ಬ್ರಾಹ್ಮಣ ವರ್ಣ ಅಂದರೆ ಸರ್ಕಾರಿ ನೌಕರಿ ಇದ್ದ ಹಂಗೇನಾ?

ವರ್ಣದಿಂದ ಗುರುತಿಸಲ್ಪಟ್ಟ ದರ್ಜೆ ಒಂದು ನಿಗದಿತ ಅವಧಿಯವರೆಗೆ ಮಾತ್ರ ಇರುತ್ತಿತ್ತು. ಕಾಲಕ್ರಮದಲ್ಲಿ ಅದು ಜೀವಮಾನದ ಅಂತಸ್ತಾಯಿತು. ಬರುಬರುತ್ತ ಅದು ಅನುವಂಶಿಕವಾಗಿ ವಿಸ್ತರಣೆಗೊಂಡಿತು. ಸರ್ಕಾರಿ ನೌಕರಿ ನಿವೃತ್ತಿಯಾಗುವವರೆಗೂ ಅಂತಿದೆಯಲ್ಲ ಮುಂದೊಂದು ದಿನ ಅದು ಅನುವಂಶಿಕವಾದರೆ ಹೇಗಾಗಬಹುದು ಯೋಚಿಸಿ. ಆಗ ಸರ್ಕಾರಿ ನೌಕರನೆಂಬ ಜಾತಿಯೇ ಸೃಷ್ಟಿಯಾಗಿಬಿಡುತ್ತದೆ. ಮಗನಿಗೆ ಯೋಗ್ಯತೆ ಇರಲಿ ಬಿಡಲಿ ಆತ ಸರ್ಕಾರದ ಸಂಬಳಕ್ಕೆ ಅರ್ಹನಾಗುತ್ತಾನೆ. ಅದರ ಬದಲಿಗೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೂ ಮೂರು ವರ್ಷಗಳ ಅವಧಿ ನಿಶ್ಚಯಗೊಳಿಸಿ ಅಲ್ಲಿಂದ ಮುಂದೆ ಅವನ ಸಾಧನೆಗಳ ಆಧಾರದ ಮೇಲೆ ಅವನ ಉದ್ಯೋಗವನ್ನು ಮುಂದುವರೆಸಬೇಕೋ ಬೇಡವೋ ಎಂಬ ನಿರ್ಧಾರ ಮಾಡಿದರೆ ಹೇಗಿರುತ್ತದೆ? ರೋಮಾಂಚಿತರಾದಿರಲ್ಲವೇ! ಭಾರತದ ಪರಂಪರೆಯಲ್ಲಿ ವರ್ಣಗಳ ನಿರ್ಧಾರ ಹಾಗೆಯೇ ಆಗುತ್ತಿತ್ತು.

11

ಹೌದು. ಯಾವನೇ ಪ್ರಜ್ಞಾವಂತನೂ ಮನುಸ್ಮೃತಿಯನ್ನು ಸಾರಾಸಗಟಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಮನುಸ್ಮೃತಿಯ ಕುರಿತಂತೆ ಸುದೀರ್ಘ ಸಾಹಿತ್ಯಗಳನ್ನು ಸೃಷ್ಟಿಸಿದವರೂ ಕೆಲವೆಡೆ ಆತಂಕಿತರಾಗಿ ನಿಂತು ಒಪ್ಪಿಕೊಳ್ಳಲಾಗದ ಶ್ಲೋಕಗಳನ್ನು ಪಟ್ಟಿ ಮಾಡುತ್ತಾರೆ. ಹಾಗಂತ ಎಲ್ಲಾ ದೋಷವೂ ಮನುಸ್ಮೃತಿಯದ್ದೇ ಅಲ್ಲ. ಕೆಲವೊಮ್ಮೆ ಅರ್ಥ ಹೇಳಿದ ಭಾಷ್ಯಕಾರರದ್ದೂ ಕೈಚಳಕವಿದ್ದೇ ಇರುತ್ತದೆ. ಇಷ್ಟಕ್ಕೂ ಸಂಸ್ಕೃತ ಭಾಷೆಯೇ ವಿಶಿಷ್ಟ. ಒಂದೇ ಪದ ತನ್ನೊಳಗೆ ಹಲವಾರು ಅರ್ಥಗಳನ್ನು ಹುದುಗಿಸಿಟ್ಟುಕೊಂಡಿರುತ್ತದೆ. ಅರ್ಥೈಸುವವ ಆ ಪದವನ್ನು ನೋಡುವ ರೀತಿಯಲ್ಲಿ ಅದು ಅನಾವರಣಗೊಳ್ಳುತ್ತದೆ. ಇಲ್ಲವಾದಲ್ಲಿ ಮೂರು ಪಂಥದ ಮೂರೂ ಆಚಾರ್ಯರು ಒಂದೇ ಗೀತೆಯನ್ನು ತಮ್ಮ ಪಂಥಕ್ಕೆ ಸೂಕ್ತವಾಗುವಂತೆ ವಿವರಿಸುವುದು ಹೇಗೆ ಸಾಧ್ಯವಾಗುತ್ತಿತ್ತು?
ಹಾಗೇ ಸುಮ್ಮನೆ ಮನುಸ್ಮೃತಿಯ ಮೊದಲನೇ ಅಧ್ಯಾಯದ 93ನೇ ಶ್ಲೋಕ,
ಉತ್ತಮಾಂಗೋದ್ಭವಾಜ್ಜ್ಯೇಷ್ಠ್ಯಾದ್ಬ್ರಹ್ಮಣಶ್ಚೈವ ಧಾರಣಾತ್, ಸರ್ವಸ್ಯೇವಾಸ್ಯ ಸರ್ಗಸ್ಯ ಧರ್ಮತೋ ಬ್ರಾಹ್ಮಣಃ ಪ್ರಭುಃ ಎಂದಿದೆ. ಅದರ ಅನುವಾದವನ್ನು ಶೇಷನವರತ್ನರು ‘ಮುಖದಿಂದ ಜನಿಸಿದ್ದರಿಂದ, ಮೊಟ್ಟಮೊದಲಿಗೆ ಹುಟ್ಟಿದ್ದರಿಂದ, ಜ್ಞಾನಧಾರಣೆ ಮಾಡಿರುವುದರಿಂದ ಬ್ರಾಹ್ಮಣ ಈ ಸಮಸ್ತ ಬ್ರಹ್ಮಸೃಷ್ಟಿಯ ಎಲ್ಲದಕ್ಕೂ ಲೋಕಧರ್ಮಾನುಸಾರವಾಗಿ ಒಡೆಯನಾಗಿರುವನು’ ಎಂದು ಅನುವಾದಿಸುತ್ತಾರೆ. ಅನುಮಾನವೇ ಇಲ್ಲ. ಪದಶಃ ಅರ್ಥ ಹುಡುಕುತ್ತ ಹೋದರೆ ಇದು ಸರಿಯೇ. ಮೇಲ್ನೋಟಕ್ಕೆ ಇದನ್ನು ಓದಿದೊಡನೆ ಜಾತಿಯಿಂದ ಕೆಳಹಂತದಲ್ಲಿದ್ದೇನೆಂದುಕೊಂಡವನಿಗೆ ಆಕ್ರೋಶ ಉಂಟಾದರೆ, ಬ್ರಾಹ್ಮಣನಿಗೆ ಸಹಜವಾದ ಮೇಲರಿಮೆ ಬರಲಿಕ್ಕೆ ಸಾಕು. ಇದೇ ಕಾನೂನು ಶಾಸ್ತ್ರ ಮರಳಿ ಬರಲೆಂದು ಬ್ರಾಹ್ಮಣನೊಬ್ಬ ಪ್ರಾರ್ಥನೆ ಮಾಡಿದರೆ ಅಚ್ಚರಿಯಿಲ್ಲ. ಆದರೆ ಇದೇ ಶ್ಲೋಕಕ್ಕೆ ವ್ಯಾಖ್ಯೆ ನೀಡುತ್ತ ಪಂಡಿತ ಚಕ್ರಕೋಡಿ ಈಶ್ವರಶಾಸ್ತ್ರಿಗಳು ‘ಜ್ಞಾನಿಯು ಈ ಸೃಷ್ಟಿಯನ್ನು ಅಂಕೆಯಲ್ಲಿಡಬಲ್ಲವನಾಗಿದ್ದಾನೆ. ಕಾಲದಲ್ಲಿ, ಕರ್ತವ್ಯದಲ್ಲಿ, ಧ್ಯಾನದಲ್ಲಿ ಜ್ಞಾನವೇ ಪ್ರಥಮ’ ಎಂದು ಅನುವಾದಿಸುತ್ತಾರೆ. ಮನುವಿನ ಹೃದಯವನ್ನು ಇಡಿಯ ಮನುಸ್ಮೃತಿಯ ಆಧಾರದ ಮೇಲೆ ಅವರು ವಿವರಿಸುತ್ತಾರೆ.
ಅನೇಕ ಬಾರಿ ಕಾಲದಿಂದ ಕಾಲಕ್ಕೆ ಒಂದೇ ಪದದ ಬಳಕೆ ಭಿನ್ನ ಭಿನ್ನ ರೂಪ ಪಡೆದುಕೊಳ್ಳುತ್ತದೆ. ಕೆಲವೊಮ್ಮೆ ಒಂದೇ ಪದ ದೀರ್ಘಕಾಲದಲ್ಲಿ ವಿರುದ್ಧವಾಗಿಯೂ ಬಳಕೆಯಾಗಬಹುದು. ‘ಗುರು’ ಎನ್ನುವ ಪದ ಇಂದಿನ ಕಾಲೇಜುಗಳಲ್ಲಿ ‘ಏನ್ ಗುರು’ ಅಂತಾಗಿ ಆಡಿಕೊಳ್ಳುವಂತಾಗಿಲ್ಲವೇ ಹಾಗೆ. ಬ್ರಾಹ್ಮಣ ಪದಕ್ಕೂ ಹಾಗೆಯೇ ‘ಜ್ಞಾನ’ದ ದೃಷ್ಟಿಯನ್ನು ಆರೋಪಿಸಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರ ದಕ್ಕುತ್ತದೆ. ಮನು ಅನೇಕ ಕಡೆಗಳಲ್ಲಿ ಜ್ಞಾನ ಪರಂಪರೆಗೆ ಅಪಾರ ಗೌರವ ಕೊಟ್ಟಿರುವುದು ಕಂಡಾಗ ಹೀಗಿರಬಹುದೆಂದು ನಿರ್ಣಯಕ್ಕೂ ಬರಬಹುದಷ್ಟೇ. ಹೀಗಾಗಿಯೇ ಆತ ಶೂದ್ರನು ತಿಳಿಯದೇ ಮಾಡಿದ ತಪ್ಪಿಗೆ ಒಂದು ದಂಡನೆಯಾದರೆ ಆತ ತಿಳಿದು ಮಾಡಿದರೆ ಅದರ ಎಂಟು ಪಟ್ಟೆನ್ನುತ್ತಾನೆ. ಪಟ್ಟಿ ಹೀಗೆ ಏರುತ್ತಾ ಬ್ರಾಹ್ಮಣನ ತಪ್ಪಿಗೆ ಶೂದ್ರನ 64, 100 ಮತ್ತು 128 ಪಟ್ಟು ದಂಡನೆ ಘೋಷಿಸುತ್ತಾನೆ. ಬ್ರಾಹ್ಮಣನಿಗೆ ಹೆಚ್ಚು ಗೌರವ ಸಿಕ್ಕುವಂತೆ ತಪ್ಪಿಗೆ ಹೆಚ್ಚು ಶಿಕ್ಷೆ ಕೂಡ! ನಮ್ಮೆಲ್ಲರಿಗೂ ಅನುಕೂಲವಾಗುವ ಸಂಗತಿಗಳನ್ನು ಮಾತ್ರ ಬಳಸಿಕೊಂಡು ರೂಢಿಯಾಗಿಬಿಟ್ಟಿದೆ. ಶರೀಯಾ ಕಾನೂನಿನ ಪ್ರಕಾರ ಮದುವೆಯಾಗುವ, ತಲಾಖ್ ನೀಡುವ ಅಧಿಕಾರ ಎಲ್ಲರಿಗೂ ಬೇಕು. ಆದರೆ ತಪ್ಪಿಗೆ ಶಿಕ್ಷೆ ನೀಡುವ ವಿಚಾರ ಬಂದಾಗ ಮಾತ್ರ ಭಾರತದ ಕಾನೂನನ್ನು ಅನ್ವಯಿಸಬೇಕು. ಪ್ರತಿಯೊಬ್ಬರೂ ಹಾಗೆಯೇ ತಮಗೆ ಅನುಕೂಲವಾಗುವ ಸಂಗತಿಗಳನ್ನಷ್ಟೇ ಆಚರಣೆಗೆ ಬರಲೆಂದು ಆಶಿಸುವುದು!
ಬಿಡಿ. ಮತ್ತೆ ಮನುಸ್ಮೃತಿಯ ರಚನೆಯ ಕಾಲದ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿ ನೋಡಿ. ಮೌರ್ಯ ಸಾಮ್ರಾಜ್ಯದ ನಿರ್ಮಾಣದ ಕಾಲವೇ ಒಂದು ಸಂಧಿಯುಗ. ಬುದ್ಧ ಪರಂಪರೆ ಉಚ್ಛ್ರಾಯಕ್ಕೆ ಮುಟ್ಟಿ ರಾಜಾಶ್ರಯ ದೊರೆತಿದ್ದ ಕಾಲ. ಅಂತಹ ಹೊತ್ತಿನಲ್ಲಿಯೇ ಚಾಣಕ್ಯರು ಮತ್ತೆ ಭಾರತದ ಹಳಿಯನ್ನು ಪರಂಪರೆಗೆ ಮರಳಿಕೂರಿಸುವ ಯತ್ನ ಮಾಡಿದರು. ಜೊತೆಗೆ ಹದಗೆಟ್ಟಿದ್ದ ವ್ಯವಸ್ಥೆಯನ್ನು ಸರಿಪಡಿಸಿ ತಾನು ಬ್ರಾಹ್ಮಣಧರ್ಮವನ್ನು ಎತ್ತಿ ಹಿಡಿದು ಮಂತ್ರಿ ಪದವಿಯನ್ನು ಧಿಕ್ಕರಿಸಿ ಹೊರಟರು. ಹಾಗಂತ ಚಂದ್ರಗುಪ್ತ ತನ್ನ ಗುರುಗಳ ವೈದಿಕ ಪರಂಪರೆಗೆ ಗೌರವ ಕೊಟ್ಟನಷ್ಟೇ, ಇಡಿಯ ದೇಶ ಅದನ್ನೇ ಅನುಸರಿಸಬೇಕೆಂದು ಆಗ್ರಹಿಸಲಿಲ್ಲ. ಕೊನೆಗೊಮ್ಮೆ ತಾನು ಜೈನ ಮತ ಸ್ವೀಕರಿಸಿ ಹೊರಟುಬಿಟ್ಟ. ಅವನ ನಂತರ ಬಂದ ಬಿಂದುಸಾರನೂ ಯಾವುದನ್ನೂ ಯಾರ ಮೇಲೂ ಹೇರಲಿಲ್ಲ. ಆದರೆ ಅಶೋಕನ ಕಾಲದ ಬೌದ್ಧ ತುಷ್ಟೀಕರಣ ಸಮಾಜವನ್ನು ಒಡೆಯಲಾರಂಭಿಸಿತ್ತು. ಬೌದ್ಧಾನುಯಾಯಿಗಳು ಮತ್ತು ವೇದ ಮತಾನುಯಾಯಿಗಳ ನಡುವಣ ಕಂದಕ ಹಿಗ್ಗುತ್ತಲೇ ಸಾಗಿತು. ಅದು ಯಾವಾಗಲೂ ಹಾಗೆಯೇ. ತುಷ್ಟೀಕರಣದ ಪ್ರಾಧಾನ್ಯತೆ ದೊರೆಯದೇ ಹೋದರೆ ಸಮಾಜದಲ್ಲಿ ಶಾಂತಿ-ಸಹಬಾಳ್ವೆ ಸಹಜವಾಗಿಯೇ ನೆಲೆಸುತ್ತದೆ. ಒಂದನ್ನು ಮಾತ್ರ ಎತ್ತಿ ಹಿಡಿಯುವ ಪ್ರಯತ್ನವಾದಾಗ ಕದನಗಳು ಹೆಚ್ಚುತ್ತಲೇ ಹೋಗುತ್ತದೆ. ಹಾಗೆ ಸುಮ್ಮನೆ ಯೋಚನೆ ಮಾಡಿ ಈ ದೇಶದ ಹಿಂದಿನ ಪ್ರಧಾನಿ ಮನಮೋಹನ ಸಿಂಗರು ಈ ದೇಶದ ಸಂಪತ್ತಿನ ಮೇಲಿನ ಮೊದಲ ಒಡೆತನ ಮುಸಲ್ಮಾನರದ್ದು ಎಂದಾಗ ಇದು ಸಂಬಂಧವನ್ನು ಬೆಸೆಯುವ ಮಾತಾಗಿರಲಿಲ್ಲ, ಒಡೆಯುವಂಥದ್ದು. ಟಿಪ್ಪು ಜಯಂತಿಯ ಆಚರಣೆಯ ಮೂಲಕ ಹಿಂದೂ-ಮುಸಲ್ಮಾನರಲ್ಲಿ ಕಂದಕ ವೃದ್ಧಿಯಾಯಿತೆ ಹೊರತು ಸಹಬಾಳ್ವೆಗೆ ಅದು ಸಹಕಾರಿಯಾಗಲಿಲ್ಲ. ಇದೇ ಆಧಾರದಲ್ಲಿ ಹಿಂದೆ ತಿರುಗಿ ನೋಡಿದರೆ ಅಶೋಕನ ಕಾಲದಲ್ಲಿ ವೈದಿಕ ಸಂಪ್ರದಾಯದವರ ಮತ್ತು ಬುದ್ಧಾನುಯಾಯಿಗಳ ನಡುವಿನ ಅಂತರ ಅಗಾಧವಾಗಿದ್ದಿರಬೇಕು. ಅನೇಕರು ಗುರುಕುಲವಾಸವನ್ನು ತ್ಯಜಿಸಿ ನೇರ ಬುದ್ಧನ ಚಿಂತನೆಯತ್ತ ಹೊರಳಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆಗ ನಡೆದ ಕಾದಾಟಗಳ ನಡುವೆಯೇ ಒಂದು ಭಯಾನಕವಾದ ಪತನ ಭಾರತೀಯ ಸಮಾಜದಲ್ಲಿ ಉಂಟಾಗಿರುವ ಪರಿಸ್ಥಿತಿಗಳು ನಿಮರ್ಾಣವಾಗಿರಲಿಕ್ಕೆ ಸಾಕು. ಅಶೋಕನ ಅಧಿಕಾರಾವಧಿಯಿಂದ ಏಳೆಂಟು ದಶಕಗಳ ಕಾಲ ನಡೆದ ಈ ಧಾರ್ಮಿಕ ಪತನ ಭಾರತೀಯ ಸಮಾಜವನ್ನು ಚೂರು ಚೂರಾಗಿಸಿತೆಂದು ನಂಬಲಿಕ್ಕೆ ಕಾರಣಗಳಿವೆ.
ಅಂಬೇಡ್ಕರರು ತಮ್ಮ ಕೃತಿಯಲ್ಲಿ ಇದೇ ವಾದ ಸರಣಿ ಮುಂದುವರಿಸುತ್ತಾರೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರೆಂಬ ವರ್ಣಗಳು ಜಾತಿಯಾಗಿ ಮಾರ್ಪಾಟುಗೊಂಡ ಕಾಲವೇ ಇದೆಂದು ವಾದಿಸುತ್ತಾರೆ ಅವರು. ಅವರ ಪ್ರಕಾರ ವರ್ಣವು ಏಕಾಏಕಿ ಜಾತಿಯಾಗಲಿಲ್ಲ. ಬದಲಿಗೆ ಹಂತ-ಹಂತವಾಗಿ ರೂಪಾಂತರ ಹೊಂದಿತು. ‘ಮೊದಲ ಹಂತ ವರ್ಣ. ಅಂದರೆ ಅಂತಸ್ತು ಹಾಗೂ ವೃತ್ತಿಗಳು ಒಂದು ನಿರ್ದಿಷ್ಟ ಅವಧಿಗೆ ಸೀಮಿತಗೊಂಡಿರುವ ಹಂತ. ಎರಡನೇ ಹಂತದಲ್ಲಿ ಇವು ವ್ಯಕ್ತಿಯ ಜೀವಮಾನಕ್ಕೆ ವಿಸ್ತರಿಸಲ್ಪಟ್ಟವು. ಮುಂದಿನ ಹಂತದಲ್ಲಿ ಅದು ಮುಂದಿನ ಪೀಳಿಗೆಗೂ ವಿಸ್ತರಿಸಲ್ಪಟ್ಟಿತು’. ಅರ್ಥವಾಗುವಂತೆ ಹೇಳುವುದಾದರೆ ವರ್ಣದಿಂದ ಗುರುತಿಸಲ್ಪಟ್ಟ ದರ್ಜೆ ಒಂದು ನಿಗದಿತ ಅವಧಿಯವರೆಗೆ ಮಾತ್ರ ಇರುತ್ತಿತ್ತು. ಕಾಲಕ್ರಮದಲ್ಲಿ ಅದು ಜೀವಮಾನದ ಅಂತಸ್ತಾಯಿತು. ಬರುಬರುತ್ತ ಅದು ಅನುವಂಶಿಕವಾಗಿ ವಿಸ್ತರಣೆಗೊಂಡಿತು. ಸರ್ಕಾರಿ ನೌಕರಿ ನಿವೃತ್ತಿಯಾಗುವವರೆಗೂ ಅಂತಿದೆಯಲ್ಲ ಮುಂದೊಂದು ದಿನ ಅದು ಅನುವಂಶಿಕವಾದರೆ ಹೇಗಾಗಬಹುದು ಯೋಚಿಸಿ. ಆಗ ಸರ್ಕಾರಿ ನೌಕರನೆಂಬ ಜಾತಿಯೇ ಸೃಷ್ಟಿಯಾಗಿಬಿಡುತ್ತದೆ. ಮಗನಿಗೆ ಯೋಗ್ಯತೆ ಇರಲಿ ಬಿಡಲಿ ಆತ ಸರ್ಕಾರದ ಸಂಬಳಕ್ಕೆ ಅರ್ಹನಾಗುತ್ತಾನೆ. ಅದರ ಬದಲಿಗೆ ಪ್ರತಿಯೊಬ್ಬ ಸರ್ಕಾರಿ ನೌಕರನಿಗೂ ಮೂರು ವರ್ಷಗಳ ಅವಧಿ ನಿಶ್ಚಯಗೊಳಿಸಿ ಅಲ್ಲಿಂದ ಮುಂದೆ ಅವನ ಸಾಧನೆಗಳ ಆಧಾರದ ಮೇಲೆ ಅವನ ಉದ್ಯೋಗವನ್ನು ಮುಂದುವರೆಸಬೇಕೋ ಬೇಡವೋ ಎಂಬ ನಿರ್ಧಾರ ಮಾಡಿದರೆ ಹೇಗಿರುತ್ತದೆ? ರೋಮಾಂಚಿತರಾದಿರಲ್ಲವೇ! ಭಾರತದ ಪರಂಪರೆಯಲ್ಲಿ ವರ್ಣಗಳ ನಿರ್ಧಾರ ಹಾಗೆಯೇ ಆಗುತ್ತಿತ್ತು. ವಿದ್ವತ್ ಸಭೆಗಳಲ್ಲಿ ಬ್ರಾಹ್ಮಣ ತನ್ನ ಸಾಮಥ್ರ್ಯವನ್ನು ಸಾಬೀತು ಪಡಿಸಬೇಕಾಗುತ್ತಿತ್ತು. ಆಗ ಮಾತ್ರ ಅವನು ಬ್ರಾಹ್ಮಣನಾಗಿರುತ್ತಿದ್ದ. ಇದೇ ಪದ್ಧತಿ ಪ್ರತಿಯೊಬ್ಬರಿಗೂ. ಹೀಗಾಗಿ ವರ್ಣ ನಿಗದಿತ ಅವಧಿಯವರೆಗೆ ಮಾತ್ರ ಇರುತ್ತಿತ್ತು. ಕಾಲಕ್ರಮದಲ್ಲಿ ಒಮ್ಮೆ ನಿರ್ಣಯಿಸಿದ ವರ್ಣ ವ್ಯಕ್ತಿಯ ಜೀವಾವಧಿಗೆ ಅನ್ವಯವಾಯ್ತು. ಬರು ಬರುತ್ತ ಅದು ತಂದೆಯಿಂದ ಮಗನಿಗೆ ಆಸ್ತಿಯಾಗಿ ಬಂತು. ಅಲ್ಲಿಗೆ ಸಾಮಥ್ರ್ಯದಿಂದ ನಿರ್ಣಯಗೊಳ್ಳುತ್ತಿದ್ದ ವರ್ಣ, ಹುಟ್ಟಿನಿಂದಲೇ ನಿರ್ಧಾರಿತಗೊಳ್ಳುವ ಜಾತಿಯಾಯ್ತು! ಹಾಗೆ ಅಭಿಪ್ರಾಯ ಪಡುತ್ತಾರೆ ಅಂಬೇಡ್ಕರ್.
ಎಸ್.ವಿ. ಕೇತ್ಕರ್ ತಮ್ಮ ಹಿಸ್ಟರಿ ಆಫ್ ಕಾಸ್ಟ್ ಇನ್ ಇಂಡಿಯಾ ಕೃತಿಯಲ್ಲಿ ಜಾತಿ ಪದ್ಧತಿಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಾರೆ. ಪ್ರದೇಶದ ಕಾರಣದಿಂದ, ವೃತ್ತಿಯ ಕಾರಣದಿಂದ ಹುಟ್ಟಿರುವ ಭಿನ್ನ ಭಿನ್ನ ಜಾತಿಗಳ ಕುರಿತಂತೆ ಅವರು ವಿಸ್ತಾರ ಅಧ್ಯಯನ ಮಂಡಿಸಿದ್ದಾರೆ. ಕೆಲವೊಮ್ಮೆ ಒಂದೇ ಜಾತಿಯ ಜನ ಬೇರೆ ಬೇರೆ ಪ್ರದೇಶಗಳ ಕಾರಣ ವಿರುದ್ಧವಾದ ಆಚರಣೆಗಳ ಕಟ್ಟುಪಾಡಿಗೆ ಒಳಗಾಗುತ್ತಾರೆ. ಬಂಗಾಳದ ಬ್ರಾಹ್ಮಣರಿಗೂ, ಶೃಂಗೇರಿಯ ಬ್ರಾಹ್ಮಣರಿಗೂ ಊಟದ ವಿಚಾರದಲ್ಲಿ ಹೊಂದಾಣಿಕೆಯಾಗುವುದು ಸಾಧ್ಯವೇ ಇಲ್ಲ. ಗೌಡರು ಮಂಗಳೂರಿನಲ್ಲಿಯೇ ಬೇರೆ; ಬೆಂಗಳೂರಿನಲ್ಲಿಯೇ ಬೇರೆ. ಇದು ಬಲು ಸಂಕೀರ್ಣವಾದ ಸಂಗತಿ. ಸದ್ಯಕ್ಕೆ ಇದನ್ನು ಬದಿಗಿಟ್ಟು ವರ್ಣ ಜಾತಿಯಾಗಿ ಪತನವಾಗಿರಬಹುದಾದ ರೀತಿಯನ್ನು ಅವಲೋಕಿಸೋಣ.

12

ಅಂಬೇಡ್ಕರರು ದಫ್ತರಿಯ ಧರ್ಮರಹಸ್ಯ ಮತ್ತು ಪ್ರಜ್ಞಾನೇಶ್ವರರ ಚಾತುರ್ವರ್ಣ್ಯಗಳ ಆಧಾರದ ಮೇಲೆ ತಮ್ಮ ವಾದ ಮಂಡಿಸುತ್ತಾರೆ. ‘ಸಂಪ್ರದಾಯದಂತೆ ವ್ಯಕ್ತಿಯೊಬ್ಬನ ವರ್ಣ ನಿರ್ಧಾರಕ್ಕೆ ಮನು ಮತ್ತು ಸಪ್ತರ್ಷಿಗಳೆಂಬ ಅಧಿಕಾರಿಗಳ ಸಂಸ್ಥೆಯಿರುತ್ತಿತ್ತು. ಇವರಲ್ಲಿ ಕ್ಷತ್ರಿಯ ಹಾಗೂ ವೈಶ್ಯ ಯೋಗ್ಯರನ್ನು ಆರಿಸುವ ಹೊಣೆ ಮನುವಿನದ್ದಾಗಿದ್ದರೆ, ಸಪ್ತರ್ಷಿಗಳು ಬ್ರಾಹ್ಮಣಯೋಗ್ಯನನ್ನು ಆರಿಸುತ್ತಿದ್ದರು. ಸಹಜವಾಗಿಯೇ ಆಯ್ಕೆಯಾಗದೇ ಉಳಿದವರೆಲ್ಲ ಶೂದ್ರರೆಂದು ಕರೆಯಲ್ಪಡುತ್ತಿದ್ದರು.’ ಬಹುಶಃ ನಾವು ಈ ಹಿಂದೆ ಚರ್ಚಿಸಿದ ಗುರುಕುಲ ವ್ಯವಸ್ಥೆ ಇದೇ ಮಾದರಿಯದ್ದಿರಬೇಕು. ಅಲ್ಲಿಯೇ ಸೂಕ್ತವಾಗಿ ಅಧ್ಯಯನ ಪಡೆದ ವಿದ್ಯಾರ್ಥಿ ಗುರುಗಳ ಸಮ್ಮುಖದಲ್ಲಿ ಅವರ ಪರೀಕ್ಷೆಗಳಿಗೆ ಉತ್ತರಿಸುವ ಆಧಾರದ ಮೇಲೆ ಅವನ ವರ್ಣ ನಿರ್ಧಾರಿತವಾಗುತ್ತಿದ್ದಿರಬಹುದು. ವ್ಯಕ್ತಿಯೊಬ್ಬ ಕಾಲಕಾಲಕ್ಕೆ ತನ್ನ ವರ್ಣವನ್ನು ನವೀಕರಿಸಿಕೊಳ್ಳುತ್ತಿದ್ದುದರ ಬಗ್ಗೆ ಸೂಕ್ತ ದಾಖಲೆಗಳು ದೊರೆಯುವುದಿಲ್ಲವಾದರೂ ರಾಜ ಸಭೆಗಳಲ್ಲಿ ವಿದ್ವತ್ಗೋಷ್ಠಿಗಳಲ್ಲಿ ಚರ್ಚೆಗಳು, ಸ್ಪರ್ಧೆಗಳು ನಡೆಯುತ್ತಿದ್ದುದರ ಕುರಿತಂತೆ ಉಪನಿಷತ್ ಕಾಲದಲ್ಲೂ ಉಲ್ಲೇಖಗಳು ದೊರೆಯುತ್ತವೆ. ಜನಕನ ಆಸ್ಥಾನದಲ್ಲಿ ಬಂದಿಯೆದುರು ಸೋತ ಕಹೋದ ಜಲಸಮಾಧಿ ಸ್ವೀಕಾರ ಮಾಡಿದ್ದು ಬಹುಶಃ ವರ್ಣವನ್ನು ಕಳಕೊಳ್ಳುವ ಭಯದಿಂದಲೇ ಇರಬೇಕೇನೋ! ಮುಂದೆ ಆತನ ಮಗ ಅಷ್ಟಾವಕ್ರ ತನ್ನ ತಂದೆಯ ಸಾವಿಗೆ ಪ್ರತೀಕಾರ ಬಯಸಿ ಜನಕನ ಆಸ್ಥಾನದಲ್ಲಿಯೇ ಬಂದಿಯನ್ನು ಸೋಲಿಸಿ ಆತನಿಗೆ ಜೀವದಾನ ಮಾಡಿದ್ದು ಉಪನಿಷತ್ ಗಂಗೆಯ ಬಿಂದುವೇ. ಅಂದರೆ ಸಾಧನೆಯಿಂದ ಗಳಿಸಿದ ವರ್ಣ ನಿರಂತರ ಸಾಧನೆಯಿಂದ ಮಾತ್ರ ಉಳಿಯಲು ಸಾಧ್ಯವಿತ್ತೆಂದು ನಂಬಬಹುದೇನೋ. ‘ಹೀಗೆ ನಿರ್ಧರಿಸಲಾದ ವರ್ಣವ್ಯವಸ್ಥೆ ಒಂದು ಯುಗ ಅಥವಾ ನಾಲ್ಕು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತಿತ್ತು. ಪ್ರತಿ ನಾಲ್ಕನೇ ವರ್ಷವೂ ಮನು ಹಾಗೂ ಸಪ್ತರ್ಷಿಗಳೆಂಬ ಅದೇ ಹೆಸರಿನ ಅಧಿಕಾರವರ್ಗವನ್ನು ಹೊಸ ಆಯ್ಕೆ ಮಾಡಲು ನೇಮಿಸಲಾಗುತ್ತಿತ್ತು. ಹೋದ ಬಾರಿ ಶೂದ್ರರಾಗಲು ಅರ್ಹರೆಂದು ಬಿಟ್ಟವರೂ ಈ ಬಾರಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಾಗಿ ಆಯ್ಕೆಯಾಗಬಹುದಿತ್ತು. ಹೋದ ಬಾರಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಾಗಿ ಆಯ್ಕೆಯಾದವರೂ ಈ ಬಾರಿ ಶೂದ್ರರಾಗಿ ಉಳಿಯಬಹುದಿತ್ತು. ವರ್ಣಗಳ ಬದಲಾಗುವ ಈ ಕಾಲವನ್ನು ‘ಮನ್ವಂತರ’ವೆಂದು ಕರೆಯಲಾಗುತ್ತಿತ್ತು’ ಎನ್ನುತ್ತಾರೆ ಅಂಬೇಡ್ಕರ್.
ಮನು ವರ್ಣವನ್ನೇ ಬದಲಾಯಿಸುವ ಅಧಿಕಾರಹೊಂದಿದ್ದ. ಅದಕ್ಕೇ ಮನುವಿಗೆ ನಮ್ಮ ಪರಂಪರೆಯಲ್ಲಿ ಅಪಾರವಾದ ಗೌರವ. ಅದಕ್ಕೇ ಮನು ಎನ್ನುವುದು ಒಬ್ಬನೇ ವ್ಯಕ್ತಿಯೋ ಅದು ವರ್ಣ ಬದಲಾಯಿಸುವ ಅಧಿಕಾರ ಪಡೆದವನ ಪದವಿಯೋ ಎನ್ನುವುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಇಂತಹುದೊಂದು ಮಹತ್ವದ ಗೌರವ ಮನುವಿಗಿದ್ದುದರಿಂದಲೇ ಸುಮತಿ ಭಾರ್ಗವ ತನ್ನ ಕೃತಿಗೆ ‘ಮನುಸ್ಮೃತಿ’ ಎಂಬ ಹೆಸರಿಟ್ಟಿರಬೇಕೆಂಬುದರಲ್ಲಿ ಈಗ ಯಾವ ಅನುಮಾನವೂ ಉಳಿಯಲಾರದು.
ವರ್ಣ ನಿರ್ಣಯದ ಪದ್ಧತಿ ಹೀಗೆ ನಡೆಯುತ್ತಿತ್ತೆನ್ನುವುದನ್ನು ಒಪ್ಪುವುದೇ ಆದರೆ ಆರಂಭದಲ್ಲಿ ಇದು ಋಷಿಗಳ ಮತ್ತು ಮನುವಿನ ಅಂತರ್ದೃಷ್ಟಿಯ ಆಧಾರದಲ್ಲಿಯೇ ನಡೆಯುತ್ತಿದ್ದಿರಬೇಕು. ಅಂಬೇಡ್ಕರ್ ಇದನ್ನು ‘ಒರಟೊರಟಾಗಿ ನಡೆಯುತ್ತಿದ್ದ ವರ್ಣನಿರ್ಧಾರ ಪ್ರಕ್ರಿಯೆ’ ಎನ್ನುತ್ತಾರೆ. ಕಾಲಕ್ರಮದಲ್ಲಿ ಗುರುಕುಲ ಪದ್ಧತಿ ವಿಕಸಿತಗೊಂಡು ವಿದ್ಯಾರ್ಥಿಗೆ ತರಬೇತಿ ಕೊಟ್ಟು ಹನ್ನೆರಡು ವರ್ಷದ ಶಿಕ್ಷಣ ನೀಡಿ ಆನಂತರ ವರ್ಣ ನಿರ್ಧಾರ ಮಾಡಲಾಗುತ್ತಿತ್ತು. ಅಂಬೇಡ್ಕರರ ಪ್ರಕಾರ ‘ವರ್ಣ ನಿರ್ಣಯದ ನಂತರ ಗುರುಕುಲದಲ್ಲಿ ಆಚಾರ್ಯರ ಸಮ್ಮುಖದಲ್ಲಿಯೇ ಉಪನಯನ ಸಮಾರಂಭ ನಡೆಸಿ ಆಯಾ ವರ್ಣದ ಕರ್ತವ್ಯಗಳನ್ನು ನಿರ್ವಹಿಸಲು ಅವನನ್ನು ಹೊರ ಜಗತ್ತಿಗೆ ಕಳಿಸಲಾಗುತ್ತಿತ್ತು’. ಅಂದರೆ ಇಂದಿನಂತೆ ಶಿಕ್ಷಣಕ್ಕೆ ಮುನ್ನ ಉಪನಯನವಲ್ಲ ಬದಲಿಗೆ ಶಿಕ್ಷಣ ಮುಗಿದು ವರ್ಣ ನಿರ್ಣಯದ ಮುನ್ನ ಉಪನಯನ!
ಓಹ್! ವ್ಯಕ್ತಿಯೊಬ್ಬನಿಗೆ ಶ್ರೇಷ್ಠ ವರ್ಣ ಹೊಂದಲು ಬೇಕಾದ ತರಬೇತಿ ನೀಡಿ ಪರೀಕ್ಷೆ ನಡೆಸಿ ವರ್ಣದ ಸರ್ಟಿಫಿಕೇಟು ದಯಪಾಲಿಸುವ ಅತ್ಯಂತ ಶ್ರೇಷ್ಠವಾದ ವ್ಯವಸ್ಥೆ ಇದು. ‘ವರ್ಣ ನಿರ್ಧಾರಕ್ಕೆ ಮುನ್ನ ತರಬೇತಿ ಅವಶ್ಯಕ ಅಷ್ಟೇ ಅಲ್ಲ ಇದು ಸ್ವತಂತ್ರವಾದ, ನಿಷ್ಪಕ್ಷವಾದ ಸಂಸ್ಥೆಯಿಂದ ನಿರ್ಧಾರವಾಗಬೇಕೆಂಬ ಪ್ರಯತ್ನ’ ಎಂಬೆರಡು ಅಂಶಗಳನ್ನು ಮುಕ್ತಕಂಠದಿಂದ ಅಂಬೇಡ್ಕರ್ ಶ್ಲಾಘಿಸುತ್ತಾರೆ.
ಎಲ್ಲರೂ ಹೊಗಳಲು ಯೋಗ್ಯವಾಗಿರುವ ಸಂಗತಿಗಳೇ ಭಾರತೀಯ ಪರಂಪರೆಯುದ್ದಕ್ಕೂ ಇರುವಾಗ, ಮತ್ತೆ ಈ ಸ್ಥಿತಿಗೆ ಬಂದದ್ದು ಯಾವಾಗ? ಪ್ರಶ್ನೆ ಎಲ್ಲರಿಗೂ ಸಹಜ. ಅದೊಂದು ರೋಚಕವಾದ ಕಥನ. ಭಾರತದ ಎಲ್ಲ ಬಗೆಯ ದುಸ್ಥಿತಿಗಳಿಗೂ ಮೂಲವಸ್ತು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s