ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ!

ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ!

ನಾವು ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆ. ಸಿಡಿಯುವ ದಿನ, ವಾರ ಗೊತ್ತಿಲ್ಲದಿರಬಹುದು. ಆದರೆ ಸದ್ಯಕ್ಕೇ ಸಿಡಿಯಲಿದೆ ಎಂಬ ಸತ್ಯವಂತೂ ತಿಳಿದಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ನ ಅಧ್ಯಯನದ ಪ್ರಕಾರ 1997 ರಿಂದೀಚೆಗೆ ಭಾರತದಲ್ಲಿ ಕ್ಷಾಮಕ್ಕೆ ತುತ್ತಾಗಬಹುದಾದ ಪ್ರದೇಶಗಳ ಸಂಖ್ಯೆ ಶೇಕಡಾ 57ರಷ್ಟು ಏರಿಕೆ ಕಂಡಿದೆ. ದುರ್ದೈವವೆಂದರೆ ಇವ್ಯಾವುವೂ ಮಳೆಯ ಕೊರತೆಯಿಂದ ಆದದ್ದಲ್ಲ.

‘ಭಾರತದ ಜನಸಂಖ್ಯೆಯ 25 ಪ್ರತಿಶತ ಜನ ಅಂದರೆ 33 ಕೋಟಿಯಷ್ಟು ಜನ ಬರಗಾಲದ ಬೇಗೆಗೆ ತುತ್ತಾಗಿದ್ದಾರೆ’ ಹಾಗಂತ ಡೆಕ್ಕನ್ ಕ್ರೋನಿಕಲ್ ಎಂಬ ಇಂಗ್ಲೀಷ್ ಪತ್ರಿಕೆ ಕಳೆದ ವರ್ಷ ವರದಿ ಮಾಡಿತ್ತು. ಮಹಾರಾಷ್ಟ್ರವೊಂದರಲ್ಲಿಯೇ ಇರುವ 36 ರಲ್ಲಿ 21 ಜಿಲ್ಲೆಗಳು ಬರಗಾಲ ಪೀಡಿತವೆನಿಸಿದವು. ಉತ್ತರ ಪ್ರದೇಶದಲ್ಲಿಯಂತೂ 75 ರಲ್ಲಿ 50 ಜಿಲ್ಲೆಗಳು ಕ್ಷಾಮಪೀಡಿತ. ಛತ್ತೀಸ್ಗಢದಲ್ಲಿ ಶೇಕಡಾ 93 ರಷ್ಟು ಜಿಲ್ಲೆಗಳು ಬರಗಾಲ ಪೀಡಿತವೆಂದು ಘೋಷಿತವಾದವು. ಭಯ ಹುಟ್ಟಿಸುವ ಸಂಗತಿ ಯಾವುದು ಗೊತ್ತಾ? ಯಾವ ಕ್ಷಾಮ ಪರಿಸ್ಥಿತಿಯೂ ಪ್ರಕೃತಿ ನಿರ್ಮಿತವಲ್ಲ, ಮಾನವನ ದುಷ್ಕೃತ್ಯವೇ!

ಹೋದ ವರ್ಷವೇ ಮಹಾರಾಷ್ಟ್ರಕ್ಕೆ ಭೇಟಿ ಕೊಟ್ಟಿದ್ದ ಜಲ ಬ್ರಹ್ಮ ರಾಜೇಂದ್ರ ಸಿಂಗ್ರು ಕ್ಷಾಮದ ಕಾರಣಗಳನ್ನು ಅವಲೋಕಿಸಿದ್ದರು. ಬರಗಾಲಕ್ಕೆ ತುತ್ತಾಗಬಹುದಾಗಿದ್ದ ಜಿಲ್ಲೆಗಳಲ್ಲಿಯೇ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಅಕ್ಕಪಕ್ಕದ ರೈತರು ಕಬ್ಬನ್ನೇ ಬೆಳೆಯುವಂತೆ ಪ್ರೇರೇಪಣೆ ಕೊಡುವ ರಾಜಕಾರಣಿಗಳ ವಿರುದ್ಧ ಅವರ ಆಕ್ರೋಶವಿತ್ತು. ಕೆಲವು ರಾಜಕಾರಣಿಗಳು ಅತ್ಯಂತ ಅಮೂಲ್ಯವಾದ ಕಾಲುವೆಯ ನೀರನ್ನು ತಮ್ಮ ಕಬ್ಬಿನ ಗದ್ದೆಗೆ ಹರಿಸಿಕೊಳ್ಳುತ್ತಿದ್ದರು. ಕಬ್ಬಿನ ಗದ್ದೆಗೆ ನೀರು ಸಿಕ್ಕಾಪಟ್ಟೆ ಅಗತ್ಯವಿರುವುದರಿಂದ ಕಾಲಕ್ರಮದಲ್ಲಿ ನೀರಿನ ಸೆಲೆ ಖಾಲಿಯಾಗುವುದೆಂಬುದನ್ನು ಆಲೋಚನೆ ಮಾಡಲು ಅವರಿಗೆ ಪುರಸೊತ್ತಿಲ್ಲ, ದೂರದೃಷ್ಟಿಯೂ ಇಲ್ಲ. ಅಂತರ್ಜಲ ರಕ್ಷಣೆಯ ಕಾನೂನು ಬರಿಯ ಕಡತಗಳಲ್ಲಷ್ಟೇ. ನಾಲ್ಕೂವರೆ ಸಾವಿರ ಟ್ಯಾಂಕರುಗಳು ನೀರನ್ನು ಪೂರೈಸುವಲ್ಲಿ ನಿರತವಾಗಿವೆ.

ಕರ್ನಾಟಕದ ಕಥೆಯೇನೂ ಭಿನ್ನವಲ್ಲ. ಸತತ ನಾಲ್ಕನೇ ವರ್ಷ ನಾವು ಬರಗಾಲಕ್ಕೆ ತುತ್ತಾಗಿದ್ದೇವೆ. ಪ್ರಮುಖ ಜಲಾಶಯಗಳಲ್ಲಿ ನೀರು ತಳಮುಟ್ಟಿದೆ. ಅಂತರ್ಜಲವನ್ನು ಹೇಗೆ ಬಳಸಿ ಹಾಳುಗೆಡವಿದ್ದೇವೆಂದರೆ ಕೋಲಾರದಲ್ಲಿ ಅದಾಗಲೇ ಸಾವಿರದೈನೂರು ಅಡಿಯ ಆಳದಲ್ಲೂ ನೀರಿಲ್ಲದ ಸ್ಥಿತಿ ಮುಟ್ಟಿಯಾಗಿದೆ. ಕೃಷಿಗೆ ಬಿಡಿ, ಕುಡಿಯುವ ನೀರಿಗೂ ಅನೇಕ ಕಡೆ ಅದಾಗಲೇ ತತ್ವಾರವಾಗಿದೆ. ಒಂದು ಅಂದಾಜಿನ ಪ್ರಕಾರ ಇಡಿಯ ಭಾರತದ ಅಂತರ್ಜಲ ಮಟ್ಟ ಮೂಕ್ಕಾಲು ಭಾಗದಷ್ಟು ಮುಗಿದೇ ಹೋಗಿದೆ. ಮಳೆಯ ಕೊರತೆ ನೋಡಿದರೆ ಇನ್ನು ಹತ್ತು-ಹದಿನೈದು ವರ್ಷಗಳಲ್ಲಿ ಉಳಿದ ಕಾಲು ಭಾಗದಷ್ಟು ಅಂತರ್ಜಲವೂ ಚೊಕ್ಕವಾಗಲಿದೆ. ಮುಂದೇನು?

RTXFYGX

 

ಕಳೆದ ವರ್ಷದವರೆಗಿನ ಅಂಕಿ-ಅಂಶ ಮುಂದಿಟ್ಟುಕೊಂಡು ಕುಳಿತಿದ್ದೇನೆ. ಟ್ಯಾಂಕರುಗಳ ಮೂಲಕ ನೀರು ತಲುಪಿಸುವ ದೈನೇಸಿ ಸ್ಥಿತಿಗೆ ಉತ್ತರ ಕರ್ನಾಟಕದ 12 ಜಿಲ್ಲೆಗಳು ತಲುಪಿಯಾಗಿವೆ. ಅಲ್ಲಿನ ಹೆಣ್ಣುಮಕ್ಕಳ ಇಡಿಯ ದಿನ ನಲ್ಲಿಯೆದುರು ಸಾಲು ನಿಲ್ಲುವುದರಲ್ಲಿಯೇ ಕಳೆದು ಹೋಗುತ್ತಿದೆ. ಸ್ನಾನ-ಬಟ್ಟೆ ಒಗೆತ ಹೆಚ್ಚು ಕಡಿಮೆ ನಿರಂತರತೆ ಕಳೆದುಕೊಂಡಿದೆ. ನೀರಿನ ಕೊರತೆಯಿಂದಲೂ, ಗಡಸು ನೀರನ್ನು ಕುಡಿಯುವುದರಿಂದಲೂ ಜನ ರೋಗಿಷ್ಟರಾಗುತ್ತಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಚಾಮರಾಜನಗರದ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೆ ಧಾನ್ಯದ ಕೊರತೆ ಇರಲಿಲ್ಲ. ಅಡುಗೆ ಮಾಡಲು ನೀರೇ ಸಿಕ್ಕಿರಲಿಲ್ಲ ಅಷ್ಟೇ. ಜಲಾಶಯಗಳು ಒಣಗಿ ಹೋಗುವ ಸ್ಥಿತಿಯಲ್ಲಿರುವುದರಿಂದ, ಮುಂದಿರುವ ದಾರಿ ಒಂದೇ. ಕುಡಿಯಲಿಕ್ಕೆಂದು ಆ ನೀರನ್ನು ಕೊಟ್ಟು ಖಾಲಿ ಮಾಡಿ ಬಿಡುವುದು. ಆಮೇಲೆ ಆಕಾಶಕ್ಕೆ ಕಣ್ಣು-ಬಾಯಿ ನೆಟ್ಟು ಕುಳಿತುಕೊಳ್ಳುವುದು. ಮಳೆಗಾಗಿ ಕಾಯುತ್ತಿರುವುದು ಅಷ್ಟೇ.

ಕರ್ನಾಟಕದ ಈ ಸ್ಥಿತಿಗೂ ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿರುವುದು ಕಾರಣವೇ ಅಲ್ಲ. ನಾವೇ ಇವೆಲ್ಲದರ ಸೂತ್ರಧಾರರು. ರಾಗಿ, ಜೋಳ, ನವಣೆಯಂತಹ ಕಡಿಮೆ ನೀರಿನ ಬಳಕೆಯ ಬೆಳೆ ತೆಗೆಯುತ್ತಿದ್ದ ಕೃಷಿಕ ಈಗ ಲಾಭದಾಯಕ ಬೆಳೆಗೆ ಕೈ ಹಾಕಿದ್ದಾನೆ. ಅವನಿಗೆ ಹತ್ತಿ ಮತ್ತು ಕಬ್ಬಿನ ಮೇಲೆ ಕಣ್ಣು ಬಿದ್ದಿದೆ. ಕಬ್ಬಿನ ಬೆಳೆ ತೆಗೆಯುವ ಭೂ ಪ್ರಮಾಣ ಶೇಕಡಾ 100 ರಷ್ಟು ಹೆಚ್ಚಿದೆ. ಸುಮಾರು 2 ಲಕ್ಷ ಹೆಕ್ಟೇರಿನಿಂದ 4 ಲಕ್ಷ ಹೆಕ್ಟೇರಿಗೆ. ಬೆಳಗಾವಿ, ಬಾಗಲಕೋಟೆ, ಕೊಪ್ಪಳಗಳಲ್ಲಿ ಅಂತರ್ಜಲವನ್ನೂ ಬಸಿದು ಭೂಮಿಗೆ ಸುರಿದು ಕಬ್ಬು ಬೆಳೆಯುತ್ತಾರೆ. ಕುಡಿಯುವ ನೀರಿನ ಅಭಾವವಿರುವ ಬೀದರ್ನಲ್ಲೂ ಕಬ್ಬು ಬೆಳೆದು ರಾಜ್ಯದ ಹುಬ್ಬೇರುವಂತೆ ಮಾಡಲಾಗಿತ್ತು. ಕಬ್ಬು ಬೆಳೆಯೋದು ಸುಲಭ, ಕೆಲಸ ಕಡಿಮೆ ಮತ್ತು ಹಣ ಖಾತ್ರಿ ಎಂಬುದು ರೈತರ ಅಂಬೋಣ. ಹೀಗೆ ಬೆಳೆದ ಅಷ್ಟೂ ಕಬ್ಬನ್ನು ಸಕ್ಕರೆ ಕಾರ್ಖಾನೆಯ ಮಾಲೀಕರೇ ಖರೀದಿಸಬೇಕಿರುವುದರಿಂದ ಅವರು ಬೇಡವೆಂದರೆ ಬೆಲೆ ಪಾತಾಳಕ್ಕೆ, ರೈತರು ಬೀದಿಗೆ. ಬೆಂಬಲ ಬೆಲೆಯ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ, ಮತ್ತದೇ ರಾಜಕಾರಣಿಗಳ ಜೇಬಿಗೆ. ಒಂದು ವರ್ಷವಾದರೂ ಸರಿಯಾಗಿ ಮಳೆಯಾದರೆ ಸರಿ ಇಲ್ಲವಾದರೆ ಮತ್ತೆ ಅಂತರ್ಜಲವನ್ನು ಬಸಿಯುವ ಕೆಲಸ.

sugarcane

ಒಮ್ಮೆಯಾದರೂ ಭೂಮಿಯೊಳಗಿನ ನೀರಿನ ಸೆಲೆಯನ್ನು ಬ್ಯಾಂಕಿನಲ್ಲಿಟ್ಟಿರುವ ಠೇವಣಿಯಂತೆ ಭಾವಿಸಿದ್ದೇವಾ? ಬಡ್ಡಿಯಲ್ಲಿ ಬದುಕಬೇಕು, ಜೀವ ಹೋಗುತ್ತೆ ಎಂದಾಗ ಮಾತ್ರ ಬ್ಯಾಂಕಿನಿಂದ ಠೇವಣಿ ತೆಗೆಯಬೇಕು ಎನ್ನುವಂತೆ! ನಮ್ಮ ಪೂರ್ವಜರು ಕಾಪಿಟ್ಟ ನೀರಿನ ಠೇವಣಿ ಖಾಲಿಯಾದ ಮೇಲೆ ಆವರಿಸಲಿರುವ ಕ್ಷಾಮ ನಮ್ಮೆಲ್ಲರ ಶವಗಳ ಮೇಲೆ ರುದ್ರ ನರ್ತನ ನಡೆಸಿಯೇ ವಿಶ್ರಾಂತವಾಗೋದು! ನೀರುಳಿಸುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳನ್ನೇ ನಿಷೇಧಿಸಬೇಕಾದ ಸರ್ಕಾರ ಪ್ರತಿ ವರ್ಷ ಹೊಸ ಹೊಸ ಕಾರ್ಖಾನೆಗಳಿಗೆ ಪರವಾನಗಿ ಕೊಟ್ಟು ರೈತರನ್ನು ಕಬ್ಬು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಬಹುಶಃ ಈಗ ಅರ್ಥವಾಗಿರಬೇಕು. ಕಳೆದ ವಾರ ಯಾವ ಬ್ರಿಟೀಷರು ಭಾರತದಲ್ಲಿ ಕೃತಕ ಕ್ಷಾಮಕ್ಕೆ ಕಾರಣರಾದವರೆಂದು ವಿವರಿಸಿದ್ದೇನೋ ಅದೇ ಬ್ರಿಟೀಷರು ನಮ್ಮವರ ದೇಹ ಹೊಕ್ಕು ಇಂದೂ ಅದನ್ನೇ ಮಾಡುತ್ತಿದ್ದಾರೆ!

ಸರ್ಕಾರದ ನಿರ್ವಹಣೆಯ ರೀತಿಯೇ ಬೇರೆ. 2015 ರ ಸೆಪ್ಟೆಂಬರ್ನಲ್ಲಿ ಕೃಷಿಗೆ ನೀರು ಸರಬರಾಜು ಮಾಡುವುದಿಲ್ಲವೆಂದು ಸ್ಪಷ್ಟ ದನಿಯಲ್ಲಿ ಹೇಳಿತ್ತು. 2016 ರ ಮಾರ್ಚ್ನಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ಹೀಗಾಗಿ ಹೊಲ-ಗದ್ದೆಗಳಿಗೆ ನೀರಿ ಬಿಡಬಾರದು ಎಂದಿತ್ತು. ರೈತರಿಗೆ ವಿದ್ಯುತ್ ಕೊಟ್ಟರಷ್ಟೇ ಹೊಲ-ಗದ್ದೆಗಳಿಗೆ ನೀರು ಹರಿಯುವುದೆಂದು ಅರಿವಿದ್ದ ಸರ್ಕಾರ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ ನೀರು ಉಳಿಸಿತ್ತು!

ಕ್ಷಾಮದ ಸಮಸ್ಯೆ ಒಂದೆರಡಲ್ಲ. ಊಟವಿಲ್ಲದೇ ಉಪವಾಸವಿರಬಹುದು, ಕುಡಿಯಲು ನೀರೇ ಸಿಗದಿದ್ದರೆ ಏನು ಮಾಡೋದು? ಅದಾಗಲೇ ಮಲೆಮಹದೇಶ್ವರ ಬೆಟ್ಟದ ಮೇಲೆ ಸಾವಿರಾರು ಹಸುಗಳು ನೀರು-ಮೇವುಗಳಿಲ್ಲದೇ ನರಳುತ್ತಾ ಪ್ರಾಣ ಬಿಡುತ್ತಿವೆ. ಬಂಗಾಳದಲ್ಲಿ 1906 ರಲ್ಲಿ ಹೇಗಾಗಿತ್ತೋ ಹಾಗೆಯೇ ರೈತ ತನ್ನ ಗೋವುಗಳನ್ನು ಕಸಾಯಿ ಖಾನೆಗೆ ಕವಡೆ ಕಿಮ್ಮತ್ತಿಗೆ ಮಾರಿ ನಿಟ್ಟುಸಿರು ಬಿಡುತ್ತಿದ್ದಾನೆ. ಮೇವು ಒದಗಿಸುವ ಕುರಿತಂತೆ ಚಿಂತನೆ ನಡೆಸಬೇಕಿದ್ದ ಸರ್ಕಾರ ಕಸಾಯಿಖಾನೆಗಳಿಗೆ ಅನುಮತಿ ಕೊಟ್ಟು ರೈತನ ಹೆಗಲ ಮೇಲಿನ ಭಾರವನ್ನು ಇಳಿಸಿರುವ ಸಂತಸದಿಂದ ಬೀಗುತ್ತಿದೆ. ಬರಪೀಡಿತ ಕಲಬುರ್ಗಿ, ಬೀದರ್ಗಳಲ್ಲಿ ಸಕ್ಕರೆ ಕಾರ್ಖಾನೆಗೆ ಅನುಮತಿ ಕೊಡುವುದು ಎಷ್ಟು ತಪ್ಪೋ, ಕೃಷಿಕರೇ ಹೆಚ್ಚಿರುವ ಬೆಂಗಳೂರು ಗ್ರಾಮಾಂತರದಲ್ಲಿ ಕಸಾಯಿಖಾನೆಗೆ ಅನುಮತಿ ಕೊಡುವುದೂ ಅಷ್ಟೇ ತಪ್ಪು. ಸ್ವಲ್ಪವಾದರೂ ಸಾಮಾನ್ಯ ಜ್ಞಾನವಿಲ್ಲವಲ್ಲ ಈ ಜನಕ್ಕೆ!

drought (1)

ನೀರು ಜೀವಜಲ ಅನ್ನೋದು ಸುಮ್ಸುಮ್ನೆ ಅಲ್ಲ. ಅದನ್ನು ಕುಡಿದರೆ ಜೀವವುಳಿಯುತ್ತೆ ಅನ್ನೋದು ಒಂದಾದರೆ, ಭೂಮಿಗೂ ಜೀವಂತಿಕೆಯ ಕಳೆ ಇರುತ್ತೆ ಅನ್ನೋದು ಮತ್ತೊಂದು. ಭಾರತದ ಮೂಲ ಉದ್ಯೋಗ ಕೃಷಿ ನಂಬಿರೋದೇ ನೀರನ್ನು. ಜೊತೆಗೆ ನಮ್ಮ ನಿರುದ್ಯೋಗ ಸಮಸ್ಯೆಗೆ ಪರಿಹಾರ ಇರೋದೂ ಕೃಷಿಯಲ್ಲಿಯೇ. ಉತ್ತರ ಕರ್ನಾಟಕದ ಜನ ಗುಳೆ ಎದ್ದು ದಕ್ಷಿಣದತ್ತ ಬರುತ್ತಿರುವುದು ಏಕೆ ಗೊತ್ತೇನು? ಮಳೆಯ ಕೊರತೆಯಿಂದಾಗಿ ಕೃಷಿ ಕಾರ್ಯ ನಿಂತಿರುವುದರಿಂದ. ಅಲ್ಲಿಯೇ ಉಳಿದು ಸಾಲಗಾರನಾದ ರೈತ ಸಿರಿವಂತರ ಮರ್ಜಿಗೆ ಬಿದ್ದ. ರಾಜಕಾರಣಿಗಳ ಹಿಂದೆ ಅಲೆದಾಡುತ್ತ ಉಳಿದ. ತಮ್ಮನ್ನು ತಾವು ರೈತ ಹೋರಾಟಗಾರರೆಂದು ಕರೆದುಕೊಳ್ಳುವ ಅನೇಕರು ಕೃಷಿ ಮಾಡುತ್ತಲೇ ಇಲ್ಲ. ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರ ಮಾಡಿಕೊಂಡು ಪಟ್ಟಣಗಳಲ್ಲಿ ನೆಲೆನಿಂತುಬಿಟ್ಟಿದ್ದಾರೆ. ಹಣವಿದ್ದವರು ಹಳ್ಳಿ ಬಿಟ್ಟು ಪಟ್ಟಣಕ್ಕೆ ಬಂದು ಉದ್ಯೋಗಿಗಳಾಗಿಬಿಡುತ್ತಾರೆ ಸರಿ, ಇಲ್ಲವಾದವರು ಏನು ಮಾಡಬೇಕು? ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳಬೇಕು. 2015 ರ ಏಪ್ರಿಲ್ನಿಂದ ಡಿಸೆಂಬರ್ವರೆಗಿನ ಲೆಕ್ಕಾಚಾರದ ಪ್ರಕಾರ 915 ಜನ ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅತ್ಯಾಶ್ಚರ್ಯವೇನು ಗೊತ್ತೇ? ಮಂಡ್ಯ, ಮೈಸೂರು, ಹಾಸನ, ಬೆಳಗಾವಿಯಂತಹ ನೀರಾವರಿ ಇದ್ದ ಪ್ರದೇಶದಲ್ಲಿಯೇ ದೊಡ್ಡ ಸಂಖ್ಯೆಯ ಆತ್ಮಹತ್ಯೆಗಳು ದಾಖಲಾಗಿದ್ದು. ಅತ್ತ ಬದುಕಲೂ ಆಗದೇ ಇತ್ತ ಸಾಯಲೂ ಆಗದೆ ರೈತರೊಂದಷ್ಟು ಜನ ತಮ್ಮ ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹ ಮಾಡಿಸಿ ದೂರ ಪ್ರದೇಶಗಳಿಗೆ ವಲಸೆ ಹೋಗಿದ್ದು ಯಾದಗಿರಿಯಲ್ಲಿ ದಾಖಲಾಗಿದೆ!

 

ನೀರಿನ ನಿಭಾವಣೆಯಲ್ಲಿ ಕರ್ನಾಟಕವಷ್ಟೇ ಅಲ್ಲ. ಇಡಿಯ ಭಾರತ ಸೋತಿದೆ. ಒಂದು ಹೆಜ್ಜೆ ಮುಂದಿಟ್ಟು ಹೇಳಬೇಕೆಂದರೆ ದಕ್ಷಿಣ ಏಷಿಯಾದಲ್ಲಿಯೇ ನೀರ ಕುರಿತಂತೆ ಆತಂಕವಿದೆ. ನೀರಿನ ಕೊರತೆಯಿಂದ ದೇಶವೇ ಬಳಲುವಾಗ ಐಪಿಎಲ್ ಮ್ಯಾಚುಗಳನ್ನು ಆಡಿಸಲೆಂದು ಮೈದಾನಗಳಿಗೆ ಹರಿಸುವ ನೀರು ಕಂಡಾಗ ಹೊಟ್ಟೆ ಉರಿಯುತ್ತದೆ. ಒಂದು ಮ್ಯಾಚಿಗೆ ಕನಿಷ್ಠ 3 ಲಕ್ಷ ಲೀಟರ್ ನೀರನ್ನು ಮೈದಾನಕ್ಕೆರಚಬೇಕು. ಕನರ್ಾಟಕದಲ್ಲಿ ಹತ್ತು ಮ್ಯಾಚುಗಳನ್ನಾಡಿದರೂ 30 ಲಕ್ಷ ಲೀಟರ್ ನೀರು ವ್ಯರ್ಥವಾಗಿ ಹೋಯ್ತು. ಒಂದಿಡೀ ದಿನಕ್ಕೆ ಪಟ್ಟಣವೊಂದಕ್ಕೆ ಕುಡಿಯಲು ಸಾಕಾಗುಷ್ಟು ನೀರು ಅದು. ಐಪಿಎಲ್ ಅನ್ನು ಮಳೆಗಾಲದ ನಂತರಕ್ಕೆ ಮುಂದೂಡಿದರೆ ಗಂಟು ಹೋಗುತ್ತಾ?

741

ನೆನಪಿಡಿ. ನಾವು ಜ್ವಾಲಾಮುಖಿಯ ಮೇಲೆ ಕುಳಿತಿದ್ದೇವೆ. ಸಿಡಿಯುವ ದಿನ, ವಾರ ಗೊತ್ತಿಲ್ಲದಿರಬಹುದು. ಆದರೆ ಸದ್ಯಕ್ಕೇ ಸಿಡಿಯಲಿದೆ ಎಂಬ ಸತ್ಯವಂತೂ ತಿಳಿದಿದೆ. ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ನ ಅಧ್ಯಯನದ ಪ್ರಕಾರ 1997 ರಿಂದೀಚೆಗೆ ಭಾರತದಲ್ಲಿ ಕ್ಷಾಮಕ್ಕೆ ತುತ್ತಾಗಬಹುದಾದ ಪ್ರದೇಶಗಳ ಸಂಖ್ಯೆ ಶೇಕಡಾ 57ರಷ್ಟು ಏರಿಕೆ ಕಂಡಿದೆ. ದುರ್ದೈವವೆಂದರೆ ಇವ್ಯಾವುವೂ ಮಳೆಯ ಕೊರತೆಯಿಂದ ಆದದ್ದಲ್ಲ. ಎಲ್ಲೆಡೆ ಸರಾಸರಿಗೆ ಹೋಲಿಸಿದರೆ ಶೇಕಡಾ 12 ರಿಂದ 25 ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಇದು ಬರಗಾಲವೆಂದಾಗಲು ಕಾರಣವಾಗುವಷ್ಟು ಕೊರತೆಯಲ್ಲ. ನೀರನ್ನೂ ಸೂಕ್ತ ಪ್ರಮಾಣದಲ್ಲಿ ಉಳಿಸದೇ ಇದ್ದುದರಿಂದ; ಸೂಕ್ತ ಬಳಕೆಗೆ ಪ್ರೇರಣೆ ಕೊಡದೇ ಇದ್ದುದರಿಂದ ಆದ ಅನಾಹುತ. ನೆನಪಿಡಿ. ಬರಗಾಲಕ್ಕೆ ತುತ್ತಾದ ಭಾರತದ ಪ್ರದೇಶಗಳಲ್ಲಿ ಅರ್ಧದಷ್ಟು ಕೃಷಿ ಯೋಗ್ಯ ಭೂಮಿ ಉಳ್ಳಂಥವೇ. ಆಹಾರ ಸುರಕ್ಷತೆಯ ಕುರಿತಂತೆ ಪ್ರಧಾನಮಂತ್ರಿಯಿಂದ ಶುರು ಮಾಡಿ ಮುಖ್ಯಮಂತ್ರಿಯವರೆಗೆ ಎಲ್ಲರೂ ಮಾತನಾಡುತ್ತಾರಲ್ಲ 2020 ರ ವೇಳೆಗೆ ಪೌಷ್ಟಿಕ ಆಹಾರದ ದಾಸ್ತಾನು ಇರಬೇಕೆಂದರೆ ಸುಮಾರು ನೂರು ದಶಲಕ್ಷ ಟನ್ಗಳಷ್ಟು ಆಹಾರ ಧಾನ್ಯ ಉತ್ಪಾದನೆಯಾಗಿರಬೇಕು. ಇದನ್ನು ಉತ್ಪಾದಿಸಬಲ್ಲ ಅರ್ಧದಷ್ಟು ಭೂಮಿ ಅದಾಗಲೇ ಬರಗಾಲಪೀಡಿತವಾಗಿ ತತ್ತರಿಸಿದೆ. ಹಾಗಿದ್ದರೆ ಗುರಿ ಮುಟ್ಟೋದು ಹೇಗೆ?

ನಮ್ಮ ಪ್ರತಿನಿಧಿಗಳನೇಕರಿಗೆ ಈ ಸಮಸ್ಯೆಗಳ ಆಳ-ವಿಸ್ತಾರಗಳು ಅರ್ಥವೇ ಆಗುವುದಿಲ್ಲ. ಭಾರತವನ್ನು ಕೊನೆಯ ಪಕ್ಷ ಕರ್ನಾಟಕವನ್ನು ಕ್ಷಾಮ ಮುಕ್ತವಾಗಿಸಲು ನಮ್ಮದೇ ಬಲವಾದ ಪ್ರಯತ್ನ ಬೇಡವೇ? ಅದಕ್ಕೊಂದು ಸಮರ್ಥವಾಗಿ ಆಲೋಚಿಸಿದ ಯೋಜನೆ ಬೇಡವೇ? ಶಾಶ್ವತ ನೀರಾವರಿ ಯೋಜನೆ ಎಂದರೆ ನೇತ್ರಾವತಿ ನೀರನ್ನೊಯ್ದು ಕೋಲಾರಕ್ಕೆ ತಲುಪಿಸುತ್ತೇವೆನ್ನೋದು; ಮಹಾದಾಯಿಯನ್ನು ಎಳೆದು ತರುತ್ತೇವೆನ್ನೋದು. ಇವೆಲ್ಲ ಆಯಾ ಭಾಗಗಳ ಜನರ ಮೂಗಿಗೆ ತುಪ್ಪ ಸವರಿ ಓಟು ಗಳಿಸುವ ಚಿನ್ನದ ಮೊಟ್ಟೆಗಳಷ್ಟೇ. ಹೀಗೆ ನೀರು ಹರಿಸುವ ನೆಪದಲ್ಲಿ ಕೊಳವೆ ಪೈಪುಗಳನ್ನು ಭೂಮಿಯೊಳಕ್ಕೆ ಹುದುಗಿಸಲು ಮಾಡುವ ವೆಚ್ಚ, ಕಡಿಯುವ ಕಾಡು ಶಾಶ್ವತ ಬರಗಾಲಕ್ಕೆ ಆಹ್ವಾನ ಕೊಟ್ಟಂತೆ. ಗಂಗಾ-ಕಾವೇರಿ ಬೆಸೆಯುವ ಕನಸು ಅನೇಕರು ಕಾಣುತ್ತಾರಲ್ಲ ಇದೂ ಕೂಡ ಇದಕ್ಕಿಂತ ಭಿನ್ನವಲ್ಲ. ಇಂತಹ ಯೋಜನೆಗಳನ್ನು ಕಂಡಾಕ್ಷಣ ಪರಿಸರದ ಕಾಳಜಿ ಇರುವವರು ಉರಿದು ಬೀಳೋದು ಇದಕ್ಕಾಗಿಯೇ.

ಬೀಳುವ ಮಳೆ ಹರಿವನ್ನು ಉಳಿಸಿಟ್ಟುಕೊಂಡು, ಜಲಮೂಲಗಳನ್ನು ರಕ್ಷಿಸುವ ಪಣ ತೊಟ್ಟರೆ ಅದಕ್ಕಿಂತಲೂ ದೊಡ್ಡ ಕ್ಷಾಮ ನಿವಾರಣೆಯ ಯೋಜನೆಯೇ ಇಲ್ಲ. ಕಲ್ಯಾಣಿಗಳು ಕೆರೆಗಳನ್ನು ಹೂಳೆತ್ತಿದರೆ, ಅವುಗಳಿಗೆ ನೀರು ಬಂದು ಸೇರಿಕೊಳ್ಳುವ ಜಾಗವನ್ನು ತೆರೆದುಕೊಟ್ಟರೆ ಭವಿಷ್ಯಕ್ಕೆ ಬೇಕಾದಷ್ಟು ನೀರುಗಳಿಸಿ ಅಂತರ್ಜಲ ಮಟ್ಟವನ್ನು ಏರಿಸುವಲ್ಲಿ ಸಹಕಾರಿಯಾದೀತು. ಆದರೆ ಈ ಕೆಲಸಕ್ಕೆ ಮುಂದೆ ಬರುವವರು ಯಾರು ಹೇಳಿ. ಸರ್ಕಾರ ಮಾಡಬೇಕಾದ ಕೆಲಸವನ್ನು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕರ್ನಾಟಕ ಈಗ ಗಂಭೀರವಾಗಿ ಆಲೋಚಿಸಬೇಕಾದ ಹೊತ್ತು ಬಂದಿದೆ. ಶಾಶ್ವತ ನೀರಾವರಿಯ ಹೆಸರಲ್ಲಿ ಪ್ರತಿಯೊಬ್ಬರೂ ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿದಿದ್ದು ಸಾಕು. ಇನ್ನೇನಿದ್ದರೂ ರಾಜ್ಯಕ್ಕೆ ಬೇಕಾದ ಯೋಜನೆ ರೂಪಿಸಿ ಅದಕ್ಕೆ ಪೂರಕವಾದ ಕೆಲಸಗಳನ್ನು ಒಂದೊಂದಾಗಿ ಮಾಡುತ್ತಾ ನಡೆಯಬೇಕು. ನೀರಿನ ಕುರಿತಂತೆ ಅಧ್ಯಯನ, ಸಂಶೋಧನೆ, ಭೂಮಟ್ಟದ ಕೆಲಸಗಳನ್ನು ಮಾಡಿದ ಬುದ್ಧಿವಂತರೆಲ್ಲ ಒಂದೆಡೆ ಸೇರಿ ಕರ್ನಾಟಕವನ್ನು ಬರಗಾಲ ಮುಕ್ತ ರಾಜ್ಯವಾಗಿ ಮಾಡುವಲ್ಲಿ ತಂತಮ್ಮ ಆಲೋಚನೆಗಳನ್ನು ಧಾರೆಯೆರಯಬೇಕು. ಸರ್ಕಾರವು ಸರ್ಕಾರೇತರ ಸಂಸ್ಥೆ ಮತ್ತು ಸಾರ್ವಜನಿಕರನ್ನು ಬಳಸಿಕೊಂಡು ಆ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಒಪ್ಪಿಸಬೇಕು.

ಓಹ್! ಕೆಲಸ ಬಹಳಷ್ಟಿವೆ. ಅದಾಗಲೇ 160 ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಿಯಾಗಿದೆ. ನಷ್ಟವನ್ನು ಸರಿತೂಗಿಸಲು ಪರಿಹಾರಕ್ಕಾಗಿ ಕೇಂದ್ರದಿಂದ ಸಾವಿರಾರು ಕೋಟಿ ಬೇಡಲಾಗಿದೆ. ಪರಿಹಾರ ನೆಪವಷ್ಟೇ. ಅದು ಫಲಾನುಭವಿಗಳನ್ನು ತಲುಪುವ ವೇಳೆಗೆ ಆತ ಮುಂದಿನ ಬೆಳೆಗೆ ಸಜ್ಜಾಗುತ್ತಾನೆ. ಅಲ್ಲಿಗೆ ನಮ್ಮ ತೆರಿಗೆ ಹಣವೂ ವ್ಯರ್ಥ, ನೀರಿಗೂ ಹಾಹಾಕಾರ. ಕಳೆದೊಂದು ದಶಕದಲ್ಲಿ ನೀರಿನ ಸಮಸ್ಯೆಯ ಪರಿಹಾರಕ್ಕೆ ಸುಮಾರು ಮೂರು ಲಕ್ಷ ಕೋಟಿ ರೂಪಾಯಿ ವ್ಯಯಿಸಿದ್ದೇವೆ. ಪರಿಹಾರ ಮಾತ್ರ ಶೂನ್ಯ. ಕಳೆದೊಂದು ದಶಕದಲ್ಲಿ ಕೃಷಿಯೋಗ್ಯ ಭೂಮಿಯನ್ನು ಶೇಕಡಾ ಒಂದರಷ್ಟು ವೃದ್ಧಿಸಲು ಸಾಧ್ಯವಾಗಲಿಲ್ಲ ನಮಗೆ! ಮತ್ತೆ ಈ ತಂತ್ರಜ್ಞಾನ, ಆವಿಷ್ಕಾರ, ಸಂಶೋಧನೆ ಈ ಎಲ್ಲಾ ಪದಗಳಿಗೂ ಬೆಲೆ ಎಲ್ಲಿ ಉಳಿಯಿತು?

ನೀರಿನ ಕೊರತೆಗೆ ಪರಿಹಾರ ನಮ್ಮಲ್ಲಿಯೇ ಇದೆ. ಜಾಗೃತರಾಗೋಣ ಅಷ್ಟೇ.

One thought on “ಶಾಶ್ವತ ಬರಪ್ರದೇಶದ ಘೋಷಣೆಗೆ ಸಿದ್ಧರಾಗಿ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s