ಅಸ್ಪೃಶ್ಯತೆ- ವರದಿಯಲ್ಲೂ ತಾರತಮ್ಯ!

ಇದು ಜನವರಿ ಕೊನೆಯ ವಾರದಲ್ಲಿ ನಡೆದ ಘಟನೆ.ತಮಿಳುನಾಡಿನ ಕಾಂಚೀಪುರಮ್ ಜಿಲ್ಲೆಯ ಥಚೂರ್ ಗ್ರಾಮದಲ್ಲಿ ದಲಿತ ಕ್ರಿಶ್ಚಿಯನ್ನರ ಶವ ಸಂಸ್ಕಾರ ಕುರಿತಂತೆ ದೊಡ್ಡ ಕೋಲಾಹಲವೆದ್ದಿತ್ತು. ಅಲ್ಲಿನ ಸರ್ಕಾರ ಅದನ್ನೊಂದು ಸುದ್ದಿಯಾಗಲು ಬಿಡದೆ, ಘಟನೆಯಿಂದ ನೊಂದ ದಲಿತ ಕ್ರಿಶ್ಚಿಯನ್ನರಿಗೆ ಸಾಂತ್ವನವನ್ನೂ ಹೇಳದೆ ಪ್ರಕರಣವನ್ನು ಒರೆಸಿ ಹಾಕಿತು. ಈ ಕೆಲಸ ಎಷ್ಟು ಚಾಕಚಕ್ಯತೆಯಿಂದ ನಡೆಯಿತೆಂದರೆ, ದೇಶದ ನಾನಾ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಅಸಹ್ಯಕರ ಸುದ್ದಿಯನ್ನು ಓದುತ್ತಲೇ ಇರುವ ನಮಗೆ ಈ ದಲಿತ ಕ್ರಿಶ್ಚಿಯನ್ನರ ಮೇಲಿನ ದೌರ್ಜನ್ಯದ ಸುದ್ದಿ ಓದಲು ದೊರೆಯಲೇ ಇಲ್ಲ. ಈ ಸುದ್ದಿ ಸಾಕಷ್ಟು ವಿವರಣೆಯೊಂದಿಗೆ ಪ್ರಕಟವಾಗಿದ್ದು ಬಹುಶಃ ಫ್ರಂಟ್ಲೈನ್‌ನಲ್ಲಿ ಮಾತ್ರ. ಫ್ರಂಟ್‌ಲೈನ್ ಪತ್ರಿಕೆ ತನ್ನ ವರದಿಯಲ್ಲಿ ಹಿಂದಿನ ಕೆಲವು ಘಟನೆಗಳನ್ನೂ ಮೆಲುಕು ಹಾಕಿತ್ತು. ಹೀಗೆ ಕ್ರಿಶ್ಚಿಯನ್ ಪುರೋಹಿತ ಷಾಹಿ ಮತ್ತು ಜಾತಿ ವ್ಯವಸ್ಥೆಯ ಕೊಳಕುಗಳು ಮುಚ್ಚಿಹೋಗಿರುವುದು ಎಷ್ಟಿವೆಯೋ?

ಅದು ಆಗಿದ್ದು ಹೀಗೆ. ದಲಿತ ಕ್ರಿಶ್ಚಿಯನ್ ಪೂಜಾರಿಯ ಸಹೋದರ ವೆಲಂಕಣಿ ಜನವರಿ 22ರಂದು ಸಹಜ ಸಾವು ಕಂಡಿದ್ದರು. ಜನವರಿ 24ರಂದು ಕೊಲೆಯಾಗಿಹೋಗಿದ್ದ ರಾಜೇಂದ್ರ ಎಂಬ ಮತ್ತೊಬ್ಬ ದಲಿತ ಕ್ರಿಶ್ಚಿಯನ್ನನ ಶವ ದೊರಕಿತ್ತು. ಈ ಇಬ್ಬರನ್ನು ಥಚೂರಿನ ಚರ್ಚಿಗೆ ಹೊಂದಿಕೊಂಡಿದ್ದ ಕ್ರೈಸ್ತ ರುದ್ರಭೂಮಿಯಲ್ಲಿ ಹೂಳಲು ಬಾಂಧವರು ಮುಂದಾದರು. ಇದನ್ನು ಅಲ್ಲಿಯ ರೆಡ್ಡಿಯಾರ್ ಕ್ರಿಶ್ಚಿಯನ್ ಜನಾಂಗ (ಅದು ಮೆಲ್ಜಾತಿ ಕ್ರಿಶ್ಚಿಯನ್ ಜನಾಂಗವಂತೆ) ಬಲವಾಗಿ ಪ್ರತಿಭಟಿಸಿ ಗಲಾಟೆಯೆಬ್ಬಿಸಿತು. ದಲಿತ ಕ್ರಿಶ್ಚಿಯನ್ನರನ್ನು ಅವಮಾನಿಸಿ ಹೊಯ್‌ಕೈ ಘಟನೆಗಳೂ ನಡೆದವು. ಚರ್ಚಿನ ಆಡಳಿತ ವರ್ಗವಾಗಲೀ ಮುಖ್ಯಸ್ಥರುಗಳಾಗಲೀ ದಲಿತ ಕ್ರಿಶ್ಚಿಯನ್ನರ ಬೆಂಬಲಕ್ಕೆ ನಿಲ್ಲಲಿಲ್ಲ. ಈ ನಿಟ್ಟಿನಲ್ಲಿ ಅವರು ನಡೆಸಿದ ಪ್ರತಿಭಟನೆಗಳೂ ಫಲಕಾರಿಯಾಗಲಿಲ್ಲ. ಅಂಕಿಅಂಶದ ಪ್ರಕಾರ ಥಚೂರಿನ ರೆಡ್ಡಿಯಾರ್ ಜನಾಂಗದ 20 ಪೂಜಾರಿಗಳು, 60 ನನ್‌ಗಳು ಮತ್ತು 3  ಬಿಷಪ್‌ಗಳು ಇದ್ದಾರೆ. ಅವರಲ್ಲಿ ಯಾರೊಬ್ಬರೂ ತಮ್ಮ ಸಮುದಾಯಕ್ಕೆ ಈ ರೀತಿಯ ತಾರತಮ್ಯ ತೋರದಂತೆ ಸಲಹೆಯನ್ನಾಗಲೀ ಮನವಿಯನ್ನಾಗಲೀ ಮಾಡಲಿಲ್ಲ. ಅಂದರೆ, ಅವರಿಗೆ ಈ ಮೇಲ್ಜಾತಿ ಕ್ರಿಶ್ಚಿಯನ್ ಧೋರಣೆ ಸಮ್ಮತವೆಂದಾಯ್ತು. ಇದು ಈ ಮೊದಲೇ ಸ್ಪಷ್ಟವಿತ್ತಾದರೂ ಥಚೂರ್ ಘಟನೆಯಿಂದ ನಿಚ್ಚಳವಾಗಿ ಸಾಬೀತಾಯ್ತು. ಅಂತೂ ಘಟನೆಯ ನಂತರ ಪೊಲೀಸರಿಗೆ ಹೆದರಿ ರೆಡ್ಡಿಯಾರ್ ಕ್ರಿಶ್ಚಿಯನ್ನರ ಬಣ ಪರವೂರುಗಳಲ್ಲಿ ಅಡಗಿಕೊಳ್ಳುವುದರೊಂದಿಗೆ ಪ್ರಕರಣ ಮುಕ್ತಾಯವಾಗಿದೆ. ನೊಂದ ದಲಿತ ಕ್ರಿಶ್ಚಿಯನ್ನರಿಗೆ ನ್ಯಾಯ ಸಿಗುವ ಭರವಸೆಯೂ ಅದರೊಂದಿಗೆ ಅಂತ್ಯಗೊಂಡಿದೆ..

ತಮಿಳುನಾಡಿನ ಕ್ರಿಶ್ಚಿಯನ್ನರಲ್ಲಿ ಏನಿಲ್ಲವೆಂದರೂ ಶೇ.70ರಷ್ಟು ದಲಿತ ಕ್ರಿಶ್ಚಿಯನ್ನರಿದ್ದಾರೆ. ಆದರೆ ಅವರು ಕ್ರೈಸ್ತ ಪುರೋಹಿತಷಾಹಿಯ ದೌರ್ಜನ್ಯಕ್ಕೆ ಒಳಗಾಗಿ ಸಮಾನತೆಯ ಸೌಕರ್ಯದಿಂದ ವಂಚಿತರಾಗಿದ್ದಾರೆ ಎನ್ನುತ್ತದೆ ಫ್ರಂಟ್ ಲೈನ್ ವಿಶ್ಲೇಷಣೆ. ಆದಿ ದ್ರಾವಿಡ ಮತ್ತು ಅರುಂಧತಿಯಾರ್ ಪಂಗಡಗಳಿಂದ ಸಮಾನತೆಯ ಕನಸು ಹೊತ್ತು ಮತಾಂತರಗೊಂಡ ಸಮುದಾಯಗಳು ಕ್ರೈಸ್ತ ಸಮುದಾಯದಲ್ಲಿ ಇನ್ನೂ ಹೆಚ್ಚಿನ ಅಸ್ಪೃಶ್ಯತೆಗೊಳಗಾಗಿ ಹೆಚ್ಚಿನ ನೋವು ಅನುಭವಿಸುತ್ತಿವೆ. ಹೀಗೆ ಮತಾಂತರಗೊಂಡವರಲ್ಲಿ ಬಹುಪಾಲು ಜನರು ಮೂಲಭೂತ ಸೌಲಭ್ಯಗಳ ಬಯಕೆಯಿಂದಲೇ ಹೋದವರು ಅಥವಾ ಅಂತಹ ಆಮಿಷಕ್ಕೆ ಒಳಗಾದವರು. ಚರ್ಚ್ ಪುರೋಹಿತಷಾಹಿಯ ತಾರತಮ್ಯ ನೀತಿ ಅವರಲ್ಲಿ ಪರಕೀಯತೆಯ ಸಂಕಟವನ್ನಷ್ಟೆ ಬಿತ್ತಿ ಬೆಳೆಯುತ್ತಿದೆ.

ಫ್ರಂಟ್‌ಲೈನ್‌ನಲ್ಲಿ ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ಅದು 1995ರದ್ದು. ಮೇರಿ ಮಾತೆಯ ರಥವನ್ನು ದಲಿತ ಕ್ರೈಸ್ತರ ಕೇರಿಯಲ್ಲಿ ಕೊಂಡುಹೋಗಬಾರದೆಂದು ಮೇಲ್ಜಾತಿಯ ಕ್ರೈಸ್ತರು ಪಟ್ಟು ಹಿಡಿದು ದೊಂಬಿ ಎಬ್ಬಿಸಿದ್ದರಂತೆ! ಈ ವಿಷಯ ಕೋರ್ಟ್ ಮೆಟ್ಟಿಲಿನವರೆಗೂ ಹೋಗಿತ್ತು. ಅದೇ ಸಂದರ್ಭದಲ್ಲಿ ದಲಿತರ ಪರವಾಗಿದ್ದ ಪೂಜಾರಿಯೊಬ್ಬರನ್ನು ಆ ಕಾರಣಕ್ಕಾಗಿಯೇ ವಿಚಾರಣೆಗೆ ಒಳಪಡುವಂತೆ ಮಾಡಿದ್ದರಂತೆ. ತೀರ ದೂರದವರೆಗೆ ಹೋಗುವುದು ಬೇಡ. ಕ್ರೈಸ್ತರಲ್ಲಿನ ಒಳಪಂಗಡಗಳು ಮತ್ತು ಅವರ ನಡುವಿನ ಹೊಕ್ಕು ಬಳಕೆಯ ತಾರತಮ್ಯಗಳು ನಮ್ಮ ಸುತ್ತ ಮುತ್ತಲು ಗಮನ ಹರಿಸಿದರೇ ಗೊತ್ತಾಗಿಹೋಗುತ್ತದೆ.
ತಿಪ್ಪೆ ಸಾರಿಸುತ್ತಾರೆ

ಇಲ್ಲೊಂದು ಮಜದ ವಿಷಯವಿದೆ. ಹೀಗೆಲ್ಲ ಆಗುತ್ತಿದೆ, ಮತಾಂತರವನ್ನು ನಾವು ವಿರೋಧಿಸುವುದು ಇದೇ ಕಾರಣಕ್ಕೆ ಎಂದು ನೀವು ವಾದ ಹೂಡುತ್ತೀರೆನ್ನಿ. ನಿಮಗೆ, ನಾವು ಸುಧಾರಣೆಯ ಹಾದಿಯಲ್ಲಿದ್ದೇವೆ, ಅಸ್ಪೃಷ್ಯತೆಯ ಮನೋರೋಗವನ್ನು ವಾಸಿ ಮಾಡಿಕೊಳ್ಳುತ್ತೇವೆ. ನಮ್ಮ ಧರ್ಮಬಾಂಧವರು ಮತಾಂತರಗೊಂಡು ಪರಕೀಯರಾಗಿ ಅಸಹಾಯಕರಾಗುವುದು ಬೇಡ ಅನ್ನುವ ಕಾಳಜಿ. ಅದಕ್ಕೆ ಬುದ್ಧಿಜೀವಿಗಳ ಉತ್ತರ ಏನಿರುತ್ತದೆ ಗೊತ್ತೇ? “ಜಾತಿ ವ್ಯವಸ್ಥೆ  ಭಾರತದಲ್ಲಿ ಆಳವಾಗಿ ಬೇರೂರಿದೆ. ಆದ್ದರಿಂದಲೇ ಮತಾಂತರಗೊಂಡ ಮೆಲ್ಜಾತಿಯವರು ಮೇಲ್ಜಾತಿಯ ಕ್ರೈಸ್ತರಾಗಿ, ಕೆಳಜಾತಿಯ ಮತಾಂತರಿಗಳು ಕೆಳಜಾತಿಯ ಕ್ರೈಸ್ತರಾಗಿ ಮತ್ತೆ ಅಲ್ಲಿಯೂ ಜಾತಿ ತಾರತಮ್ಯ ತಲೆದೋರುತ್ತದೆ. ಇದೆಲ್ಲ ಭಾರತದ ಮಣ್ಣಿನ ಗುಣ” ಎಂದು!

ಅಂಥವರಿಗೆ ಇದೊಂದು ಉದಾಹರಣೆ ಕೊಡೋಣ: ಲ್ಯಾಟಿನ್ ಕ್ಯಾಥೊಲಿಕ್ಕರು ಸಿರಿಯನ್ ಕ್ಯಥೊಲಿಕ್ ಚರ್ಚಿಗೆ ಹೋಗುವುದಿಲ್ಲ. ಈ ಎರಡು ಪಂಗಡಗಳವರು ಮರ್ಥೊಮಾ ಚರ್ಚಿಗೆ ಕಾಲಿಡುವುದಿಲ್ಲ. ಈ ಮೂರು ಪಂಗಡದವರು ಪೆಂಟೆಕೋಸ್ಟ್ ಚರ್ಚಿಗೆ ಹೋಗುವುದಿಲ್ಲ. ಈ ನಾಲ್ವರು ಸಾಲ್ವೇಶನ್ ಆರ್ಮಿ ಚರ್ಚಿನ ಹೆಸರೆತ್ತುವುದಿಲ್ಲ. ಈ ಐವರು ಸೆವೆಂಥ್ ಡೇ ಅಡ್ವೆಂಟಿಸ್ಟ್ ಚರ್ಚಿನಿಂದ ಅಪರಿಮಿತ ಮೈಲು ದೂರ ನಿಲ್ಲುತ್ತಾರೆ. ಈ ಆರೂ ಪಂಗಡಗಳವರೂ ಆರ್ಥೊಡಾಕ್ಸ್ ಚರ್ಚಿನ ಸಹವಾಸಕೆಕ್ ಹೋಗುವುದಿಲ್ಲ. ಈ ಏಳು ಬಗೆಯ ಕ್ರಿಶ್ಚಿಯನ್ನರು  ಜಾಕೋಬೈಟ್ ಚರ್ಚ್ ಅಂದರೆ ಅಸಡ್ಡೆ ತೋರುತ್ತಾರೆ. ಈ ರೀತಿ 146 ಕ್ರೈಸ್ತ ಒಳಜಾತಿಗಳನ್ನು ಮೇಲ್ನೋಟಕ್ಕೇ ಗುರುತಿಸಬಹುದು. ಇನ್ನು ಸರಿಯಾಗಿ ಗಮನಿಸಿದರೆ ಎಷ್ಟು ಸಿಗುತ್ತವೆಯೋ!

ಇವರಲ್ಲಿ ಹೆಚ್ಚಿನ ಪಂಗಡಗಳು ತಮ್ಮ ಪಂಗಡಕ್ಕೆ ಸೇರದ ಗಂಡಿನೊಂದಿಗೆ ಮದುವೆ ಮಾಡಿಸುವುದಿಲ್ಲ. ಒಬ್ಬರ ಮನೆಗೆ ಮತ್ತೊಬ್ಬರು ಹೋಗುವ, ಸಂಬಂಧವಿರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಸಾಮಾನ್ಯವಾಗಿ ತಮ್ಮ ಪಂಗಡದ ಚರ್ಚಿಗೆ ಬರುವ ಜನರೊಂದಿಗೆ ಮಾತ್ರ ಇವರ ಎಲ್ಲ ವ್ಯವಹಾರಗಳೂ ಇರುತ್ತವೆ. ಮದುವೆ ಮಾತ್ರವಲ್ಲ, ಇನ್ನಿತರ ವಿಶಯಗಳಿಗೂ ಇವರಿ ತಮ್ಮ ಪಂಗಡದವರಿಗೇ ಮೊದಲನೆಯದರಿಂದ ನಾಲ್ಕನೆಯವರೆಗಿನ ಆದ್ಯತೆ ನೀಡುತ್ತಾರೆ. ತೀರ ಅನಿವಾರ್ಯವಾದಾಗ ಮಾತ್ರ ತಮಗೆ ಸೇರದ ಬಣದೊಂದಿಗೆ ವ್ಯವಹಾರ ಹೂಡುತ್ತಾರೆ. ಪರಪಂಗಡದ ಹುಡುಗ/ಹುಡುಗಿಯೊಡನೆ ಪ್ರೇಮ ಬೆಳೆಸಿಕೊಂಡ ಸಂದರ್ಭದಲ್ಲಿ ಮರ್ಯಾದಾ ಹತ್ಯೆಗಳು ನಡೆಯುವುದೂ ಇದೆ. 2010ರ ವರ್ಷಾಂತ್ಯದಲ್ಲಿ ಲ್ಯಾಟಿನ್ ಅಮೆರಿಕದಲ್ಲಿ ಅಂಥದೊಂದು ಘಟನೆ ನಡೆದಿದ್ದನ್ನು ನೆನೆಯಬಹುದು. ಇದನ್ನೆಲ್ಲ ಹೇಳಿ ನೋಡಿ… ನಿಮಗೆ ಕೋಮುವಾದಿ ಅನ್ನುವ ಪಟ್ಟ ಗ್ಯಾರಂಟಿ! ಹಿಂದೂ ಧರ್ಮದ ಒರೆಕೊರೆಗಳನ್ನು ಮಾತ್ರ ಮಾತಾಡಬೇಕು. ಉಳಿದ ಮತಗಳ ಬಗ್ಗೆ ಚಕಾರ ಎತ್ತಬಾರದು. ಇದು ಬುದ್ಧಿಜೀವಿಗಳು ಹೇರುತ್ತಿರುವ ಮಾನಸಿಕ ಷಂಡತನವಷ್ಟೆ.

ಹೇಳಬೇಕನಿಸಿದ್ದು

ಅಸ್ಪೃಷ್ಯತೆ ನಮ್ಮಲ್ಲಿ ಇದೆ. ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಪ್ರಾಮಾಣಿಕವಾಗಿ ಸಾಗುತ್ತಿದೆ. ಅದಲ್ಲದೆ ಖಂಡಿತವಾಗಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆಯ್ಕೆಯ ಧರ್ಮವನ್ನು ಅಪ್ಪಿಕೊಳ್ಳುವ ಸ್ವಾತಂತ್ರ್ಯ ಇದ್ದೇಇದೆ. ಆದರೆ ಅದು ಪೊಳ್ಳು ಭರವಸೆ ಮತ್ತು ಸುಳ್ಳು ಬೋಧನೆಗಳ ಮೂಲಕ ವಶೀಕರಿಸಿಕೊಂಡು ನಡೆಸುವ ಹುನ್ನಾರದ ಮತಾಂತರವಾಗಬಾರದಷ್ಟೆ. ಹಾಗೆ ಆದಾಗಲೆ ಥಚೂರ್ ನಂತಹ ಘಟನೆಗಳು ಮರುಕಳಿಸುವುದು. ಮತಾಂತರಕ್ಕೆ ಕುಮ್ಮಕ್ಕು ಕೊಡುವವರು, ಮತಾಂತರಿಗಳು/ದಲಿತರು ಅದರಿಂದ ಅನುಭವಿಸಬಹುದಾದ ಹೆಚ್ಚಿನ ಸಂಕಟಗಳ ಬಗ್ಗೆ, ನಷ್ಟದ ಬಗ್ಗೆ ಹೃತ್ಪೂರ್ವಕವಾಗಿ ಯೋಚಿಸುವುದೊಳಿತು. ಅಷ್ಟೇ ಅಲ್ಲ, ಹಿಂದೂ ಅಸ್ಪೃಷ್ಯತೆ ವಿರುದ್ಧ ಬರೆಯುವುದು ಮಾತ್ರ ತಮ್ಮ ಕರ್ತವ್ಯ, ಇತರ ಮತಪಂಥಗಳ ಅಸ್ಪೃಷ್ಯತೆ ಆಚರಣೆಗಳ ಬಗ್ಗೆ ಬರೆದರೆ ಅದು ಕೋಮುವಾದ ಆಗುತ್ತದೆ ಎಂಬ ಧೋರಣೆಯಿಂದ ಮಾಧ್ಯಮಗಳೂ ಹೊರಗೆ ಬರಬೇಕು.

ದಲಿತರ ಬಗ್ಗೆ ತುಡಿಯುವ ಮನಸ್ಸು ಕ್ರೈಸ್ತದಲಿತರ ಬಗ್ಗೆಯೂ ತುಡಿದಾಗ ಮಾತ್ರ ಪ್ರಾಮಾಣಿಕವಾಗಿ ಉಳಿಯುತ್ತದೆ. ಅಲ್ಲವೆ?

 

3 thoughts on “ಅಸ್ಪೃಶ್ಯತೆ- ವರದಿಯಲ್ಲೂ ತಾರತಮ್ಯ!

  1. ಮೊದಮೊದಲು ಬ್ರಾಮ್ಹಣ ವರ್ಗದವರು ಮಾತ್ರ ಅಸ್ಪ್ರುಷ್ಯತೆಯ ಸಮಸ್ಯೆಗೆ ಕಾರಣ ಎಂದುಕೊಂಡಿದ್ದವ ನಾನು! ಕಾರ್ಯರಂಗಕ್ಕೆ ಇಳಿದ ಮೇಲೆ ನಾನಂದುಕೊಂದದ್ದು ತಪ್ಪು ಅಂತ ಗೊತ್ತಾಯ್ತು,ಸಮಗ್ರ ಹಿಂದೂ ವ್ಯವಸ್ಥೆಯೇ ಹೀಗೆನ್ದುಕೊಂಡೆ! ಆದರೆ ಮೇಲಿನ ಲೇಖನ ಓದುತ್ತಾ ಪ್ರಪಂಚವೇ ಹೀಗೆಮ್ಬುದು ಅರ್ಥವಾಗುತ್ತಿದೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s