ಇತಿಹಾಸದಿಂದ ಕಲಿತ ಪಾಠ ನಾಳೆಗಳಿಗೆ ದಾರಿಯಾಗಲಿ

ಇಷ್ಟು ದಿನ ಕಾಶ್ಮೀರ ಸಮಸ್ಯಾಗ್ರಸ್ತವಾಗಿತ್ತು. ಈಗ ಆತಂಕ ಜಮ್ಮುವಿಗೆ ಹಬ್ಬಿದೆ. ಮತಾಂಧತೆಯ ಕ್ಯಾನ್ಸರ್ ಹಬ್ಬುತ್ತಿದೆ. ಕಿಶ್ತ್‌ವಾರ್‌ನ ಘಟನೆಗಳು ದೇಶದ ಪಾಲಿಗೆ ಮತ್ತೊಂದು ವಿಭಜನೆಯ ಮುನ್ಸೂಚನೆಯೇ ಸರಿ. ನಾವೀಗ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಲಿಲ್ಲವೆಂದರೆ ದೇಶದಾದ್ಯಂತ ದಂಗೆಗಳ ಮಹಾಪೂರವೇ ನಡೆಯಲಿದೆ. ಅನುಮಾನವೇ ಇಲ್ಲ.

ಸ್ವಾತಂತ್ರ್ಯ ಬಂದು ೬೬ ಭರ್ತಿ ವರ್ಷಗಳು ಕಳೆದೇ ಹೋದವು ನೋಡಿ. ಆರೂವರೆ ಲಕ್ಷ ಜನರ ಬಲಿದಾನದ ರಕ್ತದಲ್ಲಿ ತೇಲಿಬಂದದ್ದು ಆ ನೌಕೆ. ಸ್ವಾತಂತ್ರ್ಯ ಬಂದ ನಂತರ ಈ ಬಲಿದಾನದ ಉಲ್ಲೇಖ ಮಾಡಲು ದೇಶ ಮರೆತೇಬಿಟ್ಟಿತು. ನೆತ್ತರು ಹರಿಸಿ ಹೋರಾಡಿದವರನ್ನು ನೆನಪಿಸಿಕೊಂಡರೆ ಶಾಂತಿಯ ಹೆಸರಲ್ಲಿ ಆಗ್ರಹಿಸಿದವರಿಗೆ ಅಪಚಾರವಾಗುತ್ತೆ ಅಂತ ಆಳುವವರಿಗೆ ಅದ್ಯಾಕೆ ಅನ್ನಿಸಿತೋ ದೇವರೇ ಬಲ್ಲ! ಹೋಗಲಿ ಇಷ್ಟಕ್ಕೂ ಬಿಳಿಯರು, ದೇಶಬಿಟ್ಟು ಹೊರಡಿರೆಂಬ ಗೋಗರೆತಕ್ಕೆ ಜಾಗ ಖಾಲಿ ಮಾಡಿದರೆಂದು ಈ ಹೊತ್ತಿಗೂ ದೃಢವಾಗಿ ನಂಬುವವರಿದ್ದಾರಾ?

Article on Subhas Chandra Bose೧೮೮೫ರಲ್ಲಿ ಸ್ಥಾಪನೆಯಾದ ಕಾಂಗ್ರೆಸ್ಸು, ಬೇಡಿಕೆಯ ಪತ್ರಗಳನ್ನು ಬಿಳಿಯರಿಗೆ ತಲುಪಿಸಲೆಂದೇ ಹುಟ್ಟಿಕೊಂಡಿದ್ದು. ಅದಕ್ಕೆ ಚುರುಕು ಮುಟ್ಟಿಸಿದ್ದು ತಿಲಕರಂತಹ, ಗೋಪಾಲಕೃಷ್ಣ ಗೋಖಲೆಯಂತಹ ಧೀಮಂತರು. ೧೯೧೯ರಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ಬಂದಾಗ ಬಿಳಿಯರು ನಿರಾಳವಾಗಿರಲಿಕ್ಕೆ ಸಾಕು; ಮತ್ತೆ ಬೇಡಿಕೆಯ ಯುಗ ಬಲಿಯುವದೆಂಬ ಆಸೆ ಅದು. ಗಾಂಧೀಜಿ ಆಫ್ರಿಕಾದ ತಮ್ಮ ವಿಜಯವನ್ನು ಟ್ರಂಪ್‌ಕಾರ್ಡ್ ಆಗಿ ಬಳಸಿಕೊಂಡು ದೇಶದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದರು. ಆದರೆ ಇಟ್ಟ ಪ್ರತಿ ಹೆಜ್ಜೆಯನ್ನೂ ಹಿಂದಿಡುತ್ತ, ಮತ್ತೆ ಮುನ್ನುಗ್ಗುವ ಕನಸು ತೋರಿಸುತ್ತಿದ್ದರು. ಕಾಲಕ್ರಮೇಣ ಜನರೇ ಭ್ರಮಿತರಾಗಿ ಗಾಂಧೀಜಿಯ ಮಾತು ಕೇಳಲಿಕ್ಕಷ್ಟೇ ಯೋಗ್ಯ ಎಂದಾಯ್ತು. ೧೯೩೦ರ ವೇಳೆಗಾಗಲೇ ಗಾಂಧೀಜಿ ತಮ್ಮ ಪ್ರಭಾವ ಕಳಕೊಂಡಿದ್ದರೆಂಬುದನ್ನು ಗಾಂಧಿವಾದಿಗಳೂ ಒಪ್ಪುತ್ತಾರೆ. ಪಟೇಲರೊಬ್ಬರಿರದಿದ್ದರೆ ಗಾಂಧೀಜಿಯ ಪರಿಸ್ಥಿತಿ ಇನ್ನೂ ಬಿಗಡಾಯಿಸಿರುತ್ತಿತ್ತು.
ಅಲ್ಲಿಂದ ಮುಂದೆ ಕಾಂಗ್ರೆಸ್ಸಿನ ನಾಯಕರು ಸಾಮಾನ್ಯ ರಾಜಕಾರಣಿಗಳಾಗಿಬಿಟ್ಟರು. ತಮ್ಮದೊಂದು ವಲಯ ನಿರ್ಮಿಸಿಕೊಂಡು ಇದನ್ನು ಬಿಟ್ಟು ಹೊರಗಿನವರು ಬರದಂತೆ ತಡೆಯುವುದೇ ಅವರ ಮುಖ್ಯ ಕಾಯಕವಾಗಿತ್ತು. ಈ ರೀತಿಯ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ನೊಂದವರು ಸುಭಾಷ್ ಚಂದ್ರ ಬೋಸ್. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಯೂ ಅವಕೃಪೆಗೆ ಒಳಗಾದ ದುರಂತ.
ನಾಯಕ ಆತ. ಸುಭಾಷ್ ಬಾಬು ಸುಮ್ಮನಿರದೆ, ದೇಶವನ್ನೇ ಬಿಟ್ಟು ತೆರಳಿದರು. ಅಲ್ಲೊಂದು ಪಡೆ ಕಟ್ಟಿ ಬ್ರಿಟಿಷ್ ವಿರೋಧಿ ದೇಶಗಳ ಸಹಕಾರ ಪಡೆದು ಈ ನಾಡಿನ ಮೇಲೆ ದಾಳಿಗೈದರು. ಆಗೆಲ್ಲ ಇದೇ ಕಾಂಗ್ರೆಸ್ಸು ಸುಭಾಷರು ವಿರೋಧಿ ಪಾಳಯ ಸೇರಿಕೊಂಡುಬಿಟ್ಟಿದ್ದಾರೆಂದು ಪುಕಾರು ಹಬ್ಬಿಸಿತ್ತು. ಸುಭಾಷರ ಸೇನೆ ಭಾರತದೊಳಕ್ಕೆ ಕಾಲಿಟ್ಟರೆ ನಾನೇ ಕತ್ತಿಹಿಡಿದು ಹೋರಾಡುತ್ತೇನೆಂದಿದ್ದರು ನೆಹರೂ. ನಾಯಕರೆನಿಸಿಕೊಂಡವರು ಅದೆಷ್ಟು ಬಾಲಿಶವಾಗಿ ವರ್ತಿಸುತ್ತಿದ್ದರೆಂದರೆ ಎರಡನೇ ಮಹಾಯುದ್ಧದ ಹೊತ್ತಲ್ಲಿ ನಮ್ಮ ನೀತಿ ಏನಿರಬೇಕೆಂಬುದರ ಸಮಗ್ರ ಕಲ್ಪನೆಯೇ ಇರಲಿಲ್ಲ.
ಹಾಗೆ ನೋಡಿದರೆ ಆ ಯುದ್ಧಕ್ಕೆ ಕಾರಣವೇ ಜಗತ್ತಿನ ಆರ್ಥಿಕ ದುಸ್ಥಿತಿ. ಈ ವಿಷಮಸ್ಥಿತಿಯಿಂದ ಹೊರಬರಲು ಶ್ರೀಮಂತ ರಾಷ್ಟ್ರಗಳಿಗೆ ಯುದ್ಧವೊಂದು ಬೇಕೇಬೇಕಾಗಿತ್ತು. ಆ ಯುದ್ಧದಲ್ಲಿ ಬಡಿದಾಡುವಂತೆ ಮಾಡಿ ಬಡರಾಷ್ಟ್ರಗಳ ಹಣವನ್ನು ಖಾಲಿಮಾಡಿಸಿ ಕೊಬ್ಬಿ ಬೆಳೆಯುವುದು ಅವುಗಳ ಉದ್ದೇಶ. ಗಾಂಧೀಜಿ, “ಈ ಹೊತ್ತಲ್ಲಿ ಬ್ರಿಟಿಷರಿಗೆ ತೊಂದರೆ ಕೊಡುವುದು ಸರಿಯಲ್ಲ; ಯುದ್ಧಕ್ಕೆ ನಾವು ಸಹಕರಿಸಬೇಕು” ಎಂದುಬಿಟ್ಟರು. ಕಾಂಗ್ರೆಸ್ಸಿಗೆ ಹೆದರಿಕೆ ಇದ್ದುದು ಬಿಳಿಯರದ್ದಲ್ಲ, ಅವರ ಶತ್ರುಗಳೊಂದಿಗೆ ಒಂದಾಗಿದ್ದ ಸುಭಾಷರದ್ದು. ಬ್ರಿಟಿಷರು ಸೋಲೋದು ಅಂದರೆ ಜರ್ಮನಿ-ಜಪಾನುಗಳು ಗೆಲ್ಲೋದು ; ಆ ಮೂಲಕ ಸುಭಾಷರು ಗೆಲ್ಲೋದು ಅಂತ! ನಾವು ಕೊನೆಗೂ ಮಹಾಯುದ್ಧಕ್ಕೆ ಕೈಚಾಚಿದೆವು.
ಈ ಯುದ್ಧ ನಮ್ಮ ಬೆನ್ನುಮೂಳೆಯನ್ನೇ ಮುರಿದುಬಿಟ್ಟಿತು. ಬಿಳಿಯರು ಈ ದೇಶದ ಸಂಪತ್ತನ್ನು ಮುಕ್ತವಾಗಿ ಸೂರೆಗೈದರು. ಜಗತ್ತಿನ ಅನೇಕ ರಾಷ್ಟ್ರಗಳ ಸಂಪರ್ಕ ನಮಗೆ ಕಡಿದು ಹೋದದ್ದರಿಂದ ಆಮದು, ರಫ್ತು ಎರಡೂ ಇಳಿಮುಖವಾಯ್ತು. ಸಹಜವಾಗಿಯೇ ಹಣದ ಮೌಲ್ಯ ಇಳಿಯುತ್ತ ಹೋಯ್ತು. ಕೆಲವು ದಶಕಗಳ ಹಿಂದೆಯಷ್ಟೇ ಸಿರಿವಂತವಾಗಿದ್ದ ರಾಷ್ಟ್ರ ಈಗ ಭಿಕ್ಷಾಂದೇಹಿ ಎನ್ನುತ್ತಿತ್ತು. ಧಾನ್ಯದ ದಾಸ್ತಾನು ಖಾಲಿಯಾಯ್ತು. ಎಲ್ಲ ಬೆಲೆಗಳೂ ಸಾಕಷ್ಟು ಏರಿ ಹಣದುಬ್ಬರ ಗಗನ ಮುಟ್ಟಿತು. ಬಂಗಾಳ ಕ್ಷಾಮಕ್ಕೆ ಬಿತ್ತು. ಬಡವರ ಕೂಗು ಕೇಳಲಾಗದೆ ಬ್ರಿಟಿಷರೆದುರು ಗಾಂಧೀಜಿ ಅಬ್ಬರಿಸಿದರು, “ಭಾರತ ಬಿಟ್ಟು ತೊಲಗಿ”. ಪಾಪ! ಈ ಘೋಷಣೆ ಗಾಂಧೀಜಿಯ ಅಷ್ಟೂ ವರ್ಷಗಳ ಶಾಂತಿಯ ತಪಸ್ಸನ್ನು ನಾಶಮಾಡಿತು. ಜನತೆ ಗಲಿಬಿಲಿಗೊಳಗಾದರು. ಉತ್ಪಾತಗಳಾದವು. ರೇಲ್ವೆ ಹಳಿಗಳು ಮುರಿದು ಬಿದ್ದವು. ಅನೇಕ ಕಡೆಗಳಲ್ಲಿ ಸರ್ಕಾರಿ ಕಚೇರಿಗಳು ಧ್ವಂಸಗೊಂಡವು. ಆದರೆ ಹೋರಾಟ ಸೂಕ್ತ ಅಂತ್ಯ ಕಾಣಲಿಲ್ಲ. ಏಕೆ ಗೊತ್ತಾ? ಮುಸ್ಲಿಂ ಲೀಗು ಈ ಹೋರಾಟವನ್ನು ಬೆಂಬಲಿಸಿರಲಿಲ್ಲ!
ಮಹಮ್ಮದ್ ಅಲಿ ಜಿನ್ನಾ ಸ್ವತಃ ತಾನು ಮುಸಲ್ಮಾನರ ನಾಯಕನಾಗಿ ಬೆಳೆದಿರಲಿಲ್ಲ. ಗಾಂಧೀಜಿ ಬೆಳೆಸಿದರು. ಅಗತ್ಯಕ್ಕಿಂತಲೂ ಹೆಚ್ಚು ಗೌರವಿಸುತ್ತ ಬೇಡಿದ್ದಕ್ಕಿಂತಲೂ ಹೆಚ್ಚು ನೀಡುತ್ತ ಅವನನ್ನು ‘ಹೀರೋ’ ಮಾಡಿಬಿಟ್ಟರು. ಜಿನ್ನಾ ಮಹತ್ವಾಕಾಂಕ್ಷಿ. ಅವನಿಗೆ ಆಂಗ್ಲರಿಂದ ಪಡಕೊಳ್ಳುವುದೂ ಗೊತ್ತಿತ್ತು, ಕಾಂಗ್ರೆಸ್ಸಿನಿಂದ ಕಸಿಯುವುದೂ ಗೊತ್ತಿತ್ತು. ದೇಶವ್ಯಾಪಿ ನಡೆಯಲಿರುವ ಸ್ವಾತಂತ್ರ್ಯ ಹೋರಾಟಕ್ಕೆ ಜಿನ್ನಾನನ್ನೇ ತಡೆಗೋಡೆಯಾಗಿ ಬ್ರಿಟಿಷರು ಬಳಸಿಕೊಂಡರು. ಹಾಗೆ ನೋಡಿದರೆ ಬಹುಸಂಖ್ಯೆಯ ಮುಸಲ್ಮಾನರಿಗೆ ಅವನ ಪರಿಚಯವೇ ಇರಲಿಲ್ಲ. ಪಂಜಾಬ್ ಪ್ರಾಂತ್ಯದ ಶ್ರೀಮಂತ ಮುಸಲ್ಮಾನರು ಮತ್ತು ಬಂಗಾಳ ಭಾಗದ ಬಡ ಕಾರ್ಮಿಕರು ಅವನನ್ನು ಆರಾಧಿಸುತ್ತಿದ್ದರಷ್ಟೇ. ಅದಕ್ಕೆ ಕಾರಣವೂ ಇಲ್ಲದಿರಲಿಲ್ಲ. ಮುಸಲ್ಮಾನ ಬಾಹುಳ್ಯದ ಪ್ರತ್ಯೇಕ ಪಾಕಿಸ್ತಾನ ನಿರ್ಮಾಣಗೊಂಡರೆ ಅಲ್ಲಿನ ವ್ಯಾಪಾರ-ವಹಿವಾಟು, ರಾಜಕೀಯ ಎಲ್ಲವೂ ತಮ್ಮ ಕೈಲೆಂಬ ಆಸೆ ಪಂಜಾಬಿನ ಮುಸಲ್ಮಾನರಿಗಿದ್ದರೆ, ಪ್ರತ್ಯೇಕವಾಗುವುದರಿಂದ ಶ್ರೀಮಂತ ಜಮೀನ್ದಾರರಿಂದ ಮುಕ್ತಿಯೆಂಬ ಸಮಾಧಾನ ಬಂಗಾಳದ ಬಡವರಿಗಿತ್ತು. ಉಳಿದಂತೆ ಕಾಶ್ಮೀರ-ಹೈದರಾಬಾದುಗಳು ತಮ್ಮದೇ ಖದರಿನಿಂದ ಬದುಕಿದ್ದವೇ ಹೊರತು ಅಲ್ಲಿ ಜಿನ್ನಾನ ಬಗ್ಗೆ ಬಹಳ ಒಲವಿದ್ದಂತೆ ಕಾಣುವುದಿಲ್ಲ.
ಕಾಂಗ್ರೆಸ್ಸು ಸಾಧ್ಯವಾದಷ್ಟೂ ಪ್ರಯತ್ನ ಮಾಡಿತು. ಹಿಂದು-ಮುಸಲ್ಮಾನರು ಒಂದೆಂದು ತೋರುವ ಯಾವ ಅವಕಾಶವನ್ನೂ ಬಿಟ್ಟುಕೊಡಲಿಲ್ಲ. ತುಷ್ಟೀಕರಣದ ವೇಗ ಹಿಂದೆಂದಿಗಿಂತಲೂ ತೀವ್ರವಾಯ್ತು. ಎರಡನೇ ಮಹಾಯುದ್ಧದಲ್ಲಿ ಗೆದ್ದರೂ ಇಂಗ್ಲೆಂಡು ಸಾಕಷ್ಟು ನಷ್ಟ ಅನುಭವಿಸಿತ್ತು. ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದೊಡನೆ ಭಾರತದ ಸ್ವಾತಂತ್ರ್ಯದ ಕುರಿತಂತೆ ಮಾತನಾಡಲಾರಂಭಿಸಿತು. ಸ್ವಾತಂತ್ರ್ಯಕ್ಕೆ ಇಷ್ಟೊಂದು ಅವಸರವೇಕೆಂದು ಕೇಳಿದ್ದಕ್ಕೆ ಪ್ರಧಾನಿ ಕ್ಲೆಮೆಂಟ್ ಆಟ್ಲಿ, ‘go ask Bose’ ಎಂದಿದ್ದರು. ಅದೂ ಸರಿಯೇ. ಸುಭಾಷರ ಐಎನ್‌ಎ ಮಹಾಕ್ರಾಂತಿ ಮಾಡಿತ್ತು. ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಅವರು ಬ್ರಿಟಿಷರ ಕೈಯಿಂದ ಕಸಿದಿದ್ದರು. ಅತ್ತ ಈಶಾನ್ಯ ಭಾರತದೊಳಕ್ಕೆ ನುಗ್ಗಿ ಕಾದಾಡಿದ್ದರು. ಸುಭಾಷ್ ಬಾಬು ಸೋತರು, ನಿಜ. ಆದರೆ ಸೆರೆಸಿಕ್ಕ ಐಎನ್‌ಎ ಸೈನಿಕರು ಭಾರತದ ಸೈನಿಕರಲ್ಲಿ ಸುಪ್ತವಾಗಿದ್ದ ಸ್ವಾತಂತ್ರ್ಯದ ಉರಿಯನ್ನು ಪ್ರಜ್ವಲಿಸುವಂತೆ ಮಾಡಿದರು. ಬಿಳಿಯರಿಗೆ ಈಗ ಆತುರ. ಹೋಗುವುದಂತೂ ಖಾತ್ರಿ. ಹೋಗುವ ಮುನ್ನ ಇಲ್ಲಿನ ವಾತಾವರಣವನ್ನು ಹದಗೆಡಿಸಿ ಹೋಗಬೇಕೆಂಬುದು ನಿಶ್ಚಯವಾಯ್ತು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ದಂಗೆಗೆ ಕುಮ್ಮಕ್ಕು ಕೊಡಲಾರಂಭಿಸಿದರು. ದಲಿತರನ್ನು ಎತ್ತಿಕಟ್ಟುವ ಪ್ರಯಾಸವಾಯ್ತು. ಅಂಬೇಡ್ಕರರ ಸಮಯಪ್ರಜ್ಞೆಯಿಂದಾಗಿ ಭಾರತ ಉಳಿಯಿತು. ಇಲ್ಲವಾದಲ್ಲಿ ಇನ್ನೊಂದು ತುಂಡಾಗುವುದರಲ್ಲಿತ್ತು ಭಾರತ!
೧೯೪೬ರ ಆಗಸ್ಟ್ ೧೬ಕ್ಕೆ ಜಿನ್ನಾ ‘ನೇರ ಆಕ್ರಮಣ’ದ ತನ್ನ ಬೆದರಿಕೆಯನ್ನು ಸಾಕಾರಗೊಳಿಸಿದ. ೧೯೦೫ರ ಬಂಗಾಳ ವಿಭಜನೆಯ ಹೊತ್ತಲ್ಲಿ ಢಾಕಾದ ನವಾಬ ಸಲೀಮುಲ್ಲಾ ಖಾನನಿಂದ ಮಾಡಿಸಿದ ಎಲ್ಲ ಬಗೆಯ ಹಿಂದು ವಿರೋಧಿ ಕೃತ್ಯಗಳನ್ನು ಜಿನ್ನಾನಿಂದಲೂ ಬ್ರಿಟಿಷರು ಮಾಡಿಸಿದರು. ಮುಸಲ್ಮಾನ ಬಾಹುಳ್ಯವಿದ್ದ ಪ್ರದೇಶಗಳು ದಂಗೆಯ ಕೇಂದ್ರವಾಗಿಬಿಟ್ಟವು; ಬಂಗಾಳದ ಅನೇಕ ಭಾಗಗಳು ಅಕ್ಷರಶಃ ಸ್ಮಶಾನವಾದವು. ‘ಭಾರತ ಒಂದು ರಾಷ್ಟ್ರವೇ ಅಲ್ಲ, ಹಿಂದು ಮುಸಲ್ಮಾನರು ಒಟ್ಟಿಗೆ ಬದುಕುವುದು ಸಾಧ್ಯವೇ ಇಲ್ಲ’ ಎನ್ನುವ ಮಾತನ್ನು ಜಿನ್ನಾ ಸಾಬೀತುಪಡಿಸಿದ. ಕಾಂಗ್ರೆಸ್ಸು ಸೋತುಹೋಯ್ತು.
೧೯೪೮ರ ಜೂನ್‌ನಲ್ಲಿ ಬಿಟ್ಟುಹೊರಡಲು ನಿಶ್ಚಯಿಸಿದ್ದ ಬಿಳಿಯರು ೧೯೪೭ರ ಆಗಸ್ಟ್ ೧೪ಕ್ಕೆ ಕಾಲ್ಕಿತ್ತರು, ೧೭೦೦ ಕಿ.ಮೀ.ಗಳ ಅಂತರದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳನ್ನು ನಿರ್ಮಿಸಿ!
ಬಿಡಿ. ಅವೆಲ್ಲ ಮುಗಿದುಹೋದ ಕಥೆ. ಈಗೇಕೆ ಅದು? ಕಾರಣವಿದೆ. ಬ್ರಿಟಿಷರು ಈ ದೇಶ ಬಿಟ್ಟುಹೋಗುವ ಮುನ್ನ ಯಾವ ಪರಿಸ್ಥಿತಿ ಇತ್ತೋ ಅದೇ ವಾತಾವರಣದ ಮೂಲಕ ದೇಶ ಮತ್ತೆ ಹಾದುಹೋಗುತ್ತಿದೆ. ಬ್ರಿಟಿಷರ ಜಾಗದಲ್ಲಿ ಕಾಂಗ್ರೆಸ್ಸು ನಿಂತಿದೆ ಅಷ್ಟೇ!
ಭಾರತದ ಸಮಗ್ರ ಉತ್ಪಾದನೆಯ ಸೂಚ್ಯಂಕ ಜಿಡಿಪಿ ವೇಗವಾಗಿ ಇಳಿಯುತ್ತಿದೆ. ಸಹಜವಾಗಿಯೇ ರಫ್ತು ಕಡಿಮೆಯಾಗುತ್ತಿದೆ. ರೂಪಾಯಿ ಮೌಲ್ಯ ಕುಸಿಯುವ ವೇಗ ನೋಡಿದರೆ ಢವಗುಟ್ಟುತ್ತದೆ. ಬೆಲೆಗಳು ಗಗನಕ್ಕೇರಿದರೆ ಬದುಕಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಬಡತನ ಮತ್ತೆ ದೇಶವನ್ನು ಸುರುಳಿ ಸುತ್ತಿದೆ. ಇವೆಲ್ಲವೂ ಎರಡನೇ ಮಹಾಯುದ್ಧದ ವೇಳೆ ಕಂಡುಬಂದ ಲಕ್ಷಣಗಳೇ ಅಲ್ಲವೇನು?
ಇತ್ತ ಕಾಂಗ್ರೆಸ್ಸು ತಾನು ಅಧಿಕಾರ ಬಿಟ್ಟು ಹೊರಡುವುದು ಖಾತ್ರಿಯಾದೊಡನೆ ಆಳುವುದು ಸುಲಭವಲ್ಲವೆಂದು ಮಾಡಿಡಲು ಸಿದ್ಧತೆ ನಡೆಸಿದೆ. ಆಂಧ್ರವನ್ನು ವಿಭಜಿಸಿದ್ದು ಪ್ರತ್ಯಕ್ಷ ಭೂಮಿಯ ಮೇಲಲ್ಲ, ಎ.ಸಿ. ಕೋಣೆಯಲ್ಲಿ ವರ್ಕಿಂಗ್ ಕಮಿಟಿಯೆದುರು! ಹೀಗೆಯೇ ಬಿಳಿಯರು ಭಾರತವನ್ನು ತುಂಡರಿಸಿದ್ದರು. ರ‍್ಯಾಡ್‌ಕ್ಲಿ- ತನ್ನ ಕೋಣೆಯ ಭೂಪಟದ ಮೇಲೆ ಎಳೆದ ಗೆರೆಯೇ ನಮ್ಮ ಗಡಿಯಾಯ್ತು! ಮುಂದೆ ಕದನ ನಿರಂತರವಾಗಿ ನಡೆಯುತ್ತಿರಲೆಂಬ ಉದ್ದೇಶ ಅದರ ಹಿಂದಿತ್ತು. ಈಗಿನ ಆಂಧ್ರ ಮುರಿದುದರ ಹಿಂದಿನ ಹುನ್ನಾರವೇನು ಹಾಗಾದರೆ? ಈ ಹೆಜ್ಜೆ ಇಡುವುದರಿಂದ ದೇಶದ ಅನೇಕ ರಾಜ್ಯಗಳು ರಕ್ತಪಾತಕ್ಕೆ ಮುಂದಾಗುತ್ತವೆಂದು ನಾಯಕರಿಗೆ ಚೆನ್ನಾಗಿ ಗೊತ್ತಿತ್ತು. ದೇಶದುದ್ದಕ್ಕೂ ಕದನಗಳಾಗುತ್ತಿದ್ದರೆ ಹೊಸದಾಗಿ ಬಂದವರು ಹೈರಾಣಾಗಿ ಸಮರ್ಥ ಆಡಳಿತ ನೀಡುವಲ್ಲಿ ಸೋಲುತ್ತಾರೆ ಅಂತಾನಾ? ಯೋಚಿಸಬೇಕಾದ ವಿಷಯ.
ಇಷ್ಟೇ ಅಲ್ಲ. ಬಂಗಾಳದಲ್ಲಿ ನೇರ ಆಕ್ರಮಣದ ಬೆದರಿಕೆ ಹಾಕಿದನಲ್ಲ ಜಿನ್ನಾ, ಅಂತಹುದೇ ಬೆದರಿಕೆ ಜಮ್ಮುವಿನಿಂದ ಕೇಳಿಬರುತ್ತಿದೆ. ಇಷ್ಟು ದಿನ ಕಾಶ್ಮೀರ ಸಮಸ್ಯಾಗ್ರಸ್ತವಾಗಿತ್ತು. ಈಗ ಆತಂಕ ಜಮ್ಮುವಿಗೆ ಹಬ್ಬಿದೆ. ಮತಾಂಧತೆಯ ಕ್ಯಾನ್ಸರ್ ಹಬ್ಬುತ್ತಿದೆ. ಕಿಶ್ತ್‌ವಾರ್‌ನ ಘಟನೆಗಳು ದೇಶದ ಪಾಲಿಗೆ ಮತ್ತೊಂದು ವಿಭಜನೆಯ ಮುನ್ಸೂಚನೆಯೇ ಸರಿ. ನಾವೀಗ ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಲಿಲ್ಲವೆಂದರೆ ದೇಶದಾದ್ಯಂತ ದಂಗೆಗಳ ಮಹಾಪೂರವೇ ನಡೆಯಲಿದೆ. ಅನುಮಾನವೇ ಇಲ್ಲ.
ಇತಿಹಾಸದ ಅಧ್ಯಯನ ನಡೆಯಬೇಕೆನ್ನುವುದು ಅದಕ್ಕೇ. ಕಳೆದುಹೋದ ಪ್ರತಿಯೊಂದು ಕ್ಷಣವೂ ಕಲಿಯಲಿಚ್ಛಿಸಿದವನಿಗೆ ಸರಿಯಾದ ಪಾಠವೇ. ಮುಂದೆ ಸಮರ್ಥ ಹೆಜ್ಜೆ ಇಡಲು ಸೂಕ್ತ ಮಾರ್ಗದರ್ಶನವೇ. ಈಗ ಚೆಂಡು ನಮ್ಮ ಅಂಗಳದಲ್ಲಿದೆ. ಮುಂದೆ ಅದನ್ನು ಎತ್ತ ಬಾರಿಸಬೇಕೆಂಬುದರ ಕುರಿತು ಇತಿಹಾಸ ಪಾಠದ ಅರಿವೂ ಇದೆ!

 

 

 

4 thoughts on “ಇತಿಹಾಸದಿಂದ ಕಲಿತ ಪಾಠ ನಾಳೆಗಳಿಗೆ ದಾರಿಯಾಗಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s