ಮೋದಿ ಮತ್ತು ಯೋಗಿ ಏಕೆ ಹೀಗೆ?

ಮೋದಿ ಮತ್ತು ಯೋಗಿ ಏಕೆ ಹೀಗೆ?

ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೂ ಪಶ್ಚಿಮವನ್ನೇ ನೋಡುತ್ತ ಸ್ವಂತ ಶಕ್ತಿಯನ್ನು ಮರೆತು ಕುಳಿತಿದ್ದೇವೆ. ನಮ್ಮೆಲ್ಲರನ್ನೂ ಬೆಸೆಯಬಲ್ಲ ಪರಿಹಾರ ಸೂತ್ರವನ್ನು ಪ್ರಾಚೀನ ಭಾರತದ ಪರಂಪರೆಯಲ್ಲಿ ಹುಡುಕದೇ ಹೊಸದನ್ನೇನೋ ಸೃಷ್ಟಿಸಿಬಿಡುವ ತವಕದಲ್ಲಿದ್ದೇವೆ. ನೆನಪಿರಲಿ. ಹೊಸದರ ಸೃಷ್ಟಿಯೂ ಹಳೆಯ ಅನುಭವದ ಆಧಾರದ ಮೇಲೆಯೇ ಆಗಿರಬೇಕೇ ಹೊರತು ಸೂತ್ರವಿಲ್ಲದ ಗಾಳಿಪಟವಾದರೆ ಅದರ ಒಡೆತನ ಯಾರಿಗೂ ಇಲ್ಲ. ನರೇಂದ್ರ ಮೋದಿಯಾಗಲಿ, ಯೋಗಿ ಆದಿತ್ಯನಾಥರಾಗಲೀ ಇದ್ದಕ್ಕಿದ್ದಂತೆ ಕೋಟ್ಯಂತರ ಜನರ ಹೃದಯ ತಟ್ಟಿದ್ದು ಏಕೆಂದು ಈಗ ಅರ್ಥವಾಗಿರಬೇಕಲ್ಲ. ಅವರು ರಾಮಮಂದಿರದ ಮಾತನಾಡಿದಾಗ, ಗೋಪ್ರೇಮದ ಚಿಂತನೆ ಮುಂದಿಟ್ಟಾಗ ಸುಪ್ತವಾಗಿದ್ದ ಭಾರತೀಯರ ಭಾವನೆಗಳನ್ನು ಒಮ್ಮೆ ಮೀಟಿದಂತಾಗಿದ್ದು ಏಕೆ ಗೊತ್ತೇ? ಸಮಸ್ಯೆಗೆ ಪರಿಹಾರವನ್ನು ಅವರು ಅರಸಿದ್ದು ಭಾರತದ ಪರಂಪರೆಯಲ್ಲಿಯೇ.

‘ಭಾರತಕ್ಕೊಂದು ಮರುಹುಟ್ಟು ಅಗತ್ಯವಿದೆಯೇ? ಹಾಗಿದ್ದರೆ ಅದು ನಮಗೆ ಮಾತ್ರವೋ ಅಥವಾ ಅಮೇರಿಕಾ, ಜರ್ಮನಿ, ಫ್ರಾನ್ಸ್ಗಳಿಗೂ ಮರುಹುಟ್ಟು ಬೇಕಾಗಿದೆಯೋ? ಭಾರತ ತನ್ನ ತಾನು ಶುದ್ಧಿಗೊಳಿಸಿಕೊಂಡು, ದೋಷವಿಲ್ಲದ ಪುನರ್ಜನ್ಮವೊಂದನ್ನು ಪಡೆಯಬೇಕೆಂದು ನಾವು ಕಲ್ಪಿಸುವ ರೀತಿಯನ್ನು ಇಂಗ್ಲೆಂಡು ತನಗೆ ತಾನು ಎಂದೂ ಆಶಿಸಲಾರದು. ಹಾಗಿದ್ದ ಮೇಲೆ ನಾವು ಇಂಗ್ಲೆಂಡಿಗಿಂತ ಕೀಳಾದವರೆಂದು ಭಾವಿಸುತ್ತೀರೇನು?’ ನಿವೇದಿತಾ 1910 ರಲ್ಲಿ ಕರ್ಮಯೋಗಿನ್ ಪತ್ರಿಕೆಗೆ ಬರೆದ ಲೇಖನದಲ್ಲಿ ಕೇಳಿದ ಪ್ರಶ್ನೆಯಿದು.
‘ಒಂದು ಕಾಲದಲ್ಲಿ ಇಂಗ್ಲೇಂಡಿನಲ್ಲಿ ವ್ಯಾಪಕವಾಗಿದ್ದ ರಾಜಕೀಯ ವ್ಯವಸ್ಥೆ, ಶ್ರಮಿಕ ವರ್ಗದ ಸಮಸ್ಯೆ, ಯುದ್ಧದ ಮೇಲೆ ಯುದ್ಧಗಳು ಇವೆಲ್ಲವನ್ನೂ ಕಂಡಾಗ ಆ ರಾಷ್ಟ್ರಕ್ಕೂ ಮರುಹುಟ್ಟು ಬೇಕೆಂದು ಜನ ಭಾವಿಸಿದ್ದರಲ್ಲಿ ಅಚ್ಚರಿಯಿಲ್ಲ. ಆದರೆ ಅವರ ದೃಷ್ಟಿಯಲ್ಲಿ ಆ ಪದದ ಅರ್ಥ ಇಂಗ್ಲೆಂಡಿನ ನೈಜ ಶಕ್ತಿ ಜಾಗೃತವಾಗುವುದು ಎಂದೇ ಆಗಿತ್ತು. ಹೀಗಾಗಿ ಇಂಗ್ಲೆಂಡು ಮತ್ತೆ ಆಳುವ ರಾಷ್ಟ್ರವಾಗಿ ಬಲಾಢ್ಯವಾಗಿ ನಿಂತಾಗ ಭಾರತದ ಬುದ್ಧಿಜೀವಿಗಳು ಆಶ್ಚರ್ಯದಿಂದ ‘ಹಳೆಯ ಇಂಗ್ಲೆಂಡು ಮರುಕಳಿಸಿದೆ’ ಎಂದು ಚೀರಿದ್ದರು. ಅಂದರೆ ಭಾರತಕ್ಕಾದರೆ ಹಳೆಯದ್ದನ್ನೆಲ್ಲ ಕಡಿದುಕೊಂಡು ಅದರ ಸೋಂಕೂ ಇಲ್ಲದ ಮರುಹುಟ್ಟು ಬೇಕು, ಇಂಗ್ಲೆಂಡಿಗೆ ಮಾತ್ರ ಪ್ರಾಚೀನವಾದುದು ಮತ್ತೆ ಮೈದೋರಬೇಕು!’ ಇದು ನ್ಯಾಯವೇ? ನಿವೇದಿತಾ ಚರ್ಚಿಸುವ ಈ ಸಂಗತಿಗಳು ಭಾರತದ ಬುದ್ಧಿಜೀವಿಗಳ ಬಂಡವಾಳವನ್ನು ಬಯಲಿಗೆಳೆಯುವಂಥದ್ದು. ಅಲುಗಾಡಿಸಿಬಿಡುವಂಥದ್ದು.
ಭಾರತೀಯರ ದೊಡ್ಡ ಸಮಸ್ಯೆಯೇ ಕೀಳರಿಮೆಯದ್ದು. ವಿವೇಕಾನಂದರು ಹೇಳುವ ಮಾತು ನೂರಕ್ಕೆ ನೂರು ಸತ್ಯ. ‘ಅಮೇರಿಕದವನೊಬ್ಬ ಎದೆ ತಟ್ಟಿ ಹೇಳುತ್ತಾನೆ, ನಾನು ಅಮೇರಿಕನ್ ಹೀಗಾಗಿ ಏನು ಬೇಕಾದರೂ ಸಾಧಿಸಬಲ್ಲೆ’ ಇದೇ ಮಾತನ್ನು ನಮ್ಮಲ್ಲಿ ಯಾರಿಗಾದರೂ ಕೇಳಿದರೆ ‘ನಾನು ಭಾರತೀಯನಾದುದರಿಂದಲೇ ನನ್ನಿಂದ ಯಾವ ಸಾಧನೆಯೂ ಆಗಲಾರದು’ ಎಂದು ನೊಂದುಕೊಳ್ಳುತ್ತೇವೆ. ಈ ದೇಶದಲ್ಲಿ ಸೂಕ್ತ ಶಿಕ್ಷಣ ಪದ್ಧತಿಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಸಂಶೋಧನೆಗೆ ಬೇಕಾದ ಪೂರಕ ವ್ಯವಸ್ಥೆಗಳಿಲ್ಲ, ಇದರೊಟ್ಟಿಗೆ ಕೊಳೆತು ಹೋದ ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಪದ್ಧತಿ. ಅಬ್ಬಬ್ಬ ನನ್ನ ಬೆಳವಣಿಗೆಗೆ ಅಡ್ಡಗಾಲಿಡಲು ಎಷ್ಟೊಂದು ವಿಕಟ ಪರಿಸ್ಥಿತಿಗಳು ಅಂತಲೇ ಪ್ರತಿಯೊಬ್ಬರೂ ಹಲುಬುತ್ತಲೇ ಇರುತ್ತೇವೆ. ಇದು ಇಂದಿನ ದಿನ ಹೆಗಲೇರಿದ ರೋಗವಲ್ಲ. ಬ್ರಿಟೀಷರ ಆಳ್ವಿಕೆಯ ಕಾಲಕ್ಕೇ ನಮ್ಮನ್ನು ಆವರಿಸಿಕೊಂಡಿದ್ದ ಸಮಸ್ಯೆ. ನಾವು ಈ ಸಮಸ್ಯೆಯನ್ನು ಕೊಡವಿಕೊಂಡೇಳುವ ಪ್ರಯತ್ನ ಯಾವಾಗಲೂ ಮಾಡಲೇ ಇಲ್ಲ. ಆಳುವವರು ತುಳಿದಿಟ್ಟುಕೊಂಡಿದ್ದ ಜಾಗದಲ್ಲಿಯೇ ಆನಂದವನ್ನು ಅರಸಿ ನೆಮ್ಮದಿಯಿಂದ ಬದುಕಿ ಬಿಟ್ಟೆವು. ಈ ನೆಮ್ಮದಿಯನ್ನು ಕಲಕುವ ವಾತಾವರಣವನ್ನು ನಿಮರ್ಿಸುವ ಪ್ರಯತ್ನವೇ ಕ್ರಾಂತಿಯೆನಿಸಿಕೊಂಡಿತು. ತಿಲಕರು, ಗಾಂಧೀಜಿ, ಭಗತ್, ಸುಭಾಷ್ರೆಲ್ಲ ಮಾಡಿದ್ದು ಇದನ್ನೇ ಅಲ್ಲವೇನು? ಸ್ವಾತಂತ್ರ್ಯಾನಂತರ ಇಂತಹ ಒಂದು ಕಲ್ಪಿತ ನೆಮ್ಮದಿ ಕೇಂದ್ರದಿಂದ ನಮ್ಮನ್ನು ಹೊರತರುವ ಪ್ರಯತ್ನಕ್ಕೆ 70 ದೀರ್ಘ ವರ್ಷಗಳು ತಾಕಿದವೆಂಬುದೇ ದುರಂತ.
ಬಿಡಿ. ಬ್ರಿಟೀಷರು ಒಂದು ರಾಷ್ಟ್ರವಾಗಿ ನಿರ್ಮಿತಗೊಂಡಿದ್ದರ ಹಿಂದೆಯೂ ಒಂದು ಸೂತ್ರವಿದೆ. ಅದನ್ನು ನಿವೇದಿತಾ ಅರ್ಥವತ್ತಾಗಿ ವಿವರಿಸುತ್ತಾಳೆ. ಯಂತ್ರಗಳ ಆವಿಷ್ಕಾರದ ನಂತರ ವೈಯಕ್ತಿಕ ಕೌಶಲಗಳನ್ನೆಲ್ಲ ಬದಿಗಿಟ್ಟು ಪ್ರತಿಯೊಬ್ಬ ವ್ಯಕ್ತಿ ಗುಂಪಾಗಿ ಬದುಕಲೇಬೇಕಾಯ್ತು. ಆಗ ಅವನಿಗೆ ಒಗ್ಗಟ್ಟಿನ ಸೌಂದರ್ಯ ಗೋಚರಿಸಿ ಶೋಷಕರನ್ನು ಎದುರಿಸಿ ನಿಂತ. ಜಮೀನ್ದಾರರು, ಅಧಿಕಾರಿಗಳು, ಸೇನಾಪತಿಗಳು, ಪಾದ್ರಿಗಳನ್ನು ಪ್ರಶ್ನಿಸಲಾರಂಭಿಸಿದ. ವೈಯಕ್ತಿಕ ನೆಲೆಕಟ್ಟಿನಲ್ಲಿ ಸಮರ್ಥನೆನಿಸಿದ್ದ ಇಂಗ್ಲೆಂಡಿಗ ಈಗ ರಾಷ್ಟ್ರವಾದ. ಮಾನವನನ್ನು ಅರ್ಥೈಸಿಕೊಳ್ಳುವ ಅಪರೂಪದ ಗುಣ ಅವನಿಗೀಗ ಸಿದ್ಧಿಸಿತು. ಆಲೋಚನೆ, ಭಾವನೆ, ಕೃತಿ ಇವುಗಳಲ್ಲೆಲ್ಲಾ ಒಬ್ಬ ಆಂಗ್ಲೇಯ ಥೇಟು ಮತ್ತೊಬ್ಬನಂತೆಯೇ ವ್ಯವಹರಿಸೋದು ಈ ಕಾರಣದಿಂದಾಗಿಯೇ. ಅಚ್ಚರಿಯೆಂದರೆ ಒಬ್ಬನಿಗೆ ಏನಾದರೂ ಬೇಕೆನಿಸಿದರೆ ಮತ್ತೊಬ್ಬನಿಗೂ ಅದು ಬೇಕೆನಿಸುತ್ತದೆ. ಒಳ್ಳೆಯದಕ್ಕಾಗಲಿ, ಕೆಡುಕಿಗೇ ಆಗಲಿ ಅವರು ಜೊತೆಗೇ ಸಾಗುತ್ತಾರೆ. ಹೀಗಾಗಿಯೇ ದಕ್ಷಿಣ ಆಫ್ರಿಕಾದೊಂದಿಗೆ ಸೋಲುಗಳ ಮೇಲೆ ಸೋಲನ್ನೇ ಅನುಭವಿಸಿದಾಗಲೂ ಅವರು ಕದನ ನಿಲ್ಲಿಸಲಿಲ್ಲ. ಹಲ್ಲು ಕಚ್ಚಿ ಗರ್ಜಿಸುತ್ತ ಮುನ್ನಡೆದರು. ಹಾಗಂತ ಭಾರತಕ್ಕೂ ಇಂಗ್ಲೆಂಡಿಗೂ ಹೋಲಿಕೆಯಿದೆಯಾ? ಖಂಡಿತ ಇಲ್ಲ. ಇಂಗ್ಲೆಂಡು ಜಪಾನಿಗಿಂತ ಸರಳವಾದುದು. ಅಲ್ಲಿ ಜನರನ್ನು ಒಡೆಯಬಲ್ಲ ಸಂಗತಿಗಳಾದ ಭಾಷೆ, ಜನಾಂಗ, ಬುಡಕಟ್ಟು, ಸಂಪ್ರದಾಯ ಯಾವುದೂ ಬೇರೆ ಬೇರೆಯಾಗಿಲ್ಲ. ಸ್ವಲ್ಪ ಭಿನ್ನವೆನಿಸಿದ ಐರಿಷ್ ಜನಾಂಗವನ್ನು ಸಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಭಾರತವಾದರೋ ವಿಸ್ತಾರವಾಗಿದೆ. ಅನೇಕ ಭಾಷೆಗಳನ್ನು, ಸಂಪ್ರದಾಯಗಳನ್ನು, ಜಾತಿಗಳನ್ನು ಅಡಗಿಸಿಕೊಂಡಿದೆ. ಇವುಗಳ ನಡುವೆ ಸೂತ್ರವಾಗಿದ್ದ ಏಕತೆಯ ಆದರ್ಶಗಳನ್ನು ಮಾತ್ರ ಮರೆತು ಕುಂತಿದೆ. ಹೀಗಾಗಿ ಭಾರತ ಮರುಹುಟ್ಟು ಪಡೆಯಬೇಕಿಲ್ಲ, ಬದಲಿಗೆ ಹಳೆಯದನ್ನು ನೆನಪಿಸಿಕೊಂಡು ತನ್ನ ತಾನು ಮತ್ತೆ ಸಂಘಟಿಸಿಕೊಳ್ಳಬೇಕಿದೆ ಎನ್ನುತ್ತಾಳೆ ನಿವೇದಿತಾ.

roots
ಹೌದಲ್ಲವೇ? ಕಳೆದುಕೊಂಡಿರುವ ಏಕತೆಯ ಸೂತ್ರವನ್ನು ಮತ್ತೆ ಹುಡುಕಿಕೊಂಡರೆ ಸಾಕು. ಯಾವುದು ನಮ್ಮನ್ನು ಚೂರು ಚೂರಾಗಿ ಒಡೆಯಲು ಮುಖ್ಯ ಕಾರಣವೋ ಅದೇ ನಮ್ಮನ್ನು ಮತ್ತೆ ಒಗ್ಗೂಡಿಸಲು ಸಾಕಾದೀತು. ಹಾಗಂತ ಈ ಸೂತ್ರಕ್ಕಾಗಿ ವಿದೇಶದಲ್ಲೆಲ್ಲೋ ಹುಡುಕಾಡಿದರೆ ಉಪಯೋಗವಿಲ್ಲ. ಅದಕ್ಕೆ ಭಾರತವನ್ನೇ ಸೂಕ್ಷ್ಮವಾಗಿ ಅರಸಬೇಕು. ‘ವಿದೇಶದಿಂದ ಬಂದ ಚಿಂತನೆಗಳು ನಮ್ಮಲ್ಲಿ ವೈಚಾರಿಕ ಅಜೀರ್ಣವನ್ನುಂಟುಮಾಡುತ್ತದೆ. ನಾವು ನಮ್ಮ ಚಿಂತನೆಗಳ ಕಂತೆಗಳೊಳಗಿಂದಲೇ ನಮ್ಮ ಸಮಸ್ಯೆಗೆ ಪರಿಹಾರ ಹುಡುಕಿ ಇತರ ರಾಷ್ಟ್ರಗಳ ಸಮ ಸಮಕ್ಕೆ ನಿಲ್ಲುವಂತಾಗಬೇಕು. ಆಂಗ್ಲೇಯನೊಬ್ಬ ತನ್ನ ರಾಷ್ಟ್ರವನ್ನು ಅಖಂಡವಾಗಿ ಪ್ರೀತಿಸುತ್ತಾನೆ. ಅದರಿಂದ ನಾವು ಕಲಿಯಬೇಕಾದ್ದೇನು? ಅವನಷ್ಟೇ ಇಂಗ್ಲೇಂಡನ್ನು ನಾವೂ ಪ್ರೀತಿಸಿಬಿಡುವುದೇನು? ಅದು ಮಂಗನಂತೆ ಮಾಡುವ ಅನುಸರಣೆಯಾದೀತು. ನಾವು ಅವನ ಇಂಗ್ಲೆಂಡಿನ ಪ್ರೇಮಕ್ಕೆ ಸರಿಸಮವಾದ, ಅಖಂಡ, ಪವಿತ್ರ ಮತ್ತು ಜ್ಞಾನಯುಕ್ತವಾದ ಪ್ರೀತಿಯನ್ನು ಭಾರತಕ್ಕೆ ತೋರಬೇಕು. ಅವನು ತನ್ನ ರಾಷ್ಟ್ರ ಮತ್ತು ರಾಷ್ಟ್ರವಾಸಿಗಳನ್ನು ಪ್ರತಿಯೊಂದು ಚಟುವಟಿಕೆಯ ಕೇಂದ್ರವಾಗುವಂತೆ ಮಾಡುತ್ತಾನಲ್ಲ ಹಾಗೆಯೇ ನಾವು ನಮ್ಮೆಲ್ಲ ಆಸೆ-ಆಕಾಂಕ್ಷೆಗಳು, ಗೌರವ-ಘನತೆಗಳ ಕೇಂದ್ರವಾಗಿ ಭಾರತವನ್ನೂ, ಭಾರತೀಯರನ್ನೂ ನಿಲ್ಲಿಸುವಂತಾಗಬೇಕು. ನಮ್ಮ ರಾಷ್ಟ್ರೀಯ ಉದ್ದೇಶವನ್ನು ನಾವು ಅರ್ಥೈಸಿಕೊಂಡು ಅದನ್ನೇ ಎಲ್ಲರೂ ಆಲೋಚಿಸುವಂತೆ ಮಾಡಬೇಕು’ ಎಂಬುದು ನಿವೇದಿತಾ ಹೇಳುವ ಪರಿಹಾರ.
ಆಕೆ ಯೂರೋಪನ್ನು ವಿಶೇಷವಾಗಿ ಇಂಗ್ಲೆಂಡನ್ನು ಗಮನದಲ್ಲಿರಿಸಿಕೊಂಡು ಹೇಳಿದ ಮಾತು ಇದಾದರೂ ಇಂದಿಗೂ ನಮಗೆ ಸೂಕ್ತವಾಗಿ ಹೋಲುತ್ತದೆ. ಪ್ರತಿಯೊಂದು ಸಮಸ್ಯೆಯ ಪರಿಹಾರಕ್ಕೂ ಪಶ್ಚಿಮವನ್ನೇ ನೋಡುತ್ತ ಸ್ವಂತ ಶಕ್ತಿಯನ್ನು ಮರೆತು ಕುಳಿತಿದ್ದೇವೆ. ನಮ್ಮೆಲ್ಲರನ್ನೂ ಬೆಸೆಯಬಲ್ಲ ಪರಿಹಾರ ಸೂತ್ರವನ್ನು ಪ್ರಾಚೀನ ಭಾರತದ ಪರಂಪರೆಯಲ್ಲಿ ಹುಡುಕದೇ ಹೊಸದನ್ನೇನೋ ಸೃಷ್ಟಿಸಿಬಿಡುವ ತವಕದಲ್ಲಿದ್ದೇವೆ. ನೆನಪಿರಲಿ. ಹೊಸದರ ಸೃಷ್ಟಿಯೂ ಹಳೆಯ ಅನುಭವದ ಆಧಾರದ ಮೇಲೆಯೇ ಆಗಿರಬೇಕೇ ಹೊರತು ಸೂತ್ರವಿಲ್ಲದ ಗಾಳಿಪಟವಾದರೆ ಅದರ ಒಡೆತನ ಯಾರಿಗೂ ಇಲ್ಲ. ನರೇಂದ್ರ ಮೋದಿಯಾಗಲಿ, ಯೋಗಿ ಆದಿತ್ಯನಾಥರಾಗಲೀ ಇದ್ದಕ್ಕಿದ್ದಂತೆ ಕೋಟ್ಯಂತರ ಜನರ ಹೃದಯ ತಟ್ಟಿದ್ದು ಏಕೆಂದು ಈಗ ಅರ್ಥವಾಗಿರಬೇಕಲ್ಲ. ಅವರು ರಾಮಮಂದಿರದ ಮಾತನಾಡಿದಾಗ, ಗೋಪ್ರೇಮದ ಚಿಂತನೆ ಮುಂದಿಟ್ಟಾಗ ಸುಪ್ತವಾಗಿದ್ದ ಭಾರತೀಯರ ಭಾವನೆಗಳನ್ನು ಒಮ್ಮೆ ಮೀಟಿದಂತಾಗಿದ್ದು ಏಕೆ ಗೊತ್ತೇ? ಸಮಸ್ಯೆಗೆ ಪರಿಹಾರವನ್ನು ಅವರು ಅರಸಿದ್ದು ಭಾರತದ ಪರಂಪರೆಯಲ್ಲಿಯೇ. ರಾಮ-ಗೋವು ಭಾರತವನ್ನು ಜಾತಿ-ಮತ-ಪಂಥಗಳ ಭೇದವಿಲ್ಲದೇ ಬೆಸೆಯುತ್ತವೆಂದು ಅವರಿಗೆ ಗೊತ್ತಿತ್ತು. ಜಾತಿ-ಜಾತಿಗಳ ನಡುವಿನ ಕಾದಾಟ ತಡೆಯಲು ಪರಿಹಾರ ನಡುವಿನ ಗೋಡೆಯನ್ನು ಗಟ್ಟಿಗೊಳಿಸಿ ಎತ್ತರಕ್ಕೇರಿಸುವುದಲ್ಲ ಬದಲಿಗೆ ಆತ್ಮವಿಶ್ವಾಸ ವೃದ್ಧಿಸಿ ತಮ್ಮ ಹಿರಿಯರ ಗೌರವ ಹೆಚ್ಚಿಸುವ ಭಾವನೆಯನ್ನು ಸಾಮಾನ್ಯರಲ್ಲೂ ತುಂಬುವುದು ಮಾತ್ರವೇ ಉತ್ತರ. ತನ್ನ ಬಳಿಗೆ ಬಂದ ಜನರ ಕುಳ್ಳಿರಿಸಿ ತಾನು ನಿಂತೇ ಮಾತಾಡಿ ಕಳಿಸುವ ಮುಖ್ಯಮಂತ್ರಿ, ಬರೆದ ಒಂದು ಸಾಮಾನ್ಯ ಪತ್ರಕ್ಕೂ ಉತ್ತರಿಸುವ ಪ್ರಧಾನಮಂತ್ರಿ ಜನಸಾಮಾನ್ಯರ ಅಂತಃಶಕ್ತಿಯನ್ನು ಅತೀವ ಗೌರವದಿಂದಲೇ ಬಡಿದೆಬ್ಬಿಸಿಬಿಡುತ್ತಾರೆ. ಇವೆಲ್ಲಾ ಭಾರತೀಯ ಪರಿಹಾರಗಳು!
ಎಲ್ಲಾ ಬಿಡಿ. ಪ್ರಧಾನಿ ನರೇಂದ್ರಮೋದಿಯವರು ವಿಶೇಷ ಸಂದರ್ಭಗಳಲ್ಲಿ ತಾಯಿಯ ಬಳಿ ಹೋಗಿ ಆಕೆಯ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವುದೂ ಜನರ ಮನಸನ್ನು ಹೇಗೆ ಕಲಕಿ ಬಿಡುತ್ತೆಂದರೆ ಪ್ರತಿಯೊಬ್ಬರೂ ಅದರಲ್ಲಿ ಭಾರತದ ಅನೂಚಾನ ಪರಂಪರೆಯ ವೈಭವವನ್ನು ಕಾಣುತ್ತಾರೆ. ಅದು ಮತ್ತೊಮ್ಮೆ ಬೆಳಗುತ್ತಿದೆಯೆಂಬ ಭಾವದಿಂದಲೇ ಸ್ಫೂರ್ತಿ ಪಡೆಯುತ್ತಾರೆ. ಭಾರತ ಮತ್ತೆ ತನ್ನ ತಾನು ಸಂಘಟಿಸಿಕೊಳ್ಳುವುದೆಂದರೆ ಇದೇ. ಇದನ್ನೇ ನಿವೇದಿತಾ ನೂರ ಹತ್ತು ವರ್ಷಗಳ ಹಿಂದೆ ಹೇಳಿದ್ದು.

vajrayudha
ಎಲ್ಲಾ ಸರಿ. ಈ ರೀತಿಯ ಸಾಧನೆ ಮೋದಿ-ಯೋಗಿಯರಿಗೆ ಮಾತ್ರವೇಕೆ? ನಿವೇದಿತೆಯೇ ಹೇಳುತ್ತಾಳೆ ‘ನಿಸ್ವಾರ್ಥಿಯಾದ ಮನುಷ್ಯನೇ ವಜ್ರಾಯುಧದಂತೆ ಬಲಾಢ್ಯನಾಗಿರುತ್ತಾನೆ’. ಸ್ವಾರ್ಥ ನಮ್ಮ ಶಕ್ತಿಯನ್ನು ಉಡುಗಿಸಿಬಿಡುತ್ತದೆ. ವಜ್ರಾಯುಧದ ಉಗಮದ ಕಥೆಂ ಇದನ್ನೇ ಹೇಳುತ್ತದೆ. ಬಲು ಹಿಂದೆ, ದೇವತೆಗಳು ರಾಕ್ಷಸರ ನಾಶಕ್ಕೆಂದು ವಿಶೇಷ ಅಸ್ತ್ರ ಹುಡುಕುತ್ತಿದ್ದರಂತೆ. ಶಸ್ತ್ರ ತಯಾರಿಕೆಯವ ಯಾರಾದರೂ ತನ್ನ ದೇಹದ ಮೂಳೆಗಳನ್ನೇ ದಾನವಾಗಿ ಕೊಟ್ಟರೆ ಅದರಿಂದ ಮಾಡಿದ ಖಡ್ಗ ಅಜೇಯವಾಗುವುದು ಎಂದನಂತೆ. ನಿಜಕ್ಕೂ ಈಗ ಪೀಕಲಾಟ. ಯಾರಾದರೂ ಸರಿ, ತನ್ನೆಲ್ಲವನ್ನೂ ಧಾರೆ ಎರೆಯಬಲ್ಲ. ಆದರೆ ಪ್ರಾಣ ಕೊಡುವುದೆಂದರೆ! ಅಸಾಧ್ಯವೆನಿಸಿತು. ಆಗಲೇ ದೇವತೆಗಳಿಗೆ ನೆನಪಾದದ್ದು ಋಷಿ ದಧೀಚಿ. ಎಲ್ಲರೂ ಕಾರಣವನ್ನು ವಿವರಿಸಿ ದಧೀಚಿಗಳ ಬಳಿ ಬೇಡಿಕೊಂಡರು. ಋಷಿಗಳು ಒಂದರೆಕ್ಷಣವೂ ಯೋಚಿಸಲಿಲ್ಲ. ಧರ್ಮಸ್ಥಾಪನೆಗೆ, ಮನುಕುಲದ ಒಳಿತಿಗೆ ತನ್ನ ಬಳಕೆಯಾಗುವುದಾದರೆ ಅದಕ್ಕಿಂತಲೂ ಶ್ರೇಷ್ಠ ಸಂಗತಿ ಯಾವುದಿರಬಹುದೆನ್ನುತ್ತಾ ತಮ್ಮ ಶರೀರವನ್ನು ತ್ಯಾಗ ಮಾಡಿಯೇಬಿಟ್ಟರು. ಅವರ ಬೆನ್ನ ಮೂಳೆಯಿಂದ ತಯಾರಾದುದೇ ವಜ್ರಾಯುಧ ಎನ್ನಲಾಗುತ್ತದೆ. ಇಂದ್ರನ ಕೈಲಿರುವುದೂ ಅದೇ. ‘ಎಂದಿಗೆ ಸ್ವಾರ್ಥ ಮುಕ್ತರಾಗುತ್ತೇವೆಯೋ ಅಂದು ನಾವು ಭಗವಂತನ ಆಯುಧವಾಗುತ್ತೇವೆ. ಆಮೇಲೆ ಯಾವುದನ್ನೂ ‘ಹೇಗೆ’ ಎಂದು ನಾವು ಕೇಳಬೇಕಿಲ್ಲ; ಯೋಜನೆ ರೂಪಿಸಲು ಹೆಣಗಾಡಬೇಕಿಲ್ಲ. ಭಗವಂತನೆದುರು ಶರಣಾಗಬೇಕಷ್ಟೇ. ಉಳಿದದ್ದು ಆತನೇ ಮಾಡಿಸುತ್ತಾನೆ.’ ಎನ್ನುತ್ತಾಳೆ ಅಕ್ಕ. ಇತ್ತೀಚೆಗೆ ಭಾರತದಲ್ಲಿ ಈ ಬಗೆಯ ನಿಸ್ವಾರ್ಥ ವಜ್ರಾಯುಧಗಳಿಗೆ ವಿಶೇಷ ಮೌಲ್ಯ ಬಂದಿರುವುದು ಏಕೆಂದು ಅರ್ಥವಾಯಿತೇನು? ಇಂತಹ ಆಯುಧದಿಂದಲೇ ರಕ್ಕಸರ ನಾಶವೂ ಆಗುವುದು, ವಿಶ್ವಗುರುತ್ವದ ಸಂದೇಶವೂ ಹೊರಡುವುದು. ಅಕ್ಕ ಮುಂದುವರೆಸಿ, ‘ಈ ವಜ್ರಾಯುಧ ಕಣ್ಣಿಗೆ ಕಾಣುತ್ತದೆ. ಆದರೆ ಅದನ್ನು ಹಿಡಿದು ತಿರುಗಿಸುತ್ತಿರುವ ಕೈ ಮಾತ್ರ ಯಾರಿಗೂ ಕಾಣದು’ ಎನ್ನುತ್ತಾಳೆ. ಎಷ್ಟು ಸಮಯೋಚಿತವಲ್ಲವೇ? ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು, ಜನಮಾನಸದಲ್ಲಿ ಕಂಡು ಬಂದಿರುವ ಆತ್ಮವಿಶ್ವಾಸ, ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತಿರುವ ರೀತಿ ಇವೆಲ್ಲವೂ ನಿಜಕ್ಕೂ ರೋಚಕವೇ. ವಜ್ರಾಯುಧವನ್ನು ಬೀಸುತ್ತಿರುವ ಕಾಣದ ಕೈಗಳ ಕೈವಾಡವೇ ಸರಿ!
ನಿವೇದಿತಾ ಈ ವಜ್ರಾಯುಧವನ್ನೇ ಭಾರತದ ರಾಷ್ಟ್ರ ಧ್ವಜವಾಗಿಸುವ ಕಲ್ಪನೆ ಇಟ್ಟುಕೊಂಡಿದ್ದಳು. ಅವಳ ಭಾರತದ ಗ್ರಹಿಕೆ ಅದೆಷ್ಟು ಅದ್ಭುತವಾಗಿತ್ತೆಂದರೆ ಅವಳೇ ಚಿತ್ರಿಸಿದ ವಜ್ರಾಯುಧಕ್ಕೆ ನಾಲ್ಕು ಬಾಹುಗಳಿದ್ದವು. ಈಗಿನ ವಜ್ರಾಯುಧ ಇಂದ್ರನ ವಜ್ರಾಯುಧಕ್ಕಿಂತ ಹೆಚ್ಚು ಶಕ್ತಿಯುತ ಎನ್ನುತ್ತಿದ್ದಳು ಅವಳು. ‘ಅಲ್ಲೊಬ್ಬ ಇಲ್ಲೊಬ್ಬ ನಿಸ್ವಾರ್ಥ ಪುರುಷರಲ್ಲ. ಎಲ್ಲೆಲ್ಲೂ ಸಂತ-ಪ್ರವಾದಿಯರ ರೂಪದಲ್ಲಿ ಸ್ವಾರ್ಥವನ್ನು ಗೆದ್ದವರು ಸಿಗುವಂತಾಗಬೇಕು. ಭಾರತ ಸಹೋದರತ್ವದಲ್ಲಿ, ಏಕತೆಯಲ್ಲಿ ಎಷ್ಟು ಆಳಕ್ಕಿಳಿಯಬೇಕೆಂದರೆ ತನ್ನ ಸಹಜ ಸಾಮಥ್ರ್ಯದ ಪರ್ವತವನ್ನೇರಿ ಶ್ರೇಷ್ಠ ರಾಷ್ಟ್ರದ ದರ್ಶನಮಾಡಿಕೊಳ್ಳಬೇಕು’ ಎಂಬುದು ಅವಳ ಆಶಯವಾಗಿತ್ತು. ಭಾರತ ಒಬ್ಬ ಮಹಾಪುರುಷನ ರಾಷ್ಟ್ರವಲ್ಲ. ಇಲ್ಲಿ ತಂಡೋಪತಂಡವಾಗಿ ಮಹಾಪುರುಷರ ಅವತಾರವೇ ಆಗಬೇಕು ಎಂದು ಅವಳ ಅವಳ ಅಪೇಕ್ಷೆಯಾಗಿತ್ತು. ಇವೆಲ್ಲಕ್ಕೂ ಸಂಕೇತವಾಗಿಯೇ ಅವಳು ತಾನೇ ರೂಪಿಸಿದ ಭಾರತದ ಧ್ವಜದಲ್ಲಿ ವಜ್ರಾಯುಧ ಬಳಸಿ ‘ವಂದೇ ಮಾತರಂ’ ಎಂದು ಬರೆದದ್ದು. ಕ್ರಾಂತಿಕಾರಿ ರಾಸ್ ಬಿಹಾರಿ ಘೋಷರು ಉದ್ಘೋಷಿಸಿದ್ದರಲ್ಲ, ‘ಇಂದು ಶುಷ್ಕ ಅಸ್ಥಿಪಂಜರದಲ್ಲಿ ಜೀವದ ಲಕ್ಷಣವು ಕಾಣುತ್ತಿದ್ದರೆ ನಿವೇದಿತಾ ಅದರಲ್ಲಿ ಪ್ರಾಣ ಸಂಚಾರ ಮಾಡಿರುವುದೇ ಅದಕ್ಕೆ ಕಾರಣ. ಇಂದು ನಮ್ಮ ಯುವ ಜನಾಂಗದಲ್ಲಿ ನವ್ಯ, ಭವ್ಯ ಉದಾತ್ತ ಜೀವನದ ಪ್ರಬಲ ಆಕಾಂಕ್ಷೆ ಕುದಿಯುತ್ತಿದ್ದರೆ ಅದರ ಕೀರ್ತಿ ಬಹುಮಟ್ಟಿಗೆ ನಿವೇದಿತಾಳಿಗೆ ಸಲ್ಲಬೇಕು. ನಿಶ್ಚಿತವಾಗಿ ಹೇಳಬಯಸುವ ಒಂದೇ ಮಾತೆಂದರೆ, ಇಂದು ನಮ್ಮಲ್ಲಿ ರಾಷ್ಟ್ರೀಯ ಜೀವನವು ಚಿಗುರುತ್ತಿದ್ದರೆ ಅದಕ್ಕೆ ನಿವೇದಿತಾಳ ಕೊಡುಗೆ ಅಸಾಧಾರಣವಾದುದು’
ನಿಜಕ್ಕೂ ಆಕೆ ಯಾರೆಂಬುದು ಯಕ್ಷಪ್ರಶ್ನೆ. ಒಂದಂತೂ ಸತ್ಯ. ಯಾವ ಕೆಲಸವನ್ನು ವಿವೇಕಾನಂದರು ಭಾರತದಲ್ಲಿ ಶುರು ಮಾಡಿದ್ದರೋ ಅದನ್ನು ಪೂರ್ಣಗೊಳಿಸಲೆಂದು ಬಂದ ದೇವಕನ್ನಿಕೆಯೇ ಇರಬೇಕು. ಅವರೆಲ್ಲರ ತಪಸ್ಸಿನ ಫಲ ಇಂದು ವಜ್ರಾಯುಧ ತಾಯಿ ಭಾರತಿಯ ಕೈಲಿ ಕಂಗೊಳಿಸುತ್ತಿದೆ. ವಿಶ್ವಗುರುವಿನ ಪಟ್ಟ ಸನ್ನಿಹಿತವಾಗಿರುವುದು ಗೋಚರಿಸುತ್ತಿದೆ!

3 thoughts on “ಮೋದಿ ಮತ್ತು ಯೋಗಿ ಏಕೆ ಹೀಗೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s