ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ಸ್ವಾಭಿಮಾನಿ ಕನ್ನಡಿಗ ‘ಕೈ’ ಚಾಚುವುದಿಲ್ಲ!

ರಾಮಾಯಣದಲ್ಲಿ ಎಲ್ಲೋ ಹೊರಗಿಂದ ನುಸುಳಿದ ಕಥೆಯಿದು. ಚೌಡೇಶ್ವರಿ ದೇವಿಯ ಬಳಿ ಭಾರತದ ಭವಿಷ್ಯದ ಕುರಿತಂತೆ ಕೆಲವಾರು ವರ್ಷಗಳ ಹಿಂದೆ ರಾಮಕೃಷ್ಣಾಶ್ರಮದ ಮಿತ್ರರೊಬ್ಬರು ಕೇಳಿದಾಗ ದೇವಿ ಹೇಳಿದ್ದಂತೆ, ‘ಇಂದ್ರಜಿತ್ ಸಾಯುವ ಮುನ್ನ ರಾಮನನ್ನು ಬಲು ದೈನ್ಯದಿಂದ ಕೇಳಿದನಂತೆ. ತಂದೆ ರಾವಣನಾದರೋ ತಪ್ಪಿತಸ್ಥ, ನಿಜ. ಆತ ಶಿವಭಕ್ತನಾದರೂ ರಾಕ್ಷಸನಂತೆ ವರ್ತಿಸಿದ್ದಾನೆ. ಸೀತೆಯನ್ನು ಅಪಹರಿಸಿಕೊಂಡು ಬಂದು ತಪ್ಪೆಸಗಿದ್ದಾನೆ. ಅವನಿಗೆ ಶಿಕ್ಷೆ ಕೊಡುವ ಭರದಲ್ಲಿ ಯಾವ ತಪ್ಪನ್ನೂ ಮಾಡದ ನನಗೇಕೆ ಈ ಶಿಕ್ಷೆ? ದೇವರ ದೇವ ನೀನೆನ್ನುತ್ತಾರೆ. ನಾನು ಒಂದು ದಿನವಾದರೂ ಲಂಕೆಯನ್ನು ಆಳದೇ ಪ್ರಾಣ ಬಿಡುತ್ತಿದ್ದೇನಲ್ಲ, ಇದು ನ್ಯಾಯವೇ? ಎಂದನಂತೆ. ರಾಮನ ಮನ ಕರಗಿತು. ಆತ ಮೈದಡವಿ ಕಲಿಯುಗದಲ್ಲಿ ನೂರು ವರ್ಷಗಳ ಕಾಲ ನೀನು ಮತ್ತು ನಿನ್ನ ಪರಿವಾರ ಭಾರತವನ್ನೇ ಆಳುವಂತಾಗಲಿ’ ಎಂದುಬಿಟ್ಟನಂತೆ. ಈ ಕಥೆಯನ್ನು ಕೇಳಿದೊಡನೆ ನಾನು ಅಚ್ಚರಿಯಿಂದ ಅತ್ತ ತಿರುಗಿ, ಹಾಗಾಯಿತೇನು? ಎಂದಾಗ, ಕಾಂಗ್ರೆಸ್ಸಿನ ಆಳ್ವಿಕೆಯ ಒಂದು ಕುಟುಂಬದ ಅಧಿಕಾರಕ್ಕೆ ನೂರು ವರ್ಷ ಕಳೆಯುತ್ತಾ ಬಂತಲ್ಲ, ಎಂದರು. ತಲೆಕೆರೆದುಕೊಂಡು ನೋಡಿದರೆ ಮೋತಿಲಾಲ್ ನೆಹರೂ ಕಾಂಗ್ರೆಸ್ಸಿನ ಅಧ್ಯಕ್ಷರಾದದ್ದು 1919ರಲ್ಲಿ. ಮತ್ತೀಗ ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸ್ಪಷ್ಟತೆ ಬಂದಿದ್ದು 2019ರಲ್ಲಿ. ಬರೋಬ್ಬರಿ ನೂರು ವರ್ಷ! ಹೇಳಿದ ಪುಣ್ಯಾತ್ಮನ ಕಪೋಲಕಲ್ಪಿತ ಕಥೆಯೋ ಅಥವಾ ನಿಜವಾಗಿಯೂ ದೇವಿಯೇ ಹೇಳಿದ್ದಳೋ ನನಗಂತೂ ಗೊತ್ತಿಲ್ಲ. ಆದರೆ ಅಕ್ಷರಶಃ ಹೊಂದಾಣಿಕೆಯಂತೂ ಆಗುತ್ತಿದೆ. ಬೀದಿ-ಬೀದಿಗಳಲ್ಲಿ ರಾಹುಲ್ ಪಾದಯಾತ್ರೆ ಮಾಡುತ್ತಾ ಭಾರತವನ್ನು ಜೋಡಿಸುತ್ತೇನೆ ಎನ್ನುವಾಗ ಕಾಂಗ್ರೆಸ್ಸಿಗರ ಉತ್ಸಾಹ ಮುಗಿಲು ಮುಟ್ಟಿತ್ತು. ಕಾರ್ಯಕರ್ತರ ಗಡಣ ಬೀದಿಗಿಳಿದು ಅರಚಾಡುವಾಗ ಮುಂದಿನ ಐದ್ಹತ್ತು ವರ್ಷ ಇವರನ್ನು ಅಲುಗಾಡಿಸಲು ಸಾಧ್ಯವೇ ಇಲ್ಲವೇನೋ ಎನಿಸುತ್ತಿತ್ತು. ಮೋದಿ ಬೀದರ್‌ಗೆ ಕಾಲಿಟ್ಟರು ನೋಡಿ, ಎಲ್ಲರೂ ಚಡಪಡಿಸಲಾರಂಭಿಸಿದ್ದಾರೆ. ರಾಹುಲ್‌ನ ಯಾತ್ರೆಗೆ ಜನರನ್ನು ಕಷ್ಟಪಟ್ಟು ಕರೆತರುವುದಕ್ಕೂ, ಮೋದಿಯ ರ್ಯಾಲಿಗೆ ಜನ ಇಷ್ಟಪಟ್ಟು ಬರುವುದಕ್ಕೂ ಅಜಗಜಾಂತರವಿದೆ. ನಿಸ್ಸಂಶಯವಾಗಿ ಮೋದಿ ಭಾರತದ ಜನರ ಪಾಲಿನ ಸೂಪರ್ ಸ್ಟಾರ್. ಬಹುಶಃ ಅಟಲ್ ಬಿಹಾರಿ ವಾಜಪೇಯಿಯ ನಂತರ ಇಷ್ಟು ಜನಾನುರಾಗಕ್ಕೆ ಪಾತ್ರರಾದ ಮತ್ತೊಬ್ಬ ವ್ಯಕ್ತಿ ಬಂದಿರಲಿಕ್ಕಿಲ್ಲ. ವಾಜಪೇಯಿ ತಮ್ಮ ಖ್ಯಾತಿಯನ್ನು ಮತವಾಗಿ ಪರಿವರ್ತಿಸಿಕೊಳ್ಳುವಲ್ಲಿ ಸೋತರು. ಮೋದಿಯ ಹೆಗ್ಗಳಿಕೆಯೇನು ಗೊತ್ತೇ? ಅವರು ರ್ಯಾಲಿಗೆ ಬಂದ ಪ್ರತಿಯೊಬ್ಬ ವ್ಯಕ್ತಿಯನ್ನೂ ರಾಷ್ಟ್ರಭಕ್ತನಾಗಿಬಿಡುವಂತೆ ಮಾಡಿಬಿಡುವರು, ಅಲ್ಲಿಗೆ ಬಿಜೆಪಿಗೆ ಮತ ಖಾತ್ರಿ.

ನೀವು ಯೋಜನೆಗಳನ್ನು ರೂಪಿಸಿ, ಒಂದಷ್ಟು ಉಚಿತಗಳ ಘೋಷಣೆಮಾಡಿ, ಒಮ್ಮೆಯೋ ಎರಡು ಬಾರಿಯೋ ಮತಗಳಿಸಿಬಿಡಬಹುದು. ಆದರೆ ನಿಮ್ಮ ಸಾನಿಧ್ಯ ಮಾತ್ರದಿಂದಲೇ ಜನರ ಒಲವನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರೆ ಅದಕ್ಕೆ ದೈವೀಶಕ್ತಿಯೂ ಬೇಕು. ಕಾಂಗ್ರೆಸ್ಸು ಕೋಟಿಗಟ್ಟಲೆ ರೂಪಾಯಿ ಸುರಿದು ರಣನೀತಿ ರೂಪಿಸಲು ಜನರನ್ನು ಇಟ್ಟುಕೊಂಡಿದೆ. ಮೋದಿ ಸುಮ್ಮನೆ ನಾಲ್ಕು ಸುತ್ತು ತಿರುಗಾಡುತ್ತಾರೆ, ಜನ ಪ್ರೀತಿಯಿಂದ ಬಂದು ಮತಹಾಕಿ ಹೋಗುತ್ತಾರೆ. ಎಷ್ಟು ವಿಚಿತ್ರ ಅಲ್ಲವೇ?

ಮೋದಿಗಿರುವ ಶಕ್ತಿಯೇ ಅದು. ಅವರು ಜನರ ಹೃದಯದೊಂದಿಗೆ ನೇರವಾಗಿ ಮಾತನಾಡಬಲ್ಲರು. ಅವರು ಏನೇ ಮಾಡಿದರೂ ಅದು ನಾಟಕವೆನಿಸುವುದಿಲ್ಲ. ರಾಹುಲ್ ಅಪರೂಪಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರೂ ಅದು ಸತ್ಯವೆನಿಸುವುದಿಲ್ಲ. ಮೋದಿಯನ್ನು ಶಾಲೆಗೇ ಹೋಗದವರೆಂದು ಇವರೆಲ್ಲ ಜರಿದರೂ ಮೋದಿ ಬುದ್ಧಿವಂತರೆಂಬುದನ್ನು ಇಡಿಯ ಜಗತ್ತು ಒಪ್ಪುತ್ತದೆ. ರಾಹುಲ್ ಕೇಂಬ್ರಿಡ್ಜ್ ನಿಂದಲೇ ಬಂದಿದ್ದಾರೆ ಎಂದು ಇವರೆಲ್ಲ ಬಡಾಯಿ ಕೊಚ್ಚಿಕೊಂಡರೂ ಆತ ಏನೂ ಅರಿಯದ ಮುಗ್ದನೆಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ, ಸ್ವತಃ ಕಾಂಗ್ರೆಸ್ಸಿಗರಿಗೂ! ಮೋದಿ ಈ ದೇಶದ ಜನರ ಮೇಲಿನ ತಮ್ಮ ನಿಷ್ಕಳಂಕ ಪ್ರೀತಿಯಿಂದಲೇ ಗೆಲುವು ಸಾಧಿಸಿಬಿಟ್ಟರು. ಬಡತನವನ್ನು ಅನುಭವಿಸಿಯೇ ಮೇಲಕ್ಕೆ ಬಂದ ಆ ಪುಣ್ಯಾತ್ಮ ಅವರ ಬದುಕನ್ನು ಸುಂದರಗೊಳಿಸಲೆಂದೇ ಯೋಜನೆಗಳನ್ನು ರೂಪಿಸಿದರು. ಅದನ್ನು ಜಾರಿಗೆ ತರಲು ಹಗಲು-ರಾತ್ರಿ ಶ್ರಮಿಸಿದರು. ಹೀಗಾಗಿ ಪ್ರತೀ ಊರಿನ, ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಮೋದಿ ಯೋಜನೆಯಿಂದ ಉಪಕೃತನಾದವನೇ. ಬೇರೆಲ್ಲವನ್ನು ಬದಿಗಿಟ್ಟು ಕರೋನಾ ಕಾಲದ ಮೋದಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಗಡ್ಡ ಬಿಟ್ಟು, ಋಷಿಯಂತಾಗಿಬಿಟ್ಟಿದ್ದರು ಅವರು. ಅನೇಕ ರಾತ್ರಿಗಳನ್ನು ನಿದ್ದೆಮಾಡದೇ ಕಳೆಯುತ್ತಿದ್ದ ಅವರು ಸಭೆಗಳಿಗೆಂದು ಬಂದಾಗ ಕಣ್ಣು ಸೊರಗಿ ಹೋಗಿರುತ್ತಿತ್ತು. ತನ್ನವರನ್ನು ಕಳೆದುಕೊಳ್ಳುವ ಆತಂಕ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸದಾಕಾಲ ಉತ್ಸಾಹದ ಚಿಲುಮೆಯಂತಿರುತ್ತಿದ್ದ ಮೋದಿ ಆ ಸಂದರ್ಭದಲ್ಲಿ ಮಾತ್ರ ಸೋತು ಸುಣ್ಣವಾದವರಂತೆ ಕಾಣುತ್ತಿದ್ದರು. ದೀರ್ಘಕಾಲದಿಂದ ಕಾಡುತ್ತಿದ್ದ ಯಾವುದೋ ರೋಗ ಉಲ್ಬಣವಾದರೆ ನಮ್ಮ ಸ್ಥಿತಿ ಹೇಗಿರುತ್ತದೆಯೋ ಹಾಗೆ. ಆದರೆ ಮೋದಿ ಎಲ್ಲ ಭಾರವನ್ನೂ ತಾನೇ ಹೊತ್ತರು, ತನ್ನ ಶಿಲುಬೆಯನ್ನು ತಾನೇ ಹೊತ್ತ ಏಸುವಿಗಿಂತ ಕೆಟ್ಟದ್ದಾಗಿ. ಕಾಂಗ್ರೆಸ್ಸಿಗರಾದಿಯಾಗಿ ಬುದ್ಧಿಜೀವಿಗಳೂ ಸೇರಿದಂತೆ ಕೆಲವು ಮುಂಚೂಣಿಯ ನಾಯಕರು ವಿದೇಶೀ ವ್ಯಾಕ್ಸಿನ್‌ಗಳನ್ನು ಕೊಂಡುಕೊಳ್ಳುವುದೊಳಿತು ಎಂದು ಮುಗಿಬಿದ್ದಾಗ ಮೋದಿ ಎಲ್ಲ ನೋವನ್ನೂ ಸಹಿಸಿಕೊಂಡರು. ಎಲ್ಲವನ್ನೂ ಮೈಮೇಲೆಳೆದುಕೊಂಡು ಸಂಕಟ ಜನಸಾಮಾನ್ಯರಿಗೆ ತಲುಪದಂತೆ ತಾವೇ ನುಂಗಿದರು, ವಿಷಕಂಠನಂತೆ. ಅವರ ಈ ಸಾಹಸದ ಪ್ರತಿಫಲವಾಗಿಯೇ ಭಾರತದಲ್ಲಿ ವ್ಯಾಕ್ಸಿನ್‌ಗಳು ತಯಾರಾಗಿದ್ದು. ನಿಮಗೆ ನೆನಪಿರಬೇಕು, ಈ ವ್ಯಾಕ್ಸಿನ್ ಮೇಲೆ ವಿಶ್ವಾಸವಿಲ್ಲ ಎಂದಿದ್ದರು ಕಾಂಗ್ರೆಸ್ಸಿಗರು. ನಂಬಿಕಸ್ಥ ಅಮೇರಿಕನ್ ವ್ಯಾಕ್ಸಿನ್ ಬಳಸುವುದು ದೇಸೀ ವ್ಯಾಕ್ಸಿನ್ ಬಳಕೆಗಿಂತ ಉತ್ತಮ ಎಂದಿದ್ದರೂ ಕೂಡ. ಮೋದಿ ತಲೆಕೆಡಿಸಿಕೊಳ್ಳಲಿಲ್ಲ. ಈ ನಾಡಿನ ವಿಜ್ಞಾನಿಗಳ ಮೇಲೆ ಅಪಾರವಾದ ಭರವಸೆಯನ್ನಿಟ್ಟು ವ್ಯಾಕ್ಸಿನ್ ಅನ್ನು ಮಾರುಕಟ್ಟೆಗೆ ತರಲು ಶ್ರಮಿಸಿದರು. ಅತ್ತ ಅಮೇರಿಕಾದ ವ್ಯಾಕ್ಸಿನ್ಗಳು ಈಗ ಜನರ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡುತ್ತಿದ್ದರೆ ಭಾರತದ ವ್ಯಾಕ್ಸಿನ್‌ಗಳು ಕರೋನಾಕ್ಕೆ ಇತಿಶ್ರೀ ಹಾಡಿ, ಜಗತ್ತಿನ ಹುಬ್ಬೇರುವಂತೆ ಮಾಡಿವೆ. ಹಾಗೆ ಸುಮ್ಮನೆ ಕರೋನಾ ಕಾಲದಲ್ಲಿ ಮೋದಿಯ ಜಾಗದಲ್ಲಿ ರಾಹುಲ್ ಇದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹಿಸಿ ನೋಡಿ, ಗಾಬರಿಯಾಯ್ತಲ್ಲವೇ? ಮೋದಿ ಅಂಥದ್ದೊಂದು ಬಲವಾದ ಛಾಪನ್ನು ಭಾರತೀಯರ ಹೃದಯದೊಳಗೆ ಒತ್ತಿಬಿಟ್ಟಿದ್ದಾರೆ.

ಕಾಂಗ್ರೆಸ್ಸಿಗೆ ಬಡವರ ಕುರಿತಂತೆ ಮಾತನಾಡುವುದೆಂದರೆ ಆನಂದವೋ ಆನಂದ. ದೇಶದಲ್ಲಿ ಹೆಚ್ಚು-ಹೆಚ್ಚು ಬಡವರಿದ್ದಷ್ಟೂ ಅವರ ಮತಗಳಿಗೆ ಹೆಚ್ಚುತ್ತದೆ. ಬಡತನ ಎನ್ನುವುದು ಸಂಪತ್ತಿನ ಕೊರತೆಯಿಂದ ಉಂಟಾಗುವಂಥದ್ದಲ್ಲ. ಅದೊಂದು ಅತೃಪ್ತ ಮಾನಸಿಕತೆ. ದಿನಕ್ಕೆ ಒಂದು ಹೊತ್ತು ಊಟ ಮಾಡುವವನು ತನ್ನ ತಾನು ಸುಖಿ ಎಂದು ಭಾವಿಸಿ ಆನಂದದಿಂದ ಕಾಲ ಕಳೆದುಬಿಡುತ್ತಾನೆ. ಅದೇ ವೇಳೆಗೆ ತಿಂಗಳಿಗೆ ಎರಡು ಲಕ್ಷ ಸಂಪಾದಿಸುವ ವ್ಯಕ್ತಿಯೂ ತನಗೆ ಸಾಕಾದಷ್ಟು ಸಿಗುತ್ತಿಲ್ಲವೆಂದು ಗೋಳಾಡುತ್ತಲೇ ಇರುತ್ತಾನೆ. ಕಾಂಗ್ರೆಸ್ಸು ಬಿಟ್ಟಿ ಭಾಗ್ಯಗಳನ್ನು ಕೊಡುವ ನೆಪದಲ್ಲಿ ಹೀಗೆ ಗೋಳಾಡುವವರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಬಡವರು ಹೆಚ್ಚಾದಷ್ಟು ಅವರ ಬೇಳೆ ಚೆನ್ನಾಗಿ ಬೇಯುತ್ತದೆ. ಮುಸಲ್ಮಾನರು ಹೆಚ್ಚಾದಷ್ಟು ಏಕತ್ರಗೊಂಡ ಹಿಂದೂಗಳ ಭೀತಿಯನ್ನು ಅವರ ಹೃದಯದೊಳಗೆ ತುಂಬಿ ಮತ ಪಡೆಯಲು ಅವರಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಮಾಜ ಮೇಲು-ಕೀಳು, ಬಡವ-ಸಿರಿವಂತ, ಹಿಂದೂ-ಮುಸ್ಲೀಂ ಎಂದು ಒಡೆದಂತೆಲ್ಲ ಆನಂದವಾಗೋದು ಕಾಂಗ್ರೆಸ್ಸಿಗೇ. ಆದರೆ ಮೋದಿ ಇದನ್ನು ಪೂರ್ಣ ಬದಲಾಯಿಸಿದರು. ಅವರು ಬಡವರೆನಿಸಿಕೊಂಡವರ ಆತ್ಮಗೌರವವನ್ನು ಯಾವ ಮಟ್ಟಕ್ಕೊಯ್ದರೆಂದರೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ. ಜನವರಿ 26ಕ್ಕೆ ವಿಶ್ವವಿಖ್ಯಾತ ಪರೇಡ್ ನಡೆಯುತ್ತಲ್ಲ, ಪ್ರತಿವರ್ಷ ಅದನ್ನು ನೋಡಲು ವಿಐಪಿಗಳೆಲ್ಲ ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ. ಈ ವರ್ಷ ಮೋದಿ ಅಲ್ಲಿ ಕೂರಲು ಜಾಗಮಾಡಿಕೊಟ್ಟದ್ದು ಯಾರಿಗೆ ಗೊತ್ತೇನು? ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಕೆಲಸ ಮಾಡಿದ, ಕಾಶಿ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಕಾರಕೂನರ ಕುಟುಂಬಗಳಿಗೆ. ಇಂದು ಕಾರ್ಮಿಕರ ದಿನ ಬೇರೆ. ವರ್ಷಗಟ್ಟಲೆ ಕಾರ್ಮಿಕರ ಹೆಸರು ಹೇಳುತ್ತಾ ಪ್ರತಿಭಟನೆಗೆ ಬೀದಿಗೆ ಬಂದು ನಿಲ್ಲುವ ಕಮ್ಯುನಿಸ್ಟ್ ಮಂದಿಯೂ ಅಧಿಕಾರದಲ್ಲಿದ್ದಾಗ ಇಂಥದ್ದೊಂದು ಆಲೋಚನೆ ಮಾಡಿರಲಿಲ್ಲ. ಕೈಯ್ಯಲ್ಲಿ ಕರಣಿ ಹಿಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ತಾನು ಈ ಕೆಲಸ ಮಾಡುತ್ತಿರುವುದಕ್ಕೆ ಈಗ ಬೇಸರವೂ ಇಲ್ಲ, ಅವಮಾನ ಎನಿಸುವುದೂ ಇಲ್ಲ. ಏಕೆಂದರೆ ತಮ್ಮದ್ದೇ ಸಂಕುಲದ ಮಂದಿ ವಿಐಪಿಗಳಂತೆ ಗಣರಾಜ್ಯೋತ್ಸವದ ಪರೇಡ್ ನೋಡಲು ಕುಳಿತಿದ್ದಾರಲ್ಲ. ಇಂದು ಯಾರನ್ನು ಕಾರಕೂನರೆಂದು ಕರೆಯುತ್ತೇವಲ್ಲ, ಅವರು ಕಡಿಮೆ ದುಡಿಯುತ್ತಿಲ್ಲ. ನೀವು ಕೊಡುವ ಉಚಿತ ಕೊಡುಗೆ ಅವರಿಗೆ ಬೇಕೇ ಇಲ್ಲ. ಅವರ ವೃತ್ತಿಯನ್ನು ಜನ ಆಯ್ದುಕೊಳ್ಳದಿರುವುದಕ್ಕೆ ಆತ್ಮಗೌರವದ ಕೊರತೆಯ ಕಾರಣವಿದೆಯಲ್ಲ, ಅದನ್ನು ಸರಿಪಡಿಸಬೇಕಷ್ಟೇ. ಮೋದಿ ಅದನ್ನು ಮಾಡುತ್ತಿರುವುದರಿಂದಲೇ ಅವರೆಲ್ಲರಿಗೂ ಮೋದಿಯನ್ನು ಕಂಡಾಗ ದೇವರನ್ನು ಕಂಡಂತೆ ಆಗೋದು!

ಕಾಂಗ್ರೆಸ್ಸಿಗರ ಪಾಲಿಗೆ ಬಡವರು ಎಂದರೆ ದಡ್ಡರು ಎಂದರ್ಥ. ಹೀಗಾಗಿಯೇ ನೋಟ್‌ಬ್ಯಾನ್ ಮಾಡಿ ಜನರ ಕೈಗೆ ಡಿಜಿಟಲ್ ಮನಿ ಕೊಡುತ್ತೇವೆ ಎಂದು ಮೋದಿ ಹೇಳಿದಾಗ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕುಹಕ ಮಾಡಿದ್ದರು. ಈ ದೇಶದ ಹಳ್ಳಿಗನಿಗೆ ಮೊಬೈಲ್ ಬಳಸಲು ಬರುವುದಿಲ್ಲ, ಆಧುನಿಕ ತಂತ್ರಜ್ಞಾನದ ಅರಿವಿಲ್ಲ, ಅಂಥವನಿಂದ ಏನನ್ನು ನಿರೀಕ್ಷಿಸುತ್ತೀರಿ ಎಂದಿದ್ದರು. ಮೋದಿ ಅಂದಿನ ದಿನ ಏನೂ ಮಾತನಾಡಲಿಲ್ಲ. ಆದರೆ ಇಂದು ಜಗತ್ತಿನ ಹೆಚ್ಚು ಡಿಜಿಟಲ್ ವಹಿವಾಟನ್ನು ಭಾರತವೇ ನಡೆಸುತ್ತಿದೆ ಎಂಬುದು ಅರಿವಾದಾಗ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ. ಯಾವ ಹಳ್ಳಿಯ ಜನರನ್ನು ದಡ್ಡರೆಂದು ಕರೆದು ಸುಮಾರು 65 ವರ್ಷಗಳ ಕಾಲ ಇವರು ಆಳ್ವಿಕೆ ನಡೆಸಿದ್ದರೋ ಅದೇ ಹಳ್ಳಿಗರು ಇಂದು ಭಾರತದ ಆರ್ಥಿಕತೆ ಸದೃಢಗೊಳ್ಳಲು ಬಲವಾದ ಬೆನ್ನೆಲುಬಾಗಿಬಿಟ್ಟಿದ್ದಾರೆ. ಮೋದಿ ಇಟ್ಟ ಈ ವಿಶ್ವಾಸವನ್ನು ಹಳ್ಳಿಯಲ್ಲಿರುವ ಆ ಬಡಮಂದಿ ಮರೆಯುವುದಾದರೂ ಹೇಗೆ? ಅದಕ್ಕೆ ಮೋದಿ ತಮ್ಮೂರಿನ ಬಳಿ ಬರುತ್ತಿದ್ದಾರೆಂದರೆ ಆ ಜನ ಯಾವ ಪ್ರಶ್ನೆಯನ್ನೂ ಕೇಳದೇ ಧಾವಿಸಿಬರುತ್ತಾರೆ. ಅವರಿಗೆ ಕಾರ್ಯಕ್ರಮಕ್ಕೆ ಬರಲು ದುಡ್ಡು ಬೇಕಾಗುವುದಿಲ್ಲ, ಏಕೆಂದರೆ ತಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿದ ತಮ್ಮ ಪಾಲಿನ ದೇವರನ್ನು ಅವರಲ್ಲಿ ನೋಡುತ್ತಾರೆ.

ಕಾಂಗ್ರೆಸ್ಸು ಇಷ್ಟಕ್ಕೇ ನಿಲ್ಲಲಿಲ್ಲ. ಬಡವರು ಸದಾ ತಮ್ಮ ದಾಸರಾಗಿರಬೇಕೆಂದು ಅವರು ಆಲೋಚಿಸಿದರು. ಹೀಗಾಗಿಯೇ ಒಬ್ಬ ಒಮ್ಮೆ ಅಧಿಕಾರಕ್ಕೆ ಬಂದನೆಂದರೆ ಅವನ ಮಕ್ಕಳು, ಮೊಮ್ಮಕ್ಕಳೇ ಅಲ್ಲಿ ಕುಳಿತುಕೊಂಡು ಉಳಿದವರನ್ನೆಲ್ಲ ಕಾಲಡಿ ಕಸದಂತೆ ಕಂಡರು. ಸ್ವಲ್ಪ ಎಡವಟ್ಟಾಗಿದ್ದರೆ ಬಿಜೆಪಿ ಅದೇ ದಿಕ್ಕಿಗೆ ಹೋಗಿರುತ್ತಿತ್ತು. ನರೇಂದ್ರಮೋದಿ ಸಾಧ್ಯವಾದಷ್ಟು ಬದಲಾವಣೆಗೆ ಕೈಹಾಕಿದರು. ಅನೇಕ ಕಡೆಗಳಲ್ಲಿ ಯಾರೂ ಊಹಿಸದಿದ್ದ ಕಾರ್ಯಕರ್ತರಿಗೆ ಅವಕಾಶಕೊಟ್ಟರು. ಆರೇಳು ಬಾರಿ ಗೆದ್ದು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದವರನ್ನು, ಪಕ್ಷಕ್ಕೆ ತೊಂದರೆ ಉಂಟುಮಾಡಬಹುದೆಂದು ಗೊತ್ತಿದ್ದರೂ ಮುಲಾಜಿಲ್ಲದೇ ಮನೆಗೆ ಕಳಿಸಿದರು. ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತನಾಗಿರುವುದೆಂದರೆ ಜೀವನಪರ್ಯಂತ ಪರಿವಾರದ ಗುಲಾಮನಾಗಿರುವುದೆಂದರ್ಥ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ದುಡಿಯುವುದೆಂದರೆ ಒಂದಲ್ಲ ಒಂದು ದಿನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವುದೆಂದರ್ಥ. ಕಾಂಗ್ರೆಸ್ಸು ತನ್ನ ಅವಧಿಯುದ್ದಕ್ಕೂ ಹೆಚ್ಚು ‘ದೊಡ್ಡ ಮನುಷ್ಯ’ರನ್ನು ಸೃಷ್ಟಿಸಿದೆ. ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಮಾಡಿಕೊಂಡ ದೊಡ್ಡವರು. ಇವರನ್ನು ಹತಾಶೆಯ ಕಂಗಳಿಂದ ನೋಡುತ್ತಾ ನಿಂತ ಆ ಬಡ-ಮಧ್ಯಮ ವರ್ಗದವರು ಈ ದೇಶದ ಕಥೆಯಿಷ್ಟೇ ಎಂದುಕೊಳ್ಳುತ್ತಾ ತಮ್ಮ ವ್ಯಾಪ್ತಿಯಲ್ಲಿ ಒಂದಷ್ಟು ಹಣ ಮಾಡಿಟ್ಟುಕೊಂಡು ಸುಮ್ಮನಾಗಿಬಿಡುತ್ತಿದ್ದರು. ಮೋದಿ ಮುಲಾಜಿಲ್ಲದೇ ಈ ದೊಡ್ಡವರ ಬಾಲ ಕತ್ತರಿಸಿಬಿಟ್ಟರು. ಅನೇಕರನ್ನು ಜೈಲಿಗೂ ತಳ್ಳಿದರು. ಮೊದಲೆಲ್ಲ ವಿಮಾನದಲ್ಲಿ ಈ ದೊಡ್ಡ ಮನುಷ್ಯರು ಮಾತ್ರ ತಿರುಗಾಡುತ್ತಿದ್ದರು. ಮೋದಿ ಹವಾಯಿ ಚಪ್ಪಲಿಯವರನ್ನೂ ವಿಮಾನ ಹತ್ತಿಸಿದರು. ಬಡವರ ಓಟಾಟದ ರೈಲುಗಳೆಂದರೆ ಕೊಳಕು, ಸಮಯ ಮೀರಿದ್ದು, ರೈಲ್ವೇ ನಿಲ್ದಾಣಗಳಂತೂ ಕೇಳಲೇಬೇಡಿ. ಮೋದಿ ಬಡವರು ಹೆಚ್ಚಾಗಿ ಬಳಸುವ ಈ ವ್ಯವಸ್ಥೆಯನ್ನು ಅತ್ಯುತ್ಕೃಷ್ಟ ಮಟ್ಟಕ್ಕೇರಿಸಲು ಪ್ರಯತ್ನ ಹಾಕಿದರು. ಇಂದು ಅನೇಕ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ರೂಪಿಸಲ್ಪಟ್ಟಿವೆ. ಅಂದರೆ ಉಚಿತವಾಗಿ ಏನೂ ಕೊಡಬೇಕಾಗಿಲ್ಲ, ಅವನ ಬದುಕಿನ ಮಟ್ಟವನ್ನು ಏರಿಸಲು ಏನು ಬೇಕೋ ಅದನ್ನು ಮಾಡಿದರಾಯ್ತು ಎಂಬುದು ಮೋದಿಯವರ ಸಿದ್ಧಾಂತ.

ಇಷ್ಟಾದರೂ ನಮಗೆ ನಮ್ಮ ಬದುಕಿನ ಮಟ್ಟ ಏರುವುದು ಬೇಕಾಗಿಲ್ಲ, ತುತ್ತು ಕೂಳಿಗೆ ಕೈಚಾಚಿಕೊಂಡು ಬದುಕುವುದೇ ಬೇಸೆನಿಸಿದರೆ ಕಾಂಗ್ರೆಸ್ಸಿಗೇ ಮತ ಹಾಕಬೇಕಷ್ಟೇ. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸ್ವಾಭಿಮಾನಿ ಕನ್ನಡಿಗ ಎಂದೆನಿಸಿದರೆ ನಿಸ್ಸಂಶಯವಾಗಿ ಮೋದಿಯ ಹಿಂದೆ ನಿಲ್ಲಬೇಕು. ಈ ಬಾರಿ ಮೋದಿಗೆ ಬಹುಮತ ಕೊಟ್ಟುಬಿಡೋಣ. ಪ್ರತೀಬಾರಿ ನಮ್ಮ ಜಾತಿಯ ಮಂತ್ರಿ-ಮುಖ್ಯಮಂತ್ರಿ ಎಂದೆಲ್ಲ ಬಡಿದಾಡುತ್ತೇವಲ್ಲ, ಈ ಒಂದು ಬಾರಿ ನಾಡುಕಟ್ಟಿದ ಮೈಸೂರಿನ ಮಹಾರಾಜರಂತಹ ದೂರದೃಷ್ಟಿಯ ನಾಯಕನೊಬ್ಬ ಅಧಿಕಾರಕ್ಕೇರಲೆಂದು ಪ್ರಾರ್ಥಿಸೋಣ. ಒಮ್ಮೆ ಮೋದಿಯನ್ನು ನಂಬೋಣ, ರಾಜ್ಯದಲ್ಲಿ ಅವರು ಕೇಳಿಕೊಂಡಂತೆ ಬಹುಮತದ ಸರ್ಕಾರ ತರೋಣ. ಏನಂತೀರಿ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s