ಶಾಸ್ತ್ರ ರಕ್ಷಣೆಗೆ ಶಸ್ತ್ರ ಧಾರಣೆ!

ಜಾಗತಿಕ ಮಟ್ಟದಲ್ಲಿ ಹೀಗೊಂದು ಅವಧಾರಣೆ ಇದೆ. ಒಳ್ಳೆಯದೇನೇ ಇದ್ದರೂ ಅದಕ್ಕೆ ಪಶ್ಚಿಮವೇ ಕಾರಣ, ಕೆಟ್ಟದ್ದು ಉಳಿದಿರುವುದಕ್ಕೆ ಭಾರತೀಯರು, ವಿಶೇಷತಃ ಹಿಂದೂಗಳು ಕಾರಣ. ಇದನ್ನು ಜಗತ್ತು ಎಷ್ಟು ನಂಬಿದೆಯೋ ಬಿಟ್ಟಿದೆಯೋ ನಾವಂತೂ ಸಂಪೂರ್ಣ ನಂಬಿಬಿಟ್ಟಿದ್ದೇವೆ.
“ನಮಗೆಲ್ಲ ಆತ್ಮವಿಸ್ಮೃತಿಯ ಮಬ್ಬು ಕವಿದುಬಿಟ್ಟಿದೆ” ಹಾಗಂತ ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳಿದ್ದು ಅದಕ್ಕೇ ಇರಬೇಕು. ನಮ್ಮ ಸಂಸ್ಕೃತಿ, ಚಿಂತನೆ, ಆಚಾರ ವಿಚಾರಗಳನ್ನೆಲ್ಲ ಪಶ್ಚಿಮದ ಒರೆಗಲ್ಲಿಗೆ ಹಚ್ಚಿ ನಿಷ್ಪ್ರಯೋಜಕವೆಂದು ಬಿಸಾಡಿಬಿಟ್ಟಿದ್ದೇವೆ. ಶತಶತಮಾನಗಳಿಂದ ಹರಿಯುತ್ತ ಕೋಟ್ಯಂತರ ಜನರನ್ನು ತಣಿಸುತ್ತ ಮುಂದೆ ಸಾಗಿರುವ ಧರ್ಮಪ್ರವಾಹವನ್ನು ತಡೆದು ಮೂಲಕ್ಕೆ ಮರಳಿಸಿಬಿಡಬೇಕೆನ್ನುವ ಪ್ರಯತ್ನ ನಮ್ಮದಾಗಿದೆ. ಆಧುನಿಕ ಕಾಲಮಾನದ ಶುದ್ಧ ದೇಸೀ ಚಿಂತಕ ಧರ್ಮಪಾಲರು ಹೇಳುವಂತೆ “ಭಾರತವನ್ನು ಭಾರತದ ಕಂಗಳಿಂದ ನೋಡಬೇಕು. ಪಶ್ಚಿಮದ ಕನ್ನಡಕ ಧರಿಸಿಕೊಂಡು ನೋಡಿದರೆ ಅತ್ತ ಪಶ್ಚಿಮವೂ ಕಾಣಲಾರದು, ಇತ್ತ ಭಾರತವೂ ದಕ್ಕಲಾರದು”. ದೃಷ್ಟಿ ಬದಲಾಗಬೇಕು. ಆಗ ಸೃಷ್ಟಿಯೂ ಬದಲಾದೀತು. “ಭಾರತೀಯತೆಯ ಮೂಲವಾದ ಧರ್ಮ ಪರಂಪರೆಯನ್ನು ಹಿಂದೆ ತಳ್ಳುವುದಂತೂ ಅಸಾಧ್ಯ. ಹಾಗೆ ತಳ್ಳುವುದರಲ್ಲಿ ಸಫಲವಾಗಿಬಿಟ್ಟರೆ ಭಾರತೀಯತೆಯೂ ಉಳಿಯುವುದಿಲ್ಲ” ಎಂದು ಸ್ವಾಮೀಜಿ ಪದೇಪದೇ ಹೇಳಿದ್ದರ ಹಿನ್ನೆಲೆಯೂ ಅದೇ.
ಇನ್ನೂರು ವರ್ಷಗಳ ಕ್ರಿಶ್ಚಿಯನ್ ಆಳ್ವಿಕೆ, ಅದಕ್ಕೂ ಮುಂಚೆ ಏಳೆಂಟು ಶತಕಗಳ ಕಾಲ ಇಸ್ಲಾಮ್ ಆಕ್ರಮಣಕ್ಕೆ ಸಿಕ್ಕು ಜರ್ಝರಿತವಾದ ನಂತರವೂ ಹಿಂದೂ ಸಮಾಜದ ಈ ವೈಭವಕ್ಕೆ ಕಾರಣವೇನೆಂದು ಹುಡುಕುತ್ತ ಹೊರಟರೆ ಅನೇಕ ಸತ್ವಯುತ ವಿಚಾರಗಳು ಕಣ್ಣೆದುರು ಬರುತ್ತವೆ. ಇಲ್ಲಿನ ರಾಜ್ಯ ವ್ಯವಸ್ಥೆ, ರಾಜ ಮತ್ತು ಪ್ರಜೆಗಳ ನಡುವಿನ ಸಂಬಂಧ, ವರ್ಣ ವ್ಯವಸ್ಥೆ, ಸ್ವರಾಜ್ಯ ಕಲ್ಪನೆ, ಶಿಕ್ಷಣ, ಆಶ್ರಮ ಪದ್ಧತಿ, ಅರ್ಥ ವ್ಯವಸ್ಥೆ, ನ್ಯಾಯಾಂಗ … ಹೀಗೆ ಹೇಳುತ್ತ ಹೋದರೆ ಒಂದೊಂದೂ ಎದೆ ಉಬ್ಬಿಸುವಂಥವೇ. ಹೀಗಾಗಿಯೇ ಒಂದು ಸಾವಿರ ವರ್ಷಗಳ ನಂತರವೂ ಭಾರತದ ಬುಡ ಅಲುಗಾಡಿಸುವಲ್ಲಿ ಜಗತ್ತೇ ಸೋತುಹೋಯ್ತು. ಈ ಮಹಾಸೌಧದ ಒಂದೆರಡು ಇಟ್ಟಿಗೆಯನ್ನೋ ಗೋಡೆಯನ್ನೋ ಉರುಳಿಸುವಲ್ಲಿ ಆಕ್ರಮಣಕಾರರು ಯಶಸ್ವಿಯಾಗಿರಬಹುದು. ಆದರೆ ಇಡಿಯ ಸೌಧ ಮತ್ತೆ ತಲೆಯೆತ್ತಿ ನಿಲ್ಲುವಲ್ಲಿ ಸಫಲವಾಯ್ತು. ಇದಕ್ಕೂ ಭಾರತ ನಂಬಿಕೊಂಡು ಬಂದ ಧರ್ಮದ ಅಂತರ್ನಿಹಿತ ಪ್ರವಾಹವೇ ಕಾರಣವಾಯ್ತು.
ಜಗತ್ತಿಗೆ ಸದಾ ಒಳಿತನ್ನೆ ಹಂಚಲು ಸಿದ್ಧವಿರುತ್ತಿದ್ದ ಈ ನಾಡು ಜಗತ್ತಿನಿಂದ ಒಳಿತನ್ನು ಸ್ವೀಕರಿಸಲೂ ಸದಾ ಮುಂದಿರುತ್ತಿತ್ತು. ಕಾಂಬೋಡಿಯಾಕ್ಕೆ ಮೊದಲ ಬಾರಿ ಹೋದ ನಮ್ಮ ದೇಶದ ದೊರೆ ‘ಕಂಬು’, ಅಲ್ಲಿನ ರಾಣಿಗೆ ಕೊಟ್ಟ ಮೊದಲ ಉಡುಗೊರೆ ಬಟ್ಟೆಯಂತೆ! ಅಲ್ಲಿಯವರೆಗೆ ಲಜ್ಜೆಯ ಪರಿಕಲ್ಪನೆಯೇ ಇಲ್ಲದ ಅಲ್ಲಿನ ಜನರಿಗೆ ಭಾರತ ವಸ್ತ್ರಧಾರಣೆಯನ್ನು ಕಲಿಸಿಕೊಟ್ಟಿತು! ಆ ರಾಜ್ಯವನ್ನು ಆಳಬೇಕೆಂಬ, ಅಲ್ಲಿನ ಸಂಪತ್ತಿನಿಂದ ಭಾರತವನ್ನು ಸಿರಿವಂತಗೊಳಿಸಬೇಕೆಂಬ ಇರಾದೆಯಿಂದ ಹೋದದ್ದಲ್ಲ ಕಂಬು. ಅಲ್ಲಿಯ ಜನರೊಂದಿಗೆ ಬೆರೆತು ಅವರನ್ನು ಸದ್ಗುಣ ಸಂಪನ್ನರಾಗಿಸುವ ‘ಕೃಣ್ವಂತೋ ವಿಶ್ವಮಾರ್ಯಂ’ ಇಕಲ್ಪನೆ ಸಾಕಾರಗೊಳಿಸುವ ಪ್ರಯತ್ನ ಅದಾಗಿತ್ತು.
ಜಗತ್ತಿನ ಯಾವ ಮೂಲೆಗೆ ಹೋದರೂ ಭಾರತೀಯರ ಕುರಿತಂತೆ ಈ ಅಭಿಪ್ರಾಯ ಖಂಡಿತ ಅಂತರ್ನಿಹಿತವಾಗಿದೆ. ಬಹುಶಃ ಇಷ್ಟೇ ಆಗಿದ್ದರೆ ವಿಶೇಷವೆನ್ನಿಸುತ್ತಿರಲಿಲ್ಲ. ‘ಆನೋ ಭದ್ರಾಃ ಕೃತವೋ ಯನ್ತು ವಿಶ್ವತಃ’ ಎಂಬ ಮಾತಿನಲ್ಲಿ ನಂಬಿಕೆಯಿರಿಸಿ ಇತರರಲ್ಲೂ ಒಳಿತು ಅಡಗಿದೆ ಎಂದು ಶ್ರದ್ಧೆಯಿಂದ ಆಚರಿಸಿದ ದೇಶವೂ ಇದೇ. ಹೀಗಾಗಿ ಇತರೆಲ್ಲರಿಗಿಂತ ಭಿನ್ನ ಮತ್ತು ಅಗ್ರಣಿ ಎಂದು ಎದೆ ತಟ್ಟಿಕೊಳ್ಳುವ ಹೆಮ್ಮೆ ಸಹಜವಾಗೇ ನಮಗಿದೆ. Shivaji_and_the_Marathas
ಎಲ್ಲರನ್ನೂ ಪ್ರೀತಿಯಿಂದ ಸ್ವೀಕರಿಸುವ ಮನೋಭಾವ ನಮಗಿದ್ದುದರಿಂದಲೋ ಏನೋ ಜಗತ್ತು ನಮ್ಮತ್ತ ಆಕರ್ಷಿತವಾಯ್ತು. ಜ್ಞಾನ ದಾಹ ತಣಿಸಿಕೊಳ್ಳಲು, ಮೋಕ್ಷಗಾಮಿಯಾಗಲು, ಕೊನೆಗೆ ಸಂಪತ್ತು ಲೂಟಿಗೈಯಲೂ ಜನ ಇತ್ತ ಬಂದರು. ಹಿಂದೂ ಸಮಾಜ ಎರಡೂ ಬಾಹುಗಳನ್ನು ಅಗಲಿಸಿಯೇ ಅವರೆಲ್ಲರನ್ನೂ ಬರಮಾಡಿಕೊಂಡಿತು. ಹೀಗೆ ಬಂದವರು ನಮ್ಮನ್ನೆ ನುಂಗಿ, ಇಲ್ಲಿಯ ಅನೂಚಾನ ಪರಂಪರೆಯನ್ನು ಭಗ್ನಗೊಳಿಸುವರೆಂಬ ಅನುಮಾನ ಬಂದೊಡನೆ ಹಿಂದೂ ಸಮಾಜ ಜಾಗೃತವಾಗುತ್ತಿತ್ತು. ಧರ್ಮದಂಡ ಹಿಡಿದವರು ರಣಕಹಳೆಯೂದಿ ಶಸ್ತ್ರ ದೀಕ್ಷೆ ತೊಡುತ್ತಿದ್ದರು. ಇಷ್ಟಕ್ಕೂ ‘ಶಸ್ತ್ರೇನ ರಕ್ಷಿತೇ ರಾಷ್ಟ್ರೇ ಶಾಸ್ತ್ರ ಚರ್ಚಾ ಪ್ರವರ್ತತೇ’ ಎಂದವರು ನಾವೇ ಅಲ್ಲವೆ?
ನಮಗೆ ಎಲ್ಲವೂ ಮರೆತು ಹೋಗಿದೆ ಅಷ್ಟೇ. ‘ಅಹಿಂಸಾ ಪರಮೋ ಧರ್ಮಃ’ ಎಂಬ ಮಾತನ್ನೆ ಮತ್ತೆ ಮತ್ತೆ ಜಪಿಸುತ್ತ ಕುಳಿತಿದ್ದೇವೆ. ಆದರೆ ‘ಧರ್ಮಹಿಂಸಾ ತಥೈವ ಚ’ (ಧರ್ಮಕ್ಕಾಗಿ ಮಾಡುವ ಹಿಂಸೆಯೂ ಪರಧರ್ಮವೇ) ಎಂದಿರುವುದನ್ನು ಮರೆತೇಬಿಟ್ಟಿದ್ದೇವೆ. ಹಿಂದೂ ಸಮಾಜ ಮೈಮರೆತು ನಿಶ್ಚೇಷ್ಟಿತವಾಗಿ ಬಿದ್ದುಕೊಂಡಿದ್ದಾಗ, ದಾಸ್ಯದ ಮದಿರೆ ಕುಡಿದು ಮತ್ತೇರಿ ತೂರಾಡಿದಾಗೆಲ್ಲ ಧರ್ಮಗುರುಗಳು ನಮ್ಮನ್ನು ತಿವಿದಿದ್ದಾರೆ. ಅವರ ದಂಡ ಖಡ್ಗ – ತ್ರಿಶೂಲಗಳಾಗಿ ಹಿಂದೂ ಧರ್ಮ ರಕ್ಷಣೆಗಾಗಿ, ತನ್ಮೂಲಕ ರಾಷ್ಟ್ರ ರಕ್ಷಣೆಗಾಗಿ ನಿಂತಿದೆ.
ರಾಮ ಪಟ್ಟಾಭಿಷೇಕಕ್ಕೂ ಮುನ್ನ ವಿಶ್ವಾಮಿತ್ರರು ಬಂದು ರಾಮ ಲಕ್ಷ್ಮಣರನ್ನು ಕಾಡಿಗೊಯ್ದರಲ್ಲ, ಕಾರಣವೇನು ಗೊತ್ತೆ? ಸಾಧು ಸಂತರನ್ನು ಪೀಡಿಸುತ್ತಿದ್ದ ರಾಕ್ಷಸರ ಸಂಹಾರ ಮಾಡಿಸುವುದು. ವಿಶ್ವಾಮಿತ್ರರ ತಪಶ್ಶಕ್ತಿಯ ಪ್ರಭಾವ ಅದೆಷ್ಟಿತ್ತೆಂದರೆ, ಮನಸ್ಸು ಮಾಡಿದ್ದರೆ ಸಂಹಾರದ ಜವಾಬ್ದಾರಿ ಅವರೇ ಹೊರಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಮುಂದಿನ ಮಹಾಯುದ್ಧಕ್ಕೆ ರಾಮನನ್ನು ಅಣಿಗೊಳಿಸಿದರು. ರಾವಣನ ಭಾರದಿಂದ ಭೂಮಿಯನ್ನು ಪಾರು ಮಾಡಲು ಸೂಕ್ತ ಮಾರ್ಗದರ್ಶನ ಮಾಡಿದರು!
ಕೃಷ್ಣನ ಕಥೆಯೂ ಭಿನ್ನವೇನಲ್ಲ. ಸದಾ ಮುಕ್ತಿಯ ತುಡಿತದಲ್ಲಿರುವ ಭಾರತೀಯರ ಸೂಕ್ತ ಪ್ರತಿನಿಧಿಯಾಗಿ ಕುರುಕ್ಷೇತ್ರದಲ್ಲಿ ಅರ್ಜುನ ನಿಂತಿದ್ದ. ಅವನಿಗೀಗ ಯುದ್ಧ ಬೇಡ. ರಾಜ್ಯದ ಆಕಾಂಕ್ಷೆಯೂ ಇಲ್ಲ. ಸನ್ಯಾಸದ ತೀವ್ರತೆ ಅವನನ್ನು ಆವರಿಸಿಕೊಂಡಿದೆ. ಓಹ್! ಇದಕ್ಕಿಂತಲೂ ಶ್ರೇಷ್ಟ ಅವಸ್ಥೆ ಮತ್ಯಾವುದು ಇದ್ದೀತು ಹೇಳಿ! ಆದರೆ ಗೀತಾಚಾರ್ಯ ಇದನ್ನು ಪುರಸ್ಕರಿಸಲಿಲ್ಲ. ಇದನ್ನಾತ ವಿಷಾದವೆಂದ. ಷಂಡತನವೆಂದು ಜರಿದ. ಕ್ಷತ್ರಿಯ ಧರ್ಮದಿಂದ ಪಲಾಯನವೆಂದು ಆರೋಪಿಸಿದ. ಹದಿನೆಂಟು ಅಧ್ಯಾಯಗಳ ಬಳಿಕ ಗಾಂಡೀವ ಹಿಡಿದೆತ್ತಿ ನಿಲ್ಲುವಂತೆ ಪ್ರೇರೇಪಿಸಿದ. ಅಷ್ಟೇ ಅಲ್ಲ, ‘ನೀ ಕೊಲ್ಲಬೇಕೆಂದಿರುವವರನ್ನೆಲ್ಲ ನಾನು ಅದಾಗಲೇ ಕೊಂದಾಗಿದೆ. ನೀನು ನಿಮಿತ್ತ ಮಾತ್ರ’ ಎಂಬ ಎಚ್ಚರಿಕೆಯನ್ನೂ ಕೊಟ್ಟ!
ಇದು ಭಾರತದ ಶಕ್ತಿಯ ಬಳಕೆಯ ರೀತಿಯಾಗಿತ್ತು. ಶಾಂತಿಕಾಲದಲ್ಲಿ ಶಾಸ್ತ್ರಾಧ್ಯಯನ, ಚರ್ಚೆಗಳು ಭರ್ಜರಿಯಾಗಿರುತ್ತಿದ್ದವು. ಆಪತ್ತು ಬಂದಾಗ ಮಾತ್ರ ಶಸ್ತ್ರ ಹಿಡಿದು ರಾಷ್ಟ್ರ – ಧರ್ಮಗಳ ರಕ್ಷಣೆಗೆ ಕಟಿಬದ್ಧರಾಗುತ್ತಿದ್ದರು.
ಇತಿಹಾಸ ಕಾಲದಲ್ಲಿಯೂ ಹಾಗೆಯೇ ಅಲ್ಲವೆ? ಧನದಾಹಿಗಳಾಗಿ ಪ್ರಜಾಪೀಡಕರಾಗಿದ್ದ ನಂದರ ವಿರುದ್ಧ ಜಟೆ ಬಿಚ್ಚಿ ನಿಂತವನು ಜಟ್ಟಿಯಲ್ಲ, ಒಬ್ಬ ಸಂತ – ಚಾಣಕ್ಯ. ಸಾಮಾನ್ಯನಾಗಿದ್ದ ಚಂದ್ರಗುಪ್ತನನ್ನು ಕರೆತಂದು, ಅವನಿಗೆ ಶಿಕ್ಷಣ ಕೊಟ್ಟು, ದುಷ್ಟರ ಮೂಲೋತ್ಪಾಟನೆಗೆ ಸಜ್ಜುಗೊಳಿಸಿದರಲ್ಲ, ಇದು ಧರ್ಮ ಪುನರ್ಸ್ಥಾಪನೆಯ ರೀತಿ. ರಾಜಧರ್ಮವನ್ನು ಮರಳಿ ಹಳಿಗೆ ತಂದು ನಿಲ್ಲಿಸಿ, ಕಳೆದೇ ಹೋಗುತ್ತಿದ್ದ ಪರಂಪರೆಯ ಕೊಂಡಿಯನ್ನು ಮತ್ತೆ ಬೆಸೆದಿದ್ದು ಸಾಹಸವಲ್ಲವೇನು? ವೇದಾಧ್ಯಾಯಿಯಾಗಿದ್ದುಕೊಂಡು ಶಿಕ್ಷಾರ್ಥಿಗಳಾಗಿ ಬಂದವರಿಗೆ ಪಾಠ ಮಾಡುತ್ತ ಕಾಲಯಾಪನೆ ಮಾಡಬೇಕಿದ್ದ ಚಾಣಕ್ಯ ಇಂತಹ ರಾಜಕಾರಣಕ್ಕೆ ಕೈಹಾಕಿದ್ದೇಕೆ? ಈ ಪ್ರಶ್ನೆಗೆ ಉತ್ತರ ಹಿಂದೂ ಧರ್ಮದ ನಿತಾಂತ ಪ್ರವಾಹದಲ್ಲಡಗಿದೆ. ಸತ್ಯಸ್ಥಾಪನೆಯ ನಿರಂತರ ಗತಿಶೀಲತೆಯಲ್ಲಿ ಇದಕ್ಕೆ ಜವಾಬು ಸಿಗುತ್ತದೆ. 200126
ದಕ್ಷಿಣದಲ್ಲಿ ಮುಸಲ್ಮಾನರ ಅಟ್ಟಹಾಸ ತೀವ್ರಗೊಂಡು ಹಿಂದೂಗಳ ಬದುಕು ದುರ್ಭರಗೊಂಡಿದ್ದಾಗ ಶೃಂಗೇರಿ ಪೀಠಾಧೀಶರಾಗಿದ್ದ ವಿದ್ಯಾರಣ್ಯರು ಮಾಡಿದ ಸಂಕಲ್ಪ ಅದೆಂಥದ್ದು! ಜಪ ತಪ ಸಾಧನೆಗಳ ಮೂಲಕ ಮುಕ್ತಿಗೆ ಹಾತೊರೆಯಬೇಕಿದ್ದ ಸಾಧು, ಶಂಕರ ಸ್ಥಾಪಿತ ಪೀಠಾಧೀಶರು ಹಕ್ಕ ಬುಕ್ಕರನ್ನು ಆಯ್ದು ಸಾಮ್ರಾಜ್ಯ ಸ್ಥಾಪನೆಯ ದೀಕ್ಷೆ ಕೊಟ್ಟಿದ್ದಾದರೂ ಹೇಗೆ!? ಐತಿಹ್ಯಗಳನ್ನೆ ಒಪ್ಪುವುದಾದರೆ ತಮ್ಮ ತಪೋಬಲದ ಮೂಲಕ ಭವ್ಯ ಹಿಂದೂ ರಾಷ್ಟ್ರ ಸ್ಥಾಪನೆಗೆ ಅಗತ್ಯವಿದ್ದ ದ್ರವ್ಯ ಸಂಗ್ರಹಣೆಯನ್ನೂ ಮಾಡಿಕೊಟ್ಟರಲ್ಲ! ಇದೆಲ್ಲ ಹೇಗೆ ಸಾಧ್ಯವಾಯಿತು ಹೇಳಿ. ಇದೆಲ್ಲದರ ಹಿಂದಿದ್ದ ಶಕ್ತಿ, ತುಡಿತ, ಮೂಲಸ್ರೋತ ಯಾವುದು? ಅನುಮಾನವೇ ಇಲ್ಲ… ಧರ್ಮ ರಕ್ಷಣೆ ಮಾತ್ರ! ಈ ನೆಲದ ಗುಣವನ್ನರಿಯದವರು ಇಲ್ಲಿ ನಿಂತು ಇಲ್ಲಿನ ಸತ್ವ ನಾಶಗೈಯಲು ನಮ್ಮ ಸಂತ ಪರಂಪರೆ ಎಂದಿಗೂ ಅವಕಾಶವನ್ನೆ ಕೊಡಲಿಲ್ಲ. ಸನ್ಯಾಸ ಧರ್ಮ ಎಲ್ಲ ಚೌಕಟ್ಟನ್ನು ಮೀರಿದ್ದರೂ ಧರ್ಮ ನಾಶದೊಂದಿಗೆ ಸನ್ಯಾಸವೂ ನಾಶವಾಗಿಬಿಡುವುದೆಂಬ ಅರಿವು ಅವರಿಗೆ ಸ್ಪಷ್ಟವಾಗಿತ್ತು. ಹೀಗಾಗಿ ತಮ್ಮೆಲ್ಲ ಸಾಧನೆಗಳ ನಡುವೆಯೂ ಈ ಕೈಂಕರ್ಯಕ್ಕೆ ಅವರು ಬದ್ಧರಾಗಿದ್ದರು.
ಶಿವಾಜಿಗೆ ಪ್ರೇರಣೆ ಕೊಟ್ಟು ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ಸಮರ್ಥ ರಾಮದಾಸರದೂ ಇದೇ ಕಥೆ. ಊರೂರು ಅಲೆವ ಭೈರಾಗಿ ಆತ. ಯಾರು ರಾಜ್ಯವಾಳಿದರೂ ಆತನ ಜೀವನ್ಮುಕ್ತ ಬದುಕಿಗೆ ಧಕ್ಕೆಯೇನೂ ಬರುತ್ತಿರಲಿಲ್ಲ. ಆದರೂ ಧರ್ಮ ಪ್ರವಾಹದ ವಿದ್ಯುತ್ ಕಾಂತಿಗಳು ಅವರನ್ನು ಸೆಳೆಯದೆ ಬಿಡಲಿಲ್ಲ. ಶಿವಾಜಿ ಮಹಾರಾಜರಿಗೆ ಸಾಮ್ರಾಜ್ಯ ಸ್ಥಾಪನೆಯ ಪ್ರೇರಣೆ ನೀಡಿದ್ದಲ್ಲದೆ, ಅವರೊಳಗೆ ಉಕ್ಕುತ್ತಿದ್ದ ಸನ್ಯಾಸ ಭಾವವನ್ನು ತಡೆದು ನಿಲ್ಲಿಸಿ, ಧರ್ಮಸ್ಥಾಪನೆಯತ್ತ ಗಮನವೀಯುವಂತೆ ತಾಕೀತು ಮಾಡಿದ್ದರು. ಅದೊಮ್ಮೆ ಶಿವಬಾ ತಮ್ಮೆಲ್ಲ ಸಾಮ್ರಾಜ್ಯವನ್ನೂ ಸಮರ್ಥ ರಾಮದಾಸರ ಹೆಸರಿಗೆ ಬರೆದು ಅವರ ಜೋಳಿಗೆಗೆ ಹಾಕಿದ್ದರಂತೆ. ಕೂಡಲೇ ಸಮರ್ಥ ರಾಮದಾಸರು ಆ ಪತ್ರವನ್ನು ಶಿವಾಜಿಯ ಕೈಲಿಟ್ಟು, “ಶಿವಬಾ, ಇನ್ನು ಮುಂದೆ ಈ ಸಾಮ್ರಾಜ್ಯ ನನ್ನದು. ಇದನ್ನು ರಕ್ಷಿಸುವ ಹೊಣೆ ನಿನಗೆ ವಹಿಸುತ್ತಿದ್ದೇನೆ. ಇದನ್ನು ಕಾಪಾಡಿಕೋ. ಪ್ರಜೆಗಳ ಕಣ್ಣಲ್ಲಿ ನೀರು ಬರದಂತೆ ನೋಡಿಕೋ” ಎಂದುಬಿಟ್ಟರು. ಸನ್ಯಾಸ ಬಯಸಿ ರಾಜ್ಯದಾನ ಮಾಡಲುಹೊರಟಿದ್ದ ಶಿವಾಜಿ ಈಗ ಇನ್ನೂ ಹೆಚ್ಚಿನ ಬಂಧನಕ್ಕೆ ಒಳಗಾದರು! ಹೌದು…. ಈಗಿನದು ಧರ್ಮ ಬಂಧನ. ಭರತ ರಾಮನ ಪಾದುಕೆಗಳನ್ನಿಟ್ಟುಕೊಂಡು ರಾಜ್ಯವನ್ನು ಕಾಪಾಡಿದನಲ್ಲ, ಆ ಬಗೆಯ ಹೊಣೆಗಾರಿಕೆ.
ಭಾರತದ ಇತಿಹಾಸದುದ್ದಕ್ಕೂ ಇಂತಹ ಅನೇಕ ತ್ಯಾಗಿಗಳು ಕಾಣಸಿಗುತ್ತಾರೆ. ಅವರ ತ್ಯಾಗಕಥನಗಳೇ ನಮಗೆ ಸ್ಫೂರ್ತಿ. ‘ತ್ಯಾಗೇನೈಕೇನ ಅಮೃತತ್ವ ಮಾನುಷುಃ’ ಎಂಬ ಉಪನಿಷತ್ ವಾಕ್ಯ ಸುಮ್ಮಸುಮ್ಮನೆ ಹೇಳಿದ್ದಲ್ಲ. ಹೀಗೆ ಎಲ್ಲವನ್ನೂ ತ್ಯಾಗ ಮಾಡಿದವರು ಧರ್ಮ ರಕ್ಷಣೆಯ ಧರ್ಮರಕ್ಷಣೆಯ ಸಂದೇಶ ಹೊತ್ತು ತಂದಾಗ ಸಮಾಜ ಅದನ್ನು ಮೌನವಾಗಿ ಅನುಸರಿಸುತ್ತಿತ್ತು.
ಇನ್ನು, ಗುರುಗಳಾದವರೇ ಖಡ್ಗ ಹಿಡಿದು ಧರ್ಮರಕ್ಷಣೆಗೆ ನಿಂತ ಉದಾಹರಣೆಗಳೂ ಈ ನೆಲದಲ್ಲಿ ಧಾರಾಳ. ಖಾಲ್ಸಾ ಪಂಥ ಕಟ್ಟಿ,  ಮಉಸಲರ ವಿರುದ್ಧ ತೊಡೆ ತಟ್ಟಿ ನಿಂತ ಗುರು ಗೋವಿಂದ ಸಿಂಗರು ಇದಕ್ಕೆ ಶ್ರೇಷ್ಠ ಉದಾಹರಣೆ.ವರ ತಂದೆ ಗುರು ತೇಗ ಬಹದ್ದೂರ್ ಸಾಮರ್ಥ್ಯವೂ ಕಡಿಮೆಯದೇನಲ್ಲ. ತಾವೇ ಪ್ರಾಣಾರ್ಪಣೆ ಮಾಡಿ ಸಮಾಜದ ರಕ್ತ ಬೆಚ್ಚಗಾಗಿಸಿದ್ದ ಈ ತ್ಯಾಗಿಗಳ ಸಂತತಿ ಯಾವತ್ತಿಗೂ ಕಡಿಮೆಯಾಗುವಂಥದಲ್ಲ!
ಈ ನಿಟ್ಟಿನಲ್ಲಿ ನಮ್ಮ ಕಾಲದ ಗುರು – ಶಿಷ್ಯರೆಂದರೆ ರಾಮಕೃಷ್ಣ – ವಿವೇಕಾನಂದರೇ! ಎಲ್ಲ ಬಗೆಯ ಸಾಧನೆಗಳನ್ನು ಮಾಡಿ ಸಮನ್ವಯದ ಹರಿಕಾರರಾದ ರಾಮಕೃಷ್ಣರು ಹೊಸ ಯುಗದ ಧರ್ಮ ವಿರೋಧಿಗಳನ್ನು ಮೆಟ್ಟಿ ನಿಲ್ಲಲು ಸಜ್ಜುಗೊಳಿಸಿದ ಶಿಷ್ಯೋತ್ತಮ ಸ್ವಾಮಿ ವಿವೇಕಾನಂದರು. ಈ ಬಾರಿಯ ಹೋರಾಟ ಖಡ್ಗದ್ದೋ ಬಂದೂಕಿನದ್ದೋ ಆಗಿರಲಿಲ್ಲ…ಇದು ಬೌದ್ಧಿಕ ಸಮರವಾಗಿತ್ತು. ಮಲಗಿದ್ದ ಹಿಂದೂ ಸಮಾಜವನ್ನು ಜಾಗೃತಗೊಳಿಸುವುದಲ್ಲದೆ, ಜಾಗತಿಕವಾಗಿ ಹಬ್ಬಿದ್ದ ಕೆಟ್ಟ ಅಭಿಪ್ರಾಯವನ್ನೂ ಹೋಗಲಾಡಿಸಬೇಕಿತ್ತು. ಶತ್ರುಗಳನ್ನು ಚೆನ್ನಾಗಿ ಅರಿತು, ಶತ್ರುಗಳ ನೆಲದಲ್ಲಿ ನಿಂತು ಕಾದಾಡುವ ಸಾಹಸಿ ಬೇಕಿತ್ತು. ಅದಕ್ಕೆಂದೇ ತಯಾರಾದವರು ಸ್ವಾಮಿ ವಿವೇಕಾನಂದರು!
ಕವಿ ಖಾಜಿ ನಸ್ರುಲ್ ಅಹ್ಮದ್ ಹೇಳುವಂತೆ, ‘ಜಾಗಲೆ ಭಾರತ್ ಸ್ಮಶಾನ್ ತೀರೇ….’ – ಭಾರತ ಸ್ಮಶಾನ ತೀರದಲ್ಲಿ ಜಾಗ್ರತವಾಯ್ತು, ಎಚ್ಚರಗೊಂಡಿತು…. ಮೈಕೊಡವಿ ಎದ್ದು ನಿಂತಿತು. ಹಿಂದೂ ಧರ್ಮದ ವೇದಾಂತ ಪ್ರವಾಹ ಮತ್ತೆ ಹೆದ್ದೆರೆಯಾಗಿ ಜಗತ್ತನ್ನು ಆವರಿಸಿತು. ಸೋದರಿ ನಿವೇದಿತಾ ಅಭಿಪ್ರಾಯ ಪಡುವಂತೆ “ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುವುದಕ್ಕೆ ಮುನ್ನವೂ ಹಿಂದೂ ಧರ್ಮ ಇತ್ತು. ಅವರು ಮಾತನಾಡಿ ಮುಗಿಸುವ ವೇಳೆಗೆ ಅದು ಪುನರ್ಸ್ಥಾಪನೆಗೊಂಡಿತ್ತು”.
ಹೌದು. ನಾವು ಮತ್ತೆ ಮೂಲಕ್ಕೇ ಬಂದು ಮುಟ್ಟಿದೆವಲ್ಲ? ಎಂದೆಂದು ಈ ಸಮಾಜ ಕೊನೆಗಾಣುವುದೆಂಬ ಹೆದರಿಕೆ ಹುಟ್ಟಿದೆಯೋ ಆಗೆಲ್ಲ ಧರ್ಮಸ್ಥಾಪನೆಯ ಕಾರ್ಯ ನಾವೆಂದೂ ಎಣಿಸದ ರೀತಿಯಲ್ಲಿ ತೀವ್ರಗತಿಯಲ್ಲಿ ನಡೆದಿದೆ. ಹಾಗೆಂದೇ ಅಸ್ಸೀರಿಯನ್ನರು, ಬ್ಯಾಬಿಲೋನ್, ಮಾಯಾ, ಇನ್ಕಾ, ಅಜ್‌ಟೆಕ್ ಮುಂತಾದ ಸಂಸ್ಕೃತಿಗಳಿಗಿಂತಲೂ ಮುಂಚೆ ಹುಟ್ಟಿದ್ದ ಹಿಂದೂ ಸಂಸ್ಕೃತಿ, ಅಮೆರಿಕಾ, ಆಸ್ಟ್ರೇಲಿಯಾಗಳ ಇತ್ತೀಚಿನ ನಾಗರಿಕತೆಗೂ ಸರಿಸಮನಾಗಿ ಹೆಗಲು ಕೊಟ್ಟು ನಿಂತಿದೆಯೆಂದರೆ…. ಅದು ಸಾಮಾನ್ಯ ಸಂಗತಿಯೇನಲ್ಲ, ಅಲ್ಲವೆ?

6 thoughts on “ಶಾಸ್ತ್ರ ರಕ್ಷಣೆಗೆ ಶಸ್ತ್ರ ಧಾರಣೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s