ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಮೋದಿ ಮ್ಯಾಜಿಕ್ಕಿನ ಭ್ರಮೆಯಲ್ಲಿರುವ ಕರ್ನಾಟಕ ಬಿಜೆಪಿ! 

ಎರಡು ರಾಜ್ಯಗಳ ಚುನಾವಣೆ ಮತ್ತು ದೆಹಲಿಯ ಮುನ್ಸಿಪಾಲಿಟಿ ಚುನಾವಣೆಯ ಫಲಿತಾಂಶ ಅಚ್ಚರಿಗೆ ನೂಕಿದೆಯಷ್ಟೇ ಅಲ್ಲದೇ ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದೆ. ಈ ಗೆಲುವಿನ ಧಾವಂತದಲ್ಲಿ ನಾವೆಲ್ಲರೂ ಟಿವಿ ಚಾನೆಲ್ಲುಗಳಲ್ಲಿ ಗಂಟೆಗಟ್ಟಲೆ ಕೊರೆದ ಎಕ್ಸಿಟ್ ಪೋಲ್ಗಳನ್ನು ಮರೆತೇಬಿಟ್ಟಿದ್ದೇವೆ. ಎಲ್ಲರಿಗಿಂತಲೂ ಸ್ಪಷ್ಟ ಮತ್ತು ನಿಖರ ತಾವೆಂದೇ ಹೇಳಿಕೊಳ್ಳುವ ಚಾನೆಲ್ಲುಗಳೆಲ್ಲ ಫಲಿತಾಂಶ ಬಂದಾಗ ಗೆದ್ದವರನ್ನು ಹೊಗಳುತ್ತಲೇ ತಮ್ಮ ಮೂರ್ಖತನವನ್ನು ಮರೆಮಾಚಿಬಿಡುತ್ತಾರೆ. ಈ ಬಾರಿಯಂತೂ ಯಾವ ಚಾನೆಲ್ಲೂ ಮೂರೂ ಚುನವಾವಣೆಯನ್ನು ಸಮರ್ಥವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ. ದೆಹಲಿಯಲ್ಲಿ ಬಿಜೆಪಿಗೆ ಹೀನಾಯ ಸೋಲು ಎಂದವರು, ಬಿಜೆಪಿಯ ಮತ ಗಳಿಕೆಯ ಪ್ರಮಾಣ ವೃದ್ಧಿಯಾಗಿರುವುದನ್ನು ಕಂಡು ಹಣೆಬಡಿದುಕೊಂಡರು. ಇತ್ತ ಗುಜರಾತ್ ನಲ್ಲಿ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿ ಸವಾಲಾಗಬಹುದೆಂದು ಭಾವಿಸಿದ ಎಲ್ಲರೂ ಅದು ಹೆಚ್ಚು ಸ್ಥಾನಗಳನ್ನು ಗಳಿಸುವುದಿಲ್ಲವಾದರೂ ಬಿಜೆಪಿಯ ಮತಗಳಿಕೆಗೆ ಕೊಳ್ಳಿ ಇಡುತ್ತದೆ ಎಂದೇ ಭಾವಿಸಿದ್ದರು. ಅದೂ ಉಲ್ಟಾ ಹೊಡೆಯಿತು. ಕಾಂಗ್ರೆಸ್ಸು ಊಹಿಸಲಾಗದಷ್ಟು ಪಾತಾಳಕ್ಕಿಳಿದು ಬಿಜೆಪಿಯ ಗೆಲುವನ್ನು ಸಲೀಸು ಮಾಡಿಬಿಟ್ಟಿತು. ಹಿಮಾಚಲ ಪ್ರದೇಶದಲ್ಲಿ ಇಷ್ಟೊಂದು ಹೊಡೆತವನ್ನು ಬಿಜೆಪಿ ಊಹಿಸಲೂ ಸಾಧ್ಯವಿರಲಿಲ್ಲ. ಯಾವುದನ್ನು ದೆಹಲಿಯ ಚುನಾವಣೆಯಲ್ಲಿ ಕಾಣಬೇಕಿತ್ತೋ ಅದನ್ನು ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಕಂಡಿತು. ಅಚ್ಚರಿ ಎಂದರೆ ಯಾವೊಂದು ಚುನಾವಣೋತ್ತರ ಸಮೀಕ್ಷೆಯೂ ಈ ಮೂರನ್ನು ನಿಖರವಾಗಿ ಊಹಿಸುವಲ್ಲಿ ಯಶಸ್ವಿಯಾಗಲಿಲ್ಲ! ವೈಜ್ಞಾನಿಕವಾಗಿ ತಾವು ಲೆಕ್ಕ ಹಾಕುತ್ತೇವೆ ಎಂದು ಇವರು ಬಿಡುವುದು ಬೊಗಳೆಯಷ್ಟೇ ಎಂಬುದು ಎಂಥವನಿಗೂ ಈಗ ಅರಿವಾಗಿದೆ. ಗುಜರಾತಿನಲ್ಲಿ ಬಿಜೆಪಿ 115 ರಿಂದ 150 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಊಹಿಸುವ ಪುಣ್ಯಾತ್ಮನನ್ನು ಯಾವ ಲೆಕ್ಕಕ್ಕೆ ಪಂಡಿತನೆನ್ನಬೇಕೋ ಗೊತ್ತಾಗುವುದಿಲ್ಲ. ಪ್ರಧಾನಮಂತ್ರಿಯಿಂದ ಹಿಡಿದು ಸ್ಥಳೀಯ ಬಿಜೆಪಿ ಕಾರ್ಯಕರ್ತನವರೆಗೆ ಎಲ್ಲರೂ ಸೇರಿ ಏಕರಸವಾದ ಹೋರಾಟ ಮಾಡಿದ್ದನ್ನು ನೋಡಿದರೆ ಬಿಜೆಪಿಯ ಗೆಲುವು ನಿಶ್ಚಯವೆಂದು ಎಂಥವನೂ ಹೇಳಬಹುದಾಗಿತ್ತು. ಆದರೆ ಈ ಗೆಲುವಿನ ಅಂತರ ಸುಮಾರು 115 ರಿಂದ 150 ಸೀಟುಗಳವರೆಗೆ ಇರಬಹುದು ಎಂಬ 35 ಸೀಟುಗಳ ವ್ಯತ್ಯಾಸವನ್ನು ಕೊಡುವುದಿದೆಯಲ್ಲ, ಅದು ನಮ್ಮೂರಿನ ಅರಳಿಕಟ್ಟೆಯ ಮೇಲೆ ಕುಳಿತವನೂ ಮಾಡಬಲ್ಲ. ದುರಂತವೆಂದರೆ, ಈ ಮಾಧ್ಯಮಗಳು ಇದಕ್ಕೋಸ್ಕರ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತವಲ್ಲದೇ ಜನರ ಭಾವನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತವೆ. ಇಷ್ಟಕ್ಕೂ ಇವರೆಲ್ಲ ಸೋತಿರುವುದೆಲ್ಲಿ ಗೊತ್ತೇ? ಎಲೆಕ್ಷನ್ ರ್ಯಾಲಿಗಳನ್ನು ನೋಡಿ ಅದರ ಆಧಾರದ ಮೇಲೆ ಜನ ವೋಟು ಹಾಕುತ್ತಾರೆ ಎಂದು ನಿರ್ಧರಿಸಿರುವುದರಲ್ಲಿ. ಐದು ವರ್ಷಗಳ ನಂತರ ಬೂತಿಗೆ ಹೋಗಿ ವೋಟು ಹಾಕುವ ಮನುಷ್ಯ ತನ್ನದ್ದೇ ಆದ ಆಲೋಚನೆ ಹೊಂದಿರುತ್ತಾನೆ. ಆತ ಬಚ್ಚಿಟ್ಟುಕೊಂಡಿರುವ ಈ ವಿಚಾರವನ್ನು ಮಾಧ್ಯಮದವರ ಮುಂದೆ ಬಿಚ್ಚಿಡಬೇಕೆಂದೇನೂ ಇಲ್ಲ. ಬೃಹತ್ ರ್ಯಾಲಿಗಳು ಗೆಲ್ಲುವ ಅಂತರವನ್ನು ಹೆಚ್ಚಿಸಬಹುದಷ್ಟೆ. ಆದರೆ ಯಾರಿಗೆ ಮತ ಹಾಕಬೇಕೆಂಬುದು ಪೂರ್ವ ನಿರ್ಧರಿತವೇ. ಗುಜರಾತಿನಲ್ಲಿ ಇರುವ 182 ಸೀಟುಗಳಲ್ಲಿ ಮೋದಿ ಪಕ್ಷ ಗೆದ್ದಿರುವುದು 156. ಸುಮಾರು 86 ಪ್ರತಿಶತದಷ್ಟು ಸೀಟುಗಳನ್ನು ಬಿಜೆಪಿಯೊಂದೇ ಬಾಚಿಕೊಂಡಿದೆ. ಅತ್ಯಂತ ಪುರಾತನ ಪಕ್ಷವೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕಾಂಗ್ರೆಸ್ಸಿಗೆ ಪ್ರತಿಪಕ್ಷ ಸ್ಥಾನ ಗಳಿಸಿಕೊಳ್ಳಲೂ ಒಂದು ಸೀಟಿನ ಕೊರತೆಯಿದೆ. ಅವರೀಗ ಸರ್ಕಾರ ಮಾಡಲಿಕ್ಕಲ್ಲ, ಪ್ರತಿಪಕ್ಷ ಸ್ಥಾನ ಪಡೆಯಲೂ ಪಕ್ಷೇತರರಿಗೆ ಕೈ ಮುಗಿಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರೆ ಈ ಪರಿಯ ಉತ್ಪಾಟನೆಯನ್ನು ಊಹಿಸಲು ಸಾಧ್ಯವಿತ್ತೇನು? ಕಳೆದ ಬಾರಿ ಕಾಂಗ್ರೆಸ್ಸಿಗೆ 77 ಸೀಟುಗಳು ದೊರೆತಿದ್ದವು. ಎರಡೂವರೆ ದಶಕದಿಂದ ಅಧಿಕಾರದಲ್ಲಿದ್ದ ಭಾಜಪದ ವಿರುದ್ಧ ಅದು ಎಡವಿದ್ದಾದರೂ ಎಲ್ಲಿ ಎಂಬ ಆಂತರಿಕ ಚರ್ಚೆ ನಡೆಯುವುದು ಬೇಡವೇನು? 

ಸ್ವಾತಂತ್ರ್ಯ ಬಂದ ಲಾಗಾಯ್ತು ಸ್ವಾತಂತ್ರ್ಯ ಕೊಡಿಸಿದವರು ತಾವೇ ಎಂಬ ಭ್ರಮೆಯನ್ನು ಜನರಲ್ಲಿ ಬಿತ್ತಿ ಅದರ ಲಾಭವನ್ನೇ ಉಣ್ಣುತ್ತಾ ಬಂದಿತ್ತು ಕಾಂಗ್ರೆಸ್ಸು. ಹೀಗಾಗಿಯೇ ಮನೆಯಲ್ಲಿ ವೃದ್ಧರೆಂಬುವವರು ಇದ್ದರೆ ಅವರು ಮತ ಹಾಕೋದು ಕೈಗೇ. ಅದು ಸ್ವಾತಂತ್ರ್ಯದ ಭ್ರಮೆ ತಲೆ ಹೊಕ್ಕಿರುವ ಪರಿಣಾಮ. ಈ ಅಡಗೂಲಜ್ಜಿಯ ಕಥೆಯನ್ನು ಕೇಳಲು ಇಂದಿನ ತರುಣ ತಯಾರಿಲ್ಲ. ಅವನು ಕಾಂಗ್ರೆಸ್ಸಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾನೆ. ಸರದಾರ್ ಪಟೇಲರಿಗೆ ಪ್ರಧಾನಿ ಪಟ್ಟ ಸಿಗಲಿಲ್ಲವೇಕೆ? ಬಾಬಾಸಾಬೇಹ್ ಅಂಬೇಡ್ಕರರಿಗೆ ಭಾರತರತ್ನ ನೀಡಲು 1990ರವರೆಗೆ ಕಾಯಬೇಕಾಗಿತ್ತು ಏಕೆ? ಸೋಮನಾಥ ಮಂದಿರ ಪುನರ್ನಿರ್ಮಿಸಲು ನೆಹರೂ ವಿರೋಧ ವ್ಯಕ್ತಪಡಿಸಿದ್ದು ಏಕೆ? ರಾಮಮಂದಿರವನ್ನು ಸ್ವಾತಂತ್ರ್ಯದ ಹೊಸ್ತಿಲಲ್ಲೇ ಮರಳಿ ಪಡೆಯಬಹುದಾಗಿದ್ದರೂ ಅದನ್ನು ಸುದೀರ್ಘಕಾಲ ತಳ್ಳಿಕೊಂಡು ಬಂದದ್ದು ಏಕೆ? ಕಾಶ್ಮೀರವನ್ನು ಭಾರತದೊಂದಿಗೆ ಏಕರಸಗೊಳಿಸುವುದು ಬಲು ಸುಲಭವಿದ್ದಾಗ್ಯೂ ಯಾರ ತೆವಲಿಗಾಗಿ ಅದನ್ನು ಪ್ರತ್ಯೇಕವಾಗಿ ಉಳಿಸಲಾಯ್ತು? ಯಾರ ಕಾರಣದಿಂದಾಗಿ ದಕ್ಷಿಣ ಮತ್ತು ಉತ್ತರಗಳು ಇಂದಿಗೂ ಒಂದಾಗದೇ ಉಳಿದಿವೆ? ಅನೇಕ ಪ್ರಶ್ನೆಗಳು ತರುಣರ ಮನಸ್ಸಿನಲ್ಲಿ ಗಿರಕಿ ಹೊಡೆಯುತ್ತಲೇ ಇವೆ. ಕಾಂಗ್ರೆಸ್ಸು ಇವುಗಳಿಗೆ ಸುಲಭಕ್ಕೆ ಉತ್ತರ ಕೊಡಲಾರದು. ಅದರಲ್ಲೂ ಜಾತಿ-ಮತ-ಪಂಥಗಳನ್ನು ಮೀರಿ ರಾಷ್ಟ್ರೀಯವಾದದ ಆಲೋಚನೆ ಮಾಡುವ ತರುಣರನ್ನೆದುರಿಸುವುದಂತೂ ಕಾಂಗ್ರೆಸ್ಸಿಗೆ ಸಾಧ್ಯವಾಗದ ಮಾತು. ಹೀಗಾಗಿಯೇ ಗುಜರಾತ್ ಕದನ ಶುರುವಾಗುವ ಮುನ್ನವೇ ಕಾಂಗ್ರೆಸ್ಸು ನಿಂತನೆಲ ಬಿಟ್ಟೋಡಿತು. ಇಲ್ಲವಾದಲ್ಲಿ ಭಾರತ್ ಜೊಡೊ ಯಾತ್ರೆ ಗುಜರಾತಿನ ಚುನಾವಣೆಯ ವೇಳೆ ಕರ್ನಾಟಕದಲ್ಲೇಕೆ ನಡೆಯಬೇಕಿತ್ತು? ಆದರೆ ಒಂದಂತೂ ಸತ್ಯ. ರಾಹುಲ್ ಚುನಾವಣಾ ಪ್ರಚಾರಕ್ಕೆ ಗುಜರಾತಿಗೆ ಹೋಗದೇ ಈ ಹೀನಾಯ ಸೋಲಿನ ಕಿರೀಟವನ್ನು ತಮ್ಮ ತಲೆಯಿಂದ ಕೊಡವಿಕೊಂಡುಬಿಟ್ಟರು. ಪಾಪ, ಖರ್ಗೆಯವರು ಹರಕೆಯ ಕುರಿಯಾಗಿಬಿಟ್ಟರು! 

ದೂರದಿಂದ ನೋಡಿದರೆ ಹೀಗೆ ಕಾಂಗ್ರೆಸ್ಸಿಗೆ ಪ್ರಶ್ನೆ ಕೇಳುವ ಮಂದಿಯನ್ನು ಹೊಸತನದಿಂದ ಸಂಭಾಳಿಸಬಲ್ಲ ಸಾಮರ್ಥ್ಯ ಅರವಿಂದ್ ಕೇಜ್ರಿವಾಲರಿಗಿದೆ ಎಂಬುದು ಕಾಂಗ್ರೆಸ್ಸಿನ ಲೆಕ್ಕಾಚಾರವಾಗಿತ್ತೆನಿಸುತ್ತದೆ. ಅದಕ್ಕೆ ಚುನಾವಣೆಯ ಅಷ್ಟೂ ಹೋರಾಟದ ಹೊಣೆಯನ್ನು ಆಮ್ಆದ್ಮಿ ಪಾರ್ಟಿಯ ಹೆಗಲಿಗೇರಿಸಿ ಕಾಂಗ್ರೆಸ್ಸು ಜಾರಿಕೊಂಡಿತು. ದೆಹಲಿಯಲ್ಲಿ ಮಾಡಿದಂತೆ ಇಲ್ಲಿಯೂ ಮತಗಳ ವಿಭಜನೆಯಾಗದಂತೆ ನೋಡಿಕೊಂಡು ಬಿಜೆಪಿಗೆ ಹೊಡೆತ ಕೊಡಬೇಕೆಂಬುದು ಅವರ ಗುಪ್ತ ಲೆಕ್ಕಾಚಾರ. ಆದರೆ ಗುಜರಾತಿನ ಮತದಾರ ಪಕ್ಕಾ ವ್ಯಾಪಾರಿ. ಆತ ಅರವಿಂದ್ ಕೇಜ್ರಿವಾಲರ ಸುಳ್ಳುಗಳನ್ನು ಕೇಳಿ-ಕೇಳಿ ಬೇಸತ್ತು ಹೋಗಿದ್ದ. ಉಚಿತ ಕೊಡುಗೆಯ ನೆಪದಲ್ಲಿ ಗುಜರಾತನ್ನು ಸಂಕಟಕ್ಕೆ ತಳ್ಳಲು ಆತ ಸಿದ್ಧನಿಲ್ಲ. ಹೀಗೆಂದೇ ಆತ ಕೇಜ್ರಿವಾಲರ ಪೊರಕೆಯನ್ನೇ ತೆಗೆದುಕೊಂಡು ಆತನ ಪಾರ್ಟಿಯನ್ನೇ ಗುಡಿಸಿಬಿಟ್ಟ!

 

ಚುನಾವಣೆ ಎನ್ನುವುದು ಭಾವನೆಗಳ ಸಮ್ಮಿಲನ. ಸುಮಾರು ಐದು ವರ್ಷಗಳ ಕಾಲ ಆತ ತನಗಾದ ನೋವುಗಳನ್ನು ಜತನದಿಂದ ಕಾಪಾಡಿಟ್ಟುಕೊಂಡು ಬರುತ್ತಾನೆ. ಸಂತೋಷವನ್ನು ಮರೆತುಬಿಡಬಹುದೇನೋ. ಆದರೆ ನೋವನ್ನು ಎಂದಿಗೂ ಮರೆಯಲಾರ. ಹೀಗಾಗಿಯೇ ಸಿದ್ದರಾಮಯ್ಯನವರು ಹೋದೆಡೆಯಲ್ಲೆಲ್ಲ ಅವರ ಅಧಿಕಾರಾವಧಿಯಲ್ಲಿ ತೀರಿಕೊಂಡ ಹಿಂದೂಗಳ ಶವಗಳು ಕಣ್ಮುಂದೆ ಬರುತ್ತವೆ. ಅವರ ಸುತ್ತ ಮುಸಲ್ಮಾನರು ತಿರುಗಾಡುವಾಗ ಮತ್ತೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದುಬಿಟ್ಟರೆ ಮತ್ತಷ್ಟು ಹೆಣಗಳು ಬೀಳುತ್ತವೇನೋ ಎಂಬ ಹೆದರಿಕೆ ಶುರುವಾಗುತ್ತದೆ. ಈ ಗಾಬರಿ ಅವರನ್ನೂ ಬಿಟ್ಟಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಯಾಗಿದ್ದೂ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಅವರು ಇಡಿಯ ರಾಜ್ಯದಲ್ಲಿ ತಮಗೊಂದು ಸೂಕ್ತ ಕ್ಷೇತ್ರ ಹುಡುಕಲು ಹರಸಾಹಸ ಮಾಡುತ್ತಿರುವುದು. ಹಾಗಂತ ಇದಕ್ಕೆ ಈಗಿನ ಮುಖ್ಯಮಂತ್ರಿ ಬೊಮ್ಮಾಯಿಯವರು ಹೊರತಲ್ಲ. ಮುಸಲ್ಮಾನರ ವಿರುದ್ಧ ಎಂದೂ ಮಾತನಾಡದೇ ಅವರ ಮತಗಳನ್ನು ಪಡೆಯುತ್ತಾ ಗೆದ್ದು ಬರುತ್ತಿದ್ದ ಅವರಿಗೆ ಹಿಜಾಬ್, ಹಲಾಲ್, ಮೊದಲಾದ ಗಲಾಟೆಗಳ ನಂತರ ಕ್ಷೇತ್ರ ಅಷ್ಟು ಸಲೀಸಿಲ್ಲ. ಹಾಗಂತ ಬೇರೆ ಕ್ಷೇತ್ರ ಆರಿಸಿಕೊಳ್ಳಲು ಹೇಳಿ, ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಡುವ ಕರಾವಳಿಯಲ್ಲೂ ಅವರು ಗೆಲ್ಲುವುದು ಸುಲಭವಿಲ್ಲ. ಪ್ರವೀಣ್ ನೆಟ್ಟಾರುವಿನ ಸಾವು ಅಷ್ಟು ಆಳಕ್ಕೆ ಹೊಕ್ಕಿದೆ. ಎಲ್ಲಾ ಕಾಂಗ್ರೆಸ್ಸಿಗರೂ ಜಾತಿಯ ಲೆಕ್ಕಾಚಾರದಲ್ಲಿ ಗೆದ್ದುಬಿಡುತ್ತೇವೆಂಬ ಭ್ರಮೆಯಲ್ಲಿದ್ದರೆ, ಬಿಜೆಪಿಗರು ಮೋದಿ ರ್ಯಾಲಿ ಮಾಡಿದರೆ ಜನ ಕಣ್ಮುಚ್ಚಿಕೊಂಡು ಮತ ನೀಡಿಬಿಡುತ್ತಾರೆ ಎಂದು ನಂಬಿಕೊಂಡು ಕೂತಿದ್ದಾರೆ. ಆದರೆ ವಾಸ್ತವ ನೆಲೆಕಟ್ಟಿನಲ್ಲಿ ನೋಡಿದರೆ ಜಾತಿ ಸಮೀಕರಣಗಳು ಈಗ ಸಾಕಷ್ಟು ಬದಲಾಗಿವೆ. ದೆಹಲಿಯಲ್ಲಿ ಆಮ್ಆದ್ಮಿ ಪಾರ್ಟಿಗೆ ಮುಸಲ್ಮಾನರ ಮತಗಳು ಶೇಕಡಾ 20ರಷ್ಟು ಕಡಿಮೆಯಾಗಿವೆ. ದಲಿತರ ಮತಗಳು ಭಾಜಪದ ಕಡೆಗೆ ತಿರುಗಿ ಸಾಕಷ್ಟು ಕಾಲವೇ ಆಗಿದೆ. ಕಾಂಗ್ರೆಸ್ಸು ಇದನ್ನು ಸೂಕ್ಷ್ಮವಾಗಿ ಗಮನಿಸದೇ ಇರಲಾರದು. ಇತ್ತ ರಾಜ್ಯಗಳ ಮತಕದನದಲ್ಲಿ ಮೋದಿ ತುಂಬಾ ಯಶಸ್ಸನ್ನು ಕಂಡಿದ್ದಾರೆ ಎಂದೇನೂ ಹೇಳಲಾಗದು. ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬು, ಬಂಗಾಳ, ಬಿಹಾರ, ಇತ್ತೀಚೆಗೆ ಹಿಮಾಚಲ ಪ್ರದೇಶ ಇಲ್ಲೆಲ್ಲವೂ ಸೋಲುಗಳನ್ನೇ ಉಂಡಿದ್ದಾರೆ. ರಾಜ್ಯಗಳು ಮೋದಿಯನ್ನು ಪ್ರಧಾನಿಯಾಗಿ ಬಯಸುತ್ತವೆ ನಿಜ. ಅವರನ್ನು ತಮ್ಮ ರಾಜ್ಯದವರೆಂದು ಭಾವಿಸುವುದಿಲ್ಲ ಅಷ್ಟೇ. ಹೀಗಾಗಿ ಮೋದಿಯ ಖ್ಯಾತಿ ಉತ್ತುಂಗದಲ್ಲಿರುವಾಗಲೇ ಬಿಹಾರದಲ್ಲಿ ಅವರನ್ನು ‘ಬಾಹರಿ’ ಎಂದು ಕರೆಯಲಾಗಿತ್ತು. ರಾಜಸ್ಥಾನದಲ್ಲಿ ಮಂದಿ ಮೋದಿಯನ್ನು ಇಷ್ಟಪಡುತ್ತಾರೆ ನಿಜ, ಆದರೆ ವಸುಂಧರಾ ರಾಜೆಗೆ ಮತ ಹಾಕಲು ಸಜ್ಜಾಗುವುದಿಲ್ಲ. ಶಿವಸೇನೆ ನೆಟ್ಟಗಿದ್ದಿದ್ದರೆ ಮಹಾರಾಷ್ಟ್ರದಲ್ಲಿ ಮೋದಿ ಪಾಳಯವೇ ಅಧಿಕಾರದಲ್ಲಿರುತ್ತಿತ್ತು. ಏಕೆಂದರೆ ಅಲ್ಲಿ ದೇವೇಂದ್ರ ಫಡ್ನವೀಸ್ ಜನಮಾನಸದಲ್ಲಿ ತಮ್ಮ ವಿಭಿನ್ನ ಕಾರ್ಯಗಳಿಂದ ಬಲವಾಗಿ ನೆಲೆಯೂರಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಬಿಜೆಪಿಯ ಗೆಲುವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಅದರರ್ಥ ಸ್ಥಳೀಯ ಸಮರ್ಥ ನಾಯಕರಿದ್ದರೆ ಅಂಥವರ ಮೇಲೆ ಮೋದಿ ಬೆಟ್ ಕಟ್ಟಿ ಓಡಿಸಬಹುದು. ಇಲ್ಲವಾದರೆ ಮೋದಿಯವರಿಗೆ ಬರಿ ಕಂಠಶೋಷಣೆಯಷ್ಟೆ. ಸೂಕ್ಷ್ಮವಾಗಿ ನೀವೇ ಗಮನಿಸಿದರೆ, ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಮೋದಿ ಕೊಡುತ್ತಿರುವ ಮನ್ನಣೆ, ಗೌರವ ಎಂಥದ್ದೆಂಬುದು ಅರಿವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಹಿಡಿದೇ ಅಧಿಕಾರಕ್ಕೆ ಬರುವಷ್ಟರ ಮಟ್ಟಿಗೆ ಪ್ರಯತ್ನ ಮಾಡುವುದು ಕಠಿಣವಾಗಲಾರದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಧಿಕಾರ ಹತ್ತಿರಕ್ಕೆ ಬರುವಷ್ಟು ಗೆಲ್ಲುವ ಸಾಮರ್ಥ್ಯವಿರುವ ನಾಯಕನಿದ್ದರೆ, ಮೋದಿ ಅದನ್ನು ಖಾತ್ರಿಯಾಗಿ ಗೆಲುವಾಗಿ ಪರಿವರ್ತಿಸಬಲ್ಲರು. ಗೆಲುವಿನ ಅಂತರವನ್ನು ಹಿಗ್ಗಿಸಿಕೊಡಬಲ್ಲರು. ಪೂರ್ಣ ಸಕರ್ಾರವೇ ಅವರ ಹೆಸರಿನಲ್ಲಿ ಬರುವುದು ಸುಲಭ ಸಾಧ್ಯವಾದ ಮಾತಲ್ಲ! ಹೀಗಾಗಿಯೇ ಕರ್ನಾಟಕದಲ್ಲಿ ಭಾಜಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಗುಜರಾತಿನಲ್ಲಿ ಮಾಡಿದಂತೆ ಹಳೆಯ ಮುಖಗಳನ್ನು ಬದಲಿಸಿ ಸಮರ್ಥರಾಗಿರುವ ಹೊಸಬರನ್ನು ಆರಿಸಬೇಕಿದೆ. ಕನ್ನಡದ ಜನರು ತಮಿಳಿಗರಂತೆ ಸಂಕುಚಿತವಾಗಿ ಯೋಚಿಸದೇ, ರಾಷ್ಟ್ರೀಯ ಭಾವನೆಯಿಂದ ಕೂಡಿದವರೇ ಆಗಿರುವುದರಿಂದ ಗುಜರಾತಿನ ಫಾರ್ಮುಲಾ ಕೆಲಸಕ್ಕೆ ಬರಬಹುದು. ಸಿದ್ದರಾಮಯ್ಯನವರ ಟಿಪ್ಪು ಜಯಂತಿ ಕೊಡಗಿನಲ್ಲಿ ಇಂದಿಗೂ ಆಕ್ರೋಶದ ಜ್ವಾಲಾಮುಖಿಯನ್ನು ಉಳಿಸಿದೆ. ಕರಾವಳಿ ಭಾಗದ ಜನ ಆ ಕಾಲದ ಹಿಂದೂ ಮಾರಣಹೋಮವನ್ನು ಇಂದಿಗೂ ಮರೆಯಲಾರರು. ಸತೀಶ್ ಜಾರಕಿಹೊಳಿಯವರು ಹಿಂದೂವನ್ನು ಅಶ್ಲೀಲವೆಂದದ್ದು ತರುಣರ ಎದೆಯ ಗೂಡಿನಲ್ಲಿ ಬೆಚ್ಚಗಾಗಿದೆ. ದೇಶದಾದ್ಯಂತ ಬೆಳಕಿಗೆ ಬರುತ್ತಿರುವ ಲವ್ಜಿಹಾದ್ ಪ್ರಕರಣಗಳು, ಕರಾವಳಿಯಲ್ಲಿ ಕಂಡುಬಂದ ಕುಕ್ಕರ್ಬಾಂಬ್ ಘಟನೆಗಳು ಜನರನ್ನು ಇಂದಿಗೂ ಕೇಸರಿ ಪಡೆಗಳ ಪರವಾಗಿ ನಿಲ್ಲುವಂತೆ ಮಾಡಿವೆ. ಆದರೆ ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವ ನಾಯಕರಿಲ್ಲದಾಗ ಮಾತ್ರ ಅವರು ಪರ್ಯಾಯವನ್ನು ಹುಡುಕುವ ಸಾಧ್ಯತೆ ಇರುತ್ತದೆ. ಕರ್ನಾಟಕದ ಭಾಜಪದ ನೇತೃತ್ವ ಈ ನಿಟ್ಟಿನಲ್ಲಿ ಗುಜರಾತಿನ ನಾಯಕರಷ್ಟು ಅಗ್ರಣಿಯಾಗಿಲ್ಲದಿರುವುದು ಆತಂಕಕ್ಕೆ ಕಾರಣವೇ ನಿಜ. ಹೀಗಾಗಿಯೇ ಕರ್ನಾಟಕದ ಚುನಾವಣೆಯೂ ಯಾರು ಅಂದುಕೊಂಡಷ್ಟೂ ಸಲೀಸಾಗಿಲ್ಲ. ಕಾಂಗ್ರೆಸ್ಸಿನ ಪಾಲಿಗೆ ಇದು ಹಿಮಾಚಲದಂತಾಗಬಹುದು, ಬಿಜೆಪಿಯ ಪಾಲಿಗೆ ಗೋವೆಯಂತಾಗಬಹುದು. ಕಾದು ನೋಡಬೇಕಷ್ಟೇ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s