ಮೋದಿಯಿಂದಲೇ ಆಯುರ್ವೇದಕ್ಕೂ ಬೆಲೆ!

ಮೋದಿಯಿಂದಲೇ ಆಯುರ್ವೇದಕ್ಕೂ ಬೆಲೆ!


ನನಗೆ ಗೊತ್ತು. ಶೀರ್ಷಿಕೆಯನ್ನು ಕಂಡೊಡನೆ ಅನೇಕರು ಮೈ ಪರಚಿಕೊಂಡಿರುತ್ತಾರೆ. ಮೋದಿ ಬರುವುದಕ್ಕೂ ಮುನ್ನ ಆಯುರ್ವೇದಕ್ಕೆ ಬೆಲೆ ಇರಲಿಲ್ಲವೇ? ಎಲ್ಲವನ್ನೂ ಮೋದಿಯ ಪದತಲಗಳಿಗೇ ಸಮರ್ಪಿಸುವ ಭಕ್ತರ ಪ್ರಲಾಪ ಇದು ಎಂದೆಲ್ಲ ಮಾತನಾಡಿಕೊಳ್ಳುತ್ತಾರೆ. ಸರಿಯೇ. ಸದಾಕಾಲ ಮೋದಿಯನ್ನು ತೆಗಳುತ್ತಾ, ಮಾಡಿರುವ ಪ್ರತಿಯೊಂದು ಕೆಲಸದಲ್ಲೂ ತಪ್ಪುಗಳನ್ನೇ ಹುಡುಕುತ್ತಾ ಕುಳಿತುಕೊಳ್ಳುವ ಮಂದಿಯಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ! ಅವರೆಲ್ಲ, ಹೇಳಿಕೊಟ್ಟ ನಂತರವೂ ಶ್ಲೋಕ ಉಚ್ಚರಿಸಲು ಬಾರದ ತಮ್ಮ ನಾಯಕನ ಬಾಲ ಹಿಡಿದು ನಡೆಯುವುದೇ ಸರಿ. ಇರಲಿ, ಮೋದಿಗೂ ಆಯುರ್ವೇದಕ್ಕೂ ಏನು ಸಂಬಂಧ ಎಂದು ಕೇಳುವುದಾದರೆ, ಅವರು ಪ್ರಧಾನಿಯಾದ ನಂತರವೇ ಆಯುರ್ವೇದ, ಹೋಮಿಯೋಪತಿ, ಸಿದ್ಧ, ಯುನಾನಿಗಳೇ ಮೊದಲಾದ ಚಿಕಿತ್ಸಾ ಪದ್ಧತಿಗಳಿಗಾಗಿ ಒಂದು ಪ್ರತ್ಯೇಕ ಮಂತ್ರಿ ಪದವಿಯನ್ನೇ ಸೃಷ್ಟಿಸಿದರು. ನಿನ್ನೆ ಈ ದೇಶ ಏಳನೇ ಆಯುರ್ವೇದ ದಿನಾಚರಣೆಯನ್ನು ಆಚರಿಸಿತು. ಸ್ವಾತಂತ್ರ್ಯ ಬಂದು 75 ವರ್ಷಗಳಾಯ್ತು. ಸಾವಿರಾರು ವರ್ಷಗಳಿಂದ ಭಾರತ ಆಯುರ್ವೇದ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ. ಶಸ್ತ್ರಚಿಕಿತ್ಸೆಯ ಪರಿಕಲ್ಪನೆಗಳು, ವಿಧಾನಗಳು ಇಲ್ಲಿಂದ ಜಗತ್ತಿಗೆ ಒಯ್ಯಲ್ಪಟ್ಟಿವೆ. ಆದರೆ ಆಯುರ್ವೇದ ದಿನಾಚರಣೆ ಮಾತ್ರ ಏಳನೆಯದ್ದು ಅಂದರೆ ಈ ಇಡಿಯ ಪದ್ಧತಿಯನ್ನು ನಾವದೆಷ್ಟು ಕಡೆಗಣಿಸಿದ್ದೆವು ಎಂಬುದು ಮನಸ್ಸಿಗೆ ಬಂದೀತು.


ಮೋದಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ದಾಸ್ಯ ಭಾವನೆಯನ್ನು ಕಳೆದುಕೊಳ್ಳುವ ಆಲೋಚನೆಯನ್ನು ಬಲಗೊಳಿಸಿಕೊಳ್ಳುತ್ತಲೇ ಬಂದರು. ತೀರಾ ಇತ್ತೀಚೆಗೆ ರಾಜಪಥವನ್ನು ಕಿತ್ತೆಸೆದು ಕರ್ತವ್ಯಪಥವಾಗಿಸಿದರಲ್ಲ ಈ ಪ್ರಕ್ರಿಯೆಯ ಆರಂಭವಾಗಿದ್ದೇ ಆಯುರ್ವೇದವನ್ನು ಗುರುತಿಸಿ ಗೌರವಿಸುವುದರ ಮೂಲಕ. ಭಾರತೀಯ ಚಿಕಿತ್ಸಾ ಪದ್ಧತಿಗಳನ್ನು ಮೂಲೆಗುಂಪು ಮಾಡಿ ಪಶ್ಚಿಮದ ಚಿಕಿತ್ಸಾ ಮಾದರಿಯೊಂದಿಗೆ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಭಾರತದಂತಹ ರಾಷ್ಟ್ರಗಳು ದೀರ್ಘಕಾಲ ಬದುಕಲಾರವು. ಏಕೆಂದರೆ ಪಶ್ಚಿಮದ ಚಿಕಿತ್ಸಾ ಪದ್ಧತಿಗಳು ಪ್ರಕೃತಿಯಿಂದ ದೂರವಾದವು ಮತ್ತು ಸಹಜವಾಗಿ ಬದುಕುವುದರಿಂದ ವಿಮುಖ ಮಾಡುವಂಥವು. ಆದರೆ ಆಯುರ್ವೇದ ಹಾಗಲ್ಲ. ಅದು ನಮ್ಮನ್ನು ಹೆಚ್ಚು-ಹೆಚ್ಚು ಸಹಜವಾಗಿರಲು ಪ್ರಚೋದಿಸುತ್ತದೆ.


ಅರ್ಥೈಸಿಕೊಳ್ಳಲು ಕಷ್ಟವೇನೂ ಇಲ್ಲ. ಈ ಪ್ರಪಂಚ, ಪದವೇ ಹೇಳುವಂತೆ ಪಂಚಭೂತಗಳಿಂದ ನಿರ್ಮಾಣಗೊಂಡಿದ್ದು. ನಮ್ಮ ದೇಹವೂ ಅಷ್ಟೇ. ಪಂಚಭೂತಗಳೇ ಇದರ ಮೂಲ ವಸ್ತು. ವಾಯು, ಜಲ, ಅಗ್ನಿ, ಪೃಥ್ವಿ, ಆಕಾಶ ಇವುಗಳೇ ಮೂಲವಸ್ತು ಆಗಿರುವುದರಿಂದ ಇವುಗಳಲ್ಲಿ ಸ್ವಲ್ಪ ಏರುಪೇರಾದರೂ ದೇಹ ಅದಕ್ಕೆ ಪ್ರತಿಸ್ಪಂದಿಸುತ್ತದೆ. ಆರೋಗ್ಯವೆಂದರೆ ಈ ಬದಲಾವಣೆಗಳನ್ನು ಸರಿಪಡಿಸಿಕೊಳ್ಳುವುದು ಎಂದರ್ಥ. ಆಯುರ್ವೇದ ಅದನ್ನೇ ಕಲಿಸಿ, ಸಹಜವಾಗಿ ಬದುಕುವುದನ್ನು ಹೇಳಿಕೊಡುತ್ತದೆ. ಪ್ರಕೃತಿಯೊಳಗೆ ಆಗುವ ಏರುಪೇರುಗಳಿಗೂ ನಮ್ಮ ದೇಹ ಪ್ರತಿಸ್ಪಂದಿಸುವುದು ಈ ಪಂಚಭೂತಗಳ ವ್ಯವಸ್ಥೆಯಿಂದಾಗಿಯೇ. ಹೀಗಾಗಿಯೇ ಆಯುರ್ವೇದವನ್ನು ಔಷಧಿ ವಿಜ್ಞಾನ ಎಂದು ಕರೆಯದೇ ಜೀವನ ವಿಜ್ಞಾನ ಎಂದು ಹೇಳಲಾಗುತ್ತದೆ. ನಾವು ಯಾವ ಯಾವ ಋತುಗಳಲ್ಲಿ ಯಾವ ರೀತಿ ಇರಬೇಕು? ಬೆಳಗಿನ ಹೊತ್ತಿನ ವ್ಯವಹಾರ ಹೇಗಿರಬೇಕು? ಕತ್ತಲಾದ ಮೇಲೆ ಬದುಕು ಹೇಗಿರಬೇಕು? ಇವೆಲ್ಲವನ್ನೂ ಇಲ್ಲಿ ವಿಸ್ತಾರವಾಗಿ ಚರ್ಚಿಸಲಾಗುತ್ತದೆ. ಎಲ್ಲವೂ ಸಂಹಿತೆಗಳ ಕಾಲದಂತೆ ಬದುಕಲು ಸಾಧ್ಯವಾಗುವುದಿಲ್ಲ ಎಂಬುದು ನಿಜವಾದರೂ, ಈ ದಿಕ್ಕಿನಲ್ಲಿ ಎಷ್ಟು ಪ್ರಯತ್ನ ಪಡುತ್ತೇವೆಯೋ ಆರೋಗ್ಯ ಅಷ್ಟು ಚೆನ್ನಾಗಿರುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಯುರ್ವೇದ ಆರೋಗ್ಯದ ಬಗ್ಗೆ ಹೆಚ್ಚು ಆಲೋಚಿಸುತ್ತದೆ, ಔಷಧಿಗಳ ಬಗ್ಗೆ ಕಡಿಮೆ. ಖ್ಯಾತ ಆಯುರ್ವೇದ ತಜ್ಞರಾದ ಗಿರಿಧರ್ ಕಜೆಯವರು ಇತ್ತೀಚೆಗೆ ಮಾತನಾಡುತ್ತಾ ಆಯುರ್ವೇದ ಮನೆಯಲ್ಲಿ ಬಳಸುವ ಕಾರಿದ್ದಂತೆ, ಆಲೋಪತಿ ಎಮರ್ಜೆನ್ಸಿಗೆ ಬಳಸುವ ಆ್ಯಂಬುಲೆನ್ಸ್ ಇದ್ದಂತೆ ಎಂದಿದ್ದು ಸೂಕ್ತವಾಗಿಯೇ ಇತ್ತು. ಕಾರು ಎಲ್ಲ ಸಂದರ್ಭಗಳಲ್ಲೂ ಬಳಸುತ್ತೇವೆ. ತೀವ್ರತರವಾದ ತೊಂದರೆಯಾದಾಗ ಮಾತ್ರ ಆ್ಯಂಬುಲೆನ್ಸಿನ ಬಳಕೆಯಾಗುತ್ತದೆ. ಆಯುರ್ವೇದ ಆರೋಗ್ಯವಂತನನ್ನು ಸದಾಕಾಲ ಆರೋಗ್ಯವಂತನನ್ನಾಗಿರಿಸಲು ಬೇಕಾಗಿರುವ ಮಾರ್ಗದರ್ಶನವನ್ನೇ ಹೆಚ್ಚಾಗಿ ಕೊಡುತ್ತದೆ. ರೋಗ ಬಂದ ಮೇಲೆ ಪರಿಹಾರ ಹುಡುಕುವುದು ಪಶ್ಚಿಮದ ಪಥವಾದರೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಯನ್ನು ಭಾರತೀಯ ಪದ್ಧತಿಯೊಂದಿಗೆ ಜೋಡಿಸಿಕೊಳ್ಳಬಹುದು.


ಪಶ್ಚಿಮದ ಪದ್ಧತಿ ದೇಹವನ್ನು ವಿವಿಧ ಅಂಗಗಳನ್ನು ಜೋಡಿಸಿ ನಿರ್ಮಾಣ ಮಾಡಿದ್ದು ಎಂದು ಭಾವಿಸಿದರೆ, ಭಾರತೀಯ ಚಿಂತನೆಗಳ ಪ್ರಕಾರ ಇಡಿಯ ದೇಹ ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡಿರುವಂಥದ್ದು. ತಲೆನೋವಿಗೆ ಕಾರಣ ತಲೆಯಲ್ಲಿರಬೇಕೆಂದಿಲ್ಲ. ಅನೇಕ ಬಾರಿ ಹೊಟ್ಟೆಯಲ್ಲೂ ಇರುತ್ತದೆ. ಕೆಲವೊಮ್ಮೆಯಂತೂ ದೇಹಕ್ಕೆ ಯಾವ ಸಮಸ್ಯೆಯೂ ಇಲ್ಲದಾಗಲೂ ತಲೆನೋವು ಬರಲು ಮನಸ್ಸಿಗಾದ ಗಾಯವೂ ಕಾರಣವಾಗಿಬಿಡುತ್ತದೆ. ಇದೆಲ್ಲಕ್ಕೂ ಪಶ್ಚಿಮದ ವಿಜ್ಞಾನ ಪರಿಹಾರ ಹುಡುಕಲಾರದು. ಅದು ಕೈ, ಕಾಲು, ತಲೆ, ಹೊಟ್ಟೆ ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹೇಳುವುದಿರಲಿ ಬದಲಿಗೆ ಆ ಸಮಸ್ಯೆಯನ್ನು ಅನೇಕ ಬಾರಿ ಬೆಟ್ಟವಾಗಿಸಿಬಿಡುತ್ತದೆ. ಭಾರತೀಯ ಚಿಂತನೆಗಳ ಪ್ರಕಾರ ಅಂಡಾಣು ಮತ್ತು ವೀರ್ಯ ಸೇರಿ ಉಂಟಾದ ಜೀವಕೊಶ ತನ್ನನ್ನೇ ತಾನು ವಿಭಜಿಸಿಕೊಳ್ಳುತ್ತಾ ವಿಭಿನ್ನ ಅಂಗಾಂಶಗಳಾಗಿ, ಅಂಗಗಳಾಗಿ ಬೆಳೆಯುತ್ತದೆ. ಬೃಹದಾಕೃತಿಯನ್ನು ತಾಳಿರುವ ಈ ದೇಹದ ಮೂಲವಸ್ತು ಒಂದು ಜೀವಕೋಶವಷ್ಟೇ. ಅದೇ ಜೀವಕೋಶದ ಭಿನ್ನ ಭಿನ್ನ ಭಾಗಗಳಾಗಿ ಇತರೆ ಜೀವಕೋಶಗಳು ಬೆಳೆದಿರುವುದರಿಂದ ಈ ದೇಹದಲ್ಲಿ ಪ್ರತಿಯೊಂದೂ ಘನಿಷ್ಠವಾದ ಸಂಬಂಧವನ್ನು ಹೊಂದಿದೆ. ಆಯುರ್ವೇದ ಅಂತಹ ಸಂಬಂಧವನ್ನು ಹಾಳುಮಾಡದೇ ಉಳಿಸಿಕೊಂಡು ಹೋಗುವ ವ್ಯವಸ್ಥೆಯನ್ನು ನಮ್ಮೆದುರು ತೆರೆದಿಡುತ್ತದೆ. ಹಾಗಂತ ಇಷ್ಟೇ ಅಲ್ಲ, ಭಿನ್ನ ಭಿನ್ನ ಸಂಹಿತೆಗಳ ಅನುಸಾರ ಆಯುರ್ವೇದ ವಿಭಿನ್ನ ರೋಗಗಳಿಗೆ ಚಿಕಿತ್ಸೆಯನ್ನೂ ಕೊಡುತ್ತದೆ. ಇವೆಲ್ಲವೂ ನಿರಂತರ ಸಂಶೋಧನೆಗಳ ಪ್ರಭಾವವಾಗಿ ನಮ್ಮೆದುರು ತೆರೆದುಕೊಂಡಿದೆ. ಆದರೆ ದುರದೃಷ್ಟವೇನು ಗೊತ್ತೇ? ಆಯುರ್ವೇದ ತಾನು ಹುಟ್ಟಿದ ನಾಡಿನಲ್ಲಿಯೇ ಗೌರವವನ್ನು ಕಳೆದುಕೊಂಡಿತ್ತು. ಪರಿಣಾಮ ಜಗತ್ತಿನ ಎಲ್ಲಾ ರಾಷ್ಟ್ರಗಳ ಸ್ಥಳೀಯ ಆರೋಗ್ಯ ಪದ್ಧತಿಗಳನ್ನು ಗೌರವಿಸುವ ಮಂದಿಯೂ ಆಯುರ್ವೇದವನ್ನು ಸುಳ್ಳು ಎಂದು ಜರಿಯಲು ಹಿಂದೆ ಬೀಳಲಿಲ್ಲ. ವಿಕಿಪೀಡಿಯಾ ಅಂತು ಆಯುರ್ವೇದವನ್ನು ನಕಲಿ ವಿಜ್ಞಾನ ಎಂದು ಕರೆಯಲು ಹಿಂದೆ-ಮುಂದೆ ನೋಡಲಿಲ್ಲ. ನಾವಿನ್ನೂ ಸಹಿಸಿಕೊಂಡಿದ್ದೇವೆ ಏಕೆಂದರೆ ವಿಶ್ವಾಸ ನಮಗೇ ಇಲ್ಲವಲ್ಲ! ಸ್ವಲ್ಪಮಟ್ಟಿಗೆ ಆಯುರ್ವೇದದ ಕುರಿತಂತೆ ನಮ್ಮ ವಿಶ್ವಾಸವನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದ್ದು ನರೇಂದ್ರಮೋದಿಯವರೇ. ಕೀನ್ಯಾದ ಅಧ್ಯಕ್ಷರ ಮಗಳು ರೋಸ್ ಮೇರಿ ಕಣ್ಣಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಾಗ ದೃಷ್ಟಿಯನ್ನೇ ಕಳೆದುಕೊಂಡಿದ್ದಳಂತೆ. ತಂದೆ ಆಕೆಗೆ ಜಗತ್ತಿನ ಅತ್ಯುತ್ಕೃಷ್ಟ ಔಷಧಿಯನ್ನೆಲ್ಲ ಕೊಡಿಸಿದರೂ ಉಪಯೋಗವಾಗಲಿಲ್ಲ. ತುಂಬು ಯೌವ್ವನದಲ್ಲಿ ಅಂಧಳಾದ ಆಕೆಯ ಬದುಕನ್ನು ಕಂಡು ಆತ ರೋದಿಸುತ್ತಿದ್ದನಂತೆ. ಆಕೆಯ ಬದುಕು ಬದಲಾಗಿದ್ದು ಮಾತ್ರ ಭಾರತಕ್ಕೆ ಬಂದಮೇಲೆಯೇ. ಆಯುರ್ವೇದ ಪದ್ಧತಿಯ ಮೂಲಕ ಚಿಕಿತ್ಸೆಯನ್ನು ಪಡಕೊಂಡ ಆಕೆ ತನ್ನ ಕಣ್ಣುಗಳನ್ನು ಮರಳಿ ಪಡೆದು ತನ್ನ ಮಗುವಿನ ಮುಖವನ್ನು ನೋಡಿದಾಗ ಆಕೆಗೆ ಹೇಳಲಾಗದಷ್ಟು ಆನಂದವಾಗಿತ್ತು. ತುಂಬಿದ ಸಭೆಯಲ್ಲಿ ಮೋದಿ ಈ ಘಟನೆಯನ್ನು ವಿವರಿಸುವಾಗ ಸ್ವತಃ ರೋಸ್ ಮೇರಿ ಕಾರ್ಯಕ್ರಮದಲ್ಲಿ ಭಾವುಕಳಾಗಿ ಕುಳಿತಿದ್ದುದು ಆಯುರ್ವೇದಕ್ಕೆ ಹೆಗ್ಗಳಿಕೆಯೇ ಸರಿ. ಆದರೆ ಎಂದಾದರೂ ಆಯುರ್ವೇದ ಇದನ್ನು ಸಂಭ್ರಮಿಸಿದ್ದು ನೋಡಿದ್ದೀರೇನು? ಸಣ್ಣ ಗೆಲುವಿನಿಂದಲೂ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಮಾಡಿಕೊಳ್ಳುವ ಪಶ್ಚಿಮದ ಚಿಕಿತ್ಸಾ ಪದ್ಧತಿಗಳು ಒಮ್ಮೆಯಾದರೂ ಆಯುರ್ವೇದವನ್ನು ಮನಸಾರೆ ಹೊಗಳಿದ್ದನ್ನು ಕೇಳಿದ್ದೀರಾ? ಹೊಗಳುವುದು ಬಿಡಿ, ಮೋದಿ ಆಯುಷ್ ಎಂಬ ಸಚಿವಾಲಯವನ್ನು ಸೃಷ್ಟಿಸಿದಾಗ ಈ ರೀತಿಯ ನಕಲಿ ವಿಜ್ಞಾನಗಳಿಗೆ ಅವಕಾಶ ಕೊಡುವುದು ಅಪಾಯಕರ ಎಂದು ಇವರೆಲ್ಲ ಗರ್ಜಿಸಿದ್ದರು. ನರೇಂದ್ರಮೋದಿ ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಓಪನ್ ಸೋರ್ಸ್‌ನ ಕುರಿತಂತೆ ಬಡಾಯಿ ಕೊಚ್ಚಿಕೊಳ್ಳುವ ಮಂದಿಯನ್ನು ಟೀಕಿಸುತ್ತಾ ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ಓಪನ್ ಸೋರ್ಸ್ ಆಗಿ ಬೆಳೆಯಿತು ಎಂಬುದನ್ನು ವಿಶೇಷವಾಗಿ ಹಂಚಿಕೊಂಡರು. ಮತ್ತೆ ಇಂದು ಅದೇ ರೀತಿ ಆಯುರ್ವೇದ ತನ್ನನ್ನು ತಾನು ವಿಸ್ತರಿಸಿಕೊಳ್ಳಬೇಕಿದೆ ಮತ್ತು ಜಗತ್ತಿನ ಮೂಲೆ-ಮೂಲೆಯನ್ನು ಮುಟ್ಟಬೇಕಿದೆ. ಈಗಾಗಲೇ ಈ ಕುರಿತ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. 2002ರಲ್ಲಿ ಕೊಚ್ಚಿನ್ನಲ್ಲಿ ನಡೆದ ಆಯುರ್ವೇದ ಮಹಾ ಸಮ್ಮೇಳನದಲ್ಲಿ ಡಾಕ್ಟರ್ ಸಿ.ಕೆ ಕೃಷ್ಣನಾಯಕ್ ಒಂದು ಅಪರೂಪದ ಸಂಗತಿಯನ್ನು ತೆರೆದಿಟ್ಟರು. ಭಾರತ ಮತ್ತು ರಷ್ಯಾಗಳು ಚರ್ನೊಬಿಲ್ ಅಣು ದುರಂತದಲ್ಲಿ ನೊಂದವರಿಗೆ ಪಂಚಕರ್ಮ ಚಿಕಿತ್ಸೆಗೆ ಒಪ್ಪಂದ ಮಾಡಿಕೊಂಡಿದ್ದನ್ನು ಅವರು ಎಲ್ಲರ ಮುಂದೆ ತೆರೆದಿಟ್ಟರು. ರಷ್ಯಾ ಈ ಒಪ್ಪಂದವನ್ನು ಸುಮ್ಮ-ಸುಮ್ಮನೆ ಮಾಡಿಕೊಂಡಿರಲಿಲ್ಲ. ಭಾರತದಿಂದ ಕೆಲವು ವೈದ್ಯರನ್ನು ಕರೆಸಿಕೊಂಡು ಈ ದುರಂತಕ್ಕೆ ಒಳಗಾದವರ ಮೇಲೆ ಪಂಚಕರ್ಮ ಚಿಕಿತ್ಸೆಯ ಪ್ರಭಾವವನ್ನು ಪರೀಕ್ಷಿಸಿ, ಅದು ದೇಹ ಹೊಕ್ಕಿರುವ ವಿಷವನ್ನು ತೆಗೆಯುವಲ್ಲಿ ಪರಿಣಾಮಕಾರಿ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವೇ ಈ ನಿರ್ಣಯಕ್ಕೆ ಮುಂದಾಗಿದ್ದು. ಇದು ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸಬೇಕಾದ ವಿಷಯ. ಇಂಗ್ಲೆಂಡು, ಅಮೇರಿಕಾ, ಜರ್ಮನಿ, ಫ್ರಾನ್ಸ್, ಸ್ವಿಡನ್, ಆಸ್ಟ್ರಿಯಾ, ಇಟಲಿ ಈ ರಾಷ್ಟ್ರಗಳಲ್ಲೆಲ್ಲಾ ಪರ್ಯಾಯ ವೈದ್ಯ ಪದ್ಧತಿಯ ಅಧ್ಯಯನ ಶಾಲೆಗಳನ್ನು ತೆರೆಯುವಾಗ ಆಯುರ್ವೇದಕ್ಕೆ ವಿಶೇಷ ಮಹತ್ವ ಕೊಡಲಾಯಿತು. ಆಯುರ್ವೇದ ದೇಹವನ್ನು ವಿಷಮುಕ್ತಗೊಳಿಸುವ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಶಿಷ್ಟವಾದ ಪ್ರಕೃತಿ ಪೂರಕವಾದ ಪದ್ಧತಿ ಎಂಬುದನ್ನು ಜಗತ್ತಿನ ಜನ ಅರಿತಿದ್ದರೂ ಭಾರತಕ್ಕೆ ಅದು ಇನ್ನೂ ವರ್ಜ್ಯವಾಗಿಯೇ ಇತ್ತು. ಈ ವಿಚಾರದಲ್ಲಿ ಪಶ್ಚಿಮದ ಮಂದಿ ಸಾಕಷ್ಟು ಅಧ್ಯಯನ ನಡೆಸಿ ನಮ್ಮೆಲ್ಲ ವಿಚಾರಗಳಿಗೂ ಪೇಟೆಂಟ್ ಪಡೆದುಕೊಂಡ ನಂತರ ಅದು ನಮ್ಮ ಬಳಿಗೆ ಬರುತ್ತಿತ್ತು. ಆಗ ನಾವು ಆಯುರ್ವೇದವನ್ನು ಪಶ್ಚಿಮದ ಮೂಲಕ ಸ್ವೀಕರಿಸಿ ಸಂಭ್ರಮಿಸುತ್ತಿದ್ದೆವು. ಸರಿಯಾದ ಸಂದರ್ಭಕ್ಕೆ ಮೋದಿ ಬಂದು ಚಿತ್ರಣವನ್ನು ಬದಲಾಯಿಸಿದರು.


ಅವರಿಗೆ ಪೂರಕವಾಗಿ ಕರೋನಾ ಕೂಡ ಜಾಗತಿಕ ಮಟ್ಟದಲ್ಲಿ ಆಯುರ್ವೇದದ ಮೌಲ್ಯವನ್ನು ಹೆಚ್ಚಿಸಿತು. ಪ್ರತಿಯೊಬ್ಬರೂ ಲಸಿಕೆಗಳ ಮೊರೆಹೋಗಿದ್ದು ನಿಜವಾದರೂ ಇವುಗಳ ವಿಪರೀತ ಪರಿಣಾಮವನ್ನು ಅರಿತಿದ್ದ ಜನ ಸಹಜವಾಗಿರುವಂತಹ ಚಿಕಿತ್ಸಾ ಪದ್ಧತಿಗೆ ತಮ್ಮನ್ನು ತೊಡಗಿಸಿಕೊಳ್ಳುವ ಚಿಂತನೆಯಲ್ಲಿದ್ದರು. ಆಗ ವರದಾನವಾಗಿ ದೊರಕಿದ್ದೇ ಭಾರತೀಯ ಪದ್ಧತಿ. ಮಾಡರ್ನ ಮತ್ತು ಫೈಸರ್‌ಗಳು ಆರಂಭದಲ್ಲಿ ಸಾಕಷ್ಟು ಸದ್ದು ಮಾಡಿತಾದರೂ ಈಗ ಅದರಿಂದಾಗುತ್ತಿರುವ ಅಡ್ಡ ಪರಿಣಾಮಗಳನ್ನು ಅಲ್ಲಿನ ಜನ ಅನುಭವಿಸುತ್ತಿದ್ದಾರೆ. ಅದೇ ವೇಳೆಗೆ ಕ್ಲಿನಿಕಲ್ ಎವಿಡೆನ್ಸ್‌ಗಳ ಮೂಲಕ ಆಯುರ್ವೇದ ಚಿಕಿತ್ಸೆಯನ್ನು ಪ್ರಮಾಣೀಕರಿಸಲು ಜಾಗತಿಕ ಸಂಸ್ಥೆಗಳು ಹಾತೊರೆಯುತ್ತಿವೆ. ಈ ಹಿಂದೆ ಆರ್ಥ್ರೈಟಿಸ್ ವಿಚಾರದಲ್ಲಿ ಈ ರೀತಿಯ ಪೂರಕ ಸಾಕ್ಷಿಗಳು ದೊರೆತಿದ್ದುದು ಜಗತ್ತಿಗೆ ವಿಶ್ವಾಸ ಮೂಡಿಸುವಂತಿದ್ದವು. ಹೀಗಾಗಿಯೇ ಮತ್ತೊಮ್ಮೆ ಭಾರತದ ಚಿಕಿತ್ಸಾ ಪದ್ಧತಿ ವಿಶ್ವವ್ಯಾಪಕಗೊಳ್ಳಲು ಸಿದ್ಧವಾಗಿರುವಾಗ ನಾವು ಹಿಂದುಳಿಯುವಂತಿಲ್ಲ. ಮನೆ-ಮನೆಗೂ ಆಯುರ್ವೇದವನ್ನು ಮುಟ್ಟಿಸಬೇಕಿದೆ. ಪ್ರತಿಕ್ಷಣವೂ ಆಯುರ್ವೇದವನ್ನು ಬದುಕಬೇಕಿದೆ. ಇಷ್ಟಕ್ಕೂ ಆಯುರ್ವೇದವೆನ್ನುವುದು ಔಷಧಿಯಲ್ಲವಲ್ಲ, ಅದು ಬದುಕಿನ ಶೈಲಿಯೇ ಆಗಿರುವುದರಿಂದ ನಮ್ಮನ್ನು ನಾವು ವ್ಯವಸ್ಥಿತವಾಗಿ ತಿದ್ದಿಕೊಂಡು ಆರೋಗ್ಯವಂತ ಭಾರತದ ನಿರ್ಮಾಣಕ್ಕೆ ಕಟಿಬದ್ಧರಾಗಬೇಕಿದೆ. ಇವಿಷ್ಟೂ ಆಲೋಚನೆಗೆ ಕಾರಣವಾದ್ದು ಆಯುರ್ವೇದ ದಿನಾಚರಣೆ. ಅದು ನರೇಂದ್ರಮೋದಿಯವರ ಕನಸಿನ ಫಲವಾಗಿಯೇ ಆಚರಣೆಗೆ ಬಂದಿರೋದು. ಹೀಗಾಗಿಯೇ ಅವರು ಅಧಿಕಾರಕ್ಕೆ ಬಂದಮೇಲೆ ಆಯುರ್ವೇದಕ್ಕೆ ಬೆಲೆ ಬಂತು ಎಂದು ಅನಿವಾರ್ಯವಾಗಿ ಹೇಳಬೇಕಾಯ್ತು. ಅಲ್ಲದೇ ಮತ್ತೇನು? ಚೀನಾದ ಕಮ್ಯುನಿಸ್ಟ್ ಪಾರ್ಟಿಯೊಂದಿಗೂ ಒಪ್ಪಂದ ಮಾಡಿಕೊಳ್ಳುವ ಮಂದಿಯಿಂದ ಆಯುರ್ವೇದದಂತಹ ಭಾರತೀಯ ಶಾಸ್ತ್ರದ ಬೆಳವಣಿಗೆಯನ್ನು ನಿರೀಕ್ಷಿಸಲಾದರೂ ಸಾಧ್ಯವೇನು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s