ಅಮರನಾಥ ಬೆಟ್ಟದ ಬುಡದಲ್ಲಿ ಕನ್ನಡಿಗರ ಕೈತುತ್ತು

ಜೂನ್ ಕೊನೆಯ ವಾರದಲ್ಲಿ ಅಮರನಾಥ ಈ ವರ್ಷದ ಹಿಮಲಿಂಗ ದರ್ಶನಕ್ಕೆ ತೆರೆದುಕೊಳ್ಳುತ್ತದೆ. ಈ ಪ್ರಯುಕ್ತ ಅಲ್ಲಿ ಲಂಗರ್‌ ನಡೆಸಲು ಕರ್ನಾಟಕದ ತಂಡ ತಯಾರಿ ನಡೆಸುತ್ತಿದೆ. ಈ ತಂಡದ ಬಗ್ಗೆ ಹಿಂದೆ ಬರೆದಿದ್ದ ಲೇಖನವನ್ನು ಪುನರ್ಮನನಕ್ಕಾಗಿ ರಿಬ್ಲಾಗ್ ಮಾಡುತ್ತಿದ್ದೇನೆ.

ಹಿಮಾಲಯದ ಪ್ರವಾಸ ಮುಗಿಸಿ ಮರಳಿ ಬರುತ್ತಿದ್ದೆವು. ಆ ಗುಂಗು ಇನ್ನೂ ಕಳೆದಿರಲಿಲ್ಲ. ಇದ್ದಕ್ಕಿದ್ದಂತೆ ರಸ್ತೆಯನ್ನು ಅಡ್ಡಗಟ್ಟಿ ನಿಂತಿದ್ದ ಒಂದಷ್ಟು ಜನರನ್ನು ಕಂಡು ಗಲಿಬಿಲಿಯಾಯ್ತು. ನಮ್ಮ ಗಾಡಿಯನ್ನು ಅನಿವಾರ್‍ಯವಾಗಿ ನಿಲ್ಲಿಸಬೇಕಾಯ್ತು. ಯಾತ್ರಿಕರನ್ನು ಬಡಿಯುವ, ಕೊಲ್ಲುವ ಪರಿಪಾಠ ಕಾಶ್ಮೀರದ್ದು; ಇಲ್ಲಿಗೂ ಬಂದುಬಿಡ್ತಾ? ಅಂತ ಅನ್ನಿಸಿದ್ದೂ ನಿಜ. ಕೆಲವು ತರುಣರೂ ವೃದ್ಧರೂ ಬಂದರು. ಇಲ್ಲಿ ಲಂಗರ್ ಇದೆ, ನೀವು ಊಟ ಮಾಡಿಕೊಂಡು ಹೋಗಲೇಬೇಕು ಎಂದು ಹಟ ಹಿಡಿದರು. ಅವಾಕ್ಕಾದೆವು. ನೂರು ಮೀಟರ್ ದೂರದಲ್ಲಿದ್ದ ಪೆಂಡಾಲಿಗೆ ಹೋದರೆ ನೂರಾರು ಜನ ಊಟ ಮಾಡುತ್ತ ಕುಳಿತಿದ್ದುದು ಕಂಡಿತು. ನಾವು ತಟ್ಟೆ ಹಿಡಿದು ಸರತಿಯಲ್ಲಿ ನಿಂತು ಬಗೆಬಗೆಯ ಭಕ್ಷ್ಯ ಸವಿದೆವು. ಬಾಗಿಲ ಬಳಿ ಕುರ್ಚಿ ಹಾಕಿಕೊಂಡು ಕುಳಿತಿದ್ದ ಧಡೂತಿ ಆಸಾಮಿಯನ್ನು ಹೀಗೇಕೆ ಉಚಿತ ಭೋಜನದ ವ್ಯವಸ್ಥೆ ಮಾಡಿದ್ದೀರೆಂದು ಕೇಳಿದ್ದಕ್ಕೆ, ಗುರುವಿನಾಣತಿಎಂಬ ಉತ್ತರ ಬಂತು. ಅವರ ಗುರುಗಳು ಮಾಲಯದ ಯಾತ್ರಿಕರಿಗೆ ಉಣಿಸಿದರೆ ಅದೇ ನೀವು ನನಗೆ ಮಾಡುವ ಸೇವೆಯಾಗುತ್ತದೆಎಂದಿದ್ದರಂತೆ. ಹೀಗಾಗಿ ಅವರ ಭಕ್ತ ಪಂಗಡವೆಲ್ಲ ಬಿಳಿಯ ಬಟ್ಟೆ ಧರಿಸಿ ನಿಂತು ಅಡುಗೆ ಮಾಡುತ್ತಾರೆ, ಬಡಿಸುತ್ತಾರೆ, ಮೇಜು ಶುಚಿಗೊಳಿಸುತ್ತಾರೆ, ತಟ್ಟೆ ತೊಳೆಯುತ್ತಾರೆ, ಕೊನೆಗೆ ಧನ್ಯವಾದಎಂದರೆ ಕೇಳಲು ಪುರುಸೊತ್ತಿಲ್ಲದವರಂತೆ ಮತ್ತೊಂದಿಷ್ಟು ಜನರನ್ನು ಕರೆತರಲು ಓಡುತ್ತಾರೆ. ಒಟ್ಟಾರೆ ಇದನ್ನು ಂಗರೆನ್ನಲಾಗುತ್ತದೆ.
ಸಿಕ್ಖರ ಮೊದಲ ಗುರು ನಾನಕರು ಶುರು ಮಾಡಿದ ಪರಂಪರೆ ಇದು. ಲಂಗರ್ ಎಂದರೆ ಸಿಕ್ಖರ ಭಾಷೆಯಲ್ಲಿ ಉಚಿತ ಭೊಜನ ಎಂದರ್ಥ. ಜಾತೀಯ ಪದ್ಧತಿ ತೀವ್ರವಾಗಿದ್ದ ಕಾಲಕ್ಕೆ ಮುಟ್ಟಿಸಿಕೊಳ್ಳಬೇಡಿಎಂಬುದೇ ಧರ್ಮವಾಗಿ ಪ್ರಚಲಿತವಾಗಿದ್ದ ಕಾಲಕ್ಕೆ ಎಲ್ಲ ಜನರನ್ನು ಒಂದೆಡೆ ಕೂರಿಸಿ ಊಟ ಹಾಕುವ ಪೃಥೆ ಶುರು ಹಾಕಿಕೊಟ್ಟಿದ್ದು ನಾನಕರೇ. ಬಡವ – ಸಿರಿವಂತರು ಸಮಾನರಾಗಿ ಕುಳಿತು, ಎಲ್ಲ ಜಾತಿಯವರೂ ಒಂದೆಡೆ ಸೇರಿ ಊಟ ಮಡುವುದಿದ್ದರೆ ಅದು ಲಂಗರಿನಲ್ಲಿ ಮಾತ್ರ ಕಂಡುಬರುವಂತಹದ್ದು. ಸ್ವತಃ ಅಕ್ಬರನೂ ಲಂಗರಿಗೆ ಮಾರು ಹೋಗಿ ಸಾಮಾನ್ಯರೊಂದಿಗೆ ಕುಳಿತು ಊಟ ಮಾಡಿದ್ದನೆಂದು ಕಥೆ ಹೇಳುತ್ತಾರೆ. ಮುಂದೆ ಕೊನೆಯ ಗುರು ಗೋವಿಂದ ಸಿಂಗರೂ ಎಲ್ಲರಿಗೂ ಉನಿಸುವ ಲಂಗರುಗಳನ್ನು ನಡೆಸುವುದು ಸಿಕ್ಖರ ಕರ್ತವ್ಯವೆಂಬಂತೆ ಬೋಧಿಸಿಹೋದರು. ಅಷ್ಟೇ ಅಲ್ಲ, ಆಗಾಗ ಲಂಗರುಗಳಿಗೆ ಮಾರುವೇಷದಿಂದ ಭೆಟಿಕೊಟ್ಟು ಅದನ್ನು ಸರಿಯಾಗಿ ನಡೆಸುತ್ತಿರುವವರನ್ನು ಮುಕ್ತಕಂಠದಿಂದ ಹೊಗಳುತ್ತಿದ್ದರಂತೆ. ಈ ಶ್ರದ್ಧೆ ಇಂದಿಗೂ ಹಾಗೆಯೇ ಉಳಿದಿದೆ. ಲಂಗರಿಗೆ ಬಂದು, ವ್ಯಕ್ತಿಯೊಬ್ಬ ಊಟ ಮಾಡಿ ಸಂತೃಪ್ತಿಯಿಂದ ಹೊರಟರೆ ಸಿಕ್ಖನೊಬ್ಬನ ಪಾಲಿಗೆ ಗುರುವಿನ ಮುಖದಲ್ಲಿಯೇ ನಗು ಕಂಡಷ್ಟು ಸಂತೋಷ.
ಸೇವೆ ಅಂದಾಕ್ಷಣ ಕ್ರಿಶ್ಚಿಯನ್ನರನ್ನು ನೆನಪಿಸಿಕೊಳ್ಳುವವರೆಲ್ಲ ಸಿಕ್ಖರನ್ನು ಹತ್ತಿರದಿಂದ ನೋಡಬೇಕು. ಅವರ ಸೇವಾ ಮನೋಭಾವ ಅನುಪಮವಾದುದು. ಅಮೃತಸರದ ಚಿನ್ನದ ಮಂದಿರದ ಆವರಣದಲ್ಲಿ ಲಂಗರಿನ ಹೆಸರಿನಲ್ಲಿ ಪ್ರತಿನಿತ್ಯ ಒಂದು ಲಕ್ಷ ಜನರಾದರೂ ಊಟ ಮಾಡುತ್ತಾರೆ. ರೊಟ್ಟಿ ಬಡಿದುವವ ಬುಟ್ಟಿಯಲ್ಲಿ ತುಂಬಿ ತರುತ್ತಾನೆ. ಒಂದೊಂದೇ ರೊಟ್ಟಿ ನೀಡುತ್ತ ಸಾಗುತ್ತಾನೆ. ಕುಳಿತವ ಅದು ತಟ್ಟೆಗೆ ಬೀಳಲಿ ಎಂದು ಕಾಯುವುದಿಲ್ಲ. ಎರಡೂ ಕೈಗಳಿಂದ ಅದನ್ನು ಸ್ವೀಕರಿಸಿ ಗುರುವಿಗೆ ವಂದಿಸಿ ತಿನ್ನುತ್ತಾನೆ. ದೊಡ್ಡ ದೊಡ್ಡ ಅಧಿಕಾರಿಗಳೂ ಬಡಿಸುವುದಕ್ಕೆ ನಿಂತಿರುತ್ತಾರೆ. ಅವರ ಹೆಂಡತಿ ಮಕ್ಕಳು ತಟ್ಟೆ ತೊಳದು, ಒರೆಸಿಡುವ ಜವಾಬ್ದಾರಿ ಹೊರುತ್ತಾರೆ. ಈ ರೀತಿಯ ಲಂಗರು ಪ್ರತಿ ಗುರುದ್ವಾರದಲ್ಲೂ ನಡೆಯುತ್ತದೆ. ಅವಕ್ಕೆ ದಾನ ಕೊಡಲು ದೊಡ್ಡದೊಂದು ಪೈಪೋಟಿಯೇ ನಡೆಯುತ್ತದೆ. ಕಳೆದ ವರ್ಷ ರಾಮದೇವ್ ಬಾಬಾರ ತಂಡದ ಮೇಲೆ ಕೇಂದ್ರ ಸರ್ಕಾರ ರಾತ್ರಿಯ ವೇಳೆ ಅತ್ಯಾಚಾರ ನಡೆಸಿತಲ್ಲ, ಆಗ ಐವತ್ತು ಸಾವಿರದಷ್ಟು ಜನ ಚೆಲ್ಲಾಪಿಲ್ಲಿಯಾಗಿಬಿಟ್ಟರು. ಜನರಿಗೆ ಬೆಳಕು ಕಂಡಿದ್ದು ಎರಡು ಕಿಲೋಮೀಟರುಗಳಾಚೆಯ ಬಾಂಗ್ಲಾ ಸಾಹೇಬ್ ಗುರುದ್ವಾರದ್ದು ಮಾತ್ರ. ಅಷ್ಟೂ ಜನಕ್ಕೆ ನಿಯಮಿತವಾಗಿ ಊಟ ಕೊಟ್ಟು ತತ್‌ಕ್ಷಣದ ವ್ಯವಸ್ಥೆ ಮಾಡಿಕೊಟ್ಟವರೂ ಗುರುದ್ವಾರದವರೇ!
ಈ ಆನಂದಕ್ಕಾಗಿ ಸಿಕ್ಖರು ಎಂತಹ ಕಷ್ಟ ಎದುರಿಸಲೂ ಸಿದ್ಧ. ಇತ್ತೀಚೆಗೆ ಅಮರನಾಥಕ್ಕೆ ಹೋದಾಗ ಅದು ಸ್ಪಷ್ಟವಾಯ್ತು. ಅದು ಬಾಲ್ಟಾಲ್ ಇರಲಿ, ಪಹಲ್‌ಗಾಂವ್ ಇರಲಿ. ಯಾತ್ರೆಯ ದಿನಗಳಲ್ಲಿ ಹತ್ತಾರು ಲಂಗರುಗಳು ಲಕ್ಷಾಂತರ ಭಕ್ತರ ಹಸಿವು ತಣಿಸುತ್ತ ಸುಖಿಸುತ್ತವೆ. ಹೆಚ್ಚು ಕಡಿಮೆ ದಿನಕ್ಕೆ ಹದಿನೈದು ಗಂಟೆಗಳ ಕಾಲ ನಿರಂತರವಾಗಿ ಊಟ ಬಡಿಸುತ್ತಲೇ ಇರುತ್ತವೆ. ಬಿಟ್ಟಿ ಊಟ ಅಂತ ಒಂದಷ್ಟು ಅನ್ನ ಬೇಯಿಸಿ ಪರಮ ತಿಳಿಯಾದ ಸಾರು ಮಡಿ ಹುಯ್ದುಬಿಡುವುದಿಲ್ಲ. ರೊಟ್ಟಿ, ಅದಕ್ಕೆ ಒಂದಷ್ಟು ಬಗೆಯ ಪಲ್ಯಗಳು, ಅನ್ನದೊಂದಿಗೆ ಸಾಂಬಾರು, ರಸಂ, ಮೊಸರು. ಕೆಲವೆಡೆ ಬಗೆಬಗೆಯ ಚಾಟ್‌ಗಳು. ಊಟದ ನಂತರ ಎಲೆ ಅಡಿಕೆ; ಗೋಡಂಬಿ – ಬಾದಾಮಿಗಳು! ನವು ಮನೆಯಲ್ಲಿಯೂ ಇಷ್ಟೊಂದು ಬಗೆ ಊಹಿಸುವುದು ಅಸಾಧ್ಯ. ತರುಣ ಪೀಳಿಗೆ ಹಾಳಾಗಿದೆ ಅಂತೀವಲ್ಲ, ಅಮರನಾಥದ ಲಂಗರ್ ಕ್ಯಾಂಪುಗಳಲ್ಲಿ ಸಂಬಳಕ್ಕೆ ದುಡಿಯೋದು ಅಡುಗೆ ಮಾಡುವಂತಹ ಕೆಲವರು ಮಾತ್ರ. ಉಳಿದವರೆಲ್ಲ ತಿಂಗಳುಗಟ್ಟಲೆ ಊರು ಬಿಟ್ಟು, ಕೆಲಸ ಬಿಟ್ಟು ಸೇವೆಗೆಂದು ಕಟಿ ಬದ್ಧರಾದವರೇ. ಅದರಲ್ಲೂ ಯುವಕ ಯುವತಿಯರ ಸಂಖ್ಯೆಯೇ ಹೆಚ್ಚು. ಹಗಂತ ಅಮರನಾಥಕ್ಕೆ ಹೋಗುವವರಲ್ಲಿ ಬಹುತೇಕರು ಸಿಕ್ಖ್ ಜನಾಂಗಕ್ಕೆ ಸೇರಿದವರಲ್ಲ. ಅವರಿಗೆ ಗುರು ಗ್ರಂಥ ಸಾಹೇಬವೇ ಸಕಲ ತೀರ್ಥ. ಇಷ್ಟಾದರೂ ಶ್ರದ್ಧೆಯಿಂದ ಮಾಡುವ ಸೇವೆಗೆ ಬೆಲೆ ಕಟ್ಟಲಾದೀತೆ?
ಸೇವೆಯನ್ನು ಬದಿಗಿಡಿ. ಅಮರನಾಥ, ಕಾಶ್ಮೀರದ ನಟ್ಟನಡುವಿನ ಪ್ರದೇಶ. ಶಿವನ ದರ್ಶನದ ಹೆಸರಿನಲ್ಲಿ ಹಿಂದೂಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಹೋಗುತ್ತಾರಲ್ಲ, ಇದರ ಬಹುಪಾಲು ಲಾಭ ಅಲ್ಲಿನ ಮುಸಲ್ಮಾನರಿಗೇ! ಲೋಕಲ್ ಬಸ್ಸುಗಳು ಅವರದೇ, ಕುದುರೆಗಳೂ ಅವರದೇ. ಪಲ್ಲಕ್ಕಿ ಹೊರುವವರು ಅವರೇ, ದಾರಿಯುದ್ದದ ಅಂಗಡಿಗಳೂ ಅವರವೇ. ಅಮರ ನಾಥ ಯಾತ್ರೆಯ ಎರಡು ತಿಂಗಳ ಅವಧಿಯಲ್ಲಿ ವರ್ಷಕ್ಕಾಗುವಷ್ಟು ದುಡಿದುಬಿಡುತ್ತಾರೆ. ಇವೆಲ್ಲವುಗಳೊಟ್ಟಿಗೆ ಊಟಕ್ಕೂ ಅವರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದುಬಿಟ್ಟರೆ ಶುದ್ಧವಾದ ರುಚಿಯಾದ, ಹಾಗೆಯೇ ಕಡಿಮೆ ಬೆಲೆಯ ಊಟಕ್ಕೆ ತತ್ವಾರವಾಗುತ್ತಿತ್ತು. ಈ ಕಾರಣಕ್ಕಾಗಿಯೂ ಸಿಕ್ಖರಿಗೆ ಥ್ಯಾಂಕ್ಸ್ ಹೇಳಲೇಬೇಕು.

Langar nalli kannaDigara taNda...

ಅಂದಹಾಗೆ, ಈ ಬಾರಿ ಅಮರನಾಥನ ದರ್ಶನಕ್ಕೆ ಹೋದವರು ಕನ್ನಡಿಗರಿಗೂ ಧನ್ಯವಾದ ಹೇಳಬೇಕು. ಏಕೆ ಗೊತ್ತೇ? ಬಾಲ್ಟಾಲಿನಲ್ಲಿ ಒಂಭತ್ತನೆಯ ನಂಬರಿನ ಲಂಗರಿನಲ್ಲಿ ದೆಹಲಿಗರೊಂದಿಗೆ ಅರ್ಧಭಾಗ ಹಂಚಿಕೊಂಡು ಯಾತ್ರಿಕರಿಗೆ ಇಡ್ಲಿ ದೋಸೆ ಉಪ್ಪಿಟ್ಟು ಅನ್ನ – ಸಾರು ಬಡಿಸಿ ಉಪಚರಿಸುತ್ತಿದ್ದುದು ಕನ್ನಡಿಗರೇ!
ಅದೊಂದು ರೋಚಕವಾದ ಕಥೆ. ಬಳ್ಳಾರಿಯ ಕೊಟ್ಟೂರಿನ ತರುಣ ಸತೀಶ್ ೧೯೯೮ರಲ್ಲಿ ಮೊದಲ ಬಾರಿಗೆ ಅಮರನಾಥಕ್ಕೆ ಹೋಗಿದ್ದರು. ಆಗೆಲ್ಲ ಅವರ ಮನೆಯಲ್ಲಿ ಕಷ್ಟಕಾಲ. ವ್ಯಾಪಾರವೂ ಕೈಕೊಟ್ಟಿತ್ತು. ಒಂದಡಿ ಎತ್ತರದ ಮಂಜಿನ ಶಿವಲಿಂಗದ ಮುಂದೆ ನಿಂತು ಯಾರ ಮುಂದೆಯೂ ಬೇಡದಂತೆ ಮಾಡಪ್ಪಎಂದು ಕೇಳಿಕೊಂಡರು. ಹಾಗೆಯೇ ಆಯ್ತು. ಒಂದು ವರ್ಷದೊಳಗೆ ವ್ಯಾಪಾರ ವೃದ್ಧಿಯಾಯ್ತು. ಸತೀಶ್ ಮತ್ತೆ ಅಮರನಾಥನೆದುರಿಗೆ ನಿಂತರು. ಈ ಬಾರಿ ಅಮರನಾಥ ಯಾತ್ರಾ ಸಮಿತಿ ರಚಿಸಿಕೊಂಡು ಮತ್ತೊಂದಷ್ಟು ಜನರನ್ನು ಜತೆಗೆ ಕರೆತಂದಿದ್ದರು. ಅಲ್ಲಿಂದ ಹತ್ತು ವರ್ಷ ಬರಿಯ ಯಾತ್ರೆಯೇ. ವರ್ಷವರ್ಷವೂ ಕನ್ನಡದ ಯಾತ್ರಿಕರ ದಂಡು ಅಮರನಾಥನ ಬುಡದಲ್ಲಿರುತ್ತಿತ್ತು. ಪ್ರತಿ ಬಾರಿ ಹೋದಾಗಲೂ ಸತೀಶ್ ಲಂಗರ್‌ಗಳನ್ನು, ಅಲ್ಲಿನ ವ್ಯವಸ್ಥೆಯನ್ನು ಕಂಡು ರೋಮಾಂಚಿತರಾಗುತ್ತಿದ್ದರು. ನಾವೂ ಹೀಗೆ ಮಾಡಬೇಕಲ್ಲ ಎಂದು ಚಿಂತಿಸುತ್ತಲೇ ಇರುತ್ತಿದ್ದರು.
೨೦೦೯ರಲ್ಲಿ ಮುಹೂರ್ತ ಕೂಡಿ ಬಂತು. ಒಟ್ಟಾರೆ ೪೩ ಜನ ಯಾತ್ರಿಕರು ದರ್ಶನಕ್ಕೆ ಬಂದಿದ್ದರು. ಹಿಮಲಿಂಗ ಮನಸ್ಸಿಗೆ ತಂಪೆರೆದಿತ್ತು. ಸತೀಶ್ ಮತಾಡುತ್ತಾ ದರ್ಶನವಾಯ್ತು, ಮುಂದಿನ ವರ್ಷದಿಂದ ನಾವೂ ಸೇವೆ ಮಾಡೋಣವೆ?ಎಂದು ಪ್ರಶ್ನಿಸಿದಾಗ ಬಹಳ ಮಂದಿ ಉತ್ಸಾಹ ತೋರಿದರು. ಯಾತ್ರಿಕರು ಮರಳಿ ಬಂದಾಗ ಅಚ್ಚರಿ ಕಾದಿತ್ತು. ಅಮರನಾಥನ ಮುಂದೆ ನಿಂತು ಕೇಳಿಕೊಂಡದ್ದೆಲ್ಲ ನೆರವೇರಿತ್ತು. ಮಗಳ ಮದುವೆ, ಸ್ವಯಂ ನಿವೃತ್ತಿ, ಉದ್ಯೋಗ, ವ್ಯಾಪಾರ ಎಲ್ಲವೂ. ಕೃತಜ್ಞತೆ ಅರ್ಪಿಸಬೇಕಲ್ಲ? ಎಲ್ಲರು ಸತೀಶ್ ಹಿಂದೆ ಬಿದ್ದರು. ನಮ್ಮದೊಂದು ಲಂಗರು ಮಾಡಿಯೇಬಿಡೋಣ ಎಂದರು. ಹಣ ಸಂಗ್ರಹ ಶುರುವಾಯ್ತು. ವಸ್ತುಗಳನ್ನು ಕೊಂಡರು. ಬಲುದೂರದ ಬಾಲ್ಟಾಲಿಗೆ ಕಳಿಸಿದರು. ಎಂಟ್ಹತ್ತು ಜನ ಸೇವಾಕಾರರಾಗಿ ಹೊರಟರು. ತುಮಕೂರಿನಿಂದ ಅಡುಗೆಭಟ್ಟರನ್ನೂ ಒಯ್ಯಲಾಗಿತ್ತು. ಸಾವಿರಾರು ಜನರಿಗೆ ಕನ್ನಡದ ಊಟ ಬಡಿಸಿದ ಆನಂದ ಎಲ್ಲರಿಗೂ. ಮರಳಿ ಬರುವಾಗ ದಿಗ್ವಿಜಯದ ಸಂತಸ ಅವರಲ್ಲಿ ಮೂಡಿತ್ತು.
ಮರುವರ್ಷದಿಂದ ಘಟಾನುಘಟಿಗಳೇ ಅವರ ಸಹಾಯಕ್ಕೆ ನಿಂತರು. ತುಮಕೂರಿನ ಭಗವಾನ್-ಭಗವತಿ ರೈಸ್‌ಮಿಲ್‌ನ ರಮೇಶ್ ಅಷ್ಟೂ ದಿನಕ್ಕಾಗುವಷ್ಟು ಅಕ್ಕಿ ಒಪ್ಪಿಸಿದರು. ಬೆಂಗಳೂರಿನ ರವಿಕುಮಾರ್ ತಮ್ಮ ತೋಟದ ಉತ್ಪನ್ನಗಳನ್ನು ಕೊಟ್ಟರು. ಹಣ ಹರಿದುಬಂತು. ಸೇವೆಗೆ ಸಿದ್ಧವಾಗಿದ್ದವರು ಇದ್ದರು. ಮತ್ತೆ ಹೊರಟರು. ಹೀಗೆ ಸೇವೆಗೈಯುತ್ತ ಇದು ನಾಲ್ಕನೆ ವರ್ಷ! ಈ ಬಾರಿ ನಲವತ್ತು ದಿನಗಳ ಕಾಲ ಮನೆ ಬಿಟ್ಟು ಇದ್ದವರಿದ್ದಾರೆ. ಹತ್ಹತ್ತು ದಿನಗಳ ಆವರ್ತನವಂತೂ ನಡೆದೇ ಇರುತ್ತದೆ. ಗಂಡ ಹೆಂಡತಿ ಒಟ್ಟಿಗೆ ಸೇವೆಗೆ ನಿಂತ ಅನಿತಕ್ಕ, ರಂಗನಾಥರ ಉದಾಹರಣೆಯೂ ಇದೆ. ಆ ಚಳಿಯಲ್ಲಿ ಮುಖಕ್ಕೊಂದು ಮಫ್ಲರ್ ಸುತ್ತಿಕೊಂಡು ಬೆಚ್ಚಗಿನ ಸ್ವಟರ್ ಹಾಕಿಕೊಂಡು ಉತ್ಸಾಹದಿಂದ ಓಡಾಡುತ್ತ ಸ್ಫೂರ್ತಿ ತುಂಬುವ ಸಹನಾರವರ ಆದರ್ಶವೂ ಇದೆ.
ಕನ್ನಡದ ಲಂಗರೊಂದು ತೆರೆದುಕೊಂಡಿದ್ದರ ಲಾಭವೇನು ಗೊತ್ತೆ? ಬೇಸ್ ಕ್ಯಾಂಪುಗಳಲ್ಲಿ ಕೆಲಸ ಮಾಡುವ ಕನ್ನಡಿಗರಿಗೆ, ಊರು ಬಿಟ್ಟು ಬಂದು ಸೆವೆಗೈಯ್ಯುತ್ತಿರುವ ಕನ್ನಡದ ಸೈನಿಕರಿಗೆ ಇದು ಮೀಟಿಂಗ್ ಪಾಯಿಂಟು. ಅಕಸ್ಮಾತ್ ಕರ್ನಾಟಕದಿಂದ ಹೊರಟವರು ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆಂದರೆ ಈ ಲಂಗರಿನಲ್ಲಿ ಸರಕ್ಕನೆ ಸಹಾಯ ದೊರೆಯುತ್ತದೆ. ಬೆಟ್ಟ ಹತ್ತುವ ಕನ್ನಡಿಗರಿಗೆ ಒಂದಷ್ಟು ಬಿಸ್ಕತ್ತುಗಳು, ಚಾಕೊಲೇಟ್‌ಗಳು, ನೀರಿನ ಬಟಲಿಗಳು ಇಲ್ಲಿ ಉಚಿತವಾಗಿ ದೊರೆಯುತ್ತವೆ. ನಮ್ಮವರೆಂಬ ಪ್ರೀತಿಯ ಕಾರಣಕ್ಕಾಗಿ ಅಷ್ಟೆ.
ಬಿಡಿ. ಸತೀಶ್ ಮತ್ತವರ ಬಳಗ ಮುಂದಿನ ವರ್ಷದ ಸೇವೆಗೂ ಸಜ್ಜಾಗುತ್ತಿದೆ. ಈ ಬಾರಿ ನಮ್ಮಲ್ಲಿ ಕೆಲವರು ಹೋಗುತ್ತೇವೆ. ಅಮರನಾಥನ ದರ್ಶನಕ್ಕಲ್ಲ; ಆತನ ಭಕ್ತರ ಸೇವೆಗೆ. ನೀವೂ ಬನ್ನಿ, ಜೊತೆಯಲ್ಲಿ ಹೋಗೋಣ.