ಯಾವ ದಿಕ್ಕಿನಿಂದ ನೋಡಿದರೂ ಹೊಡೆತ ಸೈನ್ಯಕ್ಕೇ…

ರಕ್ಷಣಾ ಸಚಿವ ಆಂಟನಿ ಡಿಆರ್‌ಡಿಓ ಅನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗಲೇ ಸುದ್ದಿ ಹೊರಬಂದಿದ್ದು… ಈಗ ಅರ್ಪಣೆಯಾಗುತ್ತಿರುವ ವಿಮಾನ ಇಪ್ಪತ್ತು ವರ್ಷಗಳ ಹಿಂದೆಯೇ ತಯಾರಾಗಿ ಸೈನ್ಯಕ್ಕೆ ದಕ್ಕಬೇಕಿತ್ತು.. ನಮ್ಮ ಸೈನಿಕರು ಇಪ್ಪತ್ತು ವರ್ಷಗಳಷ್ಟು ಹಳೆಯ ತಂತ್ರಜ್ಞಾನವನ್ನು ಬಳಸಬೇಕಿರೋದು ಚೀನಾದಂತಹ ಅತ್ಯಾಧುನಿಕ ಡ್ರ್ಯಾಗನ್ನಿನ ಎದುರು!

ಜನರಲ್ ವಿ.ಕೆ.ಸಿಂಗ್ ಮತ್ತೆ ನೆನಪಾಗುತ್ತಿದ್ದಾರೆ. ಸೈನ್ಯಕ್ಕೆ ಟಾಟ್ರಾ ಟ್ರಕ್ ಖರೀದಿಸುವ ವಿಚಾರದಲ್ಲಿ ತನಗೆ ೧೪ ಕೋಟಿ ರೂಪಾಯಿಗಳ ಆಮಿಷ ಒಡ್ಡಿದ್ದರೆಂದು ಆತ ಹೇಳಿದ್ದೇ ತಡ ಕೇಂದ್ರ ಸರ್ಕಾರ ಕೆಟ್ಟದಾಗಿ ಗುರಾಯಿಸಿತ್ತು. ಅಯೋಗ್ಯ ಟ್ರಕ್ಕುಗಳನ್ನು ತಂದು ಸೈನ್ಯಕ್ಕೆ ತುರುಕುತ್ತಿರುವಿರೆಂಬ ಅವರ ಆರೋಪ ನಾಲ್ಕು ದಿನ ಸುದ್ದಿ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿ ಸೈಡ್‌ಲೈನಾಗಿಬಿಟ್ಟಿತ್ತು. ಟ್ರಕ್ಕಿನಿಂದ ಈಗ ಹೆಲಿಕಾಪ್ಟರಿಗೆ ಬಂದು ನಿಂತಿದ್ದೇವೆ.
ಅದೆಷ್ಟು ಸಲ ಹೇಳಿದರೂ ಕಡಿಮೆಯೇ. ಸೈನಿಕರದಷ್ಟು ಅಯೋಮಯ ಸ್ಥಿತಿ ಇನ್ಯಾರದ್ದೂ ಇಲ್ಲ. ಆತನ ಕೈಲಿ ಶಸ್ತ್ರಗಳಿವೆ, ಚಲಾಯಿಸುವ ಅನುಮತಿಯಿಲ್ಲ. ಆತ ಅದನ್ನು ಬಳಸಲೇಬೇಕಾದ ಅನಿವಾರ್ಯತೆಯುಂಟಾದಾಗ ಆ ಶಸ್ತ್ರಗಳು ಕೆಲಸ ಮಾಡುವುದೇ ಇಲ್ಲ! ಅವನು ಕೇಳುವ ಬಟ್ಟೆ ಬರೆ, ಕನ್ನಡಕಗಳು ದೊರೆಯುವುದಿಲ್ಲ. ದೊರೆಗಳು ಕೊಟ್ಟಂಥವನ್ನು ಹಾಕಿಕೊಂಡು ಯುದ್ಧಭೂಮಿಗೆ ಹೋಗಬೇಕು.

defence
ಅಮರನಾಥ ಬೆಟ್ಟ ಹತ್ತುವ ಮುನ್ನ ನಾನು ಒಂದಷ್ಟು ಯೋಧರನ್ನು ಮಾತನಾಡಿಸುತ್ತಿದ್ದೆ. ಬುಡದ ಕ್ಯಾಂಪಿನ ಡೇರೆಯಲ್ಲಿ ಬ್ಲ್ಯಾಕ್ ಟೀ ಹೀರುತ್ತ ಪ್ರಮುಖರೊಬ್ಬರು ಸೈನಿಕನೊಬ್ಬನನ್ನು ಕರೆದು ಹೆಬ್ಬೆರಳಿನ ಬಳಿ ಹರಿದ ಶೂ ತೋರಿಸಿ ’ಹೇಗಿದೆ?’ ಎಂದರು. ನಾನು ಹುಬ್ಬೇರಿಸಿದೆ. ಸೈನಿಕರ ಅಂಗಿ – ಶೂಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಒದಗಿಸಲು ಕಂಪನಿಯೊಂದು ಮುಂದೆ ಬಂತಂತೆ. ಸಹಜವಾಗಿ ಮಂತ್ರಿಗಳು ಅದಕ್ಕೆ ಅನುಮತಿ ಕೊಟ್ಟರು. ಯಾಕೋ ಅಧಿಕಾರಿಗಳಿಗೆ ಅನುಮಾನ ಬಂದು ಆ ಕಂಪನಿ ಹೇಳಿದ ವಿಳಾಸ ಹುಡುಕಿಕೊಂಡು ಹೊರಟರೆ ಅಲ್ಲೊಂದು ಪುಟ್ಟ ಮನೆ. ಅಲ್ಲಿರುವವರಿಗೆ ಶೂ ತಯಾರಿಕೆ ಇರಲಿ, ಶೂ ಹಾಕಿಯೂ ಗೊತ್ತಿರಲಿಲ್ಲ. ಟೆಂಡರ್ ಗಳಿಸಿದ ವ್ಯಕ್ತಿ ಮತ್ತೆಲ್ಲಿಂದಲೋ ಗುಣಮಟ್ಟವಿಲ್ಲದ ವಸ್ತು ಖರೀದಿಸಿ ಸೈನ್ಯಕ್ಕೆ ತಲುಪಿಸುವ ಯೋಜನೆ ಅದು. ವಿಷಯ ಮೇಲಧಿಕಾರಿಗಳಿಗೆ ಹೋಯ್ತು. ಪರಿಹಾರವೇನಾಯ್ತು ಗೊತ್ತೆ? ಈತನ ಕುರಿತಂತೆಯೇ ವಿಚಾರಣೆ ಶುರುವಾಯ್ತು. ಅನುಮತಿಯೇ ಇಲ್ಲದೆ ಗೂಢಚರ್ಯೆ ನಡೆಸಿದ್ದಾದರೂ ಏಕೆ ಅಂತ! ಮೇಲಿಂದ ಬಂದದ್ದನ್ನು ಕೆಳಗೆ ತಲುಪಿಸುವುದಷ್ಟೆ ನಿಮ್ಮ ಕೆಲಸ ಅನ್ನುವ ಆದೇಶ ಜೊತೆಗೆ.
ಸೈನ್ಯದ ಕೊಡು-ಕೊಳ್ಳುವಿಕೆಯಲ್ಲಿ ಟೆಟ್ರಾದಂತಹ, ವಿವಿಐಪಿ ಹೆಲಿಕಾಪ್ಟರಿನಂತಹ ಹಗರಣಗಳು ಮೇಲ್ನೋಟಕ್ಕೆ ಹೊರಬಂದವು ಮಾತ್ರ. ಒಳಗೊಳಗೇ ಚಿಕ್ಕ-ದೊಡ್ಡ ಮಟ್ಟದ ಹಗರಣಗಳನ್ನು ಅಡಗಿಸಿಟ್ಟುಕೊಂಡ ವಿಶ್ವಾತ್ಮ ಅದು. ಅದಕ್ಕೆ ಕಾರಣವೂ ಇದೆ. ಸೌದಿ ಅರೇಬಿಯಾ ಬಿಟ್ಟರೆ ಜಗತ್ತಿನ ಅತಿ ದೊಡ್ಡ ಶಸ್ತ್ರಾಸ್ತ್ರ ಆಮದುಗಾರರು ನಾವೇ! (ಸೈನ್ಯದ ಏರ್‌ಶೋಗೆ ಜಗತ್ತಿನಿಂದ ೨೦೦ಕ್ಕೂ ಹೆಚ್ಚು ಉದ್ದಿಮೆದಾರರು ಬಂದಿದ್ದುದನ್ನು ನೆನಪಿಸಿಕೊಳ್ಳಿ). ಚೀನಾ ಅಮೆರಿಕಾಗಳೆಲ್ಲ ಅಪಾರ ಪ್ರಮಾಣದಲ್ಲಿ ಸೈನ್ಯಕ್ಕೆ ಹಣ ಮೀಸಲಾಗಿಡುತ್ತವೆಯೆನ್ನುವುದು ನಿಜ. ಆದರೆ ಆ ಹಣ ವಿದೇಶಗಳಿಗೆ ಹರಿದು ಹೋಗುವುದಿಲ್ಲ. ಬದಲಿಗೆ ದೇಶದಲ್ಲಿಯೇ ಯುದ್ಧ ವಿಮಾನಗಳ, ಶಸ್ತ್ರಾಸ್ತ್ರಗಳ ಸಂಶೋಧನೆ ನಡೆಯುತ್ತವೆ. ಅತ್ಯಾಧುನಿಕ ಶಸ್ತ್ರಗಳನ್ನು ಸೈನ್ಯಕ್ಕೆ ಒಳಗಿನಿಂದಲೇ ಒದಗಿಸಲಾಗುತ್ತದೆ. ಸೈನ್ಯ ಯಾವ ಬಗೆಯ ವಿಮಾನ, ಹೆಲಿಕಾಪ್ಟರು, ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಮಂಡಿಸುತ್ತದೆಯೋ ಅಂಥದ್ದನ್ನು ತಯಾರಿಸಿ ಒಪ್ಪಿಸುವ ಕೆಲಸ ಸಂಶೋಧನಾ ಸಂಸ್ಥೆ ಮತ್ತು ಕಂಪನಿಗಳದ್ದು. ಅಮೆರಿಕಾದ ಆದಾಯದ ಮೂಲವೇ ಇದು. ಹೀಗಾಗಿಯೇ ಜಗತ್ತು ಯುದ್ಧ ಮಾಡಲಿಲ್ಲವೆಂದರೆ ಜಗತ್ತು ಶಾಂತಿಯಿಂದ ಇರಬಹುದೇನೋ, ಅಮೆರಿಕಾ ಮಾತ್ರ ದಿವಾಳಿಯೆದ್ದುಹೋಗುತ್ತದೆ ಅನ್ನೋದು. ಚೀನಾ ಕೂಡ ಹಾಗೆಯೇ. ತನ್ನ ಅನುಕೂಲಕ್ಕೆ ಬೇಕಾದ ಶಸ್ತ್ರಗಳನ್ನು ತಾನೇ ನಿರ್ಮಿಸಿಕೊಳ್ಳುತ್ತದೆ.
ಭಾರತ ಹಾಗಲ್ಲ. ವಿಐಪಿಗಳನ್ನು ಹೊತ್ತೊಯ್ಯಲಿಕ್ಕೂ ವಿದೇಶದಿಂದ ಹೆಲಿಕಾಪ್ಟರುಗಳನ್ನು ತರಿಸಿಕೊಳ್ಳುತ್ತೆ. ಹುಟ್ಟಿರೋ ಮಕ್ಕಳನ್ನೆಲ್ಲ ಸಾಫ್ಟ್‌ವೇರ್ ಇಂಜಿನಿಯರುಗಳನ್ನಾಗಿಸಿ ಜೀತಕ್ಕೆ ಅಟ್ಟಿ ಮೆರೆದೆವಲ್ಲ, ಅದಕ್ಕೆ ಸರಿಯಾದ ಪ್ರತಿಫಲ ಉಣ್ಣುತ್ತಿದ್ದೇವೆ. ದೇಶವನ್ನು ಸುಭದ್ರಗೊಳಿಸುವ ಸಂಶೋಧನೆಗಳಿಗೆ ಪ್ರತಿಭಾವಂತರೇ ಸಿಗುತ್ತಿಲ್ಲ. ಸೈನ್ಯಕ್ಕೆ ಪೂರಕವಾಗಲೆಂದೇ ಇರುವ ಸಂಶೋಧನಾ ಸಂಸ್ಥೆ ಡಿಆರ್‌ಡಿಓ ಅಂತೂ ಕೆಲಸ ಮಾಡಿದ್ದಕ್ಕಿಂತ ಸಮಯ ದೂಡಿದ್ದೆ ಹೆಚ್ಚು. ಮೊನ್ನೆಮೊನ್ನೆ ಲಘು ವಿಮಾನವನ್ನು ಸೈನ್ಯಕ್ಕೆ ಅರ್ಪಿಸಲು ಬಂದ ರಕ್ಷಣಾ ಸಚಿವ ಆಂಟನಿ ಡಿಆರ್‌ಡಿಓ ಅನ್ನು ಚೆನ್ನಾಗಿ ತರಟೆಗೆ ತೆಗೆದುಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಯೋಜನೆ ಮುಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಿರಿ ಎಂದು ತಾಕೀತು ಮಾಡಿದ್ದಾರೆ. ಆಗಲೇ ಸುದ್ದಿ ಹೊರಬಂದಿದ್ದು. ಈಗ ಅರ್ಪಣೆಯಾಗುತ್ತಿರುವ ವಿಮಾನ ಇಪ್ಪತ್ತು ವರ್ಷಗಳ ಹಿಂದೆಯೇ ತಯಾರಾಗಿ ಸೈನ್ಯಕ್ಕೆ ದಕ್ಕಬೇಕಿತ್ತು ಅಂತ. ಸೈನ್ಯದ ಸ್ಥಿತಿ ಊಹಿಸಿಕೊಳ್ಳಿ. ಅವರು ಇಪ್ಪತ್ತು ವರ್ಷಗಳಷ್ಟು ಹಳೆಯ ತಂತ್ರಜ್ಞಾನವನ್ನು ಬಳಸಬೇಕಿರೋದು ಚೀನಾದಂತಹ ಅತ್ಯಾಧುನಿಕ ಡ್ರ್ಯಾಗನ್ನಿನ ಎದುರು!
ಪ್ರತಿ ಬಾರಿ ರಕ್ಷಣಾ ಹಗರಣಗಳಾದಾಗಲೂ ನಾವು ಬೊಬ್ಬಿಡುತ್ತೇವೆ. ಪ್ರತಿಪಕ್ಷಗಳು ಚೀರಾಡುತ್ತವೆ. ಅಂತಿಮವಾಗಿ ಏನಾಗುತ್ತೆ ಗೊತ್ತ? ತನಿಖೆಗೆ ನಾವು ತಯಾರಿದ್ದೇವೆಂದು ಆಡಳಿತ ಪಕ್ಷ ಹೇಳುತ್ತೆ. ಸಿಬಿಐ ವಿಚಾರಣೆ ನಡೆಸಿ ಇನ್ನೊಂದು ಹದಿನೈದಿಪ್ಪತ್ತು ವರ್ಷಗಳ ಕಾಲ ಕೂತುಣ್ಣಲು ಬೇಕಾಗುವಷ್ಟು ಹಣವನ್ನು ಅಧಿಕಾರಿಗಳು ಗಂಟು ಕಟ್ಟಿಕೊಳ್ಳುತ್ತಾರೆ. ಅಲ್ಲಿಗೆ ಕಥೆ ಮುಗಿಯಿತು. ಬೋಫೋರ್ಸ್ ಹಗರಣ ಹಳ್ಳ ಹಿಡಿದಿದ್ದು ಹೀಗೆಯೇ. ೧೯೪೮ರ ಜೀಪ್ ಹಗರಣವಂತೂ ಆರೋಪಿಗಳು ಬದುಕಿದ್ದಾಗಲೇ ಮುಚ್ಚಿಹೋಯ್ತು. ತೆಹಲ್ಕಾ ರಕ್ಷಣಾ ಇಲಾಖೆಯೊಳಗಿನ ಒಳಸುಳಿಗಳನ್ನು ಬಯಲಿಗೆಳೆದು ತಾನೇ ಕಾಂಗ್ರೆಸ್ಸಿನ ಕೈಗೊಂಬೆಯಾಯ್ತು. ಇನ್ನು ಜಂಟಿ ಸಂಸದೀಯ ಸಮಿತಿಯಂತೂ ಹಣ ಹಂಚಿಕೊಳ್ಳುವ ಅತ್ಯುತ್ತಮ ದಾರಿಯಷ್ಟೆ. ತನಿಖೆ ನಡೆಸುವಷ್ಟು ಪ್ರಾಮಾಣಿಕ – ರಾಷ್ಟ್ರವಾದಿ ನಾಯಕರು ಯಾವ ಪಕ್ಷದಲ್ಲಿಯೂ ಉಳಿದೇ ಇಲ್ಲ. ಇಲ್ಲವಾದಲ್ಲಿ ಬೋಫೋರ್ಸ್‌ನ ಕಾರಣದಿಂದ ರಾಜೀವ್ ಗಾಂಧಿ ಬದುಕಿನುದ್ದಕ್ಕೂ ಮುಖಕ್ಕೆ ಮಸಿ ಬಳೆಸಿಕೊಂಡು ತಿರುಗುವಂತೆ ಮಾಡಿದ ಪ್ರತಿಪಕ್ಷಗಳು ಇಂದೇಕೆ ಬಾಯ್ಮುಚ್ಚಿ ಕುಳಿತಿವೆ? ನೈತಿಕತೆಯ ಕೊರತೆಯಿಂದಾಗಿ ಅಷ್ಟೇ. ಜಾಸ್ತಿ ಎಗರಾಡಿದರೆ ಪೂರ್ತಿಗ್ರೂಪ್‌ನ ಅವ್ಯವಹಾರ ಬಯಲಿಗೆ ಬಂದೀತೆಂಬ ಭಯ. ಹುಡ್ಕೋ ಹಗರಣ ಹಸಿಯಾದೀತೆಂಬ ಹೆದರಿಕೆ.
ಕಂಠಮಟ್ಟ ಭ್ರಷ್ಟರಾಗಿರುವ ಇವರುಗಳನ್ನು ನೋಡಿಯೇ ಉತ್ತರಭಾರತದಲ್ಲಿ ’ಗಲೀಗಲೀ ಮೆ ಶೋರ್ ಹೈ, ಹರ್ ಇಕ್ ನೇತಾ ಚೋರ್ ಹೈ’ ಅಂತ ಕೂಗು ಹಾಕೋದು. ಇವರುಗಳ ಬಗ್ಗೆ ಮಾತನಾಡೋದು ಕಂಠ ಶೋಷಣೆ ಮಾಡಿದಂತೆ ಅಷ್ಟೇ.
ಈಗ ಡಿಆರ್‌ಡಿಓ, ಎಚ್‌ಎಎಲ್, ಎನ್‌ಎಎಲ್‌ಗಳು ಬಲಾಢ್ಯವಾಗಬೇಕಿವೆ. ಬರಿಯ ಅಂಬಾಸಿಡರ್ ತಯಾರಿಸುತ್ತಿದ್ದ ಭಾರತ ಇಂದು ಆಟೊಮೊಬೈಲ್ ಕ್ಷೇತ್ರದಲ್ಲಿ ಅಗ್ರಣಿಯಾಗಿ ನಿಂತಿರಬೇಕಾದರೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಮೇಲೆಕೆಳಗೆ ನೋಡುತ್ತಿದ್ದ ನಾವು ಇಂದು ಚಂದ್ರನಿಗೇ ಹೈವೇ ಕಟ್ಟಲು ಹೊರಟಿರಬೇಕಾದರೆ, ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರ, ವಿಮಾನಗಳ ತಯಾರಿಕೆಯಲ್ಲಿ ಹಿಂದುಳಿದಿರುವುದು ಏತಕ್ಕೆ? ನೆನಪಿಡಿ. ವಿದೇಶಿ ಕಂಪನಿಗಳು ನಮಗೆ ವಿಮಾನ ಮಾರುತ್ತವಲ್ಲ, ಅಲ್ಲಿಯೂ ಕೆಲಸ ಮಾಡುವವರನೇಕರು ನಮ್ಮವರೇ. ನಮ್ಮ ನಾಡಿನಲ್ಲಿ ನಿಯತ್ತಾಗಿ ದುಡಿಯಲು ನಮಗೇನು ಧಾಡಿ?
ಇಂದಿನ ಅಂಕಿ ಅಂಶದ ಪ್ರಕಾರ ನಮ್ಮ ಡಿಆರ್‌ಡಿಓ ಕಳೆದ ೧೭ ವರ್ಷಗಳಲ್ಲಿ ಅಭಿವೃದ್ಧಿ ಪಡಿಸಿರುವ ವಸ್ತುಗಳಲ್ಲಿ ಶೆಕಡಾ ೨೯ರಷ್ಟು ಮಾತ್ರ ಸೈನ್ಯ ಬಳಸಿಕೊಂಡಿದೆ. ಪಾಸಾಗಲು ೩೫ ಅಂಕಗಳು ಬೇಕೆನ್ನುವ ಮಾನದಂಡವನ್ನೇ ಇಟ್ಟುಕೊಂಡರೂ ನಮ್ಮ ಸಂಸ್ಥೆಗಳು ವಿಫಲವಾಗಿರುವುದು ದೃಗ್ಗೋಚರ. ಬರಿ ವಿಫಲವಷ್ಟೆ ಅಲ್ಲ, ನೇಪಾಳಕ್ಕೆ ನಾವು ಪೂರೈಸಿದ ರೈಫಲ್ಲುಗಳು ಮಾವೋವಾದಿಗಳೊಂದಿಗಿನ ಘರ್ಷಣೆಯ ಪ್ರಮುಖ ಘಟ್ಟದಲ್ಲಿ ಕೈಕೊಟ್ಟು ಅಲ್ಲಿನ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಗಿಯೂ ಬಂದಿತ್ತು. ಕಾರ್ಗಿಲ್ ಯುದ್ಧದ ಆರಂಭದಲ್ಲಿ ನಮ್ಮ ಅನೇಕ ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಗಿ ಬಂದಿದ್ದೂ ಇವೇ ಕಳಪೆ ರೈಫಲ್ಲುಗಳ ಕಾರಣದಿಂದ ಎಂದು ವರದಿಗಳು ಹೇಳುತ್ತವೆ. ಈಗ ಹೇಳಿ. ನಂಬೋದು ಯಾರನ್ನು? ನಂಬೋದು ಹೇಗೆ?
ಶಸ್ತ್ರಾಸ್ತ್ರ ತಯಾರಿಕೆಯ ವಿಚಾರದಲ್ಲಿ ನಾವು ಸ್ವಾವಲಂಬಿಗಳಾಗಿಬಿಟ್ಟರೆ ಪ್ರತಿವರ್ಷ ನಮ್ಮ ಆಯವ್ಯಯ ಪಟ್ಟಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳು ಉಳಿದುಬಿಡುತ್ತವೆ. ಧೂರ್ತ ರಾಜಕಾರಣಿಗಳಿಗೆ ಮೇಯಲು ಇರುವ ಪ್ರಮುಖ ಕೇಂದ್ರವೇ ಕಳಚಿಬೀಳುತ್ತೆ. ದೃಷ್ಟಿಕೋನ ಬದಲಾಯಿಸಿಕೊಳ್ಳಿ. ಭ್ರಷ್ಟಾಚಾರದ ವಿರುದ್ಧದ ಹೋರಾಟ ಸಾಮಾನ್ಯ. ಭ್ರಷ್ಟಾಚಾರಕ್ಕೆ ಇರುವ ದಾರಿಯನ್ನೆ ಮುಚ್ಚಿಬಿಡುವುದು ಸರಿಯಾದ ರೀತಿ.
ದೇಶಕ್ಕೆ ರಕ್ಷಣಾ ಮಂತ್ರಿ ಎ.ಕೆ.ಆಂಟನಿಯ ಮೇಲೆ ಭರವಸೆ ಇದೆ. ಆತ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಎದುರಾಳಿಗಳೂ ಗುಣಗಾನ ಮಾಡುತ್ತಾರೆ. ಮತ್ತೆ ರಕ್ಷಣಾ ಇಲಾಖೆಯಲ್ಲಿಯೇ ಹೀಗೇಕಾಯ್ತು? ಅಂತಾರಾಷ್ಟ್ರೀಯ ಮಾನ್ಯತೆಯಂತೆ ರಕ್ಷಣಾ ಡೀಲಿನಲ್ಲಿ ಮಧ್ಯವರ್ತಿಗೆ ದಕ್ಕುವ ಹಣ ಹೆಚ್ಚೂಕಡಿಮೆ ಹದಿನಾರು ಪರ್ಸೆಂಟು. ಇದನ್ನು ಗಮನದಲ್ಲಿಟ್ಟುಕೊಂಡೇ ಭಾರತ ಮಧ್ಯವರ್ತಿಗಳನ್ನು ನಿಷೇಧಿಸಿತ್ತು. ಇಷ್ಟಾದರೂ ಇವರು ಭಾರತಕ್ಕೆ ಬರುತ್ತಾರೆ. ಆಪ್ತ ಮಂತ್ರಿಗಳ ಮೂಲಕ, ಸೈನ್ಯಾಧಿಕಾರಿಗಳ ಮೂಲಕ ಒಳನುಸುಳುತ್ತಾರೆ. ಅವರು ಹೇಳುವ ಅಕೌಂಟಿಗೆ ಹಣ ತುಂಬುತ್ತಾರೆ. ಸದ್ಯದ ಈ ಕೇಸಿನಲ್ಲಿ ಇಟಲಿಯ ಮಧ್ಯವರ್ತಿ ರಾಹುಲ್‌ಗೆ ಆಪ್ತನೆಂಬ ಸುದ್ದಿ ಹರಿದಾಡುತ್ತಿದೆ. ಇಲ್ಲವಾದಲ್ಲಿ ಇಷ್ಟು ದೊಡ್ಡ ಡೀಲು ಕುದುರಲು ಸಾಧ್ಯವೇ ಇರಲಿಲ್ಲ ಎನ್ನಲಾಗುತ್ತಿದೆ.
ಎಷ್ಟಂತ ಇವರುಗಳ ಬಗ್ಗೆ ಬರೆಯೋದು ಹೇಳಿ. ಇವರ ನಡುವೆ ಬಡವಾಗುತ್ತಿರೋದು ಮಾತ್ರ ಈ ದೇಶದ ಸೈನ್ಯ. ಪ್ರಾಮಾಣಿಕ ವ್ಯಕ್ತಿ ಮಂತ್ರಿಯಾಗಿ ಬಂದರೆ ರಗಳೆಯೇ ಬೇಡ ಎಂದುಕೊಂಡು ಶಸ್ತ್ರಾಸ್ತ್ರ ಖರೀದಿ ನಿಲ್ಲಿಸಿಬಿಡುತ್ತಾನೆ. ತಿಂದು ತೇಗಲು ಬಂದವ ಮುಲಾಜಿಲ್ಲದೆ ಗುಣಮಟ್ಟವಿಲ್ಲದ ಕಳಪೆ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿ ಸೈನ್ಯದ ಗೋದಾಮು ತುಂಬಿಸುತ್ತಾನೆ. ಯಾವ ದಿಕ್ಕಿನಿಂದ ನೋಡಿದರೂ ಹೊಡೆತ ಸೈನ್ಯಕ್ಕೇ. ಅಪಾಯ ಒದಗೋದು ದೇಶದ ಸುಭದ್ರತೆಗೇ.

9 thoughts on “ಯಾವ ದಿಕ್ಕಿನಿಂದ ನೋಡಿದರೂ ಹೊಡೆತ ಸೈನ್ಯಕ್ಕೇ…

  1. ” ವಿದೇಶಿ ಕಂಪನಿಗಳು ನಮಗೆ ವಿಮಾನ ಮಾರುತ್ತವಲ್ಲ, ಅಲ್ಲಿಯೂ ಕೆಲಸ ಮಾಡುವವರನೇಕರು ನಮ್ಮವರೇ. ನಮ್ಮ ನಾಡಿನಲ್ಲಿ ನಿಯತ್ತಾಗಿ ದುಡಿಯಲು ನಮಗೇನು ಧಾಡಿ? ” Nijvaad maathu gurugale ..Videshi mohaa , mele pratibha palaayena vaada………

  2. ರಕ್ಷಣಾಮಂತ್ರಿ ಏ.ಕೆ ಆಂಟನಿ ಪ್ರಾಮಾಣಿಕ ಎನ್ನುತ್ತೀರಿ ! ಪ್ರಾಮಾಣಿಕರಾಗಿರುವವರು ಇಷ್ಟೆಲ್ಲಾ ಹಗರಣಗಳು ಹೊರಬರುತ್ತಿದ್ದರೂ ಸುಮ್ಮನಿದ್ದಾರಲ್ಲಾ!! ಸೋನಿಯಾ , ರಾಹುಲ್ಗೇ ಜೈಕಾರ ಹಾಕುತ್ತಾ ಜೀಹುಜೂರ್ ಎಂದು ಅಲ್ಲೇ ಏಕಿದ್ದಾರೆ?

  3. ಹುಟ್ಟಿರೋ ಮಕ್ಕಳನ್ನೆಲ್ಲ ಸಾಫ್ಟ್‌ವೇರ್ ಇಂಜಿನಿಯರುಗಳನ್ನಾಗಿಸಿ ಜೀತಕ್ಕೆ ಅಟ್ಟಿ ಮೆರೆದೆವಲ್ಲ, ಅದಕ್ಕೆ ಸರಿಯಾದ ಪ್ರತಿಫಲ ಉಣ್ಣುತ್ತಿದ್ದೇವೆ. .. ಈಗಿನ ಪರಿಸ್ತಿತಿ ನೋಡಿದ್ರೆ.. ಯಾವುದೂ ಒಳ್ಳೆ ದಾರಿ ಕಾಣುತ್ತಿಲ್ಲ. ಸರ್ಕಾರಿ ಸೇವೆ ಸೇರಿ ಭ್ರಷ್ಟ ರಾಜಕಾರಿಣಿಗಳಿಗೆ ದುಡಿಯಲಾ??

  4. ಸ್ವಾಮಿ ಎಲ್ಲರಿಗೂ ಮೀಸಲಾತಿ ದಕ್ಕಲಿ. ಅಯೋಗ್ಯರೆ ಉನ್ನತ ಹುದ್ದೆಗಳಲ್ಲಿ ಕುಳಿತಿರಲಿ. ಸಂಶೋಧನೆಗೆ ಚಟ್ಟ ಕಟ್ಟಲು ಇನ್ನೇನು ಬೇಕು ಹೇಳಿ. ಹೋಗಲಿ ಸಂಶೋಧನೆಗೆ ಪೂರಕವಾದ ಶಿಕ್ಷಣ ಎಲ್ಲಿದೆ ಸರ್? ಮಾರ್ಕ್ಸ್ ಮಾರ್ಕ್ಸ್ ಮಾರ್ಕ್ಸ್ & “Mr ಮಾರ್ಕ್ಸ್” ಇಷ್ಟೇ. ಶಿಕ್ಷರಿಗೆ ರಾಜ ಕಾರಣ ಮುಗಿಸಲೇ ಸಮಯವಿಲ್ಲ ಇನು ಸಂಶೋಧನೆಗೆ ಬೆಂಬಲ ಎಲ್ಲಿಂದ?

    ತಾಂತ್ರಿಕ ಶಿಕ್ಷಣದಲ್ಲಿ “distinction” ನಲ್ಲಿ ಪಾಸಾದ ಹುಡುಗನನ್ನು ಪರಿಚಯಿಸುತ್ತೇನೆ, ಲಂಚ ಇಲ್ಲದೆ, DRDO / LRDE ಗಳಲ್ಲಿ, ಸಂಶೋದನ ವಿಭಾಗದಲಿ ಕೆಲಸ ಕೊಡಿಸಿ ಸರ್.

  5. gurugale nivoo helidu nija adre niyathagi dudiyoke namma desadalli avakasa illa alwa. ellandre videshadalli barathiyara prathibena guruthisuthare andre bharathadalli yakagalla elli badaprathibhavantaige avakasha ellanna elli yenidru kulagetta pattinga rajakaranigalige mathu avru sakuthiruva bayothpadrige..nijavagiu hiriyaru helida hage “Badavana Kopa Davadege Mula” yembanthagide. mugda badavaru yelladku hanavanthara mundhe balipasugalu anna. Jai ri ram

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s