ನಿಮಗೆ ನೆನಪಿರಬೇಕಲ್ಲ, ತೈವಾನ್ ವಿಚಾರದಲ್ಲಿ ಅಮೇರಿಕಾ ಚೀನಾಕ್ಕೆ ಕಟುವಾದ ಸಂದೇಶ ನೀಡಿತ್ತು ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಿದ್ದರು. ಇವರೇ ಹುಟ್ಟುಹಾಕಿಕೊಂಡ ಸಂಘಟನೆಯೊಂದಿದೆ. ಇಂಡೋ-ಚೀನಾ ಫ್ರೆಂಡ್ಶಿಪ್ ಅಸೋಸಿಯೇಷನ್ ಎಂಬುದು ಅದರ ಹೆಸರು. ಚಿತ್ರಕಲಾ ಪರಿಷತ್ ನಲ್ಲಿ ಪ್ರತಿಭಟನೆಯ ನೆಪದಲ್ಲಿ ಈ ಕಾಂಗ್ರೆಸ್ಸಿಗರು ಚೀನಾದ ರಾಯಭಾರಿಯನ್ನೇ ಕರೆಸಿದ್ದರು. ಜೊತೆಗೆ ಒಂದು ಚಿತ್ರಪ್ರದರ್ಶನ. ಮುಖ್ಯ ಅತಿಥಿಯಾಗಿ ಭಾಗವಹಿಸಬೇಕೆಂದಿದ್ದವರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯನವರು. ಸ್ವಲ್ಪ ಪ್ರತಿಭಟನೆಯಾದೊಡನೆ ‘ನಾನು ಬರುವುದಿಲ್ಲವೆಂದರೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಬಿಟ್ಟಿದ್ದಾರಲ್ಲ’ ಎಂದು ಮೊಸಳೆ ಕಣ್ಣೀರು ಸುರಿಸಿದ ಅವರು ಉಳಿದ ಕಾಂಗ್ರೆಸ್ಸಿಗರು ಈ ಪ್ರತಿಭಟನೆಗೆ ಹೋಗುವುದಿಲ್ಲವೆಂದೇನೂ ಹೇಳಲಿಲ್ಲ! ಪ್ರತಿಭಟನೆ ಆಯ್ತು ಕೂಡ. ಇಷ್ಟೆಲ್ಲಾ ಈಗೇಕೆಂದರೆ ಚೀನಾದ ಗಡಿಯ ಬರೋಬ್ಬರಿ ನೂರು ಕಿಲೋಮೀಟರ್ ದೂರದಲ್ಲಿ ಭಾರತ ಮತ್ತು ಅಮೇರಿಕಾಗಳು ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದಕ್ಕೆ ಚೀನಾ ಪ್ರತಿಭಟನೆ ವ್ಯಕ್ತಪಡಿಸಿ ಎಚ್ಚರಿಕೆ ಕೂಡ ಕೊಡುವ ಪ್ರಯತ್ನ ಮಾಡಿದೆ. ಭಾರತ ಎಂದಿನಂತೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಕೊಟ್ಟರೆ ಅಮೇರಿಕಾ ಕೂಡ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ದರ್ದು ನಿಮಗೆ ಬೇಕಿಲ್ಲ ಎಂದು ಹೇಳಿಬಿಟ್ಟಿದೆ. ಚೀನಾದ ವಿಚಾರದಲ್ಲಿ ಅಮೇರಿಕಾ ಆಂತರಿಕ ಹಸ್ತಕ್ಷೇಪ ಮಾಡಿದೆ ಎಂದು ಬಾಯಿಬಡಕೊಂಡಿದ್ದ ಕಾಂಗ್ರೆಸ್ಸಿಗರು ಈಗೇಕೋ ಶಾಂತರಾಗಿಬಿಟ್ಟಿದ್ದಾರೆ. ಪ್ರತಿಭಟನೆ ಇರಲಿ, ಚೀನಾದ ವಿರುದ್ಧ ಒಂದು ಹೇಳಿಕೆ ಕೊಡುವ ಸಾಹಸವನ್ನೂ ಮಾಡಲಿಲ್ಲ. ಚೀನಾದಲ್ಲಿ ಮಳೆ ಬಿದ್ದರೆ ಇವರಿಗೆ ಥಂಡಿಯಾಗುತ್ತದೆ. ಆದರೆ ಭಾರತದಲ್ಲಿ ಮಂಜೇ ಸುರಿದರೂ ಇವರಿಗೆ ಅದು ತೊಂದರೆ ಕೊಡುವುದಿಲ್ಲ. ದುರ್ದೈವವಲ್ಲವೇನು?
ಇರಲಿ. ಇವರೆಲ್ಲ ಇಷ್ಟು ಆರಾಧಿಸುವ ಚೀನಾ ಕಳೆದ ಎಂಟ್ಹತ್ತು ದಿನಗಳಿಂದ ಪಡಬಾರದ ಪಾಡು ಪಡುತ್ತಿದೆ. ನವೆಂಬರ್ ತಿಂಗಳ ಕೊನೆಯ ಭಾಗದ ವೇಳೆಗೆ ಶಿಂಜಿಯಾಂಗ್ ಪ್ರಾಂತ್ಯದ ಉರುಕ್ಮಿಯಲ್ಲಿ ಹತ್ತಾರು ಮನೆಗಳುಳ್ಳ ಅಪಾರ್ಟ್ ಮೆಂಟ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಹತ್ತಕ್ಕೂ ಹೆಚ್ಚು ಮಂದಿ ತೀರಿಕೊಂಡರು. ಜನರ ಆಕ್ರೋಶಕ್ಕೆ ಕಾರಣವಾದ ಈ ಸಂಗತಿ ದಶಕಗಳಷ್ಟು ದೀರ್ಘಕಾಲದ ನಂತರ ಚೀನಿಯರನ್ನು ಪ್ರತಿಭಟನೆಯ ನೆಪದಲ್ಲಿ ಬೀದಿಗೆ ತಂತು. ಅಪಾರ್ಟ್‌ಮೆಂಟಿಗೆ ಬೆಂಕಿ ಹತ್ತಿಕೊಂಡರೆ ಪ್ರತಿಭಟನೆ ಮಾಡುವುದೇತಕ್ಕೆ ಎಂದು ಆಶ್ಚರ್ಯವಾಗಿರಬೇಕಲ್ಲವೇ? ಜೀರೊ ಕೋವಿಡ್‌ನ ಹುಚ್ಚಿಗೆ ಬಿದ್ದಿರುವ ಷಿ ಇಲ್ಲಿಂದ ಯಾರೊಬ್ಬರೂ ಆಚೆಗೆ ಬರದಿರುವಂತೆ ಹೊರಬಾಗಿಲಿಗೆ ಕಬ್ಬಿಣದ ರಾಡುಗಳಿಂದ ವೆಲ್ಡಿಂಗ್ ಮಾಡಿಸಿದ್ದರ ಪರಿಣಾಮ ಜನ ಅನಿವಾರ್ಯವಾಗಿ ಬೆಂಕಿಯಲ್ಲಿ ಬೇಯಬೇಕಾಗಿ ಬಂತು. ಜಗತ್ತಿನಾದ್ಯಂತ ಕೊವಿಡ್‌ನ ಸಂಕಟ ಇರಬಹುದೇನೋ ಎಂದೇ ಭಾವಿಸಿಕೊಂಡಿದ್ದ ಚೀನೀ ಮಂದಿಗೆ ಫುಟ್ಬಾಲ್ ವಿಶ್ವಕಪ್‌ನ ವೇಳೆಗೆ ಮುಖಕ್ಕೆ ಮಾಸ್ಕು ಕೂಡ ಧರಿಸದೇ ಓಡಾಡುತ್ತಿರುವ ಮಂದಿಯನ್ನು ಕಂಡು ಕಿರಿಕಿರಿ ಎನಿಸಿರಲು ಸಾಕು. ವರ್ಷ-ವರ್ಷಗಳೇ ಉರುಳಿದರೂ ಇನ್ನೂ ತಾವು ಕೋವಿಡ್‌ನ ಆತಂಕದಲ್ಲೇ ಬದುಕಬೇಕಾಯ್ತಲ್ಲ, ಮನೆಯಿಂದ ಹೊರಬರಲೂ ಸರ್ಕಾರದ ಅನುಮತಿ ಕೇಳಬೇಕಾಯ್ತಲ್ಲ ಎಂದವರಿಗೆ ಅನಿಸಿರಲು ಸಾಕು. ಕೊನೆಗೂ ಜನ ಬೀದಿಗೆ ಬಂದರು. ಲಾಕ್ಡೌನ್ ತೆಗೆಯಿರಿ ಎಂಬ ಘೋಷಣೆ ಕೂಗಲಾರಂಭಿಸಿದರು. ಪ್ರತಿಭಟನೆಯ ಕಾವು ಹಬ್ಬಲು ತುಂಬ ಸಮಯ ತೆಗೆದುಕೊಳ್ಳಲಿಲ್ಲ. ಶಾಂಘಾಯ್ ನವೆಂಬರ್ 26ಕ್ಕೆ ಬೀದಿಗೆ ಬಂತು. 2020ರಲ್ಲಿ ಹಾಂಗ್ ಕಾಂಗ್‌ನ ಮಂದಿ ಸರ್ಕಾರದ ದಮನ ನೀತಿಯ ವಿರುದ್ಧ ಪ್ರತಿಭಟನೆಗೆ ಖಾಲಿ ಕಾಗದ ಬಳಸಿದ್ದರಲ್ಲ ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಯ್ತು. ಸರ್ಕಾರದ ವಿರುದ್ಧ ಘೋಷಣೆ ಇದ್ದರೆ ತಾನೇ ಜೈಲಿಗೆ ತಳ್ಳುವುದು? ಖಾಲಿಯ ಹಾಳೆಯನ್ನು ಅವರು ಏನೆಂದು ಗುರುತಿಸುತ್ತಾರೆ? ಈ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಮರುದಿನವೇ ಭಾಗವಹಿಸಿದವರನ್ನು ಬಂಧಿಸಲುದ್ಯುಕ್ತವಾಯ್ತು. ಇದನ್ನು ಪ್ರತಿಭಟಿಸಿ ಬೀಜಿಂಗ್‌ನಲ್ಲಿ ಜನ ಬೀದಿಗಿಳಿದರು. ಪೀಕಿಂಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಈ ಬಾರಿ ಇದು ಬರಿ ಲಾಕ್ಡೌನ್ ತೆಗೆಯಿರಿ ಎಂಬುದಷ್ಟಕ್ಕೇ ಸೀಮಿತವಾಗದೇ ಷಿ ಜಿಂಪಿಂಗ್ ಅನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಯ್ತು ಕೂಡ. ಇದು ಅಧಿಕಾರಕ್ಕೆ ಬಂದಾಗಿನಿಂದಲೂ ಷಿಯ ಪಾಲಿಗೆ ಬಲುದೊಡ್ಡ ಹೊಡೆತ. ಲಾಂಗ್‌ಜೊವರೆಗೂ ಪ್ರತಿಭಟನೆಗಳು ಹಬ್ಬಿ ಮೊದಲ ಬಾರಿಗೆ ಚೀನಾದ ದಮನ ನೀತಿಯನ್ನು ಮೀರಿ ಸುದ್ದಿ ಜಗತ್ತಿನ ಮೂಲೆ-ಮೂಲೆಗೂ ತಲುಪಿತು. ಪ್ರತಿಭಟನೆಯ ವೇಳೆಯೇ ಇದರ ವರದಿ ಮಾಡುತ್ತಿದ್ದ ಬಿಬಿಸಿಯ ವರದಿಗಾರ ಎಡ್ವರ್ಡ್ ಲಾರೆನ್ಸ್ ನನ್ನು ಪೊಲೀಸರು ಮನಸೋ ಇಚ್ಛೆ ಬಡಿದರಲ್ಲದೇ ಆತನನ್ನು ಬಂಧಿಸಿ ಎಳೆದೊಯ್ದರೂ ಕೂಡ. ಹಾಂಗ್ ಕಾಂಗ್ ಶಾಂತವಾಗಿ ಚೀನಿಯರ ನೋವಿಗೆ ಬೆಂಬಲ ಸೂಚಿಸಿತು. ‘ನನಗೆ ಸ್ವಾತಂತ್ರ್ಯ ಕೊಡು, ಇಲ್ಲವೇ ಕೊಂದುಬಿಡು’ ಎನ್ನುವ ಮಾತು ಎಲ್ಲೆಡೆ ಕೇಳಿಬಂತು!
ಚೀನಾದ ಜನ ಎಲ್ಲ ದಬ್ಬಾಳಿಕೆಯನ್ನೂ ಸಹಿಸಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಅವರನ್ನು ಸ್ವಲ್ಪ ಭಡಕಾಯಿಸಿದರೆ ಸಾಕು ಅವರಿಂದ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು ಎಂಬ ಪರಿಸ್ಥಿತಿ ಇರುವಾಗ, ಅವರು ಬೀದಿಗೆ ಬಂದಿದ್ದಾದರೂ ಹೇಗೆ ಮತ್ತು ಏಕೆ ಎಂಬ ಪ್ರಶ್ನೆ ಸಹಜವೇ. ಇದಕ್ಕೆ ಕರೋನಾ ಎಂಬ ಮಹಾಮಾರಿಯೇ ಕಾರಣ ಎಂದರೆ ಅಚ್ಚರಿಯಲ್ಲ. ಕರೋನಾ ಆರಂಭವಾದಾಗ ಜಿರೊ ಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ ಷಿ ಕಠೋರ ಕ್ರಮಗಳ ಮೂಲಕ ಜನರನ್ನು ಸಾಯದೇ ಉಳಿಸಿಕೊಂಡ. ಆರಂಭದಲ್ಲಿ ಜನ ಪ್ರತಿಭಟಿಸಿದರಾದರೂ ಕಾಲಕ್ರಮದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಸಾವು ನೋವುಗಳನ್ನು ಕಂಡು, ತಮ್ಮ ಅಧ್ಯಕ್ಷರಿಗಿರುವ ಜನರ ಆರೋಗ್ಯದ ಕುರಿತ ಕಾಳಜಿಯನ್ನು ಕಂಡು ಅವರು ಮನಸೋತರು. ಚೀನಾದಲ್ಲಿ ಕೊವಿಡ್ ಸಾವು ಹೆಚ್ಚು-ಕಡಿಮೆ ನಗಣ್ಯವೇ ಆಗಿತ್ತು. ಆದರೆ ಈ ತಂತ್ರ ಜನರ ಬದುಕನ್ನು ಸುದೀರ್ಘಕಾಲ ದುರ್ಭರಗೊಳಿಸಿದಾಗ ಅವರು ತಿರುಗಿ ಬೀಳುವ ಸಾಧ್ಯತೆ ಇತ್ತಲ್ಲ ಅದನ್ನು ಗಾಲ್ವಾನ್‌ನಲ್ಲಿ ಸಾಹಸ ಮಾಡುವ ಮೂಲಕ ಮುಚ್ಚಿಕೊಳ್ಳುವ ಯತ್ನ ಮಾಡಿತು ಚೀನಾ. ಅವರ ದುರದೃಷ್ಟಕ್ಕೆ 40ಕ್ಕೂ ಹೆಚ್ಚು ಸೈನಿಕರನ್ನು ಕಳಕೊಂಡು ಮುಖಭಂಗ ಅನುಭವಿಸಿತು. ಆದರೆ ತಮ್ಮ ಜನರ ಮುಂದೆ ಯಾವ ಸೈನಿಕರೂ ತೀರಿಕೊಂಡಿಲ್ಲ ಎಂದು ಹೇಳುವ ಮೂಲಕ ಮಾನವುಳಿಸಿಕೊಳ್ಳುವ ಯತ್ನ ಮಾಡಿತ್ತು. ಈ ವೇಳೆಗೆ ಎವರ್‌ಗ್ರ್ಯಾಂಡ್ ಎಂಬ ರಿಯಲ್ ಎಸ್ಟೇಟ್ ಕಂಪೆನಿಯೊಂದು ಬೀದಿಗೆ ಬಂದು ಚೀನಾದ ಮೇಲ್ಮಧ್ಯಮ ಮತ್ತು ಮಧ್ಯಮವರ್ಗದ ಮಂದಿ ಕಣ್ಣೀರಿಡುವಂತಾಯ್ತು. ಕರೋನಾಕ್ಕಿಂತ ಮುಂಚೆ ಜನರಿಂದ ಮತ್ತು ಅನೇಕ ಬ್ಯಾಂಕುಗಳಿಂದ ಸಾಕಷ್ಟು ಸಾಲಪಡೆದು ಅಗಾಧವಾಗಿ ಬೆಳೆದುನಿಂತ ಎವರ್ ಗ್ರ್ಯಾಂಡ್ 200 ನಗರಗಳಲ್ಲಿ ಆಸ್ತಿಯನ್ನು ಮಾಡಿತು. ತನ್ನ ಶೇರುದಾರರಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಟ್ಟು ಭರವಸೆ ಮೂಡಿಸಿತು. ಕರೋನಾ ಲಾಕ್ಡೌನಿನ ನಂತರ ಮನೆಗಳ ಮಾರಾಟ ತೀವ್ರ ಪ್ರಮಾಣದಲ್ಲಿ ಕಡಿಮೆಯಾಯ್ತಲ್ಲ ಕಂಪೆನಿ ಸಾಕಷ್ಟು ನಷ್ಟ ಅನುಭವಿಸಿತು. ಚೀನಾದ ಬ್ಯಾಂಕುಗಳಿಂದ ಸಾಲ ಪಡೆಯಬಹುದಾದ ಮಿತಿಯನ್ನು ದಾಟಿದ್ದರಿಂದ ಅದಕ್ಕೀಗ ಹಣಕಾಸಿನ ಮುಗ್ಗಟ್ಟು ಕಂಡುಬಂತು. ಹೂಡಿಕೆದಾರರಿಗೆ ಕೊಡಬೇಕಾಗಿದ್ದ ಹಣದ ಬದಲು ಅರೆನಿರ್ಮಿತ ಮನೆಗಳನ್ನು ನೀಡಲಾರಂಭಿಸಿತು. ಹಣವೇ ಬೇಕು ಎಂದವರ ಮುಂದೆ ಕೈಚೆಲ್ಲಿ ನಿಂತುಬಿಟ್ಟಿತು. ಶೆನ್‌ಜೆನ್‌ನಲ್ಲಿ ಮುಖ್ಯ ಕಛೇರಿಯ ಎದುರಿಗೆ ದೊಡ್ಡಮಟ್ಟದ ಜನ ಬೀದಿಗೆ ಬಂದುನಿಂತರು. ಈ ಕಂಪೆನಿಯ ಒಟ್ಟು ಸಾಲ ಎಷ್ಟಿತ್ತು ಗೊತ್ತೇನು? ಒಂದು ಅಂದಾಜಿನ ಪ್ರಕಾರ 88 ಬಿಲಿಯನ್ ಡಾಲರ್ಗಳಷ್ಟು! ಕಳೆದ ಜೂನ್ ತಿಂಗಳಿಗೆ ಕಟ್ಟಬೇಕಿದ್ದ ಬಡ್ಡಿಯೇ 80 ಮಿಲಿಯನ್ ಡಾಲರ್ ಗಳಿಗಿಂತ ಹೆಚ್ಚಿತ್ತು. ಎವರ್ ಗ್ರ್ಯಾಂಡ್ ನ ಈ ಪರಿಸ್ಥಿತಿಯಿಂದಾಗಿ ಚೀನಾದಲ್ಲಿ ಒಟ್ಟಾರೆ ಮನೆಗಳ ಬೆಲೆಯೇ ಶೇಕಡಾ 20ರಷ್ಟು ಕುಸಿಯಿತು. ಎಲ್ಲ ರಿಯಲ್ ಎಸ್ಟೆಟ್ ಕಂಪೆನಿಗಳ ಶೇರು ಮೌಲ್ಯ ಪಾತಾಳಕ್ಕೆ ಹೋಯ್ತು. ಎಲ್ಲಕ್ಕಿಂತ ದೊಡ್ಡ ನಷ್ಟ ಅನುಭವಿಸಿದ್ದು ತಮ್ಮೆಲ್ಲ ಬದುಕಿನ ಹಣವನ್ನು ಈ ಕಂಪೆನಿಯೊಳಗೆ ಹೂಡಿದ್ದ ದೊಡ್ಡಮಟ್ಟದ ಮಧ್ಯಮವರ್ಗದ ಮಂದಿ!
ಚೀನಾದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಅದರ ಸಾಲ 8 ಟ್ರಿಲಿಯನ್ ಡಾಲರುಗಳಷ್ಟಾಗಿತ್ತು. ಒನ್ ಬೆಲ್ಟ್ ಒನ್ ರೋಡ್ ನೆಪದಲ್ಲಿ ಅದರ ಒಂದು ಟ್ರಿಲಿಯನ್ ಡಾಲರ್ ನಷ್ಟು ಹಣ ಸಿಕ್ಕುಹಾಕಿಕೊಂಡು ಕೂತಿತ್ತು. ಕರೋನಾ ನಂತರ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಿತ್ತು. ಇತ್ತ ಗಡಿಯಲ್ಲಿ ಭಾರತದೊಂದಿಗೆ ಖ್ಯಾತೆ ತೆಗೆದು ತನ್ನ ಸೈನಿಕರನ್ನು ಕರೆತಂದು ನಿಲ್ಲಿಸಿಕೊಂಡಿತ್ತಲ್ಲ, ಭಾರತವೂ ಈ ಬಾರಿ ಅಷ್ಟೇ ಗಟ್ಟಿಯಾಗಿ ತಳವೂರಿದ್ದರಿಂದ ಸೈನ್ಯದ ಖರ್ಚು-ವೆಚ್ಚವೂ ಊಹಿಸಲಾರದಷ್ಟಾಗಿತ್ತು. ಒಂದೆಡೆ ಕ್ಷಾಮ ಮತ್ತೊಂದೆಡೆ ಪ್ರವಾಹ, ಧಾನ್ಯ ದಾಸ್ತಾನನ್ನು ಶೇಕಡಾ 50ರಷ್ಟು ತಿಂದುಹಾಕಿತ್ತು. ಒಂದೆಡೆ ಕುಸಿಯುತ್ತಿರುವ ಕೈಗಾರಿಕೆ ಉತ್ಪನ್ನಗಳು, ಮತ್ತೊಂದೆಡೆ ಏರುತ್ತಿರುವ ನಿರುದ್ಯೋಗ ಚೀನಾವನ್ನು ಒಳಗಿಂದೊಳಗೇ ತಿನ್ನುತ್ತಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ತನ್ನ ಅವಧಿ ವಿಸ್ತಾರವನ್ನು ದೃಢಪಡಿಸಿಕೊಂಡ ಷಿ ಮತ್ತೆ ಜಿರೊಕೊವಿಡ್ ಪಾಲಿಸಿಯನ್ನು ಜಾರಿಗೆ ತಂದ. ಮೊದಲ ಬಾರಿಗೆ ಈ ನೀತಿಯಿಂದಾಗಿ ಲಕ್ಷಾಂತರ ಮಂದಿಯ ಜೀವ ಉಳಿದಿರುವುದನ್ನು ಜನ ಮೆಚ್ಚಿದ್ದರು. ಆದರೆ ಈಗ ಜಗತ್ತೆಲ್ಲ ತಮ್ಮ ಚಟುವಟಿಕೆಗೆ ಮರಳಿರುವಾಗ ತಾವಿನ್ನು ಮನೆಗಳಲ್ಲಿ ತಮ್ಮ ತಾವು ಬಂಧಿಸಿಕೊಂಡು ಕುಳಿತಿರುವುದನ್ನು ಚೀನಿಯರಿಂದ ಸಹಿಸಲಾಗಲಿಲ್ಲ. ಶೂನ್ಯ ಕೋವಿಡ್ ಎಂಬುದೊಂದು ಕಟ್ಟುಕಥೆ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವುದು ಈಗ ಅವರಿಗೆ ಸತ್ಯವೆನಿಸುತ್ತಿದೆ. ಡಾ. ಪಾಲ್ ಹಂಟರ್ ಚೀನಾದ ಕೊವಿಡ್ ಲಸಿಕೆ ಪ್ರಭಾವಿಯಾಗಿಲ್ಲ ಎಂದು ಹಿಂದೆಯೇ ಹೇಳಿದ್ದು ಈಗ ಸತ್ಯವೆನಿಸುತ್ತಿದೆ. ಎಡಿನ್ಬರ್ಗ್ ವಿಶ್ವವಿದ್ಯಾಲಯದ ಪ್ರೊ. ದೇವಿಶ್ರೀಧರ್ ’80 ದಾಟಿರುವ ಚೀನಾದ ವೃದ್ಧರಲ್ಲಿ ಶೇಕಡಾ 40 ಮಂದಿಗೆ ಮಾತ್ರ ಬೂಸ್ಟರ್ ಲಸಿಕೆ ದೊರೆತಿರುವುದರಿಂದ ಭವಿಷ್ಯದ ದಿನಗಳು ಭಯಾನಕವಾಗಿದೆ’ ಎಂದಿದ್ದರಲ್ಲದೇ ಮಿಲಿಯನ್ಗಟ್ಟಲೆ ಮಂದಿ ಚೀನಾದಲ್ಲಿ ಇದುವರೆಗೂ ವ್ಯಾಕ್ಸಿನ್ ಪಡೆದುಕೊಂಡಿಲ್ಲ ಎಂದೂ ಎಚ್ಚರಿಸಿದ್ದರು. ಲಾಕ್ಡೌನಿನಲ್ಲಿ ಇದ್ದಷ್ಟೂ ದಿನ ವೈರಸ್‌ಗೆ ಅವರು ತಮ್ಮತಾವು ತೆರೆದುಕೊಂಡಿರಲಿಲ್ಲ. ಈಗ ಮನೆಯಿಂದ ಹೊರಬರುತ್ತಿದ್ದಂತೆ ಮತ್ತೆ ವೈರಸ್ ಆಕ್ರಮಿಸಿಕೊಳ್ಳುತ್ತಿದೆ. ಆಹಾರ ದಾಸ್ತಾನು ಕಡಿಮೆ ಇರುವುದರಿಂದ ಈ ಬಾರಿಯ ನಿರ್ವಹಣೆ ಅಷ್ಟು ಸುಲಭವಾಗಿಲ್ಲ. ಮೊದಲ ಬಾರಿ ಕೊವಿಡ್ ಬಂದಾಗಲೇ ಪ್ರತಿಯೊಬ್ಬ ವ್ಯಕ್ತಿಯ ಹೆಸರಲ್ಲೂ ಕ್ಯುಆರ್ ಕೋಡ್ ಜನರೇಟ್ ಮಾಡಲಾಗಿತ್ತು. ಅದು ನಮ್ಮ ಆರೋಗ್ಯ ಸೇತು ಆ್ಯಪ್‌ಗಿಂತಲೂ ಭಿನ್ನವಾದ್ದು. ಮಾಲ್‌ಗೆ ಹೋಗಬೇಕಾಗಲೀ ಅಥವಾ ರೈಲು ಹತ್ತಿ ಪಕ್ಕದೂರಿಗಾದರೂ ಸರಿ ಎಲ್ಲೆಡೆ ಬಾಗಿಲು ತೆರೆದುಕೊಳ್ಳಬೇಕೆಂದರೆ ಕ್ಯುಆರ್ ಕೋಡ್ ಅನ್ನು ಯಂತ್ರಕ್ಕೆ ಹಿಡಿಯಲೇಬೇಕು. ಅಲ್ಲೇನಾದರೂ ಬಣ್ಣ ಕೆಂಪು ಬಂತೆಂದರೆ ಆ ಬಾಗಿಲು ನಿಮಗೆ ತೆರೆಯಲ್ಪಡುವುದೇ ಇಲ್ಲ. ಬದಲಿಗೆ ಅದು ಜೋರಾಗಿ ಸದ್ದು ಮಾಡಿ, ನಿಮ್ಮಿಂದ ಇತರರು ದೂರ ಓಡುವಂತೆ ಮಾಡುತ್ತದಲ್ಲದೇ ಕೊವಿಡ್ ಪೊಲೀಸರು ಬಂದು ನಿಮ್ಮನ್ನು ಬಂಧಿಸಲು ಅನುಕೂಲ ಮಾಡಿಕೊಡುತ್ತದೆ. ಒಮ್ಮೆ ಅವರು ಬಂಧಿಸಿದರೆಂದರೆ ನೀವು ಮುಂದಿನ ಒಂದು ತಿಂಗಳ ಕಾಲ ಅಥವಾ ಕ್ಯುಆರ್ ಕೋಡ್ ನಲ್ಲಿ ಬಣ್ಣ ಹಸಿರಿಗೆ ತಿರುಗುವವರೆಗೂ ನರಕ ಯಾತನೆ ಅನುಭವಿಸಲೇಬೇಕು. ಇನ್ನೂ ವಿಚಿತ್ರವೇನು ಗೊತ್ತೇ? ನಿಮಗೆ ಅರಿವಿಲ್ಲದೇ ಕ್ಯುಆರ್ ಕೋಡ್ ನಲ್ಲಿ ಕೆಂಪು ಬಣ್ಣ ಇದ್ದವನೊಂದಿಗೆ ನೀವು ಹತ್ತು ನಿಮಿಷ ಮಾತನಾಡಿದರೂ ನಿಮ್ಮ ಕ್ಯುಆರ್ ಕೋಡ್ ಕೆಂಪು ಬಣ್ಣಕ್ಕೆ ತಿರುಗಿಬಿಡುತ್ತದೆ. ಅಲ್ಲಿಗೆ ನೀವು ಸತ್ತಂತೆ. ಹೀಗಾಗಿಯೇ ಒಬ್ಬರ ಕ್ಯುಆರ್ ಕೋಡ್ ಕೆಂಪಾಗಿದೆ ಎಂಬ ಸದ್ದು ಬಂದೊಡನೆ ಉಳಿದ ಮಂದಿ ಅವನಿಂದ ದೂರವೋಡಲಾರಂಭಿಸುತ್ತಾರೆ. ಹೆಚ್ಐವಿ ಎನ್ನುವುದರ ಕುರಿತಂತೆ ತಪ್ಪು ಕಲ್ಪನೆಗಳಿದ್ದಾಗಲೂ ಭಾರತದಲ್ಲಿ ಮಂದಿ ಹೀಗೆ ನಡೆದುಕೊಂಡಿರಲಿಲ್ಲ. ಚೀನಾದಲ್ಲಿ ಜನರ ಆಕ್ರೋಶ ಈ ಕಾರಣಕ್ಕಾಗಿ ದಿನೇ ದಿನೇ ಹೆಚ್ಚುತ್ತಿದೆ!
ಜನ ಬೀದಿಗೆ ಬರಲು ಕಾರಣ ಇದೇ. ಇನ್ನೂ ಅಚ್ಚರಿಯ ಸಂಗತಿ ಏನು ಗೊತ್ತೇ? ಸರ್ಕಾರ ತನ್ನ ಬಳಿಯಿರುವ ಡಾಟಾ ಬಳಸಿ ತನ್ನ ವಿರೋಧಿಯ ಕ್ಯುಆರ್ ಕೋಡ್ ಕೆಂಪಾಗುವಂತೆ ಸಲೀಸಾಗಿ ಮಾಡಿಬಿಡಬಲ್ಲದು. ಅಲ್ಲಿಗೆ ನಿಮ್ಮನ್ನು ಕೊಲ್ಲಬೇಕೆಂದು ಷಿ ನಿಶ್ಚಯಿಸಿದರೆ ಆತನ ಪಾಲಿಗೆ ಅದು ಕಂಪ್ಯೂಟರ್ನಲ್ಲಿ ಒಂದು ಕ್ಲಿಕ್ ಮಾತ್ರ!
ಯಾವುದಕ್ಕೂ ಮಣಿಯದ ಚೀನೀ ಆಡಳಿತ ಪಡೆ ಮೊದಲ ಬಾರಿಗೆ ಕೊವಿಡ್ ನಿಯಮಗಳನ್ನು ಸಡಿಲಗೊಳಿಸುವ ಮಾತನಾಡುತ್ತಿದೆ. ಹಾಗೇನಾದರೂ ಆತ ಪೂರ್ಣ ಸಡಿಲಿಸಿದ್ದೇ ಆದರೆ ಕನಿಷ್ಠ ಪಕ್ಷ ಎರಡು ಮಿಲಿಯನ್ ಮಂದಿ ಅದಕ್ಕೆ ಆಹುತಿಯಾಗಲಿದ್ದಾರೆ ಎಂಬ ಆತಂಕವನ್ನು ಜಗತ್ತು ವ್ಯಕ್ತಪಡಿಸುತ್ತಿದೆ. ಏನಾಗುವುದೆಂದು ಕಾದು ನೋಡಬೇಕಷ್ಟೇ! ಜನರ ಗಮನವನ್ನು ಆತನಿಗೆ ಬೇರೆಡೆ ಸೆಳೆಯಲು ಇರುವುದೊಂದೇ ಮಾರ್ಗ. ಯಾರೊಂದಿಗಾದರೂ ಕಾಲು ಕೆರಕೊಂಡು ಜಗಳಕ್ಕೆ ಹೋಗಬೇಕು. ಚೀನೀ ಜನರ ಭಾವನೆಯನ್ನು ಕೆರೆಯಬೇಕು. ಅದಾಗಲೇ ಗಾಲ್ವಾನಿನಲ್ಲಿ ಭಾರತ ಸರಿಯಾದ ತಪರಾಕಿ ಕೊಟ್ಟಿದೆ. ಜಪಾನ್ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದೆ. ಇನ್ನು ಅದಕ್ಕಿರುವುದು ತೈವಾನ್ ಒಂದೇ. ಮುಂದಿನ ದಿನಗಳಲ್ಲಿ ನಾವು ತೈವಾನ್ನತ್ತ ಏರಿಹೋಗುವ ಅಥವಾ ಆಂತರಿಕವಾಗಿ ಕುಸಿದುಹೋಗುವ ಚೀನಾ ನೋಡಬಹುದೆನಿಸುತ್ತದೆ!
ಅಂದಹಾಗೆ, ಇವೆಲ್ಲದರ ನಡುವೆ ಕಾಣೆಯಾಗಿರುವುದು ಮಾತ್ರ ಸಿದ್ದರಾಮಯ್ಯನವರು..