ಅವರೂ ದಲಿತರೇ… ಆದರೆ ಅವರೇಕೆ ಇನ್ನೂ ಹೀಗೆ?

ವರ್ಷದ ಹಿಂದೆ ನುಸುಳಿ ಬಂದ ಬಾಂಗ್ಲಾ ದೇಶೀಯನೂ ಈಗ ಭಾರತೀಯ! ೬೫ ವರ್ಷಗಳ ಹಿಂದೆ ತನ್ನ ಧರ್ಮ ಉಳಿಸಿಕೊಳ್ಳಲು ಪಾಕಿಸ್ತಾನದಿಂದ ಆಸ್ತಿ ಪಾಸ್ತಿಗಳನ್ನೂ ಮನೆ ಮಠಗಳನ್ನೂ ತೊರೆದು ಬಂದ ಹಿಂದೂ ಮಾತ್ರ ಇಂದಿಗೂ ಅತಂತ್ರ…. ಹೀಗ್ಯಾಕೆ?
ಇದು ನಿಜಕ್ಕೂ ಅನ್ಯಾಯ. ಕಳೆದ ೬೫ ವರ್ಷಗಳಿಂದ ಇದೇ ದೇಶದ ಒಂದಷ್ಟು ಲಕ್ಷ ಜನ ನಾಗರಿಕ ಹಕ್ಕು ಪಡೆಯಲು ಹರಸಾಹಸ ನಡೆಸುತ್ತಿದ್ದಾರೆ. ಜಮೀನು ಕೊಂಡುಕೊಳ್ಳುವ, ಜಮೀನು ಮಾರುವ ಅಧಿಕಾರ ನಮಗೂ ಕೊಡಿ ಎಂದು ಗೋಗರೆಯುತ್ತಿದ್ದಾರೆ. ಚುನಾವಣೆಗಳಲ್ಲಿ ಮತ ಚಲಾಯಿಸುವ ಅಧಿಕಾರ ನಮಗೇಕಿಲ್ಲ ಎಂದು ಪ್ರಶ್ನಿಸುತ್ತಲೇ ಇದ್ದಾರೆ. ಕೊನೆಗೆ ನಾವೊಂದು ರೇಷನ್ ಕಾರ್ಡು ಪಡೆಯಲೂ ಯೋಗ್ಯರಲ್ಲವೆ? ಎಂದು ಬಿಕ್ಕಳಿಸುತ್ತಿದ್ದಾರೆ. ಅವರ ಮಕ್ಕಳಿಗೆ ಇಂಜಿನಿಯರಿಂಗ್, ಮೆಡಿಕಲ್ ಓದುವ ಭಾಗ್ಯವಿಲ್ಲ. ರಾಜ್ಯ – ಕೇಂದ್ರ ಸರ್ಕಾರಗಳ ನೌಕರಿಗೆ ಅರ್ಜಿ ಗುಜರಾಯಿಸಿದರೂ ಅವರಿಗೆ ಕೆಲಸ ದಕ್ಕುವುದಿಲ್ಲ. ಅವರು ಅತಂತ್ರರಾಗಿ ಬದುಕುತ್ತಿದ್ದಾರೆ. ದಲಿತರಾಗಿದ್ದೂ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸ್ವತಂತ್ರ ಭಾರತದಲ್ಲಿಯೇ ಗುಲಾಮರಂತೆ ಬದುಕುತ್ತಿದ್ದಾರೆ.
ಹೌದು! ಇವರನ್ನ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರು ಅಂತ ಸರ್ಕಾರದ ಭಾಷೆಯಲ್ಲಿ ಕರೆಯಲಾಗುತ್ತೆ. ಅರವತ್ತೈದು ವರ್ಷಗಳ ಹಿಂದೆ ಅದೊಂದು ದುರ್ದೈವದ ದಿನ ಪಾಕಿಸ್ತಾನದಲ್ಲಿ ತಮ್ಮದೆಲ್ಲವನ್ನೂ ಬಿಟ್ಟು ಜಮ್ಮುವಿನೆಡೆಗೆ ಸಿಯಾಲ್‌ಕೋಟ್‌ನ ಹಿಂದುಳಿದ ಹಿಂದೂಗಳಿವರು!
ಭಾರತ – ಪಾಕಿಸ್ತಾನಗಳ ಕಲ್ಪನೆ ೧೯೪೭ರ ಆಗಸ್ಟ್ ೧೪ರಂದು ಅಚಾನಕ್ಕಾಗಿ ಹುಟ್ಟಿದ್ದೇನಲ್ಲ. ಯಾವಾಗ ಸಾರ್ವಜನಿಕವಾದ ಕಾಂಗ್ರೆಸ್‌ಗೆ ಪ್ರತಿಯಾಗಿ ಮುಸ್ಲೀಂ ಲೀಗ್ ಹುಟ್ಟಿಕೊಂಡಿತೋ ಆಗಲೇ ಪಾಕಿಸ್ತಾನವೂ ರೂಪುಗೊಂಡಾಗಿತ್ತು. ಜಿನ್ನಾ ತನ್ನ ಪುಂಡ ಪೋಕರಿಗಳ ಗುಂಪನ್ನು ಗಟ್ಟಿ ಮಾಡಿಕೊಳ್ಳುತ್ತ ಹಂತ ಹಂತಕ್ಕೂ ಬೆಳೆಯುತ್ತಲೇ ಹೋದ, ಕಾಂಗ್ರೆಸ್ಸು ಬಾಗುತ್ತಲೇ ಹೋಯ್ತು. ನಿರ್ಣಾಯಕ ಹಂತದಲ್ಲಿ, ದೇಶ ವಿಭಜನೆಯಾಗದಿದ್ದರೆ ನೇರ ಕಾರ್ಯಾಚರಣೆಗಿಳಿದು ಭೂಮಿ ಕಬಳಿಸುವ ಬೆದರಿಕೆಯನ್ನೂ ಒಡ್ಡಿದ ಜಿನ್ನಾ. ಪಾಕಿಸ್ತಾನ ನಿರ್ಮಾಣಗೊಂಡಿತು. ನಿಮ್ಮವರು ನಿಮಗೆ, ನಮ್ಮವರು ನಮಗೆ ಎಂದಿದ್ದ ಜಿನ್ನಾ. ಒಪ್ಪಿಕೊಂಡಿದ್ದರೆ, ಸ್ವಲ್ಪ ಸಾವು ನೋವು ಹೆಚ್ಚಾಗಿರುತ್ತಿತ್ತು. ಆದರೆ ಇವತ್ತು ನೆಮ್ಮದಿಯಿಂದ ಬದುಕಿರುತ್ತಿದ್ದೆವು. ಗಾಂಧೀಜಿ ಎಡವಟ್ಟು ಮಾಡಿದರು. ಮುಸಲ್ಮಾನರು ಇಲ್ಲಿಯೇ ಉಳಿಯಲಿ, ಅಲ್ಲಿಂದ ಹಿಂದೂಗಳೂ ಬರಲಿ ಎಂದುಬಿಟ್ಟರು.
ಪಶ್ಚಿಮ ಪಾಕಿಸ್ತಾನದಿಂದ ಬಂದು ಜಮ್ನೆಮುವಿನಲ್ಲಿ ನೆಲೆಸಿರುವ ನಿರಾಶ್ರಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಲಾಭಾರಾಮ್ ಗಾಂಧಿ
ಗಡಿ ಭಾಗದಲ್ಲಿ ಮಾನವ ಸಾಗಾಣಿಕೆ ನಡೆಯಿತು. ಜಗತ್ತಿನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಮಾನವ ವಿನಿಮಯ ಇದು. ಇಲ್ಲಿ ಮುಸಲ್ಮಾನರು ಬಿಟ್ಟು ಹೋದ ಮನೆಗಳನ್ನು ಇಲ್ಲಿನ ಮುಸಲ್ಮಾನರಿಗೇ ಕೊಡಬೇಕೆಂದು ಕೆಲವು ಸೆಕ್ಯುಲರ್ ಕಾಂಗ್ರೆಸ್ಸಿಗರು ವಾದಿಸಿದರು. ಗೃಹಮಂತ್ರಿ ಪಟೇಲರು ಮುಲಾಜು ನೋಡಲಿಲ್ಲ. ದೆಹಲಿಯ ಆ ಮನೆಗಳನ್ನು ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ಹಂಚಿದರು. ಆದರೆ ಹೀಗೆ ದೆಹಲಿಯವರೆಗೆ ಓಡಿ ಬಂದು ಸೇರಿಕೊಳ್ಳುವ ಪ್ರಕ್ರಿಯೆಯೇನೂ ಸುಲಭದ್ದಾಗಿರಲಿಲ್ಲ. ದಾರಿಯುದ್ದಕ್ಕೂ ಮರಣ ಕೂಪಗಳು. ಹೆಣ್ಣುಮಕ್ಕಳ ಅತ್ಯಚಾರ, ಅಪಹರಣಗಳು. ಹೀಗಾಗಿಯೇ ಪಲಾಯನದ ದಾರಿಯಲ್ಲಿ ಯಾವುದು ಸುರಕ್ಷಿತವೆನ್ನಿಸುತ್ತೋ ಆ ದಿಕ್ಕಿನತ್ತ ನಿರಾಶ್ರಿತರು ಧಾವಿಸುತ್ತಿದ್ದರು. ಕೆಲವರು ದೆಹಲಿಗೆ, ಕೆಲವರು ಪಂಜಾಬಿಗೆ, ಮತ್ತೆ ಕೆಲವರು ರಾಜಸ್ಥಾನಕ್ಕೂ ಹೋದರು. ಹೀಗೆ ವಲಸೆ ಬಂದವರೆಲ್ಲ ಇಂದು ಈ ದೇಶದ ಅವಿಭಾಜ್ಯ ಅಂಗವೇ ಆಗಿಬಿಟ್ಟಿದ್ದಾರೆ. ಅವರ ನಡುವಿಂದಲೇ ಬಂದ ಲಾಲ್‌ಕೃಷ್ಣ ಅಡ್ವಾಣಿ ಗೃಹಸಚಿವರಾದರು. ಪಾಕಿಸ್ತಾನದಿಂದ ಓಡಿ ಬಂದ ಮನಮೋಹನ್ ಸಿಂಗ್ ಎರಡೆರಡು ಬಾರಿ ಪ್ರಧಾನ ಮಂತ್ರಿಯಾದರು. ಹೀಗೆ ದೇಶದ ಬೇರೆಬೇರೆ ದಿಕ್ಕುಗಳಲ್ಲಿ ನೆಲೆಯೂರಿದವರೆಲ್ಲ ನೆಮ್ಮದಿಯ ಬದುಕು ಕಂಡರು. ಜಮ್ಮು – ಕಾಶ್ಮೀರದತ್ತ ತಿರುಗಿದವರು ಮಾತ್ರ ಅಲೆಮಾರಿಗಳಾಗಿ ಉಳಿದುಬಿಟ್ಟರು!
ಹಾಗೆ ವಲಸೆ ಬಂದವರ ಒಂದು ಬಣ ಅತ್ತ ಹೋಗಲು ಕಾರಣವೂ ಇತ್ತು. ವಾಸ್ತವವಾಗಿ ನಿರಾಶ್ರಿತರು ಪಂಜಾಬಿನ ಗುರುದಾಸ ಪುರ, ಅಮೃತಸರಗಳತ್ತ ಧಾವಿಸಿದ್ದೇ ಹೆಚ್ಚು. ಆದರೆ ಸಿಯಾಲ್‌ಕೋಟ್‌ನ ನಿರಾಶ್ರಿತರಿಗೆ ಈ ಎರಡೂ ನಗರಗಳು ೯೦ ಕಿ.ಮೀ.ಗಿಂತಲೂ ಹೆಚ್ಚು ದೂರವಿದ್ದವು. ಹೀಗಾಗಿ ಸ್ವಲ್ಪ ಹತ್ತಿರದಲ್ಲಿದ್ದ ಜಮ್ಮುವಿಗೆ ಬಂದು ನೆಲೆ ನಿಂತರು. ಇಲ್ಲಿನ ವಾತಾವರಣದಲ್ಲಿ ಅಸಹಕಾರದ ವಾಸನೆ ಬಂತೆನಿಸಿದಾಕ್ಷಣ ಆರೇಳು ಸಾವಿರ ಕುಟುಂಬಗಳು ಪಂಜಾಬಿನತ್ತ ಮುಖ ಮಾಡಿದವು. ಓಡೋಡಿ ಬಂದ ನೆಹರೂ ತನ್ನ ಮಿತ್ರ ಶೇಕ್ ಅಬ್ದುಲ್ಲಾರನ್ನು ಕರಕೊಂಡು ಅವರೆದುರು ನಿಂತರು. ನೀವು ದಯವಿಟ್ಟು ಜಮ್ಮುವಿಗೆ ಮರಳಿ. ಅಲ್ಲಿನ ಗಡಿ ಭಾಗದ ಹಳ್ಳಿಗಳ ಸರ್ಕಾರಿ ಜಮೀನುಗಳನ್ನು ನಿಮ್ಮದಾಗಿಸಿಕೊಳ್ಳಿ. ನಿಮಗೆ ಎಲ್ಲ ಬಗೆಯ ಸೌಕರ್ಯಗಳನ್ನು ಒದಗಿಸುತ್ತೇವೆ ಎಂದು ಭಾಷಣ ಬಿಗಿದು, ಸರ್ಕಾರಿ ವಾಹನಗಳಲ್ಲಿಯೇ ಅವರನ್ನು ಮರಳಿ ಕರೆದೊಯ್ದು ಜಮ್ಮುವಿನ ಚಕ್ರೋಹಿ, ಸಂಪೂರ್ಣಪುರ ಮುಂತಾದ ಹಳ್ಳಿಗಳಿಗೆ ಬಿಡಲಾಯ್ತು. ಅಲ್ಲಿಗೆ ಈ ನಿರಾಶ್ರಿತರ ಕತೆ ಮುಗಿದಿತ್ತು.
ಶೇಕ್ ಅಬ್ದುಲ್ಲಾ ನೇತೃತ್ವದ ಸರ್ಕಾರವಿರಲಿ, ಆಮೇಲಿನ ಸರ್ಕಾರಗಳೂ ನಿರಾಶ್ರಿತರ ವಿರೋಧಿ ನೀತಿಯನ್ನೆ ಅನುಸರಿಸಲಾರಂಭಿಸಿದವು. ಜಮ್ಮು-ಕಾಶ್ಮೀರ ಸಂವಿಧಾನಾತ್ಮಕವಾಗಿ ೩೭೦ನೇ ವಿಧಿಯನ್ವಯ ವಿಶೇಷ ರಾಜ್ಯವಾದ್ದರಿಂದ ಈ ಜನ ಹೊರಗಿನವರಾಗಿಬಿಟ್ಟರು. ೧೯೪೫ಕ್ಕೂ ಮುಂಚಿನವರು ಮಾತ್ರ ಇಲ್ಲಿನವರು; ಅನಂತರ ಬಂದವರನ್ನು ಇಲ್ಲಿನ ನಾಗರಿಕರೆಂದು ಪರಿಗಣಿಸಲಾಗದು ಎಂದಿತು ಅಲ್ಲಿನ ಸರ್ಕಾರ. ಈ ನಿರಾಶ್ರಿತರನ್ನು ಹೊರಗಿಡಲೆಂದೇ ೧೯೪೫ರ ಬೆಂಚ್‌ಮಾರ್ಕ್ ಇಡಲಾಗಿದೆ ಎಂಬುದು ಎಂಥವನಿಗೂ ಗೊತ್ತಾಗುತ್ತಿತ್ತು. ಆದರೂ ಏನೂ ಮಾಡಲಾಗದ ಸ್ಥಿತಿ. ಮೂರು ಪೀಳಿಗೆಗಳು ಮೂಕ ವೇದನೆ ಅನುಭವಿಸುತ್ತಲೇ ದಿನ ನೂಕಿದವು. ಈಗಿನದು ನಾಲ್ಕನೇ ಪೀಳಿಗೆ. ಇಂದು ಈ ನಿರಾಶ್ರಿತರ ಸಂಖ್ಯೆ ಎರಡೂವರೆ ಲಕ್ಷ ದಾಟಿದೆ.
ಈ ಸಮುದಾಯದ ಈಗಿನ ತರುಣರು ಸ್ವಲ್ಪ ಭಿನ್ನ. ಅವರು ಬೀದಿಗಿಳಿದು ಹೋರಾಟಕ್ಕೆ ನಿಂತಿದ್ದಾರೆ. ಈ ಆವೇಶ ನೋಡಿ ಕೆಲವು ಮುದುಕರಿಗೂ ಬಲ ಬಂದಿದೆ. ಐದು ವರ್ಷಗಳ ಹಿಂದೆ ೮೫ರ ದೇಶ್‌ರಾಜ್, ಮನಮೋಹನ ಸಿಂಗ್ ಎದುರು ನಿಂತು, ’ನೀನು ಪ್ರಧಾನ ಮಂತ್ರಿಯಾಗಿದ್ದೀಯ. ಆದರೆ ನಿನ್ನದೇ ಬಂಧು ಬಾಂಧವರು ವೋಟು ಚಲಾಯಿಸುವ ಹಕ್ಕನ್ನೂ ಪಡೆದುಕೊಂಡಿಲ್ಲ, ಗೊತ್ತೇನು?’ ಎಂದು ದಬಾಯಿಸಿಬಿಟ್ಟಿದ್ದರು. ನಮ್ಮ ಪ್ರಧಾನಿಗಳು ಹ್ಯಾಪು ನಗೆ ನಕ್ಕು ’ಅಲ್ಲಿಗೆ ಬಂದಿದ್ದರೆ ನಾನೂ ನಿಮ್ಮಂತೆಯೇ ಆಗಿಬಿಡುತ್ತಿದ್ದೆ’ ಎಂದಿದ್ದರಂತೆ! ಇದರರ್ಥ, ಈ ಸಂಗತಿಯ ಆಳ-ಅಗಲ ಎಲ್ಲರಿಗೂ ಗೊತ್ತಿದೆ. ಆದರೆ ಪರಿಹಾರ ಮಾತ್ರ ಶೂನ್ಯ.
ಜಮ್ಮು ರಾಜ್ಯಸರ್ಕಾರಗಳಂತೂ ಈವರೆಗೆ ಬ್ಲಾಕ್‌ಮೇಲ್ ಆಡಳಿತವನ್ನೇ ನಡೆಸಿಕೊಂಡು ಬಂದಿವೆ. ಕೇಂದ್ರದಲ್ಲಿ ಯಾವ ಸರ್ಕಾರವಿರುತ್ತದೆಯೋ ಅದರೊಂದಿಗೆ ಮೈತ್ರಿ ಮಾಡಿಕೊಂಡು, ಮಾರನೆ ದಿನದಿಂದಲೇ ತನ್ನ ಜಾಲ ಬೀಸಲು ತೊಡಗುತ್ತವೆ. ಆಮೇಲೆ ನಿರಾಶ್ರಿತರನ್ನು ಕೇಳುವವರೇ ಇಲ್ಲ. ಅಡ್ವಾಣಿ ಗೃಹಸಚಿವರಾಗಿದ್ದಾಗ ನ್ಯಾಷನಲ್ ಕಾನ್ಫರೆನ್ಸ್ ಎನ್‌ಡಿಎ ಮಿತ್ರ ಸದಸ್ಯನಾಗಿತ್ತು. ಅದೇ ಸಲುಗೆಯಿಂದ ಅವರೊಂದು ಪತ್ರವನ್ನು ಫಾರುಕ್ ಅಬ್ದುಲ್ಲಾರಿಗೆ ಬರೆದಿದ್ದರು. ಅದು ಮುಲಾಜಿಲ್ಲದೆ ಕಸದಬುಟ್ಟಿ ಸೇರಿತ್ತು. ಅಡ್ವಾಣಿ ಬಿಡದೇ ಮತ್ತೊಂದು ಪತ್ರ ಬರೆದು, ’ಈ ನಿರಾಶ್ರಿತರಿಗೆ ಒಂದು ನೆಲೆ ಕಲ್ಪಿಸಿ’ ಎಂದು ಕೋರಿಕೊಂಡರು. ಅದೂ ಕಸದ ಬುಟ್ಟಿ ಸೇರಿತಷ್ಟೇ! ರಾಜ್ಯ ಸರ್ಕಾರ ತಾನು ನಿರಾಶ್ರಿತರಿಗೆ ಯಾವುದೇ ಸಹಕಾರ ನೀಡಲಾರೆನೆಂದು ದೃಢವಾಗಿ ಹೇಳಿಬಿಟ್ಟಿತು. ಕೇಂದ್ರ ಸರ್ಕಾರ ತಾನೇ ಬಾಗಿ (ಹೌದು, ಪೂರ್ಣ ಬೆಂಡಾಗಿ) ಈ ನಿರಾಶ್ರಿತರಿಗೆ ಲೋಕಸಭಾ ಚುನಾವಣೆಗೆ ವೋಟು ಕೊಡುವ ಅವಕಾಶ ಮಾಡಿಕೊಟ್ಟಿತು. ರಾಜ್ಯಸರ್ಕಾರದ ನೌಕರಿ ದೊರೆಯದಿದ್ದರೇನಾಯ್ತು? ಕೇಂದ್ರ ಸರ್ಕಾರದ ನೌಕರಿ ಕೊಡುತ್ತೇನೆಂದಿತು. ಇಲ್ಲಿನ ನಿವಾಸಿ ಎಂದು ಹೇಳುವ ಡೊಮಿಸೆಲ್ ಗಳನ್ನು ವಿತರಿಸಿತು. ದುರಂತವೇನು ಗೊತ್ತೆ? ಮತ್ತೆ ನೀತಿ ಬದಲಾಗಿ ಕೇಂದ್ರ ಸರ್ಕಾರದ ನೌಕರಿ ರಾಜ್ಯಸರ್ಕಾರದ ಮೂಲಕವೇ ಆಗಬೇಕೆಂದಾಯ್ತು. ನಿರಾಶ್ರಿತರು ಮತ್ತೆ ಅತಂತ್ರರಾದರು. ಈ ನಿರಾಶ್ರಿತರಿಗೆ ಡೊಮಿಸೆಲ್ಗಳನ್ನು ನೀಡುವುದನ್ನೂ ವಿರೋಧಿಸುತ್ತೇನೆಂದಿತು ರಾಜ್ಯ ಸರ್ಕಾರ. ಕೇಂದ್ರದ ಧಣಿಗಳು ಸುಮ್ಮನಾಗಿಬಿಟ್ಟರು.
ಮಾತೆತ್ತಿದರೆ ೩೭೦ನೇ ವಿಧಿ ತೋರಿಸಿ ಇವರಿಗಾಗಿ ಏನೂ ಮಾಡಲಾಗದೆನ್ನುವ ರಾಜ್ಯ ಸರ್ಕಾರಕ್ಕೆ, ಹಾಗಾದರೆ ೩೭೦ನೇ ವಿಧಿಯನ್ನೇ ರದ್ದು ಮಾಡಿಬಿಡೋಣ ಎನ್ನುವ ಗಂಡು ಸರ್ಕಾರ ಕೇಂದ್ರದಲ್ಲಿ ಬರಬೇಕಿದೆ. ಇತ್ತೀಚೆಗೆ ವಾಧ್ಯಾ ಕಮಿಟಿಯೂ ಈ ಜನ ಕೇಳುವ ಸೌಲಭ್ಯಗಳು ನ್ಯಾಯಯುತವಾಗಿಯೇ ಇವೆ, ಒಪ್ಪಿಕೊಳ್ಳುವುದು ಒಳ್ಳೆಯದು ಎಂದಿದೆ. ಆದರೆ ಸರ್ಕಾರ ಮಾತ್ರ ಮುಗುಮ್ಮಾಗಿದೆ. ಇತ್ತೀಚೆಗೊಮ್ಮೆ ಸರ್ಕಾರ ಇವರಿಗಾಗಿ ಧನಾತ್ಮಕ ನಿರ್ಣಯ ಕೈಗೊಳ್ಳುವ ಅವಕಾಶ ಬಂದುಬಿಟ್ಟಿತ್ತು. ಆದರೆ ಕಟ್ಟರ್ ಪಂಥಿ ಮುಸ್ಲಿಂ, ಆರೋಗ್ಯ ಸಚಿವ ಅಬ್ದುಲ್ ರಹೀಮ್ ರಾಥೆರ್ ಅಡ್ಡಗಾಲು ಹಾಕಿಬಿಟ್ಟರು. ಸರ್ಕಾರದಲ್ಲಿ ಬಹುಮತ ಬರುವವರೆಗೂ ಅದು ಸಾಧ್ಯವಿಲ್ಲ ಎಂದುಬಿಟ್ಟರು. ಜನಸಂಖ್ಯೆ ಹೆಚ್ಚಿದ್ದರೂ ಬಹುಸಂಖ್ಯಾತ ಹಿಂದೂಗಳುಳ್ಳ ಜಮ್ಮುವಿಗೆ ೩೬ ವಿಧಾನಸಭಾ ಸದಸ್ಯರು, ಬಹುಸಂಖ್ಯಾತ ಮುಸಲ್ಮಾನರಿರುವ ಕಡಿಮೆ ಜನಸಂಖ್ಯೆಯ ಕಾಶ್ಮೀರಕ್ಕೆ ೪೫ ಸ್ಥಾನಗಳು. ಹೀಗಿರುವಾಗ ಬಹುಮತ ಬರುವುದಾದರೂ ಹೇಗೆ?
ಈ ಎಲ್ಲ ರಗಳೆಗಳೆ ಬೇಡ, ನಮಗೊಂದಿಷ್ಟು ಪರಿಹಾರ ಕೊಟ್ಟು ಬೇರೆ ರಾಜ್ಯಕ್ಕೆ ಕಳಿಸಿಬಿಡಿ. ನಾವು  ಅಲ್ಲಾದರೂ ಬದುಕಿಕೊಳ್ಳುತ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ಸಿನ ಗೃಹ ಸಚಿವ ಶಿವರಾಜ ಪಾಟೀಲರು ‘ಅದೊಂದು ಮಾಡಬೇಡ್ರಪ್ಪ; ನೀವು ಹೋದರೆ ಅಲ್ಲಿ ಮುಸಲ್ಮಾನರು ನೆಲೆ ನಿಂತುಬಿಡುತ್ತಾರೆ, ಪಾಕಿಸ್ತಾನದ ಧ್ವಜ ಹಾರಿಸಿಬಿಡುತ್ತಾರೆ’ ಎಂದಿದ್ದರಂತೆ. ನಿರಾಶ್ರಿತರ ಸಂಘದ ಅಧ್ಯಕ್ಷ ಲಾಭಾರಾಮ್ ಗಾಂಧಿ ಇದನ್ನು ನೆನಪಿಸಿಕೊಂಡು ಈ ನೆಲವನ್ನು ಭಾರತವಾಗಿ ಉಳಿಸಿದ್ದಕ್ಕೆ ನಮಗೀ ಶಿಕ್ಷೆ ಎಂದು ಗೋಳಿಡುತ್ತಾರೆ.
ನನ್ನದು ಒಂದೇ ಪ್ರಶ್ನೆ. ಬಾಂಗ್ಲಾದಿಂದ ಬಂದ ಮುಸ್ಲಿಮ್ ನಿರಾಶ್ರಿತರಿಗೆ ರೇಷನ್ ಕಾರ್ಡ್ ಸಿಕ್ಕಿದೆ, ವೋಟರ್ ಐಡಿ ದಕ್ಕಿದೆ. ಅವರು ಮತ ಚಲಾಯಿಸುತ್ತಾರೆ. ಅವರದ್ದೇ ವ್ಯಕ್ತಿ ಶಾಸಕನಾಗಿ ಮಂತ್ರಿಯೂ ಆಗುತ್ತಾನೆ. ವರ್ಷದ ಹಿಂದೆ ನುಸುಳಿ ಬಂದ ಬಾಂಗ್ಲಾ ದೇಶೀಯನೂ ಈಗ ಭಾರತೀಯ! ೬೫ ವರ್ಷಗಳ ಹಿಂದೆ ತನ್ನ ಧರ್ಮ ಉಳಿಸಿಕೊಳ್ಳಲು ಆಸ್ತಿ ಪಾಸ್ತಿಗಳನ್ನೂ ಮನೆ ಮಠಗಳನ್ನೂ ತೊರೆದು ಬಂದ ಹಿಂದೂ ಮಾತ್ರ ಇಂದಿಗೂ ಅತಂತ್ರ…. ಹೀಗ್ಯಾಕೆ? ಅವನು ಹಿಂದುವಾಗಿದ್ದೇ ತಪ್ಪಾಯ್ತಾ? ದಲಿತರ ಮೇಲಿನ ದೌರ್ಜನ್ಯವನ್ನು ಮುಂದಿಟ್ಟುಕೊಂಡು ಊರುತುಂಬ ಬೊಂಬಡಾ ಬಜಾಯಿಸುವವರಿಗೆ ತಮ್ಮದೇ ಸಹೋದರರು ನರಳುತ್ತಿರುವುದು ಕಾಣುತ್ತಿಲ್ಲವಾ? ಮಾನವ ಹಕ್ಕುಗಳ ರಕ್ಷಣೆಯ ಹೆಸರಲ್ಲಿ ದಿನ ಬೆಳಗಾದರೆ ಪತ್ರಿಕಾ ಗೋಷ್ಟಿ ನಡೆಸುವ, ಕಾನೂನು ಹೊರಾಟ ನಡೆಸುವ ಮಹಾಮಹಿಮರೆಲ್ಲ ಅದೆಲ್ಲಿ ಹೋದರು? ಹಿಂದೂ ಮುಸ್ಲಿಮ್ ಭಾವೈಕ್ಯತೆಯ ಮಾತನಾಡುವ ಬುದ್ಧಿಜೀವಿಗಳು ಮುಸಲ್ಮಾನ ಸರ್ಕಾರವೊಂದರ ದೌರ್ಜನ್ಯದ ಕುರಿತು ಸುಮ್ಮನಿರುವುದಾದರೂ ಏಕೆ?
ಉತ್ತರ ಇಷ್ಟೇ! ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದವರು ಅಂದೇ ಮುಸಲ್ಮಾನರಾಗಿ ಪರಿವರ್ತಿತರಾಗಿದ್ದರೆ, ಅವರೂ ನೆಮ್ಮದಿಯಾಗಿರುತ್ತಿದ್ದರು, ಸರ್ಕಾರವೂ ಸಂತಸಪಡುತ್ತಿತ್ತು. ಆದರೆ ಅವರು ಹಿಂದುತ್ವವನ್ನು ಬಿಡಲಾರೆವು ಅಂದರಲ್ಲ, ಅದಕ್ಕೇ ಈ ಎಲ್ಲ ಸಮಸ್ಯೆಗಳು.
ಅಯ್ಯೋ…. ಹಿಂದೂಸ್ಥಾನವೇ!

6 thoughts on “ಅವರೂ ದಲಿತರೇ… ಆದರೆ ಅವರೇಕೆ ಇನ್ನೂ ಹೀಗೆ?

  1. “ಗಾಂಧೀಜಿ ಎಡವಟ್ಟು ಮಾಡಿದರು. ಮುಸಲ್ಮಾನರು ಇಲ್ಲಿಯೇ ಉಳಿಯಲಿ, ಅಲ್ಲಿಂದ ಹಿಂದೂಗಳೂ ಬರಲಿ ಎಂದುಬಿಟ್ಟರು.” ಈ ಒಂದು ಕಾರಣಕ್ಕೇ I hate him. ಅವತ್ತು ಆ ಒಂದು ತಪ್ಪು ತಲೆತಲಾಂತರಗಳ ವರೆಗೆ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತ ಬಂದಿದೆ ಎಂದು ನನೆಸಿಕೊಂಡರೆ ಉರಿಯುತ್ತೆ..

  2. ಇದನ್ನೆಲ್ಲಾ ಓದುವಾಗ ಒಮ್ಮೊಮ್ಮೆ ಭಾರೀ ಬೇಸರವಾಗುತ್ತದೆ! ಆದರೆ ೩೭೦ ನೇ ವಿಧಿಯನ್ನು ರದ್ದು ಮಾಡಿಬಿಡುವ ಛಾತಿ ಹೊ೦ದಿದ್ದ ಅಜ್ಜಯ್ಯನನ್ನು ೨೦೪ ರಲ್ಲಿ ಸೋಲಿಸಿಯೇ ಬಿಟ್ಟೆವಲ್ಲ ನಾವೆಲ್ಲರೂ! ಆಲ್ಲಿಗೆ ಆ ಒ೦ದು ಆಶಾಕಿರಣವೂ ನ೦ದಿ ಹೋಯಿತು. ಭಾ,ಜ.ಪಾ ಪಕ್ಷಕ್ಕೆ ಮಾತ್ರ ಆವಿಧಿಯನ್ನು ರದ್ದು ಮಾಡುವ ಚಾತಿ ಇದೆ! ಅದೂ ಅಡ್ವಾಣಿ ಅಥವಾ ನರೇ೦ದ್ರ ಮೋದಿ ಪ್ರಧಾನಿಯಾದಲ್ಲಿ ಮಾತ್ರ!
    ಒಳ್ಳೆಯ ಮಾಹಿತಿ ಯುಕ್ತ ಲೇಖನ! ಧನ್ಯವಾದಗಳು ಚಕ್ರವರ್ತಿಯವರೇ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

  3. ದೇಶದ ಎಷ್ಟೋ ಸಮಸ್ಯೆಗಳಿಗೆ ಗಾಂಧೀಜಿಯ ಅಹಿಂಸೆ ಮಾರ್ಗ, ಹಾಗು ಮುಸಲ್ಮಾನರ ಬಗ್ಗೆ, ನೆಹುರು ಬಗ್ಗೆ ಕುರುಡು ಪ್ರೀತಿಯೇ ಕಾರಣ ಎನ್ನಿಸುತ್ತದೆ. ಇಂತಹ ವ್ಯಕ್ತಿಯನ್ನು ಭಾರತದ ರಾಷ್ಟ್ರಪಿತ ಎನ್ನಬೇಕೋ, ಪಾಕಿಸ್ತಾನದ ರಾಷ್ಟ್ರಪಿತ ಎನ್ನಬೇಕೋ ತಿಳಿಯದು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s