ರಾಷ್ಟ್ರನಿರ್ಮಾಣದ ಕನಸು ಕಂಡವನಿಗೆ ಜೊತೆಯಾದ ತರುಣ!

‘ಅಗ್ನಿಯಂತೆ ದೇದೀಪ್ಯಮಾನವಾದ ಇವನು ಚತುರ್ವೇದಗಳನ್ನೂ ಅಧ್ಯಯನ ಮಾಡಿ ವೇದ ವಿದ್ವಾಂಸರಲ್ಲಿ ಅಗ್ರಗಣ್ಯನಾಗಿ ಶೋಭಿಸಿದ. ವಜ್ರಾಯುಧದಂತೆ ತೇಜಸ್ವಿಯಾದ ಈತನ ಅಭಿಚಾರ ವಿದ್ಯೆಯೆಂಬ ವಜ್ರಾಯುಧದಿಂದ ನಂದ ಪರ್ವತವೇ ಸಮೂಲ ನಾಶವಾಯ್ತು. ಏಕಾಂಗಿಯಾದರೂ ತನ್ನ ಬ್ರಹ್ಮತೇಜಸ್ಸಿನ ಬಲದಿಂದಲೇ ಭೂಮಂಡಲದ ಅಧಿಪತ್ಯವು ಮೌರ್ಯವಂಶದ ಚಂದ್ರಗುಪ್ತ ಮೌರ್ಯನಿಗೆ ದಕ್ಕುವಂತೆ ಮಾಡಿದನು’

3

ಚಾಣಕ್ಯ! ಆ ಹೆಸರೇ ಇಂದಿಗೂ ರೋಮಾಂಚನಗೊಳಿಸುವಂಥದ್ದು. ಯಾರಾದರೂ ಸೂಕ್ಷ್ಮಮತಿಯವರು ಸಿಕ್ಕೊಡನೆ ನಾವೂ ಉದ್ಗರಿಸಿಬಿಡುತ್ತೇವೆ, ‘ಚಾಣಕ್ಯನಿದ್ದಂತೆ ಇವನು’ ಅಂತ. ಬ್ರಿಟೀಷ್ ಇತಿಹಾಸಕಾರರ ಪ್ರಕಾರವೇ ಲೆಕ್ಕ ಹಾಕುವುದಾದರೆ ಎರಡೂವರೆ ಸಾವಿರ ವರ್ಷಗಳಷ್ಟು ಹಳಬ ಆತ. ಇನ್ನು ಶ್ರೀರಾಮ್ ಸಾಠೆಯಂತಹವರ ವಾದವನ್ನು ಒಪ್ಪಿದರೆ ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಹಿಂದಿನವ! ಇಷ್ಟೊಂದು ದೀರ್ಘಕಾಲದ ನಂತರವೂ ನಮ್ಮ ಪ್ರಜ್ಞಾಪ್ರವಾಹದಲ್ಲಿ ಉಳಿದು ಬಂದಿರುವ ಈ ವ್ಯಕ್ತಿ ಸಾಮಾನ್ಯರಾಗಿರಲು ಸಾಧ್ಯವೇ ಇಲ್ಲ, ಅಲ್ಲವೇ?
ಚಾಣಕ್ಯರ ಹುಟ್ಟು-ಬಾಲ್ಯಗಳ ಕುರಿತಂತೆ ಸ್ಪಷ್ಟ ನಿರ್ಣಯಕ್ಕೆ ಬರುವುದು ತುಸು ಕಷ್ಟವೇ. ಅದೂ ಸರಿಯೇ ಎನ್ನಿ. ಇಡಿಯ ದೇಶವನ್ನೇ ತನ್ನದೆಂದು ಬೀಗಿದವ ತನ್ನೂರಿನ ಕುರಿತಂತೆ ವಿಶೇಷ ಅಭಿಮಾನವಿರಿಸಿಕೊಳ್ಳುವುದು ಹೇಗೆ ಸಾಧ್ಯ? ಸಿಂಹಳದ ಬುದ್ಧಾನುಯಾಯಿಗಳ ಕೃತಿ ಮಹಾವಂಶ ಟೀಕೆಯ ಪ್ರಕಾರ ಚಾಣಕ್ಯನ ಹುಟ್ಟೂರು ತಕ್ಷಶಿಲೆ, ಈಗ ಪಾಕೀಸ್ತಾನದಲ್ಲಿದೆ. ಜೈನ ಕೃತಿಕಾರ ಹೇಮಚಂದ್ರನ ‘ಅಭಿದಾನ ಚಿಂತಾಮಣಿ’ಯ ಪ್ರಕಾರ ಆತ ದಕ್ಷಿಣ ಭಾರತದವನು. ಕೆಲವರಂತೂ ಆತನ ಶಿಖೆಯ ಗಂಟಿನ ವರ್ಣನೆಯ ಆಧಾರದ ಮೇಲೆ ಕೇರಳದವನೆಂದು ಬಿಂಬಿಸುವುದೂ ಇದೆ. ಪಂಜಾಬಿನ ಚಣಕ ಎಂಬ ಹಳ್ಳಿಯವನಾದ್ದರಿಂದ ಆ ಹೆಸರು ಬಂದಿತೆಂದೂ ಜಯಮಂಗಲನ ನೀತಿಸಾರದ ಅಭಿಪ್ರಾಯ. ಪರಿಶಿಷ್ಟಪರ್ವದಲ್ಲಿ ‘ಗೊಲ್ಲ ವಿಷಯ’ವೆಂಬುದು ಅವನ ಜನ್ಮಸ್ಥಳವೆಂದು ನಮೂದಾಗಿದೆ ಎನ್ನಲಾಗುತ್ತದೆ. ಜನ್ಮಸ್ಥಳ ಯಾವುದೇ ಇರಲಿ. ಆತ ಬಹುಪಾಲು ಸಮಯವನ್ನು ಕಳೆದಿದ್ದು ಮಾತ್ರ ತಕ್ಷಶಿಲೆಯಲ್ಲಿ ಎಂಬುದಕ್ಕೆ ಯಾವ ಅನುಮಾನವೂ ಉಳಿದಿಲ್ಲ. (Maxims of Chanakya VK Subramanian) ಹೀಗಾಗಿ ಅದೇ ಅವನ ಸ್ವಂತ ಊರು ಅಂತ ತಾತ್ತ್ವಿಕವಾಗಿ ಒಪ್ಪಬಹುದೇನೋ? 12 ವರ್ಷ ಯಾವ ಊರಿನಲ್ಲಿ ವಾಸ ಮಾಡುತ್ತೇವೆಯೋ ಅದೇ ಸ್ವಂತ ಊರು ಅಂತ ಹೇಳೋದಿಲ್ಲವೇ ಹಾಗೇ!

ಕೌಟಿಲ್ಯನ ಊರಿನ ಕುರಿತಂತೆ ಆಕ್ಷೇಪಗಳಿರಬಹುದು. ಆದರೆ ಅವನ ಸಾಮಥ್ರ್ಯದ ಕುರಿತಂತೆ ಯಾರಿಗೂ ಅನುಮಾನವಿಲ್ಲ. ಅವನ ನೇರ ಶಿಷ್ಯನಾದ ಕಾಮಂದಕನು ನೀತಿಸಾರ ಎಂಬ ಕೃತಿಯಲ್ಲಿ ತನ್ನ ಗುರುವಿನ ಗುಣಗಾನವನ್ನು ಅಸಾಧಾರಣವಾಗಿ ಮಾಡಿದ್ದಾನೆ. ‘ಅಗ್ನಿಯಂತೆ ದೇದೀಪ್ಯಮಾನವಾದ ಇವನು ಚತುರ್ವೇದಗಳನ್ನೂ ಅಧ್ಯಯನ ಮಾಡಿ ವೇದ ವಿದ್ವಾಂಸರಲ್ಲಿ ಅಗ್ರಗಣ್ಯನಾಗಿ ಶೋಭಿಸಿದ. ವಜ್ರಾಯುಧದಂತೆ ತೇಜಸ್ವಿಯಾದ ಈತನ ಅಭಿಚಾರ ವಿದ್ಯೆಯೆಂಬ ವಜ್ರಾಯುಧದಿಂದ ನಂದ ಪರ್ವತವೇ ಸಮೂಲ ನಾಶವಾಯ್ತು. ಏಕಾಂಗಿಯಾದರೂ ತನ್ನ ಬ್ರಹ್ಮತೇಜಸ್ಸಿನ ಬಲದಿಂದಲೇ ಭೂಮಂಡಲದ ಅಧಿಪತ್ಯವು ಮೌರ್ಯವಂಶದ ಚಂದ್ರಗುಪ್ತ ಮೌರ್ಯನಿಗೆ ದಕ್ಕುವಂತೆ ಮಾಡಿದನು’ ಎಂದಿದ್ದಾನೆ.(ಚಾಣಕ್ಯ ಸಂಪುಟ ಶ್ರೀ ಅ.ರಾ. ಪಂಚಮುಖಿ)

ಚಾಣಕ್ಯನ ಬದುಕು ಸಾಧನೆಗಳನ್ನೆಲ್ಲಾ ಕವಿ ಸುಂದರವಾಗಿ ಹತ್ತು ಸಾಲುಗಳ ಶ್ಲೋಕದಲ್ಲಿ ಹಿಡಿದಿಟ್ಟುಬಿಟ್ಟಿದ್ದಾನೆ. ಈ ವರ್ಣನೆ ಓದುತ್ತಿದ್ದಂತೆ ಚಾಣಕ್ಯನ ರೂಪವೊಂದು ಕಣ್ಮುಂದೆ ಹಾದು ಹೋಗುವುದಲ್ಲ ಅದು ಆಪ್ಯಾಯವೆನಿಸುವಂತಿರುವುದು ಸಹಜ. ಆದರೆ ನೀವೇನಾದರೂ ಬಾಣನ ಕಾವ್ಯದಲ್ಲಿ ಉಲ್ಲೇಖಗೊಂಡ ಚಾಣಕ್ಯನ ಕುರಿತಂತಹ ಮಾತುಗಳನ್ನು ಕೇಳಿದರೆ ಬೆಚ್ಚಿ ಬೀಳುತ್ತೀರಿ. ‘ತನಗನ್ನಿಸಿದ್ದನ್ನು ಮುಲಾಜಿಲ್ಲದೇ ಮಾಡುವ, ಕ್ರೌರ್ಯದ ಗಣಿಯಾಗಿರುವ, ಪುರೋಹಿತರನ್ನು ಗುರುವಾಗಿ ಹೊಂದಿರುವ, ಕಠಿಣ ಹೃದಯಿ, ಮಾಂತ್ರಿಕ, ಇತರರನ್ನು ಮೋಸಗೊಳಿಸಲೆಂದೇ ಮಂತ್ರಿಗಳನ್ನು ಇಟ್ಟುಕೊಂಡಿರುವ, ಸಂಪತ್ತಿಗಾಗಿ ಹಾತೊರೆಯುವ, ಇತರರ ನಾಶಕ್ಕಾಗಿ ವೈಜ್ಞಾನಿಕ ವಿಧಾನ ಬಳಸುವ ಮತ್ತು ಸಹೋದರರನ್ನು, ಒಲುಮೆಯುಳ್ಳವರನ್ನೂ ಕೊಲೆಗೈಯ್ಯಲು ಹೇಸದ ಕೌಟಿಲ್ಯನ ಯುದ್ಧ ವಿಜ್ಞಾನ ಧರ್ಮಸಮ್ಮತವಾದುದುದೇನು?’ ಎಂದು ಕಠೋರವಾಗಿ ಕೇಳುತ್ತಾನೆ. (Maxims of Chanakya VK Subramanian)

ಶಾಂತ ಪರಿಸರದಲ್ಲಿ ನಿಂತು ಯೋಚಿಸುವಾಗ ಯುದ್ಧ ಕೋವಿದನ ಕುರಿತಂತೆ ಹೀಗೆ ನಿಷ್ಕರ್ಷೆ ಮಾಡುವುದು ಸಹಜ. ಆದರೆ ಚಾಣಕ್ಯ ಇದ್ದಂತಹ ಧರ್ಮ ಭ್ರಷ್ಟತೆಯ ಸಂದರ್ಭದಲ್ಲಿ ಆತ ಕೈಗೊಂಡ ನಿರ್ಣಯಗಳೆಲ್ಲಾ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿದ್ದವೆಂಬುದರಲ್ಲಿ ಯಾರಿಗೂ ಅನುಮಾನವಂತೂ ಉಳಿದಿಲ್ಲ. ಹರಿದು ಚೂರು-ಚೂರಾಗಿದ್ದ ಭಾರತವನ್ನು ಏಕ ಚಕ್ರಾಧಿಪತ್ಯದಡಿಯಲ್ಲಿ ತರುವ ಪ್ರಯತ್ನದಲ್ಲಿ ಚಾಣಕ್ಯರು ಅನೇಕ ಕಠಿಣ ನಿರ್ಣಯಗಳನ್ನು ಕೈಗೊಳ್ಳಬೇಕಾಯ್ತು. ರಕ್ತಪಾತವಿಲ್ಲದೇ ಅಧಿಕಾರಕ್ಕೆ ಚಂದ್ರಗುಪ್ತನನ್ನು ತರುವ ಪ್ರಯಾಸದಲ್ಲಿ ಅದಕ್ಕೆ ಕಾರಣವಾಗಬಹುದಾಗಿದ್ದ ಕೆಲವರನ್ನು ನಿದರ್ಾಕ್ಷಿಣ್ಯವಾಗಿ ಕೊಲ್ಲಿಸಬೇಕಾಯ್ತು. ಸದಾ ಧರ್ಮಕ್ಕೇ ಬದ್ಧನಾಗಿ ನಡೆದುದರಿಂದಲೇ ಚಂದ್ರಗುಪ್ತಮೌರ್ಯ ರಾಜನಾದರೂ, ಪ್ರಜೆಗಳ ಹಿತಕ್ಕಾಗಿ ತಾನು ಹೇಳಿದಂತೆ ಕೇಳುವ ತಾಕೀತು ಮಾಡಿದ್ದ. ಇವೆಲ್ಲವುಗಳ ಕಾರಣದಿಂದಾಗಿಯೇ ಸದಾ ಮುಖ ಗಂಟು ಮಾಡಿಕೊಂಡ, ಕೋಪಿಷ್ಠ, ಎಲ್ಲರ ಮೇಲೂ ಹರಿಹಾಯುವ ಕಠೋರ ವ್ಯಕ್ತಿತ್ವದವನೆಂದು ಎಲ್ಲರೂ ನಿಶ್ಚಯಿಸಿಬಿಟ್ಟಂತಿದೆ. ಆದರೆ ಚಂದ್ರಗುಪ್ತನೊಡನೆ ಇರುವ ದೀರ್ಘಸ್ನೇಹ, ಚಾರರೊಡನೆ ಅವರಿಗಿದ್ದ ಬಾಂಧವ್ಯ, ಅತಿ ಕಠಿಣ ಸಂಗತಿಗಳ ನಿರ್ವಹಣಾ ರೀತಿಯಲ್ಲಿ ಆತ ತೋರುತ್ತಿದ್ದ ಸೂಕ್ಷ್ಮ ಮಾನಸಿಕ ಸ್ಥಿತಿಯನ್ನು ಅವಲೋಕಿಸಿದರೆ ವಜ್ರಕ್ಕಿಂತಲೂ ಕಠೋರ, ಹೂವಿಗಿಂತಲೂ ಮೃದುವಾದ ಮನಸ್ಸುಳ್ಳವನೆನ್ನಬಹುದು.
ಅಖಂಡವಾಗಿದ್ದ ಈ ರಾಷ್ಟ್ರ ಖಂಡ ತುಂಡಾಗಿರುವುದು ಆಚಾರ್ಯ ಚಾಣಕ್ಯರಿಗೆ ನುಂಗಲಾರದ ತುತ್ತಾಗಿತ್ತು. ಬೇರೆ ಬೇರೆ ರಾಜರು ಆಳುತ್ತಿದ್ದರೆ ಸಮಸ್ಯೆ ಇರಲಿಲ್ಲ; ಆಳುವವರಿಗೆ ಧರ್ಮದ ಪರಿಕಲ್ಪನೆ ಸ್ಪಷ್ಟವಾಗಿರಬೇಕಿತ್ತು. ಚಾಣಕ್ಯನ ಕಾಲ ಹೇಗಿತ್ತೆಂದರೆ ಸ್ವಹಿತಾಸಕ್ತಿ ಧರ್ಮಕ್ಕಿಂತ ಮಿಗಿಲಾಗಿಬಿಟ್ಟಿತ್ತು. ಆತನ ರಾಜ್ಯದ ಪರಿಕಲ್ಪನೆ ಶುರುವಾಗುವುದೇ ಅಲ್ಲಿಂದ. ‘ಸುಖಸ್ಯ ಮೂಲಂ ಧರ್ಮಃ ; ಧರ್ಮಸ್ಯ ಮೂಲಮರ್ಥಃ; ಅರ್ಥಸ್ಯ ಮೂಲಂ ರಾಜ್ಯಂ, ರಾಜ್ಯಸ್ಯ ಮೂಲಂ ಇಂದ್ರಿಯ ಜಯಃ’ ಎಂದವನು ಚಾಣಕ್ಯ.

2

ಅರ್ಥ ಬಲು ಸ್ಪಷ್ಟ. ರಾಜನಾದವನಿಗೆ ತಾತ್ಕಾಲಿಕವಾದ ಸುಖ ಹೇಗೆ ಬೇಕಿದ್ದರೂ ದಕ್ಕಬಹುದು; ಶಾಶ್ವತ ಸುಖ ಬೇಕಿದ್ದರೆ ಧರ್ಮಕ್ಕೇ ಮೊರೆ ಹೋಗಬೇಕು. ಧರ್ಮಾಚರಣೆ ಯುಕ್ತ ರೀತಿಯಲ್ಲಿ ಆಗಬೇಕೆಂದರೆ ಅಗತ್ಯವಿದ್ದಷ್ಟು ಅರ್ಥ ಸಂಪಾದನೆಯಾಗಬೇಕು ಮತ್ತು ಧನ ಸಂಪಾದನೆಗೆ ರಾಜನಾದವನು ರಾಜ್ಯದ ಮೊರೆ ಹೊಕ್ಕಬೇಕು. ಕೊನೆಗೆ ರಾಜ್ಯದ ಜನತೆ ನಂಬಿ ನಿಮ್ಮ ಕೈ ಹಿಡಿಯಬೇಕೆಂದರೆ ರಾಜನಾದವನಿಗೆ ಇಂದ್ರಿಯಗಳ ಮೇಲೆ ಹಿಡಿತ ಸಿದ್ಧಿಸಿರಬೇಕು. ಓಹ್! ನಾಲ್ಕು ಸಾವಿರ ವರ್ಷಗಳಷ್ಟು ಹಳೆಯ ಸಂಗತಿ. ಇಂದಿಗೂ ಎಷ್ಟು ಪ್ರಸ್ತುತ ನೋಡಿ. ವೈಭವೋಪೇತ ಬದುಕು ನಡೆಸುವ ರಾಜನ ಕಂಡರೆ ಪ್ರಜೆಗೆ ಅಸಾಧ್ಯವಾದ ಕೋಪ ಸಹಜ. ಆತ ಆ ಕಾರಣಕ್ಕಾಗಿ ತೆರಿಗೆ ವಂಚಿಸುತ್ತಾನೆ. ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ. ಧನದ ಕೊರತೆಯಾದರೆ ಯಾವ ಧರ್ಮ ಕಾರ್ಯಗಳೂ ನಡೆಯಲಾರವು. ಇಂತಹ ಸರ್ವೋಪಯೋಗಿ ಕೆಲಸಗಳು ನಡೆಯದ ರಾಜ್ಯ ಸುಖವಾಗಿರುವುದು ಸಾಧ್ಯವೇ ಇಲ್ಲ. ಕಾಗೆ ಕುಳಿತ ಮಾತ್ರಕ್ಕೆ ಕಾರು ಬದಲಾಯಿಸುವ ರಾಜನ ಕುರಿತ ಜನರ ಭಾವನೆಗೂ, ಚೌಕಟ್ಟಿನೊಳಗೆ ಬದುಕು ನಡೆಸುವ ರಾಜನ ಮಾತಿಗೆ ಓಗೊಟ್ಟು ಸಿಲಿಂಡರ್ ಸಬ್ಸಿಡಿಯನ್ನೂ ಬಿಡುವ ಜನರ ಭಾವನೆಗೂ ಇರುವ ವ್ಯತ್ಯಾಸವನ್ನು ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹುಡುಕಾಡಬಹುದು.
ರಾಜ್ಯ ಶಾಸನದ ಕುರಿತಂತೆ ಸ್ಪಷ್ಟ ಕಲ್ಪನೆ ಹೊಂದಿದ್ದ ಕೌಟಿಲ್ಯ ನಂದರ ಆಳ್ವಿಕೆಯ ಮದವನ್ನು ಕಂಡು ಕೆಂಡವಾಗಿದ್ದ. ಧರ್ಮರಾಜ್ಯ ತನ್ಮೂಲಕ ಸುಖೀ ರಾಜ್ಯಕ್ಕೆ ಆತ ಸಹಜವಾಗಿಯೇ ಹಪಹಪಿಸುತ್ತಿದ್ದ. ಅವನಲ್ಲಿ ಧಗಧಗಿಸುತ್ತಿದ್ದ ಬ್ರಹ್ಮ ತೇಜವಿತ್ತು; ಯೋಜನೆಗಳನ್ನು ರೂಪಿಸಿ, ಆಚರಣೆಗೆ ತರಬಲ್ಲ ತೀಕ್ಷ್ಣ ಬುದ್ಧಿಮತ್ತೆ ಇತ್ತು. ತಾನು ಕಂಡ ಕನಸುಗಳನ್ನು ತನ್ನವಾಗಿಸಿಕೊಂಡು ಜೀವಿಸಬಲ್ಲ ಕ್ಷಾತ್ರತೇಜದ ತರುಣನೊಬ್ಬ ಬೇಕಾಗಿತ್ತು ಅಷ್ಟೇ.
ಅಂಥವನೊಬ್ಬ ಅವನಿಗೆ ಬಲು ಹಿಂದೆಯೇ ಸಿಕ್ಕಿದ್ದನೆಂದು ಕೆಲವು ಐತಿಹ್ಯಗಳು ಹೇಳುತ್ತವೆ. ಬಾಲಕನಾಗಿದ್ದ ಚಂದ್ರಗುಪ್ತನನ್ನು ತಕ್ಷಶಿಲೆಗೊಯ್ದು ತರಬೇತಿ ಕೊಟ್ಟು ಚಾಣಕ್ಯ ಕರೆತಂದ ಅಂತ. ಇದಕ್ಕೆ ಸಂಬಂಧಪಟ್ಟ ಮತ್ತೊಂದು ಕಥೆ ರೋಚಕವಾಗಿದೆ. ಚಾಣಕ್ಯ ತಕ್ಷಶಿಲೆಯಿಂದ ಪಾಟಲೀ ಪುತ್ರಕ್ಕೆಬಂದಿದ್ದ. ನಂದರ ದೌರ್ಜನ್ಯದ ಕಥೆಗಳು ಅವನನ್ನು ಚೂರಿಯಂತೆ ಇರಿಯುತ್ತಿದ್ದವು. ಅದೇ ಗುಂಗಿನಲ್ಲಿ ನಡೆದು ಹೋಗುತ್ತಿದ್ದ ಚಾಣಕ್ಯ ನಡುರಸ್ತೆಗೆ ಅಡ್ಡಲಾಗಿ ಪೊಗದಸ್ತಾಗಿ ಬೆಳೆದಿದ್ದ ಬಳ್ಳಿಯೊಂದಕ್ಕೆ ಕಾಲು ತಾಕಿ ಎಡವಿದ. ಅವನ ಮುಖ ಕೆಂಪೇರಿತು. ಸಾವಿರ ಚೇಳುಗಳು ಒಮ್ಮಗೇ ಕುಟುಕಿದ ಅನುಭವ. ಅಖಂಡ ಭಾರತದ ಪ್ರಗತಿಯ ಓಟಕ್ಕೆ ಅಡ್ಡಗಾಲು ಹಾಕಿ ನಿಂತಿರುವ ನಂದರಂತೆ ಕಂಡಿತು ಆ ಬಳ್ಳಿ. ಆಗಿಂದಾಗ್ಯೆ ಕತ್ತಿ ತಂದು ಕತ್ತರಿಸಿ ಹಾಕಬೇಕಿತ್ತು. ಚಾಣಕ್ಯರ ವಿಧಾನ ಅದಲ್ಲವೇ ಅಲ್ಲ. ಅವರು ರಕ್ತಪಾತವಿಲ್ಲದೇ ಯುದ್ಧ ಗೆಲ್ಲುವ ಛಲದವರು. ಬುದ್ಧಿಯ ಹರಿತವಾದ ಕತ್ತಿಯನ್ನು ಬಳಸಿ ಎದುರಾಳಿಯನ್ನು ಮಣಿಸಬೇಕೆಂದು ಬಯಸಿದವರು. ತಮ್ಮ ಬಳಿ ಇದ್ದ ಬೆಲ್ಲವನ್ನು ತೆಗೆದು ನೀರಿನಲ್ಲಿ ಕದಡಿದರು. ಬೆಲ್ಲದ ಪಾಕವನ್ನು ಹದಕ್ಕೆ ತಂದು ಬಳ್ಳಿಯ ಬೇರಿಗೆ ಚೆನ್ನಾಗಿ ತಾಕುವಂತೆ ಸುರಿದರು.
ದೂರದಿಂದಲೇ ಇದನ್ನು ಗಮನಿಸುತ್ತಿದ್ದ ತರುಣನೊಬ್ಬ ಆಶ್ಚರ್ಯದಿಂದ ಅತ್ತ ಧಾವಿಸಿದ. ಆಚಾರ್ಯರ ಮುಖದಲ್ಲಿನ ದಿವ್ಯ ತೇಜಸ್ಸಿಗೆ ಬೆರಗಾಗಿದ್ದ ಅವನು ಆಚಾರ್ಯರಿಗೆ ನಮಿಸಿ ಅವರ ಕೆಲಸದಲ್ಲಿ ಸಹಾಯಕ್ಕೆ ನಿಂತ. ಧೈರ್ಯ ತಂದುಕೊಂಡು ಹೀಗೇಕೆ ಮಾಡುತ್ತಿದ್ದೀರೆಂದು ಕೇಳಿದ. ‘ಬೇರನ್ನು ಕತ್ತರಿಸಿದರೆ ಮತ್ತೆ ಬೆಳೆಯುತ್ತೆ, ಸಿಹಿಗೆ ಆಕರ್ಷಿತವಾಗಿ ಬಂದ ಕಟ್ಟಿರುವೆಗಳು ಬೇರನ್ನೇ ತಿಂದು ಖಾಲಿ ಮಾಡಿಬಿಡುತ್ತವೆ’ಎಂದರು. ಅವರ ಮಾತಿಗೆ ಅನೇಕಾರ್ಥಗಳು ಹೊಮ್ಮುತ್ತಿದ್ದವು. ಚಂದ್ರಗುಪ್ತನಿಗೆ ಅರ್ಥವಾಯ್ತು. ಸಾಷ್ಟಾಂಗವೆರಗಿದವನೇ ತನ್ನನ್ನು ಶಿಷ್ಯನಾಗಿ ಸ್ವೀಕರಿಸಿ ಎಂದ. ಕಣ್ಣುಗಳು ಒಂದಕ್ಕೊಂದು ಸೇರಿದವು. ಆಚಾರ್ಯರ ಕನಸು ನನಸಾಗುವ ಹೊತ್ತು ಹತ್ತಿರ ಬಂತು.

1
ಮುಂದಿನ ನಾಟಕಕ್ಕೆ ಸೂತ್ರ ಎಳೆಯಬೇಕಿತ್ತಷ್ಟೇ. ಆಚಾರ್ಯರು ನೇರ ಧರ್ಮಛತ್ರ ಹೊಕ್ಕರು. ಅಲ್ಲಿ ಹತ್ತು ಬಂಗಾರದ ತಟ್ಟೆಗಳು ನೂರಾರು ಬೆಳ್ಳಿಯ ತಟ್ಟೆಗಳನ್ನು ಊಟಕ್ಕೆಂದು ಅಣಿಗೊಳಿಸಲಾಗಿತ್ತು. ಅಂದು ನವನಂದರೂ ಬ್ರಾಹ್ಮಣ ಭೋಜನಕ್ಕೆ ಜೊತೆಯಾಗುವವರಿದ್ದುದರಿಂದ ಒಂಭತ್ತು ಬಂಗಾರದ ತಟ್ಟೆಗಳು ಮತ್ತು ಶ್ರೇಷ್ಠ ವಿದ್ವಾಂಸನಿಗಾಗಿ ಮತ್ತೊಂದು ತಟ್ಟೆಯನ್ನಿಡಲಾಗಿತ್ತು. ಚಾಣಕ್ಯ ಮುಲಾಜು ನೋಡಲೇ ಇಲ್ಲ. ತಕ್ಷಶಿಲೆಯ ವಿದ್ಯಾರ್ಥಿಗಳ ಮೆಚ್ಚಿನ ಗುರುವಾಗಿ, ಓರಗೆಯವರಿಗಿಂತ ಹೆಚ್ಚು ಬೌದ್ಧಿಕ ಕ್ಷಮತೆಯುಳ್ಳ ಶಿಕ್ಷಕನಾಗಿ ಗುರುತಿಸಿಕೊಂಡಿದ್ದರಿಂದ ವಿದ್ವಾಂಸನಿಗೆ ಮೀಸಲಾದ ತಟ್ಟೆಯಲ್ಲಿ ಕುಳಿತುಕೊಳ್ಳುವ ಅರ್ಹತೆ ಇದ್ದೇ ಇತ್ತು. ಧರ್ಮಛತ್ರದ ಒಳ ಹೊಕ್ಕವನೇ ಆ ತಟ್ಟೆಯ ಮುಂದೆ ಕುಳಿತುಬಿಟ್ಟ.
ಹಿಂದೊಮ್ಮೆ ಹೀಗೆ ಜನಕನ ಆಸ್ಥಾನದಲ್ಲಿ ಸರ್ವ ಶ್ರೇಷ್ಠ ಪಂಡಿತರು ಇಲ್ಲಿರುವ ಸಾವಿರ ದನಗಳನ್ನು ತಮ್ಮೊಂದಿಗೆ ಕರೆದೊಯ್ಯಬಹುದೆಂದಾಗ ಆ ಸವಾಲು ಸ್ವೀಕರಿಸಿದ್ದವರು ಯಾಜ್ಞ್ಯವಲ್ಕ್ಯರು ಮಾತ್ರ. ರಾಜನ ಘೋಷಣೆ ಕೇಳಿ ಉಳಿದವರು ತಮ್ಮ ತಮ್ಮಲ್ಲೇ ಕಣ್ಸನ್ನೆಯಿಂದಲೇ ಮಾತನಾಡುತ್ತಿರುವಾಗ ಋಷಿವರೇಣ್ಯ ತನ್ನ ಶಿಷ್ಯರತ್ತ ತಿರುಗಿ ಅಷ್ಟೂ ದನಗಳನ್ನು ಆಶ್ರಮಕ್ಕೊಯ್ಯಿರಿ ಎಂದರಂತೆ. ಅವರ ಸಾಮಥ್ರ್ಯಕ್ಕೆ ಎದುರು ನಿಲ್ಲಬಲ್ಲ ಪಾಂಡಿತ್ಯ ಅಲ್ಲಿದ್ದುದು ಗಾಗರ್ಿಗೆ ಮಾತ್ರ. ಆಕೆ ಕೇಳಿದ ಪ್ರಶ್ನೆಗೆ ಸಮರ್ಥವಾಗಿ ಉತ್ತರ ಕೊಟ್ಟು ಸೈ ಎನಿಸಿಕೊಂಡ ಯಾಜ್ಞ್ಯವಲ್ಕ್ಯರು ತಮ್ಮ ಬೌದ್ಧಿಕ ಸಾರ್ವಭೌಮತೆಯನ್ನು ದೃಢಪಡಿಸಿದ್ದರು.
ಈಗ ಚಾಣಕ್ಯರೂ ಅಂತಹುದೇ ಸ್ಥಿತಿಯಲ್ಲಿದ್ದರು. ಆ ತಟ್ಟೆ ಸರ್ವ ಶ್ರೇಷ್ಠ ವಿದ್ವನ್ಮಣಿಗೆಂಬುದು ನಿರ್ಧಾರಿತವೇ ಆದರೆ ಅದು ತನಗೇ ಸೇರಬೇಕೆಂಬುದು ಅವರ ನಿಶ್ಚಿತ ಅಭಿಮತ.
ಅಷ್ಟರೊಳಗೆ ನಂದರ ಗಡಣ ಭೋಜನ ಶಾಲೆಯೊಳಕ್ಕೆ ಬಂತು. ರಾಜರಿಗೆ ಜಯಘೋಷಗಳು ಎಲ್ಲೆಡೆಯಿಂದಲೂ ಮೊಳಗಿದವು. ಅದಾಗಲೇ ತಟ್ಟೆಯ ಮುಂದೆ ಕುಳಿತಿದ್ದ ಬ್ರಾಹ್ಮಣರೆಲ್ಲ ಲಗುಬಗೆಯಿಂದ ಎದ್ದು ನಿಂತರು. ಚಾಣಕ್ಯ ಏಳಲಿಲ್ಲ. ‘ಸ್ವದೇಶೇ ಪೂಜ್ಯತೇ ರಾಜಾ, ವಿದ್ವಾನ್ ಸರ್ವತ್ರ ಪೂಜ್ಯತೇ’ ಎಂಬ ಮಾತನ್ನು ಕೇಳಿಲ್ಲವೇ? ರಾಜನಿಗೆ ತನ್ನ ರಾಜ್ಯದಲ್ಲಷ್ಟೇ ಗೌರವ. ಪಂಡಿತ ಎಲ್ಲಿಗೆ ಹೋದರೂ ಪಂಡಿತನೇ! ಪಂಡಿತೋತ್ತಮ ಚಾಣಕ್ಯರಿಗಂತೂ ಎಲ್ಲರಿಗಿಂತ ಹೆಚ್ಚು ಗೌರವ. ಅವರು ಕೂತಲ್ಲಿಂದ ಏಳಲಿಲ್ಲ. ಧನನಂದನಿಗೆ ಕೋಪ ಬಂತು. ಚಾಣಕ್ಯರನ್ನು ಬಗೆ ಬಗೆಯಾಗಿ ನಿಂದಿಸಿದ. ತಾವು ಗುರುತಿಸಿರುವ ಪಂಡಿತರಿಗೆ ಮಾತ್ರವೇ ಆ ಜಾಗವೆಂದು ಕೂಗಿ ಹೇಳಿದ. ಚಾಣಕ್ಯರು ಜಾಗ ಬಿಟ್ಟು ಕದಲಲಿಲ್ಲ. ರಾಜ ಪುರೋಹಿತರೊಂದಿಗೆ ಶಾಸ್ತ್ರಾರ್ಥ ನಡೆಯಿತು. ಉತ್ತರಿಸಲಾಗದೇ ಅನೇಕ ಬ್ರಾಹ್ಮಣರು ಬೆಪ್ಪರಾದರು. ಕೊನೆಗೆ ಶಾಸ್ತ್ರಾರ್ಥಕ್ಕೆ ಕುಳಿತವರು ಆಚಾರ್ಯ ಚಾಣಕ್ಯರೆಂದು ಅರಿವಾಗುತ್ತಿದ್ದಂತೆ ಅನೇಕರು ತೆಪ್ಪಗಾದರು. ಆಚಾರ್ಯರ ಆಶೀವರ್ಾದ ಪಡೆಯುವ ಬಯಕೆ ಎಲ್ಲರಿಗೂ. ನಂದರ ಕೋಪಕ್ಕೆ ಬಲಿಯಾಗುವ ಹೆದರಿಕೆಯಿಂದ ಮುಂದೆಹೋಗದೇ ಬೆದರುತ್ತ ನಿಂತಿದ್ದರು.
ಧರ್ಮಛತ್ರದವರೆಲ್ಲ ಚಾಣಕ್ಯನ ಪರವಾಗಿ ಪರಿವರ್ತರಾಗುತ್ತಿದ್ದುದು ನಂದರಿಗೆ ಸಹಿಸಲಾಗಲಿಲ್ಲ. ಈ ಉದ್ಧಟನನ್ನು ಹೊರದಬ್ಬಿರೆಂದು ಚೀರಿದರು. ರಾಜಭಟರು ಧಾವಿಸಿ ಬಂದು ಊಟಕ್ಕೆ ಕುಳಿತಿದ್ದ ಆಚಾರ್ಯ ಚಾಣಕ್ಯರನ್ನು ಹಿಡಿದೆಳೆದು ಛತ್ರದ ಹೊರಗೆಸೆದರು. ಆಚಾರ್ಯರ ಕಣ್ಣು ನಿಗಿ ನಿಗಿ ಕೆಂಡವಾಗಿತ್ತು.
ಆಗಲೇ ಅವರ ಬಾಯಿಂದ ಹೊರಟಿದ್ದು ಆ ಭಯಾನಕ ಶಾಪ!

5 thoughts on “ರಾಷ್ಟ್ರನಿರ್ಮಾಣದ ಕನಸು ಕಂಡವನಿಗೆ ಜೊತೆಯಾದ ತರುಣ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s