ಬರೆದಂತೆ ಬದುಕೋದು ಬಹಳ ಕಷ್ಟ

ಇದೊಂಥರಾ ವಿಚಿತ್ರ. ಕೆಲವೊಮ್ಮೆ ಸಿನಿಮಾ ಥಿಯೇಟರಿನಲ್ಲಿಯೂ ಸಮಯ ಓಡೋದಿಲ್ಲ. ಇನ್ನು ಕೆಲವೊಮ್ಮೆ ಪ್ರವಚನಗಳಲ್ಲೂ ಸಮಯ ಜಾರಿದ್ದು ಗೊತ್ತಾಗೋಲ್ಲ. ಮನಸಿಗೆ ಯಾವುದು ಇಷ್ಟವಾಗುತ್ತೋ ಅದು ಆನಂದವನ್ನೂ ಕೊಡುತ್ತೆ. ಮೊನ್ನೆ ಮಂಗಳೂರಿನಲ್ಲಿ ಹಿರೇಮಗಳೂರು ಕಣ್ಣನ್ ಮತ್ತು ಬಿಕೆಎಸ್ ವರ್ಮರ ಮಾತು  ಚಿತ್ರಗಳ ಜುಗಲ್‌ಬಂದಿ ಹಾಗೆಯೇ ಇತ್ತು. ಎರಡೂವರೆ ತಾಸು ಕಳೆದದ್ದು ಗೊತ್ತಾಗಲೇ ಇಲ್ಲ. ವೈಚಾರಿಕ ಚಿಂತನೆಗೆ ಬಗೆಬಗೆಯ ಪ್ರಯೋಗಗಳು ನಡೆಯುತ್ತವೆನ್ನುವುದಕ್ಕೆ ಸಾಕ್ಷಿಯಾಯ್ತು ಈ ಕಾರ್ಯಕ್ರಮ. ಆದರೆ ಮಹತ್ವದ ವಿಚಾರ ಅದಲ್ಲ. ತಮ್ಮ ತಮ್ಮ ಕ್ಷೇತ್ರದಲ್ಲಿ ದಿಗ್ಗಜರಾಗಿರುವ ಇಬ್ಬರು ಕಲಾವಿದರು ಒಬ್ಬರೊಬ್ಬರಿಗೆ ಪೂರಕವಾಗಿ ಒಂದು ಕಾರ್ಯಕ್ರಮ ನಡೆಸಿಕೊಡುವುದಿದೆಯಲ್ಲ, ಅದೇ ಇಂದಿನ ದಿನಗಳಲ್ಲಿ ವಿಶೇಷ. ಸಂಗೀತ, ಸಾಹಿತ್ಯ ಕಲಾವಿಹೀನಃ ಪಶುಃ ಅಂತಾರಲ್ಲ; ಕೆಲವೊಮ್ಮೆ ಇವೆಲ್ಲ ಇದ್ದೂ ಪಶುವಂತಾದವರು ಇರುತ್ತಾರೆ. ಬೇರೆಯವರನ್ನು ದೂಷಿಸುತ್ತಾ ತಾವೇ ಶ್ರೇಷ್ಟರೆಂದು ಮೆರೆಯುತ್ತಿರುತ್ತಾರೆ. ಅಂತಹವರೊಡನೆ ಹತ್ತು ನಿಮಿಷ ಇದ್ದರೆ ಹತ್ತು ವರ್ಷ ಕಳೆದಂತೆನಿಸುತ್ತದೆ!
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಥವಾ ಕಣ್ಣನ್ ಮಾಮಾ ಇದಕ್ಕೆ ವ್ಯತಿರಿಕ್ತ. ಜೊತೆಗಿದ್ದಷ್ಟು ಕಾಲ ಆನಂದವನ್ನೇ ಹಂಚುತ್ತ ನೋವನ್ನು ತೋರ್ಗೊಡದೆ ಬದುಕುವ ಅಪರೂಪದ ಜೀವ ಅದು. ಬಹುಶಃ ಇಂದು ಕರ್ನಾಟಕದ ಜನರೆಲ್ಲ ಗುರುತಿಸಬಲ್ಲ ಕೆಲವೇ ಕೆಲವು ಜನರ ಪೈಕಿ ಕಣ್ಣನ್ ಮಾಮಾ ಒಬ್ಬರು. ಅಷ್ಟಾದರೂ ಅವರದೆಷ್ಟು ಸರಳವೆಂದರೆ, ನಡುರಸ್ತೆಯಲ್ಲಿ ನಿಂತು ಮಾತನಾಡಿಸಿದರೂ ನಗುನಗುತ್ತಲೇ ಮಾತನಾಡುತ್ತಾರೆ. ಹಿರೇಮಗಳೂರಿನ ಕೋದಂಡರಾಮ ದೇವಸ್ಥಾನಕ್ಕೆ ಹೋದರೆ, ಸ್ವಂತ ಮನೆಗೇ ಬಂದವರೆಂಬಂತೆ ಆದರಿಸುತ್ತಾರೆ. ನಿಮ್ಮ ಮನೆಗೆ ಬಂದುಬಿಟ್ಟರೆ, ಕೆಲವೇ ಕ್ಷಣಗಳಲ್ಲಿ ನಿಮ್ಮವರಾಗಿಬಿಡುತ್ತಾರೆ, ಹರಟುತ್ತಾರೆ, ತಮಾಷೆ ಮಾಡುತ್ತಾರೆ. ಕನ್ನಡ ಸಾಹಿತ್ಯದ ಅಪರೂಪದ ಪರಿಚಯ ಮಾಡಿಕೊಡುತ್ತಾರೆ. ಇಷ್ಟಕ್ಕೂ ಅವರ ಮನೆಭಾಷೆ ತಮಿಳು! ಕನ್ನಡದ ಉಟ್ಟು ಓರಾಟಗಾರರಾಗಿ ತೊಂದರೆ ಕೊಟ್ಟುಕೊಂಡೇ ಬದುಕುವ ಅನೇಕರ ನಡುವೆ ಕಣ್ಣನ್ ಮಾಮಾ ಕೋಲ್ಮಿಂಚು!
ಇಷ್ಟೇ ಆಗಿದ್ದರೆ ವಿಶೇಷವಾಗಿರಲಿಲ್ಲ. ಕಳೆದ ಕೆಲವಾರು ತಿಂಗಳುಗಳ ಹಿಂದೆ ಅವರು ತಮ್ಮ ಧರ್ಮಪತ್ನಿಯನ್ನು ಕಳಕೊಂಡರು. ಕಾರ್ಯಕ್ರಮದ ಒತ್ತಡದಲ್ಲಿದ್ದವರು, ಊರಿಗೆ ಧಾವಿಸಿಬಂದರು. ಅತ್ಯಂತ ಶಾಂತವಾಗಿ ವಿಧಿವತ್ ಕಾರ್ಯಗಳನ್ನೆಲ್ಲ ಮುಗಿಸಿದರು. ಮುಂದಿನ ಕಾರ್ಯಗಳಲ್ಲಿ ಅವರಿಗೆ ವಿಶೇಷ ಆಸ್ಥೆ ಇರಲಿಲ್ಲ. ಸಾಹಿತ್ಯಗೋಷ್ಠಿಯೊಂದನ್ನು ನಡೆಸಿ ಪತ್ನಿಗೆ ನಮನ ಅರ್ಪಿಸಿದರು. ಅದಾದ ಕೆಲವೇ ದಿನಗಳಲ್ಲಿ ದಾವಣಗೆರೆ, ಚಿತ್ರದುರ್ಗಗಳಲ್ಲಿ ವಿವೇಕಾನಂದರ ೧೫೦ನೇ ಜಯಂತಿ ಕಾರ್ಯಕ್ರಮ. ಬರುವರೋ ಇಲ್ಲವೋ ಎಂಬ ಆತಂಕ ಕಾರ್ಯಕರ್ತರಿಗಿತ್ತು. ಆದರೆ.. ಕಣ್ಣನ್ ಮಾಮ ಎಂದಿನ ನಗುಮೊಗದೊಂದಿಗೆ ಬಂದರು. ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಯಾಗಿ ಮಾತನಾಡಿದರು. ಇಂತಹ ಸಂದರ್ಭದಲ್ಲೂ ಹೀಗೆ ಅದು ಹೇಗೆ ಸಾಧ್ಯ? ಅಂತ ಕೇಳಿದ್ದಕ್ಕೆ, ನನ್ನವಳು ಈಗ ಇದ್ದಿದ್ದರೆ ಇದರಿಂದ ಅವಳಿಗೆ ಖುಷಿಯಾಗುತ್ತಿತ್ತು. ಅದಕ್ಕೇ ಧಾವಿಸಿ ಬಂದೆ ಎಂದರು. ಒಂದು ಬಗೆಯ ಸ್ಥಿತಪ್ರಜ್ಞತ್ವ ಅವರಿಗೆ ಸಿದ್ಧಿಸಿಬಿಟ್ಟಿದೆ.
ಹೀಗೆಯೇ ವಿದ್ಯಾನಂದ ಶೆಣೈರವರ ವ್ಯಕ್ತಿತ್ವವೂ ಆಲದ ಮರದಂತೆ ವಿಶಾಲವಾಗಿತ್ತು. ತಮ್ಮ ಭಾರತ ದರ್ಶನದ ಭಾಷಣಗಳ ಮೂಲಕ ಸಾವಿರಾರು ಯುವಕರ ಬದುಕನ್ನು ರೂಪಿಸಿದ ವಿದ್ಯಾನಂದ ಜೀಗೆ ಅಹಂಕಾರದ ಪಿತ್ಥ ಎಂದಿಗೂ ನೆತ್ತಿಗೇರಲೇ ಇಲ್ಲ. ಒಮ್ಮೆ ನೋಡಿದ ವ್ಯಕ್ತಿಯನ್ನು ಆತನ ಹೆಸರು, ಭೇಟಿಯಾದ ಸ್ಥಳ, ಪೂರಕ ಘಟನೆಗಳೊಂದಿಗೆ ಆರೇಳು ವರ್ಷಗಳ ನಂತರವೂ ನೆನಪಿಸಿಕೊಳ್ಳುವ ಸಾಮರ್ಥ್ಯ ಅವರಿಗಿತ್ತು. ಅದೊಂಥರಾ ಫೋಟೋಗ್ರಾಫಿಕ್ ಮೆಮೊರಿ. ಅವರ ಕಛೇರಿಗೆ ಹೋದರೆ, ರಾಷ್ಟ್ರೀಯ ವಿಚಾರಗಳ ಕುರಿತಂತೆ ಸುದೀರ್ಘ ಚರ್ಚೆಗೆ ಅವಕಾಶವಿರುತ್ತಿತ್ತು. ಎಲ್ಲ ಮುಗಿದ ಮೇಲೆ ಹೊರಗೆ ಕರಕೊಂಡು ಬಂದು ಹಣ್ಣಿನ ರಸ ಕುಡಿಸಿ ಅವರು ಬೀಳ್ಕೊಡುತ್ತಿದ್ದ ರೀತಿ ಕಣ್ತುಂಬುವಂಥದ್ದು. ಎತ್ತರಕ್ಕೇರೋದು ಭಾರೀ ಸವಾಲಿನ ಕೆಲಸವಲ್ಲ. ಹೆಸರು  ಕೀರ್ತಿಯಂತೂ ಇಂದಿನ ದಿನಗಳಲ್ಲಿ ಘನಂದಾರಿ ಸಾಧನೆಯೂ ಅಲ್ಲ. ಮಾಧ್ಯಮ ಅದೆಷ್ಟು ಜೋರಾಗಿದೆ ಎಂದರೆ ನೋಡನೋಡುತ್ತಲೆ ಕೀರ್ತಿಯ ವಾರಸುದಾರರಾಗಿಬಿಡಬಹುದು. ಆದರೆ ಆ ಎತ್ತರದಲ್ಲಿ ದೀರ್ಘಕಾಲ ಉಳಿಯಲು ಭೂಮಿಗೆ ಹತ್ತಿರವಾಗಿರಬೇಕೆನ್ನುವುದನ್ನು ಮರೆಯಬಾರದಷ್ಟೆ!
ದೊಡ್ಡವರು ನಿರ್ಮಾಣವಾಗೋದು ಹಾಗೇನೇ. ಅಂತಹವರೊಡನೆ ಕಾಲ ಕಳೆಯುವ ಅವಕಾಶ ಸಿಕ್ಕಾಗ ಬಿಟ್ಟುಕೊಡಲೇಬಾರದು. ಅವರನ್ನು ಹತ್ತಿರದಿಂದ ಗಮನಿಸುತ್ತಾ ಅವರ ಶ್ರೇಷ್ಠತೆಯ ಪ್ರತೀಕವಾಗಿರುವ ಆ ಗುಣಗಳನ್ನು ಆವಾಹಿಸಿಕೊಳ್ಳುವ ಯತ್ನ ಮಾಡಬೇಕು. ಇನ್ನೂ ಕೆಲವರಿರುತ್ತಾರೆ. ಅವರೂ ದೊಡ್ಡವರಾಗಿರುತ್ತಾರೆ. ಆದರೆ ಅವರ ನಡವಳಿಕೆಗಳು ಸಮಾಜಕ್ಕೆ ಹತ್ತಿರವಾಗಿರೋಲ್ಲ. ಅವರಿಂದಲೂ ಗಿರಬಾರದುಅನ್ನೋದನ್ನು ಕಲಿಯಬೇಕಷ್ಟೆ! ಮೊದಲೆಲ್ಲ ಪತ್ರ ಸಂಬಂಧಗಳು ತೀವ್ರವಾಗಿದ್ದ ಕಾಲ. ಒಂದು ಲೆಕ್ಕದಲ್ಲಿ ಅದು ಸುಲಭ. ನಿಮ್ಮ ಮನಸ್ಥಿತಿ ಚೆನ್ನಾಗಿದ್ದಾಗ ಉತ್ತರಿಸಿದ್ದರೆ ಸಾಕಿತ್ತು. ಈಗ ಹಾಗಿಲ್ಲ. ಮೊಬೈಲು ಯುಗ. ಯಾವಾಗಂದರೆ ಆಗ ಕರೆಗಳು ಬರುತ್ತವೆ. ಹೀಗಾಗಿ ಸದಾ ಕಾಲ ಮನಸ್ಸನ್ನು ಹಸನ್ಮುಖಿಯಾಗಿ ಇರಿಸಿಕೊಂಡಿರಬೇಕು. ಖಂಡಿತ ಅದು ಸುಲಭದ ಮಾತಲ್ಲ. (ನಾನು ಕೆಲವು ಅಪರೂಪದ ಮಂದಿಯನ್ನು ನೋಡಿದ್ದೇನೆ) ನೀವು ಯಾವ ವೇಳೆಯಲ್ಲಿ ಕರೆ ಮಾಡಿದರೂ ಅವರು ಸ್ವೀಕರಿಸುತ್ತಾರೆ, ಒತ್ತಡದಲ್ಲಿದ್ದಾಗಲೂ ಮಾತನಾಡುತ್ತಾರೆ. ಕರೆ ಸ್ವೀಕರಿಸಲಾಗದಿದ್ದರೆ, ಅನಂತರದಲ್ಲಿ ತಾವೇ ಮರಳಿ ಕರೆ ಮಾಡುತ್ತಾರೆ. ರಾಜ್ಯ ಸರ್ಕಾರದ ಎನ್‌ಆರ್‌ಐ ಸೆಲ್‌ನ ಗಣೇಶ್ ಕಾರ್ಣಿಕ್ ಅಂತಹವರಲ್ಲಿ ಒಬ್ಬರು. ರಾಜ್ಯಸಭಾ ಸದಸ್ಯರಾದ ಬಸವರಾಜ್ ಪಾಟೀಲ್ ಸೇಡಂ ಮತ್ತೊಬ್ಬರು. ಅವರಂತೂ ಎದುರಿಗಿರಲಿ, ಫೋನಿನಲ್ಲೂ ಗರಂಆಗಿದ್ದನ್ನು ನೋಡಿದವರಿಲ್ಲ. ಅಚ್ಚರಿಯಲ್ಲವೆ? ಕೆಲವರಿದ್ದಾರೆ ಬಿಡಿ. ಅವರನ್ನು ಹೊಗಳುತ್ತಿದ್ದರೆ ಖುಷಿಯಾಗಿ ಮಾತನಾಡುತ್ತಾರೆ, ಸ್ವಲ್ಪ ತಿದ್ದಹೋದರೆ ದೇವರೇ ಗತಿ!
ಯಾವಾಗಲಾದರೂ ಉತ್ತಮ ಲೇಖಕರಾಗಿ, ವಾಗ್ಮಿಗಳಾಗಿ, ಶಿಕ್ಷಕರಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿರುವ ಗುರುರಾಜ ಕರಜಗಿಯವರನ್ನು ಭೇಟಿ ಮಾಡಿ. ಅವರೊಡನೆ ಕಾಲಕಳೆಯುವ ಅಷ್ಟೂ ಹೊತ್ತು ಉಪಯುಕ್ತವಾಗೋದರಲ್ಲಿ ಅನುಮಾನವೇ ಇಲ್ಲ. ನಮ್ಮ ಕಾಲದ ಋಷಿಸದೃಶ ವ್ಯಕ್ತಿ ಅವರು. ತಮಗಿಷ್ಟವಿಲ್ಲದ ವಿಚಾರವನ್ನು ಹೇಳಿದಾಗಲೂ ತಮ್ಮನ್ನು ಮೆಚ್ಚಿ ಮಾತನಾಡಿದಾಗಲೂ ಅವರ ಮುಖಭಾವ ಬದಲಾಗದು. ಹಿರಿಯರೊಡನೆ ಅವರು ನಡಕೊಳ್ಳುವ ರೀತಿ, ಕಿರಿಯರೊಡನೆ ಅವರ ಪ್ರೀತಿ ನೋಡಿ ಕಲಿಯುವಂಥದ್ದು. ಹಳ್ಳಿಯ ಹೆಣ್ಣು ಮಗಳೊಬ್ಬಳು ಮ್ಮ ಅಂಕಣ ಚೆನ್ನಾಗಿ ಬರ್‍ತಿದೆಅಂತ ಹೊಗಳಿದಾಗ ಅವರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೆ? ರಿಯಾಗಿ ಬರೀತಿದ್ದೀನೇನಮ್ಮ?ಅಂತ. ಒಬ್ಬ ಪ್ರಬುದ್ಧ ಲೇಖಕ ಹಳ್ಳಿಯ ಹೆಣ್ಣುಮಗಳನ್ನು ಹೀಗೆ ಕೇಳುವುದುಂಟೆ? ಅದು ಅವರ ದೊಡ್ಡತನ.
ವ್ಯಕ್ತಿಯೊಳಗೆ ಒಳ್ಳೇಯ ಗುಣಗಳು ಹುದುಗಿ ಹೋಗಿ ಬಿಟ್ಟಿರುತ್ತವೆ. ದೋಷಗಳೂ ಹಾಗೆಯೇ. ದೋಷಗಳನ್ನು ಬಿಟ್ಟು ಸದ್ಗುಣಗಳನ್ನು ಅರಸೋದು ಗುಣಗ್ರಾಹಿತನವಾಗುತ್ತದೆ. ಈ ಸದ್ಗುಣಗಳನ್ನು ಅಂತರ್ನಿಹಿತವಾಗಿಸಿಕೊಂಡು ಬೆಳೆಯುವವ ಸಾರ್ವಕಾಲಿಕ ನಾಯಕನಾಗುತ್ತಾನೆ. ಉತ್ತರ ಕರ್ನಾಟಕದಾದ್ಯಂತ ನಡೆದಾಡುವ ದೇವರೆಂದೇ ಖ್ಯಾತರಾದ ಸಿದ್ಧೇಶ್ವರ ಸ್ವಾಮಿಗಳು ಹಾಗೆಯೇ. ಅವರು ಯಾರಲ್ಲಿಯೂ ದೋಷವರಸೋದೇ ಇಲ್ಲ. ನಮ್ಮಲ್ಲಿರಬಹುದಾದ ಸಣ್ಣ ಸಜ್ಜನಿಕೆಯನ್ನೇ ಬೆಟ್ಟದಷ್ಟು ಮಾಡಿ ಎಲ್ಲರ ಮುಂದೆ ಹೇಳಿಬಿಡುತ್ತಾರೆ. ಇನ್ನು ಅದನ್ನು ಆ ಎತ್ತರಕ್ಕೆ ಬೆಳೆಸಿಕೊಳ್ಳದೆ ಬೇರೆ ದಾರಿಯೇ ನಮಗೆ ಉಳಿಯೋದಿಲ್ಲ! ಹಾಗಾಗಿಬಿಡುತ್ತದೆ.
ದಿನಪತ್ರಿಕೆ ಹಿಡಿದು ಒಂದೆರಡು ಗಂಟೆ ಓದಿ ನೋಡಿ. ಆಮೇಲೆ ಪತ್ರಿಕೆಯಲ್ಲಿ ಕಂಡುಬಂದ ವಿಷಯಗಳನ್ನು ಪಕ್ಕಕ್ಕೆ ಬರೆದಿಡಿ. ನೀವು ಬರೆದಿಟ್ಟ ವಿಷಯಗಳು ಯಾವುದಕ್ಕೆ ಸಂಬಂಧಿಸಿದ್ದೆಂದು ನೋಡಿ. ನಿಮಗೇ ಅಚ್ಚರಿ. ಶೆಕಡ ೯೦ರಷ್ಟು ಕೆಡುಕಿನ ವಿಚಾರಗಳೆ ಇರುತ್ತವೆ. ದೃಷ್ಟಿಯನ್ನು ಬದಲಿಸಿ ಒಳ್ಳೆಯದನ್ನೆ ಹುಡುಕುವ ಕೆಲಸ ಶುರುಹಚ್ಚಿ. ಕೆಲವೇ ತಿಂಗಳಲ್ಲಿ ಉಲ್ಟಾ ಫಲಿತಾಂಶ. ಕೆಟ್ಟದ್ದು ಹೊರಗಿಲ್ಲ, ನೋಡುವ ಕಂಗಳಲ್ಲಿರುತ್ತದೆ ಅಷ್ಟೇ!
ಇದನ್ನು ಮನಮುಟ್ಟುವಂತೆ ಹೇಳಿದವರು, ಅದರಂತೆ ಬದುಕುತ್ತಿರುವವರು ಕೊಪ್ಪಳದ ಗವಿಪುರ ಮಠದ ಗವಿಸಿದ್ಧೇಶ್ವರ ಸ್ವಾಮಿಗಳು. ಅವರ ಬಳಿ ಪುರುಸೊತ್ತಿಲ್ಲದಂತೆ ಭಕ್ತರು ಬರುತ್ತಾರೆ. ಮುಸ್ಲಿಮರೂ ಬರುತ್ಥಾರೆ. ಬಂದವರು ಕಾಲಿಗೆ ಬಿದ್ದು, ಮದುವೆ- ಮುಂಜಿಗೆ, ಅಂಗಡಿ-ಮನೆಗಳ ಪ್ರವೇಶಕ್ಕೆ ಆಶೀರ್ವಾದ ಬೇಡುತ್ತಾರೆ. ಸ್ವಾಮೀಜಿ ಅಷ್ಟೂ ಜನರ ಮೈದಡವಿ ಮಾತನಾಡಿ ಕಳಿಸುತ್ತಾರೆ. ಭಕ್ತರು ಕಾಲಿಗೆ ಬೀಳುವಾಗ ಸ್ವಾಮೀಜಿ ಮುಖ ತಿರುವಿ ನಿಂತಿದ್ದನ್ನು ನೋಡಲು ಈವರೆಗೆ ಸಿಕ್ಕಿಲ್ಲ. ಕೊಪ್ಪಳದ ಜಾತ್ರೆಗೆ ಕನಿಷ್ಠ ಮೂರು ಲಕ್ಷ ಜನ ಸೇರುತ್ತಾರಲ್ಲ, ಆ ಹೊತ್ತಿನಲ್ಲೂ ಹಾಗೆಯೇ. ಸಾವಿರಾರು ಜನ ಸರತಿಯಲ್ಲಿ ಬಂದು ಕಾಲಿಗೆ ಬೀಳುತ್ತಾರೆ. ಸ್ವಾಮೀಜಿ ಹೆಸರು ಕರೆದು ಆಶೀರ್ವಾದ ಮಾಡುತ್ತಾರೆ. ನನ್ನನ್ನು ಜನ ಇಷ್ಟು ಪ್ರೀತಿಸುವಾಗ ನಾನು ಇಷ್ಟು ಮಾಡಬಾರದೆ? ಎನ್ನುತ್ತಾರಲ್ಲ ಸ್ವಾಮೀಜಿ, ಅದಕ್ಕೇ ಅವರು ದೊಡ್ಡವರೆನ್ನಿಸೋದು. ಕಳೆದ ಜಾತ್ರೆಯಲ್ಲಿ ಲಕ್ಷಾಂತರ ಜನರೆದುರು ಬೆನ್ನು ನೋವು ತೀವ್ರವಾಗಿದೆ, ನಿಮ್ಮೊಡನೆ ಸಹಕರಿಸಲಾಗುತ್ತಿಲ್ಲ. ನಾನು ಪೀಠ ತ್ಯಾಗ ಮಾಡಿಬಿಡುತ್ತೇನೆ ಎಂದಾಗ ಅಷ್ಟೂ ಜನರ ಕಂಗಳಲ್ಲಿ ನೀರು ಜಿನುಗಿತ್ತು. ಅಚ್ಚರಿಯಲ್ಲವೇನು? ಅವರೊಡನೆ ಅರ್ಧ ಗಂಟೆ ಮಾತನಾಡಿದರೆ ಅರ್ಧ ವರ್ಷಕ್ಕೆ ಸಾಕಾಗುವಷ್ಟು ಮಾನಸಿಕ ಶಕ್ತಿ ಸಂಚಯವಾಗಿಬಿಡುತ್ತದೆ. ಜಗತ್ತಿನ ಕೆಲವಾರು ರಾಷ್ಟ್ರ ತಿರುಗಾಡಿ ಬಂದಿದ್ದೇನೆ. ಈಗ ಖಾತ್ರಿಯಾಗಿದೆ. ಕೊಪ್ಪಳಕ್ಕಿಂತ ಸುಂದರವಾದುದು ಮತ್ತೊಂದಿಲ್ಲ. ನಿಮ್ಮ ಬೆಂಗಳೂರು ಸಹಾ!ಎಂದಾಗ ನಾನಂತೂ ಬೆಕ್ಕಸಬೆರಗಾಗಿದ್ದೆ. ಎಲ್ಲಿ ಮೂಲಮಠವಿದ್ದರೂ ಬೆಂಗಳೂರಿನಲ್ಲೊಂದು ಸ್ಥಾನ ಬೇಕೆಂದು ಹವಣಿಸುವ ಅನೇಕ ಸಂತರ ನಡುವೆ ಗವಿಮಠದ ಶ್ರೀಗಳು ವಿಶಿಷ್ಟವೆನಿಸುತ್ತಾರೆ. ಅಲ್ಲವೆ?
ಅಬ್ಬಬ್ಬಾ! ಮಾತಾಡೋದು, ಬರೆಯೋದು ಇವೆಲ್ಲ ಎಷ್ಟು ಸುಲಭ ಗೊತ್ತಾ? ಆದರೆ ಅದಕ್ಕೆ ತಕ್ಕಂತೆ ಬದುಕೋದು ಕಷ್ಟ, ಬಲು ಕಷ್ಟ. ಹೋಟೆಲ್ ಉದ್ಯಮಿ ಷಡಕ್ಷರಿ ಇದ್ದಾರಲ್ಲ, ಅವರು ಇಂದಿಗೂ ಕಾರು ಹತ್ತುವಾಗ ಮೊದಲು ಹಿಂದೆ ಕೂರುವವರಿಗೆ ಬಾಗಿಲು ತೆಗೆದು ಆಮೇಲೆಯೇ ತಾವು ಮುಂದಿನ ಬಾಗಿಲು ತೆರೆದುಕೊಂಡು ಕೂರೋದು. ಇದು ಅತ್ಯಂತ ಸಾಮಾನ್ಯ ಸಂಗತಿ ಎನ್ನಿಸಬಹುದು. ಆದರೆ ಸಿರಿವಂತ ಮುನಷ್ಯರೊಬ್ಬರು ಐಶ್ವರ್ಯದ ಮದವೇರಿಸಿಕೊಳ್ಳದೆ ಹಿಂದೆ ಕೂರುವವರಿಗಾಗಿ ಕಾರಿನ ಬಾಗಿಲು ತೆರೆಯುತ್ತಾರಲ್ಲ,  ಈ ವಿನಯವಂತಿಕೆ ಮೆಚ್ಚಬೇಕಾದ್ದು, ಅನುಸರಿಸಬೇಕಾದ್ದು.
ಬದುಕಿನ ಹಾದಿಯುದ್ದಕ್ಕೂ ಅನೇಕರನ್ನು ಭೇಟಿಯಾಗುತ್ತೇವೆ. ಪ್ರತಿ ಭೇಟಿಯೂ ಒಂದು ಪಾಠ ಕಲಿಸುತ್ತದೆ. ಅದು ಅವಕಾಶ ಕೊಟ್ಟಾಗ ಕಲಿತು, ಅನುಸರಿಸಿದವನ ಬದುಕು ಹಸನಾಗುತ್ತದೆ. ಇಲ್ಲವಾದರೆ ಜೀವಿಸಿ ಕಳೆದುಹೋದ ಲಕ್ಷಾಂತರ ಜನರ ಪೈಕಿ ನಾವೂ ಒಬ್ಬರಾಗುತ್ತೇವಷ್ಟೆ. ಸತ್ತ ನಂತರವೂ ಬದುಕುವ ಮಾರ್ಗ, ಬದುಕಿದ್ದಷ್ಟೂ ದಿನ ಸಜ್ಜನರಾಗಿ ಬದುಕೋದೊಂದೇ. ಅಲ್ಲವೆ?

4 thoughts on “ಬರೆದಂತೆ ಬದುಕೋದು ಬಹಳ ಕಷ್ಟ

 1. ನಿಜ, ಹಿರೇಮಗಳೂರು ಕಣ್ಣನ್ ಮತ್ತು ಗುರುರಾಜ ಕರ್ಜಗಿಯವರ ಮಾತು ಕೇಳುವ ಅವಕಾಶ ಒಂದು ಸಾರಿ ‘ಹಣತೆ’ ಕಾರ್ಯಕ್ರಮದಲ್ಲಿ ಸಿಕ್ಕಿತ್ತು. ಅವರ ಭಾಷಣದ ಸರದಿ ಬರೋದನ್ನೇ ಎಷ್ಟೊಂದು ಜನ ಕಾಯ್ತಾ ಇದ್ವಿ. ಅವರು ಹೇಳೋ ಮಾತಿನಲ್ಲಿ ತಮಾಷೆ, ನೀತಿ, ಸತ್ಯ, ಸಹಜತೆ ಸಂಮಿಳಿತವಾಗಿರುತ್ತೆ. ಅವರ ಸರಳತೆಯಲ್ಲಿ ಶ್ರೇಷ್ಠತೆ ವ್ಯಕ್ತವಾಗುತ್ತೆ.

  ದಿನಪತ್ರಿಕೆ ಹಿಡಿದು ಒಂದೆರಡು ಗಂಟೆ ………….– ಈ ವಿಷಯಕ್ಕೆ ಸಂಬದಿಸಿದ ವಿಚಾರ ತುಂಬಾ ಚೆನ್ನಾಗಿದೆ. ನಾವು ಗೊತ್ತೋ ಗೊತ್ತಿಲ್ಲದೋ ಎಸ್ಟೋ ಸಾರಿ ಬೇರೆಯವರಲ್ಲಿ ತಪ್ಪುಗಳನ್ನೇ ಹುಡುಕ್ತಾ ಇರ್ತೀವಿ. ಅದನ್ನ ಬಿಟ್ಟು ಒಳ್ಳೆಯದನ್ನ ಹುಡುಕಬೇಕು ಅನ್ನೋದನ್ನ ಕಲಿಯಬೇಕಾಗಿದೆ. ಸಮಾಜದ ನಡುವೆ, ನಮ್ಮ ನಮ್ಮ ego-beliefs-prejudices ಇವುಗಳ ನಡುವೆ ನುಡಿದಂತೆ ನಡೆಯೋದು, ಓದಿ ತಿಳಿದಂತೆ ಬದುಕೋದು ಒಂದು ದೊಡ್ಡ ಸಾದನೆಯೇ ಸರಿ.

 2. ಹೌದ್ರೀ… ಬರೆದ೦ತೆ ಬದುಕೋದು ಬಹಳ ಕಷ್ಟ.. ನೀವೇ ನೋಡೀ.. ನಿಮಗಿರುವ ಜನಪ್ರಿಯತೆಗೆ ನಮ್ಮಲ್ಲಿಗೆ ಬ೦ದು ನನ್ನನ್ನು ಕೂಡಾ ಎಷ್ಟು ಚೆನ್ನಾಗಿ ಮಾತನಾಡಿಸಿದ್ರಿ!! ನನಗೇ ಆಶ್ಚರ್ಯವಾಯಿತು ಜೊತೆಗೆ ಸ೦ತಸವೂ ಕೂಡಾ..
  ಗುರುತು ಹತ್ತಿತೇ?
  ನಾನು ರಾಘವೇ೦ದ್ರ ನಾವಡ.. ಶ್ರೀಕ್ಷೇತ್ರ ಹೊರನಾಡು..
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 3. ಲೇಖನ ತುಂಬಾ ಚೆನ್ನಾಗಿದೆ ಎಲ್ಲರನ್ನು ಸಂಶಯದ ದ್ರಿಷ್ಟಿಯಿಂದಲೇ ನೋಡಲು ಕಲಿಸುವಂತ ಮಾಧ್ಯಮಗಳಲ್ಲಿ ಇಂತಹ ಒಳ್ಳೆಯದನ್ನು ಗುರುತಿಸುವದಕ್ಕೆ ಪ್ರೋತ್ಸಾಹಿಸುವ ಲೇಖನ ಅತ್ಯಗತ್ಯವಾಗಿದೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s