ತುಕಡೆ ಗ್ಯಾಂಗಿಗೆ ಮೋಹನ್ ಭಾಗವತರ ಪಾಠ!

ತುಕಡೆ ಗ್ಯಾಂಗಿಗೆ ಮೋಹನ್ ಭಾಗವತರ ಪಾಠ!

ಈ ಬಾರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರ ವಿಜಯದಶಮಿ ಸಂದೇಶ ಸಾಕಷ್ಟು ಸದ್ದು ಮಾಡಿದೆ. ಜನಸಂಖ್ಯಾಂಕಿಯ ಬದಲಾವಣೆಯ ಕುರಿತಂತೆ ಅವರು ನಡೆಸಿರುವ ಚರ್ಚೆ ಬಹಳ ಎಚ್ಚರಿಕೆಯಿಂದ ಗಮನಿಸಬೇಕಾದ್ದು. ದುರದೃಷ್ಟವೆಂದರೆ ಬಹಳ ಮಂದಿ ಇದನ್ನು ಪ್ರೌಢಶಾಲೆಯ ಮಕ್ಕಳು ಬರೆಯುವ ಜನಸಂಖ್ಯಾ ಸ್ಫೋಟವೆಂಬ ಪ್ರಬಂಧದ ರೀತಿಯಲ್ಲಿ ಆಲೋಚಿಸುತ್ತಿದ್ದಾರೆ. ಜನಸಂಖ್ಯಾ ಹೆಚ್ಚಳದಿಂದ ಉಂಟಾಗುವ ಆರ್ಥಿಕ ಅಸಮಾನತೆ, ಸಂಪನ್ಮೂಲಗಳ ಕೊರತೆ ಇತ್ಯಾದಿಗಳ ಕುರಿತಂತೆ ಮೋಹನ್ ಭಾಗವತರು ಮಾತನಾಡಿದ್ದಾರೆಂದು ಭಾವಿಸಿಕೊಂಡುಬಿಟ್ಟಿದ್ದಾರೆ. ಇಷ್ಟಕ್ಕೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಜನರನ್ನು ಹೊರೆ ಎಂದು ಪರಿಗಣಿಸಿದ್ದನ್ನು ಕೇಳಿಯೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನೂ ಜನ ಸಂಪನ್ಮೂಲವೆಂದೇ ಭಾವಿಸುವ ಆಲೋಚನಾ ಪಥಕ್ಕೆ ಸೇರಿದವರು ಅವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್ ಪ್ರಕಟ ಪಡಿಸಿದ ಪುಸ್ತಕವೊಂದರಲ್ಲಿ ಹೆಚ್ಚುತ್ತಿರುವ ಜನ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿಕೊಳ್ಳುವ ವಿಧಾನದ ಕುರಿತಂತೆ ಸಾಕಷ್ಟು ಚರ್ಚೆ ಮಾಡಲಾಗಿತ್ತು. ಹಾಗಿರುವಾಗ ಇಷ್ಟು ಬೇಗನೇ ಮೂಲ ವಿಚಾರಧಾರೆಯಲ್ಲಿ ಬದಲಾವಣೆ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಇಷ್ಟಕ್ಕೂ ಸರಸಂಘ ಚಾಲಕರು ತಮ್ಮ ಭಾಷಣದಲ್ಲಿ ತಿಮೋರ್, ಸುಡಾನ್ ಮತ್ತು ಕೊಸೊವೊಗಳನ್ನು ಉಲ್ಲೇಖಿಸಿರುವುದನ್ನು ನೋಡಿದರೆ ಅವರ ಗುರಿ ಯಾವ ದಿಕ್ಕಿಗಿದೆ ಎಂಬುದು ಅರಿವಾಗುತ್ತದೆ. 

ಉದಾಹರಣೆಗಾಗಿ ತಿಮೋರ್ ಅನ್ನೇ ತೆಗೆದುಕೊಳ್ಳೋಣ. ಆಸ್ಟ್ರೇಲಿಯಾದ ವಾಯವ್ಯ ಭಾಗಕ್ಕೆ 640 ಕಿ.ಮೀ ದೂರದಲ್ಲಿರುವ ಈ ಭೂಪ್ರದೇಶ ಇಂಡೋನೇಷ್ಯಾಕ್ಕೆ ಹೊಂದಿಕೊಂಡಿದೆ. ಅನೇಕ ಶತಮಾನಗಳ ಕಾಲ ಇಂಡೋನೇಷ್ಯಾದ ಅಡಿಯಲ್ಲಿದ್ದ ಭೂಭಾಗ ಅದು. 16ನೇ ಶತಮಾನದಲ್ಲಿ ಈ ಭೂಭಾಗವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಪೋರ್ಚುಗೀಸರು 17ನೇ ಶತಮಾನ ಮುಗಿಯುವ ವೇಳೆಗಾಗಲೇ ಇಲ್ಲಿಂದ ಚಂದನದ ಕೊರಡುಗಳನ್ನು ಕೊಂಡೊಯ್ಯಲಾರಂಭಿಸಿದರು. 19ನೇ ಶತಮಾನ ಮುಗಿಯುವ ವೇಳೆಗೆ ಈ ಭೂಭಾಗದಲ್ಲಿ ಪೋರ್ಚುಗೀಸರ ಪ್ರಭಾವ ಸಾಕಷ್ಟಿತ್ತು. ಇಲ್ಲಿನ ಸಂಪನ್ಮೂಲವನ್ನು ಕಂಡೇ ದ್ವಿತೀಯ ಮಹಾಯುದ್ಧದ ವೇಳೆಗೆ ಜಪಾನ್ ಕೂಡ ಈ ಭೂಭಾಗವನ್ನು ಆಕ್ರಮಿಸಿತ್ತು. 1974ರಲ್ಲಿ ಪೋರ್ಚುಗಲ್‌ನಲ್ಲಿ ಅಧಿಕಾರ ಬದಲಾವಣೆಯಾದ ನಂತರ ತಿಮೋರ್ ಅನ್ನು ಬಿಟ್ಟುಕೊಡಲಾಯ್ತು. ಮುಂದಿನ ಒಂದು ವಾರದೊಳಗೆ ತಿಮೋರ್ ತನ್ನ ತಾನು ಸ್ವತಂತ್ರವೆಂದು ಘೋಷಿಸಿಕೊಳ್ಳುವ ಮುನ್ನವೇ ಇಂಡೋನೇಷ್ಯಾ ತನ್ನ ಸೇನೆಯನ್ನು ಕಳಿಸಿ ತಿಮೋರ್ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡುಬಿಟ್ಟಿತು. ಆಗ ಇಂಡೋನೇಷ್ಯಾ ಸುಹಾರ್ತೊ ಎಂಬ ಸರ್ವಾಧಿಕಾರಿಯ ಹಿಡಿತದಲ್ಲಿತ್ತು. ಸಹಜವಾಗಿಯೇ ಇಂಡೋನೇಷ್ಯಾ ಜಗತ್ತಿನ ಅತಿ ಹೆಚ್ಚು ಮುಸಲ್ಮಾನರನ್ನು ಹೊಂದಿದ ರಾಷ್ಟ್ರವಾಗಿತ್ತು. ಅಚ್ಚರಿ ಎನ್ನುವಂತೆ ಸುಹಾರ್ತೊ ಸೆಕ್ಯುಲರ್ ಆಗಿದ್ದ, ಅಷ್ಟೇ ಭ್ರಷ್ಟನೂ ಕೂಡ. ಈ ಸಂದರ್ಭದಲ್ಲಿಯೇ ತಿಮೋರ್ ವ್ಯಾಪಕ ಬಡತನಕ್ಕೆ ತಳ್ಳಲ್ಪಟ್ಟಿತು. ಬಡತನ ಇಣುಕಿದೊಡನೆ ಶಿಲುಬೆ ತೆಗೆದುಕೊಂಡು ಮಿಷನರಿಗಳು ಹಾಜರಾಗಿಬಿಡುತ್ತಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ಇಲ್ಲಿಯೂ ಹೀಗೇ ಆಯ್ತು. ಇಂಡೋನೇಷ್ಯಾ ತಿಮೋರ್ ಅನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 20ರಷ್ಟು ಮಾತ್ರ. ಉಳಿದವರೆಲ್ಲ ಮುಸಲ್ಮಾನರೇ ಆಗಿದ್ದರು. ಸುಹಾರ್ತೊನ ಅಧಿಕಾರಾವಧಿಯಲ್ಲಿ ಹೆಚ್ಚಿದ ಬಡತನದ ಲಾಭವನ್ನು ಪಡೆದುಕೊಂಡು ಬಿಷಪ್ ಕಾರ್ಲೋಸ್ ಅನ್ನ ಕೊಡುವ ನೆಪದಲ್ಲಿ ಮುಸಲ್ಮಾನರ ಕುತ್ತಿಗೆಗೆ ಶಿಲುಬೆ ಹಾಕಿದ. ಬಹಳ ಕಾಲ ಹಿಡಿಯಲಿಲ್ಲ. ಹದಿನೈದೇ ವರ್ಷಗಳಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 90ನ್ನು ದಾಟಿಬಿಟ್ಟಿತು! ಇನ್ನೂ ಅಚ್ಚರಿ ಎಂದರೆ 1989ರಲ್ಲಿ ಪೋಪ್ ಈ ಭಾಗಕ್ಕೆ ಭೇಟಿಕೊಟ್ಟು ಅಲ್ಲಿನ ಜನರಲ್ಲಿ ಅಂತರ್ ರಾಷ್ಟ್ರೀಯ ಸಹಕಾರದ ಭರವಸೆಯ ಬೀಜವನ್ನು ಬಿತ್ತಿ ಹೋದರು. ಮುಂದಿನ ಕಥೆ ಏನು ಕೇಳುತ್ತೀರಿ. ಪೂರ್ವ ತಿಮೋರ್ನಲ್ಲಿದ್ದಂತಹ ಕ್ಯಾಥೋಲಿಕ್ ರಿಗೂ ಉಳಿದ ಇಂಡೋನೇಷ್ಯಾದ ಮುಸಲ್ಮಾನರಿಗೂ ತಿಕ್ಕಾಟ ಆರಂಭವಾಯ್ತು. ಭಯಾನಕವಾದ ಹಿಂಸೆ ಕಂಡುಬಂತು. ನಿರಂತರ ನಡೆದ ಈ ಹಿಂಸಾತ್ಮಕ ಹೋರಾಟವನ್ನು ತಡೆಗಟ್ಟಲು ಸರ್ಕಾರ ಬಲಪ್ರಯೋಗ ಮಾಡಬೇಕಾಗಿ ಬಂತು. ಕದನ ಆರಂಭಿಸಿದ್ದು ಕ್ರಿಶ್ಚಿಯನ್ನರೇ, ಅದನ್ನು ತಡೆಗಟ್ಟಲು ಯತ್ನಿಸಿದ್ದು ಸರ್ಕಾರ. ಜಾಗತಿಕ ಮಟ್ಟದಲ್ಲಿ ಇದನ್ನು ಬಹುಸಂಖ್ಯಾತ ಮುಸಲ್ಮಾನರು ಅಲ್ಪಸಂಖ್ಯಾತ ಕ್ರಿಶ್ಚಿಯನ್ನರ ಮೇಲೆ ನಡೆಸುತ್ತಿರುವ ದೌರ್ಜನ್ಯ ಎಂದು ಬಿಂಬಿಸಲಾಯ್ತು. ಎಲ್ಲೆಡೆಯಿಂದಲೂ ಕ್ರಿಶ್ಚಿಯನ್ನರಿಗೆ ಅನುಕಂಪದ ಮಹಾಪೂರ ಹರಿದುಬಂತು. ಇಂಡೋನೇಷ್ಯಾದ ಮೇಲೆ ಒತ್ತಡವೂ ಹೆಚ್ಚಾಯ್ತು. ವಿಶ್ವಸಂಸ್ಥೆಯ ಶಾಂತಿ ಪಡೆಗಳು ಬಂದವಲ್ಲದೇ ಈ ಭಾಗದಲ್ಲಿ ಒಂದು ಜನಮತಗಣನೆಯನ್ನು ನಡೆಸುವ ಇಚ್ಛೆಯನ್ನು ವಿಶ್ವಸಂಸ್ಥೆ ವ್ಯಕ್ತಪಡಿಸಿತು. ಪರಿಣಾಮ ಶೇಕಡಾ 75ಕ್ಕಿಂತಲೂ ಹೆಚ್ಚು ಮಂದಿ ಪೂರ್ವ ತಿಮೋರ್ ಪ್ರತ್ಯೇಕ ರಾಷ್ಟ್ರವಾಗಬೇಕೆಂಬುದಕ್ಕೆ ಒಪ್ಪಿಗೆಯ ಮುದ್ರೆ ಹಾಕಿದರು. ಆಮೇಲೇನು? ಜಗದ ಜನರ ಸಮ್ಮುಖದಲ್ಲೇ ಅದೊಂದು ಪ್ರತ್ಯೇಕ ರಾಷ್ಟ್ರವೂ ಆಯ್ತು. ಇಷ್ಟಕ್ಕೂ ಕಾರಣವೇನು? ಶೇಕಡಾ 20ರಷ್ಟಿದ್ದ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 90 ಆಗಿದ್ದು ತಾನೇ? ಅಂದರೆ ಜನಸಂಖ್ಯೆಯ ಸ್ಫೋಟವೇನೂ ಆಗಿರಲಿಲ್ಲ, ಆದರೆ ಇದ್ದವರೇ ತಮ್ಮ ರಾಷ್ಟ್ರನಿಷ್ಠೆಯನ್ನು ಬದಲಾಯಿಸಿಕೊಂಡಿದ್ದರು ಅಷ್ಟೇ!

ದಕ್ಷಿಣ ಸೂಡಾನಿನ ಕಥೆಯೂ ಇದಕ್ಕಿಂತ ಭಿನ್ನವಲ್ಲ. ಇದೂ ಕೂಡ ಮುಸಲ್ಮಾನರೇ ಹೆಚ್ಚು ಸಂಖ್ಯೆಯಲ್ಲಿದ್ದ ಆಫ್ರಿಕಾದ ಒಂದು ಪುಟ್ಟ ರಾಷ್ಟ್ರ. ಇಲ್ಲಿ ಶೇಕಡಾ 95ರಷ್ಟು ಮುಸಲ್ಮಾನರೇ ಇದ್ದರೆ 90ರ ದಶಕದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇಕಡಾ 5ಕ್ಕಿಂತಲೂ ಕಡಿಮೆ ಇತ್ತು. 2011ರ ವೇಳೆಗೆ ಮುಸಲ್ಮಾನರ ಜನಸಂಖ್ಯೆ ಶೇಕಡಾ 61ಕ್ಕೆ ಇಳಿದರೆ ಕ್ರಿಶ್ಚಿಯನ್ನರು ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತುಬಿಟ್ಟಿದ್ದರು. ಸೂಡಾನ್ ಕ್ರಾಂತಿಕಾರಿ ಪಕ್ಷ ರಚನೆಯೂ ಆಯ್ತು. ಎಂದಿನಂತೆ ಜನಮತ ಗಣನೆ ನಡೆದು ಪ್ರತ್ಯೇಕ ರಾಷ್ಟ್ರಕ್ಕೆ ಅಡಿಪಾಯ ಹಾಕಲಾಯ್ತು. 

ಯುಗೊಸ್ಲಾವಿಯಾದ ಭಾಗವಾಗಿದ್ದ ಕೊಸೊವೊ ಸೆರ್ಬಿಯಾದ ಭಾಗವಾದ ನಂತರ ಅಲ್ಲಿನ ಎರಡು ಪ್ರಮುಖ ಪಂಥಗಳ ನಡುವೆ ಕದನ ಆರಂಭವಾಯ್ತು. ಸಂಪ್ರದಾಯವಾದಿ ಕ್ಯಾಥೊಲಿಕ್ ಸೆರ್ಬಿಯನ್ನರು ಮತ್ತು ಅಲ್ಬೇನಿಯಾದ ಮುಸಲ್ಮಾನರು ಸಣ್ಣ-ಸಣ್ಣ ವಿಚಾರಗಳಿಗೂ ತಗಾದೆ ಮಾಡಿಕೊಳ್ಳುತ್ತಲೇ ಇದ್ದರು. ಅಲ್ಬೇನಿಯಾದ ಮುಸಲರ ಜನನ ಪ್ರಮಾಣ ಹೆಚ್ಚುತ್ತಲೇ ಇತ್ತು. ಪರಿಣಾಮ 1921ರಲ್ಲಿ ಶೇಕಡಾ 65ರಷ್ಟಿದ್ದ ಇವರ ಸಂಖ್ಯೆ ಏಳು ದಶಕಗಳಲ್ಲಿ ಶೇಕಡಾ 82ಅನ್ನು ದಾಟಿತು. ಮುಸಲರ ಸಂಖ್ಯೆ ಹೆಚ್ಚುತ್ತಿದ್ದಂತೆ ಇತರರು ಬದುಕುವುದು ಎಷ್ಟು ಕಷ್ಟವಾಗುತ್ತದೆಂದು ಭಾರತೀಯರಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದನ್ನು ತಡೆಯಲು ಸರ್ಕಾರ ಬಳಸುತ್ತಿದ್ದ ಕ್ರಮಗಳನ್ನು ಜಗತ್ತಿನಾದ್ಯಂತ ಅವರು ಮಾನವ ಹಕ್ಕುಗಳ ಉಲ್ಲಂಘನೆ ಎಂದು ತೋರಿಸಲಾರಂಭಿಸಿದರು. ಕೊಸೊವೊ ಮುಕ್ತಿ ಸೇನೆ ನಿರ್ಮಾಣಗೊಂಡಿತು. 1998ರ ಫೆಬ್ರವರಿಯಲ್ಲಿ ಯುಗೊಸ್ಲಾವಿಯಾದ ಸೇನೆಯೊಂದಿಗೂ ಕೊಸೊವೊ ಮುಕ್ತಿ ಸೇನೆಯೊಂದಿಗೂ ಗಲಾಟೆ ಆರಂಭವಾಯ್ತು. ಇದು ಯಾವ ಮಟ್ಟಕ್ಕೆ ಹೋಯ್ತೆಂದರೆ ಎರಡು ಲಕ್ಷ ಮಂದಿ ಇದ್ದ ನೆಲೆಯನ್ನು ಬಿಟ್ಟು ಓಡಿಹೋಗಬೇಕಾಯ್ತು. ವಿಶ್ವಸಂಸ್ಥೆ ಮತ್ತು ನ್ಯಾಟೊ ಪಡೆಗಳು ಕೊಸೊವೊವನ್ನು ಪಡೆದುಕೊಂಡವು. ಆಮೇಲೆ ಕೊಸೊವೊ ಪ್ರತ್ಯೇಕ ರಾಷ್ಟ್ರವೇ ಆಯ್ತು. 

ಕಾಂತಾರ ಒಂದು ದಂತಕಥೆ ಇರಬಹುದು. ಆದರೆ ಮೇಲೆ ಹೇಳಿದ ಯಾವುದೂ ಅಲ್ಲ. ಇವೆಲ್ಲವೂ ಇತ್ತೀಚಿನ ಕೆಲವು ದಶಕಗಳ ಹಿಂದೆ ನಮ್ಮ ಕಣ್ಣೆದುರಿಗೇ ನಡೆದುಹೋದ ಸತ್ಯ ಕಥನಗಳು. ಪ್ರತೀ ರಾಷ್ಟ್ರವೂ ಜನಸಂಖ್ಯಾಂಕಿಯ ಬದಲಾವಣೆಯ ನಂತರ ವಿಭಜನೆಗೆ ಸಿದ್ಧವಾಗುವುದನ್ನು ಈ ಮೂರೂ ಉದಾಹರಣೆಗಳಲ್ಲಿ ಕಂಡಿದ್ದೇವೆ. ಇದೇ ಉದಾಹರಣೆಯನ್ನು ವಿಸ್ತರಿಸಬೇಕೆಂದಾದರೆ ಇಂದು ಮುಸಲ್ಮಾನ್ ರಾಷ್ಟ್ರವಾಗಿರುವ ಅಫ್ಘಾನಿಸ್ತಾನ ಒಂದು ಕಾಲದಲ್ಲಿ ಗಾಂಧಾರ ದೇಶ. ಲಾಹೋರ್ ಲವನ ಸಾಮ್ರಾಜ್ಯ, ಲವಪುರ. ಆಕ್ರಮಣಕಾರಿಗಳಾಗಿ ಬಂದ ಮುಸಲ್ಮಾನರು ತಾವೂ ಈ ಭಾಗದಲ್ಲಿ ಉಳಿದುಕೊಂಡಿದ್ದಲ್ಲದೇ ಅನೇಕ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದುದರ ಪರಿಣಾಮವಾಗಿ ಅವರೆಲ್ಲರೂ ಎರಡು ಪೀಳಿಗೆ ಕಳೆಯುವುದರೊಳಗೆ ತಮ್ಮ ಮೂಲವನ್ನೇ ಮರೆತು ಇಸ್ಲಾಂ ರಾಷ್ಟ್ರಕ್ಕಾಗಿ ಆಗ್ರಹಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳು ನಿರ್ಮಾಣಗೊಂಡವು. ಕೊಸೊವೊದಲ್ಲಾದಂತೆ 90ರ ದಶಕದಲ್ಲಿ ಹಿಂದೂಗಳನ್ನು ಕಾಶ್ಮೀರದಲ್ಲಿ ಬಡಿಬಡಿದು ಓಡಿಸಲಾಯ್ತು. ಈ ನರಹತ್ಯೆಯನ್ನು ಜಗತ್ತು ಪ್ರತಿಭಟಿಸಲಿಲ್ಲ. ಏಕೆಂದರೆ ಭಾರತದಲ್ಲಿ ಮುಸಲ್ಮಾನರೆಂದರೆ ಅಲ್ಪಸಂಖ್ಯಾತರು ಎಂಬ ಭಾವನೆ ಬಲವಾಗಿ ಬೇರೂರಿಬಿಟ್ಟಿದೆಯಲ್ಲ. ಮುಸಲ್ಮಾನರು ತಿರುಗಿಬಿದ್ದರೆಂಬುದನ್ನು ಜಗತ್ತು ಎದೆಬಡಿದುಕೊಂಡು ಹೇಳಲಾರಂಭಿಸಿದರೆ ಅವರೇ ಒಪ್ಪಿದ ಸಿದ್ಧಾಂತ ತಲೆಕೆಳಗಾಗುತ್ತದಲ್ಲ! ಶೋಷಣೆ ಮಾಡುವವರು ಬಹುಸಂಖ್ಯಾತರು ಮತ್ತು ಶೋಷಣೆಗೆ ಈಡಾಗುವವರು ಅಲ್ಪಸಂಖ್ಯಾತರು ಎಂಬುದು ಜನಸಮಾನ್ಯರ ಭಾವನೆಯಲ್ಲವೇನು? ಈ ತಿಕ್ಕಾಟದ ನಡುವೆ ಪಂಡಿತ ಅನಾಥನಾದ. ಈ 75 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕಗೊಳ್ಳಲಿಲ್ಲವೆಂದರೆ ಅದಕ್ಕೆ ಕಾರಣಗಳು ಎರಡೇ. ಒಂದು ಭಾರತ ಸರ್ಕಾರ ಭಿಕ್ಷಾ ರೂಪದಲ್ಲಿ ಕೊಡುತ್ತಿದ್ದ ಧನಸಹಾಯ. ಮತ್ತೊಂದು ಯಾರ ಬಲದ ಆಧಾರದ ಮೇಲೆ ಕಾಶ್ಮೀರ ಪ್ರತ್ಯೇಕತೆಯ ಮಾತುಗಳನ್ನಾಡುತ್ತಿತ್ತೋ ಆ ಪಾಕಿಸ್ತಾನ ಭಾರತದ ಮುಂದೆ ಪದೇ-ಪದೇ ಮಂಡಿಯೂರಿ ಕುಳಿತುಬಿಟ್ಟಿತ್ತು. ನರೇಂದ್ರಮೋದಿ ಆರ್ಟಿಕಲ್ 370ನ್ನು ತೆಗೆದು ನಮ್ಮಿಂದ ಪ್ರತ್ಯೇಕವಾಗಬೇಕೆಂದಿದ್ದ ಅವರ ಚಿಂತನೆಗಳನ್ನು ಶಾಶ್ವತವಾಗಿ ಸಮಾಧಿ ಮಾಡಿದ್ದಾರೆ. ಆದರೆ ಭಾರತವನ್ನು ತುಂಡು ಮಾಡಬೇಕೆಂದು ಬಯಸುವ ಮಂದಿಗೇನು ಕೊರತೆಯಿಲ್ಲ. ಅವರು ಈಗಲೂ ಭಿನ್ನ-ಭಿನ್ನ ಮಾರ್ಗಗಳನ್ನು ಬಳಸಿ ಜನಸಂಖ್ಯೆಯನ್ನು ವೃದ್ಧಿಸಿಕೊಳ್ಳುವುದಲ್ಲದೇ ಆ ಮೂಲಕ ಆಂತರಿಕ ದಂಗೆಗಳಿಗೂ ಕಾರಣವಾಗುತ್ತಿದ್ದಾರೆ. ಕೇಂದ್ರಸರ್ಕಾರದ ದಮನ ನೀತಿಯನ್ನು ಮುಂದಿರಿಸಿ ಜಾಗತಿಕ ಮಟ್ಟದಲ್ಲಿ ಜನಮತಗಣನೆಗೆ ತೆರೆದುಕೊಳ್ಳುವ ಉಪಾಯ ಅದರದ್ದು. ಅದನ್ನೇ ಸರಸಂಘ ಚಾಲಕರು ತಮ್ಮ ವ್ಯಾಖ್ಯಾನದಲ್ಲಿ ಪ್ರಸ್ತುತಪಡಿಸಿದ್ದು. ಅವರು ಹೇಳಿರುವ ಮೂರೂ ರಾಷ್ಟ್ರಗಳ ಕುರಿತಂತೆ ಅಧ್ಯಯನ ಮಾಡಿದ ಮೇಲೆ ಗೊತ್ತಾಗುವ ಕೆಲವು ಅಂಶಗಳಿವೆ. ಮೊದಲನೆಯದಾಗಿ, ಈ ರೀತಿ ಜನಸಂಖ್ಯಾಂಕಿಯ ಬದಲಾವಣೆ ಆದಾಗಲೆಲ್ಲ ತರುಣರ ಸಂಖ್ಯೆಯೇ ಹೆಚ್ಚಿರುವುದನ್ನು ಗಮನಿಸಬಹುದು. ಸುಡಾನ್, ಕೊಸೊವೊ ವತ್ತು ತಿಮೋರ್ಗಳಲ್ಲಿ ಏಕಾಕಿ ಹೆಚ್ಚಿದ ಒಂದೇ ಜನಾಂಗದ ತರುಣರು ಕ್ರೌರ್ಯದಲ್ಲಿ ಎಲ್ಲರಿಗಿಂತಲೂ ಮುಂದಿರುತ್ತಿದ್ದುದು ವಿಶೇಷ. ಎರಡನೆಯದು, ವ್ಯಾಪಕವಾದ ನಗರೀಕರಣದಿಂದ ಇಲ್ಲೆಲ್ಲ ಒಂದೇ ಜನಾಂಗದ ಜನ ಪ್ರಮುಖ ನಗರಗಳಿಗೆ ವಲಸೆ ಹೋಗಿ ಅಲ್ಲಿ ತಮ್ಮದ್ದೇ ಭೂಪ್ರದೇಶಗಳನ್ನು ರೂಪಿಸಿಕೊಂಡುಬಿಡುತ್ತಿದ್ದರು. ಇಂತಹ ಪ್ರದೇಶಗಳಿಗೆ ಬೇರೆ ಜನಾಂಗದವರು ಬರುವಂತಿರಲಿಲ್ಲ. ಆರ್ಥಿಕ ಅಸಮಾನತೆಯ ನೆಪವನ್ನು ಮುಂದಿಟ್ಟುಕೊಂಡು ಈ ಜನ ತಮ್ಮ ಶತ್ರುತ್ವವನ್ನು ವ್ಯಾಪಕವಾಗಿ ಬೆಳೆಸಿಕೊಳ್ಳುತ್ತಿದ್ದರು. ಅದರ ಪರಿಣಾಮ ಮೊದಲು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದರಲ್ಲದೇ ನೇರವಾಗಿ ಸರ್ಕಾರಿ ಪಡೆಗಳೊಂದಿಗೆ ಕದನಕ್ಕಿಳಿಯುತ್ತಿದ್ದರು. ಆರಂಭದಲ್ಲಿ ಕಲ್ಲೆಸೆಯುತ್ತಿದ್ದವರು ಆನಂತರ ಶಸ್ತ್ರಗಳ ಬಳಕೆ ಮಾಡುತ್ತಿದ್ದುದು ಈ ಮೂರು ರಾಷ್ಟ್ರಗಳಲ್ಲಿ ಕಂಡುಬಂದಿದೆ. ಅಚ್ಚರಿ ಎಂಬಂತೆ ಪ್ರಮುಖ ನಗರಗಳಲ್ಲಿ ಬಿಟ್ಟು ಬೇರೆಡೆ ವ್ಯಾಪಕವಾದ ಕದನಗಳು ಇಲ್ಲೆಲ್ಲೂ ಕಂಡುಬಂದಂತಿಲ್ಲ. ಒಮ್ಮೆ ಕದನಗಳು ತೀವ್ರ ಸ್ವರೂಪ ಪಡೆದುಕೊಂಡ ನಂತರ ಕದನದಲ್ಲಿ ನಿರತರಾದವರು ರಾಜಕೀಯ ಪಕ್ಷಗಳ ಮರ್ಜಿಗೆ ಕಾಯದಿರುವುದನ್ನು ಅನೇಕ ತಜ್ಞರು ಗಮನಿಸಿದ್ದಾರೆ. ಒಟ್ಟಾರೆ ಇಷ್ಟನ್ನೂ ದಾಖಲಿಸಬೇಕೆಂದರೆ ಮೊದಲು ಒಂದೇ ಜನಾಂಗದ ಜನಸಂಖ್ಯೆಯನ್ನು ಮಕ್ಕಳನ್ನು ಹೆರುವ ಮೂಲಕ, ಮತಾಂತರದ ಮೂಲಕ, ಕೊನೆಗೆ ಅನ್ಯರಾಷ್ಟ್ರಗಳಿಂದ ಕರೆಸಿಕೊಳ್ಳುವ ಮೂಲಕವಾದರೂ ಹೆಚ್ಚಿಸಿಕೊಳ್ಳಲಾಗುತ್ತದೆ. ನಿಧಾನವಾಗಿ ಕಳ್ಳತನ, ಲೂಟಿ, ದರೋಡೆ, ಮಾನಭಂಗಗಳನ್ನು ಇವರು ಮಾಡಲು ಆರಂಭಿಸುತ್ತಾರೆ. ಸರ್ಕಾರ ಕಠಿಣ ಕ್ರಮ ಕೈಗೊಂಡು ಇವರನ್ನು ಬಂಧಿಸಲಾರಂಭಿಸಿದೊಡನೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಂಬ ಕೂಗು ಕೇಳಿಬರುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಂತೆ ಪ್ರತಿಭಟನೆ ಆರಂಭವಾಗುತ್ತದೆ. ಹಿಂಸಾತ್ಮಕ ರೂಪಕ್ಕೆ ತಿರುಗಿಕೊಳ್ಳಬಹುದಾದ ಈ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸಿದೊಡನೆ ಆಂತರಿಕ ದಂಗೆಗಳು ಆರಂಭಗೊಳ್ಳುತ್ತವೆ. ಜಗತ್ತಿನ ಮಾರಾಟಗೊಂಡ ಪತ್ರಕರ್ತರೆಲ್ಲರೂ ಬೊಬ್ಬಿಡಲಾರಂಭಿಸುತ್ತಾರೆ. ಸಹಜವಾಗಿಯೇ ಅಂತರ್ ರಾಷ್ಟ್ರೀಯ ಒತ್ತಡ ನಿರ್ಮಾಣಗೊಂಡು ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಜನಮತಗಣನೆ ನಡೆಸುತ್ತದೆ, ಪ್ರತ್ಯೇಕ ರಾಷ್ಟ್ರವನ್ನು ಹರಿದು ಹಂಚಿಬಿಡುತ್ತದೆ. ಕಾಶ್ಮೀರ, ಪಂಜಾಬ್, ಕೇರಳ, ಈಶಾನ್ಯ ರಾಜ್ಯಗಳು, ತಮಿಳುನಾಡು, ಆಂಧ್ರ, ಪಶ್ಚಿಮ ಬಂಗಾಳ ಇವೆಲ್ಲವೂ ಈ ಜ್ವಾಲಾಮುಖಿಯ ತುದಿಯಲ್ಲೇ ಕುಳಿತಿವೆ. ರೋಹಿಂಗ್ಯಾಗಳಿಗೆ ಆಧಾರ್‌ಕಾರ್ಡ್ ಕೊಡಿಸುವ ಕಾಂಗ್ರೆಸ್ಸು, ಬಾಂಗ್ಲಾದೇಶಿಗಳಿಗೆ ವೋಟರ್ ಐಡಿ ಕೊಡಿಸುವ ತೃಣಮೂಲ ಕಾಂಗ್ರೆಸ್ಸು, ಭಿನ್ನ-ಭಿನ್ನ ಜಾಗಗಳಿಂದ ವಲಸೆ ಬಂದಿರುವ ಮುಸಲ್ಮಾನರ ಮತಗಳಿಂದಲೇ ಗೆಲ್ಲುವ ಮಾತಾಡುವ ದೆಹಲಿಯ ಆಮ್ಆದ್ಮಿ ಪಾರ್ಟಿ, ನಿರಂತರವಾಗಿ ನಡೆಯುತ್ತಿರುವ ಆಂಧ್ರ, ತೆಲಂಗಾಣಗಳ ಮತಾಂತರಗಳು, ಉತ್ತರ ಭಾರತೀಯರ ದೌರ್ಜನ್ಯಕ್ಕೆ ದಕ್ಷಿಣ ಭಾರತೀಯರು ನಲುಗುತ್ತಿದ್ದಾರೆ ಎಂದು ಪುಕಾರು ಹಬ್ಬಿಸುತ್ತಿರುವ ದ್ರವಿಡ ಪಕ್ಷಗಳು ಇವರೆಲ್ಲರೂ ಈ ಪಾಪದಲ್ಲಿ ಭಾಗೀದಾರರೇ. ಹೀಗಾಗಿಯೇ ನರೇಂದ್ರಮೋದಿ ದೆಹಲಿಯಲ್ಲಿ ಸಿಎಎ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಾಗ್ಯೂ ಪ್ರಹಾರಕ್ಕೆ ಶಸ್ತ್ರ ಬಳಸಲಿಲ್ಲ. 

ಈಗ ಎಚ್ಚರಿಕೆ ನಾವು ತೆಗೆದುಕೊಳ್ಳಬೇಕಾಗಿದೆ. ಜನಸಂಖ್ಯಾ ಬದಲಾವಣೆಯ ಈ ಹೊತ್ತಲ್ಲಿ ಸರ್ಕಾರ ಸೂಕ್ತ ನೀತಿಗಳನ್ನು ಜಾರಿಗೆ ತರುವಂತೆ ಒತ್ತಾಯಿಸಬೇಕಿದೆ. ಮೋಹನ್ಜಿ ಭಾಗವತರು ಅದನ್ನೇ ಮಾಡಿದ್ದು..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s