ದೇಶ ಮೊದಲೆಂದ ಸೈನಿಕರಿಗೆ ಸಲಾಮ್‌

ಮೊದಲು:
೧೯೭೭ರಲ್ಲಿ ಪಾಕಿಸ್ತಾನ ಮತ್ತು ಭಾರತದ ರಕ್ಷಣಾ ಸಚಿವರು ಎದುರು ಬದುರು ಕುಂತು ಒಂದು ಒಪ್ಪಂದ ಮಾಡಿಕೊಂಡರು. ಇನ್ನಾದರೂ ಸೌಹಾರ್ದವಾಗಿರೋಣ ಅನ್ನೋ ಜೆಂಟಲ್‌ಮನ್ಸ್ ಒಪ್ಪಂದ ಅದು. ಸೆಪ್ಟೆಂಬರ್ ೧೫ರಿಂದ ಏಪ್ರಿಲ್ ೧೫ರವರೆಗೆ ಯಾರೊಬ್ಬರೂ ಮತ್ತೊಬ್ಬರ ಬೇಲಿ ಹಾರಿ ಗುಡ್ಡಗಳನ್ನು ಆಕ್ರಮಿಸಬಾರದು ಅಂತ. ಅಷ್ಟೇ ಅಲ್ಲ, ಆ ವೇಳೆಯಲ್ಲಿ ತಮ್ಮ ತಮ್ಮ ಠಾಣ್ಯಗಳನ್ನೂ ಬಿಡಬೇಕೆಂದು ಒಪ್ಪಂದದಲ್ಲಿ ಸೇರಿಸಲಾಗಿತ್ತು. ಆ ವೇಳೆಯಲ್ಲಿ ಸುರಿಯುವ ಮಂಜು ಸೈನಿಕರ ಜೀವ ಹರಣ ಮಾಡಿಬಿಡುತ್ತದೆಂಬುದು ಆ ಒಪ್ಪಂದದ ಹಿಂದಿನ ಮರ್ಮವಾಗಿತ್ತು.
ಆಮೇಲೆ:
೧೯೯೮ರಲ್ಲಿ ಪಾಕಿಸ್ತಾನದ ನವಾಜ಼್ ಷರೀಫ್ ಮತ್ತು ಭಾರತದ ಅಟಲ್ ಬಿಹಾರಿ ವಾಜಪೇಯಿ ಎದುರುಬದುರು ಕುಂತರು, ಕೈಕುಲುಕಿದರು. ನಮ್ಮ ಪದ್ಧತಿಯಂತೆ ನಮಸ್ಕರಿಸಿದರು; ಅವರ ಪದ್ಧತಿಯಂತೆ ತಬ್ಬಿಕೊಂಡರು. ರೈಲು ಬಿಟ್ಟರು, ಬಸ್ಸೂ ಓಡಿಸಿದರು. ಹಿಂದೂಸ್ತಾನಿ – ಪಾಕಿಸ್ತಾನಿ ಭಾಯಿಭಾಯಿ ಅಂತೆಲ್ಲ ಮೆರೆದಾಡಿದೆವು.
ಆ ವೇಳೆಗಾಗಲೇ ಪಾಕಿಸ್ತಾನ ೧೯೭೭ರ ಒಪ್ಪಂದವನ್ನು ಮಂಜಿನಬೆಟ್ಟಗಳಲ್ಲೇ ಜಿಹಾದಿನ ಒಲೆ ಇಟ್ಟು ಸುಟ್ಟುಬಿಟ್ಟಿತ್ತು. ಸರಿಹೋದ ಸಂಬಂಧದ ಮೌಢ್ಯದಲ್ಲೇ ಮೈಮರೆತಿದ್ದ ಭಾರತೀಯರನ್ನು ಮಟ್ಟಹಾಕುವ ತಂತ್ರವನ್ನು ರೂಪಿಸುತ್ತಲೇ ಇತು ಪಾಕಿಸ್ತಾನ. ಕಾಶ್ಮೀರದ ವಿಷಯವನ್ನು ಮತ್ತೆ ಹಸಿಯಾಗಿಸಲು ಹವಣಿಸುತ್ತಿದ್ದ ಸೇನಾ ನಾಯಕ ಪರ್ವೇಜ್ ಮುಷರ್ರಫ್ ಯೋಜನೆಗಳನ್ನು ಹೆಣೆಯುತ್ತಲೇ ಇದ್ದ. ಅಟಲ್ ಬಿಹಾರಿಯವರು ಪಾಕಿಸ್ತಾನಕ್ಕೆ ಹೋದಾಗ ಅವರಿಗೆ ಲ್ಯೂಟ್ಹೊಡೆಯದೇ ತನ್ನೊಳಗಿನ ವಿಷ ಕಾರಿಕೊಂಡು ಅವಮಾನಿಸಿದ್ದ. ಈಗ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಮಾಸ್ಟರ್ ಪ್ಲಾನ್ ಅವನ ತಲೆಯೊಳಗೆ ಸಿದ್ಧವಾಗಿತ್ತು.

ಕಾರ್ಗಿಲ್, ಬಟಾಲಿಕ್, ದ್ರಾಸ್ ಇವೆಲ್ಲ ಲೈನ್ ಆಫ್ ಕಂಟ್ರೋಲ್‌ನ ಉದ್ದಕ್ಕೂ ಇರುವ ಗಡಿ ಭಾಗದ ಪ್ರದೇಶಗಳು. ಲಡಾಖ್‌ನ ಭಾಗಗಳು ಇವು. ರಕ್ಷಣಾ ದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರದೇಶಗಳು. ಶ್ರೀನಗರದಿಂದ ಹೊರಟು, ಸೋನ್‌ಮಾರ್ಗ್‌ಗೆ ಬಂದು ಅಲ್ಲಿಂದ ಜೋಜಿ ಲಾ ಪಾಸ್ ದಾಟಿಬಿಟ್ಟರೆ ಕಾರ್ಗಿಲ್ ತಲುಪಬಹುದು. ಜೋಜಿ ಲಾ ಪಾಸ್ ಕಳಕೊಂಡೆವೆಂದರೆ ಕತೆ ಮುಗಿದಂತೆ ಅಷ್ಟೇ. ಶ್ರೀನಗರದೊಂದಿಗೆ ಲಡಾಖ್‌ನ ಸಂಪರ್ಕವೇ ಇಲ್ಲ. ಜೋಜಿ ಲಾ ಪಾಸ್, ೧೮ ಸಾವಿರ ಅಡಿ ಬೆಟ್ಟದೆತ್ತರಕ್ಕೂ ಸಾಗುವ ಮಾರ್ಗ. ಅತ್ಯಂತ ಕಡಿದಾದ, ಅಷ್ಟೇ ಕಠಿಣವಾದ ಕೊರಕಲುಗಳು ದಾರಿಯುದ್ದಕ್ಕೂ. ಸ್ವಲ್ಪ ಎಡವಿದರೂ ಪ್ರಪಾತವೇ ಗತಿ. ಇನ್ನು ಮಂಜು ಸುರಿಯುವಾಗಲಂತೂ ಆ ದಾರಿಯಲ್ಲಿ ವಾಹನಗಳಿರಲಿ, ನಡೆದುಕೊಂಡು ಹೋಗುವುದೂ ಕಷ್ಟವೇ. ಮೇ ತಿಂಗಳ ಕೊನೆಯವರೆಗೆ ಮಂಜು ಬೆಟ್ಟ ಪೂರ್ತಿ ಆವರಿಸಿಕೊಂಡಿರುತ್ತದೆ. ಹೀಗಾಗಿ ಆ ವೇಳೆಯಲ್ಲಿ ಸೈನಿಕರೂ ಇರುವುದಿಲ್ಲ. ಅವರಿಗೆ ಬೇಕಾದ ವಸ್ತುಗಳನ್ನು ತಲುಪಿಸುವುದಕ್ಕೂ ಆಗೋದಿಲ್ಲ. ಈ ವಿಚಾರವನ್ನು ಚೆನ್ನಾಗಿ ಅರಿತ ಮುಷರ್ರಫ್ ಏಪ್ರಿಲ್ ಆರಂಭದಲ್ಲೇ ತನ್ನ ಸೈನಿಕರಿಗೆ ಆದೇಶ ನೀಡತೊಡಗಿದ. ೩೦-೪೦ ಜನರ ತಂಡಗಳನ್ನು ರಚಿಸಿದ. ಅವುಗಳಲ್ಲಿ ಜಿಹಾದಿನಿಂದ ಉನ್ಮತ್ತರಾದ ಮುಜಾಹಿದೀನ್‌ಗಳೂ ಇದ್ದರು. ೧೯೭೭ರ ಒಪ್ಪಂದವನ್ನು ನಮ್ಮ ಸೈನ್ಯ ನಿಯತ್ತಾಗಿ ಪಾಲಿಸುತ್ತಿತ್ತು. ಮುಷರ್ರಫ್ ಮಾತ್ರ ಗಾಳಿಗೆ ತೂರಿದ್ದ. ಮಂಜು ಕರಗುವುದನ್ನೆ ಕಾಯುತ್ತಿದ್ದ ಪಾಕಿಗಳು ಏಪ್ರಿಲ್ ಕೊನೆಕೊನೆಯಲ್ಲಿ ಕಾರ್ಗಿಲ್‌ನ, ಪೂರ್ವ ಬಟಾಲಿಕ್‌ನ ಮತ್ತು ದ್ರಾಸ್‌ನ ಉತ್ತರ ದಿಕ್ಕಿನ ಬೆಟ್ಟಗಳನ್ನು ಏರತೊಡಗಿದರು. ಗಟ್ಟಿಮುಟ್ಟಾದ ಬಂಕರ್‌ಗಳನ್ನು ಕಟ್ಟಿಕೊಂಡರು. ನಮ್ಮವರೇ ಬಿಟ್ಟುಬಂದಿದ್ದ ಬಂಕರುಗಳು ಅವರ ಸಹಾಯಕ್ಕೆ ಬಂದವು. ಮೇ ಆರಂಭದ ವೇಳೆಗೆ ಅವರ ತಯಾರಿ ಸಂಪೂರ್ಣಗೊಂಡಿತ್ತು. ಮೇ ಕೊನೆಯವರೆಗೂ ಮಂಜು ಕರಗದು, ಜೋಜಿ ಲಾ ತೆರೆದುಕೊಳ್ಳದು ಅಂದುಕೊಂಡಿದ್ದ ಪಾಕಿಗಳ ಲೆಕ್ಕಾಚಾರ ತಿರುಗುಮುರುಗಾಯಿತು. ಆ ವರ್ಷ ಮೇ ಆರಂಭದಲ್ಲಿಯೇ ಮಂಜು ಕರಗಿ ಜೋಜಿ ಲಾ ತೆರೆದುಕೊಂಡಿತು. ಪಾಕ್ ಸೇನೆ ಬೆಟ್ಟದ ಮೇಲಿರುವ ಸುದ್ದಿ ದನಗಾಹಿಗಳ ಮೂಲಕ ಭಾರತೀಯ ಸೇನೆಯ ಕಿವಿ ತಲುಪಿತು. ಪುಂಡ ಪಾಕಿಗಳು ಆಗೀಗ ಹೀಗೆ ಮಾಡುತ್ತಿರುತ್ತಾರೆಂದು ಅರಿತ ಸೇನೆ, ವರದಿ ತರಲೆಂದು ಸೌರಭ್ ಕಾಲಿಯಾ ನೇತೃತ್ವದಲ್ಲಿ ಐವರನ್ನು ಗುಡ್ಡ ಹತ್ತಿಸಿತು. ಮುನ್ಸೂಚನೆ ಇಲ್ಲದೇ ಶತ್ರು ಪಡೆಯನ್ನು ಅಂದಾಜಿಸದೇ ನಮ್ಮವರು ಗುಡ್ಡ ಹತ್ತಿದರು. ಮತೋನ್ಮತ್ತ ಪಾಕಿಗಳ ಕೈಗೆ ಸಿಕ್ಕಿಬಿದ್ದರು. ಬಂಧಿತ ಸೈನಿಕರನ್ನು ಪೀಡಿಸಲಾಯಿತು, ಹಿಂಸಿಸಲಾಯಿತು, ಕೊನೆಗೆ ತುಂಡುತುಂಡಾದ ಶವವನ್ನು ಸೇನೆಗೆ ಹಸ್ತಾಂತರಿಸಲಾಯಿತು. ಅಲ್ಲಿಗೆ, ಯುದ್ಧ ಸ್ಥಿತಿ ನಿರ್ಮಾಗೊಂಡುಬಿಟ್ಟಿತು.
ಬೆಚ್ಚಿಬಿತ್ತು ವಾಜಪೇಯಿ ಸರ್ಕಾರ. ಗಟ್ಟಿಗ ಜಾರ್ಜ್ ಮೆತ್ತಗಾಗಿಬಿಟ್ಟರು. ಲಲಿತ ಕವಿ ವಾಜಪೇಯಿಯವರು ಬಂಡಾಯಗಾರರಾದರು. ಉಕ್ಕಿನ ಮನುಷ್ಯ ಅಡ್ವಾಣಿ ತುಕ್ಕು ಹಿಡಿದ ಬೇಹುಗಾರ ವ್ಯವಸ್ಥೆಯ ಬಗ್ಗೆ ಗಾಬರಿಗೊಂಡರು. ಸೈನ್ಯದ ಪ್ರಮುಖರೊಂದಿಗೆ ಮಾತುಕತೆ ಶುರುವಾಯ್ತು. ಆಪರೇಷನ್ ವಿಜಯ್ಶುರುವಾಯ್ತು.
ಸೈನ್ಯದ ಮಿಷನರಿಗಳೆಲ್ಲ ಚುರುಕಾದವು. ಕೆಲವು ಗಂಟೆಗಳಲ್ಲಿ ಪಾಕಿಗಳನ್ನು ಓಡಿಸುತ್ಥೇವೆಂದರು ರಾಜಕಾರಣಿಗಳು. ವಿರೋಧ ಪಕ್ಷದವರು ಸರ್ಕಾರದ ವೈಫಲ್ಯವಿದೆಂದು ಜರಿದರು. ಪಾಕಿಸ್ತಾನಕ್ಕೆ ಕಾಶ್ಮೀರ ಕೊಡುವುದರಲ್ಲಿ ತಪ್ಪೇನಿದೆ? ಸಮಸ್ಯೆಗೆ ಪರಿಹಾರ ದೊರಕಿಬಿಡುತ್ತಲ್ಲ ಎಂದರು ಒಂದಷ್ಟು ಬುದ್ಧಿಜೀವಿಗಳು! ಆದರೆ ಗಡಿತುದಿಯಲ್ಲಿ ಕಾಯುತ್ತಿದ್ದ ಸೈನಿಕ ಮಾತ್ರ ಫಡಫಡಿಸುತ್ತಿದ್ದ. ಅವನ ಬಳಿ ಮಂಜಿನ ಬೂಟುಗಳು, ಕನ್ನಡಕಗಳು, ಕೊನೆಗೆ ಬೆಚ್ಚನೆಯ ಬಟ್ಟೆಗಳೂ ಇರಲಿಲ್ಲ. ಇವ್ಯಾವುವೂ ಬೇಡ, ಒಂದಷ್ಟು ಮದ್ದು ಗುಂಡು, ಶಸ್ತ್ರಾಸ್ತ್ರ ಇದ್ದರೆ ಕೊಡಿ ಸಾಕು ಎಂದರು ಸೈನಿಕರು.

ಆಶ್ಚರ್ಯವೇನು ಗೊತ್ತೇ? ತೋಲೋಲಿಂಗ್ ಬೆಟ್ಟ ಅದಾಗಲೇ ವೈರಿವಶವಾಗಿತ್ತು. ಅದನ್ನು ಮರಳಿ ಪಡೆಯಲು ಒಂದು ಅಣಕು ಯುದ್ಧದ ಪ್ರಾತ್ಯಕ್ಷಿಕೆ ನಡೆಯಿತು. ಆಗಲೇ ಗೊತ್ತಾಗಿದ್ದು ನಮ್ಮ ದಆಸ್ತಾನಿನ ಪರಿಸ್ಥಿತಿ! ಅನೇಕ ಗುಂಡುಗಳು ಸಿಡಿಯಲೇ ಇಲ್ಲ. ಹಣದಾಸೆಗೆ, ಭ್ರಷ್ಟಾಚಾರಕ್ಕೆ ಬಲಿಬಿದ್ದು ಕೆಲವು ಅಧಿಕಾರಿಗಳು ರಾಜಕಾರಣಿಗಳೊಂದಿಗೆ ಶಾಮೀಲಾಗಿ ಉಪಯೋಗಕ್ಕೆ ಬಾರದ ಮದ್ದು ಗುಂಡುಗಳನ್ನು ಖರೀದಿಸಿದ್ದರು. ಈಗ ಸೈನ್ಯದೊಳಗೆ ಸಂಲನ ಶುರುವಾಯ್ತು. ಇರುವ ಗುಂಡುಗಳನ್ನು ವರ್ಗೀಕರಿಸಿ, ಸಿಡಿಯುವ ಗುಂಡುಗಳನ್ನೇ ಹಂಚುವ ಕೆಲಸವೂ ಆಯ್ತು.
ಈಗ ವಶಪಡಿಸಿಕೊಳ್ಳಬೇಕಿದ್ದ ಮೊದಲ ಬೆಟ್ಟ ತೋಲೋಲಿಂಗ್. ಕಾರ್ಗಿಲ್ ಪಟ್ಟಣಕ್ಕೆ ಸುಮಾರು ೨೦ ಕಿ.ಮೀ. ದೂರ, ದ್ರಾಸ್‌ನಿಂದ ೬ ಕಿ.ಮೀ. ಅಂತರದಲ್ಲಿರುವ ಬೆಟ್ಟ ಇದು. ರಸ್ತೆಗೆ ಅಂಟಿಕೊಂಡಂತೆ ಇದೆ. ಅದರ ಬುಡದಲ್ಲಿ ಸಾಹಸಿ ಸೈನಿಕರು ಡೇರೆ ನಿರ್ಮಿಸಿದರು. ಸಿಡಿಯುವ ಬೋಫೋರ್ಸುಗಳನ್ನು ನಿಲ್ಲಿಸಿಕೊಂಡರು. ನೆನಪಿರಲಿ. ಗುಡ್ಡದ ಮೇಲೆ ಕುಳಿತ ಶತ್ರು ಸೈನಿಕ ಇವನ್ನೆಲ್ಲ ಗಮನಿಸುತ್ತಲೇ ಇದ್ದಾನೆ. ಆತ ನಿರಂತರ ಶೆಲ್‌ಗಳನ್ನು ಎಸೆಯುತ್ತಿದ್ದಾನೆ. ಶೆಲ್ ಸಿಡಿದಾಗ ಅದರಿಂದ ಹೊರಹೊಮ್ಮುವ ಸೀಸದ ಕಡ್ಡಿಗಳು ಕೆಳಗಿನ ಸೈನಿಕನನ್ನು ಇರಿದು ಕೊಂದುಬಿಡುತ್ತವೆ. ಅಂತಹದರಲ್ಲೂ ನಮ್ಮ ಸೈನಿಕ ದೃಢವಾಗಿ ನಿಂತ.
ಮಾಃಇತಿಯ ದೃಷ್ಟಿಯಿಂದ ನಾವು ಶೂನ್ಯರಾಗಿದ್ದೆವು. ಐದುನೂರು ಜನ ಪಾಕ್ ಸೈನಿಕರಿರಬಹುದೆಂದು ಅಂದಾಜಿಸಲಾಗಿತ್ತು. ಯುದ್ಧ ಕೊನೆಯಾಗುವ ವೇಳೆಗೆ ಈ ಸಂಖ್ಯೆ ೫ ಸಾವಿರವಾದರೂ ಇತ್ತು ಎಂಬುದು ಗೊತ್ತಾಯಿತು. ಒಟ್ಟಾರೆ ೧೬೦ ಕಿ.ಮೀ. ವಿಸ್ತಾರಕ್ಕೆ ಇವರು ಚಾಚಿಕೊಂಡಿದ್ದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತು ಬೆಟ್ಟಕ್ಕೆ ಬಂದಿದ್ದರು. ಅವರ ಬಳಿ ವಿಮಾನವನ್ನು ಹೊಡೆದುರುಳಿಸಬಲ್ಲ ಶಸ್ತ್ರಗಳೂ ಇದ್ದವು!
ಮೊದಲ ದಾಳಿಗಳು ವಿಫಲಗೊಂಡವು. ನಮ್ಮ ಸೇನೆ ಅನೇಕ ಯುವ ಅಧಿಕಾರಿಗಳನ್ನು ಕಳಕೊಂಡಿತು. ವಾಯು ಸೇನೆಯ ಬೆಂಬಲ ಪಡೆದು ದಾಳಿಯನ್ನು ಸಂಘಟಿಸಬೇಕಾಯ್ತು. ವಿಮಾನಗಳು ಹಾರಾಡುತ್ತ ನಮ್ಮದೇ ಬೆಟ್ಟಗಳ ಮೇಲೆ ಗುಂಡಿನ ಮಳೆ ಸುರಿಸುತ್ತ ನಡೆದವು. ವಿಮಾನಗಳಿಂದ ಸುರಿಯುವ ಗುಂಡಿನಿಂದ ತಪ್ಪಿಸಿಕೊಳ್ಳಲು ಪಾಕ್ ಸೈನಿಕರು ಬಂಕರುಗಳೊಳಗೆ ಅಡಗುತ್ತಿದ್ದರಲ್ಲ, ಆ ಹೊತ್ತಿನಲ್ಲಿ ಗುಡ್ಡದ ಕೆಳಗಿರುವ ಸೈನಿಕ ಸರಸರನೆ ಮೇಲೆ ಹತ್ತಲು ಶುರು ಮಾಡುತ್ತಿದ್ದ.
ಕಾರ್ಗಿಲ್‌ನ ಬೆಟ್ಟಗಳಿಗೂ ಲೆಹ್‌ನ ಬೆಟ್ಟಗಳಿಗೂ ಅಪಾರ ವ್ಯತ್ಯಾಸವಿದೆ. ಲೆಹ್‌ನ ಬೆಟ್ಟಗಳು ಯಾವಾಗಲೂ ಮಂಜಿನಿಂದಾವೃತ. ಹೋಲಿಸಿದರೆ, ಅವನ್ನು ಏರುವುದು ಸುಲಭ. ಈ ಬೆಟ್ಟಗಳು ಹಾಗಲ್ಲ. ಮಂಜು ಹೊದ್ದುಕೊಂಡಿದ್ದರೂ ಅದು ಯಾವಾಗ ಕರಗಿಬಿಡುತ್ತದೆ ಎಂದು ಹೇಳಲು ಬರುವುದಿಲ್ಲ. ಹತ್ತುವಾಗ ಮಂಜು, ಅರ್ಧ ದಾರಿ ಕ್ರಮಿಸಿದೊಡನೆ ಕಡಿದಾದ ಬಂಡೆಗಳು, ಮತ್ತೆ ಮಂಜಿನ ಬೆಟ್ಟ! ಶೂ, ವಸ್ತ್ರಗಳೆಲ್ಲ ಎರಡೂ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಇರಬೇಕಾಗುತ್ತದೆ. ಈಗ ಶತ್ರು ಮೇಲೆ ಕುಳಿತಿದ್ದಾನೆ. ಆತ ಕಣ್ಣಲ್ಲಿ ಕಣ್ಣಿಟ್ಟು ನಮ್ಮವರು ಅಲ್ಲಿ ಹೋಗದಂತೆ ಕಾಯುತ್ತಿದ್ದಾನೆ. ಮೇಲೇರುವವರು ಕಂಡರೆ ಬಂಡೆ ತಳ್ಳುತ್ತಾನೆ, ಇಲ್ಲಾ ಕೊಂದೇಬಿಡುತ್ತಾನೆ. ಇಂಥಾ ಸನ್ನಿವೇಶದಲ್ಲಿಯೂ ನಮ್ಮ ಸೈನಿಕರು ಮೇಲೆ ಹತ್ತಲಾರಂಭಿಸಿದರು. ಬೆಟ್ಟದ ಮೇಲೆ ಭಯಾನಕ ಯುದ್ಧ ನಡೆಯಿತು. ಬಿಟ್ಟುಕೊಡಲು ಶತ್ರುಗಳು ತಯಾರಿಲ್ಲ, ಕೊಟ್ಟುಬಿಡಲು ನಮ್ಮವರು ಒಪ್ಪುವುದಿಲ್ಲ. ಅಂತೂ ಜುಲೈ ೧೩ಕ್ಕೆ ತೋಲೋಲಿಂಗ್ ನಮ್ಮ ವಶವಾಯ್ತು.
ತೋಲೋಲಿಂಗ್‌ನ ಗೆಲುವು ನಮ್ಮದಾಗುವ ಮೊದಲು ಲೆಫ್ಟಿನೆಂಟ್ ಕೀಶಿಂಗ್ ಕ್ಲಿಫೋರ್ಡ್ ನೋನ್‌ಗ್ರುಮ್‌ನ ನೇತೃತ್ವದಲ್ಲಿ ಸೈನಿಕರ ಪಡೆಯೊಂದು ಪಾಯಿಂಟ್ ೪೮೧೨ನ್ನು ವಶಪಡಿಸಿಕೊಳ್ಳಲೆಂದು ದಾಂಗುಡಿಯಿಟ್ಟಿತು. ಶತ್ರುಗಳ ತಯಾರಿ ಜೋರಾಗಿಯೇ ಇತ್ತು. ತೋಲೋಲಿಂಗ್‌ಗೆ ಹೊಂದಿಕೊಂಡಂತಹ ಪರ್ವತ ಅದು. ಸುತ್ತಲೂ ಶತ್ರುಗಳಿದ್ದುದರಿಂದ, ಬೆಟ್ಟದ ಮೇಲಿನ ಪಾಕಿಗಳಿಗೆ ಮಾಹಿತಿಯೂ ಸರಿಯಾಗಿ ತಲುಪುತ್ತಿತ್ತು. ಪಾಕ್ ಸೈನಿಕರ ವ್ಯವಸ್ಥೆಯೂ ಜೋರಾಗಿತ್ತು. ನೋನ್‌ಗ್ರುಮ್‌ನ ಪಡೆಗೆ ಆಘಾತಗಳ ಮೇಲೆ ಆಘಾತ. ಬಹಳ ಹೊತ್ತು ಕಾದ ನೋನ್‌ಗ್ರುಮ್‌ಗೆ ತಡೆಯಲಾಗಲಿಲ್ಲ. ಸುರಿಯುತ್ತಿದ್ದ ಗುಂಡಿನ ಮಳೆಯ ನಡುವೆ ನುಗ್ಗಿದ. ಕೈಲಿದ್ದ ಗ್ರೆನೇಡುಗಳನ್ನು ಒಂದಾದಮೇಲೆ ಒಂದರಂತೆ ಎಸೆದ. ಒಂದು ಬಂಕರ್ ಛಿದ್ರವಾಯ್ತು. ಆರು ಜನ ಸತ್ತರು. ಶತ್ರುಗಳ ಸ್ವಯಂಚಾಲಿತ ಗನ್ ಕಸಿಯಲು ಹೋದ ನೋನ್‌ಗ್ರುಮ್‌ನತ್ತ ಗುಂಡುಗಳು ತೂರಿಬಂದವು. ಆ ಗುಂಡುಗಳಿಂದ ಆಚ್ಛಾದಿತನಾಗಿದ್ದರೂ ನುಗ್ಗಿಬರುತ್ತಲೇ ಇದ್ದ ಆತನನ್ನು ಕಂಡು ಶತ್ರುಗಳು ಗಾಬರಿಯಿಂದ ವಿಚಲಿತರಾದರು. ಆ ಸಮಯದಲ್ಲಿ ಉಳಿದ ಸೈನಿಕರ ದಾಳಿಗೆ ಹೆದರಿ ಪಾಕಿಗಳು ಹಿಮ್ಮೆಟ್ಟಿದ್ದರು. ಪೂರ್ಣ ಬೆಟ್ಟ ವಶವಾಗುವವರೆಗೂ ನೋನ್‌ಗ್ರುಮ್ ಕೆಳಗಿಳಿಯಲು ಒಪ್ಪಲೇ ಇಲ್ಲ. ಆ ಬೆಟ್ಟವೇ ಅವನ ಅಂತಿಮ ಧಾಮವಾಯ್ತು. ತೋಲೋಲಿಂಗ್ ವಶಪಡಿಸಿಕೊಳ್ಳುವಲ್ಲಿ ಪಾಯಿಂಟ್ ೪೮೧೨ನ ಪಾತ್ರ ಅತಿ ದೊಡ್ಡದು.
ಜುಲೈ ೫ಕ್ಕೆ ಟೈಗರ್ ಹಿಲ್ ನಮ್ಮದಾಯ್ತು. ಪಾಯಿಂಟ್ ೪೮೭೫ ನಮ್ಮ ಕೈಸೇರಿತು. ಒಂದೊಂದು ಬೆಟ್ಟ ವಶಪಡಿಸಿಕೊಳ್ಳುತ್ತ ನಡೆದಂತೆ ನಮ್ಮ ಶಕ್ತಿ ವೃದ್ಧಿಸಿತು, ಪಾಕಿಗಳದ್ದು ಕ್ಷೀಣ ದನಿಯಾಯ್ತು. ಒಂದು ಬೆಟ್ಟವನ್ನು ವಶಪಡಿಸಿಕೊಂಡು ಕೆಳಗಿಳಿದು ಬಂದ ವಿಕ್ರಮ್ ಬಾತ್ರಾ ಟೆಲಿವಿಷನ್ ಚಾನಲ್‌ಗಳಲ್ಲಿ ಕಾಣಿಸಿಕೊಂಡು, ಒಂದು ಬೆಟ್ಟ ಸಾಲದು, ಇನ್ನೂ ಬೇಕು. ಯೇ ದಿಲ್ ಮಾಂಗೆ ಮೋರೆಂದ. ಅದಾದ ಎರಡೇ ದಿನಗಳಲ್ಲಿ ಮತ್ತೆ ಬೆಟ್ಟ ಹತ್ತಿ ಶತ್ರುಗಳೆದುರು ನಿಂತ, ಗುಂಡಿಗೆ ಬಲಿಯಾದ. ಇಡಿಯ ದೇಶ ಕಣ್ಣೀರಿಟ್ಟಿತು. ಕರ್ನಲ್ ವಿಶ್ವನಾಥನ್, ರುವಾಂಡ, ಅಂಗೋಲಾಗಳಲ್ಲೆಲ್ಲಾ ಶಾಂತಿ ಸ್ಥಾಪನಾ ಪಡೆಯ ಪರವಾಗಿ ಸೇವೆ ಸಲ್ಲಿಸಿದ್ದ. ಕಾರ್ಗಿಲ್ ಕದನ ಭೂಮಿಯಲ್ಲಿ ರಕ್ತ ಚೆಲ್ಲಿ ಶವವಾದ. ಹೆಂಡತಿ ಜಲಜಾ ಕಣ್ಣುಗಳು ತೇವಗೊಂಡಿದ್ದವು. ಆಗ ತಾನೇ ಮಾತು ಕಲಿತಿದ್ದ ಮಗುವಿಗೆ ತಂದೆಗೇನಾಯ್ತೆಂಬುದೇ ಗೊತ್ತಿರಲಿಲ್ಲ. ಆದರೆ ವಿಶ್ವನಾಥನ್‌ರ ತಂದೆ ಮಾತ್ರ ಗಂಭೀರವಾಗಿದ್ದರು. ಮಗನ ಶವ ನೋಡಲು ಬಂದಿದ್ದ ನೂರಾರು ಜನರಿಗೆ ಮಗನ ಸಾಹಸ ವಿವರಿಸುತ್ತಿದ್ದರು. ವಯೋಸಹಜವಾಗಿ ರುವಾಂಡಾ ನಂತರ ತಮ್ಮ ಮಗ ಸೇವೆ ಸಲ್ಲಿಸಿದ್ದ ದೇಶದ ಹೆಸರು ಮರೆತಾಗ ಮೊಮ್ಮಗಳು ಅಂಗೋಲಾ ಪೆರಿಯಪ್ಪಎಂದು ನೆನಪಿಸಿಕೊಡುತ್ತಿದ್ದಳಂತೆ. ಮಗನ ಕೊನೆಯ ದಿನದ ಅಂಗಿಯನ್ನು ಎತ್ತಿಟ್ಟ ತಂದೆ ಯಾರು ಬಂದರೂ ದೇಹಕ್ಕಾಗಿರುವ ಗುಂಡುಗಳ ಗಾಯ ನೋಡಿಅನ್ನುತ್ತ ಆ ಅಂಗಿ ತೋರುತ್ತಿದ್ದರಂತೆ!
ಇಪ್ಪತ್ತರೆರಡರ ತರುಣ ಮನೋಜ್ ಕುಮಾರ್ ಪಾಂಡೆ ನ್ನ ರಕ್ತದ ಸಾಮರ್ಥ್ಯ ತೋರುವ ಮುನ್ನ ಮೃತ್ಯು ಬಂದರೆ, ಆ ಮೃತ್ಯುವನ್ನೇ ಕೊಂದುಬಿಡುತ್ತೇನೆಎಂದು ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ಅಂತೆಯೇ ರಕ್ತದ ಶಕ್ತಿ ಸಾಬೀತುಪಡಿಸಿಯೇ ಪ್ರಾಣ ಕಳಕೊಂಡಿದ್ದ. ಅವನಿಗೆ ಪರಮವೀರ ಚಕ್ರವನ್ನು ಮರಣೋತ್ತರವಾಗಿ ಕೊಡಲಾಯ್ತು. ಒಂದೇ- ಎರಡೇ.. ದೇಹಕ್ಕಾದ ಗಾಯಗಳನ್ನು ಬದಿಗಿಟ್ಟು ರಾಷ್ಟ್ರದ ಗಾಯಕ್ಕೆ ಮುಲಾಮು ಹಚ್ಚಿದ ಪರಮ ವೀರರು ಇವರು. ನಾವು ೫೨೪ ಸೈನಿಕರನ್ನು, ಅಧಿಕಾರಿಗಳನ್ನು ಕಳೆದುಕೊಂಡೆವು. ಅವರಲ್ಲಿ ೨೨ರಿಂದ ೪೦ರೊಳಗಿನ ತರುಣರೇ ಹೆಚ್ಚು. ೧೩೬೩ ಜನ ಗಾಯಾಳುಗಳಾದರು. ಪಾಕಿಸ್ತಾನದ ದಿಕ್ಕಿನಲ್ಲಿ ೬೯೬ ಜನ ಶವವಾದರು. ಸಾಯುವುದಕ್ಕೆ ಹೆದರಿದ ಉಳಿದವರು ಓಡಿಹೋದರು.

ಇತ್ತ ಯುದ್ಧದ ಹೊತ್ತಲ್ಲಿ ಜಾರ್ಜ್ ಯುದ್ಧದ ಬೆಟ್ಟಗಳ ಬುಡಕ್ಕೆ ಹೋಗಿಬಂದರು. ಸೈನಿಕರ ಆತ್ಮಸ್ಥೈರ್ಯ ವೃದ್ಧಿಯಾಯ್ತು. ಅತ್ತ ಪ್ರಮೋದ್ ಮಹಾಜನ್ ಮಾಧ್ಯಮಗಳೊಂದಿಗೆ ಮಾತನಾಡಿ ಯುದ್ಧದ ವರದಿಗಳನ್ನು ನೇರವಾಗಿ ಜನರಿಗೆ ತಲುಪಿಸಲು ಅವಕಾಶ ಮಾಡಿಕೊಟ್ಟರು. ಹೀಗಾಗಿಯೇ ವಿಕ್ರಮ್ ಬಾತ್ರಾರಂತಹ ಕೆಲವರು ಹೀರೋಗಳಾಗಲು ಸಾಧ್ಯವಾಗಿದ್ದು. ವಾಜಪೇಯಿಯವರು ಅಮೆರಿಕಾದೆದುರು ನಿಂತು ಕಿಸ್ತಾನಕ್ಕೆ ಬುದ್ಧಿ ನೀವೇ ಕಲಿಸುತ್ತೀರೋ, ನಾವೇ ಸರಿಯಾಗಿ ಕಲಿಸಬೇಕೋ?ಎಂದು ಗುಡುಗಿದರು. ನವಾಜ್ ಶರೀಫನೊಂದಿಗೆ ಮಾತು ಸಾಧ್ಯವೇ ಇಲ್ಲವೆಂದಿತು ಭಾರತ. ಅಷ್ಟರೊಳಗೆ ಸೋತು ಸುಣ್ಣವಾಗಿದ್ದ ಪಾಕ್ ಶರಣಾಗತವಾಯಿತು. ತನ್ನ ಸೈನಿಕರ ಶವ ಸ್ವೀಕರಿಸುವುದಿಲ್ಲವೆಂದಿತು. ಸ್ವೀಕಾರ ಮಾಡಿದರೆ ಒಪ್ಪಂದಗಳನ್ನು ಮುರಿದು ದಾಳಿ ಮಾಡಿದ್ದು ತಾನೇ ಎಂದು ಒಪ್ಪಿಕೊಳ್ಳಬೇಕಾದ ಪ್ರಮೇಯ ಬರುತ್ತದಲ್ಲವೆಂಬ ಹೆದರಿಕೆ! ಅನಾಥವಾದ ಸೈನಿಕ ಶವಗಳಿಗೆ ನಮ್ಮ ಸೈನಿಕರೇ ಅಂತ್ಯ ಸಂಸ್ಕಾರ ಮಾಡಿದರು!
ಇತ್ತ ಭಾರತದ ಗೆಲುವು ಭಾರತದ ಆಂತರಿಕ ಶಕ್ತಿಯನ್ನು ವೃದ್ಧಿಸಿತು. ಷೇರು ಮಾರುಕಟ್ಟೆಯಲ್ಲಿ ಬೆಳವಣಿಗೆ ದಾಖಲಾಯ್ತು. ಆನ ದೇಶದ ಕುರಿತಂತೆ ಧನಾತ್ಮಕವಾಗಿ ಚಿಂತಿಸಲಾರಂಭಿಸಿದರು. ಏಕಾಏಕಿ ಭಾರತ ಹೊಳೆಯಲಾರಂಭಿಸಿತು. ಅತ್ತ ಪಾಕ್ ಕುಗ್ಗಿಹೋಯ್ತು. ಎಲ್ಲ ಯುದ್ಧಗಳಲ್ಲಿ ಆದಂತೆ ಈ ಯುದ್ಧದಲ್ಲೂ ಬಾಲ ತುಳಿದ ನಾಯಿಯಂತೆ ಗುರ್ ಎನ್ನುತ್ತ ಓಡಿತು. ಒಂದೆಡೆ ಭಾರತವನ್ನು ಎದುರು ಹಾಕಿಕೊಂಡಿದ್ದಕ್ಕೆ ಅಲ್ಲಿನ ಪತ್ರಿಕೆಗಳು ಸರ್ಕಾರವನ್ನು ಹೀಗಳೆದರೆ, ಮತ್ತೊಂದೆಡೆ, ಆಯಕಟ್ಟಿನ ಜಾಗದಲ್ಲಿದ್ದೂ ಸೋತಿದ್ದಕ್ಕೆ ಜನ ಉರಿದುಬಿದ್ದರು. ಸಾಕಷ್ಟು ಹೆಸರುಗಳಿಸಿದ್ದ ನವಾಜ್ ಶರೀಫ್ ಏಕಾಏಕಿ ಯಾರಿಗೂ ಬೇಡವಾದ. ಇದರ ಲಾಭ ಮುಷರ್ರಫ್ ಗೆ ದಕ್ಕಿತು. ನವಾಜ್ ಷರೀಫರನ್ನು ಕೆಳಗಿಳಿಸಿ ತಾನೇ ಅಧ್ಯಕ್ಷನಾದ. ಪಾಕಿಸ್ತಾನ ೫೦ ವರ್ಷಗಳಷ್ಟು ಹಿಂದೆ ಹೋಗಿ ನಿಂತಿತು.
ಎಲ್ಲಕ್ಕೂ ಕಾರಣ ಆ ನಮ್ಮ ವಿರ ಸೈನಿಕರು. ನಾಯಕ್ ಅಂಗ್ರೇಜ್ ಸಿಂಗ್ ಗುಂಡೇಟು ತಿಂದು ಮಲಗಿದ್ದ. ಪ್ರಧಾನಿ ವಾಜಪೇಯಿ ನೋಡಹೋದಾಗ ಹೇಳಿದ್ದ, ಭಾರತದ ಸೈನಿಕರು ಎದೆಗೆ ಗುಂಡು ತಿಂದಿದ್ದಾರೆ, ಬೆನ್ನಿಗಲ್ಲ. ದಯವಿಟ್ಟು ಎಲ್ಲರಿಗೂ ಇದು ಕೇಳುವಂತೆ ಹೇಳಿ ಅಂತ.
೧೩ ವರ್ಷಗಳ ನಂತರ ಈಗಲಾದರೂ ನಿಮಗಿದು ಕೇಳುತ್ತಿದೆಯಾ?

6 thoughts on “ದೇಶ ಮೊದಲೆಂದ ಸೈನಿಕರಿಗೆ ಸಲಾಮ್‌

  1. ಇಂತಹ ಸೈನಿಕರ ಶೌರ್ಯ, ಸಾಹಸ, ತ್ಯಾಗಗಳನ್ನು ಮೆಚ್ಚುವದಿರಲಿ, ಜನ ಸೈನ್ಯಕ್ಕೆ ಸೇರುವುದೇ ಸಾಯಿವುದುಕೊಸ್ಕರ ಎಂಬ ಬೇಜವಾಬ್ದಾರಿ ಮಾತುಗಳನ್ನಾಡುವ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲೆಬೇಕು. ಇಂದು ಗಡಿಯಲ್ಲಿ ಉಳಿದು ದೇಶ ಕಾಯುವ ಸೈನಿಕರಂತೆ, ದೇಶದಲ್ಲಿರುವ ಪ್ರತಿಯೊಬ್ಬ ಯುವಕ ದೇಶದ ಹಿತಕೊಸ್ಕರ ಸೈನಿಕನ ನಿಷ್ಠೆ ರೂಡಿಸಿಕೊಂಡು ದುಡಿಯುವದು ಅವಶ್ಯಕವಾಗಿದೆ. ಸೈನಿಕರಲ್ಲಿರುವ ದೇಶಭಕ್ತಿಯ ಸಣ್ಣ ತುಣುಕು ದೇಶದ ಎಲ್ಲಾ ಯುವಕರಿಗೆ ಬಂದರೆ ಸಾಕು ಭಾರತ ಇಂದಿನ ಪರಿಸ್ತಿತಿಯನ್ನು ಕೆಲವೇ ವರ್ಷಗಳಲ್ಲಿ ಬದಲಾಯಿಸಬಹುದು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s