ಜಾಗತಿಕ ಮಾಧ್ಯಮಗಳು ಬಲು ವಿಚಿತ್ರವಾಗಿ ವರ್ತಿಸುತ್ತವೆ. ನ್ಯೂಸ್ ನೋಡಿದರೆ ಉಕ್ರೇನಿನಲ್ಲಿ ರಷ್ಯಾದ ಭೀಕರ ಬಾಂಬ್ ದಾಳಿಗೆ ನಲುಗಿರುವ ನಗರಗಳು ಕಂಡು ಬರುತ್ತವೆ. ಇಡಿಯ ದೇಶವೇ ಸ್ಮಶಾನವಾಗಿರುವಂತೆ ಭಾಸವಾಗುತ್ತದೆ. ಸಾವು-ನೋವುಗಳ ಭೀಭತ್ಸ ವರದಿಯನ್ನು ಪದೇ-ಪದೇ ಮುಂದಿಡುತ್ತಾರೆ. ಆದರೆ ಆನಂತರ ನಡೆಯುವ ವಿಶ್ಲೇಷಣೆಗಳಲ್ಲಿ ಮಾತ್ರ ರಷ್ಯಾ ಸೋಲುತ್ತಿದೆ ಮತ್ತು ಉಕ್ರೇನ್ ಒಂದಿಂಚೂ ಬಾಗುತ್ತಿಲ್ಲ ಎಂದು ತೋರಿಸಲಾಗುತ್ತದೆ. ಇದೇ ಸಂದರ್ಭಕ್ಕೆ ರಷ್ಯಾದ ಸುದ್ದಿ ಎಲ್ಲೂ ಪ್ರಕಟವಾಗದಂತೆ ಅದನ್ನು ತಡೆಹಿಡಿಯುವ ವ್ಯವಸ್ಥಿತ ಪ್ರಯತ್ನವನ್ನು ಮಾಡುತ್ತಾರೆ. ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎನ್ನುವುದು ಎಂಥವನಿಗೂ ಅರ್ಥವಾಗುವಂಥದ್ದು. ಸಾಮಾಜಿಕ ಮಾಧ್ಯಮಗಳು ಇಷ್ಟು ವ್ಯಾಪಕವಾಗಿ ಕೆಲಸ ಮಾಡುತ್ತಿವೆ ಎಂಬ ಧಿಮಾಕಿನ ನಡುವೆಯೂ ರಷ್ಯಾದ ಪರವಾದ ಸುದ್ದಿಗಳು ಒಂದೂ ಇಲ್ಲದಂತೆ ಮಾಧ್ಯಮಗಳನ್ನು ಕಾಪಾಡಿಕೊಂಡಿರುವುದು ಅಚ್ಚರಿಯ ಸಂಗತಿ ಅಷ್ಟೇ ಅಲ್ಲ; ಈ ಮಾಧ್ಯಮಗಳು ಜಾಗತಿಕ ಅಭಿಪ್ರಾಯವನ್ನು ತಮಗೆ ಬೇಕಾದಂತೆ ಹೇಗೆ ರೂಪಿಸಬಲ್ಲವು ಎಂಬುದಕ್ಕೆ ಉದಾಹರಣೆಯೂ ಆಗಿದೆ! ವಾಲ್ ಸ್ಟ್ರೀಟ್ ಜರ್ನಲ್ ಕಳೆದ ವಾರ ಒಂದು ಲೇಖನವನ್ನು ಪ್ರಕಟಿಸಿದೆ. ಅದು ಐದು ಸಾಧ್ಯತೆಗಳ ಕುರಿತಂತೆ ಗಮನ ಸೆಳೆದಿದೆ. ಅದರಲ್ಲಿ ಮೊದಲನೆಯದ್ದೇ ರಷ್ಯಾ ಸೋಲಬಹುದು ಎನ್ನುವ ಸಾಧ್ಯತೆ. ರಷ್ಯಾದ ಸೈನ್ಯದ ದೌರ್ಬಲ್ಯಗಳು ಈ ಯುದ್ಧದ ಮೂಲಕ ಹೊರಬಂದಿರುವುದಲ್ಲದೇ ಅದರ ಶಸ್ತ್ರಾಸ್ತ್ರಗಳು ಅಂದುಕೊಂಡಷ್ಟು ಸಾಮರ್ಥ್ಯವನ್ನು ಹೊಂದಿಲ್ಲವೆಂದು ಸಾಬೀತಾಗಿದೆ. ಆದ್ದರಿಂದಲೇ ಅದು ಸೋಲಬಹುದು. ಇನ್ನು ಎರಡನೆಯದು ಉಕ್ರೇನಿನ ಸೋಲಿನ ಸಾಧ್ಯತೆ. ಅದಾಗಲೇ ನಲವತ್ತು ಸಾವಿರ ಸೈನಿಕರು ತೀರಿಕೊಂಡಿದ್ದಾರೆ. ಮಾರಿಪೋಲ್ ಶರಣಾಗತವಾಗಿದೆ. ತಾನು ಸಾಕಷ್ಟು ಹೊಡೆತ ತಿಂದಿರುವುದರಿಂದ ಅದು ಸೋಲಬಹುದು. ಮೂರನೆಯದ್ದು ಎರಡೂ ಪಡೆಗಳು ಇದ್ದ ಸ್ಥಿತಿಯಲ್ಲೇ ಇದ್ದುಬಿಡುತ್ತದೆ. ಯಾವೊಂದು ಪಡೆಯೂ ಸೋಲನ್ನು ಒಪ್ಪಿಕೊಳ್ಳದೇ ಸುದೀರ್ಘಕಾಲ ಈ ಹೋರಾಟದಲ್ಲಿ ನಿರತವಾಗುತ್ತದೆ ಎನ್ನುವ ಪತ್ರಿಕೆ ಹೀಗಾಗಲು ರಷ್ಯಾಕ್ಕೆ ಕನಿಷ್ಠ ಪಕ್ಷ ಒಂದೂವರೆಯಿಂದ ಎರಡು ಲಕ್ಷದಷ್ಟು ಸೈನಿಕರು ಬೇಕಾಗಿದ್ದು ಅಷ್ಟು ಜನರನ್ನು ಸಮರ್ಥರಾಗಿ ನಿರ್ಮಿಸಲು ಕನಿಷ್ಠಪಕ್ಷ ಒಂದು ವರ್ಷವಾದರೂ ಬೇಕಾಗುವುದರಿಂದ ರಷ್ಯಾ ಸೋಲೊಪ್ಪಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದಿದೆ. ನಾಲ್ಕನೆಯದ್ದು ಉಕ್ರೇನ್ ತಾನೇ ರಷ್ಯಾಕ್ಕೆ ಚಳ್ಳೆಹಣ್ಣು ತಿನ್ನಿಸಿ ಮುನ್ನುಗ್ಗುವ ಸಾಧ್ಯತೆಗಳಿವೆಯಂತೆ. ಅದಕ್ಕೆ ಅಮೇರಿಕಾ ಕೊಟ್ಟ 90 ಟ್ಯಾಂಕುಗಳಲ್ಲಿ 74 ಟ್ಯಾಂಕುಗಳು ಆಕ್ರಮಣದ ಸ್ಥಿತಿಯಲ್ಲಿ ಮುನ್ನುಗ್ಗುತ್ತಿರುವುದನ್ನೇ ಲೇಖಕ ಕಾರಣ ನೀಡುತ್ತಾನೆ. ಇನ್ನು ಕೊನೆಯ ಸಾಧ್ಯತೆ ಯುದ್ಧ ವಿಭಿನ್ನ ಸ್ವರೂಪವನ್ನು ಪಡೆದುಕೊಂಡು ರಷ್ಯಾ ತನ್ನ ಬಳಿಯಿರುವ ಅಣುಶಕ್ತಿಯನ್ನು ಬಳಸಿ ಯುದ್ಧ ಮುಗಿಸುವ ಧಾವಂತಕ್ಕೆ ಬೀಳುತ್ತದೆ. ಈ ಎಲ್ಲ ಸಾಧ್ಯತೆಗಳನ್ನು ನೀವು ತಕ್ಕಡಿಯಲ್ಲಿಟ್ಟು ತೂಗಿದರೆ ಜಾಗತಿಕ ಮಾಧ್ಯಮಗಳಿಗೆ ರಷ್ಯಾ ಹಿನ್ನಡೆಯಲ್ಲಿದೆ ಎಂದು ತೋರಿಸುವ ತವಕ ಹೆಚ್ಚಾಗಿರುವಂತೆ ಕಾಣುತ್ತದೆ. ನಲವತ್ತು ಸಾವಿರ ಸೈನಿಕರನ್ನು ಕಳೆದುಕೊಂಡ ಉಕ್ರೇನ್ 74 ಟ್ಯಾಂಕುಗಳೊಂದಿಗೆ ರಷ್ಯಾದ ಮೇಲೆ ಆಕ್ರಮಣ ಮಾಡುವ ಸಾಮಥ್ರ್ಯವನ್ನು ತೋರಿಸುವುದು ಒಂದಕ್ಕೊಂದು ಹೊಂದಾಣಿಕೆಯಾಗದ ಸಂಗತಿ.

ಬಿಡಿ, ವಾಸ್ತವದ ಚರ್ಚೆ ರಷ್ಯಾದ ಆರ್ಥಿಕ ದೌರ್ಬಲ್ಯದ್ದು. ರಷ್ಯಾ ಈ ದಾಳಿಗೂ ಮುನ್ನ ಏನಂದುಕೊಂಡಿತ್ತೋ ಅದರಂತೆ ಏನೂ ನಡೆದಿಲ್ಲ. ಜಾಗತಿಕವಾಗಿ ನಿರಂತರ ಆರ್ಥಿಕ ದಿಗ್ಬಂಧನಗಳು ಹೇರಲ್ಪಡುತ್ತಿದ್ದಂತೆ ರಷ್ಯಾ ಆಂತರಿಕವಾಗಿ ಕುಸಿದುಹೋಗಿದೆ. ಅದೀಗ ತನ್ನ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಅನಿವಾರ್ಯವಾಗಿ ಚೀನಾದ ಮೊರೆ ಹೋಗಿದೆ. ಬರೀ ಆರ್ಥಿಕ ಸ್ಥಿತಿಯಷ್ಟೇ ಅಲ್ಲ, ತನ್ನ ಶಸ್ತ್ರಾಸ್ತ್ರಗಳ ಕೊರತೆಯನ್ನು ತುಂಬಿಕೊಳ್ಳಲೂ ಕೂಡ ಅದು ಚೀನಾವನ್ನೇ ಅವಲಂಬಿಸಿದೆ! ಈ ಯುದ್ಧ ಆರಂಭವಾಗುವ ಮುನ್ನ ‘ರಷ್ಯಾ ಕ್ಷಣಾರ್ಧದಲ್ಲಿ ಉಕ್ರೇನನ್ನು ಧ್ವಂಸ ಮಾಡಿಬಿಡಬಲ್ಲದು’ ಎಂದೆಲ್ಲ ಮಾತನಾಡುತ್ತಿದ್ದವರು ಗಾಬರಿಗೊಳಗಾಗಿಬಿಟ್ಟಿದ್ದಾರೆ. ಆದರೆ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಬಂದಿರುವುದು ಭಾರತಕ್ಕೆ ಎಂಬುದರಲ್ಲಿ ಅನುಮಾನವಿಲ್ಲ. ಈ ಯುದ್ಧಕ್ಕೂ ಮುನ್ನ ವಿದೇಶಾಂಗ ಮತ್ತು ರಕ್ಷಣಾ ಖಾತೆಯ 2+2 ಸಂಬಂಧವನ್ನು ಬಲಗೊಳಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದ ಭಾರತ ಅದನ್ನು ವೆಂಟಿಲೇಟರ್ನಲ್ಲಿರಿಸಿದೆ. ಮೇಲ್ನೋಟಕ್ಕೆ ಈ ಯುದ್ಧದ ವಿಚಾರದಲ್ಲಿ ತಟಸ್ಥವಾಗಿ ಭಾರತ ಕಂಡರೂ ಆಂತರಿಕವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿರುವುದನ್ನು ಇಡಿಯ ಜಗತ್ತು ಗಮನಿಸುತ್ತಿದೆ. ಭಾರತದ ವಿದೇಶಾಂಗ ನೀತಿ ಈ ಮೊದಲಿನಂತಿಲ್ಲ. ಸೋವಿಯತ್ ರಷ್ಯಾ ಅಫ್ಘಾನಿಸ್ತಾನದ ಮೇಲೆ ಏರಿಹೋದಾಗ ಇಂದಿರಾ ಮುಕ್ತವಾಗಿಯೇ ಅದರ ಬೆಂಬಲಕ್ಕೆ ನಿಂತಿದ್ದರು. ಆದರೆ ಆನಂತರ ಭಾರತದ ಆಂತರಿಕ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸುವಾಗ ರಷ್ಯಾ ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಅಮೇರಿಕಾದೆದುರು ಪಾಕಿಸ್ತಾನವನ್ನು ತನ್ನತ್ತ ಸೆಳೆಯುವ ಧಾವಂತದಲ್ಲಿ ಭಾರತವನ್ನು ಅಸಡ್ಡೆಯಿಂದ ಕಂಡಿತು. ಮೋದಿ ಇದನ್ನು ಅರಿತಿಲ್ಲದೇನಿಲ್ಲ. ನಮ್ಮ ಇಂದಿನ ವಿದೇಶಾಂಗ ನೀತಿ ‘ರಾಷ್ಟ್ರ ಮೊದಲು’ ಸೈದ್ಧಾಂತಿಕ ಅಡಿಪಾಯದ ಮೇಲೆ ನಿಂತಿದೆ. ಕಳೆದ ಎಂಟು ವರ್ಷಗಳಲ್ಲಿ ತಮ್ಮ ಅವಿರತ ಪ್ರಯತ್ನದಿಂದಾಗಿ ಮೋದಿ ಭಯೋತ್ಪಾದನೆಯನ್ನು ಜಗತ್ತಿನ ಚರ್ಚೆಯ ಕೇಂದ್ರಬಿಂದುವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರೆ ರಾಷ್ಟ್ರಗಳಿಗೆ ಹೋದಾಗ ಅಲ್ಲಿನ ಶ್ರೇಷ್ಠ ಆಚರಣೆಗಳನ್ನು, ತಂತ್ರಜ್ಞಾನವನ್ನು ಭಾರತಕ್ಕೆ ತರುವಲ್ಲಿ ಮುಲಾಜಿಲ್ಲದೇ ಮುಂದಡಿಯಿಡುತ್ತಿದಾರೆ. ಅಷ್ಟೇ ಅಲ್ಲ, ತಮ್ಮೆಲ್ಲ ಪ್ರಭಾವವನ್ನು ಬಳಸಿ ಜಗತ್ತಿನ ಯಾವ ಮೂಲೆಯಲ್ಲಿ ಭಾರತೀಯ ತೊಂದರೆಗೊಳಗಾದರೂ ಅವನನ್ನು ಮರಳಿ ತರುವ ಸಾಮರ್ಥ್ಯ ಇಂದು ಭಾರತ ಬೆಳೆಸಿಕೊಂಡಿದೆ. ಹೀಗಾಗಿಯೇ ಉಕ್ರೇನ್ ಮತ್ತು ರಷ್ಯಾ ಯುದ್ಧ ಆರಂಭವಾದಾಗ ಅಲ್ಲಿ ಸಿಲುಕಿದ್ದ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತ ಮರಳಿ ತರಲು ಸಾಧ್ಯವಾಗಿತ್ತು. ನೆನಪಿರಲಿ, ಉಕ್ರೇನಿನ ವಿದೇಶಿ ವಿದ್ಯಾರ್ಥಿಗಳಲ್ಲಿ ಕಾಲುಭಾಗ ಭಾರತೀಯರೇ. ಮಾರ್ಚ್ ಏಳರಂದು ಮೋದಿ ಪುತಿನ್ ರೊಂದಿಗೆ ಮಾತನಾಡಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರತರಲು ಮಾನವೀಯ ಮಾರ್ಗ ರೂಪಿಸಿಕೊಡಬೇಕೆಂದು ಕೇಳಿಕೊಂಡಾಗ ಇಂದಿರಾಳನ್ನು ಅಸಡ್ಡೆ ಮಾಡಿದಂತೆ ಮೋದಿಯನ್ನು ಕಡೆಗಣಿಸುವುದು ಪುತಿನ್‌ಗೆ ಸಾಧ್ಯವಾಗಲೇ ಇಲ್ಲ. ಭಾರತ ಮೊದಲಿನಂತೆ ಗೋಣು ಬಗ್ಗಿಸಿ ರಷ್ಯಾ ಹೇಳಿದ್ದಕ್ಕೆಲ್ಲ ತಲೆಯಾಡಿಸುವ ಕುರಿಮರಿಯಲ್ಲವೆಂಬುದು ಆತನಿಗೆ ಚೆನ್ನಾಗಿ ಗೊತ್ತಿತ್ತು. ಅದಾದ ಕೆಲವು ದಿನಗಳಲ್ಲೇ ಆ ರೀತಿಯ ಮುಕ್ತ ಮಾರ್ಗ ರೂಪುಗೊಂಡು ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲಾಯ್ತಲ್ಲ, ಅದಾದ ಮೇಲೆ ಮೋದಿ ಉಕ್ರೇನಿನ ಪ್ರಧಾನಿಗೆ ಮಾತನಾಡಿ ಧನ್ಯವಾದಗಳನ್ನರ್ಪಿಸಿದರು. ಪುತಿನ್‌ನೊಂದಿಗೆ ಮಾತನಾಡುವಾಗ ಗಡಿ ಬದಲಾಯಿಸುವ ಕುರಿತಂತೆ ಎಚ್ಚರಿಕೆಯ ಮಾತುಗಳನ್ನಾಡಿದ ಮೋದಿ ಜೆಲ್ಸೆಂಕಿಯೊಂದಿಗೆ ಮಾತನಾಡುವಾಗ ಪ್ರೀತಿಯಿಂದ ನುಡಿದಿದ್ದನ್ನು ಜಗತ್ತು ಗಮನಿಸದೇ ಇರಲಿಲ್ಲ. ಹೀಗಾಗಿಯೇ ಭಾರತ ಅಂತರ್ರಾಷ್ಟ್ರೀಯ ವೇದಿಕೆಯಲ್ಲಿ ತಟಸ್ಥ ನೀತಿಯನ್ನು ತನ್ನದಾಗಿಸಿಕೊಂಡರೂ ಜಗತ್ತಿನ ಯಾವ ರಾಷ್ಟ್ರಗಳೂ ಭಾರತವನ್ನು ವಿರೋಧಿಸಲಿಲ್ಲ. ರಷ್ಯಾ ಈ ಹೊತ್ತಿನಲ್ಲಿಯೇ ನಮಗೆ ಅತಿ ಕಡಿಮೆ ಬೆಲೆಗೆ ಇಂಧನ ಕೊಡುವ ಮಾತುಗಳನ್ನಾಡಿತು. ಭಾರತ ಅದನ್ನು ಸ್ವೀಕರಿಸಿ ಯುರೋಪಿನ ಪತ್ರಕರ್ತರು ಹಂಗಿಸುವಾಗ, ‘ಯುರೋಪು ಒಂದೊಪ್ಪತ್ತಿಗೆ ರಷ್ಯಾದಿಂದ ಆಮದು ಮಾಡಿಕೊಳ್ಳುವಷ್ಟು ಇಂಧನವನ್ನು ನಾವು ಇಡಿಯ ತಿಂಗಳಿಗೆ ಆಮದು ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿ ಕ್ಯಾಕರಿಸಿ ಉಗಿದಿತ್ತು.
ಇಷ್ಟಕ್ಕೂ ರಷ್ಯಾದೊಂದಿಗಿನ ನಮ್ಮ ಸಂಬಂಧ ಬಲು ಹಳೆಯದ್ದು ಮತ್ತು ಕೆಲವೊಮ್ಮೆ ಮೂರ್ಖತನದಿಂದ ಕೂಡಿದ್ದೂ ಕೂಡ. ಅಲಿಪ್ತ ನೀತಿ ಎನ್ನುವ ಮೂರ್ಖ ಕಲ್ಪನೆಯ ಅಡಿಯಲ್ಲಿ ಬೆಳೆದುಬಂದ ನಾವು ಪಾಕಿಸ್ತಾನ ಮತ್ತು ಚೀನಾದ ಆಕ್ರಮಣಗಳನ್ನೆದುರಿಸಲು ರಷ್ಯಾದ ಮಡಿಲು ಸೇರಿಕೊಂಡೆವು. ಅದು ಕಮ್ಯುನಿಸ್ಟ್ ವಿಚಾರಧಾರೆಯ ಪ್ರಭಾವವೂ ಕೂಡ. ಅಮೇರಿಕಾದ ಬಂಡವಾಳಶಾಹಿಗಳನ್ನು ಧಿಕ್ಕರಿಸಲೆಂದು ರಷ್ಯಾದ ಸರ್ವಋತು ಮಿತ್ರನಾಗಿ ನಾವು ಗುರುತಿಸಿಕೊಂಡಿದ್ದರ ಪರಿಣಾಮವಾಗಿ ಅತ್ತ ಅಮೇರಿಕಾ ನಮ್ಮ ಕೈಬಿಟ್ಟಿತು, ಇತ್ತ ರಷ್ಯಾ ಕೂಡ ನಮ್ಮನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಕಡಿಮೆ ಬೆಲೆಯ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಧಾವಂತದಲ್ಲಿ ನಮ್ಮ ಬಹುಪಾಲು ಶಸ್ತ್ರಾಸ್ತ್ರಗಳನ್ನು ಅಲ್ಲಿಂದಲೇ ತರಿಸಿಕೊಂಡೆವು. ಹೀಗೆ ಯುದ್ಧದ ಹೊತ್ತಲ್ಲಿ ಒಂದು ರಾಷ್ಟ್ರದ ಅಧೀನರಾಗುವುದು ಬಲು ಭಯಾನಕ. 2017ರಿಂದ 21ರ ನಡುವೆ ಭಾರತದ ಒಟ್ಟಾರೆ ಇಂಧನ ಆಮದು ರಷ್ಯಾದಿಂದಲೇ ಶೇಕಡಾ 46ರಷ್ಟಿತ್ತು. ರಷ್ಯಾದ ಒಟ್ಟಾರೆ ರಕ್ಷಣಾ ವಸ್ತುಗಳ ರಫ್ತು ಭಾರತಕ್ಕೆ ಶೇಕಡಾ 28ರಷ್ಟು. ಇದು ನರೇಂದ್ರಮೋದಿ ತಮ್ಮೆಲ್ಲ ಸಾಮಥ್ರ್ಯವನ್ನು ಬಳಸಿ, ಭಿನ್ನ ಭಿನ್ನ ಕಡೆಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡ ನಂತರ. ನಮಗೆ ವಿಮಾನಗಳನ್ನು ಮಾರಾಟ ಮಾಡುವಾಗಲೇ ರಷ್ಯಾ ನಮ್ಮ ಶತ್ರು ರಾಷ್ಟ್ರ ಚೀನಾಕ್ಕೂ ವಿಮಾನಗಳನ್ನು ಕೊಟ್ಟು ಅಚ್ಚರಿಗೆ ದೂಡಿತು. ಆಗಲೇ ಮೋದಿ ಅಮೇರಿಕಾದತ್ತ ವಾಲಿ ರಷ್ಯಾಕ್ಕೆ ದಂಗು ಬಡಿಸಿದ್ದರು. ಹಾಗಂತ ನಾವು ಪೂರ್ಣ ರಷ್ಯಾವನ್ನು ಬಿಟ್ಟುಬಿಡುವಂತಿಲ್ಲ. ಏಕೆಂದರೆ ನಮ್ಮ ಬಳಿಯಿರುವ ಬಹುತೇಕ ರಕ್ಷಣಾ ವಸ್ತುಗಳಲ್ಲಿ ರಷ್ಯಾದಿಂದ ತಂದವೇ ತುಂಬಿಕೊಂಡಿವೆ. ಅವುಗಳಿಗೆ ಬಿಡಿ ಭಾಗಗಳು ಬೇಕಾದಾಗ, ರಿಪೇರಿ ಮಾಡಬೇಕಾದಾಗ ರಷ್ಯಾದ ಸಹಕಾರ ನಮಗೆ ಬೇಕೇ ಬೇಕು. ಹೀಗಾಗಿಯೇ ಚೀನಾದ ಆಕ್ರಮಣಕಾರಿ ನಿಲುವಿನ ಹೊತ್ತಿನಲ್ಲಿ ಭಾರತ ರಷ್ಯಾವನ್ನು ವಿರೋಧ ಮಾಡಿಕೊಳ್ಳುವಂತಿಲ್ಲವೆಂಬುದು ಯುರೋಪಿಗೂ ಗೊತ್ತಿದೆ, ಅಮೇರಿಕಾಕ್ಕೂ ಗೊತ್ತಿದೆ.
ರಷ್ಯಾದ ಕುರಿತಂತೆ ನಮಗೊಂದು ಎಚ್ಚರಿಕೆ ಬೇಕೇ ಬೇಕು. 1962ರಲ್ಲಿ ಚೀನಾ ನಮ್ಮ ಮೇಲೆ ಏರಿ ಬಂದಾಗ ರಷ್ಯಾ ನಮ್ಮ ಸಹಕಾರಕ್ಕೇನೂ ಬಂದಿಲ್ಲ. ಆಗ ಚೀನಾವನ್ನು ಮೆಟ್ಟಿಹಾಕಲು ಅಮೇರಿಕಾವೇ ಗುಟುರು ಹಾಕಿದ್ದು ಎಂಬುದನ್ನು ಮರೆಯುವಂತಿಲ್ಲ. 1965ರಲ್ಲಿ ಪಾಕಿಸ್ತಾನ ಅಪ್ರಚೋದಿತವಾಗಿ ಯುದ್ಧ ಆರಂಭಿಸಿದಾಗ ರಷ್ಯಾ ನಮ್ಮ ಪರವಾಗಿ ಮಾತನಾಡುವುದಿರಲಿ, ತಟಸ್ಥ ನಿಲುವನ್ನು ತಾಳಿ ಸಂಧಾನ ಮಾಡುವುದಾಗಿ ತಾಷ್ಕೆಂಟಿಗೆ ಪ್ರಧಾನಿಯನ್ನು ಕರೆದೊಯ್ದಿತ್ತು. ಅಲ್ಲಿಂದ ಮರಳಿ ಬಂದಿದ್ದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಪಾರ್ಥಿವ ಶರೀರ ಎಂಬುದನ್ನು ನೆನಪಿಟ್ಟುಕೊಂಡಿದ್ದೇವೆ! 1971ರಲ್ಲಿ ಪಾಕಿಸ್ತಾನದೊಂದಿಗೆ ನಾವು ಯುದ್ಧ ಮಾಡದಿರುವಂತೆ ನಮ್ಮನ್ನು ಪುಸಲಾಯಿಸುವ ಯತ್ನ ಮಾಡಿದ್ದು ರಷ್ಯಾವೇ. ಈಗಲೂ ಚೀನಾ ಆಕ್ರಮಣಕಾರಿ ನೀತಿಯನ್ನು ತೋರಿಸಿ ಡೋಕ್ಲಾಂನಲ್ಲಿ ಮುನ್ನುಗ್ಗಿದಾಗ, ಲಡಾಕ್ನಲ್ಲಿ ಭಾರತೀಯ ಸೇನೆಯೆದುರು ನಿಂತಾಗ ರಷ್ಯಾ ನಮ್ಮ ಪರವಾಗಿ ಒಂದು ಮಾತನ್ನಾಡಿಲ್ಲ. ಹಾಗಂತ ನಾವು ಯಾರ ಪರವಾಗಿಯೂ ವಾಲಬೇಕಿಲ್ಲ. ನಾವು ವಾಲಬೇಕಾದ್ದು ಭಾರತದ ಪರವಾಗಿ ಮಾತ್ರ. ಇದನ್ನು ಮೋದಿ ಚೆನ್ನಾಗಿ ಅರಿತಿದ್ದಾರೆ. ಅದಕ್ಕೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿರುದ್ಧ ಗುಟುರು ಹಾಕಲು ಅಮೇರಿಕಾ, ಜಪಾನ್, ಆಸ್ಟ್ರೇಲಿಯಾಗಳೊಂದಿಗೆ ಸೇರಿ ಕ್ವಾಡ್ ನಿರ್ಮಿಸಿಕೊಂಡಿದ್ದಾರೆ. ಜಪಾನ್, ಆಸ್ಟ್ರೇಲಿಯಾಗಳೊಂದಿಗೆ ಮತ್ತು ಫ್ರಾನ್ಸ್, ಆಸ್ಟ್ರೇಲಿಯಾಗಳೊಂದಿಗೆ ಪ್ರತ್ಯೇಕವಾದ ತ್ರಿರಾಷ್ಟ್ರಗಳ ಜಾಲ ಹೆಣೆದುಕೊಂಡಿದ್ದಾರೆ. ಜಗತ್ತಿಗೂ ಮೋದಿ ರಾಷ್ಟ್ರದ ಹಿತವನ್ನು ಬಿಟ್ಟು ಬೇರೆ ಚಿಂತೆ ಮಾಡಲಾರರು ಎಂದು ಗೊತ್ತಿರುವುದರಿಂದಲೇ ಅದು ತಣ್ಣಗಾಗಿದೆ. ದುರಂತವೆಂದರೆ ಆಸ್ಟ್ರೇಲಿಯಾದಲ್ಲಿ ಬದಲಾವಣೆ ಕಂಡುಬಂದಿದೆ. ಅಲ್ಲೀಗ ಚೀನಾ ಪರವಾಗಿರುವ ಹೊಸ ಪ್ರಧಾನಿ ಅಧಿಕಾರಕ್ಕೇರಿದ್ದಾರೆ. ಇಷ್ಟೂ ವರ್ಷಗಳ ತಪಸ್ಸು ಕೈಕೊಟ್ಟುಬಿಡುವುದೇ ಎನ್ನುವ ಹೆದರಿಕೆ ಖಂಡಿತವಾಗಿಯೂ ಇದೆ!
ಈ ಆತಂಕದಲ್ಲಿ ನಾವಿರುವಾಗ ಅತ್ತ ರಾಹುಲ್ ಸಂದರ್ಶನವೊಂದರಲ್ಲಿ ಭಾರತದ ವಿದೇಶಾಂಗ ಅಧಿಕಾರಿಗಳು ಯಾರ ಆಜ್ಞೆ ಪಡೆಯುತ್ತಿದ್ದಾರೋ ಗೊತ್ತಿಲ್ಲ, ನಮ್ಮ ಮಾತುಗಳನ್ನು ಕೇಳುವುದೇ ಇಲ್ಲ ಎಂದು ಯುರೋಪಿನ ಅಧಿಕಾರಿಗಳು ತನ್ನೊಂದಿಗೆ ಅಳಲು ತೋಡಿಕೊಂಡರು ಎಂದಿದ್ದಾನೆ. ಮೋದಿ ಬರುವುದಕ್ಕೆ ಮುನ್ನ ಬಹುತೇಕ ರಾಜತಾಂತ್ರಿಕರು ಯುರೋಪಿನ ಅಧಿಕಾರಿಗಳ ಮಾತುಗಳನ್ನೇ ಕೇಳುತ್ತಿದ್ದರೆನಿಸುತ್ತದೆ! ಆದರೀಗ ಅವರು ಭಾರತದ ಮಾತುಗಳನ್ನು ಆಲಿಸುತ್ತಿದ್ದಾರೆ. ರಾಷ್ಟ್ರ ಮೊದಲು ಎಂದರೆ ಇದೇ ಅಲ್ಲವೇನು?