ವಿಶ್ವಮಾನವ ತತ್ವದ ಶ್ರೇಷ್ಠ ಹರಿಕಾರ

ವಿವೇಕಾನಂದರು ಕುವೆಂಪುರವರ ನರನಾಡಿಗಳಲ್ಲಿ ಪ್ರವಹಿಸುತ್ತಿದ್ದುದರಿಂದ ಅವರ ವ್ಯಕ್ತಿತ್ವಕ್ಕೆ ವಿಶೇಷವಾದ ಮೆರುಗಿತ್ತು. ಯಾರಿಗೂ ಜಗ್ಗದ, ಬಾಗದ ಧೀರ ವ್ಯಕ್ತಿತ್ವ ಸಿದ್ಧಿಸಿತ್ತು ಅವರಿಗೆ.

ಕನ್ನಡ ಸಾಹಿತ್ಯ ಸಮ್ಮೇಳನ. ಶಿವಮೊಗ್ಗದಲ್ಲಿ ನಡೆಯುತ್ತಿತ್ತು. ಎಡಪಂಥೀಯ ವಿಚಾರಧಾರೆಯ ಪುಸ್ತಕಗಳನ್ನು ಮಾರುತ್ತಿದ್ದ ಅಂಗಡಿಯದು. ’ನೂರು ದೇವರನೆಲ್ಲ ನೂಕಾಚೆ ದೂರ – ಕುವೆಂಪು’ ಎಂದು ದೊಡ್ಡದಾಗಿ ಬರೆಸಿ ತೂಗು ಹಾಕಿತ್ತು. ಯಾಕೋ ಕುವೆಂಪುರವರ ದೈವ ವಿರೋಧಿ ನಿಲುವು ಸಹಿಸಿಕೊಳ್ಳಲು ಆಗಲಿಲ್ಲ. ಕೆಲವು ದಿನಗಳ ಅನಂತರ ಆ ಕವನ ಓದುವ ಅವಕಾಶ ಸಿಕ್ಕಿತು. ಓದಿ ಗಾಬರಿಯೂ ಆಯ್ತು! ಆ ಕವನದ ಎರಡನೇ ಸಾಲು, ’ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರಾ’ ಅಂತಿತ್ತು. ಸಾವಿರ ಮಿಂಚುಗಳು ಒಮ್ಮೆಗೇ ಸಿಡಿದಂತಹ ಅನುಭವವಾಯ್ತು. ಇದು ದೈವ ವಿರೋಧಿ ಚಿಂತನೆಯಲ್ಲ; ಎಲ್ಲ ದೇವರನ್ನೂ ತಾಯಿ ಭಾರತಿಯಲ್ಲಿ ಸಮೀಕರಿಸುವ ವಿವೇಕಾನಂದರ ಮಾತುಗಳ ಸಮರ್ಥ ಕನ್ನಡ ಅವತರಣಿಕೆ ಅಷ್ಟೇ!
ಎಡಚರೇ ಹೀಗೆ. ತಮಗೆ ಬೇಕಾದ್ದಷ್ಟನ್ನು ’ಕಟ್’ ಮಾಡಿಕೊಂಡು, ಬೇಕಾದ್ದಲ್ಲಿ ’ಪೇಸ್ಟ್’ ಮಾಡಿಕೊಳ್ಳುತ್ತ ವ್ಯಕ್ತಿ – ವ್ಯಕ್ತಿಗಳನ್ನೆ ಆಪೋಶನ ತೆಗೆದುಕೊಂಡುಬಿಡ್ತಾರೆ. ದೊಡ್ಡ ದೊಡ್ಡವರು ನಮ್ಮ ವಿಚಾರಗಳನ್ನು ಹೇಳುತ್ತಾರೆ ಎಂದು ತೋರಿಸಿಕೊಳ್ಳುವ ತೆವಲು ಅವರಿಗೆ. ’ದೇವರನ್ನು ನಂಬಲಾರೆ’ ಎಂದ ಮಾತ್ರಕ್ಕೆ ಭಗತ್ ಸಿಂಗ್ ತಮ್ಮವರು ಎನಿಸಿತವರಿಗೆ. ಆದರೆ ಆತನ ಉಗ್ರ ದೇಶಭಕ್ತಿಯ ತೃಣಮಾತ್ರವೂ ಹುಡುಕಿದರೂ ಸಿಗಲಾರದು!
ಕುವೆಂಪು ವಿಷಯಕ್ಕೆ ಬನ್ನಿ. ಜಾತಿಗಳ ಮೇಲಾಟಗಳಲ್ಲಿ. ಮತ ಭ್ರಾಂತಿಗಳ ತಾಕಲಾಟಗಳಲ್ಲಿ ಬೇಯುತ್ತಿದ್ದವರಲ್ಲಿ ಅವರೂ ಒಬ್ಬರು. ಈ ಬೇಗುದಿಯಿಂದ ಅವರನ್ನು ಹೊರತಂದು ಪ್ರೇಮದ ಮುಲಾಮು ಹಚ್ಚಿದ್ದು ರಾಮಕೃಷ್ಣರು. ಹಿಂದುತ್ವದ ಓರೆಕೋರೆಗಳೆಂದು ಬೇಸತ್ತು ದಾರಿ ಬದಲಾಯಿಸುವುದೇ ಸರಿ ಎನಿಸಿದ್ದ ಭಾವನೆಗೆ ಕೊಳ್ಳಿ ಇಟ್ಟು ಈ ಧರ್ಮದ ಶ್ರೇಷ್ಠತೆಗಳ ಅರಿವು ಮೂಡಿಸಿದ್ದು ಸ್ವಾಮಿ ವಿವೇಕಾನಂದರು. ಬಹುಶಃ ವಿವೇಕಾನಂದರ ಕೃತಿ ಶ್ರೇಣಿಗೆ ಪುಟ್ಟಪ್ಪನವರು ತೆರೆದುಕೊಳ್ಳದೆ ಇದ್ದಿದ್ದರೆ ಇಂದು ನಮಗೆ ದಕ್ಕುತ್ತಿದ್ದ ವಿಶ್ವಮಾನವ ಬೇರೆಯೇ ಆಗಿರುತ್ತಿದ್ದ!

kuvempu-keerti
ಅನುಮಾನವೇ ಇಲ್ಲ. ಆಚರಣೆಗಳ ವಿಚಾರಕ್ಕೆ ಬಂದಾಗ ನಮ್ಮದು ಶಿಥಿಲವಾಗಿಬಿಟ್ಟಿರುವ ಧರ್ಮ. ಅದು ನಮ್ಮದೇ ತಪ್ಪುಗಳ ಮಹಾಪ್ರವಾಹ. ನಮ್ಮ ಪುರೋಹಿತ ಪಂಗಡದವರಂತೂ ಕೆಳವರ್ಗದವರು ಓದಿಕೊಂಡರೆ ಮನೆಯ ಸಂಪತ್ತು ನಾಶವಾಗುತ್ತದೆಂದು ಹೆದರಿಸಿ ಅದುಮಿಟ್ಟುಕೊಂಡಿದ್ದ ಕಾಲವದು. ಸ್ವತಂತ್ರ ಚಿಂತನೆಯ ಪುಟ್ಟಪ್ಪನವರಿಗೆ ಅವುಗಳನ್ನು ಸಹಿಸಲು ಹೇಗೆ ತಾನೆ ಸಾಧ್ಯವಿತ್ತು? ಅವರು ಕ್ರೈಸ್ತ ಚಿಂತನೆಗಳತ್ತ ಆಸೆ ಕಂಗಳಿಂದ ನೋಡಿದ್ದು ಸಹಜವೇ. ಆ ಹೊತ್ತಿನಲ್ಲಿ ದಕ್ಕಿದ್ದು ರಾಮಕೃಷ್ಣ – ವಿವೇಕಾನಂದ – ಚೈತನ್ಯರ ಸಂಪರ್ಕ. ’ಹಿಂದೊಮ್ಮೆ ಕ್ರಿಶ್ಚಿಯನ್ ಪ್ರಾಧ್ಯಾಪಕರು ಬೋಧಿಸಿದ್ದ ವಿಚಾರಗಳಲ್ಲಿ ಜೊಳ್ಳೆಷ್ಟಿತ್ತು, ತಿರುಳೆಷ್ಟಿತ್ತು ಎಂಬುದನ್ನು ವೈಚಾರಿಕವಾಗಿ, ತಾರ್ಕಿಕವಾಗಿ ಪರೀಕ್ಷಿಸಿ ಹಿಂದೂ ಧರ್ಮದ ಶ್ರೇಷ್ಠತೆಯನ್ನರಿತರು’ ಎಂದು ದೇಜಗೌ ಸ್ಮರಿಸಿಕೊಳ್ಳುತ್ತಾರೆ.
ಅನಂತರ ಅವರ ಬದುಕು ಆತ್ಮಚಿಂತನೆಯತ್ತ ಹೊರಳಿತು. ಅವರ ಸಾಹಿತ್ಯದ ದಿಕ್ಕು ಮಗ್ಗಲು ಬದಲಿಸಿದ್ದೂ ಅನಂತರವೇ. ಸ್ವಾಮಿ ಸಿದ್ಧೇಶ್ವರಾನಂದರ ಆರೈಕೆ ಮತ್ತು ಸ್ವಾಮಿ ಶಿವಾನಂದರಿಂದ ದೀಕ್ಷೆ ದೊರೆತ ನಂತರವಂತೂ ಅವರ ಬದುಕಿಗೊಂದು ಸ್ಪಷ್ಟತೆ ದೊರಕಿಹೋಗಿತ್ತು.
ಅವರೊಂಥರಾ ತಮ್ಮದೆ ಲೋಕದಲ್ಲಿ ವಿಹರಿಸುವ ಭಾವ ಜೀವಿ. ಚೈತನ್ಯರನ್ನು ಓದುತ್ತ ಓದುತ್ತ ಪರವಶರಾಗಿ ಚೈತನ್ಯರ ಆವಾಹನೆಯಾದಂತೆ ಕಂಪಿಸಿದ್ದು; ವಿವೇಕಾನಂದರಲ್ಲೇ ಮಗ್ನರಾಗಿ ’ನಾನೇ ವಿವೇಕಾನಂದ’ ಎಂದು ಕೊಠಡಿಯಲ್ಲಿ ತಮಗೆ ತಾವೆ ಉದ್ಘೋಷಿಸಿಕೊಳ್ಳುತ್ತಿದ್ದುದು.. ಇವೆಲ್ಲವನ್ನೂ ಯಾರು ತಾನೆ ಅಲ್ಲಗಳೆಯಬಲ್ಲರು ಹೇಳಿ?
ಅದೊಮ್ಮೆ ಜೋಗ್ ಜಲಪಾತದ ಬುಡಕ್ಕಿಳಿದ ಕುವೆಂಪು ಅಲ್ಲಿಯ ಪ್ರಕೃತಿಯ ದಿವ್ಯತೆಯನ್ನು ಕಂಡು ಭಾವಾವೇಶಕ್ಕೊಳಗಾಗಿದ್ದರು. ಅನೇಕ ಗಂಟೆಗಳ ಕಾಲ ಬಾಹ್ಯಪ್ರಜ್ಞೆಯನ್ನೇ ಕಳಕೊಂಡುಬಿಟ್ಟಿದ್ದರು. ಮಧ್ಯೆ ಮಧ್ಯೆ ಅವರು ’ಜಯ್ ಕಾಳಿ! ಜಯ್ ಗುರು ಮಹಾರಾಜ್!’ ಎನ್ನುತ್ತಿದ್ದರು. ದೇಹ ಈ ಭಾವೋದ್ವೇಗವನ್ನು ತಡೆಯಲಾರದಾಯ್ತು. ಆರೋಗ್ಯ ಹದಗೆಟ್ಟಿತು. ಮೈಮೇಲೆ ಬಟ್ಟೆ ನಿಲ್ಲುತ್ತಿರಲಿಲ್ಲ. ನಿಲ್ಲುತ್ತಿದ್ದುದು ಒಂದೇ. ಪರಮಹಂಸ – ಶಾರದಾ – ವಿವೇಕಾನಂದರಿರುವ ಚಿತ್ರಪಟ. ಸ್ನಾನಕ್ಕೆ ಹೋಗುವಾಗಲೂ ಅದನ್ನು ಕಣ್ಣಿಗೊತ್ತಿಕೊಂಡು ನಿಲ್ಲುತ್ತಿದ್ದರು. ಅವರೊಮ್ಮೆ ’ಜೈ ಕಾಳಿ!’ ಎಂದೋ ’ಜೈ ರಾಮಕೃಷ್ಣ!’ ಎಂದೋ ಘೋಷಣೆ ಹಾಕಿದರೆಂದರೆ ಹಿಡಿದು ನಿಲ್ಲಿಸಲು ಆರೆಂಟು ಆಳುಗಳೂ ಸಾಕಾಗುತ್ತಿರಲಿಲ್ಲ. ಅಬ್ಬ! ಅದೊಂದು ಬಗೆಯ ವಿಚಿತ್ರ ಸ್ಥಿತಿ. ಯಾರಾದರೂ ಬಳಿಗೆ ಬಂದು ’ನೀವು ಬರೆದ ಯಮನ ಸೋಲು ಚೆನ್ನಾಗಿದೆ’ ಎಂದರೆ, ’ಅದನ್ನು ಬರೆದಿದ್ದು ನಾನಲ್ಲ, ಪುಟ್ಟಪ್ಪ. ಅವನು ಸತ್ತ’ ಎನ್ನುತ್ತಿದ್ದರು. ನಾನೆಂಬ ಭವಬಂಧ ಆ ಹೊತ್ತಿಗೆ ಕಳಚಿಹೋಗಿತ್ತು. ’ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ವೇದಾಂತ ತತ್ವದ ಸಾಕ್ಷಾತ್ಕಾರದ ಹಂತದಲ್ಲಿದ್ದರು ಅವರು. ಅವರೀಗ ವೇದಾಂತ ಮಹಾಪ್ರವಾಹದ ಒಂದು ವಾಹಿನಿಯಾಗಿ ಹರಿಯಲಾರಂಭಿಸಿದ್ದರು. ನಡೆದಾಡಿದಲ್ಲೆಲ್ಲ ಹಿಂದೂ ಪರಂಪರೆಯ ಉದಾತ್ತ ಚಿಂತನೆಗಳಿಂದ ಭೂಮಿಯನ್ನು ತೋಯಿಸಿದ್ದರು.
ಮತಾಂತರ ಮಾಡಲೆಂದು ಬರುತ್ತಿದ್ದ ಪಾದ್ರಿಗಳೆಲ್ಲ ಪುಟ್ಟಪ್ಪನವರ ಎದುರಿಗೆ ಹುಳುಗಳಂತಾಗಿಬಿಟ್ಟಿದ್ದರು. ಮಗಳು ತಾರಿಣಿ ನೆನಪಿಸಿಕೊಂಡಿದ್ದಾರೆ; ಅದೊಮ್ಮೆ ಕ್ರಿಸ್ತ ಮತಾನುಯಾಯಿಯೊಬ್ಬ ಮನೆಗೆ ಬಂದಿದ್ದನಂತೆ. ಸಂಜೆಯ ವೇಳ. ಮಾತು ಶುರುವಾಯ್ತು. ಕಂಠಪಾಠ ಮಾಡಿದ್ದಷ್ಟನ್ನು ಆತ ಚಾಚೂ ತಪ್ಪದೆ ಒಪ್ಪಿಸಿದ. ಪುಟ್ಟಪ್ಪನವರು ವೇದಾಂತ ಬಿಡು, ಕ್ರಿಸ್ತನ ಬಗ್ಗೆಯಾದರೂ ಪೂರ್ಣ ಓದಿಕೊಂಡಿದ್ದೀಯಾ? ಎಂದು ಕೇಳಿದರು. ಅವನಿಂದ ಉತ್ತರವಿಲ್ಲ. ’ಹೋಗಲಿ, ನಾನು ಓದಿಕೊಂಡಿರುವುದರ ಪ್ರತಿಶತ ಐದರಷ್ಟಾದರೂ ಓದಿಕೊಂಡಿದ್ದೀಯ?’ ಎಂದು ಕೇಳಿದರು. ಆತ ನಿರುತ್ತರ. ಕೊನೆಗೆ ವೇದಾಂತದ ಡಿಂಡಿಮವನ್ನು ಜಗತ್ತಿನೆದುರು ಬಾರಿಸಿ ಕ್ರೈಸ್ತ ಸಮುದಾಯ ಬೆಕ್ಕಸಬೆರಗಾಗುವಂತೆ ಮಾಡಿದ ವಿವೇಕಾನಂದರ ಕುರಿತು ಕೇಳಿನೋಡಿದರು. ಯಾವುದಕ್ಕೂ ಆತನಿಂದ ಸಮರ್ಥ ಉತ್ತರ ಬಾರದಿದ್ದಾಗ ತಾವೇ ಬರೆದ ’ವಿಶ್ವಮಾನವ’ ಎಂಬ ಕಿರುಹೊತ್ತಗೆಯನ್ನು ಕೈಗಿತ್ತು ಇದನ್ನಾದರೂ ಓದು ಎಂದು ಕಳಿಸಿಕೊಟ್ಟರು! ತಾವು ಕೊಟ್ಟ ಪುಸ್ತಕವನ್ನು ಆತ ಮಡಚಿ – ಮುದುರಿ ಗೇಟಿನೊಳಕ್ಕೇ ಎಸೆದು ಹೋಗಿದ್ದಾನೆಂಬುದು ಮರುದಿನ ಅವರ ಗಮನಕ್ಕೆ ಬಂತು. ಮತಪ್ರಚಾರಕನ ಬಗ್ಗೆ ಅವರಿಗೆ ಕರುಣೆಯುಕ್ಕಿಬಂದಿತ್ತೆಂದು ತಾರಿಣಿ ಬರೆಯುತ್ತಾರೆ.
ಹಾಗಂತ ಸಾರಾಸಗಟು ಹಿಂದೂ ಧರ್ಮದ ಸಮರ್ಥಕರಲ್ಲ ಅವರು. ಇದರೊಳಗಿನ ಕಂದಾಚರಣೆಗಳು, ಮೌಢ್ಯಗಳನ್ನು ಮುಲಾಜಿಲ್ಲದೆ ಎತ್ತಿ ಹೇಳುವ ಸಾಮರ್ಥ್ಯ ಅವರಲ್ಲಿತ್ತು. ಶ್ರೀರಂಗಪಟ್ಟಣದ ಯುವಜನ ಸಮ್ಮೇಳನದಲ್ಲಿ ಮತೀಯ ಅಂಧಶ್ರದ್ಧೆ, ವರ್ಣಾಶ್ರಮ, ಜಾತಿಪದ್ಧತಿಗಳ ಕುರಿತಂತೆ ಅವರು ಬೀಸಿದ ಚಾಟಿ ಏಟು ಉತ್ಪಾತವನ್ನೆ ಸೃಷ್ಟಿಸಿತ್ತು. ವೈಜ್ಞಾನಿಕ ದೃಷ್ಟಿಕೋನದ ಅವಶ್ಯಕತೆಯ ಕುರಿತು ಅವರಾಡಿದ ಮಾತುಗಳು ಸಂಪ್ರದಾಯವಾದಿಗಳ ಕಣ್ಣು ಕೆಂಪು ಮಾಡಿದವು. (ಪುಟ್ಟಪ್ಪನವರಿಗೆ ಕ್ವಾಂಟಮ್ ಫಿಸಿಕ್ಸ್ ಎಂದರೆ ಎಲ್ಲಿಲ್ಲದಷ್ಟು ಪ್ರೀತಿಯಿತ್ತು ಎಂಬುದನ್ನುನ ಈ ಸಂದರ್ಭದಲ್ಲಿ ನೆನೆಸಿಕೊಂಡರೆ ಒಳಿತು). ಮೈಸೂರು ವಿಶ್ವವಿದ್ಯಾಲಯಕ್ಕೆ ಆರೋಪಗಳ ಸುರಿಮಳೆಯಾಯ್ತು. ವಿಚಾರಣೆ ನಡೆಸಹೊರಟ ಪ್ರಾಧ್ಯಾಪಕ ಟಿ.ಎಸ್.ವೆಂಕಣ್ಣಯ್ಯ ಪುಟ್ಟಪ್ಪನವರ ಭಾಷಣವನ್ನು ಸಮರ್ಥಿಸಿ ಶಭಾಶ್‌ಗಿರಿ ಕೊಟ್ಟರು. ಹೌದು. ಪುಟ್ಟಪ್ಪನವರು ಅರ್ಥವಾಗಿದ್ದು ಕೆಲವರಿಗೆ ಮಾತ್ರ. ಜಾತಿವಾದಿಗಳು ಅವರನ್ನು ಧಿಕ್ಕರಿಸಿದರು. ದೈವ ವಿರೋಧಿಗಳು ಅವರನ್ನು ತಮ್ಮಿಷ್ಟದಂತೆ ವ್ಯಾಖ್ಯಾನಿಸುತ್ತ ತಮ್ಮವರನ್ನಾಗಿಸಿಕೊಂಡರು. ಆದರೆ ಸರಿಯಾಗಿ ಅರ್ಥೈಸಿ ಒಪ್ಪಿಕೊಂಡವರು ಕೆಲವರು ಮಾತ್ರ.
ವಿವೇಕಾನಂದರು ಕುವೆಂಪುರವರ ನರನಾಡಿಗಳಲ್ಲಿ ಪ್ರವಹಿಸುತ್ತಿದ್ದುದರಿಂದ ಅವರ ವ್ಯಕ್ತಿತ್ವಕ್ಕೆ ವಿಶೇಷವಾದ ಮೆರುಗಿತ್ತು. ಯಾರಿಗೂ ಜಗ್ಗದ, ಬಾಗದ ಧೀರ ವ್ಯಕ್ತಿತ್ವ ಸಿದ್ಧಿಸಿತ್ತು ಅವರಿಗೆ. ರಾಮಕೃಷ್ಣ ಪರಮಹಂಸರ ಶತಮಾನೋತ್ಸವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಿಜೃಂಭಣೆಯ ಕಾರ್ಯಕ್ರಮ. ಸ್ವತಃ ಯುವರಾಜರೇ ವೇದಿಕೆಯ ಮೇಲೆ ಆಸೀನರಾಗಿದ್ದರು. ಸಹಜವಾಗಿಯೇ ಶಿಷ್ಟಾಚಾರಗಳು ಸಾಕಷ್ಟಿದ್ದವು. ಬೆನ್ನು ಮಾಡದೆಯೇ ನಡೆಯಬೇಕೆನ್ನುವ, ಕೈಕಟ್ಟಿ ತಲೆ ಬಾಗಿಸಿ ನಿಲ್ಲಬೇಕೆನ್ನುವ ದಾಸ್ಯ ಸಂಕೇತದ ಸೂಚನೆಗಳವು. ಅಂದಿನ ಕಾರ್ಯಕ್ರಮ ಕುವೆಂಪುರವರ ಕವನ ವಾಚನದಿಂದ ಶುರುವಾಗಬೇಕಿತ್ತು. ಆದರೆ ಪುಣ್ಯಾತ್ಮ ಹತ್ತಿರವೆಲ್ಲೂ ಕಾಣಲೇ ಇಲ್ಲ. ಹೆಸರು ಕರೆದೊಡನೆ ಯಾವ ಶಿಷ್ಟಾಚಾರವನ್ನು ಪ್ರದರ್ಶಿಸದೆ ಎದುರಿಗೆ ಬಂದು ನಿಂತು ವಾಚಿಸಿದ ಕವನವದೇನು ಗೊತ್ತೆ?
ನಮಗಿಂದಿಗೆ ಬೇಕಾದುದು ಉದ್ಧಾರದ ಆಸಕ್ತಿ/ ಮತಿವಂತನೆ, ಓ ಮಾನವ, ಕಟಿ ಬಂಧನಗೈ ನಿಲ್ಲು!/
ಯುಗದೊಳ್ಪಿಗೆ ಜಗದೊಳ್ಪಿಗೆ ನಿನ್ನೊಳ್ಪನೆ ನೀಂ ಗೆಲ್ಲು!
ಆಹಾ! ಮೌಢ್ಯ ಪ್ರಲಯಕಾರಿ ಸಾಲುಗಳವು. ನಿನ್ನ ನೀನು ಅರಿತುಕೋ ಎಂಬುದರ ವೇದಾಂತದ ಮಹತ್ವದ ಸಂದೇಶವನ್ನು ತಮ್ಮ ಓಜಸ್ವೀ ವಾಣಿಯೊಳಗೆ ಹಿಡಿದಿಟ್ಟರು ಕುವೆಂಪು. ಮರಳಿ ಹೊರಡುವಾಗಲೂ ಅವರ ನಿಲುವಿನ್ಲಲಿ ಬದಲಾವಣೆ ಇರಲಿಲ್ಲ. ಯಾರು ಸಿದ್ಧರೋ ಇಲ್ಲವೋ.. ನಾನಂತೂ ಜಗದೊಳಿತಿಗೆ, ಯುಗದೊಳಿತಿಗೆ ಕಟಿಯ ಮೇಲೆ ಕೈಯಿಟ್ಟು ನಿಂತಿರುವೆ ಎಂಬಂತಿತ್ತು ಅವರ ಚರ್ಯೆ!
ಅವತ್ತಿನ ದಿನಗಳಲ್ಲಿ ಶ್ರೇಷ್ಠ ವಿದ್ವಾಂಸರು- ಕವಿಗಳೆಲ್ಲ ಬ್ರಾಹ್ಮಣರೇ ಆಗಿರಬೇಕೆಂಬ ಭಾವ ಸಂಪ್ರದಾಯಸ್ಥರಲ್ಲಿ ಬಲವೂರಿದ್ದಾಗ ಅದನ್ನು ಸಾರಾಸಗಟಾಗಿ ನಿರ್ಮೂಲನೆ ಮಾಡಿದವರು ಪುಟ್ಟಪ್ಪನವರು. ಈ ಕಾರಣಕ್ಕಾಗಿಯೇ ಅನೇಕರು ಪುಟ್ಟಪ್ಪನವರ ಸಾಹಿತ್ಯ ದ್ವೇಷಿಗಳಾಗಿದ್ದೂ ಉಂಟು. ಅದಕ್ಕೆ ಅವರು ಲೇಪಿಸಿದ್ದು ’ಸಂಪ್ರದಾಯ ವಿರೋಧಿ’ ಎಂಬ ಹಣೆಪಟ್ಟಿಯನ್ನು. ಪುಟ್ಟಪ್ಪನವರ ಅನೇಕ ಕವಿತೆಗಳು ಹಾಗೆನ್ನಿಸುವಂತೆ ಮಾಡುತ್ತವೆ ನಿಜ. ’ದೇವರು ಸೆರೆಯಾಳು, ದೇಗುಲವೆ ಸೆರೆಮನೆ/ ಕಾವಲು ಪೂಜಾರಿ’ ಎಂಬ ಸಾಲುಗಳಿರಲಿ; ’ಬೆಂಕಿಯ ನಂದಿಸಿ/ ಬೂದಿಯ ವಂದಿಸಿ/ ದೇವರ ಮರೆಗೈಯುತೆ/ ಪೂಜಾರಿಯೆ ಮಿಂಚುವನು’ ಎಂಬ ಸಾಲುಗಳಿರಲಿ.. ಅವರನ್ನು ಬ್ರಾಹ್ಮಣದ್ವೇಷಿ, ದೇವ ದೂಷಕ ಎನ್ನುವಂತೆ ಮಾಡಲು ಸಾಕು. ಆದರೆ ಆ ಉದ್ಗಾರಗಳ ಹಿಂದಿನ ಕಳಕಳಿ ಅರ್ಥ ಮಾಡಿಕೊಳ್ಳಬೇಕು.
ಸ್ವತಃ ಪುಟ್ಟಪ್ಪನವರೆ ದೇವರ ಕೋಣೆಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ’ಯಾ ದೇವೀ ಸರ್ವ ಭೂತೇಷು’ ಎಂದು ಪ್ರಾರ್ಥನೆಯಲ್ಲಿ ನಿರತವಾಗುತ್ತಿದ್ದುದನ್ನು ತಾರಿಣಿ ನೆನಪಿಸಿಕೊಂಡಿದ್ದಾರೆ. ಆ ಕೋಣೆಯಲ್ಲಿ ರಾಮಕೃಷ್ಣ, ಶಾರದಾ ದೇವಿ, ವಿವೇಕಾನಂದರ ಜೊತೆ ರಾಮ-ಕೃಷ್ಣರೇ ಮೊದಲಾದ ದೇವ ಮೂರ್ತಿಗಳಿದ್ದುದನ್ನು ತೇಜಸ್ವಿ ಖಾತ್ರಿಪಡಿಸಿದ್ದಾರೆ. ಕುವೆಂಪುರವರ ಅಂತರ್ದೃಷ್ಟಿ ತೆರೆದುಕೊಂಡಿತ್ತು. ಅವರ ಪೂಜೆ ಧ್ಯಾನಗಳ ಶೈಲಿ ಭಿನ್ನವಾಗಿತ್ತು. ಆಡಂಬರಕ್ಕೆ ಅಲ್ಲಿ ಕಿಂಚಿತ್ತೂ ಜಾಗವಿರಲಿಲ್ಲ. ಆಚರಣೆಗಳು ಅವರಿಗೆ ಅಗತ್ಯವೂ ಇರಲಿಲ್ಲ. ಅವರು ಎಲ್ಲವನ್ನೂ ಮೀರಿಯಾಗಿತ್ತು.
ಇವೆಲ್ಲವನ್ನು ಅರ್ಥೈಸಿಕೊಳ್ಳುವುದು ಕಷ್ಟ. ಭಾವಿಸಬಹುದಷ್ಟೇ. ಇಂದು ಅವರ ಹುಟ್ಟಿದ ಹಬ್ಬ. ಅವರನ್ನು ಹೊಕ್ಕು ಅಪ್ರತಿಮವಾಗಿಸಿದ ವಿವೇಕಾನಂದರಿಗೆ ನೂರೈವತ್ತು. ಇಬ್ಬರೂ ವಿಶ್ವಮಾನವತೆಯ ಮಾತಾಡಿದವರೇ. ಇಬ್ಬರೂ ಸಮಜದ ಕಳಕಳಿಯ ವಿಚಾರದಲ್ಲಿ ಅಗ್ರಣಿಗಳೇ. ಇವರಿಬ್ಬರನ್ನೂ ಅರ್ಥ ಮಾಡಿಕೊಳ್ಳುವ ವಿಚಾರದಲ್ಲಿ ಮಾತ್ರ ನಾವಿನ್ನೂ ಎಡವುತ್ತಲೇ ಇದ್ದೇವೆ!

4 thoughts on “ವಿಶ್ವಮಾನವ ತತ್ವದ ಶ್ರೇಷ್ಠ ಹರಿಕಾರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s