ಗಡಿಗಳೇ ಇಲ್ಲದ ವಸುಧೆಯ ಕನಸು…

“ರಾತ್ರಿ ಎಂದಿನಂತೆ ಮಲಗಿದ್ದೆ. ಬೆಳಗ್ಗೆ ಏಳುವುದರೊಳಗೆ ನಾನು ಪಾಕಿಸ್ತಾನಿಯಾಗಿಬಿಟ್ಟಿದ್ದೆ! ಅವತ್ತಿನ ರಾತ್ರಿ ನನ್ನನ್ನು ಈಗಲೂ ಕಾಡುತ್ತಿದೆ.” ಹಾಗಂತ ನತದೃಷ್ಟನೊಬ್ಬ ಹೇಳಿಕೊಳ್ಳುತ್ತಾನೆ. ಭಾರತಕ್ಕೂ ಪಾಕಿಸ್ತಾನಕ್ಕೂ ಒಂದೇ ರಾತ್ರಿಯ ಅಂತರ. ಮಲಗುವ ಮುನ್ನ ಇದ್ದ ಸಂಬಂಧ, ಗೆಳೆತನ, ಬಾಂಧವ್ಯಗಳಾವುವೂ ಎದ್ದ ನಂತರ ಇರಲೇ ಇಲ್ಲ. ಅರೆರೆ! ಅದೆಂತಹ ಭಯಾನಕ ರಾತ್ರಿಯಿರಬಹುದು? ಒಮ್ಮೆ ನಮ್ಮನ್ನು ಆ ಪರಿಸ್ಥಿತಿಯಲ್ಲಿ ಕಲ್ಪಿಸಿಕೊಂಡು ನೋಡಿ. ನಿರಾಶೆಯದೊಂದು ನಿಟ್ಟುಸಿರು ಹೊರಬರದಿದ್ದರೆ ಕೇಳಿ.
ಭಾರತ- ಬಾಂಗ್ಲಾದ ಗಡಿರೇಖೆಯಲ್ಲಿ ನಿಲ್ಲುವವರೆಗೆ ನನಗೆ ಇಂತಹ ಸಾಧ್ಯತೆಯ ಅಂದಾಜೂ ಇರಲಿಲ್ಲ. ಗಡಿಯಗುಂಟ ಇದ್ದೂ ಇರದಂತಿರುವ ಕಬ್ಬಿಣದ ಬೇಲಿ, ಮಧ್ಯೆ ಭೇದವಿಲ್ಲದೇ ಎರಡೂ ತೀರಗಳನ್ನು ತೋಯಿಸುವ ನದಿ, ಸರಳ-ಮುಗ್ಧ-ಬಡ ಜನ, ಎಲ್ಲಕ್ಕೂ ಮಿಗಿಲಾಗಿ ದೇಶ- ಗಡಿಗಳ ತಲರಾರುಗಳಿಂದ ಸಾಕಷ್ಟು ಬಂಧುಗಳನ್ನು ಕಳಕೊಂಡು ಭಾರವಾದ ಹೃದಯಗಳು. ಇವೆಲ್ಲವನ್ನೂ ನೋಡುತ್ತಿದ್ದರೆ ಗಡಿ ತಂಟೆಗಳಿಂದ ಮುಕ್ತವಾದ ವಸುಧೆಯೇ ಕುಟುಂಬವಾಗುವ ಪರಿಕಲ್ಪನೆ ನಿಜವಾಗಬಾರದೆ? ಎಂದೆನಿಸಿಬಿಡುತ್ತದೆ.

ಗಡಿ ನದಿಯಲ್ಲಿ ರಕ್ಷಣಾಪಡೆ ಸಿಬ್ಬಂದಿ
ಗಡಿ ನದಿಯಲ್ಲಿ ರಕ್ಷಣಾಪಡೆ ಸಿಬ್ಬಂದಿ

ನಮ್ಮ ಈಶಾನ್ಯ ರಾಜ್ಯಗಳಿವೆಯಲ್ಲ, ಅವುಗಳದ್ದೊಂದು ವೈಶಿಷ್ಟ್ಯವಿದೆ. ಈ ಏಳು ರಾಜ್ಯಗಳು ನಾಲ್ಕೂವರೆ ಸಾವಿರ ಕಿಲೋಮೀಟರುಗಳಷ್ಟು ವಿಸ್ತಾರವಾದ ಗಡಿಭಾಗವನ್ನು ಬಾಂಗ್ಲಾ, ಭೂತಾನ್, ಮಾಯನ್ಮಾರ್ ಮತ್ತು ಚೀನಾಗಳೊಂದಿಗೆ ಹಂಚಿಕೊಳ್ಳುತ್ತವೆ. ಆದರೆ ಈ ಇಷ್ಟೂ ರಾಜ್ಯಗಳು ಭಾರತದೊಂದಿಗೆ ಸಂಪರ್ಕ ಸಾಧಿಸುವುದು ಮಾತ್ರ ೨೨ಕಿ.ಮೀ ಉದ್ದದ ಸಿಲಿಗುರಿ ಕಾರಿಡಾರ್ ಮೂಲಕ. ಅಂದಮೇಲೆ ಇಲ್ಲಿನ ಸಂಸ್ಕೃತಿ, ಸಭ್ಯತೆ, ಆಚರಣೆಗಳ ಮೇಲೆ ಸುತ್ತಲಿನ ಪ್ರಭಾವ ಎಂಥದ್ದೆಂದು ಲೆಕ್ಕ ಹಾಕಿ. ಜನಸಂಖ್ಯೆಯ ದೃಷ್ಟಿಯಿಂದ ಒಟ್ಟೂ ಭಾರತಕ್ಕೆ ಹೋಲಿಸಿದರೆ ಈಶಾನ್ಯ ರಾಜ್ಯಗಳದ್ದು ನಗಣ್ಯವೆನಿಸುವಷ್ಟು ಕಡಿಮೆ. ಆದರೆ ಭೂಸಂಪತ್ತು, ಅರಣ್ಯ, ಜಲಸಂಪತ್ತುಗಳ ಆಧಾರದ ಮೇಲೆ ಅಳೆದರೆ ಅತಿ ಶ್ರೀಮಂತ ಭಾಗಗಳಿವು. ಹೀಗಾಗಿಯೇ ಸುತ್ತಲಿನ ತೋಳಗಳಿಗೆ ಈ ನಾಡುಗಳ ಮೇಲೆ ಹದ್ದುಗಣ್ಣು!
ಸತ್ತುವರೆದಿರುವ ನಾಲ್ಕೂ ದೇಶಗಳು ಉಂಟುಮಾಡುತ್ತಿರುವ ಸಮಸ್ಯೆಗಳು ಬೇರೆಬೇರೆಯೇ. ಭೂತಾನ್-ಮಾಯನ್ಮಾರ್‌ಗಳದ್ದೊಂದು ಬಗೆಯಾದರೆ, ಚೀನಾ-ಬಾಂಗ್ಲಾಗಳದ್ದು ಮತ್ತೊಂದು ರೀತಿ. ಅತ್ಯಾಧುನಿಕ ಮತ್ತು ರಾಜತಾಂತ್ರಿಕ ಕಿರಿಕ್ಕುಗಳಿಗೆ ಚೀನಾ ಹೆಸರುವಾಸಿಯಾದರೆ, ಬಾಂಗ್ಲಾದ್ದು ಅದಕ್ಕೆ ವಿರುದ್ಧ ತಲೆನೋವು. ತನಗೆ ಹೊರೆಯೆನ್ನಿಸುವ ಜನರನ್ನು ಭಾರತದೊಳಕ್ಕೆ ತಳ್ಳಿಬಿಟ್ಟರಾಯ್ತು. ನಮ್ಮೆಲ್ಲರ ಪಾಲಿಗೆ ಭಾರತ ಮಾತೃಭೂಮಿಯಾದರೆ ಈ ನುಸುಳುಕೋರರಿಗೆ ಪಿತೃಭೂಮಿ. ಅಲ್ಲದೆ ಮತ್ತೇನು? ನುಸುಳಿ ಬಂದ ತನ್ನವರಲ್ಲದ ಜನರಿಗೆ ಭೂಮಿ, ಕೆಲಸ, ಊಟ, ಶಿಕ್ಷಣ, ರಕ್ಷಣೆ ಎಲ್ಲದರ ಹೊಣೆಯನ್ನೂ ಭಾರತವೇ ವಹಿಸಿಕೊಳ್ಳುತ್ತಿದೆ ತಾನೆ? ಬರುವವರು ನಿರಾಶ್ರಿತರಾಗಿ ಅಭಯ ಅರಸಿ ಭಾರತದ ಸಾರ್ವಭೌಮತೆಯನ್ನು ಒಪ್ಪಿ ಬಂದರೆ ಒಂಥರಾ. ಅಂಥವರನ್ನು ಬರಸೆಳೆದು ಅಪ್ಪಿಕೊಂಡುಬಿಡಬಹುದು. ಆದರೆ ಹಾಗಾಗುತ್ತಿಲ್ಲ. ಇವರಲ್ಲಿ ಬಹುತೇಕರು ಖೋಟಾ ನೋಟುಗಳನ್ನು ಚಲಾವಣೆಗೆ ತರುವ, ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಾಣಿಕೆ ಮೂಲಕ ತಲುಪಿಸುವ, ಕೊನೆಗೆ ಮಾದಕ ವಸ್ತುಗಳನ್ನೂ ಹರಡುವ ಧಂಧೆಕೋರರು. ಮೇಲ್ನೋಟಕ್ಕೆ ಇವರು ಹೀಗೆಲ್ಲ ಮಾಡುತ್ತಾರೆಂದು ನಂಬುವುದು ಕಷ್ಟ. ನಮ್ಮೂರಿನ ಪಕ್ಕದ ಗಿಡ್ಡಪ್ಪನ ಹಳ್ಳಿಯಲ್ಲಿ ತರಕಾರಿ ಗಾಡಿ ಇಟ್ಟುಕೊಂಡಿದ್ದ ವಿಕಲಾಂಗನೊಬ್ಬ ಪಿಸ್ತೂಲುಗಳನ್ನು ಸಾಗಿಸುವ ಮಧ್ಯವರ್ತಿ ಎಂದು ಪೊಲೀಸರು ಎಳೆದೊಯ್ಯುವಾಗಲೇ ಗೊತ್ತಾಗಿದ್ದು!
ಇಂತಹಾ ಕಿರುಕುಳ ನೀಡುವ ಕೆಲಸಗಳಿಗೆ ರಾಜತಾಂತ್ರಿಕ ನೆರವು ನೀಡುವಂತಿಲ್ಲ. ತಂತ್ರಜ್ಞಾನದ ಸಾಥು ಕೊಡೋಣವೆಂದರೆ ಬಾಂಗ್ಲಾದ ಬಳಿ ಅದಿಲ್ಲ. ಹೀಗಾಗಿ ಬಾಂಗ್ಲಾದೇಶ್ ರೈಫಲ್ (ನಮ್ಮ ಬಿಎಸ್‌ಎಫ್‌ಗೆ ಪರ್ಯಾಯ) ನುಸುಳುಕೋರರಿಗೆ ಅನುಕೂಲ ಮಾಡಿಕೊಟ್ಟು ಕಣ್ಮುಚ್ಚಿ ಕೂತುಬಿಡುತ್ತದೆ. ಮೂರೂವರೆ ಸಾವಿರ ಕಿ.ಮೀಗೂ ಹೆಚ್ಚು ವಿಸ್ತಾರಕ್ಕೆ ಹಂಚಿಕೊಂಡಿರುವ ಈ ಗಡಿಯಲ್ಲಿ ಎಲ್ಲೆಂದರಲ್ಲಿ ನುಸುಳಿ ಬರುವ ಜನರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವುದು ಸುಲಭವಲ್ಲ. ಕಿಲೋಮೀಟರಿಗೆ ಇಬ್ಬರೆಂದರೂ ಏಳು ಸಾವಿರ ಜನರಾದರೂ ಬಾಂಗ್ಲಾದ ಗಡಿ ಕಾಯಲು ಬೇಕು. ಇದು ಸಾಧ್ಯವಿಲ್ಲವೆಂದು ಗೊತ್ತಿದ್ದೇ ದೇಶ ವಿಭಜನೆಯ ನಂತರವೂ ಅತ್ತಲಿಂದ ನುಸುನುಸುಳಿ ಜನರು ಬರ‍್ತಿರೋದು.
ಈ ಸಮಸ್ಯೆ, ಪಾಕಿಸ್ತಾನದಿಂದ ಬೇರೆಯಾಗಿ ಬಾಂಗ್ಲಾ ಹುಟ್ಟಿಕೊಳ್ಳುವ ಮುಂಚಿನಿಂದಲೂ ಇದ್ದದ್ದೇ. ಅಸ್ಸಾಮ್‌ನ ಅಂದಿನ ಮುಖ್ಯಮಂತ್ರಿ ವಿಮಲ್‌ಪ್ರಸಾದರು ನೆಹರೂ ಮಾತನ್ನು ಧಿಕ್ಕರಿಸಿ ನುಸುಳುಕೋರರನ್ನು ಹೊರದಬ್ಬುವ ಕೆಲಸ ಕೈಗೆತ್ತಿಕೊಂಡಿದ್ದರು. ೧೯೮೦ರಲ್ಲಿ ಮತ್ತೆ ಅಸ್ಸಾಮ್‌ನಲ್ಲಿ ನುಸುಳುಕೋರರ ವಿರುದ್ಧ ಪ್ರತಿಭಟನೆಗಳಾದಾಗ ಗಡಿಯಗುಂಟ ಬೇಲಿ ಹಾಕುವ ಯೋಜನೆ ಚರ್ಚೆಗೆ ಬಂತು. ಶಿವಸೇನೆ-ಬಿಜೆಪಿಗಳಂತೂ ಆರಂಭದಿಂದಲೂ ನುಸುಳುಕೋರರ ವಿರುದ್ಧ ದನಿಯೆತ್ತುತ್ತಲೇ ಇದ್ದವು. ಕಾರ್ಗಿಲ್ ಯುದ್ಧ ಮುಗಿಯುತ್ತಿದ್ದಂತೆ ನುಸುಳುಕೋರರ ಸಮಸ್ಯೆ ನಿಭಾಯಿಸಲೆಂದೇ ಅಡ್ವಾನಿ, ಜಾರ್ಜ್ ಫರ್ನಾಂಡಿಸ್, ಜಷ್ವಂತ್ ಸಿಂಗ್, ಯಶ್ವಂತ್ ಸಿನ್ಹಾರ ಗುಂಪು ರಚನೆಯಾಯಿತು. ಆಗಿಂದಾಗಲೇ ಗಡಿ ರಕ್ಷಣಾ ಪಡೆ (ಬಿಎಸ್‌ಎಫ್)ಗೆ ಹೆಚ್ಚಿನ ಜವಾಬ್ದಾರಿ ಬಿತ್ತು. ಬಾಂಗ್ಲಾ ನುಸುಳುಕೋರರನ್ನು ಹೊರಹಾಕುವ, ಗಡಿಬೇಲಿಯನ್ನು ಬಂದೋಬಸ್ತುಗೊಳಿಸುವ ಕಾರ್ಯಗಳು ಚುರುಕುಗೊಂಡವು. ಅತ್ತ ಬಾಂಗ್ಲಾ ದೇಶ ಬಾಯಿ ಬಡಕೊಳ್ಳುತ್ತಲೇ ಇತ್ತು. ಹಿಂದಿನ ಒಪ್ಪಂದದಂತೆ ಗಡಿಯ ಸುಮಾರು ೫೦೦ ಅಡಿಗಳ ವಿಸ್ತಾರದಲ್ಲಿ ಯುದ್ಧಕ್ಕೆ ಕಾರಣವಾಗುವ ಯಾವ ಕೆಲಸವನ್ನೂ ಮಾಡುವಂತಿರಲಿಲ್ಲ. ಬೇಲಿ ಹಾಕುವುದೆಂದರೆ ಯುದ್ಧಕ್ಕೆ ಆಹ್ವಾನ ಕೊಟ್ಟಂತೆ ಎಂಬುದು ಅದರ ವಾದ. ನಮ್ಮ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಬೇಲಿ ಹಾಕುವ ಕಾರ್ಯ ಮುಂದುವರೆಯಿತು.
ಗಡಿಯುದ್ದಕ್ಕೂ ಹರಡಿಕೊಂಡಿರುವ ಈ ಬೇಲಿ ಬಲಾಢ್ಯವಾಗಿ ತೋರುತ್ತದೆ. ೧೨ ಅಡಿಗಳ ಅಂತರದಲ್ಲಿ ನಿಲ್ಲಿಸಲ್ಪಟ್ಟ ವಿಸ್ತಾರವಾದ ಎರಡು ಬೇಲಿಗೋಡೆಗಳ ನಡುವೆ ವಿದ್ಯುತ್ ತಂತಿಗಳೇನೋ ಇವೆ. ಆದರೆ ನಿರ್ಮಾಣಗೊಂಡು ದಶಕಗಳೇ ಉರುಳಿದರೂ ಇನ್ನೂ ವಿದ್ಯುತ್ ಸಂಪರ್ಕ ಮಾಡ ಒದಗಿಸಲಾಗಿಲ್ಲ! ನಾವು ಸುತ್ತಾಡಿದ ಗಡಿಯ ಭಾಗದಲ್ಲಿ ದಿನಕ್ಕೆ ನಾಲ್ಕಾರು ಗಂಟೆ ಕರೆಂಟ್ ದಕ್ಕಿದರೆ ಅದೇ ಹೆಚ್ಚು. ಬೇಲಿಗುಂಟ ಈಗ ಹಾಕುತ್ತಿರುವ ದಾರಿದೀಪಗಳಿಗೇ ಜನರೇಟರ್‌ನಿಂದ ವಿದ್ಯುತ್ ಪೂರೈಸಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಬೇಲಿಗೆ ಅದು ಹೇಗೆ ಕರೆಂಟ್ ಹರಿಸುತ್ತಾರೋ ದೇವರೇ ಬಲ್ಲ. ಅದಾಗಲೇ ೧೯೮೯ರಲ್ಲಿ ಹಾಕಿದ ಗಡಿಬೇಲಿ ವಾತಾವರಣದ ಏರುಪೇರುಗಳಿಗೆ ಸಿಲುಕಿ ಶಿಥಿಲವಾಗಿ ಬೀಳುವ ಹಂತದಲ್ಲಿದೆ. ಅದನ್ನು ಮರುನಿರ್ಮಿಸಲು ಹೊಸ ಯೋಜನೆ ಕೈಗೆತ್ತಿಕೊಳ್ಳಬೇಕೆಂಬ ನಿರ್ಧಾರ ಕೈಗೆತ್ತಿಕೊಳ್ಳಲಾಗಿದೆ. ಅಂದರೆ.. ಅಂದರೆ, ಈ ಗಡಿ ಬೇಲಿ ನೋಡಲಿಕ್ಕಷ್ಟೆ ಬಲಾಢ್ಯ. ಇದು ಮಾಡಬಹುದಾದ ಕೆಲಸ ಅಷ್ಟಕ್ಕಷ್ಟೇ. ಈ ಸಂಗತಿ ಗಡಿಕಾಯುವವರಿಗೂ ಗೊತ್ತಿದೆ.
ಇಷ್ಟಕ್ಕೂ ಈ ಸೈನಿಕರಾದರೂ ಏನು ಮಾಡಬಹುದು ಹೇಳಿ? ಬಾಂಗ್ಲಾ ನುಸುಳುಕೋರರು ಹೊತ್ತುತರುವ ತರಕಾರಿಗಳಿಗೆ, ದಾಸ್ತಾನುಗಳಿಗೆ ಅವರೂ ಗ್ರಾಹಕರೇ. ಇನ್ನು ನಮ್ಮ ಜನರಿಗೂ ಕೃಷಿಯನ್ನು ಬಿಟ್ಟರೆ, ಬಾಂಗ್ಲಾದಿಂದ ವಸ್ತುಗಳನ್ನು ತಂದು, ಹೆಚ್ಚು ಬೆಲೆಗೆ ಮಾರಿ ಲಾಭ ಮಾಡಿಕೊಳ್ಳುವುದೇ ಮುಖ್ಯ ಉದ್ಯೋಗ. ಸರಕಾರದ ದೃಷ್ಟಿಯಲ್ಲಿ ಅದು ಕಳ್ಳಸಾಗಾಣಿಕೆ, ಅಲ್ಲಿನ ಜನರ ಪಾಲಿಗೆ ಸಹಜ ವ್ಯವಹಾರ. ಅಷ್ಟು ಮಾತ್ರವಲ್ಲ, ಗಡಿಸೈನಿಕರು ನುಸುಳುಕೋರರನ್ನು ಸುಲಭವಾಗಿ ಗುರುತಿಸಿ ವಿಚಾರಣೆ ನಡೆಸಿದರೂ ಕೇಂದ್ರ ಸರ್ಕಾರದ ಇಷಾರೆ ಸಿಗುವವರೆಗೆ ಅವರನ್ನು ಹೊರ ದಬ್ಬುವಂತಿಲ್ಲ! ದೇಶಾದ್ಯಂತ ಮೂರುಕೋಟಿಯಾದರೂ ನುಸುಳುಕೋರರಿರಬಹುದಾ ಎಂದು ಬಿಎಸ್‌ಎಫ್ ಸೈನಿಕನ ಬಳಿ ಕೇಳಿನೋಡಿ. ಆತ ತಲೆ ಅಲ್ಲಾಡಿಸುತ್ತಾನೆ. ಇಲ್ಲ ಎಂದಲ್ಲ, ಅದಕ್ಕೂ ಹೆಚ್ಚು ಇದ್ದಾರೆ ಎನ್ನುವ ಅರ್ಥದಲ್ಲಿ!
ಒಮ್ಮೆ ಬಾಂಗ್ಲಾ – ಭಾರತಗಳ ನಡುವಣ ಮಿಜೋರಾಮ್‌ನುದ್ದಕ್ಕೂ ಹರಡಿರುವ ಗಡಿಭಾಗದಲ್ಲಿ ನಿಂತರೆ ಅರಿವಾಗುತ್ತೆ. ಸ್ವಯಂ ನಿರ್ಬಂಧ ಹೇರಿಕೊಂಡ ಹೊರತು ನುಸುಳುವುದನ್ನು ತಡೆಯುವುದು ಸಾಧ್ಯವೇ ಇಲ್ಲ. ಢಿಮಾಗಿರಿಗೆ ಹೊಂದಿಕೊಂಡ ಗಡಿಯ ಹಳ್ಳಿ ತಬ್ಲಾಬಾಗ್‌ನಲ್ಲಿ ಬುದ್ಧನ ಅನುಯಾಯಿಗಳಾಗಿರುವ ಚಕ್ಮಾ ಜನಾಂಗೀಯರಿದ್ದಾರೆ. ಗಡಿಯ ಆ ಭಾಗದಲ್ಲೂ ಇರುವುದು ಚಕ್ಮಾಗಳೇ. ಇಬ್ಬರ ನಡುವೆ ನದಿ. ಕರ್ನಾಟಕದಲ್ಲಿ ಕುಳಿತ ನಮಗೆ ಅದು ಗಡಿರೇಖೆಯಾಗಿರಬಹುದು. ಆದರೆ ಚಕ್ಮಾಗಳಿಗೆ ಆ ನದಿ ಬಂಧುಗಳನ್ನು ಬೆಸೆಯುವ ದಾರಿ. ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕುಳಿತು ಸಾಗುತ್ತಿದ್ದರೆ, ಆ ದಡದಲ್ಲಿ ಸ್ನಾನ ಮಾಡುತ್ತಿರುವವರು ಬಾಂಗ್ಲಾ ದೇಶೀಯರು, ಈ ದಡದಲ್ಲಿ ಆಡುತ್ತಿರುವವರು ಭಾರತೀಯರು. ನಡುವೆ ಓಡಾಡುವ ದೋಣಿಗಳಲ್ಲಿ ಮೂರು ಬಣ್ಣಗಳ ಧ್ವಜ ಹೊತ್ತಿರುವಂಥವು ನಮ್ಮವು, ಹಸಿರು-ಕೆಂಪು ಬಣ್ಣದ ಧ್ವಜ ಹೊತ್ತ ದೋಣಿಗಳು ಅವರವು. ಅಷ್ಟೇ.
ಆದರೆ ಇಲ್ಲೊಂದು ದಟ್ಟವಾದ ಅಪಾಯವಿದೆ. ಹೀಗೆ ಓಡಾಡುವ ದೋಣಿಯ ಧ್ವಜ ಬದಲಾಯಿಸಿಕೊಂಡು ಬಾಂಗ್ಲಾ ದೇಶೀಯರು ಅತಿ ಸುಲಭವಾಗಿ ಭಾರತದೊಳಕ್ಕೆ ನುಗ್ಗುತ್ತಿದ್ದಾರೆ. ಹೀಗೆ ನುಗ್ಗಿದವ ಢಿಮಾಗಿರಿಯಿಂದ, ಲುಂಗ್ ಲೆಯ್‌ಗೆ ಹೋಗಿ, ರಾಜಧಾನಿ ಐಜ್ವಾಲ್ ಸೇರಿಬಿಟ್ಟರೆ ಮುಗಿಯಿತು. ಅಲ್ಲಿಂದ ಸಲೀಸಾಗಿ ಅಸ್ಸಾಮ್ ತಲುಪಿಕೊಳ್ಳುತ್ತಾನೆ. ಆಮೇಲೆ ಅವನನ್ನು ಹುಡುಕಿ ಹೊರದಬ್ಬಲು ಹರಸಾಹಸ ಪಡಬೇಕು. ಆದ್ದರಿಂದಲೇ ಈಗ ಏಳೂ ಈಶಾನ್ಯ ರಾಜ್ಯಗಳು ಚುರುಕಾಗಿಬಿಟ್ಟಿವೆ. ಮೇಘಾಲಯದಿಂದ ಕಳೆದ ಐದು ವರ್ಷಗಳಲ್ಲಿ ಹನ್ನೆರಡು ಸಾವಿರ ಜನರನ್ನು ಹುಡುಕಿ ಹೊರದಬ್ಬಲಾಗಿದ್ದರೆ, ಮಣಿಪುರವೊಂದರಿಂದಲೇ ಕಳೆದ ಕೆಲವು ತಿಂಗಳಲ್ಲಿ ೬೦ ಜನರನ್ನು ಹುಡುಕಿ ಹೊರಗಟ್ಟಲಾಗಿದೆ. ತತ್ತರಿಸಿಹೋಗಿರುವ ಅಸ್ಸಾಮ್ ಸರ್ಕಾರವೂ ಜನ-ಪ್ರತಿನಿಧಿಗಳ ಸಭೆ ಸೇರಿಸಿ, ತಂಡಗಳನ್ನು ರಚಿಸಿ, ಬಾಂಗ್ಲಾದ ನುಸುಳುಕೋರರನ್ನು ಗುರುತಿಸುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದೆ.
ಹಾಗೆಂದೇ ಬಾಂಗ್ಲಾದಿಂದ ಬರುವ ನುಸುಳುಕೋರರನ್ನು ಮಿಜೋಗಳು ಬಂಧುಗಳೆಂದು ಅಲಕ್ಷ್ಯ ಮಾಡುವಂತಿಲ್ಲ. ಅಲ್ಲದೆ ನುಸುಳುಕೋರರು ಹಂತಹಂತವಾಗಿ ಆ ರಾಜ್ಯದ ನಕ್ಷೆಯನ್ನೇ ಬದಲಿಸತೊಡಗಿದ್ದಾರೆ. ಅಲ್ಲಿನ ಸರ್ಕಾರ ಎಚ್ಚೆತ್ತು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ. ತಬ್ಲಾಬಾಗ್‌ನ ಜನತೆಗೂ ಈಗ ಆತಂಕ. ಬೇಲಿ ಬಂದೋಬಸ್ತಿನ ಕೆಲಸ ಪೂರ್ಣಗೊಂಡರೆ ಬೇಲಿಯ ಹೊರಗಿನ ತಮ್ಮ ಜಮೀನುಗಳೆಲ್ಲ ಕೈತಪ್ಪಿ ಹೋಗುವವೆಂಬ ನೋವು ಒಂದೆಡೆ, ಬೇಲಿಯಾಚೆಯ ಬಂಧುಗಳ ಮನೆಗೆ ಹೋಗಿಬರುವುದು ಸಾಧ್ಯವಾಗುವುದಿಲ್ಲ ಎಂಬ ಕೊರಗು ಮತ್ತೊಂದೆಡೆ. ಮತ-ಪಂಥಗಳ ಹಿನ್ನೆಲೆಯಲ್ಲಿ ರಾಜಕೀಯ ಲಾಭಪಡಕೊಳ್ಳುವ ಹುನ್ನಾರದ ಹಿಂದೆ ಒಂದಿಡೀ ಸಮಾಜ ಬೇಯುವುದು ಹೀಗೆಯೇ.

2 thoughts on “ಗಡಿಗಳೇ ಇಲ್ಲದ ವಸುಧೆಯ ಕನಸು…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s