ಭಾರತವೇಕೆ ಚೀನಾದೆದುರು ಮಂಡಿಯೂರಬೇಕು!?

ಈಶಾನ್ಯ ರಾಜ್ಯದತ್ತ ನಮ್ಮ ರಕ್ಷಣಾ ಸಚಿವರು ಕಾಲಿಟ್ಟರೆ ದ್ವಿಪಕ್ಷೀಯ ಸಂಬಂಧದ ಬೆದರಿಕೆ ಹಾಕುವ ಚೀನಾ, ಟಿಬೆಟ್ಟನ್ನು ನುಂಗಿ ನೀರು ಕುಡಿದಿದೆಯಲ್ಲ, ನಾವು ಚಕಾರ ಎತ್ತಿದ್ದೇವಾ? ಒಮ್ಮೆಯಾದರೂ ನಾವು ಪ್ರಕಟಿಸುವ ಚೀನಾ ನಕ್ಷೆಯಲ್ಲಿ ಟಿಬೇಟನ್ನು ಮಾಯಮಾಡಿ ಕಂಕುಳನ್ನು ಚಿವುಟಿದ್ದೇವಾ? ತೈವಾನಿನ ಪರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುವ ಬೆದರಿಕೆ ಒಡ್ಡಿದ್ದೇವಾ?

ಜಪಾನಿನಲ್ಲಿ ಬಲಪಂಥೀಯ ರಾಷ್ಟ್ರವಾದೀ ಸರ್ಕಾರ. ಅಲ್ಲಿನ ನಾಯಕ ’ಆಬೆ’ ಕುದಿಯುವ ದೇಶಭಕ್ತಿಯೊಂದಿಗೇ ದೇಶವಾಳಲು ಬಂದವನು. ದಕ್ಷಿಣ ಕೊರಿಯಾದಲ್ಲಿ ಪಾರ್ಕ್ ತನ್ನ ನೇತೃತ್ವದಲ್ಲಿ ಯುದ್ಧವಾದರೂ ಸೈ, ರಾಷ್ಟ್ರ ಸ್ವಾಭಿಮಾನಿಯಾಗಿರಬೇಕೆಂದು ಭಾವಿಸುವಾಕೆ. ಅದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾದ ಕಿಮ್ ಅಮೆರಿಕಾಕ್ಕೆ ಕಣ್ಣು ಬಿಟ್ಟು ಕುಳಿತಿರುವವ. ಅತ್ತ ಚೀನಾದಲ್ಲಿ ಕ್ಸಿ ಜಿಂಪಿಂಗ್ ತನ್ನ ಅವಧಿಯಲ್ಲಿ ಚೀನಾದ ನಕ್ಷೆಯನ್ನು ವಿಸ್ತರಿಸಿ ಅಗಾಧವಾಗಿ ಬೆಳೆದುಬಿಡಬೇಕೆಂಬ ಆಶಯ ಹೊತ್ತಿರುವವನು. ಇಡಿಯ ಏಷ್ಯಾ ಮಹತ್ವಾಕಾಂಕ್ಷಿ, ರಾಷ್ಟ್ರ ಚಿಂತಕರಿಂದ ಕೂಡಿದ್ದರೆ, ಭಾರತವೊಂದೇ ನೆಹರೂ ಚಪ್ಪಲಿಯಲ್ಲಿ ಕಾಲಿಟ್ಟು ನಡೆವ ಸೋನಿಯಾರ ಆಣತಿಗೆ ತಲೆಬಾಗಿ ಹೆಜ್ಜೆ ಇಡುವ ಮನಮೋಹನ ಸಿಂಗರ ನೇತೃತ್ವ ಹೊಂದಿರುವುದು. ಹಾಗೆ ನೋಡಿದರೆ ಭಾರತದ ಪಾಲಿಗೆ ಅತ್ಯಂತ ಕೆಟ್ಟ ಕಾಲ ಇದು.

chinಕೆಲವು ದಿನಗಳ ಹಿಂದೆ ಚೀನಾ – ಜಪಾನ್‌ಗಳ ನಡುವೆ ಇರುವ ಕೆಲವು ನಡುಗಡ್ಡೆಗಳನ್ನು ಜಪಾನ್ ಕೊಂಡುಕೊಂಡಿತು. ಇದರ ಬಳಿಯೇ ಇರುವ ಒಂದು ದ್ವೀಪದ ಕುರಿತಂತೆ ಈ ಎರಡೂ ರಾಷ್ಟ್ರಗಳ ನಡುವೆ ದೀರ್ಘ ಕಾಲದ ಕಿತ್ತಾಟವಿದೆ. ಈ ದ್ವೀಪವನ್ನು ಜಪಾನ್ ಸೆಂಕಾಕು ಅಂತ ಕರೆದರೆ, ಚೀನೀಯರು ಡಯೋಯು ಅಂತಾರೆ. ಪಕ್ಕದ ತೈವಾನಿಗಳೂ ಈ ದ್ವೀಪದ ಮೇಲೆ ತಮ್ಮ ಹಕ್ಕಿದೆ ಅನ್ನುತ್ತಾರಾದರೂ ಚೀನಾದ ಮೇಲಿನ ಕೋಪಕ್ಕೆ ಅವರು ಜಪಾನಿನ ಪರ. ಜಪಾನಿನಲ್ಲಿ ಆಬೆ ರಾಷ್ಟ್ರೀಯವಾದಿ ಸರ್ಕಾರ ಅಧಿಕಾರಕ್ಕೆ ಬಂದೊಡನೆ ಮೊದಲು ಮಾಡಿದ ಕೆಲಸ ಈ ದ್ವೀಪದ ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸಿದ್ದು. ರಾಷ್ಟ್ರದಲ್ಲಿ ಮೃತ ಸೈನಿಕರಿಗೆ ವಿಶೇಷ ಗೌರವ ಸಲ್ಲಿಸಿದ್ದು. ಇದನ್ನು ಸಹಿಸದ ಚೀನಾ ಸರ್ಕಾರ ತನ್ನ ಸೈನ್ಯದ ಏಳೆಂಟು ಹಡಗುಗಳನ್ನು ದ್ವೀಪದ ಬಳಿ ಕಳಿಸಿಯೇಬಿಟ್ಟಿತು. ಆಬೆ ಮುಲಾಜೇ ನೋಡಲಿಲ್ಲ. ’ಯುದ್ಧ ಮಾಡುವ ಮನಸಿಲ್ಲ. ಆದರೆ, ಅಗತ್ಯ ಬಿದ್ದರೆ ದೇಶದ ರಕ್ಷಣೆಗೆ ನಾವು ಎಲ್ಲಕ್ಕೂ ಸಿದ್ಧ’ ಎಂದುಬಿಟ್ಟರು. ಒಂದೆರಡು ಜಪಾನಿ ಜೆಟ್ ವಿಮಾನಗಳೂ ಈ ದ್ವೀಪದ ಮೇಲೆ ಹಾರಾಡಿದವು. ಚೀನಾದಲ್ಲಿರುವ ಜಪಾನೀ ರಾಯಭಾರಿ ತನ್ನ ದೇಶದ ಪರವಾಗಿ ಪ್ರತಿಭಟನೆ ವ್ಯಕ್ತಪಡಿಸಿದ. ಚೀನೀ ಸರ್ಕಾರ ತೆಪ್ಪಗಾಗಬೇಕಾಯ್ತು. ಚೀನಾದ ಜನ ಕುಂಯ್ಯೋ ಮರ್ರೋ ಅನ್ನುವಂತಾಯ್ತು.
ತೈವಾನಿನ ಸ್ವಾತಂತ್ರ್ಯದ ಕುರಿತಂತೆ ತನ್ನ ಹಳೆಯ ತಕರಾರನ್ನು ಮೆಲುಕು ಹಾಕುತ್ತಿರುವಾಗಲೇ ಪುಟ್ಟ ತೈವಾನ್ ಅಮೆರಿಕಾದ ಸಹಾಯದೊಂದಿಗೆ ಅಣ್ವಸ್ತ್ರವನ್ನು ಪ್ರಯೋಗಿಸುವ ಬೆದರಿಕೆ ಒಡ್ಡಿಬಿಟ್ಟಿತು. ಅಮೆರಿಕಾ ಕೂಡ ಸುಮ್ಮನಾಗದೆ ತೈವಾನಿನ ಕಾರಣಕ್ಕಾಗಿ ನಮ್ಮ ಸಂಬಂಧ ಹಾಳಾಗುವ ಎಲ್ಲ ಸಾಧ್ಯತೆಗಳಿವೆಯೆಂದು ಹೆದರಿಸಿಬಿಟ್ಟಿತು! ಚೀನಾ ಮತ್ತೆ ಬಾಲ ಮುದುರಿಕೊಂಡ ನಾಯಿಯಂತಾಯ್ತು.
ಉತ್ತರ ಕೊರಿಯಾವನ್ನು ಮೆಟ್ಟಿ ನಿಲ್ಲಲು ದಕ್ಷಿಣ ಕೊರಿಯಾಕ್ಕೆ ಅಮೆರಿಕಾ ಸಹಕಾರ ನೀಡುವುದನ್ನು ವಿರೋಧಿಸಿದ ಚೀನಾ, ತಾನು ಉತ್ತರ ಕೊರಿಯಾದ ಬೆನ್ನಿಗೆ ಆತುಕೊಂಡಿದ್ದನ್ನು ಯಾರು ಅಲ್ಲಗಳೆಯುತ್ತಾರೆ? ಆದರೆ ಜಾಗತಿಕ ಒತ್ತಡ ಹೇಗಿತ್ತೆಂದರೆ, ಉತ್ತರ ಕೊರಿಯಾದ ಬೆದರಿಕೆಯ ತಂತ್ರಕ್ಕೆ ಯಾರಾದರೂ ಮಣಿಯುವುದಿರಲಿ, ಸ್ವತಃ ಅಲ್ಲಿನ ಜನರೇ ಅಧ್ಯಕ್ಷರ ನೀತಿಗೆ ವಿರುದ್ಧವಾಗಿ ನಿಂತರು. ಚೀನಾಕ್ಕೆ ಮತ್ತೊಂದು ಸೋಲು.
ಮೇಲೆ ಹೇಳಿದ ಯಾವ ಸಮಸ್ಯೆಯೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕಂಡಿಲ್ಲ ನಿಜ. ಆದರೆ ಈ ಕ್ಷಣಕ್ಕೆ ಚೀನೀಯರ ಮನಸ್ಥೈರ್ಯ ಕದಡಿ ಹಾಕಲು ಸಾಕು. ಜಪಾನಿನ ವಿರುದ್ಧ ಚೀನಾದಲ್ಲಿ ಜನರು ಪ್ರತಿಭಟನೆಯನ್ನೆ ಮಾಡುವಷ್ಟು ಹಠ ತೋರಿದ್ದಂತೂ ಹೊಸ ಅಧ್ಯಕ್ಷರಿಗೆ ಕಿರಿಕಿರಿಯೇ ಸರಿ. ಇವುಗಳಿಂದ ಪಾರಾಗಲಿಕ್ಕೆ ಅವರಿಗಿದ್ದುದು ಒಂದೇ ಮಾರ್ಗ. ತಕ್ಷಣದ ಗೆಲುವು. ಸುಲಭವಾಗಿ ಸೋಲೊಪ್ಪುವ ರಾಷ್ಟ್ರವೊಂದರ ಮೇಲೆ ಆಕ್ರಮಣ ಮಾಡಿ ಜಯಶೀಲರಾಗಬೇಕು. ಅದಕ್ಕೆ ಅವರು ಹುಡುಕಿಕೊಂಡಿದ್ದು ಭಾರತವನ್ನು. ಹೀಗಾಗಿಯೇ ಅವರು ಲಡಾಖ್‌ನ ದೌಲತ್ ಬೆಗ್ ಓಲ್ಡಿಯೊಳಕ್ಕೆ ೧೯ ಕಿ.ಮೀಯಷ್ಟು ಬಂದದ್ದು, ಎರಡು ವಾರಗಳ ಕಾಲ ನಿಂತದ್ದು, ತಮ್ಮ ಸಾರ್ವಭೌಮತೆಯನ್ನು ಜಗಜ್ಜಾಹೀರುಗೊಳಿಸಿ ಹೊರಟಿದ್ದು.
ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನ ವಿಜ್ಞಾನಿ ಬ್ರಹ್ಮ ಚೆಲ್ಲಾನಿ ’ಅನ್ಯ ಮಾರ್ಗಗಳಿಂದ ಪಡೆಯಲಾಗದ್ದನ್ನು ಚೀನಾ ಈ ದಿಕ್ಕಿನಿಂದ ಪಡೆದುಕೊಂಡಿದೆ. ಶಾಂತ ನೀತಿಗೆ ಸಿಕ್ಕ ಜಯವೆಂದು ಭಾರತ ಎಷ್ಟೇ ಹೇಳಿಕೊಳ್ಳಲಿ, ಚೀನಾ ಭಾರತ ತನ್ನ ಮೂಗನ್ನು ನೆಲಕ್ಕೆ ಉಜ್ಜುವಂತೆ ಮಾಡುವಲ್ಲಿ ಸಫಲವಾಗಿದೆ’ ಎಂದು ಹೇಳಿಕೆ ಕೊಟ್ಟರು.
ಹೌದು. ೫೦ ವರ್ಷಗಳ ಹಿಂದೆ ಯುದ್ಧ ಮಾಡಿ ಸೋತಿದ್ದೆವು. ಇಂದು ಯುದ್ಧಕ್ಕೆ ಮುನ್ನವೇ ಸೋತು ಹೋಗಿದ್ದೇವೆ. ಈ ದೇಶದ ನಾಯಕರು ಅಂದಿಗೂ ಇಂದಿಗೂ ಬದಲಾಗಲೇ ಇಲ್ಲ. ೧೯೫೦ರಲ್ಲಿಯೇ ಚೀನಾದ ಬುದ್ಧಿಯನ್ನು ಗ್ರಹಿಸಿದ ಪಟೇಲರು ನೆಹರೂಗೆ ದೀರ್ಘ ಪತ್ರ ಬರೆದು ಎಚ್ಚರಿಸಿದ್ದರು. ಟಿಬೆಟ್‌ನ ವಿಚಾರದಲ್ಲಿ ಭಾರತದ ರಾಯಭಾರಿ ಕೇಳಿದ ಪ್ರಶ್ನೆಗೆ ಚೀನಾ ಉತ್ತರಿಸಿದ ರೀತಿ ಕಂಡು ಪಟೇಲರು ಕುಪಿತರಾಗಿದ್ದರು. ಚೀನಾಕ್ಕೆ ನಮ್ಮ ರಾಯಭಾರಿ ತಗ್ಗಿಬಗ್ಗಿ ನಡೆಯಬೇಕಾದ ಯಾವ ಅಗತ್ಯವೂ ಇಲ್ಲವೆಂದು ಬಿಟ್ಟಿದ್ದರು. ಅದಾದ ೫೦ ವರ್ಷಗಳಲ್ಲಿ ಕಳೆದ ಯುಪಿಎ ಅವಧಿಯಲ್ಲಿ ನಮ್ಮ ರಾಯಭಾರಿಯನ್ನು ಅರ್ಧರಾತ್ರಿಯಲ್ಲಿ ಎಬ್ಬಿಸಿ, ಕಚೇರಿಗೆ ಕರೆಸಿ ಚೀನಾ ಕುಹಕವಾಡಿತ್ತು. ಎರಡೂ ಸಂದರ್ಭಗಳಲ್ಲಿ ನಮ್ಮ ಪ್ರತಿಕ್ರಿಯೆ ಶೂನ್ಯ.
ಪಟೇಲರ ದೂರದೃಷ್ಟಿ ಅದ್ಭುತವೇ ಸರಿ. ೧೨ ವರ್ಷಗಳಷ್ಟು ಮೊದಲೇ ಚೀನಾದ ಮನೋಗತವನ್ನು ಅವರು ಅರ್ಥೈಸಿಕೊಂಡಿದ್ದರು. ನೆಹರೂ ಯುದ್ಧಕ್ಕೆ ಹನ್ನೆರಡು ನಿಮಿಷ ಮುಂಚಿನವರೆಗೂ ’ಹಿಂದೀ ಚೀನೀ ಭಾಯಿ ಭಾಯಿ’ ಜಪ ಮಾಡುತ್ತಿದ್ದರು. ಅವರಿಗೆ ಚೀನಾ – ಇಂಡಿಯಾ ಬಾಂಧವ್ಯದ ’ಚಿಂಡಿಯಾ’ದ ಕಲ್ಪನೆ ಇತ್ತು. ಚೀನಾಕ್ಕೆ ಮಾತ್ರ ಅಂತಹ ಯಾವ ಭ್ರಮೆಯೂ ಇರಲಿಲ್ಲ. ಗಡಿಯುದ್ದಕ್ಕೂ ರಸ್ತೆ ಕಟ್ಟಿಕೊಂಡಿತು. ನಮ್ಮ ಪ್ರತಿಭಟನೆಯೇ ಇಲ್ಲದ್ದನ್ನು ಕಂಡು ಆಗಾಗ ನಮ್ಮ ಗಡಿಯೊಳಗೆ ಬಂದು ಹೋಯಿತು. ಕೊನೆಗೊಮ್ಮೆ ದಾಳಿಯನ್ನೂ ಮಾಡಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಛಿದ್ರಗೈದಿತು. ಅವತ್ತು ನೆಹರೂ ಸೈನಿಕರಿಗೆ ಗಡಿಯಿಂದ ಹಿಂದೆ ಬರುವಂತೆ ಹೇಳಿದರಲ್ಲದೆ ನನಗೆ ಅಸ್ಸಾಮ್‌ನ ಜನರ ಕುರಿತಂತೆ ಕಾಳಜಿ ಇದೆ ಎಂಬರ್ಥದ ಮಾತನಾಡಿ ಇಡಿಯ ಈಶಾನ್ಯ ರಾಜ್ಯಗಳನ್ನು ಚೀನಾದತ್ತ ತೂರಿಬಿಟ್ಟರು. ಇತಿಹಾಸ ಮರುಕಳಿಸಿದೆ. ಚೀನಾ ಗಡಿಯುದ್ದಕ್ಕೂ ಹಾಕಿದ ರೇಲ್ವೆ ಹಳಿಗಳನ್ನು ನಾವು ಪ್ರಶ್ನಿಸಲಿಲ್ಲ. ಕಳೆದ ೩ ವರ್ಷದಲ್ಲಿ ೬೦೦ ಬಾರಿ ಚೀನೀ ಸೈನಿಕರು ಭಾರತದೊಳಕ್ಕೆ ಬಂದು ಹೋಗಿದ್ದಾರೆ. ಇದರ ಬಗ್ಗೆ ಸ್ಪಷ್ಟ ಮಾಹಿತಿ ಇದ್ದಾಗಲೂ ನಾವು ಗುರಾಯಿಸಲಿಲ್ಲ. ಅಷ್ಟಾದ ನಂತರವೇ ಅವರು ಧೈರ್ಯ ತೋರಿ ಗಡಿಯೊಳಕ್ಕೆ, ಒಳಕ್ಕೆ ನುಗ್ಗಿ ಬಂದು ೧೯ ಕಿ.ಮೀಗಳಷ್ಟು ಸ್ಥಳವನ್ನು ವ್ಯಾಪಿಸಿಕೊಂಡಿದ್ದು. ಅಷ್ಟಾದಾಗಲೂ ನಾವು ಪ್ರತಿಭಟಿಸುವ ಸಾಮರ್ಥ್ಯ ತೋರಿದೆವಾ? ಮಾತುಕತೆಗೆ ಕುಂತೆವು. ಎರಡು ಮೀಟಿಂಗ್‌ಗಳು ಮುರಿದುಬಿದ್ದ ಮೇಲೆ ಸೈನಿಕರನ್ನೊಯ್ದು ಅವರೆದುರಿಗೆ ನಿಲ್ಲಿಸಿದೆವು. ಅವರ ಟೆಂಟಿನಿಂದ ೩೦೦ ಮೀಟರ್ ದೂರದಲ್ಲಿ ನಾವು ಟೆಂಟುಗಳನ್ನು ಹಾಕಿಕೊಂಡು ನಿಂತೆವು. ಇನ್ನು ಮುಂದಡಿಯಿಟ್ಟರೆ ನೋಡಿ ಅಂತ. ವಾರೆವ್ಹಾ.. ೧೯ ಕಿ.ಮೀ ಬಂದಿರೋದು ನಮ್ಮ ಗಡಿಯೊಳಕ್ಕೆ. ನಾವು ಇನ್ನು ಮುಂದೆ ಬರಬೇಡಿ ಅಂತಿದ್ದೇವೆಯೇ ಹೊರತು ಇಲ್ಲಿಂದ ಕಾಲ್ತೆಗೆಯಿರಿ ಅಂತಲ್ಲ. ರಕ್ಷಣಾ ಸಚಿವರು, ಪ್ರಧಾನ ಮಂತ್ರಿಗಳಾದಿಯಾಗಿ ಯಾರೂ ತುಟಿ ಬಿಚ್ಚಲಿಲ್ಲ ವಿದೇಶಾಂಗ ಸಚಿವರೊಬ್ಬರೇ ಮಾತನಾಡಿದರು. ಅವರು ಈ ವಿಚಾರವನ್ನು ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಬಯಲು ಮಾಡಿದ ನಂತರ ಇಂಗ್ಲಿಷ್ ಮಾಧ್ಯಮಗಳಿಗೆ ಇದೊಂದು ಸುದ್ದಿ ಅಂತಲೇ ಇಲ್ಲ. ಸ್ವಪನ್ ದಾಸ್ ಗುಪ್ತ ’ಅವತ್ತು ಪ್ರಮುಖ ಸುದ್ದಿ ಸ್ಯಾಮ್‌ಸಂಗ್‌ನ ಹೊಸ ಮೊಬೈಲ್‌ನದ್ದಾಗಿತ್ತೆ ಹೊರತು ಚೀನಾದ ದಾಳಿಯದ್ದಲ್ಲ’ ಎಂದು ಹಲಬುತ್ತಾರೆ ಪಾಪ.
ನನಗೆ ಗೊತ್ತು ಕಳೆದ ವರ್ಷ ಚೀನಾ ರಕ್ಷಣೆಗೆಂದು ೧೦೭ಬಿಲಿಯನ್ ಡಾಲರು ಖರ್ಚು ಮಾಡಿದೆ. ಆ ವರ್ಷ ನಮ್ಮ ರಕ್ಷಣಾ ಬಜೆಟ್ ೩೮ ಬಿಲಿಯನ್ ಡಾಲರು ಮಾತ್ರ. ಹಾಗಂತ ಹೆದರಬೇಕಾದ್ದೇನೂ ಇಲ್ಲ. ಚೀನಾಕ್ಕೆ ತೈವಾನ್, ಜಪಾನ್, ಸಿಂಗಪುರ್, ರಷ್ಯಾ, ಟಿಬೆಟ್‌ಗಳದ್ದೆಲ್ಲ ತಲೆನೋವಿದೆ. ಸುತ್ತಲಿನವರೊಂದಿಗೆ ಅವರಿಗೆ ಸಖ್ಯವಿಲ್ಲ. ಹೀಗಿರುವಾಗ ಹೆದರುವುದೇಕೆ ಹೇಳಿ. ಉರಿಯುತ್ತಿರುವ ಗಾಯಕ್ಕೆ ಎರಡು ಚಿಟಿಕೆ ಉಪ್ಪು ಸುರಿದರೆ ಚೀನಾ ವಿಲವಿಲನೆ ಒದ್ದಾಡಿಬಿಡುತ್ತದೆ. ನಮಗೆ ಕಿರಿಕಿರಿ ಮಾಡಿ ತೊಂದರೆ ಕೊಡುವ ಯಾವ ಅವಕಾಶವನ್ನೂ ಚೀನಾ ಬಿಟ್ಟುಕೊಟ್ಟಿಲ್ಲ. ಒಮ್ಮೆ ಭಾರತದ ನಕ್ಷೆಗಳಲ್ಲಿ ಅರುಣಾಚಲವನ್ನು ಮಾಯಮಾಡಿ ಪ್ರಕಟಿಸಿತು. ಮತ್ತೊಮ್ಮೆ ಅರುಣಾಚಲೀಯರು ತಮ್ಮ ದೇಶಕ್ಕೆ ಬರುವಾಗ ವೀಸಾ ಬೇಕಿಲ್ಲವೆಂದು ಹೇಳಿ ನಮ್ಮ ನೆಮ್ಮದಿ ಹಾಳು ಮಾಡಿತು.
ಈಶಾನ್ಯ ರಾಜ್ಯದತ್ತ ನಮ್ಮ ರಕ್ಷಣಾ ಸಚಿವರು ಕಾಲಿಟ್ಟರೆ ದ್ವಿಪಕ್ಷೀಯ ಸಂಬಂಧದ ಬೆದರಿಕೆ ಹಾಕುವ ಚೀನಾ, ಟಿಬೆಟ್ಟನ್ನು ನುಂಗಿ ನೀರು ಕುಡಿದಿದೆಯಲ್ಲ, ನಾವು ಚಕಾರ ಎತ್ತಿದ್ದೇವಾ? ಒಮ್ಮೆಯಾದರೂ ನಾವು ಪ್ರಕಟಿಸುವ ಚೀನಾ ನಕ್ಷೆಯಲ್ಲಿ ಟಿಬೇಟನ್ನು ಮಾಯಮಾಡಿ ಕಂಕುಳನ್ನು ಚಿವುಟಿದ್ದೇವಾ? ತೈವಾನಿನ ಪರವಾಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುವ ಬೆದರಿಕೆ ಒಡ್ಡಿದ್ದೇವಾ?
ಚೀನಾ ತನ್ನನ್ನು ತಾನು ಬಲುದೊಡ್ಡ ಶಕ್ತಿ ಎಂದು ಬಿಂಬಿಸುತ್ತಿದೆ ಅಷ್ಟೇ. ಅದಾಗಲೇ ಆಂತರಿಕ ಭ್ರಷ್ಟಾಚಾರದ ಬೆಂಕಿ ಅದರೊಡಲನ್ನು ಹುರಿದು ತಿನ್ನುತ್ತಿದೆ. ಹೆಣ್ಣು ಮಗಳೊಬ್ಬಳು ನಾಯಕರೆಲ್ಲ ತಮ್ಮ ಆಸ್ತಿ ವಿವರವನ್ನು ಸಮಾಜಕ್ಕೆ ಕೊಡಬೇಕೆಂಬ ಹೋರಾಟ ಮಾಡಿ ಜೈಲು ಸೇರಿದಾಳೆ. ಈ ಆಮದೋಲನ ವ್ಯಾಪಕ ರೂಪ ಪಡಕೊಂಡರೆ ಅಲ್ಲಿನ ಸರ್ಕಾರಕ್ಕೆ ತಲೆನೋವು ಕಟ್ಟಿಟ್ಟ ಬುತ್ತಿ. ಪ್ರತ್ಯೇಕತೆಯ ಕೂಗು ಒಳಗಿಂದ ಜರ್ಝರಿತಗೊಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅದರ ಮಾನಸಿಕ ಸ್ಥೈರ್ಯ ಹೆಚ್ಚಿಸಿರುವುದು ನಮ್ಮ ಕೇಂದ್ರ ಸರ್ಕಾರ.
ನಮ್ಮ ನಾಯಕತ್ವ ಅದೆಷ್ಟು ಬಲಹೀನವೆಂದರೆ ’ನಾವು ಇಲ್ಲಿಂದ ಹೊರಡುತ್ತೇವೆ, ನೀವೂ ಹೊರಡಿ’ ಅಂತ ಚೀನಾ ಹೇಳಿದ್ದನ್ನೇ ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡುತ್ತಿದ್ದೇವೆ. ನಮ್ಮದೇ ಜಾಗದೊಳಕ್ಕೆ ಬಂದು ನಮ್ಮನ್ನೇ ಹೊರಡಿರೆನ್ನುತ್ತಾರಲ್ಲ, ವಿಚಿತ್ರ ಎನಿಸೋಲ್ವೇ?

9 thoughts on “ಭಾರತವೇಕೆ ಚೀನಾದೆದುರು ಮಂಡಿಯೂರಬೇಕು!?

  1. Dear sir… Thank you for sharing such helpful msg… & it’s all started from Mr. Great PANDITHA NEHRU…According to me we need to change our History syllabus in current education system & current leaders also…

  2. ಇಲ್ಲಿ ಯುದ್ಧ ಮಾಡಿ ಚೈನಾವನ್ನು ಹಿಂದಿಕ್ಕುವ ಅಗತ್ಯವೇ ಇರಲಿಲ್ಲ. ಚೀನಾ ದ ಸಮಸ್ಯೆಗಳೇ ಹಲವಾರು ಇವೆ. ಈ ಬ್ಲಾಗ್ ನಲ್ಲೆ ಹೇಳಿದಂತೆ ಅದರ ಸುತ್ತಲಿನ ದೇಶಗಳಿಂದ ಅದಕ್ಕೆ ಸಮಸ್ಯೆಗಳು ಇದ್ದೆ ಇದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ರಶಿಯಾ ಅಮೇರಿಕಾ ನಮ್ಮನ್ನು ಬೆಂಬಲಿಸುತ್ತವೆಯೇ ಹೊರತು ಚೀನಾವನ್ನಲ್ಲ. ಇವೆಲ್ಲ ಅವಕಾಶಗಳು ಇರುವಾಗ ನಮ್ಮ ರಾಜ ತಾಂತ್ರಿಕರು ಇವುಗಳನ್ನು ಉಪಯೋಗಿಸಿಕೊಂಡು ಚೀನಾದ ಮೇಲೆ ಒತ್ತಡ ಹೇರಿ ನಮಲ್ಲಿ ಕ್ಷಮಾಪಣೆ ಕೇಳುವದಷ್ಟೇ ಅಲ್ಲದೆ ತಮ್ಮ ಸೈನಿಕರನ್ನು ಹಿಂದೆ ಕರೆಸಿಕೊಳ್ಳುವಂತೆ ಮಾಡಲು ಸಾಧ್ಯವಿತ್ತು. ಚೀನಾ ಕೂಡ ಯುದ್ಧ ಬಯಸದು, ಆದರೆ ನಾವು ಹೇಡಿಗಳಂತೆ ನಮ್ಮ ಸೈನ್ಯದಲ್ಲಿ ಬಲವಿಲ್ಲ, ಆಧುನಿಕತೆ ಇಲ್ಲ ಹಾಗಾಗಿ ನಾವು ಯುದ್ಧಕ್ಕೆ ಹೇಗಿದ್ದರೂ ಹೋಗಲಾರೆವು ಅಂತ ನಮ್ಮ ನಾಡಿನ ಜಾಗವನ್ನೇ ಬಿಟ್ಟು ಕೊಟ್ಟು ಅದನ್ನೇ ಮಹಾ ಸಾಧನೆಯಂತೆ ಬೀಗುವುದು ಅತ್ಯಂತ ಅಪಮಾನಕರ ಸಂಗತಿ. ಆದರೆ ಜನತೆಗೆ ಚುನಾವಣೆಯ ಸಮಯದಲ್ಲಿ ಜಾತಿ, ಧರ್ಮ, ಹಣ, ಆಮಿಷಗಳು ಮಾತ್ರ ನೆನಪಿದ್ದು ದೇಶದ ಬಗ್ಗೆ ಯೋಚನೆಯೇ ಇಲ್ಲದಿದ್ದರೆ ದೇಶವು ನಮ್ಮೆದುರೇ ಮಾರಾಟವಾಗುವ ಎಲ್ಲ ಲಕ್ಷಣಗಳು ಈಗ ಇದೆ. ಇದೊಂದು ದೊಡ್ಡ ದುರಂತ. ಯು.ಪಿ.ಎ. ಇನ್ನೊಮ್ಮೆ ಆಡಳಿತಕ್ಕೆ ಬಂದರೆ ದೇಶ ಸರ್ವನಾಶವಾಗುವದರಲ್ಲಿ ಯಾವುದೇ ಸಂಶಯವಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s