ಒಮ್ಮೆ ಸತ್ತ ಮೇಲೆ ಮತ್ತೆ ಹುಟ್ಟುತ್ತೇವಾ?

‘ಅಧ್ಯಾತ್ಮ ಚರ್ಚೆ’ ಅಂತೇನಾದರೂ ಅಂದರೆ ಅನೇಕರು ಆಗಿಂದಾಗ್ಯೆ ಕಿವಿ ಕಣ್ಣುಗಳನ್ನು ಮುಚ್ಚಿಕೊಂಡು ಜಾಗ ಖಾಲಿ ಮಾಡಿಬಿಡುತ್ತಾರೆ. ಆದರೆ ಚರ್ಚೆ ಮಾಡಲಿ, ಬಿಡಲಿ.. ಆತ್ಮದಿಂದಲೇ ಜಗತ್ತು ವ್ಯಾಪ್ತಗೊಂಡಿರುವುದನ್ನು ಮರೆತೇಬಿಡುತ್ತಾರೆ. ಒಂದೇ ಒಂದು ನಿಮಿಷ ಸುಮ್ಮನೆ ಕಣ್ಮುಚ್ಚಿ ಕುಳಿತುಕೊಂಡು ನಾನು ಹೇಳುವ ವಿಚಾರಗಳ ಕುರಿತಂತೆ ಆಲೋಚಿಸಿ. ನೀವು ಖಂಡಿತ ಅಚ್ಚರಿಗೊಳಗಾಗುವಿರಿ.
ನಮ್ಮ ಸುತ್ತಲೂ ನಡೆಯುವ ಅನೇಕ ಸಂಗತಿಗಳನ್ನು ವಿಜ್ಞಾನ ಆಕಸ್ಮಿಕವೆಂದು ಕರೆದು ಬದಿಗಿಟ್ಟುಬಿಟ್ಟಿದೆ. ಉದಾಹರಣೆಗೆ, ಭೂಮಿಯೇ ಮೊದಲಾದ ಗ್ರಹಗಳು ಸೂರ್ಯನ ಸುತ್ತ ಸುತ್ತುವುದಲ್ಲ ಹಾಗೆ ಎಲ್ಲ ಗ್ರಹಗಳನ್ನು ಅಧೀನದಲ್ಲಿ ಇಟ್ಟುಕೊಂಡು ತನ್ನ ಸುತ್ತ ಸುತ್ತಿಸಿಕೊಳ್ತಿರುವ ವಿಶ್ವ ಪ್ರಜ್ಞೆಯನ್ನು ಸೂರ್ಯನಿಗೆ ಅದಾರು ಕೊಟ್ಟರು? ‘ಆಕಸ್ಮಿಕ’. ಬೀಜವೊಂದು ಮೊಳಕೆಯೊಡೆದು ಸಸಿಯಾಗುವ ಹಂತವೆಲ್ಲ ನಮಗೆ ಗೊತ್ತು. ಆದರೆ ಆ ಬೀಜಕ್ಕೆ ಮೊಳಕೆಯೊಡೆಯಬೇಕೆಂಬ ಪ್ರಜ್ಞೆ ಎಲ್ಲಿಂದ ಬಂತು? ಆಕಸ್ಮಿಕ. ಒಂದೆರಡು ವರ್ಷದ ಮಗುವನ್ನು ನೀರಿಗೆ ತಳ್ಳಿದರೆ ಉಸಿರು ಬಿಗಿ ಹಿಡಿಯಬೇಕೆಂಬ ಸಹಜ ಸಿದ್ಧಾಂತ ಅದರೊಳಗೆ ಕೂಡಲೇ ಜಾಗೃತವಾಗುತ್ತದೆ. ಹೇಳಿಕೊಟ್ಟಿದ್ದು ಯಾರು? ‘ಆಕಸ್ಮಿಕ. ಹುಟ್ಟಿದಾಕ್ಷಣ ಮಗು ತಾಯಿಯ ಮೊಲೆಯನ್ನು ಚೀಪಿ ಹಾಲು ಕುಡಿಯುತ್ತದಲ್ಲ, ತರಬೇತಿ ಕೊಟ್ಟ ಗುರು ಯಾರು? ‘ಆಕಸ್ಮಿಕ’!
ನಾನಂತೂ ಇಂತಹ ನೂರಾರು ವಿಸಮ್ಯಗಳನ್ನು ದಾಖಲಿಸಬಲ್ಲೆ. ಇಷ್ಟೊಂದು ಸಂಗತಿಗಳು ಆಕಸ್ಮಿಕವಾದರೂ ಹೇಗೆ? ನಾನು ಉಲ್ಲೇಖಿಸಿರುವ ಘಟನೆಗಳಲ್ಲೆಲ್ಲಾ ಸೂಕ್ಷ್ಮವಾದ ವಸ್ತುವೊಂದು ತನ್ನಿಚ್ಛೆಗೆ ತಕ್ಕಂತೆ ಎಲ್ಲವನ್ನೂ ನಿಯಂತ್ರಿಸುತ್ತದೆ ಅಂತ ನಿಮಗೆ ಅನಿಸುತ್ತಿಲ್ಲವೆ?
ಹೋಗಲಿ. ಯಾರಾದರೂ ತೀರಿಕೊಂಡಾಗ ನಾವೇನೆನ್ನುತ್ತೇವೆ ಹೇಳಿ. ಜೀವ ಹೋಯ್ತು ಅಂತ ತಾನೆ? ಅದು ಆಡು ಭಾಷೆಯಾಯ್ತು. ವೈದ್ಯಕೀಯ ಭಾಷೆಯಲ್ಲಿ ಜೀವ ಹೋಗೋದು ಅಂದರೆ ಉಸಿರು ನಿಲ್ಲೋದು, ಹೃದಯ ಸ್ತಬ್ಧವಾಗೋದು ಮತ್ತು ಮೆದುಳು ನಿಷ್ಕ್ರಿಯವಾಗೋದು ಅಂತ! ಇವನ್ನೇ ಆಧಾರವಾಗಿಟ್ಟುಕೊಂಡು `ಮರವೊಂದು ಸತ್ತಿದೆ’ ಎನ್ನುವುದನ್ನು ಹೇಗೆ ಹೇಳಬಹುದು? ಯೋಚಿಸಿ ನೋಡೋಣ. ಅಲ್ಲಿ ಹೃದಯವಿಲ್ಲ, ಮೆದುಳಿಲ್ಲ. ನಾವೆಂದುಕೊಂಡಂತಹ ಉಸಿರಾಟವೂ ನಡೆದಿಲ್ಲ. ಮತ್ತೆ ಸತ್ತಾಗ ಆದದ್ದಾದರೂ ಏನು? 12
ಮನುಷ್ಯರ ವಿಚಾರದಲ್ಲಿಯೂ ಹಾಗೆಯೇ. ಆತ ಸತ್ತು ಆರು ಗಂಟೆಗಳ ವರೆಗೆ ಕಣ್ಣು ದಾನಕ್ಕೆ ಯೋಗ್ಯವಾಗಿರುತ್ತದೆ; ಜಠರ ಕೆಲಸ ಮಾಡುತ್ತಿರುತ್ತದೆ. ಅದರರ್ಥ ಜೀವ ಹೋಯಿತೆಂದು ನಾವು ಉದ್ದೇಶಿಸಿದ ನಂತರವೂ ದೇಹದ ಅನೇಕ ಅಂಗಗಳು ಜೀವಂತವಾಗಿರುತ್ತದೆ. ಹಾಗಿದ್ದರೆ ನಿಜವಾಗಿಯೂ ಹೋದದ್ದೇನು? ಅದನ್ನೇ `ಆತ್ಮ’ ಎಂದರು ನಮ್ಮವರು. ಕೆಲವರು ಪ್ರಾಣಶಕ್ತಿ ಅಂತ ಕರೆದಿದ್ದೂ ಅದನ್ನೇ! ಇದೇ ಆತ್ಮ ಶಕ್ತಿ ಎಲ್ಲರೊಳಗಿದ್ದುಕೊಂಡು ವಿಶ್ವದ ನಿಯತಿಗೆ ಕಾರಣವಾಗಿದೆಯಲ್ಲ, ಇದನ್ನು ಅರಿಯುವ ಪ್ರಯತ್ನವನ್ನೆ ಅಧ್ಯಾತ್ಮ ಎಂದು ಕರೆದದ್ದು. ಇದೇ ಆತ್ಮಶಕ್ತಿ ನಮ್ಮೊಳಗಿದ್ದುಕೊಂಡು ಹೃದಯ ಬಡಿಯಲು ಪ್ರೇರಣೆ ಕೊಟ್ಟರೆ, ಇದೇ ಆತ್ಮಶಕ್ತಿಸೂರ್ಯನ ಸುತ್ತ ಇಷ್ಟೇ ವೇಗದಲ್ಲಿ ಸುತ್ತಬೇಕೆಂದು ಭೂಮಿಗೆ ಹೇಳಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ತತ್ತ್ವಶಾಸ್ತ್ರ ತನ್ನ ತಾನರಿತರೆ ಜಗವನ್ನೇ ಅರಿತಂತೆ ಎಂದು ಹೇಳಿರುವುದು.
ಛಾಂದೋಗ್ಯ ಉಪನಿಷತ್ತಿನಲ್ಲಿ ಶ್ವೇತಕೇತು ಮತ್ತು ಅವನ ತಂದೆ ಉದ್ಧಾಲಕನ ನಡುವಿನ ಸಂವಾದದ ಸಾರವೇ ಇದು. ‘ಯಾವುದನ್ನು ಅರಿತ ಮೇಲೆ ಜಗತ್ತಿನಲ್ಲಿ ಮತ್ತೇನನ್ನೂ ತಿಳಿಯುವ ಅಗತ್ಯವಿಲ್ಲವೋ ಅದಾವುದು?’ ಎಂಬ ಪ್ರಶ್ನೆಗೆ ತಂದೆಯ ಉತ್ತರ `ತತ್ತ್ವಮಸಿ’ ಅಂತ. ಅದರರ್ಥ ‘ಅದು ನೀನೇ ಆಗಿರುವೆ’. ‘ನಿನ್ನ ನೀನು ಅರಿತರೆ ಜಗತ್ತಿನ ಎಲ್ಲವೂ ನಿನ್ನ ಪದತಲದಲ್ಲಿ’ ಎಂದಿದ್ದ ಉದ್ಧಾಲಕ. ಮತ್ತು ಇದನ್ನು ಅರಿಯಲು ಇರುವ ಏಕೈಕ ಮಾರ್ಗ ಕಣ್ಣು ಮುಚ್ಚುವುದು ಮಾತ್ರ. ವಿಜ್ಞಾನದ ಮಿತಿ ಇರೋದು ಇಲ್ಲೇ. ಅದು ತನ್ನಿಂದ ಹೊರಗಿರುವ ಎಲ್ಲವನ್ನೂ ಅಧ್ಯಯನ ಮಾಡಬಲ್ಲದು. ಚಂದ್ರನ ಮೇಲಿನ ಕಲ್ಲುಗಳು, ಭೂಮಿಯ ಕೆಳಪದರದಲ್ಲಿರುವ ಹಳೆಯ ಕಟ್ಟಡಗಳು, ಪಶು – ಪ್ರಾಣಿ – ಕ್ರಿಮಿ ಕೀಟ ಎಲ್ಲವನ್ನೂ ವಿಜ್ಞಾನಿ ಅಧ್ಯಯನ ಮಾಡಬಲ್ಲ. ಅವನಿಗೆ ತನ್ನ ಹೃದಯದ ಬಗ್ಗೆ ತಿಳಿಯಬೇಕೆಂದರೂ ಸತ್ತ ವ್ಯಕ್ತಿಯ ದೇಹವನ್ನು ಕತ್ತರಿಸಿಯೇ ನೋಡಬೇಕು.
ಒಟ್ಟಿನಲ್ಲಿ, ತನ್ನಿಂದ ಹೊರಗಿರುವ ಎಲ್ಲವನ್ನೂ ಪ್ರಯೋಗಕ್ಕೆ ಒಳಪಡಿಸುವುದನ್ನು ಭೌತಿಕ ವಿಜ್ಞಾನ ಎನ್ನಬಹುದಾದರೆ, ತನ್ನ ತಾನು ಅರಿತುಕೊಳ್ಳುವುದನ್ನು ಆಧ್ಯಾತ್ಮಿಕ ಅಥವಾ ಆತ್ಮವಿಜ್ಞಾನ ಎನ್ನಬಹುದು ಅಷ್ಟೆ. ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಂಡು ಸಂಪೂರ್ಣ ತೊಡಗಿಸಿಕೊಂಡು ಮುಳುಗಿಬಿಟ್ಟರೆ ಮತ್ತೊಂದು ಹಿಂಬಾಲಿಸಿಯೇ ಹಿಂಬಾಲಿಸುತ್ತದೆ, ಅನುಮಾನವಿಲ್ಲ. ನಮ್ಮ ಋಷಿಗಳು ಆತ್ಮವಿಜ್ಞಾನದಲ್ಲಿ ಆಳಕ್ಕಿಳಿದರು, ಭೌತಿಕ ವಿಜ್ಞಾನ ಅವರನ್ನು ಬಾಯ ಮೇಲೆ ಬೆರಳಿಟ್ಟುಕೊಂಡು ಅನುಸರಿಸಿತು. ಹೀಗಾಗಿಯೇ ಇಂದಿನ ವಿಜ್ಞಾನಿಯೂ ಗಾಬರಿಗೊಳಗಾಗುವಂತಹ ಖಗೋಳ, ಭೂಗೋಳ, ಗಣಿತ, ರಸಾಯನ ಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆ ಸಾಧ್ಯವಾಗಿದ್ದು. ಅದೇ ಸಮಯಕ್ಕೆ ಐನ್‍ಸ್ಟೀನ್, ಹೀಸನ್‍ಬರ್ಗ್‍ರಂತಹ ವಿಜ್ಞಾನಿಗಳು ಭೌತವಿಜ್ಞಾನದಲ್ಲಿ ಸಾಧನೆ ಮಾಡ ಮಾಡುತ್ತಲೇ ಆತ್ಮತತ್ತ್ವದ ಅರಿವು ಬೆಳೆಸಿಕೊಂಡುಬಿಟ್ಟರು. ಸ್ಟೀಫನ್ ಹಾಕಿಂಗ್ ಮಾತನ್ನು ಕೇಳುವಾಗ ಆತ ಆತ್ಮವೆಂಬ ಪದವೊಂದನ್ನು ಬಳಸುವುದಿಲ್ಲ ಬಿಟ್ಟರೆ, ಉಳಿದವೆಲ್ಲ ಋಷಿವಾಕ್ಯಗಳ ಪುನರ್‍ಸ್ಮರಣೆಯೇ!
ಆತ್ಮ ಜೀವದೊಂದಿಗೆ ಬೆಸೆದುಕೊಂಡಿರುವವರೆಗೂ ಈ ದೇಹ ಜೀವಂತ. ಆತ್ಮ ದೇಹವನ್ನು ಬಿಡಲು ನಿಶ್ಚಯಿಸಿದರೆ, ಜೀವದೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಳ್ಳಲು ನಿಶ್ಚಯಿಸಿದರೆ, ಜೀವದೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಳ್ಳಲು ನಿಶ್ಚಯಿಸಿದರೆ ದೇಹದ ಕತೆ ಮುಗಿದಂತೆಯೇ. ಅದಕ್ಕೇ ಅವತ್ತು ಸಿದ್ಧಾರ್ಥನು ವೃದ್ಧಾಪ್ಯಕ್ಕೆ ಒಳಗಾದವರನ್ನೂ, ಅನಾರೋಗ್ಯಕ್ಕೆ ಒಳಗಾದವರನ್ನೂ, ಮೃತರನ್ನೂ ಕಂಡು ಶಾಶ್ವತ ವಸ್ತುವನ್ನು ಅರಸಿ ಹೊರಟಿದ್ದು. ಆತ್ಮಬೋಧೆಯಾದ ಮೇಲೆ ಬುದ್ಧನಾಗಿ ಮರಳಿದ್ದು. ದೇಹ ಸಾಯುವುದಕ್ಕೆ ಅಣಿಯಾಯಿತೆಂದರೆ ಆಗುವ ಪ್ರಕ್ರಿಎಯ ಗಮನಿಸಿ. ಅದುವರೆಗೂ ರುಚಿಸುತ್ತಿದ್ದುದು ಈಗ ಇಷ್ಟವಾಗುವುದಿಲ್ಲ. ಅದುವರೆಗೂ ಯಾವ ವಿಚಾರಗಳು ಪ್ರಚೋದಿಸುತ್ತಿದ್ದವೋ ಈಗ ಅವು ನಮ್ಮ ಗಮನಕ್ಕೂ ಬರುವುದಿಲ್ಲ. ಕೊನೆಗೆ ಔಷಧಗಳೂ ದೇಹದ ನರಗಳನ್ನು ಉದ್ದೀಪಿಸುವಲ್ಲಿ ಸೋಲುತ್ತವೆ. ಅಲ್ಲಿಗೆ ಆತ್ಮವೆಂಬುದು ಹೊರಡುವ ಸಿದ್ಧತೆ ಮಾಡಿಕೊಂಡಿದೆ ಎಂಬುದು ಖಾತ್ರಿ. ಈ ಆಥ್ಮ ಸುಮ್ಮನೆ ಹೋಗಿಬಿಡುವುದಿಲ್ಲ. ಈ ದೇಹವನ್ನು ಬಿಟ್ಟು ಮತ್ತೊಂದು ಹೊಸ ದೇಹದ ಅನ್ವೇಷಣೆ ಶುರು ಮಾಡುತ್ತದೆ ಅಷ್ಟೇ.
ಐತರೇಯ ಉಪನಿಷತ್ತು ಇದನ್ನು ಬಹಳ ಸುಂದರವಾಗಿ ವರ್ಣಿಸುತ್ತದೆ. ಆತ್ಮಧಾರಣೆ ಮಾಡಿದ ಪುರುಷನ ರೇತಸ್ಸು ಅಂಡಾಣುವನ್ನು ಹೊಕ್ಕುವುದು ಮೊದಲನೆ ಜನ್ಮವಂತೆ. ಈ ಆತ್ಮರೂಪವನ್ನು ತನ್ನ ಗರ್ಭದೊಳಗೆ ಪಾಳಿಸಿದ ಸ್ತ್ರೀ ಒಂಭತ್ತು ತಿಂಗಳ ನಂತರ ಭುವಿಗೆ ತರುವಳಲ್ಲ, ಅದು ಎರಡನೇ ಜನ್ಮ. ಇನ್ನು ಜರಾಜೀರ್ಣವಾಗಿ ದೇಹ ಬಿಟ್ಟೊಡನೆ ಆತ್ಮ ಪಡೆಯುವ ಹೊಸ ದೇಹ ಮೂರನೆ ಜನ್ಮವಂತೆ! ಈ ಮೂರನೆಯ ಜನ್ಮವನ್ನು ನಾವು ಪುನರ್ಜನ್ಮ ಅಂತ ಕರೆಯುತ್ತೇವೆ. ಹೊಸ ದೇಹಕ್ಕೆ ಹೋಲಿಸಿಕೊಂಡಾಗ ಈ ಹಳೆಯ ಜನ್ಮಗಳು ಪೂರ್ವಜನ್ಮ ಎನ್ನಿಸಿಕೊಳ್ಳುತ್ತವೆ.
ಪಶ್ಚಿಮದ ಮತಗಳಿಗೂ ಹಿಂದೂ ಧರ್ಮಕ್ಕೂ ವ್ಯತ್ಯಾಸ ಇಲ್ಲಿಯೇ. ಅವರ ಪ್ರಕಾರ ಹುಟ್ಟುವುದೂ ಒಮ್ಮೆ, ಸಾಯುವುದೂ ಒಮ್ಮೆಯೇ. ಸತ್ತಮೇಲೆ ಭಗವಂತ ಎಲ್ಲರನ್ನೂ ಅದೊಂದು ದಿನ ಎಬ್ಬಿಸಿ ಅವರವರ ಬದುಕಿಗೆ ತಕ್ಕಂತೆ ಸ್ವರ್ಗ ನರಕಗಳನ್ನು ದಯಪಾಲಿಸುತ್ತಾನೆ. ಪ್ರವಾದಿ ಮೆಚ್ಚುವಂತಹ ಕೆಲಸ ಮಾಡಿದವರು ಸ್ವರ್ಗಕ್ಕೆ, ಉಳಿದವರು ನರಕಕ್ಕೆ. ಮತ್ತು ಈ ಸ್ವರ್ಗ – ನರಕಗಳು ಶಾಶ್ವತವಾದವುಗಳು. ಅಲ್ಲಿ ತಿದ್ದಿಕೊಳ್ಳಲು ಅವಕಾಶವೇ ಇಲ್ಲ. ಆದರೆ ಸನಾತನ ಧರ್ಮ ಹಾಗಲ್ಲ. ಆತ್ಮ ಹಿಂದಿನ ಜನ್ಮದ ಕರ್ಮಗಳಿಗೆ ತಕ್ಕಂತೆ ಹೊಸದಾದ ದೇಹ ಪಡೆಯುತ್ತದೆ. ಅನುಭವಿಸಬೇಕಾದ್ದನ್ನು ಅನುಭವಿಸುತ್ತದೆ. ಮುಂದಿನ ಜನ್ಮಕ್ಕೆ ಅಣಿಯಾಗುತ್ತದೆ. ನಮ್ಮದು ಚಕ್ರೀಯ ಗತಿ. ಹುಟ್ಟು, ಸಆವು ಮತ್ತು ಮರು ಹುಟ್ಟು ಒಂದನ್ನೊಂದು ಹಿಂಬಾಲಿಸುತ್ತಲೇ ಇರುತ್ತವೆ. ಒಮ್ಮೆ ಆತ್ಮತತ್ತ್ವ ಎಲ್ಲದರೊಳಗೂ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅರಿತರೆ, ಈ ಚಕ್ರದಿಂದ ಮುಕ್ತಿ ಎಂಬುದು ನಮ್ಮ ಚಿಂತನೆ.
ಬಿಡಿ. ಅದನ್ನು ಮತ್ತೊಮ್ಮೆ ಯಾವಾಗಲಾದರೂ ದೀರ್ಘವಾಗಿ ಚರ್ಚಿಸೋಣ. ಪುನರ್ಜನ್ಮವನ್ನು ಒಪ್ಪಿಕೊಂಡ ಮೇಲೆ ಆತ್ಮ ಮರುಹುಟ್ಟಿಗೆ ದೇಹವನ್ನು ಆಯ್ದುಕೊಳ್ಳುವ ಪರಿಯನ್ನೂ ಆಲೋಚಿಸಲೇಬೇಕಲ್ಲವೆ? ಇದೊಂದು ಬಗೆಯ ಸ್ವಯಂವರದಂತೆ ನಡೆಯುವ ಪ್ರಕ್ರಿಯೆ. ಹಳೆಯ ಜನ್ಮದ ಕರ್ಮಗಳನ್ನು ಅನುಸರಿಸಿ ಸೂಕ್ತ ತಂದೆ ತಾಯಿಯರನ್ನು ಆಯ್ದುಕೊಳ್ಳುವ ಅಪರೂಪದ ವಿಧಾನ. ಹೀಗಾಗಿ ಎಲ್ಲಿ – ಯಾವಾಗ – ಯಾರಿಗೆ ಹುಟ್ಟಬೇಕೆಂಬುದಕ್ಕೆ ಸ್ಪಷ್ಟ ನಿಯಮಗಳೇ ಇವೆ. ಇವುಗಳನ್ನೇ ನಮ್ಮ ಹಿರಿಯರು ಕರ್ಮಸಿದ್ಧಾಂತ ಎಂದಿದ್ದು. ನೀವು ಒಪ್ಪಿ – ಬಿಡಿ. ಏನಾದರೂ ಅವಘಡ ಸಂಭವಿಸಿದೊಡನೆ ಅಯಾಚಿತವಾಗಿ ‘ಎಲ್ಲಾ ನನ್ನ ಕರ್ಮ’ ಎಂದುಬಿಡುತ್ತೇವಲ್ಲ; ಅದು ಇದೇ ಸಿದ್ಧಾಂತದ ಪ್ರತಿಫಲ.
ಮೂರು ಬಗೆಯ ಕರ್ಮಗಳಿವೆ. ಸಂಚಿತ ಕರ್ಮ, ಪ್ರಾರಬ್ಧ ಕರ್ಮ ಮತ್ತು ಆಗಾಮಿ ಕರ್ಮ ಅಂತ. ಹಿಂದಿನ ಜನ್ಮದಲ್ಲಿ ಮಾಡಿದ ಒಳಿತುಕೆಡುಕುಗಳ ಕಂತೆ ಸಂಚಿತವಾಗಿ ಮುಂದಿನ ಜನ್ಮಕ್ಕೆ ವರ್ಗಾವಣೆಯಾಗುತ್ತದೆ; ಥೇಟು ಬ್ಯಾಂಕ್ ಬ್ಯಾಲೆನ್ಸಿನಂತೆ. ಇನ್ನು ಪ್ರಾರಬ್ಧ ಕರ್ಮ ಈ ಜನ್ಮದಲ್ಲಿ ನಾವು ಮಾಡಿದ ಸತ್ಕರ್ಮ – ದುಷ್ಕರ್ಮಗಳ ಲೆಕ್ಕಾಚಾರ. ಇದು ಹಳೆಯದನ್ನು ಕೆಲವೊಮ್ಮೆ ಮೀರಿ ನಿಂತು ಫಲ ಕೊಡಬಹುದು. ಈ ಪ್ರಾರಬ್ಧದಲ್ಲಿ ಕೆಲವು ಕರ್ಮಗಳು ಮುಂದಿನ ಜನ್ಮಕ್ಕೆ ಮೀಸಲಾಗಿಡಬಹುದು. ಆಗ ಅದು ಆಗಾಮಿಯಾಗುತ್ತದೆ, ಅಷ್ಟೇ.
ಹಳೆಯ ಜನ್ಮದಲ್ಲಿ ಸಂಗೀತಗಾರನಾಬೇಕೆಂದು ಪ್ರಯತ್ನಪಟ್ಟು, ಸಾಧನೆ ಮಾಡಿ ಕೀರ್ತಿ ಪಡೆಯುವ ಮುನ್ನ ದೇಹ ಬಿಟ್ಟ ಆತ್ಮವು ಈ ಜನ್ಮದಲ್ಲಿ ಸಂಗೀತದ ವಾತಾವರಣವಿರುವ ಮನೆಯಲ್ಲಿ ಹುಟ್ಟುತ್ತದೆ. ಬಾಲ್ಯದಲ್ಲಿಯೇ ಶ್ರೇಷ್ಠ ಸಂಗೀತಗಾರನೆಂಬ ಕೀರ್ತಿಯನ್ನು ಪಡೆದುಬಿಡುತ್ತದೆ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣನು ಇದನ್ನು ಅನುಮೋದಿಸುತ್ತಾನೆ ಕೂಡ. ಯೋಗಭ್ರಷ್ಟನಾದ ಸಾಧಕನಿಗೆ ಮರುಜನ್ಮದಲ್ಲಿ ಸೂಕ್ತ ಪರಿಸರ ಒದಗಿಸಿಕೊಡುವ ಭರವಸೆಯನ್ನು ಕೊಡುತ್ತಾನೆ. ಅದಕ್ಕೇ ಸನಾತನ ಧರ್ಮ ತನ್ನ ಪ್ರತಿಯೊಂದು ಸಾಹಿತ್ಯದಲ್ಲೂ ನೈತಿಕ ಚೌಕಟ್ಟಿನ ನಿಯಮಗಳನ್ನು ರಾಶಿರಾಶಿಯಾಗಿ ಹೇರುತ್ತದೆ. ಇಲ್ಲಿ – ಈಗ ಮಾಡುವ ಸಣ್ಣ ತಪ್ಪೂ ಮುಂದಿನ ಜನ್ಮದಲ್ಲಾದರೂ ಫಲವುಣ್ಣುವಂತೆ ಮಾಡದೆ ಬಿಡುವುದಿಲ್ಲಎಂದೂ ಎಚ್ಚರಿಸುತ್ತದೆ.
ಹಾಗಿದ್ದ ಮೇಲೆ ನಮ್ಮ ಪೂರ್ವಜನ್ಮವನ್ನು ನಾವು ಇಣುಕಿ ನೋಡುವುದು ಸಾಧ್ಯವೆ? ಖಂಡಿತ ಸಾಧ್ಯ ಎನ್ನುತ್ತದೆ ಭಾರತೀಯ ಯೋಗಶಾಸ್ತ್ರ. ಸ್ವಾಮಿ ಅಭೇದಾನಂದರು ತಮ್ಮ ಪುನರ್ಜನ್ಮವೆಂಬ ಕೃತಿಯಲ್ಲಿ ಸುಂದರವಾದ ಉಲ್ಲೇಖವೊಂದನ್ನು ಕೊಡುತ್ತಾರೆ. ಕತ್ತಲ ಕೋಣೆಯಲ್ಲಿ ಸಿನೆಮಾ ಪರದೆಯ ಮೇಲೆ ಪ್ರೊಜೆಕ್ಟರ್ ಮೂಲಕ ಚಿತ್ರವೊಂದು ಮೂಡಿಬರುತ್ತಿದೆಯೆಂದು ಭಾವಿಸಿ. ಈಗ ಕೋಣೆಯ ಎಲ್ಲ ಬಾಗಿಲುಗಳನ್ನು ತೆರೆದುಬಿಡಿ. ಒಂದು ಕ್ಷಣ ಪರದೆಯ ಮೇಲೆ ಚಿತ್ರ ಮೂಡುವುದು ನಿಂತಿದೆ ಎನ್ನಿಸುತ್ತದೆ. ಆದರೆ ಹಾಗಾಗಿಲ್ಲ. ಕೋಣೆಯಲ್ಲಿ ಬೆಳಕು ಹೆಚ್ಚಾಗಿದೆ ಅಷ್ಟೇ. ಹಾಗೆಯೇ ಹೊಸ ಬದುಕಿನಲ್ಲಿ ಬಲವಾಗಿ ಮೈಮರೆತ ನಮಗೆ ಹಳೆಯ ಜನ್ಮ ಮರೆತುಹೋಗಿದೆ. ಇಂದ್ರಿಯಗಳನ್ನು ಹೊಸ ಬದುಕಿನಿಂದ ಒಳಗೆಳೆದುಕೊಂಡು ಮನಸ್ಸಿನ ಲೋಕವನ್ನು ಪದರಪದರವಾಗಿ ತೆರೆಯಲು ಶುರು ಮಾಡಿದರೆ ಹಳೆಯದೆಲ್ಲ ಉಮ್ಮಳಿಸಿ ಬರಲಾರಂಭಿಸುತ್ತದೆ.
ನಮ್ಮ ಋಷಿ ಮುನಿಗಳು ಇವುಗಳೆಲ್ಲದರ ಅಧ್ಯಯನಕ್ಕೆಂದೇ ವಿಸ್ತಾರವಾದ ವಿಜ್ಞಾನವನ್ನು ಅಭಿವೃದ್ಧಿಪಡಿಸಿದರು. ವೇದಗಳಲ್ಲಿ ಹೇಳಿರುವ ಆತ್ಮ ತತ್ತ್ವವನ್ನು ಉಪನಿಷತ್ತು ಸುದೀರ್ಘವಾಗಿ ಚರ್ಚಿಸಿತು. ಪುರಾಣಗಳು ಸಾಮಾನ್ಯ ಜನರಿಗೆ ಇವುಗಳನ್ನು ಕಥಾ ರೂಪದಲ್ಲಿ ತಲುಪಿಸಿದವು. ಈ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ಜಿಜ್ಞಾಸೆ ಇದ್ದವರಿಗಾಗಿ ಅನೇಕ ಹೊಸಹೊಸ ಮಾರ್ಗಗಳು ಅನ್ವೇಷಣೆಗೊಂಡವು. ಯೋಗ ಅಂತಹುದೇ ಒಂದು ರಾಜಪಥ.
ಯೋಗವೆಂದಾಗ ದೇಹ ಕರಗಿಸುವ, ಆರೋಗ್ಯ ಹೆಚ್ಚಿಸುವ ನಾಲ್ಕೈದು ಆಸನಗಳಷ್ಟೇ ಎಂದು ಭಾವಿಸಬೇಡಿ. ಯೋಗ ಆತ್ಮತತ್ತ್ವವನ್ನು ಅರಿಯುತ್ತ ವಿಶ್ವಪ್ರಜ್ಞೆಯೊಂದಿಗೆ ನಮ್ಮ ಪ್ರಜ್ಞೆಯನ್ನು ಆತ್ಮಸಾತ್ ಮಾಡಿಕೊಳ್ಳುವ ಪ್ರಯತ್ನ. ಜೂನ್ 21ಕ್ಕೆ ಜಗತ್ತು ಯೋಗ ಮಾಡಿದೆ ಎಂದರೆ ಋಷಿಗಳ ಆ ಎಲ್ಲ ಪ್ರಯೋಗಗಳನ್ನು ಅನುಸರಿಸಲು ವಿಶ್ವಸಿದ್ಧವಾಯಿತೆಂದೇ ಅರ್ಥ. ವಿಶ್ವಕುಟುಂಬವಾಗುವುದು ಹೀಗೆಯೇ.

13 thoughts on “ಒಮ್ಮೆ ಸತ್ತ ಮೇಲೆ ಮತ್ತೆ ಹುಟ್ಟುತ್ತೇವಾ?

 1. ನಿವೇಳಿದ್ದು ಸರಿ ಅಂದು ಒಪ್ಪಿಕೊಳ್ಳುವ. ಯೋಗದ ಬಗ್ಗೆ ಎರಡು ಮಾತಿಲ್ಲ
  ಅದರೆ ಮರುಹುಟ್ಟು ಬಗ್ಗೆ ಒಪ್ಪಿಕೊಳ್ಳುವುದು ತುಸು ಕಷ್ಟವೇ ..
  ಏಕೆಂದರೆ ಸತ್ತವರೆಲ್ಲ ಹುಟ್ಟುವುದಾದರೆ ಈ ಜನಸಂಖ್ಯೆ ಏಕೆ ಇಷ್ಟೊಂದು ವೃದ್ದಿಯಾಯಿತು.. ಇದನ್ನು ಗಮನಿಸಬೇಕಲ್ಲವೇ …
  ನನ್ನ ಪ್ರಕಾರ ನಾವೆಲ್ಲ ಜೀವ ಸಂಕುಲ ನಾವು ಬದುಕುವುದಕ್ಕಾಗಿ ಮಾಡಿಕೊಂಡಿರುವುದೆ ಧರ್ಮ,ಜಾತಿ…..
  ಮುಂದೆ ಮನು ಕುಲ ನಾಶವಾಗಿ ಇನ್ನೊಂದು ಕುಲ ಹುಟ್ಟಿಕೊಳ್ಳಬಹುದು ಆಗಲು ಪುನರ್ಜನ್ಮ ವಿರುವುದೆ ಯೋಚಿಸಿ…… ತರ್ಕಕ್ಕೆ ಬಿಟ್ಟಿದ್ದು..

 2. Dhanjay Simha: For your question, answer is, you can see there are thousands of species. As per the rule of karma every life in other species must take a avatar of human life(homo sepiens) according to their karma(so the raise in count of human beings). I am not convincing you to believe in this but before you reject it ,find out the truth.

 3. ಬಹಳ ಉತ್ತಮವಾದ ಬರಹ। ಶ್ರೀ chakravarthi ಅವರು ನನ್ನ ಪ್ರಕಾರ ಹಿಂದಿನ ಜನ್ಮದಲ್ಲಿ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು। ಅದರಲ್ಲೂ ತಿಲಕರೋ ಅಥವಾ ಸುಭಾಷರ ತರಹ ॥

 4. ಪ್ರತಿ ಒಂದು ಜೀವಿಗೂ ಮರು ಜನ್ಮ ಅಂತಾ ಇದೆ ಇದನ್ನು ನಾನು ೧೦೦% ಒಪ್ಪುತ್ತೇನೆ ಇದು ವೈಜ್ಞಾನಿಕವಾಗಿ ಸತ್ಯ, ಆದ್ರೆ ನೀವು ಸೂಕ್ತ ಮನಸಿನ ಬಗ್ಗೆ ಇದ್ರಲ್ಲಿ ಮಾಹಿತಿ ನೀಡಿಲ್ಲ. ನಿಮ್ಮ ಮತ್ತೊಂದು ಲೀಖನದಲ್ಲಿ ಮನುಷ್ಯನ ಸೂಕ್ತ ಮನಸ್ಸಿನ ಬಗ್ಗೆ ಆಳವಾಗಿ ಬರೆಯಿರಿ, ಜನಕ್ಕೆ ಪುನರ್ ಜನ್ಮದ ಬಗ್ಗೆ ಮತ್ತಷ್ಟು ಮಾಹಿತಿ ಬೇಕಾಗಿದೆ.

 5. ನಾವು ಈಗಿರುವುದು ಎಷ್ಟು ಸತ್ಯವೋ. ಅಷ್ಟೇ ಸತ್ಯವಾದ ಮಾತುಗಳೂ ಸಹ. ಒಂದೊಂದು ಅಕ್ಷರವೂ ಸತ್ಯವಾಗಿವೆ. ಆತ್ಮ, ಮನಸ್ಸು, ಪುನರ್ಜನ್ಮ, ಚೇತನ, ಯಾವುದೋ ಒಂದು ಶಕ್ತಿ ನಿಯಂತ್ರಣ ಮಾಡುತ್ತಿದೆ ಎಂಬುದು, ಇವೆಲ್ಲವನ್ನೂ ನಂಬುವಂತಹುಗಳೇ. ತಮಗರಿವಾಗದ ಹೊರತು, ತನ್ನ ಅನುಭವಕ್ಕೆ ಬಾರದ ಹೊರತು ಸತ್ಯವೆಂದೆನಿಸದು. ಮನಸ್ಇನ ಸ್ಥಿತಿ ಬದಲಾಗದ ಹೊರತು ಯಾವುದನ್ನೂ ಅರ್ಥಮಾಡಿಕೊಳ್ಳಲಾಗದು.

  ಉತ್ತಮ ಲೇಖನ !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s