ್ದಾರಲ್ಲ. ಇಂದು ಯಾರನ್ನು ಕಾರಕೂನರೆಂದು ಕರೆಯುತ್ತೇವಲ್ಲ, ಅವರು ಕಡಿಮೆ ದುಡಿಯುತ್ತಿಲ್ಲ. ನೀವು ಕೊಡುವ ಉಚಿತ ಕೊಡುಗೆ ಅವರಿಗೆ ಬೇಕೇ ಇಲ್ಲ. ಅವರ ವೃತ್ತಿಯನ್ನು ಜನ ಆಯ್ದುಕೊಳ್ಳದಿರುವುದಕ್ಕೆ ಆತ್ಮಗೌರವದ ಕೊರತೆಯ ಕಾರಣವಿದೆಯಲ್ಲ, ಅದನ್ನು ಸರಿಪಡಿಸಬೇಕಷ್ಟೇ. ಮೋದಿ ಅದನ್ನು ಮಾಡುತ್ತಿರುವುದರಿಂದಲೇ ಅವರೆಲ್ಲರಿಗೂ ಮೋದಿಯನ್ನು ಕಂಡಾಗ ದೇವರನ್ನು ಕಂಡಂತೆ ಆಗೋದು!

ಕಾಂಗ್ರೆಸ್ಸಿಗರ ಪಾಲಿಗೆ ಬಡವರು ಎಂದರೆ ದಡ್ಡರು ಎಂದರ್ಥ. ಹೀಗಾಗಿಯೇ ನೋಟ್‌ಬ್ಯಾನ್ ಮಾಡಿ ಜನರ ಕೈಗೆ ಡಿಜಿಟಲ್ ಮನಿ ಕೊಡುತ್ತೇವೆ ಎಂದು ಮೋದಿ ಹೇಳಿದಾಗ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕುಹಕ ಮಾಡಿದ್ದರು. ಈ ದೇಶದ ಹಳ್ಳಿಗನಿಗೆ ಮೊಬೈಲ್ ಬಳಸಲು ಬರುವುದಿಲ್ಲ, ಆಧುನಿಕ ತಂತ್ರಜ್ಞಾನದ ಅರಿವಿಲ್ಲ, ಅಂಥವನಿಂದ ಏನನ್ನು ನಿರೀಕ್ಷಿಸುತ್ತೀರಿ ಎಂದಿದ್ದರು. ಮೋದಿ ಅಂದಿನ ದಿನ ಏನೂ ಮಾತನಾಡಲಿಲ್ಲ. ಆದರೆ ಇಂದು ಜಗತ್ತಿನ ಹೆಚ್ಚು ಡಿಜಿಟಲ್ ವಹಿವಾಟನ್ನು ಭಾರತವೇ ನಡೆಸುತ್ತಿದೆ ಎಂಬುದು ಅರಿವಾದಾಗ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ. ಯಾವ ಹಳ್ಳಿಯ ಜನರನ್ನು ದಡ್ಡರೆಂದು ಕರೆದು ಸುಮಾರು 65 ವರ್ಷಗಳ ಕಾಲ ಇವರು ಆಳ್ವಿಕೆ ನಡೆಸಿದ್ದರೋ ಅದೇ ಹಳ್ಳಿಗರು ಇಂದು ಭಾರತದ ಆರ್ಥಿಕತೆ ಸದೃಢಗೊಳ್ಳಲು ಬಲವಾದ ಬೆನ್ನೆಲುಬಾಗಿಬಿಟ್ಟಿದ್ದಾರೆ. ಮೋದಿ ಇಟ್ಟ ಈ ವಿಶ್ವಾಸವನ್ನು ಹಳ್ಳಿಯಲ್ಲಿರುವ ಆ ಬಡಮಂದಿ ಮರೆಯುವುದಾದರೂ ಹೇಗೆ? ಅದಕ್ಕೆ ಮೋದಿ ತಮ್ಮೂರಿನ ಬಳಿ ಬರುತ್ತಿದ್ದಾರೆಂದರೆ ಆ ಜನ ಯಾವ ಪ್ರಶ್ನೆಯನ್ನೂ ಕೇಳದೇ ಧಾವಿಸಿಬರುತ್ತಾರೆ. ಅವರಿಗೆ ಕಾರ್ಯಕ್ರಮಕ್ಕೆ ಬರಲು ದುಡ್ಡು ಬೇಕಾಗುವುದಿಲ್ಲ, ಏಕೆಂದರೆ ತಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿದ ತಮ್ಮ ಪಾಲಿನ ದೇವರನ್ನು ಅವರಲ್ಲಿ ನೋಡುತ್ತಾರೆ.

ಕಾಂಗ್ರೆಸ್ಸು ಇಷ್ಟಕ್ಕೇ ನಿಲ್ಲಲಿಲ್ಲ. ಬಡವರು ಸದಾ ತಮ್ಮ ದಾಸರಾಗಿರಬೇಕೆಂದು ಅವರು ಆಲೋಚಿಸಿದರು. ಹೀಗಾಗಿಯೇ ಒಬ್ಬ ಒಮ್ಮೆ ಅಧಿಕಾರಕ್ಕೆ ಬಂದನೆಂದರೆ ಅವನ ಮಕ್ಕಳು, ಮೊಮ್ಮಕ್ಕಳೇ ಅಲ್ಲಿ ಕುಳಿತುಕೊಂಡು ಉಳಿದವರನ್ನೆಲ್ಲ ಕಾಲಡಿ ಕಸದಂತೆ ಕಂಡರು. ಸ್ವಲ್ಪ ಎಡವಟ್ಟಾಗಿದ್ದರೆ ಬಿಜೆಪಿ ಅದೇ ದಿಕ್ಕಿಗೆ ಹೋಗಿರುತ್ತಿತ್ತು. ನರೇಂದ್ರಮೋದಿ ಸಾಧ್ಯವಾದಷ್ಟು ಬದಲಾವಣೆಗೆ ಕೈಹಾಕಿದರು. ಅನೇಕ ಕಡೆಗಳಲ್ಲಿ ಯಾರೂ ಊಹಿಸದಿದ್ದ ಕಾರ್ಯಕರ್ತರಿಗೆ ಅವಕಾಶಕೊಟ್ಟರು. ಆರೇಳು ಬಾರಿ ಗೆದ್ದು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದವರನ್ನು, ಪಕ್ಷಕ್ಕೆ ತೊಂದರೆ ಉಂಟುಮಾಡಬಹುದೆಂದು ಗೊತ್ತಿದ್ದರೂ ಮುಲಾಜಿಲ್ಲದೇ ಮನೆಗೆ ಕಳಿಸಿದರು. ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತನಾಗಿರುವುದೆಂದರೆ ಜೀವನಪರ್ಯಂತ ಪರಿವಾರದ ಗುಲಾಮನಾಗಿರುವುದೆಂದರ್ಥ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ದುಡಿಯುವುದೆಂದರೆ ಒಂದಲ್ಲ ಒಂದು ದಿನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವುದೆಂದರ್ಥ. ಕಾಂಗ್ರೆಸ್ಸು ತನ್ನ ಅವಧಿಯುದ್ದಕ್ಕೂ ಹೆಚ್ಚು ‘ದೊಡ್ಡ ಮನುಷ್ಯ’ರನ್ನು ಸೃಷ್ಟಿಸಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಮಾಡಿಕೊಂಡ ದೊಡ್ಡವರು. ಇವರನ್ನು ಹತಾಶೆಯ ಕಂಗಳಿಂದ ನೋಡುತ್ತಾ ನಿಂತ ಆ ಬಡ-ಮಧ್ಯಮ ವರ್ಗದವರು ಈ ದೇಶದ ಕಥೆಯಿಷ್ಟೇ ಎಂದುಕೊಳ್ಳುತ್ತಾ ತಮ್ಮ ವ್ಯಾಪ್ತಿಯಲ್ಲಿ ಒಂದಷ್ಟು ಹಣ ಮಾಡಿಟ್ಟುಕೊಂಡು ಸುಮ್ಮನಾಗಿಬಿಡುತ್ತಿದ್ದರು. ಮೋದಿ ಮುಲಾಜಿಲ್ಲದೇ ಈ ದೊಡ್ಡವರ ಬಾಲ ಕತ್ತರಿಸಿಬಿಟ್ಟರು. ಅನೇಕರನ್ನು ಜೈಲಿಗೂ ತಳ್ಳಿದರು. ಮೊದಲೆಲ್ಲ ವಿಮಾನದಲ್ಲಿ ಈ ದೊಡ್ಡ ಮನುಷ್ಯರು ಮಾತ್ರ ತಿರುಗಾಡುತ್ತಿದ್ದರು. ಮೋದಿ ಹವಾಯಿ ಚಪ್ಪಲಿಯವರನ್ನೂ ವಿಮಾನ ಹತ್ತಿಸಿದರು. ಬಡವರ ಓಟಾಟದ ರೈಲುಗಳೆಂದರೆ ಕೊಳಕು, ಸಮಯ ಮೀರಿದ್ದು, ರೈಲ್ವೇ ನಿಲ್ದಾಣಗಳಂತೂ ಕೇಳಲೇಬೇಡಿ. ಮೋದಿ ಬಡವರು ಹೆಚ್ಚಾಗಿ ಬಳಸುವ ಈ ವ್ಯವಸ್ಥೆಯನ್ನು ಅತ್ಯುತ್ಕೃಷ್ಟ ಮಟ್ಟಕ್ಕೇರಿಸಲು ಪ್ರಯತ್ನ ಹಾಕಿದರು. ಇಂದು ಅನೇಕ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ರೂಪಿಸಲ್ಪಟ್ಟಿವೆ. ಅಂದರೆ ಉಚಿತವಾಗಿ ಏನೂ ಕೊಡಬೇಕಾಗಿಲ್ಲ, ಅವನ ಬದುಕಿನ ಮಟ್ಟವನ್ನು ಏರಿಸಲು ಏನು ಬೇಕೋ ಅದನ್ನು ಮಾಡಿದರಾಯ್ತು ಎಂಬುದು ಮೋದಿಯವರ ಸಿದ್ಧಾಂತ.

ಇಷ್ಟಾದರೂ ನಮಗೆ ನಮ್ಮ ಬದುಕಿನ ಮಟ್ಟ ಏರುವುದು ಬೇಕಾಗಿಲ್ಲ, ತುತ್ತು ಕೂಳಿಗೆ ಕೈಚಾಚಿಕೊಂಡು ಬದುಕುವುದೇ ಬೇಸೆನಿಸಿದರೆ ಕಾಂಗ್ರೆಸ್ಸಿಗೇ ಮತ ಹಾಕಬೇಕಷ್ಟೇ. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸ್ವಾಭಿಮಾನಿ ಕನ್ನಡಿಗ ಎಂದೆನಿಸಿದರೆ ನಿಸ್ಸಂಶಯವಾಗಿ ಮೋದಿಯ ಹಿಂದೆ ನಿಲ್ಲಬೇಕು. ಈ ಬಾರಿ ಮೋದಿಗೆ ಬಹುಮತ ಕೊಟ್ಟುಬಿಡೋಣ. ಪ್ರತೀಬಾರಿ ನಮ್ಮ ಜಾತಿಯ ಮಂತ್ರಿ-ಮುಖ್ಯಮಂತ್ರಿ ಎಂದೆಲ್ಲ ಬಡಿದಾಡುತ್ತೇವಲ್ಲ, ಈ ಒಂದು ಬಾರಿ ನಾಡುಕಟ್ಟಿದ ಮೈಸೂರಿನ ಮಹಾರಾಜರಂತಹ ದೂರದೃಷ್ಟಿಯ ನಾಯಕನೊಬ್ಬ ಅಧಿಕಾರಕ್ಕೇರಲೆಂದು ಪ್ರಾರ್ಥಿಸೋಣ. ಒಮ್ಮೆ ಮೋದಿಯನ್ನು ನಂಬೋಣ, ರಾಜ್ಯದಲ್ಲಿ ಅವರು ಕೇಳಿಕೊಂಡಂತೆ ಬಹುಮತದ ಸರ್ಕಾರ ತರೋಣ. ಏನಂತೀರಿ?

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ನಾಯಕರನ್ನು ಬಿಡಿ, ದೇಶವನ್ನೇ ಸಾಯಿಸುತ್ತಿದ್ದೀರಲ್ಲ!

ಪ್ರಿಯ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಪ್ರೀತಿಯ ನಮಸ್ಕಾರ.

ಸೈದ್ಧಾಂತಿಕವಾಗಿ ನಾವು ಕಿತ್ತಾಡಬಹುದು. ವೈಚಾರಿಕ ಮತ ಭೇದ ಖಂಡಿತ ಇದ್ದಿರಬಹುದು. ಕೆಲವೊಮ್ಮೆ ಹದ ಮೀರಿ ಕಾಲೆಳೆದಿರಬಹುದು, ಅಪಹಾಸ್ಯವನ್ನೂ ಮಾಡಿರಬಹುದು. ಆದರೆ ದೇಶದ ವಿಚಾರ ಬಂದಾಗ ಮಾತ್ರ ನಮ್ಮಲ್ಲಿ ಮತ ಭೇದ ಇರುವಂತಿಲ್ಲ. ರಾಷ್ಟ್ರ ನನಗಿಂತಲೂ, ಒಂದು ಪರಿವಾರಕ್ಕಿಂತಲೂ, ಒಂದು ಊರಿಗಿಂತಲೂ ಬಲು ದೊಡ್ಡದ್ದು. ಹೀಗಾಗಿಯೇ ಬಲುಮುಖ್ಯವಾದ ಕೆಲವು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಲೆಂದು ಈ ಪತ್ರ. 

ಅನೇಕ ಸಂಗತಿಗಳ ಕುರಿತಂತೆ ನಾವು ನಿಮ್ಮನ್ನು ವಿರೋಧಿಸುವುದಿದೆ. ಸರದಾರ್ ಪಟೇಲರಿಂದ ಅಧಿಕಾರವನ್ನು ಕಸಿದುಕೊಂಡ ಜವಾಹರ್‌ಲಾಲ್ ನೆಹರೂ ಬಗ್ಗೆ ಬೇಸರವಿದೆ. ಆದರೆ ನಾವದನ್ನು ಮರೆತಿದ್ದೇವೆ. ಇಂದಿರಾ ಬಾಬಾಸಾಹೇಬ್ ಅಂಬೇಡ್ಕರ್‌ರ ಸಂವಿಧಾನವನ್ನು ಗಾಳಿಗೆ ತೂರಿ ಎಲ್ಲ ಸ್ವಾತಂತ್ರ್ಯವನ್ನು ಕಸಿಯುವ ತುರ್ತು ಪರಿಸ್ಥಿತಿಯನ್ನು ಹೇರಿ ಭಾರತದ ಇತಿಹಾಸದಲ್ಲೊಂದು ಆರದ ಗಾಯವನ್ನು ಮಾಡಿಬಿಟ್ಟರಲ್ಲ, ನಾವದನ್ನು ನೆನಪಿಸಿಕೊಳ್ಳುವುದಿಲ್ಲ. ಇಂದಿರಾ ತೀರಿಕೊಂಡಾಗ ಸಿಖ್ಖರ ಹತ್ಯೆಯನ್ನು ನೀವೆಲ್ಲ ಸೇರಿ ಮಾಡಿದ್ದಿರಲ್ಲ, ಆ ಕುರಿತು ಸಿಖ್ಖರ ಕಣ್ಣೀರೇ ಇಂಗಿಹೋಗಿಬಿಟ್ಟಿದೆ, ಇನ್ನು ನಮ್ಮದೇನು ಲೆಕ್ಕ! ವಿಷಯ ಬಂತೆಂದೆ ನೆನಪಿಸಿಬಿಡುತ್ತೇನೆ. ಗೋಡ್ಸೆ ಗಾಂಧಿಯವರ ಹತ್ಯೆ ಮಾಡಿದ ಎಂಬ ಕಾರಣಕ್ಕೆ ಚಿತ್ಪಾವನ ಬ್ರಾಹ್ಮಣರನ್ನು ಅಟ್ಟಾಡಿಸಿ ಕೊಂದಿರಲ್ಲ, ಪಾಪ ಆ ಮಂದಿಯೂ ಅದನ್ನು ಮರೆತು ನೀವು ಅಪ್ಪಿ-ತಪ್ಪಿ ‘ಭಾರತ್ ಮಾತಾ ಕಿ’ ಎಂದರೆ ‘ಜೈ’ ಎಂದು ದನಿಗೂಡಿಸುತ್ತಾರೆ. ಬಿಡಿ, ಈ ದೇಶದವರೇ ಅಲ್ಲದ ಸೋನಿಯಾ ಪ್ರಧಾನಿಯಾಗಲೆಂದು ನೀವೆಲ್ಲ ಹಠ ಹಿಡಿದು ಕುಳಿತಿರಿ. ಆಕೆಯ ಮಗ ರಾಹುಲ್ ಇತ್ತೀಚೆಗೆ ಭಾರತ್ ಜೊಡೊ ಯಾತ್ರೆಯಲ್ಲಿ ಭಾರತವನ್ನು ತುಂಡರಿಸುವ ಸಂಕಲ್ಪಗೈದವರನ್ನೆಲ್ಲ ಜೊತೆಗೂಡಿಸಿಕೊಂಡು ನಡೆದ. ‘ಪಾಂಡವರಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡುತ್ತಿದ್ದರೇನು?’ ಎಂದಾತ ಪ್ರಶ್ನಿಸುವಾಗ ಯಾವುದೋ ಹಳ್ಳಿಯ ಮೂರನೇ ತರಗತಿಯ ಮಗುವನ್ನು ಮಾತನಾಡಿಸುತ್ತಿದ್ದೇವೇನೋ ಎನಿಸಿಬಿಡುತ್ತದೆ. ಆತನನ್ನೇ ಪ್ರಧಾನಿ ಮಾಡೋಣ ಎಂದು ನೀವಂದಾಗ ಪ್ರಜಾಪ್ರಭುತ್ವದ ಮರ್ಯಾದೆ ಕಾಪಾಡಲು ನಾವು ನಕ್ಕು ಸುಮ್ಮನಾಗಿಬಿಡುತ್ತೇವೆ. ಇನ್ನು ಈ ಪರಿವಾರದ ಅಳಿಯ ಎಂಬ ಒಂದೇ ಕಾರಣಕ್ಕೆ ರಾಬರ್ಟ್ ವಾದ್ರಾ ಪಡೆದ ಸವಲತ್ತು, ತೋರುವ ಧಿಮಾಕು ನೀವು ನೋಡಿದ್ದೀರಲ್ಲ, ಅದನ್ನೂ ನಾವು ಮನಸ್ಸಿನಲ್ಲಿಟ್ಟುಕೊಂಡಿಲ್ಲ ಏಕೆಂದರೆ ಇವರೆಲ್ಲರೂ ನಾಳೆ ತಮ್ಮದ್ದೇ ಒಂದು ದೇಶಕ್ಕೆ ಮರಳಿಬಿಡಬಲ್ಲರು. ನಾನು, ನೀವು ಇಲ್ಲಿಯೇ ಇರಬೇಕು. ಇದು ನಮ್ಮ ಪೂರ್ವಜರು ಜತನದಿಂದ ಕಟ್ಟಿದ ದೇಶ. ಇದು ಬೆಳೆದಷ್ಟೂ ಲಾಭವುಣ್ಣುವವರು ನಾವಷ್ಟೇ ಅಲ್ಲ, ಇಡಿಯ ಜಗತ್ತು. 

ಈಗೇಕೆ ಧಾವಂತದಿಂದ ಈ ಪತ್ರವೆಂದರೆ ಜಾರ್ಜ್ ಸೊರೊಸ್ ಇತ್ತೀಚೆಗಷ್ಟೇ ಮ್ಯುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ನಲ್ಲಿ ಭಾರತದ ವಿರುದ್ಧ ಗುಟುರು ಹಾಕಿದ್ದಾನೆ, ‘ಮೋದಿ ಮತ್ತು ಅದಾನಿ ಇಬ್ಬರೂ ಆತ್ಮೀಯರು. ಅದಾನಿಯ ಕಂಪನಿ ಸ್ಟಾಕ್ ಮಾರುಕಟ್ಟೆಯಿಂದ ಹಣ ಕ್ರೋಢೀಕರಿಸಲು ಹೋಗಿ ಸೋತಿದೆ. ಆತ ಸ್ಟಾಕ್ಗಳ ಏರುಪೇರಿಗೆ ಕಾರಣನಾದವ. ಈ ವಿಷಯದಲ್ಲಿ ಮೋದಿ ಸುಮ್ಮನಿದ್ದಾರೆ. ಅವರು ವಿದೇಶದ ಹೂಡಿಕೆದಾರರಿಗೆ ಮತ್ತು ತಮ್ಮ ಸಂಸತ್ತಿಗೆ ಉತ್ತರ ಕೊಡಬೇಕಿದೆ’ ಎಂದಿದ್ದಾನಲ್ಲದೇ ಪ್ರಜಾಪ್ರಭುತ್ವವನ್ನು ಉಳಿಸಲಿಕ್ಕಾಗಿ ಭಾರತದಲ್ಲಿ ಸರ್ಕಾರವನ್ನು ಬೇಕಿದ್ದರೂ ಬದಲಾಯಿಸಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೂಡ ರಾಷ್ಟ್ರೀಯವಾದಿ ನಾಯಕರನ್ನು ಕಿತ್ತುಬಿಸುಟಲು ತಾನು ಹಣ ಹೂಡುವುದಾಗಿ ದರ್ಪದಿಂದಲೇ ಹೇಳಿದ್ದ. ಆತನ ದೃಷ್ಟಿ ನರೇಂದ್ರಮೋದಿಯವರತ್ತಲೇ ನೆಟ್ಟಿತೆಂಬುದು ಎಂಥವನಿಗೂ ಅರಿವಾಗುವಂತಿತ್ತು. 

ಅದರಲ್ಲೇನು ಮಹಾ? ಅನೇಕರು ರಾಷ್ಟ್ರದ ಪ್ರಮುಖರನ್ನು ಬದಿಗೆ ಸರಿಸಿ ಮತ್ತೊಬ್ಬರನ್ನು ಕೂರಿಸುವ ಪ್ರಯತ್ನ ಮಾಡುತ್ತಾರೆ. ಸ್ವತಃ ಭಾರತದಲ್ಲಿ 28 ಪಕ್ಷಗಳು ಒಟ್ಟಾಗಿ ಮೋದಿಯನ್ನು ಕೆಳಗಿಳಿಸಿ ತಾವುಗಳೇ ಪ್ರಧಾನಿಯಾಗಲು ಹಾತೊರೆಯುತ್ತಿದ್ದಾರೆ. ಜಾರ್ಜ್ ಸೊರೊಸ್‌ದೇನು ವಿಶೇಷ? ಗಮನಿಸಬೇಕಾಗಿರುವ ಸಂಗತಿ ಇರುವುದೇ ಇಲ್ಲಿ. ಹಂಗೇರಿಯಲ್ಲಿ ಹುಟ್ಟಿದ ಸೊರೊಸ್ ಮೂಲತಃ ಯಹೂದಿ ಕುಟುಂಬಕ್ಕೆ ಸೇರಿದವ. ಆದರೆ ನಾಜಿಗಳ ಒತ್ತಡ ತೀವ್ರವಾದಾಗ ತನ್ನ ತಾನು ಕ್ರಿಶ್ಚಿಯನ್ ಎಂದು ಗುರುತಿಸಿಕೊಂಡು ನಾಜಿಗಳೊಂದಿಗೆ ಕಪಟವಾಡಿಕೊಂಡು ಇದ್ದುಬಿಟ್ಟ. ಓರಗೆಯ ಅನೇಕ ಯಹೂದಿಗಳನ್ನು ನಾಜಿಗಳಿಗೆ ಗುರುತಿಸಲು ಸಹಾಯ ಮಾಡಿದವ ಈತನೇ ಎಂದು ಆರೋಪಿಸಲಾಗುತ್ತದೆ. ತಾನು ನೀಡಿದ ಸಂದರ್ಶನವೊಂದರಲ್ಲಿ ಆತ ಇದನ್ನು ಪರಿಪೂರ್ಣವಾಗಿ ಏನೂ ಅಲ್ಲಗಳೆದಿಲ್ಲ. ಯಹೂದಿಗಳ ಮೇಲಿನ ಅಂದಿನ ಆಕ್ರೋಶ ಅವನಿಗೆ ಇಂದೂ ತೀರಿದಂತೆ ಕಾಣುವುದಿಲ್ಲ. ಹೀಗಾಗಿ ಇಸ್ರೇಲ್ ರಾಷ್ಟ್ರವಾಗಬೇಕು ಎಂದು ಬಯಸುತ್ತಾನಾದರೂ ಅಲ್ಲಿಯೂ ರಾಷ್ಟ್ರವಾದ ಉಳಿಯಬಾರದು ಎಂದು ತನ್ನದ್ದೇ ವಾದ ಮಂಡಿಸುತ್ತಾನೆ. 1956ರಲ್ಲಿ ಉದ್ಯೋಗವರಸಿಕೊಂಡು ನ್ಯೂಯಾರ್ಕಿಗೆ ಬಂದ ಸೊರೊಸ್ ಕಡು ಕಷ್ಟದಿಂದಲೇ ಮೇಲೇರಿದವ. ತನ್ನ ವ್ಯಾಪಾರಿ ಚಾಕಚಕ್ಯತೆಯನ್ನು ಬಳಸಿಕೊಂಡು ಶೇರು ಮಾರುಕಟ್ಟೆಯಲ್ಲಿ ಹಣಹೂಡುವ ಧಂಧೆ ಆರಂಭಿಸಿದ. ಡಬಲ್ ಈಗಲ್, ಸೊರೊಸ್ ಫಂಡ್ ಮ್ಯಾನೇಜ್ಮೆಂಟ್ ಕಂಪನಿಗಳು ಅವನದ್ದೇ. ಆತ ಅಮೇರಿಕಾದ ಇತಿಹಾಸದಲ್ಲೇ ಒಬ್ಬ ಯಶಸ್ವೀ ಹೂಡಿಕೆದಾರ ಎಂಬ ಹೆಸರು ಮಾಡಿದ್ದಾನೆ. ನೂರು ಹರ್ಷದ್ ಮೆಹ್ತಾಗಳನ್ನು ಹಾಕಿದರೆ ಒಬ್ಬ ಸೊರೊಸ್ ಹುಟ್ಟಬಹುದೇನೋ! ಸೊರೊಸ್ ಎಷ್ಟು ಸವಾಲುಗಳನ್ನು ಮೈಮೇಲೆಳೆದುಕೊಂಡನೆಂದರೆ ಅಷ್ಟೇ ವೇಗವಾಗಿ ತನ್ನ ಕಂಪನಿಯ ಮೌಲ್ಯವನ್ನೂ ವರ್ಧಿಸುತ್ತಾ ಹೋದ. ಅನೇಕ ರಾಷ್ಟ್ರಗಳು ಆತನನ್ನು ಕ್ರಿಮಿನಲ್ನಂತೆ ಕಾಣುತ್ತವೆ. 1992ರಲ್ಲಿ ಆತ ಬ್ರಿಟೀಷ್ ಸ್ಟಾಕ್ ಮಾರುಕಟ್ಟೆಯಲ್ಲಿ ತಾನು ಹೂಡಿದ್ದ 10 ಬಿಲಿಯನ್ ಡಾಲರ್‌ಗಳನ್ನು ಏಕಾಕಿ ತೆಗೆದು ಇಡಿಯ ಮಾರುಕಟ್ಟೆ ಕುಸಿಯುವಂತೆ ಮಾಡಿಬಿಟ್ಟಿದ್ದ. ಅಲ್ಲಿನ ಬ್ಯಾಂಕುಗಳು ಪತರಗುಟ್ಟಿಹೋಗಿದ್ದವು. ಬ್ರಿಟೀಷ್ ಪೌಂಡು ನೋಡನೋಡುತ್ತಲೇ ಕುಸಿದುಹೋಯ್ತು. ಕುಳಿತಲ್ಲೇ ಸೊರೊಸ್ ಒಂದು ಶತಕೋಟಿ ಅಮೇರಿಕನ್ ಡಾಲರ್ಗಳನ್ನು ಸಂಪಾದಿಸಿಬಿಟ್ಟ. ಇಂಗ್ಲೆಂಡಿನ ಬ್ಯಾಂಕು ಮುರಿದವ ಎಂದೇ ಆತನಿಗೆ ಹೆಸರು. 

1997ರಲ್ಲಿ ಏಷ್ಯಾದಲ್ಲಿ ಆರ್ಥಿಕ ಸಮಸ್ಯೆ ಎದುರಾಯ್ತಲ್ಲ, ಅದರ ಹಿಂದೆ ಇದ್ದ ದೊಡ್ಡ ಕೈ ಸೊರೊಸ್‌ನದ್ದೇ. ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾಗಳಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಮಂದಿ ಈ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾದರು. ಅಷ್ಟೂ ಜನರ ರಕ್ತ ಮೆತ್ತಿಕೊಂಡಿರುವುದು ಸೊರೊಸ್ನ ಕೈಗೇ! ಮಲೇಷಿಯಾದ ಪ್ರಧಾನಮಂತ್ರಿ ಮಹತಿರ್ ಮೊಹಮ್ಮದ್ ಆ ರಾಷ್ಟ್ರದ ಕರೆನ್ಸಿ ಕುಸಿಯಲು ಕಾರಣ ಸೊರೊಸ್ ಎಂದೇ ಆರೋಪಿಸುತ್ತಾರೆ. 1988ರಲ್ಲಿ ಫ್ರಾನ್ಸ್ ನಲ್ಲಿ ಸ್ಟಾಕ್ ಮಾರುಕಟ್ಟೆ ಏರುಪೇರಾಗಲು ಸೊರೊಸ್ ಕಾರಣನಾಗಿದ್ದ ಎಂಬುದಕ್ಕೆ ಅಲ್ಲಿನ ನ್ಯಾಯಾಲಯ 2002ರ ಡಿಸೆಂಬರ್ನಲ್ಲಿ ಆತನಿಗೆ 29 ಲಕ್ಷ ಡಾಲರ್ಗಳ ದಂಡ ವಿಧಿಸಿತ್ತು. ಕಾಲಕ್ರಮದಲ್ಲಿ ಆತನ ಕಂಪನಿ ಇತರರಿಂದ ಹಣ ತೆಗೆದುಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತು. ಈ ವೇಳೆಗಾಗಲೆ ಅನೇಕ ರಾಷ್ಟ್ರಗಳೊಂದಿಗೆ ಆಟವಾಡಿದ ಸೊರೊಸ್ ತಾನೇ ಬಿಲಿಯನೇರ್ ಆಗಿಬಿಟ್ಟಿದ್ದ. ತಾನು ಮಾಡಿದ ಯಾವ ಕೆಲಸಕ್ಕೂ ಪಶ್ಚಾತ್ತಾಪ ಪಡಬೇಕಿಲ್ಲ ಎಂಬುದೇ ಆತನ ವಾದವಾಗಿತ್ತು. ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷಿಯಾ, ರಷ್ಯಾ ಇಲ್ಲಿನ ಆರ್ಥಿಕತೆ ಕುಸಿಯಲು ಕಾರಣವಾಗಿದ್ದಕ್ಕೆ ನಿಮಗೆ ಬೇಸರವಿದೆಯೇ? ಎಂದು ಪತ್ರಕರ್ತ ಕೇಳಿದರೆ, ‘ನಾನು ಲಾಭ ಗಳಿಸಲೆಂದೇ ವ್ಯಾಪಾರ ಮಾಡುತ್ತೇನೆ. ಈ ವಿಚಾರ ಬಂದಾಗ ಅದನ್ನು ಬಿಟ್ಟು ಬೇರೆ ಯೋಚಿಸುವುದಿಲ್ಲ. ಈ ಹಂತದಲ್ಲಿ ನಡೆಯುವ ಯಾವುದೇ ಸಾಮಾಜಿಕ ಅವಘಡಗಳಿಗೂ ನಾನು ಜವಾಬ್ದಾರನಲ್ಲ. ಆದರೆ ಮಾನವೀಯತೆ ವಿಚಾರ ಬಂದಾಗ ನಾನು ಬೇರೆ ರೀತಿ ಯೋಚಿಸುತ್ತೇನಷ್ಟೆ’ ಎನ್ನುತ್ತಾನೆ. ಒಂದೆಡೆ ಸಾವಿರಾರು ಮಂದಿಯ ಸಾವಿಗೆ ಕಾರಣನಾಗಿ ಮತ್ತೊಂದೆಡೆ ಈ ಲಾಭದ ಒಂದಷ್ಟು ಹಣವನ್ನು ಸತ್ತವರ ಮಕ್ಕಳ ಅಧ್ಯಯನಕ್ಕೆಂದು ಮೀಸಲಾಗಿಟ್ಟುಬಿಟ್ಟರೆ ಆದೀತೇನು? 

ಸೊರೊಸ್ ಕೆಲಸ ಮಾಡುವ ಸ್ವರೂಪ ಹೇಗೆ ಗೊತ್ತೇ? ಆತ 1984ರಲ್ಲಿ ಓಪನ್ ಸೊಸೈಟಿ ಫೌಂಡೇಶನ್ ಎಂಬ ದತ್ತಿ ಸಂಸ್ಥೆಯನ್ನು ಆರಂಭಿಸಿದ. ಆತನ ವೆಬ್ಸೈಟನ್ನು ನಂಬುವುದಾದರೆ ಇದುವರೆಗೂ 32 ಬಿಲಿಯನ್ ಡಾಲರ್‌ಗಳಷ್ಟು ಸ್ವಂತ ಹಣವನ್ನು ಅದಕ್ಕಾಗಿ ನೀಡಿದ್ದಾನೆ. ಈ ಫೌಂಡೇಶನ್ ಜಗತ್ತಿನಾದ್ಯಂತ ಅನೇಕ ಸ್ವಯಂ ಸೇವಾ ಸಂಸ್ಥೆಗಳಿಗೆ ದಾನ ನೀಡುತ್ತದೆ. ಆ ಮೂಲಕ ಆಯಾ ರಾಷ್ಟ್ರಗಳಲ್ಲಿ ತಮಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಈ ಸ್ವಯಂ ಸೇವಾ ಸಂಸ್ಥೆಗಳು ಬಹುಪಾಲು ಎಡಪಂಥೀಯ ಚಿಂತಕರದ್ದೇ ಆಗಿದ್ದು ದೇಶ ವಿಭಜಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವಂಥವು. ಸ್ವತಃ ಪ್ರಧಾನಮಂತ್ರಿ ಮನಮಹೋನ್ ಸಿಂಗರ ಮಗಳು ಅಮೃತಾ ಸಿಂಗ್ ಈ ಸಂಸ್ಥೆಯ ನಿರ್ದೇಶಕಿಯಾಗಿ ದುಡಿದಿದ್ದವಳು. ಪ್ರಧಾನಮಂತ್ರಿಯೊಬ್ಬರ ಮಗಳು ಇಂತಹ ಸಂಸ್ಥೆಯೊಂದರಲ್ಲಿ ಇದ್ದಾಳೆ ಎಂದರೆ ಸರ್ಕಾರದ ಮೇಲೆ ಸೊರೊಸ್ ಹೊಂದಿದ್ದ ಪ್ರಭಾವ ಎಂಥದ್ದಿರಬಹುದು ಎಂದು ಯೋಚಿಸಿ! ಇಷ್ಟೇ ಅಲ್ಲ, ಸೋನಿಯಾ ಆಪ್ತನಾಗಿದ್ದ ಹರ್ಷ್ ಮಂದಾರ್ ಕೂಡ ಈತನೊಡನೆ ಕೆಲಸ ಮಾಡುತ್ತಿರುವವನೇ. ಹರ್ಷ್ ಮಂದಾರ್ ಸಾಮಾನ್ಯವಾದ ವ್ಯಕ್ತಿಯಲ್ಲ. ಆತ ಐಎಎಸ್ ಅಧಿಕಾರಿಯಾಗಿದ್ದು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ, 2002ರಲ್ಲಿ ನಡೆದ ಗುಜರಾತ್ ದಂಗೆಯ ನೆಪಹೇಳಿ ರಾಜಿನಾಮೆ ಕೊಟ್ಟು, ತನ್ನದ್ದೇ ಆದ ಸಾಮಾಜಿಕ ಸೇವಾ ಸಂಘಟನೆಗಳ ಮೂಲಕ ಆರಾಮದಾಯಕ ಬದುಕನ್ನು ಅನುಭವಿಸುತ್ತಿದ್ದಾನೆ. ಈತನ ಸರ್ಕಾರೇತರ ಸಂಸ್ಥೆಗಳಿಗೆ ಸೊರೊಸ್ ಉದಾರವಾಗಿ ಹಣ ನೀಡುತ್ತಾನೆ. ನಿಮಗೆ ಗಾಬರಿಯಾಗುವ ಸಂಗತಿ ಹೇಳಲೇ? ಆತ ಸೊನಿಯಾ ಯುಪಿಎ ಸರ್ಕಾರದ ಸಂದರ್ಭದಲ್ಲಿ ರೂಪಿಸಿಕೊಂಡಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯನೂ ಆಗಿದ್ದ. ಆ ಹೊತ್ತಿನಲ್ಲೇ ಬಂದ ಹಿಂದೂವಿರೋಧಿ ಕಮ್ಯುನಲ್ ವೈಯಲೆನ್ಸ್ ಬಿಲ್ ಈತನೇ ತಯಾರಿಸಿದ್ದು. ಆ್ಯಕ್ಷನ್ ಏಡ್ ಇಂಡಿಯಾ ಎಂಬ ಸಂಸ್ಥೆಯ ರಾಷ್ಟ್ರೀಯ ಮುಖ್ಯಸ್ಥನಾಗಿರುವ ಈತ ತನ್ನ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್‌ಗೆ ಕೋಟ್ಯಂತರ ರೂಪಾಯಿ ಹಣವನ್ನು ವಿದೇಶಗಳಿಂದ ಪಡೆದುಕೊಂಡಿದ್ದಾನೆ. ಎನ್ಕೌಂಟರ್‌ಗೆ ಒಳಗಾದ ಇಶ್ರತ್ ಜಹಾನ್‌ಳಿರಲಿ, ಮುಂಬೈ ದಾಳಿಗೆ ಕಾರಣನಾದ ಯಾಕುಬ್ ಮೆಮನ್ ಇರಲಿ, ಕೊನೆಗೆ ಅಜ್ಮಲ್ ಕಸಬ್, ಅಫ್ಜಲ್ ಗುರುಗಳಾದರೂ ಸರಿ ಅವರೆಲ್ಲರ ಪರವಾಗಿ ದನಿ ಎತ್ತುವವರಲ್ಲಿ ಹರ್ಷ್ ಇದ್ದೇ ಇರುತ್ತಾನೆ. ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕೆಂಬ ಆದೇಶ ಬಂದಾಗ ಅದನ್ನು ಪರಿಶೀಲಿಸಬೇಕೆಂದು ನ್ಯಾಯಾಲಯಕ್ಕೆ ಹೋದ 40 ಮಂದಿಯಲ್ಲಿ ಈತನೂ ಇದ್ದ. ಸಿಎಎ ವಿರುದ್ಧ ದೆಹಲಿಯ ಶಾಹಿನ್‌ಬಾಗ್‌ನಲ್ಲಿ ಪ್ರತಿಭಟನೆಗೆ ಕೂತಿದ್ದರಲ್ಲ, ಆಗ ತನ್ನ ಕಾರ್ವಾನ್-ಎ-ಮೊಹಬ್ಬತ್ ಎಂಬ ಸಂಘಟನೆಯ ಮೂಲಕ ಪ್ರತಿಭಟನೆಯ ಸೂತ್ರದಾರ ಶರ್ಜಿಲ್ ಇಮಾಮ್‌ನಿಗೆ ಬೆಂಬಲ ಸೂಚಿಸಿದ್ದಲ್ಲದೇ ‘ಈಗ ನಿರ್ಣಯ ಸಂಸತ್ತಿನಲ್ಲೋ, ನ್ಯಾಯಾಲಯದಲ್ಲೋ ಆಗದು. ಅಯೋಧ್ಯೆ ಮತ್ತು ಕಾಶ್ಮೀರಗಳ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾತ್ಯತೀತತೆಯನ್ನು ರಕ್ಷಿಸಲಿಲ್ಲ. ಹೀಗಾಗಿಯೇ ಕದನ ಬೀದಿಯಲ್ಲೇ ನಡೆದುಬಿಡಲಿ’ ಎಂದಿದ್ದ. 

ಇಷ್ಟಕ್ಕೇ ಮುಗಿಯಲಿಲ್ಲ ಕರ್ನಾಟಕದ ಹರ್ತಿಕೋಟೆಯ ಸಲಿಲ್ ಶೆಟ್ಟಿ ಭಾರತ್ ಜೊಡೊ ಯಾತ್ರೆಯಲ್ಲಿ ರಾಹುಲ್ ಕೈ ಕೈ ಹಿಡಿದು ನಡೆದಿದ್ದ. ಆತ ಸೊರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ ಜಾಗತಿಕ ಉಪಾಧ್ಯಕ್ಷ. ಆತನೇ ಈ ಹಿಂದೆ ಆಮ್ನೆಸ್ಟಿ ಇಂಟರ್ನ್ಯಾಷನಲ್‌ನ ಕಾರ್ಯದರ್ಶಿಯೂ ಆಗಿದ್ದ. ಅಂದಹಾಗೆ ಇದೇ ಸಂಸ್ಥೆ ಭಾರತ ಮಾನವ ಹಕ್ಕುಗಳ ವಿಚಾರದಲ್ಲಿ ಕಳಪೆಯಾಗಿ ವರ್ತಿಸುತ್ತಿದೆ ಎಂಬ ವರದಿ ಕೊಟ್ಟಿತ್ತು. ಈಗ ಆ ವರದಿಯ ಮಹತ್ವ ಅರಿವಾಗುತ್ತಿದ್ದಿರಬಹುದಲ್ಲವೇ? 

ಸೊರೊಸ್ ತನ್ನ ತಂಡದ ಮೂಲಕ ಅನೇಕ ಮಾಧ್ಯಮಗಳಿಗೂ ಹಣ ನೀಡುತ್ತಾನೆ. ಆ ಮೂಲಕ ಅಭಿಪ್ರಾಯವನ್ನೇ ಕೊಂಡುಕೊಳ್ಳುತ್ತಾನೆ. ಅನೇಕ ರಾಷ್ಟ್ರಗಳಲ್ಲಿ ತನಗೆ ಬೇಕಾದ, ತಾನು ಹೇಳಿದಂತೆ ಕೇಳುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾನೆ. ಹಂಗೇರಿಯಂತಹ ಅನೇಕ ರಾಷ್ಟ್ರಗಳು ಆತನ ಹೂಡಿಕೆಯನ್ನು ವಿರೋಧಿಸುವುದು ಈ ಕಾರಣಕ್ಕಾಗಿಯೇ. 

ಈಗ ಎಲ್ಲವನ್ನೂ ಮತ್ತೊಮ್ಮೆ ಅವಲೋಕಿಸಿ ನೋಡಿ. ಸ್ವತಃ ಕ್ರಿಮಿನಲ್‌ಗಳ ಸಾಲಿಗೆ ಸೇರುವ ಸೊರೊಸ್ ಭಾರತದಲ್ಲಿ ಅನೇಕ ಸೇವಾ ಸಂಸ್ಥೆಗಳ ಮೂಲಕ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಾನೆ. ಮಾಧ್ಯಮಗಳನ್ನು ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜನಾಭಿಪ್ರಾಯ ರೂಪಿಸುತ್ತಾನೆ. ಜಾಗತಿಕ ವರದಿಗಳು ಭಾರತದ ವಿರುದ್ಧ ಇರುವಂತೆ ನೋಡಿಕೊಳ್ಳುತ್ತಾನೆ. ಅಜೀಂ ಪ್ರೇಮ್‌ಜಿ ಥರದವರ ಮೂಲಕ ಇಲ್ಲಿ ಜನಮೆಚ್ಚುಗೆಯ ಕಾರ್ಯ ನಡೆಸುವಂತೆ ಮಾಡಿ ಪಿತೂರಿ ಮಾಡುತ್ತಾನೆ. ಕೊನೆಗೆ ಇವೆಲ್ಲದರ ಲಾಭ ಪಡೆಯಲು ಕಾಂಗ್ರೆಸ್ ನಾಯಕರ ಯಾತ್ರೆಗಳಿಗೆ ಹಣ ಕೊಡುತ್ತಾನೆ, ತನ್ನವರನ್ನೂ ಕಳಿಸುತ್ತಾನೆ. ವಿದೇಶದಲ್ಲಿ ಕೂತು ಭಾರತವನ್ನು ಚೂರು ಮಾಡುವ ಈ ಕಲ್ಪನೆ ಬ್ರಿಟೀಷರು ಭಾರತವನ್ನಾಳಿದಂತಲ್ಲವೇನು? 

ಆಕ್ರಮಣಕಾರಿಗಳನ್ನು ತುಂಡು ಬಟ್ಟೆ ಧರಿಸಿ ಮಹಾತ್ಮ ಓಡಿಸಿದರೆ, ಆತನ ಹೆಸರಿಟ್ಟುಕೊಂಡು ಬೇರೊಂದು ರೂಪದಲ್ಲಿ ಅವರನ್ನೇ ಕರೆತರಲು ಯತ್ನಿಸುವುದು ಎಷ್ಟು ಸರಿ?  ಮೊದಿಯನ್ನು ವಿರೋಧಿಸಿ ಅಭ್ಯಂತರವಿಲ್ಲ. ಆದರೆ ಆ ಧಾವಂತದಲ್ಲಿ ಭಾರತವನ್ನೇ ಪ್ರಪಾತಕ್ಕೆ ತಳ್ಳಬೇಡಿ. 

ಇದು ನನ್ನ ಕಳಕಳಿಯ ಕೋರಿಕೆ ಅಷ್ಟೆ!

ಭಾರತವ ಜೋಡಿಸಿದವಗೆ ಅಖಂಡ ಭಾರತದ ಕೊಡುಗೆ

ಭಾರತವ ಜೋಡಿಸಿದವಗೆ ಅಖಂಡ ಭಾರತದ ಕೊಡುಗೆ

ಇದನ್ನೇ ವಿಪರ್ಯಾಸ ಅನ್ನೋದು. ಭಾರತ್ ಜೊಡೊ ಎಂದು ಪಾದಯಾತ್ರೆ ಮಾಡಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವ ಪ್ರಯತ್ನ ಮಾಡಿದ ಕಾಂಗ್ರೆಸ್ಸಿಗರು ಎಂದೂ ಹೆಮ್ಮೆಯಿಂದ ಸರದಾರ್ ಪಟೇಲರನ್ನು ಸ್ಮರಿಸಿಕೊಳ್ಳಲೇ ಇಲ್ಲ. ಅತ್ತ ಪಟೇಲರು ಕಾಂಗ್ರೆಸ್ಸಿನ ನಾಯಕರಾದರೂ ಅವರು ಈಗಿನ ಭಾರತ ನಿರ್ಮಿಸಿಕೊಟ್ಟ ಸಂಭ್ರಮ ಇರೋದು ಬಿಜೆಪಿಗರಿಗೆ. ನರೇಂದ್ರಮೋದಿ ಬರುವವರೆಗೂ ಪಟೇಲರ ಸ್ಮರಣೆ ವ್ಯಾಪಕವಾಗಿ ಭಾರತದಲ್ಲಿ ನಡೆಯಲೇ ಇಲ್ಲ. ಈಗ ಕಾಂಗ್ರೆಸ್ಸಿಗರು ಭಾರತವನ್ನು ಜೋಡಿಸಲು ಪಾದಯಾತ್ರೆ ನಡೆಸಿದ್ದರೆ ಮೋದಿ ಪಟೇಲರ ಗೌರವಕ್ಕೆಂದು ಎಲ್ಲೆಡೆ ಏಕತಾ ಓಟವನ್ನೇ ನಡೆಸುವಂತೆ ಪ್ರೇರೇಪಿಸಿರುವುದು ಅವರ ಆಲೋಚನೆಗಳು ಇವರಿಗಿಂತ ಎಷ್ಟೊಂದು ಮುಂದಿವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಕಾಂಗ್ರೆಸ್ಸಿಗರ ದೈನೇಸಿ ಸ್ಥಿತಿ ಎಂಥದ್ದೆಂದರೆ ಅವರು ತಮ್ಮ ಪಕ್ಷದವರೇ ಆಗಿದ್ದ ಪಟೇಲರನ್ನು ಹೆಮ್ಮೆಯಿಂದ ಸಂಭ್ರಮಿಸಲೂ ಆಗದಂತಾಗಿದ್ದಾರೆ. 

ಇರಲಿ, ದೇಶವನ್ನು ಒಗ್ಗೂಡಿಸುವ ಪಟೇಲರ ಸಾಹಸ ಸಾಮಾನ್ಯವಾದ್ದಾಗಿರಲಿಲ್ಲ. ಸ್ವಾತಂತ್ರ್ಯದ ಹೊಸ್ತಿಲಲ್ಲಿ ದೇಶ ವಿಭಜನೆಯ ನೆಹರೂ-ಜಿನ್ನಾ ಆಲೋಚನೆಗೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಸಂದಿಗ್ಧ ಬಂದಿತ್ತು. ಆದಷ್ಟೂ ಅದನ್ನು ಮುಂದೆ ತಳ್ಳುವ ಪ್ರಯತ್ನವನ್ನು ಪಟೇಲರು ಮಾಡಿದರಾದರೂ ಕೊನೆಗೂ ಬಾಗಬೇಕಾಯ್ತು. ಉಳಿದವರೆಲ್ಲ ಸ್ವತಂತ್ರ ಭಾರತದ ಪ್ರಮುಖ ಹುದ್ದೆಯನ್ನಲಂಕರಿಸುವ ಕನಸು ಕಾಣುತ್ತಿದ್ದರೆ, ಪಟೇಲರು ಭಾರತ ಭೂಪಟವನ್ನು ನಿರ್ಮಿಸುವ ಧಾವಂತದಲ್ಲಿದ್ದರು. ಖಂಡಿತ ಹೌದು. ಭಾರತ ಬ್ರಿಟೀಷರ ಆಗಮನದ ನಂತರವೇ ರಾಷ್ಟ್ರವಾಯ್ತು ಎಂದು ಕೆಲವರು ಮೂರ್ಖರು ಹೇಳಿಕೊಳ್ಳುವುದಿದೆ. ಮೌರ್ಯರ, ಗುಪ್ತರ, ಮರಾಠರ ಕಾಲದ ಸಾಮ್ರಾಜ್ಯಗಳೆಲ್ಲ ಇಡಿಯ ಭಾರತವನ್ನು ಒಂದುಗೂಡಿಸಿತ್ತು. ಬ್ರಿಟೀಷರು ಬರದೇ ಹೋಗಿದ್ದರೆ ಮೊಘಲ್ ಶಾಹಿಯನ್ನು ಮೆಟ್ಟಿನಿಂತು ಭಾರತದ ಪುನರ್ ನಿರ್ಮಾಣ ಮಾಡಿದ ಕೀರ್ತಿ ಮರಾಠರ ತೆಕ್ಕೆಗೆ ಹೋಗಿರುತ್ತಿತ್ತು. ಪ್ರತೀ ಬಾರಿ ದೇಶ ಸಂಕಟಕ್ಕೆ ಸಿಲುಕಿದಾಗಲೆಲ್ಲ ಅದರೊಳಗಿಂದಲೇ ಶಕ್ತಿಯೊಂದು ಜಾಗೃತವಾಗಿ ಬಂದು, ಅದನ್ನು ಪುನರ್ ರೂಪಿಸುವ ಘಟನೆಗಳು ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಆದರೆ ಎಡಪಂಥೀಯರ ವಾದವೇನೆಂದರೆ ಬ್ರಿಟೀಷರ ಆಗಮನದ ಮುನ್ನ ಭಾರತ ರಾಜ್ಯಗಳಾಗಿ ಹಂಚಿಹೋಗಿದ್ದು ಸಮಗ್ರ ಭಾರತದ ಕಲ್ಪನೆ ಯಾರಿಗೂ ಇರಲಿಲ್ಲ ಅಂತ. ಅಚ್ಚರಿಯೇನು ಗೊತ್ತೇ? ಬ್ರಿಟೀಷರು ಭಾರತವನ್ನು ಬಿಡುವಾಗಲೂ ಈ ದೇಶದಲ್ಲಿ ರಾಜ-ರಜವಾಡೆಗಳಿಗೆ ಕೊರತೆಯಿರಲಿಲ್ಲ. ಹೀಗಾಗಿಯೇ ಸ್ವಾತಂತ್ರ್ಯ ಬಂದೊಡನೆ ಪಟೇಲರಿಗಿದ್ದ ಸವಾಲೇನೆಂದರೆ 565ರಷ್ಟು ರಾಜ ಮನೆತನಗಳನ್ನು ಮತ್ತು ಅವರ ಪಾಲಿನ ಸಾಮ್ರಾಜ್ಯವನ್ನು ಭಾರತದೆಡೆಗೆ ಸೆಳೆದುಕೊಳ್ಳುವುದಾಗಿತ್ತು. ಮೌಂಟ್ ಬ್ಯಾಟನ್ನಿನೊಂದಿಗೆ ನೆಹರೂಗೆ ಮತ್ತು ಪಟೇಲರಿಗಿದ್ದ ಸಂಬಂಧಗಳು ಬೇರೆ-ಬೇರೆಯೇ. ಪಟೇಲರು ಮುತ್ಸದ್ದಿಯಂತೆಯೇ ಅವನೊಂದಿಗೆ ವ್ಯವಹರಿಸುತ್ತಿದ್ದರು. ಹೀಗಾಗಿ ಸ್ಪಷ್ಟ ಮಾತುಗಳಲ್ಲಿ ಸ್ವಾತಂತ್ರ್ಯ ಎಂಬ ಹಣ್ಣಿನ ಬುಟ್ಟಿಯನ್ನು ನನಗೆ ಕೊಡುವಾಗ 565ಕ್ಕಿಂತ ಒಂದೇ ಸೇಬುಹಣ್ಣು ಕಡಿಮೆಯಿದ್ದರೂ ಸ್ವೀಕರಿಸಲಾರೆ ಎಂದುಬಿಟ್ಟಿದ್ದರು. ಹಾಗಂತ ಅವನ ಮೇಲೆ ಭಾರ ಹೊರೆಸಿ ಸುಮ್ಮನಾಗಲಿಲ್ಲ. ತಾವೇ ಭಿನ್ನ-ಭಿನ್ನ ಸ್ವರೂಪದಲ್ಲಿ ಇವರನ್ನು ಒಲಿಸಿಕೊಳ್ಳುವ ಕಾರ್ಯಕ್ಕೆ ಮುಂದೆ ನಿಂತರು. ಸಮಸ್ಯೆಗಳೇನು ಕಡಿಮೆಯಿರಲಿಲ್ಲ. ಭೋಪಾಲದ ನವಾಬ ಮೊದಲಿಗೆ ಬಂಡಾಯ ಬಾವುಟ ಬೀಸಿ ಸ್ವತಂತ್ರವಾಗಿರುತ್ತೇನೆಂದರೆ, ತಿರುವಾಂಕುರಿನ ದಿವಾನ ಒಂದು ಹೆಜ್ಜೆ ಮುಂದೆಹೋಗಿ ಪಾಕಿಸ್ತಾನದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿ ಮಾಡಲು ಅಧಿಕಾರಿಯನ್ನು ನೇಮಿಸುವ ಮಾತನಾಡಿದ. ಬಿಕಾನೇರ್, ಪಟಿಯಾಲ, ಜೈಪುರ, ಜೋಧ್‌ಪುರಗಳ ಅರಸರು ಭಾರತದೊಂದಿಗೆ ಇರಬಯಸಿದರು. ಮೌಂಟ್ ಬ್ಯಾಟನ್ ಒಳಗೊಳಗೇ ಸಂಭ್ರಮಿಸಿರಲು ಸಾಕು. ತಾವು ಬಿಟ್ಟುಹೋದಾಗ ಭಾರತ ಛಿದ್ರ ಛಿದ್ರವಾಗುವುದನ್ನು ನೋಡಿ ಆನಂದಿಸಬೇಕಿತ್ತು; ಭಾರತೀಯರಿಗೆ ಆಳುವ ಸಾಮರ್ಥ್ಯವಿಲ್ಲ, ಆಳಿಸಿಕೊಳ್ಳುವ ಯೋಗ್ಯತೆಯಷ್ಟೆ ಎಂಬುದನ್ನು ಸಾಬೀತುಪಡಿಸಬೇಕಿತ್ತು. ಸರದಾರರು ಅವನ ಆಕಾಂಕ್ಷೆಗಳಿಗೆ ತಣ್ಣೀರೆರೆಚಿಬಿಟ್ಟರು! 

ಅವರ ಶೈಲಿ ಗಾಂಧಿಯದ್ದೋ, ನೆಹರೂವಿನದ್ದೋ ಅಥವಾ ಈಗಿನ ಮನಮೋಹನ್, ಅರವಿಂದ್ ಕೇಜ್ರಿವಾಲ್‌ಗಳದ್ದೋ ಅಲ್ಲ. ಪಾಕಿಸ್ತಾನ ಏನು ಕೊಡುವೆನೆನ್ನುತ್ತದೆಯೋ ಅದಕ್ಕಿಂತ ಹೆಚ್ಚಿನದ್ದನ್ನು ಈ ರಾಜರುಗಳಿಗೆ ನೀಡುವೆನೆನ್ನುತ್ತಾ ಅವರನ್ನು ಬುಟ್ಟಿಗೆ ಹಾಕಿಕೊಳ್ಳುವ ತುಷ್ಟೀಕರಣದ ನೀತಿಯಲ್ಲ. ರಾಜರುಗಳ ಆತ್ಮಗೌರವಕ್ಕೆ ಬೆಲೆಕೊಟ್ಟು, ಪ್ರೀತಿಯಿಂದ ಕೇಳುತ್ತಾ ಅಗತ್ಯಬಿದ್ದರೆ ಅವರನ್ನು ಬೆದರಿಸಿಯೂ ಬಗ್ಗಿಸುವ ಅಕ್ಷರಶಃ ಭಾರತೀಯ ವಿಚಾರಧಾರೆ, ಥೇಟು ನರೇಂದ್ರಮೋದಿಯಂತೆ. ಆಗಸ್ಟ್ 15ಕ್ಕೆ ಭಾರತ ಸ್ವತಂತ್ರಗೊಳ್ಳಬೇಕು. ಪಟೇಲರು ಮೇ ತಿಂಗಳಲ್ಲೇ ಜೋಧ್‌ಪುರದ, ನವನಗರದ, ಪಟಿಯಾಲದ, ಕಾಥಿಯಾವಾಡದ ರಾಜರುಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಅವರು ಬಂದಿದ್ದಾರೆಂದು ಗೊತ್ತಾದಾಗ ತಾವೇ ಬಾಗಿಲ ಬಳಿ ಬಂದು ಗೌರವದಿಂದ ಸ್ವಾಗತಿಸಿ, ಪ್ರೀತಿಯಿಂದ ಮಾತನಾಡಿಸುತ್ತಾ ಭಾರತದೊಂದಿಗೆ ವಿಲೀನಗೊಳಿಸುವ ಮಾತುಕತೆಯಾಡುತ್ತಿದ್ದರು. ಅವರ ಮಾತಿನ ಪ್ರಭಾವ ಹೇಗಿತ್ತೆಂದರೆ ಭಾರತದೊಂದಿಗೆ ಸೇರಿಕೊಳ್ಳುವ ಮೊದಲ ಸುದ್ದಿಯನ್ನು ಯಾರು ನೀಡಬೇಕೆಂಬ ಆತುರ. ಗ್ವಾಲಿಯರ್‌ನ ರಾಜ ಪತ್ರಕ್ಕೆ ಸಹಿ ಮಾಡಿದ ಮೊದಲ ರಾಜನೆನಿಸಿಕೊಂಡ. ಆ ವಿಚಾರವನ್ನು ಮುಂದಿಟ್ಟುಕೊಂಡು ಪಟೇಲರು ಒಂದಾದಮೇಲೊಂದರಂತೆ ಎಲ್ಲ ರಾಜರುಗಳನ್ನೂ ಸೆಳೆದುಕೊಳ್ಳಲಾರಂಭಿಸಿದರು. ‘ಇಂಡಿಯಾ ಇಂಡಿಪೆಂಡೆನ್ಸ್ ಆ್ಯಕ್ಟ್‌ನ ಪ್ರಕಾರ ಆಗಸ್ಟ್ 15ಕ್ಕೆ ಎಲ್ಲ ರಾಜ್ಯಗಳೂ ಮುಕ್ತಗೊಳ್ಳುತ್ತವೆ. ತಾಂತ್ರಿಕವಾಗಿ, ಕಾನೂನುಬದ್ಧವಾಗಿ ಅವು ಸ್ವತಂತ್ರವಾಗಿಬಿಡುತ್ತವೆ. ಬ್ರಿಟೀಷರು ಹೊರಟೊಡನೆ ಉಂಟಾಗಬಹುದಾದ ಉತ್ಪಾತ ಮೊದಲು ಬಲಿ ತೆಗೆದುಕೊಳ್ಳುವುದು ರಾಜ್ಯಗಳನ್ನೇ. ಭೌಗೋಳಿಕ ಇತಿ-ಮಿತಿಗಳನ್ನು ಗಮನದಲ್ಲಿರಿಸಿಕೊಂಡು ಅವರು ಸೂಕ್ತ ನಿರ್ಣಯ ಕೈಗೊಳ್ಳುವುದೊಳಿತು ಮತ್ತು ಆಗಸ್ಟ್ 15ರೊಳಗೆ ವಿಲೀನಗೊಂಡರೆ ಸರಿಯಾದೀತು’ ಎಂದೂ ಹೇಳಿದ್ದರು. ಈ ಮಾತುಗಳನ್ನು ಎಚ್ಚರಿಕೆ ಎನ್ನುವಿರೋ, ತಿಳಿವಳಿಕೆ ಎನ್ನುವಿರೋ ಅಥವಾ ಪುಸಲಾಯಿಸುವ ರೀತಿ ಎನ್ನುವಿರೋ, ಪಟೇಲರು ಎಲ್ಲವನ್ನೂ ಮಾಡಿದರು. ಆಗಸ್ಟ್ 15ರ ವೇಳೆಗೆ ಈ ಮನುಷ್ಯನ ಪ್ರಭಾವಕ್ಕೆ ಒಳಗಾಗಿ ಹೈದರಾಬಾದು, ಕಾಶ್ಮೀರದಂತಹ ಎರಡು ಸೇಬು ಮತ್ತು ಜುನಾಗಢದಂತಹ ಪೀಚುಕಾಯಿಯೊಂದನ್ನು ಬಿಟ್ಟರೆ ಉಳಿದೆಲ್ಲವೂ ಭಾರತದ ತೆಕ್ಕೆಯಲ್ಲೇ ಇತ್ತು. ನಿಜಕ್ಕೂ ಭಾರತ್ ಜೊಡೊ ಪಟೇಲರು ಅಂದೇ ಮಾಡಿಬಿಟ್ಟಿದ್ದರು. 

ಹಾಗಂತ ಕಾಂಗ್ರೆಸ್ಸಿಗರು ಬಡಾಯಿ ಕೊಚ್ಚಿಕೊಳ್ಳುವಂತಯೇ ಇಲ್ಲ. ರಾಹುಲನ ಮುತ್ತಜ್ಜ ನೆಹರೂಗೆ ಈ ಜವಾಬ್ದಾರಿಯನ್ನು ವಹಿಸಿದ್ದಿದ್ದರೆ ಇಂದು ಪಾಕಿಸ್ತಾನದಷ್ಟು ಪುಟ್ಟ ಭಾರತವಿರುತ್ತಿತ್ತು ಮತ್ತು ಭಾರತದಷ್ಟು ಅಗಾಧವಾದ ಪಾಕಿಸ್ತಾನವಿರುತ್ತಿತ್ತು. ಪುರಾವೆಯಿಲ್ಲದೇ ಈ ಮಾತನ್ನು ಹೇಳುತ್ತಿಲ್ಲ. 562 ರಾಜ್ಯಗಳನ್ನು ಭಾರತದೊಂದಿಗೆ ತಮ್ಮ ಮಾತುಗಳಿಂದಲೇ ವಿಲೀನಗೊಳ್ಳುವಂತೆ ಮಾಡಿದ ಸರದಾರ್ ಪಟೇಲರಿಂದ ನೆಹರೂ ಕಾಶ್ಮೀರವೊಂದನ್ನು ಕಸಿದರು. ಅದನ್ನು ವಿಲೀನಗೊಳಿಸುವ ಹೊಣೆಗಾರಿಕೆ ತನ್ನದ್ದು ಎಂದರು. ಆಗಲೂ ಏಕಾಕಿ ಪಾಕಿಸ್ತಾನದ ಕಡೆಯಿಂದ ದಾಳಿಯಾದಾಗ ರಾಜ ಹರಿಸಿಂಗನಿಂದ ವಿಲೀನಪತ್ರ ಬರದೇ ಭಾರತ ಸಹಾಯ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕಳಿಸಿದ್ದು ಸರದಾರ್ ಪಟೇಲರೇ. ಬಹುಸಂಖ್ಯಾತ ಹಿಂದೂಗಳಿರುವ ಜುನಾಗಢಕ್ಕೆ ಜಿನ್ನಾ ಕೈ ಹಾಕಿದ್ದಕ್ಕೆ ಪಟೇಲರ ಪ್ರತೀಕಾರದ ಕ್ರಮವಾಗಿತ್ತು ಅದು. ಪೂರ್ಣ ಸರದಾರರ ಕೈಯ್ಯಲ್ಲೇ ಇದ್ದಿದ್ದರೆ ಇಂದು ಕಾಶ್ಮೀರದ ಕಿರಿಕಿರಿಯೇ ಇರುತ್ತಿರಲಿಲ್ಲ. ಯುದ್ಧದ ನಟ್ಟನಡುವೆ ನಾವು ಗೆಲುವಿನ ಹೊಸ್ತಿಲಲ್ಲಿದ್ದಾಗಲೇ ನೆಹರೂ ಮಧ್ಯ ಪ್ರವೇಶಿಸಿದರು. ಇಡಿಯ ಪ್ರಕರಣವನ್ನು ವಿಶ್ವಸಂಸ್ಥೆಗೊಯ್ದು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡರು. ಅದು ಪಾಕಿಸ್ತಾನಕ್ಕೆ ವರದಾನವೇ ಆಯ್ತು. ಕಾಶ್ಮೀರವನ್ನು ಮುಂದಿಟ್ಟುಕೊಂಡು ಭಾರತವನ್ನು ಹಳಿಯುವ ಮತ್ತು ಕಾಶ್ಮೀರದ ಮೂಲಕ ಭಾರತದಲ್ಲಿ ನಿರಂತರವಾಗಿ ಭಯೋತ್ಪಾದನೆಯನ್ನು ರಫ್ತು ಮಾಡುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಇಂದು ಭಾರತ ಇಸ್ಲಾಂ ಮತಾಂಧತೆಗೆ ಒಳಗಾಗಿ ನರಳುತ್ತಿದೆಯಲ್ಲ, ಬಹುಪಾಲು ಕೊಡುಗೆ ನೆಹರೂರವರದ್ದೇ. ಹೀಗಾಗಿಯೇ ಭಾರತ್ ಜೊಡೊ ಸಂದರ್ಭದಲ್ಲಿ ಎಲ್ಲಿಯಾದರೂ ಕಾಂಗ್ರೆಸ್ಸಿಗರು ಈ ಕಥೆಯನ್ನು ಹೇಳಬಹುದೇ ಎಂದು ಕಾಯುತ್ತ ಕುಳಿತಿದ್ದೆ. ಕೊನೆಯ ಪಕ್ಷ ಭಾಜಪದವರಾದರೂ ಈ ಪ್ರಶ್ನೆಯನ್ನು ಎತ್ತುತ್ತಾರೇನೊ ಎಂದುಕೊಂಡರೆ ಅದೂ ಆಗಲಿಲ್ಲ. ಅಚ್ಚರಿಯೇನು ಗೊತ್ತೇ? ಪಟೇಲರೇನಾದರೂ ಹೈದರಾಬಾದಿನ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯನ್ನು ನೆಹರೂಗೆ ಕೊಟ್ಟುಬಿಟ್ಟಿದ್ದರೆ ಇಂದು ಕರ್ನಾಟಕದ ಪಕ್ಕದಲ್ಲೂ ಒಂದು ಪಾಕಿಸ್ತಾನವಿರುತ್ತಿತ್ತು! 

ಪಟೇಲರೇನೋ ಭಾರತವನ್ನು ಈ ರೂಪಕ್ಕೆ ತಂದುಕೊಟ್ಟರು. ನಾವೀಗ ಅಖಂಡ ಭಾರತವನ್ನು ನಿರ್ಮಾಣ ಮಾಡಿ ಪಟೇಲರಿಗೆ ಗೌರವ ಸಲ್ಲಿಸಬೇಕಿದೆ. ಅಖಂಡ ಭಾರತದ ಕನಸು ವ್ಯಾಪಕವಾಗಿ ಕಾಣುವುದಕ್ಕೆ ಒಂದು ಕಾರಣವೂ ಇದೆ. ನಮಗೆಲ್ಲರಿಗೂ ಕಲ್ಪನಾ ದಾರಿದ್ರ್ಯವಿದೆ. 75 ವರ್ಷಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂದಿಬಿಟ್ಟರೆ ಉಳಿದವರು ಅಖಂಡ ಭಾರತವನ್ನು ತಮ್ಮ ಕನಸೆಂದು ಪರಿಗಣಿಸಲೇ ಇಲ್ಲ. ಅದನ್ನು ಮರೆತುಹೋದ ಇತಿಹಾಸವಾಗಿಸಿಬಿಟ್ಟರು. ಪಾಕಿಸ್ತಾನ-ಬಾಂಗ್ಲಾಗಳು ಖಡ್ಗ ಹಿಡಿದು ಕತ್ತರಿಸಿದ ಭಾರತಮಾತೆಯ ಕೈಗಳು ಎಂದು ಮರೆಯುವುದಾರೂ ಹೇಗೆ? ಆ ದುಃಖಮಯ ಕ್ಷಣಗಳನ್ನು ನೋಡಿದ ಅನೇಕ ಮಂದಿ ಇಂದಿಗೂ ಜೀವಂತವಾಗಿದ್ದಾರಲ್ಲ! ಗಾಂಧಾರವೆಂದು ಕರೆಯಲ್ಪಡುತ್ತಿದ್ದ ಈಗಿನ ಅಫ್ಘಾನಿಸ್ತಾನ ನಮ್ಮಿಂದ ಬೇರೆಯಾದ್ದನ್ನು ನೋಡಿದವರು ಇಂದು ಉಳಿದಿಲ್ಲ ಒಪ್ಪಿಕೊಳ್ಳುವೆ. ಆದರೆ ಪಾಕಿಸ್ತಾನದ ಕಥೆ ಹಾಗಲ್ಲ. ನಮ್ಮ ಭೂಮಿಯನ್ನು ಮತದ ಹೆಸರಲ್ಲಿ ತುಂಡರಿಸಿ ತಮ್ಮದಾಗಿಸಿಕೊಂಡಿದ್ದನ್ನು ಒಪ್ಪಿಕೊಳ್ಳುವುದು ಹೇಗೆ? ಹೀಗಾಗಿಯೇ ಪೀಳಿಗೆಯಿಂದ ಪೀಳಿಗೆಗೆ ಖಡ್ಗ ಹಿಡಿದು ಮತಾಂತರ ಮಾಡಿ, ಅವರನ್ನು ಹಿಂದೂಗಳ ವಿರುದ್ಧವೇ ಎತ್ತಿಕಟ್ಟಿ, ತಮಗಾಗಿ ಪ್ರತ್ಯೇಕ ರಾಷ್ಟ್ರವನ್ನೇ ನಿರ್ಮಿಸಿಕೊಂಡ ಮಂದಿ ಇವರು ಎಂದು ನೆನಪಿಸುತ್ತಿರಬೇಕಲ್ಲ. ಇಲ್ಲವಾದರೆ ಅಫ್ಘಾನಿಸ್ತಾನವೂ ನಮ್ಮದಾಗಿತ್ತು ಎನ್ನುವುದನ್ನೇ ಹೇಗೆ ಮರೆತೇ ಹೋಗಿದ್ದೇವೋ ಅದೇ ರೀತಿ ಪಾಕಿಸ್ತಾನವೂ ಒಂದು ಕಾಲದಲ್ಲಿ ನಮ್ಮ ಭಾಗವಾಗಿತ್ತು ಎಂಬುದನ್ನು ಮುಂದಿನ ಪೀಳಿಗೆಗೆಳು ಮರೆತುಬಿಡುತ್ತವೆ. ಕಳೆದ 75 ವರ್ಷಗಳಿಂದ ಏರುತ್ತಿರುವ ಮುಸಲ್ಮಾನರ ಜನಸಂಖ್ಯೆ, ಹೊರಗಡೆಯಿಂದ ನಿರಾಶ್ರಿತರನ್ನು ಒಳಸೇರಿಸಿಕೊಂಡು ಜನಸಂಖ್ಯಾಂಕಿಯನ್ನು ಬದಲಿಸಲು ಅವರು ಮಾಡುತ್ತಿರುವ ಯತ್ನ, ಇವೆಲ್ಲದರ ಕುರಿತಂತೆ ಮಾತನಾಡುತ್ತಾ ನಾವು ಈಗಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ಹೀನಸ್ಥಿತಿಗೆ ತಲುಪಿಬಿಟ್ಟಿದ್ದೇವೆ. ಅದರರ್ಥ ಪಾಕಿಸ್ತಾನವನ್ನು ಇನ್ನೆಂದಿಗೂ ಕೇಳುವುದಿಲ್ಲ ಎಂದೇ. ಎಲ್ಲಿಯವರೆಗೂ ರಕ್ಷಣಾತ್ಮಕ ನಿಲುವಿನಲ್ಲಿರುತ್ತೇವೆಯೋ ಅಲ್ಲಿಯವರೆಗೂ ನಾವು ನಮ್ಮನ್ನುಳಿಸಿಕೊಳ್ಳಲು ಹೆಣಗಾಡುತ್ತಲೇ ಇರುತ್ತೇವೆ. ಸ್ವಲ್ಪ ಆಕ್ರಮಕವಾಗಿ ಮುನ್ನುಗ್ಗಬೇಕಿದೆ. ಈ ಬಾರಿಯ ಆಕ್ರಮಣ ಭಿನ್ನ ಭಿನ್ನ ಸ್ವರೂಪಗಳಲ್ಲಿ. ಮೊದಲನೆಯದ್ದು ಮಾನಸಿಕವಾಗಿ ಸಮಾಜವನ್ನು ಈ ದಿಕ್ಕಿಗೆ ತಯಾರು ಮಾಡಬೇಕಿದೆ. ಭಾವನಾತ್ಮಕವಾಗಿ ಭಿನ್ನ ಭಿನ್ನ ಕಾರ್ಯಕ್ರಮಗಳ ಮೂಲಕ ಜೋಡಿಸಿ, ಭಾರತದ ವಿಸ್ತಾರವನ್ನು ಮತ್ತೆ ನೆನಪಿಸಬೇಕಿದೆ. ಎರಡನೆಯದ್ದು, ಬೌದ್ಧಿಕವಾಗಿ ಇದಕ್ಕೆ ಬೇಕಾಗಿರುವ ಸರಕು ನಿರ್ಮಾಣ ಮಾಡಿ ಭಾರತದ ಮರುನಿರ್ಮಾಣದ ಅಗತ್ಯವನ್ನು ಒತ್ತಿ ಹೇಳಬೇಕಿದೆ. ಮೂರನೆಯದ್ದು, ಅಳಿದುಳಿದಿರುವ ಭಾರತವನ್ನು ಉಳಿಸಿಕೊಂಡರೆ ಸಾಕು ಎಂಬ ದೈನ್ಯ ಮನೋಭಾವವನ್ನು ಕೊಡವಿಕೊಂಡು ಭಾರತದಲ್ಲಿ ಧರ್ಮವನ್ನು ಬಿಟ್ಟುಹೋಗಿರುವವರನ್ನು ಮರಳಿ ತರುವೆವಲ್ಲದೇ ಪಾಕಿಸ್ತಾನದಲ್ಲಿರುವ ಮಂದಿಯನ್ನೂ ಮೂಲಧರ್ಮಕ್ಕೆ ಕರೆದುಕೊಂಡು ಬರುತ್ತೇವೆಂಬ ಆಕ್ರಮಕ ಆಲೋಚನೆಯನ್ನು ಮಾಡಬೇಕಿದೆ. ಜಿಡಿಪಿಯ ದೃಷ್ಟಿಯಿಂದಲೂ ಸಂಪತ್ತಿನ ದೃಷ್ಟಿಯಿಂದಲೂ ಸಾಮರ್ಥ್ಯದ ದೃಷ್ಟಿಯಿಂದಲೂ ಭಾರತದ ಎದುರಿಗೆ ಅರೆಕ್ಷಣ ನಿಲ್ಲದ ತಾಕತ್ತಿಲ್ಲದ ಪಾಕಿಸ್ತಾನ ಇಡೀ ಭಾರತವನ್ನೇ ಆಪೋಷನ ತೆಗೆದುಕೊಳ್ಳುವ ಕನಸು ಕಾಣುತ್ತಿದ್ದರೆ, ಭಾರತೀಯರಾಗಿ ನಾವು ಕೈಕಟ್ಟಿ ಕುಳಿತುಕೊಳ್ಳುವುದೇನು? ಕಲಾಂರು ಹೇಳುತ್ತಾರಲ್ಲ, ಚಂದ್ರನನ್ನೇ ಗುರಿಯಾಗಿಸಿಕೊಂಡರೆ ಮನೆಯ ತಾರಸಿಗಾದರೂ ತಲುಪಬಹುದು. ತಾರಸಿಯನ್ನೇ ಗುರಿಯಾಗಿಸಿಕೊಂಡರೆ ನೆಲದಿಂದ ಮೇಲೇಳಲೂ ಸಾಧ್ಯವಾಗದು! ನಾವೀಗ ನಮ್ಮ ಗುರಿಯನ್ನು ವಿಸ್ತಾರಗೊಳಿಸಿಕೊಳ್ಳಬೇಕಿದೆ. ಭಾರತ್ ಜೊಡೊ ಪಟೇಲರು ಮಾಡಿಯಾಗಿದೆ. ನಾವೀಗ ಅಖಂಡ ಭಾರತ ಜೊಡೊದ ಸಂಕಲ್ಪ ಮಾಡಬೇಕಿದೆ..

ಮತ್ತೊಮ್ಮೆ ಭಾರತ ಬಿಟ್ಟು ತೊಲಗಿ!

ಮತ್ತೊಮ್ಮೆ ಭಾರತ ಬಿಟ್ಟು ತೊಲಗಿ!


ಇಂದಿಗೆ 79 ವರ್ಷಗಳು ಕಳೆದೇಹೋದವು. ತುಂಡು ಪಂಚೆಯ ಮಹಾತ್ಮಾ ಗಾಂಧೀಜಿ ಆಗಸ್ಟ್ 7, 1942ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದ ವಿಶಾಲ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ‘ನಾನೊಂದು ಪುಟ್ಟ ಮಂತ್ರವನ್ನು ನಿಮಗೆ ಕೊಡಲಿದ್ದೇನೆ. ಅದನ್ನು ನಿಮ್ಮ ಹೃದಯದಲ್ಲಿ ಕೆತ್ತಿಟ್ಟುಕೊಳ್ಳಿ. ನಿಮ್ಮ ಪ್ರತಿ ಉಸಿರಿನಲ್ಲೂ ಅದು ವ್ಯಕ್ತವಾಗಲಿ. ಆ ಮಂತ್ರ, ಮಾಡು ಇಲ್ಲವೇ ಮಡಿ. ಒಂದೋ ನಾವು ಭಾರತವನ್ನು ಮುಕ್ತಗೊಳಿಸೋಣ, ಇಲ್ಲವೇ ಆ ಮಾರ್ಗದಲ್ಲಿ ಸಾವನ್ನಪ್ಪೋಣ. ನಾವು ಭಾರತದ ದಾಸ್ಯವನ್ನು ಶಾಶ್ವತಗೊಳಿಸುವ ಪ್ರಕ್ರಿಯೆಯನ್ನು ನೋಡುವುದು ಸಾಧ್ಯವಿಲ್ಲ’ ಎಂದಿದ್ದರು. ಮಾಡು ಇಲ್ಲವೇ ಮಡಿ ಎಂಬುದು ಅಲ್ಲಿಂದಾಚೆಗೆ ಪ್ರತಿಯೊಬ್ಬರ ಬಾಯಲ್ಲೂ ನುಲಿಯುವ ಮಂತ್ರವಾಗಿಬಿಟ್ಟಿತು. ಇದನ್ನು ಊಹಿಸದಿದ್ದ ಬ್ರಿಟೀಷರು ಜಾಗತಿಕ ಮಟ್ಟದಲ್ಲಿ ತಮ್ಮ ಗೌರವ ಕಾಪಾಡಿಕೊಳ್ಳಲು ಗಾಂಧಿಯೂ ಸೇರಿದಂತೆ ಎಲ್ಲ ಪ್ರಮುಖ ಕಾಂಗ್ರೆಸ್ ನಾಯಕರನ್ನು ದೇಶದಾದ್ಯಂತ ಬಂಧಿಸಿಬಿಟ್ಟರು. ಬ್ರಿಟೀಷರಿಗೆ ದಮನ ನೀತಿ ಹೊಸತಲ್ಲ. ಆದರೆ ಏಕಾಕಿ ಇಷ್ಟು ನಾಯಕರನ್ನು ಬಂಧಿಸಿದಾಗ ಅನುಯಾಯಿಗಳು ದಿಕ್ಕಿಲ್ಲದಂತಾದರಲ್ಲದೇ ಇಷ್ಟೂ ದಿನವೂ ಕಾಪಾಡಿಕೊಂಡು ಬಂದಿದ್ದ ಗಾಂಧೀಜಿಯವರ ಅಹಿಂಸಾ ನೀತಿ ಹಳ್ಳ ಹಿಡಿಯುವಂತಾಯ್ತು. ಆಂತರಿಕ ಸಭೆಯಲ್ಲಿ ಗಾಂಧೀಜಿ ಸಂಯಮ ಕಾಪಾಡಿಕೊಳ್ಳುವ ಮಾತನ್ನಾಡಿದ್ದರೇನೋ ನಿಜ. ಆದರೆ ಈ ಆಂದೋಲನ ಉಗ್ರಸ್ವರೂಪ ತಾಳದೇ ಹೋದರೆ ಬ್ರಿಟೀಷರಿಗೆ ಚುರುಕು ಮುಟ್ಟದು ಎಂಬುದು ಅವರಿಗೂ ಗೊತ್ತಿತ್ತು. ಅಹಿಂಸೆಗೆ ನಿಜವಾದ ರೂಪ ಬಂದಿದ್ದು ಆಗಲೇ. ಬಹಳ ಹಿಂದೆಯೇ ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಸೈಫುದ್ದೀನ್ ಕಿಚ್ಲು, ‘ಅಹಿಂಸೆ ಎನ್ನುವುದು ಹುಚ್ಚು-ಹುಚ್ಚಾಗಿ ಪಾಲಿಸಲ್ಪಡಬಾರದು’ ಎಂದು ಎಚ್ಚರಿಸಿದ್ದರು. ಕ್ರಾಂತಿಕಾರಿಗಳಂತೂ ದಿನಬೆಳಗಾದರೆ ಈ ಕುರಿತಂತೆ ಕಿತ್ತಾಟ ನಡೆಸುತ್ತಿದ್ದರು. ವೈಸ್ರಾಯ್ ಮೇಲೆ 1929ರಲ್ಲಿ ಕ್ರಾಂತಿಕಾರಿಗಳು ಬಾಂಬ್ ಎಸೆದಾಗ ಕಾಂಗ್ರೆಸ್ಸಿಗರು ಅದನ್ನು ಹೇಯಕೃತ್ಯವೆಂದು ಜರಿದಿದ್ದಲ್ಲದೇ ಈ ಕೃತ್ಯವೆಸಗಿದವರನ್ನು ಷಂಡರೆಂದು ಟೀಕೆ ಮಾಡಿದರು. ಗಾಂಧೀಜಿಯವರು ಕಾಂಗ್ರೆಸ್ಸು ಈ ಕೃತ್ಯವನ್ನು ಒಮ್ಮತದಿಂದ ಖಂಡಿಸಬೇಕೆಂದು ಪ್ರಾಥರ್ಿಸಿದುದರ ಪರಿಣಾಮವಾಗಿ ಭಾಗವಹಿಸಿದ 1239 ಪ್ರತಿನಿಧಿಗಳಲ್ಲಿ ಕೇವಲ 81 ಮಂದಿ ಹೂಂಗುಟ್ಟುವುದರೊಂದಿಗೆ ನಿರ್ಣಯ ಅಂಗೀಕೃತವಾಗಿತ್ತು! ಪಂಜಾಬ್ ಕಾಂಗ್ರೆಸ್ ಪ್ರತಿನಿಧಿಯಾಗಿದ್ದ ಸರಳಾದೇವಿ ಚೌಧುರಾಣಿಯವರು ಗಾಂಧೀಜಿ ಕೋಪಗೊಂಡುಬಿಟ್ಟಾರು ಎಂಬ ಕಾರಣಕ್ಕೆ ನಿರ್ಣಯದ ಪರವಾಗಿ ಮತಹಾಕಬೇಕಾಯ್ತು ಎಂದು ಅಂತರಂಗದ ಗುಟ್ಟನ್ನು ಬಾಯ್ಬಿಟ್ಟಿದ್ದರು. ಅಂದರೆ 1930ರ ವೇಳೆಗಾಗಲೇ ಸ್ವತಃ ಕಾಂಗ್ರೆಸ್ಸು ಅಹಿಂಸಾ ಚಳವಳಿಯಲ್ಲಿ ನಂಬಿಕೆ ಕಳೆದುಕೊಂಡುಬಿಟ್ಟಿತ್ತು. ಈ ನಿರ್ಣಯ ಅಂಗೀಕಾರಕ್ಕೆ ಗಾಂಧೀಜಿಯವರೆಣಿಸಿದಷ್ಟು ಬೆಂಬಲ ದೊರೆಯಲಿಲ್ಲವೆಂದು ಗೊತ್ತಾದಾಗ ಯಂಗ್ ಇಂಡಿಯಾದಲ್ಲಿ ಬಾಂಬಿನ ಪಂಥ ಎಂಬ ಹೆಸರಿನ ಲೇಖನವೊಂದನ್ನು ಬರೆದು ಕ್ರಾಂತಿಕಾರಿಗಳ ಮನೋಗತವನ್ನು, ಅವರ ಉಪಕರಣಗಳನ್ನು, ಅವರ ಉದ್ದೇಶಗಳನ್ನು ಅತ್ಯುಗ್ರವಾಗಿ ಖಂಡಿಸಿದರು. ಆ ವೇಳೆಗಾಗಲೇ ಅಹಿಂಸಾಮಾರ್ಗದ ನಿಧಾನಗತಿಯನ್ನು ವಿರೋಧಿಸಿ ಕ್ರಾಂತಿಕಾರಿಗಳ ಪಂಗಡ ಸೇರುತ್ತಿದ್ದ ತರುಣರು ಅದಕ್ಕೆ ಬಾಂಬಿನ ದರ್ಶನ ಎನ್ನುವ ಹೆಸರಿನ ಪ್ರತ್ಯುತ್ತರವನ್ನೂ ಕೊಟ್ಟಿದ್ದರು. ‘ಹಿಂಸೆಯ ಕೃತ್ಯಗಳನ್ನು ಪಾಪಕರ್ಮವೆಂದು ಟೀಕಾಕಾರರು ಹೇಳುತ್ತಾರೆ. ಆದರೆ ಪಶುಬಲದಿಂದ ತಪ್ಪು ಮಾಡುವುದು, ಅನ್ಯಾಯ ಮಾಡುವುದು ನಿಜವಾದ ಹಿಂಸೆ. ಆದರೆ ಈ ಕೆಲಸವನ್ನು ಕ್ರಾಂತಿಕಾರಿಗಳು ಮಾಡುತ್ತಿಲ್ಲ. ಈ ಅನ್ಯಾಯವನ್ನು ಹೋಗಲಾಡಿಸಲು ನಾವೂ ಬಯಸುತ್ತೇವೆ. ಘನ-ಗಂಭೀರವಾದ ಈ ಉದ್ದೇಶ ಸಾಧನೆಗಾಗಿ ಪ್ರಾಣಗಳನ್ನಪರ್ಿಸಲು ಸಿದ್ಧವಾಗಿದ್ದೇವೆ. ಹೀಗಿರುವಾಗ ಕ್ರಾಂತಿಕಾರಿಗಳನ್ನು ನಿಂದಿಸಿ, ಖಂಡಿಸುವುದು ಸಣ್ಣತನ’ ಎಂದು ಸುದೀರ್ಘವಾದ ಲೇಖನವನ್ನು ಬರೆದಿದ್ದರು. ಕ್ರಾಂತಿಕಾರ್ಯದ ಏಳುಬೀಳುಗಳು ನಡೆದೇ ಇದ್ದವು. ಆದರೆ ಸುಭಾಷರು ವಿದೇಶಕ್ಕೆ ಹೋಗಿ ಇಂಡಿಯನ್ ನ್ಯಾಷನಲ್ ಆಮರ್ಿ ಕಟ್ಟಿ ಜನಮಾನಸದಲ್ಲಿ ಉಂಟುಮಾಡಿದ ಭರವಸೆ ಇದೆಯಲ್ಲ, ಅದು ಬ್ರಿಟೀಷರಲ್ಲಂತೂ ನಡುಕ ಹುಟ್ಟಿಸಿತ್ತು. ಕಾಂಗ್ರೆಸ್ಸೂ ಸಣ್ಣಗೆ ಕಂಪಿಸಿತ್ತು.


ಎರಡನೇ ಮಹಾಯುದ್ಧ ಆರಂಭವಾಗುವ ಲಕ್ಷಣಗಳು ಗೋಚರಿಸಿದಾಗ ಇಂಗ್ಲೆಂಡು ಭಾರತವನ್ನು ಕೇಳದೆಯೇ ಈ ಯುದ್ಧದಲ್ಲಿ ನಮ್ಮನ್ನೂ ಒಂದು ಪಾಲುದಾರರನ್ನಾಗಿಸಿಬಿಟ್ಟಿತ್ತು. ಭಾರತವನ್ನು ಕೇಳಬೇಕಾದರೂ ಏಕೆ? ಎಂಬುದು ಅವರ ಧಾಷ್ಟ್ರ್ಯ. ಬೇರೆ ಸಂದರ್ಭದಲ್ಲಾಗಿದ್ದರೆ ಗಾಂಧೀಜಿ ಮರುಮಾತಿಲ್ಲದೇ ಯುದ್ಧಕ್ಕೆ ಬೆಂಬಲ ಕೊಡುವ ಠರಾವು ಮಂಡಿಸಿಬಿಡುತ್ತಿದ್ದರೇನೋ. ಆದರೆ ಸುಭಾಷರು ಜಾಗತಿಕ ಮಟ್ಟದಲ್ಲಿ ನಡೆಸಿದ ಓಡಾಟ ಮತ್ತು ಬ್ರಿಟನ್ನಿನ ಶತ್ರುಗಳೊಂದಿಗೆ ಗೆಳೆತನ ಸಾಧಿಸಿ ಭಾರತವನ್ನು ಮುಕ್ತಗೊಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಇಡಿಯ ಕಾಂಗ್ರೆಸ್ಸನ್ನು ಚುರುಕುಗೊಳಿಸಿಬಿಟ್ಟಿತ್ತು. ಯುದ್ಧದ ನಂತರ ಸ್ವಾತಂತ್ರ್ಯ ಘೋಷಣೆ ಮಾಡುವುದಿದ್ದರೆ ಮಾತ್ರ ನಮ್ಮ ಬೆಂಬಲ ಎಂದುಬಿಟ್ಟರು ಮಹಾತ್ಮಾ! ಪರಿಸ್ಥಿತಿಯನ್ನು ತಿಳಿಗೊಳಿಸಲು ಯುದ್ಧಕ್ಕೆ ಸಂಬಂಧಪಟ್ಟಂತೆಯೇ ಕ್ಯಾಬಿನೆಟ್ನ ಜವಾಬ್ದಾರಿ ಹೊತ್ತಿದ್ದ ಕ್ರಿಪ್ಸ್ ತನ್ನ ನಿಯೋಗದೊಂದಿಗೆ ಭಾರತಕ್ಕೆ ಬಂದ. ಒಂದರ್ಥದಲ್ಲಿ ಇದು ಕಾಂಗ್ರೆಸ್ಸಿನ ಗೆಲುವೇ. ಆದರೆ ಈ ಗೆಲುವು ಬಹಳಕಾಲ ಉಳಿಯಲಿಲ್ಲ. ಕ್ರಿಪ್ಸ್ ಭಾರತಕ್ಕೆ ಆಗಮಿಸುವಾಗಲೇ ವ್ಯವಸ್ಥಿತವಾಗಿ ಕಾಂಗ್ರೆಸ್ಸಿಗರನ್ನು ಮೂರ್ಖರನ್ನಾಗಿಸುವ ಯೋಜನೆಯೊಂದಿಗೆ ಬಂದಿದ್ದ. 1935ರ ಕಾನೂನಿನಲ್ಲಿ ಸಣ್ಣದೊಂದೆರಡು ತಿದ್ದುಪಡಿಗೆ ಆತ ಮನಸ್ಸು ಮಾಡಿದ. ಪೂರ್ಣಸ್ವಾತಂತ್ರ್ಯದ ಮಾತನ್ನೂ ಆಡದೇ ಸ್ವಾಯತ್ತ ರಾಷ್ಟ್ರದ ದಜರ್ೆಯನ್ನು ಕೊಡುವ ಭರವಸೆ ನೀಡಿದ. ಜೊತೆಗೆ ಮುಸಲ್ಮಾನರ ಪ್ರತ್ಯೇಕ ರಾಷ್ಟ್ರದ ಕಲ್ಪನೆಗೆ ನೀರೆರೆಯುವ ಎಲ್ಲ ಅಂಶಗಳನ್ನೂ ಚಚರ್ಿಸಿದ. ನಿಜಕ್ಕೂ ಗಾಂಧೀಜಿಗೆ ಭ್ರಮನಿರಸನವಾಗಿರಲಿಕ್ಕೆ ಸಾಕು. ಸತ್ಯ ಮತ್ತು ಅಹಿಂಸೆಯ ಅಸ್ತ್ರಗಳಿಗೆ ಬ್ರಿಟೀಷರ ಮನಸ್ಸು ಕರಗಿ ಅವರು ತಾವಾಗಿಯೇ ದೇಶವನ್ನು ಬಿಟ್ಟು ಹೋಗುತ್ತಾರೆ ಎಂಬ ಕನಸ್ಸು ಕಾಣುತ್ತಿದ್ದರು ಅವರು. ಜಗತ್ತೆಲ್ಲವನ್ನೂ ತಮ್ಮ ತಾಳಕ್ಕೆ ಕುಣಿಸುವ ಬ್ರಿಟೀಷರಿಗೆ ಒಂದೆರಡು ಪೀಳಿಗೆಯ ದೂರದೃಷ್ಟಿಯಲ್ಲ, ಸಾವಿರ ವರ್ಷಗಳ ನಂತರ ಬರುವ ಬ್ರಿಟೀಷ್ ಸಮುದಾಯ ಹೇಗಿರಬೇಕು ಎಂಬುದನ್ನು ಅವರು ಈಗ ಆಲೋಚಿಸುತ್ತಾರೆ. ಅಂಥದ್ದರಲ್ಲಿ ಭಾರತವನ್ನು ಸುಲಭವಾಗಿ ಬಿಟ್ಟುಹೋಗುವುದು ಸಾಧ್ಯವೇನು? ಅಷೇ ಅಲ್ಲ, ಈ ಬಾರಿ ಮಾತುಕತೆಯಲ್ಲಿ ಮುಸ್ಲೀಂ ಲೀಗ್ಗೆ ಅವರು ಕೊಟ್ಟ ಸ್ಥಾನ ಬಲುವಿಶೇಷವಾಗಿದ್ದರಿಂದ ಮಾತುಕತೆ ದೇಶ ವಿಭಜನೆಗೆ ಹೆಚ್ಚು ಶಕ್ತಿಯನ್ನೇ ತುಂಬಿತು. ಗಾಂಧೀಜಿ ಸತ್ಯಾಗ್ರಹಕ್ಕೆ ಕರೆಕೊಟ್ಟರು. ಅಷ್ಟೇ ಆಗಿದ್ದರೆ ವಿಶೇಷವೇನೂ ಇರಲಿಲ್ಲ. ‘ಮಾಡು ಇಲ್ಲವೇ ಮಡಿ’ ಎಂಬ ಅವರ ಉದ್ಘೋಷ, ಗಾಂಧೀಜಿ ಇನ್ನು ಸಹಿಸಲಾರೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದಂತೆ ಕಾಣುತ್ತಿತ್ತು.


ಆಮೇಲೇನು? ಆಗಬಾರದ್ದು ನಡೆದೇ ಹೋಯ್ತು. ಮಾರ್ಗದರ್ಶನ ಮಾಡಲು ನಾಯಕರಿಲ್ಲದೇ ಇಡಿಯ ಆಂದೋಲನ ದಾರಿತಪ್ಪಿತು ಅಥವಾ ಸರಿಯಾದ ಸ್ವರೂಪದಲ್ಲಿ ಆಂದೋಲನ ಮುನ್ನುಗ್ಗಿತು. ಬೀದಿಗೆ ಬಂದ ದೊಡ್ಡ ಸಂಖ್ಯೆಯ ಜನ ರಸ್ತೆ ತಡೆ ನಡೆಸಿದರು, ರೈಲಿನ ಹಳಿಗಳನ್ನು ಕಿತ್ತೆಸೆದರು, ಪೊಲೀಸರಿಂದ ಶಸ್ತ್ರಗಳನ್ನು ಕಸಿದರು, ಅಲ್ಲಲ್ಲಿ ಬೆಂಕಿ ಹಚ್ಚಿದರು, ಇಡಿಯ ರಾಷ್ಟ್ರದಲ್ಲಿ ದೇಶಬಿಟ್ಟು ತೊಲಗಿ ಎನ್ನುವ ಈ ಘೋಷಣೆ ಗಲ್ಲಿ-ಗಲ್ಲಿಗಳಿಂದ ಮೊಳಗಲಾರಂಭಿಸಿತು. ಎಂಥವನೂ ಹೆದರಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಹೊತ್ತು ಅದು. ಬ್ರಿಟೀಷರು ಮುಲಾಜು ನೋಡಲಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನರ ಬಂಧನವಾಯ್ತು. ವೈಸ್ರಾಯ್ ಲಿನ್ಲಿತ್ಗೊಗೆ ಬರೆದ ಪತ್ರದಲ್ಲಿ ರಾಮ್ ಮನೋಹರ್ ಲೊಹಿಯಾ, ಸಕರ್ಾರ 50 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ. ಅದಕ್ಕೂ ಹೆಚ್ಚುಜನ ಗಾಯಾಳುಗಳಾಗಿದ್ದಾರೆ ಎಂದಿದ್ದರು. ಅಷ್ಟೇ ಅಲ್ಲ, ರಷ್ಯಾದ ಕ್ರಾಂತಿಯಲ್ಲಿ ಭಾಗವಹಿಸಿದ್ದು ಜನಸಂಖ್ಯೆಯ ಶೇಕಡಾ ಒಂದರಷ್ಟು ಮಾತ್ರ. ಆದರೆ ಈ ಆಂದೋಲನದಲ್ಲಿ ಜನಸಂಖ್ಯೆಯ ಶೇಕಡಾ 20ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದಿದ್ದರು. ಬಹುಶಃ ಇಡಿಯ ಚಳವಳಿಯ ಕಲ್ಪನೆಯನ್ನು ಈ ಪತ್ರವೊಂದರಿಂದಲೇ ಕಟ್ಟಿಕೊಳ್ಳಬಹುದು. ಇಷ್ಟು ವ್ಯಾಪಕವಾಗಿ ಬೆಳೆದಿದ್ದ ಆಂದೋಲನ ನೋಡ-ನೋಡುತ್ತಲೇ ಹತ್ತಿಕ್ಕಲ್ಪಟ್ಟಿತು. ಮುಸ್ಲೀಂ ಲೀಗ್ ಭಾರತದ ಸಹಕಾರಕ್ಕೆ ಬರಲೇ ಇಲ್ಲ. ಗಾಂಧೀಜಿ ಕ್ರಿಪ್ಸ್ ಸಂಧಾನದ ವೇಳೆಗೆ ಮುಸಲ್ಮಾನರಿಗೆ ದೊರೆಯುವ ಪ್ರತ್ಯೇಕ ಸ್ಥಾನಮಾನವನ್ನೇ ವಿರೋಧಿಸಿದ್ದಾರೆ ಎಂಬುದು ಅವರ ವಾದ. ಕ್ರಿಪ್ಸ್ ಗೆದ್ದಿದ್ದ!


ಕ್ವಿಟ್ ಇಂಡಿಯಾ ನೆನಪಿಸಿಕೊಂಡಾಗಲೆಲ್ಲ ಅಯೋಗ್ಯ ಕಮ್ಯುನಿಸ್ಟರನ್ನು ನೆನಪಿಸಿಕೊಳ್ಳಲೇಬೇಕು. ಆರಂಭದಲ್ಲಿ ಅವರು ಮಹಾತ್ಮಾ ಗಾಂಧೀಜಿಯವರ ವಿರೋಧಕ್ಕೆ ನಿಂತು ಯುದ್ಧದ ಹೊತ್ತಿನಲ್ಲಿ ಅವಕಾಶವನ್ನು ಬಳಸಿಕೊಂಡು ಸ್ವಾತಂತ್ರ್ಯವನ್ನು ಗಳಿಸಿಕೊಂಡುಬಿಡಬೇಕು ಎನ್ನಲಾರಂಭಿಸಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ನುಗ್ಗುತ್ತಿರುವ ಸುಭಾಷ್ಚಂದ್ರ ಬೋಸರ ಬಗ್ಗೆ ಅಪಾರ ಸಹಾನುಭೂತಿಯೂ ಅವರಿಗಿತ್ತು. ಹಾಗಂತ ಅವರು ದೇಶಭಕ್ತರಾಗಿಬಿಟ್ಟರು ಎಂದೇನು ಭಾವಿಸಿಬಿಡಬೇಡಿ. ಚೀನಾದ ಕಮ್ಯುನಿಸ್ಟ್ ಪಾಟರ್ಿಯ ಶತವರ್ಷದ ಸಂಭ್ರಮಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗಿ ಕುಳಿತುಕೊಳ್ಳುವ ಅಯೋಗ್ಯ ಮಂದಿ ಈಗಲೂ ಇರುವಾಗ, ಅಂದು ದೇಶಭಕ್ತಿ ಇವರ ಹತ್ತಿರಕ್ಕಾದರೂ ಸುಳಿದಿತ್ತೇನು? ಸಾಧ್ಯವೇ ಇಲ್ಲ. ರಷ್ಯಾ ಜರ್ಮನಿಯ ಕುರಿತಂತೆ ಸಹಾನುಭೂತಿ ಹೊಂದಿದ್ದರಿಂದ ಇಲ್ಲಿನ ಕಮ್ಯುನಿಸ್ಟರಿಗೆ ಬ್ರಿಟೀಷರ ವಿರೋಧ. ಕಾಲಕಳೆದಂತೆ ಹಿಟ್ಲರ್ ರಷ್ಯಾದ ಮೇಲೂ ಏರಿ ಹೋದಾಗ ರಷ್ಯಾ ಬ್ರಿಟನ್ನಿನ ಪರವಾಗಿ ನಿಂತುಕೊಂಡಿತಲ್ಲ, ಆಗ ಕಮ್ಯುನಿಸ್ಟರು ಬ್ರಿಟನ್ನಿನ ಪರವಾಗಿ ಮಾತನಾಡಲಾರಂಭಿಸಿದರು. ಅವರಿಗೀಗ ಸುಭಾಷ್ಚಂದ್ರ ಬೋಸ್ ಜಪಾನಿನ ಅಧ್ಯಕ್ಷರ ನಾಯಿಯಂತೆ ಕಾಣಲಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರ ರಾಷ್ಟ್ರನಿಷ್ಠೆ ಪ್ರಶ್ನಾರ್ಹವೇ!


ಈ ರೀತಿಯ ಇಬ್ಬಗೆಯ ನೀತಿಯುಳ್ಳ ಜನ ಬ್ರಿಟೀಷರಿಗೆ ವರದಾನವಾದರು. ದೊಡ್ಡ ಸಂಖ್ಯೆಯಲ್ಲಿ ಆಂದೋಲನ ನಡೆಯಿತಾದರೂ ದೀರ್ಘಕಾಲ ನಡೆಯದೇ ಸತ್ತುಹೋಯ್ತು. ಒಂದು ರೀತಿಯಲ್ಲಿ ಈ ಆಂದೋಲನ ಕಾಂಗ್ರೆಸ್ಸಿಗೆ ತಮ್ಮ ಸಾಮಥ್ರ್ಯದ ಅರಿವು ಮಾಡಿಸಿಕೊಟ್ಟಿತಲ್ಲದೇ ಬ್ರಿಟೀಷರಿಗೆ ಸಣ್ಣ ಆತಂಕವನ್ನು ಹುಟ್ಟುಹಾಕಿತು. ಗಾಂಧೀಜಿ ಶಾಂತಿಯ ಮಾತನ್ನಾಡಿದಾಗಲೇ ಈ ಪರಿಯ ಪ್ರತಿಭಟನೆ ಕಂಡುಬಂತು. ಇನ್ನು ಇಡಿಯ ದೇಶ ಶಸ್ತ್ರವನ್ನು ಕೈಗೆತ್ತಿಕೊಂಡರೆ ಕಥೆಯೇನು ಅನಿಸಿತ್ತು ಅವರಿಗೆ. ಯುದ್ಧ ಮುಗಿದಮೇಲೆ ಉಸಿರಾಡೋಣವೆಂದರೆ ಸುಭಾಷ್ಚಂದ್ರ ಬೋಸರ ಆಜಾದ್ ಹಿಂದ್ ಸೇನೆಯ ಸೈನಿಕರು ಭಾರತದಲ್ಲಿ ಉತ್ಪಾತವನ್ನೇ ಮಾಡಿಬಿಟ್ಟರು. ಸೈನಿಕರ ದಂಗೆಗಳನ್ನು ಊಹಿಸಿಕೊಂಡೇ ಬ್ರಿಟೀಷರ ಹೃದಯ ಬೆಚ್ಚಗಾಯ್ತು. ದೇಶಬಿಟ್ಟು ಹೊರಡಬೇಕು, ಆದರೆ ಜಾಗತಿಕ ಮಟ್ಟದಲ್ಲಿ ಅವಮಾನವಾಗದಂತೆ ನೋಡಿಕೊಳ್ಳಬೇಕು ಎಂಬ ನಿರ್ಣಯಕ್ಕೆ ಬಂದ ಅವರು ಅಂದುಕೊಂಡದ್ದಕ್ಕಿಂತ ಮುಂಚಿತವಾಗಿಯೇ ದೇಶಬಿಟ್ಟು ಹೊರಟರು.


ಸ್ವಾತಂತ್ರ್ಯ ಬಂದು 75 ವರ್ಷ ಕಳೆದಮೇಲೆಯೂ ಇದೇ ಗಾಂಧೀಜಿಯ ಅನುಯಾಯಿಗಳು ಇನ್ನೂ ಭಾರತವನ್ನು ಸ್ವರಾಜ್ಯವೆಂದು ಭಾವಿಸಿಯೇ ಇಲ್ಲ. ಈಗಲೂ ಭಾರತ್ ತೇರೆ ತುಕ್ಡೇ ಹೋಂಗೆ ಎಂದು ಘೋಷಣೆ ಕೂಗುವುದರಲ್ಲಿ ಹಿಂಜರಿಯುವುದಿಲ್ಲ. ದುರಂತವೆಂದರೆ ಜೆಎನ್ಯು ವಿದ್ಯಾಥರ್ಿಗಳು ಹೀಗೆ ಘೋಷಣೆ ಕೂಗಿದಾಗ ಅವರ ಬೆಂಬಲಕ್ಕೆ ಗಾಂಧಿ ಅನುಯಾಯಿಗಳ ದೊಡ್ಡ ಗಡಣವೇ ನಿಂತಿತ್ತು. 370ನೇ ವಿಧಿಯನ್ನು ಕೇಂದ್ರಸಕರ್ಾರ ಕಿತ್ತು ಬಿಸುಟಾಗ ಗಾಂಧಿ ಅನುಯಾಯಿಗಳು ಸಂಭ್ರಮಾಚರಣೆ ಮಾಡಬೇಕಿತ್ತು. 370ನ್ನು ಕ್ವಿಟ್ ಇಂಡಿಯಾ ಎನ್ನಬೇಕಿತ್ತು. ಊಹ್ಞೂಂ, ಹಾಗಾಗಲಿಲ್ಲ. ಸಂಸತ್ ಅಧಿವೇಶನದ ಹೊತ್ತಲ್ಲಿ ದಿನಬೆಳಗಾದರೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರಲ್ಲ ಗಾಂಧಿ ಅನುಯಾಯಿಗಳು ಕನ್ನಡಿಯಲ್ಲಿ ಒಮ್ಮೆ ಮುಖ ನೋಡಿಕೊಳ್ಳುವುದೊಳಿತು. ಗಾಂಧೀಜಿ ಮೂಲ ಶಿಕ್ಷಣದ ಕುರಿತಂತೆ ಮಾತನಾಡಿದರು. ಅದಕ್ಕೆ ಹತ್ತಿರವಿರುವ ಶಿಕ್ಷಣನೀತಿಯೊಂದನ್ನು ಪ್ರಸ್ತುತಪಡಿಸಿದರೆ ಗಾಂಧಿ ಅನುಯಾಯಿಗಳೇ ವಿರೋಧಿಸುತ್ತಾರಲ್ಲ, ಅಚ್ಚರಿ. ಸರಳತೆ ಗಾಂಧೀಜಿಯವರ ಮೂಲಮಂತ್ರವಾಗಿತ್ತು. ಮೈಮೇಲಿದ್ದ ಬಟ್ಟೆಯನ್ನು ಕಿತ್ತುಬಿಸುಟು ತುಂಡು ಪಂಚೆಗೆ ಬಂದಿದ್ದ ಪುಣ್ಯಾತ್ಮ. ಮಂತ್ರಿಗಳ, ಅಧಿಕಾರಗಳ ವಿಐಪಿ ಸಂಸ್ಕೃತಿಯನ್ನು ಹೊಡೆದಟ್ಟಿ ಅವರ ಗಾಡಿಗಳ ಕೆಂಪುದೀಪವನ್ನು ತೆಗೆಸಿದರೆ, ಗಾಂಧೀಜಿಯ ಹೆಸರು ಹೇಳುವವರು ಖುಷಿ ಪಡಬೇಕಲ್ಲವೇ? ಗೋಹತ್ಯೆ ನಿಷೇಧಕ್ಕೆ ಕಾನೂನು ಬಂದರೆ, ಸಂಭ್ರಮಿಸಬೇಕಾದ್ದು ಯಾರು ಹೇಳಿ? ಗಾಂಧಿಯ ಹೆಸರು ಹೇಳಿಕೊಂಡು ಬದುಕು ನಡೆಸುತ್ತಿರುವವರು ತಾನೆ? ಆದರೆ ಹಾಗೇಕೆ ಆಗುತ್ತಿಲ್ಲ. ಎಲ್ಲ ಬಿಡಿ, ರಾಮ್ಧುನ್ ಹೇಳುತ್ತಾ ರಾಮನ ಆದರ್ಶದ ಮೇಲೆಯೇ ಬದುಕುವ ಕಲ್ಪನೆ ಕಟ್ಟಿಕೊಡುತ್ತಿದ್ದ ಗಾಂಧಿಯ ನಾಡಿನಲ್ಲಿ ರಾಮ ಜನ್ಮಸ್ಥಾನ್ ಮಂದಿರ ಪುನರ್ನಿಮರ್ಾಣಗೊಳ್ಳುವಾಗ ಮುಂದೆ ನಿಂತು ಕಲ್ಲುಕಟ್ಟಬೇಕಾದವರು ಯಾರು ಹೇಳಿ? ಮತ್ತದೇ ಗಾಂಧಿಯ ಹೆಸರು ಎರವಲು ಪಡೆದವರು ತಾನೆ?
ಕ್ವಿಟ್ ಇಂಡಿಯಾ ಮತ್ತೊಮ್ಮೆ ಆಗಬೇಕಿದೆ. ಕ್ರೀಡಾಪಟುಗಳಿಗೆ ಪ್ರಶಸ್ತಿ ಕೊಡುವಾಗಲೂ ರಾಜಕಾರಣಿಗಳ ಹೆಸರು, ಆಸ್ಪತ್ರೆಗೆ ಹೆಸರಿಡುವಾಗಲೂ ರಾಜಕಾರಣಿಗಳದ್ದೇ. ಇವೆಲ್ಲವನ್ನೂ ಕಿತ್ತೆಸೆಯುವ ಕಾಲಬಂದಿದೆ. ಚುನಾವಣೆ ಬಂದೊಡನೆ ಜನಿವಾರ ಹಾಕಿಕೊಂಡು, ವಿಭೂತಿ ಬಳಿದುಕೊಂಡು, ಪಂಥಗಳ ರಾಜಕಾರಣ ಮಾಡಿ ಮತಸ್ವೀಕಾರ ಮಾಡುವ ಜನರಿಗೆ ಕ್ವಿಟ್ ಇಂಡಿಯಾ ಎನ್ನಬೇಕಿದೆ. ರೈತರಿಗೆ ನೇರವಾಗಿ ಲಾಭ ಸಂದಾಯವಾಗುವಾಗ ಅದನ್ನು ಬೇಕಂತಲೇ ವಿರೋಧಿಸುತ್ತಾ ರಸ್ತೆಯನ್ನು ಅಡ್ಡಗಟ್ಟಿ ಕೂರುತ್ತಾರಲ್ಲ, ಬಿರಿಯಾನಿ ತಿನ್ನುತ್ತಾ ಹೈವೇಗಳಲ್ಲಿ ಜನ ಸಂಚರಿಸದಂತೆ ಮಾಡುತ್ತಾರಲ್ಲ, ಅಂಥವರಿಗೆ ಎಚ್ಚರಿಕೆ ಕೊಡಬೇಕಿದೆ. ಹೊಸ ಭಾರತ ಹೀಗೆಯೇ ಮೈದಳೆಯಬೇಕಾಗಿರುವುದು. ನಾವು-ನೀವುಗಳೇ ಇದಕ್ಕೆ ಸತ್ಯಾಗ್ರಹಿಗಳು!

ಕಾಶ್ಮೀರವಿಂದು ಹೊತ್ತುರಿಯುತ್ತಿರುವುದು ಏಕೆ ಗೊತ್ತೆ?

ನೆಹರೂ `ಜಾತ್ಯತೀತ’ ಮನಸಿನ ಬಗ್ಗೆ ಈಗಾಗಲೇ ತಿಳಿದಿದ್ದಾಗಿದೆ.  ಪರಧರ್ಮ ಸಹಿಷ್ಣುತೆ ಹಿಂದೂವಿನ ಪರಮಗುಣ. ಆದರೆ ಜಾತ್ಯತೀತತೆಯ ಹಿನ್ನೆಲೆಯಲ್ಲಿ ಅವರ ಮನದಲ್ಲಿ ಹಿಂದೂ ದ್ವೇಷ ಮನೆ ಮಾಡಿತ್ತಲ್ಲ ಅದನ್ನು ಮಾತ್ರ ಸಹಿಸುವುದು ಸಾಧ್ಯವೇ ಇಲ್ಲ. ಕಾಶ್ಮೀರದ ವಿಚಾರದಲ್ಲಾದದ್ದೂ ಅದೇ. ನೆಹರೂರ ಮೊಂಡುತನ ಇಡೀ ಕಾಶ್ಮೀರವನ್ನು ಉರಿಯುವ ಕುಂಡವಾಗಿಸಿಬಿಟ್ಟಿತು. ಸ್ವಾತಂತ್ರ್ಯಾನಂತರ ಸರ್ದಾರ ಪಟೇಲರು ರಾಜ್ಯವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ಮುಗಿಸಿದರು. ಹೈದರಾಬಾದ್‌ನ ನಿಜಾಮ ಕೂಡ ಮಿಸುಕಾಡದೇ ಶರಣಾಗುವಂತೆ ಮಾಡಿದ್ದು ಪಟೇಲರ ಬುದ್ಧಿಮತ್ತೆಗೆ ಸಾಕ್ಷಿ. ನೆಹರೂ ಕಾಶ್ಮೀರದ ವಿಲೀನವನ್ನು ತಾನೇ ಮಾಡುವುದಾಗಿ ಪಣತೊಟ್ಟು ಅದನ್ನು ಉತ್ತರಿಸಲಾಗದ ಪ್ರಶ್ನೆಯಾಗಿ ಉಳಿಸಿಬಿಟ್ಟರು! ಕಾಶ್ಮೀರ ಮಹಾರಾಜ ಹರಿಸಿಂಗರ ರಾಜ್ಯವಾಗಿತ್ತು. ಅಲ್ಲಿನ ಪ್ರಜೆಗಳಲ್ಲಿ ಬಹುಪಾಲು ಮುಸಲ್ಮಾನರೇ. ಮುಸಲ್ಮಾನರನ್ನು ಆಳುವ ಹಿಂದೂ ರಾಜ ಎಂದರೆ ನೆಹರೂರ ಜಾತ್ಯತೀತ ಮನಸ್ಸು ಸಹಿಸುವುದು ಹೇಗೆ ಹೇಳಿ. ಅವರು ಮೊದಲಿನಿಂದಲೂ ರಾಜನ ವಿರೋಧಿ ಬಣದಲ್ಲೇ ನಿಂತಿದ್ದರು. ಅತ್ತ ಕಾಶ್ಮೀರದಲ್ಲಿ ಮಹಾರಾಜರನ್ನು ಪಟ್ಟದಿಂದಿಳಿಸಿ, ರಾಜ್ಯವನ್ನೇ ಪಾಕಿಸ್ಥಾನದೊಂದಿಗೆ ವಿಲೀನಗೊಳಿಸಬೇಕೆಂಬ ತವಕ ನೆಹರೂರ ಆಪ್ತಮಿತ್ರ ಶೇಕ್ ಮೊಹಮ್ಮದ್ ಅಬ್ದುಲ್ಲಾರಿಗಿತ್ತು. ನ್ಯಾಶನಲ್ ಕಾನ್ಫರೆನ್ಸ್ ಎಂಬ ಪಾರ್ಟಿಯನ್ನು ಹುಟ್ಟುಹಾಕಿ ಅದರ ಮೂಲಕ ಮಹಾರಾಜರಿಗೆ ‘ಕಾಶ್ಮೀರ ಬಿಟ್ಟು ತೊಲಗಿ’ ಎನ್ನುವ ಆದೇಶ ನೀಡುವ ಚಳವಳಿಯನ್ನು ಶೇಕ್ ಸಾಹೇಬರು ಆರಂಭಿಸಿದ್ದರು. ‘ನಾವು ಈವರೆಗೂ ನೊಂದಿದ್ದು ಸಾಕು. ಪ್ರತಿಭಟಿಸುವ ಸಮಯ ಬಂದೇಬಿಟ್ಟಿದೆ. ನಾವೆಲ್ಲ ಗುಲಾಮಿತನದ ವಿರುದ್ಧ ಹೋರಾಡಲು ಜಿಹಾದಿನ ಸೈನಿಕರಾಗಬೇಕು. ಗಂಡು-ಹೆಣ್ಣು-ಮಕ್ಕಳು-ವೃದ್ಧರು ಯಾವೊಂದೂ ಭೇದವಿಲ್ಲದೇ ಪ್ರತಿಯೊಬ್ಬರೂ ಕಾಶ್ಮೀರ ಬಿಟ್ಟು ತೊಲಗುವ ಘೋಷಣೆ ಕೂಗಬೇಕು. ಕಾಶ್ಮೀರ ರಾಷ್ಟ್ರ ನಿರ್ಮಾಣವಾಗಬೇಕು’ ಎಂಬ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು! ಈ ಮಾತುಗಳಿಂದ ಕುಪಿತರಾದ ಮಹಾರಾಜರು, ರಾಜದ್ರೋಹದ ಆಪಾದನೆಯ ಮೇಲೆ ಶೇಕ್ ಅಬ್ದುಲ್ಲಾ ಮತ್ತು ಅವರ ಪಕ್ಷದ ಇತರ ಸದಸ್ಯರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು. ನೆಹರೂ ಕೋಪಾವಿಷ್ಟರಾದರು. ಗೆಳೆಯನನ್ನು ಜೈಲಿಗೆ ಅಟ್ಟುವುದನ್ನು ಸಹಿಸುವುದಾದರೂ ಹೇಗೆ? ಕೂಡಲೇ ನೆಹರೂ ಮಹಾರಾಜರಿಗೆ ಪಂಥಾಹ್ವಾನವಿತ್ತರು! ಈ ಬಂಧನದ ವಿರುದ್ಧ ಪ್ರತಿಭಟಿಸಲಿಕ್ಕಾಗಿಯೇ, ಕಾಶ್ಮೀರ ಗಡಿಯನ್ನು ದಾಟುತ್ತೇನೆಂದು ಘೋಷಿಸಿಬಿಟ್ಟರು. ಮಹಾರಾಜರು ನಿಷೇಧ ಹೇರಿದ ನಂತರವೂ ಕಾಶ್ಮೀರ ಗಡಿ ದಾಟಿದ ಉದ್ಧಟತನಕ್ಕಾಗಿ ಅವರು ನೆಹರೂರನ್ನು ಬಂಧಿಸಲೇಬೇಕಾಯಿತು.

ಮೊದಲೇ ವೈಮನಸ್ಸುಗಳ ಆಗರವಾಗಿದ್ದ ನೆಹರೂ – ಮಹಾರಾಜರ ಸಂಬಂಧ ಈಗ ಮತ್ತಷ್ಟು ಹದಗೆಟ್ಟಿತು. ಆದರೆ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ನೀಡಿದ ತೀಕ್ಷ್ಣ ಆದೇಶದಿಂದಾಗಿ ನೆಹರೂ ಕಾಶ್ಮೀರದಿಂದ ಅನಿವಾರ್ಯವಾಗಿ ಮರಳಬೇಕಾಯಿತು. ದೇಶದ ಮಹಾನಾಯಕರುಗಳ ಕೃಪಾಕಟಾಕ್ಷವಿದ್ದ ನೆಹರೂರ ಆಟವೇ ಮಹಾರಾಜರ ಮುಂದೆ ಸಾಗದಿದ್ದಾಗ ಇನ್ನು ತನ್ನದೇನು ಲೆಕ್ಕ? ಎಂದರಿತ ಶೇಕ್ ಅಬ್ದುಲ್ಲಾ ಮಹಾರಾಜರಿಗೊಂದು ಕ್ಷಮಾಪಣಾ ಪತ್ರ ಬರೆದರು. ‘ನಾನು ಮಹಾರಾಜರಿಗೆ ವೈಯಕ್ತಿಕವಾಗಿ ಅಥವಾ ಸಿಂಹಾಸನಕ್ಕೆ ಯಾವುದೇ ದ್ರೋಹ ಬಗೆದಿಲ್ಲವೆಂದು ಈ ಮೂಲಕ ದೃಢಪಡಿಸುತ್ತೇನೆ. ಇನ್ನು ಮುಂದೆ ‘ನನ್ನ ಮತ್ತು ಸಂಘಟನೆಯ ಸಂಪೂರ್ಣ ಸಹಕಾರವನ್ನು ನಿಮಗೆ ನೀಡುತ್ತೇನೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಮಹಾರಾಜರ ಅಥವಾ ರಾಜ್ಯದ ವಿರುದ್ಧ ಕೆಲಸ ಮಾಡಿದರೆ ಅಂತಹವರನ್ನೇ ನಮ್ಮ ಬದ್ಧವೈರಿಗಳೆಂದು ಭಾವಿಸುತ್ತೇವೆ’ ಎಂದೂ ಹೇಳಿಕೊಂಡರು. ಇತ್ತ ಕಾಶ್ಮೀರಿಗಳೇ ಗೌರವಿಸದ ನ್ಯಾಶನಲ್ ಕಾನ್ಫರೆನ್ಸ್‌ನ್ನು ರಾಷ್ಟ್ರೀಯ ಸ್ತರಕ್ಕೇರಿಸುವ ಮೂರ್ಖ ಸಾಹಸವನ್ನು ನೆಹರೂ ಶುರುವಿಟ್ಟಿದ್ದರು. ‘ಶೇಕ್ ಅಬ್ದುಲ್ಲಾರ ನ್ಯಾಶನಲ್ ಕಾನ್ಫರೆನ್ಸ್ ನಿಜವಾಗಲೂ ರಾಷ್ಟ್ರೀಯ ಸಂಸ್ಥೆ. ಹೀಗಾಗಿಯೇ ಕಾಶ್ಮೀರಿ ಪಂಡಿತರು ಶೇಕ್ ಅಬ್ದುಲ್ಲಾರೊಂದಿಗೆ ಕೈಜೋಡಿಸಿದರೆ ಮಾತ್ರ ಅವರ ಮಾತಿಗೆ ಬೆಲೆ ಬರುತ್ತದೆ.ಇಲ್ಲವಾದಲ್ಲಿ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ’ ಎಂದು ಆಗಾಗ ಹಲುಬುತ್ತಲೇ ಇರುತ್ತಿದ್ದರು. ಸ್ವತಃ ಪಂಡಿತರ ಕುಲದವರಾಗಿ, ಕಾಶ್ಮೀರದಲ್ಲಿ ಪಂಡಿತರ ಮೇಲೆ ಮುಸಲ್ಮಾನರು ನಡೆಸಿದ್ದ ಅತ್ಯಾಚಾರವನ್ನು ಕಂಡಿದ್ದ ನೆಹರೂಗೆ ಈ ಮಾತು ಹೇಳುವ ಮನಸ್ಸಾದರೂ ಎಲ್ಲಿಂದ ಬಂತೋ? ದೇವರೇ ಬಲ್ಲ. ಆದರೆ ಅವರ ಇಂತಹ ಮಾತುಗಳಿಂದಾಗಿಯೇ ಮಹಾರಾಜಾ ಹರಿಸಿಂಗರು ಅಕ್ಷರಶಃ ತುಮುಲಕ್ಕೆ ಬಿದ್ದುದು. ಹಿಂದೂಗಳ ಪವಿತ್ರ ದೇಶ ಭಾರತವನ್ನು ಬಿಟ್ಟು ಪಾಕಿಸ್ಥಾನವನ್ನು ಸೇರಿಬಿಡುವ ಆಲೋಚನೆ ಅವರ ಮನ ಹೊಕ್ಕಿದ್ದು!, ನಾಲ್ಕಾರು ತಿಂಗಳುಗಳ ಕಾಲವಂತೂ ಮಹಾರಾಜರು ಅಕ್ಷರಶಃ ಚಿಂತಾಮಗ್ನರಾಗಿಯೇ ಇದ್ದುಬಿಟ್ಟಿದ್ದರು.

ಒಂದೆಡೆ ಮಾತೃಧರ್ಮದ ಸೆಳೆತ, ಇನ್ನೊಂದೆಡೆ ವಿಲೀನಕ್ಕೆ ಒಪ್ಪಿಗೆ ಕೊಟ್ಟರೂ ಕಾಡುವ ನೆಹರೂರ ದರ್ಪ, ಮತ್ತೊಂದೆಡೆ ಮೌಂಟ್‌ಬ್ಯಾಟನ್ ಮೂಲಕ ಪಾಕಿಸ್ಥಾನ ಸೇರ್ಪಡೆಗೆ ಬರುತ್ತಿರುವ ಆಮಿಷ. ಯಾವುದನ್ನು ಒಪ್ಪಬೇಕು, ಯಾವುದನ್ನು ಬಿಡಬೇಕು ಎಂಬುದೇ ಅವರಿಗೆ ತಿಳಿಯದಾಯಿತು. ನೆಹರೂರ ನಂಬಿಕಸ್ತ ಗೆಳೆಯ ಮೌಂಟ್‌ಬ್ಯಾಟನ್ ಸಾಧ್ಯವಾದಷ್ಟು ಕಾಶ್ಮೀರ ಪಾಕಿಸ್ಥಾನಕ್ಕೆ ಸೇರುವಂತೆ ಪ್ರಯತ್ನ ನಡೆಸಿದ್ದ. ಮಹಾರಾಜನನ್ನು ಒಲಿಸಿಕೊಳ್ಳಬಹುದಾದ ಹೆಜ್ಜೆಯನ್ನು ಜಿನ್ನಾರಿಗೆ ಹೇಳಿಕೊಡುತ್ತಿದ್ದ. ಅಷ್ಟೇ ಅಲ್ಲ. ನಿಮ್ಮ ಯಾವುದೇ ನಿರ್ಧಾರವನ್ನು ಆಗಸ್ಟ್ ೧೪ರ ವರೆಗೆ ತಿಳಿಸಲೇಬೇಡಿ ಎಂದು ಮಹಾರಾಜರಿಗೆ ತಾಕೀತು ಮಾಡಿದ್ದ. ತೆರೆ-ಮರೆಯ ಹಿಂದೆ ಮೌಂಟ್‌ಬ್ಯಾಟನ್ ಈ ರೀತಿಯ ನಾಟಕ ಆಡುತ್ತಿರಬೇಕಾದರೆ, ನೆಹರೂ ಮಾತ್ರ ಮೌಂಟ್‌ಬ್ಯಾಟನ್‌ನ ಕುತಂತ್ರ ಅರಿಯದೇ ಮಂಕಾದವರಂತಿದ್ದರು ! ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ಮೌಂಟ್‌ಬ್ಯಾಟನ್ ಅಪಾರ ಶ್ರಮವಹಿಸುತ್ತಿದ್ದಾರೆ ಎಂದೇ ನಂಬಿದ್ದರು. ಇತ್ತ ಮೌಂಟ್‌ಬ್ಯಾಟನ್ ತನ್ನ ಎಲ್ಲ ಪ್ರಯತ್ನಗಳೂ ವಿಫಲವಾಗುವ ಹಂತಕ್ಕೆ ಬಂದಾಗ ಮಹಾರಾಜರಿಗೂ-ನೆಹರೂಗೂ ನಡುವಣ ಸಂಬಂಧ ಸರಿಯಿಲ್ಲ ಎಂಬುದನ್ನೇ ಮುಂದಿರಿಸಿಕೊಂಡು ಕಾಶ್ಮೀರ, ಪಾಕಿಸ್ಥಾನದೊಂದಿಗೆ ವಿಲೀನಗೊಂಡುಬಿಡುತ್ತಿದೆ ಎಂದು ಘೋಷಿಸಿದ. ಒತ್ತಡಕ್ಕೆ ಬಿದ್ದ ಮಹಾರಾಜರು ಪಾಕಿಸ್ಥಾನದೊಂದಿಗೆ ತಾತ್ಕಾಲಿಕ ಒಪ್ಪಂದ ಮಾಡಿಕೊಂಡುಬಿಟ್ಟರು. ಆದರೆ ಸಂಪೂರ್ಣ ಸ್ವಾತಂತ್ರ್ಯ ಹೊಂದುವ ಆಕಾಂಕ್ಷೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಇತ್ತ ನ್ಯಾಶನಲ್ ಕಾನ್ಫರೆನ್ಸ್ ಕೂಡ ಪಾಕಿಸ್ಥಾನಕ್ಕೆ ಸೇರುವ ವಿಧೇಯಕವನ್ನು ಅಂಗೀಕರಿಸಿಯೇ ಬಿಟ್ಟಿತು. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸರ್ದಾರ ಪಟೇಲರಿಗೆ ಕೊಡದೇ, ತಮ್ಮ ಬಳಿಯೇ ಇಟ್ಟುಕೊಂಡಿದ್ದ ನೆಹರೂಗೆ ಇದ್ಯಾವುದರ ಅರಿವೇ ಇರಲಿಲ್ಲ. ತಮ್ಮ ಗೆಳೆಯರೆಲ್ಲ ತಮ್ಮೊಂದಿಗೇ ಇರುತ್ತಾರೆ ಎಂಬ ದೃಢ ನಂಬಿಕೆ ಅವರದು.

ಬರಿ ಈ ವಿಚಾರವಷ್ಟೇ ಅಲ್ಲ. ದೇಶದ ರಕ್ಷಣೆಯ ದೃಷ್ಟಿಯಲ್ಲಿ , ಅಖಂಡ ಭಾರತದ ಕನಸು ಕಟ್ಟುವಲ್ಲಿ ನೆಹರೂ ಯಾವಾಗಲೂ ಹಿಂದೆಯೇ! ಗಿಲ್ಗಿಟ್ ಪ್ರದೇಶ ರಕ್ಷಣಾ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶ. ರಷ್ಯಾದ ಮತ್ತು ಚೀನಾದ ರಕ್ಷಣಾ ತಲೆಹರಟೆಗಳ ಮೇಲೆ ಸ್ಪಷ್ಟ ನಿಗಾ ಇಡಬಹುದಾದ ಪ್ರದೇಶ. ಹೀಗಾಗಿಯೇ ಬ್ರಿಟಿಷ್ ಸರಕಾರ ಗಿಲ್ಗಿಟ್ ಏಜೆನ್ಸಿಯಿಂದ ಆ ಪ್ರದೇಶವನ್ನು ೬೦ವರ್ಷಗಳ ಕಾಲ ಗುತ್ತಿಗೆಗೆ ಪಡೆದಿತ್ತು. ಸ್ವಾತಂತ್ರ್ಯ ಬಂದ ನಂತರ ಆ ಗುತ್ತಿಗೆಗೆ ಯಾವುದೇ ಮಹತ್ವ ಇರುತ್ತಿರಲಿಲ್ಲ. ಹೀಗಾಗಿಯೇ ಮೌಂಟ್ ಬ್ಯಾಟನ್‌ನ ಮೇಲೆ ಒತ್ತಡ ಹೇರಿ ನೆಹರೂ ಅದನ್ನು ಕಸಿಯುವ ಕೆಲಸ ಮಾಡಬೇಕಿತ್ತು. ಮಾಡಲಿಲ್ಲ. ಮಹಾರಾಜಾ ಹರಿಸಿಂಗರು ಆ ಪ್ರದೇಶದಲ್ಲಿ ತಮ್ಮ ಅಧಿಕಾರಿಗಳನ್ನು ನೇಮಿಸುವ ಮುನ್ನವೇ, ಗಿಲ್ಗಿಟ್ ಸ್ಕೌಟ್ಸ್ ಆ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಸ್ಕೌಟ್ಸ್‌ನ ಅಧಿಕಾರಿ ಮೇಜರ್ ಚ್ರಾನನ್ನು ಸರ್ಕಾರ ಬಂಧಿಸಿತು. ಕುಪಿತಗೊಂಡ ಸ್ಕೌಟ್ಸ್ ದಂಗೆಯೆದ್ದರು. ಸ್ವಾತಂತ್ರ್ಯದ ಸುದ್ದಿ ತಿಳಿದೊಡನೇ ಪಾಕಿಸ್ಥಾನಕ್ಕೆ ಸೇರಿಕೊಂಡುಬಿಟ್ಟರು. ರಕ್ಷಣಾ ದೃಷ್ಟಿಯಿಂದ ಮಹತ್ವವಾಗಿದ್ದ ಪ್ರದೇಶವೊಂದು ಈ ರೀತಿ ಅನಾಯಾಸವಾಗಿ ಪಾಕಿಗಳ ಕೈ ಸೇರಿಹೋಯಿತು. ನೆಹರೂರಿಂದಾಗಿ ಭಾರತೀಯರು ಕೈ-ಕೈ ಹಿಸುಕಿಕೊಳ್ಳುವುದು ಮಾತ್ರ ಉಳಿಯಿತು!

ಇದೇ ರೀತಿ ಕಾಶ್ಮೀರದೊಂದಿಗೂ ನೆಹರೂ ಮೌಢ್ಯತೆಯ ಪ್ರದರ್ಶನ ಮಾಡಿದರು. ಕಾಶ್ಮೀರವನ್ನು ವಿಲೀನಗೊಳಿಸಿಕೊಳ್ಳಬೇಕೆಂಬ ಆತುರ ಅವರೆಂದಿಗೂ ತೋರಲೇ ಇಲ್ಲ. ಸ್ವಾತಂತ್ರ್ಯ ಬಂದ ಮೂರು ದಿನದ ನಂತರ ಈ ದೇಶದ ಗಡಿಯನ್ನು ಬ್ರಿಟಿಷರು ನಿರ್ಧಾರ ಮಾಡಿ ಪ್ರಕಟಪಡಿಸಿದ್ದರು. ಕಾಶ್ಮೀರಕ್ಕೆ ಭಾರತದ ಇತರ ಭಾಗವನ್ನು ಬೆಸೆಯುವ ಏಕೈಕ ದ್ವಾರ ದೊರೆತಿದ್ದು ದುರಂತ. ಗುರುದಾಸಪುರ. ಆ ನಗರದ ಮೂಲಕ ಜಮ್ಮುವಿಗೆ ಹೋಗಿ ಅಲ್ಲಿಂದ ಕಾಶ್ಮೀರದ ಕಣಿವೆಗಳಿಗೆ ಸೇರಬೇಕಿತ್ತು. ಆ ರಸ್ತೆಯೂ ಅಯೋಮಯವಾಗಿತ್ತು. ಅದೇ ವೇಳೆಗೆ ಕಾಶ್ಮೀರವನ್ನು ಸೇರಬಹುದಾದ ಎರಡು ಪುಟ್ಟ-ಪುಟ್ಟ ಚೆಂದದ ರಸ್ತೆಗಳು ಪಾಕಿಗಳ ಪಾಲಿಗಿತ್ತು. ಈ ಅವಕಾಶವನ್ನೇ ಬಳಸಿಕೊಂಡ ಜಿನ್ನಾ ಲಾಹೋರಿನಿಂದ ಹಾಗೂ ರಾವಲ್‌ಪಿಂಡಿಯಿಂದ ಕಾಶ್ಮೀರಕ್ಕೆ ಸೇರುತ್ತಿದ್ದ ನಿತ್ಯ ಬಳಕೆಯ ವಸ್ತುಗಳನ್ನು ತಡೆಹಿಡಿದುಬಿಟ್ಟ. ಕಾಶ್ಮೀರಿಗಳು ತಹತಹಿಸಿಬಿಟ್ಟರು. ಅಲ್ಲಿಯವರೆಗೂ ಈ ವಿಚಾರಗಳ ಬಗ್ಗೆ ಆಲೋಚನೆಯೂ ಮಾಡಿರದಿದ್ದ ನೆಹರೂ ತಲೆ ಕೆಟ್ಟುಹೋಯಿತು. ವಿಮಾನಗಳನ್ನು ಬಳಸಿ ಆಹಾರಪೂರೈಕೆಗೆ ಶುರುವಿಟ್ಟರು. ಅದು ಬಕಾಸುರನ ಪಾಲಿಗೆ ಅರೆಕಾಸಿನ ಮಜ್ಜಿಗೆಯಂತಾಯಿತು.

ಈ ವಿಚಾರದ ಬಗ್ಗೆ ಸೂಕ್ಷ್ಮ ನಿರ್ಧಾರಗಳನ್ನು ಕೈಗೊಂಡ ಪಟೇಲರು ಮಾತ್ರ ಪಠಾಣ್‌ಕೋಟ್‌ನಿಂದ ಜಮ್ಮುವರೆಗಿನ ೧೧೨ ಕಿ.ಮೀ.ರಸ್ತೆಯನ್ನು ದುರಸ್ತಿಗೊಳಿಸುವ ಕೆಲಸ ಆರಂಭಿಸಿದರು. ಪಾಕೀಗಳು ಭಾರತೀಯ ಮುಸಲ್ಮಾನರನ್ನು ಎತ್ತಿಕಟ್ಟಿ ರಸ್ತೆ ಕಾರ್ಯ ತಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಎಲ್ಲವೂ ವ್ಯರ್ಥವಾಯಿತು. ಪಟೇಲರ ಇಚ್ಛಾಶಕ್ತಿಯಿಂದ ಸಮರೋಪಾದಿಯಲ್ಲಿ ಶುರುವಾದ ಕಾರ್ಯ ದಾಖಲೆಯ ಸಮಯದಲ್ಲಿ ಮುಕ್ತಾಯವಾಯಿತು. ಆದರೆ ಈ ರಸ್ತೆಯನ್ನು ಕಾಶ್ಮೀರದವರೆಗೂ ಒಯ್ಯುವ ಹಕ್ಕು ಅವರಿಗಿರಲಿಲ್ಲ. ಏಕೆಂದರೆ ಕಾಶ್ಮೀರ ಸಮಸ್ಯೆಯನ್ನು ತಾನೇ ಪರಿಹರಿಸಬೇಕೆಂಬ ಹಠ ನೆಹರೂಗಿತ್ತು. ಬೇರೆ ಯಾರೂ ಪರಿಹಾರಕಾರ್ಯದಲ್ಲಿ ಮೂಗುತೂರಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ಅದು ಬಿಡಿ. ಪಟೇಲರು ಅಂದು ದೂರದೃಷ್ಟಿಯಿಂದ ಆ ರಸ್ತೆ ನಿರ್ಮಾಣ ಮಾಡಿದರಲ್ಲ, ಆ ರಸ್ತೆ ಇಂದಿಗೂ ಭಾರತವನ್ನು ಕಾಶ್ಮೀರದೊಂದಿಗೆ ಬೆಸೆಯುವ ರಸ್ತೆಯಾಗಿ ಉಳಿದಿದೆ! ಪಂಜಾಬ್‌ನಲ್ಲಿ ಕೋಮುಗಲಭೆ ತೀವ್ರವಾಗಿ ಉರಿಯುತ್ತಿದ್ದಾಗಲೂ, ಜಮ್ಮು ಕಾಶ್ಮೀರಗಳು ಶಾಂತವಾಗಿಯೇ ಇದ್ದವು. ಪಾಕಿಸ್ಥಾನದಿಂದ ನಿರಾಶ್ರಿತರಾಗಿ ಬರುತ್ತಿದ್ದ ಹಿಂದೂಗಳು ಕಾಶ್ಮೀರದ ಮೂಲಕ ಕಾಲ್ನಡಿಗೆಯಲ್ಲೇ ಹಾದು ಭಾರತ ಸೇರುತ್ತಿದ್ದರು. ಮಾರ್ಗದುದ್ದಕ್ಕೂ ಮುಸಲ್ಮಾನರು ಯಾವುದೇ ತೊಂದರೆ ಮಾಡದೇ ಸುಮ್ಮನಿರುತ್ತಿದ್ದರು. ಒಮ್ಮೆ ಕಾಶ್ಮೀರದ ಮಹಾರಾಜರು ಪಾಕಿಸ್ಥಾನದೊಂದಿಗೆ ವಿಲೀನವಾಗದಿರುವ ವಿಚಾರ ಪ್ರಕಟಿಸಿದರು ನೋಡಿ, ಎಲ್ಲವೂ ತಲೆಕೆಳಗಾಯಿತು. ಜಿನ್ನಾ ಇದನ್ನು ವಿಶ್ವಾಸದ್ರೋಹವೆಂದು ಭಾವಿಸಿದ. ಕಾಶ್ಮೀರದಲ್ಲಿ ತೀವ್ರ ಪ್ರಮಾಣದ ದಂಗೆಗಳಾಗುವಂತೆ ನೋಡಿಕೊಂಡ. ಜಮ್ಮು-ಕಾಶ್ಮೀರಗಳೂ ಕೋಮುಗಲಭೆಗಳ ಕೇಂದ್ರಗಳಾಗಿಬಿಟ್ಟವು. ಇತ್ತ ಪಾಕಿಸ್ಥಾನ ಒಂದಿನಿತೂ ತಡಮಾಡದೇ ಕಾಶ್ಮೀರದ ಮೇಲೆ ದಾಳಿ ಮಾಡಿಯೇ ಬಿಟ್ಟಿತು.

೧೯೪೭ರ ಅಕ್ಟೋಬರ್ ೨೧ರ ರಾತ್ರಿ ಪಾಕಿಸ್ಥಾನ ದಾಳಿಗೆ ಶುರುವಿಟ್ಟಿತು. ಸ್ವತಂತ್ರಗೊಂಡ ಎರಡೇ ತಿಂಗಳಲ್ಲಿ ಪಾಕಿಸ್ಥಾನ ಭಾರತದ ಮೇಲೆ ಯುದ್ಧ ಘೋಷಿಸಿದಂತಾಗಿತ್ತು. ರಾವಲ್ಪಿಂಡಿಯಿಂದ ಆರಂಭವಾದ ಸೈನ್ಯದ ಯಾತ್ರೆ ಮುಜಪ್ಫರಾಬಾದ್‌ಗೆ ಬಂದಿತು. ಡೈನಮೈಟ್‌ಗಳ ಕೊರತೆಯಿಂದಾಗಿ ಮುಜಪ್ಫರಾಬಾದ್‌ನ ಕೃಷ್ಣಾ ಗಂಗಾ ಸೇತುವೆಯನ್ನು ಸ್ಫೋಟಿಸಲಾಗದಿದ್ದುದಕ್ಕೆ ಆ ನಗರದ ಬೆಲೆ ತೆತ್ತಿದ್ದಾಯ್ತು. ಪಠಾಣ ಮತ್ತು ಅರೆ ಸೈನಿಕರ ಪಡೆಯ ನೇತೃತ್ವ ಹೊಂದಿದ್ದ ಮೇಜರ್ ಜನರಲ್ ಅಕ್ಬರ್ ಖಾನ್ ಶ್ರೀನಗರದತ್ತ ವೇಗವಾಗಿ ಧಾವಿಸಲಾರಂಭಿಸಿದರು. ಬಾರಮುಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕ ಅತ್ಯಾಚಾರಗಳು ನಡೆದವು. ಪಾಪಿ ಸೈನಿಕರು, ಹಿಂದೂ – ಮುಸಲ್ಮಾನ ಭೇದವೆಣಿಸದೇ ಮಾತಾ-ಭಗಿನಿಯರ ಮಾನಹರಣಗೈದರು. ಅವ್ಯಾಹತವಾಗಿ ಲೂಟಿಗಳಾದವು. ನೆಹರೂ ಆಕಾಶವಾಣಿಯ ಮೂಲಕ ಜನತೆಗೆ ಕರೆ ಇತ್ತರು. ಅದು ಹೋರಾಟದ ಕೆಚ್ಚಿನ ಸ್ವಾಭಿಮಾನದ ಕರೆಯಾಗಿರಲಿಲ್ಲ. ಅದು ಎಲ್ಲವನ್ನು ಕಳೆದುಕೊಂಡವನ ಪ್ರಲಾಪದಂತಿತ್ತು, ಅಸಹಾಯಕನೊಬ್ಬನ ರೋದನದಂತಿತ್ತು ! ಚರ್ಚಿಲ್‌ನ ಸಿಂಹದ ಎದೆ ನೆಹರೂಗಿರಲಿಲ್ಲ. ಆತನದು ಕ್ಷೀಣ ಪ್ರತಿರೋಧವಾಗಿತ್ತು ಅಷ್ಟೆ! ಆದರೆ ಪಟೇಲರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಕೆಲಸಕ್ಕೆ ಶುರುವಿಟ್ಟರು. ದೆಹಲಿಯಿಂದ ಎಲ್ಲ ವಿಮಾನಗಳೂ ಶ್ರೀನಗರಕ್ಕೆ ಧಾವಿಸುವಂತೆ ನೋಡಿಕೊಂಡರು. ಆ ಮೂಲಕ ಜಮ್ಮು ಮತ್ತು ಪಠಾಣ್‌ಕೋಟ್‌ಗಳ ನಡುವೆ ವೈರ್‌ಲೆಸ್ ಸಂಪರ್ಕ ಸಾಧಿಸಿದರು. ಪಂಜಾಬ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮೇಹರ್ ಚಂದ್ ಮಹಾಜನರನ್ನು ತುರ್ತು ರಜೆಯ ಮೇಲೆ ಕಾಶ್ಮೀರಕ್ಕೆ ಕಳಿಸಿಕೊಟ್ಟರು. ರಾಜಾ ಹರಿಸಿಂಗರ ಮೇಲೆ ಒತ್ತಡ ಹೇರುವ ಕೆಲಸ ಶುರುವಿಟ್ಟರು. ಕಾಶ್ಮೀರ ಭಾರತದೊಂದಿಗೆ ವಿಲೀನವಾದರೆ ಅದನ್ನು ರಕ್ಷಿಸುವ ಹೊಣೆ ತಮ್ಮದೆಂದರು. ಮಹಾರಾಜರೂ ಅಷ್ಟೇ. ಅವರಿಗೆ ನೆಹರೂರ ಮೇಲೆ ದ್ವೇಷವಿತ್ತು. ಆದರೆ ಪಟೇಲರ ಮೇಲೆ ಗೌರವವಿತ್ತು. ಅವರ ಸಾಹಸದ ಬಗ್ಗೆ ಹೆಮ್ಮೆಯಿತ್ತು. ನೆಹರೂ ಜಾಗದಲ್ಲಿ ಪಟೇಲರು ಭಾರತದ ಪ್ರಧಾನಿಯಾಗಿದ್ದರೆ ಅವರು ಯಾವುದೇ ದ್ವಂದ್ವಕ್ಕೆ ಒಳಗಾಗದೇ ಭಾರತದೊಂದಿಗೆ ವಿಲೀನವಾಗಿ ಬಿಡುತ್ತಿದ್ದರು. ಆದರೆ ಈಗ ಅವೆಲ್ಲ ಯೋಚಿಸಲಿಕ್ಕೆ ಪುರುಸೊತ್ತಿಲ್ಲ. ಮೊದಲು ಪಾಕಿಸ್ಥಾನದ ಆಕ್ರಮಣವನ್ನು ತಡೆಯಬೇಕು. ಮಹಾರಾಜರು ತಮ್ಮ ಸೈನ್ಯವನ್ನು ಯುದ್ಧ ಸನ್ನದ್ಧವಾಗಿಸಿದರು. ಆದರೆ ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ, ಭಾರತದ ಸಹಾಯ ಕೇಳಲು ಒಪ್ಪಿಕೊಂಡರು.

ಅಕ್ಟೋಬರ್ ೨೬ರ ಮಧ್ಯಾಹ್ನ ನೆಹರೂ ಮನೆಯಲ್ಲಿ, ಮಹತ್ವದ ಸಭೆ ನಡೆಯಿತು. ಮೌಂಟ್ ಬ್ಯಾಟನ್, ಶೇಕ್ ಅಬ್ದುಲ್ಲಾ , ಮಹಾಜನರಾದಿಯಾಗಿ ಅತಿಮುಖ್ಯ ಮುತ್ಸದ್ದಿಗಳು ಪಾಲ್ಗೊಂಡಿದ್ದರು. ಮಹಾಜನರು ಕಡ್ಡಿ ಮುರಿದಂತೆ ಹೇಳಿದರು. ‘ಭಾರತ ಸರಕಾರ ನಮಗೆ ಸಹಕರಿಸಲಿಲ್ಲವೆಂದಾದರೆ, ಅನಿವಾರ್ಯವಾಗಿ ಪಾಕಿಸ್ಥಾನದ ತೆಕ್ಕೆಗೆ ಹೋಗಬೇಕಾಗಬಹುದು’. ಅವರು ಹಾಗೆ ಹೇಳಿದ್ದರಲ್ಲಿ ತಪ್ಪಿರಲಿಲ್ಲ. ಮೊದಲಿನಿಂದಲೂ ಮಹಾರಾಜರ ವಿರುದ್ಧ ಕುದಿಯುತ್ತಿದ್ದ ನೆಹರೂ ಇಂತಹ ಸಂದರ್ಭಗಳಲ್ಲೂ ಅತಿ ಕೆಟ್ಟದಾಗಿ ವರ್ತಿಸುತ್ತಿದ್ದರು. ತಮ್ಮ ದ್ವೇಷ ಸಾಧನೆಗೆ ದೇಶದ ಹಿತವನ್ನು ಬಲಿಕೊಡುವ ಪ್ರಯತ್ನ ನಡೆಸುತ್ತಿದ್ದರು. ಮೌಂಟ್‌ಬ್ಯಾಟನ್ ಮಾತು ಕೇಳಿ ಕಾದು ನೋಡುವ ಕಹಳೆಯನ್ನೇ ಊದುತ್ತಿದ್ದರು. ಹೀಗಾಗಿ ಎಲ್ಲರ ಮುಂದೆ ಮಹಾಜನರು ತೀಕ್ಷ್ಣವಾಗಿ ಹೇಳಿದ್ದು ನೆಹರೂಗೆ ಹಿಡಿಸಿರಲಿಲ್ಲ. ಸಭೆಯಿಂದ ಹೊರನಡೆಯುವಂತೆ ಮಹಾಜನರಿಗೆ ಆದೇಶ ನೀಡಿದರು. ಕುಪಿತರಾಗಿ ಹುಬ್ಬುಗಳನ್ನು ಗಂಟಿಕ್ಕಿ ಹೊರಟಿದ್ದ ಮಹಾಜನರನ್ನು ಬಾಗಿಲ ಬಳಿ ತಡೆದು ನಿಲ್ಲಿಸಿದ ಪಟೇಲರು ‘ಖಂಡಿತ ಮಹಾಜನರೇ, ಪಾಕಿಸ್ಥಾನದೊಂದಿಗೆ ಹೋಗುವ ಅಗತ್ಯ ನಿಮಗಿಲ್ಲ ’ ಎಂದರು.

ಈ ಸಂದರ್ಭದ ಒಂದು ಚರ್ಚೆಯನ್ನು ಫೀಲ್ಡ್‌ಮಾರ್ಶಲ್ ಮಾಣಿಕ್‌ಶಾ ಮುಂದೆ ತಮ್ಮ ಭಾಷಣದಲ್ಲಿ ಹೇಳಿದ್ದರು. “ಪಟೇಲರು ಸಹನೆ ಕಳೆದುಕೊಂಡು, ‘ಜವಾಹರಲಾಲರೇ ನಿಮಗೆ ಕಾಶ್ಮೀರ ಬೇಕೇ? ಬೇಡವೇ? ಎನ್ನುವವರೆಗೆ ನೆಹರೂ ರಷ್ಯಾ, ಆಫ್ರಿಕಾ, ವಿಶ್ವಸಂಸ್ಥೆ, ದೇವರು-ದಿಂಡರು ಎಲ್ಲರ ಬಗ್ಗೆಯೂ ಮಾತನಾಡುತ್ತಿದ್ದರು. ಅನಂತರ ತಣ್ಣಗಾದ ನೆಹರೂ ಖಂಡಿತ, ನನಗೆ ಕಾಶ್ಮೀರ ಬೇಕು ಎಂದರು. ಹಾಗಿದ್ದರೆ ಆದೇಶ ಕೊಡಿ ಎಂದವರೇ ನೆಹರೂರ ಪ್ರತಿಕ್ರಿಯೆ ಹೊರಬೀಳುವ ಮೊದಲೇ, ‘ನಿಮಗೆ ಆದೇಶ ಸಿಕ್ಕಿದೆ’ ಎಂದು ನನಗೆ ಹೇಳಿದರು”. ಹೌದು. ಪಟೇಲರ ಧೈರ್ಯ-ಸ್ಥೈರ್ಯಗಳು ಅಂದು ಕೆಲಸ ಮಾಡದಿದ್ದರೆ ನೆಹರೂ ಮೌಂಟ್ ಬ್ಯಾಟನ್‌ನ ಮಾತಿಗೆ ತಲೆದೂಗಿ ಇಡಿಯ ಜಮ್ಮು ಕಾಶ್ಮೀರವನ್ನು ಪಾಕೀಯರಿಗೆ ತಟ್ಟೆಯಲ್ಲಿಟ್ಟು ಕೊಡುತ್ತಿದ್ದರು!

ಪಟೇಲ್ ಸ್ವತಃ ತಾವೇ ವಿಲ್ಲಿಂಗ್ಟನ್ ನಿಲ್ದಾಣಕ್ಕೆ ಹೋಗಿ ಒಂದೊಂದೇ ವಿಮಾನ ಶ್ರೀನಗರದತ್ತ ನೆಗೆಯುವುದನ್ನು ನೋಡಿ ಬಂದರು. ಅವರ ಒಂದೊಂದು ಮಾತೂ ಸೈನಿಕರಿಗೆ ಅಪಾರ ಸ್ಫೂರ್ತಿ ತುಂಬುತ್ತಿದ್ದವು. ಭಾರತದ ಮೇಲೆ ಆಕ್ರಮಣ ಮಾಡಿರುವ ಅನಾಗರಿಕ ಪಾಕಿಸ್ಥಾನಿಯರಿಗೆ ಬುದ್ಧಿ ಕಲಿಸಲೇಬೇಕೆಂಬ ತುಡಿತ ಹೆಚ್ಚಿಸುತ್ತಿದ್ದವು. ನೋಡುತ್ತ-ನೋಡುತ್ತಲೇ ಭಾರತೀಯ ಸೈನ್ಯ ಶ್ರೀನಗರ ತಲುಪಿತು. ಅಲ್ಲಿಯವರೆಗೂ ಶ್ರೀನಗರದ ಮೇಲೆ ಪಾಕಿಸ್ಥಾನಿ ಬಾವುಟ ಹಾರಿಸುವ ಕನಸು ಕಾಣುತ್ತಿದ್ದ ಜಿನ್ನಾ ಈಗ ದಂಗಾದ. ಇಷ್ಟು ದಿನ ನೆಹರೂರನ್ನೇ ವಿರೋಧಿ ಎಂದುಕೊಂಡು ಮೆರೆಯುತ್ತಿದ್ದವನಿಗೆ, ದಾಳಿಯ ನೇತೃತ್ವ ವಹಿಸಿರುವುದು ಪಟೇಲರು ಎಂದು ಗೊತ್ತಾದೊಡನೆ ಸೋಲು ಖಚಿತವಾಯಿತು. ನವೆಂಬರ್ ೮ರ ವೇಳೆಗೆ ಬಾರಾಮುಲ್ಲಾ ಭಾರತೀಯ ಸೈನಿಕರ ಕೈಸೇರಿತು. ಹೊಸ ಹೊಸ ಯುದ್ಧನೀತಿ, ಅನಿರೀಕ್ಷಿತ ಯೋಜನೆಗಳ ಮೂಲಕ ಪಾಕಿಸ್ಥಾನಿ ಸೈನಿಕರನ್ನು ದಂಗುಬಡಿಸಿದ ನಮ್ಮ ಸೈನಿಕರು ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಸಾಗಿದರು. ರಜೌರಿ, ಪೂಂಛ್‌ಗಳೆಲ್ಲ ಸುಲಭದ ತುತ್ತಾಗಿಬಿಟ್ಟವು. ನಮ್ಮ ಸೈನಿಕರು ವೀರಾವೇಶದಿಂದ ಹೋರಾಡುತ್ತಾ ಪಾಕಿಸ್ಥಾನ ಗಡಿ ದಾಟುತ್ತಿರಬೇಕಾದರೆ, ಜಿನ್ನಾರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು. ಇನ್ನು ತನ್ನದೇ ಸಿಂಹಾಸನ ಹೋದಂತೇ ಎಂದು ರೋದಿಸುತ್ತಾ ಕುಳಿತ.

ಅದೇ ವೇಳೆಗೆ ನೆಹರೂ ತಮ್ಮ ಜೀವನದ ಮಹಾನ್ ಮೂರ್ಖ ಕೆಲಸ ಮಾಡಿದ್ದು. ಕಾಶ್ಮೀರವನ್ನು ನಿರಂತರ ಬೆಂಕಿಯ ಉಂಡೆಯಾಗಿ ಮಾಡಿದ್ದು . ಮೌಂಟ್ ಬ್ಯಾಟನ್‌ನ ಮಾತು ಕೇಳಿದ ನೆಹರೂ, ನಮ್ಮ ಸೈನಿಕರು ವಿಜಯದ ಹೊಸ್ತಿಲಲ್ಲಿರುವಾಗಲೇ ವಿಶ್ವಸಂಸ್ಥೆಯ ಬಾಗಿಲು ಬಡಿದರು. ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಬೇಕು ಎಂದು ಗೋಗರೆದರು. ಅಲ್ಲಿಗೆ ಕಾಶ್ಮೀರ ಅಂತಾರಾಷ್ಟ್ರೀಯ ಸ್ತರದಲ್ಲಿ ಚರ್ಚೆಯಾಗುವ ವಿಷಯವಾಯಿತು. ಪ್ರತಿಯೊಂದು ರಾಷ್ಟ್ರವೂ ನಮ್ಮ ಮೇಲೆ ಬೆರಳೆತ್ತಿ ‘ಕಾಶ್ಮೀರ’ ಎನ್ನುವಂತಾಯ್ತು. ಇದಕ್ಕೂ ಮುನ್ನ ನೆಹರೂ ಮೌಂಟ್ ಬ್ಯಾಟನ್‌ನ ಮಾತು ಕೇಳಿ ಲಾಹೋರಿಗೆ ಹೋಗಿ, ಜಿನ್ನಾ ಮತ್ತು ಲಿಯಾಕತ್ ಅಲಿ ಖಾನರೊಂದಿಗೆ ಮಾತುಕತೆ ನಡೆಸುವವರಿದ್ದರು. ಪಟೇಲರು ‘ಗೆಲುವಿನ ಹೊಸ್ತಿಲಲ್ಲಿರುವ ನಾವು, ಅವರ ಮುಂದೆ ಹೋಗಿ ಕಣ್ಣೀರಿಡುವುದು ಸರಿಯಲ್ಲ’ ಎಂದು ದಬಾಯಿಸಿದ ಅನಂತರವೇ ಅವರು ಸುಮ್ಮನಾಗಿದ್ದು! ಆದರೆ ನೆಹರೂ ವಿಶ್ವಸಂಸ್ಥೆಗೆ ಕಾಶ್ಮೀರದ ಸಮಸ್ಯೆ ಒಯ್ಯುವ ವಿಚಾರವನ್ನು ಪಟೇಲರಿಗೆ ತಿಳಿಸಲೇ ಇಲ್ಲ.

ಅಂದು ನೆಹರೂ ಮಾಡಿದ ಮೂರ್ಖತನ ಇಂದಿಗೂ ಭಾರತದ ಪಾಲಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಕಾಶ್ಮೀರದಲ್ಲೊಂದು ಪಾಕ್ ಆಕ್ರಮಿತ ಕಾಶ್ಮೀರ ನಿರ್ಮಾಣವಾಗಿದೆ. ಸ್ವತಃ ಕಾಶ್ಮೀರದ ರಾಜನೇ ಭಾರತದೊಂದಿಗೆ ವಿಲೀನವಾದಾಗಲೂ ಅಲ್ಲಿನ ಜನ ಪಾಕಿಸ್ಥಾನ-ಪಾಕಿಸ್ಥಾನ ಎಂದು ಬೊಬ್ಬಿಡುವುದು ನಿಂತಿಲ್ಲ. ಯಾವ ಕಾಶ್ಮೀರ ಒಂದು ಕಾಲದಲ್ಲಿ ಧರೆಯ ಸ್ವರ್ಗ ಎಂದು ಕರೆಯಲ್ಪಡುತ್ತಿತ್ತೋ ಅದು ಇಂದು ಅಕ್ಷರಶಃ ನರಕವಾಗಿಬಿಟ್ಟಿದೆ. ಅಲ್ಲಿ ನಿತ್ಯ ಹಿಂದೂಗಳ ಮಾರಣಹೋಮ. ಕಾಶ್ಮೀರದ ಆಸ್ತಿಯಾಗಿದ್ದ ಪಂಡಿತರು ಇಂದು ಅಲ್ಲಿ ನಿರಾಶ್ರಿತರು. ಪಂಡಿತರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಸಾಮಾನ್ಯ. ನಾವುಗಳು ಕಾಶ್ಮೀರದ ಕೊಳ್ಳಕ್ಕೆ ಹೋಗಬೇಕಾದರೆ, ಅಬ್ಬೇಪಾರಿಗಳಂತೆ, ಪರರಾಷ್ಟ್ರದವರಂತೆ ಹೋಗಬೇಕು. ಇವೆಲ್ಲವನ್ನೂ ನೆನೆದು ಕಣ್ಣೀರಿಡುವಾಗಲೆಲ್ಲ, ಆ ಹನಿಗಳಲ್ಲಿ ನೆಹರೂವಿನದೇ ಬಿಂಬ ಮೂಡುತ್ತದೆ!

ಬುಡವೇ ಭದ್ರವಿಲ್ಲದ ಮೇಲೆ ಕಟ್ಟಡ ಮಜಬೂತಾಗುವುದು ಹೇಗೆ?

( ‘ನೆಹರೂ ಪರದೆ ಸರಿಯಿತು’ ಪುಸ್ತಕದಿಂದ ಆಯ್ದ ಭಾಗ)

ಥೂ! ಗಾಂಧೀಜಿ ಹೇಳ್ತಾರಲ್ಲ , ಗ್ರಾಮ ಸ್ವರಾಜ್ಯ-ಸ್ವದೇಶೀ … ಇವೆಲ್ಲ  ಯೋಚಿಸಲಿಕ್ಕೂ  ಅನರ್ಹವಾದವು’ ಹೀಗೆನ್ನುತ್ತಿದ್ದವರು ಯಾರಿರಬಹುದು ಹೇಳಿ? ಸಾವರ್ಕರಾ? ಅಂಬೇಡ್ಕರಾ? ಜಿನ್ನಾನಾ? ಪಟೇಲರಾ? ಖಂಡಿತಾ ಅಲ್ಲ, ಹಾಗೆನ್ನುತ್ತಿದ್ದವರು, ಸ್ವತಃ ಗಾಂಧೀಜಿಯವರ ಅನುಯಾಯಿ ನೆಹರೂ!

ಯಾರನ್ನು  ಗಾಂಧೀಜಿ ‘ನನ್ನ  ನಂತರ ನನ್ನ  ಮಾತನಾಡುವವ’ ಎಂದು ಕರೆಯುತ್ತಿದ್ದರೋ ಅದೇ ವ್ಯಕ್ತಿ. ಯಾರನ್ನು  ಇಡಿಯ ದೇಶ ಗಾಂಧೀಜಿಯ ಚಿಂತನೆಗಳ ಶಾಶ್ವತ ರೂಪ ಎಂದು ಭಾವಿಸುತ್ತಿದ್ದರೋ ಆತ. ಹೌದು ಅದೇ ನೆಹರೂ ಸ್ವದೇಶಿ ಚಿಂತನೆ ನಡೆಸಿದರೆ ದೇಶ ಹಾಳಾಗಿ ಹೋಗುತ್ತದೆ, ದೇಶವನ್ನು ಕಟ್ಟಬೇಕೆಂದರೆ ದೊಡ್ಡ ದೊಡ್ಡ  ಯಂತ್ರಗಳ ಮೇಲೆ ಕಟ್ಟಬೇಕು, ಅದರಿಂದಲೇ ಆರ್ಥಿಕ ಸ್ಥಿತಿ ಬಲಗೊಳ್ಳುವುದು ಸಾಧ್ಯ ಎನ್ನುತ್ತಿದ್ದರು.
ದೇಶ ಅನಾಚೂನವಾಗಿ ಬೆಳೆದು ಬಂದದ್ದೇ ಗ್ರಾಮ ಸ್ವರಾಜ್ಯದ ಆಧಾರದ ಮೇಲೆ. ಲಕ್ಷಾಂತರ ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ  ಸಾಧ್ಯ ಎಂದು  ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದರು. ಆದರೆ ನೆಹರೂ ಅವೆಲ್ಲವನ್ನೂ ತಿರಸ್ಕರಿಸಿದರು. ದೊಡ್ಡ ದೊಡ್ಡ ಯಂತ್ರಗಳು ಗೃಹಕೈಗಾರಿಕೆಗಳನ್ನು  ಮೀರಿ ಬೆಳೆಯಬೇಕು. ಆಗ ದೇಶದಲ್ಲಿ  ಹಣ ಸಂಗ್ರಹವಾಗುತ್ತದೆ. ಆ ಹಣ ಬಡವರಿಗೂ  ಸೇರುತ್ತದೆ ಎಂಬುದು ಅವರ ಲೆಕ್ಕಾಚಾರ. ದೇಶ ಸಾವಿರಾರು ವರ್ಷಗಳಿಂದ ಅನುಸರಿಸಿಕೊಂಡು ಬಂದ ಮಾರ್ಗವನ್ನೇ  ಈಗ ನೆಹರೂ ಬದಲಿಸ ಹೊರಟಿದ್ದರು. ಪಾಪ! ಗಾಂಧೀಜಿಯಂತಹ ಮಹಾನ್ ವ್ಯಕ್ತಿಯೊಂದಿಗೆ  ಒಡನಾಡಿಯೂ ತಮ್ಮ  ಆ ತನಕದ ಆಡಂಬರತನವನ್ನು  ಬದಲಿಸಿಕೊಂಡು ಸರಳವಾಗಲಾರದ ವ್ಯಕ್ತಿ, ಸರಳವಾಗಿದ್ದ  ದೇಶವನ್ನು ದಿಢೀರ್ ಸಿರಿವಂತಿಕೆಯತ್ತ ಎಳೆದು ತರುವ ಯೋಚನೆಗೆ ಶುರುವಿಟ್ಟರು.

ನೆಹರೂ ಸ್ವತಃ ಆರ್ಥಿಕ ತಜ್ಞರಲ್ಲ , ಯಂತ್ರಗಳ ಬಗ್ಗೆ  ಮಾತನಾಡಬಲ್ಲ  ಇಂಜಿನಿಯರೂ ಆಗಿರಲಿಲ್ಲ.  ಅವರು ಬರಿ ಕನಸುಗಾರರಾಗಿದ್ದರು. ತಾವು ಕಂಡ ಕನಸನ್ನು ನನಸುಗೊಳಿಸಬೇಕು. ಆ ಮಾರ್ಗದಲ್ಲಿರುವ ತೊಡಕುಗಳು ಏನೇ ಇರಲಿ, ಅದರಿಂದ ದೇಶ ನಿರ್ನಾಮವಾಗಿಯೇ ಹೋಗಲಿ ಚಿಂತೆ ಇಲ್ಲ. ಕನಸು ಮಾತ್ರ ಸಾಕಾರವಾಗಬೇಕು ಎಂಬ ಹುಚ್ಚು  ಅವರಲ್ಲಿತ್ತು! ಅದಕ್ಕೆ ಮೆಹಲೋನವೀಸ್ ಎಂಬುವವನ ಜೊತೆ ಪಡೆದರು.
ಆತ ಮತ್ತೊಬ್ಬ  ನೆಹರೂ. ಇತ್ತ ಇಂಜಿನಿಯರ್ ಅಲ್ಲ, ಅತ್ತ  ಆರ್ಥಿಕತಜ್ಞನೂ ಅಲ್ಲ. ಬೇರೆಡೆಯ ಯೋಜನೆಗಳನ್ನು  ಕದ್ದು  ತನ್ನದೇ  ಯೋಜನೆ ಇದು ಎಂದು ನಂಬಿಸಬಲ್ಲ  ಮೋಸಗಾರ ಅಷ್ಟೇ. ಆತ ಅಂಕಿ-ಅಂಶಗಳನ್ನು  ಕೊಟ್ಟು ಯಂತ್ರಗಳಿಂದಲೇ ದೇಶದ ಅಭಿವೃದ್ಧಿ  ಎಂದು ಸಾಸಿ ತೋರುತ್ತಿದ್ದ. ಅದನ್ನು  ಸಾಕಾರಗೊಳಿಸಲೆಂದೇ ರಷ್ಯಾದ ಮಾದರಿಯ ಪಂಚವಾರ್ಷಿಕ ಯೋಜನೆಗಳನ್ನು  ಜಾರಿಗೆ ತರಲು ಒತ್ತಡ ಹೇರಿದ.

ವಾಸ್ತವವಾಗಿ ಆಗತಾನೆ ಸ್ವಾತಂತ್ರ್ಯ ಪಡೆದ ದೇಶ ತನ್ನ  ಆಂತರಿಕ ಶಕ್ತಿ ಯಾವುದೆಂದು ಗುರುತಿಸಿಕೊಂಡು ಅದನ್ನು  ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಬೆಳೆಯಬೇಕು. ಅದನ್ನು  ಬಿಟ್ಟು, ಅವರು ಹಾಗೆ  ಬೆಳೆದಿದ್ದಾರೆ; ಇವರು ಹೀಗೆ  ಬೆಳೆದಿದ್ದಾರೆ ಎನ್ನುತ್ತಾ  ಕುಳಿತರೆ, ಅವರನ್ನು  ಅನುಸರಿಸುವ ಪ್ರಯತ್ನ  ಮಾಡಿದರೆ ಖಂಡಿತ ಬೆಳವಣಿಗೆ ಅಸಾಧ್ಯ.ಭಾರತದ ಮಟ್ಟಿಗೆ ಹೇಳುವುದಾದರೆ, ಗ್ರಾಮಶಕ್ತಿ  ಇಲ್ಲಿನ ಆಂತರಿಕ ಶಕ್ತಿ. ಅಲ್ಲಿ  ಕಳೆದು ಹೋಗುತ್ತಿರುವ ನಮ್ಮವರ ಕಲೆ-ಕುಸುರಿ ಕೆಲಸಗಳನ್ನು ಬಳಸಿಕೊಳ್ಳಬೇಕಿತ್ತು. ಕೃಷಿ ಕಾರ್ಯದಲ್ಲಿ  ಕ್ಷಮತೆಯನ್ನು  ಹೆಚ್ಚಿಸುವ  ಯತ್ನ  ಮಾಡಬೇಕಿತ್ತು. ಆದರೆ  ನೆಹರೂ ಅವೆಲ್ಲವನ್ನು  ಬದಿಗಿಟ್ಟು  ಕೈಗಾರಿಕೀಕರಣ ಮಾಡುವ ಪ್ರಯತ್ನ  ಶುರುವಿಟ್ಟರು. ಅದಕ್ಕೆ ಹಣ ಎಲ್ಲಿಂದ ತರಬೇಕು? ಸಾಲ ತಂದರು. ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಸಾಲ ಎತ್ತುವ ಚಾಳಿ ಶುರುವಿಟ್ಟಿತು.  ಆ ಹಣವನ್ನು  ನೆಹರೂ ಎಲ್ಲೆಲ್ಲಿ  ಹೂಡಿಕೆ ಮಾಡಿದರೋ ಅಲ್ಲಿಂದ ಹೇಳುವಷ್ಟು  ಹಣ ಹುಟ್ಟಲಿಲ್ಲ. ಮತ್ತೆ  ಸಾಲ-ಮತ್ತೆ ನಷ್ಟ. ಈ ಚಕ್ರ ಎಲ್ಲಿಯವರೆಗೂ ಮುಂದುವರೆಯಿತೆಂದರೆ, ಇಂದು ಸಾಲದ ಮೇಲೆಯೇ ಬದುಕುವ ಚಟವನ್ನು  ನಮ್ಮ  ನಾಯಕರು ಹಚ್ಚಿಸಿಕೊಂಡಿದ್ದಾರೆ. ದೇಶ ಅಕ್ಷರಶಃ ಸಾಲದ ಉರುಳಲ್ಲಿ  ಸಿಕ್ಕು  ಒದ್ದಾಡುತ್ತಿದೆ. ನೆಹರೂ ಹುಟ್ಟಿಸಿದ ಆ ಆರ್ಥಿಕ ಕೂಸು ನೆಹರೂ ಕಾಲದಲ್ಲಿಯೇ ಸತ್ತುಹೋಯಿತು. ಈ ದೇಶದ ಜನ ಅಪಾರ ತೆರಿಗೆ ಕಟ್ಟುವ ಮೂಲಕ ಆ ಕೂಸಿಗೆ ಕೃತಕ ಉಸಿರಾಟ ಮಾಡುತ್ತಿದ್ದಾರೆಯೇ ಹೊರತು ಮತ್ತೇನಲ್ಲ!

ನೆಹರೂ, Public Sector Unitಗಳನ್ನು  ಸರ್ಕಾರದ ವಶಕ್ಕೆ ಪಡೆದರು. ಗೃಹಕೈಗಾರಿಕೆಗಳನ್ನು  ನಡೆಸುವುದು, ಅಲ್ಲಿನ ವಸ್ತುಗಳನ್ನು ಮಾರುಕಟ್ಟೆಗೊಯ್ಯುವುದು ಇವಲ್ಲಾ ಸಾಧ್ಯವಾದಷ್ಟೂ ಕಷ್ಟವಾಗುವಂತೆ ನೋಡಿಕೊಂಡರು. ಲೈಸೆನ್ಸು, ಪರ್ಮಿಟ್ಟು ಎಂದೆಲ್ಲ  ರಗಳೆಗಳು ಶುರುವಾಗಿದ್ದು ಇದೇ ಕಾಲಕ್ಕೆ. ಸಮಾಜವಾದದ ಹೆಸರಲ್ಲಿ, ಸರ್ವರಿಗೂ  ಸಮಪಾಲು ಎನ್ನುತ್ತಿದ್ದ  ನೆಹರೂ ಕೊನೆಗಾಲಕ್ಕೆ  ಈ ರೀತಿ ಬದಲಾದದ್ದು, ಬಡವರ ಶೋಷಣೆಗೆ ನಿಂತದ್ದು ಎಲ್ಲರಿಗೂ  ಅಚ್ಚರಿತಂದಿತ್ತು. ಬಡತನ ನಿರ್ಮೂಲನೆಗೆ ಎಂದು ಶುರುವಿಟ್ಟ ಆರ್ಥಿಕ ಯೋಜನೆಗಳು ಬಡವರ ನಿರ್ಮೂಲನೆ ಮಾಡಿದ್ದು ಖಂಡಿತ ಸುಳ್ಳಲ್ಲ.

ಗಾಂಧೀಜಿಯ ಗ್ರಾಮರಾಜ್ಯದ ಕಲ್ಪನೆಯನ್ನು  ಅಮೆರಿಕದಂತಹ ರಾಷ್ಟ್ರಗಳೇ ಮೆಚ್ಚಿ  ಸ್ವೀಕರಿಸಿದ್ದವು. ಅವರಲ್ಲಿ  ಗೃಹಕೈಗಾರಿಕೆಗಳ ಪರಿಕಲ್ಪನೆ ಇಲ್ಲದಿದ್ದರೂ, ಹೆಚ್ಚು -ಹೆಚ್ಚು  ಜನ ಸೇರಿ ಕೆಲಸ ಮಾಡುವಂತಹ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು  ಸ್ಥಾಪಿಸಿದರು. ಲಕ್ಷಾಂತರ ಜನರಿಗೆ ಉದ್ಯೋಗ ನೀಡಬಲ್ಲ ಏಕೈಕ ಮಾರ್ಗ ಅದು. ಅಕ್ಷರಶಃ ಆ ನೀತಿಯನ್ನು  ಭಾರತ ಪಾಲಿಸಬೇಕಿತ್ತು. ಇಲ್ಲಿನ ಜನಸಂಖ್ಯೆಗೆ ತಕ್ಕಂತಹ ಉದ್ಯೋಗ ನೀಡಬೇಕಾದರೆ

Medium scale industries & Small scale industriesಗಳ ಜರೂರತ್ತಿತ್ತು. ಆದರೆ ಸ್ವಾತಂತ್ರ್ಯ ಬಂದ ೫೫ ವರ್ಷಗಳ ನಂತರ ಇಂದಿಗೂ ಆ ಎರಡು ಕ್ಷೇತ್ರಗಳಿಗೂ ವಿಶೇಷ ಬೆಲೆ ಬಂದಿಲ್ಲ. ಆ ವರ್ಗದವರೊಂದಿಗೆ ನೆಹರೂ ಕಾಲದ ಅಸ್ಪೃಶ್ಯತೆ ಇಂದಿಗೂ ಜಾರಿಯಲ್ಲಿದೆ!
ನೆಹರೂ ಎಂದಿಗೂ ಗಾಂಧೀಜಿ ಹೇಳಿದ ಮಾರ್ಗದಲ್ಲಿ  ನಡೆದವರೇ ಅಲ್ಲ. ಗಾಂಧೀಜಿ ಆಶ್ರಮದಲ್ಲಿದ್ದ  ನಿಷ್ಠಾವಂತ ಕಾರ್ಯಕರ್ತರು ನೆಹರೂ ಪಾಲಿಗೆ ನಿಯತ್ತಿನ ಸಿಪಾಯಿಗಳು. ಚುನಾವಣೆ ಬಂತೆಂದರೆ ಸಾಕು, ಅಲ್ಲಿ ನೆಹರೂ ಹಾಜರ್. ಅದೇ ಕಾರ್ಯಕರ್ತರನ್ನು  ಪುಸಲಾಯಿಸಿ, ಬಡಿದೆಬ್ಬಿಸಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರು. ಆ ಕಾರ್ಯಕರ್ತರ ಪ್ರಾಬಲ್ಯವಿದ್ದ  ಕ್ಷೇತ್ರದಲ್ಲಿ  ಅವರದೇ ಅಭ್ಯರ್ಥಿಯನ್ನು ನಿಲ್ಲಿಸಲೂ ಹಿಂದೆ-ಮುಂದೆ ನೋಡುತ್ತಿರಲಿಲ್ಲ. ಆಮೇಲೆ..? ಆಮೇಲೇನು? ಅದೇ ಗಾಂಧೀಜಿ ಆಶ್ರಮದಿಂದ ಹೊರಸೂಸುತ್ತಿದ್ದ  ಜಗ ಬೆಳಗುವ ಚಿಂತನೆಯನ್ನು  ಮೂಲೆಗೊತ್ತುತ್ತಿದ್ದರು. ಗಾಂಧೀಜಿಯ ಕಟ್ಟಾ ಅನುಯಾಯಿಯೊಬ್ಬರು ಮೂರು ಬಾರಿ ಚುನಾವಣೆ ರ್ಸ್ಪಸಿ ಗೆದ್ದರು. ಸರಕಾರ ಕೊಟ್ಟ  ಸೌಲಭ್ಯಗಳನ್ನೆಲ್ಲಾ  ಹಿಂದಿರುಗಿಸಿ ಗಾಂಜಿ  ಹೇಳಿದ ಮಾರ್ಗದಲ್ಲಿ  ನಡೆದರು. ಆದರೆ ನೆಹರೂ ಅವರ ಮಾತಿಗೆ  ಎಂದೂ ಬೆಲೆಯನ್ನೇ  ಕೊಡಲಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯನ್ನು  ಮೂದಲಿಸಿ ದೊಡ್ಡ ಕಾರ್ಖಾನೆಗಳನ್ನು  ಬೆಂಬಲಿಸುವುದರಲ್ಲಿಯೇ ಕಾಲಕಳೆದರು. ಆ ಕಾರ್ಖಾನೆಗಳಿಗಾಗಿ ಸಾಲತಂದರು. ದೇಶವನ್ನು  ಅಂತಾರಾಷ್ಟ್ರೀಯ ಮಟ್ಟದಲ್ಲಿ  ಚಿರಋಣಿಗಳನ್ನಾಗಿಸಿ(?) ಹೊರಟರು.

ಇದೇ ವೇಳೆಗೆ, ಭಾರತದ ನಂತರ ಸ್ವಾತಂತ್ರ್ಯ ಪಡೆದಿದ್ದ  ರಾಷ್ಟ್ರಗಳೆಲ್ಲ  ಮಿಂಚಿನಂತೆ ಬೆಳೆದವು. ರಾಷ್ಟ್ರದ ಅಂತಃಶಕ್ತಿಯನ್ನು ಗುರುತಿಸಿ, ನಿಸ್ವಾರ್ಥತೆಯಿಂದ ರಾಷ್ಟ್ರವನ್ನು  ಮುನ್ನಡೆಸಿದವರೆಲ್ಲ  ಜಗತ್ತಿನ ಭೂಪಟದಲ್ಲಿ  ಕಂಗೊಳಿಸುವಂತೆ ಬೆಳೆದರು. ಅಲ್ಲಿ ಬೆಳೆದದ್ದು  ವೈಯಕ್ತಿಕವಾಗಿ  ಆ ವ್ಯಕ್ತಿಗಳಲ್ಲ , ರಾಷ್ಟ್ರ!. ಆದರೆ ಭಾರತದಲ್ಲಿ  ನೆಹರೂ ಹಠಕ್ಕೆ  ಬಿದ್ದು,  ತಾವು ಬೆಳೆಯಬೇಕೆಂದರು. ಜಗತ್ತಿನ  ಎಲ್ಲ  ರಾಷ್ಟ್ರಗಳು  ತನ್ನ ಬಗ್ಗೆಯೇ ಮಾತಾಡಬೇಕೆಂದು ಆಶಿಸಿದರು. ಆ ಆಸೆಯ ಪೂರೈಕೆಗಾಗಿ ದೇಶದ ಹಿತಾಸಕ್ತಿಗಳನ್ನು  ಬಲಿಕೊಡಲಿಕ್ಕೂ  ಅವರು ಹಿಂದೆ-ಮುಂದೆ ನೋಡಲಿಲ್ಲ!!
ಭಾರತ ಸ್ವತಂತ್ರವಾಗಿ ಬಹುಕಾಲದ ನಂತರ ಅಕಾರ ಪಡೆದ ಸಿಂಗಾಪೂರದ  ಲೀ ಕ್ವಾನ್‌ಯೂರನ್ನು  ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ಸ್ಪಷ್ಟ  ಉದ್ದೇಶ, ಚಿಂತನೆಗಳೊಂದಿಗೆ ದೇಶವನ್ನು  ಎತ್ತರಕ್ಕೆ  ಬೆಳೆಸಬೇಕೆಂಬ ಹಠಕ್ಕೆ  ಬಿದ್ದ ಕ್ವಾನ್‌ಯೂ ಅಂತಾರಾಷ್ಟ್ರೀಯ ಮಟ್ಟದಿಂದ  ವ್ಯಾಪಾರಿಗಳನ್ನು  ಸಿಂಗಾಪೂರಕ್ಕೆ ಸೆಳೆದರು. ಅದೇ ವೇಳೆಗೆ ಸಿಂಗಾಪೂರದ ಕಲೆ ಜಗತ್ತು  ಮೆಚ್ಚುವಂತೆ ನೋಡಿಕೊಂಡರು. ಸಿಂಗಪೂರ್ ನೋಡುತ್ತ, ನೋಡುತ್ತ ಕಣ್ಣು ಕುಕ್ಕುವ ನಗರವಾಗಿಬಿಟ್ಟಿತು. ಕ್ವಾನ್‌ಯೂ ಒಮ್ಮೆ  ಮಾತನಾಡುತ್ತ, ‘ಹೊರಗಡೆಯಿಂದ ಬರುವ ತಂತ್ರಜ್ಞಾನ, ಬಂಡವಾಳವನ್ನು  ಸಿಂಗಾಪೂರ ಸ್ವಾಗತಿಸುತ್ತಿದೆ. ಆದರೆ ಆ ನೆಪದಲ್ಲಿ  ಅದು ತನ್ನತನವನ್ನು  ಕಳೆದುಕೊಳ್ಳಲು ಸಿದ್ಧವಿಲ್ಲ’ ಎಂದಿದ್ದರು. ‘ನಾಯಕರು, ಅಕಾರಿಗಳು, ನಿರ್ಣಯ ಮಾಡಬಲ್ಲ ಜನ ಇವರೆಲ್ಲ  ಮೊದಲು ಶಿಸ್ತನ್ನು  ಪಾಲಿಸಬೇಕು. ಶಿಸ್ತನ್ನು  ಇತರರ ಮೇಲೆ ಹೇರುವ ಮುನ್ನ  ಅದನ್ನು  ಅನುಸರಿಸಿ ತೋರಿಸಬೇಕು. ಅವರು ಮೊದಲು ಭ್ರಷ್ಟಾಚಾರರಹಿತರಾಗಿ ಜನರಿಗೆ ಉದಾಹರಣೆಯಾಗಬೇಕು’ ಎಂದೂ ಹೇಳಿದ್ದರು. ಅವೆಲ್ಲ  ನೆಹರೂ ಕಿವಿಗೆ  ಬೀಳುವುದು  ಸಾಧ್ಯವೇ ಇರಲಿಲ್ಲ. ಬಿದ್ದರೂ  ಕ್ವಾನ್‌ಯೂ ಹೇಳಿದ ಯಾವುದನ್ನೂ  ಅವರಿಗೆ  ಮಾಡಿ ತೋರಿಸುವುದು ಸಾಧ್ಯವಿರಲಿಲ್ಲ.  ಶಿಸ್ತು, ಚಿಂತನೆಗಳಲ್ಲಿನ  ಸ್ಪಷ್ಟತೆ, ಇವು ನೆಹರೂ  ಪಾಲಿಗೆ ದೂರ-ಬಹುದೂರ! ಚೆಂದದ ಬಟ್ಟೆ, ಭಾಷಣ, ಹೊಗಳುಭಟರ ಸಹವಾಸ ಅವರಿಗೆ ಹೇಳಿ ಮಾಡಿಸಿದಂಥವಾಗಿದ್ದವು!
‘ನಿಮ್ಮ  ದೇಶದಲ್ಲಿ  ಪ್ರತಿಭೆಗಳಿಗೆ ಸೂಕ್ತ ಅವಕಾಶಕೊಡುತ್ತಿಲ್ಲ. ಅವರಿಗೆ ತಮ್ಮ  ಸಾಧನೆ ತೋರ್ಪಡಿಸಲು ಅನುಕೂಲವಾಗುವಂತಹ, ಆರ್ಥಿಕ-ಸಾಮಾಜಿಕ-ರಾಜಕೀಯ ಪರಿಸರದ ನಿರ್ಮಾಣ ಮಾಡಿಕೊಡುತ್ತಿಲ್ಲ. ಇದೇ ಭಾರತೀಯರು ಸಿಂಗಾಪೂರಕ್ಕೆ ಬಂದರೆ ಅದ್ಭುತ ಸಾಧನೆ ಮಾಡುತ್ತಾರೆ. ಆದರೆ ಇಲ್ಲಿ  ಅವರಿಂದ ಸಾಧ್ಯವಿಲ್ಲ’ ಮುಂತಾದ ವಿಚಾರಗಳನ್ನು  ಮನಸ್ಸಿಗೆ ನಾಟುವಂತೆ ಹೇಳಿ ‘ಭಾರತ ಬೆಳೆದರೆ ನಮಗೆ ಲಾಭವಿದೆ. ಅದಕ್ಕೆ ಸ್ವಾರ್ಥದಿಂದ  ಭಾರತ ಬೆಳೆಯಲಿ ಎಂದು ಆಶಿಸುತ್ತಿದ್ದೇನೆ’ ಎಂದು ಕ್ವಾನ್‌ಯೂ ಹೇಳಿದ್ದರು.

ಏಷ್ಯಾದ ಬಹುತೇಕ ರಾಷ್ಟ್ರಗಳು ಹೀಗೆ ಭಾರತ ಆರ್ಥಿಕವಾಗಿ ಶಕ್ತಿಯುತವಾಗುವುದನ್ನು  ಕಾಯುತ್ತ  ಕುಳಿತಿದ್ದವು. ದಶಕಗಳಷ್ಟು ದೀರ್ಘಕಾಲ ಕಾದವು. ಭಾರತ ಪ್ರಬಲವಾಗುವ ಬದಲು, ಆರ್ಥಿಕವಾಗಿ ದುರ್ಬಲವಾಗುತ್ತ ಸಾಗಿದಂತೆಲ್ಲ ಹತಪ್ರಭವಾದವು. ಜಪಾನ್-ಚೀನಾಗಳ ಮೊರೆಹೊಕ್ಕು ಸುಮ್ಮನಾದವು. ನೆಹರೂ ಯೋಜನೆಗಳ ಮೇಲೆ ಯೋಜನೆಗಳನ್ನು  ರೂಪಿಸಿದರು. ಪ್ರತಿಯೊಂದೂ ಬಡ ಭಾರತದಲ್ಲಿ  ಸಂಪತ್ತನ್ನು  ಸೃಷ್ಟಿಸುವ (ನೆನಪಿಡಿ! ಸಂಪತ್ತನ್ನು  ಗಳಿಸುವುದಲ್ಲ ) ಯೋಜನೆಗಳೇ ಆದವು. ಅದಕ್ಕೆ ಸಾಲ ತರಲಾಯಿತು. ತಂದ ಸಾಲದಲ್ಲಿ  ಬಹುಪಾಲು ನೆಹರೂ ಮತ್ತವರ ತಂಡಕ್ಕೇ ಖರ್ಚಾಯಿತು. ಮಂತ್ರಿಗಳು -ರಾಜಕಾರಣಿಗಳು-ಅಕಾರಿವರ್ಗ ಇವರೆಲ್ಲರ ಖರ್ಚುವೆಚ್ಚ  ಅಷ್ಟು  ಅಪಾರವಾಗಿತ್ತು!
ಭಾರತದಲ್ಲಿ ಹುಟ್ಟುತ್ತಿರುವ -ಇನ್ನೂ  ಹುಟ್ಟದಿರುವ  ಮಗುವೂ ಕೂಡ ಸಾಲದ ಹೊರೆ ಹೊರಲೇಬೇಕಾಯಿತು. ಮತ್ತು  ಪರಿಸ್ಥಿತಿಗಳನ್ನು  ಅವಲೋಕಿಸಿದ ರಾಷ್ಟ್ರಪತಿ ಡಾ| ಬಾಬು ರಾಜೇಂದ್ರ ಪ್ರಸಾದರು ದ್ವಿತೀಯ ಪಂಚವಾರ್ಷಿಕ ಯೋಜನೆ (೨ನೇ ಜೂನ್ ೧೯೫೭)ಯ ಮುನ್ನ ನೆಹರೂಗೆ ಪತ್ರ ಬರೆದರು,
‘ನಾವು ಯೋಜನೆಗಳಲ್ಲಿ  ತೊಡಗಿಸುತ್ತಿರುವ ಹಣ ಸರಿಯಾಗಿ ಬಳಕೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು  ಗಮನಿಸಲಿಕ್ಕೆ  ಸೂಕ್ತ ವ್ಯವಸ್ಥೆ  ಮಾಡಲಾಗಿದೆ ಎಂದು  ಭಾವಿಸಿದ್ದೇನೆ…. ಹಾಗೇನಾದರೂ ಆಗದಿದ್ದಲ್ಲಿ, ಜನರ ಬೆವರಿನ ಹಣ, ತ್ಯಾಗದ ಹಣ ವಿಪತ್ತಿಗಾಗಿ ಖರ್ಚಾದಂತಾಗುತ್ತದೆ. ನಾವು ಎರಡನೇ ಪಂಚವಾರ್ಷಿಕ ಯೋಜನೆಗಳಿಗೆಂದೇ ಜನರ ಮೇಲೆ ತೆರಿಗೆಯ ಭಾರ ಹೇರಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ  ಹೊಸ ಆರ್ಥಿಕ ನೀತಿಯನ್ನು  ಜಾರಿಗೆ ತರಲು, ಆಡಳಿತಕ್ಕೆಂದು  ಮಾಡುತ್ತಿರುವ  ಖರ್ಚನ್ನು ಕಡಿತಗೊಳಿಸಲು  ಯಾವ-ಯಾವ ಕ್ರಮಗಳನ್ನು   ಕೈಗೊಂಡಿದ್ದೇವೆಂಬುದು ನನಗೆ ತಿಳಿಯುತ್ತಿಲ್ಲ. ಹನಿ ಹನಿ ಸೋರಿ ಅದು ಖಾಲಿಯೂ ಆಗಬಹುದು. ಅದಕ್ಕೆ ಪ್ರತಿಯೊಂದು ವಿಭಾಗಗಳೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಯೋಜನೆಗಳನ್ನು  ಕೈಗೊಳ್ಳುವ ಮುನ್ನ ಅದು ನಮ್ಮ  ಆರ್ಥಿಕ ಪರಿಸ್ಥಿತಿಗೆ ಸೂಕ್ತವಾಗಿ  ಹೊಂದಾಣಿಕೆಯಾಗುವಂತಿರಬೇಕು. ಕೊರತೆ ನಿರ್ಮಾಣವಾಗಿ ಜನರ ಮೇಲೆ ತೆರಿಗೆಯ ಭಾರ ಅಕವಾಗದಂತೆ ನೋಡಿಕೊಳ್ಳುವ ವ್ಯವಸ್ಥೆ  ಇರಬೇಕು’ ಎಂದೆಲ್ಲ  ಬುದ್ಧಿಮಾತು ಹೇಳಿದ್ದರು.

ಕೇಳುವ ವ್ಯವಧಾನ ನೆಹರೂಗಿರಲಿಲ್ಲ. ಆ ಪತ್ರ ಅದ್ಯಾವ  ಬುಟ್ಟಿ ಸೇರಿತೋ ದೇವರೇ ಬಲ್ಲ.
ನೆಹರೂ ಪಾಲಿಗೆ ಸರ್ಕಾರ ನಡೆಸುವುದೆಂದರೆ ಐಷಾರಾಮಿ ಹೋಟೇಲು ನಡೆಸಿದಂತೆ. ಅಲ್ಲಿ ಎಲ್ಲವೂ ವೈಭವೋಪೇತವಾಗಿರಬೇಕು. ಅದಕ್ಕೆ  ಅಗತ್ಯವಿರುವಷ್ಟು  ಹಣ  ದೊರೆಯದಿದ್ದರೆ ಸಾಲವಾದರೂ ತರಬೇಕು. ಇದು  ಅವರ ಚಿಂತನೆ. ಅದಕ್ಕೆ  ತಕ್ಕಂತೆ  ಭಾರತ ಒಂದು  ವೈಭವೋಪೇತ ಹೋಟೆಲಿನಂತಾಯಿತೇ ಹೊರತು ರಾಷ್ಟ್ರವಾಗಲಿಲ್ಲ, ಶಕ್ತಿಯಾಗಲಿಲ್ಲ!

ಯೋಜನೆಗಳ ಹೆಸರಿನಲ್ಲಿ  ಖರ್ಚು ಮಾಡಿದ  ಒಂದೊಂದು ಹಣವೂ ಸೇರಬೇಕಾದ  ಸ್ಥಳ ಸೇರಲಿಲ್ಲ. ಕೆಲಸವೇನೋ ಬೇಕಾದಷ್ಟಾಯ್ತು. ಆದರೆ ಗುಣಮಟ್ಟ ಕಳಪೆಯಾಯಿತು. ೧೯೫೨-೫೩ರಲ್ಲಿ  ಒಂದು ಕೊಳವೆ ಬಾವಿ ೨೦೦ ಎಕರೆಗಳ ಭೂಮಿಗೆ ನೀರುಣಿಸಲು ಶಕ್ತವಾಗಿದ್ದರೆ, ಪಂಚವಾರ್ಷಿಕ ಯೋಜನೆಗಳ ಫಲವಾಗಿ  ಸಿಕ್ಕಸಿಕ್ಕಲ್ಲಿ ಕೊರೆದ ಕೊಳವೆ ಬಾವಿಗಳು ೧೯೫೫-೫೬ರ ವೇಳೆಗೆ ಸರಾಸರಿ ೬೦ ಎಕರೆ ಭೂಮಿಯನ್ನು  ಮಾತ್ರ ತಣಿಸಬಲ್ಲವಾಗಿದ್ದವು. ಹಣ ಸುರಿದದ್ದು ವ್ಯರ್ಥವಾಗಿತ್ತು. ಸರ್ಕಾರ ಜನ ಮಾಡುತ್ತಿದ್ದ  ಕೆಲಸಗಳನ್ನು  ತಾನೇ ಮಾಡಲು  ಮುಂದಾದ್ದರಿಂದ ಜನರೂ  ಆಲಸಿಗಳಾದರು. ಕೆರೆ ಹೂಳೆತ್ತಬೇಕಿದ್ದರೂ  ಸರ್ಕಾರದ ಮರ್ಜಿಗೆ ಕಾಯಲು ಶುರುವಿಟ್ಟರು. ಇಡಿಯ ದೇಶ ನೈತಿಕ ತಳಹದಿಯನ್ನು  ಕಳೆದುಕೊಳ್ಳಲು ಶುರುವಿಟ್ಟಿತು.

ಅವುಗಳ  ಎಲ್ಲ  ಶ್ರೇಯ ನೆಹರೂವಿಗೇ ಸಲ್ಲಬೇಕು!