ಅವರು ಸಂತರ ಮೇಲೆರಗೋದು ಯಾಕೆ ಗೊತ್ತಾ?

 ಸಮಾಜವೂ ಅದೇಕೆ ಸಂತರ ಬದುಕಿನ ಕುರಿತಂತೆ ಅಪದ್ಧದ ಮಾತುಗಳನ್ನಾಡಿದರೆ ಚಪ್ಪರಿಸಿಕೊಂಡು ಕೇಳುತ್ತೆ? ಬರಿ ಕೇಳುವುದಷ್ಟೇ ಅಲ್ಲ, ಅದಕ್ಕೆ ತನ್ನದೂ ಒಂದಷ್ಟನ್ನು ಸೇರಿಸಿ ಇಡಿಯ ಪ್ರಕರಣದ ಗಾಂಭೀರ್ಯವನ್ನೇ ಹಾಳು ಮಾಡಿಬಿಡುತ್ತದೆ.

ಈ ಬಾರಿಯ ಮಹಾಕುಂಭ ಪ್ರಯಾಗದಲ್ಲಾಯ್ತಲ್ಲ, ಅಲ್ಲಿ ದೊಡ್ಡದೊಂದು ಹೋರ್ಡಿಂಗ್ ಇತ್ತು. ‘ಸಂತರನ್ನು ಯಾರಾದರೂ ಸತಾಯಿಸಿದರೆ ನಮಗೆ ಹೇಳಿ’ ಅಂತ ಬರೆದಿತ್ತು. ತರುಣ ಸನ್ಯಾಸಿಗಳ ಗುಂಪೊಂದು ಈ ದೇಶದಲ್ಲಿ ‘ಕೇಸರಿ’ಯ ಮೇಲೆ ಆಗುತ್ತಿರುವ ಆಘಾತಗಳಿಂದ ರೋಸಿಹೋಗಿ ಈ ರೀತಿಯ ಸಂಘಟನೆಯನ್ನೇ ಕಟ್ಟಿಕೊಂಡಿದೆ! ಸನ್ಯಾಸಿಗಳನ್ನು ಢೋಂಗಿ, ಕಳ್ಳ ಅಂತೆಲ್ಲ ಸಂಬೋಽಸೋದು ಇವತ್ತಿನ ಕಾಲದ್ದಲ್ಲ; ಬ್ರಿಟಿಷರ ಕಾಲದಿಂದಲೂ ನಡೆದೇ ಇದೆ. ಸ್ವಾಮಿ ವಿವೇಕಾನಂದರನ್ನೇ ಮನೆಗೆ ತಿಂಡಿಗೆ ಕರೆದಂತೆ ಮಾಡಿ “ನೀನು ಢೋಂಗಿ ಅನ್ನೋದು ನನಗೆ ಗೊತ್ತು; ಸತ್ಯ ಹೇಳಿದರೆ ಬಿಟ್ಟು ಬಿಡುತ್ತೇನೆ” ಅಂದ ಪೊಲೀಸ್ ಅಽಕಾರಿಯ ಕಥೆ ಗೊತ್ತಿರಬೇಕಲ್ಲ. ಆನಂತರ ಸ್ವಾಮೀಜಿ ಅವನ ಕೊರಳಪಟ್ಟಿ ಹಿಡಿದು “ಈ ಕ್ಷಣದಲ್ಲಿಯೇ ಇಲ್ಲವಾಗಿಸಿಬಿಡಬಲ್ಲೆ. ಆದರೆ ಸಂತನಾಗಿರೋದರಿಂದ ಹಾಗೆ ಮಾಡುವಂತಿಲ್ಲ” ಎಂದು ಬಿಟ್ಟು ನಡೆದಾಗ ಆತ ಕಕ್ಕಾಬಿಕ್ಕಿ!

M_Id_415318_Asaram_Bapuಪ್ರಭುತ್ವಕ್ಕೆ ಸವಾಲಾಗುವ, ಆಳುವ ಧಣಿಗಳು ತಪ್ಪು ಹೆಜ್ಜೆ ಇಡುವುದನ್ನು ವಿರೋಧಿಸುವ ಪ್ರತಿಯೊಬ್ಬರನ್ನೂ ಸರ್ಕಾರ ಮಟ್ಟಹಾಕುವ ಯತ್ನ ಮಾಡುತ್ತಲೇ ಇರುತ್ತದೆ. ಇದಕ್ಕೆ ಸಂತರೂ ಹೊರತಲ್ಲ.
ಮೊದಲೆಲ್ಲ ಸಂತರು ಮಾಡುವ ಸತ್ಕಾರ್ಯಗಳಿಂದ ಸಜ್ಜನರ ರಾಜ್ಯ ನಿರ್ಮಾಣವಾಗಿಬಿಡುವುದೆಂದು ಹೆದರಿ ರಾಕ್ಷಸರು ಹೋಮ-ಹವನಗಳನ್ನು ಹಾಳುಗೆಡವುತ್ತಿದ್ದರು. ಈಗ ಮಾಧ್ಯಮಗಳು ಆ ಸ್ಥಾನವನ್ನು ಯಶಸ್ವಿಯಾಗಿ ಕಸಿದುಕೊಂಡಿವೆ ಅಷ್ಟೇ. ರಕ್ಷಣೆಗೆ ಆಳುವ ರಾಜ ಬರುವ ಕಾಲವಿರುವವರೆಗೆ ಋಷಿ-ಮುನಿಗಳು ಕೈಯಲ್ಲಿ ದರ್ಭೆ ಇಟ್ಟುಕೊಳ್ಳುತ್ತಿದ್ದರಷ್ಟೇ. ಕಾಲಕ್ರಮದಲ್ಲಿ ರಾಕ್ಷಸರನ್ನೆದುರಿಸುವ ಸಾಮರ್ಥ್ಯವಿಲ್ಲದ ರಾಜರುಗಳು ಆಳಲು ನಿಂತಾಗ, ನೀತಿಗೆಟ್ಟ ಮತಿಹೀನ ಜನರ ಕೈಗೆ ಆಡಳಿತ ಸೇರಿಹೋದಾಗ ಸ್ವತಃ ಸಂತರೇ ಕೈಗೆ ಶಸವನ್ನೆತ್ತಿಕೊಂಡರು. ಕುಂಭಮೇಳಗಳಲ್ಲಿ ನಡೆಯುವ ಶಾಹಿ ಉತ್ಸವಗಳಲ್ಲಿ ನಾಗಾ ಸಾಧುಗಳು ಬಗೆಬಗೆಯ ಆಯುಧಗಳನ್ನು ಹಿಡಿದು ಯುದ್ಧೋನ್ಮಾದದಲ್ಲಿ ಸಾಗುವಾಗ ಇದು ಖಂಡಿತ ಅರಿವಿಗೆ ಬರುತ್ತದೆ. ಈಗ ಮತ್ತೆ ತಮ್ಮ ರಕ್ಷಣೆಗೆ ಸಂತರು ತಾವೇ ನಿಂತಿದ್ದಾರೆ.
ಇಷ್ಟಕ್ಕೂ ಸಂತರ ಮೇಲೆ ಆಕ್ರಮಣಗಳು ನಡೆಯೋದ್ಯಾಕೆ? ಸಮಾಜವೂ ಅದೇಕೆ ಸಂತರ ಬದುಕಿನ ಕುರಿತಂತೆ ಅಪದ್ಧದ ಮಾತುಗಳನ್ನಾಡಿದರೆ ಚಪ್ಪರಿಸಿಕೊಂಡು ಕೇಳುತ್ತೆ? ಬರಿ ಕೇಳುವುದಷ್ಟೇ ಅಲ್ಲ, ಅದಕ್ಕೆ ತನ್ನದೂ ಒಂದಷ್ಟನ್ನು ಸೇರಿಸಿ ಇಡಿಯ ಪ್ರಕರಣದ ಗಾಂಭೀರ್ಯವನ್ನೇ ಹಾಳು ಮಾಡಿಬಿಡುತ್ತದೆ. ಆ ಸ್ವಾಮೀಜಿಯ ಪರಿಚಯವೇ ಇಲ್ಲದವರೂ ‘ಕಳ್ಳ ಸನ್ಯಾಸಿ’ ಅಂತ ತಾವೇ ಬಿರುದು ಕೊಟ್ಟು ಬಿಡುತ್ತಾರೆ. ಹೀಗೇಕೆ? ಇದು ಒಂದು ಮಾನಸಿಕ ಸಮಸ್ಯೆ, ರೋಗ. ಶ್ರೇಷ್ಠ ಮೌಲ್ಯಗಳಿಗೆ ಹೊಂದಿಕೊಂಡು ತನಗೆ ಬದುಕಲಾಗದಿದ್ದರೆ ಇತರರೂ ಬದುಕುತ್ತಿಲ್ಲವೆಂದು ತಿಳಿದಾಗ ಸಮಾಧಾನವಾಗುತ್ತದೆ. ಯಾರಾದರೊಬ್ಬನನ್ನು ಆ ಮೌಲ್ಯಗಳ ಪ್ರತಿಪಾದಕನೆಂದು ಸಮಾಜ ನಂಬಿ ನಡೆದರೆ, ಇವರಿಗೆ ಕಸಿವಿಸಿ. ಕೊನೆಗೆ ಶತಾಯಗತಾಯ ಅವನನ್ನು ‘ಕಚ್ಚೆ ಹರಕ’, ‘ಸೀಲೋಲ’, ‘ಸ್ಮಗ್ಲರ್’ ಎಂದು ಬಿಂಬಿಸಿ ವಿಕೃತ ಆನಂದ ಪಡೆಯುವ ಚಟ ಅದು. ನೀವು ಯಾವುದೇ ಸಂತರ ಬದುಕು ತೆರೆದು ನೋಡಿ ಅವರಿಗಾಗದವರು ಹೆಣ್ಣೊಂದನ್ನು ಅವರ ಬಳಿ ಕಳುಹಿಸಿ ಹೆಸರು ಹಾಳುಗೆಡವುವ ಪ್ರಯತ್ನ ಮಾಡದೇ ಇರುವುದು ಅಪರೂಪ.
ಬಾಬಾ ರಾಮದೇವ್ ಹಿಂದು ಸಮಾಜವನ್ನು ಸಂಘಟಿಸುವ ಜೊತೆಗೆ, ಬೇರೆಯವರನ್ನೂ ಯೋಗ-ಆಯುರ್ವೇದಗಳ ಮೂಲಕ ಭಾರತೀಯ ಪರಂಪರೆಯತ್ತ ಎಳೆದು ತರುತ್ತಿದ್ದಾಗ, ಮತ್ತೆ ಹಿಂದು ಸಂಸ್ಕೃತಿ ಜಗದ್ವ್ಯಾಪಿಯಾಗಿಬಿಡುತ್ತಲ್ಲ ಅಂತ ಎಡಪಂಥೀಯರು ಬೆದರಿಬಿಟ್ಟಿದ್ದರು. ತಮ್ಮ ಅಸ್ತಿತ್ವ ಕಳೆದುಹೋಗುವ ಆ ಭೀತಿಗೆ ಅವರು ಉತ್ತರಿಸಿದ್ದು ಹೇಗೆ ಗೊತ್ತೇನು? ರಾಮದೇವ್‌ಜಿ ತಮ್ಮ ಆಯುರ್ವೇದೀಯ ಔಷಧಗಳಲ್ಲಿ ಮನುಷ್ಯನ ಮೂಳೆಯ ಪುಡಿ ಮತ್ತು ತಲೆಬುರುಡೆಯನ್ನು ಬಳಸುತ್ತಾರೆಂದು ಅಪಪ್ರಚಾರ ಮಾಡಿದ್ದು. ಮಾಧ್ಯಮಗಳಲ್ಲಿ ಅದಕ್ಕೆ ಭರ್ಜರಿ ಪ್ರಚಾರ ಸಿಕ್ಕಿತು. ಪತಂಜಲಿಯ ವಸ್ತುಗಳ ಮೇಲೆ ಸಂಶೋಧನಾ ವರದಿಗಳು ಪ್ರಕಟಗೊಂಡವು. ಬಾಬಾ ರಾಮದೇವ್ ಬೆದರಲಿಲ್ಲ. ಆರೋಪಗೈದ ಬೃಂದಾ ಕಾರಟ್‌ರನ್ನು ಝಾಡಿಸಿದರು. ವಿಚಾರಣೆಗೆ ಸಿದ್ಧ ಎಂದರು. ಆಗಿನ್ನೂ ಅವರು ಪ್ರಭುತ್ವ ವಿರೋಧಿ ಎನಿಸಿಕೊಂಡಿರಲಿಲ್ಲ. ಕಪ್ಪುಹಣ, ಭ್ರಷ್ಟಾಚಾರದ ಕುರಿತಂತೆ ಮಾತನಾಡಲು ಶುರುಮಾಡಿರಲಿಲ್ಲ. ಹೀಗಾಗಿ ಕಾಂಗ್ರೆಸ್ಸೂ ಅವರನ್ನು ವಿರೋಧಿಸಲಿಲ್ಲ. ಒಟ್ಟಾರೆ ಬಾಬಾಜಿ ಗೆದ್ದು ಬಂದರು. ಆದರೆ ಮಾಧ್ಯಮಗಳು ಮಾತ್ರ ಆ ಆರೋಪ ಸುಳ್ಳೆಂದು ಸಾಬೀತಾದುದನ್ನು ಜನರಿಗೆ ಮುಟ್ಟಿಸಲೇ ಇಲ್ಲ.
ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟ ಕೈಗೆತ್ತಿಕೊಂಡಾಗ ಆರಂಭದಲ್ಲಿ ವ್ಯಾಪಕ ಪ್ರಚಾರ ಕೊಡಲಾಯ್ತು ಸರಿ. ಆದರೆ ಅರ್ಧರಾತ್ರಿಯಲ್ಲಿ ಲಾಠಿಚಾರ್ಜು ನಡೆದಾಗ ಮಾಧ್ಯಮಗಳು ಬಾಬಾಜಿಯ ಜೊತೆಗೆ ನಿಲ್ಲಲೇ ಇಲ್ಲ. ಅದಾಗಲೇ ಪ್ರಭುತ್ವ ವಿರೋಧಿ ರಾಮದೇವ್ ಬಾಬಾ ಕೇಂದ್ರ ಸರ್ಕಾರದ ನಂಬಿಕೆ ಕಳಕೊಂಡಿದ್ದರಿಂದ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಲಾಠಿ ಏಟಿನಿಂದ ತಪ್ಪಿಸಿಕೊಂಡು ಮಾರುವೇಷದಲ್ಲಿ ಪರಾರಿಯಾಗಿ ಜೀವಂತ ಬಂದ ಬಾಬಾ ರಾಮದೇವ್‌ಜಿಯನ್ನು ದೇಶ ಯೋಧನಂತೆ ಕಾಣಬೇಕಿತ್ತು. ಮಾಧ್ಯಮ ಕಳ್ಳನೆಂದು ನಂಬಿಸಿತು. ನಾವೂ ನಂಬಿಬಿಟ್ಟೆವು. ಆಳುವವರಿಗೂ ಅದೇ ಬೇಕಿತ್ತು. ಸುಭಾಷರ ಸಾವನ್ನೇ ಮರೆತವರು ನಾವು, ಲಾಲಬಹದ್ದೂರ ಶಾಸಿಯವರ ಸಾವಿನ ಚರ್ಚೆಯನ್ನೂ ಬಿಟ್ಟವರು ನಾವು. ಇನ್ನು ಬಾಬಾ ರಾಮದೇವ್ ಸತ್ತಿದ್ದರೆ ಬೀದಿಗೆ ಬರುತ್ತಿದ್ದೆವಾ? ಕಪ್ಪುಹಣದ ಕುರಿತಂತೆ ಮಾತನಾಡುವ ಒಂದು ಗಟ್ಟಿದನಿ ಉಡುಗಿಹೋಗಿರುತ್ತಿತ್ತಷ್ಟೇ. ಇಂದು ಅವರು ಇನ್ನೂ ಬಲವಾಗಿ ಅರಚುತ್ತಿದ್ದಾರೆಂದರೆ ಅದಕ್ಕೆ ಸ್ವಂತ ಬಲವೇ ಜೊತೆಗಾರ, ನಾವು-ನೀವಲ್ಲ.
ಈಗ ಆಸಾರಾಂ ಬಾಪು ಮೇಲಿನ ಆರೋಪಗಳಿಗೆ ಬನ್ನಿ. ೧೬ ವರ್ಷದ, ಅವರದ್ದೇ ವಿದ್ಯಾಶಾಲೆಯಲ್ಲಿ ಓದುತ್ತ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡಿದ್ದ ಹೆಣ್ಣುಮಗಳು. ಅವಳನ್ನು ಬಾಪೂ ಕೋಣೆಗೆ ಕರೆದೊಯ್ದು ಅತ್ಯಾಚಾರ ಮಾಡಿದರೆಂದು ಮಾಧ್ಯಮಗಳ ವರದಿ. ಆದರೆ ದಾಖಲಾದ ಎ-ಐಆರ್‌ನಲ್ಲೆಲ್ಲೂ ಆ ಹುಡುಗಿ ಅತ್ಯಾಚಾರದ ಉಲ್ಲೇಖ ಮಾಡಲೇ ಇಲ್ಲ. ಕಾನೂನಿನ ಪ್ರಕಾರ ಅತ್ಯಾಚಾರ ಬೇರೆ, ಲೈಂಗಿಕ ಶೋಷಣೆ ಬೇರೆ. ಇತ್ತೀಚೆಗೆ ದೆಹಲಿಯಲ್ಲಿ ಅತ್ಯಾಚಾರ ನಡೆದ ನಂತರ ಜಸ್ಟಿಸ್ ವರ್ಮಾ ನೇತೃತ್ವದ ಸಮಿತಿ ಇದನ್ನು ಸಮರ್ಥವಾಗಿ ವಿಂಗಡಿಸಿ ಕಾನೂನಿಗೆ ಹೊಸದಿಷ್ಟು ತಿದ್ದುಪಡಿಗಳನ್ನು ಸೂಚಿಸಿತು. ಅದು ಸಂಸತ್ತಿನಲ್ಲಿ ಮಂಡಿಸಲ್ಪಟ್ಟು ಅನುಮೋದನೆಯನ್ನೂ ಪಡಕೊಂಡಿತು. ಈ ನಿಯಮಗಳ ಪ್ರಕಾರ ಹುಡುಗಿಯೊಬ್ಬಳನ್ನು ಏಕಾಂತದಲ್ಲಿ ಮಾತನಾಡಿಸುವುದೇ ತಪ್ಪು.
ಈ ಹಿನ್ನೆಲೆಯಲ್ಲಿ ಈಗ ಆಸಾರಾಂ ಬಾಪುರವರತ್ತ ಒಮ್ಮೆ ಚಿತ್ತ ಹರಿಸಿ. ಕಳೆದ ಅನೇಕ ದಶಕಗಳಿಂದ ಹಿಂದು ಆಚರಣೆಗಳಿಗೆ ಹೊಸ ಅರ್ಥ ಕೊಡುತ್ತ, ಪಶ್ಚಿಮದತ್ತ ವಾಲುತ್ತಿರುವವರನ್ನು ಭಾರತೀಯತೆಯತ್ತ ಎಳೆದು ತರುತ್ತಿರುವ ಬಾಪೂ ಸಹಜವಾಗಿಯೇ ಎಡಚರ ಕೆಂಗಣ್ಣಿಗೆ ಗುರಿಯಾಗಿದ್ದರು. ವ್ಯಾಲೆಂಟೈನ್ ಡೇಯ ಪ್ರೇಮ ಸಲ್ಲಾಪಗಳನ್ನೆಲ್ಲ ಬಿಡಿ, ಅಂದು ತಂದೆ-ತಾಯಿಯರನ್ನು ಪೂಜಿಸಿ ಎನ್ನುವ ಮೂಲಕ ಅನೇಕ ತರುಣ ತರುಣಿಯರಿಗೆ ಮಾರ್ಗದರ್ಶನ ಮಾಡಿದ್ದರು. ತಮ್ಮ ವಾಗ್ವೈಖರಿಯಿಂದ, ಕಠೋರ ಸಾಧನೆಯಿಂದ ಅಪಾರ ಭಕ್ತವೃಂದವನ್ನೂ ಆಕರ್ಷಿಸಿದ್ದರು. ಅವರ ದಾಖಲಾದ ಭಕ್ತರ ಸಂಖ್ಯೆಯೇ ಸುಮಾರು ನಾಲ್ಕು ಕೋಟಿ! ಅವರ ಕಾರ್ಯಕ್ರಮಗಳಿಗೆ ಐವತ್ತು ಸಾವಿರಕ್ಕಿಂತ ಕಡಿಮೆ ಜನ ಸೇರುವುದೇ ಇಲ್ಲ. ಭವಿಷ್ಯದ ಪೀಳಿಗೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಬಾಪೂ ಕಟ್ಟಿರುವ ಬಾಲ ಸಂಸ್ಕಾರ ಕೇಂದ್ರಗಳು ಕರ್ನಾಟಕದ ಹಳ್ಳಿಗಳಲ್ಲೂ ಕೆಲಸ ಮಾಡುತ್ತಿವೆ. ಜನರನ್ನು ಸೆಳೆಯಬಲ್ಲ ಅವರ ಈ ಸಾಮರ್ಥ್ಯಕ್ಕೆ ಮನಸೋತೇ ದಿಗ್ವಿಜಯ ಸಿಂಗ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಒಂದು ರೂಪಾಯಿಗೆ ಒಂದು ಎಕರೆಯಂತೆ ನೂರಾರು ಎಕರೆಯಷ್ಟು ಜಮೀನನ್ನು ಕೊಟ್ಟಿದ್ದರು. ಈಗ ಅದೇ ದಿಗ್ವಿಜಯ ಸಿಂಗ್ ಬಾಪೂವನ್ನು ಹೇಯ ಪದಗಳಲ್ಲಿ ನಿಂದಿಸುತ್ತಿದ್ದಾರೆ. ಕಾರಣ ಏನಿರಬಹುದು?
ಆಸಾರಾಂ ಬಾಪೂ ಕೆಲ ದಿನಗಳ ಹಿಂದೆ ಸೋನಿಯಾಮತ್ತು ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ದೇಶ ಉಳಿಯಬೇಕೆಂದರೆ ಅವರು ದೇಶಬಿಟ್ಟು ಹೊರಡಬೇಕೆಂದು ತಮ್ಮ ಭಕ್ತರೆದುರು ಗರ್ಜಿಸಿದ್ದರು. ಅದೇ ಅವರು ಮಾಡಿದ ದೊಡ್ಡ ತಪ್ಪು. ಮಾಧ್ಯಮಗಳು ಅವಕಾಶಕ್ಕಾಗಿ ಕಾಯುತ್ತಿದ್ದವು. ಆ ಹೆಣ್ಣುಮಗಳ ಆರೋಪವನ್ನು ಮುಂದಿಟ್ಟುಕೊಂಡು ಹಿಂದು ಸಂತನ ಸಮಾಽಗೆ ಹಳ್ಳ ತೋಡಲು ನಿಂತುಬಿಟ್ಟವು. ದಿನದ ೨೪ ತಾಸು ‘ರೇಪಿಸ್ಟ್ ಬಾಪೂ’ ಎಂಬ ಹೆಸರಿನ ಕಾರ್ಯಕ್ರಮಗಳು ಬಿತ್ತರಗೊಂಡವು.
ಈಗ ನನ್ನದೊಂದಿಷ್ಟು ಪ್ರಶ್ನೆಗಳಿವೆ. ದಾಖಲಾದ ಎ-ಐಆರ್‌ನಲ್ಲಿ ಅತ್ಯಾಚಾರದ ಉಲ್ಲೇಖವೇ ಇಲ್ಲ, ಅತ್ಯಾಚಾರ ನಡೆದುದಕ್ಕೆ ಪುಷ್ಟಿಯೂ ದೊರೆತಿಲ್ಲವೆಂದು ಜೋಧಪುರದ ಡಿಸಿಪಿ ಕ್ಯಾಮೆರಾಗಳ ಮುಂದೆ ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ವರದಿಗಳೂ ಇದನ್ನು ದೃಢೀಕರಿಸಿವೆ. ಇಷ್ಟಾದರೂ ಮಾಧ್ಯಮಗಳು ಅತ್ಯಾಚಾರ ಮಾಡಿದ ಬಾಪೂ ಎಂದವಲ್ಲ ಏಕೆ? ಮಾಧ್ಯಮಗಳ ಪ್ರಚಾರದ ಒತ್ತಡಕ್ಕೆ ಬಲಿಬಿದ್ದು ಆನಂತರ ಅವರ ಮೇಲೆ ಅತ್ಯಾಚಾರದ ಕಾನೂನಿನ ನಿಯಮ ಹೇರಲಾಯ್ತಲ್ಲ ಸರಿಯಾ? ಬಾಪೂ ಕುರಿತಂತೆ ಅನೇಕ ಅಶ್ಲೀಲ ಸಿ.ಡಿ.ಗಳಿವೆ ಎಂಬ ವ್ಯವಸ್ಥಿತವಾದ ಸುದ್ದಿಯನ್ನು ಪ್ರತಿನಿತ್ಯವೂ ಬಿತ್ತರಿಸಿದಿರಿ. ಒಂದು ಹಂತಕ್ಕೆ ಶ್ರದ್ಧಾವಂತನೂ ಅದನ್ನು ನಂಬುವಂತಾಯ್ತು. ಆದರೆ ಅಹ್ಮದಾಬಾದಿನಲ್ಲಿ ಅಂತಹ ಸಿ.ಡಿ.ಗಳ್ಯಾವುವೂ ಸಿಗಲಿಲ್ಲವೆಂದು ಪೊಲೀಸರೇ ಒಪ್ಪಿಕೊಂಡಿದ್ದಾರೆ. ಅಕಸ್ಮಾತ್ ಮಾಧ್ಯಮಕ್ಕೆ ಸಿಕ್ಕಿದ್ದರೆ ಅವರೇ ನ್ಯಾಯಾಲಯಕ್ಕೆ ಅದನ್ನೇಕೆ ಕೊಡಬಾರದಾಗಿತ್ತು?
ದಿನಕ್ಕೊಂದು ಸೆನ್ಸೇಷನಲ್ ಸುದ್ದಿ ತೋರಿಸಿ ಟಿಆರ್‌ಪಿ ವೃದ್ಧಿಸಿಕೊಳ್ಳುವ ಚಟಕ್ಕೆ ಬಿದ್ದ ಆಂಗ್ಲ ಮಾಧ್ಯಮಗಳು ಬಾಪೂವಿನ ಆಪ್ತ ಶಿವ ತಪ್ಪಿಸಿಕೊಂಡಿದ್ದಾನೆ ಎಂದವು, ಆಮೇಲೆ ಸಿಕ್ಕಿಬಿದ್ದ ಎಂದವು, ಕೊನೆಗೆ ಆತನ ಬಳಿ ರಹಸ್ಯ ಸಿ.ಡಿ.ಗಳಿವೆ ಎಂದವು. ಪೊಲೀಸರು ಈ ವರದಿಗಳನ್ನಾಧರಿಸಿ ಶಿವಾನನ್ನು ಹೇಗೆ ಬಡಿದರೆಂದರೆ ಕೊನೆಗೆ ಆ ಬ್ರಾಹ್ಮಣನ ಜುಟ್ಟನ್ನು ಅಕ್ಷರಶಃ ಕಿತ್ತು ಬಾಪೂವಿನ ವಿರುದ್ಧ ಸಾಕ್ಷಿಯಾಗಲು ಒತ್ತಾಯಿಸಿದರು! ಎಲ್ಲ ಬಿಡಿ. ಹಾಸ್ಟೆಲ್ಲಿನ ಒಂದು ಭಾಗದ ವಾರ್ಡ್‌ನ ‘ಶಿಲ್ಪಿ’ಯನ್ನು ಬಾಪೂಗೆ ಹೆಣ್ಣು ಮಕ್ಕಳನ್ನು ಒದಗಿಸುತ್ತಿದ್ದ ಮಹಿಳೆ ಎಂದು ಬಿಂಬಿಸಿಬಿಟ್ಟವಲ್ಲ, ಇದು ಆಕೆಯ ಮೇಲೆ ಮಾಧ್ಯಮಗಳು ನಡೆಸಿದ ಮಾನಸಿಕ ಅತ್ಯಾಚಾರವಲ್ಲವೇನು? ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯ ವಿಚಾರಣೆ ಶುರುವಾಗಿದ್ದು ಮಧ್ಯಾಹ್ನ ೨.೩೦ಕ್ಕೆ. ಎರಡು ಗಂಟೆಗಾಗಲೇ ಶಿವ ಸಿಕ್ಕಿಬಿದ್ದಿದ್ದ. ಪೊಲೀಸ್ ಮುಖ್ಯಸ್ಥರು ನ್ಯಾಯಾಲಯದಲ್ಲಿಯೇ ಇದ್ದರೂ ಈ ವಿಚಾರ ಮುಚ್ಚಿಟ್ಟರು. ಆತ ಇನ್ನೂ ಸಿಗದ್ದರಿಂದ, ಬಾಪೂ ಸಾಕ್ಷ್ಯ ತಿರುಚುವ ಸಾಧ್ಯತೆಯಿದೆಯೆಂದು ಜಾಮೀನು ಅರ್ಜಿ ತಿರಸ್ಕರಿಸಿರೆಂದು ಬಿಟ್ಟರು. ನ್ಯಾಯಾಲಯ ಒಪ್ಪಿಕೊಂಡಿತು. ಮಾಧ್ಯಮಗಳು ಜಾಮೀನು ನಿರಾಕರಿಸುವುದೆಂದರೆ ಆರೋಪ ಸಾಬೀತಾಗುವುದೆಂಬಂತೆ ಜನರ ಮುಂದೆ ಬಿಂಬಿಸಿಬಿಟ್ಟವು.
ಜಂತರ್ ಮಂತರ್‌ನಲ್ಲಿ ದೇಶದ ಅನೇಕ ಭಾಗಗಳಿಂದ ಸಾಧುಸಂತರು, ಸಾವಿರಾರು ಭಕ್ತರು ಬಾಪೂವಿನ ಪರವಾಗಿ ಸೇರಿದರು. ಮಾಧ್ಯಮಗಳಿಗೆ ಅದು ಸುದ್ದಿ ಎನಿಸಲಿಲ್ಲ. ವಿದೇಶಗಳಲ್ಲಿ ಅವರ ಪರವಾದ ಕೂಗು ಕೇಳಿಬಂತು. ಅದೂ ಚಾನೆಲ್ಲುಗಳ ಕಿವಿ ಮುಟ್ಟಲಿಲ್ಲ. ಉಲ್ಟಾ. ಬಾಪೂ ವಿರುದ್ಧ ಮಾತನಾಡುವವರಿಗೆಲ್ಲ ಮಾಧ್ಯಮಗಳಲ್ಲಿ ವಿಶೇಷ ಕುರ್ಚಿ ದಕ್ಕಿತು. ಈ ಮಧ್ಯೆ ಆರೋಪ ಮಾಡಿದ ಹುಡುಗಿ ತನ್ನ ಗೆಳತಿಗೆ ಕರೆ ಮಾಡಿ ಅಪ್ಪ-ಅಮ್ಮರ ಒತ್ತಾಯಕ್ಕೆ ಮಣಿದು ಹೀಗೆ ಮಾಡುತ್ತಿದ್ದೇನೆಂದು ಹೇಳಿದ್ದು, ಅದರ ದಾಖಲೆಗಳನ್ನು ಸಮಾಜದೆದುರಿಗೆ ಯಾರೂ ತರಲೇ ಇಲ್ಲ. ಆ ಸುದ್ದಿ ಮಾಧ್ಯಮಗಳಲ್ಲಿ ಕ್ಷಣ ಹೊತ್ತು ಮಿಂಚಿ ಮರೆಯಾಗಿಬಿಟ್ಟಿತು! ಆರೋಪಗೈದ ಹುಡುಗಿಗೆ ಭಕ್ತರ ಬೆದರಿಕೆ ಕರೆಗಳು ಬರುತ್ತಿವೆಯೆಂಬ ಸುದ್ದಿಯೇನೋ ಬ್ರೇಕಿಂಗ್ ನ್ಯೂಸ್ ಆಯ್ತು. ಆದರೆ ಆ ಸುದ್ದಿಯ ಜಾಡು ಹಿಡಿದು ಒಬ್ಬರನ್ನೂ ಬಂಽಸಿದ ಸುದ್ದಿ ಮಾತ್ರ ಬರಲಿಲ್ಲ. ಹೀಗೇಕೆ? ಒಂದೋ ಬೆದರಿಕೆ ಹಾಕಿದ್ದೇ ಸುಳ್ಳಾಗಿರಬೇಕು. ಇಲ್ಲವೇ ಜನರನ್ನು ದಾರಿತಪ್ಪಿಸಲೆಂದೇ ಈ ಸುದ್ದಿ ಪ್ರಕಟಿಸಿರಬೇಕು; ಹೌದಲ್ಲವೆ?
ಖಂಡಿತ ಹೌದು. ಹೀಗೆ ಮಾಡಲೆಂದೇ ಹಣ ಹರಿದು ಬರುತ್ತಿದೆ. ಹಿಂದು ಧರ್ಮದ ಉಳಿವಿನ ಕೇಂದ್ರ ಬಿಂದುಗಳಾಗಿರುವ ಸಂತರ ನಾಶಕ್ಕೆ ಬ್ರಿಟಿಷರು ಇನ್ನಿಲ್ಲದ ಯತ್ನ ಮಾಡಿ ಸೋತರು. ಈಗ ಮಾಧ್ಯಮಗಳ ಮೂಲಕ ಈ ಪ್ರಯತ್ನ ನಡೆಯುತ್ತಿದೆ. ನಾವು ಬಲಿಯಾಗಿಬಿಡುತ್ತೀವಾ ಅನ್ನೋದೇ ಹೆದರಿಕೆ!!
ಹ್ಞಾಂ..! ಆಸಾರಾಂ ಬಾಪೂರವರ ಬಗ್ಗೆ ಹೇಳುತ್ತ ಹೇಳುತ್ತ ರಾಬರ್ಟ್ ವಾದ್ರಾನ ಭೂ ಹಗರಣದ ಬಗ್ಗೆ, ಸೋನಿಯಾ ಗಾಂಽಯ ಆರೋಗ್ಯದ ಬಗ್ಗೆ, ರೂಪಾಯಿಯ ಮೌಲ್ಯದ ಬಗ್ಗೆ, ಶೀಲಾ ದೀಕ್ಷಿತರ ಮೇಲೆ ಲೋಕಾಯುಕ್ತರು ಮಾಡಿರುವ ಭ್ರಷ್ಟಾಚಾರದ ಆರೋಪದ ಕುರಿತಂತೆ ಹೇಳಬೇಕಾದ್ದನ್ನು ಮರೆತೇಬಿಟ್ಟೆ. ನಿಜ, ಮಾಧ್ಯಮಗಳು ಚಪ್ಪರಿಸುವ ಸುದ್ದಿಯ ನಡುವೆ ದೇಶದ ಸ್ವಾಸ್ಥ್ಯದ ನಿಜ ಸ್ಥಿತಿಯನ್ನು ಮರೆಮಾಚೋದೇ ಹೀಗೆ. ನಾವೂ ಆ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿಬಿಡುತ್ತೇವೆ. ಅದೇ ದುರಂತ.

7 thoughts on “ಅವರು ಸಂತರ ಮೇಲೆರಗೋದು ಯಾಕೆ ಗೊತ್ತಾ?

  1. ಹಿಂದೂ ಸಂಸ್ಕೃತಿ ದೇಶ ಭಕ್ತಿಯನ್ನ್ನು ಕಲಿಸತ್ತೆ. ಜನರು ದೇಶದ ಕುರಿತು ಅಲೋಚನೆ ಮಾಡಲು ತೊಡಗುತ್ತಾರೆ. ಇದು Khangress ಗೆ ಮುಳುವಾಗತ್ತೆ ಅದಕ್ಕೆ ಹಿಂದುಗಳನ್ನು ವ್ಯವಸ್ತಿತವಾಗಿ ಮಟ್ಟ ಹಾಕುವ ಪ್ರಯತ್ನ ಇದು..

  2. our country can only be saved only when the people of the country can change. educated people have to vote. if tey dont ,there should be a rule made tat basic needs is given to them. then only educated people will come forward to vote atleast to get their basic nedds. educated people always choose the atleast a better person. then people who are good uncorrupted leaders will participate in election else tis situation will continue for ever

  3. I am really surprised with the way you are supporting Asaram baapu… he & his sons no less than Criminals… i stayed in Ahmedabad for 3 years & in all three years these people used to be in news for all wrong reasons… death of 2 Vaghela sons in their boarding schools, his son projecting himself as god & for attempt to rape case for nadiad based girl & attacking local people with thei goondas!!! Infact Its BJP who is ruling in Gujarat!!! your article is simply imaginative & it justifies wrong people…

  4. ನನಗೆ ಈ ಲೇಖನದ ಸತ್ಯಾಸತ್ಯತೆಗಿಂತ ಕೊನೆಯ ವಾಕ್ಯ ತುಂಬಾ ಇಷ್ಟವಾಯಿತು.”… ನಾವೂ ಕೊಚ್ಚಿಕೊಂಡು ಹೋಗುವುದೇ ದುರಂತ” ಏಕೆಂದರೆ ನನಗೆ ಇದೊಂದೇ ಗೊತ್ತಿರುವುದು ..
    ‘ನಾನೊಬ್ಬ ಕೊಚ್ಚಿಕೊಂಡುಹೋದವ” ನಾದುದರಿಂದ , ನನಗೆ ಮೊದಲ ಬಾರಿ ಲೇಖನ ನೋಡಿದಾಗ , ಚೆ ಚಕ್ರವರ್ತಿಯವರು ಹೀಗೆ ಮಾಡಬಾರದಿತ್ತು ಎಂದೆನಿಸಿಬಿಟ್ಟಿತ್ತು … ಆದರೆ ಈಗೆ , ನಾನೊಬ್ಬ ‘ಕೊಚ್ಚಿಕೊಂಡು ಹೋದವನಾಗಿರುವುದರಿಂದ’ ಈಗಲೇ ಮಾತನಾಡುವುದಿಲ್ಲ.
    ಆದರೆ ನನಗೆ ದುಕ್ಕ ಆಗುವುದು, ಸಂಜಯ್ ದತ್ ನಾನೊಬ್ಬ ನಿರಪರಾಧಿ ಎಂದರೆ , ನ್ಯಾಯಾಲಯದ ಆದೇಶಕ್ಕೂ ಕಾಯದೆ ಜನ ಆತನನ್ನು ‘ಬಿಡುಗಡೆ’ ಮಾಡಿಬಿಡುತ್ತಾರೆ .. ಅದೇ ‘ಒಬ್ಬ ಸಂತನಿಗೆ’ ಇದೆ ಕನಿಕರ ಏಕೆ ತೋರಿಸುವುದಿಲ್ಲ ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s