ಭಾರತ್ ತೊಡೊದ ಅಂತಿಮ ಚರಣ ಕೇಂಬ್ರಿಡ್ಜ್ ಭಾಷಣ!

ಭಾರತ್ ತೊಡೊದ ಅಂತಿಮ ಚರಣ ಕೇಂಬ್ರಿಡ್ಜ್ ಭಾಷಣ!

ಮೊದಲ ಬಾರಿ ರಾಹುಲ್‌ನ ಪೂರ್ಣ ಭಾಷಣ ಕೇಳಿದೆ. ಎಂದಿಗೂ ಹತ್ತು ನಿಮಿಷಕ್ಕಿಂತ ಹೆಚ್ಚು ಕೇಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಈ ಬಾರಿ ಆತನ ಕೇಂಬ್ರಿಡ್ಜ್‌ ‌ನ ಭಾಷಣವನ್ನು ಪಟ್ಟುಹಿಡಿದು ಕೇಳಿದೆ. ಒಬ್ಬ ವ್ಯಕ್ತಿ ತಾನು ಹುಟ್ಟಿದ ದೇಶವನ್ನೇ, ತಾನು ಆಳಲು ಬಯಸುವ ದೇಶವನ್ನೇ ಇಷ್ಟೊಂದು ದ್ವೇಷಿಸಲು ಹೇಗೆ ಸಾಧ್ಯ ಎಂದು ತಿಳಿಯಬೇಕಿತ್ತು. ತನ್ನ ದೇಶಕ್ಕೆ ಶತ್ರುವಾಗಿ ಕಾಡುತ್ತಿರುವ, ತನ್ನ ದೇಶದ ನಾಶವನ್ನು ಬಯಸುತ್ತಿರುವ ಮತ್ತೊಂದು ರಾಷ್ಟ್ರವನ್ನು ಯಾರಾದರೊಬ್ಬರು ಎಷ್ಟೆಲ್ಲಾ ಪ್ರೀತಿಸಬಹುದು ಎಂಬುದನ್ನು ಅರಿಯಲಿಕ್ಕೆ ಈ ಭಾಷಣ ಕೇಳಲೇಬೇಕಾಯಿತು. ಕಾಂಗ್ರೆಸ್ಸಿನ ಮೇಲ್ಮಟ್ಟದ ನಾಯಕರು ಈ ಭಾಷಣವನ್ನು ಸಂಭ್ರಮಿಸುತ್ತಿದ್ದಾರೆ. ಅದು ಭಾಷಣದ ವಿಷಯವಸ್ತುವಿಗಾಗಿ ಅಲ್ಲ, ಕೇಂಬ್ರಿಡ್ಜ್ ನಲ್ಲಿ ಮಾತನಾಡಿದ ಎಂಬುದಕ್ಕಾಗಿ. ಕೇಂಬ್ರಿಡ್ಜ್ ನಮ್ಮೆಲ್ಲ ವಿಶ್ವವಿದ್ಯಾಲಯಗಳಿಗಿಂತಲೂ ಶ್ರೇಷ್ಠವಾದುದು ಎಂಬ ಗುಲಾಮೀ ಮಾನಸಿಕತೆಯ ಪರಿಣಾಮ ಅದು. ಈ ಹಿಂದೆ ಶಶಿತರೂರ್ ಕೂಡ ವಿದೇಶಗಳಲ್ಲಿ ಕೆಲವೊಂದು ಭಾಷಣ ಮಾಡಿದ್ದಾರೆ. ಆತ ಯಾವ ಪಾರ್ಟಿಯವನು ಎಂಬುದನ್ನೂ ಲೆಕ್ಕಕ್ಕಿರಿಸಿಕೊಳ್ಳದೇ ಆ ಭಾಷಣವನ್ನು ಕೇಳಿದ್ದಷ್ಟೇ ಅಲ್ಲ, ನಮ್ಮಲ್ಲನೇಕರು ಇತರರೊಂದಿಗೂ ಹಂಚಿಕೊಂಡಿದ್ದರು. ತರೂರರ ಎರಾ ಆಫ್ ಡಾರ್ಕ್‌ನೆಸ್ ಇಂದಿಗೂ ನನ್ನ ಫೇವರಿಟ್ ಕೃತಿಗಳಲ್ಲೊಂದು. ಪಕ್ಷ ಯಾವುದೆಂಬುದು ಮುಖ್ಯವಲ್ಲ. ನೀವು ಪ್ರತಿನಿಧಿಸುತ್ತಿರುವ ದೇಶ ಯಾವುದೆಂಬುದು ಬಲುಮುಖ್ಯ. ರಾಹುಲ್‌ನ ಕೇಂಬ್ರಿಡ್ಜ್ ಭಾಷಣದಲ್ಲಿ ಅನುಮಾನವುಂಟಾಗುವುದು ಇಲ್ಲಿಯೇ. ಈ ಲೇಖನದುದ್ದಕ್ಕೂ ಒಂದಷ್ಟು ವಿಶ್ಲೇಷಣೆ ಮುಂದಿರಿಸುವೆ, ಸರಿಯೆನಿಸಿದರೆ ಸ್ವೀಕರಿಸಿ. 

ಭಾಷಣವನ್ನು ಆರಂಭಿಸುತ್ತಾ ರಾಹುಲ್ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದ ಪಾರ್ಲಿಮೆಂಟು ಅಪಾಯದಲ್ಲಿದೆ ಎನ್ನುತ್ತಾನೆ. ಅದರ ಕಾರಣದಿಂದಾಗಿಯೇ ಮಾಧ್ಯಮ ಮತ್ತು ನ್ಯಾಯವ್ಯವಸ್ಥೆಯೂ ಪ್ರಜಾಪ್ರಭುತ್ವದ ನೇತೃತ್ವ ವಹಿಸದೇ ನಾಶ ಹೊಂದಿಬಿಟ್ಟಿವೆ ಎನ್ನುತ್ತಾನೆ. ಇತ್ತೀಚೆಗೆ ತಾನೇ ಭಾರತದ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ಅವರು ಎಲೆಕ್ಷನ್ ಕಮಿಷನರ್ ನೇಮಕದ ಹೊತ್ತಲ್ಲಿ ಪ್ರಧಾನಮಂತ್ರಿ, ವಿಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಜೊತೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸುಪ್ರೀಂಕೋರ್ಟು ಸರ್ಕಾರದ ಪರವಾಗಿ ನಿಂತಿದ್ದರೆ ಹೀಗೊಂದು ನಿರ್ಣಯ ಬರುತ್ತಿತ್ತೇನು? ಅಚ್ಚರಿಯೇನು ಗೊತ್ತೇ? ಬಿಜೆಪಿಗೆ ಮತ ಹಾಕುವ ಬಹುತೇಕ ಮಂದಿ ಸುಪ್ರೀಂಕೋರ್ಟು ಬಿಜೆಪಿಯ ವಿರೋಧಿಗಳಿಗೆ ಮಧ್ಯರಾತ್ರಿಯಲ್ಲಿ ಬಾಗಿಲು ತೆಗೆದು ವಿಶೇಷ ಆತಿಥ್ಯ ನೀಡುವುದನ್ನು ದಿನ ಬೆಳಗಾದರೆ ವಿರೋಧಿಸುತ್ತಾರೆ. ಮಾಧ್ಯಮಗಳು ಸರ್ಕಾರದ ಪರವಾಗಿವೆ ಎಂದೆನ್ನುವ ರಾಹುಲ್ ಭಾರತ್ ಜೊಡೊಗೆ ಸಿಕ್ಕ ಪ್ರಚಾರ ಮತ್ತು ಅಲ್ಲಿ ಬಂದ ಮಾಧ್ಯಮದ ಮಂದಿ, ಅರವಿಂದ್ ಕೇಜ್ರಿವಾಲನ ಎಲ್ಲ ಕುಕರ್ಮಗಳನ್ನು ನೋಡಿಯೂ ನೋಡದಂತೆ ಸುಮ್ಮನಿರುವ ಪರಿ ಇವೆಲ್ಲವನ್ನೂ ಒಮ್ಮೆ ತುಲನೆ ಮಾಡಿ ನೋಡಿದರೊಳಿತು. ಇನ್ನು ಸಂಸತ್ತಿನ ಸುದ್ದಿಗೇ ಬರುವುದಾದರೆ ಅಧಿವೇಶನಕ್ಕೆ ಒಂದೆರಡು ದಿನಗಳ ಮುನ್ನವೇ ತವಾಂಗ್‌ನಲ್ಲಿ ಭಾರತ-ಚೀನಾದ ಗಲಾಟೆ ನಡೆದ ಸುದ್ದಿ ಕಾಂಗ್ರೆಸ್ಸಿಗೆ ಸಿಗುತ್ತದೆ. ಅಧಿವೇಶನದ ಕೆಲವು ದಿನ ಮುನ್ನವೇ ಹಿಂಡನ್‌ಬರ್ಗ್‌ನ ವರದಿ ಬಂದು ಅದಾನಿಯ ಶೇರುಗಳು ಕುಸಿಯಲಾರಂಭಿಸುತ್ತವೆ. ಅಧಿವೇಶನಕ್ಕೆ ಕೆಲವು ದಿನ ಮುನ್ನವೇ ಗಾಲ್ವಾನ್ ಕದನ ನಡೆಯುತ್ತದೆ. ಅಧಿವೇಶನಕ್ಕೆ ಕೆಲವು ದಿನ ಮುನ್ನವೇ ಪೆಗಾಸಸ್ ಹಗರಣದ ಆರೋಪವನ್ನು ಕಾಂಗ್ರೆಸ್ಸು ಮಾಡುತ್ತದೆ. ಅಧಿವೇಶನಕ್ಕೂ ಈ ಎಲ್ಲ ಘಟನೆಗಳಿಗೂ ಏನು ಸಂಬಂಧ? ಕಾಂಗ್ರೆಸ್ಸಿಗೆ ಅಧಿವೇಶನಕ್ಕೆ ಒಂದೆರಡು ದಿನಗಳ ಮುನ್ನವೇ ಈ ಎಲ್ಲ ಘಟನೆಗಳ ವಿವರ ಸಿಗುವುದಾದರೂ ಹೇಗೆ? ಒಟ್ಟಾರೆ ಸಂಸತ್ತಿನ ಚಿತ್ರಣವನ್ನು ವಿಪರೀತವಾಗಿ ತೋರಿಸುವ ಬಯಕೆ ಕಾಂಗ್ರೆಸ್ಸಿಗೆ ಏಕೆ? ಅಂತಿಮವಾಗಿ ಭಾರತದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಹೇಳುವ ಉದ್ದೇಶ ತಾನೇ? ಈ ಭಾಷಣದಲ್ಲಿ ಮಾತನಾಡುವ ರಾಹುಲ್ ಪ್ರತಿಭಟನೆಗೆ ಸಂಸತ್ ಭವನದ ಹೊರಗೆ ಕೂತ ಸಂಸತ್ ಸದಸ್ಯರನ್ನು ಬಲಪ್ರಯೋಗ ಮಾಡಿ ಒಳತಳ್ಳಲಾಗುತ್ತದೆ ಎಂದಿದ್ದಾನೆ. ಭಾರತದಲ್ಲಿ ಕುಳಿತು ಇದನ್ನು ಕೇಳುವ ಪ್ರತಿಯೊಬ್ಬನಿಗೂ ಇದು ಹಾಸ್ಯಾಸ್ಪದವೆನಿಸದೇ ಇರಲಾರದು. ಇಷ್ಟಕ್ಕೂ ಇವನ ಅಜ್ಜಿ ಈ ದೇಶದ ಪ್ರಧಾನಿಯಾಗಿದ್ದಾಗ ಸಂಸತ್ತೂ ನಡೆಯುತ್ತಿರಲಿಲ್ಲ, ಪತ್ರಿಕೆಗಳಿಗೆ ಸ್ವಾತಂತ್ರ್ಯ ಇರಲಿಲ್ಲ, ರಾಜಕೀಯ ವಿರೋಧಿಗಳನ್ನು ಹಿಡಿದು ಜೈಲಿಗಟ್ಟಲಾಗುತ್ತಿತ್ತು, ಕೊನೆಗೆ ಸಾಮಾನ್ಯ ಜನರ ಬದುಕೇ ದುಸ್ಸಹವಾಗಿತ್ತು. ಹೌದು, ಭಾರತದ ಇತಿಹಾಸದ ಕರಾಳ ಅಧ್ಯಾಯವಾದ ಎಮರ್ಜೆನ್ಸಿಯನ್ನು ಬರೆದಿದ್ದು ಕಾಂಗ್ರೆಸ್ಸಿನ ಇಂದಿರಾಳೇ. ಪ್ರಜಾಪ್ರಭುತ್ವವೆಂಬುದು ಭಾರತದಲ್ಲಿ ಸತ್ತಿದೆ ಎನ್ನುತ್ತಾರಲ್ಲ ರಾಹುಲ್ ಅದು ಅವನಜ್ಜಿಯ ಕಾಲದ ಕಥೆ. ಅವರಮ್ಮ ಏನು ಕಡಿಮೆ ಇರಲಿಲ್ಲ. ಮಾತೇ ಆಡದ ಮನಮೋಹನ ಸಿಂಗರನ್ನು ಕೂರಿಸಿಕೊಂಡು ತನಗೆ ಅನಿಸಿದ್ದನ್ನು ಮಾಡುತ್ತಲೇ ಹೋದರು. ಪ್ರಜಾಪ್ರಭುತ್ವ ಆಗ ಅಕ್ಷರಶಃ ಸತ್ತೇಹೋಗಿತ್ತು! ಮನಮೋಹನ್ ಸಿಂಗರನ್ನು ಬದಿಗೆ ಸರಿಸಿ ಮೋದಿಯನ್ನು ಅಧಿಕಾರಕ್ಕೆ ತರಲು ಜನ ದಂಡು-ದಂಡಾಗಿ ಬೀದಿಗೆ ಬಂದರಲ್ಲ, ಅದು ಈ ಕಾರಣಕ್ಕಾಗಿಯೇ. ರಾಹುಲ್ಗೆ ಇವೆಲ್ಲವನ್ನೂ ಮತ್ತೊಮ್ಮೆ ನೆನಪಿಸಬೇಕಿದೆ. 

ವಿದೇಶಿಗರ ಮುಂದೆ ಮಾತನಾಡುತ್ತಾ ರಾಹುಲ್ ಪೆಗಾಸಸ್ ಎಂಬ ಆಪ್ನ ಮೂಲಕ ಸರ್ಕಾರ ತಾನಾಡಿದ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದೆ ಎಂದು ಹೇಳುವಾಗ ಸ್ವಲ್ಪವಾದರೂ ಎಚ್ಚರಿಕೆ ವಹಿಸಬೇಕಿತ್ತು. ಈ ಕಾರಣಕ್ಕಾಗಿ ಕಂಠಮಟ್ಟ ಕೂಗಾಡಿದ ಕಾಂಗ್ರೆಸ್ಸಿಗರು ಸುಪ್ರೀಂಕೋರ್ಟಿನ ಮೆಟ್ಟಿಲು ಹತ್ತಿದ್ದರು. ತಾನೇ ಒಂದು ಕಮಿಟಿಯನ್ನು ರಚಿಸಿ ವಿಚಾರಣೆಗೆ ಯತ್ನಿಸಿದ ನ್ಯಾಯಾಲಯ ಕೊನೆಗೂ ಈ ಆರೋಪದಲ್ಲಿ ಹುರುಳಿಲ್ಲ ಎಂದು ತೀರ್ಪುಕೊಟ್ಟಿತು. ಈ ನಾಡಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರವೂ ವಿದೇಶಗಳಲ್ಲಿ ಈ ರೀತಿ ಮಾತನಾಡುವ ವ್ಯಕ್ತಿಯನ್ನು ಜವಾಬ್ದಾರಿಯುತ ನಾಗರಿಕನೆನ್ನಬಹುದೇನು? ಆತನ ಕೈಗೆ ದೇಶದ ಚುಕ್ಕಾಣಿಯನ್ನು ಕೊಡಬಹುದೇನು? ವಾಸ್ತವವಾಗಿ ಆತ ತನ್ನ ಮೇಲೆ ಅನುಕಂಪ ಬರುವಂತೆ ಮಾತನಾಡುತ್ತಿದ್ದ. ತಾನು ಎಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತದಲ್ಲಿ ನೆಲೆ ನಿಂತಿದ್ದೇನೆ ಎಂದು ಅಂತರ್ರಾಷ್ಟ್ರೀಯ ವೇದಿಕೆ ಮೇಲೆ ಆತ ಹೇಳಬೇಕಿತ್ತು. ತನ್ನ ದೇಶವನ್ನು ಜರಿದಾದರೂ ಸರಿಯೇ ಆತ ಹೇಳಬೇಕಿತ್ತು!

ಮುಂದುವರೆಸಿ ಆತ ಗಾಂಧೀಜಿಯವರ ಸತ್ಯಾಗ್ರಹದ ಕಲ್ಪನೆಯನ್ನಿಟ್ಟುಕೊಂಡೇ ಭಾರತ್ ಜೊಡೊ ಯಾತ್ರೆ ನಡೆಸಿದ್ದು ಎನ್ನುತ್ತಾನೆ. ತನಗೆ ಬೇಕಾದ್ದನ್ನು ಸಾತ್ವಿಕ ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಪ್ರಯತ್ನ ಅದು. ಆತನ ಯಾತ್ರೆ ಗಾಂಧೀಜಿಯ ಮಾರ್ಗದ್ದಾದರೆ ಅಡ್ವಾಣಿಯ ರಾಮಮಂದಿರ ಯಾತ್ರೆ ಅದೇಕೆ ಸತ್ಯಾಗ್ರಹ ಮಾರ್ಗದ್ದಲ್ಲ? ಕಾಶ್ಮೀರದಲ್ಲಿ ತಿರಂಗಾ ಹಾರಿಸಬೇಕೆಂಬ ವಿಸ್ತಾರವಾಗಿರುವ ಯಾತ್ರೆಯ ಹಿಂದೆ ಇರುವ ಗಾಂಧೀಜಿಯವರ ಸತ್ಯಾಗ್ರಹದ ಚಿಂತನೆಯನ್ನು ಅಲ್ಲಗಳೆಯುವುದು ಸಾಧ್ಯವೇನು? ಈ ಯಾತ್ರೆಯನ್ನು ಮನಸೋ ಇಚ್ಛೆ ಬಣ್ಣಿಸುವ ರಾಹುಲ್, ಒಬ್ಬ ವ್ಯಕ್ತಿಯೇ ಸರ್ವಸ್ವವಾಗುವುದನ್ನು ತಪ್ಪಿಸಲು ಜನರೊಂದಿಗೆ ಒಂದಾಗಬಲ್ಲ ಈ ರೀತಿಯ ಯಾತ್ರೆಗಳು ಅಗತ್ಯವಾಗಿ ಬೇಕು ಎನ್ನುತ್ತಾನೆ. ಆದರೆ ಅವನ ಮುತ್ತಜ್ಜ ನೆಹರೂಗಿಂತ ಏಕವ್ಯಕ್ತಿ ಪ್ರದರ್ಶಕ ಮತ್ತೊಬ್ಬನಿರಲಿಲ್ಲ. ವಿದೇಶಾಂಗ ನೀತಿಯ ಚರ್ಚೆ ಸಂಸತ್ತಿನಲ್ಲಿ ನಡೆಯುವಾಗ ಆಚಾರ್ಯ ಕೃಪಲಾನಿ ನೀವೇಕೆ ಮಹತ್ವದ ನಿರ್ಧಾರಗಳನ್ನು ಎಲ್ಲರೊಡನೆ ಚರ್ಚಿಸಿ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಎಲ್ಲವನ್ನೂ ಎಲ್ಲರ ಬಳಿ ಚರ್ಚಿಸಲಾಗುವುದಿಲ್ಲ ಎಂಬರ್ಥದ ಉತ್ತರವನ್ನು ಸುದೀರ್ಘವಾಗಿ ನೆಹರೂ ಕೊಟ್ಟಾಗ ಕೃಪಲಾನಿಯವರು ಎದ್ದುನಿಂತು ‘ನನ್ನ ಮಾತನ್ನು ಮರಳಿ ಪಡೆಯುತ್ತೇನೆ. ಭಾರತದ ವಿದೇಶಾಂಗ ನೀತಿ ಒನ್ ಮ್ಯಾನ್ ಪಾಲಿಸಿ ಎನ್ನುವುದನ್ನು ಒಪ್ಪುತ್ತೇನೆ’ ಎಂದಿದ್ದರು. ಅದು ಅಂದಿನ ಪ್ರಧಾನಿಯೆಡೆಗಿನ ವ್ಯಂಗ್ಯವಾಗಿತ್ತು. ಕಾಂಗ್ರೆಸ್ಸಿಗರು ಅದನ್ನೂ ಸಂಭ್ರಮಿಸಿರಲು ಸಾಕು. 

ರಾಹುಲ್ ಈ ಭಾಷಣದಲ್ಲಿ ಒಂದಷ್ಟು ಭಾವನೆಗಳನ್ನು ಜಾಗೃತಗೊಳಿಸುವ ಪ್ರಯತ್ನವನ್ನೂ ಮಾಡಿದ. ಗ್ಯಾಂಗ್‌ ರೇಪ್‌ಗೊಳಗಾದ ಹೆಣ್ಣುಮಗಳು ತನ್ನ ಕೈಹಿಡಿದು ಹಂಚಿಕೊಂಡ ಕಥೆಯನ್ನು, ಮಕ್ಕಳೊಡನೆ ಆಡಬೇಡಿ ಅವರು ಕೊಳಕಾಗಿದ್ದಾರೆ ಎಂದು ಹೇಳಿದ್ದನ್ನೂ ಆತ ಹೆಮ್ಮೆಯಿಂದ ಹೇಳಿದ. ಇವೆಲ್ಲವೂ ನಿಸ್ಸಂಶಯವಾಗಿ ಆತನಿಗೆ ಹೊಸತೇ ಆಗಿರಬೇಕು. ಹುಟ್ಟಿದಾಗಿನಿಂದಲೂ ಬಾಯಲ್ಲಿ ಚಿನ್ನದ ಚಮಚವನ್ನೇ ಇಟ್ಟುಕೊಂಡು ಬಂದಿರುವ ಆತನಿಗೆ ಜನಸಾಮಾನ್ಯರ ಸಂಪರ್ಕ ಇರುವುದು ಸಾಧ್ಯವೇ ಇರಲಿಲ್ಲ ಬಿಡಿ. ಮೊದಲ ಬಾರಿಗೆ ಆತ ಇಷ್ಟು ಹತ್ತಿರದಿಂದ ಭಾರತವನ್ನು, ಭಾರತೀಯರನ್ನೂ ನೋಡಿದ್ದಾನೆ. ಹೀಗಾಗಿ ಇವೆಲ್ಲ ಹೊಸತೆನಿಸಬಹದು. ಗಣರಾಜ್ಯೋತ್ಸವದ ವೈಭವವನ್ನು ನೋಡಲು ಕಟ್ಟಡ ಕಾರ್ಮಿಕರನ್ನು ವಿಐಪಿಯಾಗಿ ಕೂರಿಸಿಕೊಂಡ, ಕಾಶಿಯಲ್ಲಿ ಮಂದಿರ ನಿರ್ಮಾಣಕ್ಕೆ ಕಾರಣರಾದ ಮಂದಿಗೆ ಹೂವು ಎರಚಿ ಸಂಭ್ರಮಿಸಿದ, ಪೌರ ಕಾರ್ಮಿಕರ ಕಾಲ್ತೊಳೆದು ಅವರ ಗೌರವವನ್ನು ನೂರ್ಮಡಿಸಿದ ಮೋದಿಯೆದುರು ಆತ ಸಾಕಷ್ಟು ಕಲಿಯಬೇಕಾದ ಅಗತ್ಯವಿದೆ. ಏಕೆಂದರೆ ಮೋದಿ ಬಡತನದ ಬೆವರುಂಡೇ ಬಂದವರು. 

ಅಂತರ್ ರಾಷ್ಟ್ರೀಯ ವೇದಿಕೆಯ ಮೇಲೆ ಪುಲ್ವಾಮಾ ದಾಳಿಯನ್ನು ಸ್ಮರಿಸಿಕೊಂಡ ರಾಹುಲ್ ಕಾರ್‌ ಬಾಂಬಿಗೆ ಸತ್ತ ಸೈನಿಕರ ಉಲ್ಲೇಖ ಮಾಡುತ್ತಾನೆ. ವಾಸ್ತವವಾಗಿ ಅದು ಕಾರ್ಬಾಂಬ್ ಅಲ್ಲ. ಪಾಕಿಸ್ತಾನದಿಂದ ಪ್ರೇರಣೆಯನ್ನೂ ತರಬೇತಿಯನ್ನೂ ಪಡೆದುಕೊಂಡ ಭಯೋತ್ಪಾದಕನೊಬ್ಬ ನಡೆಸಿದ ಕುಕೃತ್ಯ. ಅದರ ಕುರಿತಂತೆ ಹೇಳುವ ಧೈರ್ಯವನ್ನೇ ಆತ ತೋರಲಿಲ್ಲ. ಅನೇಕ ಕಡೆಗಳಲ್ಲಿ, ತನಗೆ ಸೂಕ್ತವಾದ ರಕ್ಷಣೆ ಒದಗಿಸಲಿಲ್ಲ. ಕೇಂದ್ರ ಸರ್ಕಾರ ತನ್ನನ್ನು ಕೊಲ್ಲುವ ಯತ್ನ ಮಾಡುತ್ತಿದೆ ಎಂದೆಲ್ಲ ಆರೋಪಿಸಿದ್ದ ರಾಹುಲ್ ಕಾಶ್ಮೀರದಲ್ಲಿ ನನಗೆ ಹೆಚ್ಚು ರಕ್ಷಣೆ ಕೊಟ್ಟರು, ಇದು ಸ್ಥಳೀಯರಿಂದ ನನ್ನನ್ನು ಬೇರ್ಪಡಿಸುವ ತಂತ್ರ ಎಂದು ಹಲಬುತ್ತಾನಲ್ಲ, ಈತನನ್ನು ತಮ್ಮ ನಾಯಕನೆಂದು ಹೇಳಿಕೊಳ್ಳುವ ಮಂದಿಗೆ ಏನೆನ್ನಬೇಕು ಹೇಳಿ? 

ಇಡಿಯ ಭಾಷಣದಲ್ಲಿ ನನಗೆ ಅಚ್ಚರಿ ಎನಿಸಿದ್ದು ರಾಹುಲನ ಚೀನಾ ಪ್ರೇಮ. ಅಮೇರಿಕಾದ ಕುರಿತಂತೆ ಮಾತನಾಡುತ್ತಾ ಆತ ತಾನು ಓದುತ್ತಿರುವಾಗ ಅಮೇರಿಕಾದ ವಿಮಾನ ನಿಲ್ದಾಣದೊಳಕ್ಕೂ ಯಾವ ಪರೀಕ್ಷೆಯೂ ಇಲ್ಲದೇ ಹೋಗಬಹುದಿತ್ತು. ಆದರೀಗ ಹಾಗಿಲ್ಲ. ಒಸಾಮನ ಆಕ್ರಮಣದ ನಂತರ ಅಮೇರಿಕಾ ಮೊದಲಿನಷ್ಟು ಸ್ವಾತಂತ್ರ್ಯ ಭರಿತವಾಗಿಲ್ಲ ಎನ್ನುತ್ತಾನೆ. ಒಂದು ಒಸಾಮನ ಆಕ್ರಮಣಕ್ಕೆ ಅಮೇರಿಕಾ ಹೀಗಿರಬಹುದಾದರೆ, 65 ವರ್ಷಗಳ ಅತ್ಯಂತ ಕೆಟ್ಟ ನೀತಿಯಿಂದಾಗಿ ಇಡಿಯ ಪಾಕಿಸ್ತಾನವೇ ನಿರಂತರ ಭಾರತದ ಮೇಲೆ ಛದ್ಮಯುದ್ಧ ಮಾಡುವಂತೆ ಕಾಂಗ್ರೆಸ್ ಮಾಡಿಬಿಟ್ಟಿತಲ್ಲ, ಭಾರತದ ಸ್ಥಿತಿ ಹೇಗಿರಬೇಕಿತ್ತು ಹೇಳಿ? ಈ ಪ್ರಶ್ನೆ ಕಾಂಗ್ರೆಸ್ಸಿನ ಕಾರ್ಯಕರ್ತರು ರಾಹುಲ್ ಸಿಕ್ಕಾಗ ಕೇಳಬೇಕಿದೆ. ಅಮೇರಿಕಾದ ಈ ಬದಲಾವಣೆಗೆ ಎದುರಾಗಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ರಾಷ್ಟ್ರವೆಂದರೆ ಚೀನಾ ಎನ್ನುತ್ತಾನೆ ಆತ. ಅಮೇರಿಕಾದಂತೆ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಗಮನ ಕೊಡದೇ ಎಲ್ಲರೂ ಸಹಬಾಳ್ವೆಯಿಂದ ಬದುಕುವುದಕ್ಕೆ ಚೀನಾ ವ್ಯವಸ್ಥೆ ಮಾಡಿಕೊಡುತ್ತದೆ ಎನ್ನುತ್ತಾನೆ. ಸುದೀರ್ಘಕಾಲ ಆಂತರಿಕ ಸಮಸ್ಯೆಗಳಿಂದ ಬೆಂದು ಈಗ ಅದು ಅವೆಲ್ಲವುಗಳನ್ನೂ ಮೀರಿ ಬೆಳೆದು ನಿಂತಿರುವ ಪರಿ ಅಚ್ಚರಿ ಎನ್ನುತ್ತಾನೆ. ಅವರ ಈ ಬಗೆಯ ಅಭಿವೃದ್ಧಿಯ ಪರಿಕಲ್ಪನೆಯಿಂದಾಗಿಯೇ ಒನ್ ಬೆಲ್ಟ್ ಒನ್ ರೋಡ್ ನಿರ್ಮಾಣವಾಗುತ್ತಿರುವುದು ಎಂದೂ ಹೇಳುತ್ತಾನೆ. ಜಗತ್ತಿನ ಸಮುದ್ರ ವಹಿವಾಟಿನ ಪ್ರಾಬಲ್ಯದ ವಿರುದ್ಧ ಸಟೆದು ನಿಂತಿರುವ ಚೀನಾ ಎನ್ನುವ ರಾಹುಲನ ಮಾತು ಕೇಳಿದಾಗ ಆತನ ಮೂಲ ಉದ್ದೇಶವೇನೆಂಬುದೇ ಅರಿವಾಗುವುದಿಲ್ಲ. ಏಷ್ಯಾದ ಪ್ರಬಲ ಶಕ್ತಿಯಾಗಿ ಬೆಳೆಯಬೇಕೆಂದು ಬಯಸುತ್ತಿರುವ ಭಾರತ ಚೀನಾಕ್ಕಿಂತ ಬಲು ಹಿಂದಿದೆ ಎನ್ನುವ ಸಂದೇಶ ನೀಡುತ್ತಿದ್ದಾನೋ, ಅಥವಾ ಜಗತ್ತೆಲ್ಲ ಚೀನಾದ ಪ್ರಾಬಲ್ಯವನ್ನು ಮುರಿಯಬೇಕೆಂದು ಒಟ್ಟಾಗುತ್ತಿದ್ದರೆ ಭಾರತೀಯರು ಚೀನಾದ ಬೆಳವಣಿಗೆಗೆ ಕಟಿಬದ್ಧರಾಗಿದ್ದಾರೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾನೋ ನನಗಂತೂ ಗೊತ್ತಾಗಲಿಲ್ಲ. ಅವನ ಮುತ್ತಜ್ಜ ನೆಹರೂ ಹೀಗೇ ಮಾಡಿದ್ದರಲ್ಲ. ಭಾರತಕ್ಕೆ ಸಿಗಬೇಕಾಗಿದ್ದ ಜಾಗತಿಕ ಸೌಲಭ್ಯಗಳನ್ನೆಲ್ಲ ಚೀನಾಕ್ಕೆ ವರ್ಗಾಯಿಸಿ ಜಗತ್ತು ನಮ್ಮ ಮೇಲಿಡಬಹುದಾಗಿದ್ದ ವಿಶ್ವಾಸವನ್ನೇ ನಷ್ಟಗೊಳಿಸಿಬಿಟ್ಟಿದ್ದರು. ಜಗತ್ತಿನ ತಂತ್ರಜ್ಞಾನವನ್ನು ಕದ್ದು ತನ್ನದ್ದೇ ಎಂದು ಹೇಳುವ ಚೀನಾದ ವಾದವನ್ನು ಸಮರ್ಥಿಸುವ ರಾಹುಲ್‌ನ ಮಾತುಗಳಂತೂ ಎಂಥವನಿಗೂ ಅಚ್ಚರಿ ತರಿಸುವಂಥದ್ದೇ! 

ವಾಸ್ತವವಾಗಿ ಈ ಭಾಷಣದಿಂದ ಆತನಿಗೆ ಭಾರತದಲ್ಲಿ ಒಂದು ವೋಟೂ ಹೆಚ್ಚಿಗೆ ಬೀಳುವುದು ಸಾಧ್ಯವಿಲ್ಲ. ಅಂದರೆ ಆತ ಇದನ್ನು ಬೇರೆ ಯಾವುದೋ ಕಾರಣಕ್ಕಾಗಿ ಮಾಡಿದ್ದಾನೆ. ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲವೆನ್ನುವ ಸೊರೊಸ್‌ನ ಮಾತುಗಳಿಗೂ ರಾಹುಲನ ಈ ವಾಕ್ಚೇಷ್ಟೆಗಳಿಗೂ ಹತ್ತಿರದ ಸಂಬಂಧವಿದೆ ಎನಿಸುತ್ತದೆ. ಉದ್ದೇಶ ನಾವಂದುಕೊಂಡಷ್ಟು ಸರಳವಾಗಿಲ್ಲ. 

ಇಷ್ಟಕ್ಕೂ ಈ ಭಾಷಣದಲ್ಲಿ ನಾನು ಅರ್ಥಮಾಡಿಕೊಳ್ಳದ ಅನೇಕ ಸಂಗತಿಗಳಿರಬಹುದು. ಆತನ ಮಾತು ನನಗೆಂದೂ ಪೂರ್ಣವಾಗಿ ಅರ್ಥವೇ ಆಗಲಿಲ್ಲ. ಹೀಗಾಗಿ ನನಗೂ ಅರ್ಥವಾಗದ ಅನೇಕ ಒಳಸುಳುಹುಗಳಿದ್ದರೆ ನೀವೇ ಅದನ್ನು ಪೂರ್ಣ ಕೇಳಿ ತಿಳಿಯಬೇಕಾಗಿ ವಿನಂತಿಸುವೆ ಅಷ್ಟೇ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s