ವಾಸ್ತವ ಇತಿಹಾಸವನ್ನು ಒಪ್ಪಿಕೊಳ್ಳಲೇಕೆ ಹಿಂಜರಿಕೆ!?

ಆನೆಗೆ ಮೂರೇ ಕಾಲು ಎಂದು ನಂಬೋದು, ಅನಂತರ ಕಾಡಿನಲ್ಲಿ ಆನೆಯ ಜಾಡನ್ನು ಹಿಡಿದು ಪ್ರಯತ್ನಪೂರ್ವಕವಾಗಿ ಮೂರು ಮೂರೇ ಕಾಲುಗಳನ್ನು ಗುರುತಿಸೋದು. ಕೊನೆಗೊಮ್ಮೆ ಯಾರಾದರೂ ನಾಲ್ಕನೇ ಕಾಲನ್ನು ತೋರಿಸಿದರೆ ಒಂದೋ ಆ ವಾದವನ್ನೆ ತಳ್ಳಿ ಹಾಕುವುದು ಅಥವಾ ಅದೊಂದು ರೋಗಿಷ್ಠ ಆನೆ ಎಂದುಬಿಡೋದು. ಏಕೆಂದರೆ ಆನೆಗೆ ಮೂರೇ ಕಾಲು ಎಂಬ ನಂಬಿಕೆ ಅಷ್ಟರೊಳಗೆ ಸತ್ಯವೆಂದು ಒಪ್ಪಿಗೆಯಾಘಿಬಿಟ್ಟಿರುತ್ತದೆ!
ಭಾರತದ ಇತಿಹಾಸ ಕುರಿತಂತೆಯೂ ಇದೇ ರೀತಿಯ ಅಪದ್ಧಗಳು ನಡೆದುಹೋಗಿವೆ. ಆರ್ಯರು ಆಕ್ರಮಣಕಾರರೆಂದು ನಂಬಿದರು. ಸಿಕ್ಕ ಸಾಕ್ಷ್ಯಗಳನ್ನು ಈ ನಂಬಿಕೆಗೆ ಹೊಂದಿಸಲು ಹರ ಸಾಹಸ ಮಾಡಿದರು. ಆನಂತರ ವಿಜ್ಞಾನ ಬೇರೆ ಬೇರೆ ಮಾಹಿತಿಗಳನ್ನು ಹೊರಹಾಕುತ್ತಿದ್ದಂತೆ ಆ ಮಾಹಿತಿಗಳನ್ನೆ ಸುಳ್ಳೆಂದು ಅಥವಾ ಹೇಳುವವರನ್ನು ಅಜ್ಞಾನಿಗಳೆಂದು ಜರಿದರು. ಏಕೆಂದರೆ ಆ ವೇಳೆಗೆ ಆರ್ಯರ ಆಕ್ರಮಣದ ನಂನಿಕೆಯನ್ನು ಸತ್ಯವೆಂದು ಒಪ್ಪಿಯಾಗಿತ್ತು. ಅದಕ್ಕೆ ಪೂರಕವಾದುದನ್ನು ಮಾತ್ರ ಒಪ್ಪಬೇಕೆಂದು ನಿರ್ಧರಿಸಿಯಾಗಿಬಿಟ್ಟಿತ್ತು.
ಯುರೋಪಿನ ಪ್ರಭಾವಕ್ಕೆ ಒಳಪಟ್ಟಿರುವ ಭಾರತೀಯರು ಬಿಟ್ಟರೆ ಜಗತ್ತಿನ ಬಹುತೇಕರು ಆರ್ಯ ಆಕ್ರಮಣ ವಾದವನ್ನು ನಿರಾಧಾರವೆಂದು ಜರಿಯುತ್ತಾರೆ. ಇಂದು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಹಿಂದುತ್ವದ ಅಧ್ಯಯನಕ್ಕೆ ಮೂಲ ವಸ್ತುವಾಗಿರುವ ಕ್ಲಾಸ್‌ಕೋಸ್ಟರ್‌ಮೈರ್‌ರ ಸರ್ವೇ ಆಫ್ ಹಿಂದೂಯಿಸಂನಲ್ಲಿ ಉತ್ಖನನಗಳ ಆಧಾರದ ಜಾಡು ಹಿಡಿದು ಹೊರಟರೆ ಭಾರತದ ಮೇಲೆ ಆರ್ಯರು ಆಕ್ರಮಣ ಮಾಡಿದ್ದು ನಿರಾಧಾರ ಎಂಬುದಕ್ಕೆ ಎಳ್ಳಷ್ಟೂ ಅನುಮಾನವಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ!
ಐನ್‌ಸ್ಟೀನ್ ತಾನು ಶ್ಯಾಕ್‌ಲ್ಯಾಂಡಿಗೆ ಕೊಟ್ಟ ತನ್ನ ಕೊನೆಯ ಸಂದರ್ಶನದಲ್ಲಿ ಸಂಶೋಧನೆಗಳಿಗಿಂತ ಹೆಚ್ಚು ಅದರ ಹಿಂದಿನ ಆಲೋಚನಾತಂತ್ರಗಳಿಗೆ ಇತಿಹಾಸಕಾರರು ಗಮನವೀಯಬೇಕೆಂದು ಅಭಿಪ್ರಾಯಪಡುತ್ತಾನೆ. ಕಳೆದ ಅಂಕಣಗಳಲ್ಲಿ ಈ ಇತಿಹಾಸಕಾರರ ಆಲೋಚನಾ ತಂತ್ರಗಳನ್ನು ನಿಮ್ಮೆದುರಿಗಿಡುವ ಪ್ರಯತ್ನ ಮಾಡಿದ್ದೇನೆ. ಮತ್ತೊಮ್ಮೆ ಅದನ್ನು ಒಟ್ಟಾರೆಯಾಗಿ ಸಂಕಲಿಸಬೇಕೆಂದರೆ ಹೀಗೆ ಆರ್ಯ ಆಕ್ರಮಣವಾದವನ್ನು ಹುಟ್ಟು ಹಾಕಿದವರು ಇತಿಹಾಸಕಾರರಿಗಿಂತ ಹೆಚ್ಚು ರಾಜಕಾರಣಿಗಳಾಗಿದ್ದರು. ತಮ್ಮ ಮತವನ್ನು ಜಗತ್ತಿನಾದ್ಯಂತ ಹರಡಲು, ತನ್ಮೂಲಕ ಆಳ್ವಿಕೆಯನ್ನು ಭದ್ರಪಡಿಸಲು ಹವಣಿಸುವ ಮತಭ್ರಾಂತರೇ ಆಗಿದ್ದರು. ಜಗತ್ತಿನ ಇತಿಹಾಸ ಬೈಬಲ್ಲಿಗೆ ಅನುಗುಣವಾಗಿರಬೇಕು; ಬಿಳಿಯರ ಜನಾಂಗವೇ ಶ್ರೇಷ್ಠ ಜನಾಂಗವಾಗಿರಬೇಕೆಂಬ ಉತ್ಕಟ ವಾಂಛೆ ಅವರಿಗಿತ್ತು. 1335921
೧೮೬೧ರಲ್ಲಿ ರಚನೆಗೊಂಡ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಈ ನಿಟ್ಟಿನಲ್ಲಿ ಭಾರತದ ಭೂಭಾಗಗಳ ಉತ್ಖನನ ನಡೆಸಲುಪಕ್ರಮಿಸಿತು. ೧೯೨೧ರಲ್ಲಿ ಹರಪ್ಪ – ಮೊಹೆಂಜೋದಾರೋಗಳಲ್ಲಿ ಮಹಾನಗರಿಗಳ ಉತ್ಖನನ ಮಾಡಿದ ಮೇಲೆ ಜಗತ್ತಿನ ಕಣ್ಣುಕುಕ್ಕಿಬಿಟ್ಟಿತು. ಅಲ್ಲಿ ಸಿಕ್ಕ ಎಲ್ಲ ವಸ್ತುಗಳನ್ನು ವೀಲರ್, ಮಾರ್ಶಲ್‌ರು ಮನ ಬಂದಂತೆ ವಿಶ್ಲೇಷಿಸಲಾರಂಭಿಸಿದರು. ಸಿಲಿಂಡರಿನಾಕೃತಿಯ ವಸ್ತುವನ್ನು ಲಿಂಗವೆಂದೂ ವೃತ್ತಾಕಾರವನ್ನು ಯೋನಿಯೆಂದೂ ಕರೆದು ಹರಪ್ಪದ ಜನರು ಲೈಂಗಿಕ ಲಾಂಛನಗಳ ಪೂಜಕರಾಗಿದ್ದರೆಂದು ಷರಾ ಬರೆದುಬಿಟ್ಟರು. ಇದ್ದುದರಲ್ಲಿಯೇ ಚೆನ್ನಾಗಿ ಬೆಳೆದುನಿಂತಿದ್ದ ಈ ಹರಪ್ಪ ಸಂಸ್ಕೃತಿಯ ನಾಶಕ್ಕೆ ಆರ್ತರ ಆಕ್ರಮಣವೇ ಕಾರಣವೆಂದು ಸಿದ್ಧಪಡಿಸಿಬಿಟ್ಟರು. ಹರಪ್ಪ ಉತ್ಖನನ ಅವರ ಪಾಲಿಗೆ ತಮ್ಮ ಚಿಂತನೆಗಳನ್ನೆಲ್ಲ ತುಂಬುವ ಅಕ್ಷಯಪಾತ್ರೆಯಾಯ್ತು. ಭಾರತೀಯರ ಮೇಲೆ ಹೊರಗಿಬವರು ಆಕ್ರಮಣ ಮಾಡುವುದು ಹೊಸತೇನಲ್ಲ. ಜೊತೆಗೆ ಈಗ ಆಳುತ್ತಿರುವ ಅನ್ಯ ದೇಶೀಯ ಆರ್ಯರಿಗಿಂತ ಮೂಲ ಭಾರತೀಯರಿಗೆ ಸಹಕಾರಿಯಾಗಿರುವ ಬ್ರಿಟಿಷರೇ ವಾಸಿ ಎಂಬುದನ್ನು ಒಪ್ಪಿಸಲು ಹರಪ್ಪ ಉತ್ಖನನ ಲಾಭಕಾರಿಯಾಯ್ತು.
ಆದರೆ ಕಾಲಕ್ರಮದಲ್ಲಿ ಇದೇ ಹರಪ್ಪ ಅವರ ಸಿದ್ಧಾಂತಕ್ಕೆ ಮರ್ಮಾಘಾತವನ್ನು ನೀಡಿಬಿಟ್ಟಿತು. ಆಳದಿಂದ ಆಳಕ್ಕೆ ಅಗೆಯುತ್ತ ಹೋದಂತೆ ಹರಪ್ಪದ ಪ್ರಾಚೀನತೆ ಅನಾವರಣಗೊಳ್ಳುತ್ತ ಸಾಗಿತು. ಋಗ್ವೇದದಲ್ಲಿ ಉಲ್ಲೇಖಗೊಂಡಿರುವ ಯಾಗ ಮಂಟಪಗಳು. ಮೃತರ ಸಂಸ್ಕಾರ ವೇದಿಗಳು ಹರಪ್ಪದಲ್ಲಿ ಕಂಡು ಬಂದದ್ದು ಎಲ್ಲರ ಹುಬ್ಬೇರುವಂತೆ ಮಾಡಿತು. ಇದರಿಂದ ಹರಪ್ಪ ಸಂಸ್ಕೃತಿಗಿಂತಲೂ ವೇದಗಳು ಪ್ರಾಚೀನ ಎಂಬುದು ಸಿದ್ಧಗೊಂಡಿತು. ಆಕ್ರಮಣದ ಕುರುಹೂ ಇರಲಿಲ್ಲವಾದ್ದರಿಂದ ಆರ್ಯರು ಆಕ್ರಮಣ ಮಾಡಿದರೆಂಬ ವಾದ ಸತ್ತುಹೋಯಿತು. ಶ್ರೀಕಂಠ ಶಾಸ್ತ್ರಿಗಳನ್ನು ಉಲ್ಲೇಖಿಸುವುದಾದರೆ ’ವೈದಿಕ ಸಂಸ್ಕೃತಿಯ ಆಧುನಿಕ ರೂಪವೇ ಹರಪ್ಪ ಸಂಸ್ಕೃತಿ’.
ಎಷ್ಟು ವಿಚಿತ್ರ ನೋಡಿ. ಆರ್ಯರೆಂದರೆ ಅಲೆಮಾರಿಗಳು ದನಗಾಹಿಗಳು, ಯುದ್ಧಪ್ರಿಯರು ಎಂದೆಲ್ಲ ಹೇಳುವ ಇತಿಹಾಸಕಾರರು ಋಗ್ವೆದದ ರಚನೆ ಅವರಿಂದಲೇ ಆಯ್ತು ಅನ್ನೋದನ್ನ ಒಪ್ಪುತ್ತಾರೆ. ಈ ಋಗ್ವೇದದ ಭಾಷೆಯ ಕುರಿತಂತೆ ಅಮೆರಿಕದ ಪಂಡಿತ ವ್ಯಾಸ್ ಹ್ಯೂಸ್ಟನ್ ’ನಮ್ಮ ಆಧುನಿಕ ಭಾಷೆಗಳಿಗಿಂತ ಅನಂತವಾಗಿ ಸಶಕ್ತವಾದ ಭಾಷೆ ಎಲ್ಲಿಂದ ಬಂತು? ಅಲೆಮಾರಿಗಳು, ಕ್ರೂರಿಗಳು ಎಂದೆಲ್ಲ ಇತಿಹಾಸಕಾರರಿಂದ ಬಿಂಬಿಸಲ್ಪಡುವ ಉತ್ತರದಿಂದ ಬಂದ ವೈದಿಕ ಆರ್ಯರು ಆಧುನಿಕ ಭಾಷೆಗಳಿಗಿಂತ ಪರಿಶುದ್ಧ ಭಾಷೆ ಸೃಜಿಸಲು ಸಾಧ್ಯವಾಗಿದ್ದು ಹೇಗೆ?’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಇವುಗಳೆಲ್ಲವನ್ನೂ ಆಧಾರವಾಗಿಟ್ಟುಕೊಂಡೇ ಡೇವಿಡ್ ಫ್ರಾಲಿ ಐತಿಹಾಸಿಕ ದ್ವಂದ್ವವನ್ನು ಸಾಹಿತ್ಯವಿಲ್ಲದ ಇತಿಹಾಸ ಮತ್ತು ಇತಿಹಾಸವೇ ಇಲ್ಲದ ಸಾಹಿತ್ಯ ಎಂದು ಲೇವಡಿ ಮಾಡುತ್ತಾರೆ.
ಹೌದಲ್ಲವೇ ಮತ್ತೆ! ಆಕ್ರಮಣಕಾರರು ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡಿದರು. ಆದರೆ ಅವರಿಗೆ ನೆಲೆಯಿಲ್ಲ, ಇತಿಹಾಸವಿಲ್ಲ; ಆಕ್ರಮಣಕ್ಕೊಳಗಾದವರು ಅದ್ಭುತ ಇತಿಹಾಸವನ್ನು ಬಿಟ್ಟು ಓಡಿದರು. ಆದರೆ ಅವರದೆನ್ನುವ ಸಾಹಿತ್ಯವೇ ಇಲ್ಲ! ಹುಹ್.. ಈ ವಾದಕ್ಕೆ ಇರುವ ಏಕೈಕ ಪರಿಹಾರ ಆಕ್ರಮಣಕಾರ ಮತ್ತು ಆಕ್ರಮಣಕ್ಕೊಳಗಾದವರು ಇಬ್ಬರೂ ಒಬ್ಬರೇ ಎನ್ನುವ ಸಾಧ್ಯತೆ ಮಾತ್ರ. ಜಗತ್ತು ಒಪ್ಪಿಕೊಂಡಿದೆ, ಭಾರತವಿನ್ನೂ ವಿಲವಿಲನೆ ಒದ್ದಾಡುತ್ತಿದೆ. ಮ್ಯಾಕ್ಸ್‌ಮುಲ್ಲರ್‌ಗಳಂಥವರು ಹರಿಬಿಟ್ಟ ವೈರಸ್ಸು ಭಾರತದ ಬೌದ್ಧಿಕ ವೃಕ್ಷವನ್ನು ಕೊರೆಯುತ್ತಲೇ ಇದೆ!
ಆರ್ಯ – ದ್ರಾವಿಡ ವಾದದ ಸಮರ್ಥ ಸಮರ್ಥಕರಾಗಿ ನಿಲ್ಲಬೇಕಾದವರು ದಕ್ಷಿಣದವರು. ರಾಜಕೀಯ ಕಾರಣಗಳಿಗಾಗಿ ಸ್ವಂತ ಲಾಭಕ್ಕಾಗಿ ಅನೇಕರು ಅದನ್ನು ಮಾಡಿದರೂ ಅಚ್ಚರಿಯ ಸಂಗತಿಯೆಂದರೆ, ಈ ವಾದವನ್ನು ಬುಡಮೇಲುಗೊಳಿಸುವ ಸಂಶೋಧನೆಗಳಲ್ಲಿ ಅಗ್ರಣಿಗಳೂ ಇವರೇ! ಅದರಲ್ಲೂ ಕನ್ನಡಿಗರೇ!! ಮೈಸೂರಿನಲ್ಲಿ ಶಿಕ್ಷಣ ಪೂರೈಸಿದ ಶಿಕಾರಿಪುರ ರಂಗನಾಥ ರಾವ್ ಹರಪ್ಪದಲ್ಲಿ ಉತ್ಖನನಗಳು ಶುರುವಾದ ಕಾಲಕ್ಕೆ ಹುಟ್ಟಿದವರು. ಬರೋಡಾದ ಆರ್ಕಿಯಾಲಜಿ ವಿಭಾಗದಲ್ಲಿ ಕೆಲಸ ಮಾಡಿದ ಎಸ್.ಆರ್.ರಾವ್ ನಂತರ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ಕರ್ತವ್ಯ ನಿರತರಾದರು. ಹರಪ್ಪದಲ್ಲಿ ದೊರೆತ ಮುದ್ರೆಗಳ ಭಾಷೆ ಅರ್ಥೈಸುವಲ್ಲಿ ಬಹುಕಾಲ ತಲೆಕೆಡಿಸಿಕೊಂಡಿದ್ದ ರಾವ್, ೧೯೯೨ರ ವೇಳೆಗೆ ತಮ್ಮದೇ ಆದ ರೀತಿಯಲ್ಲಿ ಅದನ್ನು ಓದುವ ಕ್ರಮ ಕಂಡುಹಿಡಿದರು. ಅಷ್ಟೇ ಅಲ್ಲ, ಈ ಆಧಾರದ ಮೇಲೆ ಹಿಂದಿನ ಭಾಷೆ ಸಂಸ್ಕೃತವೇ ಆಗಿತ್ತೆಂಬುದನ್ನು ಸಾಬೀತುಪಡಿಸಿದರು. ಸಹಜವಾಗಿಯೇ ಒಂದಷ್ಟು ಜನ ಅದನ್ನು ವಿರೋಧಿಸಿದರು.  ಆದರೆ ಇಂದಿಗೂ ಹರಪ್ಪದ ವಿಚಾರ ಬಂದಾಗ ಎಸ್.ಆರ್.ರಾವ್ ಬಲು ಸೂಕ್ಷ್ಮವಾಗಿ ಅಧ್ಯಯನ ಮಾಡಲೇಬೇಕಾದ ಹೆಸರು.
ಇನ್ನು ೧೯೫೪ರಷ್ಟು ಹಿಂದೆಯೇ ಭಾರತೀಯ ಸಂಸ್ಕೃತಿಯೆಂಬ ಅಪರೂಪದ ಕೃತಿಯ ಮೂಲಕ ವಿಜ್ಞಾನ – ಭೂಗೋಳ – ಇತಿಹಾಸಗಳೆಲ್ಲವನ್ನೂ ತಳಕು ಹಾಕುತ್ತ, ವೇದವೇದಾಂಗಗಳ ಸೂಕ್ಷ್ಮ ಅವಲೋಕನದೊಂದಿಗೆ ಆರ್ಯ ಆಕ್ರಮಣ ವಾದವನ್ನು ನಿಷ್ಕಾರುಣ್ಯವಾಗಿ ತಳ್ಳಿಹಾಕಿದ ಶ್ರೀಕಂಠ ಶಾಸ್ತ್ರಿಗಳೂ ಪ್ರಾತಃಸ್ಮರಣೀಯರೇ. ಹರಪ್ಪ ಸಂಸ್ಕೃತಿ ಮೂರ‍್ನಾಲ್ಕು ಸಾವಿರ ವರ್ಷಗಳಷ್ಟಾದರೂ ಹಳೆಯದೆಂಬ ವಾದದ ಜಾಡು ಹಿಡಿದ ಶಾಸ್ತ್ರಿಗಳು ಋಗ್ವೇದ ಅದಕ್ಕೂ ಪ್ರಾಚೀನವಾದ್ದೆಂಬುದಕ್ಕೆ ಜ್ಯೋತಿಷ್ಯ ಶಾಸ್ತ್ರವನ್ನು ಉಲ್ಲೇಖಿಸುತ್ತಾರೆ. ಅಚ್ಚರಿಯೆಂದರೆ, ಅತ್ಯಾಧುನಿಕ ಸಂಶೋಧನೆಗಳೂ ಶಾಸ್ತ್ರಿಗಳ ಕಾಲನಿರ್ಣಯವನ್ನು ಅಲ್ಲಗಳೆಯಲಾರವು. ಮೈಸೂರು ಮಹಾರಾಜ ಕಾಲೇಜಿನ ಅಧ್ಯಾಪಕರಾಗಿದ್ದ ಶ್ರೀಕಂಠ ಶಾಸ್ತ್ರಿಗಳು ಈ ವಿಚಾರದಲ್ಲಿ ವಿಸ್ತಾರವಾದ ಅಧ್ಯಯನ ಹೊಂದಿದ್ದರೆಂಬುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚಿನ ದಿನಗಳಲ್ಲಿ ಡೇವಿಡ್ ಫ್ರಾಲಿಯೊಂದಿಗೆ ಆರ್ಯ ಆಕ್ರಮಣವಾದವನ್ನು ಪೊಳ್ಳೆಂದು ಸಾಬೀತುಪಡಿಸಿ ಜಾಗತಿಕವಾಗಿ ಈ ಸಿದ್ಧಾಂತವನ್ನು ಬುಡಮೇಲುಗೊಳಿಸುವಲ್ಲಿ ಬಲುದೊಡ್ಡ ಪಾತ್ರ ನವರತ್ನ ರಾಜಾರಾಮರದ್ದು. ಶ್ರೀಕಾಂತ್ ತಲಗೇರಿಯವರಂತೂ ಋಗ್ವೇದದ ಆಧಾರದ ಮೇಲೆ ಆರ್ಯರು ಹೊರಗಿಂದ ಬಂದವರಲ್ಲ, ಇಲ್ಲಿಂದ ಹೊರಗೆ ಹೋಗಿ ಜಗತ್ತನ್ನೇ ಕಟ್ಟಿದವರೆಂದು ಸಿದ್ಧಪಡಿಸಿದ್ದಾರೆ. ದುರ್ದೈವವೇನು ಗೊತ್ತೆ? ಇವರೆಲ್ಲ ಈ ರೀತಿ ಸತ್ಯದ ಪರ ನಿಂತರೆಂಬ ಕಾರಣಕ್ಕೇ ನಮ್ಮ ವಿಶ್ವವಿದ್ಯಾಲಯಗಳು ಇವರುಗಳನ್ನು ಪಾಂಡಿತ್ಯದ ಪರಿಧಿಯಿಂದ ಹೊರಗೆ ನಿಲ್ಲಿಸಿವೆ. ಕೆಲವೊಮ್ಮೆಯಂತೂ ಮತಾಂಧರೆಂದೂ ಜರಿದಿವೆ!
ಬಹಳ ಬಾರಿ ಅಚ್ಚರಿಗೆ ಕಾರಣವಾಗುವುದು ಇದೇ ವಿಚಾರ. ಆರ್ಯ ಜನಾಂಗ ತಾವೇ ಅಂದುಕೊಳ್ಳುವುದಕ್ಕೆ ಜಗತ್ತಿನಲ್ಲಿ ಅನೇಕ ರಾಷ್ಟ್ರಗಳ ನಡುವೆ ಪೈಪೋಟಿ ಇದೆ. ಆದರೆ ಆರ್ಯರೆಂದರೆ ಯಾರೆಂಬುದಕ್ಕೆ ಬೆಟ್ಟದಷ್ಟು ಪುರಾವೆಗಳಿವೆಯೋ ಆ ರಾಷ್ಟ್ರದ ಜನರು ಮಾತ್ರ ’ಅದು ನಾವಲ್ಲ’ ಎನ್ನುವುದಕ್ಕೆ ಇರುವ ಪಾಂಡಿತ್ಯವನ್ನೆಲ್ಲ ಖರ್ಚು ಮಕಾಡುತ್ತಿದ್ದಾರೆ.
ಆರಂಭದಲ್ಲಿ ಆರ್ಯಪರಂಪರೆ ಮಧ್ಯ ಏಷ್ಯಾವನ್ನು ಆರ್ಯರ ಮೂಲಸ್ಥಾನವೆಂದು ಗುರುತಿಸಿದ್ದರು. ವಿಶೇಷವಾಗಿ ಇರಾನ್ ಮತ್ತು ಆಫ್ಘಾನಿಸ್ತಾನಗಳ ಭೂಭಾಗ. ಹೊರಗಿನವರು ಬಿಡಿ, ಭಾರತೀಯ ಇತಿಹಾಸ ಸಂಶೋಧನಾ ಮಂಡಲಿಯೂ ಈ ವಿಚಾರವನ್ನು ಸಮರ್ಥಿಸಿ ಪುಸ್ತಕಗಳನ್ನು ಪ್ರಕಟಿಸಿತು. ರಾಜೇಶ್ ಕೋಚರ್ ಅವರ ದಿ ವೇದಿಕ್ ಪೀಪಲ್ ಕೃತಿಯಂತೂ ಋಗ್ವೇದವನ್ನು ಆಫ್ಘಾನಿಸ್ತಾನದಲ್ಲಿ ಹುಟ್ಟಿದ್ದೆಂದು ಬಲವಾಗಿ ವಾದಿಸುವುದರೊಂದಿಗೆ ಅದರ ಮೂಲ ಭಾರತವಲ್ಲ’ ಎಂದು ಸಾಧಿಸುವುದಕ್ಕೆ ಸಾಕಷ್ಟು ಕಸರತ್ತು ಮಾಡಿದೆ. ಋಗ್ವೇದದ ಉದ್ದಕ್ಕೂ ಇರುವ ಸಮುದ್ರದ ವರ್ಣನೆ, ನಾವಿಕರ ಸುರಕ್ಷೆಗಾಗಿ ಪ್ರಾರ್ಥನೆಗಳೇ ಈ ವಾದವನ್ನು ಅಲ್ಲಗಲೆಯಲು ಸಾಕಷ್ಟಾಯ್ತು. ನೀರೇ ಕಾಣದ ಮರುಭೂಮಿಯ ಜನ ಅದ್ಯಾವ ಕಾಲ್ಪನಿಕ ಸಮುದ್ರದ ದರ್ಶನ ಮಾಡಿದರೋ? ಅದ್ಯಾವ ನಾವಿಕರನ್ನು ಉದ್ಧರಿಸಿದರೋ ದೇವರೇ ಬಲ್ಲ.
ಆರಂಭದಲ್ಲಿ ಮಧ್ಯ ಏಷ್ಯಾ ಆರ್ಯರ ತಾಯ್ನಾಡು ಎಂದವರು ನಿಧಾನಕ್ಕೆ ಅವರ ನೆಲೆಯನ್ನು ಪಶ್ಚಿಮದತ್ತ ಎಳೆದರು. ಐಸ್‌ಲ್ಯಾಂಡ್, ಸ್ವೀಡನ್, ಜರ್ಮನಿಗಳು ತಮ್ಮನ್ನು ತಾವು ಆರ್ಯರೆಂದು ಕರೆದುಕೊಂಡವು. ಇತಿಹಾಸ ಸಂಶೋಧನೆಯಲ್ಲಿ ಹೊಸಹೊಸ ಸಾಧ್ಯತೆಗಳ ಜೋಡಣೆಯಾದಂತೆಲ್ಲ ಆರ್ಯರ ಕೇಂದ್ರ ಭಾರತವೇ ಅನ್ನುವುದು ಸಾಬೀತಾಗುತ್ತ ಹೋಯಿತು. ಅಷ್ಟೇ ವೇಗವಾಗಿ ಅವರ ನೆಲೆಯನ್ನು ಪಶ್ಚಿಮದತ್ತ ಸೆಳೆಯುವ ಪ್ರಯತ್ನಗಳೂ ನಡೆದವು.
ಜರತೂಷ್ಟ್ರರ ಪವಿತ್ರ ಗ್ರಂಥ ಜೆಂದ್ ಅವೆಸ್ತಾದ ಭಾಷೆ – ಸಂಸ್ಕೃತವನ್ನು ಹೋಲುವುದರಿಂದ ಆರ್ಯರು ಅದೇ ನಾಡಿನವರಿರಬೇಕೆಂದು ಊಹಿಸಿದ್ದು ಸತ್ಯಸ್ವರೂಪ ಮಿಶ್ರ ಮತ್ತು ಜೆ.ಹರ್ಮಟ್ಟಾರವರ ಸಂಶೋಧನೆಗಳ ಹಿನ್ನೆಲೆಯಲ್ಲಿಸುಳ್ಳಾಯಿತು. ಅವರ ಪ್ರಕಾರ ಮಧ್ಯ ಏಷ್ಯಾ ಅಷ್ಟೇ ಅಲ್ಲ, ಯುರೋಪಿನ ಭಾಷೆಗಳೂ ವೈದಿಕ ಸಂಸ್ಕೃತದಿಂದ ಕ್ರಿ.ಪೂ.೫೦೦೦ಕ್ಕಿಂತಲೂ ಮುಂಚೆಯೇ ಪದಗಳನ್ನು ಎರವಲು ಪಡೆದುಕೊಂಡಿದ್ದವು.
ಒಟ್ಟಾರೆಯಾಗಿ ಮಿಷನರಿಗಳ ವಾದ ಹೇಗಿತ್ತೆಂದರೆ, ಅನಾಗರಿಕ ಭಾರತೀಯರ ಮೇಲೆ ಮಧ್ಯ ಏಷ್ಯಾದ ದಾಳಿಕೋರ ಆರ್ಯರು ಆಕ್ರಮಣ ಮಾಡಿದರು. ಈ ಆರ್ಯರ ನೆಲೆ ಯುರೋಪೂ ಆಗಿದ್ದಿರಬಹುದು. ಹೀಗೆ ಮೊದಲು ಊಹಿಸಲಾಗಿತ್ತು. ಹರಪ್ಪದ ಶ್ರೇಷ್ಟ ನಗರಗಳ ಉತ್ಖನನದ ನಂತರ ಅವರ ವಾದ ಬದಲಾಯ್ತು. ಈಗ ಅವರ ಪ್ರಕಾರ ನಾಗರಿಕ ದ್ರಾವಿಡರ ಮೇಲೆ ಅಲೆಮಾರಿ, ಜಗಳಗಂಟ ಆರ್ಯರು ದಾಳಿಗೈದು ದಕ್ಷಿಣಕ್ಕೆ ಓಡಿಸಿದರು! ಅವರ ತುತ್ತೂರಿ ದನಿಗೆ ನಮ್ಮ ಎಡಪಂಥೀಯ ಬುದ್ಧಿಜೀವಿಗಳು ತಾಳ ಕುಟ್ಟಿದರು. ರಾಹುಲ ಸಾಂಕೃತ್ಯಾಯನರಂತೂ ವೋಲ್ಗಾ ಗಂಗಾದಂತಹ ಕೃತಿ ಬರೆದು ಮನುಕುಲದ ಶಕ್ತಿಕೇಂದ್ರ ರಷ್ಯಾ ಎಂದು ಬಿಂಬಿಸಿದರು.  ವಿಜ್ಞಾನದ ಶಾಖೆಗಳು ತೆರೆದುಕೊಂಡಂತೆಲ್ಲ ಇತಿಹಾಸದ ನಿರ್ಣಯಕ್ಕೆ ಶಕ್ತಿ ತುಂಬಿಕೊಳ್ಳಲಾರಂಭಿಸಿತು. ಆರ್ಯ ಆಕ್ರಮಣ ಅನ್ನೋದು ಸುಳ್ಳು ಎಂಬುದಕ್ಕೆ ಸಾಕ್ಷಿ ವಿಫುಲವಾಗಿ ದೊರೆಯಲಾರಂಭಿಸಿತು. ಭಾರತ ಜಗತ್ತಿನ ಶ್ರೇಷ್ಠ ಸಂಸ್ಕೃತಿಯ ಕೇಂದ್ರ ಎಂಬುದು ಸಾಬೀತಾಗುತ್ತ ನಡೆದಂತೆ ಸನಾತನ ಧರ್ಮದ ಪ್ರಾಚೀನತೆ ಮತ್ತು ಅದು ಇಂದು ಅಗಾಧವಾಗಿ ಬೆಳೆದು ನಿಲ್ಲಲು ಕಾರಣವಾದ ನಾವೀನ್ಯ ಎರಡೂ ಪ್ರಶಂಸೆಗೊಳಗಾಯ್ತು. ಇದರ ಪರವಾಗಿ ವಾದ ಮಾಡಲು ಡೇವಿಡ್ ಫ್ರಾಲಿ, ಫ್ರಾಂಕ್ವಾ, ಮಿಶೆಲ್‌ರಂತಹ ವಿದೇಶಿಗರು ಟೊಂಕ ಕಟ್ಟಿ ನಿಂತರು.

5 thoughts on “ವಾಸ್ತವ ಇತಿಹಾಸವನ್ನು ಒಪ್ಪಿಕೊಳ್ಳಲೇಕೆ ಹಿಂಜರಿಕೆ!?

  1. ಶಿವನನ್ನು ಭಾರತೀಯರು ಆರಾಧಿಸುವುದು ಲಯಕರ್ತನೆಂದು, ಶಿವಲಿಂಗದಬಗ್ಗೆ ನೀವು ನೀಡಿರುವ ವೈಜ್ಞಾನಿಕ ವಿವರಣೆ ಸರಿಯಾಗಿದೆ. ಶಿವಲಿಂಗವು ಸೃಷ್ಟಿ ಸ್ಥಿತಿ ಲಯಗಳ ಸಂಮಿಶ್ತಣ. ಶಿವನನ್ನು ಸ್ತುತಿಸುವ ಮಹತ್ತಾದ ವೈದಿಕ ಮಂತ್ರಗಳು ರುದ್ರ. ಇದರಲ್ಲಿ ಶಿವನು ನಮ್ಮನ್ನು ದುಷ್ಟಶಕ್ತಿಗಳ ವಿರುದ್ದ ಬಿಲ್ಲನ್ನು ಹೆದೆಯೇರಿಸಿ ರಕ್ಷಿಸಲಿ ಎಂದು ಪ್ರಾರ್ತಿಸುತ್ತಾ ಅವನು ಸರ್ವರಲ್ಲೂ ಸರ್ವಸ್ವರೂಪದಲ್ಲೂ ಸ್ಥಾವರ ಜಂಗಮದಲ್ಲೂ ಇದ್ದು, ವಿಶ್ವವ್ಯಾಪಕನಾಗಿದ್ದು, ನಮ್ಮಗಳ ಜೀವನವು ಸರಿಯಾದ ಕ್ರಮದಲ್ಲಿ ಅವನ(ಶಿವನ) ಅನುಗ್ರಹದಿಂದ ನಡೆಯಲಿ ಎಂದು ಪ್ರಾರ್ಥಿಸುವ ಸರ್ವ ಸಮಾನತೆಯನ್ನು ಶಿವನ ವಿಶ್ವರೂಪದರ್ಶನವನ್ನು ಮಾಡಿಸುವ ವೈದಿಕ ಮಂತ್ರವಾಗಿದೆ. ಭಾರತೀಯ ಜೀವನ ಪದ್ದತಿಯನ್ನು ಅಧ್ಯಯನ ಮಾಡಲು ಈ ರುದ್ರಮಂತ್ರಗಳ ಅರ್ಥಸಹಿತ ಅನುಸಂದಾನವೇ ಸಾಕು. ನಿಮ್ಮ ಲೇಖನವು ಈ ಉತ್ತರವನ್ನು ಬರೆಯಲು ನನ್ನನ್ನು ಪ್ರಚೋದಿಸಿತು. ನಿಮ್ಮ ಚಿಂತನೆಗಳಿಗೆ ದನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s