ಊಹೂಂ.. ಗೋವೆಯ ಕಥೆ ಇನ್ನೂ ಮುಗಿದಿಲ್ಲ!

ಪೋರ್ಚುಗಲ್ ದೊರೆಗಳು `ಪ್ರಾಣ ಇರುವವರೆಗೂ ಕಾದಾಡಿ’ಎಂದು ಆದೇಶ ಕೊಟ್ಟಿದ್ದನ್ನು ಧಿಕ್ಕಿರಿಸಿ, ಅಲ್ಲಿನ ಸೈನ್ಯಾಧಿಕಾರಿಗಳು ಭಾರತದ ಪ್ರತಿರೋಧದ ಮುಂದೆ ಶರಣಾಗಿ ಗೋವೆಯನ್ನು ಭಾರತಕ್ಕೆ ಸಮರ್ಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಹದಿನಾಲ್ಕು ವರ್ಷಗಳ ಅನಂತರ ಗೋವಾ ಭಾರತವನ್ನು ಸೇರಿಕೊಂಡಿತ್ತು. ಜಾತ್ರೆಯಲ್ಲಿ ಕಳೆದುಹೋದ ಮಗು, ಸಂಜೆ ವೇಳೆಗೆ ತಾಯಿಯನ್ನು ಕಂಡು ಆನಂದದಿಂದ ಕುಣಿದಾಡುತ್ತದಲ್ಲ, ಹಾಗೆಯೇ!

ಕಂಕೋಲಿಮ್, ಗೋವೆಯ ಪ್ರಮುಖ ಹಳ್ಳಿಗಳಲ್ಲೊಂದು. ೧೫೬೭ರ ಡಿಸೆಂಬರ್ ೪ರಂದು ಗೋವೆಯ ಕ್ರಿಶ್ಚಿಯನ್ನರು ನಿಯಮವೊಂದನ್ನು ಲಾಗೂ ಮಾಡಿದರು. ೧೫ ದಾಟಿದವರು ಚರ್ಚಿಗೆ ಬರಲೇಬೇಕು, ಕ್ರಿಸ್ತನ ಸಂದೇಶ ಕೇಳಲೇಬೇಕು. ಶಾಂತಿಪ್ರಿಯ ಕ್ರಿಸ್ತನ ಸಂದೇಶಗಳನ್ನು ಕಿವಿಗೆ ತುರುಕುವ ಪರಿ ಇದು. ಕಂಕೋಲಿಮ್‌ನ ಜನ ಆ ಕಾನೂನಿನ ಕಡೆ ಗಮನವನ್ನೂ ಕೊಡಲಿಲ್ಲ. ಅಲ್ಲಿದ್ದುದು ಶೂರ ಕ್ಷತ್ರಿಯ ಗಾಂವ್ಕರ್ ಕುಟುಂಬಗಳು. ಇವರನ್ನು ಮಟ್ಟ ಹಾಕಲು ಹೊಂಚು ಹಾಕುತ್ತಿದ್ದ ಸರ್ಕಾರ ೧೫೮೩ರಲ್ಲಿ ಕಂಕೋಲಿಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ೨೩೪ ದೇವಸ್ಥಾನಗಳನ್ನು ಸೈನ್ಯ ಬಳಸಿ ಧ್ವಂಸ ಮಾಡಿಬಿಟ್ಟಿತು.

‘ಪೋರ್ಚುಗಲ್‌ ಗೋವಾ’- ಭಾರತದ ಗೋವೆಯಾಗಿ ಸ್ವತಂತ್ರಗೊಂಡ ಸಂದರ್ಭ…

ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದ, ಶಸ್ತ್ರಾಸ್ತ್ರ ಬಳಕೆಯಲ್ಲಿ ಪಳಗಿದ್ದ ಕಂಕೋಲಿಮ್‌ನ ಜನತೆಯ ಸ್ವಾಭಿಮಾನಕ್ಕೆ ಇದು ಬಲವಾದ ಪೆಟ್ಟು. ಅವರ ವ್ಯಾಪಾರದ ಮೂಲ ಕೇಂದ್ರವೇ ದೇವಸ್ಥಾನ. ಜಾತ್ರೆ ಸಂತೆಗಳೆಲ್ಲವೂ ಮಂದಿರ ಕೇಂದ್ರಿತವೇ ಆಗಿದ್ದವು. ಏಕಾಏಕಿ ಕೇಂದ್ರವೇ ಇಲ್ಲದೆ ಪರಿಧಿಯೂ ಕಳೆದು ಹೋದ ಅನುಭವ ಅವರಿಗಾಯ್ತು. ಸಮಾಜ ತಿರುಗಿ ಬಿತ್ತು. ಗಾಂಧೀಜಿ ಹುಟ್ಟುವ ಬಲು ಮುನ್ನವೇ ಕಂಕೋಲಿನ್‌ನಲ್ಲಿ ಕರನಿರಾಕರಣೆಯ ಚಳವಳಿ ಶುರುವಾಯ್ತು. ಅಷ್ಟೇ ಅಲ್ಲ, ಮೊದಲಿಗಿಂತಲೂ ಜಾರಾಗಿಯೇ ಹಿಂದೂ ಆಚರಣೆಗಳ ಅನುಸರಣೆ ಶುರುವಾಯ್ತು. ಉರುಳಿಸಲಾಗಿದ್ದ ಮಂದಿರಗಳನ್ನು ಮತ್ತಷ್ಟು ಭವ್ಯವಾಗಿ ನಿರ್ಮಿಸುವ ಕಾರಸೇವೆಗಳು ನಡೆದವು. ಪೋರ್ಚುಗೀಸರ ಡೈರಿಗಳಲ್ಲಿ, `ಅತ್ಯಂತ ಕೆಟ್ಟ ಹಳ್ಳಿ’ `ಯಾವುದಕ್ಕೂ ಜಗ್ಗದ ಮೊಂಡು ಜನ’ `ಕ್ರಾಂತಿಕಾರಿಗಳ ನಾಯಕ’ಎಂದೆಲ್ಲ ಅಭಿದಾನಕ್ಕೆ ಪಾತ್ರವಾಯ್ತು ಕಂಕೋಲಿಮ್.
ಉರಿವ ಗಾಯಕ್ಕೆ ತುಪ್ಪ ಸುರಿಯಲೆಂಬಂತೆ ಐವರು ಪಾದ್ರಿಗಳು ಅದೇ ಹಳ್ಳಿಯಲ್ಲಿ ಸೂಕ್ತ ಸ್ಥಳ ಹುಡುಕಿ ಶಿಲುಬೆಗೊಂದು ಮಂದಿರ ಕಟ್ಟಲು ಬಂದರು. ಗುಂಪುಗೂಡಿ ಬಂದ ಜನ ಮಂದಿರ ಧ್ವಂಸಗೊಂಡ ಆಕ್ರೋಶವನ್ನು ಪಾದ್ರಿಗಳ ಮೇಲೆ ತೀರಿಸಿಕೊಂಡರು. ಯಾರೊಬ್ಬರೂ ಉಳಿಯಲಿಲ್ಲ.
ಸರ್ಕಾರ ಸುಮ್ಮನಿರಲಿಲ್ಲ. ತಮ್ಮ ಎಂದಿನ ನಯವಂತಿಕೆಯಿಂದ ಜನರನ್ನು ಒಲಿಸಿ, ಹದಿನಾರು ಜನ ಗಾಂವ್ಕರ್ ನಾಯಕರನ್ನು ಪಕ್ಕದ ಹಳ್ಳಿಯ ಕೋಟೆಗೆ ಸಂಧಾನಕ್ಕೆಂದು ಕರೆಸಿಕೊಂಡಿತು. ಹಾಗೆ ಬಂದವರನ್ನು ವಂಚನೆಯಿಂದ ಗುಂಡಿಟ್ಟು ದಾರುಣವಾಗಿ ಕೊಲ್ಲಲಾಯಿತು. ಹದಿನೈದು ಜನ ತೀರಿಕೊಂಡರೆ, ಒಬ್ಬ ಮಾತ್ರ ಶೌಚಾಲಯದ ಕಿಂಡಿಯಿಂದ ನುಸುಳಿ, ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡ, ಕಾರವಾರ ಸೇರಿದ. ಕಾಲಕ್ರಮೇಣ ಕಂಕೋಲಿಮ್‌ನ, ಆಸುಪಾಸಿನ ಹಳ್ಳಿಗಳ ಜನರನ್ನು ಕ್ರಿಸ್ತನ ಅನುಯಾಯಿಗಳನ್ನಾಗಿಸಲಾಯಿತು.
ಪ್ರತಿಭಟನೆಯ ಕಾವು ಮಾತ್ರ ಆರಿರಲಿಲ್ಲ. ೧೭೮೭ರಲ್ಲಿ ಮತಾಂತರ ಹೊಂದಿ ಪಾದ್ರಿಗಳಾದ ಅನೇಕರು ತಮಗೆ ಚರ್ಚುಗಳಲ್ಲಿ ಸೂಕ್ತ ಗೌರವ ಸಿಗುತ್ತಿಲ್ಲವೆಂದು ತಿರುಗಿಬಿದ್ದರು. ಫಾದರ್ ಫ್ರಾನ್ಸಿಸ್ಕೊ ಕ್ಯೂಟೊ ನೇತೃತ್ವದ ಈ ಹೋರಾಟ ಮೂಲ-ಮತಾಂತರಿತ ಕ್ರಿಸ್ತಾನುಯಾಯಿಗಳ ನಡುವೆ ನಡೆದದ್ದು. ಸ್ಥಳೀಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂಬ ಕಾರಣಕ್ಕಾಗಿ ನಡೆದದ್ದು. ಚರ್ಚು ಗಾಬರಿಗೊಂಡಿತು. ಹೋರಾಟ ಮಟ್ಟಹಾಕಲ್ಪಟ್ಟಿತಾದರೂ ಒಂದಷ್ಟು ಬದಲಾವಣೆಗಳಂತೂ ಉಂಟಾದವು.

ಪೋರ್ಚುಗೀಸರ ದೌರ್ಜನ್ಯಕ್ಕೆ ಗಾಯಗೊಂಡಿರುವ ಸತ್ಯಾಗ್ರಹಿ

ಈ ಕದನಗಳ ನಡುವೆಯೇ ಗೋವೆಯ `ರಾಣೆ’ಗಳು ಸುದೀರ್ಘ ಹೋರಾಟಕ್ಕೆ ಮುನ್ನುಡಿ ಬರೆದದ್ದು. ೧೭೫೭ರಲ್ಲಿ ಶುರುವಾದ ಅವರ ಧರ್ಮಪರ ಯುದ್ಧ ೧೮೨೨ರ ಸಂಧಾನದೊಂದಿಗೆ ಮುಗಿಯಿತು. ಸಂಧಾನಕ್ಕೆ ಬಾಗಿದ್ದು ರಾಣೆಗಳಲ್ಲ, ಸ್ವತಃ ಪೋರ್ಚುಗೀಸರೇ. ಹದಿನಾಲ್ಕು ಬಾರಿ ನಡೆದ ದಂಗೆಗಳಿಂದ ಚರ್ಚು ದಂಗಾಗಿಬಿಟ್ಟಿತ್ತು. ಸಂಧಾನ ಬಹುಕಾಲ ಉಳಿಯಲಿಲ್ಲ. ೧೮೨೩ಕ್ಕೆ ಪುನಃ ಹೋರಾಟ, ದಮನ. ಕುಪಿತ ರಾಣೆಗಳು ೧೮೨೪ರಲ್ಲಿ ಪುನಃ ಘನಘೋರವಾಗಿ ಮುಗಿಬಿದ್ದರು. ೧೮೫೨ರಲ್ಲಿ ಕೃಷಿ ಭೂಮಿಯ ಮೇಲೆ ಹೇರಲಾಗಿದ್ದ ಅಪಾರ ಮೊತ್ತದ ಕರವನ್ನು ವಿರೋಧಿಸಿ ದೀಪಾಜಿ ರಾಣೆ ಒಂದು ಸೈನ್ಯವನ್ನೇ ರಚಿಸಿ ಪೋರ್ಚುಗೀಸರನ್ನು ಅಡ್ಡಗಟ್ಟಿದ. ಒಂದು ಭಾರೀ ಕೋಟೆಯನ್ನೆ ವಶಪಡಿಸಿಕೊಂಡು ಸ್ವಾಭಿಮಾನದ ಕೆಚ್ಚು ತೋರಿದ. ಮತ್ತೊಮ್ಮೆ ಬಾಗಿತು ಸರ್ಕಾರ. ಸಂಧಾನ ಮಾಡಿಕೊಂಡು ರಾಣೆಗಳ ಬೇಡಿಕೆಯನ್ನು ಈಡೇರಿಸಲಾಯಿತು. ೧೮೬೯ರಲ್ಲಿ ಕಸ್ತೂಬಾ ರಾಣೆ ಮೂರು ವರ್ಷಗಳ ಕಾಲ ಒಳಗಿಂದೊಳಗೆ ಪೋರ್ಚುಗೀಸರನ್ನು ಕಾಡಿದ. ಕೊನೆಗೆ ಸಿಕ್ಕಿಬಿದ್ದವನನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಯಿತು. ೧೮೭೦ರಲ್ಲಿ ಗೋವೆಯ ಸೈನಿಕರು ಮಾರ್ಸೆಲ್ಸ್‌ನಲ್ಲಿ ತಿರುಗಿಬಿದ್ದರು. ೧೮೯೫ರಲ್ಲಿ ದಾದಾ ರಾಣೆ ತನ್ನ ೯೦೦ಸೈನಿಕರೊಂದಿಗೆ ದಾಳಿಗೈದ. ಪೋರ್ಚುಗೀಸರ ಕೈಯೇ ಮೇಲಾಯಿತು. ಸೆರೆಸಿಕ್ಕವರನ್ನು ಫೆಸಿಫಿಕ್ ಸಾಗರದ ತಿಮೋರಿಗೆ ಒಯ್ದು ಸೆರೆಯಲ್ಲಿಡಲಾಯಿತು. ಅನೇಕರು ಅಲ್ಲಿಯೇ ಕೊನೆಯುಸಿರೆಳೆದರು. ಹಿಂದುಸಾಗರದ ಬಿಂದುಬಿಂದುಗಳು ಸುಮ್ಮನಿರುವಂಥವಲ್ಲ ಎಂಬುದನ್ನು ಹೇಳಲಿಕ್ಕಾಗಿಯೇ ಇಷ್ಟೆಲ್ಲ ಕದನಗಳ ಪರಿಚಯವಷ್ಟೆ. ಈ ದೇಶವನ್ನಾಳಿದ ವಿದೇಶೀಯರು- ಅದು ಯಾರೇ ಆಗಿರಲಿ, ಪ್ರತಿಭಟನೆಯ ಜ್ವಾಲಾಮುಖಿಯ ಮೇಲೆ ಕುಳಿತಿದ್ದವರೇ.
ಗೋವೆಯ ಸ್ವಾತಂತ್ರ್ಯದ ಪರಿಕಲ್ಪನೆಗೆ ಶಕ್ತಿ ಬಂದದ್ದು ದೇಶದ ಇತರೆಡೆಗಳಲ್ಲಿನ ಸ್ವಾತಂತ್ರ್ಯ ಹೋರಾಟಗಳಿಂದ. ಒಂದೆಡೆ ಭಾರತದೊಂದಿಗೆ ಸಾಂಸ್ಕೃತಿಕವಾಗಿ, ಅಧ್ಯಾತ್ಮಿಕವಾಗಿ ಮರಳಿ ಬೆಸೆದುಕೊಳ್ಳಬೇಕೆಂಬ ತುಡಿತ, ಮತ್ತೊಂದೆಡೆ, ಗೋವೆಯ ಸಂಪತ್ತನ್ನು ಸೂರೆಗೈದ ಪೋರ್ಚುಗೀಸರ ಕ್ರೌರ್ಯ. ಇವೆರಡರ ನಡುವೆ ಕಂಡಂತಹ ಬೆಳಕು ಸ್ವಾತಂತ್ರ್ಯ ಹೋರಾಟವೊಂದೇ. ತಿಲಕರ ಬರಹಗಳಿಂದ ಸ್ಫೂರ್ತಿ ಪಡೆದ ದತ್ತಾತ್ರೇಯ ಪೈ, ಪುಂಡಲೀಕ್ ಹೆಗಡೆ, ಲೂಯಿಸ್ ಬರ್ಗಾಂಜಾರಂಥವರು ಪತ್ರಿಕೆಗಳ ಮೂಲಕ ಬೆಂಕಿಯುಗುಳಲು ಶುರು ಮಾಡಿದರು. ಗೋವೆಯ ತರುಣರಿಗೆ ಇಷ್ಟು ಸಾಕಗಿತ್ತು. ಬರ್ಗಾಂಜಾ ಮಡಗಾಂವ್‌ನಲ್ಲಿ ಕಾನೂನು ಮುರಿಯುವ ಚಳವಳಿಯ ಮೂಲಕ ಸರ್ಕಾರದ ವಿರುದ್ಧ ನಿಂತರೆ, ಚರ್ಚು ಪೋರ್ಚುಗೀಸರ ಪರವಾಗಿ ನಿಂತು ಮಾತಾಡಿತು. ಅಧಿಕೃತವಾಗಿ ೬೦ ಪತ್ರಗಳನ್ನು ಪಾದ್ರಿಗಳಿಗೆ ಬರೆದು, ಚರ್ಚಿಗೆ ಬರುವವರಿಗೆ ಪೋರ್ಚುಗೀಸರೊಂದಿಗೆ ಆತುಕೊಂಡಿರುವಂತೆ ಬೋಧಿಸಬೇಕೆಂದು ಆದೇಶಿಸಿತು.
೧೮೭೮ರಲ್ಲಿ ಡಾ.ಟಿ.ಬಿ.ಕುನ್ಹ ನೇತೃತ್ವದಲ್ಲಿ ಕಾಂಗ್ರೆಸ್ಸನ್ನು ಗೋವೆಯಲ್ಲಿ ಸ್ಥಾಪಿಸಲಾಯಿತು. ರಾಷ್ಟ್ರೀಯತೆಯ ಸಸಿಗೆ ನೀರೆರೆದಂತಾಯಿತು. ೧೯೪೬ರಲ್ಲಿ ರಾಮಮನೋಹರ ಲೋಹಿಯಾ ಸರ್ಕಾರದ ಅಡೆತಡೆ ಲೆಕ್ಕಿಸದೆ ಚಳವಳಿಗೆ ನಿಂತರು. ಅವರ ಬಂಧನ ಹೋರಾಟದ ಬೆಂಕಿಗೆ ಆಜ್ಯವನ್ನು ಸುರಿಯಿತು. ಕುನ್ಹ, ಕಾಕೋಡ್ಕರ್, ಲಕ್ಷ್ಮೀಕಾಂತ್ ಬೆಂಗ್ರೆಯಂಥವರು ಪ್ರತಿಭಟನೆ ನಡೆಸಿ ಸಿಕ್ಕಿಬಿದ್ದರು. ಅವರನ್ನು ದೂರದ ಪೋರ್ಚುಗಲ್ ಜೈಲಿಗೆ ತಳ್ಳಲಾಯಿತು. ೧೯೪೭ರಲ್ಲಿ ಭಾರತ ಸ್ವತಂತ್ರವಾಯಿತು, ಗೋವೆ ವ್ರಣವಾಗಿಯೇ ಉಳಿಯಿತು. ಆ ಗಾಯವನ್ನು ಹುಳುಗಳಂತೆ ಕೊರೆಯುತ್ತಿದ್ದ ಪೋರ್ಚುಗೀಸರಿಗೆ ಸ್ಥಳೀಯರ ಪ್ರತಿರೋಧ ಮುಂದುವರೆದೇ ಇತ್ತು. ಆದರೆ ನೆಹರೂ ಮಾತ್ರ ಸುಮ್ಮನಿದ್ದರು. ಸಹಾಯಕ್ಕೆ ಬರುವುದಿರಲಿ, ಮುಂದಿನ ಒಂದು ದಶಕದ ಕಾಲ ಗೋವೆಯ ಕುರಿತು ಮಾತಾಡಲೂ ಅವರು ಹಿಂದೆಮುಂದೆ ನೋಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಗೌರವ ಕಡಿಮೆಯಾಗಬಾರದೆಂದರೆ ಪೋರ್ಚುಗೀಸರೊಂದಿಗೆ ಶಾಂತಿಯಿಂದಲೇ ವ್ಯವಹರಿಸಬೇಕೆಂಬುದು ಅವರ ಮನದಿಂಗಿತ. ಆದರೆ ಅಂತಾರಾಷ್ಟ್ರೀಯ ಮಟ್ಟದ ಸಂಧಾನಗಳ್ಯಾವುವೂ ಕೆಲಸ ಮಾಡಲೇ ಇಲ್ಲ.
ಆಗಲೇ ಮತ್ತೆ ಕ್ರಾಂತಿಕಾರಿಗಳ ಉಗ್ರ ಹೋರಾಟಪರ್ವ ಶುರುವಾಗಿದ್ದು. `ಆಝಾದ್ ಗೋಮಾಂತಕ್ ದಲ್’ ಕಂಡಕಂಡಲ್ಲಿ ಬಿಳಿಯರನ್ನು ಹೊಡೆದಿಕ್ಕಿತು. ಶಸ್ತ್ರಾಗಾರಗಳನ್ನು ಉಡಾಯಿಸಿತು. ಮತ್ತೊಂದೆಡೆ ಶಿವಾಜಿರಾವ್ ದೇಸಾಯಿಯವರ `ಗೋವಾ ಲಿಬರೇಷನ್ ಆರ್ಮಿ’ಯೂ ಇದೇ ಹಾದಿ ಹಿಡಿಯಿತು. ಪರಮಕ್ರೂರಿ ಪೋರ್ಚುಗೀಸರು ತಮ್ಮೊಡನಿದ್ದ ಆಫ್ರಿಕಾದ ಗುಲಾಮರನ್ನು ಬಳಸಿ ಹೋರಾಟಗಳನ್ನು ಮಟ್ಟಹಾಕಿಬಿಟ್ಟರು. ಈ ಕ್ರೌರ್ಯದ ಸುದ್ದಿಗಳು ದೇಶದ ಮೂಲೆಮೂಲೆಯನ್ನು ತಲುಪಲಾರಂಭಿಸಿದವು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆ ಸರಸಂಘಚಾಲಕರಾದ ಗುರೂಜಿ ಗೋಳವಲ್ಕರ್ ದೇಶವ್ಯಾಪಿ ಆಂದೋಲನಕ್ಕೆ ಕರೆ ನೀಡಿದರು. ಅದೇ ಪ್ರೇರಣೆಯಿಂದ ೧೯೫೫ರಲ್ಲಿ `ಗೋವಾ ಮುಕ್ತಿ ಸಮಿತಿ’ ನಿರ್ಮಾಣಗೊಂಡಿತು. ಜನಸಂಘದ ನಾಯಕರಾಗಿದ್ದ ಜಗನ್ನಾಥ್ ರಾವ್ ಜೋಷಿ ನೇತೃತ್ವದಲ್ಲಿ ಮೂರು ಸಾವಿರ ಜನ ಕಾರ್ಯಕರ್ತರು ಮಹಾರಾಷ್ಟ್ರದಿಂದ ಗೋವೆಗೆ ನುಗ್ಗಿದರು. ಗೋವೆಯ ಗಡಿಯಲ್ಲಿ ತುಮುಲವೇರ್ಪಟ್ಟಿತು. ಪೋರ್ಚುಗೀಸರ ಗುಂಡಿಗೆ ಅನೇಕರ ಆಹುತಿಯಾಯಿತು. ಈ ವೇಳೆಗೆ ರಚನೆಯಾಗಿದ್ದ `ಗೋವಾ ವಿಮೋಚನ್ ಸಹಾಯಕ್ ಸಮಿತಿ’ ದೇಶದೆಲ್ಲೆಡೆ ಜನ-ಹಣ ಸಂಗ್ರಹಿಸಿ ಗೋವೆಗೆ ತಲುಪಿಸುವ ಜವಾಬ್ದಾರಿ ಹೊತ್ತಿತು. ನೆಹರೂ ಯಾವೊಂದರಲ್ಲೂ ಸಹಾಯ ಹಸ್ತ ಚಾಚಲಿಲ್ಲ. ಜನ ಜಾಗೃತರಾದಾಗ ಸರ್ಕಾರದ ಜರೂರತ್ತೇ ಇರುವುದಿಲ್ಲ ಬಿಡಿ! ಫ್ರಾನ್ಸಿಸ್ ಮಸ್ಕರೇನಸ್ ಸಂಘದ ಸ್ವಯಂಸೇವಕರ ಸಹಕಾರದೊಂದಿಗೆ ದಾದ್ರಾ, ನಗರ್ ಹವೇಲಿಗಳ ಮೇಲೆ ದಾಳಿ ಸಂಘಟಿಸಿ, ಎರಡೂ ದ್ವೀಪಗಳನ್ನು ಪೋರ್ಚುಗೀಸರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಸ್ವರಾಜ್ಯ ಸ್ಥಾಪಿಸಿದರು. ಕೇಂದ್ರ ಸರ್ಕಾರಕ್ಕೆ ಇವನ್ನು ಒಪ್ಪಿಸಹೋದರೆ, ಅವನ್ನು ಸ್ವೀಕರಿಸಲು ತಯಾರೇ ಇರಲಿಲ್ಲ. ಅಂತರಾಷ್ಟ್ರೀಯ ಮಾನ ಮರ್ಯಾದೆಗಳ ನೆಪ! ಗಾಯ್ತೊಂಡೆಯವರು ಜಗತ್ತಿನ ಅನೇಕ ಕಡೆ ಸಮಾವೇಶಗಳನ್ನು ನಡೆಸಿ ಗೋವೆಯನ್ನರು ಭಾರತೀಯರಲ್ಲ, ಪೋರ್ಚುಗೀಸರೇ ಎಂಬ ವಾದವನ್ನು ಪ್ರಬಲವಾಗಿ ಅಲ್ಲಗಳೆದು ತಮ್ಮ ವಾದ ಮಂಡಿಸಿ ಬಂದರು. ಗೋವೆಯ ಸ್ವಾತಂತ್ರ್ಯದ ಅನಿವಾರ್ಯತೆಯನ್ನು ಜಗತ್ತು ಮನಗಂಡದ್ದು ಈ ವೇಳೆಗೇ.
ಇಡಿಯ ದೇಶ ಈಗ ಗೋವಾದ ಜೊತೆ ನಿಂತಿರುವುದನ್ನು ಕಂಡಾಗ, ಬೇರೆ ದಾರಿಯಿಲ್ಲದೆ ನೆಹರೂ ೧೯೬೧ರ ಅಗಸ್ಟ್‌ನಲ್ಲಿ ಸೈನ್ಯ ಆಕ್ರಮಣ ಮಾಡುವ ಬೆದರಿಕೆ ಹಾಕಿದರು. ಆದರೆ, ಆಕ್ರಮಣ ಮಾಡುವ ಧೈರ್ಯ ಬಂದಿದ್ದು ಮಾತ್ರ ಡಿಸೆಂಬರ್‌ನಲ್ಲಿಯೇ! ೧೮, ೧೯- ಆ ಎರಡೂ ದಿನಗಳ ಕಾಳಗದಲ್ಲಿ ಭಾರತ ಜಯ ಪಡೆಯಿತು. ಪೋರ್ಚುಗಲ್ ದೊರೆಗಳು `ಪ್ರಾಣ ಇರುವವರೆಗೂ ಕಾದಾಡಿ’ಎಂದು ಆದೇಶ ಕೊಟ್ಟಿದ್ದನ್ನು ಧಿಕ್ಕಿರಿಸಿ, ಅಲ್ಲಿನ ಸೈನ್ಯಾಧಿಕಾರಿಗಳು ಭಾರತದ ಪ್ರತಿರೋಧದ ಮುಂದೆ ಶರಣಾಗಿ ಗೋವೆಯನ್ನು ಭಾರತಕ್ಕೆ ಸಮರ್ಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಹದಿನಾಲ್ಕು ವರ್ಷಗಳ ಅನಂತರ ಗೋವಾ ಭಾರತವನ್ನು ಸೇರಿಕೊಂಡಿತ್ತು. ಜಾತ್ರೆಯಲ್ಲಿ ಕಳೆದುಹೋದ ಮಗು, ಸಂಜೆ ವೇಳೆಗೆ ತಾಯಿಯನ್ನು ಕಂಡು ಆನಂದದಿಂದ ಕುಣಿದಾಡುತ್ತದಲ್ಲ, ಹಾಗೆಯೇ!
`ಜಗತ್ತಿಗೆಲ್ಲ ಶಾಂತಿ ಎನ್ನುತ್ತ ನೀವೇ ಆಕ್ರಮಣ ಮಾಡಿಬಿಟ್ಟಿರಲ್ಲ! ವೇಶ್ಯೆಯ ಮನೆಯಿಂದ ಬರುವಾಗ ಸಿಕ್ಕಿಹಾಕಿಕೊಂಡ ಸಾಧ್ವಿಯಂತಾಗಿದೆ ಭಾರತ’ ಎಂದು ಅಮೆರಿಕಾ ಅಧ್ಯಕ್ಷ ಕೆನಡಿ ಅಲವತ್ತುಕೊಂಡ. ಪಾಕಿಸ್ತಾನ ಬಾಯಿಗೆ ಬಂದದ್ದು ಮಾತಾಡಿ ಚಪಲ ತೀರಿಸಿಕೊಂಡಿತು. ಆಫ್ರಿಕಾ ಈ ಹೋರಾಟವನ್ನು ಬೆಂಬಲಿಸಿ ಸ್ಫೂರ್ತಿ ಪಡೆಯುವ ಮಾತಾಡಿತು. ಚೈನಾ ಮಾತ್ರ ಮುಗುಮ್ಮಾಗಿತ್ತು. ಒಳಗಿಂದೊಳಗೆ ಮುಂದಿನ ಯುದ್ಧಕ್ಕೆ ಮುನ್ನುಡಿ ಬರೆಯುತ್ತಿತ್ತು!

5 thoughts on “ಊಹೂಂ.. ಗೋವೆಯ ಕಥೆ ಇನ್ನೂ ಮುಗಿದಿಲ್ಲ!

  1. ಎಂತಹಾ ದೇಶ!!! ಇಂದಿನ ಪರಿಸ್ಥಿತಿಗೆ ತಳಹದಿ ಹಾಕಿರುವವರು, ಈ ನೆಹರು ಮತ್ತು ಅನುಯಾಯಿಗಳೇ !!!
    ಇಂದು ನಮ್ಮ ಭಾರತವು ಈ ರೂಪ ಪಡೆದುಕೊಂಡಿರುವುದು, ನಮ್ಮ ಮನಮೋಹನ ನಿರ್ವೀರ್ಯನಾಗಿರುವುದು… ಎಲ್ಲದಕ್ಕೂ ಅರ್ಥ ಕಾಣುತ್ತಿದೆ! ಈ ಮಹಾ ರೋಗ, ಎಲ್ಲಾ ರಾಜಕೀಯ ಪಕ್ಷಗಳಿಗೂ ಸದ್ದಿಲ್ಲದೇ ಹರಡಿಹೋಗಿದೆ. ಇದು ನಮ್ಮ ದೇಶದ ದುರ್ದೈವ!!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s