ಏನೇ ಹೇಳಿ, ಮೋದಿ ಅಧಿಕಾರಕ್ಕೆ ಬಂದಮೇಲೆ ರೈತರಿಗಂತೂ ಭಾಗ್ಯ ಖುಲಾಯಿಸಿದೆ. ಮೊನ್ನೆ ಮೊನ್ನೆಯವರೆಗೂ ರೈತರೆಂದರೆ ಬಡವರು, ಆತ್ಮಹತ್ಯೆ ಮಾಡಿಕೊಳ್ಳುವವರು ಎಂಬೆಲ್ಲಾ ಕಲ್ಪನೆ ಇತ್ತು. ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ವಿದ್ಯಾಥರ್ಿಗಳೇ ರೈತರ ಕುರಿತ ಹಾಡೊಂದಕ್ಕೆ ಚಿತ್ರಗಳನ್ನು ಬಳಸುವಾಗ ಆಕಾಶದತ್ತ ಮುಖಮಾಡಿ, ಬಡಕಲು-ಬಡಕಲಾಗಿದ್ದ ರೈತನನ್ನೇ ಉಪಯೋಗಿಸಿದ್ದರು. ಆದರೆ, ಸಿಂಘು ಗಡಿಯತ್ತ ಧಾವಿಸಿ ಬರುತ್ತಿರುವ ರೈತರು ಈಗ ಫಾಚರ್ುನರ್ಗಳನ್ನು, ಇನ್ನೊವಾಗಳನ್ನು, ಅತ್ಯಾಧುನಿಕವಾದ ಐಷಾರಾಮಿ ಕಾರುಗಳನ್ನು ಬಳಸಿ ಬರುತ್ತಿದ್ದಾರೆ. ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿಯೇ. ರೈತನೊಬ್ಬ ಇಷ್ಟು ಶ್ರೀಮಂತನಾಗುವುದನ್ನು ಕಣ್ಣಿಂದ ಕಾಣುವ ಭಾಗ್ಯ ದೊರಕಿತಲ್ಲ ಎಂದು ಎಷ್ಟು ಬಾರಿ ಭಗವಂತನಿಗೆ ಕೃತಜ್ಞತೆ ಸಮಪರ್ಿಸಿದರೂ ಅದು ಕಡಿಮೆಯೇ. ರೈತ ಈಗ ಮೊದಲಿಗಿಂತ ಹೆಚ್ಚು ಸ್ವಾವಲಂಬಿ. ಅವನು ಬೆಂಬಲ ಬೆಲೆ ಖಾತ್ರಿ ಪಡಿಸಿಕೊಳ್ಳಲೆಂದು ನಡೆಯುತ್ತಿರುವ ಹೋರಾಟಕ್ಕೆ ಯಾರ ಬೆಂಬಲವನ್ನೂ ಬಯಸುತ್ತಿಲ್ಲ. ತಾನೇ ಬಂದ ರೈತರಿಗೆ ಪಿಜ್ಜಾಗಳನ್ನು ಒದಗಿಸುತ್ತಿದ್ದಾನೆ, ಬಂದವರಿಗೆ ಹಣ ಕೊಡುತ್ತಿದ್ದಾನೆ, ರಾತ್ರಿ ಮದ್ಯ ಸರಬರಾಜು ಮಾಡುತ್ತಿದ್ದಾನೆ, ಲಕ್ಷಾಂತರ ಟ್ರ್ಯಾಕ್ಟರ್ಗಳು ಬೀದಿಗೆ ಬರುವಂತೆ ಮಾಡುತ್ತಿದ್ದಾನೆ ಮತ್ತು ತನ್ನ ಆಗ್ರಹವನ್ನು ಒಪ್ಪಿಕೊಳ್ಳುವಂತೆ ಮಾಡಲು ತಲ್ವಾರ್ಗಳನ್ನು ಬಳಸಿ ಕಾದಾಡುತ್ತಿದ್ದಾನೆ. ಜೊತೆಗೆ ಪಂಜಾಬಿನ ಮುಖ್ಯಮಂತ್ರಿಯೇ ಹೇಳಿರುವಂತೆ ಪಕ್ಕದ ರಾಷ್ಟ್ರಗಳಿಂದ ಡ್ರೋನ್ಗಳಲ್ಲೇ ಶಸ್ತ್ರಗಳನ್ನು ಆಮದು ಮಾಡಿಕೊಳ್ಳುವಷ್ಟು ಮುಂದುವರೆದಿದ್ದಾನೆ. ಹತ್ತು ವರ್ಷಗಳ ಹಿಂದೆ ರೈತನೊಬ್ಬ ಇಷ್ಟು ಬುದ್ಧಿವಂತನಾಗಿರುವುದನ್ನು, ಸಮರ್ಥನಾಗಿರುವುದನ್ನು, ಆಕ್ರಮಣಕಾರಿಯಾಗಿರುವುದನ್ನು ಮತ್ತು ಸಿರಿವಂತನಾಗಿರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಎಂಥ ಅಚ್ಛೆ ದಿನಗಳು ಬಂದವು!
ಹೀಗೆಲ್ಲಾ ಹೇಳಿದೊಡನೆ ಅನೇಕರು ಉರಿದು ಬೀಳುತ್ತಾರೆ. ರೈತರು ಗೂಂಡಾಗಳೇನು? ಎಂದು ಪ್ರಶ್ನಿಸುತ್ತಾರೆ. ಮೋದಿ ಭಕ್ತರು ಮಾತ್ರ ಹೀಗೆಲ್ಲಾ ಮಾತನಾಡಲು ಸಾಧ್ಯ ಎಂದು ಮೂದಲಿಸುತ್ತಾರೆ. ಕೃಷಿಭೂಮಿಯಲ್ಲಿ ಮೈ ಮುರಿಯುವಷ್ಟು ಕೆಲಸವಿದ್ದಾಗ, ಮನೆಯ ಮಕ್ಕಳು ಮತ್ತು ಇಡಿಯ ಪರಿವಾರ ಸೇರಿ ದುಡಿದರೂ ಕೃಷಿ ಉತ್ಪನ್ನ ಸಾಲದೆನ್ನುವ ಸಂಕಟದಲ್ಲಿ ಆತನಿರುವಾಗ 65 ದಿನಗಳ ಕಾಲ ಹೋರಾಟ ಮಾಡುವಷ್ಟು ತ್ರಾಣ ಬಂದಿದ್ದಾದರೂ ಎಲ್ಲಿಂದ? ಒಂದೋ ಬಂದವನು ಕೃಷಿಕನೇ ಅಲ್ಲದಿರಬೇಕು ಅಥವಾ ಆತನಿಗೆ ಅಲ್ಲಿಯವರೆಗೂ ಆಗಮಿಸಲು ವ್ಯವಸ್ಥಿತವಾದ ಬೆಂಬಲ ದೊರೆತಿರಬೇಕು. ಹಾಗೆ ಒಮ್ಮೆ ಕಣ್ಣಾಡಿಸಿ ನೋಡಿ. ಕರೋನಾ ಭಾರತವನ್ನು ನುಂಗಿ ಹಾಕಿಬಿಡುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಭಯಾನಕ ರೋಗದ ಕೇಂದ್ರವಾಗಿರುವ ಚೀನಾದ ಒಂದಿಡೀ ನಗರವನ್ನೇ ಕರೋನಾ ನುಂಗಿ ತೇಗಿಬಿಟ್ಟಿತು. ಆದರೆ ಭಾರತ ಮಾತ್ರ ಒಂದು ವರ್ಷದಿಂದ ನಿರಂತರವಾಗಿ ಅದನ್ನು ಎದುರಿಸುತ್ತಾ, ಅದರಿಂದ ಒದಗಬಹುದಾದ ತೀವ್ರತರದ ಆಘಾತಗಳನ್ನು ನುಂಗಿಕೊಳ್ಳುತ್ತಾ ಬಲಾಢ್ಯವಾಗಿ ನಿಂತಿತಲ್ಲದೇ ಆನಂತರದ ದಿನಗಳಲ್ಲಿ ಇನ್ನೂ ಹೆಚ್ಚು ಸಶಕ್ತವಾಗಿರುವ ಲಕ್ಷಣಗಳನ್ನು ತೋರಲಾರಂಭಿಸಿತು. ಭಾರತದ ಜಿಡಿಪಿ ಎಷ್ಟು ಕುಸಿಯಬಹುದೆಂದು ಅಂದಾಜಿಸಲಾಗಿತ್ತೋ ಅಷ್ಟು ಪಾತಾಳಕ್ಕಂತೂ ಇಳಿಯಲಿಲ್ಲ. ಅಷ್ಟೇ ಅಲ್ಲ, ಇತ್ತೀಚಿನ ಐಎಮ್ಎಫ್ ವರದಿಯ ಪ್ರಕಾರ ಭಾರತ ದಾಖಲೆಯ ವೃದ್ಧಿದರವನ್ನು ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಈ ವಿಶ್ವಾಸದ ಮೇಲೆಯೇ ಈ ಬಾರಿಯ ಬಜೆಟ್ ಮಂಡಿಸಲು ಹೊರಟಿದ್ದಾರೆ ನಿರ್ಮಲಾ ಸೀತಾರಾಮನ್. ಇದು ಅನೇಕರಿಗೆ ಸಹಿಸಲಸಾಧ್ಯವಾದ ಉರಿ. ಮೋದಿಯ ಕಾಲಘಟ್ಟದಲ್ಲಿ ಆಥರ್ಿಕ ಸ್ಥಿತಿ ಹಳ್ಳ ಹಿಡಿಯಿತು ಎಂದು ಹೇಳುವ ತವಕ ಹೊಂದಿದ್ದವರೆಲ್ಲ ಈಗ ಕಂಗಾಲಾಗಿಬಿಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಭಾರತದ ವಿಜ್ಞಾನಿಗಳು ಕರೋನಾಕ್ಕೆ ಔಷಧಿಯನ್ನು ಕಂಡುಹಿಡಿದು ಜಗತ್ತಿನ ಭೂಪಟದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರಮೋದಿಯಂತೂ ವ್ಯಾಕ್ಸಿನ್ ರಾಜನೀತಿಯನ್ನು ಸಮರ್ಥವಾಗಿಯೇ ಮಾಡುತ್ತಿದ್ದಾರೆ. ಜಗತ್ತಿನ ಅನೇಕ ರಾಷ್ಟ್ರಗಳಿಗೆ ಔಷಧಿಯನ್ನು ಕಳಿಸುತ್ತಿರುವುದಲ್ಲದೇ ಅಕ್ಕಪಕ್ಕದ ರಾಷ್ಟ್ರಗಳಿಗೆ ಮೊದಲ ಹಂತದ ಡೋಸ್ಗಳನ್ನು ಉಚಿತವಾಗಿಯೇ ನೀಡುತ್ತಿದ್ದಾರೆ. ಇದು ನಿಸ್ಸಂಶಯವಾಗಿ ಚೀನಾದ ಬಲವನ್ನು ಜಾಗತಿಕ ಮಟ್ಟದಲ್ಲಿ ಕುಸಿಯುವಂತೆ ಮಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದ ವ್ಯಾಕ್ಸಿನ್ ಉತ್ಪಾದನಾ ಸಾಮಥ್ರ್ಯವನ್ನು ಹೊಗಳಿ ಭಾರತ ಜಗತ್ತಿನ ಆಸ್ತಿ ಎಂದು ಹೇಳಿರುವುದಂತೂ ಅನೇಕ ಸಂದೇಶವನ್ನು ಕೊಡುವಂತಿದೆ. ಇದರ ಜೊತೆ-ಜೊತೆಗೆ ಕರೋನಾ ಕಾಲಘಟ್ಟದಲ್ಲಿ ಚೀನಾದ ಮೇಲಿನ ಆಕ್ರೋಶ ಅಲ್ಲಿರುವ ಕಂಪೆನಿಗಳನ್ನು ಒಕ್ಕಲೆಬ್ಬಿಸುವ ಮೂಲಕ ವ್ಯಕ್ತಗೊಳ್ಳುತ್ತಿದೆ. ಅದಾಗಲೇ ಅನೇಕ ರಾಷ್ಟ್ರಗಳಿಗೆ ಕಂಪೆನಿಗಳು ವಲಸೆ ಹೋಗಿವೆಯಲ್ಲದೇ ಭಾರತ ಅವರೆಲ್ಲರ ಆಕರ್ಷಣೆಯ ಕೇಂದ್ರವಾಗಿದೆ. 80ರ ದಶಕದಲ್ಲಿ ಲಂಗು ಲಗಾಮಿಲ್ಲದೇ ರೆಡ್ ಟೇಪಿಸಂಗೆ ಆಹುತಿಯಾಗಿದ್ದ ಭಾರತ ನರೇಂದ್ರಮೋದಿಯವರ ಆಗಮನದ ನಂತರ ಅನುಶಾಸನದ ಚೌಕಟ್ಟಿಗೆ ಒಳಪಟ್ಟಿದೆ. ಇಲ್ಲಿ ಕಂಡು ಬರುತ್ತಿರುವ ಆಥರ್ಿಕ ಶಿಸ್ತು, ಹೊಸ ಆಲೋಚನೆಗಳಿಗೆ ಸಿಗುತ್ತಿರುವ ವೇದಿಕೆ, ಅಧಿಕಾರಿಗಳ ಬಂಧನದಿಂದ ಮುಕ್ತವಾಗಿರುವ ವ್ಯಾಪಾರೋದ್ದಿಮೆಗಳು ಜಗತ್ತಿನ ಕಣ್ಣು ಕುಕ್ಕುತ್ತಿವೆ. ಯಾವ ದೃಷ್ಟಿಯಿಂದ ನೋಡಿದರೂ ಅವರೆಲ್ಲರಿಗೂ ಭಾರತ ಅತ್ಯುತ್ತಮ ಸ್ಥಾನವೇ. ಹೀಗಾಗಿ ಚೀನಾ ಆತಂಕಕ್ಕೊಳಗಾಗಿದೆ. ಹೇಗಾದರೂ ಸರಿ ಭಾರತಕ್ಕೆ ದಕ್ಕಿರುವ ಈ ಗೌರವವನ್ನು ಕಡಿಮೆ ಮಾಡಿ ತನ್ನ ತಾನು ಅನಿವಾರ್ಯವಾಗಿಸಿಕೊಳ್ಳುವ ಧಾವಂತ ಅದಕ್ಕಿದೆ.

ಕಾರಣವೂ ಇಲ್ಲದಿಲ್ಲ. ಚೀನಾ ಇಷ್ಟು ದಿನ ಗಳಿಸಿದ ನಂಬಿಕೆಯನ್ನು ಈಗ ಪೂತರ್ಿ ಕಳಕೊಂಡಿದೆ. ಜಗತ್ತೆಲ್ಲಾ ಕರೋನಾ ಕಾಲಘಟ್ಟದಲ್ಲಿ ಆಥರ್ಿಕ ದುಃಸ್ಥಿತಿಯಿಂದ ನರಳುತ್ತಿದ್ದರೆ ಚೀನಾ 20 ಸಾವಿರಕೋಟಿ ಮಾಸ್ಕ್ಗಳನ್ನು, 200 ಕೋಟಿ ಪಿಪಿಇ ಕಿಟ್ಗಳನ್ನು, 100 ಕೋಟಿ ಟೆಸ್ಟ್ಕಿಟ್ಗಳನ್ನು ಜಗತ್ತಿಗೆ ರಫ್ತು ಮಾಡುವ ಮೂಲಕ ತನ್ನ ಉತ್ಪಾದನಾ ದರವನ್ನು ಕಾಯ್ದುಕೊಂಡೇ ಬಂತು. ಅದು ಅಲ್ಪಕಾಲದ ಮೆರವಣಿಗೆ ಅಷ್ಟೇ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜಗತ್ತು ಚೀನಾದ ವಿರುದ್ಧ ಆಕ್ರೋಶಗೊಂಡಿರುವುದಂತೂ ಸತ್ಯ. ಜ್ಯಾಕ್ಮಾ ಕಾಣೆಯಾದದ್ದು ಮತ್ತು ಆನಂತರ ಜಗತ್ತಿನ ಮುಂದೆ ಕಾಣಿಸಿಕೊಂಡಿದ್ದು ತಾತ್ಕಾಲಿಕವಾಗಿ ಚೀನಾದ ಮೇಲಾಗಬಹುದಾಗಿದ್ದ ಪ್ರಹಾರವನ್ನು ಕಡಿಮೆ ಮಾಡಿತಾದರೂ ಜ್ಯಾಕ್ಮಾ ತೊಂದರೆಯಿಲ್ಲದಂತೆ ಬದುಕುತ್ತಿದ್ದಾರೆ ಎಂಬುದರ ಕುರಿತಂತೆ ಯಾರಿಗೂ ನಂಬಿಕೆಯೇ ಉಳಿದಿಲ್ಲ. ಆತನ ಖ್ಯಾತಿ ಜಿನ್ಪಿಂಗ್ನ ಎದೆ ನಡುಗಿಸುತ್ತಿದೆ. ಸ್ವತಃ ಕಮ್ಯುನಿಸ್ಟ್ ಪಾಟರ್ಿಯಲ್ಲಿ ಜ್ಯಾಕ್ಮಾಗಿರುವ ಬೆಂಬಲ ಜಿನ್ಪಿಂಗ್ನನ್ನು ಅವ್ಯಕ್ತವಾಗಿ ಕಾಡುತ್ತಿರಬಹುದು. ಈತ ಅಧ್ಯಕ್ಷನಾಗುವ ಮುನ್ನವೂ ಹೀಗೆ ಕೆಲವು ದಿನಗಳ ಕಾಲ ಕಾಣೆಯಾಗಿದ್ದ ಎಂಬುದನ್ನು ತಾಳೆ ಹಾಕಿ ನೋಡಿದರೆ ನಿಸ್ಸಂಶಯವಾಗಿ ಚೀನಾದಲ್ಲಿ ಬದಲಾವಣೆಯ ಪರ್ವ ಆರಂಭವಾಗಬಹುದು. ಜಗತ್ತು ಇವ್ಯಾವುದನ್ನೂ ನಂಬಲು ಸಿದ್ಧವಿಲ್ಲ. ಹೀಗಾಗಿಯೇ ಭಾರತದ ಬೆಳವಣಿಗೆ ಚೀನಾದ ಅಂತ್ಯವೇ ಸರಿ!

ಎಲ್ಲವೂ ಸರಿಯಾಗಿಯೇ ನಡೆದಿದ್ದರೆ ಇಂದಿನ ಕಥೆ ಬೇರೆಯೇ ಇರುತ್ತಿತ್ತು. ಆದರೆ ಅಮೇರಿಕಾದಲ್ಲಿ ಟ್ರಂಪ್ ಸೋಲುವುದರೊಂದಿಗೆ ಭಾರತದ ವೇಗದ ಓಟಕ್ಕೆ ಬ್ರೇಕ್ ಬಿದ್ದಿದ್ದಂತೂ ಸತ್ಯ. ಬೈಡನ್ನ ಹೊಸ ತಂಡ ಮೊದಲಿನಿಂದಲೂ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಪ್ರತ್ಯಕ್ಷ ಸಹಕಾರಿಗಳೇ. ಖಾಲಿಸ್ತಾನಿ ಉಗ್ರರಿಗೆ ಪರೋಕ್ಷ ಬೆಂಬಲ ನೀಡುವವರೇ. ಜೊತೆಗೆ ಭಾರತದಲ್ಲಿರುವ ಎಡಪಂಥೀಯರ ಚಿಂತನೆಗಳೊಂದಿಗೆ ಅವರ ವಿಚಾರಗಳು ಸಮೀಕರಣಗೊಳ್ಳುತ್ತವೆ. ಆದ್ದರಿಂದಲೇ ಮೋದಿ ಸಕರ್ಾರ ಈ ಹಿಂದೆ ಅನುಭವಿಸುತ್ತಿದ್ದ ಅಮೇರಿಕಾ ಪ್ರೇರಿತ ಜಾಗತಿಕ ಗೌರವವನ್ನು ಇನ್ನು ಮುಂದೆ ಅನುಭವಿಸುವುದು ಕಷ್ಟವಾಗಬಹುದು. ಜೊತೆಗೆ ಅದಾಗಲೇ ಜಾಜರ್್ ಸೊರೋಸ್ ದೊಡ್ಡಮೊತ್ತದ ಹಣವನ್ನು ಚೆಲ್ಲುವ ಮೂಲಕ ಭಾರತವನ್ನು ಅಸ್ಥಿರಗೊಳಿಸುತ್ತಿದ್ದಾನೆ ಎಂಬ ವರದಿಗಳು ಬಂದಿರುವುದರಿಂದ ಮುಂದಿನ ದಿನಗಳು ಬಲುಕಠಿಣವೇ. ಅತ್ತ ಬೊರಿಸ್ ಜಾನ್ಸನ್ ಇಂಗ್ಲೆಂಡಿನ ಪ್ರಧಾನಿಯಾದ ಮೇಲೆ ನಾವೆಲ್ಲರೂ ಸಂಭ್ರಮಿಸಿದ್ದೆವಲ್ಲಾ ಆತನೂ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಾ ಅಲ್ಲಿರುವ ಭಾರತೀಯರ ಸಹಕಾರವನ್ನು ಬಲುಪ್ರೀತಿಯಿಂದಲೇ ಆದರಿಸಿದ್ದ. ಆದರೀಗ ಎಲ್ಲಾ ತಿರುಗು-ಮುರುಗಾಗುವ ಲಕ್ಷಣಗಳು ಕಾಣುತ್ತಿವೆ. ಇಂಗ್ಲೆಂಡಿನಲ್ಲೊಂದು ಚಾತಮ್ ಹೌಸ್ ಅಂತಿದೆ. ಅಲ್ಲಿ ಇಂಗ್ಲೆಂಡಿನ ಪಾಲಿಸಿಗಳ ಮೇಲೆ ಪ್ರಭಾವ ಬೀರಬಲ್ಲಂತಹ ತಜ್ಞರ ತಂಡವಿದೆ. ಅಲ್ಲಿದ್ದವರಲ್ಲೇ ಬಹುತೇಕರು ಈ ಹಿಂದೆ ಪ್ರಧಾನಮಂತ್ರಿಗಳೂ ಆಗಿದ್ದು ಈ ತಂಡದ ವಿಚಾರಗಳಿಗೆ ಅಲ್ಲಿ ಅಪಾರವಾದ ಬೆಲೆ ಇದೆ. ಇತ್ತೀಚೆಗೆ ನಡೆದ ಇಲ್ಲಿನ ಚಚರ್ೆಯೊಂದನ್ನು ಭಾರತದ ಈ ಹಿಂದಿನ ವಿದೇಶಾಂಗ ಕಾರ್ಯದಶರ್ಿ ಅಕ್ಬರುದ್ದೀನ್ ಬಲುಸೂಕ್ಷ್ಮವಾಗಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಬ್ರೆಕ್ಸಿಟ್ನ ನಂತರ ಇಂಗ್ಲೆಂಡ್ ಒಂದು ಮಹಾಶಕ್ತಿಯ ನೆರಳಾಗಿ ಬದುಕುವುದಕ್ಕಿಂತ ಜಾಗತಿಕ ಶಕ್ತಿಯಾಗಿ, ಜಾಗತಿಕ ಸಂಧಾನಕಾರನಾಗಿ ಬೆಳೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ, ಇಂಗ್ಲೆಂಡು ಆರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆಯಬೇಕೆಂಬ ನೀಲಿನಕಾಶೆ ತಯಾರಿಸಿಕೊಟ್ಟಿದೆ. ಉದಾರವಾದಿಗಳ ಶಕ್ತಿ ಹೆಚ್ಚಿಸುವ, ಅಂತರ್ರಾಷ್ಟ್ರೀಯ ಶಾಂತಿ ಮತ್ತು ರಕ್ಷಣೆಯ ನೇತಾರನಾಗುವ, ಹವಾಮಾನ ಬದಲಾವಣೆಯ ನೇತೃತ್ವ ವಹಿಸುವ, ಜಗತ್ತಿನ ಆರೋಗ್ಯದ ಕೇಂದ್ರವಾಗುವ, ತೆರಿಗೆ ಪ್ರಾಮಾಣಿಕತೆಯ ಮತ್ತು ಆಥರ್ಿಕ ಅಭಿವೃದ್ಧಿಯ ಮುಖ್ಯಸ್ಥನಾಗುವ, ಸೈಬರ್ ಸ್ಪೇಸ್ಗಳ ರಕ್ಷಕನಾಗುವ ಒಟ್ಟಾರೆ ಮಾರ್ಗವನ್ನು ಅದು ಯೋಜಿಸಿದೆ. ಅಚ್ಚರಿಯೆಂದರೆ, ಮೋದಿ ಪ್ರಧಾನಿಯಾಗಿ ಬಂದಮೇಲೆ ಭಾರತ ಇವೆಲ್ಲವುಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಇದೇ ಅವರಿಗಿರುವ ಉರಿ. ಹೀಗಾಗಿಯೇ ಈ ತಂಡ ಭಾರತವನ್ನು ಮಿತ್ರನಂತೆ ಕಾಣುತ್ತಿಲ್ಲ ಬದಲಿಗೆ, ರಷ್ಯಾ, ಟಕರ್ಿ, ಸೌದಿಗಳ ಜೊತೆ ಸೇರಿಸಿ ಶತ್ರುವಿನ ರೂಪದಲ್ಲೇ ಕಾಣುತ್ತಿದೆ. ಬೊರಿಸ್ ಜಾನ್ಸನ್ ಭಾರತವನ್ನು ಜಿ7 ಗುಂಪಿಗೆ ಸೇರಿಸಿಕೊಳ್ಳಲು ಆಹ್ವಾನ ಕೊಡುತ್ತೇನೆಂದಿದ್ದನ್ನು ಈ ಸಮಿತಿ ಕಟಕಿಯಾಡಿದೆಯಲ್ಲದೇ ಇದು ಇಂಗ್ಲೆಂಡಿನ ಬೆಳವಣಿಗೆಯನ್ನು ತಡೆಯಲಿದೆ ಎಂದು ಎಚ್ಚರಿಸಿದೆ. ಅದರರ್ಥ ಪಶ್ಚಿಮದ ದಿಕ್ಕಿನಿಂದ ಇದುವರೆಗೂ ಭಾರತಕ್ಕೆ ಸಿಗುತ್ತಿದ್ದ ಸ್ವಲ್ಪಮಟ್ಟದ ಸವಲತ್ತುಗಳೂ ಸಿಗುವುದಿಲ್ಲವೆಂದಾಯ್ತು. ಹೀಗಾಗಿಯೇ ಕಾಶ್ಮೀರದ ವಿಷಯವಿರಲಿ, ರೈತರ ಪ್ರತಿಭಟನೆಯಿರಲಿ, ಇವೆಲ್ಲವೂ ಇಂಗ್ಲೆಂಡಿನ ಸಂಸತ್ತಿನಲ್ಲೂ ಜೋರಾಗಿಯೇ ಚಚರ್ೆಗೆ ಬರುತ್ತಿದೆ. ಕಳದೊಂದು ಐದಾರು ವರ್ಷಗಳಿಂದ ಜಗತ್ತು ರಾಷ್ಟ್ರೀಯವಾದಿಗಳ ಕೈಲಿತ್ತಲ್ಲ, ಹೇಗಾದರೂ ಮಾಡಿ ಅದನ್ನು ಕಸಿಯಬೇಕೆಂಬ ಜಿದ್ದಿಗೆ ಇವರೆಲ್ಲ ಬಿದ್ದಿದ್ದಾರೆ. ರೈತರ ಪ್ರತಿಭಟನೆಗೆ ಈಗ ಪೂರ್ಣಪ್ರಮಾಣದ ಸಹಕಾರ ಒದಗುತ್ತಿರುವುದು ಈ ದಿಕ್ಕುಗಳಿಂದಲೇ!
ಇವೆಲ್ಲವೂ ಯಾರಿಗೂ ಗೊತ್ತಿರಲಿಲ್ಲವೆಂದೇನೂ ಅಲ್ಲ. ಗುಪ್ತಚರ ಇಲಾಖೆ ಇವೆಲ್ಲವುಗಳ ಮಾಹಿತಿಯ ಮೇಲೆ ಕುಳಿತಿರುತ್ತದೆ. ರೈತರ ಕುರಿತ ಕಾನೂನುಗಳು ಆರಂಭದಲ್ಲಿ ಶಾಂತವಾಗಿ ಸ್ವೀಕರಿಸಲ್ಪಟ್ಟು ನಂತರ ಏಕಾಕಿ ಭುಗಿಲೆದ್ದಾಗಲೇ ಇವೆಲ್ಲವನ್ನೂ ಊಹಿಸಬೇಕಿತ್ತು. ಅಂಡು ಸುಟ್ಟ ಬೆಕ್ಕಿನಂತಾಗಿರುವ ಚೀನಾ, ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಪಾಕಿಸ್ತಾನ, ಅಮೇರಿಕಾದಲ್ಲಿ ಬದಲಾಗಿರುವ ರಾಜಕೀಯ ಸಮೀಕರಣ, ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಚಚರ್ೆಗಳು ಎಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಕೊನೆಯ ಯುದ್ಧಕ್ಕೆ ಸಜ್ಜಾಗಿರುವ ಕಾಂಗ್ರೆಸ್ಸು ಮತ್ತು ಎಡಪಂಥೀಯರು ಇವುಗಳ ಲಾಭವನ್ನು ಪಡೆದೇ ತೀರುತ್ತಾರೆ ಎಂಬುದರ ಕಲ್ಪನೆ ಇರಲೇಬೇಕಿತ್ತು. ಸ್ವಲ್ಪಮಟ್ಟಿಗೆ ಎಡವಿದೆವು ಎನಿಸುತ್ತಿದೆ. ಆದರೆ ಎಡವಿದ್ದೆಲ್ಲಿ ಗೊತ್ತೇ? ಎಲ್ಲವನ್ನೂ ಮೋದಿಯ ಜೋಳಿಗೆಗೆ ಹಾಕಿ ಕೈತೊಳೆದು ಕುಳಿತುಕೊಳ್ಳುವ ಎರಡು ಮತ್ತು ಮೂರನೇ ಹಂತದ ನಾಯಕರುಗಳ ಮಟ್ಟದಲ್ಲಿ. ದೇಶದ ಯಾವ ಭಾಗಗಳಲ್ಲಿಯೂ ಈ ಮಸೂದೆಯ ಪರವಾಗಿರುವ ರೈತರನ್ನು ಒಟ್ಟುಗೂಡಿಸುವ ಪ್ರಯತ್ನಗಳು ನಡೆದೇ ಇಲ್ಲ. ಕೊಬ್ಬಿ ಬೆಳೆದಿರುವ ನಾಯಕರುಗಳಿಗೆ ಮೋದಿಯ ಹೆಸರು ಹೇಳಿ ಚುನಾವಣೆ ಗೆಲ್ಲುವ ಕಲೆ ಗೊತ್ತಿದೆ ಮತ್ತು ಗೆದ್ದ ನಂತರ ಏರಿದ ಏಣಿಯನ್ನು ಒದೆಯುವ ಕಲೆಯೂ ಸಿದ್ಧಿಯಾಗಿದೆ. ಹೀಗಾಗಿಯೇ ಆಂದೋಲನ ನಿಧಾನವಾಗಿ ಹಬ್ಬುತ್ತಿರೋದು. ಕನರ್ಾಟಕದಲ್ಲೂ ಗ್ರಾಮವಾಸ್ತವ್ಯ, ರೈತ ಸಮಾವೇಶಗಳು ಎಂಬ ಘೋಷಣೆಯಾದವೇ ಹೊರತು ರೈತರನ್ನು ಮುಟ್ಟುವ ಪ್ರಯತ್ನಗಳಾಗಲಿಲ್ಲ. ಕನರ್ಾಟಕದಲ್ಲಿ ರೈತ ಪ್ರತಿಭಟನೆಗಳಿಲ್ಲ ಎಂದು ಮೂಗು ಮುರಿಯಬೇಡಿ. ಜನವರಿ 26ರ ಕೆಟ್ಟ ಘಟನೆಯ ನಂತರ ಮತ್ತೆ ಬಲುದೊಡ್ಡ ಸಂಖ್ಯೆಯಲ್ಲಿ ಜನರನ್ನು ಸಂಘಟಿಸುವ ತಾಕತ್ತು ಅವರಿಗಿದೆ ಎಂದಾದರೆ ಈ ವಿಷವನ್ನು ದೇಶಕ್ಕೆಲ್ಲಾ ಹಬ್ಬಿಸುವ ಸಾಮಥ್ರ್ಯವೂ ಇದೆ ಎಂದರ್ಥ. ಸಕರ್ಾರಗಳಲ್ಲಿ ಅಧಿಕಾರ ಅನುಭವಿಸುತ್ತಾ, ಲಾಟುಗಟ್ಟಲೆ ದುಡ್ಡು ಮಾಡಿಕೊಂಡು, ಬಾರು-ಪಬ್ಬುಗಳಲ್ಲಿ ಕಾಲಕಳೆದು ಮೈಮರೆತಿರುವವರಿಗೆ ದೆವ್ವ ಮನೆ ಎದುರು ಬಂದಾಗಲೇ ಎಚ್ಚರವಾಗೋದು. ಯಾರು ಬೇರೆಯ ಪಕ್ಷಗಳಿಂದ ಬಂದಿದ್ದಾರೋ ಅವರು ಮತ್ತೊಂದು ಕಾರಣವನ್ನು ಕೊಟ್ಟು ಈ ಪಕ್ಷವನ್ನೂ ಸಲೀಸಾಗಿ ಬಿಟ್ಟುಹೋಗಬಲ್ಲರು. ಆದರೆ ದಶಕಗಳಿಂದ ಕಷ್ಟಪಟ್ಟು ಕಟ್ಟಿ ಬೆಳೆಸಿದರಲ್ಲ, ಅವರು ಬಿಟ್ಟು ಹೋಗುವುದು ಸಾಧ್ಯವೇ ಇಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ಇದು ಎಂತಹ ವಿಷಮ ಪರಿಸ್ಥಿತಿ ಎಂದರೆ ಕೊಬ್ಬಿ ನುಗ್ಗುತ್ತಿರುವ ಈ ಗೂಳಿಯ ಕೊಂಬುಗಳನ್ನು ಹಿಡಿದು ಈಗಲೇ ಪಳಗಿಸಲಿಲ್ಲವೆಂದರೆ ಇದು ಕಳೆದ ಏಳು ವರ್ಷಗಳ ಸಾಧನೆಯನ್ನು ನುಂಗಿ ನೀರು ಕುಡಿದುಬಿಡಲಿದೆ. ರೈತರ ಹೆಸರಿನಲ್ಲಿ ನಡೆದ ಚಳುವಳಿಗಳು ಅಧಿಕಾರಸ್ಥರನ್ನು ನುಂಗಿಯೇ ಅಂತಿಮ ಗುರಿ ತಲುಪಿರೋದು. ಈ ಚಳುವಳಿಯ ಒಂದೇ ಒಂದು ಸಮಾಧಾನಕರ ಅಂಶವೆಂದರೆ ಇಲ್ಲಿ ರೈತರಿಗಿಂತಲೂ ಹೆಚ್ಚು ಉದ್ಯಮಿಗಳಿದ್ದಾರೆ ಮತ್ತು ರಾಜಕಾರಣಿಗಳಿದ್ದಾರೆ.
ಸವಾಲಿನ ದಿನಗಳು ಈಗ ಬಂದಿವೆ. ಜಗ್ನೇಷ್. ಹಾದರ್ಿಕ್, ರೋಹಿತ್, ಕೊರೆಗಾಂವ್ ಇವೆಲ್ಲವನ್ನೂ ಮುಂದಿಟ್ಟುಕೊಂಡು ನಡೆಸಿದ ಹೋರಾಟಗಳೆಲ್ಲ ಹಳ್ಳ ಹಿಡಿದವು. ಇದು ಅಷ್ಟು ಸುಲಭಕ್ಕೆ ಜಾರುವಂಥದ್ದಲ್ಲ. ರಾಷ್ಟ್ರವನ್ನುಳಿಸಲು ಪ್ರತಿಯೊಬ್ಬರೂ ಭಾಗವಹಿಸಬೇಕಾದ ಹೊತ್ತು..