‘ಅನೇಕ ಶಕಸ್ಥಾನ, ಹೂಣಸ್ಥಾನಗಳನ್ನು ನುಂಗಿರುವ ಹಿಂದೂಸ್ಥಾನಕ್ಕೆ ಪಾಕಿಸ್ತಾನ ಯಾವ ಲೆಕ್ಕ? ಕೆಲವು ಕಾಲ ಅಸಹ್ಯಕರ ಬದುಕು ನಡೆಸಿ ಕೊನೆಗೊಮ್ಮೆ ಅದು ಹಿಂದೂಸ್ಥಾನದೊಂದಿಗೆ ವಿಲೀನಗೊಳ್ಳುತ್ತದೆ’ ಎಂದಿದ್ದರು ಸಾವರ್ಕರ್. ಅವರು 50 ವರ್ಷಗಳ ಕಾಲಮಿತಿಯನ್ನು ವಿಧಿಸಿದ್ದರು. ಹೆಚ್ಚೇನೂ ಆಗಿಲ್ಲ. 75 ವರ್ಷವಾಗಿದೆ ಅಷ್ಟೇ. ಭಾರತ ನಾಶವಾಗುವುದೇ? ಎಂಬ ಪ್ರಶ್ನೆಯನ್ನು ಕೇಳಿಕೊಂಡು ಸ್ವಾಮಿ ವಿವೇಕಾನಂದರು, ‘ಅದು ಸಾಧ್ಯವೇ ಇಲ್ಲ. ಹಾಗಾದಲ್ಲಿ ಜಗತ್ತೇ ನಾಶವಾಗುವುದು’ ಎಂದಿದ್ದರು. ಅದರರ್ಥ ಎಲ್ಲಿಯವರೆಗೆ ಭಾರತದೊಂದಿಗೆ ಸಾರ್ಥಕ ಸಂಬಂಧವಿದೆಯೋ ಅಲ್ಲಿಯವರೆಗೆ ಆಯಾ ರಾಷ್ಟ್ರಗಳು ಶ್ರೇಷ್ಠ ಬದುಕನ್ನೇ ನಡೆಸುತ್ತವೆ. ಭಾರತದಿಂದ ದೂರವಾದರೆ ಆ ರಾಷ್ಟ್ರಗಳು ತಮ್ಮನ್ನೇ ತಾವು ಕಳೆದುಕೊಂಡುಬಿಡುತ್ತವೆ. ವಿವೇಕಾನಂದರ ಭಾವ ಅದೇ ಆಗಿರಲು ಸಾಕು. ಏಕೆಂದರೆ ಭಾರತದ್ದೇ ಅಂಗವಾಗಿದ್ದ ಗಾಂಧಾರ ದೂರವಾಗಿ ಅಫ್ಘಾನಿಸ್ತಾನವಾದ ಮೇಲೆ ಇಂದಿನ ಅದರ ಪರಿಸ್ಥಿತಿ ನೋಡಿ! 1947ರವರೆಗೂ ನಮ್ಮದ್ದೇ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾಗಳು ಇಂದು ಹೇಗಾಗಿವೆ ನೊಡಿ. ಶ್ರೀಲಂಕಾ ಸ್ವಲ್ಪ ಚೀನಾದತ್ತ ವಾಲಿತಷ್ಟೇ, ದಿವಾಳಿಯೇ ಆಗಿ ಬೀದಿಗೆ ಬಂದಿತು. ನೇಪಾಳ ಅದೇ ಸರತಿಯಲ್ಲಿದೆ. ಹೀಗೆಲ್ಲ ಏಕೆಂದರೆ ಭಾರತವೆಂಬುದು ಬರಿಯ ರಾಷ್ಟ್ರವಲ್ಲ. ಅದೊಂದು ಆದರ್ಶಗಳ ಮುದ್ದೆ. ಸತ್ಯವನ್ನು ಅರಸುವ, ಬೆಳಕಿನತ್ತಲೇ ಮುಖಮಾಡಿ ನಿಲ್ಲುವ ಆದರ್ಶವನ್ನು ಪ್ರತಿಯೊಬ್ಬರಿಗೂ ಹಂಚುತ್ತಾ ಸಾಗಿರುವ ನಾಡು. ಆಕ್ರಮಣಕ್ಕೊಳಗಾಗಿ ಎಷ್ಟೋ ರಾಷ್ಟ್ರಗಳು ತಮ್ಮ ಮೂಲ ನೆಲೆಯನ್ನೇ ಕಳಕೊಂಡವು. ಭಾರತ ಇಂದಿಗೂ ಬಲವಾಗಿ ಉಳಿದಿದೆ. ಅದಕ್ಕೆ ಕಾರಣ ಇದನ್ನು ರಕ್ಷಿಸುವ ಮನಸ್ಥಿತಿಯುಳ್ಳ ಜನರಷ್ಟೇ ಅಲ್ಲದೇ, ಭಾರತದ ಅಂತಃಶಕ್ತಿಯ ಪ್ರವಾಹವೂ ಕೂಡ ಹೌದು.
ಇಷ್ಟೆಲ್ಲ ಪೀಠಿಕೆ ಏಕೆಂದರೆ ಪಾಕಿಸ್ತಾನದ ಇಂದಿನ ಸ್ಥಿತಿ ಬಲು ಗಂಭೀರವಾಗಿದೆ. ತನ್ನ ಪ್ರತಿಯೊಂದು ದುಃಖದ ಪರಿಸ್ಥಿತಿಗಳಿಗೂ ಭಾರತವನ್ನೇ ಹೊಣೆಯಾಗಿಸುವ ಪಾಕಿಸ್ತಾನ ಈಗಲೂ ಕೂಡ ಪಾಕಿಸ್ತಾನವನ್ನು ತುಂಡರಿಸುವ ಯೋಜನೆಯನ್ನು ಭಾರತ ರೂಪಿಸುತ್ತಿದೆ ಎಂದೇ ಅರಚುತ್ತಿದೆ. ಇಷ್ಟಕ್ಕೂ ಇಮ್ರಾನ್ ಖಾನನ ಮೇಲೆ ಮೊನ್ನೆ ನಡೆದ ದಾಳಿ ಅಚಾನಕ್ಕು ನಡೆದದ್ದೇನೂ ಅಲ್ಲ. ಕಳೆದ ನಾಲ್ಕಾರು ವರ್ಷಗಳಿಂದಲೂ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅದು ಆಂತರಿಕವಾಗಿ ಕುಸಿಯುವ ಎಲ್ಲ ಲಕ್ಷಣಗಳನ್ನೂ ತೋರಿದ್ದವು. ನಿಮಗೆ ನೆನಪಿರಬೇಕು. ಪ್ರಧಾನಮಂತ್ರಿ ನವಾಜ್ ಶರೀಫರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿ ಇಮ್ರಾನ್‌ಖಾನ್ ಬೀದಿ ಬೀದಿಯಲ್ಲಿ ಜನರನ್ನು ಒಗ್ಗೂಡಿಸಿದನಲ್ಲ, ಅವನ ಹಿಂದೆ ನಿಂತು, ಅವನಿಗೆ ಬೇಕಾದ ಎಲ್ಲ ಸೌಕರ್ಯಗಳನ್ನೂ ಒದಗಿಸಿಕೊಟ್ಟಿದ್ದು ಸ್ವತಃ ಪಾಕಿಸ್ತಾನೀ ಸೇನೆಯೇ. ಆಗಿನ ಸೇನಾ ಮುಖ್ಯಸ್ಥ ಕಮರ್ ಬಾಜ್ವಾ ಮತ್ತು ಐಎಸ್ಐನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಇಬ್ಬರೂ ಶತಾಯ-ಗತಾಯ ಇಮ್ರಾನ್‌ಖಾನ್‌ನನ್ನು ಗೆಲ್ಲಿಸಬೇಕೆಂದು ಪಣಕ್ಕೆ ಬಿದ್ದಿದ್ದರು. ಇಷ್ಟಕ್ಕೂ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವೆಂಬುದು ಹಾಸ್ಯಾಸ್ಪದವಷ್ಟೇ. ಸೇನೆ ಏನನ್ನು ನಿರ್ಣಯಿಸುತ್ತದೆಯೋ ಅಲ್ಲಿ ನಡೆಯೋದು ಅದೇ. ಅವರು ಬೇಕೆಂದಾಗ ಪ್ರಧಾನಮಂತ್ರಿಯನ್ನು ಕೂರಿಸುತ್ತಾರೆ, ಬೇಡವೆಂದಾಗ ಎಬ್ಬಿಸಿ ಮನೆಗೆ ದಬ್ಬುತ್ತಾರೆ. ಈ ನಡುವೆ ಚುನಾವಣೆಗಳ ತೊಗಲು ಬೊಂಬೆಯಾಟ ಬೇರೆ. ಇಮ್ರಾನ್ ಖಾನನು ಸೂತ್ರದ ಬೊಂಬೆಯಾಗಿಯೇ ಅಧಿಕಾರದ ಚುಕ್ಕಾಣಿ ಹಿಡಿದವ. ಗೆದ್ದು ಬಂದ ಆರಂಭದ ದಿನಗಳಲ್ಲಿಯೇ ಸೇನೆಯೊಂದಿಗೆ ಸೇರಿಯೇ ತಾನು ಪಾಕಿಸ್ತಾನದ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುತ್ತೇನೆ ಎಂದಿದ್ದ. ಆದರೆ ಆನಂತರದ ದಿನಗಳಲ್ಲಿ ಅವನ ಆಲೋಚನೆಗಳಿಗೂ ಸೇನೆಯ ಕಲ್ಪನೆಗಳಿಗೂ ಹೊಂದಾಣಿಕೆಯಾಗಲಿಲ್ಲ. ಸೇನೆ ಅವನಿಂದ ಕೈತೊಳಕೊಂಡರೆ ಸಾಕೆಂದು ಯೋಚಿಸಲಾರಂಭಿಸಿತ್ತು. ಇಷ್ಟೆಲ್ಲಾ ಕಿರಿಕಿರಿ ಇರುವಾಗ ಸೇನೆಯೇ ಅಧಿಕಾರ ಏಕೆ ನಡೆಸಬಾರದು? ಎಂಬ ಪ್ರಶ್ನೆ ಸಹಜವೇ. ಸೇನಾ ಮುಖ್ಯಸ್ಥರು ರಾಷ್ಟ್ರ ನಡೆಸಲು ಕುಳಿತರೆ ಜಾಗತಿಕ ಸಹಕಾರ ದೊರೆಯದು ಎಂಬ ಆತಂಕವೇ ಸೇನೆಯನ್ನು ಹಿಂಬಾಗಿಲಿನಿಂದ ಅಧಿಕಾರ ನಡೆಸುವಂತೆ ಮಾಡಿಬಿಡುತ್ತದೆ. ಮುಂದೆ ಕಾಣಿಸುವ ಪ್ರಧಾನಮಂತ್ರಿ ಸೇನೆ ಹೇಳಿದಂತೆ ಕುಣಿಯುವ ನರ್ತಕಿಯಷ್ಟೇ. ಇದು ಇಡಿಯ ಜಗತ್ತಿಗೇ ಗೊತ್ತಿದೆ. ಇಮ್ರಾನ್ ಜನರಿಗೆ ಧಾವಂತದಲ್ಲಿ ಅತಿಹೆಚ್ಚಿನ ಭರವಸೆ ಕೊಟ್ಟುಬಿಟ್ಟಿದ್ದ, ಥೇಟು ಕೇಜ್ರಿವಾಲನಂತೆ. ದೆಹಲಿಯಲ್ಲಿ ಉಚಿತ ನೀರು, ವಿದ್ಯುತ್ ಕೊಡುವುದು ಸುಲಭ. ಏಕೆಂದರೆ ಅಲ್ಲಿ ಆತನಿಗೆ ಮಾಡಲು ಇರುವ ಕೆಲಸಗಳೇ ಕಡಿಮೆ. ಆದರೆ ಪಂಜಾಬ್ ನಲ್ಲಿ ಭರವಸೆ ಕೊಟ್ಟು ಆತನ ನೀರಿಳಿಯುತ್ತಿದೆ. ಪ್ರಶ್ನೆ ಮಾಡುವ ಮಂದಿ ಈಗ ಹೆಚ್ಚುತ್ತಿದ್ದಾರೆ. ಇಮ್ರಾನನ ಕಥೆಯೂ ಅಂಥದ್ದೇ. ಧಾವಂತಕ್ಕೆ ಬಿದ್ದು ತೈಲ ಬೆಲೆಯನ್ನು ಕಡಿತಗೊಳಿಸಿದ. ಜನಕ್ಕೆ ಆರಂಭಿಕ ಆನಂದವೇನೋ ನಿಜ, ಆದರೆ ಆ ಹೊರೆಯನ್ನು ಬೊಕ್ಕಸ ತಡೆದುಕೊಳ್ಳಲಿಲ್ಲ. ಬೊಕ್ಕಸ ತುಂಬಿಸಲು ಭಿಕ್ಷಾ ಪಾತ್ರೆ ಹಿಡಿದು ಜಗತ್ತಿನ ಸಿರಿವಂತ ರಾಷ್ಟ್ರಗಳ ಮುಂದೆ ಅಲೆದಾಡಿದ. ವಿದೇಶದಲ್ಲಿ ಆತನನ್ನು ಅಕ್ಷರಶಃ ಭಿಕ್ಷುಕನಂತೆ ನೋಡಲಾಯ್ತು. ತಾವು ಇಂಗ್ಲೆಂಡಿನ ಮಂದಿಗೆ ಎಂದೂ ಸಮನಾಗಲು ಸಾಧ್ಯವಿಲ್ಲ. ‘ಕತ್ತೆಯ ಮೇಲಷ್ಟು ಗೆರೆಗಳನ್ನು ಬರೆದರೆ ಅದು ಜೀಬ್ರಾ ಆಗುವುದೇನು?’ ಎಂದು ತನ್ನ ಯೋಗ್ಯತೆಯನ್ನು ತಾನೇ ಜಗಜ್ಜಾಹೀರುಗೊಳಿಸಿಕೊಂಡ. ಸಾಲದ ಮೊತ್ತ ಏರುತ್ತಲೇ ಇತ್ತು. ಭಾರತ ಫೈನಾನ್ಶಿಯಲ್ ಅಸಿಸ್ಟೆನ್ಸ್ ಟಾಸ್ಕ್ ಫೋರ್ಸ್‌ನಿಂದ ಪಾಕಿಸ್ತಾನ ಹೊರಬರದಂತೆ ಅದನ್ನು ಕಂದುಪಟ್ಟಿಯಲ್ಲಿರಿಸಲು ಬೇಕಾದ ಎಲ್ಲ ಕಸರತ್ತನ್ನು ಮಾಡುತ್ತಿದ್ದುದರಿಂದ ಏರಿನಿಂತ 15 ಬಿಲಿಯನ್ ಡಾಲರ್ಗಳಷ್ಟು ಸಾಲ ತೀರಿಸಲಾಗದೇ ಹೆಣಗಾಡಿದ. ಎಲ್ಲರ ಕಣ್ಣು ಬಾಜ್ವಾನತ್ತ ತಿರುಗಿತು. ವಿದೇಶಾಂಗ ನೀತಿಯನ್ನು ಇಮ್ರಾನ್ ಖಾನ್ ಹೇಗೆ ಚಿಂದಿಯಾಗಿಸಿದನೆಂದರೆ ಸ್ವತಃ ಅಮೇರಿಕಾ ಕಿರಿಕಿರಿ ಅನುಭವಿಸಿತು. ಸೇನಾ ಮುಖ್ಯಸ್ಥ ಬಾಜ್ವಾ ಇಮ್ರಾನ್ ನನ್ನು ಅಧಿಕಾರಕ್ಕೆ ತಂದು ತಾನೇ ಕೈ-ಕೈ ಹಿಸುಕಿಕೊಂಡ. ಸಾಲದೆಂಬಂತೆ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ನನ್ನು ಐಎಸ್ಐ ನಿರ್ದೇಶಕ ಹುದ್ದೆಯಿಂದ ತೆಗೆದು ಜನರಲ್ ನದೀಂ ಅಂಜುಂನನ್ನು ತರಬೇಕೆಂಬುದು ಬಾಜ್ವಾನ ಇಚ್ಛೆಯಾಗಿತ್ತು. ಚುನಾವಣೆಯವರೆಗೂ ಫೈಜ್ ಇದ್ದರೆ ತನಗೆ ಅನುಕೂಲವೆಂಬುದು ಗೊತ್ತಿದ್ದುದರಿಂದ ಇಮ್ರಾನ್ ಬಾಜ್ವಾನಿಗೆ ಸೊಪ್ಪು ಹಾಕಲಿಲ್ಲ. ಗಲಾಟೆ ಎಷ್ಟು ತಾರಕಕ್ಕೇರಿತೆಂದರೆ ಬಿಬಿಸಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಬಾಜ್ವಾ ಮುಖ್ಯಸ್ಥ ನಾನಾಗಿರುವುದರಿಂದ ನನ್ನ ನಿರ್ಣಯವೇ ಅಂತಿಮ ಎಂದು ಅಂಜುಂನನ್ನು ಆಯ್ಕೆ ಮಾಡಿಯೂಬಿಟ್ಟ. ಆತನ ನೇಮಕಾತಿಯ ಘೋಷಣೆ ಮಾಡಬೇಕಿದ್ದ ಇಮ್ರಾನ್ ಇಡಿಯ ಕಡತವನ್ನು ಮೂಲೆಗೆಸೆದು ಕುಳಿತುಬಿಟ್ಟ. ಆಗ ನಡೆದದ್ದು ಅವಿಶ್ವಾಸ ಗೊತ್ತುವಳಿಯ ಮಹಾ ಪ್ರಹಸನ. ಪಾಕಿಸ್ತಾನದಲ್ಲಿ ಮೂರು ಪ್ರಮುಖ ಪಕ್ಷಗಳಿವೆ. ಇಮ್ರಾನನ ತೆಹರೀಕ್-ಎ-ಇನ್ಸಾಫ್, ನವಾಜ್ ಶರೀಫರ ಮುಸ್ಲೀಂ ಲೀಗ್ ಮತ್ತು ಭುಟ್ಟೋಳ ಪೀಪಲ್ಸ್ ಪಾರ್ಟಿ. ಇಮ್ರಾನ್ ಅತಿ ಕಡಿಮೆ ಬಹುಮತದಿಂದ ಅಧಿಕಾರ ಪಡೆದಿದ್ದವ. ಈಗ ಸೇನೆಯೂ ಆತನ ವಿರುದ್ಧವಿದ್ದುದರಿಂದ ಸಹಜವಾಗಿಯೇ ಪ್ರತಿಪಕ್ಷಗಳು ಚುರುಕಾಗಿಬಿಟ್ಟವು. ಆತನ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿಯೇಬಿಟ್ಟವು. ಇಮ್ರಾನನೇನು ಕಡಿಮೆಯಲ್ಲ. ಅಮೇರಿಕಾ ತಾನು ಅಧಿಕಾರದಲ್ಲಿರುವುದನ್ನು ವಿರೋಧಿಸುತ್ತಿದೆಯಾದ್ದರಿಂದ ಈ ಅವಿಶ್ವಾಸ ಗೊತ್ತುವಳಿಯಲ್ಲಿ ವಿದೇಶಿ ಹಸ್ತಕ್ಷೇಪವಿದೆ ಎನ್ನುವುದು ಸಾಬೀತಾಗಿದೆ ಎಂದ. ಅದೇ ಆಧಾರದ ಮೇಲೆ ಸಭಾಪತಿಗಳ ಮೂಲಕ ಇಡಿಯ ಗೊತ್ತುವಳಿಯನ್ನು ಕಾನೂನು ಬಾಹಿರ ಎಂದು ಘೋಷಿಸಿಬಿಟ್ಟ. ಅದು ಕಾನೂನಿನ ಮುಂದೆ ನಿಲ್ಲಲಿಲ್ಲವೆಂದು ಗೊತ್ತಾದಾಗ ಸರ್ಕಾರವನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವುದೆಂದು ನಿರ್ಧರಿಸಿದ. ಸರ್ವೋಚ್ಚ ನ್ಯಾಯಾಲಯ ಆತನ ನಿರ್ಣಯವನ್ನು ಮೂಲೆಗೆ ತಳ್ಳಿ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಮಾಡಿಕೊಟ್ಟಿತು. ಇಮ್ರಾನ್ ಸೋತು ನವಾಜ್ ಶರೀಫನ ಕಿರಿಯ ತಮ್ಮ ಶಾಬಾಸ್ ಶರೀಫ್ ಅಧಿಕಾರಕ್ಕೆ ಬಂದ. ಪಂಜಾಬಿನ ಜವಾಬ್ದಾರಿ ಹೊತ್ತಾಗಿನಿಂದಲೂ ವೇಗಕ್ಕೆ ಹೆಸರುವಾಸಿಯಾದ ಶಾಬಾಸ್ ಬಂದೊಡನೆ ಇಡಿಯ ಸರ್ಕಾರಕ್ಕೆ ಚುರುಕು ತರುವ ಪ್ರಯತ್ನ ಮಾಡಿದ. ಇಮ್ರಾನ್ ಹೇಳುತ್ತಿದ್ದ ಸುಳ್ಳುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವೂ ಆರಂಭವಾಯ್ತು. ಆದರೆ ನಾಟಕದಲ್ಲಿ ಕೇಜ್ರಿವಾಲನ ಒಂದು ಕೈ ಮೀರಿಸುವ ಇಮ್ರಾನ್ ಜನರ ನಡುವೆ ದಿನಕ್ಕೊಂದು ಪ್ರಕರಣವನ್ನೋಯ್ದು ಗಲಾಟೆ ಮಾಡಲಾರಂಭಿಸಿದ. ಪತ್ರಕರ್ತ ಅರ್ಷದ್ ಶರೀಫ್‌ನ ಕೊಲೆ ಆತನಿಗೆ ವರದಾನವಾಗಿ ಲಭಿಸಿತು. ತನಗಾಗದವರನ್ನು ಸರ್ಕಾರ ಮತ್ತು ಸೇನೆ ಸದ್ದಿಲ್ಲದೇ ಮುಗಿಸುತ್ತಿದೆ ಎಂದು ಪುಕಾರು ಹಬ್ಬಿಸಿ ತನ್ನನ್ನೂ ಕೂಡ ಸೇನೆ ಹೀಗೆಯೇ ಮುಗಿಸಿಬಿಡುತ್ತದೆ ಎಂದು ಜನರ ಅನುಕಂಪವನ್ನು ಗಿಟ್ಟಿಸಿದ. ಇದರ ಆಧಾರದ ಮೇಲೆಯೇ ಸರ್ಕಾರವನ್ನು ಕೆಳಗಿಳಿಸಿ ತುರ್ತು ಚುನಾವಣೆಗೆ ಹೋಗುವ ಬೇಡಿಕೆಯನ್ನಿಟ್ಟುಕೊಂಡು ಲಾಹೋರಿನಿಂದ ಇಸ್ಲಾಮಾಬಾದಿನವರೆಗೆ ಹಕೀಕಿ ಆಜಾದಿ ಎಂಬ ಮಹಾ ಮೆರವಣಿಗೆಯನ್ನು ಸಂಘಟಿಸಿದ. ಮೆರವಣಿಗೆಯುದ್ದಕ್ಕೂ ಮಾಡಿದ ಭಾಷಣಗಳಲ್ಲಿ ತನ್ನ ಕೊಲೆಗೆ ಯತ್ನಿಸುತ್ತಿದ್ದಾರೆ ಎಂಬ ಸಂಗತಿಯನ್ನು ಮತ್ತೆ ಮತ್ತೆ ಹೇಳುತ್ತಾ ನಡೆದ.
ಈ ನಡುವೆ ಸೇನೆಯ ಮುಖ್ಯಸ್ಥ ಬಾಜ್ವಾ ತನಗೆ ನಿಷ್ಠರಾಗಿದ್ದ 12 ಮೇಜರ್ ಜನರಲ್ಗಳನ್ನು ಬಡ್ತಿ ಕೊಟ್ಟು ಮುಂದಿನ ಹಂತಕ್ಕೆ ಏರಿಸಿದ. 30 ಬ್ರಿಗೇಡಿಯರ್ ಗಳನ್ನು ಮೇಜರ್ ಜನರಲ್‌ಗಳಾಗಿಸಿದ. ಹೀಗೆ ಬಡ್ತಿಯನ್ನು ಪಡೆದ ವ್ಯಕ್ತಿಯಲ್ಲಿ ಒಬ್ಬ ಮೇಜರ್ ಜನರಲ್ ಫೈಜಲ್ ನಾಜ್ರೀನ್. ಅವಕಾಶ ಸಿಕ್ಕಾಗಲೆಲ್ಲ ಇಮ್ರಾನನ ಮೇಲೆ ಬೆಂಕಿಯುಗುಳುತ್ತಿದ್ದ ಈತ ಈಗ ಪ್ರಮುಖ ಸ್ಥಾನದಲ್ಲಿದ್ದಾನಲ್ಲದೇ ಮುಂದೊಮ್ಮೆ ಚುನಾವಣೆ ನಡೆದು ಇಮ್ರಾನನೇ ಅಧಿಕಾರಕ್ಕೆ ಬಂದರೂ ಸೇನೆಯಲ್ಲಿ ಆತನ ಮಾತು ನಡೆಯದಂತೆ ಮಾಡುವ ಎಲ್ಲ ವ್ಯವಸ್ಥೆಯನ್ನೂ ಅವರು ರೂಪಿಸಿಕೊಂಡುಬಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕೆಲವು ದಿನಗಳ ಹಿಂದೆಯಷ್ಟೇ ಐಎಸ್ಐನ ಮುಖ್ಯ ನಿರ್ದೇಶಕ ಅಂಜುಂ ನದೀಂ ಮತ್ತು ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಇವರಿಬ್ಬರೂ ಪತ್ರಿಕಾಗೋಷ್ಠಿ ನಡೆಸಿ ದಿನಬೆಳಗಾದರೆ ಸುಳ್ಳು ಹೇಳುವ ಇಮ್ರಾನ್ ದೇಶಕ್ಕೆ ಕಂಟಕವಾದವನು ಎಂದೆಲ್ಲ ಹೇಳಿಬಿಟ್ಟರು. ಹೀಗೆ ಐಎಸ್ಐ ಮತ್ತು ಸೇನೆಯ ಮುಖ್ಯಸ್ಥರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿದ್ದು ಪಾಕಿಸ್ತಾನದ ಇತಿಹಾಸದಲ್ಲಿ ಇರಲಾರದು. ಇವೆಲ್ಲವೂ ಒಂದು ವಿಷಯವನ್ನಂತೂ ಸಾಬೀತುಪಡಿಸುತ್ತಿದ್ದವು. ಜನರ ಮನಸ್ಸಿನಲ್ಲಿ ಇಮ್ರಾನ್ ಬಲಗೊಳ್ಳುತ್ತಿದ್ದಾನೆ ಎಂಬುದು ಮತ್ತು ಸೇನೆಯಲ್ಲಿಯೂ ಅತೃಪ್ತ ಆತ್ಮಗಳು ಇಮ್ರಾನಿನ ಪರವಾಗಿ ನಿಂತು ಶಾಂತವಾಗಿ ಬದಲಾವಣೆಗೆ ಪ್ರಯತ್ನಿಸುತ್ತಿದೆ ಎನ್ನುವುದು.
ಇಷ್ಟೆಲ್ಲದರ ಮುಂದುವರೆದ ಭಾಗವಾಗಿ ಮೊನ್ನೆಯಷ್ಟೇ ಇಮ್ರಾನನ ಲಾಂಗ್ ಮಾರ್ಚ್ ನಡುವೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯೂ ಎಷ್ಟು ನಿಗೂಢವೆಂದರೆ ಸದ್ದು ಕೇಳುವುದು ಎರಡೇ ಗುಂಡಿನದ್ದಾದರೂ ಇಮ್ರಾನನಿಗೆ ಹೊಕ್ಕಿದ್ದು ಮಾತ್ರ ಮೂರು ಗುಂಡು ಎನ್ನಲಾಯ್ತು. ತೀರಾ ಇತ್ತೀಚೆಗೆ ತನಗೆ ಹೊಕ್ಕಿದ್ದು ನಾಲ್ಕು ಗುಂಡು ಎಂದು ಆತನೇ ಹೇಳಿಕೊಂಡಿದ್ದಾನೆ. ಲಾರಿಯ ಮೇಲೆ ನಿಂತವನಿಗೆ ನೆಲದ ಮೇಲೆ ನಿಂತವ ಗುಂಡು ಹೊಡೆದರೆ ಅದು ತಲೆಗೋ ಎದೆಗೋ ಬಡಿಯಬೇಕು. ಎಲ್ಲ ಬಿಟ್ಟು ಕಾಲಿಗೆ ಬಡಿಯುವುದೆಂದರೆ ಏನರ್ಥ? ಇನ್ನೂ ಸಾಕಷ್ಟು ವಿವರಗಳು ಹೊರಬರಬೇಕಿವೆ. ಇಮ್ರಾನ್ ಈ ಮಟ್ಟದ ನೌಟಂಕಿ ಮಾಡಿರುವ ಸಾಧ್ಯತೆ ಇದೆಯೇ? ಗೊತ್ತಿಲ್ಲ. ಆದರೆ ಒಂದಂತೂ ಹೌದು, ಭಾರತ ಬಲು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಮೇರಿಕಾ ಪಾಕಿಸ್ತಾನಕ್ಕೆ ಏಕಾಕಿ ಬೆಂಬಲ ಕೊಡುತ್ತಿರುವ ರೀತಿ ನೋಡಿದರೆ ಅದು ಚಿಗಿತುಕೊಳ್ಳಬಹುದಾಗಿದ್ದ ಎಲ್ಲ ಅವಕಾಶಗಳೂ ಈಗ ಕಮರಿದಂತೆ ಕಾಣುತ್ತಿದೆ. ಈ ಎಲ್ಲ ಘಟನೆಗೂ ಎರಡು ದಿನಗಳ ಮುನ್ನವಷ್ಟೇ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುತ್ತೇವೆ ಎಂದಿದ್ದರಲ್ಲದೇ ಅದು ನಮ್ಮ ಅವಿಭಾಜ್ಯ ಅಂಗ ಎಂದು ದೃಢವಾಗಿ ಹೇಳಿದ್ದರು. ಸೇನೆಯೂ ಪ್ರತಿಕ್ರಿಯಿಸಿ ಆದೇಶ ಸಿಕ್ಕರೆ ಅದನ್ನು ಮರಳಿ ತರುವುದು ದೊಡ್ಡ ಕೆಲಸವಲ್ಲ ಎಂದುಬಿಟ್ಟಿತು. ಅದರ ಮುಂದುವರೆದ ಭಾಗವಾಗಿ ಇಮ್ರಾನ್ ಹೇಳಿಕೆಯೊಂದನ್ನು ಕೊಟ್ಟು ಪಾಕಿಸ್ತಾನ ಸರ್ಕಾರ ಮಾಡುತ್ತಿರುವ ಅನ್ಯಾಯ 70ರ ದಶಕದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಶೋಷಣೆಯ ಮಾದರಿಯಲ್ಲಿದೆ. ಹೀಗಾಗಿ ಏನು ಬೇಕಿದ್ದರೂ ಆಗಬಹುದು ಎಂದಿದ್ದಾನೆ.
ಹೌದು, ಏನು ಬೇಕಿದ್ದರೂ ಆಗಬಹುದು. ಯಾವುದನ್ನೂ ಹೇಳಿ ಮಾಡದ ಮೋದಿ, ಈ ಬಾರಿ ಪಿಒಕೆಯನ್ನು ಮರಳಿ ಪಡೆಯುತ್ತೇವೆ ಎಂದು ಹೇಳಿಸಿರುವುದನ್ನು ನೋಡಿದರೆ, ಭವಿಷ್ಯದ ಗರ್ಭದಲ್ಲಿ ಮಹತ್ವವಾದುದೇನೋ ಅಡಗಿರುವುದು ನಿಚ್ಚಳವಾಗಿ ಕಾಣುತ್ತಿದೆ. ಕಾಶ್ಮೀರ ಬೇಕೆಂದು ಬಂಬಡ ಬಜಾಯಿಸುತ್ತಿದ್ದ ಪಾಕಿಸ್ತಾನ ತನ್ನನ್ನು ತಾನು ಉಳಿಸಿಕೊಂಡರೆ ಸಾಕಾಗಿದೆ!