ರಾಜಕೀಯದ ಕಲಸುಮೇಲೋಗರದಲ್ಲಿ ನಾವೊಂದು ಸುದ್ದಿಯನ್ನು ಗುರುತಿಸದೇ ಅವಗಣನೆ ಮಾಡಿಬಿಟ್ಟಿದ್ದೇವೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧಕರ ದೃಷ್ಟಿಯಿಂದ ಜಗತ್ತಿನ ನಂಬರ್ ಒನ್ ಸಂಸ್ಥೆ ಎಂದು ಗುರುತಿಸಲ್ಪಟ್ಟಿದೆ. ಶೈಕ್ಷಣಿಕ ಖ್ಯಾತಿ, ಸಂಸ್ಥೆಯ ಆಧಾರಸ್ತಂಭಗಳು, ಅಧ್ಯಾಪಕರು-ವಿದ್ಯಾಥರ್ಿಯ ಅನುಪಾತ, ಅಂತರ್ರಾಷ್ಟ್ರೀಯ ಅಧ್ಯಾಪಕ-ವಿದ್ಯಾಥರ್ಿಗಳ ಅನುಪಾತ, ಪ್ರತಿ ಅಧ್ಯಾಪಕರ ಸಂಶೋಧನಾ ಲೇಖನಗಳ ಉದ್ಧರಣೆಯ ಅನುಪಾತ ಇವುಗಳ ಆಧಾರದ ಮೇಲೆ ಕ್ವಾಕರಲಿ ಸೈಮಂಡ್ಸ್ ಸಂಸ್ಥೆ ಈ ರ್ಯಾಂಕಿಂಗ್ ಅನ್ನು ಪ್ರಕಟಿಸುತ್ತದೆ. ಐಐಎಸ್ಸಿಯಲ್ಲಿರುವ ಪ್ರಾಧ್ಯಾಪಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತ ಪಡಿಸಿರುವ ಪ್ರಬಂಧಗಳ ಉದ್ಧರಣೆ ಜಾಗತಿಕ ಮಟ್ಟದಲ್ಲಿ ಆಗಿರುವ ಲೆಕ್ಕಾಚಾರದ ಆಧಾರದ ಮೇಲೆ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದು ನಿಜಕ್ಕೂ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿಯೇ. ಈ ಸಂಸ್ಥೆಗೆ ಆಧಾರಭೂತವಾಗಿರುವ ಕನರ್ಾಟಕಕ್ಕೆ ಇನ್ನೂ ಹೆಚ್ಚಿನ ಹೆಮ್ಮೆ. ಕರೋನಾದ ನಡುವೆಯೂ ನಾವು ಬಲುವಾಗಿ ಸಂಭ್ರಮಿಸಬೇಕಾಗಿದ್ದ ಸಂಗತಿಯಾಗಿತ್ತು ಇದು. ಆದರೆ ಸಿನಿಮಾ, ಕ್ರಿಕೆಟು, ರಾಜಕೀಯಗಳಿಗೆ ಕೊಡುವಷ್ಟು ಸ್ಥಳ ನಾವು ವೈಜ್ಞಾನಿಕ ಸಂಸ್ಥೆಗಳಿಗೆ ಕೊಡುವುದಿಲ್ಲವಾದ್ದರಿಂದ ಈ ವಿಚಾರ ಮೂಲೆಗುಂಪಾಯ್ತು ಅಷ್ಟೇ.

ಇಷ್ಟಕ್ಕೂ ಐಐಎಸ್ಸಿಯ ಕಥೆ ಬಲುರೋಚಕವಾದ್ದು. 1893ರ ಮೇ 31. ಯೊಕೊಹಮಾದಿಂದ ವ್ಯಾಂಕೊವರ್ ಸಾಗುತ್ತಿದ್ದ ಹಡಗೊಂದರಲ್ಲಿ ಭಾರತದ ಇಬ್ಬರು ದಿಗ್ಗಜರು ಕುಳಿತಿದ್ದರು. ಮೇಲ್ನೋಟಕ್ಕೆ ಇಬ್ಬರದ್ದೂ ಭಿನ್ನ ಮಾರ್ಗವೇ. ಒಬ್ಬರು ಉದ್ದಿಮೆದಾರರಾಗಿ ಹೊರ ಪ್ರಪಂಚದಲ್ಲಿ ತಮ್ಮ ಸಾಮಥ್ರ್ಯವನ್ನು ಬೆಳೆಸಿಕೊಳ್ಳುತ್ತಾ ನಡೆದಿದ್ದರೆ, ಮತ್ತೊಬ್ಬರು ಆಧ್ಯಾತ್ಮಿಕ ಸಾಧಕರಾಗಿ ಅಂತರಂಗದ ಶಕ್ತಿಯನ್ನು ಅನಾವರಣಗೊಳಿಸುತ್ತಾ ನಡೆದಿದ್ದವರು. ಇಬ್ಬರಲ್ಲೂ ಇದ್ದ ಸಾಮಾನ್ಯ ಸಂಗತಿ ಉತ್ಕಟ ಭಾರತಪ್ರೇಮವೊಂದೇ. ಹೀಗಾಗಿಯೇ ಇಬ್ಬರಲ್ಲೂ ಸ್ನೇಹ ಹುಟ್ಟಿತು, ಸುದೀರ್ಘ ಮಾತುಕತೆಯೂ ನಡೆಯಿತು. ಹಾಗೆ ಭೇಟಿಯಾಗಿ ಐತಿಹಾಸಿಕ ದಾಖಲೆಗೆ ಕಾರಣವಾದ ಆ ಇಬ್ಬರು ಯಾರು ಗೊತ್ತೇ? ಒಬ್ಬರು ಜಮ್ಶೆಡ್ಜಿ ಟಾಟಾ, ಮತ್ತೊಬ್ಬರು ಸ್ವಾಮಿ ವಿವೇಕಾನಂದ! ಈ ಇಬ್ಬರೂ ಈ ಹಿಂದೆಯೂ ಭೇಟಿಯಾಗಿದ್ದಿರಬಹುದಾದ ಸಾಧ್ಯತೆಗಳಿದ್ದವಾದರೂ ಇಷ್ಟು ಸುದೀರ್ಘವಾಗಿ ಮಾತನಾಡಲು ಅವಕಾಶ ಹಿಂದೆಂದೂ ಸಿಕ್ಕಿರಲಿಲ್ಲ. ಜಮ್ಶೆಡ್ಜಿ ಭಾರತದಲ್ಲಿ ಕಾಖರ್ಾನೆಯೊಂದನ್ನು ತೆರೆಯಲು ವಿದೇಶದಿಂದ ಯಂತ್ರಗಳನ್ನು ಆಮದು ಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದರು. ವಿಶೇಷವಾಗಿ, ಜಪಾನಿನ ಬೆಳವಣಿಗೆ ಅವರನ್ನು ಆಕಷರ್ಿಸಿತ್ತು. ಭಾರತವನ್ನು ಔದ್ಯಮಿಕ ರಾಷ್ಟ್ರವನ್ನಾಗಿ ರೂಪಿಸಬೇಕೆಂಬ ಜಮ್ಶೆಡ್ಜಿಯವರ ಕನಸು ವಿವೇಕಾನಂದರಿಗೆ ಸಂತಸ ಕೊಟ್ಟಿತಾದರೂ ತೃಪ್ತಿಯಾಗಲಿಲ್ಲ. ವಿದೇಶದಿಂದ ಯಂತ್ರಗಳನ್ನು ಆಮದು ಮಾಡುವ ಬದಲು ಅದನ್ನು ಭಾರತದಲ್ಲೇ ನಿಮರ್ಿಸುವ ಸಂಶೋಧನಾ ಸಂಸ್ಥೆಗಳನ್ನು ಹುಟ್ಟುಹಾಕಬೇಕೆಂದು ಪ್ರೇರಣೆ ಕೊಟ್ಟರು.
ಮುಂದೆ ಸ್ವಾಮಿ ವಿವೇಕಾನಂದರು ಜಗದ್ವಿಖ್ಯಾತರಾಗಿ ಸುಮಾರು ಐದು ವರ್ಷಗಳ ನಂತರ ಭಾರತಕ್ಕೆ ಮರಳಿದರು. ಅವರು ಜಮ್ಶೆಡ್ಜಿಯವರ ಹೃದಯದೊಳಗೆ ಬಿತ್ತಿದ ಬೀಜ ಈಗ ಹೆಮ್ಮರವಾಗಿತ್ತು. ಭಾರತದಲ್ಲೇ ಸಂಶೋಧನಾ ಸಂಸ್ಥೆಯೊಂದನ್ನು ತೆರೆಯಬೇಕೆಂಬ ಅವರ ಉತ್ಕಟ ಇಚ್ಛೆಗೆ ರೂಪವೂ ಸಿಕ್ಕಿತ್ತು. ಮುಂದೇನು ಗೊತ್ತೇ? 1898ರ ನವೆಂಬರ್ ತಿಂಗಳಲ್ಲಿ ವಿವೇಕಾನಂದರಿಗೆ ಪತ್ರ ಬರೆದ ಜಮ್ಶೆಡ್ಜಿ ಈ ವೈಜ್ಞಾನಿಕ ಸಂಸ್ಥೆಯ ನೇತೃತ್ವವನ್ನು ಅವರೇ ವಹಿಸಬೇಕೆಂದು ಕೇಳಿಕೊಂಡೂಬಿಟ್ಟರು. ಆಧ್ಯಾತ್ಮದ ಹಾದಿಯಲ್ಲಿ ಹೇಗೆ ಸನ್ಯಾಸಿಗಳು ಕಠೋರವಾಗಿ ಮುಂದುವರೆಯುತ್ತಾರೋ ಅದೇ ದೃಷ್ಟಿಕೋನದಿಂದ ವಿಜ್ಞಾನ ಮಾರ್ಗದಲ್ಲೂ ಮುಂದುವರೆಯುವ ಸಮರ್ಥ ತರುಣರ ಪಡೆಯನ್ನು ಅವರೇ ಕಟ್ಟಬೇಕೆಂಬ ಬಯಕೆ ಆ ಪತ್ರದಲ್ಲಿತ್ತು. ಈ ಒಟ್ಟಾರೆ ಕಾರ್ಯವನ್ನು ಆರಂಭಿಸಲು ಜನಜಾಗೃತಿ ಮೂಡಿಸಬಲ್ಲ ಒಂದು ಕರಪತ್ರವನ್ನು ರಚಿಸಿಕೊಡಬೇಕೆಂಬ ಬಯಕೆ ವ್ಯಕ್ತಪಡಿಸಿದ ಜಮ್ಶೆಡ್ಜಿ ಅದನ್ನು ಮುದ್ರಿಸುವ ಜವಾಬ್ದಾರಿ ಹೊರುವ ಭರವಸೆ ಕೊಟ್ಟಿದ್ದರು. ಈ ಪತ್ರಕ್ಕೆ ವಿವೇಕಾನಂದರು ನೇರವಾಗಿ ಉತ್ತರಿಸಿದಂತೆ ಕಂಡುಬರುವುದಿಲ್ಲವಾದರೂ ಈ ಅವಕಾಶವನ್ನು ಅವರು ಒಪ್ಪಿಕೊಳ್ಳಲಿಲ್ಲ ಎನ್ನುವುದಂತೂ ಖಾತ್ರಿ. ಆದರೆ ತಮ್ಮ ಮಾನಸಪುತ್ರಿಯಾಗಿದ್ದ ನಿವೇದಿತಾಳನ್ನು ಈ ಕಾರ್ಯ ಸಫಲಗೊಳ್ಳುವುದಕ್ಕೆ ಸಹಕರಿಸುವಂತೆ ಬಿಟ್ಟುಕೊಟ್ಟರು. ಇತ್ತ ಜಮ್ಶೆಡ್ಜಿ ವೈಸ್ರಾಯ್ ಕರ್ಜನ್ನನ್ನು ಭೇಟಿ ಮಾಡಿ ಈ ಸಂಸ್ಥೆಗೆ ಅನುಮತಿ ಕೇಳಿದರು. ಭಾರತೀಯರನ್ನು ಕಾಲಕಸದಂತೆ ಕಾಣುತ್ತಿದ್ದ ಬಿಳಿಯರು ಈ ಬಗೆಯ ವೈಜ್ಞಾನಿಕ ಮನೋಭಾವ ಭಾರತೀಯರಿಗಿರುವುದು ಸಾಧ್ಯವೇ ಇಲ್ಲ ಎಂದು ನಂಬಿಬಿಟ್ಟಿದ್ದರು. ಇದನ್ನರಿತ ನಿವೇದಿತಾ ಅನೇಕ ಇಂಗ್ಲೀಷ್ ಪತ್ರಿಕೆಗಳಲ್ಲಿ ಈ ಕುರಿತಂತೆ ಲೇಖನಗಳನ್ನು ಬರೆಯುತ್ತಾ, ಜಮ್ಶೆಡ್ಜಿಯವರ ಸಾಹಸದ ಪ್ರಯತ್ನವನ್ನು ಕೊಂಡಾಡಿದಳು. ಅದರ ಪ್ರಯತ್ನವಾಗಿಯೇ ಸಕರ್ಾರ ಸರ್ ವಿಲಿಯಮ್ ರಾಮ್ಸೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ಕೊಡುವಂತೆ ಕೇಳಿಕೊಂಡಿತು. ಆತ ಕೂಡ ಬಲು ಧನಾತ್ಮಕವಾಗಿಯೇನೂ ಪ್ರತಿಕ್ರಿಯಿಸಲಿಲ್ಲ. ಪರಿಣಾಮ ಸ್ವರೂಪವಾಗಿ ಸಕರ್ಾರ ಇದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ತನಗೆ ಒಪ್ಪಿಸಿ ಸುಮ್ಮನಾಗುವಂತೆ ಟಾಟಾ ಅವರಿಗೆ ತಾಕೀತು ಮಾಡಿತು. ಮರುವರ್ಷ ನಿವೇದಿತಾ ಈ ವಿಚಾರವನ್ನು ಲಂಡನ್ನಲ್ಲಿ ಎತ್ತಿ ಅನೇಕ ಪ್ರಮುಖ ಶಿಕ್ಷಣತಜ್ಞರನ್ನೂ ಭೇಟಿ ಮಾಡಿದಳು. ಆದರೆ ಅಧಿಕಾರ ವರ್ಗದಲ್ಲಿದ್ದವರ ಪ್ರತಿಕ್ರಿಯೆ ಆಕೆಯನ್ನು ಕೆರಳಿಸಿಬಿಟ್ಟಿತ್ತು. ಜನಸಾಮಾನ್ಯರ ಜಾಗೃತಿ ಇದಕ್ಕೆ ಪರಿಹಾರವಾಗಬಲ್ಲದೆಂದು ಭಾವಿಸಿ ತನಗೆ ಪರಿಚಯವಿದ್ದ ಖ್ಯಾತನಾಮ ತಜ್ಞರನ್ನೆಲ್ಲ ಮಾತನಾಡಿಸಿ ಜನಾಭಿಪ್ರಾಯ ರೂಪಿಸುವ ಪ್ರಯತ್ನವನ್ನೂ ಮಾಡಿದಳು. ಈ ವೇಳೆಗೆ ವಿವೇಕಾನಂದರ ದೇಹತ್ಯಾಗವಾಯ್ತು. ಅದಾದ ಎರಡು ವರ್ಷಗಳಲ್ಲೇ ಜಮ್ಶೆಡ್ಜಿಯವರೂ ದೇಹಬಿಟ್ಟರು. ಅವರೀರ್ವರ ಕನಸುಗಳು ನಿವೇದಿತೆಯ ಒಳಗೆ ಹೆಮ್ಮರವಾಗಿ ಬೆಳೆದುಬಿಟ್ಟಿದ್ದವಲ್ಲ, ಆಕೆಯ ಹಠ ಕೊನೆಗೂ ಗೆದ್ದಿತು. 1909ರಲ್ಲಿ ಕರ್ಜನ್ ಸ್ಥಾನಕ್ಕೆ ಮಿಂಟೊ ಬಂದೊಡನೆ ಈ ಯೋಜನೆಗೆ ಮತ್ತೆ ಜೀವಬಂತು. ಟಾಟಾ ಅವರಿಗೆ ಈ ಸಂಸ್ಥೆ ಮುಂಬೈನಲ್ಲಿರಬೇಕೆಂಬ ಬಯಕೆ ಇತ್ತಾದರೂ ವಿಜ್ಞಾನದ ಬೆಳವಣಿಗೆಗಳನ್ನು ಆಸ್ಥೆಯಿಂದ ಗೌರವಿಸುತ್ತಿದ್ದ ಮೈಸೂರಿನ ಮಹಾರಾಜರು 370 ಎಕರೆ ಭೂಮಿಯನ್ನು ಸಂಸ್ಥೆಗಾಗಿ ಕೊಡುತ್ತೇನೆಂದಾಗ ಇಲ್ಲವೆನ್ನಲಾಗಲಿಲ್ಲ. ಇಷ್ಟಕ್ಕೂ ಮೈಸೂರಿಗೂ ಮತ್ತು ವಿವೇಕಾನಂದರಿಗೂ ಅವಿನಾಭಾವ ನಂಟಿತ್ತಲ್ಲ ಅದನ್ನು ಈ ನೆಪದಲ್ಲಿ ಮುಂದುವರಿಸಲಾಗಿತ್ತು ಅಷ್ಟೇ. ಅಲ್ಲಿಂದಾಚೆಗೆ ಹಂತ-ಹಂತವಾಗಿ ಈ ಸಂಸ್ಥೆ ಬೆಳೆಯುತ್ತಾ ಹೋಯ್ತು. ಇಂಗ್ಲೆಂಡಿನ ರಸಾಯನ ತಜ್ಞ ಮೊರಿಸ್ ಟ್ರಾವಸರ್್ ಆರಂಭದಲ್ಲಿ ಇದರ ನೇತೃತ್ವವನ್ನು ವಹಿಸಿದರೆ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್.ಸಿ.ವಿ ರಾಮನ್ ಇದರ ಮೊದಲ ಭಾರತೀಯ ನಿದರ್ೇಶಕರಾದರು. ಇಸ್ರೊದ ಮುಖ್ಯಸ್ಥರಾದ ಶಿವನ್, ಭಾರತ ಸಕರ್ಾರಕ್ಕೆ ವೈಜ್ಞಾನಿಕ ಸಲಹೆಗಾರರಾಗಿದ್ದ ಚಿದಂಬರಂ, ಖ್ಯಾತ ಭೌತಶಾಸ್ತ್ರಜ್ಞ ರಾಮಚಂದ್ರನ್, ಇನ್ಫೋಸಿಸ್ ಫೌಂಡೇಶನ್ನ ಸುಧಾಮೂತರ್ಿ ಇಂಥವರೆಲ್ಲ ಈ ಸಂಸ್ಥೆಯ ಹಳೆಯ ವಿದ್ಯಾಥರ್ಿಗಳು. ಈ ಸಂಸ್ಥೆಯಲ್ಲಿ ನಿದರ್ೇಶಕರಾಗಿದ್ದ ಸಿ.ವಿ ರಾಮನ್ ಮತ್ತು ಸಿ.ಎನ್.ಆರ್. ರಾವ್ ಅವರು ರಾಷ್ಟ್ರದ ಅತ್ಯುನ್ನತ ಗೌರವ ಭಾರತರತ್ನದಿಂದ ಪುರಸ್ಕೃತರು. ಇಲ್ಲಿನ ಕೆಲವು ಪ್ರಾಧ್ಯಾಪಕರು ರಾಯಲ್ ಸೊಸೈಟಿಯ ಸದಸ್ಯರಾಗಿದ್ದರೆ ನೂರಾರು ಮಂದಿ ಶಾಂತಿಸ್ವರೂಪ್ ಭಟ್ನಾಕರ್ ಪ್ರಶಸ್ತಿ ಪಡೆದವರಾಗಿದ್ದಾರೆ. ಭಾರತದ ಹೆಮ್ಮೆ ಇದು. ನಮ್ಮ ಪಾಲಿಗೆ ಕಿರೀಟದ ಗರಿ!
ಇಷ್ಟನ್ನೂ ವಿಷದವಾಗಿ ಹೇಳುತ್ತಿರುವುದೇಕೆಂದರೆ ಕನರ್ಾಟಕಕ್ಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅನೇಕ ಕಾರಣಗಳಿವೆ. ಐಟಿ-ಬಿಟಿ ಕ್ಷೇತ್ರದಲ್ಲಿ ನಾವು ಇಡಿಯ ರಾಷ್ಟ್ರದಲ್ಲಿ ಅಗ್ರಣಿಗಳು, ಜಾಗತಿಕ ಮಟ್ಟದಲ್ಲೂ ಬೆಂಗಳೂರಿಗೆ ಅಪಾರವಾದ ಗೌರವ ಇದೆ, ಸಂಶೋಧನಾ ಕ್ಷೇತ್ರವಿರಲಿ ಅಥವಾ ಸಂಶೋಧನೆಯನ್ನು ಉತ್ಪಾದನೆಯನ್ನಾಗಿ ಪರಿವತರ್ಿಸುವ ವಿಚಾರವಿರಲಿ ರಾಷ್ಟ್ರ ನಮ್ಮೆಡೆಗೆ ತಿರುಗಿ ನೋಡಲೇಬೇಕು. ಚಂದ್ರಯಾನ ಮಾಡಿದರೂ ಅದರಲ್ಲಿ ಬೆಂಗಳೂರಿನ ಪಾತ್ರವಿದೆ. ಉಪಗ್ರಹವೊಂದು ಕಕ್ಷೆಗೆ ಹಾರಿ ಬೆರಗುಗೊಳಿಸಿದರೂ ಅಲ್ಲಿ ನಮ್ಮ ಶ್ರಮವಿದೆ. ಭಾರತದಲ್ಲೇ ನಿಮರ್ಿಸಿದ ಯುದ್ಧವಿಮಾನ ಗಡಿಯಲ್ಲಿ ಹಾರಾಡಿದರೆ ಅಲ್ಲಿ ಕನರ್ಾಟಕದ ಸುಗಂಧವಿದೆ ಮತ್ತು ದೇಶದ ಯಾವ ಮೂಲೆಯಲ್ಲಿ ಬಳಸುವ ಸಾಫ್ಟ್ವೇರ್ ಆಧಾರಿತ ತಂತ್ರಜ್ಞಾನದಲ್ಲೂ ನಮ್ಮ ಸ್ಪರ್ಶವಿದೆ. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಯಾವ ಹೊಸ ಅನ್ವೇಷಣೆಗಳು ನಡೆದರೂ ಭಾರತದಲ್ಲಿ ಎಲ್ಲರಿಗಿಂತಲೂ ಹೆಚ್ಚು ಸತರ್ಕವಾಗಿರಬೇಕಾದದ್ದು ನಾವೇ. ಕಳೆದ ಕೆಲವಾರು ದಶಕಗಳಿಂದ ಆಡಳಿತದ ಮಗ್ಗುಲಿಂದ ನೋಡಿದರೆ ಈ ವಿಚಾರದಲ್ಲಿ ಸೋತುಹೋಗಿದ್ದೇವೆ! ಬಹುಶಃ ಕನರ್ಾಟಕದಲ್ಲಿ ಎಲ್ಲಕ್ಕಿಂತ ಹೆಚ್ಚು ಅವಜ್ಞೆಗೆ ಒಳಗಾಗಿರುವ ಕ್ಷೇತ್ರವೇ ವಿಜ್ಞಾನ ಮತ್ತು ತಂತ್ರಜ್ಞಾನ. ಹಾಗೇ ಸುಮ್ಮನೆ ಆಲೋಚಿಸಿ ನೋಡಿ. ಕರೋನಾ ಇಡಿಯ ದೇಶವನ್ನು ಆಕ್ರಮಿಸಿಕೊಂಡಿದ್ದಾಗ ಎಲ್ಲೆಡೆ ಶಾಲೆಗಳು ಮುಚ್ಚಲ್ಪಟ್ಟವು. ಮಕ್ಕಳಿಗೆ ಮನೆಯಲ್ಲೇ ಪಾಠ ಕಲಿಸಿಕೊಡಬಲ್ಲ ತಂತ್ರಜ್ಞಾನ ಆಧಾರಿತ ಹೊಸ ಆಲೋಚನೆಯನ್ನು ರೂಪಿಸಬೇಕಾದ ಹೊಣೆಗಾರಿಕೆ ನಮ್ಮದ್ದೇ ಆಗಿತ್ತು. ನಾವು ಸೋತುಹೋದೆವು. ಹೋಗಲಿ, ಸ್ವತಃ ಪ್ರಧಾನಮಂತ್ರಿಯವರೇ ಈ ಬಾರಿಯ ಪರೀಕ್ಷೆಗಳನ್ನು ರದ್ದುಗೊಳಿಸುವ ಅನಿವಾರ್ಯದ ನಿರ್ಣಯವನ್ನು ಪ್ರಕಟಿಸಿದರಲ್ಲ, ಆಗಲಾದರೂ ತಂತ್ರಜ್ಞಾನದ ನಾಡು ಬೆಂಗಳೂರು ಪರೀಕ್ಷೆಗಳನ್ನು ನಡೆಸುವ ಹೊಸ ಮಾರ್ಗಗಳನ್ನು ರಾಷ್ಟ್ರಕ್ಕೆ ಪರಿಚಯಿಸಿತೇ? ಶಿಕ್ಷಣ ಕ್ಷೇತ್ರಕ್ಕೊಬ್ಬರು ಸಚಿವರಿದ್ದಾರೆ, ಉನ್ನತ ಶಿಕ್ಷಣ, ವಿಜ್ಞಾನ-ತಂತ್ರಜ್ಞಾನಗಳಿಗೂ ಸಚಿವರಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ದೃಷ್ಟಿಯಿಂದ ಇವರುಗಳು ನಡೆಸಿರುವ ಪ್ರಯತ್ನವಾದರೂ ಏನು? ನಿಜ ಕರೋನಾ ಎಲ್ಲವನ್ನೂ ನುಂಗಿಬಿಟ್ಟಿತು. ಆದರೆ ಇದೇ ಕರೋನಾ ನಮಗೆ ರಾಷ್ಟ್ರಕ್ಕೆ ಮಾರ್ಗದರ್ಶಕವಾಗಿ ನಿಲ್ಲುವಂತಹ ಅವಕಾಶವನ್ನು ಒದಗಿಸಿಕೊಟ್ಟಿತ್ತಲ್ಲ, ಕೈಚೆಲ್ಲಿಬಿಟ್ಟೆವಲ್ಲ. ನಮ್ಮ ಶಿಕ್ಷಣ ಇಲಾಖೆಗಳು ಎಷ್ಟು ಹಿಂದುಳಿದಿವೆ ಎಂದರೆ ಖಾಸಗಿ ಶಿಕ್ಷಕರ ಪಟ್ಟಿಯಾಗಲೀ ಅವರ ಅಕೌಂಟು ವಿವರಗಳಾಗಲೀ ಸಕರ್ಾರದ ಬಳಿಯಿಲ್ಲ. ಮುಖ್ಯಮಂತ್ರಿಗಳು ಖಾಸಗಿ ಶಿಕ್ಷಕರುಗಳಿಗೆ 5000 ರೂಪಾಯಿ ಘೋಷಣೆ ಮಾಡಿದಾಗ ಆಟೋ ಚಾಲಕರು ಪರಿಹಾರಕ್ಕಾಗಿ ಅಜರ್ಿ ಸಲ್ಲಿಸುವಂತೆ ಶಿಕ್ಷಕರುಗಳೂ ಸಲ್ಲಿಸಬೇಕಾದ ಪರಿಸ್ಥಿತಿ ನಿಮರ್ಾಣಮಾಡಿಕೊಂಡಿದೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಮುಂದುವರೆದಿದ್ದೇವೆಂದು ಬಡಾಯಿ ಕೊಚ್ಚಿಕೊಳ್ಳುವ ನಮಗಿದು ಅವಮಾನಕರವಲ್ಲವೇನು?
ಇಷ್ಟೇ ಅಲ್ಲ, ಜಗತ್ತೆಲ್ಲಾ ಈಗ ಕೃತಕ ಬುದ್ಧಿಮತ್ತೆ- ಆಟರ್ಿಫೀಶಿಯಲ್ ಇಂಟೆಲಿಜೆನ್ಸ್-ನ ಹಿಂದೆ ಓಡುತ್ತಿದೆ. ನಾವು ಇನ್ನೂ ತೆವಳುವುದಕ್ಕೂ ಆರಂಭಿಸಿಲ್ಲ. 2030ರ ವೇಳೆಗೆ ಈ ಕ್ಷೇತ್ರದಲ್ಲಿ ಉತ್ಪಾದನೆಯಾಗುವ ಬಹುಪಾಲು ಸಂಪತ್ತಿನ ಮೇಲೆ ಚೀನಾದ್ದೇ ಒಡೆತನ ಇರಲಿದೆ. ಪ್ರೈಸ್ ವಾಟರ್ಹೌಸ್ ಕೂಪಸರ್್ನ ಅಧ್ಯಯನದ ಪ್ರಕಾರ ಆ ವೇಳೆಗೆ ಈ ಕ್ಷೇತ್ರದಲ್ಲಿ ಚೀನಾದ ಜಿಡಿಪಿ ಏಳು ಟ್ರಿಲಿಯನ್ ಡಾಲರ್ಗಳಷ್ಟಾಗಲಿದೆ. ಆಫ್ರಿಕಾ, ದಕ್ಷಿಣ ಏಷ್ಯಾ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳೊಂದಿಗೆ ಸೇರಿ ನಾವು 1.2 ಟ್ರಿಲಿಯನ್ ಡಾಲರ್ಗಳಷ್ಟು ಜಿಡಿಪಿಯನ್ನು ಹಂಚಿಕೊಳ್ಳಲಿದ್ದೇವೆ. ಎಐ ಕ್ಷೇತ್ರದಲ್ಲಿ ಚೀನಾ, ಅಮೇರಿಕಾ ಮತ್ತು ಜಪಾನ್ಗಳು ಶೇಕಡಾ 78% ರಷ್ಟು ಪೇಟೆಂಟ್ಗಳನ್ನು ದಾಖಲಿಸಿವೆ. ಚೀನಾ ಈ ಕ್ಷೇತ್ರಕ್ಕಾಗಿ ಜಗತ್ತಿನ ಅರ್ಧದಷ್ಟನ್ನು ತಾನೇ ವ್ಯಯಿಸುತ್ತಿದೆ. ಕಳೆದ ಒಂದು ದಶಕದಲ್ಲಿ ನಮ್ಮ ಕಣ್ಣೆದುರಿಗೆ ಚೀನಾ ಬೆಳೆಯುತ್ತಿರುವ ವೇಗವಿದೆಯಲ್ಲ, ಅದು ಅನೂಹ್ಯವಾದ್ದು. ನಾವಿನ್ನೂ ಮುಖ್ಯಮಂತ್ರಿ ಪಟ್ಟ ತನಗೇಕೆ ಸಿಗಲಿಲ್ಲ ಎಂಬ ಕದನ-ಕಾದಾಟಗಳಲ್ಲೇ ಮುಳುಗಿಹೋಗಿಬಿಟ್ಟಿದ್ದೇವೆ!
ಕರೋನಾ ಎರಡನೇ ಅಲೆ ಮುಗಿದುಹೋಗಿದೆ. ಇನ್ನೇನಿದ್ದರೂ ಮೂರನೇ ಅಲೆಯ ತಯಾರಿಯಷ್ಟೇ. ಅದು ಬರುವುದು ಖಾತ್ರಿ. ಹೀಗಿರುವಾಗ ನಾವು ಅದಕ್ಕಾಗಿಯೇ ಅಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ನಮ್ಮ ದೌರ್ಬಲ್ಯದ ಕುರಿತಂತೆ ಚಿಂತಿಸುತ್ತಾ ಕುಳಿತರೆ ನಾಡು ಕಟ್ಟಲಾಗುವುದಿಲ್ಲ. ನಮ್ಮ ಶಕ್ತಿ ಇರುವುದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ. ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವ ನಮ್ಮ ಚಾಣಾಕ್ಷತೆಯಲ್ಲಿ. ಎಲ್ಲಕ್ಕೂ ಹೆಚ್ಚು ಎಂಥದ್ದನ್ನೂ ಸಾಧಿಸಿಬಿಡಬಲ್ಲ ಸ್ವಾಭಿಮಾನೀ ಮನೋಭಾವ ಕನ್ನಡಿಗರ ಸಹಜ ಗುಣ. ಈ ಸಾಮಥ್ರ್ಯವನ್ನು ಬಳಸಿಕೊಂಡು ಹೊಸ ನಾಡಿಗೆ ಭದ್ರ ಬುನಾದಿ ಹಾಕಬೇಕಿದೆ. ಕಾದಾಡಿ ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿಬಿಡಬಹುದೇನೋ, ಆದರೆ ಪ್ರಾಮಾಣಿಕವಾಗಿ ಶುದ್ಧ ಮನಸ್ಸಿನಿಂದ ನಾಡು ಕಟ್ಟಲು ದುಡಿದರೆ ಮುಂದಿನ ಐವತ್ತು ವರ್ಷಗಳ ಕಾಲ ಜನ-ಮನದಲ್ಲಿ ರಾಜರಂತೆ ಮಿಂಚಬಹುದು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಣಿಯಾಗಿರುವುದು ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದಕ್ಕೆ ನಮಗೆ ಮಾರ್ಗಸೂಚಿ ಮಾತ್ರ. ನಾವಿನ್ನೂ ಹೆಜ್ಜೆ ಇಡಬೇಕಾಗಿದೆ ಅಷ್ಟೇ!
ಅತ್ತೂತ್ತಮ ಲೇಖನ
Super sir I big fan of you sir