ಮತ್ತೊಂದು ಚುನಾವಣೆ ಬಂತು. ಎಷ್ಟೋ ಜನ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ರಾತೋ ರಾತ್ರಿ ದೇಶಭಕ್ತರು, ಹಿಂದುತ್ವನಿಷ್ಠರೂ ಆಗಿಬಿಡುತ್ತಾರೆ. ಕಾಂಗ್ರೆಸ್ಸಿನ ಟಿಕೆಟ್ ಬೇಕೆಂದುಕೊಂಡವರು ಲೋಡುಗಟ್ಟಲೆ ಹೂವು, ಹಣ್ಣುಗಳನ್ನು ಹಿಡಿದುಕೊಂಡು ನಾಯಕರುಗಳ ಮನೆಮುಂದೆ ನಿಂತು ಜೀ ಹುಜೂರಿ ಮಾಡುತ್ತಾರೆ. ಜೆಡಿಎಸ್‌ನಲ್ಲೇ ಆರಾಮು. ಅಲ್ಲಿ ಒಂದು ಪರಿವಾರದ ಮುಂದೆ, ಒಬ್ಬ ವ್ಯಕ್ತಿಯ ಮುಂದೆ ನಿಂತರೆ ಸಾಕು. ಗೆಲ್ಲುವ ಭರವಸೆ ಇದೆಯೋ ಇಲ್ಲವೋ ಟಿಕೆಟ್ ಸಿಗುವ ಭರವಸೆಯಂತೂ ಇದೆ. ಅಚ್ಚರಿಯೇನು ಗೊತ್ತೇ? ಟಿಕೆಟ್ ಕೇಳುವ ಪ್ರತಿಯೊಬ್ಬನೂ ತಾನೇ ಗೆಲ್ಲುತ್ತೇನೆ ಎಂಬುದಕ್ಕೆ ಸಾಕಷ್ಟು ಅಂಕಿ-ಅಂಶಗಳನ್ನು ಸಿದ್ಧಪಡಿಸಿ ಅದನ್ನೂ ಜೊತೆಗೇ ತಂದಿರುತ್ತಾನೆ. ನಿರಂತರವಾಗಿ ಚುನಾವಣೆಗಳನ್ನು ಗೆಲ್ಲುತ್ತಾ ಜನರಿಂದ ಅಜಾತಶತ್ರು ಎನಿಸಿಕೊಂಡಿರುವ ವ್ಯಕ್ತಿಗಳ ಮುಂದೆಯೂ ತಾವು ಗೆಲ್ಲಬಹುದಾಗಿರುವ ಮಾರ್ಗವನ್ನು ಈ ಎದುರಾಳಿಗಳು ಹೇಳುವುದನ್ನೆಲ್ಲ ಕಂಡಾಗ ಅನೇಕ ಬಾರಿ ನಗು ಬರುತ್ತದೆ. ಕಾಶಿಯಲ್ಲಿ ಮೋದಿಯವರ ವಿರುದ್ಧ ಗೆದ್ದೇ ಗೆಲ್ಲುತ್ತೇನೆಂದು ಕೇಜ್ರಿವಾಲ್ ಹೇಳಿರಲಿಲ್ಲವೇ? ಇವರಿಗೆಲ್ಲ ಠೇವಣಿ ಉಳಿಸಿಕೊಳ್ಳುವುದೂ ಕಷ್ಟವಾಗಿಬಿಟ್ಟಿತ್ತು. ರಾಜಕೀಯ ಕ್ಷೇತ್ರವೇ ಏಕೆ ಬೇಕು ಎಂದು ಕೇಳಿದರೆ, ಜನಸೇವೆ ಮಾಡಲು ಎಂಬ ಸಿದ್ಧ ಉತ್ತರ ಇವರ ಬಳಿ ಇರುತ್ತದೆ. ಜನರ ಸೇವೆ ಮಾಡಲು ಬೇರೆ ದಾರಿಯೇ ಇಲ್ಲವೇ? ಎಂದು ಕೇಳಿನೋಡಿ, ಅಧಿಕಾರವಿದ್ದರೆ ಹೆಚ್ಚು ಜನರನ್ನು ತಲುಪಬಹುದು ಎನ್ನುತ್ತಾರೆ. ಇವರಿಗಿರುವ ದೂರದೃಷ್ಟಿ, ಕಾಳಜಿ ಇವುಗಳನ್ನು ಗಮನಿಸಿದರೆ ಇವರು ಎಷ್ಟು ಹೆಚ್ಚು ಮಂದಿಗೆ ತಲುಪಬಲ್ಲರೋ ಎಂಬುದನ್ನು ಎಂಥವರೂ ಊಹಿಸಬಲ್ಲ. ವಾಸ್ತವವಾಗಿ ರಾಜಕಾರಣಿಯಾಗಿ ಜನಸೇವೆ ಮಾಡುತ್ತೇನೆ ಎನ್ನುವುದು ಅಕ್ಷರಶಃ ಮೋಸ. ಆತ ಶಾಸಕನಾಗಿ, ಮಂತ್ರಿಯಾಗಿ ತನ್ನ ಕರ್ತವ್ಯವನ್ನು ಮಾಡಬೇಕಾಗಿದೆ, ಸೇವೆ ಎಂಬ ಉಪಕಾರವನ್ನೇನೂ ಅಲ್ಲ!

ಇಷ್ಟಕ್ಕೂ ರಾಜಕಾರಣ ಒಂದೇ ಅಂತಿಮ ಗುರಿ ಎಂದು ಜನ ಭಾವಿಸುವಂತಾಗಿರುವುದು ಬಲು ದುರದೃಷ್ಟಕರ ಸಂಗತಿ. ನೀವು ಮಾಡುವ ಎಲ್ಲ ಕೆಲಸಗಳನ್ನು ಬದಿಗಿಟ್ಟು ರಾಜಕಾರಣಕ್ಕೆ ಧುಮುಕಬೇಕೆಂದು ಎಲ್ಲರೂ ಅಪೇಕ್ಷಿಸುತ್ತಾರೆ. ಮೋದಿಯ ಅಲೆಯಲ್ಲಿ ಜನರಿಗೆ ಪರಿಚಯವೇ ಇಲ್ಲದ ವೈದ್ಯರೊಬ್ಬರು ಸುಶಿಕ್ಷಿತನಾಗಿರುವ ತಾನು ಸಂಸತ್ ಸದಸ್ಯನಾಗಿ ಮೋದಿಗೇಕೆ ಬೆಂಬಲವಾಗಿ ನಿಲ್ಲಬಾರದು ಎಂದು ಕೇಳಿದಾಗ, ನಗುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಅನೇಕ ಐಎಎಸ್ ಅಧಿಕಾರಿಗಳು ತಾವು ಅಧಿಕಾರದಲ್ಲಿರುವಾಗಲೇ ರಾಜಕಾರಣಿಯಾಗುವ ಕನಸನ್ನು ಕಾಣುತ್ತಿರುವುದು ಈಗ ಹೊಸತೇನೂ ಅಲ್ಲ. ರಾಜಕಾರಣವೆಂಬ ಈ ಕುಲುಮೆ ಸದ್ಯಕ್ಕಂತೂ ಚೆನ್ನಾಗಿ ಕುದಿಯುತ್ತಿದೆ. ಇಂಥವರ ಬಳಿ ನೀವು ಜನಸೇವೆಯ ಭಿನ್ನ-ಭಿನ್ನ ಸ್ವರೂಪಗಳ ಕುರಿತಂತೆ ಮಾತನಾಡಿದರೆ ಅವರ ತಲೆಗೆ ಹತ್ತುವುದೇ ಇಲ್ಲ. ವಾಸ್ತವವಾಗಿ ರಾಜಕಾರಣ ಸರಿಯಾದ ದಿಕ್ಕಿನಲ್ಲಿರಬೇಕೆಂದರೆ ಸಮರ್ಥ ಸಮಾಜದ ನಿರ್ಮಾಣ ಆಗಬೇಕು. ಹಾಳಾದ ಸಮಾಜ ನಿಕೃಷ್ಟ ವ್ಯಕ್ತಿಗಳನ್ನೇ ಭಿನ್ನ ಭಿನ್ನ ಕ್ಷೇತ್ರಗಳಿಗೆ ಕೊಡುಗೆಯಾಗಿ ನೀಡುತ್ತದೆ. ರಾಜಕೀಯ ಕ್ಷೇತ್ರವೂ ಅದರಿಂದ ಹೊರತಲ್ಲ. ಹೀಗಾಗಿ ಶ್ರೇಷ್ಠ ರಾಜಕಾರಣಿಗಳು ಬೇಕೆಂದರೆ ಶ್ರೇಷ್ಠ ಸಮಾಜ ಮಾತ್ರ ಅದನ್ನು ಕೊಡಬಲ್ಲದು. ಹೀಗಾಗಿ ಯಾರ್ಯಾರು ಸಮಾಜ ಸೇವೆ ಎಂಬ ಮಾತುಗಳನ್ನಾಡುತ್ತಾರೋ ಅವರನ್ನೆಲ್ಲ ಸಮಾಜ ನಿರ್ಮಾಣದ ಕಾರ್ಯಕ್ಕೆ ಕೆಲದಿನ ಹಚ್ಚಿದರೆ ಸರಿಯಾದೀತೇನೋ! ಇತ್ತೀಚೆಗೆ ದೊಡ್ಡ ಉದ್ಯಮಿಯೊಬ್ಬರನ್ನು ಭೇಟಿಯಾಗಿದ್ದೆ. ದೊಡ್ಡ ಕಂಪನಿಯೊಂದರ ಟ್ರಸ್ಟಿಯಾಗಿದ್ದ ಅವರು ಈಗ ಪತ್ರಿಕೆಗಳಿಗೆ ಬರೆಯುತ್ತಾ ಟಿವಿ ಡಿಬೆಟ್‌ಗಳಲ್ಲಿ ಕೂರುತ್ತಾ ಭಾರತ ನಿರ್ಮಾಣದ ಕುರಿತಂತೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅವರೊಡನೆ ಮಾತನಾಡುವಾಗ ಅವರು ಸಾಮಾಜಿಕ ಚಟುವಟಿಕೆ ಮಾಡುವವರನ್ನು ಕೆಲಸಕ್ಕೆ ಬಾರದವರೆಂದು ಜರಿದದ್ದಲ್ಲದೇ ಸಣ್ಣಪುಟ್ಟ ಕೆಲಸಗಳಿಂದ ಮಹತ್ತರ ಬದಲಾವಣೆ ಸಾಧ್ಯವಿಲ್ಲ, ಅದಕ್ಕೆ ಆರ್ಥಿಕವಾಗಿ ಭಾರತವನ್ನು ಬಲಾಢ್ಯಗೊಳಿಸುವುದೊಂದೇ ಮಾರ್ಗ ಎಂದರು. ನನಗೇನೂ ವಿಶೇಷವೆನಿಸಲಿಲ್ಲ. ಬಂಡವಾಳಶಾಹಿ ಮಾನಸಿಕತೆಯ ಪ್ರತಿಯೊಬ್ಬನಿಗೂ ಭಾರತ ಮತ್ತೊಮ್ಮೆ ಶ್ರೇಷ್ಠ ಮಟ್ಟಕ್ಕೇರಬೇಕೆಂದರೆ ಆರ್ಥಿಕ ಮಾರ್ಗವೊಂದೇ ಸೂಕ್ತವಾದ್ದು ಎನಿಸುತ್ತದೆ. ಎಲ್ಲಿಯವರೆಗೂ ಮೋದಿ ವ್ಯಾಪಾರಿಗಳಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿರುತ್ತಾರೋ ಅಲ್ಲಿಯವರೆಗೂ ಅವರ ಪಾಲಿಗೆ ಆತ ಅದ್ಭುತವೆನಿಸುತ್ತಾನೆ. ಮೋದಿ ಸ್ವಲ್ಪಮಟ್ಟಿಗೆ ವ್ಯಾಪಾರ ವಹಿವಾಟುಗಳಿಂದ ಆಚೆಬಂದು ಸಾಂಸ್ಕೃತಿಕ ನಿರ್ಮಾಣದ ತಯಾರಿಯಲ್ಲಿ ನಿಂತೊಡನೆ ಇವರೆಲ್ಲ ಸೆಕ್ಯುಲರಿಸಂ ಚಿಂತನೆಗೆ ಭಂಗ ಬಂತೆಂದು ಬೊಬ್ಬಿಡುತ್ತಾರೆ. ಇವರುಗಳಿಗೂ ತಮ್ಮ ಆಲೋಚನೆಯನ್ನು ಸಾಕಾರಗೊಳಿಸದ ಮಂತ್ರಿ, ಮುಖ್ಯಮಂತ್ರಿಗಳು ದಡ್ಡರೆನಿಸುತ್ತಾರೆ. ಸಾಂಸ್ಕೃತಿಕವಾಗಿ ಭಾರತ ಗಟ್ಟಿಗೊಳ್ಳಬೇಕೆಂದು ಇವರಿಗೆ ಎಂದಿಗೂ ಅನಿಸುವುದೇ ಇಲ್ಲ. ಅಚ್ಚರಿಯೇನು ಗೊತ್ತೇ? ಇವರನ್ನು ಭೇಟಿಮಾಡುವ ಒಂದು ತಿಂಗಳ ಹಿಂದೆಯೇ ಶ್ರೀಧರ್ ವೆಂಬು ಅವರನ್ನು ಸಂದರ್ಶಿಸಿದ್ದೆ. ಜೊಹೊ ಕಾರ್ಪೊರೇಶನ್‌ನ ಮೂಲಕ ವರ್ಷಕ್ಕೆ ಸಾವಿರಾರು ಕೋಟಿರೂಪಾಯಿ ಲಾಭ ಗಳಿಸುತ್ತಿರುವ ಆತ ಈ ದೇಶದ ಐವತ್ತನೇ ದೊಡ್ಡ ಶ್ರೀಮಂತ. ಸಹಜವಾಗಿಯೇ ಇಷ್ಟು ಶ್ರೀಮಂತಿಕೆ ಏನನ್ನಿಸುತ್ತದೆ ಎಂದು ಕೇಳಿದ್ದಕ್ಕೆ, ನಗುನಗುತ್ತಲೇ ಉತ್ತರಿಸಿದ ವೆಂಬು ‘ಮೊದಲು ಬೆಳಗ್ಗಿನ ಉಪಾಹಾರಕ್ಕೆ ಐದು ಇಡ್ಲಿ ತಿನ್ನುತ್ತಿದ್ದೆ. ಈಗಲೂ ಅಷ್ಟೆ. ಐವತ್ತನೇ ಶ್ರೀಮಂತ ಎಂಬುದೆಲ್ಲ ಸಂಖ್ಯೆ ಮಾತ್ರ. ನಿಜವಾಗಿಯೂ ಆಗಬೇಕಾದ್ದು ತನ್ನ ಜೊತೆಗಿರುವವರ ಏಳ್ಗೆ. ನನಗೆ ಹೆಮ್ಮೆ ಇರುವುದು ಆ ವಿಚಾರದಲ್ಲಿ’ ಎಂದರು. ಈ ಉತ್ತರ ಸಾಮಾನ್ಯ ಭಾರತೀಯನ ಆಲೋಚನೆಗಳಿಗೆ ಹತ್ತಿರವಾಗಿದೆ ಎನಿಸಿ ಇಂತಹ ದೊಡ್ಡ ಆಲೋಚನೆ ನಿಮ್ಮ ಮನಸ್ಸಿಗೆ ಬಂದದ್ದಾದರೂ ಏಕೆ ಎಂದು ಕೇಳಿದೆ. ವಿಸ್ತಾರವಾಗಿ ಉತ್ತರಿಸುತ್ತಾ ಅವರು ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ತಂದೆಯೊಡನೆ ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಾಗ ಚಿಕ್ಕ ಹುಡುಗ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದನಂತೆ, ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರು ಇಷ್ಟು ಭವ್ಯ ದೇಗುಲವನ್ನು ಕಟ್ಟಿರಬಹುದಾದರೆ ನಾವು ಈಗೇಕೆ ಪ್ರಯತ್ನಿಸಲು ಸಾಧ್ಯವಿಲ್ಲ ಅಂತ. ಇದು ಅವರಿಗೆ ಮೂಲ ಇಂಧನವಾಯ್ತು. ಅದಕ್ಕೆ ರಾಷ್ಟ್ರೀಯತೆಯ ಕಿಡಿ ಸೇರಿಕೊಂಡು ಧಗಧಗನೆ ಹೊತ್ತಿ ಉರಿಯಲಾರಂಭಿಸಿತು. ಹೀಗಾಗಿ ಬಹಳ ದಿನ ವಿದೇಶದಲ್ಲಿ ಅವರಿಗೆ ಇರಲಾಗಲಿಲ್ಲ. ಈಗ ದೊಡ್ಡ ಉದ್ಯಮಿಯಾಗಿದ್ದಾರೆ ಮತ್ತು ತಮ್ಮ ಹಳ್ಳಿಯ ಜನರ ಬದುಕಿಗೆ ಬೆಳಕಾಗಿದ್ದಾರೆ. ಅವರ ಹಳ್ಳಿಯ ಹೆಸರು ತೆಂಕಾಶಿ. ದಕ್ಷಿಣದ ಕಾಶಿ ಎಂಬುದು ಅದಕ್ಕೆ ಅರ್ಥವಿರಬೇಕು. ಹೀಗಾಗಿ ಅವರು ಮಾತನಾಡುತ್ತಾ ತಮ್ಮದ್ದೊಂದು ಭವ್ಯವಾದ ಕನಸನ್ನು ಹಂಚಿಕೊಂಡರು. ಉತ್ತರದ ಕಾಶಿಯನ್ನು ದಕ್ಷಿಣದಲ್ಲಿ ನಿರ್ಮಿಸಿ ಅದಕ್ಕೆ ದಕ್ಷಿಣ ಕಾಶಿ ಎಂದು ಕರೆಯಬಹುದಾದರೆ, ಕಾಂಚಿಯ ದೇವಸ್ಥಾನವನ್ನು ಉತ್ತರದಲ್ಲಿ ನಿರ್ಮಿಸಿ ಅದನ್ನೇಕೆ ಉತ್ತರ ಕಾಂಚಿ ಎಂದು ಕರೆಯಬಾರದು ಎಂದರು. ಇದನ್ನು ಹೇಳುವಾಗ ಅವರ ಕಣ್ಣುಗಳಲ್ಲಿ ವಿಶೇಷವಾದ ಕಾಂತಿಯಿತ್ತು. ನನಗೂ ಒಮ್ಮೆ ಮೈ ಬೆಚ್ಚಗಾದ ಅನುಭವ. ಕಾಶಿಯಲ್ಲಿ ಇಂಥದ್ದೊಂದು ಪ್ರಯತ್ನ ಮಾಡಬೇಕೆಂದು ಅದಾಗಲೇ ಅವರು ತಲೆಕೆಡಿಸಿಕೊಂಡಿದ್ದಾರೆ. ತಾವಿರುವ ಸುತ್ತ-ಮುತ್ತ ಶಿಥಿಲವಾಗಿದ್ದ ದೇವಸ್ಥಾನಗಳಲ್ಲಿ ನಿರಂತರ ಪೂಜೆ ನಡೆಯುವಂತೆ ಮಾಡಿ ಅದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. ಒಂದೆಡೆ ಕಂಪನಿಯನ್ನು ಕಟ್ಟಿ ಲಾಭ ಮಾಡುತ್ತಿರುವುದೂ ಅಲ್ಲದೇ ಮತ್ತೊಂದೆಡೆ ಭಾರತದ ಸಾಂಸ್ಕೃತಿಕ ಪುನರುದ್ಧಾರಕ್ಕಾಗಿ ತಮ್ಮದ್ದೇ ಆದ ರೀತಿಯಲ್ಲಿ ಕೊಡುಗೆಯನ್ನೂ ನೀಡುತ್ತಿದ್ದಾರೆ. ಚುನಾವಣೆಗೆ ನಿಲ್ಲದೇ ಭಾರತದ ಆಸ್ಥೆಯನ್ನು ವೃದ್ಧಿಸುತ್ತಿರುವ ಇಂತಹ ಮಂದಿಯನ್ನು ಹೇಗೆ ಕಾಣಬೇಕು ಹೇಳಿ?! ಆಂತರಿಕ ಜಗತ್ತಿನಲ್ಲಿ ಆನಂದದಿಂದ ವಿಹರಿಸುತ್ತಾ ಬಹಿರಂಗದಲ್ಲೂ ಸಮರ್ಥವಾಗಿ ಕೆಲಸ ಮಾಡುವ ಇಂತಹ ಮಂದಿಯೇ ಭಾರತದ ಐಕಾನ್‌ಗಳಾಗುತ್ತಾರೆಯೇ ಹೊರತು ಬರಿ ಆರ್ಥಿಕ ವೃದ್ಧಿಯ ದರವನ್ನೇ ಮಾಪನವಾಗಿಟ್ಟುಕೊಂಡು ಭಾರತೀಯರ ಸಾಧನೆಗಳನ್ನು ಅಳೆಯುವ ಮಂದಿಯಲ್ಲ.

ನಿಜವಾಗಿಯೂ ದೊಡ್ಡ ಸಾಧನೆ ಇರುವುದು ಆಂತರಿಕ ಮತ್ತು ಬಾಹ್ಯ ಜಗತ್ತಿನ ಸಮನ್ವಯ ಸಾಧಿಸುವಲ್ಲಿ. ಇಂದಿನ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಜನಸಾಮಾನ್ಯರು ಸೋಲುತ್ತಿರುವುದು ಅಲ್ಲಿಯೇ. ರಾಜಕಾರಣಿಗಳು ಆಂತರಿಕ ಜಗತ್ತಿನಿಂದ ದೂರ ಬಂದುಬಿಟ್ಟಿದ್ದಾರೆ. ಅವರ ಅಂತರಾತ್ಮ ಸತ್ತು ಹೋಗಿದೆ. ಅವರು ತಪ್ಪು ಮಾಡುವಾಗ, ಲಂಚ ಪಡೆಯುವಾಗ, ಇತರರೆದುರು ಪುಂಖಾನುಪುಂಖವಾಗಿ ಸುಳ್ಳು ಹೇಳುವಾಗ ಎಚ್ಚರಿಸಬೇಕಾಗಿದ್ದ ಅಂತರಂಗ ಶಾಂತವಾಗಿ ಕುಳಿತುಬಿಟ್ಟಿದೆ. ಹೀಗಾಗಿಯೇ ಅವರು ಭರ್ಜರಿಯಾಗಿ ದುಡ್ಡು ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಮಕ್ಕಳು, ಮೊಮ್ಮಕ್ಕಳು ಈ ಪರಂಪರೆಯನ್ನು ಮುಂದುವರಿಸಲೆಂದು ಅವರನ್ನೂ ಅಧಿಕಾರದ ಪಡಸಾಲೆಗೆ ಕರೆತರುತ್ತಾರೆ. ನಾಯಕರುಗಳ ಈ ದೂರದೃಷ್ಟಿಯ ಅಭಾವದ ಕೊರತೆಯನ್ನು ಸಮಾಜ ಅನೇಕ ದಶಕಗಳ ಕಾಲ ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ಕೊಪ್ಪಳದ ಬಳಿಯ ಹುಲಿಗಿ ದೇವಸ್ಥಾನಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ದೇವಸ್ಥಾನದ ಸುತ್ತ-ಮುತ್ತಲಿನ ಕೊಳಕನ್ನು ಕಂಡು ಅಸಹ್ಯವೆನಿಸಿತು. ಮಂಗಳವಾರ ಮತ್ತು ಶುಕ್ರವಾರಗಳು ಬಂತೆಂದರೆ ಕುರಿ, ಮೇಕೆ, ಟಗರು, ಕೋಳಿಗಳ ಬಲಿ ಇಲ್ಲಿ ನಡೆಯುತ್ತದೆ. ಹೀಗೆ ಬಲಿಕೊಟ್ಟವರು ಅಲ್ಲಿಯೇ ಅಡುಗೆ ಮಾಡಿ, ಉಂಡು, ಮನೆಗೆ ತೆರಳುತ್ತಾರೆ. ಚಕ್ಕಡಿ ಗಾಡಿಗಳಲ್ಲಿ, ಟ್ರಾಕ್ಟರ್ಗಳಲ್ಲಿ ಗುಂಪು-ಗುಂಪಾಗಿ ಬರುವ ಹಳ್ಳಿಯ ಮಂದಿ ನೋಡಿದರೆ ಹಳ್ಳಿಯನ್ನೇ ಬಿಟ್ಟು ಗುಳೆ ಹೊರಟವರಂತೆ ಕಾಣುತ್ತಾರೆ. ಆದರೆ ಅದು ಹುಲಿಗೆಮ್ಮನ ಮೇಲಿನ ಭಕ್ತಿ. ಇಡಿಯ ಮಂದಿರದ ಆವರಣವನ್ನು ಸ್ವಚ್ಛವಾಗಿರಿಸಿಕೊಳ್ಳಲು ಸರ್ಕಾರ ನಡೆಸಿರುವ ಪ್ರಯತ್ನ ನಗಣ್ಯವಾದ್ದು. ನಿಮಗೆ ಅಚ್ಚರಿಯಾಗುವ ಸಂಗತಿಯೇನು ಗೊತ್ತೇ? ಈ ಮಂದಿರದ ವಾರ್ಷಿಕ ಆದಾಯ ಕನಿಷ್ಠ ಹತ್ತು ಕೋಟಿ ರೂಪಾಯಿ. ದೇವಸ್ಥಾನಕ್ಕೆ ಬರುವ ಇತರೆ ದಾನ, ದಕ್ಷಿಣೆಗಳು ಬೇರೆ. ಹೊರಗಿನಿಂದ ಬರುವ ಅಂಗಡಿ ಬಾಡಿಗೆಗಳೂ ಕೂಡ ಬೇರೆ. ಬರಿಯ ಹುಂಡಿಯಿಂದಲೇ ಸಂಗ್ರಹವಾಗುವ ಇಷ್ಟು ಹಣದಲ್ಲಿ ಎಷ್ಟನ್ನು ದೇವಸ್ಥಾನಕ್ಕೆ ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಮರಳಿಸಿದ್ದೀರಿ ಎಂದು ಸರ್ಕಾರವನ್ನು ಕೇಳಿನೋಡಿ, ಅದು ಶೂನ್ಯಕ್ಕೆ ಬಲು ಹತ್ತಿರ! ಜನ ಬರುತ್ತಾರಾದ್ದರಿಂದಲೇ ಇದು ಕೊಳಕು ಎಂದು ವಾದ ಮಂಡಿಸುವ ಮಂದಿಯನ್ನು ನೋಡಿದರೆ ಪಿಚ್ಚೆನಿಸುತ್ತದೆ. ಏಕೆಂದರೆ ಅನೇಕ ರಾಷ್ಟ್ರಗಳು ಹೆಚ್ಚು ಜನ ಬರಲೆಂದು ತಮ್ಮ ಪ್ರವಾಸೀ ತಾಣಗಳನ್ನು ವಿಶೇಷವಾಗಿ ಅಭಿವೃದ್ಧಿಪಡಿಸುತ್ತಾರೆ. ನಾವಾದರೋ ಜನ ಹೆಚ್ಚು ಬರುವುದನ್ನೇ ಸಮಸ್ಯೆಯಾಗಿ ನೋಡುತ್ತೇವೆ. ಕಾಶಿಯ ವಿಶ್ವನಾಥ ಮಂದಿರವನ್ನೇ ಮೋದಿ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಬಹುದಾದದರೆ ಹುಲಿಗೆಮ್ಮ ದೇವಸ್ಥಾನದ ಆವರಣವನ್ನು ನಾವೇಕೆ ಭಕ್ತೋಪಯೋಗಿಯಾಗಿ ರೂಪಿಸಲಾಗದು? ಇಲ್ಲಿ ಬೇಕಾಗಿರುವುದು ದೂರದೃಷ್ಟಿ ಮತ್ತು ತಮ್ಮ ಜನರ ಮೇಲಿನ ಕಾಳಜಿ ಮಾತ್ರ.
ಜನಸಾಮಾನ್ಯರನ್ನು ಅವರಿರುವ ಹಂತದಿಂದ ಮೇಲಕ್ಕೆತ್ತಿ, ಅವರ ಬದುಕನ್ನು ಸುಂದರಗೊಳಿಸುವ ಹೊಣೆಗಾರಿಕೆ ಜನ ಪ್ರತಿನಿಧಿಗಳದ್ದಲ್ಲವೇನು? ಇನ್ನೆಷ್ಟು ದಿನ ಕೊಳಕಿನಲ್ಲಿ ಕೊಳಕಾಗಿ ಅದೇ ಹಣೆಪಟ್ಟಿಯನ್ನು ಹಚ್ಚಿಕೊಂಡು ಉತ್ತರ ಕರ್ನಾಟಕದವರು ಬದುಕಬೇಕು ಹೇಳಿ? ನಾವು ಊಹಿಸಲಾಗದಷ್ಟು ಹಿಂದೆ ಇದ್ದೇವೆ. ತಮ್ಮ ಜೀವನಶೈಲಿಯನ್ನು ವಿದೇಶಿಗರ ಮಟ್ಟಕ್ಕೆ ಏರಿಸಿಕೊಳ್ಳುವ ಧಾವಂತದಲ್ಲಿ ತಮ್ಮ ಜನರ ಬದುಕನ್ನು ಸಾಮಾನ್ಯಕ್ಕಿಂತ ಕೆಳಮಟ್ಟಕ್ಕೆ ತಳ್ಳುತ್ತಿರುವ ಈ ನಾಯಕರುಗಳಿಂದ ಸತ್ಯವಾಗಿಯೂ ಮಹತ್ವವಾದ್ದನ್ನು ನಿರೀಕ್ಷಿಸುತ್ತಿರುವಿರೇನು? ಇಲ್ಲವೆಂದು ಚುನಾವಣೆಗಳು ಆರಂಭಗೊಳ್ಳುವ ಹೊತ್ತಿನಲ್ಲೇ ಅರಿವಾಗುತ್ತದೆ. ಪಕ್ಷಕ್ಕೆ ಹಣವನ್ನು ಖರ್ಚು ಮಾಡುವವ ಬೇಕು, ಕಾರ್ಯಕರ್ತರಿಗೆ ಹಣವನ್ನು ನೀರಿನಂತೆ ಹರಿಸುವವರು ಬೇಕು. ಜನಸಾಮಾನ್ಯರಾದ ನಮಗೆ ಚುನಾವಣೆಗೆ ಮುನ್ನ ಹೆಚ್ಚು ದುಡ್ಡು ಕೊಡುವವ ಬೇಕು. ಎಲ್ಲ ದಿಕ್ಕಿನಿಂದಲೂ ಹಣವಿದ್ದವನನ್ನೇ ಎಲ್ಲರೂ ಹುಡುಕುವುದಾದರೆ ದೂರದೃಷ್ಟಿಗೆ ಬೆಲೆಯಾದರೂ ಎಲ್ಲಿ ಹೇಳಿ? ಇದೇ ಈ ರಾಷ್ಟ್ರದ ದುರಂತ!
ತುರ್ತಾಗಿ ಆಗಬೇಕಿರೋದು ಶ್ರೇಷ್ಠ ಮಾನಸಿಕತೆಯುಳ್ಳ ಸಮಾಜದ ನಿರ್ಮಾಣ. ರಾಜಕಾರಣಿಗಳು ಕೊಡುವ ಎಂಜಲು ಕಾಸಿಗೆ ಕೈ ಚಾಚದ, ಬಿಟ್ಟಿ ಭಾಗ್ಯಗಳಿಗೆ ಜೊಲ್ಲು ಸುರಿಸದ, ತನ್ನ ಹಕ್ಕುಗಳಿಗಾಗಿ ಕೊನೆಯವರೆಗೂ ಬಡಿದಾಡುವ, ಅಗತ್ಯಬಿದ್ದರೆ ಸಮಾಜದ ಯಾವ ಕೆಲಸವನ್ನೂ ಹೆಗಲಮೇಲೆ ಹೊತ್ತುಕೊಂಡು ರಾಷ್ಟ್ರನಿರ್ಮಾಣಕ್ಕಾಗಿ ಕೊಡಗಟ್ಟಲೆ ಬೆವರು ಸುರಿಸುವವ ಬೇಕಾಗಿದ್ದಾನೆ. ಅಂಥವನನ್ನು ತಯಾರು ಮಾಡಲು ಒಂದಷ್ಟು ಜನ ಸಮಾಜದಲ್ಲಿರಬೇಕಾಗಿದೆ. ಕನಿಷ್ಠಪಕ್ಷ ಅಂತಹ ಸಾಮರ್ಥ್ಯದ್ದವರಾದರೂ ರಾಜಕಾರಣವನ್ನು ಹೊಕ್ಕದೇ ಹೊರಗೆ ನಿಂತು ಬದಲಾವಣೆ ತರಲು ಯತ್ನಿಸಬಹುದೇ? ಎಂಬುದು ಪ್ರಶ್ನೆ.