ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ

ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ

ಬ್ರಿಟೀಷರ  ಆಶಯಗಳಿಗೆ ಪೂರಕವಾಗುವಂತಹ ಎಲ್ಲಾ ಸಂಗತಿಗಳು ಮನುಸ್ಮೃತಿಯಲ್ಲಿತ್ತು. ಅದನ್ನು ವೈಭವೀಕರಿಸಿ ಪ್ರಚಾರ ಮಾಡಿದರು. ಮತ್ತೆ ಮತ್ತೆ ಮುದ್ರಿಸಿದರು. ಮೇಲ್ವರ್ಗ ಮತ್ತು ಕೆಳವರ್ಗದ ಕಂದಕ ಎಂದೂ ಮುಚ್ಚಿ ಹೋಗದಂತೆ ನೋಡಿಕೊಂಡರು.
1947ರ ಆಗಸ್ಟ್ 14 ರ ಮಧ್ಯರಾತ್ರಿ ಬ್ರಿಟೀಷರು ದೇಶ ಬಿಟ್ಟುಹೋದರು. ತಮ್ಮೆಲ್ಲ ಜವಾಬ್ದಾರಿಯನ್ನು ಕಮ್ಯುನಿಸ್ಟರ ಹೆಗಲಿಗೇರಿಸಿದರು. ಅವರು ಒಡಕಿನ ಎಲ್ಲಾ ಗೆರೆಗಳನ್ನು ಕೆರೆ ಕೆರೆದು ಅಗಲ ಮಾಡಿದರು. ಸಮಸ್ಯೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಪರಿಹಾರದೆಡೆಗೆ ಬಡ ಜನತೆ ಹೊರಳದಂತೆ ಕಾಯ್ದುಕೊಂಡರು. ನಾವಾದರೋ ಇಂದಿಗೂ ಬಡಿದಾಡುತ್ತಿದ್ದೇವೆ. ಕೆಲವರು ಮನುಸ್ಮೃತಿಯನ್ನು ಧಿಕ್ಕರಿಸಲು ಪ್ರಾಣ ಕೊಡುತ್ತಾರೆ, ಇನ್ನೂ ಕೆಲವರು ಮನುಸ್ಮೃತಿಯನ್ನು ಅಪ್ಪಿಕೊಂಡು ಪ್ರಾಣ ಬಿಡುತ್ತಾರೆ.

1

ಭಾರತದ ಏಕತೆಯ ಅರ್ಧಭಾಗವನ್ನು ನುಂಗಿಹಾಕಿದ್ದು ಬಹುಶಃ ಮನುಸ್ಮೃತಿಯೇ. ಅದರ ಕುರಿತಂತೆ ಮಾತನಾಡುವ ಮುಕ್ಕಾಲು ಪಾಲು ಜನರಿಗೆ ಅದರ ಬಗ್ಗೆ ಗೊತ್ತೇ ಇಲ್ಲ. ಕೆಲವರು ಶ್ಲೋಕದ ಅರ್ಧಪಾದವನ್ನು ಹಿಡಿದು ಬಡಿದಾಡಿದರೆ ಇನ್ನೂ ಕೆಲವರು ಮನು ಎಂಬ ಹೆಸರು ಕೇಳಿದರೆ ಚೀರಾಡುತ್ತಿರುತ್ತಾರೆ. ಇದಕ್ಕೆ ಪ್ರತಿಯಾಗಿ ಮನುಸ್ಮೃತಿಯನ್ನೇ ಜೀವಾಳವೆಂಬಂತೆ, ಅದನ್ನೇ ಬದುಕುತ್ತಿರುವವರಂತೆ ಜೋತಾಡುತ್ತಿರುವವರೊಂದಷ್ಟು ಜನ. ಈ ಲೇಖನ ಬರೆಯುವ ಮುನ್ನ ಮನುಸ್ಮೃತಿಯ ರಚನಾಕಾರರಾರೆಂದು ಅನೇಕರನ್ನು ಕೇಳಿದೆ. ಕೆಲವರು ಪ್ರಳಯದಿಂದ ನಮ್ಮ ರಕ್ಷಿಸಿದ ಮನುವೆಂದರು, ಇನ್ನೂ ಕೆಲವರು ಮನು ಹೇಳಿದ್ದನ್ನು ಆಮೇಲೆ ಯಾರೋ ಬರೆದದ್ದೆಂದರು.
ಇರಲಿ. ವಾಸ್ತವವೇನು ಗೊತ್ತೇ? ಮನುಸ್ಮೃತಿಯೇ ಹೇಳಿಕೊಳ್ಳುವ ಪ್ರಕಾರ ಆದಿಯಲ್ಲಿ ವಿವರಣೆಗೆ ನಿಲುಕದ ನಿಶ್ಚಲತೆಯನ್ನು ಭೇದಿಸಿಕೊಂಡು ವ್ಯಕ್ತವಾದ ಭಗವಂತ ಪ್ರಪಂಚ ಸೃಷ್ಟಿಸಿದ. ಅಲ್ಲಿಂದಾಚೆಗೆ ಬ್ರಹ್ಮನ ಸೃಷ್ಟಿ. ಆನಂತರ ಬ್ರಹ್ಮ ಆಕಾಶ-ಭೂಮಿಗಳನ್ನು ನಿರ್ಮಿಸಿದ. ಸತ್ತ್ವ-ರಜಸ್ಸು-ತಮಸ್ಸುಗಳಿಂದ ಕೂಡಿದ ಸಕಲ ಸೃಷ್ಟಿಯೂ ಆನಂತರವೇ ಆದದ್ದು. ಈ ಸೃಷ್ಟಿಯ ಕಾಲಕ್ಕೆ ಋಷಿಗಳಾದಿಯಾಗಿ ಮನುವೂ ಹುಟ್ಟಿದ್ದು. ಈ ಮನುವಿಗೆ ಸಾಕ್ಷಾತ್ ಬ್ರಹ್ಮನೇ ವರ್ಣ ಧರ್ಮವನ್ನು ಬೋಧಿಸಿದನಂತೆ. ಆಮೇಲೆ ಮನು ಇದನ್ನು ಭೃಗುವಿಗೆ ಹೇಳಿದ ಅಲ್ಲಿಂದಾಚೆಗೆ ಇದು ಲೋಕಕ್ಕೆಲ್ಲಾ ಹರಡಿತು. ಹಾಗಂತ ಮನುಸ್ಮೃತಿಯ ಆರಂಭಿಕ ಶ್ಲೋಕಗಳ ಅಂಬೋಣ. ಭೃಗುವಿನಿಂದ ಅದನ್ನು ಕೇಳಿ ಈ ರೂಪಕ್ಕೆ ತಂದವರಾರು ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದು ಬಿಡುತ್ತದೆ.
ಹಿಸ್ಟರಿ ಆಫ್ ಧರ್ಮಶಾಸ್ತ್ರ ಬರೆದ ಪಾಂಡುರಂಗ ವಾಮನ ಕಾಣೆ ಮನುಸ್ಮೃತಿಯನ್ನು ಬರೆದವರಾರೆಂದು ಹೇಳುವುದು ಹೆಚ್ಚು ಕಡಿಮೆ ಅಸಾಧ್ಯವೆಂದು ಅಭಿಪ್ರಾಯಪಡುತ್ತಾರೆ. ಬರೆದವ ತನ್ನ ಹೆಸರನ್ನೇ ಬರೆಯದೇ ಮನುವಿನ ಹೆಸರನ್ನಿಟ್ಟಿದ್ದೇಕೆಂಬ ಪ್ರಶ್ನೆಯೂ ಉತ್ತರಿಸಲಾಗದಂಥದ್ದೇ. ಇದಕ್ಕೆ ಉತ್ತರ ನೀಡಲೆಂದೇ ಮ್ಯಾಕ್ಸ್ ಮುಲ್ಲರ್ ಮನುಸ್ಮೃತಿ ಈ ಹಿಂದೆ ಪ್ರಚಲಿತದಲ್ಲಿದ್ದ ಮಾನವ ಧರ್ಮಶಾಸ್ತ್ರವೆಂಬ ಕೃತಿಯಿಂದ ಪ್ರೇರಣೆ ಪಡೆದಿರುವಂಥದ್ದು ಎನ್ನುತ್ತಾರೆ. ಈ ಮಾತನ್ನು ಒಪ್ಪಿಬಿಟ್ಟರೆ ಮನುಸ್ಮೃತಿ ಯಾರೇ ಬರೆದಿರಲಿ ಅದರ ಬೀಜ ಪ್ರಾಚೀನ ಸಾಹಿತ್ಯದಲ್ಲಿಯೇ ಅಡಗಿದೆ ಎಂಬುದನ್ನು ಒಪ್ಪಿಕೊಂಡಂತೆ. ಅಲ್ಲಿಗೆ ಈ ಸಾಹಿತ್ಯದಲ್ಲಿ ಬರಬಹುದಾದ ಎಲ್ಲಾ ವಿಕೃತಿಗಳಿಗೂ ಬ್ರಾಹ್ಮಣ-ಶೂದ್ರ ವ್ಯವಸ್ಥಾ ಭೇದಗಳಿಗೂ ಭಾರತದ ಪ್ರಾಚೀನ ಸಾಹಿತ್ಯಗಳೇ ಕಾರಣ ಎಂದಂತಾಗುತ್ತದೆ. ಆದರೆ ಕಾಣೆಯವರು ಮಾನವಗೃಹ್ಯ ಸೂತ್ರಗಳನ್ನು ಮತ್ತು ಮನುಸ್ಮೃತಿಯನ್ನು ತುಲನೆ ಮಾಡಿ ಒಂದಕ್ಕೊಂದು ಸಂಬಂಧವಿಲ್ಲದ್ದಷ್ಟೇ ಅಲ್ಲ, ವಿರುದ್ಧವಾಗಿರುವ ಅನೇಕ ಸಂಗತಿಗಳನ್ನು ಉಲ್ಲೇಖಿಸುತ್ತಾರೆ. ಅಷ್ಟೇ ಅಲ್ಲ. ಹಾಗೊಂದು ಮಾನವ ಧರ್ಮಶಾಸ್ತ್ರವೆಂದು ಇತ್ತೆಂಬುದನ್ನೇ ಅವರು ವಿರೋಧಿಸುತ್ತಾರೆ. ಸ್ವತಃ ಅಂಬೇಡ್ಕರರು ಈ ವಾದವನ್ನು ಸಮ್ಮತಿಸುತ್ತಾರೆ. ಅಲ್ಲಿಗೆ ಈ ಸ್ಮೃತಿ ಸ್ವಾಯಂಭುವ ಮನುವಿನ ಕಾಲದ್ದಂತೂ ಅಲ್ಲವೆಂದು ಖಾತ್ರಿಯಾಯ್ತು. ಅಂದಮೇಲೆ ಇದನ್ನು ಬರೆದವರಾರು?

4
ಇದಕ್ಕೆ ಅಂಬೇಡ್ಕರರು ಉತ್ತರಿಸುತ್ತಾರೆ. ‘ಭಾರತದ ಪ್ರಾಚೀನ ಇತಿಹಾಸದಲ್ಲಿ ಮನು ಎಂಬ ಹೆಸರಿಗೆ ತುಂಬಾ ಗೌರವ ಇರುವುದರಿಂದ ಈ ಸಂಹಿತೆಗೂ ಆ ಪ್ರಾಚೀನ ಗೌರವ ದಕ್ಕಲೆಂಬ ಉದ್ದೇಶದಿಂದಲೇ ಮನುವಿನ ಹೆಸರನ್ನು ಅದಕ್ಕೆ ಜೋಡಿಸಲಾಯಿತು. ಇದು ಜನರನ್ನು ಮೋಸಗೊಳಿಸುವ ಉದ್ದೇಶದ ದಗಾಕೋರತನವೆಂಬುದರಲ್ಲಿ ಅನುಮಾನವಿಲ್ಲ. ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ನಾರದ ಸ್ಮೃತಿ ರಚಿಸಿದವನಿಗೆ ಮನುಸ್ಮೃತಿಯ ಕರ್ತೃವಿನ ಹೆಸರು ಗೊತ್ತಿದ್ದು ಅದನ್ನು ಆತ ಹೊರಗೆಡಹಿದ್ದಾನೆ. ಆತನ ಪ್ರಕಾರ ಮನುಸ್ಮೃತಿ ರಚಿಸಿದವನ ಹೆಸರು ಸುಮತಿ ಭಾರ್ಗವ. ಈ ಸುಮತಿ ಭಾರ್ಗವ ಪೌರಾಣಿಕ ವ್ಯಕ್ತಿಯಾಗಿರದೇ ಚಾರಿತ್ರಿಕ ವ್ಯಕ್ತಿಯೊಬ್ಬನ ಹೆಸರಾಗಿರಬೇಕು’ ಎನ್ನುತ್ತಾರೆ ಅಂಬೇಡ್ಕರ್. ಹೌದು. ನಾರದ ಸ್ಮೃತಿಯಲ್ಲಿ ಸುಮತಿ ಭಾರ್ಗವನ ಉಲ್ಲೇಖ ಮಾಡುತ್ತ ಮನುವಿನಿಂದ ಭೃಗುವಿಗೆ ಸಾವಿರಾರು ಶ್ಲೋಕಗಳೊಂದಿಗೆ ಬಂದ ಈ ಸ್ಮೃತಿಯನ್ನು ಮುಂದೆ ಸುಮತಿ ಭಾರ್ಗವ 4000 ಶ್ಲೋಕಗಳಿಗೆ ಇಳಿಸಿದರು ಎಂದಿದೆ. ಇಂದು ನಮಗೆ ಕೈ ಸಿಕ್ಕಿರುವ ಮನುಸ್ಮೃತಿಯಲ್ಲಿ ಮೂರು ಸಾವಿರಕ್ಕಿಂತಲೂ ಕಡಿಮೆ ಶ್ಲೋಕಗಳಿವೆ. ಹಾಗೆ ನೋಡಿದರೆ ಮಹಾಭಾರತದಲ್ಲೂ ಕೆಲವೆಡೆ ಮನುವಿನ ಹೆಸರಿನ ಉಲ್ಲೇಖ ಬಂದಿದೆ. ಮನು ಶಾಸ್ತ್ರದ ಕುರಿತಂತೆ ಅನುಶಾಸನ ಪರ್ವದಲ್ಲಿ ಒಂದೆಡೆ ಹೇಳಲಾಗುತ್ತದೆ. ಅದು ಇದೇ ಸುಮತಿ ಭಾರ್ಗವನ ಮನು ಶಾಸ್ತ್ರವೋ ಅಥವಾ ಬೇರೆ ಯಾವುದಾದರೂ ಇದೆಯೋ ಗೊತ್ತಿಲ್ಲ. ಆದರೆ ವಿದ್ವಾಂಸರು ಒಂದಂತೂ ಸ್ಪಷ್ಟವಾಗಿ ನಿಷ್ಟಷರ್ೆಗೆ ತಂದಿರುವ ಸಂಗತಿಯೆಂದರೆ, ಯಾಜ್ಞ್ಯವಲ್ಕ್ಯ ಮತ್ತು ನಾರದ ಸ್ಮೃತಿಗಳು ಮನುಸ್ಮೃತಿಯ ನಂತರದವು ಅಂತ! ಸುಮತಿ ಭಾರ್ಗವ ಪುಷ್ಯಮಿತ್ರನ ಕಾಲದಲ್ಲಿದ್ದವನೆಂದು ಅಂಬೇಡ್ಕರ್ ವಾದಿಸುತ್ತಾರೆ. ಇತಿಹಾಸದ ಆಳ-ವಿಸ್ತಾರಗಳಿಗೆ ಹೋಲಿಸಿದರೆ ಪುಷ್ಯಮಿತ್ರನ ಕಾಲ ಇತ್ತೀಚಿನದೇ. ಕಾಣೆಯವರು ಪರಿಚಯಿಸುವ ಸುಮತಿ ಭಾರ್ಗವ ಮತ್ತು ಅಂಬೇಡ್ಕರರು ಹೇಳುವ ಸುಮತಿ ಭಾರ್ಗವ ಒಬ್ಬರೇನಾ? ಅಥವಾ ಶುಂಗ ಸಾಮ್ರಾಜ್ಯದ ಕಾಲಕ್ಕೆ ಮತ್ತೊಂದು ಮನುಸ್ಮೃತಿಯೇ ರಚನೆಯಾಯ್ತಾ?
ಇವೆಲ್ಲ ಗಂಭೀರವಾದ ಚರ್ಚೆಯೇ. ಮನುಸ್ಮೃತಿಯ 10 ನೇ ಅಧ್ಯಾಯದ 44 ನೇ ಶ್ಲೋಕದಲ್ಲಿ ಕಾಂಬೋಜ, ಯವನ, ಶಕ, ಚೀನ, ಕಿರಾತರನ್ನೆಲ್ಲ ಉಲ್ಲೇಖಿಸಿರುವುದು ನೋಡಿದರೆ ಹಾಗೆಯೇ ಮೇದ, ಆಂಧ್ರರ ಹೆಸರುಗಳು ಬಂದಿರುವ ಪರಿ ನೋಡಿದರೆ ಕ್ರಿ.ಪೂ 3ನೇ ಶತಮಾನಕ್ಕಿಂತಲೂ ಹಿಂದೆ ಮನುಸ್ಮೃತಿ ರಚನೆಯಾಗಿರುವ ಸಾಧ್ಯತೆಯೇ ಇಲ್ಲ ಎನ್ನುತ್ತಾರೆ ಇತಿಹಾಸಕಾರರು. ‘ನ ಶೂದ್ರ ರಾಜ್ಯೆ ನಿವಸೇತ್’ (4,61) ಎಂದು ಮನುಸ್ಮೃತಿಯಲ್ಲಿ ಹೇಳುವ ಪರಿ ನೋಡಿದರೆ ಮೌರ್ಯ ಸಾಮ್ರಾಜ್ಯವನ್ನೇ ಕುರಿತು ಹೇಳಿರಬಹುದೆಂಬ ಅನುಮಾನ ಖಂಡಿತ ಬರಲು ಸಾಕು. ಯವನ, ಕಾಂಬೋಜ, ಗಾಂಧಾರದ ಉಲ್ಲೇಖ ಅಶೋಕನ ಶಿಲಾಲೇಖನಗಳಲ್ಲಿ ದೊರೆತಿರುವುದರಿಂದ ಅಶೋಕನ ನಂತರವೇ ರಚನೆಯಾದ ಸಾಹಿತ್ಯ ಎನ್ನುವುದಕ್ಕೆ ಬಲವಾದ ಆಧಾರ ದೊರೆಯುತ್ತದೆ. ಅಷ್ಟೇ ಅಲ್ಲ. ಕೊನೆಯ ಅಧ್ಯಾಯದ ನೂರನೇ ಶ್ಲೋಕದಲ್ಲಿ ಸೇನಾಧಿಪತ್ಯ, ರಾಜ್ಯಾಧಿಪತ್ಯ, ನ್ಯಾಯಾಧಿಪತ್ಯ ಮತ್ತು ಸಮಸ್ತ ಲೋಕಾಧಿಪತ್ಯವನ್ನು ಹೊಂದಲು ವೇದ ಶಾಸ್ತ್ರಗಳನ್ನು ಅರಿತಿರಬೇಕೆಂಬರ್ಥದ ಸಾಲು ಗಮನೀಯ. ಪುಷ್ಯಮಿತ್ರ ತನ್ನ ತಾನು ಕೊನೆಯವರೆಗೂ ‘ಸೇನಾಪತಿ’ ಎಂದು ಕರೆದುಕೊಂಡಿದ್ದನ್ನು ಗಮನದಲ್ಲಿಟ್ಟುಕೊಂಡೇ ಈ ಶ್ಲೋಕದ ಅಂತರಾರ್ಥವನ್ನು ಊಹಿಸಬಹುದು. ಮತ್ತು ನಾವಿಂದು ಪ್ರಾಚೀನ ಎಂದು ಕರೆಯುತ್ತಿರುವ ಮನುಸ್ಮೃತಿ ನಿಸ್ಸಂಶಯವಾಗಿ ಅಶೋಕನ ನಂತರದ ಶುಂಗ ಸಾಮ್ರಾಜ್ಯದ ವೇಳೆಗೆ ನಿಮರ್ಾಣಗೊಂಡ ಕೃತಿ ಎಂದು ಒಪ್ಪಬಹುದು. ತನ್ನ ಕೃತಿಗೆ ಹೆಚ್ಚಿನ ಅಧಿಕಾರ ವಾಣಿ ದಕ್ಕಲೆಂದು ರಚನಕಾರ ಅದನ್ನು ಮನುಸ್ಮೃತಿ ಎಂದು ಕರೆದಿರಬಹುದು ಅಷ್ಟೇ. ಅಥವಾ ರಾಜ ಇದನ್ನು ಕಾನೂನು ಎಂದು ಒಪ್ಪಿದ ಮೇಲೆ ಜನರೇ ಇದನ್ನು ಮನುಸ್ಮೃತಿ ಎಂದು ಗುರುತಿಸಿರಬಹುದು. ಅದೂ ಹಾಗೇ ಅಲ್ಲವೇ, ಕೆಲವೊಮ್ಮೆ ಮಾತಿನ ಭರದಲ್ಲಿ ‘ಅವರ ಪಾಲಿಗೆ ಅದೇ ಬೈಬಲ್ಲು’ ಎಂದು ಬಿಡೋದಿಲ್ಲವೇ? ಅದರರ್ಥ ಆ ಕೃತಿಯ ಮಹತ್ವ ಅವರ ಪಾಲಿಗೆ ಬೈಬಲ್ಲಿನಷ್ಟೇ ಅಂತ. ಹಾಗೆಯೇ ಇಲ್ಲೂ ಆಗಿರಬೇಕು.

3
ಕೆಲವೊಮ್ಮೆ ಲಭ್ಯ ಕೃತಿಯಲ್ಲಿಯೂ ಅನೇಕ ಕಡೆಗಳಲ್ಲಿ ಗೊಂದಲಗಳಿವೆ. ಬ್ರಾಹ್ಮಣ, ಶೂದ್ರ ಮಹಿಳೆಯನ್ನು ಮದುವೆಯಾಗುವ ಕುರಿತಂತೆ ಇರಬಹುದು, ನಿಯೋಗ ಪದ್ಧತಿಯ ಕುರಿತಂತೆ ಇರಬಹುದು ಗೊಂದಲಗಳು ಢಾಳಾಢಾಳಾಗಿ ಕಾಣುತ್ತವೆ. ಇದು ಮೂಲಸ್ಮೃತಿಯಲ್ಲಿ ಕೈಯ್ಯಾಡಿಸಿರುವ ಸಂಕೇತವೋ ಅಥವಾ ಹೊಸ ರಚನೆಯೇ ಹಾಗಿದೆಯೋ ಹೇಳ ಬರುವುದಿಲ್ಲ. ಆದರೆ ಇಂದಿನ ಮನುಸ್ಮೃತಿಯನ್ನು ಭೃಗುವಿನ ಬಾಯಿಗೆ ತುರುಕಲಾಗಿದೆ ಎಂಬ ಅಂಬೇಡ್ಕರರ ಮಾತನ್ನಂತೂ ನಿಸ್ಸಂಶಯವಾಗಿ ಒಪ್ಪಿಕೊಳ್ಳಬಹುದು.
ಅಂಬೇಡ್ಕರರು ಮನುಸ್ಮೃತಿಯನ್ನು ಬಲು ಆಕ್ರೋಶದಿಂದಲೇ ಚಚರ್ೆಗೆಳೆಯುತ್ತಾರೆ. ಪುಷ್ಯಮಿತ್ರನ ಆಳ್ವಿಕೆಯಲ್ಲಿ ಜಾರಿಗೊಂಡ ಈ ಹೊಸ ಶಾಸನ ಸಂಹಿತೆ ‘ಪಾಷಂಡಿಗಳನ್ನು ರಾಜ್ಯದಿಂದಲೇ ಹೊರಹಾಕಬೇಕು; ಅವರನ್ನು ಗೌರವಾದರಗಳಿಂದ ಮಾತನಾಡಿಸಬಾರದು. ನಿಷ್ಫಲವೂ ಅಸತ್ಯವೂ ಆದ ಈ ವೇದ ವಿರೋಧಿ ಸಿದ್ಧಾಂತಗಳು ಪ್ರಾಚೀನವಲ್ಲದ್ದರಿಂದ ಹುಟ್ಟಿ ಹಾಗೆಯೇ ನಶಿಸಿ ಹೋಗುತ್ತವೆ’ ಎನ್ನುವುದನ್ನು ಅವರು ಗುರುತಿಸಿದ್ದಾರೆ. ಈ ವಾಕ್ಯಗಳ ಆಧಾರದ ಮೇಲೆ ಆ ಕೃತಿ ಬೌದ್ಧಾನುಯಾಯಿಗಳ ವಿರೋಧಕ್ಕಾಗಿಯೇ ಹುಟ್ಟಿದ್ದೆಂದು ಅಂಬೇಡ್ಕರರು ಸಾಬೀತು ಪಡಿಸುತ್ತಾರೆ. ವೇದ ವಿರೋಧಿ ಪಾಷಂಡಿಗಳೆಂದರೆ ಅದು ಬೌದ್ಧರೇ ಆಗಿರಬೇಕು. ವೇದ ಬಾಹಿರವಾದ, ಪ್ರಾಚೀನವಲ್ಲದ, ನಿಷ್ಫಲವಾದ, ನಶಿಸಲೇಬೇಕಾದ ಸಿದ್ಧಾಂತ ಬೌದ್ಧ ಧರ್ಮವೇ ಎನ್ನುವುದರಲ್ಲಿ ಅವರಿಗೆ ಎಳ್ಳಷ್ಟೂ ಸಂಶಯವಿಲ್ಲ. ಸ್ವತಃ ಭಾಷ್ಯಕಾರ ಕಲ್ಲೂಕ ಭಟ್ಟನು ಇವು ಬೌದ್ಧ ಧರ್ಮವನ್ನು ಕುರಿತೇ ಹೇಳಿದ್ದೆಂದು ಅಂಬೇಡ್ಕರ್ ದಾಖಲಿಸುತ್ತಾರೆ. ಇಷ್ಟೇ ಅಲ್ಲ. ಮನುಸ್ಮೃತಿಯಲ್ಲಿ ಬ್ರಾಹ್ಮಣರಿಗೆ ಕೊಟ್ಟಿರುವ ಸ್ಥಾನಮಾನಗಳನ್ನು ಎಳೆ-ಎಳೆಯಾಗಿ ವಿವರಿಸುವ ಅಂಬೇಡ್ಕರ್ ಇದು ಬ್ರಾಹ್ಮಣರನ್ನು ಮೇಲೆತ್ತಿ ಬೌದ್ಧಧರ್ಮೀಯರನ್ನು ತುಳಿಯುವ ಹಂಚಿಕೆ ಎಂದು ದೃಢ ದನಿಯಲ್ಲಿ ಹೇಳುತ್ತಾರೆ. ಅದೂ ಸರಿಯೇ. ಐವತ್ತು ವರ್ಷಗಳಷ್ಟು ದೀರ್ಘಕಾಲ ಯಾವ ಸ್ಥಾನಮಾನವೂ ಇಲ್ಲದೇ ಬೇಯುತ್ತಿದ್ದ ಬ್ರಾಹ್ಮಣರು ಏಕಾಕಿ ಇಂತಹುದೊಂದು ಬಲವಾದ ಛತ್ರಛಾಯೆ ಬಯಸಿದ್ದಿರಬಹುದು. ಈ ಆಧಾರಗಳ ಮೇಲೆ ಇದು ಪುಷ್ಯಮಿತ್ರನ ಕಾಲದ್ದೆಂದು ಸ್ಪಷ್ಟ ದನಿಯಲ್ಲಿ ಅಂಬೇಡ್ಕರ್ ವಾದಿಸುತ್ತಾರೆ. ಒಂದು ಹೆಜ್ಜೆ ಮುಂದೆ ಹೋಗಿ ಪುಷ್ಯಮಿತ್ರನೇ ಇಂತಹುದೊಂದು ಸಿದ್ಧಾಂತದ ಸೃಷ್ಟಿ ಮಾಡುವ ಆದೇಶ ನೀಡಿದ ಎನ್ನುತ್ತಾರೆ.
ಮನುಸ್ಮೃತಿಯಲ್ಲಿ ದಾಖಲಾಗಿರುವ ಅಂಶಗಳ ಕುರಿತಂತೆ ಎಳೆ ಎಳೆಯಾಗಿ ಚರ್ಚೆ ಮಾಡಬೇಕೆಂಬ ಬಯಕೆ ಅನೇಕರಿಗೆ. ಆದರೆ ಅಂಬೇಡ್ಕರರ ವಾದಗಳನ್ನೇ ಆಧಾರವಾಗಿರಿಸಿಕೊಂಡರೂ ಅದೊಂದು ಚರ್ಚೆಗೆ ಯೋಗ್ಯವೇ ಅಲ್ಲದ ಕೃತಿ. ಅದಕ್ಕೆ ಯಾವ ಪ್ರಾಚೀನ ಮೌಲ್ಯವೂ ಇಲ್ಲ. ಅದು ವಿಸ್ತಾರವಾದ ಮೌರ್ಯ ಸಾಮ್ರಾಜ್ಯ ಪತನಗೊಂಡ ಮೇಲೆ ಹುಟ್ಟಿಕೊಂಡ ಸಾಮಾನ್ಯ ಸಾಹಿತ್ಯ. ಆಸ್ಥಾನದಲ್ಲಿನ ಕಾನೂನು ತಜ್ಞ ಬರೆದಿರಬಹುದಾದ ಕೃತಿಯೊಂದನ್ನು ಸ್ಮೃತಿಯ ಮಟ್ಟಕ್ಕೇರಿಸಿಬಿಟ್ಟಿರುವ ಅಪದ್ಧ. ಹೌದು ತಾನೇ? ಪುಷ್ಯಮಿತ್ರನಿಗೂ ಮುನ್ನ ಮನುಸ್ಮೃತಿ ಇರಲಿಲ್ಲ, ಆತನ ನಂತರ ಮತ್ತೆ ಅದನ್ನು ಮುಂದುವರೆಸಿದ ಉದಾಹರಣೆಗಳಿರಲಿಲ್ಲ. ಹಾಗೆ ಅದೇ ಮುಂದುವರೆದಿದ್ದರೆ ಯಾಜ್ಞ್ಯವಲ್ಕ್ಯ ಮತ್ತು ನಾರದಸ್ಮೃತಿಗಳು ರಚನೆಯಾಗಬೇಕಾದ ಅಗತ್ಯ ತೋರುತ್ತಿರಲಿಲ್ಲ. ಹಾಗಿದ್ದ ಮೇಲೆ ‘ಮನುಸ್ಮೃತಿ’ ಈ ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಕೃತಿ ಹೇಗಾಯ್ತು? ಅದನ್ನೇ ಆಧಾರವಾಗಿರಿಸಿಕೊಂಡು ಬ್ರಾಹ್ಮಣ-ಶೂದ್ರರ ನಡುವಿನ ಕಂದಕವನ್ನು ಅಗಾಧ ಮಾಡಿಬಿಟ್ಟರಲ್ಲ! ಇಂದಿಗೂ ಮನುವಾದಿಗಳೆಂದು ಕೆಲವರನ್ನು ಜರಿಯುತ್ತಾರಲ್ಲ! ಹೀಗೇಕಾಯ್ತು?
ಇಷ್ಟಕ್ಕೂ ಮನುಸ್ಮೃತಿಯೊಂದೇ ಕಾನೂನು ಗ್ರಂಥವಲ್ಲ ಭಾರತಕ್ಕೆ. ಅದಕ್ಕೂ ಮುನ್ನ ಚಾಣಕ್ಯನ ಅರ್ಥಶಾಸ್ತ್ರ ಅಶೋಕನೂ ಆಡಳಿತ ನಡೆಸುವಲ್ಲಿ ಮಾರ್ಗದರ್ಶನ ಮಾಡುತ್ತಿದ್ದಂಥದ್ದು. ಗೌತಮನ, ಆಪಸ್ತಂಭನ ಸೂತ್ರಗಳೂ ಸಮಾಜಕ್ಕೆ ಕಂದೀಲಾಗಿದ್ದವು. ಸ್ವತಃ ಮಹಾಭಾರತ ಈ ಬಗೆಯ ಅನೇಕ ಸೂತ್ರಗಳನ್ನೂ ಜೀವಂತ ಉದಾಹರಣೆಯನ್ನೂ ಆಧಾರವಾಗಿಟ್ಟುಕೊಂಡು ಹೇಳಿತ್ತು. ಶಾಂತಿಪರ್ವದಲ್ಲಿ ಭೀಷ್ಮನ ಉಪದೇಶಗಳೂ ಸ್ಮೃತಿ ವಾಕ್ಯಗಳಿದ್ದಂತೆಯೇ. ಇಷ್ಟೆಲ್ಲಾ ಸಾಹಿತ್ಯಗಳ ರಾಶಿ ಇದ್ದಾಗ್ಯೂ ಕೆಲವೇ ವರ್ಷಗಳ ಕಾಲ ರಾಜ್ಯದ ನಿಯಮಗಳನ್ನು ನಿರ್ದೇಶಿಸುತ್ತಿದ್ದ (ಅದಕ್ಕೂ ಸೂಕ್ತ ಪುರಾವೆಗಳಿಲ್ಲ) ಮನುಸ್ಮೃತಿ ಇಷ್ಟೊಂದು ಚರ್ಚೆಯ ವಸ್ತುವಾಗಿದ್ದು ಹೇಗೆ? ಯೋಚಿಸಬೇಕಾದ ಪ್ರಶ್ನೆಯಲ್ಲವೇನು?
18 ನೇ ಶತಮಾನದಲ್ಲಿ ಲಂಡನ್ನಿನ ಹೌಸ್ ಆಫ್ ಕಾಮನ್ಸ್ನಲ್ಲಿ ಭಾರತೀಯರನ್ನು ಕ್ರಿಶ್ಚಿಯನ್ನರನ್ನಾಗಿಸುವ ಕುರಿತಂತೆ ಜೋರು ಜೋರಾದ ಚಚರ್ೆ ನಡೆದಿತ್ತು. ವಿಲಿಯಂ ವಿಲ್ಬರ್ ಫೋರ್ಸ್ಸ ತನ್ನ ವಾದವನ್ನು ಜೋರಾಗಿ ಮಂಡಿಸುತ್ತಿದ್ದ. ಅಲ್ಲಿಯೂ ಭಾರತದ ಪರವಾಗಿ ನಿಂತಿದ್ದ ಕೆಲವು ಸಾಂಸದರು ಭಾರತದಿಂದ ಕಲಿಯಬೇಕಾದ ಅಂಶಗಳು ಸಾಕಷ್ಟಿವೆ ಎಂದಾಗ ಆತ ಬ್ರಾಹ್ಮಣರು ದಲಿತರನ್ನು ತುಚ್ಛವಾಗಿ ಕಾಣುತ್ತಿದ್ದ ಅಂಶವನ್ನು ವಿವರಿಸಿ ದಲಿತರನ್ನು ಮೇಲೆತ್ತಲು ಕ್ರಿಸ್ತನೇ ದಾರಿ ಎಂದು ಪ್ರಭಾವಿಯಾಗಿ ಮಂಡಿಸಿದ. ಆನಂತರ ಅವನ ವಾದವನ್ನು ಪುಷ್ಟೀಕರಿಸುವ ಸಾಹಿತ್ಯಗಳನ್ನೆಲ್ಲ ವೈಭವೀಕರಿಸಲಾಯ್ತು. ವೇದಗಳಿಗೆ ಮ್ಯಾಕ್ಸ್ ಮುಲ್ಲರ್ನಿಂದ ಭಾಷ್ಯ ಬರೆಸಿ ಅದನ್ನು ಹಾಳುಗೆಡವಲಾಯ್ತು. ಭಾರತೀಯ ಸಾಹಿತ್ಯಗಳಿಗೆಲ್ಲ ಯೂರೋಪಿನ ಲೇಪ ಕೊಟ್ಟು ಎಲ್ಲವನ್ನೂ ಧ್ವಂಸಗೊಳಿಸಲಾಯ್ತು. ಇದೇ ನಿಟ್ಟಿನಲ್ಲಿ ಬ್ರಿಟೀಷರ ಕೈ ಸೇರಿದ ಕೃತಿ ಮನುಸ್ಮೃತಿ. ಅವರ ಆಶಯಗಳಿಗೆ ಪೂರಕವಾಗುವಂತಹ ಎಲ್ಲಾ ಸಂಗತಿಗಳು ಈ ಕೃತಿಯಲ್ಲಿತ್ತು. ಅದನ್ನು ವೈಭವೀಕರಿಸಿ ಪ್ರಚಾರ ಮಾಡಿದರು. ಮತ್ತೆ ಮತ್ತೆ ಮುದ್ರಿಸಿದರು. ಮೇಲ್ವರ್ಗ ಮತ್ತು ಕೆಳವರ್ಗದ ಕಂದಕ ಎಂದೂ ಮುಚ್ಚಿ ಹೋಗದಂತೆ ನೋಡಿಕೊಂಡರು.
1947ರ ಆಗಸ್ಟ್ 14 ರ ಮಧ್ಯರಾತ್ರಿ ಬ್ರಿಟೀಷರು ದೇಶ ಬಿಟ್ಟುಹೋದರು. ತಮ್ಮೆಲ್ಲ ಜವಾಬ್ದಾರಿಯನ್ನು ಕಮ್ಯುನಿಸ್ಟರ ಹೆಗಲಿಗೇರಿಸಿದರು. ಅವರು ಒಡಕಿನ ಎಲ್ಲಾ ಗೆರೆಗಳನ್ನು ಕೆರೆ ಕೆರೆದು ಅಗಲ ಮಾಡಿದರು. ಸಮಸ್ಯೆಗಳನ್ನೇ ಮತ್ತೆ ಮತ್ತೆ ಹೇಳುತ್ತಾ ಪರಿಹಾರದೆಡೆಗೆ ಬಡ ಜನತೆ ಹೊರಳದಂತೆ ಕಾಯ್ದುಕೊಂಡರು. ನಾವಾದರೋ ಇಂದಿಗೂ ಬಡಿದಾಡುತ್ತಿದ್ದೇವೆ. ಕೆಲವರು ಮನುಸ್ಮೃತಿಯನ್ನು ಧಿಕ್ಕರಿಸಲು ಪ್ರಾಣ ಕೊಡುತ್ತಾರೆ, ಇನ್ನೂ ಕೆಲವರು ಮನುಸ್ಮೃತಿಯನ್ನು ಅಪ್ಪಿಕೊಂಡು ಪ್ರಾಣ ಬಿಡುತ್ತಾರೆ. ದೇಶ-ಧರ್ಮಗಳು ಮಾತ್ರ ನಲುಗುತ್ತಲೇ ಇವೆ!

One thought on “ಚರ್ಚಿಸಬೇಕಾದ ಕೃತಿಯೇ ಅಲ್ಲ, ಮನುಸ್ಮೃತಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s