ಜಿಂಪಿಂಗ್ ಸೀನಿದರೆ ರಾಹುಲ್‌ಗೆ ನೆಗಡಿ!

ಜಿಂಪಿಂಗ್ ಸೀನಿದರೆ ರಾಹುಲ್‌ಗೆ ನೆಗಡಿ!

ಗಮನಿಸಿದ್ದೀರೋ ಇಲ್ಲವೋ. ಒಂದರ ಹಿಂದೆ ಮೂರು ಒಂದೇ ಬಗೆಯ ಘಟನೆಗಳು. ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟನ್ನು ಸುಳ್ಳು ಎಂದರು. ಇದು ಪುಲ್ವಾಮಾದಂತಹ ದಾಳಿ ಅಲ್ಲವೇ ಅಲ್ಲ. ಜನರ ಗಮನವನ್ನು ಬೇರೆಡೆ ತಿರುಗಿಸಲು ಸರ್ಕಾರ ಈ ಪ್ರಯತ್ನ ಮಾಡಿದೆ ಎಂದು ಕುಕ್ಕರ್‌ನಲ್ಲಿ ಬಾಂಬಿಟ್ಟು ಸಂಘ ನಿಕೇತನದಲ್ಲಿ ಮುಗ್ಧ ಮಕ್ಕಳನ್ನು ಉಡಾಯಿಸುವ ಯೋಜನೆ ಮಾಡಿದ್ದವರಿಗೆ ಕವರಿಂಗ್ ಫೈರ್ ಕೊಟ್ಟರು! 

ಭಾರತ್ ಜೊಡೊ ಯಾತ್ರೆಯಲ್ಲಿರುವ ಕಾಂಗ್ರೆಸ್ಸಿಗರ ಪ್ರಧಾನಮಂತ್ರಿ ಅಭ್ಯರ್ಥಿ ರಾಹುಲ್ ಪತ್ರಿಕಾಗೋಷ್ಠಿಯಲ್ಲಿ ‘ಪತ್ರಕರ್ತರು ಜಗತ್ತಿನ ಎಲ್ಲ ಪ್ರಶ್ನೆಗಳನ್ನು ನನಗೆ ಕೇಳುತ್ತೀರಿ. ಆದರೆ ಚೀನಿಯರು ಭಾರತೀಯ ಸೈನಿಕರನ್ನು ಬಡಿದ ಘಟನೆಯನ್ನು ಬಿಟ್ಟು’ ಎಂದ. ಆತನ ದೃಷ್ಟಿಯಲ್ಲಿ ಭಾರತೀಯ ಸೈನಿಕರು ಚೀನಿಯರ ಕೈಲಿ ಹೊಡೆತ ತಿಂದು ಗಡಿಯೊಳಕ್ಕೆ ಓಡಿಬಂದುಬಿಟ್ಟಿದ್ದರು. ಭಾರತೀಯ ಸೇನೆಯ ಸಾಹಸದ ಆಧಾರದ ಮೇಲೆ ಸರ್ಕಾರ ಸಂಸತ್ತಿನಲ್ಲಿ ಕೊಟ್ಟ ಹೇಳಿಕೆಯನ್ನು ಸಂಶಯಿಸುವ ರಾಹುಲ್‌ನನ್ನು ಭಾರತ ಭವಿಷ್ಯದ ನಾಯಕನೆಂದು ಒಪ್ಪಬೇಕಲ್ಲ ಎಂಬುದೇ ಕಾಂಗ್ರೆಸ್ಸಿಗರ ಪಾಲಿಗಾದರೂ ಆತಂಕವಾಗಬೇಕು. ಭಾರತೀಯ ಸೇನೆ ಚೀನಿಯರನ್ನು ಬಡಿಯುವ ವಿಡಿಯೊ ಸೂಕ್ತ ಕಾಲದಲ್ಲಿ ವೈರಲ್ ಆಗಿ ಸಾಕಷ್ಟು ಸದ್ದು ಮಾಡಿದ್ದರಿಂದ ಉಳಿದವರೆಲ್ಲ ತೆಪ್ಪಗಾಗಿದ್ದಾರೆ. ಇಲ್ಲವಾಗಿದ್ದರೆ ಇದು ನಿಸ್ಸಂಶಯವಾಗಿ ಭಾರತದ ವಿರುದ್ಧ ತಿರುಗಿಕೊಳ್ಳುವ ಹೇಳಿಕೆಯಾಗಿರುತ್ತಿತ್ತು. 

ಕರ್ನಾಟಕ, ಭಾರತ ಆದಮೇಲೆ ಕಾಂಗ್ರೆಸ್ಸಿಗರ ಪ್ರೀತಿಯ ನೆಲ ಪಾಕಿಸ್ತಾನವೇ ಅಲ್ಲವೇನು? ವಿಶ್ವಸಂಸ್ಥೆಯ ಆವರಣದಲ್ಲಿ ನಿಂತು ಅಲ್ಲಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನರೇಂದ್ರಮೋದಿಯವರ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಾ, ಅಮೇರಿಕಾಕ್ಕೆ ಬರದಂತೆ ನಿಷೇಧ ಹೇರಿಸಿಕೊಂಡಿದ್ದ ವ್ಯಕ್ತಿಯೊಬ್ಬ ಭಾರತದ ಪ್ರಧಾನಿಯಾಗಿದ್ದಾನೆ ಎಂದು ಮೂದಲಿಸುವ ಪ್ರಯತ್ನ ಮಾಡಿದ್ದ. ಮನಮೋಹನ್ ಸಿಂಗರನ್ನು ಬರ್ಖಾ ದತ್‌ಳೊಂದಿಗೆ ಸಂವಾದವೊಂದರಲ್ಲಿ ಪಾಕಿಸ್ತಾನದ ಅಧ್ಯಕ್ಷ ಹಳ್ಳಿ ಹೆಂಗಸಿನಂತೆ ಎಂದು ಮೂದಲಿಸಿದಾಗ ಆಗಿನ್ನೂ ಪ್ರಧಾನಿಯಾಗದ ಮೋದಿ ಬಲವಾಗಿ ಖಂಡಿಸಿ ನಮ್ಮ ದೇಶದ ಪ್ರಧಾನಿಯ ತಂಟೆಗೆ ಬಂದರೆ ಹುಷಾರ್ ಎಂದಿದ್ದರು. ಆದರೆ ಬಿಲಾವಲ್ ಭುಟ್ಟೊನ ಹೇಳಿಕೆಗಳನ್ನು ಇಂದು ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಸಂಭ್ರಮಿಸುತ್ತಿರುವುದನ್ನು ನೋಡಿದರೆ ಇವರ ಮಟ್ಟ ಎಂಥದ್ದೆಂಬುದು ಅರಿವಾಗುತ್ತದೆ. 

ಈ ಮೂರೂ ಹೇಳಿಕೆಗಳನ್ನು ಒಂದಕ್ಕೊಂದು ತಾಳೆ ಹಾಕಿ ನೋಡಿ. ಭಾರತ ವಿರೋಧಿ ಶಕ್ತಿಗಳಿಗೆ ಬೆಂಬಲ ಕೊಡುವ ಪ್ರಯತ್ನವನ್ನೇ ಇವರು ಮಾಡುತ್ತಿರುವುದು ಸ್ಪಷ್ಟ. ಇಂಥವರ ಕೈಗೆ ರಾಜ್ಯವನ್ನು, ದೇಶವನ್ನು ಕೊಟ್ಟರೆ ಏನಾಗಬಹುದೆಂದು ಊಹಿಸಿ ನೋಡಿ. ಬಿಲಾವಲ್ ಭುಟ್ಟೊ ಈ ರೀತಿಯ ಹೇಳಿಕೆ ಕೊಡುವ ಮುನ್ನ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪ್ರಹಸನವೊಂದು ನಡೆದುಹೋಗಿತ್ತು. ಮೊದಲು ಮಾತಾಡಿದ ಪಾಕಿಸ್ತಾನದ ಈ ವಿದೇಶಾಂಗ ಸಚಿವ ಅನವಶ್ಯಕವಾಗಿ ಕಾಶ್ಮೀರದ ವಿಷಯವನ್ನು ತೆಗೆದು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ. ಭಾರತ ಪ್ರತಿಕ್ರಿಯಿಸಿದ ರೀತಿ ಇತ್ತಲ್ಲ ಅದು ಹಿಂದೆಂದೂ ಕೇಳರಿಯದಂಥದ್ದು. ನಮ್ಮ ವಿದೇಶಾಂಗ ಸಚಿವ ಜೈಶಂಕರ್ ತಮ್ಮ ಸರತಿ ಬಂದಾಗ ಮಾತನಾಡಿ, ‘ಒಸಾಮ ಬಿನ್ ಲಾಡೆನ್‌ನನ್ನು ಸಾಕಿ ಸಲಹಿದ ದೇಶವೊಂದು ಜಗತ್ತಿಗೆ ಬುದ್ಧಿ ಹೇಳುವ ಸ್ಥಾನವನ್ನಲಂಕರಿಸುವುದು ಒಳಿತಲ್ಲ’ ಎಂದುಬಿಟ್ಟರು. ಇದು ಜಗತ್ತಿಗೆಲ್ಲ ಎಚ್ಚರಿಕೆಯ ಸಂದೇಶವಾಗಿತ್ತು. ಪಾಕಿಸ್ತಾನ ಜಾಗತಿಕ ಕ್ಯಾನ್ಸರ್ ಎಂಬುದನ್ನು ವಿವರಿಸಲು ಇದಕ್ಕಿಂತ ಒಳ್ಳೆಯ ಮಾರ್ಗವಿರಲಿಲ್ಲ. ಭುಟ್ಟೊ ತನ್ನ ನಿಂತ ನೆಲ ಕುಸಿಯುತ್ತಿರುವುದನ್ನು ಆಗಲೇ ಗಮನಿಸಿದ್ದ. ಸುತ್ತಿ ಬಳಸಿ ಚೀನಾಕ್ಕೆ ಅನುಕೂಲವಾಗುವ ವಾತಾವರಣವನ್ನು ನಿರ್ಮಿಸಿಕೊಡಲು ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಇದು ಬಲುದೊಡ್ಡ ತಪರಾಕಿ. ಆಗ ಬಾಯಿಬಿಟ್ಟಿದ್ದು ರಾಹುಲ್. ಆತ ಚೀನೀ ಸೈನಿಕರ ಭಾರತ ಗಡಿ ಪ್ರವೇಶಿಸುವ ದುಸ್ಸಾಹಸವನ್ನು ಭಾರತ ವಿರೋಧಿಯಾಗಿ ಚಿತ್ರಿಸುವುದು ಬಿಟ್ಟು ಭಾರತೀಯ ಸೈನಿಕರನ್ನೇ ಹೇಡಿಗಳನ್ನಾಗಿ ಚಿತ್ರಿಸಿದ್ದು ಬಲು ದುರಂತಕಾರಿಯಾಗಿತ್ತು! ಅಂದರೆ ಚೀನಾ ಭಾರತದ ಗಡಿಯೊಳಕ್ಕೆ ನುಗ್ಗುವ, ನಮ್ಮ ಸೈನಿಕರನ್ನು ಬಡಿಯುವ ಯೋಜನೆ ಮೊದಲೇ ರೂಪುಗೊಂಡಿತ್ತು. ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಅದು ಕಾಂಗ್ರೆಸ್ಸಿಗೆ ಅಸ್ತ್ರವಾಗಿ ದಕ್ಕಬೇಕಿತ್ತು. ಆದರೆ ಮೊದಲೇ ಈ ಆಕ್ರಮಣವನ್ನು ಊಹಿಸಿದ್ದ ಭಾರತೀಯ ಸೇನೆ ಚೀನಾದ ಡ್ರೋಣ್‌ಗಳ ಹಾರಾಟವನ್ನು ಗುರುತಿಸಿತ್ತಲ್ಲದೇ ಅದಕ್ಕೆ ವಿರುದ್ಧವಾಗಿ ಸುಖೋಯ್‌ಗಳ ಹಾರಾಟವನ್ನು ನಡೆಸಿ ತನ್ನ ಸಿದ್ಧತೆಯನ್ನು ಮಾಡಿಕೊಂಡಿತ್ತು. ತವಾಂಗ್‌ನಲ್ಲಿ ಚೀನೀ ಪಡೆ ಅಚಾನಕ್ಕಾಗಿ ನುಗ್ಗಿದೊಡನೆ ನಮ್ಮ ಪಡೆಯೂ ಚೀನಿಯರಿಗೆ ಅಚ್ಚರಿ ಎನಿಸುವಂತಹ ರೀತಿಯಲ್ಲಿ ಪ್ರತಿಕ್ರಿಯಿಸಿಬಿಟ್ಟಿತು. ಈಗ ತವಾಂಗ್ ಭಾಗದ ರಸ್ತೆಗಳು ಕಾಂಗ್ರೆಸ್ಸಿಗರ ಕಾಲದ ರಸ್ತೆಗಳಂತಿಲ್ಲ. ಅನೇಕ ಸುರಂಗ ಮಾರ್ಗಗಳು ನಿರ್ಮಾಣಗೊಂಡಿವೆ ಮತ್ತು ನಿರ್ಮಾಣಗೊಳ್ಳುತ್ತಿವೆ. ಇವೆಲ್ಲವೂ ಸೇರಿ ಗಡಿಯೆಡೆಗೆ ಭಾರತೀಯ ಸೈನಿಕ ತಲುಪುವ ಕಾಲವನ್ನು ಅಗಾಧವಾಗಿ ಕಡಿಮೆ ಮಾಡಿವೆ. ಹೀಗಾಗಿಯೇ ಈ ಬಾರಿ ಚೀನಾಕ್ಕೆ ಬಲವಾದ ತಪರಾಕಿ ಬಿದ್ದದ್ದು. ಚೀನಿಯರು ಮರಳಿ ತಮ್ಮ ಬಂಕರ್‌ಗಳಿಗೆ ಓಡಿಹೋಗಿ ಸೇರಿಕೊಂಡರಲ್ಲದೇ ಒಪ್ಪಂದವನ್ನೂ ಮುರಿದು ಎಚ್ಚರಿಕೆಯ ಗುಂಡುಗಳನ್ನು ಹಾರಿಸಬೇಕಾಗಿ ಬಂತು. ಕಾಂಗ್ರೆಸ್ಸಿಗರಿಗೆ ಜೀರ್ಣವಾಗದೇ ಇರುವ ಸಂಗತಿ ಏನೆಂದರೆ ಈ ಬಾರಿ ಭಾರತೀಯರು ಗಡಿ ದಾಟಿ ಚೀನಾದ ಒಳಕ್ಕೆ ಹೋಗಿ ಸಾಕಷ್ಟು ಸಮಯ ಅಲ್ಲಿಯೇ ಇದ್ದು ಚೀನಾದ ಲಿಲ್ಲಿಪುಟ್‌ಗಳನ್ನು ಬೆದರಿಸಿ ಬಂದಿದ್ದಾರೆ! 

ಸಂಸತ್ ಅಧಿವೇಶನ ಆರಂಭವಾಗುವ ಹೊತ್ತಿನಲ್ಲಿ ಸರಿಯಾಗಿ ಈ ಸುದ್ದಿ ಪತ್ರಿಕೆಗಳಲ್ಲಿ ಬ್ರೇಕ್ ಆಯ್ತಲ್ಲದೇ ಚೀನಾದಿಂದ ಸುಮಾರು ಒಂದೂವರೆ ಕೋಟಿ ರೂಪಾಯಿಯನ್ನು ರಾಜೀವ್ ಗಾಂಧಿ ಫೌಂಡೇಶನ್ ಪಡೆದುಕೊಂಡಿರುವ ಸ್ಫೋಟಕ ಸುದ್ದಿಯನ್ನು ಗೃಹ ಸಚಿವರು ಅಂದೇ ಹೊರಹಾಕುವುದರಲ್ಲಿದ್ದರು. ಚೀನಾದ ಆಕ್ರಮಣದ ಮಹಾತಂಕದ ನಡುವೆ ಈ ಸುದ್ದಿಯನ್ನು ಸಮಾಧಿಯಾಗಿಸಲಾಯ್ತು. ಬಹುಶಃ ಕಾಂಗ್ರೆಸ್ಸಿನ ಪ್ರತಿಯೊಬ್ಬ ನಾಯಕನೂ ಅವರ ಕಾರ್ಯಕರ್ತನಿಗೆ ಮತ್ತು ಈ ದೇಶಕ್ಕೆ ಉತ್ತರಿಸಲೇಬೇಕಾದ ಪ್ರಶ್ನೆ ಎಂದರೆ ಈ ಹಣ ಸ್ವೀಕಾರದ್ದು. ಒಂದೂವರೆ ಕೋಟಿ ರೂಪಾಯಿಯನ್ನು ಚೀನಾದಿಂದ ಪಡೆದಿದ್ದಾರೂ ಏಕೆ? ಅದನ್ನು ಯಾವುದರ ಅಧ್ಯಯನಕ್ಕೆಂದು ಬಳಸಲಾಯ್ತು? ಶತ್ರು ರಾಷ್ಟ್ರವೊಂದರಿಂದ ಹೀಗೆ ಹಣ ಪಡೆಯುವುದು ಎಷ್ಟರಮಟ್ಟಿಗೆ ಸರಿ? ನನಗೆ ಗೊತ್ತು. ಗುಲಾಮೀ ಮಾನಸಿಕತೆ ಎಷ್ಟರಮಟ್ಟಿಗೆ ಆವರಿಸಿಕೊಂಡುಬಿಟ್ಟಿದೆ ಎಂದರೆ ಪರಿವಾರವೊಂದರ ಜೀತ ಮಾಡುವ ಮಂದಿ ದೇಶಕ್ಕಾಗುವ ನಷ್ಟವನ್ನು ಗಣಿಸಲಾರರು ಎಂಬುದು ಶತಃಸಿದ್ಧ. 

ಇಷ್ಟಕ್ಕೂ ಷಿ ಜಿಂಪಿಂಗ್ ಹೆದರುತ್ತಿದ್ದಾನಾ? ನನಗಂತೂ ಹೌದೆನಿಸುತ್ತಿದೆ. ಆತ ಇಡಿಯ ಚೀನಾದ ಆತ್ಮವನ್ನೇ ಕೊಂದು ಕಳೆದ ಕೆಲವಾರು ದಶಕಗಳಲ್ಲಿ ಚೀನಾವನ್ನು ಅಮೇರಿಕಾಕ್ಕೆ ಸರಿಸಾಟಿಯಾಗಿ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾನೆ. ಈ ಹಾದಿಯಲ್ಲಿ ಅವನಿಗಿದ್ದದ್ದು ಎರಡೇ ಅಡೆತಡೆಗಳು. ಒಂದು ರಷ್ಯಾ, ಮತ್ತೊಂದು ಭಾರತ. ರಷ್ಯಾ ಜಾಗತಿಕ ಮಟ್ಟದಲ್ಲಿ ಸುದೀರ್ಘಕಾಲ ತನ್ನ ಪ್ರತಿಸ್ಪರ್ಧಿಯಾಗಿರಲಾರದು ಎಂದರಿತ ಆತ ಕಾಂಗ್ರೆಸ್ಸನ್ನು ಬಳಸಿಕೊಂಡು ಭಾರತವನ್ನು ಶಾಶ್ವತವಾಗಿ ತನ್ನ ಅಡಿಯಾಳಾಗಿಸುವ ಪ್ರಯತ್ನ ಮಾಡಿದ. ಅಚ್ಚರಿ ಎನಿಸುತ್ತದಲ್ಲವೇ? ಯುಪಿಎ ಎರಡು ಅವಧಿಗೆ ಅಧಿಕಾರದಲ್ಲಿತ್ತಲ್ಲ, ಅದಕ್ಕೂ ಮುನ್ನ ಅಟಲ್ ಬಿಹಾರಿ ವಾಜಪೇಯಿ ಭಾರತದ ಆರ್ಥಿಕತೆಯನ್ನು ಸಾಕಷ್ಟು ಬಲಗೊಳಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದರು. ಆದರೆ ಹತ್ತೇ ವರ್ಷಗಳಲ್ಲಿ ಅದನ್ನು ಹಳ್ಳ ಹಿಡಿಸಿದ್ದು ಆರ್ಥಿಕ ತಜ್ಞ ಮನಮೋಹನ್ ಸಿಂಗ್! ರಾಹುಲ್ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಒಪ್ಪಂದ ಮಾಡಿಕೊಂಡಾಗ ಅದರೊಳಗೆ ಏನೇನು ಬರೆಯಲಾಗಿತ್ತೋ ದೇವರೇ ಬಲ್ಲ. ಆದರೆ ಅಲ್ಲಿಯವರೆಗೂ ಭಾರತ ಮತ್ತು ಚೀನಾದ ನಡುವೆ ಇದ್ದ ಆಮದು-ರಫ್ತುಗಳ ವಿತ್ತೀಯ ಕೊರತೆ ಒಂದು ಬಿಲಿಯನ್ ಡಾಲರ್‌ನಷ್ಟಾಗಿತ್ತು. ಹತ್ತು ವರ್ಷದಲ್ಲಿ ಅದು 36 ಬಿಲಿಯನ್ ಡಾಲರ್ ದಾಟಿತು. ಅಂದರೆ ಸುಮಾರು 36 ಪಟ್ಟು ಅಥವಾ ಎರಡೂವರೆ ಸಾವಿರ ಪ್ರತಿಶತದಷ್ಟು ಹೆಚ್ಚು. ಸಿದ್ಧ ವಸ್ತುಗಳು, ಔಷಧ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು, ರಾಸಾಯನಿಕ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನೆಲ್ಲ ನಾವು ಆಮದು ಮಾಡಿಕೊಳ್ಳಲು ಹೆಚ್ಚಿಸಿದ್ದು ಇದೇ ಹೊತ್ತಿನಲ್ಲಿ. ಇದು ಭಾರತದ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿದುಬಿಟ್ಟಿತು. ನಾವು ನಮ್ಮ ಕಾರ್ಖಾನೆಗಳನ್ನು ಕೊಂದೆವಲ್ಲದೇ ಅದನ್ನು ಬೆಳೆಸಲು ಚೀನಾದ ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗಬೇಕಾಗಿ ಬಂತು. ಹೇಗೆಂದರೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಔಷಧ ವಸ್ತುಗಳ ತಯಾರಿಕೆ ಮಾಡುವಂತಹ ರಾಷ್ಟ್ರವಾಗಿ ಭಾರತವನ್ನು ರೂಪಿಸಬೇಕಾದರೆ ಭಾರತ ಕಚ್ಚಾ ವಸ್ತುಗಳಿಗಾಗಿ ಚೀನಾವನ್ನೇ ಅವಲಂಬಿಸಬೇಕಾಗಿರುವಂತಹ ಸ್ಥಿತಿ ಕಾಂಗ್ರೆಸ್ಸಿನ ಕಾರಣಕ್ಕೆ ನಿರ್ಮಾಣಗೊಂಡಿತು. ಅಧಿಕಾರಕ್ಕೆ ಬಂದೊಡನೆ ಇದನ್ನು ಸೂಕ್ಷ್ಮವಾಗಿ ಗಮನಿಸಿದ ನರೇಂದ್ರಮೋದಿ ಹಂತ-ಹಂತವಾಗಿ ಈ ನಿರ್ಭರತೆಯನ್ನು ಕಡಿಮೆ ಮಾಡುತ್ತಾ ಬಂದರು. ಮೊದಲೈದು ವರ್ಷದಲ್ಲಿ ಭಾರತ ತಾನಿಲ್ಲದೇ ಬದುಕಲಾರದೆಂಬ ದುರಹಂಕಾರದಲ್ಲಿ ಮೆರೆಯುತ್ತಿದ್ದ ಷಿ, ನರೇಂದ್ರಮೋದಿ ಸ್ಪಷ್ಟವಾದ ಹೆಜ್ಜೆ ಇಡುತ್ತಿರುವುದನ್ನು ಕಂಡು ಗಾಬರಿಗೊಂಡ. ಮೋದಿ ನಿಧಾನವಾಗಿ ಚೀನಾಕ್ಕೆ ರಫ್ತು ಮಾಡುತ್ತಿದ್ದ ಪ್ರಮಾಣವನ್ನು ಏರಿಸಲಾರಂಭಿಸಿದರು. ಕಾಂಗ್ರೆಸ್ ಅಧಿಕಾರ ಬಿಟ್ಟುಕೊಟ್ಟಾಗ 11 ಬಿಲಿಯನ್ ಡಾಲರ್ಗಳಷ್ಟಿದ್ದ ರಫ್ತು ಕಳೆದ ಎಂಟು ವರ್ಷಗಳಲ್ಲಿ ಸುಮಾರು 100 ಪ್ರತಿಶತದಷ್ಟು ಹೆಚ್ಚಾಗಿ 22 ಬಿಲಿಯನ್ ಡಾಲರ್ಗಳಿಗೆ ಏರಿದೆ. ಸಹಜವಾಗಿ ಅನೇಕ ಕಚ್ಚಾ ವಸ್ತುಗಳಿಗಾಗಿ ಚೀನಾದ ಮೇಲೆಯೇ ನಿರ್ಭರವಾಗಿದ್ದರಿಂದ ಆಮದಿನ ಪ್ರಮಾಣ 60 ಬಿಲಿಯನ್ ಡಾಲರ್‌ನಿಂದ 95 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಶೇಕಡಾ 55 ರಷ್ಟು ಹೆಚ್ಚಳ! ಒಟ್ಟಾರೆ ಲೆಕ್ಕ ಹೇಳಬೇಕೆಂದರೆ ವಿತ್ತೀಯ ಕೊರತೆ ಕಾಂಗ್ರೆಸ್ ಮೋದಿಯ ಕೈಗೆ ದೇಶವನ್ನು ಕೊಟ್ಟಾಗ 36 ಬಿಲಿಯನ್ ಡಾಲರ್‌ಗಳಷ್ಟಿತ್ತು. ಈಗ 72 ಬಿಲಿಯನ್ ಡಾಲರ್‌ಗಳಷ್ಟಾಗಿದೆ. ಅಂದರೆ ಶೇಕಡಾ ನೂರರಷ್ಟು ಹೆಚ್ಚಳ ಮಾತ್ರ. ಕಾಂಗ್ರೆಸ್ಸಿನ ಹತ್ತು ವರ್ಷದಲ್ಲಿ 36 ಪಟ್ಟು ಹೆಚ್ಚಿದ್ದ ವಿತ್ತೀಯ ಕೊರತೆಯನ್ನು ಮೋದಿ ಎರಡು ಪಟ್ಟಿಗೆ ತಂದು ನಿಲ್ಲಿಸಿರುವುದು ಅಸಾಧಾರಣವಾದ ಸಾಧನೆಯೇ! ಇವೆಲ್ಲವೂ ಹೇಗೆ ಸಾಧ್ಯವಾಯ್ತು ಗೊತ್ತೇ? ಆತ್ಮನಿರ್ಭರ ಭಾರತ ಎನ್ನುವ ಹೆಸರಿನಡಿ ಪಿಎಲ್ಐ ಸ್ಕೀಮ್‌ಗಳನ್ನು ತಂದು ಉತ್ಪಾದಕರಿಗೆ ಉತ್ತೇಜನ ನೀಡಿ ಅವರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಟ್ಟರು. ಹೀಗಾಗಿಯೇ ಈ ದೀಪಾವಳಿಯಲ್ಲಿ ಬಹುತೇಕ ಭಾರತ ಬೆಳಗಿಸಿದ್ದು ಭಾರತದ ದೀಪಗಳನ್ನೇ. ಷಿ ಇದನ್ನೆಲ್ಲ ಗಮನಿಸುತ್ತಿಲ್ಲ ಎಂದುಕೊಂಡಿರೇನು? ಭಾರತ ಇದೇ ವೇಗದಲ್ಲಿ ಮುಂದುವರಿದರೆ ಮುಂದಿನ ಐದು ವರ್ಷದಲ್ಲಿ ನರೇಂದ್ರಮೋದಿ ಈ ವಿತ್ತೀಯ ಕೊರತೆಯನ್ನು ಇಲ್ಲವಾಗಿಸಬಲ್ಲರು. ಅದಕ್ಕೆ ಪಾಪ ರಾಹುಲ್ ಬಡಬಡಾಯಿಸುತ್ತಿದ್ದಾರೆ. 2030ರ ವೇಳೆಗೆ ಭಾರತ ಜಗತ್ತಿನ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ನಿಲ್ಲಲಿದೆ ಎನ್ನುವ ಭವಿಷ್ಯವನ್ನು ಎಲ್ಲರೂ ನುಡಿಯುತ್ತಿದ್ದಾರೆ. ಮೊನ್ನೆ ಭಾರತೀಯ ಸೈನಿಕರು ಚೀನೀ ಸೈನಿಕರನ್ನು ಬಡಿದಿರುವ ರೀತಿ ನೋಡಿದರೆ ಭಾರತ ಚೀನಾವನ್ನು ಸೈನಿಕ ಶಕ್ತಿಯಿಂದಲೂ ಎದುರಿಸಬಲ್ಲದು ಎನ್ನುವ ವಿಶ್ವಾಸ ಜಗತ್ತಿಗೆ ಮೂಡುತ್ತಿದೆ. ಇನ್ನು ಪಾಕಿಸ್ತಾನವನ್ನು ನೆಚ್ಚಿಕೊಂಡು ಭಾರತವನ್ನು ಮಟ್ಟಹಾಕಲು ಯತ್ನಿಸಿದ್ದ ಚೀನಾ ಭಾರತದ ಕುಟಿಲ ನೀತಿಯಿಂದಾಗಿ ಪಾಕಿಸ್ತಾನವನ್ನೇ ಬಿಟ್ಟೋಡಬೇಕಾದ ಸ್ಥಿತಿ ಬರುತ್ತಿದೆ. ತಾಲಿಬಾನಿಗಳು ಭಾರತದ ಯೋಧರಾಗಿ ಪಾಕಿಸ್ತಾನಿಗಳ ವಿರುದ್ಧ ಹೋರಾಟ ಮಾಡುತ್ತಿರುವುದು ಜಗತ್ತಿಗೇ ಅಚ್ಚರಿಯಾಗಿದೆ. ಬಲೂಚಿಸ್ತಾನ ದಿನ ಬೆಳಗಾದರೆ ಪಾಕಿಸ್ತಾನದ ಠಾಣ್ಯಗಳನ್ನು ಉಡಾಯಿಸುತ್ತಿರುವುದು ನೋಡಿದರೆ ಪಾಕಿಸ್ತಾನದ ಪರಿಸ್ಥಿತಿ ಖಂಡಿತವಾಗಿಯೂ ಚೆನ್ನಾಗಿಲ್ಲ. ಇತ್ತ ನೇಪಾಳವನ್ನು ನಂಬಿಕೊಂಡಿದ್ದ ಚೀನಾಕ್ಕೆ ಅಲ್ಲಿಯೂ ಭಾರತದ ಪರವಾಗಿರುವ ಸರ್ಕಾರ ಬಂದಮೇಲೆ ನಿಂತ ನೆಲ ಕುಸಿದಿರುವಂತೆ ಭಾಸವಾಗಿದೆ. ಶ್ರೀಲಂಕಾ ಈಗ ಭಾರತಕ್ಕೆ ಶರಣು ಬಂದಿರುವುದು ಇನ್ನೊಂದಷ್ಟು ತಲೆನೋವು. ಷಿ ರಾತ್ರಿಯ ನಿದ್ದೆ ಕಳೆದುಕೊಂಡಿರುವುದು ಸ್ಪಷ್ಟ. ಅವನಿಗಿರುವ ಒಂದೇ ಭರವಸೆ ತನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ಸು ಮಾತ್ರ. ರಾಹುಲ್‌ನ ಆತಂಕವನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ.

ಇಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವ ಯಾವ ಕಾಲಘಟ್ಟದಲ್ಲಿ ಎಲ್ಲಿ ನಿಂತು ನೋಡಿದರೂ ಚೀನಾವನ್ನು ಮೆಟ್ಟಿ ನಿಲ್ಲಬಲ್ಲಂಥದ್ದು. ಆರ್ಥಿಕ ಶಕ್ತಿ ಎಂಬ ಒಂದೇ ಕಾರಣಕ್ಕೆ ಚೀನಾಕ್ಕೆ ಗೌರವ. ಬಿಟ್ಟರೆ ಪ್ರಜಾಪ್ರಭುತ್ವದ ದೃಷ್ಟಿಯಿಂದ, ನಾಗರೀಕತೆಯ ದೃಷ್ಟಿಯಿಂದಲೂ ಭಾರತ ಅಗಾಧ ಶಕ್ತಿಯೇ. ಚೀನಾ ನಮ್ಮಲ್ಲಿ ಸಮರ್ಥ ನಾಯಕತ್ವವನ್ನು ಹಿಂದಿಕ್ಕಿ ಮುಂದೆ ಸಾಗಲು ತಿಣುಕಾಡಬೇಕಿದೆ. ಹೀಗಾಗಿಯೇ ಷಿ ಹೆದರುತ್ತಿದ್ದಾನೆ ಎಂದು ಆರಂಭದಲ್ಲಿಯೇ ಹೇಳಿದ್ದು. 

ಈಗ ಮತ್ತೊಮ್ಮೆ ಮೊದಲ ಮೂರು ಪ್ಯಾರಾಗ್ರಾಫ್‌ಗಳನ್ನು ಓದಿ. ಸಂಸತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಚೀನಾ ಸಂಬಂಧದ ಬಗ್ಗೆ ಗೃಹ ಸಚಿವರು ಮಾತನಾಡಬೇಕು, ಅದೇ ಹೊತ್ತಿಗೆ ಸರಿಯಾಗಿ ಚೀನೀ ಸೈನಿಕರು ಷಿಯ ಆದೇಶದ ಮೇಲೆ ಗಡಿಯೊಳಗೆ ನುಗ್ಗುವ ಪ್ರಯತ್ನ ಮಾಡುತ್ತಾರೆ, ರಾಹುಲ್ ಅದನ್ನು ಅಸ್ತ್ರವಾಗಿ ಬಳಸಲು ತಯಾರಿ ಮಾಡಿಕೊಳ್ಳುತ್ತಾನೆ, ಬಿಲಾವಲ್ ಭುಟ್ಟೊ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಧಾನಮಂತ್ರಿಯನ್ನು ಮತಾಂಧ ಎಂದು ಬಿಂಬಿಸಲು ಪ್ರಯತ್ನ ಮಾಡುತ್ತಾನೆ, ಇಲ್ಲಿ ಮುಸಲ್ಮಾನರ ಮತಾಂಧತೆಯನ್ನು ಬಚ್ಚಿಟ್ಟು ಪಾಕಿಸ್ತಾನಿಯರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಡಿ.ಕೆ ಶಿವಕುಮಾರ್‌ರು ಮಾಡುತ್ತಾರೆ. ಚುಕ್ಕಿಗಳನ್ನು ಜೋಡಿಸಿಕೊಂಡರೆ ದೇಶದ ಬೆನ್ನಿಗೆ ಚೂರಿ ಇರಿಯುವ ಸಮಗ್ರ ಚಿತ್ರ ಕಂಡು ಬರುತ್ತದೆ. ಹೌದಲ್ಲವೇನು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s