ಸಸ್ಯಶಾಸ್ತ್ರದ ಮಹಾಬೋಧಿ

ಕೆಲವೊಮ್ಮೆ ಬದುಕಿನಲ್ಲಿ ಎಂತೆಂಥ ಅವಕಾಶಗಳನ್ನು ಕಳೆದುಕೊಂಡುಬಿಡುತ್ತೇವೆ ಗೊತ್ತಾ? ಬಹುಕಾಲದವರೆಗೂ ಅದರ ಬಗ್ಗೆ ಮೆಲುಕು ಹಾಕುವಾಗಲೆಲ್ಲ ಹೊಟ್ಟೆಯಲ್ಲಿ ತಳಮಳವಾಗುತ್ತೆ. ಸಂತನಂತೆ ಬದುಕಿ, ಋಷಿಯಂತೆ ತಪಸ್ಸುಗೈದು, ಪರಿವ್ರಾಜಕನಾಗಿ ಜಗವ ಸುತ್ತಿ ತನ್ನೊಳಗಿನ ಜ್ಞಾನವನ್ನೆಲ್ಲ ಧಾರೆಯೆರೆದು, ಮರಳಿ ಮಾತೃಭೂಮಿಗೆ ಬಂದು ಜ್ಞಾನಸ್ರೋತಕ್ಕೆ ನಮಿಸಿದ ಸಸ್ಯಶಾಸ್ತ್ರ ಪಂಡಿತ ಪಲ್ಲತಡ್ಕ ಕೇಶವ ಭಟ್ಟರನ್ನು ಒಮ್ಮೆಯೂ ನೋಡುವುದಾಗಲಿಲ್ಲವೆಂಬ ಸಂಕಟ ಅದು. ಭಾರತೀಯ ಸಿದ್ಧಾಂತಗಳನ್ನೆ ನಂಬಿ, ಅದರಂತೆ ಬದುಕಿ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡ ವ್ಯಕ್ತಿ ಅವರು.
ಒಲವು ಆಯುರ್ವೇದದ ಕಡೆಗಿದ್ದರೂ ಅದರ ಮೂಲದ ಹುಡುಕಾಟಕ್ಕೆಂದೇ ಸಸ್ಯಶಾಸ್ತ್ರವನ್ನು ಅರಸಿ ಅಧ್ಯಯನ ಶುರುಮಾಡಿದರು. ಸಸ್ಯದ ಅಧ್ಯಯನ ಮಾಡುತ್ತ ಮಾಡುತ್ತದೇಹದ ರಚನೆಯೊಂದಿಗೆ ತಾಳೆ ಹಾಕಿ ನೋಡಲಾರಂಭಿಸಿದರು. ಈಗ ಆಯುರ್ವೇದದ ವಾಸ್ತವಗಳನೇಕ ಅವರ ಕಣ್ಮುಂದೆ ಕುಣಿದಾಡತೊಡಗಿದವು. ಔಷಧಿಯನ್ನೆ ಆಹಾರ ಮಾಡಿಕೊಂಡಿರುವ ಮಾನವನಿಗೆ ಆಹಾರವನ್ನೆ ಔಷಧಿಯಾಗಿಸುವ ನಿಟ್ಟಿನಲ್ಲಿ ಅವರ ಪ್ರಯತ್ನಗಳು ಮೊದಲಾದವು. ಚೆನ್ನೈನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತ ಜೀವನವನ್ನೂ ತೂಗಿಸಿಕೊಂಡು ಡಿಗ್ರಿಯನ್ನು ಪಡಕೊಂಡರು. ಮುಂದೆ ಬಿಜಿಎಲ್ ಸ್ವಾಮಿಯವರ ಶಿಷ್ಯತ್ವ ದೊರಕಿ ಶಾಸ್ತ್ರೀಯ ಅಧ್ಯಯನವೂ ನಡೆದುಬಿಟ್ಟಿತು. ಕೇಶವ ಭಟ್ಟರು ಈಗ ಪ್ರಾಚೀನ ಶಾಸ್ತ್ರ, ಆಧುನಿಕ ವಿಜ್ಞಾನಗಳೆರಡರಲ್ಲೂ ಪರಿಣತಿ ಪಡೆದವರಾದರು.
ಅದೃಷ್ಟ ಕರೆಯಿತು. ವೆನಿಜುಯೆಲಾದ ವಿಶ್ವವಿದ್ಯಾಲಯ ಸಸ್ಯಶಾಸ್ತ್ರದ ಬೋಧಕರಾಗಿ ಇವರನ್ನು ಕರೆಸಿಕೊಂಡಿತು. ಒಂದು ತಿಂಗಳ ಅವಧಿಯಲ್ಲಿ ಸ್ಪ್ಯಾನಿಷ್ ಕಲಿಯುವ ಸಾಹಸ. ಕೊನೆಯ ಒಂದು ವಾರದೊಳಗೆ ಹುಡುಗಿಯನ್ನು ಹುಡುಕಿ ಮದುವೆಯನ್ನೂ ಮುಗಿಸಿಕೊಳ್ಳಬೇಕಾದ ಮಹಾ ಸಾಹಸ! ಗಂಡ ಹೆಂಡತಿ ವೆನಿಜುಯೆಲಾಕ್ಕೆ ಹೊರಟರು.
ಪಕ್ಕಾ ಸಸ್ಯಾಹಾರಿ! ಮಾಂಸಾಹಾರವೇ ತುಂಬಿ ತುಳುಕಾಡುತ್ತಿದ್ದ ನಾಡಿನಲ್ಲಿ ಮೊದಲ ಕೆಲವಾರು ದಿನಗಳನ್ನು ಯಾತನೆಯಿಂದಲೇ ಕಳೆದರು. ಇಲ್ಲಿಂದ ಹೋದವರನೇಕರು ಅನಿವಾರ್ಯಕ್ಕೆ ಬಗ್ಗಿ ಮಾಂಸ ಜಗಿಯಲು ಶುರು ಮಾಡಿಬಿಟ್ಟಿದ್ದರು. ಕೇಶವ ಭಟ್ಟರು ಒಲ್ಲೆಯೆಂದರು. ಹಣ್ಣುಗಳನ್ನು ಅರಸಿದರು. ಅಲ್ಲಿನ ಸಸ್ಯಶ್ರೀಮಂತಿಕೆಯಲ್ಲಿ ತಮಗೆ ಬೇಕಾದ ಸಸ್ಯ ಪ್ರಭೇದಗಳನ್ನು ಆರಿಸಿಕೊಂಡು ತಂಬುಳಿ ಮಾಡಿಕೊಂಡರು. ಅಲ್ಲಿನವರೂ ಬೆರಗಾಗುವಂತಹ ಅಪರೂಪದ ಪದಾರ್ಥಗಳನ್ನು ತಯಾರಿಸಿದರು. ಅಷ್ಟೇ ಅಲ್ಲ. ಅವುಗಳನ್ನು ತಿನ್ನುವಂತೆ, ತನ್ಮೂಲಕ ಆರೋಗ್ಯ ಭದ್ರವಾಗಿಸಿಕೊಳ್ಳುವಂತೆ ತಾಕೀತು ಮಾಡಿದರು, ಗೆದ್ದರು.
ಒಬ್ಬ ಸಸ್ಯಶಾಸ್ತ್ರಜ್ಞ ಈಗ ವೈದ್ಯನಾಗಿದ್ದ. ಪ್ರಾಕೃತಿಕ ಆರೋಗ್ಯದ ಕುರಿತಂತೆ ಅಪಾರ ಜನರ ಒಲವು ಗಳಿಸಿದ್ದ. ವೆನಿಜುಯೆಲಾದ ಅವರ ಮನೆಯೀಗ ಆಸ್ಪತ್ರೆ. ಒಂದಿಬ್ಬರಿಂದ ಶುರುವಾಗಿದ್ದು ನೂರಾರು ಜನ ರೋಗಿಗಳು ಭೇಟಿ ಕೊಡುವ ಆಸ್ಪತ್ರೆ. ಸಹಜವಾಗಿಯೇ ಸ್ಥಳೀಯ ವೈದ್ಯರು ಕೋಪಗೊಂಡರು. ಇಲ್ಲಸಲ್ಲದ ಆರೋಪಗಳನ್ನು ಹೊರಿಸಲಾಯ್ತು. ವಿಚಾರಣೆಗೆಂದು ಕರಕೊಂಡು ಹೋದರೆ ವಿಚಾರಿಸಬೇಕಾದವರೇ ಇವರಿಂದ ಗುಣ ಹೊಂದಿದ ರೋಗಿಯೂ ಆಗಿರುತ್ತಿದ್ದರು! ವಿಶ್ವವಿದ್ಯಾಲಯ ಕೇಶವ ಭಟ್ಟರಿಗೆ ಸುಸಜ್ಜಿತ ಪ್ರಯೋಗಾಲಯವನ್ನು ಬಿಟ್ಟುಕೊಟ್ಟಿತು. ಅನೇಕ ಶಿಷ್ಯರು ನಿರ್ಮಾಣಗೊಂಡರು. ಸ್ಪ್ಯಾನಿಷ್ ಭಾಷೆಯಲ್ಲಿ ಭಟ್ಟರು ಬರೆದ ಪುಸ್ತಕ ಜನಪ್ರಿಯವಾಯ್ತು. ಮುಂದೊಮ್ಮೆ ನಕ್ಸಲರಾಗಿ ಪರಿವರ್ತಿತರಾದ ಇವರದೇ ಶಿಷ್ಯರ ಕೈಲಿ ಈ ಪುಸ್ತಕ ದೊರೆತು, ಸರ್ಕಾರ ಇವರನ್ನು ಅನುಮಾನದ ಕಣ್ಣಿನಿಂದ ನೋಡಲಾರಂಭಿಸಿತು. ಪೊಲೀಸ್ ದಾವೆ ಹೂಡಿ ಕೋರ್ಟಿಗೆಳೆದುಕೊಂಡು ಹೋದರು. ಅದೊಂದು ರೀತಿಯ ಆತಂಕದ ಅವಧಿ. ಈ ಭಯದ ಮೋಡವನ್ನು ಸರಿಸಿದವರು ಸ್ವತಃ ನ್ಯಾಯಾಧೀಶರು. ಕೇಶವ ಭಟ್ಟರು ಗುಣಪಡಿಸಿದ ರೋಗಿಗಳಲ್ಲಿ ನಾನೂ ಒಬ್ಬ. ಅವರು ದ್ರೋಹಿಯಾಗಿರಲು ಸಾಧ್ಯವೇ ಇಲ್ಲವೆಂದು ತೀರ್ಪು ನೀಡಿ ಗೌರವದಿಂದಲೇ ಕಳಿಸಿಕೊಟ್ಟರು!

ಕೇಶವಭಟ್ಟರು ಪರಿಚಯವಿಲ್ಲದ ಆ ನಾಡಿನಲ್ಲಿ ಜಮೀನು ಕೊಂಡರು. ಆರೋಗ್ಯದ ಕುರಿತಂತೆ ಶಿಬಿರಗಳನ್ನು ಆಯೋಜಿಸಿದರು. ಸಾತ್ವಿಕ ಆಹಾರ, ಸಾತ್ವಿಕ ಬದುಕಿನ ಬಗ್ಗೆ ತಿಳಿಹೇಳಿದರು. ತಾವೇ ರುಚಿರುಚಿಯಾದ ಅಡುಗೆಗಳನ್ನು ಮಾಡಿ ಬಡಿಸುತ್ತಿದ್ದರು. ಶಿಷ್ಯರು ಬಂದರೆ ಗಿಡಮರಗಳನ್ನು ತೋರಿಸಿ ಎಲೆಗಳ- ಕಾಂಡಗಳ ರುಡುವಂತೆ ಹೇಳಿ, ಅದರ ಗುಣ ಮತ್ತು ರುಚಿಗಳ ಸಾಮ್ಯತೆಗಳನ್ನು ವಿವರಿಸುತ್ತಿದ್ದರು. ಒಂದು ರೀತಿ ಸಸ್ಯಗಳ ಅಂತರಂಗ ಅವರಿಗೆ ಕರಗತವಾಗಿಬಿಟ್ಟಂತೆ ತೋರುತ್ತಿತ್ತು.
ಇದು ವಿಶೇಷವಲ್ಲ, ಕೇಶವ ಭಟ್ಟರಿಗೆ ನಾಡಿ ವಿದ್ಯೆಯೂ ಗೊತ್ತಿತ್ತು. ಅದು ಫಲ ಜ್ಯೋತಿಷ್ಯವಲ್ಲ. ಕೈ ನಾಡಿಯನ್ನು ಹಿಡಿದು ಕೆಲವು ಸೆಕೆಂಡುಗಳ ಕಾಲ ಕಣ್ಮುಚ್ಚಿ ಕುಳಿತರೆ ರೋಗಿಯನ್ನು ಪೀಡಿಸುತ್ತಿರುವ ಕಾಯಿಲೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ಕೆಲವೊಮ್ಮೆಯಂತೂ ಕಾಲ ಹಿಂದಿರುವ ಗಂಟು, ದೀರ್ಘಕಾಲದಿಂದ ಬಾಧಿಸುತ್ತಿರುವ ಹೃದಯ ಬೇನೆ ಇವುಗಳ ಬಗ್ಗೆಯೂ ಕರಾರುವಾಕ್ಕಾಗಿ ಹೇಳಿ ದಂಗುಬಡಿಸುತ್ತಿದ್ದರು. ಭ್ರೂಮಧ್ಯೆ ಗಮನ ಕೇಂದ್ರೀಕರಿಸಿ ದಿಟ್ಟಿಸುತ್ತ, ತಿಂದ ಆಹಾರದ ಬಗ್ಗೆ ಹೇಳುವಷ್ಟು ನೈಪುಣ್ಯತೆ ಅವರಿಗಿತ್ತು. ಕೊನೆಗೆ ನೂರು ಅಡಿ ದೂರ ಕುಳಿತೇ ರೋಗವೇನು? ಅದಕ್ಕೆ ಕಾರಣ- ಪರಿಹಾರಗಳೇನು ಎಂದೆಲ್ಲ ಸೂಚಿಸುತ್ತಿದ್ದರು. ಒಮ್ಮೆ ವೆನಿಜುಯೆಲಾದ ಟೀವಿ ಶೋ ಒಂದರಲ್ಲಿ ಇವರ ಸಂದರ್ಶನ ನಡೆಯುತ್ತಿತ್ತು. ಸಂದರ್ಶಕಿ ಮುಟ್ಟದೆಯೇ ರೋಗ ಯಾವುದೆಂದು ಹೇಳುವ ಕೇಶವ ಭಟ್ಟರ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಭಟ್ಟರು ಮಾಡಿದ್ದೇನು ಗೊತ್ತೆ? ದೂರದಲ್ಲಿ ಕುಳಿತು ಆಕೆಯನ್ನು ನೋಡುತ್ತಾ ದೀರ್ಘಕಾಲದಿಂದ ಅವಳನ್ನು ಬಾಧಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಹೇಳಲಾರಂಭಿಸಿ ದಂಗುಬಡಿಸಿದ್ದರು! ಅವಳು ಶೋ ನಡುವೆಯೇ ತನ್ನ ಕಾಯಿಲೆಗೆ ಪರಿಹಾರ ಹೇಳುವಂತೆ ದುಂಬಾಲು ಬಿದ್ದಳು. ಈ ರೀತಿಯ ಘಟನೆಗಳು ಒಂದೆರಡಲ್ಲ.
ಕೇಶವಭಟ್ಟರದು ಯಾವಾಗಲೂ ಒಂದೇ ಶೈಲಿ. ಬಿಳಿಬಿಳಿಯ ಬಟ್ಟೆ, ಹೆಗಲಿಗೊಂದು ಚೀಲ. ಕಾಲಿಗೊಂದು ಚಪ್ಪಲಿ. ಉಹೂಂ.. ಯಾವ ಕಾರಣಕ್ಕೂ ಯಾರಿಗಾಗಿಯೂ ಇದನ್ನು ಬದಲಾಯಿಸಿದವರಲ್ಲ ಇವರು. ಒಮ್ಮೆ ದೂರದ ಕರಾಕಪ್ಪಿನಲ್ಲಿ ಒಂದು ಸಭೆಗೆ ಇದೇ ವೇಷದಲ್ಲಿ ಭಟ್ಟರು ತೆರಳಿದರು. ಒಳಗೆ ಕುಳಿತಿದ್ದವರೆಲ್ಲ ಸೂಟು-ಬೂಟುಧಾರಿಗಳೇ ಆಗಿದ್ದರು. ದ್ವಾರಪಾಲಕ ಚಪ್ಪಲಿ ಹಾಕಿಕೊಂಡು ಒಳಹೋಗುವಂತಿಲ್ಲ ಎಂದು ಸನ್ನೆ ಮಾಡಿದ. ಭಟ್ಟರು ತಡಮಾಡಲಿಲ್ಲ. ಬದಿಯಲ್ಲಿಯೇ ಚಪ್ಪಲಿ ಬಿಚ್ಚಿಟ್ಟು ಸರಸರ ಒಳ ನಡೆದೇ ಬಿಟ್ಟರು!
ಭಾರತಕ್ಕೆ ವೆನಿಜುಯೆಲಾದ ರಾಯಭಾರಿಯಿಂದ ಹಿಡಿದು, ಅಲ್ಲಿನ ಪ್ರಧಾನಿಯವರೆಗೆ ಎಲ್ಲರೂ ಕೇಶವ ಭಟ್ಟರ ರೋಗಿಗಳೇ ಆಗಿದ್ದರು. ಲಕ್ಷಾಂತರ ಜನ ಮಾಂಸಾಹಾರ ತ್ಯಜಿಸಿ ಈಗ ಸಾತ್ವಿಕ ಆಹಾರಕ್ಕೆ ಬದಲಾಗಿದ್ದರು. ಸರ್ಕಾರ ಸಾವಿರದ ನೂರು ಎಕರೆಯಷ್ಟು ವಿಸ್ತಾರವಾದ ನಿತ್ಯಹಸಿರು ಕಾಡುಗಳನ್ನು ಭಟ್ಟರ ಕೈಗಿತ್ತು ಸಾತ್ವಿಕ ಜೀವನದ ಮಾದರಿ ರೂಪಿಸಿಕೊಡುವಂತೆ ವಿನಂತಿಸಿಕೊಂಡಿತು. ನಾಲ್ಕು ವರ್ಷಗಳ ಕಾಲ ಅದೇ ಯೋಜನೆಯಲ್ಲಿ ಮನಸಾರೆ ದುಡಿದರು ಭಟ್ಟರು.
ಭಾರತ ಅವರನ್ನೀಗ ಕೂಗಿ ಕರೆಯುತ್ತಿತ್ತು. ಕೇಶವ ಭಟ್ಟರು ಕರ್ನಾಟಕದ ವಿಶ್ವ ವಿದ್ಯಾಲಯವೊಂದಕ್ಕೆ ಸಸ್ಯಶಾಸ್ತ್ರದ ಅಧ್ಯಾಪಕರಾಗಿ ಬಂದರು. ಅವರು ಪಾಠ ಮಾಡುವ ಶೈಲಿ ಮಾಮೂಲಿ ಪ್ರೊಫೆಸರುಗಳದಂತಿರಲಿಲ್ಲ. ಯಾವುದಾದರೂ ಗಿಡದೆದುರಿಗೆ ನಿಂತು ಅದರ ಪೂರ್ವಾಪರ ವಿವರಿಸುತ್ತಿದ್ದರು. ಆಯಾ ಕಾಲಘಟ್ಟದಲ್ಲಿ ಅವುಗಳ ರುಚಿಯನ್ನು ನೋಡಿ ಅದಕ್ಕೆ ಕಾರಣ ವಿವರಿಸುತ್ತಿದ್ದರು. ಹೀಗಾಗಿ ಕೇಶವಭಟ್ಟರ ಶಿಷ್ಯರೆಂದರೆ ವಿಶೇಷ ಜ್ಞಾನವುಳ್ಳವರೆಂದೇ ಅರ್ಥ. ಮನೆಯೆದುರು ಹಳ್ಳಿಯ ಹೆಂಗಸು ಕಾಡಿನ ಪದಾರ್ಥಗಳನ್ನು ಹೊತ್ತೊಯ್ಯುತ್ತಿದ್ದರೆ, ಆಕೆಯನ್ನು ಕರೆದು, ಬುಟ್ಟಿಯಲ್ಲಿನ ಸಸ್ಯಗಳನ್ನು ಗಮನಿಸಿ, ವಿಶ್ಲೇಷಣೆ ನಡೆಸಿದ ಮೇಲೆಯೇ ಅವರಿಗೆ ಸಮಾಧಾನ.
ವೈಜ್ಞಾನಿಕ ಮನೋಭಾವ ಇರೋದು ಹೀಗೆಯೇ. ಅದು ವಿಜ್ಞಾನದ ಪುಸ್ತಕಗಳನ್ನು ಓದುವುದರಿಂದ ಬರುವಂತಹುದಲ್ಲ. ಗಮನಿಸಿ ನೋಡುವುದರಿಂದ ಬರುವಂತಹದ್ದು. ಅದಕ್ಕೇ ಕೇಶವ ಭಟ್ಟರು ಅವಕಾಶ ಸಿಕ್ಕಾಗಲೆಲ್ಲ ಆಗಸದ ಕಡೆ ಮುಖ ಮಾಡಿ ಕೂತಿರುತ್ತಿದ್ದರು. ನಕ್ಷತ್ರಗಳನ್ನು ನೋಡುತ್ತಿದ್ದರು. ಅವುಗಳ ಚಲನೆಯನ್ನು ಗಮನಿಸುತ್ತಿದ್ದರು. ’ಇದು ದೃಷ್ಟಿಯನ್ನು ಸೂಕ್ಷ್ಮಗೊಳಿಸುತ್ತದೆ’ ಎಂಬ ಅವರ ಮಾತು ಸುಳ್ಳಲ್ಲ. ನಮ್ಮ ಐದೂ ಇಂದ್ರಿಯಗಳು ಸಾತ್ವಿಕವಾಗಿ ಚುರುಕಾಗಿಬಿಟ್ಟರೆ ಅದರ ಸಾಮರ್ಥ್ಯಕ್ಕೆ ಯಾವುದು ಸರಿದೂಗಬಲ್ಲದು ಹೇಳಿ! ಅನೇಕ ಬಾರಿ ಕೇಶವ ಭಟ್ಟರು ಪ್ರಸ್ಥಾಪಿತ ವೈಜ್ಞಾನಿಕ ಸತ್ಯಗಳನ್ನೂ ಅಲ್ಲಗಳೆದುಬಿಡುತ್ತಿದ್ದರು. ಅದರಿಂದಾಗಿ ಅನೇಕ ಪ್ರಗತಿಪರರ ಕೆಂಗಣ್ಣಿಗೂ ಗುರಿಯಾಗಿದ್ದರು. ಹಾಗಂತ ಅವರು ಕೇಳುವ ಪ್ರಶ್ನೆಗಳು ಸಾಮಾನ್ಯವಾಗಿಯೇನೂ ಇರುತ್ತಿರಲಿಲ್ಲ. ಆಮ್ಲಜನಕ ರಕ್ತಕ್ಕೆ ಸೇರುತ್ತದೆಯಾದರೆ, ಅದು ದ್ರವವಾಗಿಯೋ ಘನವಾಗಿಯೋ ಅನಿಲವಾಗಿಯೋ? ಪ್ರಶ್ನೆ ಸಲೀಸು. ಉತ್ತರ ಕೊಡಿ ನೋಡೋಣ! ಅದು ಘನವಾಗಲಿಕ್ಕೆ ಸಾಧ್ಯವೇ ಇಲ್ಲ. ದ್ರವವಾದರೆ ರಕ್ತದೊಂದಿಗೆ ಬೆರೆತಾಗ ಪ್ರಮಾಣ ಹೆಚ್ಚಾಗಿಬಿಡಬೇಕು. ಆದರೆ ಹಾಗಾಗುವುದಿಲ್ಲ. ಅನಿಲವಾಗುತ್ತದೆಯಾದರೆ, ಚಲಿಸುವಾಗ ಗಾಳಿಯ ಗುಳ್ಳೆಗಳು ಅಡ್ಡಗಟ್ಟಬೇಕು. ಹಾಗೂ ಆಗುವುದಿಲ್ಲ! ಮತ್ತೆ ಈ ಆಮ್ಲಜನಕ ನಿಜವಾಗಿಯೂ ಏನು? ಇಂತಹ ಅನೇಕ ಪ್ರಶ್ನೆಗಳು ಅವರ ಹೆಗಲಿನ ಚೀಲದಲ್ಲಿರುತ್ತಿದ್ದವು. ಒಂದೊಮ್ಮೆ ತೆಗೆದು ಹರವಿದರೆ ಎದುರಿಗೆ ಇರುವ ವಿದ್ಯಾರ್ಥಿಗಳು ಕಂಗಾಲು. ಅವರ ಜೋಳಿಗೆಯಲ್ಲಿ ಇದು ಮಾತ್ರವಲ್ಲ, ತೆಂಗಿನ ಕರಟ ಸುಟ್ಟು ನೀರಿಗೆ ಹಾಕಿದರೆ ಶುದ್ಧ ನೀರು ಸಿಗುವುದಿರಲಿ, ಈ ಸುಟ್ಟ ಕರಟವನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಶೌಚಾಲಯದಲ್ಲಿ ಇಟ್ಟರೆ ವಾಸನೆ ಬರುವುದಿಲ್ಲ ಎಂಬಂತಹ ಸಲಹೆಗಳೂ ಇರುತ್ತಿದ್ದವು. ಇವೆಲ್ಲ ಪುಸ್ತಕದಿಂದ ಓದಿಕೊಂಡದ್ದಲ್ಲ, ಅನುಭವದ ದರ್ಶನಗಳು.
ಕೇಶವ ಭಟ್ಟರು ಸರ್ಕಾರಕ್ಕೊಂದು ಪ್ರಸ್ತಾವನೆ ಸಲ್ಲಿಸಿ, ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಸ್ಯಗಳ ಅಧ್ಯಯನಕ್ಕೆ ಅನುಮತಿ ಕೇಳಿದರು. ಸರ್ಕಾರ ನಿರಾಕರಿಸಿಬಿಟ್ಟಿತು. ವೆನಿಜುಯೆಲಾ ಸರ್ಕಾರ ಕೇಶವಭಟ್ಟರಿಗಾಗಿ ನೂರಾರು ಎಕರೆಗಳ ಅರಣ್ಯ ಧಾರೆ ಎರೆದಿತ್ತು. ನಮ್ಮ ಸರ್ಕಾರ ಅಧ್ಯಯನಕ್ಕೆಂದು ಮೂರ‍್ನಾಲ್ಕು ಎಕರೆಯನ್ನೂ ಕೊಡಲಿಲ್ಲ. ನಷ್ಟ ಭಟ್ಟರಿಗಲ್ಲ, ನಮಗೇ!
ಸಸ್ಯ ಸಂಪತ್ತನ್ನು ಅಳೆಯಬಲ್ಲ ಶ್ರೇಷ್ಠ ಸಂತನ ಜ್ಞಾನದಿಂದ ನಾವು ವಂಚಿತರಾದೆವು ಅಷ್ಟೇ. ಅದಕ್ಕೇ ಅವರನ್ನು ನೆನೆದಾಗೆಲ್ಲ ಹೊಟ್ಟೆಯಲ್ಲೊಂದು ಅವ್ಯಕ್ತ ಸಂಕಟವಾಗುತ್ತದೆಯೆಂದು ಆರಂಭದಲ್ಲೇ ಹೇಳಿದ್ದು.

7 thoughts on “ಸಸ್ಯಶಾಸ್ತ್ರದ ಮಹಾಬೋಧಿ

  1. ಸುಮಾರು ಎಂಟು ವರ್ಷ ಹಿಂದೆ ಮಂಗಳೂರಿನಲ್ಲಿ ಮೂರು ದಿನದ ಶಿಬಿರ ಏರ್ಪಡಿಸಿದ್ದಾಗ( ಆಜ಼ಾದೀ ಬಚಾವೋ)ಅದರಲ್ಲೊಂದು ದಿನ ಪಲ್ಲತಡ್ಕ ಕೇಶವ ಭಟ್ಟರ ಉಪನ್ಯಾಸ ಏರ್ಪಡಿಸಿದ್ದ ನೆನಪು…ಅಂದು ಪ್ರಶ್ನೋತ್ತರಕ್ಕೂ ಅವಕಾಶ ಇತ್ತು…ನೀವು ಅಂದು ಬಂದಿದ್ದಿರಾ ಇಲ್ಲವ ತಿಳಿದಿಲ್ಲ…
    ಮಾಹಿತಿ, ಬರಹ ತುಂಬಾ ಚೆನ್ನಾಗಿದೆ…ಧನ್ಯವಾದಗಳು..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s