ಮೋದಿ ಇಪ್ಪತ್ತು ವರ್ಷಗಳ ನಂತರ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದುಕೊಂಡಿದ್ದಾರೆ. ಮೋದಿಯನ್ನು ರಕ್ಕಸನೆಂದು ಬಿಂಬಿಸಲು ಮಾಧ್ಯಮಗಳು, ರಾಜಕಾರಣಿಗಳು, ಅಧಿಕಾರಿಗಳು, ಕೆಲವು ಎನ್‌ಜಿಒಗಳು ಮಾಡಿದ ಪ್ರಯತ್ನ ಕೊನೆಗೂ ಮಣ್ಣುಗೂಡಿದೆ. ಪುಟವಿಟ್ಟ ಚಿನ್ನದಂತೆ ಮೋದಿ ಮತ್ತೊಮ್ಮೆ ಬೆಳಗಿದ್ದಾರೆ.
2002ರ ಫೆಬ್ರವರಿ 27. ಅಯೋಧ್ಯಾದಿಂದ ಬರುತ್ತಿದ್ದ ರೈಲೊಂದಕ್ಕೆ ಮುಸಲ್ಮಾನರು ಗುಜರಾತಿನ ಗೋದ್ರಾದಲ್ಲಿ ಬೆಂಕಿ ಹಚ್ಚಿದರು. ಇದು ಅಚಾನಕ್ಕಾಗಿ ನಡೆದ ದಾಳಿಯಲ್ಲ. ಎಂದಿನಂತೆ ಕೈಲಿ ಕಲ್ಲುಗಳನ್ನು ಹಿಡಿದು, ಪೆಟ್ರೋಲು ಬಾಂಬುಗಳನ್ನು ಹಿಡಿದು ಸಿದ್ಧವಾಗಿದ್ದ ಮುಸಲ್ಮಾನ ಪುಂಡರು ರೈಲು ನಿಂತೊಡನೆ ಏಕಾಕಿ ದಾಳಿ ಮಾಡಿದರು. ಕಲ್ಲೆಸೆದು ಜನರನ್ನು ರೈಲಿನಿಂದ ಹೊರಬರದಂತೆ ತಡೆದರು. ಪೆಟ್ರೋಲ್ ಬಾಂಬುಗಳನ್ನು ಎಸೆದು ಬೋಗಿಗಳು ಹೊತ್ತುರಿಯುವಂತೆ ಮಾಡಿದರು. ಬೇಗೆ ತಾಳಲಾರದೆ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ಹೊರಗೆ ನಿಂತು ಕಲ್ಲಿನಲ್ಲಿ ಹೊಡೆಯಲಾಯ್ತು. ಇಡಿಯ ಬೋಗಿಗಳು ಸುಟ್ಟು ಕರಕಲಾದವಲ್ಲದೇ 59 ಜನ ಕರಸೇವಕರು ಬೆಂದುಹೋಗಿದ್ದರು. ಅವರ ದೇಹಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಎಂಥವನ ರಕ್ತವೂ ಕುದಿಯುತ್ತಿತ್ತು. ಆದರೆ ಈ ದೇಶದ ಮಾಧ್ಯಮಗಳಲ್ಲಿದ್ದವರು ಅಂದೂ ಅದರ ಕುರಿತಂತೆ ತಲೆಕೆಡಿಸಿಕೊಳ್ಳಲಿಲ್ಲ, ಇಂದೂ ಕೂಡ! ಕಳೆದ ಮಾರ್ಚ್‌ನಲ್ಲಿ ಪ್ರೇಮ್ಶಂಕರ್ ಝಾ ಈ ಪ್ರಕರಣವನ್ನು ನೆನಪಿಸಿಕೊಳ್ಳುತ್ತಾ ವೈರ್ ಪತ್ರಿಕೆಗೆ ಬರೆದ ಲೇಖನದಲ್ಲಿ, 1100 ಜನ ಸಾಮಥ್ರ್ಯ ಹೊಂದಿದ್ದ ಆ ರೈಲು 2000ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದೇ ಮೊದಲ ತಪ್ಪು ಎಂಬುದನ್ನು ಬರೆದುಕೊಂಡಿದ್ದಾರೆ. ಎಸ್6 ಬೋಗಿ ಬೆಂಕಿ ಹೊತ್ತಿಸಿಕೊಂಡು ಉರಿದು ಕರಸೇವಕರು ಸಾಯಲು ಕಾರಣವಾಗಿದ್ದು ಅದು ಅಗತ್ಯಕ್ಕಿಂತ ಹೆಚ್ಚು ತುಂಬಿದ್ದುದರಿಂದ ಎಂದು ವಾದಿಸುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿದ ಮುಸಲ್ಮಾನರದ್ದು ಯಾವ ತಪ್ಪೂ ಇಲ್ಲ. ರೈಲಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ಹಿಂದೂಗಳದ್ದೇ ತಪ್ಪು. ಅರುಂಧತಿ ರಾಯ್ ಅಂತೂ ಅಂದಿನ ದಿನಗಳಲ್ಲೇ ಬಾಬರಿ ಮಸೀದಿಯನ್ನು ಉರುಳಿಸಿ ಬರುತ್ತಿದ್ದ ಕರಸೇವಕರ ಮೇಲೆ ಮುಸಲ್ಮಾನರಿಗೆ ಆಕ್ರೋಶವಿತ್ತು, ಹೀಗಾಗಿ ಈ ರೀತಿ ಆಯ್ತು ಎಂದು ದಂಗೆಕೋರರಿಗೆ ಕವರಿಂಗ್ ಫೈರ್ ಕೊಡುವ ಪ್ರಯತ್ನ ಮಾಡಿದ್ದಳು! ಮಸೀದಿ ಉರುಳುವ ಮತ್ತು ಗೋದ್ರಾ ರೈಲಿಗೆ ಬೆಂಕಿ ಹಚ್ಚುವ ಘಟನೆಗಳ ನಡುವೆ ಹತ್ತು ವರ್ಷಗಳ ಅಂತರವಿತ್ತು ಎಂಬುದನ್ನು ಆಕೆ ಮರೆತೇ ಹೋಗಿದ್ದಳು. ಹತ್ತು ವರ್ಷಗಳ ಹಿಂದೆ ನಿರ್ಜೀವ ಕಟ್ಟಡವೊಂದನ್ನು ಉರುಳಿಸಿದ ಘಟನೆಗೆ ಮುಸಲ್ಮಾನರು 59 ಜನರ ಸಜೀವ ದಹನ ಮಾಡಿದ್ದು ಸಹಜ ಪ್ರತಿಕ್ರಿಯೆಯಾಗಬಹುದಾದರೆ, ಈ ರೈಲು ದಹನದ ನಂತರ ಹಿಂದೂಗಳು ಮುಸಲ್ಮಾನರ ವಿರುದ್ಧ ಆಕ್ರೋಶಗೊಂಡಿದ್ದು ಮಾತ್ರ ಅಸಹಜ ಹೇಗಾಯ್ತು? ಈ ಪ್ರಶ್ನೆಯನ್ನು ಆಗಲೂ ಯಾರೂ ಕೇಳಲಿಲ್ಲ, ಈಗಲೂ ಕೂಡ ವ್ಯವಸ್ಥಿತವಾಗಿ ಮರೆಯುತ್ತಾರೆ.
ಆದರೆ ಗೋದ್ರಾ ನಂತರದ ಘಟನೆಗಳನ್ನು, ಮೋದಿಯನ್ನು ಶಾಶ್ವತವಾಗಿ ಮುಗಿಸುವ ಪ್ರಯತ್ನಕ್ಕೆ ಎಲ್ಲರೂ ರಣಹದ್ದುಗಳಂತೆ ಬಳಸಿಕೊಂಡರು. ಮೋದಿ ಮುಖ್ಯಮಂತ್ರಿಯ ಪಟ್ಟಕ್ಕೆ ಬಂದು ಆಗಷ್ಟೇ ನಾಲ್ಕು ತಿಂಗಳು ಕಳೆದಿದ್ದವು. ಕಚ್‌ನ ಭೂಕಂಪವನ್ನು ಎದುರಿಸಿ ನಿಂತು ಅವರು ಜನರಲ್ಲಿ ಮೂಡಿಸಿದ ವಿಶ್ವಾಸ ಪ್ರತಿಪಕ್ಷಗಳಲ್ಲಿ ಆತಂಕ ಹುಟ್ಟಿಸಿತ್ತು. ಈ ಅವಕಾಶವನ್ನು ಎಲ್ಲರೂ ಬಳಸಿಕೊಂಡರು. ರಾಷ್ಟ್ರಮಟ್ಟದಲ್ಲಿ ಹಿಂದೂಗಳನ್ನು ಅವಮಾನಗೊಳಿಸಲು ದಂಗೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಲಾಯ್ತು. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಮೋದಿ ದಂಗೆಗಳು ಕೈಮೀರುತ್ತವೆಂದು ಗೊತ್ತಾದೊಡನೆ ಪಕ್ಕದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶದ ದಿಗ್ವಿಜಯ್ ಸಿಂಗ್, ಮಹಾರಾಷ್ಟ್ರದ ವಿಲಾಸ್‌ರಾವ್ ದೇಶ್‌ಮುಖರಿಗೆ ಪತ್ರ ಬರೆದು ರಕ್ಷಣೆಯ ದೃಷ್ಟಿಯಿಂದ ಸಹಾಯ ಕೊಡುವಂತೆ ಕೇಳಿಕೊಂಡರು. ಕಾಂಗ್ರೆಸ್ಸಿಗೆ ಸೇರಿದ್ದ ಈ ಮೂರೂ ರಾಜ್ಯಗಳು ಅಂದು ಮೋದಿಯ ವಿನಂತಿಗೆ ಪ್ರತಿಕ್ರಿಯಿಸಲೇ ಇಲ್ಲ. ಇದಕ್ಕೆ ವಿಪರೀತವಾಗಿ ದಂಗೆ ನಿಯಂತ್ರಣ ಮಾಡುವಲ್ಲಿ ಮೋದಿ ಸೋತರೆಂದು ಅದೇ ಮುಖ್ಯಮಂತ್ರಿಗಳು ಆನಂತರ ಮಾತನಾಡಲಾರಂಭಿಸಿದರು. ಸುಳ್ಳು ಸುದ್ದಿ ಹಬ್ಬಿಸಿ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವಲ್ಲಿ ನಿಸ್ಸೀಮರಾದ ಎಡಪಂಥೀಯರು ಕೌಸರ್ ಬಾನೊ ಎಂಬ ಗರ್ಭಿಣಿ ಮುಸ್ಲೀಂ ಹೆಣ್ಣುಮಗಳ ಸಾವನ್ನೂ ಕೂಡ ತಮಗೆ ತಕ್ಕಂತೆ ಬಳಸಿಕೊಂಡರು. ಹಿಂದೂ ಪಡೆ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯ ಹೊಟ್ಟೆಯನ್ನು ಸೀಳಿ, ಒಳಗಿದ್ದ ಮಗುವನ್ನು ಕತ್ತಿಯಿಂದ ಕತ್ತರಿಸಿದರು ಎಂದೆಲ್ಲ ಸುದ್ದಿ ಹಬ್ಬಿಸಿದರು. ಆ ಮೂಲಕ ಮುಸಲ್ಮಾನರನ್ನು ಮೋದಿ ಸರ್ಕಾರದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ ಮತ್ತು ಹಿಂದೂಗಳು ಅದೆಷ್ಟು ಕ್ರೂರಿಗಳು ಎಂದು ಬಿಂಬಿಸುವ ಪ್ರಯತ್ನ ಅದಾಗಿತ್ತು. ಸಾಮಾಜಿಕ ಜಾಲತಾಣಗಳು ಈಗಿನಷ್ಟು ವ್ಯಾಪಕವಾಗಿಲ್ಲದ್ದಿದ್ದದ್ದರಿಂದ ಇದರ ಸತ್ಯಾಸತ್ಯತೆ ತಿಳಿಯಲು ಸಾಧ್ಯವಾಗಲೇ ಇಲ್ಲ. 2010ರಲ್ಲಿ ವಿಸ್ತಾರವಾದ ವರದಿ ಬಂದಾಗಲೇ ಇದೊಂದು ಸುಳ್ಳು ಪ್ರಕರಣ ಎಂಬುದು ಗೊತ್ತಾಗಿದ್ದು. ತೀರಿಕೊಂಡ ಗರ್ಭಿಣಿ ಹೆಣ್ಣುಮಗಳ ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಜೆ.ಎಸ್ ಕನೋರಿಯಾ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದ್ದುದನ್ನು, ಎರಡೂವರೆ ಕೆಜಿಯಷ್ಟು ತೂಕವಿದ್ದುದನ್ನು ದಾಖಲಿಸಿದ್ದರು. ಆದರೆ ಆ ವರದಿಯ ನಂತರವೂ ಕೌಸರ್ ಬಾನೊ ಕಥೆ ಮಾತ್ರ ಹಾಗೆಯೇ ಉಳಿಯಿತು!
ಈ ದಂಗೆಯ ಕ್ಷಣ-ಕ್ಷಣದ ಮಾಹಿತಿಗಳನ್ನು ಬಿತ್ತರಿಸುವ ಧಾವಂತಕ್ಕೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳು ‘ನಮ್ಮಲ್ಲೇ ಮೊದಲು’ ಎಂದು ಹೇಳುತ್ತಾ ಸುಳ್ಳು ಸುದ್ದಿಗಳನ್ನೇ ವ್ಯಾಪಕವಾಗಿ ಪ್ರಚಾರ ಮಾಡಿ ದಂಗೆಗಳಿಗೆ ಪ್ರೇರಣೆಕೊಟ್ಟರು. ಬರ್ಖಾದತ್ ಸೂರತ್ತಿನ ವಜ್ರದ ಮಾರುಕಟ್ಟೆಯಲ್ಲಿ ನಿಂತು ‘ಇಲ್ಲಿ ಒಬ್ಬ ಪೊಲೀಸರೂ ಇಲ್ಲ. ಇಲ್ಲಿ ದಂಗೆ ವಿಸ್ತರಿಸಿದರೆ ಏನು ಕಥೆ?’ ಎಂದೆಲ್ಲಾ ವರದಿ ಮಾಡುತ್ತಿದ್ದಳು. ಕಚ್ ಭಾಗದಲ್ಲಿ ಹನುಮಾನ್ ಮಂದಿರವೊಂದನ್ನು ದುಷ್ಕರ್ಮಿಗಳು ಉರುಳಿಸಿದ್ದಾರೆ ಎಂಬ ಸುದ್ದಿಯನ್ನು ಆಕೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಳು. ಮುಖ್ಯಮಂತ್ರಿಯಾಗಿದ್ದ ಮೋದಿ ಆಕೆಗೆ ಕರೆಮಾಡಿ, ‘ವಜ್ರದ ಮಾರುಕಟ್ಟೆಯಲ್ಲಿ ಪೊಲೀಸರಿಲ್ಲ ಎಂದು ಹೇಳುವ ಮೂಲಕ ತಾವು ದಂಗೆಕೋರರನ್ನು ಆಹ್ವಾನಿಸುತ್ತಿದ್ದೀರಾ?’ ಎಂದು ಕೇಳಿದ್ದರಲ್ಲದೇ, ಕಚ್ ಭಾಗದಲ್ಲಿ ಆಕೆ ಹೇಳಿದ ಯಾವ ಮಂದಿರವೂ ಉರುಳಿರಲಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಂಡರು. ಅದರರ್ಥ ಹಿಂದೂ-ಮುಸಲ್ಮಾನರ ನಡುವಿನ ಕಂದಕವನ್ನು ವಿಸ್ತಾರಗೊಳಿಸಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬುದೇ ಅವರೆಲ್ಲರ ಪ್ರಯತ್ನವಾಗಿತ್ತು. ಅವರ ಗುರಿ ಮೋದಿಯಷ್ಟೇ ಆಗಿರಲಿಲ್ಲ. ಏಕೆಂದರೆ ಬಿಜೆಪಿಯಲ್ಲೇ ಅನೇಕ ಗೊಂದಲಗಳುಂಟಾಗಿ ಮೋದಿ ಅನಿವಾರ್ಯಕ್ಕೆ ಅಧಿಕಾರಕ್ಕೆ ಬಂದಿದ್ದರು. ಜನಸಾಮಾನ್ಯರು ರೋಸಿಹೋಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಚಲಾಯಿಸಿದರೂ ಅಚ್ಚರಿ ಪಡಬೇಕಿರಲಿಲ್ಲ! ಎಲ್ಲ ಇಂಗ್ಲೀಷ್ ಮಾಧ್ಯಮಗಳಿಗೆ ಕಣ್ಣಿದ್ದುದು ಹಿಂದೂಗಳ ಮೇಲೆ. ಹಿಂದೂಗಳು ಆತಂಕವಾದಿಗಳು, ಕ್ರೂರಿಗಳು ಎಂದು ಬಿಂಬಿಸುವ ಜರೂರತ್ತು ಅವರಿಗಿತ್ತು. ಅದಕ್ಕೆ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮೋದಿ ಅನಿವಾರ್ಯವಾಗಿ ಎನ್ಡಿಟಿವಿಯನ್ನು ಗುಜರಾತಿನಲ್ಲಿ ತಡೆಹಿಡಿಯಬೇಕಾಯ್ತು. ಅಚ್ಚರಿ ಎಂದರೆ ಅಂದು ಅದೇ ಚಾನೆಲ್‌ನಲ್ಲಿದ್ದು ಈ ಇಡೀ ಸುಳ್ಳು ಸುದ್ದಿಯನ್ನು ಹರಡಿಸುವಲ್ಲಿ ನೇತಾರನಾಗಿದ್ದ ರಾಜ್‌ದೀಪ್ 17 ವರ್ಷಗಳ ನಂತರ 2019ರಲ್ಲಿ ಪತ್ರಕರ್ತ ಮನು ಜೋಸೆಫ್ ಕೇಳಿದ ಪ್ರಶ್ನೆಗೆ ‘ಈ ದಂಗೆಗೆ ಮೋದಿ ಕಾರಣರಲ್ಲವೇ ಅಲ್ಲ’ ಎಂದು ಉತ್ತರಿಸಿದ್ದ. ಹಾಗಿದ್ದರೆ ಅವತ್ತು ಹೇಳಿದ ಸುಳ್ಳುಗಳಿಗೆ ಯಾರು ಹೊಣೆ? ಅದರಿಂದಾಗಿ ಮೋದಿ ಸುದೀರ್ಘಕಾಲ ನರಕಯಾತನೆ ಅನುಭವಿಸಬೇಕಾಯ್ತಲ್ಲ, ಅದರ ಜವಾಬ್ದಾರಿ ಯಾರದ್ದು? ಈ ಪ್ರಶ್ನೆಗೆಲ್ಲ ಉತ್ತರಿಸಬೇಕಾದ್ದು ಯಾರು?
ಪತ್ರಕರ್ತರಷ್ಟೇ ಅಲ್ಲ, ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಮೋದಿಯ ವಿರುದ್ಧ ತನ್ನೆಲ್ಲ ಆಕ್ರೋಶವನ್ನೂ ಹಂತ-ಹಂತವಾಗಿ ಹೊರಹಾಕಿದ. 2011ರಲ್ಲಿ ಆತ ಸ್ಫೋಟಕವಾದ ಮಾಹಿತಿಯೊಂದನ್ನು ಸಮಾಜದ ಮುಂದಿಟ್ಟ. ಕರಸೇವಕರನ್ನು ಸುಟ್ಟ ಪ್ರಕರಣದ ನಂತರ ಮೋದಿ ತುರ್ತು ಸಭೆಯೊಂದನ್ನು ಕರೆದು ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕೆಂದೂ, ಈ ಬಾರಿ ಈ ಆಕ್ರೋಶ ಹೊರಹಾಕುವ ಪ್ರಕ್ರಿಯೆ ಹೇಗಿರಬೇಕೆಂದರೆ ಇನ್ನೆಂದೂ ಮುಸಲ್ಮಾನರು ಇಂತಹ ಕೃತ್ಯಕ್ಕೆ ಕೈ ಹಾಕದಂತಾಗಬೇಕೆಂದು ಹೇಳಿದ್ದರಂತೆ. ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಭಾಗವಹಿಸಲು ತನಗೂ ಆಹ್ವಾನವಿದ್ದ ಫ್ಯಾಕ್ಸ್ ಪ್ರತಿಯೊಂದನ್ನು ಆತ ಸಮಾಜದ ಮುಂದಿರಿಸಿದ. ಈ ಸಭೆಯಲ್ಲಿ ಎಂಟು ಜನ ಪ್ರಮುಖ ಪೊಲೀಸರಿದ್ದು ಅವರೆಲ್ಲರೂ ಈ ದಂಗೆ ನಿಲ್ಲದಂತೆ ನೋಡಿಕೊಂಡರು ಎಂದಿದ್ದ. ನಾನಾವತಿ ಮೆಹ್ತಾ ಕಮಿಷನ್ ಈ ಎಲ್ಲ ಆರೋಪಗಳನ್ನೂ ಅಲ್ಲಗಳೆಯಿತಲ್ಲದೇ ಆತ ಈ ಸಭೆಯಲ್ಲಿ ಭಾಗವಹಿಸಿರುವುದೇ ಸುಳ್ಳು ಎಂದಿತು. ಆತ ಹೇಳಿರುವ ಅಷ್ಟೂ ಹೇಳಿಕೆಯನ್ನು ಈ ಕಮಿಷನ್ ಸಾರಾಸಗಟಾಗಿ ತಿರಸ್ಕರಿಸಿತು. ಆತ ಮುಂದಿಟ್ಟಿರುವ ಫ್ಯಾಕ್ಸ್ ಪ್ರತಿಯೂ ಕೂಡ ಆ ಸಭೆಯದ್ದಲ್ಲವೆಂಬುದು ಇವರುಗಳ ತನಿಖೆಯ ಮೂಲಕ ಹೊರಬಂತು. ಮುಂದೆ ಇದೇ ಸಂಜೀವ್ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯನ್ನು ಟ್ರೋಲ್ ಮಾಡುತ್ತಾ ಮೋದಿ ವಿರೋಧಿಗಳ ಪಾಲಿನ ಹೀರೋ ಆಗಿ ಉಳಿದ.
ಇವರೆಲ್ಲರೂ ಸೇರಿ ವಾತಾವರಣವನ್ನು ಹೇಗೆ ರೂಪಿಸಿಬಿಟ್ಟಿದ್ದರೆಂದರೆ 72 ಗಂಟೆಗಳ ಕಾಲ ಮೋದಿ ಹಿಂದೂಗಳಿಗೆ ಪೂರ್ಣ ಅವಕಾಶವನ್ನು ಕೊಟ್ಟಿದ್ದರೆಂದು, ಅಷ್ಟರೊಳಗೆ ಮಾಡಬೇಕಾದ್ದೆಲ್ಲವನ್ನೂ ಮಾಡಿ ಮುಗಿಸಲು ಮುಕ್ತ ಪರವಾನಗಿ ನೀಡಿದ್ದರೆಂದು ನಂಬಿಸಿಬಿಟ್ಟಿದ್ದರು. ಹೀಗಾಗಿಯೇ ಮೋದಿ ಸೈನ್ಯವನ್ನು ಕರೆಸಲಿಲ್ಲ ಎಂಬುದು ಅವರ ಮೇಲಿದ್ದ ಅಪವಾದ. ಆದರೆ ದಂಗೆಗಳು ಆರಂಭವಾಗಿವೆ ಎಂದು ಗೊತ್ತಾದೊಡನೆ ಸೈನ್ಯದ ಸಹಕಾರ ಬೇಕೆಂದು ಮೋದಿ ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದುದು ನಿಚ್ಚಳವಾಗಿತ್ತು. ಆದರೆ ಸೇನೆ ಗಡಿಭಾಗದಿಂದ ರಕ್ಷಣೆಗೆಂದು ಬರಲು ಕೆಲವು ಗಂಟೆಗಳ ಸಮಯವಾದರೂ ಹಿಡಿಯುತ್ತದೆಂಬುದು ಎಂಥವನಿಗೂ ಗೊತ್ತಿರಬೇಕಾದ ಸಂಗತಿ. ಮೂರು ಸಾವಿರ ಸೈನಿಕರ ಪಡೆ ಘಟನೆಯಾದ ಎರಡು ದಿನಗಳ ನಂತರ ಮಾರ್ಚ್ ಒಂದಕ್ಕೆ ಅಹ್ಮದಾಬಾದಿಗೆ ಬಂದಿಳಿದಿತ್ತು. ಮೋದಿ ದಂಗೆಗಳು ಆರಂಭವಾದ ದಿನ ಸಂಜೆಯೇ ಸೈನ್ಯದ ಸಹಾಯಕ್ಕಾಗಿ ಕರೆಮಾಡಿದ್ದು ದಾಖಲಾಗಿತ್ತು. ಆನಂತರದ ದಿನಗಳಲ್ಲಿ ಅನೇಕ ಪತ್ರಿಕೆಗಳು ಇದನ್ನು ವರದಿ ಮಾಡಿದವು. ಅಷ್ಟರವೇಳೆಗೆ ಮೋದಿಯ ಕುರಿತಂತೆ ಹಬ್ಬಿಸಬೇಕಾದ ಸುಳ್ಳುಗಳನ್ನೆಲ್ಲಾ ಹೇಳಿಯಾಗಿತ್ತು. ಈ ಅಯೋಗ್ಯರ ಸಾಮಥ್ರ್ಯ ಎಂಥದ್ದಿತ್ತೆಂದರೆ ಇಡಿಯ ಜಗತ್ತು ದಂಗೆಯ ಹಿಂದಿನ ಕಾರಣ ಮೋದಿ ಎಂಬುದನ್ನು ನಂಬಿತ್ತೆನ್ನುವುದನ್ನು ಬಿಡಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಇದನ್ನು ಒಪ್ಪಿಕೊಂಡು ಮೋದಿಯವರನ್ನು ಬದಲಾಯಿಸಿಬಿಡುವ ತವಕದಲ್ಲಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಅಟಲ್ಜಿ ರಾಜ್ಯಧರ್ಮದ ಪಾಲನೆಯ ಕುರಿತಂತೆ ಮೋದಿಗೆ ಕಿವಿಮಾತು ಹೇಳಿದ್ದೇನೆ ಎಂಬುದಂತೂ ಮೋದಿಯವರ ಪಾಲಿಗೆ ಕಂಟಕಪ್ರಾಯವೇ ಆಗಿತ್ತು!
ಮುಂದಿನ ಕನಿಷ್ಠ 12 ವರ್ಷಗಳ ಕಾಲ ಮೋದಿಯ ಪಾಲಿಗೆ ಇದು ವನವಾಸವೇ. ಅವರು ವಿದೇಶಕ್ಕೆ ಹೋಗುವಾಗ ಅಲ್ಲಿನ ಪತ್ರಿಕೆಗಳಲ್ಲಿ ಗೋದ್ರಾ ದಂಗೆಯ ಕುರಿತಂತೆ ಬರೆಸಲಾಗುತ್ತಿತ್ತು. ಚುನಾವಣೆಗೆ ಹೋಗುವ ಮುನ್ನ ಗೋದ್ರಾ ದಂಗೆಗಳನ್ನು ನೆನಪಿಸಿಕೊಡಲಾಗುತ್ತಿತ್ತು. ಗುಜರಾತಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದರೆ ಮೋದಿಯನ್ನು ದಂಗೆಕೋರ ಎಂದು ಬಿಂಬಿಸಿ ಹೂಡಿಕೆದಾರರನ್ನು ಹಿಂದೆ ಸರಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಈ ಮನುಷ್ಯ ಎಲ್ಲವನ್ನೂ ಎದುರಿಸಿದ. 12 ವರ್ಷಗಳ ಕಾಲ ತನಗಾದ ಅವಮಾನವನ್ನು ನುಂಗಿಕೊಂಡ, ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ. ಮತ್ತೆ-ಮತ್ತೆ ಚುನಾವಣೆಗಳನ್ನು ಗೆದ್ದು 2014ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಹುಮತ ಪಡೆದು ಪ್ರಧಾನಿಯೂ ಆದ. 2019ರಲ್ಲಿ ಮತ್ತೆ ಪ್ರಧಾನಿಯಾದ. ಈಗ ಅದೇ ನರೇಂದ್ರಮೋದಿ ಈ ಎಲ್ಲ ಆರೋಪಗಳಿಂದ ಮುಕ್ತರಾಗಿ ಬಂದಿದ್ದಾರೆ. ಒಮ್ಮೆ ಹಿಂದಿರುಗಿ ನೋಡಿದಾಗ ಎಲ್ಲ ಕಠಿಣ ಸಂದರ್ಭದಲ್ಲೂ ಜೊತೆಯಲ್ಲಿದ್ದ ನಿಜ ಭಾರತೀಯನನ್ನು ಕಂಡು ಸಂತೋಷ ಪಡಬಹುದು ಅಥವಾ ರಣಹದ್ದುಗಳಂತೆ ಹಿಂದೆ ಬಿದ್ದಿದ್ದವರನ್ನು ಕಂಡು ಅಸಹ್ಯವೆನಿಸಬಹುದು!