ಮೋದಿ ಜಗತ್ತನ್ನು ಜೋಡಿಸುವಾಗ ಇವರದ್ದು ಭಾರತ್ ಜೋಡೊ!

ಮೋದಿ ಜಗತ್ತನ್ನು ಜೋಡಿಸುವಾಗ ಇವರದ್ದು ಭಾರತ್ ಜೋಡೊ!

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಈ ಬಾರಿ ಭಾರತದ್ದೇ ಹವಾ. ಹನ್ನೆರಡು ಪ್ರಮುಖ ರಾಷ್ಟ್ರಗಳು ಭಾರತವನ್ನು ಉಲ್ಲೇಖಿಸಿ ಮಾತನಾಡಿದವು. ಅದರಲ್ಲಿ ಪಾಕಿಸ್ತಾನ, ಟರ್ಕಿ ಮತ್ತು ಗಯಾನದ ಪ್ರಮುಖರು ಭಾರತದ ಕುರಿತಂತೆ ಋಣಾತ್ಮಕವಾಗಿ ಮಾತನಾಡಿದರೆ ಉಳಿದೆಲ್ಲರೂ ಬಲು ಹೆಮ್ಮೆಯಿಂದಲೇ ಈ ದೇಶದ ಗುಣಗಾನ ಮಾಡಿದರು. ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಎದೆಯುಬ್ಬಿಸಬೇಕಾದ ಸಂದರ್ಭ ಇದು. ಭಾರತ ನಿಜಕ್ಕೂ ಬದಲಾಗಿದೆ. ರಷ್ಯಾದ ಅಧ್ಯಕ್ಷನೊಂದಿಗೆ ಮಾತನಾಡುತ್ತಾ ಪ್ರಧಾನಿ ನರೇಂದ್ರಮೋದಿ ಇದು ಯುದ್ಧಗಳ ಯುಗವಲ್ಲ ಎಂದಿದ್ದನ್ನು ಪಶ್ಚಿಮದ ಪತ್ರಿಕೆಗಳು ಹಾಡಿ ಹೊಗಳಿದ್ದವು. ಸ್ವತಃ ಫ್ರಾನ್ಸಿನ ಅಧ್ಯಕ್ಷ ಮ್ಯಾಕ್ರಾನ್ ವಿಶ್ವಸಂಸ್ಥೆಯ ಸಭೆಯಲ್ಲಿ ಈ ಮಾತನ್ನು ಮತ್ತೊಮ್ಮೆ ಉಲ್ಲೇಖಿಸಿ ಜಗತ್ತಿಗೆ ಶಾಂತಿ ಬೇಕಾಗಿದೆ ಎಂದು ಹೇಳಿದ್ದು ಭಾರತದ ನಿಲುವನ್ನು ಪುನರುಚ್ಚರಿಸುವಂತಿತ್ತು. ನೆಹರೂ ಅಲಿಪ್ತನೀತಿಯ ಮಾತನ್ನಾಡುವಾಗ ಜಗತ್ತಿನ ಮಂದಿ ಆಡಿಕೊಂಡು ನಗುತ್ತಿದ್ದರು. ಆದರೆ ಮೋದಿ ಏರಿದ ದನಿಯಲ್ಲಿ ಶಕ್ತರಾಷ್ಟ್ರಗಳಿಗೆ ಪಾಠ ಹೇಳುವಾಗ ಜಗತ್ತೆಲ್ಲವೂ ಹೆಮ್ಮೆಯಿಂದ ಚಪ್ಪಾಳೆ ತಟ್ಟುತ್ತಿದೆ. ಬ್ರಿಟನ್ನಿನ ಪ್ರಧಾನಿ, ಜರ್ಮನಿಯ ಮುಖ್ಯಸ್ಥರೂ ಭಾರತದೊಂದಿಗಿನ ತಮ್ಮ ಸಂಬಂಧವನ್ನು ಬಲಗೊಳಿಸಿಕೊಂಡಿರುವುದರ ಕುರಿತಂತೆ ಹೆಮ್ಮೆಯಿಂದ ಹೇಳಿದರಲ್ಲದೇ ಉಕ್ರೇನ್, ಪೋರ್ಚುಗಲ್, ರಷ್ಯಾ ಮೂರೂ ರಾಷ್ಟ್ರಗಳು ಭಾರತಕ್ಕೆ ವಿಶ್ವಸಂಸ್ಥೆಯ ಸುರಕ್ಷಾ ಸಮಿತಿಯ ಖಾಯಂ ಸದಸ್ಯ ಮಾಡಬೇಕೆಂಬ ಹೇಳಿಕೆಯನ್ನು ಬೆಂಬಲಿಸಿದವು. ವೆನಿಜುವೆಲಾ, ಏಕಶಕ್ತಿಯ ಕಾಲ ಈಗ ಹೋಗಿದೆ. ನಾವೆಲ್ಲರೂ ಬಹುಶಕ್ತಿಯ ಸ್ವರೂಪವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ತಮ್ಮ ಭಾಷಣದಲ್ಲಿ ಭಾರತವೊಂದು ಶಕ್ತಿಯಾಗಿ ಬೆಳೆದಿರುವುದನ್ನು ಉಲ್ಲೇಖಿಸಿದರು. ಭೂತಾನ್, ನೇಪಾಳಗಳಂತಹ ರಾಷ್ಟ್ರಗಳು ಭಾರತ ಏನನ್ನೂ ಬಯಸದೇ ವ್ಯಾಕ್ಸಿನ್ ಕಳಿಸಿಕೊಟ್ಟಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರೆ ಗಯಾನದ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಭಾರತ ಧಾನ್ಯ ರಫ್ತಿಗೆ ನಿಷೇಧ ಹೇರಿದ್ದರಿಂದ ಅದರ ಬೆಲೆ ಜಾಗತಿಕ ಮಟ್ಟದಲ್ಲಿ ಏರಿತು ಎಂದು ದೂರಿದ. ಅಮೀರ್‌ಖಾನನ ಪ್ರೀತಿಯ ರಾಷ್ಟ್ರ ಟರ್ಕಿ ಕಾಶ್ಮೀರದ ವಿಚಾರವನ್ನೆತ್ತಿ ಭಾರತವನ್ನು ದೂಷಿಸುವ ಪ್ರಯತ್ನ ಮಾಡಿದರೆ, ಪಾಕಿಸ್ತಾನವಂತೂ ಪದೇ ಪದೇ ಭಾರತವನ್ನು ದೂಷಿಸಲು ಈ ವೇದಿಕೆಯನ್ನು ಬಳಸಿಕೊಂಡಿತು. ಪಾಕಿಸ್ತಾನದ ಅಧ್ಯಕ್ಷ ಶೆಬಾಸ್ ಶರೀಫ್ ತನ್ನ ಭಾಷಣದಲ್ಲಿ ಕಾಶ್ಮೀರವನ್ನು 12 ಬಾರಿ ಉಲ್ಲೇಖಿಸಿದರೆ ‘ಭಾರತ’ ಎಂದು ಒಂಭತ್ತು ಬಾರಿ ಹೇಳಿದ್ದ. ಪಾಕಿಸ್ತಾನಿಯರು ನಿದ್ದೆ ಕಣ್ಣಿನಲ್ಲೂ ಭಾರತವನ್ನು ಆರಾಧಿಸುತ್ತಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಬಹುಶಃ ಜಗತ್ತಿನ ಶಕ್ತರಾಷ್ಟ್ರಗಳ ಕುರಿತಂತೆ ಮಾತ್ರ ಇತರೆಲ್ಲ ದೇಶಗಳು ಆಡಬಹುದಾಗಿರುವ ಮಾತುಗಳನ್ನು ಇಂದು ಭಾರತದ ಕುರಿತಂತೆ ಆಡಲಾಗುತ್ತಿದೆ ಎಂದರೆ ಜಾಗತಿಕ ಮಟ್ಟದಲ್ಲಿ ವಿಸ್ತಾರವಾಗಿರುವ ಭಾರತದ ಪ್ರಭೆ ಎಂಥದ್ದಿರಬೇಕೆಂದು ಊಹಿಸಬೇಕು. ಥ್ಯಾಂಕ್ಸ್ ಟು ಮೋದಿ. 

ಹೀಗೆ ಜಗತ್ತಿನ ಗೌರವಕ್ಕೆ ಪಾತ್ರವಾಗೋದು ಸುಲಭದ ಕೆಲಸವಲ್ಲ. ಈ ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ಅಗತ್ಯವಿದೆ. ಮೋದಿ ಕಳೆದ ಎಂಟು ವರ್ಷಗಳಲ್ಲಿ ಈ ಪ್ರಯತ್ನವನ್ನು ಸಾಕಷ್ಟು ಮಾಡಿ ಇಂದು ಜಾಗತಿಕ ಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ಒಂದೊಮ್ಮೆ ಜಾಗತಿಕ ಮಟ್ಟದಲ್ಲಿ ನಮ್ಮ ವಿಚಾರಗಳನ್ನೆಲ್ಲ ಮೂದಲಿಸಿ ಬದಿಗೆ ಸರಿಸುತ್ತಿದ್ದ ಚೀನಾಕ್ಕೆ ಇಂದು ನಾವು ಚೆನ್ನಾಗಿಯೇ ತಪರಾಕಿ ಕೊಡುತ್ತಿದ್ದೇವೆ. ಇಲ್ಲೊಂದು ಸಣ್ಣ ಉದಾಹರಣೆ. ಅಂತರ್ ರಾಷ್ಟ್ರೀಯ ಅಣುಶಕ್ತಿ ಸಮಿತಿಯ ಸದಸ್ಯನಾಗಿರುವ ಭಾರತ ಕಳೆದ ಕೆಲವು ವರ್ಷಗಳಲ್ಲಿ ಇತರ ಸದಸ್ಯರೊಂದಿಗೆ ತನ್ನ ಸಂಬಂಧವನ್ನು ಚೆನ್ನಾಗಿಯೇ ಬಲಗೊಳಿಸಿಕೊಂಡಿದೆ. ಇದರ ಪರಿಣಾಮ ಇತ್ತೀಚೆಗೆ ಚೀನಾ ತನ್ನ ಪ್ರಾಬಲ್ಯವನ್ನು ತೋರಿಸುವ ಸರದಿ ಬಂದಾಗ ಹೊರಬಿತ್ತು. ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೇರಿಕಾಗಳು ಸೇರಿಕೊಂಡು ಮಾಡಿಕೊಂಡಿರುವ ಒಂದು ಒಪ್ಪಂದವನ್ನು ವಿರೋಧಿಸುವ ದೃಷ್ಟಿಯಿಂದ ಚೀನಾ ಒಂದು ವಿಚಾರ ಮಂಡಿಸಿತ್ತು. ಆದರೆ ಭಾರತ ಸದಸ್ಯ ರಾಷ್ಟ್ರಗಳೊಂದಿಗಿನ ತನ್ನ ಸಂಬಂಧವನ್ನು ಬಳಸಿ ಚೀನಾ ಮಂಡಿಸಿದ ವಿಚಾರಕ್ಕೆ ಬೆಂಬಲ ಸಿಗದಂತೆ ನೋಡಿಕೊಂಡಿತು. ಚೀನಾ ಅನಿವಾರ್ಯವಾಗಿ ತನ್ನ ಮಂಡನೆಯನ್ನು ಹಿಂಪಡೆಯಬೇಕಾಯ್ತು. ಅತ್ತ ಚೀನಾ ಉರಿದುರಿದು ಬೂದಿಯಾಗುತ್ತಿದ್ದರೆ ಇತ್ತ ಪಶ್ಚಿಮ ರಾಷ್ಟ್ರಗಳು ಭಾರತವನ್ನು ತಲೆಯಮೇಲೆ ಹೊತ್ತು ತಿರುಗಾಡುತ್ತಿದ್ದವು. ಇದಾಗಿ ಕೆಲವು ಗಂಟೆಗಳೂ ಕಳೆದಿರಲಿಲ್ಲ. ರಷ್ಯಾ ಉಕ್ರೇನಿನ ಕೆಲವು ಭಾಗಗಳಲ್ಲಿ ನಡೆಸಿದ ಜನಮತ ಗಣನೆಯ ಕುರಿತಂತೆ ಮಂಡಿಸಿದ ವಿಚಾರಕ್ಕೆ ಭಾರತ ಒಂದು ಹೆಜ್ಜೆ ಹಿಂದಿಟ್ಟು ಪರವಾಗಿಯೂ ಇಲ್ಲದೇ ವಿರೋಧ ನಿಲುವನ್ನೂ ತಳೆಯದೇ ತನ್ನ ಮಧ್ಯಮ ಸ್ಥಿತಿಯನ್ನು ಕಾಯ್ದುಕೊಂಡಿತು. ಈಗ ಕೆಂಡವಾಗುವ ಸರದಿ ಅಮೇರಿಕನ್ ಬುದ್ಧಿಜೀವಿಗಳದ್ದು. ಒಂದು ಘಟನೆಯಲ್ಲಿ ಹಾಗೆ ವರ್ತಿಸಿ ಮತ್ತೊಂದು ಘಟನೆಯಲ್ಲಿ ಹೀಗೆ ವರ್ತಿಸುವುದಕ್ಕೆ ಹೇಗೆ ಸಾಧ್ಯ ಎಂಬುದು ಅವರ ಪ್ರಶ್ನೆ? ಈ ಪ್ರಶ್ನೆಗೆ ಮೋದಿ ಬಲುಹಿಂದೆಯೇ ಉತ್ತರ ಕೊಟಿದ್ದರಲ್ಲ, ‘ಭಾರತ ಯಾವ ನಿರ್ಣಯವನ್ನು ತೆಗೆದುಕೊಂಡರೂ ತನ್ನ ಜನಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳುತ್ತದೆ’ ಅಂತ. ಇದು ಅದರದ್ದೇ ಮುಂದುವರೆದ ಭಾಗವಷ್ಟೇ.

 

ಭಾರತವನ್ನು ಜೋಡಿಸುವ ಯಾತ್ರೆ ಮಾಡುತ್ತಾ ಅಲ್ಲಲ್ಲಿ ಡೋಲು ಬಡಿಯುತ್ತಾ ಕೆಲವೊಂದೆಡೆ ಭಾರತ ಛೋಡೊ ಎನ್ನುತ್ತಾ, ಇನ್ನೂ ಕೆಲವು ಕಡೆ ‘ಜೊಡೊ ಭಾರತ್ ಮಾತಾ ಕಿ ಜೈ’ ಹೇಳಿಸುತ್ತಾ ಇವರು ನಡೆಸುತ್ತಿರುವ ಪಾದಯಾತ್ರೆಯನ್ನು ಜನ ಪ್ರಹಸನದಂತೆ ಕಾಣುತ್ತಿದ್ದಾರೆ. ಏಕೆಂದರೆ ಮೋದಿ ಅದಾಗಲೇ ದೇಶದ ಜನರ ಮನಸ್ಸನ್ನು ಗೆದ್ದಾಗಿದೆ. ಅವರು ತಮ್ಮ ಕರ್ಮಠ ವ್ಯಕ್ತಿತ್ವದಿಂದಲೇ ಜನರ ಹೃದಯದಲ್ಲಿ ಮನೆಮಾಡಿಬಿಟ್ಟಿದ್ದಾರೆ. ಇತ್ತೀಚೆಗೆ ಮೌಂಟ್ ಅಬುನಲ್ಲಿ ರಾತ್ರಿ 10 ಗಂಟೆಗೆ ಕಾನೂನಿನ ವಿರುದ್ಧವಾಗಿ ಮೈಕ್ ಬಳಸಲಾರೆ ಎನ್ನುತ್ತಾ ತಡವಾಗಿ ಬಂದಿದ್ದಕ್ಕೆ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿ ವೇದಿಕೆಯ ಮೇಲಿಂದಲೇ ಅವರಿಗೆ ಮಂಡಿಯೂರಿ ನಮಸ್ಕರಿಸಿದ್ದಿದೆಯಲ್ಲ ಅದು ಯಾವುದಾದರೊಬ್ಬ ನಾಯಕ ಮಾಡಬಹುದಾದ ಅತಿಶ್ರೇಷ್ಠವಾದ ಕೆಲಸ. ಬಹುಶಃ ಈ ದೇಶ ಹಿಂದೆಂದೂ ಇಂತಹ ನಾಯಕನನ್ನು ಕಂಡಿರಲಿಲ್ಲ. ಈ ಮಾತನ್ನು ಹೇಳುವಾಗ ಈ ರೀತಿ ಚುನಾವಣಾ ರ್ಯಾಲಿಗಳನ್ನಷ್ಟೇ ಮುಂದಿಟ್ಟುಕೊಂಡಿಲ್ಲ. ಅವರ ನಿರಂತರ ಕೆಲಸದ ಪರಿಣಾಮಗಳನ್ನು ಗಮನಿಸಿಯೇ ಹೇಳುತ್ತಿದ್ದೇನೆ. 2ಜಿ, 3ಜಿ, 4ಜಿ ಈ ದೇಶದಲ್ಲಿ ಚಲಾವಣೆಗೆ ಬರಲು ನಾವು ವಿದೇಶಗಳನ್ನು ಅವಲಂಬಿಸಿದ್ದೆವು. ಭಾರತ ಸ್ವಂತ ಬಲದಮೇಲೆ 5ಜಿಯನ್ನು ದೇಶಕ್ಕೆ ಸಮರ್ಪಿಸಿದೆ. ಸಾಮಾನ್ಯದ ಸಂಗತಿಯಲ್ಲ ಇದು. ಏರ್‌ಟೆಲ್‌ನ ಮುಖ್ಯಸ್ಥರಾದ ಸುನಿಲ್ ಮಿತ್ತಲ್ ಇತ್ತೀಚೆಗೆ ಮಾತನಾಡುತ್ತಾ ‘ಭಾರತದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಎಂದಿಗೂ ಉತ್ಪಾದಿಸಲು ಸಾಧ್ಯವಿಲ್ಲ ಎಂದು ನಾನು ಈ ಹಿಂದೆ ಹೇಳಿದ ಮಾತನ್ನು ವಾಪಸ್ಸು ಪಡೆಯುತ್ತೇನೆ. ಇಂದು ಈ ಕ್ಷೇತ್ರದಲ್ಲಿ ಬಲುದೊಡ್ಡ ಹೂಡಿಕೆಯಾಗುತ್ತಿರುವುದನ್ನು ನೋಡಿ ನನಗೆ ಆನಂದವಾಗುತ್ತಿದೆ’ ಎಂದಿದ್ದಾರೆ. ಒಂದು ಕಾಲದಲ್ಲಿ ಒಂದು ಜಿಬಿಯಷ್ಟು ಡಾಟಾ ಬಳಕೆಗೆ 300 ರೂಪಾಯಿಯಷ್ಟು ಹಣ ತೆರುತ್ತಿದ್ದೆವು. ಇಂದು ಅದು ಹತ್ತು ರೂಪಾಯಿಗಿಳಿದಿದೆ. ಸಾಮಾನ್ಯ ಭಾರತೀಯ ತಿಂಗಳಿಗೆ 14 ಜಿಬಿಯಷ್ಟು ಡಾಟಾ ಬಳಸುತ್ತಾನಂತೆ. ಹಳೆಯ ಲೆಕ್ಕಾಚಾರವನ್ನು ನೋಡಿದರೆ 4000 ರೂಪಾಯಿ ದಾಟುತ್ತಿತ್ತು. ಈಗ 150 ರೂಪಾಯಿಗಿಂತಲೂ ಕಡಿಮೆ. ಇನ್ನೀಗ 5ಜಿ ವೇಗ ಸಿಕ್ಕನಂತರ ನಮ್ಮ ಕಾರ್ಯಶೈಲಿಯೇ ಬದಲಾಗಲಿದೆ. ಹಾಗೆಂದು ನರೇಂದ್ರಮೋದಿ 5ಜಿ ಲೋಕಾರ್ಪಣೆಯ ಸಂದರ್ಭದಲ್ಲಿ ಹೇಳುವಾಗ ಹೆಮ್ಮೆ ಎನಿಸುತ್ತಿತ್ತು. ಈ ನಡುವೆಯೇ ಮತ್ತೊಂದು ಹೆಮ್ಮೆಯ ಸಂಗತಿ ಹೊರಬಿದ್ದಿದೆ. ಭಾರತ ಸುಮಾರು 2000 ಕೋಟಿ ರೂಪಾಯಿಯಷ್ಟು ಮೌಲ್ಯದ ಪಿನಾಕಾ ಶಸ್ತ್ರವ್ಯವಸ್ಥೆಯನ್ನು ಅರ್ಮೇನಿಯಾಕ್ಕೆ ಮಾರಾಟ ಮಾಡುತ್ತಿದೆ. ಇದರಲ್ಲೇನು ವಿಶೇಷ ಎಂದಿರಾ? ಅರ್ಮೇನಿಯಾ ಟರ್ಕಿ ಮತ್ತು ಪಾಕಿಸ್ತಾನಗಳಿಂದ ಬೆಂಬಲಿತ ಅಜರ್ ಬೈಜಾನ್‌ನೊಂದಿಗೆ ಕಿತ್ತಾಡುತ್ತಿದೆ. ಹೇಗೆ ಪಾಕಿಸ್ತಾನದೊಂದಿಗಿನ ನಮ್ಮ ತಂಟೆಯನ್ನು ಟರ್ಕಿಯಂತಹ ರಾಷ್ಟ್ರಗಳು ಬಳಸಿಕೊಳ್ಳುವ ಪ್ರಯತ್ನ ಮಾಡಿದವೋ ಭಾರತವೂ ಕೂಡ ಅದೇ ದಾಳವನ್ನು ಪ್ರಯೋಗಿಸುತ್ತಿದೆ. ಜಗತ್ತಿನಲ್ಲಿ ಅತಿಹೆಚ್ಚು ಶಸ್ತ್ರಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಒಂದಾಗಿದ್ದ ನಾವು ನಿಧಾನವಾಗಿ ರಫ್ತು ಮಾಡುವಲ್ಲಿಯೂ ನೆಲೆ ನಿಲ್ಲುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಭರ್ಜರಿಯಾದ ಸುದ್ದಿಯೇ. ಇತ್ತ ದೇಶದೊಳಗಿನ ಕೆಲಸವೂ ಕಡಿಮೆಯಾಗಿಲ್ಲ. ಮೆಟ್ರೊ ರೈಲುಹಳಿಯ ಒಟ್ಟಾರೆ ಉದ್ದವನ್ನು ಲೆಕ್ಕ ಹಾಕಿದರೆ ನಾವದಾಗಲೇ ಜಪಾನನ್ನು ಹಿಂದಿಕ್ಕಿದ್ದೇವೆ. ಭಾರತದಲ್ಲಿ ಈಗ 810 ಕಿ.ಮೀಗಿಂತಲೂ ಹೆಚ್ಚಿನ ಮೆಟ್ರೊ ಹಳಿ ಇದೆ. ವಿಶೇಷವೇನು ಗೊತ್ತೇ? 2002ರಿಂದ 2014ರವರೆಗೆ ಈ ದೇಶದಲ್ಲಿ ನಿರ್ಮಾಣಗೊಂಡಿದ್ದು 250 ಕಿ.ಮೀಗಿಂತಲೂ ಕಡಿಮೆಯ ಮೆಟ್ರೊ ಹಳಿಗಳು. ಮೋದಿಯ ಅಧಿಕಾರಾವಧಿಯಲ್ಲಿ ಇದಕ್ಕೆ 600 ಕಿ.ಮೀ ಅನ್ನು ಸೇರಿಸಲಾಗಿದೆ. ಇನ್ನೂ ಸಾವಿರ ಕಿ.,ಮೀಗಳಷ್ಟು ಹಳಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ನಿಸ್ಸಂಶಯವಾಗಿ ಇದು ಸಂಪರ್ಕದ ದೃಷ್ಟಿಯಿಂದ ಬಲುದೊಡ್ಡ ಮೈಲಿಗಲ್ಲು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಕಥೆಯೇನು ಗೊತ್ತೇ? ಇಂಧನದ ಕೊರತೆಯಿಂದಾಗಿ ಇಡಿಯ ರೈಲ್ವೆ ಇಲಾಖೆ ಸ್ತಬ್ಧಗೊಂಡಿದೆ. ಪಾಕಿಸ್ತಾನ್ ರೈಲ್ವೇಸ್‌ನ ಸೇವೆಗಳು ಜನಸಾಮಾನ್ಯರ ಪಾಲಿಗೆ ಈಗ ಇಲ್ಲ. ಇಡಿಯ ದೇಶದಲ್ಲಿ ಎರಡು ಜನಸಾಗಾಣಿಕೆಯ ವಾಹನಗಳು ಮಾತ್ರ ಸಂಚರಿಸುತ್ತಿವೆ. ಇಂಧನ ಕೊರತೆಗೆ ಅವರು ಇತ್ತೀಚಿಗಿನ ಪ್ರವಾಹದ ಕಾರಣವನ್ನು ನೀಡುತ್ತಾರಾದರೂ ಖಜಾನೆಯಲ್ಲಿರುವ ಹಣದ ಕೊರತೆಯೇ ಪ್ರಮುಖವಾದ್ದು ಎಂಬುದನ್ನು ಇಡಿಯ ಜಗತ್ತು ಅರಿತಿದೆ. ಒಂದು ಕಾಲದಲ್ಲಿ ಪಾಕಿಸ್ತಾನದೊಂದಿಗೆ ಭಾರತವನ್ನು ತುಲನೆ ಮಾಡಲಾಗುತ್ತಿತ್ತು. ಇಂದು ಜಗತ್ತೇ ಭಾರತವನ್ನು ತುದಿಗಾಲಲ್ಲಿ ನಿಂತು ನೋಡುವಂತೆ ಮೋದಿ ಬೆಳೆಸಿಬಿಟ್ಟಿದ್ದಾರೆ. ಕಾಂಗ್ರೆಸ್ಸಿಗರು ಭಾರತ ಜೊಡೊ ಮಾಡುವ ಬದಲು ತಮ್ಮೆಲ್ಲ ಪಿಎಫ್ಐ ಮಿತ್ರರನ್ನು ಕರೆದುಕೊಂಡು ಮುಸಲ್ಮಾನ್ ರಾಷ್ಟ್ರಗಳಲ್ಲಿ ಪಾಕಿಸ್ತಾನದ ಏಳ್ಗೆಗಾಗಿ ಒಂದಷ್ಟು ಚಂದಾ ಎತ್ತಿದ್ದರೆ ಚೆನ್ನಾಗಿತ್ತೇನೋ. ಇದನ್ನು ಆಕ್ರೋಶವೆಂದೆಂದುಕೊಳ್ಳಬೇಡಿ. ಭಾರತ್ ಜೊಡೊ ಯಾತ್ರೆ ಪಡೆಯುತ್ತಿರುವ ರೂಪವನ್ನು ಕಂಡಾಗ ಅಸಹ್ಯವೆನಿಸಿ ಹೇಳದ್ದಷ್ಟೆ. ಕೇರಳದ ಯೂಥ್ ಕಾಂಗ್ರೆಸ್ಸಿನ ರಿಜಿಲ್ ಮಾಕುಟ್ಟಿ ನೆನಪಿರಬೇಕಲ್ಲ. ಜೀವಂತವಾಗಿ ಗೋವಿನ ತಲೆ ಕಡಿಯುತ್ತಾ ಹಿಂದೂಗಳ ವಿರುದ್ಧ ಘೋಷಣೆ ಕೂಗಿ ವಿಡಿಯೊ ಮಾಡಿಕೊಂಡಿದ್ದ. ಆತನ ಹೆಗಲಮೇಲೆ ಕೈ ಹಾಕಿ ರಾಹುಲ್ ನಡೆಯೋದು ಎಂಥವನಿಗೂ ಇಷ್ಟವಾಗಲಾರದು. ಪಾಕಿಸ್ತಾನ್ ಜಿಂದಾಬಾದ್ ಖ್ಯಾತಿಯ ಅಮೂಲ್ಯ ಲಿಯೊನ ಕೂಡ ಈ ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್ನಿಂದ ಅಭಿನಂದನೆಗೊಳಗಾಗಿದ್ದಳೆಂಬ ಸುದ್ದಿ ಹರಿದಾಡಿದ್ದು ನೋಡಿದಾಗ ಕಿರಿಕಿರಿ ಎನಿಸಿತ್ತು ಅಷ್ಟೆ! 

ಮತ್ತೆ ನರೇಂದ್ರಮೋದಿಯ ವಿಚಾರಕ್ಕೆ ಬರುವುದಾದರೆ ತಮ್ಮ ಪ್ರತಿಯೊಂದು ನಡೆಯಿಂದಲೂ ಭಾರತದ ಗೌರವವನ್ನು ಹೆಚ್ಚಿಸುತ್ತಿರುವವರು ಅವರು. ಶಿಜಿಂಪಿಂಗ್‌ನೊಂದಿಗೆ ಹಿಂದೊಮ್ಮೆ ಮಾಮಲಾಪುರದಲ್ಲಿ ಅವರೊಮ್ಮೆ ಭೇಟಿಯಾಗಿದ್ದು ನಿಮಗೆ ನೆನಪಿರಬೇಕಲ್ಲ. ಆನಂತರ ಅಲ್ಲಿಗೆ ಬರುವ ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ವೃದ್ಧಿಕಂಡಿದೆ. ಈ ವರ್ಷ ಸುಮಾರು ಒಂದೂವರೆ ಲಕ್ಷ ವಿದೇಶಿಗರು ಈ ಪ್ರದೇಶಕ್ಕೆ ಭೇಟಿಕೊಟ್ಟರೆ ತಾಜ್‌ಮಹಲ್ ನೋಡಲು ಬಂದವರು 39 ಸಾವಿರ ಮಾತ್ರ! ಅಂದರೆ ಈ ದೇಶದ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ತಾಜ್ಮಹಲ್ ಒಂದು ಎಂಬ ಪ್ರಭೆ ಕಳೆದುಹೋಗುವ ಹಂತಕ್ಕೆ ಬರುತ್ತಿದೆ, ಹಾಗೆಂದು ಕಾಂಗ್ರೆಸ್ಸಿನವರು ಮಾತನಾಡಿಕೊಳ್ಳಬಹುದೇನೋ. ಆದರೆ ದಕ್ಷಿಣದಲ್ಲೂ ದೇಶದ ಅತಿ ಪ್ರತಿಷ್ಠಿತ ಜಾಗಗಳಿವೆ ಎಂಬುದನ್ನು ತೋರಿಸಿ ಅದನ್ನೂ ಜಗತ್ತಿನೊಂದಿಗೆ ಜೋಡಿಸಿದವರು ನರೇಂದ್ರಮೋದಿ ಎಂದರೆ ಸರಿಯಲ್ಲವೇನು? ಹೀಗಾಗಿ ನಿಜವಾದ ಭಾರತ್ ಜೊಡೊ ನರೇಂದ್ರಮೋದಿಯವರೇ ಮಾಡುತ್ತಿದ್ದಾರೆ. ಉಳಿದವರದ್ದು ಬರಿಯ ಪಾದಯಾತ್ರೆ ಅಷ್ಟೇ. 

ಮುಗಿಸುವ ಮನ್ನ ಇನ್ನೊಂದು ಖುಷಿಯ ಸುದ್ದಿ ಕೊಡಬೇಕು. ಸೌದಿ ಅರೇಬಿಯಾ ತನ್ನ ವಿಶ್ವವಿದ್ಯಾಲಯಗಳಲ್ಲಿ ಯೋಗವನ್ನು ಪಠ್ಯವಾಗಿ ಸೇರಿಸಿದೆಯಂತೆ ಮತ್ತು ಯೋಗ ಶಿಕ್ಷಕರನ್ನು ಯೋಗಾಚಾರ್ಯ ಎಂದಲ್ಲಿ ಕರೆಯಲಾಗುತ್ತದೆಯಂತೆ. ಭಾರತದ ವಿಶ್ವಗುರುತ್ವದ ಬಗ್ಗೆ ಮೂದಲಿಸುತ್ತಿದ್ದವರೆಲ್ಲ ಈಗ ಮರೆಯಾದಂತೆ ಕಾಣುತ್ತದೆ. ಇರಲಿ, ಯಾರೆಷ್ಟೇ ವಿರೋಧಿಸಿದರೂ, ಧಿಕ್ಕರಿಸಿದರೂ ಹೊಸ ಭಾರತ ತನ್ನ ಯಾತ್ರೆಯನ್ನು ಶುರುಮಾಡಿಬಿಟ್ಟಿದೆ. ಇನ್ನು ಅದನ್ನು ತಡೆಯುವ ಶಕ್ತಿ ಇವರಲ್ಲಿಲ್ಲ. ಹಾಗೆ ಭಾರತದ ಏಳ್ಗೆಯನ್ನು ತಡೆಯಬೇಕಾದವರು ಮಾಡಬೇಕಾದ್ದು ಭಾರತ್ ಜೊಡೊ ಅಲ್ಲ, ಭಾರತ್ ಛೋಡೊ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s