ಇತ್ತೀಚೆಗೆ ಬಿಜೆಪಿಯ ಚಿಂತನಾ ಬೈಠಕ್ನಲ್ಲಿ ಮುಸಲ್ಮಾನರಲ್ಲಿ ದೊಡ್ಡ ಪ್ರಮಾಣದಲ್ಲಿರುವ ಪಸ್ಮಂಡಾಗಳ ಕುರಿತಂತೆ ವಿಶೇಷ ಗಮನವೀಯುವ ಮಾತಾಡಲಾಯಿತು. ಇದಾದಮೇಲೆ ಅನೇಕ ಮಾಧ್ಯಮಗಳು ಪಸ್ಮಂಡಾಗಳ ಕುರಿತಂತೆ ಆಲೋಚಿಸಲಾರಂಭಿಸಿದರಲ್ಲದೇ ವಿಶೇಷ ವರದಿಗಳನ್ನು ಪ್ರಕಟಿಸಿದವು. ಸುಮಾರು ನೂರು ವರ್ಷಗಳ ಹೋರಾಟದ ನಂತರ ಈಗ ಮುಸಲ್ಮಾನರಲ್ಲೇ ಹಿಂದುಳಿದ ದಲಿತ ವರ್ಗಕ್ಕೆ ಸೇರಿದ ಪಸ್ಮಂಡಾಗಳ ಕುರಿತ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಸಂತಸದ ಸಂಗತಿಯೇ. ತುಳಿತಕ್ಕೊಳಗಾದವರು ಯಾರೇ ಆಗಲಿ, ಎಲ್ಲೇ ಇರಲಿ, ಅವರ ಕುರಿತಂತೆ ಸಹಾನುಭೂತಿ, ಪ್ರೇಮ ಅತ್ಯಗತ್ಯ.
ಮುಸಲ್ಮಾನರಲ್ಲಿ ಜಾತಿಗಳೇ ಇಲ್ಲ ಎಂದು ಹೇಗೋ ನಮ್ಮನ್ನು ನಂಬಿಸಿಬಿಟ್ಟಿದ್ದಾರೆ. ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರರು ಈ ಮಾತನ್ನು ಒಪ್ಪಿರಲಿಲ್ಲ. ಮುಸಲ್ಮಾನರಲ್ಲಿನ ಸಹೋದರತ್ವದ ಕುರಿತಂತೆ ಅವರಿಗೆ ಅನುಮಾನ ಇದ್ದೇ ಇತ್ತು. ಒಂದೆಡೆಯಂತೂ ‘ಜೀತ ಮತ್ತು ಜಾತಿ ಇವೆರಡೂ ಅನಿಷ್ಟಗಳು. ಸರ್ಕಾರಗಳು ಕಾನೂನು ತಂದು ಜೀತವನ್ನೇನೋ ಮಟ್ಟ ಹಾಕಿವೆ. ಆದರೆ ಮುಸಲ್ಮಾನರಲ್ಲಿ ಜಾತಿ ಇನ್ನೂ ಹಾಗೆಯೇ ಉಳಿದುಕೊಂಡಿದೆ’ ಎಂದಿದ್ದರು. ಒಂದು ರೀತಿಯಲ್ಲಿ ದಲಿತರ ಪಾಲಿಗೆ ಮಸೀಹ ಆಗಿ ಕಂಡುಬಂದ ಕಾಂಶಿರಾಮ್ ‘ಮುಸಲ್ಮಾನರ ಐವತ್ತಕ್ಕೂ ಹೆಚ್ಚು ನಾಯಕರನ್ನು ಭೇಟಿಯಾದ ಮೇಲೆ ಭ್ರಮನಿರಸನವಾಯ್ತು, ಏಕೆಂದರೆ ಮೇಲ್ವರ್ಗದ ಸೈಯ್ಯದ್, ಶೇಖ್, ಮುಘಲ್, ಪಠಾನ್‌ಗಳು ಕೆಳವರ್ಗದ ಅನ್ಸಾರಿ, ಧುನಿಯಾ, ಖುರೇಷಿಗಳನ್ನು ಮುಂದೆ ಬರಲು ಬಿಡಲಾರರು. ನಾನು ದಲಿತ ವರ್ಗದಿಂದ ಮತಾಂತರಗೊಂಡವರಿಗಾಗಿ ಇನ್ನುಮುಂದೆ ಕೆಲಸ ಮಾಡುವೆ’ ಎಂದಿದ್ದರು. ಮುಸಲ್ಮಾನರಲ್ಲಿರುವ ಮೇಲ್ವರ್ಗ, ಕೆಳವರ್ಗದ ಈ ಗೊಂದಲ ಇಂದು ನಿನ್ನೆಯದಲ್ಲ. ಅರಬ್ಬರು, ತುರ್ಕರು ಆಕ್ರಮಣಕಾರಿಗಳಾಗಿ ಬಂದು ಇಲ್ಲಿ ನೆಲೆಸಿದರಲ್ಲ, ಅವರು ಸಹಜವಾಗಿಯೇ ಮೂಲ ಇಸ್ಲಾಂ ನೆಲೆಯಿಂದ ಬಂದವರಾದ್ದರಿಂದ ತಮ್ಮನ್ನು ತಾವು ಅಪ್ಪಟ ಮುಸಲ್ಮಾನರೆಂದು ಕರೆದುಕೊಂಡರು. ಇಲ್ಲಿ ಮತಾಂತರಗೊಂಡವರೆಲ್ಲ ಅವರಿಗಿಂತ ಕೆಳವರ್ಗದವರಾದರು. ಇಲ್ಲಿಯೂ ಕೂಡ ಎರಡು ವರ್ಗಗಳು ನಿರ್ಮಾಣಗೊಂಡವು. ಮೇಲ್ವರ್ಗದಿಂದ ಮತಾಂತರಗೊಂಡವರು ತಮ್ಮದ್ದೇ ಬೇರೆ ಪಂಗಡವೆಂದುಕೊಂಡರೆ ದಲಿತರಿಂದ ಮತಾಂತರಗೊಂಡವರು ಅಲ್ಲಿಯೂ ಬಹಿಷ್ಕೃತರಾಗಿಯೇ ಉಳಿದರು. ವಿದೇಶದಿಂದ ಬಂದ ಮುಸಲ್ಮಾನರನ್ನು ಅಶ್ರಫ್‌ಗಳು ಎನ್ನಲಾಯ್ತು. ಪ್ರವಾದಿಯವರ ನೇರ ಪರಂಪರೆಗೆ ಸೇರಿದವರಿವರು ಎಂಬುದು ಅವರ ಹೆಗ್ಗಳಿಕೆ. ಸೈಯ್ಯದ್, ಸಿದ್ದಿಖಿ, ಫಾರುಖಿ, ಪಠಾನ್, ಶೇಖ್ ಇವರೆಲ್ಲ ಸತ್ಕುಲ ಪ್ರಸೂತರೆನಿಸಿದರು. ಇನ್ನು ಭಾರತದಲ್ಲಿ ಮೇಲ್ವರ್ಗದಿಂದ ಮತಾಂತರಗೊಂಡವರು ಅಜ್ಲಫ್ಗಳಾದರೆ ದಲಿತ ವರ್ಗಕ್ಕೆ ಸೇರಿದವರನ್ನು ಅರ್ಜಾಲ್‌ಗಳೆಂದು ಕರೆಯಲಾಯ್ತು. ಇಷ್ಟಕ್ಕೇ ಮುಗಿಯದೇ ಇವರುಗಳಲ್ಲೂ ಅನೇಕ ಬಿರಾದರಿಗಳನ್ನು ಗುರುತಿಸಲಾಯ್ತು. ಈ ಬಿರಾದರಿಗಳು ಥೇಟು ನಮ್ಮಲ್ಲಿನ ಜಾತಿಗಳಿದ್ದಂತೆ. ನೇಕಾರರು ಅನ್ಸಾರಿಗಳಾದರೆ, ಕಟುಕರು ಖುರೇಷಿಗಳೆನಿಸಿದರು, ಜಾಡಮಾಲಿಗಳನ್ನು ಹಲಾಲ್‌ಕೋರರೆನ್ನಲಾಯ್ತು. ಹಿಂದೂಧರ್ಮದಿಂದ ಇಸ್ಲಾಂ ಸ್ವೀಕಾರ ಮಾಡಿದ್ದರಷ್ಟೆ. ಆದರೆ ಇಲ್ಲಿಯೂ ವೃತ್ತಿ ಆಧಾರಿತ ಜಾತಿ ಮುಂದುವರೆಯಿತು. ಅಜ್ಲಫ್‌ಗಳು ಅರ್ಜಾಲ್‌ಗಳು ಸೇರಿದರೆ ಈ ದೇಶದ ಶೇಕಡಾ 85ರಷ್ಟು ಮುಸ್ಲೀಂ ಜನಸಂಖ್ಯೆ. ಅಶ್ರಫ್‌ಗಳು ಕೇವಲ 15ರಷ್ಟು ಮಾತ್ರ. ಇಷ್ಟೇ ಇರುವ ಈ ಅಶ್ರಫ್‌ಗಳು ಶೇಕಡಾ 85ರಷ್ಟಿರುವ ಅಜ್ಲಫ್ ಮತ್ತು ಅರ್ಜಾಲ್‌ಗಳನ್ನು, ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಪಸ್ಮಂಡಾಗಳನ್ನು ಶತಶತಮಾನಗಳಿಂದಲೂ ತಮ್ಮ ಅಂಕೆಯಲ್ಲಿಟ್ಟುಕೊಂಡೇ ಬಂದಿದ್ದಾರೆ. ಬಿಜೆಪಿ ತನ್ನ ಸಭೆಯಲ್ಲಿ ಈ 85 ಪ್ರತಿಶತ ಪಸ್ಮಂಡಾಗಳ ಕುರಿತಂತೆಯೇ ಚರ್ಚೆ ನಡೆಸಿದ್ದು. ಇಷ್ಟಕ್ಕೂ ಪಸ್ಮಂಡಾ ಪರ್ಷಿಯನ್ ಪದವಾಗಿದ್ದು ಹಿಂದುಳಿದವರು ಎಂಬುದೇ ಅದರ ಅರ್ಥ. ಪಸ್ಮಂಡಾಗಳಲ್ಲಿ ಕೆಲವರು ತಮ್ಮೊಳಗೆ ವಿವಾಹ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಅತ್ತ ಅಶ್ರಫ್‌ಗಳಲ್ಲೂ ಅವರೊಳಗೇ ವಿವಾಹ ಸಂಬಂಧಗಳು ನಡೆಯುತ್ತವೆ. ಆದರೆ ಇವರೀರ್ವರ ನಡುವೆ ಸಂಬಂಧಗಳೇರ್ಪಡುವುದು ಹೆಚ್ಚು-ಕಡಿಮೆ ಅಸಾಧ್ಯ. ಇಸ್ಲಾಂನಲ್ಲಿ ಕುಫು ಎಂದರೆ ಮದುವೆಯಾಗಲು ಇರುವ ಸಮಾನ ನಿಯಮಗಳ ಕಂತೆ. ಇದರ ಪ್ರಕಾರ ಮದುವೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇರುವವರ ನಡುವೆಯೇ ಆಗಬೇಕು. ಮನೆತನ, ವಂಶಗಳು ಸಮಕ್ಕಿರಬೇಕು. ಅಂದರೆ ಸೈಯ್ಯದ್ ವಂಶಕ್ಕೆ ಸೇರಿದವ ಸಿದ್ಧಿಖಿ, ಫಾರುಖಿ ಇಂಥವರನ್ನು ಮಾತ್ರ ಮದುವೆಯಾಗಬಹುದು. ಮುಘಲ್, ಪಠಾನರೂ ಕೂಡ ಕೆಳವರ್ಗದವರಾಗುತ್ತಾರೆ. ಸಮಾನ ಮನೆತನ ಎಂದರೆ ಜಾತಿಯ ಸಮಾನತೆಯ ಕುರಿತಂತೆಯೇ ಅವರು ಮಾತನಾಡೋದು. ಹೀಗಾಗಿ ಮೇಲ್ಜಾತಿಯವರು ಕೆಳಜಾತಿಯವರನ್ನು ಮದುವೆಯಾಗುವಂತೆಯೇ ಇಲ್ಲ. ಅಲ್ಲಲ್ಲಿ ಅಪವಾದಗಳು ಕಾಣಬಹುದೇನೋ ಆದರೆ ಸಾಮಾನ್ಯವಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಕುಫು ಪ್ರಕಾರ ಮದುವೆಯಾಗುವ ಗಂಡು-ಹೆಣ್ಣು ಇಬ್ಬರೂ ಇಸ್ಲಾಮಿಗೆ ಮತಾಂತರಗೊಂಡಿರಲೇಬೇಕು. ಅದರಲ್ಲೂ ಆಗತಾನೇ ಮತಾಂತರಗೊಂಡ ಹುಡುಗಿಗಿಂತ ತಂದೆ-ತಾಯಿಯೂ ಮುಸಲ್ಮಾನರಾದವರೇ ಶ್ರೇಷ್ಠ ಎಂಬ ನಿಯಮವೂ ಇದೆ. ಇದನ್ನು ವಿಸ್ತಾರಗೊಳಿಸುವ ಅಗತ್ಯವಿಲ್ಲವೆನಿಸುತ್ತದೆ. ಇನ್ನು ಸಂಪತ್ತು ಮತ್ತು ವೃತ್ತಿಗಳಲ್ಲೂ ಈ ನಿಯಮಗಳು ಸಮಾನತೆಯನ್ನು ಬಯಸುತ್ತವೆ!
ಈ ರೀತಿಯ ಅಸಮಾನತೆಯನ್ನು ಮುಸಲ್ಮಾನರು ವಿರೋಧಿಸಲೇ ಇಲ್ಲವೇ? ಖಂಡಿತ ವಿರೋಧಿಸಿದ್ದಾರೆ. ಸುಮಾರು ನೂರು ವರ್ಷಗಳ ಹಿಂದೆ 1914ರಲ್ಲಿ ಕಲ್ಕತ್ತಾದಲ್ಲಿ ಫಲಾ-ಉಲ್ ಮೊಮಿನೀನ್ ಚಳವಳಿ ಆರಂಭವಾಗಿತ್ತು. ಇದರ ಆಧಾರದ ಮೇಲೆಯೇ 1926ರಲ್ಲಿ ಕಲ್ಕತ್ತಾದಲ್ಲಿ ಅಖಿಲ ಭಾರತ ಮೊಮಿನ್ ಸಮ್ಮೇಳನ ನಡೆದಿತ್ತು. ಅಶ್ರಫ್‌ಗಳಿಗೆ ಇದರಿಂದ ಬೆಂಕಿ ಬಿದ್ದಂತಾಯ್ತು. ಅವರು ಮುಸ್ಲೀಂ ಲೀಗ್ ಅನ್ನು ಕಟ್ಟಿಕೊಂಡರು. ಇವರ ಪಾಕಿಸ್ತಾನ ನೀತಿಯ ವಿರುದ್ಧ ಪಸ್ಮಂಡಾಗಳು ಸೇರಿಕೊಂಡು 1940ರ ಮೇ ತಿಂಗಳಲ್ಲಿ ದೆಹಲಿಯಲ್ಲಿ ನಲವತ್ತು ಸಾವಿರ ಜನ ಬೀದಿಗಿಳಿದರು. ಇವರೆಲ್ಲರೂ ಅನ್ಸಾರಿ ಬಿರಾದರಿಗೆ ಸೇರಿದವರಾಗಿದ್ದರು. ಮೇಲ್ವರ್ಗದವರಿಗೆ ತಮ್ಮ ಮನಸ್ಸಿಗೆ ಬಂದಂತೆ ಪಸ್ಮಂಡಾಗಳನ್ನು ದುಡಿಸಿಕೊಳ್ಳುವ ಚಾಕಚಕ್ಯತೆ ಇತ್ತು. ಮತದ ಅಫೀಮು ಕುಡಿಸಿ ಕಾಂಗ್ರೆಸ್ಸಿನ ವಿರುದ್ಧ ಭಡಕಾಯಿಸಿ ಕೊನೆಗೂ ಪ್ರತ್ಯೇಕ ರಾಷ್ಟ್ರವನ್ನು ತಾವು ಪಡೆದುಕೊಂಡೇ ಬಿಟ್ಟರು. ಮತ್ತೆ ಪಸ್ಮಂಡಾಗಳು ಇಲ್ಲಿಯೇ ಉಳಿದರು. ಅವರ ಶೋಷಣೆ ಮಾಡಲೆಂದೇ ಒಂದಷ್ಟು ಮೇಲ್ವರ್ಗದ ಮುಸಲ್ಮಾನರು ಇಲ್ಲಿಯೇ ಇದ್ದರು. ಈ ಹಿನ್ನೆಲೆಯಲಿಯೇ 1955ರಲ್ಲಿ ಕಾಕಾ ಸಾಹೇಬ್ ಕಾಳೇಕರ್ ಕಮಿಟಿ ಮುಸಲ್ಮಾನರಲ್ಲಿ ದಲಿತ ಶೋಷಣೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಒಪ್ಪಿಕೊಂಡಿತ್ತು. ಈ ಪರಿಸ್ಥಿತಿ ಹಿಂದೂಗಳಲ್ಲಿತ್ತಾದರೂ ಅವರು ಹೋರಾಟ ಮಾಡಿ ಹಿಂದುಳಿದ ವರ್ಗಕ್ಕೆ ವಿಶೇಷ ಸವಲತ್ತನ್ನು ಪಡೆದುಕೊಂಡಿದ್ದರು. ಆದರೆ ಮುಸಲ್ಮಾನರಲ್ಲಿ ಅಶ್ರಫ್‌ಗಳು ಅಲ್ಪಸಂಖ್ಯಾತ ಎಂಬ ಒಂದೇ ಹಣೆಪಟ್ಟಿಯನ್ನು ಮುಂದಿಟ್ಟುಕೊಂಡು ಹಿಂದುಳಿದವರನ್ನು ತುಳಿದು ತಾವು ಎಲ್ಲ ಸೌಲಭ್ಯವನ್ನು ಪಡೆದುಕೊಂಡರು. 1980ರಲ್ಲಿ ರೂಪುಗೊಂಡ ಮಂಡಲ್ ಕಮಿಷನ್ ಶೇಕಡಾ 90ರಷ್ಟು ಮುಸಲ್ಮಾನರು ಹಿಂದುಳಿದವರಾಗಿದ್ದು ಕನಿಷ್ಠ 82 ಜಾತಿಗಳಿವೆ ಎಂಬುದನ್ನು ಗುರುತಿಸಿತ್ತು. ಇಂದಿರಾಗಾಂಧಿ ಗೋಪಾಲ್ ಸಿಂಗ್ ಕಮಿಷನ್ ರಚನೆ ಮಾಡಿದರು. ಎಲ್ಲ ವರದಿಗಳನ್ನು ಮುಂದಿಟ್ಟುಕೊಂಡರೂ ಯಾವ ಸರ್ಕಾರವೂ ಸ್ಪಷ್ಟ ನಿರ್ಣಯ ಕೊಡಲು ಸೋಲುತ್ತಿತ್ತು ಏಕೆಂದರೆ ಅಧಿಕಾರದ ಮುಖ್ಯಭೂಮಿಕೆಯಲ್ಲಿದ್ದಿದ್ದು ಮೇಲ್ವರ್ಗದ ಮುಸಲ್ಮಾನರೇ! ಈ ಕುದಿ ಕೆಳವರ್ಗದ ಮುಸಲ್ಮಾನರನ್ನು ಆವರಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ ಹಿಂದುಳಿದ ಮುಸಲ್ಮಾನರ ಸಂಘಟನೆ ಆರಂಭಗೊಂಡಿತಲ್ಲದೇ ಅವರು ಧರ್ಮವನ್ನು ಪಕ್ಕಕ್ಕಿಟ್ಟು ಶಿಕ್ಷಣ, ಆರ್ಥಿಕ ಮತ್ತು ರಾಜಕೀಯ ಶಕ್ತಿಯಾಗಿ ಬೆಳೆಯುವತ್ತ ಗಮನ ನೀಡಲಾರಂಭಿಸಿದರು. ಇಸ್ಲಾಮಿನ ಇತಿಹಾಸದಲ್ಲಿ ಧರ್ಮವನ್ನು ಬದಿಗಿಟ್ಟು ವಿಕಾಸದ ಕುರಿತಂತೆ ಆಲೋಚನೆ ಮಾಡಿದ ಬಹುಶಃ ಮೊದಲ ದಾಖಲೆ ಇದು. ಉತ್ತರ ಪ್ರದೇಶ, ಬಂಗಾಳಗಳಲ್ಲೂ ಇದು ವೇಗ ಪಡೆದುಕೊಂಡಿತು. ಆದರೆ ನಿಜವಾದ ಹೋರಾಟದ ಭೂಮಿಕೆ ರೂಪುಗೊಂಡಿದ್ದು ಬಿಹಾರದಲ್ಲಿ. ಇಲ್ಲಿ ಶೇಕಡಾ 16.5ರಷ್ಟು ಮುಸಲ್ಮಾನರೇ ಇದ್ದರು. ಅವರಲ್ಲಿ ಶೇಕಡಾ 90ರಷ್ಟು ಕೆಳವರ್ಗದ ಮುಸಲ್ಮಾನರು. ಆದರೆ ಮುಸ್ಲೀಂ ರಾಜಕೀಯ ನಾಯಕರೆಲ್ಲ ಮೇಲ್ವರ್ಗದ ಅಶ್ರಫ್ಗಳೇ ಆಗಿದ್ದರು. 1998ರಲ್ಲಿ ಅಖಿಲ ಭಾರತ ಪಸ್ಮಂಡಾ ಮುಸ್ಲೀಂ ಸಂಘಟನೆ ಆರಂಭಗೊಂಡಿತು. 2002ರಲ್ಲಿ ಪಸ್ಮಂಡಾ ಜಾಗೃತಗೊಳಿಸಿ-ದೇಶವುಳಿಸಿ ಆಂದೋಲನ ಆರಂಭವಾಯ್ತು. 2004ರಲ್ಲಿ ದೆಹಲಿಯಲ್ಲಿ ದಲಿತ-ಮುಸ್ಲೀಂ ಮಹಾ ಪಂಚಾಯತ್ ನಡೆಯಿತು. ಇಲ್ಲಿ ಚರ್ಚೆಗೆ ಬಂದ ಸಂಗತಿಯ ಕುರಿತಂತೆ ಕೆ. ಎ ಅನ್ಸಾರಿ ತಮ್ಮ ಡಿಬೆಟಿಂಗ್ ಮುಸ್ಲೀಂ ರಿಸರ್ವೇಶನ್ ಪುಸ್ತಕದಲ್ಲಿ ವಿಸ್ತಾರವಾದ ಚರ್ಚೆ ಮಾಡಿದ್ದಾರೆ. ಮೇಲ್ವರ್ಗದ ಮುಸಲ್ಮಾನರು ದಲಿತ ಮುಸ್ಲೀಮರನ್ನು ಧುಲಿಯಾ, ಜುಲಾಹ, ಕಲಾಲ್, ಕಸಾಯಿ ಅಂತೆಲ್ಲ ಅವಹೇಳನಕಾರಿ ಜಾತಿ ಸೂಚಕ ಪದಗಳಿಂದ ನಿಂದಿಸುತ್ತಾರೆ ಮತ್ತು ಪಸ್ಮಂಡಾಗಳನ್ನು ನಮಾಜಿಗೆ ಮುಂದಿನ ಸಾಲಿನಲ್ಲಿ ಕೂರಲು ಬಿಡುವುದಿಲ್ಲ ಎಂದೆಲ್ಲಾ ಹೇಳಲಾಗಿತ್ತು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಚನೆಯಾದ ಸಾಚಾರ್ ಕಮಿಟಿಯೂ ಮುಸಲ್ಮಾನರಲ್ಲಿನ ದಲಿತರ ಸ್ಥಿತಿಗತಿಯ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿತ್ತು. ಗಮನಿಸಬೇಕಾದ ಮಹತ್ವದ ಸಂಗತಿ ಎಂದರೆ ಈ ಎಲ್ಲ ಪಸ್ಮಂಡಾಗಳ ಹೋರಾಟದ ಮೂಲ ನೆಲೆಕಟ್ಟು ಸಾಮಾಜಿಕ ನ್ಯಾಯದ ಪರವಾದ ಮತ್ತು ಅಸಮಾನತೆಯ ವಿರುದ್ಧದ ಚಿಂತನೆಯಾಗಿತ್ತು. ಅವರೆಲ್ಲಿಯೂ ಅಲ್ಪಸಂಖ್ಯಾತ ಎನ್ನುವ ಪಟ್ಟವನ್ನು ಬಯಸಲಿಲ್ಲ. ಅಲಿ ಅನ್ವರ್ ರಂತೂ ತಮ್ಮ ಭಾಷಣವೊಂದರಲ್ಲಿ ‘ಪಸ್ಮಂಡಾಗಳು ತಮ್ಮ ಗುರುತನ್ನು ಮರಳಿ ಪಡೆಯುವ ಕಾಲ ಬಂದಿದೆ. ಇಷ್ಟೂ ದಿನಗಳ ಕಾಲ ಅಲ್ಪಸಂಖ್ಯಾತ ಎನ್ನುವ ಹೆಸರಿನಡಿ ಪಸ್ಮಂಡಾಗಳು ಕಳೆದುಹೋಗಿದ್ದರು. ಇನ್ನು ಈ ಸುಳ್ಳು ಪದದ ಕುರಿತಂತೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅಲ್ಪಸಂಖ್ಯಾತ ಎನ್ನುವ ಹೆಸರಿನಲ್ಲಿ ಕೆಲವರು ನಮ್ಮನ್ನು ಭಯಭೀತಗೊಳಿಸುತ್ತಾರೆ. ಮತ್ತೂ ಕೆಲವರು ನಮ್ಮಿಂದ ನಮ್ಮ ಹಕ್ಕನ್ನು ಕಸಿಯುತ್ತಾರೆ. ನಿಜ ಹೇಳಬೇಕೆಂದರೆ ಇವರ ಸಮಾಜದಲ್ಲಿ ನಾವು ಅಲ್ಪಸಂಖ್ಯಾತರಲ್ಲ, ನಾವೇ ಬಹುಸಂಖ್ಯಾತರು’ ಎಂದಿದ್ದರು. 2005ರಲ್ಲಿ ಈ ಪಸ್ಮಂಡಾ ಹೋರಾಟ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತು. ನಮ್ಮ ವೋಟು ನಿಮ್ಮ ಫತ್ವಾ ಇನ್ನು ನಡೆಯುವುದಿಲ್ಲ ಎಂಬ ಘೋಷಣೆ ಬಿಹಾರದುದ್ದಕ್ಕೂ ಮೊಳಗಿತ್ತು. ಆದರೇನು? ಅಶ್ರಫ್‌ಗಳಿಗೆ ತಮ್ಮ ತಾಳಕ್ಕೆ ತಕ್ಕಂತೆ ಎಲ್ಲರನ್ನೂ ಕುಣಿಸುವ ಕಲೆ ಗೊತ್ತಿದೆ. ಹೀಗಾಗಿಯೇ ಇಷ್ಟೂ ಹೋರಾಟಗಳ ನಂತರವೂ ದಲಿತ ಮುಸಲ್ಮಾನರ ಬದುಕಿನಲ್ಲಿ ಬದಲಾವಣೆ ಕಾಣಲಿಲ್ಲ. ಖಾಲಿದ್ ಅನೀಜ್ ಅನ್ಸಾರಿ ಪ್ರಿಂಟ್ ಗೆ ಬರೆದ ಲೇಖನದಲ್ಲಿ 2019ರ ಲೋಕಸಭಾ ಚುನಾವಣೆಗೆ 7500 ಜನ ಸ್ಪರ್ಧಿಗಳಾಗಿದ್ದರೆ, ಅದರಲ್ಲಿ 400 ಜನ ಮುಸ್ಲೀಮರು, 340 ಜನ ಅಶ್ರಫ್‌ಗಳೇ ಆಗಿದ್ದರು. 60 ಜನ ಮಾತ್ರ ಪಸ್ಮಂಡಾ. ಭಾರತದ ಜನಸಂಖ್ಯೆಯಲ್ಲಿ 14 ಪ್ರತಿಶತದಷ್ಟು ಮುಸಲ್ಮಾನರಿದ್ದಾರಲ್ಲ, ಅದರಲ್ಲಿ ಶೇಕಡಾ 2ರಷ್ಟು ಮಾತ್ರ ಪಸ್ಮಂಡಾಗಳು. ಅವರಿಗೆ ಸುಮಾರು 5 ಪ್ರತಿಶತದಷ್ಟು ಚುನಾವಣೆಯಲ್ಲಿ ಸೀಟುಗಳು ದಕ್ಕಿದ್ದವು. ಪಸ್ಮಂಡಾಗಳು ಶೇಕಡಾ 12ರಷ್ಟು ಜನಸಂಖ್ಯೆ ಹೊಂದಿದ್ದರೂ ಅವರಿಗೆ ಒಂದು ಪ್ರತಿಶತದಷ್ಟೂ ಸೀಟು ದಕ್ಕಿರಲಿಲ್ಲ! ಉತ್ತರ ಪ್ರದೇಶಲ್ಲಂತೂ ಕಥೆ ಭಿನ್ನ. ಯೋಗಿ ಆದಿತ್ಯನಾಥರು ಚುನಾವಣೆ ಗೆದ್ದನಂತರ ಮೊಹಮ್ಮದ್ ಬಾಬರ್ ಅಲಿ ಸಂಭ್ರಮಿಸಿದ್ದ ಎನ್ನುವ ಕಾರಣಕ್ಕೆ ಅವನ ಹತ್ಯೆಯನ್ನೇ ಮಾಡಿಬಿಟ್ಟಿದ್ದರು. ಅವನು ಮಾಡಿದ ತಪ್ಪೇನು ಗೊತ್ತೇ? ಮೇಲ್ವರ್ಗದ ಅಶ್ರಫ್‌ಗಳು ಅಖಿಲೇಶ್‌ಗೆ ಮತ ಚಲಾಯಿಸಿರೆಂದು ಹೊರಡಿಸಿದ್ದ ಫತ್ವಾವನ್ನು ಆತ ಧಿಕ್ಕರಿಸಿದ್ದ ಅಷ್ಟೇ. ನೂಪುರ್ ಶರ್ಮಾಳನ್ನು ಬೆಂಬಲಿಸಿದ ಮುಸಲ್ಮಾನ ಹುಡುಗನೊಬ್ಬ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಏಕೆ ಗೊತ್ತೇ? ಅವನ ಹೆಸರು ಸಾದ್ ಅನ್ಸಾರಿ. ಅಲಿಘಡ ಮುಸ್ಲೀಂ ಯುನಿವರ್ಸಿಟಿ ಇರಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾವೇ ಇರಲಿ, ಹಮ್‌ದರ್ದ್ ವಿಶ್ವವಿದ್ಯಾಲಯ, ಅಂಜುಮನ್-ಎ-ಇಸ್ಲಾಂ, ಮುಸ್ಲೀಂ ಎಜುಕೇಷನ್ ಸೊಸೈಟಿ ಇವೆಲ್ಲವೂ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯ ಸವಲತ್ತುಗಳನ್ನು ಪಡೆದುಕೊಂಡೇ ಬೆಳೆದು ನಿಂತಂತವು. ಹಿಡಿತವೆಲ್ಲ ಮೇಲ್ವರ್ಗದವರದ್ದೇ, ಇಲ್ಲೆಲ್ಲೂ ಪಸ್ಮಂಡಾಗಳಿಗೆ ಮಿಸಲಾತಿಯೂ ಇಲ್ಲ. ಪರಿಣಾಮ ಈ ಪಸ್ಮಂಡಾಗಳು ಉಚಿತ ಶಿಕ್ಷಣ ನೀಡುವ ಮದರಸಾಗಳಿಗೇ ತಮ್ಮ ಮಕ್ಕಳನ್ನು ಕಳಿಸಬೇಕು. ಅದರರ್ಥ ಮೇಲ್ವರ್ಗದವರು ಚೆನ್ನಾಗಿ ಕಲಿತು ವಿದೇಶಕ್ಕೆ ಹೋಗಲಿ, ಪಸ್ಮಂಡಾಗಳು ಆಧುನಿಕ ಶಿಕ್ಷಣವನ್ನು ಬಿಟ್ಟು ಮದರಸಾ ಶಿಕ್ಷಣ ಪಡೆದು ಕಟ್ಟರ್‌ಗಳಾಗಿ ಭಾರತ ವಿರೋಧಿಯಾಗಲಿ ಅಂತ. ಆಲಂ ಮತ್ತು ಕುಮಾರ್ 2019ರಲ್ಲಿ ಅಲಿಘಡ್ ಮುಸ್ಲೀಂ ಯುನಿವರ್ಸಿಟಿಯಲ್ಲಿ ಒಂದು ಅಧ್ಯಯನ ನಡೆಸಿ ಪಾಠ ಮಾಡುವ ಸುಮಾರು 90ರಷ್ಟು ಶಿಕ್ಷಕರು ಮೇಲ್ವರ್ಗದವರು ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದರು. ಆದರೇನು? ಪಸ್ಮಂಡಾಗಳ ಪರವಾಗಿ ಮಾತನಾಡಲು ಯಾರೂ ಮುಂದೆ ಬರಲಿಲ್ಲ. ಹಿಂದೂ-ಮುಸ್ಲೀಂ ಗಲಾಟೆಗಳು ನಡೆದಾಗ ಸಾಯುವುದು ಅದೇ ದಾದ್ರಿಯ ಅಖಲಾಖ್, ಹಾಪುರ್ನ ಕಾಸಿಂ ಖುರೇಷಿ, ರಾಜಸ್ಥಾನದ ರಾಖಸ್ ಖಾನ್. ಇವರ ಶವಯಾತ್ರೆ ಮಾಡಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವುದು ಮಾತ್ರ ಮೇಲ್ವರ್ಗದವರು. ಹಿಂದೂಗಳಲ್ಲಿ ಶೋಷಣೆಗೊಳಗಾದವರಿಗೆ ಮೀಸಲಾತಿಯಾದರೂ ಸಿಕ್ಕಿದೆ. ಆದರೆ ಮುಸಲ್ಮಾನರಲ್ಲಿ ಇಂದಿಗೂ ಶೋಷಣೆಗೊಳಗಾಗುತ್ತಿದ್ದರೂ ಮೀಸಲಾತಿ ಇರಲಿ, ಕಡೆಪಕ್ಷ ಆತ್ಮಗೌರವವೂ ಇಲ್ಲ!