ಕಾಶ್ಮೀರವಿಂದು ಹೊತ್ತುರಿಯುತ್ತಿರುವುದು ಏಕೆ ಗೊತ್ತೆ?

ನೆಹರೂ `ಜಾತ್ಯತೀತ’ ಮನಸಿನ ಬಗ್ಗೆ ಈಗಾಗಲೇ ತಿಳಿದಿದ್ದಾಗಿದೆ.  ಪರಧರ್ಮ ಸಹಿಷ್ಣುತೆ ಹಿಂದೂವಿನ ಪರಮಗುಣ. ಆದರೆ ಜಾತ್ಯತೀತತೆಯ ಹಿನ್ನೆಲೆಯಲ್ಲಿ ಅವರ ಮನದಲ್ಲಿ ಹಿಂದೂ ದ್ವೇಷ ಮನೆ ಮಾಡಿತ್ತಲ್ಲ ಅದನ್ನು ಮಾತ್ರ ಸಹಿಸುವುದು ಸಾಧ್ಯವೇ ಇಲ್ಲ. ಕಾಶ್ಮೀರದ ವಿಚಾರದಲ್ಲಾದದ್ದೂ ಅದೇ. ನೆಹರೂರ ಮೊಂಡುತನ ಇಡೀ ಕಾಶ್ಮೀರವನ್ನು ಉರಿಯುವ ಕುಂಡವಾಗಿಸಿಬಿಟ್ಟಿತು. ಸ್ವಾತಂತ್ರ್ಯಾನಂತರ ಸರ್ದಾರ ಪಟೇಲರು ರಾಜ್ಯವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ಮುಗಿಸಿದರು. ಹೈದರಾಬಾದ್‌ನ ನಿಜಾಮ ಕೂಡ ಮಿಸುಕಾಡದೇ ಶರಣಾಗುವಂತೆ ಮಾಡಿದ್ದು ಪಟೇಲರ ಬುದ್ಧಿಮತ್ತೆಗೆ ಸಾಕ್ಷಿ. ನೆಹರೂ ಕಾಶ್ಮೀರದ ವಿಲೀನವನ್ನು ತಾನೇ ಮಾಡುವುದಾಗಿ ಪಣತೊಟ್ಟು ಅದನ್ನು ಉತ್ತರಿಸಲಾಗದ ಪ್ರಶ್ನೆಯಾಗಿ ಉಳಿಸಿಬಿಟ್ಟರು! ಕಾಶ್ಮೀರ ಮಹಾರಾಜ ಹರಿಸಿಂಗರ ರಾಜ್ಯವಾಗಿತ್ತು. ಅಲ್ಲಿನ ಪ್ರಜೆಗಳಲ್ಲಿ ಬಹುಪಾಲು ಮುಸಲ್ಮಾನರೇ. ಮುಸಲ್ಮಾನರನ್ನು ಆಳುವ ಹಿಂದೂ ರಾಜ ಎಂದರೆ ನೆಹರೂರ ಜಾತ್ಯತೀತ ಮನಸ್ಸು ಸಹಿಸುವುದು ಹೇಗೆ ಹೇಳಿ. ಅವರು ಮೊದಲಿನಿಂದಲೂ ರಾಜನ ವಿರೋಧಿ ಬಣದಲ್ಲೇ ನಿಂತಿದ್ದರು. ಅತ್ತ ಕಾಶ್ಮೀರದಲ್ಲಿ ಮಹಾರಾಜರನ್ನು ಪಟ್ಟದಿಂದಿಳಿಸಿ, ರಾಜ್ಯವನ್ನೇ ಪಾಕಿಸ್ಥಾನದೊಂದಿಗೆ ವಿಲೀನಗೊಳಿಸಬೇಕೆಂಬ ತವಕ ನೆಹರೂರ ಆಪ್ತಮಿತ್ರ ಶೇಕ್ ಮೊಹಮ್ಮದ್ ಅಬ್ದುಲ್ಲಾರಿಗಿತ್ತು. ನ್ಯಾಶನಲ್ ಕಾನ್ಫರೆನ್ಸ್ ಎಂಬ ಪಾರ್ಟಿಯನ್ನು ಹುಟ್ಟುಹಾಕಿ ಅದರ ಮೂಲಕ ಮಹಾರಾಜರಿಗೆ ‘ಕಾಶ್ಮೀರ ಬಿಟ್ಟು ತೊಲಗಿ’ ಎನ್ನುವ ಆದೇಶ ನೀಡುವ ಚಳವಳಿಯನ್ನು ಶೇಕ್ ಸಾಹೇಬರು ಆರಂಭಿಸಿದ್ದರು. ‘ನಾವು ಈವರೆಗೂ ನೊಂದಿದ್ದು ಸಾಕು. ಪ್ರತಿಭಟಿಸುವ ಸಮಯ ಬಂದೇಬಿಟ್ಟಿದೆ. ನಾವೆಲ್ಲ ಗುಲಾಮಿತನದ ವಿರುದ್ಧ ಹೋರಾಡಲು ಜಿಹಾದಿನ ಸೈನಿಕರಾಗಬೇಕು. ಗಂಡು-ಹೆಣ್ಣು-ಮಕ್ಕಳು-ವೃದ್ಧರು ಯಾವೊಂದೂ ಭೇದವಿಲ್ಲದೇ ಪ್ರತಿಯೊಬ್ಬರೂ ಕಾಶ್ಮೀರ ಬಿಟ್ಟು ತೊಲಗುವ ಘೋಷಣೆ ಕೂಗಬೇಕು. ಕಾಶ್ಮೀರ ರಾಷ್ಟ್ರ ನಿರ್ಮಾಣವಾಗಬೇಕು’ ಎಂಬ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು! ಈ ಮಾತುಗಳಿಂದ ಕುಪಿತರಾದ ಮಹಾರಾಜರು, ರಾಜದ್ರೋಹದ ಆಪಾದನೆಯ ಮೇಲೆ ಶೇಕ್ ಅಬ್ದುಲ್ಲಾ ಮತ್ತು ಅವರ ಪಕ್ಷದ ಇತರ ಸದಸ್ಯರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು. ನೆಹರೂ ಕೋಪಾವಿಷ್ಟರಾದರು. ಗೆಳೆಯನನ್ನು ಜೈಲಿಗೆ ಅಟ್ಟುವುದನ್ನು ಸಹಿಸುವುದಾದರೂ ಹೇಗೆ? ಕೂಡಲೇ ನೆಹರೂ ಮಹಾರಾಜರಿಗೆ ಪಂಥಾಹ್ವಾನವಿತ್ತರು! ಈ ಬಂಧನದ ವಿರುದ್ಧ ಪ್ರತಿಭಟಿಸಲಿಕ್ಕಾಗಿಯೇ, ಕಾಶ್ಮೀರ ಗಡಿಯನ್ನು ದಾಟುತ್ತೇನೆಂದು ಘೋಷಿಸಿಬಿಟ್ಟರು. ಮಹಾರಾಜರು ನಿಷೇಧ ಹೇರಿದ ನಂತರವೂ ಕಾಶ್ಮೀರ ಗಡಿ ದಾಟಿದ ಉದ್ಧಟತನಕ್ಕಾಗಿ ಅವರು ನೆಹರೂರನ್ನು ಬಂಧಿಸಲೇಬೇಕಾಯಿತು.

ಮೊದಲೇ ವೈಮನಸ್ಸುಗಳ ಆಗರವಾಗಿದ್ದ ನೆಹರೂ – ಮಹಾರಾಜರ ಸಂಬಂಧ ಈಗ ಮತ್ತಷ್ಟು ಹದಗೆಟ್ಟಿತು. ಆದರೆ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ನೀಡಿದ ತೀಕ್ಷ್ಣ ಆದೇಶದಿಂದಾಗಿ ನೆಹರೂ ಕಾಶ್ಮೀರದಿಂದ ಅನಿವಾರ್ಯವಾಗಿ ಮರಳಬೇಕಾಯಿತು. ದೇಶದ ಮಹಾನಾಯಕರುಗಳ ಕೃಪಾಕಟಾಕ್ಷವಿದ್ದ ನೆಹರೂರ ಆಟವೇ ಮಹಾರಾಜರ ಮುಂದೆ ಸಾಗದಿದ್ದಾಗ ಇನ್ನು ತನ್ನದೇನು ಲೆಕ್ಕ? ಎಂದರಿತ ಶೇಕ್ ಅಬ್ದುಲ್ಲಾ ಮಹಾರಾಜರಿಗೊಂದು ಕ್ಷಮಾಪಣಾ ಪತ್ರ ಬರೆದರು. ‘ನಾನು ಮಹಾರಾಜರಿಗೆ ವೈಯಕ್ತಿಕವಾಗಿ ಅಥವಾ ಸಿಂಹಾಸನಕ್ಕೆ ಯಾವುದೇ ದ್ರೋಹ ಬಗೆದಿಲ್ಲವೆಂದು ಈ ಮೂಲಕ ದೃಢಪಡಿಸುತ್ತೇನೆ. ಇನ್ನು ಮುಂದೆ ‘ನನ್ನ ಮತ್ತು ಸಂಘಟನೆಯ ಸಂಪೂರ್ಣ ಸಹಕಾರವನ್ನು ನಿಮಗೆ ನೀಡುತ್ತೇನೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಮಹಾರಾಜರ ಅಥವಾ ರಾಜ್ಯದ ವಿರುದ್ಧ ಕೆಲಸ ಮಾಡಿದರೆ ಅಂತಹವರನ್ನೇ ನಮ್ಮ ಬದ್ಧವೈರಿಗಳೆಂದು ಭಾವಿಸುತ್ತೇವೆ’ ಎಂದೂ ಹೇಳಿಕೊಂಡರು. ಇತ್ತ ಕಾಶ್ಮೀರಿಗಳೇ ಗೌರವಿಸದ ನ್ಯಾಶನಲ್ ಕಾನ್ಫರೆನ್ಸ್‌ನ್ನು ರಾಷ್ಟ್ರೀಯ ಸ್ತರಕ್ಕೇರಿಸುವ ಮೂರ್ಖ ಸಾಹಸವನ್ನು ನೆಹರೂ ಶುರುವಿಟ್ಟಿದ್ದರು. ‘ಶೇಕ್ ಅಬ್ದುಲ್ಲಾರ ನ್ಯಾಶನಲ್ ಕಾನ್ಫರೆನ್ಸ್ ನಿಜವಾಗಲೂ ರಾಷ್ಟ್ರೀಯ ಸಂಸ್ಥೆ. ಹೀಗಾಗಿಯೇ ಕಾಶ್ಮೀರಿ ಪಂಡಿತರು ಶೇಕ್ ಅಬ್ದುಲ್ಲಾರೊಂದಿಗೆ ಕೈಜೋಡಿಸಿದರೆ ಮಾತ್ರ ಅವರ ಮಾತಿಗೆ ಬೆಲೆ ಬರುತ್ತದೆ.ಇಲ್ಲವಾದಲ್ಲಿ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ’ ಎಂದು ಆಗಾಗ ಹಲುಬುತ್ತಲೇ ಇರುತ್ತಿದ್ದರು. ಸ್ವತಃ ಪಂಡಿತರ ಕುಲದವರಾಗಿ, ಕಾಶ್ಮೀರದಲ್ಲಿ ಪಂಡಿತರ ಮೇಲೆ ಮುಸಲ್ಮಾನರು ನಡೆಸಿದ್ದ ಅತ್ಯಾಚಾರವನ್ನು ಕಂಡಿದ್ದ ನೆಹರೂಗೆ ಈ ಮಾತು ಹೇಳುವ ಮನಸ್ಸಾದರೂ ಎಲ್ಲಿಂದ ಬಂತೋ? ದೇವರೇ ಬಲ್ಲ. ಆದರೆ ಅವರ ಇಂತಹ ಮಾತುಗಳಿಂದಾಗಿಯೇ ಮಹಾರಾಜಾ ಹರಿಸಿಂಗರು ಅಕ್ಷರಶಃ ತುಮುಲಕ್ಕೆ ಬಿದ್ದುದು. ಹಿಂದೂಗಳ ಪವಿತ್ರ ದೇಶ ಭಾರತವನ್ನು ಬಿಟ್ಟು ಪಾಕಿಸ್ಥಾನವನ್ನು ಸೇರಿಬಿಡುವ ಆಲೋಚನೆ ಅವರ ಮನ ಹೊಕ್ಕಿದ್ದು!, ನಾಲ್ಕಾರು ತಿಂಗಳುಗಳ ಕಾಲವಂತೂ ಮಹಾರಾಜರು ಅಕ್ಷರಶಃ ಚಿಂತಾಮಗ್ನರಾಗಿಯೇ ಇದ್ದುಬಿಟ್ಟಿದ್ದರು.

ಒಂದೆಡೆ ಮಾತೃಧರ್ಮದ ಸೆಳೆತ, ಇನ್ನೊಂದೆಡೆ ವಿಲೀನಕ್ಕೆ ಒಪ್ಪಿಗೆ ಕೊಟ್ಟರೂ ಕಾಡುವ ನೆಹರೂರ ದರ್ಪ, ಮತ್ತೊಂದೆಡೆ ಮೌಂಟ್‌ಬ್ಯಾಟನ್ ಮೂಲಕ ಪಾಕಿಸ್ಥಾನ ಸೇರ್ಪಡೆಗೆ ಬರುತ್ತಿರುವ ಆಮಿಷ. ಯಾವುದನ್ನು ಒಪ್ಪಬೇಕು, ಯಾವುದನ್ನು ಬಿಡಬೇಕು ಎಂಬುದೇ ಅವರಿಗೆ ತಿಳಿಯದಾಯಿತು. ನೆಹರೂರ ನಂಬಿಕಸ್ತ ಗೆಳೆಯ ಮೌಂಟ್‌ಬ್ಯಾಟನ್ ಸಾಧ್ಯವಾದಷ್ಟು ಕಾಶ್ಮೀರ ಪಾಕಿಸ್ಥಾನಕ್ಕೆ ಸೇರುವಂತೆ ಪ್ರಯತ್ನ ನಡೆಸಿದ್ದ. ಮಹಾರಾಜನನ್ನು ಒಲಿಸಿಕೊಳ್ಳಬಹುದಾದ ಹೆಜ್ಜೆಯನ್ನು ಜಿನ್ನಾರಿಗೆ ಹೇಳಿಕೊಡುತ್ತಿದ್ದ. ಅಷ್ಟೇ ಅಲ್ಲ. ನಿಮ್ಮ ಯಾವುದೇ ನಿರ್ಧಾರವನ್ನು ಆಗಸ್ಟ್ ೧೪ರ ವರೆಗೆ ತಿಳಿಸಲೇಬೇಡಿ ಎಂದು ಮಹಾರಾಜರಿಗೆ ತಾಕೀತು ಮಾಡಿದ್ದ. ತೆರೆ-ಮರೆಯ ಹಿಂದೆ ಮೌಂಟ್‌ಬ್ಯಾಟನ್ ಈ ರೀತಿಯ ನಾಟಕ ಆಡುತ್ತಿರಬೇಕಾದರೆ, ನೆಹರೂ ಮಾತ್ರ ಮೌಂಟ್‌ಬ್ಯಾಟನ್‌ನ ಕುತಂತ್ರ ಅರಿಯದೇ ಮಂಕಾದವರಂತಿದ್ದರು ! ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು ಮೌಂಟ್‌ಬ್ಯಾಟನ್ ಅಪಾರ ಶ್ರಮವಹಿಸುತ್ತಿದ್ದಾರೆ ಎಂದೇ ನಂಬಿದ್ದರು. ಇತ್ತ ಮೌಂಟ್‌ಬ್ಯಾಟನ್ ತನ್ನ ಎಲ್ಲ ಪ್ರಯತ್ನಗಳೂ ವಿಫಲವಾಗುವ ಹಂತಕ್ಕೆ ಬಂದಾಗ ಮಹಾರಾಜರಿಗೂ-ನೆಹರೂಗೂ ನಡುವಣ ಸಂಬಂಧ ಸರಿಯಿಲ್ಲ ಎಂಬುದನ್ನೇ ಮುಂದಿರಿಸಿಕೊಂಡು ಕಾಶ್ಮೀರ, ಪಾಕಿಸ್ಥಾನದೊಂದಿಗೆ ವಿಲೀನಗೊಂಡುಬಿಡುತ್ತಿದೆ ಎಂದು ಘೋಷಿಸಿದ. ಒತ್ತಡಕ್ಕೆ ಬಿದ್ದ ಮಹಾರಾಜರು ಪಾಕಿಸ್ಥಾನದೊಂದಿಗೆ ತಾತ್ಕಾಲಿಕ ಒಪ್ಪಂದ ಮಾಡಿಕೊಂಡುಬಿಟ್ಟರು. ಆದರೆ ಸಂಪೂರ್ಣ ಸ್ವಾತಂತ್ರ್ಯ ಹೊಂದುವ ಆಕಾಂಕ್ಷೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಇತ್ತ ನ್ಯಾಶನಲ್ ಕಾನ್ಫರೆನ್ಸ್ ಕೂಡ ಪಾಕಿಸ್ಥಾನಕ್ಕೆ ಸೇರುವ ವಿಧೇಯಕವನ್ನು ಅಂಗೀಕರಿಸಿಯೇ ಬಿಟ್ಟಿತು. ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸರ್ದಾರ ಪಟೇಲರಿಗೆ ಕೊಡದೇ, ತಮ್ಮ ಬಳಿಯೇ ಇಟ್ಟುಕೊಂಡಿದ್ದ ನೆಹರೂಗೆ ಇದ್ಯಾವುದರ ಅರಿವೇ ಇರಲಿಲ್ಲ. ತಮ್ಮ ಗೆಳೆಯರೆಲ್ಲ ತಮ್ಮೊಂದಿಗೇ ಇರುತ್ತಾರೆ ಎಂಬ ದೃಢ ನಂಬಿಕೆ ಅವರದು.

ಬರಿ ಈ ವಿಚಾರವಷ್ಟೇ ಅಲ್ಲ. ದೇಶದ ರಕ್ಷಣೆಯ ದೃಷ್ಟಿಯಲ್ಲಿ , ಅಖಂಡ ಭಾರತದ ಕನಸು ಕಟ್ಟುವಲ್ಲಿ ನೆಹರೂ ಯಾವಾಗಲೂ ಹಿಂದೆಯೇ! ಗಿಲ್ಗಿಟ್ ಪ್ರದೇಶ ರಕ್ಷಣಾ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶ. ರಷ್ಯಾದ ಮತ್ತು ಚೀನಾದ ರಕ್ಷಣಾ ತಲೆಹರಟೆಗಳ ಮೇಲೆ ಸ್ಪಷ್ಟ ನಿಗಾ ಇಡಬಹುದಾದ ಪ್ರದೇಶ. ಹೀಗಾಗಿಯೇ ಬ್ರಿಟಿಷ್ ಸರಕಾರ ಗಿಲ್ಗಿಟ್ ಏಜೆನ್ಸಿಯಿಂದ ಆ ಪ್ರದೇಶವನ್ನು ೬೦ವರ್ಷಗಳ ಕಾಲ ಗುತ್ತಿಗೆಗೆ ಪಡೆದಿತ್ತು. ಸ್ವಾತಂತ್ರ್ಯ ಬಂದ ನಂತರ ಆ ಗುತ್ತಿಗೆಗೆ ಯಾವುದೇ ಮಹತ್ವ ಇರುತ್ತಿರಲಿಲ್ಲ. ಹೀಗಾಗಿಯೇ ಮೌಂಟ್ ಬ್ಯಾಟನ್‌ನ ಮೇಲೆ ಒತ್ತಡ ಹೇರಿ ನೆಹರೂ ಅದನ್ನು ಕಸಿಯುವ ಕೆಲಸ ಮಾಡಬೇಕಿತ್ತು. ಮಾಡಲಿಲ್ಲ. ಮಹಾರಾಜಾ ಹರಿಸಿಂಗರು ಆ ಪ್ರದೇಶದಲ್ಲಿ ತಮ್ಮ ಅಧಿಕಾರಿಗಳನ್ನು ನೇಮಿಸುವ ಮುನ್ನವೇ, ಗಿಲ್ಗಿಟ್ ಸ್ಕೌಟ್ಸ್ ಆ ಪ್ರದೇಶವನ್ನು ವಶಪಡಿಸಿಕೊಂಡಿತ್ತು. ಸ್ಕೌಟ್ಸ್‌ನ ಅಧಿಕಾರಿ ಮೇಜರ್ ಚ್ರಾನನ್ನು ಸರ್ಕಾರ ಬಂಧಿಸಿತು. ಕುಪಿತಗೊಂಡ ಸ್ಕೌಟ್ಸ್ ದಂಗೆಯೆದ್ದರು. ಸ್ವಾತಂತ್ರ್ಯದ ಸುದ್ದಿ ತಿಳಿದೊಡನೇ ಪಾಕಿಸ್ಥಾನಕ್ಕೆ ಸೇರಿಕೊಂಡುಬಿಟ್ಟರು. ರಕ್ಷಣಾ ದೃಷ್ಟಿಯಿಂದ ಮಹತ್ವವಾಗಿದ್ದ ಪ್ರದೇಶವೊಂದು ಈ ರೀತಿ ಅನಾಯಾಸವಾಗಿ ಪಾಕಿಗಳ ಕೈ ಸೇರಿಹೋಯಿತು. ನೆಹರೂರಿಂದಾಗಿ ಭಾರತೀಯರು ಕೈ-ಕೈ ಹಿಸುಕಿಕೊಳ್ಳುವುದು ಮಾತ್ರ ಉಳಿಯಿತು!

ಇದೇ ರೀತಿ ಕಾಶ್ಮೀರದೊಂದಿಗೂ ನೆಹರೂ ಮೌಢ್ಯತೆಯ ಪ್ರದರ್ಶನ ಮಾಡಿದರು. ಕಾಶ್ಮೀರವನ್ನು ವಿಲೀನಗೊಳಿಸಿಕೊಳ್ಳಬೇಕೆಂಬ ಆತುರ ಅವರೆಂದಿಗೂ ತೋರಲೇ ಇಲ್ಲ. ಸ್ವಾತಂತ್ರ್ಯ ಬಂದ ಮೂರು ದಿನದ ನಂತರ ಈ ದೇಶದ ಗಡಿಯನ್ನು ಬ್ರಿಟಿಷರು ನಿರ್ಧಾರ ಮಾಡಿ ಪ್ರಕಟಪಡಿಸಿದ್ದರು. ಕಾಶ್ಮೀರಕ್ಕೆ ಭಾರತದ ಇತರ ಭಾಗವನ್ನು ಬೆಸೆಯುವ ಏಕೈಕ ದ್ವಾರ ದೊರೆತಿದ್ದು ದುರಂತ. ಗುರುದಾಸಪುರ. ಆ ನಗರದ ಮೂಲಕ ಜಮ್ಮುವಿಗೆ ಹೋಗಿ ಅಲ್ಲಿಂದ ಕಾಶ್ಮೀರದ ಕಣಿವೆಗಳಿಗೆ ಸೇರಬೇಕಿತ್ತು. ಆ ರಸ್ತೆಯೂ ಅಯೋಮಯವಾಗಿತ್ತು. ಅದೇ ವೇಳೆಗೆ ಕಾಶ್ಮೀರವನ್ನು ಸೇರಬಹುದಾದ ಎರಡು ಪುಟ್ಟ-ಪುಟ್ಟ ಚೆಂದದ ರಸ್ತೆಗಳು ಪಾಕಿಗಳ ಪಾಲಿಗಿತ್ತು. ಈ ಅವಕಾಶವನ್ನೇ ಬಳಸಿಕೊಂಡ ಜಿನ್ನಾ ಲಾಹೋರಿನಿಂದ ಹಾಗೂ ರಾವಲ್‌ಪಿಂಡಿಯಿಂದ ಕಾಶ್ಮೀರಕ್ಕೆ ಸೇರುತ್ತಿದ್ದ ನಿತ್ಯ ಬಳಕೆಯ ವಸ್ತುಗಳನ್ನು ತಡೆಹಿಡಿದುಬಿಟ್ಟ. ಕಾಶ್ಮೀರಿಗಳು ತಹತಹಿಸಿಬಿಟ್ಟರು. ಅಲ್ಲಿಯವರೆಗೂ ಈ ವಿಚಾರಗಳ ಬಗ್ಗೆ ಆಲೋಚನೆಯೂ ಮಾಡಿರದಿದ್ದ ನೆಹರೂ ತಲೆ ಕೆಟ್ಟುಹೋಯಿತು. ವಿಮಾನಗಳನ್ನು ಬಳಸಿ ಆಹಾರಪೂರೈಕೆಗೆ ಶುರುವಿಟ್ಟರು. ಅದು ಬಕಾಸುರನ ಪಾಲಿಗೆ ಅರೆಕಾಸಿನ ಮಜ್ಜಿಗೆಯಂತಾಯಿತು.

ಈ ವಿಚಾರದ ಬಗ್ಗೆ ಸೂಕ್ಷ್ಮ ನಿರ್ಧಾರಗಳನ್ನು ಕೈಗೊಂಡ ಪಟೇಲರು ಮಾತ್ರ ಪಠಾಣ್‌ಕೋಟ್‌ನಿಂದ ಜಮ್ಮುವರೆಗಿನ ೧೧೨ ಕಿ.ಮೀ.ರಸ್ತೆಯನ್ನು ದುರಸ್ತಿಗೊಳಿಸುವ ಕೆಲಸ ಆರಂಭಿಸಿದರು. ಪಾಕೀಗಳು ಭಾರತೀಯ ಮುಸಲ್ಮಾನರನ್ನು ಎತ್ತಿಕಟ್ಟಿ ರಸ್ತೆ ಕಾರ್ಯ ತಡೆಯುವ ಎಷ್ಟೇ ಪ್ರಯತ್ನ ಮಾಡಿದರೂ ಎಲ್ಲವೂ ವ್ಯರ್ಥವಾಯಿತು. ಪಟೇಲರ ಇಚ್ಛಾಶಕ್ತಿಯಿಂದ ಸಮರೋಪಾದಿಯಲ್ಲಿ ಶುರುವಾದ ಕಾರ್ಯ ದಾಖಲೆಯ ಸಮಯದಲ್ಲಿ ಮುಕ್ತಾಯವಾಯಿತು. ಆದರೆ ಈ ರಸ್ತೆಯನ್ನು ಕಾಶ್ಮೀರದವರೆಗೂ ಒಯ್ಯುವ ಹಕ್ಕು ಅವರಿಗಿರಲಿಲ್ಲ. ಏಕೆಂದರೆ ಕಾಶ್ಮೀರ ಸಮಸ್ಯೆಯನ್ನು ತಾನೇ ಪರಿಹರಿಸಬೇಕೆಂಬ ಹಠ ನೆಹರೂಗಿತ್ತು. ಬೇರೆ ಯಾರೂ ಪರಿಹಾರಕಾರ್ಯದಲ್ಲಿ ಮೂಗುತೂರಿಸುವುದನ್ನು ಅವರು ಒಪ್ಪುತ್ತಿರಲಿಲ್ಲ. ಅದು ಬಿಡಿ. ಪಟೇಲರು ಅಂದು ದೂರದೃಷ್ಟಿಯಿಂದ ಆ ರಸ್ತೆ ನಿರ್ಮಾಣ ಮಾಡಿದರಲ್ಲ, ಆ ರಸ್ತೆ ಇಂದಿಗೂ ಭಾರತವನ್ನು ಕಾಶ್ಮೀರದೊಂದಿಗೆ ಬೆಸೆಯುವ ರಸ್ತೆಯಾಗಿ ಉಳಿದಿದೆ! ಪಂಜಾಬ್‌ನಲ್ಲಿ ಕೋಮುಗಲಭೆ ತೀವ್ರವಾಗಿ ಉರಿಯುತ್ತಿದ್ದಾಗಲೂ, ಜಮ್ಮು ಕಾಶ್ಮೀರಗಳು ಶಾಂತವಾಗಿಯೇ ಇದ್ದವು. ಪಾಕಿಸ್ಥಾನದಿಂದ ನಿರಾಶ್ರಿತರಾಗಿ ಬರುತ್ತಿದ್ದ ಹಿಂದೂಗಳು ಕಾಶ್ಮೀರದ ಮೂಲಕ ಕಾಲ್ನಡಿಗೆಯಲ್ಲೇ ಹಾದು ಭಾರತ ಸೇರುತ್ತಿದ್ದರು. ಮಾರ್ಗದುದ್ದಕ್ಕೂ ಮುಸಲ್ಮಾನರು ಯಾವುದೇ ತೊಂದರೆ ಮಾಡದೇ ಸುಮ್ಮನಿರುತ್ತಿದ್ದರು. ಒಮ್ಮೆ ಕಾಶ್ಮೀರದ ಮಹಾರಾಜರು ಪಾಕಿಸ್ಥಾನದೊಂದಿಗೆ ವಿಲೀನವಾಗದಿರುವ ವಿಚಾರ ಪ್ರಕಟಿಸಿದರು ನೋಡಿ, ಎಲ್ಲವೂ ತಲೆಕೆಳಗಾಯಿತು. ಜಿನ್ನಾ ಇದನ್ನು ವಿಶ್ವಾಸದ್ರೋಹವೆಂದು ಭಾವಿಸಿದ. ಕಾಶ್ಮೀರದಲ್ಲಿ ತೀವ್ರ ಪ್ರಮಾಣದ ದಂಗೆಗಳಾಗುವಂತೆ ನೋಡಿಕೊಂಡ. ಜಮ್ಮು-ಕಾಶ್ಮೀರಗಳೂ ಕೋಮುಗಲಭೆಗಳ ಕೇಂದ್ರಗಳಾಗಿಬಿಟ್ಟವು. ಇತ್ತ ಪಾಕಿಸ್ಥಾನ ಒಂದಿನಿತೂ ತಡಮಾಡದೇ ಕಾಶ್ಮೀರದ ಮೇಲೆ ದಾಳಿ ಮಾಡಿಯೇ ಬಿಟ್ಟಿತು.

೧೯೪೭ರ ಅಕ್ಟೋಬರ್ ೨೧ರ ರಾತ್ರಿ ಪಾಕಿಸ್ಥಾನ ದಾಳಿಗೆ ಶುರುವಿಟ್ಟಿತು. ಸ್ವತಂತ್ರಗೊಂಡ ಎರಡೇ ತಿಂಗಳಲ್ಲಿ ಪಾಕಿಸ್ಥಾನ ಭಾರತದ ಮೇಲೆ ಯುದ್ಧ ಘೋಷಿಸಿದಂತಾಗಿತ್ತು. ರಾವಲ್ಪಿಂಡಿಯಿಂದ ಆರಂಭವಾದ ಸೈನ್ಯದ ಯಾತ್ರೆ ಮುಜಪ್ಫರಾಬಾದ್‌ಗೆ ಬಂದಿತು. ಡೈನಮೈಟ್‌ಗಳ ಕೊರತೆಯಿಂದಾಗಿ ಮುಜಪ್ಫರಾಬಾದ್‌ನ ಕೃಷ್ಣಾ ಗಂಗಾ ಸೇತುವೆಯನ್ನು ಸ್ಫೋಟಿಸಲಾಗದಿದ್ದುದಕ್ಕೆ ಆ ನಗರದ ಬೆಲೆ ತೆತ್ತಿದ್ದಾಯ್ತು. ಪಠಾಣ ಮತ್ತು ಅರೆ ಸೈನಿಕರ ಪಡೆಯ ನೇತೃತ್ವ ಹೊಂದಿದ್ದ ಮೇಜರ್ ಜನರಲ್ ಅಕ್ಬರ್ ಖಾನ್ ಶ್ರೀನಗರದತ್ತ ವೇಗವಾಗಿ ಧಾವಿಸಲಾರಂಭಿಸಿದರು. ಬಾರಮುಲ್ಲಾ ವ್ಯಾಪ್ತಿಯಲ್ಲಿ ವ್ಯಾಪಕ ಅತ್ಯಾಚಾರಗಳು ನಡೆದವು. ಪಾಪಿ ಸೈನಿಕರು, ಹಿಂದೂ – ಮುಸಲ್ಮಾನ ಭೇದವೆಣಿಸದೇ ಮಾತಾ-ಭಗಿನಿಯರ ಮಾನಹರಣಗೈದರು. ಅವ್ಯಾಹತವಾಗಿ ಲೂಟಿಗಳಾದವು. ನೆಹರೂ ಆಕಾಶವಾಣಿಯ ಮೂಲಕ ಜನತೆಗೆ ಕರೆ ಇತ್ತರು. ಅದು ಹೋರಾಟದ ಕೆಚ್ಚಿನ ಸ್ವಾಭಿಮಾನದ ಕರೆಯಾಗಿರಲಿಲ್ಲ. ಅದು ಎಲ್ಲವನ್ನು ಕಳೆದುಕೊಂಡವನ ಪ್ರಲಾಪದಂತಿತ್ತು, ಅಸಹಾಯಕನೊಬ್ಬನ ರೋದನದಂತಿತ್ತು ! ಚರ್ಚಿಲ್‌ನ ಸಿಂಹದ ಎದೆ ನೆಹರೂಗಿರಲಿಲ್ಲ. ಆತನದು ಕ್ಷೀಣ ಪ್ರತಿರೋಧವಾಗಿತ್ತು ಅಷ್ಟೆ! ಆದರೆ ಪಟೇಲರು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಕೆಲಸಕ್ಕೆ ಶುರುವಿಟ್ಟರು. ದೆಹಲಿಯಿಂದ ಎಲ್ಲ ವಿಮಾನಗಳೂ ಶ್ರೀನಗರಕ್ಕೆ ಧಾವಿಸುವಂತೆ ನೋಡಿಕೊಂಡರು. ಆ ಮೂಲಕ ಜಮ್ಮು ಮತ್ತು ಪಠಾಣ್‌ಕೋಟ್‌ಗಳ ನಡುವೆ ವೈರ್‌ಲೆಸ್ ಸಂಪರ್ಕ ಸಾಧಿಸಿದರು. ಪಂಜಾಬ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮೇಹರ್ ಚಂದ್ ಮಹಾಜನರನ್ನು ತುರ್ತು ರಜೆಯ ಮೇಲೆ ಕಾಶ್ಮೀರಕ್ಕೆ ಕಳಿಸಿಕೊಟ್ಟರು. ರಾಜಾ ಹರಿಸಿಂಗರ ಮೇಲೆ ಒತ್ತಡ ಹೇರುವ ಕೆಲಸ ಶುರುವಿಟ್ಟರು. ಕಾಶ್ಮೀರ ಭಾರತದೊಂದಿಗೆ ವಿಲೀನವಾದರೆ ಅದನ್ನು ರಕ್ಷಿಸುವ ಹೊಣೆ ತಮ್ಮದೆಂದರು. ಮಹಾರಾಜರೂ ಅಷ್ಟೇ. ಅವರಿಗೆ ನೆಹರೂರ ಮೇಲೆ ದ್ವೇಷವಿತ್ತು. ಆದರೆ ಪಟೇಲರ ಮೇಲೆ ಗೌರವವಿತ್ತು. ಅವರ ಸಾಹಸದ ಬಗ್ಗೆ ಹೆಮ್ಮೆಯಿತ್ತು. ನೆಹರೂ ಜಾಗದಲ್ಲಿ ಪಟೇಲರು ಭಾರತದ ಪ್ರಧಾನಿಯಾಗಿದ್ದರೆ ಅವರು ಯಾವುದೇ ದ್ವಂದ್ವಕ್ಕೆ ಒಳಗಾಗದೇ ಭಾರತದೊಂದಿಗೆ ವಿಲೀನವಾಗಿ ಬಿಡುತ್ತಿದ್ದರು. ಆದರೆ ಈಗ ಅವೆಲ್ಲ ಯೋಚಿಸಲಿಕ್ಕೆ ಪುರುಸೊತ್ತಿಲ್ಲ. ಮೊದಲು ಪಾಕಿಸ್ಥಾನದ ಆಕ್ರಮಣವನ್ನು ತಡೆಯಬೇಕು. ಮಹಾರಾಜರು ತಮ್ಮ ಸೈನ್ಯವನ್ನು ಯುದ್ಧ ಸನ್ನದ್ಧವಾಗಿಸಿದರು. ಆದರೆ ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ, ಭಾರತದ ಸಹಾಯ ಕೇಳಲು ಒಪ್ಪಿಕೊಂಡರು.

ಅಕ್ಟೋಬರ್ ೨೬ರ ಮಧ್ಯಾಹ್ನ ನೆಹರೂ ಮನೆಯಲ್ಲಿ, ಮಹತ್ವದ ಸಭೆ ನಡೆಯಿತು. ಮೌಂಟ್ ಬ್ಯಾಟನ್, ಶೇಕ್ ಅಬ್ದುಲ್ಲಾ , ಮಹಾಜನರಾದಿಯಾಗಿ ಅತಿಮುಖ್ಯ ಮುತ್ಸದ್ದಿಗಳು ಪಾಲ್ಗೊಂಡಿದ್ದರು. ಮಹಾಜನರು ಕಡ್ಡಿ ಮುರಿದಂತೆ ಹೇಳಿದರು. ‘ಭಾರತ ಸರಕಾರ ನಮಗೆ ಸಹಕರಿಸಲಿಲ್ಲವೆಂದಾದರೆ, ಅನಿವಾರ್ಯವಾಗಿ ಪಾಕಿಸ್ಥಾನದ ತೆಕ್ಕೆಗೆ ಹೋಗಬೇಕಾಗಬಹುದು’. ಅವರು ಹಾಗೆ ಹೇಳಿದ್ದರಲ್ಲಿ ತಪ್ಪಿರಲಿಲ್ಲ. ಮೊದಲಿನಿಂದಲೂ ಮಹಾರಾಜರ ವಿರುದ್ಧ ಕುದಿಯುತ್ತಿದ್ದ ನೆಹರೂ ಇಂತಹ ಸಂದರ್ಭಗಳಲ್ಲೂ ಅತಿ ಕೆಟ್ಟದಾಗಿ ವರ್ತಿಸುತ್ತಿದ್ದರು. ತಮ್ಮ ದ್ವೇಷ ಸಾಧನೆಗೆ ದೇಶದ ಹಿತವನ್ನು ಬಲಿಕೊಡುವ ಪ್ರಯತ್ನ ನಡೆಸುತ್ತಿದ್ದರು. ಮೌಂಟ್‌ಬ್ಯಾಟನ್ ಮಾತು ಕೇಳಿ ಕಾದು ನೋಡುವ ಕಹಳೆಯನ್ನೇ ಊದುತ್ತಿದ್ದರು. ಹೀಗಾಗಿ ಎಲ್ಲರ ಮುಂದೆ ಮಹಾಜನರು ತೀಕ್ಷ್ಣವಾಗಿ ಹೇಳಿದ್ದು ನೆಹರೂಗೆ ಹಿಡಿಸಿರಲಿಲ್ಲ. ಸಭೆಯಿಂದ ಹೊರನಡೆಯುವಂತೆ ಮಹಾಜನರಿಗೆ ಆದೇಶ ನೀಡಿದರು. ಕುಪಿತರಾಗಿ ಹುಬ್ಬುಗಳನ್ನು ಗಂಟಿಕ್ಕಿ ಹೊರಟಿದ್ದ ಮಹಾಜನರನ್ನು ಬಾಗಿಲ ಬಳಿ ತಡೆದು ನಿಲ್ಲಿಸಿದ ಪಟೇಲರು ‘ಖಂಡಿತ ಮಹಾಜನರೇ, ಪಾಕಿಸ್ಥಾನದೊಂದಿಗೆ ಹೋಗುವ ಅಗತ್ಯ ನಿಮಗಿಲ್ಲ ’ ಎಂದರು.

ಈ ಸಂದರ್ಭದ ಒಂದು ಚರ್ಚೆಯನ್ನು ಫೀಲ್ಡ್‌ಮಾರ್ಶಲ್ ಮಾಣಿಕ್‌ಶಾ ಮುಂದೆ ತಮ್ಮ ಭಾಷಣದಲ್ಲಿ ಹೇಳಿದ್ದರು. “ಪಟೇಲರು ಸಹನೆ ಕಳೆದುಕೊಂಡು, ‘ಜವಾಹರಲಾಲರೇ ನಿಮಗೆ ಕಾಶ್ಮೀರ ಬೇಕೇ? ಬೇಡವೇ? ಎನ್ನುವವರೆಗೆ ನೆಹರೂ ರಷ್ಯಾ, ಆಫ್ರಿಕಾ, ವಿಶ್ವಸಂಸ್ಥೆ, ದೇವರು-ದಿಂಡರು ಎಲ್ಲರ ಬಗ್ಗೆಯೂ ಮಾತನಾಡುತ್ತಿದ್ದರು. ಅನಂತರ ತಣ್ಣಗಾದ ನೆಹರೂ ಖಂಡಿತ, ನನಗೆ ಕಾಶ್ಮೀರ ಬೇಕು ಎಂದರು. ಹಾಗಿದ್ದರೆ ಆದೇಶ ಕೊಡಿ ಎಂದವರೇ ನೆಹರೂರ ಪ್ರತಿಕ್ರಿಯೆ ಹೊರಬೀಳುವ ಮೊದಲೇ, ‘ನಿಮಗೆ ಆದೇಶ ಸಿಕ್ಕಿದೆ’ ಎಂದು ನನಗೆ ಹೇಳಿದರು”. ಹೌದು. ಪಟೇಲರ ಧೈರ್ಯ-ಸ್ಥೈರ್ಯಗಳು ಅಂದು ಕೆಲಸ ಮಾಡದಿದ್ದರೆ ನೆಹರೂ ಮೌಂಟ್ ಬ್ಯಾಟನ್‌ನ ಮಾತಿಗೆ ತಲೆದೂಗಿ ಇಡಿಯ ಜಮ್ಮು ಕಾಶ್ಮೀರವನ್ನು ಪಾಕೀಯರಿಗೆ ತಟ್ಟೆಯಲ್ಲಿಟ್ಟು ಕೊಡುತ್ತಿದ್ದರು!

ಪಟೇಲ್ ಸ್ವತಃ ತಾವೇ ವಿಲ್ಲಿಂಗ್ಟನ್ ನಿಲ್ದಾಣಕ್ಕೆ ಹೋಗಿ ಒಂದೊಂದೇ ವಿಮಾನ ಶ್ರೀನಗರದತ್ತ ನೆಗೆಯುವುದನ್ನು ನೋಡಿ ಬಂದರು. ಅವರ ಒಂದೊಂದು ಮಾತೂ ಸೈನಿಕರಿಗೆ ಅಪಾರ ಸ್ಫೂರ್ತಿ ತುಂಬುತ್ತಿದ್ದವು. ಭಾರತದ ಮೇಲೆ ಆಕ್ರಮಣ ಮಾಡಿರುವ ಅನಾಗರಿಕ ಪಾಕಿಸ್ಥಾನಿಯರಿಗೆ ಬುದ್ಧಿ ಕಲಿಸಲೇಬೇಕೆಂಬ ತುಡಿತ ಹೆಚ್ಚಿಸುತ್ತಿದ್ದವು. ನೋಡುತ್ತ-ನೋಡುತ್ತಲೇ ಭಾರತೀಯ ಸೈನ್ಯ ಶ್ರೀನಗರ ತಲುಪಿತು. ಅಲ್ಲಿಯವರೆಗೂ ಶ್ರೀನಗರದ ಮೇಲೆ ಪಾಕಿಸ್ಥಾನಿ ಬಾವುಟ ಹಾರಿಸುವ ಕನಸು ಕಾಣುತ್ತಿದ್ದ ಜಿನ್ನಾ ಈಗ ದಂಗಾದ. ಇಷ್ಟು ದಿನ ನೆಹರೂರನ್ನೇ ವಿರೋಧಿ ಎಂದುಕೊಂಡು ಮೆರೆಯುತ್ತಿದ್ದವನಿಗೆ, ದಾಳಿಯ ನೇತೃತ್ವ ವಹಿಸಿರುವುದು ಪಟೇಲರು ಎಂದು ಗೊತ್ತಾದೊಡನೆ ಸೋಲು ಖಚಿತವಾಯಿತು. ನವೆಂಬರ್ ೮ರ ವೇಳೆಗೆ ಬಾರಾಮುಲ್ಲಾ ಭಾರತೀಯ ಸೈನಿಕರ ಕೈಸೇರಿತು. ಹೊಸ ಹೊಸ ಯುದ್ಧನೀತಿ, ಅನಿರೀಕ್ಷಿತ ಯೋಜನೆಗಳ ಮೂಲಕ ಪಾಕಿಸ್ಥಾನಿ ಸೈನಿಕರನ್ನು ದಂಗುಬಡಿಸಿದ ನಮ್ಮ ಸೈನಿಕರು ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಸಾಗಿದರು. ರಜೌರಿ, ಪೂಂಛ್‌ಗಳೆಲ್ಲ ಸುಲಭದ ತುತ್ತಾಗಿಬಿಟ್ಟವು. ನಮ್ಮ ಸೈನಿಕರು ವೀರಾವೇಶದಿಂದ ಹೋರಾಡುತ್ತಾ ಪಾಕಿಸ್ಥಾನ ಗಡಿ ದಾಟುತ್ತಿರಬೇಕಾದರೆ, ಜಿನ್ನಾರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು. ಇನ್ನು ತನ್ನದೇ ಸಿಂಹಾಸನ ಹೋದಂತೇ ಎಂದು ರೋದಿಸುತ್ತಾ ಕುಳಿತ.

ಅದೇ ವೇಳೆಗೆ ನೆಹರೂ ತಮ್ಮ ಜೀವನದ ಮಹಾನ್ ಮೂರ್ಖ ಕೆಲಸ ಮಾಡಿದ್ದು. ಕಾಶ್ಮೀರವನ್ನು ನಿರಂತರ ಬೆಂಕಿಯ ಉಂಡೆಯಾಗಿ ಮಾಡಿದ್ದು . ಮೌಂಟ್ ಬ್ಯಾಟನ್‌ನ ಮಾತು ಕೇಳಿದ ನೆಹರೂ, ನಮ್ಮ ಸೈನಿಕರು ವಿಜಯದ ಹೊಸ್ತಿಲಲ್ಲಿರುವಾಗಲೇ ವಿಶ್ವಸಂಸ್ಥೆಯ ಬಾಗಿಲು ಬಡಿದರು. ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಬೇಕು ಎಂದು ಗೋಗರೆದರು. ಅಲ್ಲಿಗೆ ಕಾಶ್ಮೀರ ಅಂತಾರಾಷ್ಟ್ರೀಯ ಸ್ತರದಲ್ಲಿ ಚರ್ಚೆಯಾಗುವ ವಿಷಯವಾಯಿತು. ಪ್ರತಿಯೊಂದು ರಾಷ್ಟ್ರವೂ ನಮ್ಮ ಮೇಲೆ ಬೆರಳೆತ್ತಿ ‘ಕಾಶ್ಮೀರ’ ಎನ್ನುವಂತಾಯ್ತು. ಇದಕ್ಕೂ ಮುನ್ನ ನೆಹರೂ ಮೌಂಟ್ ಬ್ಯಾಟನ್‌ನ ಮಾತು ಕೇಳಿ ಲಾಹೋರಿಗೆ ಹೋಗಿ, ಜಿನ್ನಾ ಮತ್ತು ಲಿಯಾಕತ್ ಅಲಿ ಖಾನರೊಂದಿಗೆ ಮಾತುಕತೆ ನಡೆಸುವವರಿದ್ದರು. ಪಟೇಲರು ‘ಗೆಲುವಿನ ಹೊಸ್ತಿಲಲ್ಲಿರುವ ನಾವು, ಅವರ ಮುಂದೆ ಹೋಗಿ ಕಣ್ಣೀರಿಡುವುದು ಸರಿಯಲ್ಲ’ ಎಂದು ದಬಾಯಿಸಿದ ಅನಂತರವೇ ಅವರು ಸುಮ್ಮನಾಗಿದ್ದು! ಆದರೆ ನೆಹರೂ ವಿಶ್ವಸಂಸ್ಥೆಗೆ ಕಾಶ್ಮೀರದ ಸಮಸ್ಯೆ ಒಯ್ಯುವ ವಿಚಾರವನ್ನು ಪಟೇಲರಿಗೆ ತಿಳಿಸಲೇ ಇಲ್ಲ.

ಅಂದು ನೆಹರೂ ಮಾಡಿದ ಮೂರ್ಖತನ ಇಂದಿಗೂ ಭಾರತದ ಪಾಲಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಕಾಶ್ಮೀರದಲ್ಲೊಂದು ಪಾಕ್ ಆಕ್ರಮಿತ ಕಾಶ್ಮೀರ ನಿರ್ಮಾಣವಾಗಿದೆ. ಸ್ವತಃ ಕಾಶ್ಮೀರದ ರಾಜನೇ ಭಾರತದೊಂದಿಗೆ ವಿಲೀನವಾದಾಗಲೂ ಅಲ್ಲಿನ ಜನ ಪಾಕಿಸ್ಥಾನ-ಪಾಕಿಸ್ಥಾನ ಎಂದು ಬೊಬ್ಬಿಡುವುದು ನಿಂತಿಲ್ಲ. ಯಾವ ಕಾಶ್ಮೀರ ಒಂದು ಕಾಲದಲ್ಲಿ ಧರೆಯ ಸ್ವರ್ಗ ಎಂದು ಕರೆಯಲ್ಪಡುತ್ತಿತ್ತೋ ಅದು ಇಂದು ಅಕ್ಷರಶಃ ನರಕವಾಗಿಬಿಟ್ಟಿದೆ. ಅಲ್ಲಿ ನಿತ್ಯ ಹಿಂದೂಗಳ ಮಾರಣಹೋಮ. ಕಾಶ್ಮೀರದ ಆಸ್ತಿಯಾಗಿದ್ದ ಪಂಡಿತರು ಇಂದು ಅಲ್ಲಿ ನಿರಾಶ್ರಿತರು. ಪಂಡಿತರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಸಾಮಾನ್ಯ. ನಾವುಗಳು ಕಾಶ್ಮೀರದ ಕೊಳ್ಳಕ್ಕೆ ಹೋಗಬೇಕಾದರೆ, ಅಬ್ಬೇಪಾರಿಗಳಂತೆ, ಪರರಾಷ್ಟ್ರದವರಂತೆ ಹೋಗಬೇಕು. ಇವೆಲ್ಲವನ್ನೂ ನೆನೆದು ಕಣ್ಣೀರಿಡುವಾಗಲೆಲ್ಲ, ಆ ಹನಿಗಳಲ್ಲಿ ನೆಹರೂವಿನದೇ ಬಿಂಬ ಮೂಡುತ್ತದೆ!

6 thoughts on “ಕಾಶ್ಮೀರವಿಂದು ಹೊತ್ತುರಿಯುತ್ತಿರುವುದು ಏಕೆ ಗೊತ್ತೆ?

 1. ಚಕ್ರವರ್ತಿಯವರೇ
  ಕಾಶ್ಮೀರ ಕೊಳ್ಳಕ್ಕೆ ಬೆಂಕಿಯಿಡುವುದರಲ್ಲಿ ನೆಹರು ಎಷ್ಟು ಕಾರಣರೋ, ಅಷ್ಟೆ ಕಾರಣ ಅಂತವನನ್ನು ಪ್ರಧಾನಿ ಕುರಿಚಿಯಲ್ಲಿ ಕೂರಿಸಿದ ಮಹಾತ್ಮಾ ಗಾಂಧಿಜಿ ಕೂಡ ಹೌದು.
  ರಾಕೇಶ್ ಶೆಟ್ಟಿ

 2. ಚಕ್ರವರ್ತಿಯವರೇ,

  ಮೊದಲೇ “ನೆಹರು ಪರದೆ ಸರಿಯಿತು” ಈ ಪುಸ್ತಕವನ್ನು ಓದಿ ನನಗೆ ಆ ಹಾಳು ನೆಹರೂ ಮೇಲೆ ಎಲ್ಲಿಲ್ಲದ ಕೋಪ/ದ್ವೇಷ ತರಿಸಿತ್ತು. ಈ ಕಾಶ್ಮೀರ (ನಿಮ್ಮ ಲೇಖನ) ಲೇಖನವನ್ನು ಓದಿದ ಮೇಲಂತೂ……

  ಆ ನೆಹರು ಎಂಥ ದೇಶದ್ರೋಹಿ, ಅವನನ್ನು ಗಾಂಧಿ ಹಿಂದು ಮುಂದು ನೋಡದೆ ಪ್ರಧಾನಿ ಮಾಡಿದ ಗಾಂಧಿಯು ಕೂಡ ಅಪರಾಧಿಯೆ. ನಮ್ಮ ದೇಶ ಹಾಳಾಗೋಕೆ ನೆಹರು ಪಾತ್ರವೇ ಜಾಸ್ತಿ. ನೆಹರು ಬದಲು ಪಟೇಲ್ ಪ್ರಧಾನಿಯಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಛೆ

  ಚಿತ್ರಪ್ರಸ್ಕ

 3. Great writing,
  One of the worst fellow to be hated in Indian history is Neharu. Some how from my child hood I was not happy with the Nehru and Gandhi stories. I had read the book “Himalayan Blunder” and felt like these are the things we should put in our high school teaching rather than saying Nehru is great, Gandhi is great … all these are bull shit. Congress was, is and probably will play the drama of hiding reality and taking credit.
  They all know the art of confusing people, hiding reality and taking credit on creating problems.

 4. ಮಹಾತ್ಮ ಗಾಂಧಿ ನೆಹೂರುನನ್ನು ತನ್ನ ಉತ್ತರಾದಿಕಾರಿಯಾಗಿ ಮಾಡಿದುದರ ಹಿಂದೆ ಅವರ “ಕುರುಡು ಪ್ರೇಮ” ಬಿಟ್ಟರೆ ಬೇರೆ ಯಾವ ಕಾರಣವೂ ಸಿಗುವದಿಲ್ಲ. ನನಗನ್ನಿಸುತ್ತದೆ ಭಾರತದ ಅತ್ಯಂತ ಚರ್ಚಾಸ್ಪದ ವ್ಯಕ್ತಿ ಗಾಂಧಿ, ಅವರನ್ನು ಮಹಾತ್ಮ ಮಾಡಿದೆವು, ಆದರೆ ಕೊಂದೆವು, ಅವರ ಸನಾತನ ಧರ್ಮದ ಅನುಸರಣೆ ಮೆಚ್ಚಿದೆವು, ಆದರೆ ಅವರ ಅಹಿಂಸಾ ತತ್ವದಿಂದ ಗುಲಾಮಿ ಮಾನಸಿಕತೆ ಕಳೆದುಕೊಳ್ಳಲು ಅಸಫಲರಾದೆವು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s