ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ.

ಭಾರತೀಯ ಸಂಸ್ಕೃತಿಯ ಆಳ ವಿಸ್ತಾರಗಳನ್ನು ಸುಲಭದ ಪೆಟ್ಟಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಸಂಸ್ಕೃತಿ ಒಂದೆರಡು ವರ್ಷಗಳ ಚಟುವಟಿಕೆಗಳ ಸಂಗ್ರಹವಲ್ಲ. ಅದು ಸಹಸ್ರಾರು ವರ್ಷಗಳ ಘನೀಭವಿಸಿದ ನವನೀತ. ಈಗಲೂ ಊರ ತುಂಬಾ ಈ ಸಂಸ್ಕೃತಿ-ಪರಂಪರೆಗಳನ್ನು ವ್ಯಂಗ್ಯ ಮಾಡುತ್ತಾ, ಅವಹೇಳನಕಾರಿಯಾಗಿ ಬೈಯ್ಯುತ್ತಾ ತಿರುಗಾಡುವ ಬುದ್ಧಿಜೀವಿಗಳು ಕಾಣುತ್ತಾರಲ್ಲ ಅವರಿಗೆ ಈ ರಾಷ್ಟ್ರದ ಅಂತಃಸತ್ವದ ದರ್ಶನ ಆಗೇ ಇಲ್ಲ ಅಂತ. ನಾವೂ ಅನೇಕ ಬಾರಿ ಗೌರವ ಇಟ್ಟುಕೊಂಡೇ ಈ ಸಂಸ್ಕೃತಿಯ ನ್ಯೂನತೆಗಳನ್ನು ಎತ್ತಿ ತೋರುವ ತಥಾಕಥಿತ ಪ್ರಗತಿಗಾಮಿ ವ್ಯಕ್ತಿತ್ವ ತೋರ್ಪಡಿಸುತ್ತೇವಲ್ಲ; ನಮಗೂ ದರ್ಶನವಾಗಿದ್ದು ಸೊನ್ನೆಯೇ. ನಿಜವಾದ ಭಾರತವನ್ನು ಅರಿತ ಅಪರೂಪದ ಹೆಣ್ಣುಮಗಳು ಮಾತ್ರ ನಿವೇದಿತೆಯೇ. ಬಹುಶಃ ವಿವೇಕಾನಂದರಂತಹ ಗುರುವಿದ್ದುದರ ಲಾಭವಿರಬೇಕು ಅದು.ಆಕೆಯ ಗ್ರಹಿಕೆ ಅಸಾಧಾರಣವಾದುದು. ಸಾವಿರಾರು ವರ್ಷಗಳ ಈ ಪರಂಪರೆಯನ್ನು ಆಕೆ ಅರ್ಥೈಸಿಕೊಂಡ ರೀತಿ, ಅದಕ್ಕೆ ತೆಗೆದುಕೊಂಡ ಅತ್ಯಲ್ಪ ಸಮಯ ಎರಡೂ ಅಚ್ಚರಿಯೇ. ಈ ಹಿಂದೆಯೇ ಕಾಳಿಯ ಕುರಿತಂತೆ ಆಕೆಯ ಕಲ್ಪನೆಗಳು, ದರ್ಶನಗಳನ್ನು ಈ ಲೇಖನಮಾಲೆಯಲ್ಲಿ ವಿವರಿಸಿದ್ದೆ. ಈ ಬಾರಿ ಇನ್ನೊಂದಷ್ಟನ್ನು.

1902 ರ ಫೆಬ್ರುವರಿಯಲ್ಲಿ ಮದ್ರಾಸಿನ ಮಹಾಜನಾ ಸಭೆಯಲ್ಲಿ ನಿವೇದಿತಾ ಮಾಡಿದ ಭಾಷಣದ ವಿಷಯವೇನು ಗೊತ್ತೇ? ‘ಭಾರತ ಯಾರಿಗೂ ಕ್ಷಮೆ ಕೇಳಬೇಕಿಲ್ಲ’ ಅಂತ. ಈ ಭಾಷಣವನ್ನು ‘ನಿಮ್ಮ ಧರ್ಮದಲ್ಲಿ ಪಶ್ಚಿಮದವರಿಂದ ಕಲಿಯುವುದಕ್ಕಿಂತ ಅವರಿಗೆ ಕೊಡುವುದಕ್ಕೇ ಸಾಕಷ್ಟಿದೆ. ಸಾಮಾಜಿಕ ಸಂಗತಿಗಳಲ್ಲೂ ಅಷ್ಟೇ. ಹೊರಗಿನವರು ನಿಮಗೆ ಸಲಹೆ ಕೊಡುವ ಯಾವ ಅಗತ್ಯವೂ ಇಲ್ಲ, ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಲು ನೀವೇ ಸಮರ್ಥರಿದ್ದೀರಿ.’ ಎಂತಲೇ ಶುರುಮಾಡಿದವಳು ಆಕೆ. ಮುಂದುವರಿದು ‘ಏನೆಂದುಕೊಂಡಿರುವಿರಿ! ಮೂರು ಸಾವಿರ ವರ್ಷಗಳ ನಾಗರಿಕತೆ ಅಂದರೆ ಬೆಲೆಯೇ ಇಲ್ಲವೇನು, ಇತ್ತೀಚೆಗೆ ಹುಟ್ಟಿದ ಪಶ್ಚಿಮದ ರಾಷ್ಟ್ರಗಳು ಪೂರ್ವದಲ್ಲಿರುವ ಈ ಪ್ರಾಚೀನ ನಾಗರಿಕತೆಯ ಜನರನ್ನು ಮುನ್ನಡೆಸಬೇಕೇನು?’ ಎಂದು ಪ್ರಶ್ನಿಸುವಾಗ ಎದುರಿಗಿದ್ದವರಿಗೆ ಮೈ ಬೆಚ್ಚಗಾಗಿರಲು ಸಾಕು. ಹಾಗಂತ ಈ ಮಾತುಗಳು ಯಾರನ್ನೋ ಮೆಚ್ಚಿಸಲಿಕ್ಕೆ ಆಡಿದವಲ್ಲ. ಅಥವಾ ಇಂಗ್ಲೆಂಡನ್ನು ಎದುರು ಹಾಕಿಕೊಂಡು ಕೀರ್ತಿವಂತಳಾಗಬೇಕೆಂಬ ಬಯಕೆಯೂ ಆಕೆಗಿರಲಿಲ್ಲ. ಆಕೆ ಪ್ರಭುತ್ವದ ಜೊತೆಗಿದ್ದು ಕೆಲಸ ಮಾಡಿದ್ದ್ದರೆ ವೈಯಕ್ತಿಕ ಲಾಭ ಸಾಕಷ್ಟಾಗಿರುತ್ತಿತ್ತು. ಸಂಪತ್ತಿಗೆ ಕೊರತೆಯಾಗುತ್ತಿರಲಿಲ್ಲ, ಒಂದಷ್ಟು ಪದವಿಗಳೂ ದಕ್ಕಿರುತ್ತಿದ್ದವು, ತನ್ನ ರಾಷ್ಟ್ರದಲ್ಲಿ ಶಾಶ್ವತ ಕೀರ್ತಿ ಕೂಡ. ಆದರೆ ಅವೆಲ್ಲವನ್ನೂ ಧಿಕ್ಕರಿಸಿದ ನಿವೇದಿತಾ ಹೀಗೆ ತನ್ನವರ ವಿರುದ್ಧ ಹಲ್ಲು ಮಸೆದು ನಿಂತಳೆಂದರೆ ಅದಕ್ಕೊಂದು ಬಲವಾದ ಕಾರಣ ಇರಲೇಬೇಕಲ್ಲ. ಅದನ್ನು ಆಕೆಯೇ ಹೇಳಿಕೊಳ್ಳುತ್ತಾಳೆ. ‘ಯೂರೋಪ್ ಹುಟ್ಟುವುದಕ್ಕೆ ಮುನ್ನವೇ ಭಾರತ, ನಾಗರೀಕತೆಯ ಒಟ್ಟಾರೆ ಗುರಿ ಸಂಪತ್ತಿನ ಸಂಗ್ರಹಣೆಯೋ, ಅಧಿಕಾರ ಗ್ರಹಣವೋ ಅಥವಾ ಸಂಘಟನೆಗಳ ನಿರ್ಮಾಣವೋ ಅಲ್ಲ. ಬದಲಿಗೆ ಮನುಷ್ಯ ನಿರ್ಮಾಣ ಮಾತ್ರ ಎಂಬ ಸೂಕ್ಷ್ಮ ತತ್ತ್ವವನ್ನು ಅರಿತುಕೊಂಡಿತ್ತು’ ಎನ್ನುತ್ತಾಳೆ. ಇದನ್ನೇ ಆಕೆಯ ಗ್ರಹಿಕೆಯ ಸಾಮಥ್ರ್ಯ ಎನ್ನೋದು. ಐರ್ಲೆಂಡಿನಿಂದ ಬಂದು ಭಾರತವನ್ನು ಆಕೆ ಇಷ್ಟು ಆಳಕ್ಕೆ ಅರಿಯುವಲ್ಲಿ ಆಕೆಯ ಆಸಕ್ತಿ ಮತ್ತು ಆಕೆಯೇ ರೂಪಿಸಿಕೊಂಡ ಪರಿಸರ ಎರಡೂ ಕಾರಣವಾಗಿತ್ತು. ಆರಂಭದಲ್ಲಿಯೇ ವಿವೇಕಾನಂದರು ಆಕೆಗೆ ಸ್ಪಷ್ಟಪಡಿಸಿದ್ದರು, ‘ಮಡಿವಂತ ಬ್ರಾಹ್ಮಣ ಬ್ರಹ್ಮಚಾರಿಣಿಯ ಬದುಕು ನಡೆಸು, ಆಗ ಮಾತ್ರ ನೀನು ಭಾರತವನ್ನು ಅರಿಯಬಲ್ಲೆ. ಮತ್ತು ಭಾರತೀಯರೂ ನಿನ್ನ ಸ್ವೀಕಾರಮಾಡಬಲ್ಲರು’ ಅಂತ.

sisternivedita-650_102814035616

 

 
ಅಕ್ಷರಶಃ ಸತ್ಯವೇ. ನಿವೇದಿತೆಯನ್ನು ಸ್ವಂತದವಳೆಂದು ಭಾರತೀಯರು ಸ್ವೀಕಾರ ಮಾಡಿದ್ದಕ್ಕೆ ಇದು ಕಾರಣ ಹೌದೋ ಅಲ್ಲವೋ. ಆದರೆ ಭಾರತದ ಮಹಿಳೆಯರನ್ನು ಅರ್ಥೈಸಿಕೊಳ್ಳುವಲ್ಲಿ ಆಕೆಗೆ ಈ ಸಹವಾಸ, ಲಾಭ ಮಾಡಿದ್ದಂತೂ ಖಂಡಿತ ಸತ್ಯ. ಆಗಿನ ದಿನಗಳಲ್ಲಿ ಬಾಲ್ಯ ವಿವಾಹದ ಪದ್ಧತಿ ತೀವ್ರವಾಗಿದ್ದುದರಿಂದ ಮಡಿವಂತ ಬ್ರಾಹ್ಮಣ ಬ್ರಹ್ಮಚಾರಿಣಿಯರೆಂದರೆ ಬಹುತೇಕ ವಿಧವೆಯರೇ ಆಗಿರುತ್ತಿದ್ದರು. ಬಂಗಾಳದ ಗಲ್ಲಿಗಳಲ್ಲಿನ ಸಂಪ್ರದಾಯ ನಿಷ್ಠ ಹೆಣ್ಣುಮಕ್ಕಳಿಂದ ಹಿಡಿದು ದೈವತುಲ್ಯರಾದ ಶಾರದಾಮಾತೆಯವರೆಗೆ ಅನೇಕ ತಾಯಂದಿರಲ್ಲಿನ ಸದ್ಗುಣಗಳು ಆಕೆಯನ್ನು ಸೆಳೆದವು. ಅಷ್ಟೇ ಅಲ್ಲ ವಿಧವೆಯರೊಳಗಿನ ತಪಸ್ಸಿನ ತುಡಿತ ನಿವೇದಿತೆಯ ಆಂತರ್ಯದೊಳಗೆ ಹುದುಗಿದ್ದ ತ್ಯಾಗದ ಬಯಕೆಯನ್ನು ತೀವ್ರಗೊಳಿಸಿತು.

ನಿವೇದಿತಾ ಆಲೋಚನೆ ಸ್ಪಷ್ಟವಾಗಿತ್ತು. ವಿಧವೆಯೆಂದರೆ ಪವಿತ್ರವಾದ ಆಧ್ಯಾತ್ಮಿಕವಾದ ಬದುಕೆಂದು ಆಕೆ ಭಾವಿಸಿದ್ದಳು. ರಾಮಾಯಣದ ಸೀತೆ ಜನಾಂಗವೊಂದರ ಆದರ್ಶವಾಗಿ ನಿಲ್ಲುವಲ್ಲಿ ಆಕೆಯ ಭೋಗದ ಬಯಕೆಯಲ್ಲ, ತ್ಯಾಗದ ಇಚ್ಛೆಯೇ ಕಾರಣ ಎಂಬುದನ್ನು ಆಕೆ ಅರಿತಿದ್ದಳು. ಆಕೆಯ ಬಳಿ ಉದಾಹರಣೆಗಳಿಗೆ ಕೊರತೆ ಇರಲಿಲ್ಲ. ಭಾಸ್ಕರಾಚಾರ್ಯನ ಲೀಲಾವತಿಯ ಕುರಿತಂತೆ ಮಾತನಾಡುವಾಗ ಆಕೆ ವಿಧವೆಯರ ಕುರಿತಂತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು. ಜ್ಯೋತಿಷ್ಯ ಶಾಸ್ತ್ರ ಪ್ರವೀಣರೂ ಆಗಿದ್ದ ಗಣಿತಜ್ಞ ಭಾಸ್ಕರಾಚಾರ್ಯರ ಮಗಳು ಲೀಲಾವತಿ. ಶಾಸ್ತ್ರದ ಆಧಾರದ ಮೇಲೆ ತನ್ನ ಮಗಳಿಗೆ ವೈಧವ್ಯದ ಶಾಪವಿರುವುದನ್ನು ಅರಿತ ಆಚಾರ್ಯರು ಲೆಕ್ಕಾಚಾರ ಹಾಕಿ ಯಾವುದೋ ಒಂದು ಅಪೂರ್ವವಾದ ಘಳಿಗೆಯಲ್ಲಿ ಮದುವೆಯಾದರೆ ಮಾತ್ರ ಆಕೆಯ ದಾಂಪತ್ಯ ಉಳಿಯುವುದೆಂಬುದನ್ನು ಅರಿತರು. ಅದಕ್ಕೆ ಪೂರಕವಾಗಿ ತಯಾರಿಯನ್ನೂ ಮಾಡಿಕೊಂಡರು. ದುರದೃಷ್ಟ ಲೀಲಾವತಿಯನ್ನೂ ಬಿಡಲಿಲ್ಲ. ಮದುವೆಯನ್ನು ಅಂದುಕೊಂಡ ಆ ಪವಿತ್ರ ಗಳಿಗೆಯಲ್ಲಿ ಮಾಡಲಾಗಲಿಲ್ಲ. ಲೀಲಾವತಿ ಪತಿಯನ್ನು ಕಳೆದುಕೊಂಡಳು, ಬಾಲ ವಿಧವೆಯಾದಳು. ಭಾಸ್ಕರಾಚಾರ್ಯರು ಧೃತಿಗೆಡಲಿಲ್ಲ. ಆಕೆಯ ವೈಧವ್ಯಕ್ಕೊಂದು ಧನಾತ್ಮಕ ರೂಪ ಕೊಟ್ಟರು. ಗಣಿತ ಶಾಸ್ತ್ರವನ್ನೂ ಆಕೆಗೆ ಧಾರೆಯೆರೆದರು. ತಂದೆಗೆ ಸಹಕರಿಸುತ್ತಾ ಆಕೆ ತನ್ನ ವೈಧವ್ಯವನ್ನು ತ್ಯಾಗದ ಗಣಿಯಾಗಿ ರೂಪಿಸಿ ಗಣಿತಜ್ಞೆಯಾದಳು. ಈ ಕಥೆಯನ್ನು ಹೇಳುತ್ತ ನಿವೇದಿತಾ ‘ಸಮಾಜದ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಪತಿ ವಿಯೋಗಿಗಳು ತಮ್ಮ ಕಷ್ಟಗಳನ್ನು ಮರೆತು ಬಿಡುತ್ತಿದ್ದರು’ ಎನ್ನುತ್ತಾಳೆ. ಆಗಿನ ದಿನಗಳಲ್ಲಿ ವಿಧವೆಯಾದ ಹಿರಿಯ ಸ್ತ್ರೀಯರು ಆರೋಗ್ಯದ ಕೇಂದ್ರಗಳಾಗಿರುತ್ತಿದ್ದರು. ಅನಾರೋಗ್ಯದಿಂದ ನರಳುತ್ತಿದ್ದ ಯಾರನ್ನಾದರೂ ಸರಿಯೇ ತಮಗೆ ಗೊತ್ತಿದ್ದ ಸ್ಥಳೀಯ ವೈದ್ಯ ಪ್ರಯೋಗದಲ್ಲಿ ಪ್ರೀತಿಯಿಂದ ಉಪಚರಿಸಿ ಗುಣಮುಖರಾಗುವಂತೆ ಮಾಡುತ್ತಿದ್ದರು. ವಿಧವೆಯರ ವ್ಯಾಪಾರೀ ಮನೋಭಾವವೂ ಬಲು ವಿಶಿಷ್ಟವೇ ಆಗಿತ್ತು. ನಿವೇದಿತಾ ಈ ಕುರಿತಂತೆ ಮಾತಾಡುತ್ತಾ ಬಂಗಾಲಿ ಗಾದೆಯೊಂದರ ಉಲ್ಲೇಖ ಮಾಡುತ್ತಿದ್ದಳು ‘ಸರಿಯಾಗಿ ಸಂಭಾಳಿಸದ ಆಸ್ತಿಗೆ ವಿಧವೆಯ ಹಸ್ತವೇ ಬೇಕು’ ಅಂತ. ಹೀಗೆ ವಿಧವೆಯೋರ್ವಳು ಸಮಾಜದಲ್ಲಿ ಗೌರವವನ್ನು ಪಡೆಯಲು ಕಾರಣವೂ ಇತ್ತು. ಆಕೆಯೇ ಗುರುತಿಸುವಂತೆ, ‘ವಿಧವೆಯಾದವಳು ಯಾವ ಕೆಲಸ ಮಾಡಬೇಕೆಂದು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೆ ತನಗೆ ಒಪ್ಪಿಸಿದ ಕೆಲಸದಲ್ಲಿ ಪೂರ್ಣ ಪ್ರಮಾಣದ ಭಕ್ತಿಯನ್ನು ಸಮರ್ಪಿಸುವುದು ಅವಳಿಗೆ ಸಿದ್ಧಿಸಿರುತ್ತದೆ. ಗಂಡನೆಡೆಗೆ ಹರಿಯಬೇಕಿದ್ದ ತನ್ನ ಶುದ್ಧ ಪ್ರೇಮವನ್ನು ಆಕೆಯು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಬಳಸಿಕೊಳ್ಳುತ್ತಾಳೆೆ’.

leelavathi

ಓಹ್! ಇಂದಿನ ಮಹಿಳಾವಾದಿಗಳು ಈ ಮಾತುಗಳನ್ನೆಲ್ಲ ಕೇಳಿದರೆ ಉರಿದು ಬೀಳಬಹುದು. ಪುರುಷ ಪ್ರಧಾನ ಸಮಾಜದವರೆಲ್ಲ ಸೇರಿ ರೂಪಿಸಿದ ಕಟ್ಟು-ಕಟ್ಟಳೆಗಳಿವು ಎಂದು ಆಕ್ರೋಶದಿಂದ ಕುದಿಯಬಹುದು. ಜೊತೆಗೆ ತಪಸ್ಸು, ಸೇವೆ, ತ್ಯಾಗ ಎಂದೆಲ್ಲ ದೊಡ್ಡ ಪದದೊಳಗೆ ಹೆಣ್ಣುಮಕ್ಕಳನ್ನು ಕೂಡಿ ಹಾಕುವ ಹುನ್ನಾರವೆಂದು ಮೂದಲಿಸಲೂಬಹುದು. ಆದರೆ ಒಂದಂತೂ ಸತ್ಯ. ವೈಧವ್ಯದ ಪಟ್ಟವನ್ನು ಪಡೆದುಕೊಂಡಿರುವ ತಾಯಂದಿರ ಮಾತನ್ನು ಪರಿವಾರದಲ್ಲಿ ಯಾರೊಬ್ಬರೂ ತಳ್ಳಿ ಹಾಕದಂತಹ ಗೌರವ ಇಂದಿಗೂ ಹಳ್ಳಿಗಳಲ್ಲಿದೆ. ಇದು ಆಕೆಯ ತ್ಯಾಗಕ್ಕೆ ಸಮಾಜ ಕಟ್ಟಿದ ಬೆಲೆ.

ನಿವೇದಿತೆಯ ‘ಹಿಂದೂ ಮನೆಗಳಲ್ಲಿ ಗಂಡಸರು ತಾಯಿಯ ಮಾರ್ಗದರ್ಶನ ಪಡೆಯಲು ನಾಚಿಕೆ ಎನ್ನುವುದಿಲ್ಲ’ ಎಂದು ಉದ್ಗರಿಸುತ್ತಾಳೆ. ಆಕೆ ಹೇಳುವ ಬಂಗಾಳಿ ನ್ಯಾಯಾಧೀಶ ಅಶುತೋಶ್ ಮುಖರ್ಜಿಯವರ ಕಥೆ ಬಲು ಭಾವನಾತ್ಮಕ. ಆಶುತೋಶ್ರು ಆಂಗ್ಲರಿಂದಲೂ ಪ್ರಶಂಸೆಗೊಳಗಾದ ಬುದ್ಧಿವಂತ ನ್ಯಾಯಾಧೀಶರು. ಅವರ ತೀರ್ಪುಗಳನ್ನು ಸಂಗ್ರಹಿಸಿ ಸ್ವತಃ ಬ್ರಿಟೀಷರೂ ಅಧ್ಯಯನ ಮಾಡಲು ಬಳಸುತ್ತಿದ್ದರಂತೆ. ಅವರು ಸಾವಿನ ಹೊಸ್ತಿಲಲ್ಲಿದ್ದಾಗ ವಯಸ್ಸಾದ ಅವರ ತಾಯಿಯು ಆಶುತೋಶ್ರನ್ನು ನೋಡಲೆಂದು ಆಗಮಿಸಿದರು. ಮಗನಿದ್ದ ಕೋಣೆಯ ಹೊಸ್ತಿಲು ದಾಟುವಾಗ ಆ ತಾಯಿ ಎಡವಿ ಬಿದ್ದುಬಿಟ್ಟರು. ಕಾಲಿಗೆ ಗಾಯವಾಯ್ತು. ಆ ಕ್ಷಣವೇ ಅಲುಗಾಡಲೂ ಆಗದ ಸ್ಥಿತಿಯಲ್ಲಿದ್ದ ಮುಖರ್ಜಿಯವರು ತೆವಳಿಕೊಂಡು ತಾಯಿಯ ಬಳಿ ಸಾರಿದರು. ಆಕೆಯ ಗಾಯಗೊಂಡ ಕಾಲ್ಗಳನ್ನು ಮತ್ತೆ ಮತ್ತೆ ಮುತ್ತಿಟ್ಟರು. ಆಕೆಗಾಗುತ್ತಿದ್ದ ನೋವನ್ನು ಸಹಿಸಲಾರದೇ ಅವರ ಕಂಗಳಿಂದ ಅಶ್ರುಧಾರೆ ಸುರಿಯಿತು. ಈ ಬಿಸಿ ಕಣ್ಣೀರಿನಿಂದಲೇ ಪಾದಗಳನ್ನು ತೊಳೆದರು. ಹೀಗೆ ಹೇಳುತ್ತಾ ಭಾವುಕಳಾಗುವ ನಿವೇದಿತಾ ಈ ರೀತಿಯ ಸೂಕ್ಷ್ಮ ಸಂಬಂಧಗಳಲ್ಲಿ ಭಾವನಾತ್ಮಕವಾಗಿ ಪ್ರತಿಸ್ಪಂದಿಸುವ ಯಾವ ವ್ಯಕ್ತಿಯೂ ಬದುಕಿನ ತನ್ನ ನಿಧರ್ಾರಗಳಲ್ಲಿ ಸುಲಭಕ್ಕೆ ಎಡವಲಾರ ಎನ್ನುತ್ತಾಳೆ.

ಬಹುಶಃ ಪದೇ ಪದೇ ಆಕೆಯ ಗ್ರಹಿಕೆಯನ್ನು ಕೊಂಡಾಡಿದುದರ ಮರ್ಮ ಈಗ ಅರ್ಥವಾಗಿರಬೇಕು. ಜಗತ್ತಿನ ಯಾವ ಮತ-ಪಂಥಗಳಲ್ಲೂ, ಯಾವ ನೆಲದಲ್ಲೂ ಇಲ್ಲದ ತಾಯಿ-ಮಕ್ಕಳ ಅಪರೂಪದ ಬಾಂಧವ್ಯ ಭಾರತದಲ್ಲಿದೆ, ಹಿಂದೂ ಧರ್ಮದಲ್ಲಿದೆ. ಹೀಗಾಗಿಯೇ ಯಾರಿಂದ ಉಪಕೃತರಾಗಿದ್ದೇವೋ ಅವರೆಲ್ಲರನ್ನು ತಾಯಿಯೆಂದೇ ಗೌರವಿಸೋದು ನಾವು. ಭೂಮಿ ತಾಯಿಯಾಗೋದು, ಗಂಗೆ ಮಾತೆಯೆನಿಸುವುದು ಈ ಕಾರಣದಿಂದಲೇ. ಇದನ್ನು ಮೂಲರೂಪದಲ್ಲಿ ಅರ್ಥೈಸಿಕೊಳ್ಳಲು ನಿವೇದಿತೆಗೆ ಸಾಧ್ಯವಾಗಿತ್ತು. ಹಾಗಂತ ಈ ಭಾವ ಕ್ಷೀಣಿಸುತ್ತಿಲ್ಲವೇ? ಸ್ತ್ರೀಯರ ಮೇಲಿನ ಗೌರವ ಕಡಿಮೆಯಾಗಿಲ್ಲವೇ? ಎಂದರೆ ಖಂಡಿತ ಆಗಿದೆ. ಅದಕ್ಕೆ ಕಾರಣಗಳನ್ನು ನಿವೇದಿತಾ ಪಟ್ಟಿ ಮಾಡುತ್ತಾಳೆ. ‘ಕಳೆದ ಐದು ದಶಕದಲ್ಲಿ ಮಧ್ಯಮವರ್ಗ ತೀವ್ರಗತಿಯಲ್ಲಿ ಅಧಃಪತನ ಕಂಡಿದೆ. ಈ ಕಾರಣದಿಂದಾಗಿಯೇ ಸಂಪತ್ತು ನಾಶವಾಗಿ ಸಾಮಾಜಿಕ ಮತ್ತು ಲೌಕಿಕ ಜಗತ್ತಿನಲ್ಲಿ ಸ್ತ್ರೀಯರ ಸ್ಥಾನಮಾನ ಕುಸಿದಿದೆ.’ ಎನ್ನುತ್ತಾಳೆ. ಆ ಹೊತ್ತಿನಲ್ಲೂ ‘ವಿಧವೆಯರೇ ಸ್ತ್ರೀಯರ ನಡುವಿನ ಬೌದ್ಧಿಕ ಕೇಂದ್ರವಾಗಿದ್ದರು’ ಎಂದು ಹೇಳುವುದನ್ನು ಆಕೆ ಮರೆಯುವುದಿಲ್ಲ.
ನನಗೆ ಗೊತ್ತು. ಅನೇಕರಿಗೆ ಪದೇ ಪದೇ ವಿಧವೆ ಅನ್ನೋ ಪದ ಬಳಸಿರುವುದು ಕಿರಿಕಿರಿ ಎನಿಸಬಹುದು. ಆದರೆ ನಿವೇದಿತಾ ಇದ್ದ ಕಾಲಘಟ್ಟದಲ್ಲಿ ಬಂಗಾಳದಲ್ಲಿನ ವಿಧವೆಯರ ಕುರಿತಂತೆ ಅಮೇರಿಕಾ-ಯೂರೋಪುಗಳಲ್ಲಿ ಭಾರೀ ಅಪಪ್ರಚಾರ ನಡೆದಿತ್ತು. ಹಿಂದೂ ಧರ್ಮ ಸ್ತ್ರೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆಯೆಂದು ಪುಕಾರು ಹಬ್ಬಿಸಿದರು. ಸ್ವಾಮೀಜಿ ಸಾಕಷ್ಟು ಉತ್ತರಿಸಲು ಪ್ರಯತ್ನ ಮಾಡಿದ್ದರೂ ಕೂಡ. ಆದರೆ ನಿವೇದಿತಾ ಅದನ್ನು ಸ್ವತಃ ತಾನೇ ಉತ್ತರ ಹುಡುಕಿಕೊಂಡಳು. ಅವರ ನಡುವೆಯೇ ಬದುಕಿ ಅರ್ಥೈಸಿಕೊಂಡಳು. ಅನಾವರಣಗೊಂಡ ಸತ್ಯವನ್ನು ಮುಲಾಜಿಲ್ಲದೇ ಜಗತ್ತಿಗೆ ಸಾರಿದಳು. ಅಚ್ಚರಿಯೇನು ಗೊತ್ತೇ? ವಿದೇಶಿಗರು ಆಕೆಯ ಮಾತನ್ನು ಧನಾತ್ಮಕವಾಗಿಯೇ ಸ್ವೀಕರಿಸಿದರು, ಭಾರತೀಯ ಬುದ್ಧಿಜೀವಿಗಳು ಮಾತ್ರ ಕೆಂಡ ಕೆಂಡವಾಗಿಬಿಟ್ಟರು. ಆಗಷ್ಟೇ ಅಲ್ಲ. ಈಗಲೂ ಆಕೆಯ ಮಾತುಗಳನ್ನು ಕೇಳಿ ಈ ಜನ ಉರಕೊಂಡು ಬಿದ್ದರೆ ಅಚ್ಚರಿ ಪಡಬೇಡಿ. ಇಂದಂತೂ ಭಾರತೀಯ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲಾಗದೇ ಮೈ ಚಾಯ್ಸ್ ಎನ್ನುತ್ತ ಭೋಗಿಸುವುದೇ ಜೀವನ ಎನ್ನುವ ಮಹಿಳಾವಾದಿಗಳು ಸಾಕಷ್ಟಾಗಿಬಿಟ್ಟಿದ್ದಾರೆ. ಭಾರತೀಯ ನಾರಿಯ ಅಂತರ್ಹಿತ ಶಕ್ತಿಯಾಗಿದ್ದ ತ್ಯಾಗವನ್ನು ಪೂರ್ತಿಯಾಗಿ ನಷ್ಟಗೊಳಿಸಿ ಆಕೆಯನ್ನು ಪಶ್ಚಿಮದ ಸ್ತ್ರೀಯರಿಗೆ ಪರ್ಯಾಯವಾಗಿಸುವ ತುಡಿತ ಇವರಿಗೆಲ್ಲ.

widow
ಮಹಿಳಾವಾದದ ಭಾರತೀಯ ಚಿಂತನೆಗೆ ನಿವೇದಿತಾ ಕೊಟ್ಟ ವ್ಯಾಖ್ಯೆ ಬಲು ಸುಂದರವಾದುದು. ಅದು ದಾರಿ ತಪ್ಪಿರುವ ರೀತಿ ಅದನ್ನು ಮತ್ತೆ ಹಳಿಗೆ ತರುವ ಮಾರ್ಗ ಎಲ್ಲವನ್ನೂ ಆಕೆ ವಿಷದವಾಗಿ ಹೇಳಿಕೊಟ್ಟಿದ್ದಾಳೆ. ತಿಳಿಯುವ ಸೂಕ್ಷ್ಮಮತಿ ನಮಗೆ ಬೇಕಷ್ಟೇ. ಇದನ್ನರಿತು ಅಂತಹ ಸ್ತ್ರೀವಾದವನ್ನು ಪ್ರತಿಪಾದಿಸುವ ಮಹಿಳೆಯರ ಸಂಖ್ಯೆ ಇಂದು ಹೆಚ್ಚಬೇಕಾಗಿದೆ.

ನೆನಪಿಡಿ. ನಮ್ಮ ಹಿರಿಯರು ಅತ್ಯಂತ ಗೌರವದ ಬದುಕನ್ನು ಹರಿವಾಣದಲ್ಲಿಟ್ಟು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ನಾವು ಅದರ ಕುರಿತಂತೆ ಹೆಮ್ಮೆ ಪಡಬೇಕು. ಅದನ್ನು ಮುಂದಿನ ಪೀಳಿಗೆಗೂ ತಲುಪಿಸಬೇಕು. ನಿವೇದಿತಾ ತನ್ನ ಮದ್ರಾಸಿನ ಭಾಷಣದ ಕೊನೆಗೆ ಹೇಳುತ್ತಾಳೆ ‘ನಿಮ್ಮ ರಾಷ್ಟ್ರದ ಆಚರಣೆಗಳ ಕುರಿತಂತೆ ನೀವು ಅವಮಾನ ಪಡಬೇಕಿಲ್ಲ. ದೃಢವಾಗಿ ಅದರೊಟ್ಟಿಗೆ ನಿಲ್ಲಿ. ನಿಮ್ಮಲ್ಲಿರುವ ಮಹಾ ಜ್ಞಾನಿಗಳು ಜಗತ್ತಿನ ಯಾವ ಮಹಾಪುರುಷರಿಗಿಂತಲೂ ಕಡಿಮೆಯಲ್ಲ. ಅವರ ವೈಭವವನ್ನು ಹಾಡಿ, ಅವರನ್ನು ಪ್ರೀತಿಸಿ, ಅವರನ್ನು ಪ್ರೋತ್ಸಾಹಿಸಿ. ಅವರು ತಲೆತಗ್ಗಿಸುವಂತಹ ಪರಿಸ್ಥಿತಿಯನ್ನು ನಿಮಗೆಂದೂ ತಂದೊಡ್ಡಲಾರರು’ ಎನ್ನುತ್ತಾಳೆ. ಆ ಮೂಲಕ ಹಿಂದಿನ ತಲೆಮಾರುಗಳಲ್ಲಿದ್ದ ಮಹಾಪುರುಷರಂತೆ ಇಂದಿಗೂ ಮಹಾಪುರುಷರಿದ್ದಾರೆಂಬುದನ್ನು ನೆನಪಿಸಿ ಅಂತಹವರನ್ನು ಗುರುತಿಸಿ-ಗೌರವಿಸಬೇಕಾದ ಹೊಣೆ ನಮ್ಮ ಹೆಗಲಿಗೇರಿಸುತ್ತಾಳೆ.

ನಾವು ಮಾಡಬೇಕಿರೋದು ಅಷ್ಟೇ. ಬೊಬ್ಬೆ ಹೊಡೆದು ಭಾರತೀಯ ಸಂಸ್ಕೃತಿಯನ್ನು ತೆಗಳುವವರನ್ನು ಬದಿಗಿಟ್ಟು, ಈ ಸಂಪತ್ತನ್ನು ಪಸರಿಸುವಲ್ಲಿ ಬದುಕನ್ನೇ ಪಣವಿಟ್ಟ ಜನರ ಅನುಸರಿಸಿದರಾಯ್ತು. ಇದೇ ಅಕ್ಕ ಬೋಧಿಸಿದ ಮಹಾಮಾರ್ಗ!

One thought on “ಮಹಿಳಾವಾದಕ್ಕೊಂದು ಭಾರತೀಯ ಸ್ಪರ್ಶ!

  1. “ವೈಧವ್ಯದ ಪಟ್ಟವನ್ನು ಪಡೆದುಕೊಂಡಿರುವ ತಾಯಂದಿರ ಮಾತನ್ನು ಪರಿವಾರದಲ್ಲಿ ಯಾರೊಬ್ಬರೂ ತಳ್ಳಿ ಹಾಕದಂತಹ ಗೌರವ ಇಂದಿಗೂ ಹಳ್ಳಿಗಳಲ್ಲಿದೆ”
    tyaga swantada ayke aagirabeku. inyaraddo herike aagirabaaradu. haagallavaadare neevoo saha nimma ee baayibadukatanavannu tyajisi sampoorna maunakke sharanaagi yaake namma edagai doggu salaamu gaurava aadara ityadigalige paatraraagabaradu!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s