ಋಗ್ವೇದ ಅನುವಾದದ ಹೊಣೆ ಈತನ ಹೆಗಲೇರಿದ್ದೇಕೆ?

ಸಾವಿರ-ಸಾವಿರ ವರ್ಷಗಳ ಭಾರತೀಯರ ಶ್ರದ್ಧೆಯನ್ನು ಅಳಿಸಲು ಮೆಕಾಲೆಗಾಗಲೀ, ಆತನ ಇಂಗ್ಲೀಷಿಗಾಗಲೀ ಸಾಧ್ಯವಾಗಲಿಲ್ಲ. ಆತ ಮೈ ಪರಚಿಕೊಂಡ. ೧೮೪೩ ರಲ್ಲಿ ಭಾರತದ – ಹಿಂದುತ್ವದ ಕುರಿತಂತೆ ಆತ ಹೇಳಿರುವ ಮಾತುಗಳೇ ಇದಕ್ಕೆ ಸಾಕ್ಷಿ.

ಮತ್ತೆ ಮೆಕಾಲೆಗೆ ಬನ್ನಿ, ಆತ ತನ್ನೊಳಗಿನ ಮಿಶನರಿ ಮತಿಯಿಂದಾಗಿ ಅಧ್ಯಯನ – ಚಿಂತನೆಗಳೇ ಇಲ್ಲದೆ ಭಾರತವನ್ನೂ, ಇಲ್ಲಿನ ಸಾಹಿತ್ಯವನ್ನು ತುಚ್ಛವಾಗಿ ಕಂಡ. ಸಂಸ್ಕೃತ ಭಾಷೆಯಲ್ಲಿ ದಾಖಲಾಗಿರುವ ಐತಿಹಾಸಿಕ ಅಂಶಗಳು ಇಂಗ್ಲೇಂಡಿನ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಿಗಿಂತ ಕಡೆಯಾಗಿದೆ ಎಂತಲೂ ತನ್ನ ತಜ್ಞ ವರದಿಯನ್ನು ಕೊಟ್ಟ. ಹೀಗಾಗಿ ಭಾರತೀಯರ ಉದ್ಧಾರಕ್ಕಿರುವ ಏಕೈಕ ಮಾರ್ಗ ಇಂಗ್ಲೀಷ್ ಭಾಷೆಯನ್ನು ಕಲಿಸುವುದು ಮಾತ್ರ ಎನ್ನುವುದನ್ನು ಅವನು ಒಪ್ಪಿಸ ಹೊರಟಿದ್ದ. ’ಗ್ರೀಕ್ ಮತ್ತು ಲ್ಯಾಟೀನ್ ಭಾಷೆಗಳು ಇಂಗ್ಲೆಂಡಿನ ಮೇಲೆ ಬೀರಿದಂತೆ ಇಂಗ್ಲೀಷ್ ಭಾರತೀಯರನ್ನು ಬದಲಿಸಲಿದೆ ಎಂಬುದನ್ನು ಸ್ವತಃ ನಂಬಿದ್ದ. ಪಶ್ಚಿಮ ಯೂರೋಪಿನ ಭಾಷೆಯಿಂದ ರಷ್ಯಾ ನಾಗರಿಕವಾದಂತೆ ಹಿಂದೂ ಕೂಡ ನಾಗರಿಕವಾಗುತ್ತಾನೆಂದು ತನ್ನ ಜೊತೆಗಾರರಿಗೆ ಹೇಳಿದ್ದ.

ಮೆಕಾಲೆಯ ಉದ್ದೇಶ ಸ್ಪಷ್ಟವಾಗಿತ್ತು. ಸಂಸ್ಕೃತವನ್ನು ನಾಶಗೊಳಿಸುವ ಮೂಲಕ ಹಿಂದುಗಳನ್ನು ಮತ್ತು ಅರಬ್ಬಿಯರನ್ನು ನಾಶಗೊಳಿಸಿ ಮುಸಲ್ಮಾನರನ್ನು ಅತಂತ್ರಗೊಳಿಸಬೇಕಿತ್ತು. ಹೀಗೆ ಅತಂತ್ರಗೊಳ್ಳುವವರಿಗೆ ಇಂಗ್ಲೀಷು ಕಲಿಸಿ ತಮ್ಮ ಸಾಹಿತ್ಯವನ್ನು ಓದಿಸಬೇಕೆಂಬುದು ಅವನ ಯೋಚನೆಯಾಗಿತ್ತು. ಅದಕ್ಕೆ ಅಡ್ಡಲಾಗಿದ್ದು ಹಿಂದು ಧರ್ಮದ ಗುರುಕುಲಗಳು ಮತ್ತು ಮುಸಲ್ಮಾನರ ಮದರಸಗಳು. ಆಗೆಲ್ಲಾ ಗುರುಕುಲಗಳಂತೂ ಶಿಕ್ಷಣ ಕೊಡುವ ಏಕೈಕ ಪದ್ದತಿಯಾಗಿತ್ತು. ನೆನಪಿರಲಿ, ಈ ಗುರುಕುಲಗಳ ಮೂಲಕ ಜಾತಿ-ಮತ ಭೇದವಿಲ್ಲದೇ ಎಲ್ಲರಿಗೂ ಶಿಕ್ಷಣ ನೀಡಲಾಗುತ್ತಿತ್ತು. ಕಲಿಯುವವರು, ಕಲಿಸುವವರಲ್ಲಿ ಬ್ರಾಹ್ಮಣರೇ ಹೆಚ್ಚಿದ್ದರು ಎಂಬುದು ಮೆಕಾಲೆ ಸಂತಾನಗಳು ಮಾಡಿದ ಅಪಪ್ರಚಾರವಷ್ಟೇ. ಬಳ್ಳಾರಿಯ ಶಿಕ್ಷಣದ ವ್ಯವಸ್ಥೆಯ ಕುರಿತಂತೆ ದಾಖಲೆ ಬದ್ಧವಾಗಿ ಗಾಂಧೀವಾದಿ ಧರ್ಮಪಾಲರ ಸಾಹಿತ್ಯ ಈ ನಿಟ್ಟಿನಲ್ಲಿ ಬಲುಯೋಗ್ಯ ಅಧ್ಯಯನ. ಅದನ್ನು ಮತ್ತೊಮ್ಮೆ ಚರ್ಚಿಸೋಣ, ಸದ್ಯಕ್ಕೆ ಮೆಕಾಲೆ ಮನಸ್ಥಿತಿಗೆ ಹೊರಳೋಣ.
ಗುರುಕುಲಗಳಿಗೆ ಜನ ಸಹಾಯಧನ ಕೊಡುತ್ತಾರಲ್ಲದೇ ಅಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ದೊರೆಯುತ್ತದೆ. ಇವುಗಳನ್ನು ತಡೆದರೆ ಗುರುಕುಲಗಳಿಗೆ ಆರ್ಥಿಕ ಆದಾಯವಿಲ್ಲವಾಗಿ ಅವು ಮುಚ್ಚಿ ಹೋಗುತ್ತವೆ ಎಂಬುದು ಆತನ ಅಭಿಮತವಾಗಿತ್ತು. ಕ್ರಿಶ್ಚಿಯನ್ನರು ಯಾವುದನ್ನೂ ನಾಶಮಾಡಲಿಲ್ಲವೆಂದು ತೋರ್ಪಡಿಸಲು ದೆಹಲಿಯಲ್ಲೊಂದು ಮದರಸ, ಕಾಶಿಯಲ್ಲಿ ಗುರುಕುಲ ಉಳಿಸಿಕೊಂಡರೆ ಸಾಕೆಂದು ಆತ ನಿರ್ದಾಕ್ಷಿಣ್ಯವಾಗಿ ಹೇಳಿದ.
ಇವೆಲ್ಲವೂ ನೆರವೇರಬೇಕೆಂದರೆ ಇಂಗ್ಲೀಷ್ ಶಿಕ್ಷಣ ಕಡ್ಡಾಯವಾಗಬೇಕೆಂಬುದು ಅವನ ಅಪೇಕ್ಷೆಯಾಗಿತ್ತು. ಅವನ ಈ ಅಪೇಕ್ಷೆಯನ್ನು ವಿರೋದಿಸುವವರು ಅನೇಕರಿದ್ದರು. ಅವರೆಲ್ಲರನ್ನೂ ಕಣ್ಮುಂದಿರಿಸಿಕೊಂಡು ಇಂಗ್ಲೀಷನ್ನು ಭಾರತೀಯ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸುವ ಕಾನೂನನ್ನು ಜಾರಿಗೆ ತರಲು ಸಹಮತಿ ನೀಡಬೇಕು, ಇಲ್ಲವೆಂದರೆ ತಾನು ರಾಜಿನಾಮೆ ಕೊಡುತ್ತೇನೆಂದು ಬೆದರಿಸಿಯೂ ಬಿಟ್ಟ! ’ಪ್ರಸ್ತುತ ವ್ಯವಸ್ಥೆ ಸತ್ಯದ ಬೆಳವಣಿಗೆಯನ್ನು ವೇಗ ಮಾಡುವುದಿಲ್ಲ ಬದಲಿಗೆ ಸಹಜವಾಗಿಯೇ ಸಾಯಲಿರುವ ತಪ್ಪುಗಳ ಕಂತೆಯನ್ನು ಇನ್ನೂ ನಿಧಾನ ಮಾಡುವುದಷ್ಟೇ’ ಎಂದಿದ್ದ!.
ಹಿಂದು ಧರ್ಮ ತನ್ನೊಳಗಿನ ತಪ್ಪುಗಳಿಂದ ತಾನೇ ಕುಸಿಯಲಿದೆ ಎಂದು ಎಲ್ಲರೆದುರು ಹೇಳಿಕೊಂಡು ತಿರುಗಾಡುತ್ತಿದ್ದ ಮೆಕಾಲೆ, ಕ್ರಿಸ್ತೀಕರಣವೊಂದೇ ಪರಿಹಾರ ಎಂದು ಸೇರಿಸುವುದನ್ನು ಮರೆಯುತ್ತಿರಲಿಲ್ಲ. ವರ್ಷಕ್ಕೆ ೫ ಸಾವಿರ ಪೌಂಡುಗಳನ್ನು ಉಳಿಸುವ ಖುಷಿಯಿಂದ ಬಂದವ ರಾಜೀನಾಮೆ ಕೊಡುತ್ತೇನೆಂದದ್ದು ಸ್ವತಂತ್ರ ಭಾರತದಲ್ಲಿ ಪ್ರಧಾನಿ ನೆಹರೂ ರಾಜೀನಾಮೆಯ ಬೆದರಿಕೆ ಆಗಾಗ್ಗ ಒಡ್ಡುತ್ತಿದ್ದರಲ್ಲ, ಅಷ್ಟೇ ದೊಡ್ಡ ನಾಟಕ!
ಕಂಪನಿ ಈ ಬೆದರಿಕೆಗೆ ಮಣಿಯಿತು. ಇಂಗ್ಲೀಷ್ ಶಿಕ್ಷಣದ ಮೆಕಾಲೆಯ ಆಸೆಯೂ ಈಡೇರಿತು. ಮರು ವರ್ಷವೇ ಆತ ತನ್ನ ತಂದೆಗೆ ಬರೆದ ಪತ್ರದಲ್ಲಿ ’ನಮ್ಮ ಆಂಗ್ಲ ಶಾಲೆಗಳು ಅಚ್ಚರಿಯ ಬೆಳವಣಿಗೆ ಕಾಣುತ್ತಿವೆ. ಹಿಂದುಗಳ ಮೇಲೆ ಇದರ ಪ್ರಭಾವ ಜೋರಾಗಿದೆ. ಶಿಕ್ಷಣದ ಕುರಿತ ನನ್ನ ಯೋಜನೆಗಳನ್ನು ಸರಿಯಾಗಿ ಜಾರಿಗೆ ತಂದರೆ ಇಲ್ಲಿಂದ ಮೂವತ್ತು ವರ್ಷಗಳ ನಂತರ ಬಂಗಾಳದ ಮೇಲ್ವರ್ಗದ ಜನರಲ್ಲಿ ಒಬ್ಬನೇ ಒಬ್ಬ ಮೂರ್ತಿಪೂಜಕನಿರಲಾರ ಎಂಬುದು ನನ್ನ ನಂಬಿಕೆ’ ಎಂದು ಕೊಚ್ಚಿಕೊಂಡಿದ್ದ.
ಜನ ಇಂಗ್ಲೀಷ್ ಕಲಿಯಲು ಆಸಕ್ತಿ ತೋರಿದ್ದು ನಿಜ, ಆದರೆ ಮೆಕಾಲೆ ಅಂದುಕೊಂಡಷ್ಟು ತೀವ್ರಗತಿಯಲ್ಲಿ ಮತಾಂತರದ ಪ್ರಕ್ರಿಯೆಯೇನೂ ನಡೆಯಲಿಲ್ಲ. ನಾಲ್ಕಾರು ನಿಮಿಷಗಳ ಇತಿಹಾಸ ನಿರ್ಮಾಣಗೊಳ್ಳಲು ನೂರಾರು ವರ್ಷದ ಬದುಕು ಬೇಕಂತೆ. ಹಾಗೆಯೇ ಪರಂಪರೆಯ ನಿರ್ಮಾಣಕ್ಕೆ ಇಂತಹ ನೂರಾರು ವರ್ಷಗಳ ಇತಿಹಾಸ ಕಳೆಯಬೇಕಂತೆ! ಸಾವಿರ-ಸಾವಿರ ವರ್ಷಗಳ ಭಾರತೀಯರ ಶ್ರದ್ಧೆಯನ್ನು ಅಳಿಸಲು ಮೆಕಾಲೆಗಾಗಲೀ, ಆತನ ಇಂಗ್ಲೀಷಿಗಾಗಲೀ ಸಾಧ್ಯವಾಗಲಿಲ್ಲ. ಆತ ಮೈ ಪರಚಿಕೊಂಡ. ೧೮೪೩ ರಲ್ಲಿ ಭಾರತದ – ಹಿಂದುತ್ವದ ಕುರಿತಂತೆ ಆತ ಹೇಳಿರುವ ಮಾತುಗಳೇ ಇದಕ್ಕೆ ಸಾಕ್ಷಿ. ಭಾರತೀಯರು ವೇದಗಳಲ್ಲಿ ಪೂರಾ ನಂಬಿಕೆ ಇಟ್ಟಿದ್ದರು. ಅದನ್ನು ಬಿಟ್ಟು ಒಂದಿಂಚು ಸರಿಯಲೂ ಅವರು ಸಿದ್ಧರಿರಲಿಲ್ಲ.
ವೇದಗಳನ್ನೇ ಪಕ್ಕಕ್ಕೆ ಸರಿಸಿಬಿಟ್ಟರೆ? ಈ ಯೋಜನೆ ಮೆಕಾಲೆಯ ತಲೆ ಹೊಕ್ಕಿತು. ತಮ್ಮ ದೃಷ್ಠಿಕೋನಕ್ಕೆ ಪೂರಕವಾಗಿ ವೇದಗಳನ್ನು ಅನುವಾದಿಸಿ ಬುದ್ದಿವಂತ, ಇಂಗ್ಲೀಷ್ ಶಿಕ್ಷಿತ ತರುಣರ ಮೂಲಕ ಅದನ್ನು ಹಿಂದೂ ಸಮಾಜಕ್ಕೆ ಕೊಡಬೇಕೆಂಬ ಆಲೋಚನೆ ಮೆಕಾಲೆಯನ್ನು ಆವರಿಸಿತು. ಆ ವೇಳೆಗೆ ಚರ್ಚೂ ವೇದಗಳನ್ನು ಎದುರಿಸುವುದರ ರೂಪುರೇಷೆ ತಯಾರಿಸುತ್ತಿತ್ತು.
ಇಂತಹ ಒಬ್ಬ ವ್ಯಕ್ತಿಯನ್ನು ಹುಡುಕುವುದು ಸುಲಭದ ಕೆಲಸವಾಗಿರಲಿಲ್ಲ. ಆತ ಬರಿಯ ಅನುವಾದಕನಾಗಿದ್ದರೆ ಸಾಲದು, ತನ್ನ ಅನುವಾದವನ್ನು ಭಾರತದ ಕ್ರಿಸ್ತೀಕರಣಕ್ಕೆ ಪೂರಕವಾಗುವಂತೆ ಮಾಡಬೇಕಿತ್ತು. ಈ ಹಿನ್ನೆಲೆ ಅರಿತವರಾರೂ ಈ ಕಾರ್ಯ ಕೈಗೊಳ್ಳುವುದು ಹೆಚ್ಚೂಕಡಿಮೆ ಅಸಂಭವವೇ ಆಗಿತ್ತು. ಹಾಗೆ ನೋಡಿದರೆ ಅದಾಗಲೇ ಜರ್ಮನಿ, ಫ಼್ರಾನ್ಸ್ ನ ಕೆಲವರು ಋಗ್ವೇದದ ಅನುವಾದಕ್ಕೆ ತೊಡಗಿಯೂ ಇದ್ದರು. ಅವರು ಯಾರೂ ಚರ್ಚಿನ ಉಪಯೋಗಕ್ಕೆ ಬರುವಂತಿರಲಿಲ್ಲ.
ಹೀಗಾಗಿ ಹುಡುಕಾಟದ ಮೊದಲ ಹೆಜ್ಜೆ ಆಕ್ಸ್ಫ಼ರ್ಡ್ ವಿಶ್ವವಿದ್ಯಾನಿಲಯದ ಸಂಸ್ಕೃತಕ್ಕಾಗಿ ಮೀಸಲಾದ ಬೋಡೆನ್ ಪೀಠದ ಬಳಿ ಬಂದು ನಿಂತಿತು. ಈ ಸಂಸ್ಕೃತ ಪೀಠದ ಹಿನ್ನೆಲೆ ಬಲು ವಿಶಿಷ್ಟವಾದುದು. ಈಸ್ಟ್ ಇಂಡಿಯಾ ಕಂಪನಿಯ ಮುಂಬೈ ಸೇನೆಯ ಸೇನಾನಾಯಕನಾಗಿದ್ದ ಲೆಪ್ಟಿನೆಂಟ್ ಕರ್ನಲ್ ಜೋಸೆಫ್ ಬೋಡೆನ್ ತೀರ ನಿರ್ಮಾಣಕ್ಕೆ ಕಾರಣ ಕರ್ತ. ಆತ ನಿವೃತ್ತನಾಗಿ ಭಾರತದಿಂದ ಮರಳಿದ ಮೇಲೆ ತನ್ನ ಜಮೀನೊಂದನ್ನು ಈ ಪೀಠ ನಿರ್ಮಾಣಕ್ಕಾಗಿ ಉಯಿಲು ಬರೆದುಕೊಟ್ಟ. ಹೀಗಾಗಿ ಈ ಪೀಠಕ್ಕೆ ಬೋಡನ್ ಪೀಠವೆಂದೇ ನಾಮಕರಣವಾಯ್ತು. ಬೋಡೆನ್ ಉಯಿಲು ಪತ್ರದಲ್ಲಿ ನಮ್ಮವರು ಭಾರತೀಯರನ್ನು ಕ್ರಿಸ್ತೀಕರಣಗೊಳಿಸುವಲ್ಲಿ ಮುನ್ನುಗ್ಗಲು, ಬೈಬಲನ್ನು ಸಂಸ್ಕೃತಕ್ಕೆ ಅನುವಾದಿಸಲು ಅನುಕೂಲವಾಗುವ ಸಲುವಾಗಿ ಈ ದಾನ’ ಎಂದು ಬಲು ಸ್ಪಷ್ಟವಾಗಿ ನಮೂದಿಸಿದ್ದ.
೧೮೩೨ ರಲ್ಲಿ ಹೋರಾಸ್ ಹೇಮನ್ ವಿಲ್ಸನ್ ಈ ಪೀಠದ ಜವಾಬ್ದಾರಿ ಹೊತ್ತ ಮೊದಲ ವ್ಯಕ್ತಿಯಾದ. ಅಲ್ಲಿಂದಲೇ ’ದ ರಿಲಿಜನ್ ಅಂಡ್ ಫಿಲಾಸಫಿಕಲ್ ಸಿಸ್ಟಮ್ ಆಫ಼್ ಹಿಂದೂಸ್’ ಪುಸ್ತಕ ಬರೆದ. ಭಾರತಕ್ಕೆ ಹೊರಟು ನಿಂತ ಮಿಶಿನರಿಗಳಿಗೆ ಇದು ಅಧ್ಯಯನ ಯೋಗ್ಯ ಕೈಪಿಡಿಯಾಗಿತ್ತು.
ಮೆಕಾಲೆ ಮತ್ತು ಚರ್ಚು ಸುಮಾರು ೧೮೪೭ ರ ವೇಳೆಗೆ ವಿಲ್ಸನ್ನನ್ನು ಭೇಟಿ ಮಾಡಿ ತನ್ನ ಪ್ರಸ್ತಾಪ ಮುಂದಿಟ್ಟರು. ಋಗ್ವೇದದ ವಿಸ್ತಾರವನ್ನು ಅರಿತಿದ್ದ ವಿಲ್ಸನ್ ತನ್ನ ವಯಸ್ಸು ಅದಕ್ಕೆ ಪರಿಮಿತಿಸುವುದಿಲ್ಲವೆಂದು ಕೈ ತೊಳೆದುಕೊಂಡ. ಮತ್ಯಾರನ್ನಾದರೂ ಹೆಸರಿಸುವಂತೆ ಚರ್ಚು ದುಂಬಾಲು ಬಿತ್ತು. ಫ್ರಾನ್ಸಿನಲ್ಲಿ ಅದಾಗಲೇ ಜೋರಾಷ್ಟ್ರೀಯನ್ನರ ಪವಿತ್ರ ಗ್ರಂಥ ಜೆಂದ್ ಅವೆಸ್ತಾದ ಮೇಲೆ ವಿಶೇಷ ಅಧ್ಯಯನ ನಡೆಸುತ್ತಿದ್ದ. ಬರ್ನಾಫ್ ಕಡೆಗೆ ಆತ ಬೆರಳು ತೋರಿದ. ಜೆಂದ್ ಅವೆಸ್ತಾಕ್ಕೂ ಭಾರತೀಯ ಸಾಹಿತ್ಯಕ್ಕೂ ಅಪರೂಪದ ನಂಟು ಹೀಗಾಗಿ ಅವೆಸ್ತಾದ ವಿದ್ವಾಂಸನೊಬ್ಬ ಭಾರತೀಯ ಸಾಹಿತ್ಯವನ್ನೂ ಅನುವಾದ ಮಾಡಬಹುದೆಂದು ಸಹಜ ಭಾವನೆ. ಆದರೆ ಬರ್ನಾಫ್ ಕೂಡ ಈ ಕೊಡುಗೆಯನ್ನು ತಿರಸ್ಕರಿಸಿದ. ವಿಲ್ಸನ್ ನಂತೆ ತಾನೂ ವಯಸ್ಸಿನ ಕಾರಣ ಕೊಟ್ಟ ಮತ್ತೊಬ್ಬ ವ್ಯಕ್ತಿಯನ್ನು ಹುಡುಕುವ ಹೊಣೆ ಆತನ ಹೆಗಲಿಗೆ ಬಿತ್ತು. ಸಂಸ್ಕೃತವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಬ್ರೋಕಸ್ ಅದಾಗಲೇ ಸಂಸ್ಕ್ರತ ಪೀಠದ ಜವಾಬ್ದಾರಿ ಹೊತ್ತಿದ್ದರಿಂದ ಬಾಡಿಗೆ ಬರಹಗಾರನಾಗುವುದಕ್ಕೆ ಒಲ್ಲೆಯೆಂದ. ರುಡಾಲ್ ರಾಥ್ ಈ ಕೆಲಸ ಬೇಡವೆಂದ. ಥಿಯೋಡರ್ ಗೋಲ್ಡ್ ಸ್ಟಕರ್ ನಂತೂ ಇದರ ಹಿಂದಿರುವ ಉದ್ದೇಶವನ್ನು ಅರಿತೇ ಈ ಕೆಲಸವನ್ನು ಧಿಕ್ಕರಿಸಿಬಿಟ್ಟ. ಇನ್ನೂ ಅನೇಕ ಸಮರ್ಥರು ಕಣ್ಣೆದುರಿಗಿದ್ದರು. ಒಬ್ಬೊಬ್ಬರೂ ಒಂದೊಂದು ಕಾರಣ ಕೊಟ್ಟು ತಪ್ಪಿಸಿಕೊಂಡರು. ಆಗ ಬರ್ನಾಫನ ಕಣ್ಣಿಗೆ ಬಿದ್ದವನೇ ಮ್ಯಾಕ್ಸ್ ಮುಲ್ಲರ್! ಆತ ಮಿಶನರಿಗಳ ಪಾಲಿಗೆ ದೇವದೂತನಾಗಿ ಬಂದ.
ಹೌದು ದೇವದೂತನೇ! ಚರ್ಚಿಗೆ ಈ ಕೆಲಸಕ್ಕೆ ಇಂಗ್ಲೆಂಡಿನಲ್ಲದವರು ಬೇಕಿತ್ತು. ಇಂಗ್ಲೆಂಡಿನವರು ಈ ಕೆಲಸ ಮಾಡಿದರೆ ಜನ ಅಪಾರ್ಥ ಮಾಡಿಕೊಳ್ಳುತ್ತಾರೆ. ಅದಕ್ಕೆ ಸೂಕ್ತ ಬೆಲೆಯೂ ಸಿಗಲಾರದು. ಹಾಗೆಂದೇ ವಿದೇಶಿಗನಾದ ಆತನನ್ನು ಮಾತನಾಡಿಸಲಾಯ್ತು. ಆರಂಭದಲ್ಲಿ ಮೆಕಾಲೆ ಹತ್ತು ಸಾವಿರ ಪೌಂಡುಗಳ ಒಟ್ಟೂ ಮೊತ್ತವನ್ನು ಕೊಡಿಸುವುದಾಗಿ ಮಾತನಾಡಿದ್ದನಂತೆ. ಮುಲ್ಲರ್ ಆಶ್ಚರ್ಯಚಕಿತನಾಗಿ ಬಿಟ್ಟ. ಹತ್ತು ಸಾವಿರ ಪೌಂಡುಗಳೆಂದರೆ ಅವನಿಗೆ ಜೀವಮಾನದ ಕನಸು. ಆತ ಆ ಕ್ಷಣಕ್ಕೆ ಒಪ್ಪಿಕೊಂಡುಬಿಟ್ಟ. ಮುಲ್ಲರ್ ತನ್ನ ಪಾಂಡಿತ್ಯವನ್ನು ದಾಳವಾಗಿಟ್ಟುಕೊಂಡು ಸಂಪಾದನೆಗಿಳಿದ.
ಮ್ಯಾಕ್ಸ್ ಮುಲ್ಲರ್ ಮೂಲತಃ ಜರ್ಮನಿಗೆ ಸೇರಿದವನು. ತಂದೆ ವಿಲ್ ಹೆಮ್ ಮುಲ್ಲರ್ ಒಬ್ಬ ಕವಿ. ತಾಯಿ ಅಡೆಲೀಡ್ ಮುಲ್ಲರ್ ದೊಡ್ಡ ಪರಿವಾರಕ್ಕೆ ಸೇರಿದವಳು. ಮುಲ್ಲರ್ ಬಾಲ್ಯದ ವಿದ್ಯಾಭ್ಯಾಸ ಮುಗಿಸಿ ಲೇಪಿಗ್ ನಿಂದ ೧೮೪೧ ರಲ್ಲಿ ಪ್ರೌಢ ಶಿಕ್ಷಣ ಮುಗಿಸಿದ. ಅಲ್ಲಿಯವರೆಗೂ ಕವಿತೆ-ಸಂಗೀತಗಳಲ್ಲಿ ಆಸಕ್ತಿ ಹೊಂದಿದ್ದವ, ಒತ್ತಡಕ್ಕೆ ಸಿಲುಕಿ ತನ್ನ ಆಸಕ್ತಿಯನ್ನು ಬದಲಿಸಬೇಕಾಯ್ತು. ಬಲು ಬುದ್ದಿವಂತನಾಗಿದ್ದ ಮುಲ್ಲರ್ ೧೮೪೩ ರಲ್ಲಿ ಡಾಕ್ಟರೇಟ್ ಪದವಿಯೊಂದಿಗೆ ವಿಶ್ವವಿದ್ಯಾಲಯದಿಂದ ಹೊರಬಿದ್ದ. ೧೮೪೪ ರಲ್ಲಿ ಫ್ರೆಡ್ರಿಕ್ ಶಿಲ್ಲಿಂಗ್ ರೊಂದಿಗೆ ಬರ್ಲಿನ್ ನಲ್ಲಿ ಕಲಿತ. ಸಂಸ್ಕ್ರತದೊಂದಿಗೆ ಗರಿಷ್ಠ ಸಂಪರ್ಕ ದೊರೆತದದ್ದು ಇಲ್ಲಿಯೇ, ಆಗಲೇ ’ಹಿತೋಪದೇಶ’ ವನ್ನೂ ಅನುವಾದಿಸಿದ. ೧೮೪೫ರಲ್ಲಿ ಆತ ಪ್ಯಾರಿಸ್ಸಿಗೆ ಹೊರಟ. ಸಹಜವಾಗಿಯೇ ಜರ್ಮನಿಯಲ್ಲಿ ಅವನಿಗೆ ಬೇಕಾದಷ್ಟು ಹಣ ದಕ್ಕುತ್ತಿರಲಿಲ್ಲ. ಪ್ಯಾರಿಸಿನಲ್ಲಿ ಸಂಸ್ಕೃತದ ಚಟುವಟಿಕೆಗಳಿಗೆ ಬೆಲೆ ಇರಬಹುದೆಂದು ಭಾವಿಸಿ ಬರ್ನಾಫ್ ರೆದುರಿಗೆ ನಿಂತ. ಅವನ ಬುದ್ದಿಮತ್ತೆಯನ್ನೂ, ಮಹತ್ವಾಕಾಂಕ್ಷೆಯನ್ನೂ ಗಮನಿಸಿದ ಬರ್ನಾಫರು ಋಗ್ವೇದ ಅನುವಾದದ ಮಹತ್ಕಾರ್ಯವನ್ನು ಮಾಡುವಂತೆ ಕೇಳಿಕೊಂಡರು. ಇಂಗ್ಲೆಂಡಿನ ಮಿಶನರಿಗಳಿಗೆ ಪರಿಚಯಿಸಿದರು. ಮ್ಯಾಕ್ಸ್ ಮುಲ್ಲರ್ ಕುಣಿದಾಡಿಬಿಟ್ಟ. ತನ್ನ ತಾಯಿಗೆ ಸುದೀರ್ಘ ಪತ್ರ ಬರೆದ. ’……….ನಾನು ಯೋಗ್ಯತೆಗಿಂತ ಎಷ್ಟು ಹೆಚ್ಚಿಗೆ ಗಳಿಸಿರುವೆನೆಂದು ಯೋಚಿಸುತ್ತಿದ್ದೇನೆ’ – ಎಂದು ಆರಂಭದಲ್ಲಿ ತಪ್ಪೊಪ್ಪಿಕೊಂಡಿದ್ದ. ಹೌದು. ಅವನದ್ದೇ ದೃಷ್ಟಿಯಿಂದ ನೋಡಿದರೆ ಅವನಿಗೆ ದೊರಕಿದ್ದು ಯೋಗ್ಯತೆಗಿಂತಲೂ ಹೆಚ್ಚಾಗಿತ್ತು. ಅಲ್ಲದೇ ಮತ್ತೇನು? ಅದುವರೆವಿಗೂ ಅವನ ಸಂಸ್ಕೃತ ಅಧ್ಯಯನ ಆರು ವರ್ಷಗಳಿಗಿಂತಲೂ ಹೆಚ್ಚಾಗಿರಲಿಲ್ಲ. ಜೊತೆಗೆ ಜರ್ಮನಿಯವನಾದ್ದರಿಂದ ಅತ್ತ ಇಂಗ್ಲಿಷಿನ ಮೇಲೂ ಹೆಚ್ಚಿನ ಹಿಡಿತವಿರಲಿಲ್ಲ. ಆತ ಪ್ಯಾರಿಸ್ಸಿನಲ್ಲಿರುವಾಗ ಹೋಟೆಲಿನಲ್ಲಿದ್ದ ದ್ವಾರಕಾನಾಥ ಟಾಗೋರರನ್ನು ಆಗಾಗ್ಗ ಬೇಟಿ ಮಾಡಿ ತನ್ನ ಇಂಗ್ಲೀಷನ್ನು ಸುಧಾರಿಸಿಕೊಳ್ಳುತ್ತಿದ್ದ. ನಂತರ ಲಂಡನ್ನಿಗೆ ಬಂದ ಮೇಲೆ ಆತ ತನ್ನ ಇಂಗ್ಲೀಷ್ ಒಡತಿಯ ಬಳಿ ಅರ್ಥವಾಗದ್ದನ್ನು ಕೇಳಿ ತಿಳಿದುಕೊಳ್ಳುವ ಯತ್ನ ಮಾಡುತ್ತಿದ್ದ. ಇವೆಲ್ಲವನ್ನೂ ಆತನೇ ತನ್ನ ಜೀವನ ಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ.
ಅಂದರೆ ಮ್ಯಾಕ್ಸ್ ಮುಲ್ಲರ್ ನಿಗೆ ವೈದಿಕ ಸಂಸ್ಕೃತದ ಜ್ಞಾನವೂ ಪರಿಪೂರ್ಣವಾಗಿರಲಿಲ್ಲ, ಇಂಗ್ಲೀಷೂ ಬರುತ್ತಿರಲಿಲ್ಲ. ಇಂತವನನ್ನು ಋಗ್ವೇದವನ್ನು ಸಂಸ್ಕೃತದಿಂದ ಇಂಗ್ಲೀಷಿಗೆ ಅನುವಾದಿಸುವ ಕೆಲಸಕ್ಕೆ ಇಂಗ್ಲೆಂಡು ಕರೆಸಿಕೊಂಡಿತ್ತು. ಚರ್ಚಿನ ಉದ್ದೇಶ ಸ್ಪಷ್ಟವಾಗಲಿಕ್ಕೆ ಮತ್ತೇನಾದರೂ ಪುರಾವೆಗಳು ಬೇಕೇನು? ಹಾಗಂತ ಮ್ಯಾಕ್ಸ್ ಮುಲ್ಲರ್ ನ ಪಾಂಡಿತ್ಯವನ್ನು, ಗ್ರಹಿಕೆಯ ಸಾಮರ್ಥ್ಯವನ್ನೂ ನಾನು ಒಂದಿನಿತೂ ಅಲ್ಲಗಳೆಯಲಾರೆ. ವೈದ್ಯರು ಜಗತ್ಪ್ರಸಿದ್ಧರೇ ಇರಬಹುದು. ಆದರೆ ರೋಗಿಯನ್ನು ಕೊಲ್ಲಬೇಕೆಂದು ನಿಶ್ಚಯಿಸಿಯೇ ಶಸ್ತ್ರಚಿಕಿತ್ಸೆ ಮಾಡಿದರೆ ಅವರ ಕುರಿತಂತೆ ಆಲೋಚಿಸಲೇ ಬೇಕು ತಾನೆ? ಮ್ಯಾಕ್ಸ್ ಮುಲ್ಲರ್ ಒಂದಷ್ಟು ವರ್ಷಗಳ ಕೆಲಸದ ನಂತರ ಒಂದೆಡೆ ಹೇಳಿಕೊಂಡಿದ್ದ ’ನಾನು ನನ್ನನ್ನು ದತ್ತು ಸ್ವೀಕಾರ ಮಾಡಿದ ರಾಷ್ಟ್ರದ ಮತ್ತು ಅಲ್ಲಿನ ಶ್ರೇಷ್ಠ ಮುತ್ಸದ್ದಿಗಳಲ್ಲಿ ಕೆಲವರು ನನಗೆ ಮಾದಿದ ಉಪಕಾರದ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಿದ್ದೇನೆ. ಆ  ತೃಪ್ತಿ ನನಗಿದೆ’. ಎಂದು ದೀರ್ಘವಾದ ಉಸಿರೆಳೆದುಕೊಂಡಿದ್ದ. ದತ್ತು ಸ್ವೀಕರಿಸಿದ ಇಂಗ್ಲೇಂಡು ಮತ್ತು ಮೆಕಾಲೆಯಂತಹ ಮುತ್ಸದ್ದಿಗಳಿಗೆ ಆತ ಚಿರಋಣಿಯಾಗಿದ್ದ. ಆದರೆ ಆ ಋಣವನ್ನು ಆತ ತೀರಿಸಿದ ಋಣ ಮಾತ್ರ ಜಗತ್ತಿಗೇ ಕಂಟಕವಾಗಿತ್ತು.

One thought on “ಋಗ್ವೇದ ಅನುವಾದದ ಹೊಣೆ ಈತನ ಹೆಗಲೇರಿದ್ದೇಕೆ?

  1. You may need to refine few details about Max Muelle. He was not a true scholar, nor he received any doctorate. Although he claimed to have belonged to a rich family,it was his mother’s side but they didn’t do much to their betterment. Basically he was a kind of waster.
    Please read the book ” Lies with long legs”. Everything is historically,scientifically, logically analysed to bare these underhand dealings which our siculars today helices to be true today

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s