ಭಾರತ – ಜರ್ಮನಿಯ ಅಂತಸ್ಸಂಬಂಧ ~ ವಿಶ್ವಗುರು ೪

ಮೆಕಾಲೆ ಭಾರತಕ್ಕೆ ಬಂದಿದ್ದೇ ಇಲ್ಲಿನ ಜನರ ನಂಬುಗೆಗಳನ್ನು ಅಳ್ಳಕಗೊಳಿಸಿ, ಧರ್ಮ ವಿಮುಖರನ್ನಾಗಿ ಮಾಡಿ ಶಾಶ್ವತವಾಗಿ ಕ್ರಿಸ್ತಾನುಯಾಐಇಗಳಾಗುವಂತೆ ಮಾಡಲು. ಆ ಮೂಲಕ ಬ್ರಿಟಿಷರ ಚಿರ ದಾಸ್ಯದಲ್ಲಿ ಬಂಧಿಯಾಗಿಸಲು. ಅವನ ಈ ಕೆಲಸ ಸುಗಮವಾಗಬೇಕೆಂದರೆ ಭಾರತೀಯರ ಚಿಂತನೆಯ ಮೂಲಾಧಾರವಾದ ವೇದೋಪನಿಷತ್ತುಗಳ ವ್ಯಾಖ್ಯಾನವನ್ನೆ ಬದಲಿಸುವ ಅಗತ್ಯವಿತ್ತು. ಈ ಕೆಲಸಕ್ಕೆ ಸಾಥ್ ನೀಡಿದ್ದು ಮ್ಯಾಕ್ಸ್ ಮುಲ್ಲರ್. ಕಳೆದ ಸಂಚಿಕೆಗಳಲ್ಲಿ ಈ ಬಗ್ಗೆ ಓದಿದ್ದೀರಿ. ಮ್ಯಾಕ್ಸ್ ಮುಲ್ಲರನ ತವರು ಜರ್ಮನಿ ಭಾರತದೊಂದಿಗೆ ಯಾವ ಸಂಬಂಧ ಇಟ್ಟುಕೊಂಡಿತ್ತು, ಈಗಲೂ ಇಟ್ಟುಕೊಂಡಿದೆ ಎನ್ನುವುದು ಈ ಬಾರಿಯ ತಿರುಳು…

ಅಂದೂ ಅಷ್ಟೇ, ಇಂದೂ ಕೂಡ ಜರ್ಮನಿಗೆ ಭಾರತವನ್ನು ಕಂಡರೆ ವಿಶೇಷ ಮಮತೆ. ಜರ್ಮನಿಯ ತತ್ವಶಾಸ್ತ್ರದ ಸೈದ್ಧಾಂತಿಕ ಹಿನ್ನೆಲೆ ರೂಪುಗೊಂಡಿರೋದು ಭಾರತದಲ್ಲಿಯೇ ಎಂದರೆ ಅತಿಶಯೋಕ್ತಿಯಲ್ಲ. ಇಂದಿಗೂ ಸಂಸ್ಕೃತಿ, ಸಾಹಿತ್ಯ, ಭಾಷೆ, ಸಂಗೀತದ ಕುರಿತಂತೆ ವೈಜ್ಞಾನಿಕ ಅಧ್ಯಯನಗಳು ಹೆಚ್ಚಿಗೆ ನಡೆಯುತ್ತಿರುವುದು ಜರ್ಮನಿಯ ನೆಲದಲ್ಲಿಯೇ ಎಂದರೆ ಅಚ್ಚರಿ ಪಡಬೇಡಿ.
ಇತ್ತೀಚೆಗಷ್ಟೇ ಹೃಷಿಕೇಷದಿಂದ ಮರಳಿ ಬಂದ ವೇಣುವಾದಕ ಬಾಪು ಪದ್ಮನಾಭ ನನ್ನೊಡನೆ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಜರ್ಮನಿಯ ಒಂದಷ್ಟು ಸಂಗೀತ ಪ್ರೇಮಿಗಳೊಡನೆ ನೀರವ ಸ್ಥಾನವೊಂದರಲ್ಲಿ ಮುರಳಿನಾದ ಮಾಡುತ್ತಿದ್ದರಂತೆ. ಅವರು ಕೇಳುವ ರಾಗವನ್ನು ಇವರು ನುಡಿಸಬೇಕು. ಆ ರಾಗದಲ್ಲಿ ಅವರು ತನ್ಮಯರಾಗಿ ಮೈ ಮರೆಯೋದನ್ನ ಕಂಡಾಗ ಇವರಿಗೆ ಅಚ್ಚರಿ. ಹೊರಡುವ ಮುನ್ನ ಜರ್ಮನಿಯ ಮಿತ್ರರು ” ನಿಮಗಿಂತ ಹೆಚ್ಚಿನ ಕೆಲಸ ಸಂಗೀತ ಸಾಹಿತ್ಯದ ಮೇಲೆ ನಾವು ಮಾಡುತ್ತಿದ್ದೇವೆ. ಎಷ್ಟೇ ಕೃಷಿ ಮಾಡಿದರೂ ವಿಶೇಷ ಅನುಭವಕ್ಕಾಗಿ ಇಲ್ಲಿಗೆ ಬರಲೇ ಬೇಕು. ಇನ್ನು ಕೆಲವು ವರ್ಷಗಳಷ್ಟೇ. ಜರ್ಮನಿಯಲ್ಲೊಂದು ಭಾರತವನ್ನು ಸೃಷ್ಟಿ ಮಾಡುತ್ತೇವೆ” ಎಂದರಂತೆ.
ಜರ್ಮನಿಯ ಭಾರತ ಪ್ರೇಮಕ್ಕೆ ಒಂದು ಸುಧೀರ್ಘ ಇತಿಹಾಸವೇ ಇದೆ. ಹಾಗೆ ನೋಡಿದರೆ ಇಡಿಯ ಯೂರೋಪಿಗೆ ಭಾರತದ ಮೇಲೆ ಆಸ್ಥೆ ಇತ್ತು; ಈಗಲೂ ಇದೆ. ಕೆಲವರಿಗೆ ಅದು ವ್ಯಾಪಾರಿಯ ಹಿನ್ನೆಲೆಯ ಆಸಕ್ತಿಯಾದರೆ, ಮತ್ತೂ ಕೆಲವರಿಗೆ ಆಧ್ಯಾತ್ಮಿಕ ಹಿನ್ನೆಲೆಯದು. ಜರ್ಮನಿಯ ಕವಿಯೊಬ್ಬ,” ಬಲು ದೀರ್ಘಕಾಲದಿಂದ ವರ್ಷಂಪ್ರತಿ ಪೋರ್ಚುಗೀಸರು, ಡಚ್ಚರು ಮತ್ತು ಇಂಗ್ಲೀಷರು ಭಾರತದ ಸಂಪತ್ತನ್ನು ಲೂಟಿಗೈದು ತರುತ್ತಿದ್ದಾರೆ.ನಾವು ಜರ್ಮನಿಯ ಜನ ಇದನ್ನು ನೋಡಿಕೊಂಡೇ ಇದ್ದೇವೆ. ಇಂದು ಶ್ಲೆಗಲ್, ಹಮ್ ಬೋಲ್ಟ್, ಬಾಪ್, ಫ್ರಾಂಕ್ ಮುಂತಾದವರು ಭಾರತಕ್ಕೆ ನಮ್ಮ ನಾವಿಕರು. ಬಾನ್ ಮತ್ತು ಮ್ಯೂನಿಚ್ ನ ವಿಶ್ವವಿದ್ಯಾಲಯಗಳು ಕಾರ್ಖಾನೆಗಳಾಗುವ ದಿನ ದೂರವಿಲ್ಲ” ಎಂದು ಕಾವ್ಯಾತ್ಮಕವಾಗಿ ಹೇಳಿರುವುದನ್ನು ರಾಧಾಕೃಷ್ಣನ್ ತಮ್ಮ ’ಈಸ್ಟರ್ನ್ ರಿಲಿಜನ್, ವೆಸ್ಟರ್ನ್ ಥಾಟ್’ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಜರ್ಮನಿಯು ಭಾರತದ ಭೌತಿಕ ಸಂಪತ್ತಿನ ಕುರಿತಂತೆ ತಲೆ ಕೆಡಿಸಿಕೊಳ್ಳಲಿಲ್ಲ. ಇಲ್ಲಿನ ಆಧ್ಯಾತ್ಮಿಕ ಸಂಪತ್ತಿನೆಡೆಗೆ ಲಕ್ಷ್ಯ ಹರಿಯಿತು. ಜರ್ಮನಿಯ ರಾಷ್ಟ್ರೀಯತೆಯ ಜನಕನೆನ್ನಿಸಿಕೊಳ್ಳುವ ಖ್ಯಾತ ತತ್ವ ಶಾಸ್ತ್ರಜ್ಞ ಹೆಗೆಲ್, “ಜರ್ಮನಿಯ ಜನ ಭಾರತದ ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ನೇರ ಶಿಷ್ಯರು” ಎಂದು ಉದ್ಗರಿಸಿದ್ದರು. ’ ದ ಸೋಲ್ ಆಫ್ ಇಂಡಿಯಾ’ ದಲ್ಲಿ ಡಿ ರೀನ್ ಕೋರ್ಟ್ ” ಜರ್ಮನಿ ಭಾರತದ ಅಧ್ಯಯನಕ್ಕೆ ಪ್ರಯೋಗ ಶಾಲೆಯಾಯ್ತು” ಎಂದಿದ್ದ. ಜೋಹಾನ್ ಹರ್ಡರ್ ಕಲ್ಪನೆಯ ಭಾರತವನ್ನು ಬಿಟ್ಟು ನೈಜ ಭಾರತವನ್ನು ಅರಿಯುವ ಪ್ರಯತ್ನಕ್ಕೆ ವೇಗ ತಂದು ಕೊಟ್ಟ. ಅಷ್ಟೇ ಅಲ್ಲ, ಭಾರತದ ” ವಸುಧೈವ ಕುಟುಂಬಕಂ” ನಂತಹ ಚಿಂತನೆಗಳನ್ನು ಜಾಗತಿಕ ಐತಿಹಾಸಿಕ ಪರಿಕಲ್ಪನೆಯೆಂದು ಗುರುತಿಸಿದ, ಹಿಂದುವಿನ ಏಕತೆಯ ಗುಣವನ್ನು ಕೊಂಡಾಡಿದ. ಎಲ್ಲಕ್ಕೂ ಮಿಗಿಲಾಗಿ ” ಮಾನವತೆಯ ದೈವೀ ಅವತಾರವಾದದ್ದು ಭಾರತದಲ್ಲಿ” ಎಂದು ಸ್ಪಷ್ಟವಾಗಿ ಹೇಳಿದ. ಹರ್ಡರ್ ನ ಕೃತಿ ’ ಐಡಿಯಾಸ್ ಆನ್ ದಿ ಫಿಲಾಸಫಿ ಆಫ್ ಹಿಸ್ಟರಿ’ ಜರ್ಮನಿಯ ಚಿಂತನೆಗೆ ಸ್ಪಷ್ಟ ದೃಷ್ಠಿಕೋನ ಒದಗಿಸಿಕೊಟ್ಟಿತು. ಲೆಪೋಲ್ಡ್ ಶ್ರೋಡರ್ ” ಭಾರತೀಯರು ಪ್ರಾಚೀನ ಕಾಲದ ಭಾವ ಜೀವಿಗಳಾದರೆ, ಜರ್ಮನಿಯ ಜನ ಆಧುನಿಕ ಯುಗದ ಭಾವಜೀವಿಗಳು” ಎಂದಿದ್ದ. ಜರ್ಮನಿಯು ತನ್ನನ್ನು ತಾನು ಭಾರತದ ಮುಂದುವರೆದ ಅಂಗವೆಂದು ಭಾವಿಸಲು, ದಾಖಲಿಸಲು ಹಿಂದು ಮುಂದು ನೋಡಲಿಲ್ಲ.
ಜರ್ಮನಿಯ ಆಲೋಚನಾ ವಿಧಾನದಲ್ಲಿ ಇಷ್ಟೊಂದು ಗಂಭೀರ ಬದಲಾವಣೆ ಬರುವಲ್ಲಿ ಐತಿಹಾಸಿಕ ಹಿನ್ನೆಲೆ ಇದೆ. 17ನೇ ಶತಮಾನದ 30 ವರ್ಷಗಳ ಯುದ್ಧ ಮತ್ತು ನೆಪೋಲಿಯನ್ ನ ಯುದ್ಧಗಳಿಂದ ಇಡಿಯ ಯುರೋಪ್ ಕಂಗಾಲಾಗಿತ್ತು; ಜರ್ಮನಿ ಜರ್ಝರಿತವಾಗಿತ್ತು. ಜರ್ಮನಿ ಆ ವೇಳೆಗೆ ಬಲಹೀನವೂ ಆಗಿತ್ತು, ಆಂತರಿಕವಾಗಿಯೂ ಒಡೆದು ಹೋಗಿತ್ತು. ಫ್ರಾನ್ಸ್ ಮತ್ತು ಆಸ್ಟ್ರಿಯಾದ ನಡುವಣ ಯುದ್ಧ ನಡೆಯುವಾಗ ಎರಡೂ ದೇಶದ ಸೈನಿಕರು ಜರ್ಮನಿಯ ಮೂಲಕವೇ ಹಾದು ಹೋಗುತ್ತಿದ್ದರು. ಜರ್ಮನಿಯ ಜನ, ಆಳುವ ದೊರೆ ಇವರಿಬ್ಬರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯೆಮೆನ್ ನಲ್ಲಿ ಅರಬ್ ರಾಷ್ಟ್ರಗಳು ಮತ್ತು ಇರಾನ್ ಪ್ರತಿಷ್ಠೆಯ ಕದನ ನಡೆಸುತ್ತಿಲ್ಲವೇ? ಹಾಗೆಯೇ ಜರ್ಮನಿಯ ಜನ ತಮ್ಮನ್ನು ತಾವು ಕೈಲಾಗದವರೆಂದು ನಂಬಿದ್ದರು., ರಾಜನ ಮೇಲೆ ಅವರ ವಿಶ್ವಾಸ ಕಳೆದು ಹೋಗಿತ್ತು.
ಜರ್ಮನಿಯನ್ನು ಮತ್ತೆ ಜಾಗೃತಗೊಳಿಸುವ, ಜನರಲ್ಲಿ ಆತ್ಮವಿಶ್ವಾಸವನ್ನು ಮರುಪೂರಣ ಮಾಡುವ ಕೆಲಸ ಆಗಬೇಕಿತ್ತು. ಜರ್ಮನಿಯ ಬೌದ್ಧಿಕ ವಲಯಕ್ಕೆ ಆಗ ಕಂಡು ಬಂದ ಶ್ರೇಷ್ಟ ನಾಡು ಭಾರತ! ತಮ್ಮಂತೆ ಪರಾಧೀನತೆಗೆ ಒಳಪಟ್ಟಿರುವ ಭಾರತದೊಂದಿಗೆ ಅವರ ಸಹಜ ಮಮಕಾರ ಪೂರ್ಣ ಬಾಂಧವ್ಯ ಮೊದಲಾಯ್ತು. ಫ್ರೆಡ್ರಿಕ್ ವಾನ್, ಶ್ರೆಗೆಲ್, ಆಗಸ್ಟ್ ವಿಲ್ಹೆಮ್, ಹಂಬೊಲ್ಟ್, ಶೋಪನಾರ್ ಮೊದಲಾದವರೆಲ್ಲಾ ಪತಂಗಗಳಂತೆ ಭಾರತದೆಡೆಗೆ ಆಕರ್ಷಿತರಾದರು. ಈ ಸಾಹಿತ್ಯದ ಅಧ್ಯಯನ ಮಾಡುತ್ತಿದ್ದಂತೆ ಅವರೊಳಗೆ ಹೊಸದೊಂದು ಸ್ಪೂರ್ತಿ ಉಕ್ಕಿತು. ಅತ್ತ ಪ್ರಶಿಯಾ ಯುರೋಪಿನ ಹೊಸ ಶಕ್ತಿಯಾಗಿ ಉದಯವಾಗುತ್ತಿದ್ದಂತೆ ಜರ್ಮನಿ ತಾನೂ ಒಂದಾಯ್ತು.1871 ರ ವೇಳೆಗೆ ಅಂತೂ ಸಂಯುಕ್ತ ಜರ್ಮನಿ ಉದಯವಾಯ್ತು.ಸೋತು ಸುಣ್ಣವಾಗಿದ್ದ ಜರ್ಮನಿಯ ಜನ ಹೀಗೆ ಬಲಾಢ್ಯವಾಗಿ ನಿಲ್ಲಲು ಭಾರತದ ಜನ ಸಾಹಿತ್ಯಾಧ್ಯಯನ, ಜೊತೆಗೆ ಭಾರತೀಯರ ಮುಂದುವರೆದ ಅಂಶ ತಾವೆಂದು ಭಾವಿಸಿದ್ದೇ ಕಾರಣವೆಂದು ಇಂಗ್ಲೇಂಡು ನಂಬಿತು. ಕಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರಭಾವೀ ಆಂಗ್ಲೋ ಇಂಡಿಯನ್ ಸರ್ ಹೆನ್ರಿ ಮಾಯ್ನೆ “ಸಂಸ್ಕೃತದಿಂದ ಹುಟ್ಟಿದ ರಾಷ್ಟ್ರ” ಎಂದು ಜರ್ಮನಿಯ ಕುರಿತಂತೆ ಉದ್ಗರಿಸಿದ.
ಹೌದು.ಈ ಮಾತು ಸ್ವಲ್ಪ ಅತಿಶಯೋಕ್ತಿಯೇ, ಆದರೆ ಆ ದಿನಗಳ ಯೂರೋಪಿನ ಮಾನಸಿಕತೆಯನ್ನು ಅಂದಾಜು ಮಾಡಿಕೊಳ್ಳಲು ಇದು ಸಾಕು. ತಾವೇ ಹರಿಬಿಟ್ಟ ಆರ್ಯ ಜನಾಂಗದ ಪರಿಕಲ್ಪನೆಯನ್ನು ಜರ್ಮನಿ ಇಷ್ಟು ಗಂಭೀರವಾಗಿ ಪರಿಗಣಿಸಿ ಎದ್ದು ನಿಲ್ಲಬಹುದೆಂದು ಇಂಗ್ಲೇಂಡು ಕನಸು ಮನಸಲ್ಲೂ ಎಣಿಸಿರಲಿಲ್ಲ. ಇದನ್ನೇ ಹಿಡಿದು ಭಾರತವೂ ಜಾಗೃತವಾದರೆ ಕಷ್ಟವೆಂದರಿತ ಇಂಗ್ಲೇಂಡು ಆರ್ಯ ಜನಾಂಗದ ಸಿದ್ಧಾಂತವನ್ನೇ ಬದಲಿಸುವಂತೆ ಮ್ಯಾಕ್ಸ್ ಮುಲ್ಲರ್ ನನ್ನು ಕೇಳಿಕೊಂಡಿತು. ಪಾಪ, ಮ್ಯಾಕ್ಸ್ ಮುಲ್ಲರ್ ಈಗ ಆರ್ಯ ಜನಾಂಗ ವಾದವನ್ನು , ಭಾಷೆಗಳ ಸಮುಚ್ಚಯ ಆರ್ಯವೆಂದು ಬದಲಿಸಲು ಹರ ಸಾಹಸ ಮಾಡಿದ.ಸಾಧ್ಯವಾಗಲಿಲ್ಲ. ಅದಾಗಲೇ ಈ ವಾದದಿಂದ ಲಾಭ ಪಡೆಯಬೇಕಾದ ಅನೇಕರು ಅಲ್ಲಲ್ಲಿ ಹುಟ್ಟಿಯಾಗಿತ್ತು.
ಬಿಡಿ. ಅದನ್ನು ಮುಂದೊಮ್ಮೆ ಸುಧೀರ್ಘವಾಗಿ ಚರ್ಚಿಸೋಣ. ಭಾರತದ ಚಿಂತನೆಗಳಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದ ಜರ್ಮನಿಯ ಸಂಸ್ಕೃತಾಧ್ಯಯನ ಬುದ್ಧಿವಂತಿಕೆಯ ದ್ಯೋತಕವಾಗಿತ್ತು. ಮ್ಯಾಕ್ಸ್ ಮುಲ್ಲರ್ ಸಂಸ್ಕೃತ ಕಲಿತು ಅನೇಕ ಪ್ರಾಚೀನ ಸಾಹಿತ್ಯಾನುವಾದಕ್ಕೆ ಕೈ ಹಾಕಿದ. ಜರ್ಮನಿಯಲ್ಲಿ ದುಡ್ಡುಗಿಟ್ಟುತ್ತಿಲ್ಲವೆಂದು ಫ್ರಾನ್ಸಿಗೆ ಬಂದ.ಅಲ್ಲಿಂದ ಈಗ ಲಂಡನ್ನಿಗೆ ಬಂದಿದ್ದಾನೆ. ತನಗೆ ಸಿಕ್ಕ ಈ ಹೊಸ ಕೆಲಸದ ಕುರಿತಂತೆ ಅವನಿಗೆ ಅಪಾರ ಅಭಿಮಾನ,ಖುಷಿ. ಅದನ್ನಾತ ತನ್ನ ತಾಯಿಯೊಡನೆ ತೋಡಿಕೊಂಡ, “ನಾನು ಪ್ರತೀ ವರ್ಷ ಮುದ್ರಣಕ್ಕೆ ತಯಾರಾದ 50 ಹಾಳೆಗಳನ್ನು ಅನುವಾದ ಮಾಡಿಕೊಡ ಬೇಕು, ತತ್ವಗಳನ್ನು ತಿದ್ದಿಕೊಡಬೇಕು.ಮುಂದಿನ ಎಂಟು ವರ್ಷಗಳು ನನಗೊಂದು ವಿಶೇಷ ಸ್ಥಾನಮಾನವಿರುತ್ತದೆ. ಜೊತೆಗೆ ಈ ಕೆಲಸ ಅದೆಷ್ಟು ಸುಲಭದ್ದೆಂದರೆ ನಾನು ಮತ್ತೊಂದು ಹುದ್ದೆಯನ್ನೂ ಅಲಂಕರಿಸಬಹುದು. ಅದಾಗಲೇ ಬ್ರಿಟೀಷ್ ಮ್ಯೂಸಿಯಂನ ಗ್ರಂಥ ಪಾಲಕನಾಗುವಂತೆ ಕೇಳಿಕೊಂಡಿದ್ದಾರೆ. ವರ್ಷಕ್ಕೆ 150 ಪೌಂಡ್ ಸಂಬಳ. ಆದರೆ ಬನ್ ಸೆನ್ ರ ಸಲಹೆಯ ಮೇರೆಗೆ ಅದನ್ನು ಬೇಡವೆಂದಿದ್ದೇನೆ… ನಾನು ನನ್ನ ಜೀವಮಾನದಲ್ಲಿ ನಿರೀಕ್ಷಿಸಬಹುದಾದ್ದಕ್ಕಿಂತ ಹೆಚ್ಚಲ್ಲವೇನು ಇದು?” ಎಂದಿದ್ದ.ಪತ್ರ ಸುಧೀರ್ಘವಾಗಿದೆ, ಆದರೆ ನಮ್ಮ ಓದಿಗೆ ಅಗತ್ಯವಿರುವ ಈ ಸಾಲುಗಳನ್ನು ನೋಡಿ. ಆತ ಜೀವಮಾನದಲ್ಲಿಯೇ ನಿರೀಕ್ಷಿಸದಷ್ಟು ದೊಡ್ಡ ಮೊತ್ತ ಸಿಗಬಹುದಾದ ಆನಂದವಿದೆ. ಅಷ್ಟೇ ಅಲ್ಲ, ಅವನ ಪಾಲಿಗೆ ಋಗ್ವೇದದ ಅನುವಾದ ಅದೆಷ್ಟು ಸರಳವೆಂದರೆ ಆತ ವಾರ್ಷಿಕ 150 ಪೌಂಡುಗಳಷ್ಟು ಸಂಪಾದನೆಯ ಮತ್ತೊಂದು ಕೆಲಸ ಒಪ್ಪಿಕೊಳ್ಳಲು ಸಿದ್ಧನಾಗಿಬಿಟ್ಟಿದ್ದ !
ಇಷ್ಟಕ್ಕೂ ಋಗ್ವೇದ ಮ್ಯಾಕ್ ಮುಲ್ಲರ್ ಅಂದುಕೊಂಡಷ್ಟು ಸರಳವಾಗಿತ್ತೇ ? ಮೊತ್ತ ಮೊದಲನೆಯದಾಗಿ ಋಗ್ವೇದದ ಭಾಷೆ ಮತ್ತು ಆ ನಂತರದ ಸಂಸ್ಕೃತ ಪೂರ್ಣ ಭಿನ್ನ.ಋಗ್ವೇದದ ಭಾಷೆಯನ್ನು ಮುಟ್ಟಲಿಕ್ಕೇ ಒಂದಷ್ಟು ತಯಾರಿ ಬೇಕಿತ್ತು. ಎಲ್ಲಕ್ಕೂ ಮಿಗಿಲಾಗಿ ಒಂದು ಅಂದಾಜಿನ ಪ್ರಕಾರ 1017 ಋಕ್ಕುಗಳ 10580 ಮಂತ್ರಗಳ ಮತ್ತು 153826 ಪದಗಳ ಬೃಹತ್ ಸಾಹಿತ್ಯ ಋಗ್ವೇದ (ಕೆಲವೆಡೆ ಋಕ್ಕು-ಮಂತ್ರಗಳ ಸಂಖ್ಯೆ ವ್ಯತ್ಯಾಸವೆನಿಸಿದರೂ ಎಲ್ಲ ಅಂದಾಜೂ ಇದರ ಆಸುಪಾಸಿಗೇ ಇವೆ),ಇದನ್ನು ಅರ್ಥೈಸಿಕೊಂಡು ಅನುವಾದ ಮಾಡಲು ಭಾರತದ ಸಹವಾಸ ಬೇಕಿತ್ತು. ಇಲ್ಲಿನ ಜನರ ರೀತಿ-ನೀತಿ,ಆಚಾರ-ವಿಚಾರಗಳ ಆಧಾರದ ಮೇಲೆಯೇ ಇಲ್ಲಿನ ಸಾಹಿತ್ಯವನ್ನು ಅರಿತುಕೊಳ್ಳಲು ಸಾಧ್ಯ. ಇಲ್ಲವಾದರೆ ನಮ್ಮ ದೃಷ್ಟಿಕೋನಕ್ಕೆ ಅವರನ್ನು ಅಳೆದುಬಿಡುತ್ತೇವೆ. ಭಾರತದ ಹಳ್ಳಿಯ ಹೆಣ್ಣುಮಗಳನ್ನು ಯೂರೋಪಿನ ಚರ್ಚಿಗೆ ಕರೆದೊಯ್ದರೆ ಅವಳು ಯೇಸುವಿಗೆ ಹಣೆ ಮುಟ್ಟಿಸಿ ಆನಂತರ ಪಕ್ಕದಲ್ಲಿರುವ ಪಾದ್ರಿಯ ಕಾಲಿಗೆ ನಮಸ್ಕರಿಸುತ್ತಾಳೆ ತಾನೆ? ಏಕೆಂದರೆ ಆಕೆಯ ಪಾಲಿಗೆ ಚರ್ಚು ದೇವಸ್ಥಾನ,ಕ್ರಿಸ್ತ ದೇವರ ಮೂರ್ತಿ ಪಕ್ಕದಲ್ಲಿರುವ ಪಾದ್ರಿ ಒಂದೋ ಪೂಜಾರಿ ಅಥವಾ ಸ್ವಾಮೀಜಿಯಂತೆ ಕಾಣುತ್ತಾರೆ! ಇಲ್ಲಿ ನಿತ್ಯ ಕಾಣುವುದನ್ನು ಅಲ್ಲಿ ಕಲ್ಪಿಸಿಕೊಳ್ಳಬಹುದಷ್ಟೇ.
ಮ್ಯಾಕ್ಸ್ ಮುಲ್ಲರ್ ನಂಥವರಿಗೆ ಭಾರತದ ಅರಿವೇ ಇರಲಿಲ್ಲವಾದ್ದರಿಂದ ಅವರು ಶೋಷಿಸುವ ಪಾದ್ರಿಗೆ ಸರಿಸಮನಾಗಿ ಮಂದಿರದ ಪೂಜಾರಿಯನ್ನು, ವೇದ ಹೇಳುವ ಬ್ರಾಹ್ಮಣರನ್ನು ಕಂಡರು. ಭಾರತದಲ್ಲಿ ಬ್ರಾಹ್ಮಣರನ್ನು ಬಡ ಬ್ರಾಹ್ಮಣರೆಂದೇ ಕರೆಯುತ್ತಿದ್ದರೆಂಬುದು ಅವರಿಗೆ ಗೊತ್ತಿರಲಿಕ್ಕಿಲ್ಲ. ಸಾಮರ್ಥ್ಯವಿದ್ದರೂ ಇಷ್ಟಪಟ್ಟು ಬಡತನವನ್ನು ಅಪ್ಪಿಕೊಂಡವ ಬ್ರಾಹ್ಮಣನೆಂದು ಅವರು ಊಹಿಸಲೂ ಸಾಧ್ಯವಿರಲಿಲ್ಲ. ಪ್ರತಿಯೊಬ್ಬ ಪುರೋಹಿತನಲ್ಲೂ ಅವರು ಶೋಷಣೆ ಮಾಡುವ ಚರ್ಚಿನ ಪಾದ್ರಿಗಳನ್ನೇ ಕಂಡು ಭಾರತದ ಸಾಂಸ್ಕೃತಿಕ ಹಂದರವನ್ನೇ ಅಂದಗೆಡಿಸಿಬಿಟ್ಟರು.
ಇರಲಿ, ಮ್ಯಾಕ್ಸ್ ಮುಲ್ಲರ್ ಇವೆಲ್ಲ ಸಮಸ್ಯೆಗಳ ನಡುವೆಯೂ ಅನುವಾದ ಕಾರ್ಯ ಕೈಗೆತ್ತುಕೊಂಡ. ಕೆಲವು ದಿನಗಳಲ್ಲಿಯೇ ಈ ಕೆಲಸ ಸುಲಭವಲ್ಲವೆಂದು ಗ್ರಹಿಸಿದ. ಆದರೆ ಆ ವೇಳೆಗಾಗಲೇ ಯೂರೋಪಿನ ಎಲ್ಲ ದೇಶಗಳ ರಾಜಧಾನಿಯಲ್ಲಿಯೂ ಅವನ ಚರ್ಚೆ ಶುರುವಾಗಿಬಿಟ್ಟಿತ್ತು.ಅವನಿಗೆ ಸನ್ಮಾನಗಳೂ ನಡೆದುಬಿಟ್ಟಿದ್ದವು. 1851 ರಲ್ಲಿ ಮ್ಯಾಕ್ಸ್ ಮುಲ್ಲರ್ ಮೆಕಾಲೆಯನ್ನು ಭೇಟಿ ಮಾಡಿದ. ಆಗ ಅವನಿಗೆ 31 ವರ್ಷ ವಯಸ್ಸು. ತನ್ನ ಸಂಸ್ಕೃತದ ಮೇಲಿನ ಅಭಿಮಾನವನ್ನು ಮೆಕಾಲೆಯೆದುರು ತೋಡಿಕೊಂಡ. ಮ್ಯಾಕ್ಸ್ ಮುಲ್ಲರ್ ಗಾಬರಿಯಾಗಿಬಿಟ್ಟ, ರಕ್ತದ ಕೊನೆಯ ಹನಿಯವರೆಗೆ ಭಾರತ ದ್ವೇಷಿಯಾಗಿದ್ದ ಮೆಕಾಲೆ ಮ್ಯಾಕ್ಸ್ ಮುಲ್ಲರ್ ನನ್ನು ತೊಳೆದು ಬಿಟ್ಟ. ಪೂರ್ವದ ಬಗೆಗಿನ ತನ್ನ ಅಸಡ್ಡೆಯನ್ನು ,ಹಿಂದೂ ಧರ್ಮದ ಕುರಿತು ತನ್ನ ಆಕ್ರೋಶವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟ. ಭಾರತೀಯರಿಗೆ ಕಲಿಸಬೇಕಾದ್ದು ಸಂಸ್ಕೃತವಲ್ಲ, ಇಂಗ್ಲೀಷು ಎಂಬುದನ್ನು ಮೆಕಾಲೆ ತಲೆಗೆ ಸರಿಯಾಗಿ ಹೊಕ್ಕಿಸಿದ. ಈ ಭೇಟಿಯ ನಂತರ ಮ್ಯಾಕ್ಸ್ ಮುಲ್ಲರ್ ಗೆ ಸ್ಪಷ್ಟವಾಗಿದ್ದು,” ಆಂತರ್ಯದಲ್ಲಿ ಕ್ರೈಸ್ತ ಮಿಶನರಿಯಾಗಿ, ಹೊರಗೆ ಸರ್ವ ಧರ್ಮ ಸಮಭಾವದಲ್ಲಿದ್ದು ಈ ಅನುವಾದ ಕಾರ್ಯ ಮಾಡಬೇಕು” ಎಂಬುದು.
ಈ ವೇಳೆಗೆ ಆತ ತಲೆಕೆಟ್ಟು ತನ್ನ ಮಾರ್ಗದರ್ಶಕ ಬನ್ಸೆನ್ ಗೆ ಪತ್ರ ಬರೆದ, “ಅದಾಗಲೇ ವೇದ ಕಠಿಣ ಆವರಣದೊಳಗಿದೆ” ಎಂದು ಕಷ್ಟ ಹೇಳಿಕೊಂಡ. ಮಿಶನರಿ ದೃಷ್ಟಿಕೋನದ ನೆರಳಿನಲ್ಲಿ ಜ್ಞಾನ ಮತ್ತು ವೇದದ ಬೆಳಕನ್ನು ನೀಡುವುದರಿಂದ ಭಾರತದ ಸದ್ಯದ ಧರ್ಮಶಾಸ್ತ್ರ ಹೇಗೆ ಬುಡಮೇಲಾಗುವುದೆಂದು ,”ವಿಲ್ಸನ್ ನಂತವರು ಬರೆದರೆ ಒಳಿತು” ಎಂದೂ ಕೋರಿಕೊಂಡ. ತನ್ನ ಅನುವಾದ ಸಾಗಬೇಕಾದ ದಾರಿ ಎಂಥದ್ದೆಂಬುದಕ್ಕೆ ಆತನಿಗೆ ಮಾರ್ಗದರ್ಶನ ಬೇಕಿತ್ತು. ಎಲ್ಲಕ್ಕಿಂತ ಹೆಚ್ಚು ಮುಂದೊಮ್ಮೆ ಯಾರಾದರೂ ಪ್ರಶ್ನೆ ಎತ್ತಿದರೆ ಇದನ್ನು ಮುಂದಿಡುವ ಉದ್ದೇಶವೂ ಇದ್ದಿರಬಹುದು.
ಮೆಕಾಲೆಯ ಭೇಟಿಯ ನಂತರ ಮ್ಯಾಕ್ಸ್ ಮುಲ್ಲರ್ ತನ್ನ ಕೆಲಸದಲ್ಲಿ ತೀವ್ರಗತಿಯಲ್ಲಿ ತೊಡಗಿಕೊಂಡ. ತನ್ನ ನೈಜ ಕಾಳಜಿ, ಪಾಂಡಿತ್ಯಕ್ಕೆ ಇಲ್ಲಿ ಬೆಲೆಯಿಲ್ಲವೆಂಬುದು ಅವನಿಗೆ ಅರಿವಾಯ್ತು. ಕ್ರಿಸ್ತೀಕರಣಕ್ಕೆ ಬೇಕಾದ ಹೆದ್ದಾರಿಯನ್ನು ನಿರ್ಮಿಸುವಲ್ಲಿ ಪೂರ್ಣವಾಗಿ ತೊಡಗಿಕೊಂಡ ಮ್ಯಾಕ್ಸ್ ಮುಲ್ಲರ್ ಕೊನೆಗೊಮ್ಮೆ ಆಕ್ರೋಶಗೊಂಡು ತನ್ನ ಹೆಂಡತಿಗೆ,” ಋಗ್ವೇದ ಅವರ ಧರ್ಮದ ಬುಡವೆನ್ನುವುದಾದರೆ ಅವರಿಗೆ ಬುಡವನ್ನು ತೋರುವುದೇ, ಕಳೆದ 3 ಸಾವಿರ ವರ್ಷಗಳಿಂದ ಅದರಿಂದಾದುದನ್ನು ಬುಡಮೇಲುಗೊಳಿಸುವ ಶ್ರೇಷ್ಟ ಮಾರ್ಗ” ಎಂದು ಪತ್ರ ಬರೆದನಲ್ಲದೆ, ಭಾರತದ ಪ್ರಾಚೀನ ಧರ್ಮವನ್ನು ನಾಶಮಾಡಿಯಾಗಿದೆ, ಕ್ರಿಸ್ತ ಧರ್ಮ ಆ ಜಾಗವನ್ನು ಆಕ್ರಮಿಸಿಕೊಳ್ಳಲಿಲ್ಲವೆಂದರೆ ಅದು ಯಾರ ತಪ್ಪು ?” ಎಂದು ಹತಾಶನಾಗಿ ಕೇಳಿದ.
ಹೌದು, ಹಿಂದೂ ಧರ್ಮ ಬೇರೆಲ್ಲಾ ಮತಗಳಂತಾಗಿದ್ದರೆ ಇವರ ಪ್ರಯತ್ನಗಳಿಗೆ ಅದೆಂದೋ ತರಗೆಲೆಯಂತೆ ಉದುರಿ ಹೋಗಬೇಕಿತ್ತು. ಆದರೆ ಅದು ’ಹಿಂದೂ ಧರ್ಮ’ ಅಷ್ಟೇ.!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s